March 7, 2008

ಮರಳಿ ತರಬಹುದೇ ?ತೊಟ್ಟಿಲಲಿ ಕೈಕಾಲು ಬಡಿದು

ಅಳುತಿದ್ದೆ ನೀನು

ಬಂದೆ ಚಿನ್ನಾ ಎಂದು ಕೆಲಸ

ಮಾಡುತಲೇ ಇದ್ದೆ ನಾನು

ಜೋರಾದ ಅಳುವಿನಲಿ ನಿನ್ನ ಕೂಗು

"ಅಮ್ಮಾ ,ಹಸಿವು "

ಆ ಕ್ಷಣವೆ ಬಂದು ಹಾಲುಣಿಸಲು

ನನಗೆಲ್ಲಿತ್ತು ಮಗೂ ಬಿಡುವು?ಎರಡೆರಡು ಹೆಜ್ಜೆಯಿಟ್ಟು

ಹೆಮ್ಮೆಯಿಂದ ನೀ ನಿಂತ ಹೊತ್ತು

ನೋಡಿ ಕುಣಿಯಲು, ಮುದ್ದಿಡಲು

ನನಗಿತ್ತೆ ಪುರಸೊತ್ತು?

ಮುಗಿಸಬೇಕಿತ್ತು ಮೊದಲು

ಕೆಲಸಗಳ ಹಲವು

ತೊದಲು ನುಡಿ ಕೇಳಿ ಮೈ ಮರೆಯಲು

ನನಗೆಲ್ಲಿತ್ತು ಮಗೂ ಬಿಡುವು?ಬೆಳೆದು ದೊಡ್ಡವಳಾಗಿ

ಶಾಲೆಗೆ ಹೋಗುವೆಯೀಗ ನೀನು

ಆಫೀಸು-ಮನೆ ಎಂದು

ಕಳೆದು ಹೋಗಿಹೆ ನಾನು

ಆಟ- ಪಾಠ ,ಗೆಳೆತನಗಳಲಿ

ನಿನದೇ ಬೇರೆ ಪ್ರಪಂಚ!

ನನ್ನ ದಿನಚರಿಯಲ್ಲಿ ನಿನಗಾಗಿ

ಕೊಟ್ಟೆನೇ ಸಮಯವನು ಕೊಂಚ?

ವರುಷಗಳು ಕಳೆದು
ಮದುವೆಯಾಯಿತು ನಿನಗೆ
ನೀನಿಲ್ಲದೇ ಮನೆಯೆಲ್ಲ
ಶೂನ್ಯವಾದಂತೀಗ ನನಗೆ
ಕೇಳುವುದು ನಿನ್ನ ದನಿ
" ಅಮ್ಮಾ, ಜಡೆ ಹಾಕು "
ಏನೆಂದೆ ನಾನು ? ಹಾಂ
"ಕೆಲಸವಿದೆ ಹಾಕಿಕೋ ನೀನೆ ಸಾಕು"

ನಿವೃತ್ತಿ ನನಗೀಗ

ದಿನವಿಡೀ ಬಿಡುವು

ಕಳೆಯಲಾರದು ಹೊತ್ತು

ಒಂಟಿತನ ನೋವು
ಕಾಯುವುದು ಕಿವಿ
ತೊದಲು ಮಾತಿಗಾಗಿ
ಪುಟ್ಟ ಕಾಲ್ಗಳ ಗೆಜ್ಜೆ ಸದ್ದಿಗಾಗಿ

ನೀ ನಡೆದಾಗ ನೋಡಲಿಲ್ಲ
ಅತ್ತಾಗ ಕೇಳಲಿಲ್ಲ ,
ನಿನಗಾಗಿ ಹಾಡಲಿಲ್ಲ,
ನಿನ್ನ ಜೊತೆ ಆಡಲಿಲ್ಲ
ನಿನಗಾಗಿ ನನ್ನ ಬಳಿ ಸಮಯವೇ ಇರಲಿಲ್ಲ

ಕಳೆದು ಹೋಗಿಹ ಕಾಲ ಮತ್ತೆ ಬರಬಹುದೆ ?

ಮಗೂ,ನಿನ್ನ ಬಾಲ್ಯವನು ಮರಳಿ ತರಬಹುದೆ?

( ಕೆಲ ವರ್ಷಗಳ ಹಿಂದೆ , ಮಗಳ ಶಾಲೆಯಲ್ಲಿ ಕೇಳಿದ " ಉದ್ಯೋಗಸ್ಥ ತಾಯಿ" ಎಂಬ ಮರಾಠೀ ಭಾಷಣ , ನನ್ನದೇ ಅಳಲಿಗೆ ಹಿಡಿದ ಕನ್ನಡಿಯಂತೆನಿಸಿ, ಎಷ್ಟೋ ದಿನಗಳ ಕಾಲ ನನ್ನನ್ನು ಕಾಡಿದಾಗ, ಹೊಮ್ಮಿದ ಕವಿತೆಯಿದು. ನನ್ನ ಭಾವನೆಗಳಿಗೆ ಒಂದು ರೂಪ ಕೊಡುವ ಸಣ್ಣ ಪ್ರಯಾಸ ಮಾತ್ರ .)
4 comments:

ಶಾಂತಲಾ ಭಂಡಿ said...

ಚಿತ್ರಾ ಅವರೆ...
ಚೆಂದದ ಸಾಲುಗಳನ್ನೇ ನಿಮ್ಮ ಅಳಲಿನ ಕನ್ನಡಿಯಲ್ಲಿ ಹಿಡಿದ್ದೀರ.
ಮನತಟ್ಟುವ ಸಾಲುಗಳು.
ನನಗೊಂದಿಷ್ಟು ಎಚ್ಚರಿಕೆ ಕೂಡ" ನಾಳೆ ನೀನೂ ಹೀಗೆ ಮರುಗಬಹುದು "ಅಂತ.
ಯಾವತ್ತೂ ಹೀಗೆ...ಕನಸುಗಳು ಕಳೆದು ಹೋದಾಗ ಆಗುವ ನೋವಿಗಿಂತಲೂ ನೆನಪುಗಳಲ್ಲಿ ಹುದುಗಿಹೋದ ಸಿಗಲಾರದ ಕ್ಷಣಗಳು ಅತೀವವಾಗಿ ಕಾಡುತ್ತವೆ. ಅಲ್ವಾ?
ಬರೆಯುತ್ತಿರಿ. ಓದುತ್ತೇವೆ.

ತೇಜಸ್ವಿನಿ ಹೆಗಡೆ said...

ಚಿತ್ರಾ,

"ಗತಂ ನ ಶೋಚಯೇತ್ ಪ್ರಾಜ್ಞಃ" ಅಂತ ಸಂಸ್ಕೃತ ಶ್ಲೋಕವೊಂದಿದೆ.. ಆದರೆ ನಾವು ಕಳೆದದ್ದನ್ನು ನೆನೆದು ಕೊರಗುತ್ತಾ.. ಪಡೆದದ್ದನ್ನು ಮರೆಯುವೆವು. .. ಇದರಿಂದಾಗಿ ಇದ್ದದ್ದೂ ಕಳೆದುಹೋಗಬಹುದೇನೋ ಎಂಬ ಅಭದ್ರತೆ ಮನುಷ್ಯನನ್ನು ಯಾವತ್ತೂ ಕಾಡುತ್ತಿರುತ್ತದೆ ಅಲ್ದಾ? ನಿಮ್ಮ ಕವನ ಓದಿ ನಂಗೆ ತುಂಬಾ ಸಂಕ್ಟ ಆತು..ಎಷ್ಟೊ ಕೆಲಸಕ್ಕೆ ಹೋಪ ಹೆಂಗ್ಸ್ರ ಅಳಲು ಇದರಲ್ಲಿದ್ದಾಂಗೆ ಅನಶ್ಚು. ಬರೆಯುತ್ತಿರಿ.. ಬರುತ್ತಿರುವೆ.

chitra said...

ಪ್ರಿಯ ತೇಜಸ್ವಿನಿ ,

ನನ್ನ ಸಾಲುಗಳು , ನನ್ನೊಬ್ಬಳದೇ ಅಲ್ಲ ಅದೆಷ್ಟೋ ತಾಯಿಯರ ನೋವಿನ ಪ್ರತಿಬಿಂಬದಂತೆನಿಸಿದರೆ, ನಿಜಕ್ಕೂ ನನ್ನ ಪ್ರಯತ್ನ ಸಾರ್ಥಕ .ಈ ಕವನಕ್ಕೆ ಸ್ಪೂರ್ತಿಯಾದ ಭಾಷಣ
ಕೇಳಕಾದ್ರೆ,ನಂಗಷ್ಟೇ ಅಲ್ಲ ಇನ್ನೂ ಸುಮಾರು ತಾಯಂದ್ರ ಕಣ್ಣಲ್ಲೂ ನೀರು ಬಂದಿತ್ತು. ಈ ಸಂಕ್ಟ ಎನ್ನ ಯಾವಾಗ್ಲೂ ಕಾಡ್ತಾನೇ ಇರ್ತೇನ ಹೇಳಿ ಈಗ್ಲೂ ಅನಸ್ತು.

sunaath said...

ಚಿತ್ರಾ ಅವರೆ,
ನಿಮ್ಮ ಕವನ ಮನ ತಟ್ಟುತ್ತದೆ.
ಬೇಂದ್ರೆಯವರ ಸಾಲುಗಳು ನೆನಪಾದವು:
"ಇರುಳು ತಾರೆಗಳಂತೆ ಬೆಳಕೊಂದು ಹೊಳೆಯುವದು
ಕಳೆದ ದುಃಖಗಳಲ್ಲಿ ನೆನೆದಂತೆಯೆ!"