March 12, 2008

ಆಲೇಮನೆ

ಮೊನ್ನೆ ಸುಧಾ ಕೈಯಲ್ಲಿ ಹಿಡಿದು ಅಡ್ಡ ಬಿದ್ದಿದ್ದೆ. ಹಾಗೇ ಕಣ್ಣಾಡಿಸುತ್ತಾ ಇರುವಾಗ " ಆಲೆಮನೆ" ಬಗ್ಗೆ ಬರೆದ ಲೇಖನ ಕಣ್ಣಿಗೆ ಬಿತ್ತು . ಓದುತ್ತಾ ಹೋದಂತೆ, ಮೂಗಲ್ಲಿ ಹಸಿ ಕಬ್ಬಿನ ಸಿಪ್ಪೆಯ ಪರಿಮಳ , ಬಾಯಲ್ಲಿ ನೊರೆಬೆಲ್ಲದ ಸವಿ ತುಂಬಿಕೊಂಡು , ನೆನಪಿನ ಗಾಣ ತಿರುಗತೊಡಗಿತು.

ಜನವರಿ-ಫೆಬ್ರುವರಿಯಲ್ಲಿ ನಮ್ಮನ್ನು ಶಾಲಾಲೋಕದಿಂದ ದೂರ ಕರೆದೊಯ್ಯುತ್ತಿದ್ದ ಅಜ್ಜನ ಮನೆಯ ಆಲೇಮನೆಯ ಬಗ್ಗೆ ಪುಟಗಟ್ಟಲೇ ಬರೆಯಬಹುದಾದಷ್ಟು ನೆನಪುಗಳು / ಪ್ರಸಂಗಗಳು ಮನಸಿನಲ್ಲಿ ಉಕ್ಕುತ್ತಿವೆ. ಅವುಗಳಲ್ಲಿ ಕೆಲವನ್ನು ನಿಮ್ಮೊಡನೆ ಹಂಚಿಕೊಳ್ಳುವ ಪ್ರಯತ್ನ ನನ್ನದು.


ಆಲೇಮನೆ ವೈಭವ:
ಆಲೇಮನೆಯ ಕರೆಯವನ್ನೇ ಕಾಯುತ್ತಿದ್ದ ಅಮ್ಮನ ಜೊತೆ ಸಾಗರದಿಂದ ಸಿರ್ಸಿಯ ಅಜ್ಜನ ಮನೆಗೆ ಬಸ್ಸಲ್ಲಿ ಒದ್ದಾಡಿಕೊಂಡು ತಲುಪುತ್ತಿದ್ದ ನಾವು ಹೊಟ್ಟೆಗೆ ಹಾಕಿದ ಶಾಸ್ತ್ರ ಮಾಡಿ ಸೋದರ ಮಾವನ ಮಕ್ಕಳ ಗ್ಯಾಂಗ್ ಸೇರಿದರೆ ಮುಗೀತು! ಅಲ್ಲಿಂದ ನಮ್ಮ ಪ್ರಪಂಚವೇ ಬೇರೆಯಾಗುತ್ತಿತ್ತು.

ಮೊದಲು ಕಾಯಿ ಕರಟ ಆರಿಸುವ ಗಡಿಬಿಡಿ. ( ನಮ್ಮ ರಗಳೆ, ಜಗಳ ತಾಳಲಾರದೇ, ಆಲೇಮನೆ ಹೊತ್ತಿಗೆ ಅತ್ತೆ /ಅಜ್ಜಿ ಅಡುಗೆಗಾಗಿ ದೊಡ್ಡ ದೊಡ್ಡ ತೆಂಗಿನ ಕಾಯಿಗಳನ್ನೇ ಒಡೆಯುತ್ತಿದ್ದರು !) ಅದೇಕೆ ಅಂತೀರಾ? ಕಾಸಿಗೊಂದು ಕೊಸರಿಗೆರಡು ಮೆಲಮೈನ್ ಬಟ್ಟಲುಗಳು ಸಿಕ್ಕದ ಆ ಕಾಲದಲ್ಲಿ, ಬಿಸಿ ಬಿಸಿ ನೊರೆಬೆಲ್ಲವನ್ನು ನಾವು ತೆಂಗಿನ ಕರಟದಲ್ಲಿ ಸವಿಯುತ್ತಿದ್ದೆವು! ದೊಡ್ಡವರು ಬಾಳೆ ಎಲೆಯಲ್ಲಿ ಹಾಕಿಕೊಂಡು ತಿಂದರೂ ನಮಗದು ಹಿಡಿಸದು. ಕರಟದಲ್ಲಿ ಹಾಕಿಕೊಂಡು ತಿನ್ನುವಾಗಲೇ ಮೈಮೇಲೆ ಚೆಲ್ಲಿಕೊಳ್ಳುವವರು ನಾವು. ಇನ್ನು ಬಾಳೆ ಎಲೆಯಲ್ಲಿ ಅಂದರೆ ಮುಗೀತು. ಸರಿ. ಆದಷ್ಟು ದೊಡ್ಡದಾದ, ಅಂಚು ಸರಿಯಾಗಿರುವ ಕರಟವನ್ನು ಆರಿಸಿಕೊಂಡ ನಂತರ ಅದನ್ನು ಕೆತ್ತುವ ಕೆಲಸ. ಮಕ್ಕಳೆಲ್ಲ ತಾವು ಆರಿಸಿಕೊಂಡ ಕರಟ ಹಾಗೂ ಬಡ್ಡು ಕತ್ತಿ / ಮರಳುಕಾಗದ ( ಅಜ್ಜನಿಗೆ , ಮಾವನಿಗೆ ತಿಳಿಯದಂತೆ ಎಗರಿಸಿದ್ದು!) ಹಿಡಿದು ಹೊರಗಡೆ ಕಟ್ಟೆಯ ಮೇಲೆ ಕುಳಿತುಕೊಂಡರೆ, ಮತ್ತೆ ಸಂಜೆಯವರೆಗೂ ಅದರ ಹೊರಮೈ, ಒಳಮೈ ನುಣುಪಾಗುವಂತೆ ಕೆತ್ತುವುದೇ ಕೆಲಸ !( ಅಷ್ಟು ಶ್ರದ್ಧೆಯಿಂದ ಏನಾದ್ರೂ ಪಾಠ ಓದಿದ್ದರೆ... ಏನಾಗಿರುತ್ತಿದ್ದೆವೋ ! ) ಇಂಥಾ ಕೆಲಸಗಳನ್ನು ಮಾಡಿ ಅಭ್ಯಾಸವಿರದ ನಾವು ಅಂದರೆ ನಾನು ಮತ್ತು ಇಬ್ಬರು ತಮ್ಮಂದಿರು, ಸ್ವಲ್ಪ ಹೊತ್ತು ಪ್ರಯತ್ನಿಸಿ ಆಮೇಲೆ ಮಂಜನೋ ,ಬೀರನೋ ,ಸಣತಮ್ಮನೋ ಯಾರನ್ನಾದರೂ ಹಿಡಿದು ಕರಟ ನುಣುಪಾಗಿಸಿ ಕೊಡುವಂತೆ ಗಂಟು ಬೀಳುವುದಿತ್ತು . ಅಂತೂ ಕೆಲಸದವರ ಕೃಪೆಯಿಂದ ನುಣುಪಾದ , ನಮ್ಮ ಪಾಲಿಗೆ ಬೆಳ್ಳಿ ಬಟ್ಟಲಿಗಿಂತ ಬೆಲೆ ಬಾಳುವ ಕರಟವನ್ನು ಹೆಮ್ಮೆಯಿಂದ ಸವರುತ್ತ ಆಲೇಮನೆ ಕಡೆಗೆ ಓಡುತ್ತಿದ್ದೆವು.


ಇನ್ನು ಬಿಸಿ ಬೆಲ್ಲ ಸವಿಯುವ ಪರಿಯನ್ನಾದರೂ ಹೇಗೆಂದು ವರ್ಣಿಸಲಿ? ಹಳ್ಳಿ ಮನೆಗಳಲ್ಲಿ ಆಗ ಚಮಚ-ಗಿಮಚ ಎಲ್ಲ ಅಪರೂಪದ ವಸ್ತುವಾಗಿದ್ದ ಕಾಲವದು. ನಮಗದು ಬೇಕಾಗಿಯೂ ಇರಲಿಲ್ಲ ಬಿಡಿ . ನಮ್ಮ ಬಳಿ ಸುಲಭದ ಹ್ಯಾಂಡ್ ಮೇಡ್ ಚಮಚ ಇರುವಾಗ ಬೇರೆ ಚಮಚ ಯಾಕೆ? ಕೈಯಲ್ಲಿಯ ಕಬ್ಬನ್ನು ಒಮ್ಮೆ ಕಚ್ಚಿ ಸರಿಯಾಗಿ ಸಿಪ್ಪೆ ತೆಗೆದರೆ ,ಆ ಸಿಪ್ಪೆಯಿಂದ ಚಮಚ ರೆಡಿ! ಬಳಸಿ ಬಿಸಾಡುವ ಚಮಚ . ಕಳೆದು ಹೋಗುವ ಭಯವಿಲ್ಲ , ತೊಳೆದಿಡುವ ರಗಳೆಯಿಲ್ಲ .ಇನ್ನೇನು ಬೇಕು ?

ನಾವು ದಿನವಿಡೀ ಇರುತ್ತಿದ್ದುದು ಆಲೇಕಣದಲ್ಲಿ. (ನಮ್ಮ ಭೇಟಿಯ ಮೂಲ  ಉದ್ದೇಶವೇ ಆಲೇಮನೆ . ಅಂದಮೇಲೆ ಮನೆಯಲ್ಲೇಕೆ ಇರಬೇಕು ಎಂಬ ತರ್ಕ ನಮ್ಮದು !) ಅಲ್ಲಿ ಕಬ್ಬಿನ ಸಿಪ್ಪೆಯ ಚಿಕ್ಕ ಬೆಟ್ಟವನ್ನೇರಿ, ಒಂದು ಕೈಯಲ್ಲಿ ಕೆಂಪು ರಸದಾಳಿ ಕಬ್ಬನ್ನೂ, ಇನ್ನೊಂದು ಕೈಯಲ್ಲಿ ನಾವೇ ಸ್ವತಹ ಕೆತ್ತಿ ಸ್ಪೆಶಲ್ ಆಗಿ ತಯಾರಿಸಿದ ತೆಂಗಿನ ಕರಟದಲ್ಲಿ ಬಿಸಿ ಆರದ ನೊರೆ ಬೆಲ್ಲ ಹಿಡಿದು ಕುಳಿತುಕೊಳ್ಳುವ ನಮ್ಮಠೀವಿಯೇನು ! ಸಿಹಿಯಾದ ಕಬ್ಬನ್ನು ಬೆಲ್ಲ ಹಚ್ಚಿಕೊಂಡು ತಿನ್ನುವಾಗ, ನೊಣ-ನೊರಜುಗಳ ಚಾಮರ , ಸೊಳ್ಳೆಗಳ ಸಂಗೀತವೇನು ! ನಮ್ಮ ಈ ಒಡ್ಡೋಲಗದ ವೈಭವಕ್ಕೆ ಆ ಅಮರಾವತಿಯ ಇಂದ್ರನೂ ನಾಚಬೇಕು ! ಇಂಥಾ ಒಡ್ಡೋಲಗದಲ್ಲಿ ಆಸೀನರಾದ ನಾವು ಹುಯಿಲೆಬ್ಬಿಸುವ ಪರಿಗೆ ಕೋಣ ಹೊಡೆಯುವವನು " ಹೋಯ್ , ಹುಡುಗ್ರಾ, ನಿಂ ಗಲಾಟೆ ಕೇಳಿ ಕೋಣ ಹೆದ್ರಿ ಓಡಿ ಹೋದ್ರೆ ನಂಗೊತ್ತಿಲ್ಲ ನೋಡಿ " ಎಂದು ಕೂಗುತ್ತಿದ್ದ .

ಈ ಆಲೇ ಕಣದಲ್ಲಿ ಕೋಣ ಹೊಡೆಯುವವನು ನಮ್ಮ ಪಾಲಿಗೆ ಒಂಥರಾ ಮಹಾನ್ ವ್ಯಕ್ತಿ . ಗಂಡು ಹುಡುಗರು ಅವನಿಗೆ ಪೂಸಿ ಹೊಡೆದೊ, ಗಂಟು ಬಿದ್ದೋ ಒಂದೆರಡು ರೌಂಡ್ ಆದರೂ ಕೋಣ ಹೊಡೆಯುವ ಮಹತ್ಕಾರ್ಯ ಸಾಧಿಸಿ ಹೆಮ್ಮೆ ಪಡುತ್ತಿದ್ದರೆ,ನಾವು ಹೆಣ್ಣು ಮಕ್ಕಳು ಹಾಗೆ ಮಾಡಲಾಗದ್ದಕ್ಕೆ ಒಳಗೊಳಗೇ ಹೊಟ್ಟೆ ಉರಿಸಿಕೊಳ್ಳುತ್ತಿದ್ದೆವು .

ಸಂಜೆ ಆದಂತೆ ಚಳಿಯೂ ಹೆಚ್ಚುತ್ತಿತ್ತು. ನಮ್ಮ ಸಭೆ ಆಗ ಒಲೆಯ ಬಳಿ ! ದೊಡ್ಡ ಒಲೆಗೆ ದೊಡ್ಡ ದೊಡ್ಡ ಕುಂಟೆಗಳನ್ನು ಒಟ್ಟಿ ಬೆಂಕಿ ಧಗ ಧಗ ಉರಿಯುತ್ತಿದ್ದರೆ,ಮೇಲೆ ಕೊಪ್ಪರಿಗೆಯೊಳಗೆ ಕಬ್ಬಿನ ಹಾಲು ಕುದಿಯುತ್ತಾ ಬೆಲ್ಲವಾಗುತ್ತಿತ್ತು. ಒಲೆಯ ಬಳಿ ಕುಕ್ಕರುಗಾಲಲ್ಲಿ ಕುಳಿತ ನಮಗೆ , ಆಳು ಬೀರ, ಭೂತ-ದೈವಗಳ ಪ್ರಸಂಗಗಳನ್ನು ರಸವತ್ತಾಗಿ ಹೇಳುತ್ತಿದ್ದರೆ ಬೆಂಕಿ ಮುಂದೆ ಕುಳಿತಿದ್ದರೂ ಒಳಗೊಳಗೇ ನಡುಕ ಶುರುವಾಗುತ್ತಿತ್ತು . ಜೊತೆಗೇ ಮನೆಗೆ ಹೋಗುವಾಗ ಕತ್ತಲಲ್ಲಿ ಯಾವ ಭೂತ ಎದುರಾಗುವುದೋ ಎಂಬ ಹೆದರಿಕೆ ಬೇರೆ.

ಆಲೇಮನೆಯ ಸವಿಗೆ ಇನ್ನಷ್ಟು ಕಳೆಯೇರುತ್ತಿದ್ದಿದ್ದು, ಮನೆಯಲ್ಲಿ ದೊಡ್ಡತ್ತೆ ತೊಡೆದೇವಿನ ಗಡಿಗೆ ಒಲೆ ಮೇಲಿಟ್ಟಾಗ. ಆಹಾ,ಗರಿ ಗರಿ ತೊಡೆದೇವು -ಕಾಯಿಹಾಲು , ಜೊತೆಗೆ ಕುಡಿಯಲು ಕಬ್ಬಿನ ಹಾಲು , ನಡು ನಡುವೆ ಕೊಪ್ಪರಿಗೆಯಲ್ಲಿ ಬೆಲ್ಲದ ಜೊತೆಗೇ ಬೇಯಿಸಿದ ಪಪ್ಪಾಯಿ ,ಬಾಳೆದಿಂಡು ಅಥವಾ ಗೆಣಸಿನ ಗಾಲಿಯ ಸರ ..ಆಹಾ ...ಪ್ರಪಂಚದ ಸುಖವೆಲ್ಲಾ ಕಾಲಬಳಿ ಇದ್ದಂತೆ ನಮಗೆ ! ಸ್ಕೂಲು - ಓದು ಯಾರಿಗೆ ಬೇಕು ಎಂಬಂಥ ನಿರ್ಲಿಪ್ತತೆ. ! ಇಂದಿಗೂ ಕೂಡ ತೊಡೆದೇವು ಮಾಡಿದಾಗ ದೊಡ್ಡತ್ತೆ ನನಗಾಗಿ ಕಾದಿರಿಸಿ ಯಾರಾದರೂ ಬರುವವರಿದ್ದರೆ ಕಳಿಸುವುದಿದೆ. ಈಗ ವರ್ಷವಿಡೀ ಸಿರ್ಸಿಯ ಕೆಲ ಅಂಗಡಿಗಳಲ್ಲಿ ತೊಡೆದೇವು ಸಿಕ್ಕರೂ ,ಅಜ್ಜನ ಮನೆಯ ತೊಡೆದೇವಿನ ರುಚಿಯೇ ಬೇರೆ. ಅದರಲ್ಲಿ ಪ್ರೀತಿಯ ಜೊತೆ , ಆಲೇಮನೆಯ ನೆನಪುಗಳೂ ಸೇರಿ ಅದನ್ನು ಇನ್ನಷ್ಟು ಸವಿಯಾಗಿಸುತ್ತವೆ.

ಇಂಥಾ ಆಲೇಮನೆಯ ವೈಭವ ಕೇವಲ ನೆನಪು ಮಾತ್ರವಾಗಿ ಉಳಿದಿದೆ. ಯಾವಾಗಲಾದರೂ ಒಮ್ಮೆ, ಹೊರಗಡೆ ಅಂಗಡಿಗಳಲ್ಲಿ , ೩-೪ ಕಬ್ಬನ್ನೇ ೫-೬ ಸಲವಾದರೂ ಗಾಣದಲ್ಲಿ ತಿರುಗಿಸಿ ಜೊತೆಗೆ ನಿಂಬೆ ಹಣ್ಣು, ಶುಂಠಿ ಎಲ್ಲ ಹಾಕಿ ರಸ್ತೆ ಬದಿಯಲ್ಲಿ ಹರುಕು ಗೋಣಿಯಲ್ಲಿ ಸುತ್ತಿಟ್ಟ ಐಸ್ ನ ಕೆಲವು ಚೂರುಗಳನ್ನು ತೇಲಿಸಿ ಅಂಗಡಿಯವನು ಕೈಯಲ್ಲಿಟ್ಟ ಹುಳಿ ಹುಳಿಯಾದ, ಸ್ವಲ್ಪವೂ ರುಚಿಯಿಲ್ಲದ ಕಬ್ಬಿನ ಹಾಲನ್ನು ಗ್ಲಾಸಿಗೆ ೨೦ ರೂಪಾಯಿ ಕೊಟ್ಟ ತಪ್ಪಿಗೆ ಗಂಟಲಲ್ಲಿಳಿಸುವಾಗ , ಆಲೇಮನೆಗೆ ಬಂದ ಅಪರಿಚಿತರೂ ಸಹ ಕೊಡಗಳಲ್ಲಿ ಕಬ್ಬಿನ ಹಾಲು ಒಯ್ಯುತ್ತಿದ್ದುದು ನೆನಪಾಗಿ ಏನೋ ಕಳೆದುಕೊಂಡ ಭಾವ ಆವರಿಸಿ ಬಿಡುತ್ತದೆ.

7 comments:

venkatesh said...

ಹಾಯ್ ಚಿತ್ರ!
ಅನ್ದ್ರು ವಮ್ಮೆ ಬರೀಲಿಕ್ಕೆ ಸುರು ಮಾದಿದನ್ನು ! ಏನೆ ಆಗಲಿ ಭಾಳ್ ಛ್ಂದ್ ಬರೀತೀ ಬೀಡು,
ಓದ್ಲೀಕ್ ಹತ್ತೀದ್ರ ಹಾಂಗೆ ಓದ್ ಬೆಕನಿಸ್ತದ, ಭಾಳ್ ಹ್ರದಯ ಸ್ಪರ್ಶಿ ಬರೀತಿ
ಎನ್ ಅಡ್ದೀ ಇಲ್ಲಾ!! ಹಿಂಗೆ ಬರಿತಾ ಬರಿತಾ ದೊಡ್ದ ಸಾಹಿತಿ ಆಗು ಅನ್ನೊದೆ ನನ್ನ್ ಸದಿಛ್ಛೆ !!!
ದೇವರು ನಿನಗೆ ಓಳ್ಳೆದು ಮಾಡಲಿ!!

ಅರುಣ್ ದೇಶಪಾಂಡೆ,

chitra said...

ದೇಶಪಾಂಡೆವ್ರೇ ,

ನಮಸ್ಕಾರ್ರಿ. ನಿಮ್ಮಂಥವರ ಆಶೀರ್ವಾದ ಭಾಳ ಅಗತ್ಯ ನೋಡ್ರಿ . ದೊಡ್ಡ ಸಾಹಿತಿ ಆಗೋದು ಕಡೀಗಾತು ಮೊದಲು ಸಣ್ಣ ಪುಟ್ಟದು ಏನಾರೆ ಹೀಂಗೇ ಬರೀತೀನ್ರಿ. ಬರ್ತಾ ಇರ್ರಿ.

vijay said...

ವಿಜಯ - ಆಲೆಮನೆಯ ಕುರಿತು,
ಬಿಸಿ ಬಿಸಿ ನೊರೆ ಬೆಲ್ಲ ಅದು ತೆಂಗಿನ ಕರಟದಲ್ಲಿ..ಅಂದರೆ ಬೆಳ್ಳಿ ಬೆಟ್ತಲಲ್ಲಿ .. ಪುಣ್ಯಂವತರಪ್ಪ ನೀವುಗಳೆಲ್ಲ . ಅದರೊಟ್ಟಿಗೆ ಈಸಿ ( ಸುಲಭ) ಚಮಚ..
ನೊರೆ ಬೆಲ್ಲದ ರುಚಿ
ಸವಿದವನೆ ಬಲ್ಲ
ಓದುತ್ತ ಹೊದಂತೆ ನಮಗೆ ಬಾಯಿಂದ ಜೊಲ್ಲಿನ ನೊರೆ ಬಂದಂತೆ..
ಕೊಪ್ಪರಿಗೆಯೊಳಿಗನ ಕುದಿವ ಬೆಲ್ಲ
ಅದರ ಅನುಭವವಿರದ ನಮಗೆ ಮನದಲ್ಲಿ ಆಸೆಯ ಬೆಲ್ಲ ( ಕುದಿಯುತ್ತಲಿತ್ತು)
ಆಲೆಮನೆ .... ನೊರೆಬೆಲ್ಲ .. ಪರಿಮಳ .. ಮರಳು ಕಾಗದ .. ಸಿಪ್ಪೆಯ ಬೆಟ್ಟ..ಒಡ್ಡೊಲಗದ ಸಂಗಿತ .. ಕೊಣದ ಜಂಬೂ ಸವಾರಿ ... ರುಚಿಯ ತೊಡೆ ದೇವು.. ಗೆಣಸಿನ ಗಾಲಿಯ ಸರ .. ಆಹಾ! ಅನುಭವದ ಕಥನ.
ಮುಗಿಸುವದಕ್ಕಿಂತ ಮೊದುಲು
ಆಲೆಮನೆಯ ನೆನಪಗಳನ್ನು ಅಪರಚಿತನಾದ ನನಗೆ ಕೊಡಗಳಲ್ಲಿ ತುಂಬಿಕೊಂದ ಅನುಭವ ..
ದನ್ಯವಾದಗಳು... ಚಿತ್ರಾ..
ಇತ್ತೀಚಿಗೆ ಓದಿದ್ದು,
ಈ ಬಾಲ್ಯವೇ ಹಾಗೇ
ಭಾವನಗಳ ಬರಹಕ್ಕೆ ನಿಲುಕದ
ನೀಲಾಕಾಶ... ಎತ್ತ ನೋಡಿದತ್ತ
ಆದಿ-ಅಂತ್ಯವಿಲ್ಲದ ಸ್ತಭಚಿತ್ರ.

ವಿಜಯ್

ಜೋಮನ್ said...

ನಮಸ್ಕಾರ..

ನಿಮ್ಮ ಬ್ಲಾಗ್ ಸೊಗಸಾಗಿದೆ. ಆಲೇ ಮನೆ ಲೇಖನ ಓದಿ ನಮ್ಮೂರಿನ ನೆನಪು ಬಂತು. ಆದರೆ ಈಗ ಕಬ್ಬೂ ಇಲ್ಲ ಹಾಲೂ ಇಲ್ಲ. ಬಾಳೆ ಎಲೆಯ ಮೇಲೆ ನೊರೆಬೆಲ್ಲವನ್ನೂ ಹಾಕಿಸಿಕೊಂಡು ಕಬ್ಬಿನ ಸಿಪ್ಪೆಯ ದಂಟಿನಿಂದ ಊದಿ ಊದಿ ನಾಲಿಗೆಗಿಟ್ಟುಕೊಳ್ಳುತ್ತಿದ್ದು ನೆನಪಾಯಿತು. ತುಂಬಾ ಚೆನ್ನಾಗಿ ಬರೆಯುತ್ತೀರಿ. ಬರೆಯುತ್ತಲಿರಿ.. ನಾವು ಬರುತ್ತಲಿರುತ್ತೇವೆ.

ಧನ್ಯವಾದಗಳು.

ಜೋಮನ್.

chitra said...

ಜೋಮನ್ ಅವರೇ,

ಧನ್ಯವಾದಗಳು.
ನಮ್ಮೂರಲ್ಲೂ ಈಗ ಕಬ್ಬು ಬೆಳೆಯುವವರು ಕಮ್ಮಿಯಾಗಿದ್ದಾರೆ.
ಆಲೇಮನೆಗಳು ನಿಧಾನವಾಗಿ ಮರೆಯಾಗುತ್ತಿವೆ. ಬಹುಶಃ ಕೆಲವೇ ವರ್ಷಗಳಲ್ಲಿ , ಆಲೇಮನೆ ಕೇವಲ ನೆನಪಾಗಿ ಉಳಿಯಬಹುದೇನೊ . ಅಲ್ಲವೆ? ಬರುತ್ತಿರಿ

sunaath said...

ಬಾಯಲ್ಲಿ ನೀರೂರುವಂತಹ ವರ್ಣನೆ!

chitra said...

ಧನ್ಯವಾದಗಳು ಸುನಾಥ್,
ಬರುತ್ತಿರಿ .