March 28, 2008

ಒಂದೇ ಒಂದು ಆಟ .... ಅದರ ಹಿಂದೆ ಓಟ

ಬೆಳಿಗ್ಗೆ ಓದೋಕೆ ಅಂತ ಪೇಪರ್ ಬಿಡಿಸಿದರೆ, ಅದರಿಂದ ಕೆಳಗೇನೋ ಬಿತ್ತು. ಕೈಗೆತ್ತಿಕೊಂಡು ನೋಡಿದೆ. ಯಾವುದೋ ಟ್ಯೂಷನ್ ಕ್ಲಾಸಿನ ಜಾಹೀರಾತು. ಮೇಲ್ಭಾಗದಲ್ಲಿ ದೊಡ್ಡ ಅಕ್ಷರಗಳಲ್ಲಿ " Great opportunity , Join Now or Never " ಎಂದು ಬರೆದಿತ್ತು. ಪ್ರತಿ ಶಬ್ದದ ಮುಂದೆಯೂ ೩-೪ ಉದ್ಗಾರ ವಾಚಕಗಳು ! ವಾರದಲ್ಲಿ ೪-೫ ದಿನವಾದರೂ ಪೇಪರ್ ನ ಜೊತೆ ಇಂಥಾ ಹಸಿರು , ಹಳದಿ, ಗುಲಾಬಿ ಬಣ್ಣದ ಕಾಗದಗಳು ಇದ್ದೇ ಇರುತ್ತವೆ. ಇವು ನನ್ನನ್ನು ಕೆಲವೊಮ್ಮೆ ನನ್ನ ಬಾಲ್ಯಕ್ಕೆ ಕರೆದೊಯ್ದು ಬಿಡುತ್ತವೆ.

" ಇಂದು ಸಂಜೆ , ದ್ವಾರಕಾನಾಥ ಕಲಾಮಂದಿರದಲ್ಲಿ , ಅಮೃತೇಶ್ವರಿ ಮೇಳದವರಿಂದ , ಒಂದೇ ಒಂದು ಆಟ , ನೋಡಲು ಮರೆಯದಿರಿ , ಮರೆತರೆ ಕೊರಗುವಿರಿ, " ಎಂಬ ಲೌಡ್ ಸ್ಪೀಕರ್ ಕಿರುಚಾಟದೊಂದಿಗೆ, ನಮ್ಮೂರ ರಸ್ತೆಗಳಲ್ಲಿ ಜೀಪುಗಳೋ, ಅಂಬಾಸಡರ್ ಕಾರುಗಳೋ ಕೆಂಪು ಧೂಳೆಬ್ಬಿಸುತ್ತಾ ಸಾಗುತ್ತಿದ್ದರೆ, ಅದರ ಹಿಂದೆಯೇ ಇನ್ನಷ್ಟು ಧೂಳೆಬ್ಬಿಸುತ್ತಾ , ಗಾಡಿಯೊಳಗಿಂದ ಹೊರಗೆ ಹಾರಿ ಗಾಳಿಯಲ್ಲಿ ತೇಲುವ ’ಹ್ಯಾಂಡ್ ಬಿಲ್’ ಹಿಡಿಯಲು ಓಡುವ ಮಕ್ಕಳ ದಂಡು. ಇನ್ನೂ ಅ-ಆ-ಇ-ಈ ಕಲಿಯುತ್ತಿರುವವರಿಗೂ ಆ ಬಣ್ಣ ಬಣ್ಣದ ಕಾಗದವನ್ನು ಕೈಯಲ್ಲಿ ಹಿಡಿದು ಸಂಭ್ರಮಿಸುವ ತವಕ. ಹ್ಯಾಂಡ್ ಬಿಲ್ ಕೈಗೆ ಸಿಕ್ಕವರ ಹೆಮ್ಮೆಯೇನು, ಅದನ್ನು ಹಿಡಿಯಲಾರದವರ ಹಳಹಳಿಯೇನು ! ಅಕಸ್ಮಾತ್ ಎರಡು- ಮುರು ಸಿಕ್ಕವರಂತೂ ಆಕಾಶದಲ್ಲೇ ತೇಲಾಡುವಂತಿರುತ್ತಿದ್ದರು. ಸಿಗದವರು ಅವನ ಹಿಂದೆ. " ಏ ರಾಮು, ನಂಗೊಂದು ಕೊಡಾ, ನಿನ್ನತ್ರ ಎರಡ್ಮೂರು ಇದ್ದಲಾ ಮಾರಾಯ . ’ ಎನ್ನುತ್ತಾ ಹಿಂದೆ ಬಿದ್ದವರು ಕೆಲವರಾದರೆ, " ನಂಗೊಂದು ಕೊಡು. ನಾ ನಿಂಗೆ ಒಂದು ’ ಬೆಣ್ಣೆ ಕಡ್ಡಿ’ ಕೊಡ್ತಿ " ಎಂದೋ ’ಗೋಲಿ ಕೊಡ್ತಿ’ ಎಂದೋ ಆಮಿಷ ತೋರಿಸುವವರು ಕೆಲವರು. " ಏ ,ನಿಂಗೇನು ಓದಲೆ ಬರ್ತಿಲ್ಲೆ, ಹ್ಯಾಂಡ್ ಬಿಲ್ ತಗಂಡು ನೀ ಎಂತಾ ಮಾಡ್ತೆ , ಇಲ್ಕೊಡು " ಎಂದು ಜಬರ್ದಸ್ತು ಮಾಡಿ, ಚಿಕ್ಕವರಿಂದ ಕಿತ್ತುಕೊಂಡು ಅವರು " ಅಮ್ಮಾ... ನನ್ನ ಹ್ಯಾಂಡ್ ಬಿಲ್ಲೂ .. " ಎಂದು ಅಳುತ್ತಾ ಮನೆಗೆ ಓಡುವಂತೆ ಮಾಡುವವರು ಕೆಲವರು.
ಒಟ್ಟಿನಲ್ಲಿ, ಈ " ಒಂದೇ ಒಂದು ಆಟ .. " ಊರ ಮಕ್ಕಳಲ್ಲೆಲ್ಲಾ ಉತ್ಸಾಹವನ್ನು ತುಂಬಿ ಬಿಡುತ್ತಿತ್ತು .

ಫರ್ಲಾಂಗ್ ದೂರದಿಂದಲೇ ಕೇಳುತ್ತಲಿದ್ದ " ಒಂದೇ ಒಂದು ಆಟ...ನೋಡಲು ಮರೆಯದಿರಿ.." ಎಂಬ ದನಿಯೂ, ಅದನ್ನು ಕೇಳುತ್ತಲೇ ಕಿವಿ ನಿಮಿರಿಸಿಕೊಂಡು , ಆಡುತ್ತಿದ್ದ ಆಟವನ್ನಲ್ಲೇ ಬಿಟ್ಟು , ಆ ಗಾಡಿಯ ಹಿಂದೆ ಬರಿಗಾಲಲ್ಲಿ , ಧೂಳೆಬ್ಬಿಸುತ್ತಾ ಓಡುತ್ತಿದ್ದ ಹುಡುಗರ ದಂಡು ಎರಡೂ ಈಗ ಇಲ್ಲವಾಗಿದೆ.

ಈಗೇನಿದ್ದರೂ, ಕಂಡ ಕಂಡ ಗೋಡೆಗಳಿಗೆಲ್ಲ ಪೋಸ್ಟರ್ ಅಂಟಿಸಿಯೋ, ಕೇಬಲ್ ಟಿ ವಿ ಮೂಲಕವೋ ಅಥವಾ ಹೀಗೆ ಪೇಪರ್ ನ ಒಳಗೆ ಸೇರಿಸಿಯೋ ಜನರನ್ನು ತಲುಪುವ ಪ್ರಯತ್ನ ಸಾಗುತ್ತಿದೆ. ಆದರೆ, ನನ್ನ ಮಟ್ಟಿಗೆ , ಬಹುಶಃ ಇದ್ಯಾವುದಕ್ಕೂ " ಒಂದೇ ಒಂದು ಆಟ..." ಎಂಬ ಅನೌನ್ಸ್ ಮೆಂಟ್ ಹುಟ್ಟಿಸುತ್ತಿದ್ದ ರೋಮಾಂಚನವನ್ನು ತರುವುದು ಸಾಧ್ಯವೇ ಇಲ್ಲ !

4 comments:

Arun said...

ದಿನನಿತ್ಯದ ಪ್ರತಿ ಕ್ಷಣಕ್ಕು ಬಾಲ್ಯದ ಸವಿ ನೆನೆಪುಗಳು ಮರುಕಳಿಸ್ತಾ ಇರುತ್ತವೆ, ಅವುಗಳನ್ನ ಘಟನೆಯಲ್ಲಿ ರೂಪಿಸಿ ಬರೆಯುವ ಕಲೆ ಕೆಲವೊಬ್ಬರಿಗೆ ಮಾತ್ರ ಇರುತ್ತೆ. ನೀನು ಅದನ್ನು ಮಾಡುತ್ತಿರುವೆ ಆಲ್ ದ್ ಬೆಶ್ಟ್ !!!

Unknown said...

ಮೊನ್ನೆ ಊರಿಗೆ ಹೋದಾಗ ಯಾವ್ದೋ ಆಟದ್ದು ಹಿಂಗೆ ಪ್ರಚಾರ ಮಾಡ್ತಾ ಇದ್ದಿದ್ದ ರಿಕ್ಶಾದಲ್ಲಿ. ನಂಗೂ ಹಳೆದೆಲ್ಲಾ ನೆನಪಾಗಿತ್ತು.
ಲೇಖನವನ್ನು ಇನ್ನೂ ಸ್ವಲ್ಪ ಬೆಳೆಸಿದ್ದಾರೆ ಚೆನ್ನಗಿರ್ತಿತ್ತನ. ಆದರೂ ನಿಮ್ಮ ಲೇಖನಗಳೆಲ್ಲ ಹಿಡಿಸಿದವು. ಇನ್ನೂ ಬರೀರಿ.
~ಮಧು

ಚಿತ್ರಾ said...

ಮಧು ಅವರೇ,

ಧನ್ಯವಾದಗಳು.
ಖರೇ ಅಂದ್ರೆ, ಇನ್ನೂ ಬೆಳೆಸಲಾಗಿತ್ತು. ಅಷ್ಟು ವಿಷ್ಯ ಇದ್ದಿತ್ತು. ಆದ್ರೆ ಅಪ್ಪಿ ತಪ್ಪಿ ನಾ ಬರ್ದಿದ್ನ ಓದಲೆ ಬಂದವು ಅರ್ಧಕ್ಕೆ ಓಡಿ ಹೋದ್ರೆ ಕಷ್ಟ ಹೇಳಿ ತುಂಡು ಮಾಡಿದ್ದಿ. ನಾನು ಊರಿಗೆ ಹೋದಾಗೆಲ್ಲ ಎಲ್ಲಾದ್ರೂ ಇಂಥಾ ಪ್ರಚಾರ ಕೇಳಲೆ ಸಿಕ್ತಾ ಹೇಳಿ ಕಾಯ್ತಿರ್ತಿ.ಇನ್ನೂ ಸಿಕ್ಕಿದ್ದಿಲ್ಲೆ.ನೀವೇ ಅದೃಷ್ಟವಂತ್ರು. :-) ಬರ್‍‍ತಾ ಇರಿ.

sunaath said...

ಸ್ವಾರಸ್ಯಕರವಾದ nostalgia!