April 14, 2008

ಥೂ , ಏನಾಗಿದೆ ನನಗೆ ?

ಥೂ , ಏನಾಗಿದೆ ನನಗೆ ? ಈ ಬ್ಲಾಗ್ ಬರೆಯೋಕೆ ಶುರು ಮಾಡಿದಾಗಿಂದ , ತಲೇಲಿ ಒಂಥರಾ ಗುಂಗೀಹುಳ ಕೊರೆದ ಹಾಗೇ ಆಗ್ತಾ ಇದೆ. ಯಾವಾಗ ನೋಡಿದ್ರೂ ತಲೇಲಿ ಬರವಣಿಗೆ ಬಗ್ಗೆನೇ ವಿಚಾರಗಳು. ಕೂತಲ್ಲಿ, ನಿಂತಲ್ಲಿ ,ಸಾಯ್ಲಿ , ಆರಾಮಾಗಿ ಮಲಗೋಕೂ ಬಿಡ್ತಿಲ್ಲ ! ಹೋಗ್ಲಿ ಏನಾದ್ರೂ ಬರ್ದು ಬಿಡೋಣ ಅಂದ್ರೆ ಯಾವುದರ ಬಗ್ಗೆ ಬರೀಲಿ, ಏನು ಬರೀಲಿ ಅನ್ನೋ ಕೊರೆತ ಶುರುವಾಗಿ ಬಿಡತ್ತೆ.ಹಾಗಂತ ಬರೆಯೋಕೆ ವಿಷಯಗಳಿಲ್ಲ ಅಂತಲ್ಲ, ಬೇಕಾದಷ್ಟಿವೆ ! ಪ್ರತಿ ೫ ನಿಮಿಷಕ್ಕೊಂದು ವಿಷಯ ತಲೇಲಿ ಫ್ಲಾಶ್ ಆಗೋ ವೇಗಕ್ಕೆ, ಮುಂಬಯಿಯ ಲೋಕಲ್ ಟ್ರೈನ್ ಗಳೂ ಕಕ್ಕಾಬಿಕ್ಕಿಯಾಗಬೇಕು. ಆದರೆ ,ಅವುಗಳಲ್ಲಿ ಯಾವುದನ್ನ ಆರಿಸಿಕೊಳ್ಳೋದು ಅನ್ನೋ ಪ್ರಶ್ನೆ ತಿನ್ನೋಕೆ ಶುರು ಮಾಡತ್ತೆ. ಅದೇ ದೊಡ್ಡ ಪ್ರಾಬ್ಲಮ್ !
ಇಡೀ ದಿನ ತಲೆಯಲ್ಲಿ ಬರವಣಿಗೆಯದೇ ವಿಚಾರ .ಹೀಗಾದರೆ, ಬೇರೆ ಕೆಲಸಗಳಿಗೆ ತೊಂದರೆ ಆಗಬಾರದೆಂದು ತಲೆಯಲ್ಲಿ ಬರವಣಿಗೆಗಾಗಿಯೇ ಒಂದು ಸ್ಪೆಶಲ್ ಪಾರ್ಟಿಷನ್ ಮಾಡಿಡಬೇಕಾಗಿ ಬಂದಿದೆ.

ಮನೆಯಲ್ಲೂ ಸದಾ ಬರೆಯುವ ಬಗ್ಗೆಯೇ ಯೋಚಿಸುತ್ತಿದ್ದು ಕಳೆದುಹೋದಂತಿರುವ ನನ್ನನ್ನು ನೋಡಿ ಮಗಳು ಸಿಡಿ ಸಿಡಿ ಮಾಡತೊಡಗಿದ್ದಾಳೆ ! " ಅಮ್ಮಾ, ನಾನು ಈ ಪಾಠ ಹೇಳಿಕೊಡು ಅಂತ ಆವಾಗಿಂದ ಕೇಳ್ತಾ ಇದ್ರೆ , ನೀನು ಎಲ್ಲೋ ನೋಡ್ತಾ ಕೂತ್ಕೊಂಡಿದ್ದೀಯಲ್ಲಮ್ಮ " . ಆ ಕ್ಷಣಕ್ಕೆ ನಾಚಿಕೆಯಾದರೂ , ಮತ್ತದೇ ಕಲ್ಪನಾ ಲೋಕಕ್ಕೆ ಹಿಂತಿರುಗಲು ಜಾಸ್ತಿ ಹೊತ್ತು ಬೇಕಾಗುವುದೇ ಇಲ್ಲ ! ಕೆಲವೊಮ್ಮೆ ನನ್ನನ್ನೇ ಕೇಳಿಕೊಳ್ಳುತ್ತೇನೆ ’ ಏನಾಗಿದೆ ನನಗೆ? ಇಷ್ಟು ದಿನ , ದಿನವೇನು ವರ್ಷಗಟ್ಟಲೇ ಬರೆಯದೇ ಇದ್ದವಳಿಗೆ ಒಮ್ಮೆಲೇ ಏನಾಯ್ತು ’ ಅಂತ.
ಅದಕ್ಕೆ , ನನ್ನ ಪತಿರಾಯನ ಅಭಿಪ್ರಾಯ ಎಂದರೆ, " ಮೊದಲು ಸಂಕೋಚದಿಂದಲೇ ಬರೆಯುವುದು -ಬದಿಗಿಡುವುದಾಗಿತ್ತು. ಪತ್ರಿಕೆಗೆ ಕಳಿಸಿ ವಾಪಸಾದರೆ ಎಂಬ ಅಂಜಿಕೆ, ಅಕಸ್ಮಾತ್ ಪ್ರಕಟವಾಗಿ , ಓದಿದವರು ಏನಾದ್ರೂ ಕಾಮೆಂಟ್ ಮಾಡಿದರೆ ಅದನ್ನು ಹೇಗೆ ಸ್ವೀಕರಿಸುವುದೋ ಎಂಬ ಹಿಂಜರಿಕೆ ಇತ್ತು. ಈಗ ಬ್ಲಾಗ್ ನಿಂದಾಗಿ , ಬಿಂದಾಸ್ ಬರೆಯುವಂತಾಗಿದೆ, ವಾಪಸ್ ಬಂದರೆ ಎಂಬ ಯೋಚನೇನೂ ಇಲ್ಲ ! ಮುಖಪರಿಚಯ ಇಲ್ಲದ್ದರಿಂದ ಏನೇ ಕಾಮೆಂಟಿಸಿದರೂ ಯೋಚನೆಯಿಲ್ಲ ಎಂಬ ಹುಚ್ಚು ಧೈರ್ಯ ಪುನಃ ಬರೆಯುವಂತೆ ಮಾಡಿದೆ ಅಷ್ಟೆ" . ಅವರು ಹೇಳುವುದೂ ಸರಿಯೇ ಆದರೂ , ಒಮ್ಮೆಲೇ ಒಪ್ಪಿಕೊಳ್ಳಲು ’ಈಗೋ’ ಅಡ್ಡಿಯಾಗುತ್ತದೆ !! ಹಾಗಾಗಿ, ’ಆ ಥರಾ ಏನಿಲ್ಲ, ಈ ಬರೆಯೋ ಹವ್ಯಾಸ ಒಂಥರಾ ಬೂದಿಮುಚ್ಚಿದ ಕೆಂಡದ ಹಾಗೇ , ಒಳಗೇ ಉರಿಯುತ್ತಿದ್ದು, ಈಗ ಮತ್ತೆ ಪ್ರಜ್ವಲಿಸಿದೆ !’ ಎಂದೆಲ್ಲ ದೊಡ್ಡ ದೊಡ್ಡ ಮಾತಾಡುತ್ತೇನೆ. ಆದರೂ ಒಳಗುಟ್ಟು ನನಗೇ ಗೊತ್ತು .
ಒಂದೆರಡು ಬ್ಲಾಗ್ ಬರೆದಾಗ, ಓದಿದವರು , " ಚೆನ್ನಾಗಿ ಬರ್ದಿದೀರಾ (!) ’ ಅಂತ ಕಾಮೆಂಟಿಸಿದಾಗ, ಸ್ವಲ್ಪ ಮಟ್ಟಿಗೆ ಉಬ್ಬಿದ್ದಂತೂ ನಿಜ. ಬರೆದು ರಾಶಿ ಹಾಕಿಬಿಡಬೇಕೆಂದು ನಿರ್ಧಾರವನ್ನೂ ಒಳಗೊಳಗೇ ಮಾಡಿದ ಕಾರಣ ನಿಮಗೆಲ್ಲ ಇಷ್ಟು ಬೇಗ ನನ್ನಿಂದ ಬಿಡುಗಡೆಯಾಗುವಂತಿಲ್ಲ. ಹಾಗಾಗಿ , ಬರುತ್ತಿರಿ , ಓದುತ್ತಿರಿ . ಸ್ವಲ್ಪ ಪ್ರೋತ್ಸಾಹವನ್ನೂ ಕೊಡುತ್ತಿರಿ .

5 comments:

ವಿಕಾಸ್ ಹೆಗಡೆ/Vikas Hegde said...

namaste,

Even I too had the same feeling at the beginning. eeglu kooda enu noDidrU adara bagge baredu blogalli hakabahudalva annisutte.

anyhow. enjoyed ur blog.. keep writing..

-Vikas

chitra said...

ಧನ್ಯವಾದಗಳು ವಿಕಾಸ್,

ಬರ್ತಾ ಇರಿ.

Anonymous said...

HAI, Thumha channagi barith ediri muduvarisi good luckfoom
srikanth

Gururaj Ellur said...

Namaskara,
Nanu kaleda mooru thingalinda japan nalli iddini, mathe ninne namma bengalurinalli sarani bomb blast agiro visya gothaithu, hingagi online kannadaprabha dalli ee bomb blast bagge odona antha idde...ade samayadalli ee nimma ondu blog sikthu nodi...

odutha odutha ondu kade inda ella odi mugiside...
ellanu thumba chennagive...nanage nanna balyada nenapugalu bandvu...

Danyavadagalu

-Gururaj E

chitra said...

ಶ್ರೀಕಾಂತ್,

ಪ್ರೋತ್ಸಾಹಕ್ಕೆ ಧನ್ಯವಾದಗಳು. ಬರ್ತಾ ಇರಿ


ಗುರುರಾಜ್,

ಧನ್ಯವಾದಗಳು.ಬಾಲ್ಯದ ನೆನಪುಗಳನ್ನು ಹಂಚಿಕೊಂಡಷ್ಟೂ ಹೆಚ್ಚು ಸಿಹಿ ಎನಿಸುತ್ತದೆ ಅಲ್ಲವೆ?
ಬರ್ತಾ ಇರಿ
"doumo arigaato gosaimashita"