April 26, 2008

ಮಾವಿನ ಹಣ್ಣು

ಬೇಸಿಗೆ ಶುರು ಆಯ್ತು , ಮಾರ್ಕೆಟ್ ನಲ್ಲಿ ಮಾವಿನಹಣ್ಣುಗಳು ಬರ್ತಾ ಇವೆ.ರಸ್ತೆ ಬದಿಯಲ್ಲಿ, ಗಾಡಿಗಳಲ್ಲಿ, ಅಂಗಡಿಗಳಲ್ಲಿ ಮಾವಿನ ಹಣ್ಣು ಕಾಣಿಸ್ತಿವೆ. ಇಲ್ಲಂತೂ , ರತ್ನಗಿರಿ , ದೇವಗಿರಿ ಆಲ್ಫೊನ್ಸೊ ಗಳು ಸಿಗೋಕೆ ಶುರುವಾಗಿದೆ. ಈಗೇನು , ನವೆಂಬರ್-ಡಿಸೆಂಬರ್ ತಿಂಗಳಿನಲ್ಲೂ ಮಾವಿನ ಹಣ್ಣುಗಳು ಸಿಕ್ಕುತ್ತವೆ. ಬೆಲೆ ಮಾತ್ರ ಕೇಳಬಾರದು ಅಷ್ಟೆ ! ಸೀಸನ್ ಬರೋವರೆಗೂ ಕಾಯಲಾರದವರು ತೊಗೋತಾರೆ . ಈ ಸಲ ನವೆಂಬರ್ ಕೊನೆಯಲ್ಲಿ ಮಾರ್ಕೆಟ್ ಗೆ ಬಂದ ಹಣ್ಣಿನ ಬೆಲೆ ಪರಿಚಯದವರೊಬ್ಬರು ಹೇಳಿದ ಪ್ರಕಾರ ಕಿಲೋಗೆ ಹತ್ತಿರ ಹತ್ತಿರ ಎರಡು ಸಾವಿರ ರೂ. ಮಾತ್ರ !!! ಇದನ್ನು ಕೇಳಿ ಎಷ್ಟೋ ಜನರಿಗೆ ’ ಮಾವಿನ ಹಣ್ಣು ’ ಎಂದರೆ ಬೆಚ್ಚಿ ಬೀಳುವಂತಾಗಿದೆಯಂತೆ ! ಹಾಗೆಂದು ಹಣ್ಣಿನ ರುಚಿಯಂತೂ ಇಷ್ಟು ಬೆಲೆ ಬಾಳುತ್ತದೋ ಇಲ್ಲವೋ ಗೊತ್ತಿಲ್ಲ ! ಈ ಬಗ್ಗೆ ನಮ್ಮ ಮನೆಯಲ್ಲೂ ಚರ್ಚೆ ನಡೆಯಿತು . ಕಿಲೋದಲ್ಲಿನ ೩-೪ ಹಣ್ಣುಗಳಲ್ಲಿ, ಅಪ್ಪಿತಪ್ಪಿ ಒಂದು ಹಣ್ಣೇನಾದ್ರೂ ಹಾಳಾದರೆ ಏನು ಗತಿ? ಅದನ್ನು ಎಸೆಯಲೂ ಮನಸ್ಸು ಬರಲಿಕ್ಕಿಲ್ಲ ! ’ ಹೋಗಲಿ ಬಿಡೇ, ಸಣ್ಣ ಹುಳ ತಾನೆ ? ಅದಷ್ಟನ್ನೇ ಕೆತ್ತಿ ಬದಿಗಿಡು ಉಳಿದಿದ್ದನ್ನು ತಿಂದರಾಯ್ತು ’ ಎನ್ನುವ ಪರಿಸ್ಥಿತಿ. ಅಂಗಡಿಗೆ ಹೋದರೂ ಹಣ್ಣನ್ನು ಎದುರಿಗೆ ಇಟ್ಟುಕೊಂಡು ನೋಡುತ್ತಾ, ಹಗುರವಾಗಿ ಸ್ಪರ್ಶಿಸಿ, ಮೆಲ್ಲಗೆ ಅದರ ಪರಿಮಳವನ್ನು ಮೂಗಲ್ಲಿ ತುಂಬಿಸಿಕೊಳ್ಳುತ್ತಾ ಪಕ್ಕಕ್ಕಿಟ್ಟು ಧನ್ಯರಾಗಬೇಕಷ್ಟೆ !

ಈಸಲ ಅಕಾಲದ ಮಳೆಯಿಂದ ಮಾವಿನ ಹಣ್ಣಿಗೆ ಹಾನಿಯಾಗಿ ಹಣ್ಣಿನ ಬೆಲೆ ಏರಬಹುದೆಂಬ ಸುದ್ದಿ ಕೇಳಿ ಕೇವಲ ನೋಡಿಯೇ ತೃಪ್ತಿ ಪಡಬೇಕೇನೋ ಎಂದು ಅನಿಸುತ್ತಿದೆ.

ಕಳೆದ ಮೇ ತಿಂಗಳಲ್ಲಿ ಅಮೆರಿಕಾದಲ್ಲಿರುವ ತಮ್ಮನ ಮನೆಗೆ ನಾನೂ , ಸಿರಿಯೂ ಹೋಗಿದ್ದೆವು. ಆಫೀಸಲ್ಲಿ ಅವನ ಸ್ನೇಹಿತರು ‍ಯಾರೋ ’ಮಾವಿನ ಹಣ್ಣು ಬಂದಿದೆ” ಎಂದು ಸುದ್ದಿ ಕೊಟ್ಟಿದ್ದೇ, ಅಂದು ಸಂಜೆ ,ನಮ್ಮ ಸವಾರಿ ಸಮೀಪದ ’ ಕಾಸ್ಟ್ಕೋ ’ ಗೆ ಹೋಯ್ತು. ಅಲ್ಲಿ ಬಾಕ್ಸ್ ನಲ್ಲಿ ಜೋಡಿಸಿಟ್ಟ ಬಂಗಾರದ ಬಣ್ಣದ ಹಣ್ಣುಗಳನ್ನು ನೋಡಿ ಅದರ ಪರಿಮಳಕ್ಕೆ ಮನಸೋತು ಎರಡು ಬಾಕ್ಸ್ ಮನೆಗೆ ತಂದಿದ್ದಾಯ್ತು ! ರಾತ್ರಿ ಊಟವಾದ ಮೇಲೆ ಮಾವ -ಸೊಸೆ ಇಬ್ಬರೂ ಬಾಯಲ್ಲಿ ನೀರಿಳಿಸಿಕೊಂಡು ಹಣ್ಣನ್ನು ಬಾಯಲ್ಲಿಟ್ಟರು . ಅಷ್ಟೇ, ’ ಥೂ , ಒಂಚೂರೂ ಚೊಲೋ ಇಲ್ಲೆ ಅಮ್ಮಾ ಈ ಹಣ್ಣು, ನೋಡಲೆ ಮಾತ್ರ ಚಂದ ! ’ಸಿರಿ ಹಣ್ಣನ್ನು ಬದಿಗಿಟ್ಟಳು . ಆನಂದನೋ ’ ಹೂಂ , ಅತ್ಲಾಗೆ ಹುಳೀನೂ ಇಲ್ಲೆ, ಸಿಹಿ ಅಂತೂ ಒಂಚೂರೂ ಇಲ್ಲೆ ! ಬಿಸ್ಲಿಗಿಟ್ಟು ಹಣ್ಣು ಮಾಡಿದ್ದ ಕಾಣ್ತು .ಬರೀ ಸಪ್ಪೆ ’ ಎನ್ನ್ನುತ್ತಲೇ ತಿನ್ನುವುದನ್ನು ಮುಂದುವರೆಸಿದ. . ಅವನಿಗೆ ಮಾವಿನ ಹಣ್ಣೆಂದರೆ ಮಹಾ ಪ್ರೀತಿ !
ಪಾಪ ,ಮೊದಲೆ ಮಾವಿನ ಹಣ್ಣೂ ಅಪರೂಪ , ಈಗ ಅಷ್ಟು ದುಡ್ಡುಕೊಟ್ಟೂ ಆಸೆಯಿಂದ ತಂದಿದ್ದನ್ನು ತಿನ್ನಲೂ ಆಗದ , ಬಿಡಲೂ ಆಗದ ಪರಿಸ್ಥಿತಿ . ಅವನ ಕಷ್ಟ ನೋಡಲಾಗದೇ ಸೌದಾಮಿನಿ ’ ಎಂತಕೆ ಅಷ್ಟು ಕಷ್ಟಪಟ್ಟು ತಿಂತೆ ? ಬಿಡು ಸಾಕು. ಬೇರೆ ಹಣ್ಣು ತಗ . ಚೆನಾಗಿದ್ದ ನೋಡು ’ ಎಂದು ಸಮಾಧಾನಿಸಲು ಪ್ರಯತ್ನಿಸಿದಳು.
ಮೇಲಿಂದ ಸಿರಿಯ ಒಗ್ಗರಣೆ ಬೇರೆ ’ ನಂದೂ ಮಾಮಾ , ಇದೆಂಥಾ ಅಮೇರಿಕಾನ ಮಾರಾಯಾ? ಒಂದು ಮಾವಿನ ಹಣ್ಣೂ ಚೊಲೋ ಸಿಕ್ತಿಲ್ಯಪ ! ’ ( ಅವಳಿಗೆ ಆ ಮಾವಿನ ಹಣ್ಣು ತಂದ ನಿರಾಶೆಯಲ್ಲಿ , ಅಷ್ಟು ದಿನ ಚಪ್ಪರಿಸಿ ತಿಂದ , ಚೆರ್ರಿ , ಸ್ಟ್ರಾಬೆರಿ ಗಳು ಮರೆತೇ ಹೋಗಿದ್ದವು !! )

ಆ ಸಂದರ್ಭದಲ್ಲಿ ನನಗೂ ,ಆನಂದನಿಗೂ ನೆನಪಾಗಿದ್ದು ಅಜ್ಜನಮನೆಯ ಜಡ್ಡೀ ತೋಟದ ದೊಡ್ಡ ಮಾವಿನ ಮರ , ಗೊಬ್ಬರಗುಂಡಿ ಪಕ್ಕದ ಕರೀ ಈಸಾಡಿ ಹಣ್ಣು , ಹಿತ್ತಲ ತುದಿಗಿದ್ದ ಗಿಣಿಮೂತಿ ಮಾವಿನ ಹಣ್ಣು ! ಬೇಸಿಗೆ ರಜೆಯಿಡೀ ನಾವು ಮಾವಿನ ಮರದಡಿಯಲ್ಲೇ ಮನೆ ಮಾಡಿದ ಲೆಕ್ಕ .ಜೋರಾಗಿ ಗಾಳಿ ಬಂದಕೂಡಲೇ ಉದುರುವ ಹಣ್ಣುಗಳನ್ನು ಆರಿಸಲು ಓಡುವುದು. ಬಿದ್ದ್ದ ಹಣ್ಣನ್ನು ತೊಳೆದು ತಿನ್ನುವಂಥಾ ಪಾಪದ ಕೆಲಸ ಎಂದೂ ಮಾಡಲಿಲ್ಲ ! ಏನಿದ್ದರೂ ಹಾಕಿಕೊಂಡ ಬಟ್ಟೆಗೆ ಒರೆಸಿದರೆ ಚೊಕ್ಕವಾಗಲೇ ಬೇಕು ಎಂಬುದು ನಮ್ಮ ಲೆಕ್ಕ.ಬೆಳಿಗ್ಗೆ ಮುಖ ತೊಳೆದ ಕೂಡಲೇ ಓಡುವುದು ಮಾವಿನ ಮರದ ಬುಡಕ್ಕೆ. ರಾತ್ರಿಯಿಡೀ ಉದುರಿದ ಹಣ್ಣುಗಳನ್ನು ಹೆಕ್ಕಲು. ಒಂದು ಸಲವಂತೂ , ನಮಗೆ ಏಳಲು ತಡವಾಗಿ, ನಾವು ಹೋಗುವಷ್ಟರಲ್ಲಿ , ಮಂಜಣ್ಣನ ಮನೆ ರತ್ನಾ ಹಣ್ಣು ಆರಿಸಿಕೊಂಡು ವಾಪಸ್ಸಾಗುತ್ತಿದ್ದಳು. ತಡವಾಗಿ ಹೋಗಿದ್ದು ನಾವಾದರೂ , ನಮ್ಮ ಮನೆ ಹಣ್ಣನ್ನು ಅವಳು ಆರಿಸಿಕೊಂಡ ಸಿಟ್ಟಿನಲ್ಲಿ, ಅವಳಿಗೆ ಕಾಲು ಕೊಟ್ಟು ಗದ್ದೆಯಲ್ಲಿ ಬೀಳಿಸಿ ಅವಳ ಮಡಿಲಿಂದ ಬಿದ್ದ ಹಣ್ಣುಗಳನ್ನು ಆರಿಸಿಕೊಂಡು , ನಾಲಿಗೆ ಚಾಚಿ ಅಣಕಿಸಿದ್ದು ಇತ್ಯಾದಿ ನಾನೂ , ಆನಂದನೂ ನೆನಪಿಸಿಕೊಂಡರೆ, , ಈ ಪ್ರಸಂಗ ಕೇಳಿದ ಸೌದಾಮಿನಿಯೂ , ಸಿರಿಯೂ ನಗಲು ಶುರುಮಾಡಿದರು.

’ ಛೀ, ನಿಂಗ ಹಾಂಗೆಲ್ಲ ಮಾಡ್ತಿದ್ರಾ? ಪಾಪ ಅವಳಿಗೆ ಹೆಕ್ಕಿದ್ದ ಮಾವಿನ ಹಣ್ಣೂ ಇಲ್ಲೆ ,ಮ್ಯಾಲಿಂದ ನಿಂಗ ಬೀಳಿಸಿ ಪೆಟ್ಟು ಮಾಡಿದ್ದು ಬೇರೆ ! ಹೀಂಗೆಲ್ಲ ಮಾಡದು ಅನ್ಯಾಯ ! ’ ಸೌದಾಮಿನಿಯ ಅನುಕಂಪ ಅವಳು ನೋಡಿರದ ರತ್ನಾಳಿಗೆ !

’ಏ ನಂದೂ ಮಾಮಾ, ಇನ್ನೂ ಎಂತದಾದ್ರೂ ಇಂಥದೇ ಮಜಾ ಕಥೆ ಹೇಳಾ’ .... ರಾಗ ಸಿರಿಯದು.
’ ಇದೆಲ್ಲಾ ಕತೆ ಅಲ್ದೇ ಮಾರಾಯ್ತೀ ,ನಿಜಕ್ಕೂ ನಂಗ ಮಾಡಿದ್ದು ! ’
ಅವಳ ಒತ್ತಾಯ ಹೆಚ್ಚಾದಂತೆ , ನಾನು ಅಜ್ಜಂದೂ , ಆನಂದನದೂ ತಕರಾರಿನ ಪ್ರಸಂಗವನ್ನು ಹೇಳ ಬೇಕಾಯ್ತು. ನನ್ನ ಅಜ್ಜನಿಗೂ ಮಾವಿನ ಹಣ್ಣೆಂದರೆ ಜೀವವಾಗಿತ್ತು. ಈ ಮೊಮ್ಮಗನ ಕಾಲದಿಂದ ಹಣ್ಣು ತಿನ್ನಲೂ ಸಿಕ್ಕುತ್ತಿರಲಿಲ್ಲ. ಹೀಗಾಗಿ , ಅಂತೂ ಒಮ್ಮೆ ಉಪಾಯ ಮಾಡಿ ಒಂದು ಬುಟ್ಟಿ ಮಾವಿನ ಹಣ್ಣನ್ನು ನಾಗಂದಿಗೆ ಮೇಲೆ ಅಡಗಿಸಿಟ್ಟರು.
ಇವನೋ ಇನ್ನೂ ಹುಶಾರಿ ! ಹೇಗೋ ವಾಸನೆ ಸಿಕ್ಕಿ, ನಾಗಂದಿಗೆ ಹತ್ತಿ ಅಲ್ಲೇ ಕುಳಿತು , ಹಣ್ಣೆಲ್ಲಾ ತಿಂದು, ಗೊರಟೆಗಳನ್ನು ಅದೇ ಬುಟ್ಟಿಯಲ್ಲಿಟ್ಟು ಕೆಳಗಿಳಿದಿದ್ದ ಆಸಾಮಿ ! ಅಷ್ಟಲ್ಲದೇ , ಹಣ್ಣು ಸಿಕ್ಕದ ಸಂಕಟದಿಂದ ಸಿಟ್ಟು ನೆತ್ತಿಗೇರಿದ ಅಜ್ಜನ ಜೊತೆ ತಕರಾರು ಬೇರೆ, ’ ಸಣ್ಣ ಹುಡುಗ್ರಿಗೆ ಕೊಡದೇ ,ನೀ ಒಬ್ಬನೇ ತಿನ್ನವು ಹೇಳಿ ಮ್ಯಾಲೆ ತೆಗೆದಿಡದು ಅನ್ಯಾಯ ಅಲ್ದಾ ಅಜ್ಜ? ಎಂಬ ಗಲಾಟೆ !!

ಇದೆಲ್ಲಾ ಹೇಳುವಾಗ ಬಿದ್ದೂ ಬಿದ್ದೂ ನಕ್ಕಿದ್ದೇ ! ’ ನೋಡ್ದ್ಯನೇ , ಸಣ್ಣಕಿದ್ದಾಗ್ಲೇ ಎಷ್ಟು ತಿಳುವಳಿಕೆ , ಅನ್ಯಾಯ ಆದಾಗ ಅದರ ವಿರುದ್ಧ ಮಾತಾಡ ತಾಕತ್ತು ಇತ್ತು ನಂಗೆ ಅಂತ ! ’ ಆನಂದ ತನ್ನ ಬೆನ್ನನ್ನೇ ತಟ್ಟಿಕೊಂಡರೆ,


" ಓ , ಎಂಥ ತಿಳುವಳಿಕೇನಾ ,ಮಣ್ಣು ! ದೊಡ್ಡವಕೂ ಮೋಸ ಮಾಡ ಬುದ್ದಿ ಆಗಲೇ ಇದ್ದಿತ್ತು ಹೇಳು ’ ಎಂದು ಅವನ ಧರ್ಮಪತ್ನಿಯ ಉವಾಚ!


ಒಟ್ಟಿನಲ್ಲಿ ಮಾವಿನ ಹಣ್ಣಿನ ಪ್ರಸಂಗ ಬಾಲ್ಯದ ನೆನಪುಗಳನ್ನು ತಾಜಾಗೊಳಿಸಿತ್ತು !
ನೋಡಿ, ಮಾರ್ಕೆಟ್ ನ ಲ್ಲಿ ಮಾವಿನ ಹಣ್ಣು ಬಂದ ಸುದ್ದಿ ಹೇಳೋಕೆ ಹೋಗಿ ಎಷ್ಟುದ್ದ ಬರೆದೆ ( ತಲೆ ಎಷ್ಟು ಕೊರೆದೆ ?) ಅಂತಾ. ಒಟ್ಟಿನಲ್ಲಿ, ಮಾವಿನ ಹಣ್ಣು ಎಲ್ಲಾ ದೃಷ್ಟಿಯಿಂದಾನೂ ದುಬಾರಿನೇ ಅಂತಾಯ್ತು !


6 comments:

sunaath said...

ತುಂಬ ಆಪ್ತವಾದ ಬರವಣಿಗೆ. ನಮ್ಮ ಎದುರಿನಲ್ಲೇ ನಡೆಯುತ್ತಿದೆಯೇನೋ ಎಂದು ಭಾಸವಾಗುತ್ತಿತ್ತು. ಅಲ್ಲದೆ,ಲಘು ವಿನೋದ ಬೇರೆ.ಸ್ವಾರಸ್ಯಪೂರ್ಣ ಲೇಖನ.

chitra said...

ಧನ್ಯವಾದಗಳು ಸುನಾಥ್ ಅವರೇ ,

ಬರುತ್ತಿರಿ .

-ಆನಂದ ಮತ್ತು ಸೌದಾಮಿನಿ said...

ಹೋಯ್, ಮಾವಿನ ಹಣ್ಣಿನ ಬಗ್ಗೆ ಓದಿ ಬಾಯಲ್ಲಿ ನೀರುರೂರಲೆ ಹಿಡದ್ದು. ಇಲ್ಲಿ ಮಾವಿನ ಹಣ್ಣು ಬೇರೆ ಬತ್ತಾ ಇಲ್ಲೆ, ನೀ ಬೇರೆ ಬರ್ದು ಕೂತಿದ್ದೆ, ಯಂಗಳ ಅವಸ್ಥೆ ದೇವ್ರಿಗೇ ಪ್ರೀತಿ! ಈಗ ನೀನೇ ಮಾವಿನ ಹಣ್ಣು ಕಳಸಕಾಕ್ತು ನೋಡು!

ಬರದ್ದು ಚೆನ್ನಾಗಾಯ್ದು. ಜೊತಿಗೆ ಹಣ್ಣೂ ಬಂದಿದಿದ್ರೆ ಇನ್ನೂ ಚೆನ್ನಾಗಿತ್ತು!

chitra said...

ಹೋಯ್!

ನಿಂಗಕ್ಕೆ ಮಾವಿನ ಹಣ್ಣಂತೂ ಸಿಕ್ಕದಿಲ್ಲೆ. ನೆನಪಾದ್ರೂ ಮಾಡಿ ಕೊಡನ ಹೇಳಿ ಬರದ್ದಿ.ನಾ ಅಂತೂ ಮಾವಿನ ಹಣ್ಣಿನ ೨-೩ ಬುಟ್ಟಿನೇ ಕಳಿಸಿ ಬಿಡ್ತಿದ್ದಿ , ಎಂತ ಮಾಡಕೂ ನಿಮ್ಮೂರಲ್ಲಿ ಅದಕ್ಕೆ ಎಂಟ್ರೀ ನೇ ಕೊಡದಿಲ್ಲೆ ಹೇಳ್ತ ! ನಂದೇನೂ ತಪ್ಪಿಲ್ಲೆ ನೋಡಿ. ಗೊರಟೆನೇ ತಗಂಡು ಹೋಗಿ ಗಿಡ ಮಾಡ್ಕ್ಯಳಿ ಅಂದ್ರೆ ಅದನ್ನೂ ಬಿಡದಿಲ್ಲೆ ಹೇಳಾತು ನಾ ಎಂತ ಮಾಡಲಿ? ಹೋಗ್ಲಿ ತಗ , ಬ್ಲಾಗಲ್ಲಿ ಹಣ್ಣಿನ ರಾಶಿ ಫೋಟೋನೇ ಹಾಕಿದ್ದಿ ನೋಡಿ ಖುಶಿ ಪಟ್ಗಳಿ !

ತೇಜಸ್ವಿನಿ ಹೆಗಡೆ said...

ಚಿತ್ರಾ,

ತುಂಬಾ ಆಪ್ತವೆನಿಸುವ ಬರಹ... ಸರಾಗವಾಗಿ ಬಿಡದೆ ಓದಿಸಿಕೊಂಡಿತು. ದೇವ್ರ ದಯೆ ನಂಗೆ ಮಾವಿನ ಹಣ್ಣಿನ ಹುಚ್ಚಿಲ್ಲೆ.. ಹಲಸ್ನ ಹಣ್ಣು ಅಂದ್ರೆ ಮಾತ್ರ ಇಷ್ಟ. ಅದಕ್ಕೊಂದು ಕ್ಷಾಮ ಬರ್ದೇ ಹೋದ್ರೆ ಆತು..;-)

chitra said...

ತೇಜಸ್ವಿನಿ,
ಮೆಚ್ಚುಗೆಗೆ ಧನ್ಯವಾದಗಳು .

ಈಗಿತ್ಲಾಗೆ ,ಕಾಡು,ಬೇಣ ಎಲ್ಲ ಖಾಲಿಯಾಗ ಸ್ಪೀಡ್ ನೋಡಿದ್ರೆ
ಹಲಸಿನ ಹಣ್ಣಿಗೂ ಹೆಚ್ಚು ದಿನ ಇದ್ದಾಂಗೆ ಕಾಣ್ತಿಲ್ಲೆ. ಹಾಂಗಾಗಿ. ಅಷ್ಟರೊಳಗೇ ಆದಷ್ಟು ತಿಂದು ಪೂರೈಸದು ಒಳ್ಳೇದೇನ !
ಆದರೂ ಆ ಪರಿಸ್ಥಿತಿ ಬರದೆ ಇರಲಿ ಹೇಳಿ ಹೇಳ್ಕ್ಯಳನ !
ಬರ್ತಾ ಇರಿ.