May 14, 2008

ಮದುವೆಯ ಈ ಬಂಧ....

ನಮ್ಮ ಬಿಲ್ಡಿಂಗಿನಲ್ಲಿ ಇತ್ತೀಚೆ ಒಂದು ಮದುವೆ ಆಯ್ತು. ಅಪ್ಪಟ ಸಿನಿಮಾ ಶೈಲಿಯಲ್ಲಿ.

ಪಕ್ಕದ ಮನೆಯ ಹುಡುಗ, ಅವರಪ್ಪ ಇಬ್ಬರೂ ಗುರುವಾರ ರಾತ್ರಿ ಬಂದು ಶನಿವಾರ ಮದುವೆ ಎಂದು ಕರೆದಾಗ ನಮಗೆ ಆಶ್ಚರ್ಯ ! ವಾರದ ಹಿಂದಷ್ಟೇ ಅವರಮ್ಮನಲ್ಲಿ ಕೇಳಿದ್ದೆ , ಮಗನಿಗೆ ಮದ್ವೆ ಮಾಡಲ್ಲವೇನ್ರೀ ಎಂದು.
ಅಯ್ಯೋ , ಇನ್ನೂ ಚಿಕ್ಕವನು ಬಿಡಮ್ಮಾ, ಎರಡು ವರ್ಷ ಹೋಗಲಿ ಅಂದಿದ್ದರು ! ವಾರದಲ್ಲೇ ಹುಡುಗನಿಗೆ ವಯಸ್ಸಾಗಿ ಬಿಟ್ಟಿತೆ ಎಂದು ಆಶ್ಚರ್ಯ ನನಗೆ.

ಹುಡುಗ -ಹುಡುಗಿ ಕಾಲೇಜ್ ದಿನಗಳಿಂದ ಪ್ರೀತಿಸುತ್ತಿದ್ದಾರೆ, ಒಳ್ಳೆ ಕೆಲಸ ಸಿಕ್ಕಿ ಸೆಟಲ್ ಆದ ಮೇಲೆ ಮದುವೆಯಾಗುವ ನಿರ್ಧಾರ ಮಾಡಿದ್ದಾರೆ. ಈಗ ಹುಡುಗನಿಗೆ ಒಳ್ಳೆಯ ಕೆಲಸ ಸಿಕ್ಕಿ ಸ್ವಂತದ ಮನೆಯೂ ಆದ ಮೇಲೆ , ಹುಡುಗಿ ಮನೆಯಲ್ಲಿ ಹೇಳಿ, ಗಲಾಟೆ ಆಗಿ, ಅವಳ ತಂದೆ-ತಾಯಿ ಬೇರೆ ಹುಡುಗನೊಡನೆ ಮಾತುಕತೆ ನಡೆಸುತ್ತಿದ್ದಾಗ, ಇವಳು ಒಪ್ಪಿದ ನಾಟಕ ಆಡಿ , ಕಂಪನಿಯಿಂದ ಟ್ರೈನಿಂಗ್ ಇದೆ ಎಂದು ಸುಳ್ಳು ಹೇಳಿ ಮುಂಬಯಿಯಿಂದ ಪುಣೆಗೆ ಓಡಿ ಬಂದಿದ್ದಾಳೆ. ಹೀಗಾಗಿ ದಿಢೀರ್ ಮದುವೆ ಫಿಕ್ಸ್ ಮಾಡಬೇಕಾಯ್ತು ಎಂದು ಹುಡುಗನ ಅಪ್ಪ ವಿವರಿಸಿದರು .

ಅವರು ಮದುವೆಗೆ ಕರೆದು ಹೋದಮೇಲೆ , ನನ್ನ ಮಗಳು ಫುಲ್ ಎಕ್ಸೈಟ್ !
’ಅಮ್ಮ್ಮಾ , ಈ ಮದುವೆಗೆ ಮಾತ್ರ ನಾನು ಹೋಗಲೇ ಬೇಕು.ಫಸ್ಟ್ ಟೈಂ ಈ ಥರಾ ಮದುವೆನಾ ರಿಯಲ್ಲಾಗಿ ನೋಡೋ ಛಾನ್ಸ್ ಸಿಕ್ಕಿದೆ ಅಮ್ಮಾ..."
’ ಈ ಥರಾ ಮದುವೆ ಅಂದ್ರೆ ? "
" ಅಂದ್ರೆ , ಹೀಗೆ ಹುಡುಗ -ಹುಡುಗಿ ಓಡಿಹೋಗಿ ಮಾಡ್ಕೊಳೋ ಮದುವೆ ಅಮ್ಮಾ, ಇಲ್ಲೀವರೆಗೂ ಬರೀ ಸಿನಿಮಾದಲ್ಲೇ ನೋಡಿದ್ದು...."
" ಅಂದ್ರೇನೇ ? ನೀನೇನು , ಹುಡುಗ ಹುಡುಗಿ ಇಬ್ರೂ ಮದುವೆ ಮಂಟಪಕ್ಕೆ ಓಡ್ಕೊಂಡು ಬರ್ತಾರೆ , ಅವರ ಹಿಂದೆ ಹುಡುಗಿ ಅಪ್ಪ-ಅಮ್ಮ ಕೆಲವು ರೌಡಿಗಳು ಬರ್ತಾರೆ ಅಂದ್ಕೊಂಡ್ಯೇನೆ?" ಕೆಣಕಿದ ಅವಳಪ್ಪನ ಕಡೆಗೆ ತಿರುಗಿ,
’ ಅಪ್ಪಾssss " ಎಂದು ರಾಗ ಎಳೆದು ಮೂತಿ ಉಬ್ಬಿಸಿದಳು !

’ ಅಲ್ಲಾ ಪುಟ್ಟೀ , ನಿನ್ನ ಉತ್ಸಾಹ ನೋಡಿದ್ರೆ, ನಾಳೆ ಕ್ಲಾಸಲ್ಲಿ ಇದೇ ವಿಷಯ ಚರ್ಚೆನಾ ಹೇಗೆ? ’

’ ಅಯ್ಯೋ ಇಲ್ಲಮ್ಮಾ , ಆಮೇಲೆ ಯಾರಾದರೂ ಕೇಳಿಸ್ಕೊಂಡು ಹುಡುಗಿ ಮನೇವ್ರಿಗೆ ಹೇಳಿ ಬಿಟ್ರೆ, ಸುಮ್ಮನೇ ಗಲಾಟೆ ! ’ ಸೀರಿಯಸ್ ಆಗಿ ನುಡಿದ ರೀತಿಗೆ ನಮಗೋ ನಗು !

ಬಿಲ್ಡಿಂಗ್ ನವರೇ ಹೆಚ್ಚಾಗಿದ್ದ ಮದುವೆ ಮನೆಯಲ್ಲಿ ಜನ ೯೦ಕ್ಕೂ ಹೆಚ್ಚಿರಲಿಲ್ಲವೇನೋ । ಸರಳವಾಗಿ ಆದರೆ ಶಾಸ್ತ್ರೋಕ್ತವಾಗಿ ನಡೆದ ಮದುವೆಯಲ್ಲಿ , ನಮ್ಮ ಬಿಲ್ಡಿಂಗ್ ನವರೇ ಆದ ಹುಡುಗನ ಸಹೋದ್ಯೋಗಿಯೊಬ್ಬರು ಕನ್ಯಾದಾನ ಮಾಡಿದರು.

ಸಂಜೆ , ಮದುಮಕ್ಕಳನ್ನು ಗೇಟ್ ನಿಂದ ಫ್ಲಾಟ್ ವರೆಗೂ ರಂಗೋಲಿ ಹಾಕಿ ಹೂ ಚೆಲ್ಲಿ, ಪಟಾಕಿ ಹಚ್ಚಿ ಸ್ವಾಗತಿಸಿದಾಗ ಹುಡುಗಿಯ ಕಣ್ಣಲ್ಲಿ ನೀರು. ನಮಗೆಲ್ಲ ನಮ್ಮದೇ ಮನೆಯಲ್ಲಿ ಮದುವೆ ನಡೆಯುತ್ತಿದೆಯೇನೋ ಎಂಬ ಸಂಭ್ರಮ . ಮನೆ ತುಂಬಿಸಿ ಕೊಳ್ಳುವಾಗ ಕೆಳಗಿನ ಫ್ಲಾಟ್ ನ ಅನಘಾ, ಸೋದರಿಯ ಪಾತ್ರ ವಹಿಸಿ, ಬಾಗಿಲು ತಡೆದು ಸುಂಕವಾಗಿ ಹುಡುಗನ ಪರ್ಸ್ ಹಾರಿಸಿ ನಕ್ಕಳು ! ಅಂತೂ ಸಂಭ್ರಮ ಮುಂದಿನ ೨-೩ ದಿನಗಳು ಮುಂದುವರೆದಿತ್ತು.

ಇತ್ತೀಚೆ ಹೀಗೆ ಅವಸರದಿಂದ ಮದುವೆಯಾಗಿ ಅಷ್ಟೇ ಅವಸರದಿಂದ ಡೈವೋರ್ಸ್ ತೆಗೆದುಕೊಳ್ಳುವವರ ಸಂಖ್ಯೆ ಹೆಚ್ಚುತ್ತಲೇ ಇದೆ .ಹಾಗಾಗಿ ದಿಢೀರ್ ಎಂದು ನಡೆದ ಈ ಮದುವೆ ದೀರ್ಘ ಕಾಲ ಬಾಳಲಿ ಎಂಬುದು ನಮ್ಮ ಹಾರೈಕೆ.

ಹಾಗೆಂದು ಈ ರೀತಿಯ ಅರ್ಜೆಂಟ್ ಮದುವೆಗಳು ಮುಂಚೆಯೂ ನಡೆದಿವೆ.ನನಗೆ ನೆನಪಿದ್ದ ಒಂದು ಮದುವೆ ದೂರದ ಸಂಬಂಧಿ ಶ್ರೀಕಾಂತನದು ! ಸುಮಾರು ೨೦ ವರ್ಷಗಳ ಹಿಂದೆ ನೆಂಟರ ಪೈಕಿಯ ಮದುವೆಗೆ ಹೋದ ಶ್ರೀಕಾಂತ ಊಟಕ್ಕೆ ಕುಳಿತಾಗ ತುಪ್ಪ ಬಡಿಸಲು ಬಂದ ಸುಂದರಿಯನ್ನೇ ನೋಡುತ್ತ ಕುಳಿತರೆ, ಅವಳೂ ಸಹ ಗಲಿಬಿಲಿಗೊಂಡು ಏನು ಮಾಡಲೂ ತಿಳಿಯದೇ ಅವನ ಬಾಳೆಗೆ ತುಪ್ಪ ಬಡಿಸುತ್ತಲೇ ಇದ್ದಳು. ಅಕ್ಕ ಪಕ್ಕ ಕುಳಿತ ನಾವುಗಳು " ಹೋಯ್, ತುಪ್ಪ ಇಲ್ಲೇ ಖಾಲಿಯಾಗಿ ಹೋಕು! " ಎಂದು ಎಚ್ಚರಿಸುವವರೆಗೂ . ಮುಂದೆ ೧೫-೨೦ ದಿನಗಳಲ್ಲೇ ಶ್ರೀಕಾಂತನ ಮದುವೆ ಅದೇ ಹುಡುಗಿಯೊಡನೆ ಆಗಿ ಹೋಗಿತ್ತು.



ಕೊನೆ ಚುಟುಕು :
೨ ವರ್ಷಗಳ ಹಿಂದೆ ನನ್ನ ಜರ್ಮನ್ ಗೆಳತಿಯ ಮದುವೆಯ ಸಂದರ್ಭದಲ್ಲಿ ಅವಳಿಗೆ ಶುಭಾಶಯ ಕೋರಿ ಮೇಲಿಸಿದಾಗ , ಅವಳು ಕೇಳಿದ್ದಳು " How long you have been married ? "
ನಾನು ’ ಹನ್ನೆರಡು ವರ್ಷ ’ ಎಂದು ಉತ್ತರಿಸಿದಾಗ ಅವಳು ಉದ್ಗರಿಸಿದ್ದು
" Oh god ! That is quite a long period !!! I don't know if I ever reach that mark ! "

ನಾನಂತೂ ಮಹೇಶ್ ಗೆ ಇದನ್ನು ಹೇಳಿ ನಕ್ಕಿದ್ದೇ ನಕ್ಕಿದ್ದು. ನನ್ನ ಹನ್ನೆರಡು ವರ್ಷದ ಮದುವೆಗೇ ಹಾರಿ ಬಿದ್ದವಳಿಗೆ ಇನ್ನೇನಾದರೂ ನಮ್ಮಲ್ಲಿಯ ಅಜ್ಜ- ಅಜ್ಜಿಯರ ೬೦-೭೦ ವರ್ಷದ ದಾಂಪತ್ಯದ ಬಗ್ಗೆ ಹೇಳಿದರೆ ಹಾರ್ಟ್ ಅಟ್ಯಾಕ್ ಆಗಿ ಬಿಡುತ್ತ್ತಿತ್ತೇನೊ!

2 comments:

ಮನಸ್ವಿ said...

ಅಕ್ಕ ತುಂಬ ಚನ್ನಾಗಿ ಬರದ್ದೆ.. ಪುಟ್ಟಿ ಬಹಳ ಜೋರಿದ್ದ ಕಾಣ್ತು ಎಷ್ಟನೇ ಕ್ಲಾಸಲ್ಲಿ ಓದ್ತಾ ಇದ್ದ??

ಚಿತ್ರಾ said...

ಧನ್ಯವಾದಗಳು !

ಪುಟ್ಟಿ ಈಗ ೮ ನೇ ಕ್ಲಾಸ್ ನಲ್ಲಿದ್ದ.ಡೈಲಾಗ್ ಹೊಡೆಯಲಂತೂ ಜೋರೇ ಇದ್ದ ಅವಳು.

ಬರ್ತಾ ಇರಿ.