June 15, 2008

ಆತಂಕ !


ಳೆದ ಒಂದು ತಿಂಗಳಿಂದ ಊರಿನಲ್ಲಿ ಮಜಾ ಮಾಡುತ್ತಿದ್ದ ಸಿರಿಯನ್ನು ಕರೆತರಲು ವಾರದ ಹಿಂದೆ ನಾವು ಊರಿಗೆ ಹೋಗಿದ್ದೆವು.

ಪುಣೆಯಿಂದ ಸಿರ್ಸಿ ಈಗ ತುಂಬಾ ಹತ್ತಿರವಾಗಿಬಿಟ್ಟಿದೆ ! ಹೈವೇ ಚೆನ್ನಾಗಿ ಆಗಿರುವುದರಿಂದ ಡ್ರೈವ್ ಮಾಡುವುದು ಕಷ್ಟವೆನಿಸುವುದೇ ಇಲ್ಲ ! ಬೆಳಿಗ್ಗೆ ೪.೩೦ - ೫ ಕ್ಕೆಲ್ಲ ಪುಣೆಯಿಂದ ಹೊರಟರೆ , ಮಧ್ಯಾಹ್ನ ಊಟಕ್ಕೆ ಸಿರ್ಸಿ ಮನೆ ತಲುಪ ಬಹುದು !
ಸಾಧಾರಣವಾಗಿ ನಮ್ಮ ಪ್ರಯಾಣ ಯಲ್ಲಾಪುರದ ಮೂಲಕ ಸಾಗುತ್ತದೆ. ಕಲಘಟಗಿ, ಕಿರುವತ್ತಿ ದಾಟುತ್ತಿದ್ದಂತೇ ಒಂಥರಾ ಹೇಳಲಾಗದ ಖುಷಿ, ಮನೆಯವರನ್ನು ನೋಡಲು ಇನ್ನು ಕೆಲವೇ ಗಂಟೆಗಳು ಎಂಬ ಉತ್ಸಾಹ , ಕಾತರ ಎಲ್ಲ ನನ್ನನ್ನು ಆವರಿಸಿ ಬಿಡುತ್ತವೆ.
ಪ್ರತಿ ಸಲವೂ ಕಾರು ಸಿರ್ಸಿ ರಸ್ತೆಗೆ ತಿರುಗಿ ಸಾಗುತ್ತಿದ್ದಂತೆ ಶುರುವಾಗುತ್ತದೆ ನನ್ನ ಭಾಷಣ ! ಕಡಿಮೆಯಾಗುತ್ತಿರುವ ಕಾಡಿನ ಬಗ್ಗೆ, ಎಷ್ಟೋ ವರ್ಷಗಳ ಹಿಂದೆಯೇ ಶುರುವಾದರೂ ಇನ್ನೂ ಪೂರ್ತಿಯಾಗದ ರಸ್ತೆ ಕೆಲಸದ ಬಗ್ಗೆ , ಆಚೀಚೆನ ಕವಲುದಾರಿಗಳು ಸೇರುವ ಊರುಗಳಲ್ಲಿನ ನೆಂಟರು, ಪರಿಚಯದವರ ಬಗ್ಗೆ .... ನನ್ನ ಮಾತು ಸಾಗುತ್ತಲೇ ಇರುತ್ತದೆ .ಅದಕ್ಕೆ ಬ್ರೇಕ್ ಬೀಳುವುದು ಯಾವುದೋ ಹೂವಿನ ಸುವಾಸನೆ , ಜೇನಿನ ಪರಿಮಳ ,ಮೂಗಿಗೆ ಬಡಿದಾಗ, ಹಕ್ಕಿಗಳ ಹಾಡು ಕೇಳಿದಾಗ . ಮಳೆ ಬಿದ್ದರಂತೂ ಮಣ್ಣಿನ ಸುಗಂಧ, ಕಾಡಿನ ವಾಸನೆ ಮುದ ತರುತ್ತವೆ. ಆಗ ಮಾತ್ರ ಮೌನವಾಗಿ ಅವನ್ನೆಲ್ಲ ಅನುಭವಿಸುತ್ತ ಕುಳಿತುಬಿಡುತ್ತೇನೆ.
ಅದೇ ದಿವ್ಯ ಅನುಭೂತಿಯನ್ನು ಸಿರ್ಸಿಯಿಂದ ಕುಮಟಾಕ್ಕೆ ಹೋಗುವಾಗ ದೇವಿಮನೆ ಘಟ್ಟದಲ್ಲಿಯೂ , ಹೊನ್ನಾವರದಿಂದ ಸಾಗರಕ್ಕೆ ಸಾಗುವಾಗ ಗೇರುಸೊಪ್ಪಾ ಘಟ್ಟದಲ್ಲಿಯೂ ಆನಂದಿಸುತ್ತೇನೆ.
ಆ ಹಸಿರು ಹೊದ್ದ ಸಹ್ಯಾದ್ರಿ ಶ್ರೇಣಿಗಳು, ಕಾಡಿನ ಪರಿಮಳ ಹೊತ್ತ ಗಾಳಿ , ಅಲ್ಲಲ್ಲಿ ಹೊಳೆಯುವ ಜಲಪಾತಗಳು, ದಟ್ಟ ಕಾಡಿನ ಹಸಿರು ಛಾವಣಿಯ ನಡುವೆ ಅಂಕುಡೊಂಕಾದ ರಸ್ತೆಯಲ್ಲಿ ಸಾಗುವಾಗಿನ ಖುಷಿಗೆ ಸಮಾನ ಏನಿಲ್ಲವೆನಿಸಿಬಿಡುತ್ತದೆ .
ನಗರಗಳ ಬಿಡುವಿಲ್ಲದ ಟ್ರಾಫಿಕ್ ಗೆ ತದ್ವಿರುದ್ಧವಾಗಿ ಆಗೊಮ್ಮೆ ಈಗೊಮ್ಮೆ ಎದುರಾಗುವ ವಾಹನಗಳನ್ನು ಬಿಟ್ಟರೆ ಇಡೀ ರಸ್ತೆಗೂ ನಾವು ಮಾತ್ರ !
ಹಾಗೆಯೇ ಕೆಲವೊಮ್ಮೆ , ಈ ಕಾಡುಗಳಿಗಿನ್ನು ಎಷ್ಟು ವರ್ಷಗಳ ಆಯುಸ್ಸೊ ! ಎಂದೆನಿಸಿ ಮನಸ್ಸು ಮಂಕಾಗುತ್ತದೆ.

ಇತ್ತೀಚಿನ ವರ್ಷಗಳಲ್ಲಿ , ಮ್ಯಾಂಗನೀಸ್ ಸಾಗಿಸುವ ಲಾರಿಗಳಿಂದಾಗಿ ಪರಿಸರ ,ರಸ್ತೆ ಎಲ್ಲವೂ ಹಾಳಾಗುತ್ತಿರುವುದು ಕಾಳಜಿ ತರುವಂಥಾ ವಿಷಯಗಳು. ಪ್ರತಿ ದಿನ ೪೦೦ಕ್ಕೂ ಹೆಚ್ಚು ಅದಿರು ತುಂಬಿದ ಲಾರಿಗಳು ಸಾಗುವುದರಿಂದ ಕುಸಿಯುತ್ತಿರುವ ಘಟ್ಟ,ಮ್ಯಾಂಗನೀಸ್ ನ ಧೂಳು ಹೊದ್ದು ಕೆಂಪಾದ ಕಾಡು, ಹಾಳಾಗುತ್ತಿರುವ ಹೊಳೆ, ನದಿಗಳ ನೀರು, , ಹೊಂಡಗಳಿಂದ ತುಂಬಿದ ರಸ್ತೆ ಗಾಬರಿಗೊಳಿಸುತ್ತವೆ. ಹಾದಿಬದಿಯ ಊರುಗಳ ಬಾವಿಗಳಲ್ಲಿಯೂ ಮ್ಯಾಂಗನೀಸ್ ಧೂಳು ಇಳಿದು ಕುಡಿಯುವ ನೀರಿಗೂ
ಪರದಾಡುವ ಜನರ ಕಷ್ಟ ಕೇಳಿದಾಗ ಸಂಕಟ ವಾಗುತ್ತದೆ. ಕೇವಲ ೩-೪ ವರ್ಷಗಳ ಹಿಂದೆ ಡ್ರೈವ್ ಮಾಡಲು ಖುಷಿ ತರುತ್ತಿದ್ದ ಯಲ್ಲಾಪುರ ರಸ್ತೆ ಈಗಾಗಲೇ ಕಿತ್ತು ಹೋಗಿ ಚಾಲಕರಿಗೆ ದುಃಸ್ವಪ್ನ ವಾಗಿದೆ. ಘಟ್ಟದಲ್ಲಿ ಭೂ ಕುಸಿತ ಅತಿ ಸಾಮಾನ್ಯವಾಗಿಬಿಟ್ಟಿದೆ!
ಇದೀಗ ಗೇರುಸೊಪ್ಪಾ ಘಟ್ಟದಲ್ಲಿಯೂ ಈ ಲಾರಿಗಳ ಓಡಾಟ ಶುರುವಾಗಿರುವುದು ನಿಜಕ್ಕೂ ಆತಂಕ ತರುತ್ತದೆ.

ಸರಕಾರದ ನಿರ್ಲಕ್ಷ್ಯ , ನಿರ್ಲಿಪ್ತ ಜನರ ’ ನಾವೇನು ಮಾಡಲಾಗುತ್ತದೆ ’ ಎಂಬ ಧೋರಣೆ, ಮುಂದೊಂದು ದಿನ ಎಂಥಹ ಪರಿಸ್ಥಿತಿ ತರಬಹುದು ಎಂದು ಯೋಚಿಸುವಾಗ ಮೈ ನಡುಗುತ್ತದೆ. ಸಿಟ್ಟು ಬರುತ್ತದೆ
ಈ ಬಗ್ಗೆ ನಾವೇನಾದರೂ ಮಾಡಲು ಸಾಧ್ಯವೇ ಎಂಬ ಪ್ರಶ್ನೆ ಕೊರೆಯುತ್ತಿದೆ. ನೀವೇನಾದರೂ ಹೇಳಬಲ್ಲಿರಾ?

3 comments:

sunaath said...

ಗಡಿಯಾರದ ಮುಳ್ಳನ್ನು ಹಿಂದೆ ತಿರುವಲು ಸಾಧ್ಯವೆ? We are rushing downhill.

Anonymous said...

nimma bhaavanagaLige naanoo spandhisuththEne

seetaram bhat

chitra said...

ಸುನಾಥ ಕಾಕಾ , ಸೀತಾರಾಮ ಭಟ್ಟರೇ,

ಧನ್ಯವಾದಗಳು.