July 27, 2008

ವಿದಾಯ

ಯಾಕೆ ಹೀಗೆ ಮಾಡ್ತೀಯ? ನೀ ಅಂದಿದ್ದನ್ನೆಲ್ಲ ನಾನು ಕೇಳಲೇ ಬೇಕು ಅನ್ನೋ ಹಟ ಯಾಕೊ ನಿಂಗೆ? ನಿಂಗೆ ಇಷ್ಟ ಆಗಿದ್ದನ್ನೇ ನಾ ಮಾಡಬೇಕಾ? ಒಂದು ಸಲವೂ ನನಗೊಂದು ಮನಸ್ಸಿದೆ, ನನ್ನದೇ ಆದ ವ್ಯಕ್ತಿತ್ವ ಇದೆ ಅಂತ ನಿಂಗ್ಯಾಕೆ ಅನಿಸೋದಿಲ್ಲ?
ಎಷ್ಟೋ ವರ್ಷಗಳಿಂದ ಜೊತೆಯಾಗಿ ಓಡಾಡುತ್ತಿದ್ದೀವಿ. ಇನ್ನೂ ನೀನು ನಂಗೆ ಪೂರ್ತಿಯಾಗಿ ಅರ್ಥವಾಗಿಲ್ಲ. ಎಂಥಾ ವಿಚಿತ್ರ ಅಲ್ವಾ?
ಏನು ಗೊತ್ತಾ? ಈ ನಿನ್ನ ಹಟ ಮಾಡೊ ಸ್ವಭಾವದಿಂದ , ನಿನ್ನ ’ಅಹಂ’ ನಿಂದ ,ನಿನ್ನ ಸಿಟ್ಟಿನಿಂದ,ಜೀವನದಲ್ಲಿ ಎಷ್ಟೋ ಸುಂದರ ಕ್ಷಣಗಳನ್ನು ನಾವು ಕಳೆದುಕೊಂಡಿದೀವಿ . ಆದರೆ ,ಅದನ್ನ ನೀನು ಒಪ್ಪಿಕೊಳ್ಳಲು ತಯಾರಿಲ್ಲ ! ತುಂಬ ಬೇಜಾರಾಗತ್ತೆ ಕಣೊ ಯೋಚನೆ ಮಾಡಿದಾಗ.


ನಿನಗೆ " ನೀನಷ್ಟೇ" ಮುಖ್ಯವಾಗಿ , ನಿನ್ನನ್ನು ಅತಿಯಾಗಿ ಪ್ರೀತಿಸುವ ನಾನು ಏನೂ ಅಲ್ಲ ಅಂದು ನಿನಗನಿಸುತ್ತಲ್ಲ , ಆ ಕ್ಷಣಕ್ಕೆ ಎದೆಯೊಳಗೆ ಚುಚ್ಚಿದಂತಾಗುತ್ತೆ. ನೋವಾಗುತ್ತೆ. ಈ ಪ್ರೀತಿ ಅಂದರೆ ಇಷ್ಟೇನಾ? ಪ್ರೀತಿಸಿದ ಮಾತ್ರಕ್ಕೆ ಹಟ ಮಾಡುವ ಹಕ್ಕು ಬಂದುಬಿಡುತ್ತದೆಯಾ?
ಎಷ್ಟೊಂದು ಬದಲಾಗಿದ್ದೀಯಾ ನೀನು.

ನಾನು ಯಾವುದೇ ವಿಷಯದಲ್ಲಿ ’ಇಲ್ಲ ’ ಅಂದಾಗೆಲ್ಲ ಕಾರಣ ಕೇಳುತ್ತಾ , ಅದನ್ನು ನಿನ್ನದೇ ರೀತಿಯಲ್ಲಿ ಅರ್ಥೈಸಿಕೊಂಡು ಕೋಪಿಸಿಕೊಳ್ಳುತ್ತ , ಧುಮುಗುಟ್ಟುತ್ತಾ ಹೋಗಿಯೇ ಬಿಡುತ್ತಿದ್ದೆಯಲ್ಲ , ನನ್ನೊಬ್ಬಳನ್ನೇ ಕಣ್ಣೀರಲ್ಲಿ ಬಿಟ್ಟು ? ಆಗ ನಿನಗೆ ನನ್ನ ಬಗ್ಗೆ ಏನೂ ಅನ್ನಿಸ್ತಾನೇ ಇರಲಿಲ್ವಾ? ನಿನಗೆ ಬೇಕಾಗಿದ್ದು ’ ಲಾಜಿಕ್’ ಇರೊ ಕಾರಣ ಮಾತ್ರ.ಪ್ರತಿ ನಕಾರಕ್ಕೂ ಒಂದು ಲಾಜಿಕ್ ಕೊಡುವುದು ಸಾಧ್ಯವಾಗುವುದಿಲ್ಲ ಅಲ್ವಾ? ಜೀವನ ಎಂದಿಗೂ ಬರೀ ಲಾಜಿಕ್ ಮೇಲೆ ನಿಲ್ಲುವುದಿಲ್ಲ. ಅಲ್ಲಿ ಭಾವನೆಗಳಿಗೂ ಬೆಲೆ ಕೊಡಬೇಕಾಗುತ್ತದೆ. ಆವತ್ತೂ ನಾನು ನಿಂಗೆ ಇದನ್ನೇ ಹೇಳಿದ್ದೆ.
ನೋಡು, ನಾನು ಏಕೆ ಮೀನು -ಕೋಳಿ ತಿನ್ನುವುದಿಲ್ಲ ಅನ್ನೋದಕ್ಕೆ ನಾನೇನು ’ ಲಾಜಿಕ್ ’ ಕೊಡಲಿ? ನನಗಿಷ್ಟವಾಗುವುದಿಲ್ಲ, ತಿನ್ನಬೇಕೆನಿಸುವುದಿಲ್ಲ ಅಷ್ಟೆ . ಯಾಕೆ ಇಷ್ಟವಾಗುವುದಿಲ್ಲ , ಯಾಕೆ ತಿನ್ನಬೇಕೆನಿಸುವುದಿಲ್ಲ ಅನ್ನೋ ಪ್ರಶ್ನೆಗಳಿಗೆ ಉತ್ತರ ನನ್ನ ಬಳಿಯಿಲ್ಲ. ನನ್ನ ಇಷ್ಟಾನಿಷ್ಟಗಳು ನನಗೆ ಸಂಬಂಧಿಸಿದ್ದು ಅಲ್ಲವೆ? ಆದರೆ ಇದನ್ನು ನೀನು ಒಪ್ಪುವುದಿಲ್ಲ. ನಿನ್ನ ಪ್ರಕಾರ , ನಾವು ಒಬ್ಬರನ್ನೊಬ್ಬರು ಪ್ರೀತಿಸುವುದರಿಂದ ನನ್ನ ಭಾವನೆಗಳಿಗೆ, ಯೋಚನೆಗಳಿಗೆ , ಅನಿಸಿಕೆಗಳಿಗೆ ನಿನ್ನ ಮುದ್ರೆ ಬೇಕು. ನನ್ನ ಇಷ್ಟ -ಅ ಇಷ್ಟಗಳನ್ನು ನೀನು ನಿರ್ಧರಿಸಬೇಕು ಅಲ್ಲವೆ? ಆದರೆ , ಇದನ್ನೇ ನಾನು ನಿನಗೆ ಹೇಳಿದರೆ ಅದು ನಿನಗೆ ಹಿಡಿಸದು . ಪ್ರೀತಿ ಬಂಧನವಾಗ ಬಾರದು ಕಣೋ. ನಾನು ನಿನ್ನನ್ನು ನೀನಿರುವಂತೆ ಒಪ್ಪಿಕೊಳ್ಳಬೇಕು. ಆದರೆ, ನೀನು ಹಾಗೆ ಮಾಡಲಾರೆ. ನಿನಗೋಸ್ಕರ ನಿನಗೆ ಬೇಕಾದಂತೆ ನಾನು ನನ್ನನ್ನು ಬದಲಾಯಿಸಿಕೊಳ್ಳಬೇಕು ಅಲ್ಲವಾ? ಯಾಕೆ ಹೀಗೆ?


ನಿನಗಾಗಿ ನಾನು ನನ್ನ ಪ್ರತಿ ನಿಮಿಷವನ್ನೂ ಮೀಸಲಿಡಬೇಕು, ನಾನು ಯಾವ ಮೀಟಿಂಗ್ ನಲ್ಲಿದ್ದರೂ, ಎಂಥದೇ ಅತಿಮುಖ್ಯವಾದ ಕೆಲಸವನ್ನು ಮಾಡುತ್ತಿದ್ದರೂ ನಿನ್ನ ಫೋನ್ ಬಂದಾಗ ರಿಸೀವ್ ಮಾಡಲೇ ಬೇಕು. ನೀ ಕರೆದಾಗ ಕರೆದಲ್ಲಿ ಬರಲು ತುದಿಗಾಲಲ್ಲಿರಬೇಕು.. ಆದರೆ, ಇವ್ಯಾವುದೂ ನಿನಗೆ ಅನ್ವಯವಾಗುವುದಿಲ್ಲ ಅಲ್ವಾ?

ನೆನಪಿದೆಯಾ? ಕಳೆದ ತಿಂಗಳು ಒಂದು ದಿನ ಯಾಕೋ ತುಂಬಾ ಒಂಟಿತನ ಕಾಡುತ್ತಿತ್ತು, ನಿನ್ನ ಮಡಿಲಲ್ಲಿ ತಲೆಯಿಟ್ಟು ಮಲಗಬೇಕು ಅಂತ ತೀವ್ರವಾಗಿ ಅನ್ನಿಸ್ತಾ ಇತ್ತು, ಕಡೇ ಪಕ್ಷ ನಿನ್ನ ಜೊತೆ ಮಾತನಾಡಿದರೆ ಸಮಾಧಾನ ಆಗಬಹುದು ಅಂತ ನಿನಗೆ ಫೋನ್ ಮಾಡಿದಾಗ ಏನಾಯ್ತು?
ಯಾವುದೋ ಪ್ರಾಜೆಕ್ಟ್ ನ ಬಗ್ಗೆ ಓದ್ತಾ ಇದ್ದ ನೀನು ನನ್ನ ಧ್ವನಿ ಕೇಳಿದ್ದೇ ಎಷ್ಟು ಸಿಡುಕಿಬಿಟ್ಟೆ . ನಾನು ಯಾಕೆ ಫೋನ್ ಮಾಡಿದ್ದು ಅಂತ ಕೂಡ ಕೇಳಲಿಲ್ಲ. ನನಗೆ ಹೇಗನಿಸಿರಬಹುದು? ಆಮೇಲೊಂದು ದಿನ ಈ ವಿಷಯ ಬಂದಾಗ ಏನಂದೆ ನೀನು?
"ಅಷ್ಟು ಬೇಜಾರಾಗಿದ್ರೆ , ರಜಾ ಹಾಕ್ಬಿಟ್ಟು ಮನೆಗೆ ಹೋಗಿ, ಟಿವಿ ನೋಡೊದೊ, ಹಾಡು ಕೇಳೋದೋ ಮಾಡಬೇಕಿತ್ತು. ಇಲ್ಲಾಂದ್ರೆ , ಸುಮ್ಮನೆ ಮಲಗಿ ಬಿಡೋದು. ಅದನ್ನ ಬಿಟ್ಟು ಇಂಥಾ ಚಿಕ್ಕ ಚಿಕ್ಕ ಕಾರಣಕ್ಕಾಗಿ ನಂಗೆ ಫೋನ್ ಮಾಡಿ ಡಿಸ್ಟರ್ಬ್ ಮಾಡ್ತೀಯಲ್ಲ. ನಂಗೆ ಎಷ್ಟು ತಲೆಬಿಸಿ ಇರತ್ತೆ ಅಂತ ಗೊತ್ತಿಲ್ವಾ ನಿಂಗೆ? " ನಾನು ನಿನ್ನನ್ನೇ ನೋಡ್ತಾ ನಿಂತುಬಿಟ್ಟೆ ! ಭೇಟಿಯಾದ ಹೊಸತರಲ್ಲಿ ನನ್ನ ಮುಖ ಸ್ವಲ್ಪ ಬಾಡಿದರೂ " ಯಾಕೆ ಪುಟ್ಟೀ , ಬೇಜಾರಾಗ್ತಿದ್ಯಾ? ನಡಿ ಎಲ್ಲಾದ್ರೂ ಓಡಾಡ್ಕೊಂಡು ಬರೋಣ " ಎಂದೋ ," ತಲೆನೋವಾ ಪುಟ್ಟೀ, ಮಲ್ಕೋ ಬಾ . ಅಮೃತಾಂಜನ್ ಹಚ್ಚಿಕೊಡ್ತೀನಿ " ಅಂತಾನೋ ಮುದ್ದುಗರೆಯುತ್ತಿದ್ದವನು ನೀನೇನಾ ಅಂತ ಆಶ್ಚರ್ಯ ಪಡ್ತಾ ಇದ್ದೆ. ಆ ಕ್ಷಣಕ್ಕೆ, ನಿನ್ನನ್ನು ಪ್ರೀತಿಸಿ ದೊಡ್ಡ ತಪ್ಪು ಮಾಡಿದೆ ಅಂತ ಗೊತ್ತಾಯ್ತು.

ನನ್ನ ಸ್ನೇಹಿತೆ ರೇವತಿ ನನ್ನ ಮುಖ ಬಾಡಿದಾಗೆಲ್ಲ ತಕ್ಷಣಾನೇ ಕಾರಣ ಗ್ರಹಿಸಿ ನಂಗೆ ಬೈತಿದ್ಲು. " ಅಲ್ಲ ಕಣೇ, ಪ್ರೀತಿಸಿದೀಯಾ ಅನ್ನೋ ಒಂದೇ ಕಾರಣಕ್ಕೆ ನಿನ್ನ ವ್ಯಕ್ತಿತ್ವನೇ ಕಳೆದುಕೊಂಡೀದೀಯಲ್ಲೆ . ನಿನ್ನನ್ನ ಒಬ್ಬ ವ್ಯಕ್ತಿಯಾಗಿ ಗೌರವಿಸದೇ ಇರೋನ ಮದುವೆ ಆಗ್ತೀನಿ, ಅವನ ಜೊತೆ ಜೀವನ ಪೂರ್ತಿ ಇರ್ತೀನಿ ಅಂತ ಕನಸು ಕಾಣ್ತೀಯಲ್ಲ , ಬುದ್ಧಿ ಇದೆಯ ನಿಂಗೆ? "

ಈಗ ಅನಿಸ್ತಾ ಇದೆ , ಅವಳು ಹೇಳಿದ್ದೆಷ್ಟು ನಿಜ ಅಂತ ! ಅವಳು ಹೀಗೆ ನೇರವಾಗಿ ಮಾತಾಡ್ತಾಳೆ ಅಂತಾನೇ ನಿಂಗೆ ಅವಳು ಇಷ್ಟವಾಗ್ತಿರಲಿಲ್ಲ ಅಲ್ವಾ?

ಯಾವುದರ ಮೇಲೆ ಸಿಟ್ಟು ಬಂದರೂ , ಬೇಜಾರಾದರೂ , ನಿನ್ನ ಸಿಟ್ಟು ನನ್ನ ಮೇಲೆ ! ಯಾಕೆ ಹೀಗೆ?

ನಾನೂ ಕೂಡ, ಪ್ರೀತಿಯಿಂದ ಕುರುಡಾಗಿ , ಯಾವುದಕ್ಕೂ ಪ್ರತಿಭಟಿಸದೇ ನೀ ಅಂದಿದ್ದನ್ನೆಲ್ಲ ಕೇಳಿಸಿಕೊಂಡೆನಲ್ಲ ಅದು ನನ್ನದೇ ತಪ್ಪು ಅಲ್ವಾ? ಏನಾದರೂ ನಾನು ನಿನ್ನನ್ನು ಪ್ರೀತಿಸುತ್ತಲೇ ಇರುತ್ತೇನೆ, ನಿನ್ನನ್ನು ಬಿಟ್ಟು ಹೋಗುವುದಿಲ್ಲ ಅನ್ನೋದು ನಿನ್ನ ಧೃಢ ವಿಶ್ವಾಸವಾಗಿತ್ತು ಅಲ್ಲವೆ? ನಿನ್ನ ಸಿಟ್ಟು ತಣ್ಣಗಾಗುವವರೆಗೂ ನಿನ್ನಿಂದ, ಫೋನಿಲ್ಲ, ಇ ಮೇಲ್ ಇಲ್ಲ. ಭೇಟಿಯಂತೂ ದೂರದ ಮಾತು. ನಾನು ಓಲೈಸಿದಷ್ಟೂ ನೀನು ಬಿಗಿದುಕೊಳ್ಳುತ್ತಿದ್ದೆ. ತಪ್ಪೆಲ್ಲ ನನ್ನದೇ ಅನ್ನೋ ಅಪರಾಧೀ ಭಾವ ಮೂಡಿಸುತ್ತಿದ್ದೆ.

ಇನ್ನು ನನ್ನಿಂದ ಸಾಧ್ಯವಿಲ್ಲ ಕಣೊ. ಉಸಿರು ಕಟ್ಟುತ್ತಿದೆ ಈ ಸಂಬಂಧದಲ್ಲಿ . ನನಗೆ ನನ್ನ ಜೀವನವನ್ನು ನನಗೆ ಬೇಕಾದಂತೆ ಜೀವಿಸುವ ಹಕ್ಕಿದೆ . ನಾನು ಇನ್ನು ಇಲ್ಲಿ ನಿಲ್ಲಲಾರೆ.
ಇನ್ನುಮುಂದೆ, ನಿನಗೆ ನಾನು ಸೆಂಟಿಮೆಂಟಲ್ ಇ ಮೇಲ್ ಬರೆದು ಕಿರಿಕಿರಿ ತರುವುದಿಲ್ಲ . ಫೋನ್ ಕೂಡ ಮಾಡುವುದಿಲ್ಲ.
ಯಾಕೆ ಗೊತ್ತ? ನನ್ನನ್ನು ಪ್ರೀತಿಸುತ್ತಿದ್ದ, ನನ್ನ ಬಗ್ಗೆ ಕಾಳಜಿ ವಹಿಸುತ್ತಿದ್ದ, ನನ್ನ ಅನಿಸಿಕೆಗಳನ್ನು ಗೌರವಿಸುತ್ತಿದ್ದ, ನನ್ನನ್ನು ಅರ್ಥ ಮಾಡಿಕೊಂಡು ಜೊತೆಯಾಗಿದ್ದ ವ್ಯಕ್ತಿ, ನನ್ನ ನೋವಿನಲ್ಲಿ , ನಲಿವಿನಲ್ಲಿ ಜೊತೆಯಾಗಿ ನನ್ನ ಭಾಗವೇ ಆಗಿದ್ದವನು, ಎಲ್ಲಿಯೋ ಕಳೆದು ಹೋಗಿದ್ದಾನೆ. ನನ್ನನ್ನು ಒಂಟಿಯಾಗಿ ಮಾಡಿ. ಈಗ ನನ್ನೆದುರು ಇರುವುದು ಅವನ ರೂಪ ಮಾತ್ರ. ಆತ್ಮವಲ್ಲ. ಇಷ್ಟು ವರ್ಷಗಳ ಸಾಂಗತ್ಯ ಒಮ್ಮೆಲೇ ಅಪರಿಚಿತವೆನಿಸುತ್ತಿದೆ.

ನನ್ನೆದುರಿರುವ ನೀನು ಅಪರಿಚಿತನೆನಿಸುತ್ತಿದ್ದೀಯ. ನಾನು ನನ್ನ ಸೆಂಟಿಮೆಂಟ್ ಗಳನ್ನು ಒಬ್ಬ ಅಪರಿಚಿತನೊಡನೆ ಹಂಚಿಕೊಳ್ಳಬಯಸುವುದಿಲ್ಲ.
ನನ್ನ ಜೀವನವನ್ನು , ನನ್ನ ಕನಸುಗಳನ್ನು ಹೊಸದಾಗಿ ಹುಡುಕಲು ಹೊರಟಿದ್ದೇನೆ. ಹಿಂತಿರುಗಿ ನೋಡಲಾರೆ . ನೋವಾಗಿದ್ದರೆ ಕ್ಷಮಿಸಿಬಿಡು.

3 comments:

ತೇಜಸ್ವಿನಿ ಹೆಗಡೆ said...

ಚಿತ್ರಾ,

ವಿದಾಯವನ್ನು ಓದಿ ಒಂದು ಕ್ಷಣ ಮನಸ್ಸಿಗೆ ಪಿಚ್ಚೆನಿಸಿತು. ನಿಜ ಈ ‘ಅಹಂ’ ಎನ್ನೋದು ಮನುಷ್ಯನನ್ನು ಮೃಗವನ್ನಾಗಿಸುತ್ತದೆ. ಜಿ.ಎಸ್.ಶಿವರುದ್ರಪ್ಪನವರ ಕವನವೊಂದರ ಸಾಲುಗಳು ನೂರು ಅರ್ಥಕೊಡುವಂತಿವೆ..

"ಹತ್ತಿರವಿದ್ದೂ ದೂರ ನಿಲ್ಲುವೆವು ನಮ್ಮ ಅಹಮ್ಮಿನ ಕೋಟೆಯಲಿ
ಎಷ್ಟು ಕಷ್ಟವೋ ಹೊಂದಿಕೆ ಎಂಬುದು ನಾಲ್ಕು ದಿನದ ಈ ಬದುಕಿನಲಿ!!

ಎಲ್ಲೋ ಹುಡುಕಿದೆ ಇಲ್ಲದ ದೇವರ ಕಲ್ಲು ಮಣ್ಣುಗಳ ಗುಡಿಯೊಳಗೆ
ಇಲ್ಲೇ ಇರುವ ಪ್ರೀತಿ ಸ್ನೇಹಗಳ ಗುರುತಿಸದಾದೆನು ನಮ್ಮೊಳಗೆ"

ಈ ಹಾಡನ್ನು ನಾನು ಸದಾ ಹಾಡುತ್ತಿರುತ್ತೇನೆ. ಆಗ ನಾನು ‘ನನ್ನ’ ಮರೆತು ನಮ್ಮೊಳಗೆ ಸೇರುತ್ತೇನೆ (ಕೆಲ ಹೊತ್ತಾದರೂ).

ತುಂಬಾ ಭಾವಪೂರ್ಣ ಬರಹ. ಇಂತಹದು ಮತ್ತಷ್ಟು ಬರಲಿ.

sunaath said...

ಒಂದು ವೀಣೆಯ ಶ್ರುತಿಯಲ್ಲಿ ಅಪಸ್ವರ ಬಂದರೆ ಬೇಜಾರು ಮಾಡಿಕೊಳ್ಳಬೇಡಿ. ಬೇರೊಂದು ವೀಣೆಯನ್ನು ಹುಡುಕಿ.

Anonymous said...

Baraha chennagide...innastu breyiri..agaga odake bartha irthivi...
-Chitra karkera