September 15, 2008

ಚೌತಿ ಹಬ್ಬ

ಬ್ಲಾಗ್ ಬರೆಯಲು ಕೀ ಬೋರ್ಡ್ ಮುಟ್ಟದೇ ತಿಂಗಳೇ ಕಳೆಯಿತು.
ಚೌತಿ ಹಬ್ಬಕ್ಕೆ ಮೊದಲೇ ಬರೆಯ ಬೇಕೆಂದುಕೊಂಡವಳಿಗೆ ಏನೇನೋ ಅಡಚಣೆಗಳು.
ಇಂದು ಅನಂತ ಚತುರ್ದಶಿ ಇಲ್ಲಿ ಗಣಪತಿ ವಿಸರ್ಜನೆಯ ಗಡಿಬಿಡಿ. ಮಹಾರಾಷ್ಟ್ರದ ಅದರಲ್ಲೂ ಪುಣೆಯ ಗಣೇಶೋತ್ಸವ ತುಂಬಾ ಪ್ರಸಿದ್ಧ. ಸ್ವಾತಂತ್ರ್ಯ ಚಳುವಳಿಯ ಸಮಯದಲ್ಲಿ ಬ್ರಿಟಿಷರ ವಿರುದ್ಧ ಸಾಮಾನ್ಯ ಜನರನ್ನು ಒಟ್ಟುಗೂಡಿಸಲು, ಜನರಲ್ಲಿ ಸ್ವಾತಂತ್ರ್ಯಕ್ಕಾಗಿ ಹೋರಾಡುವ ಹುರುಪು ತುಂಬಲು ತಿಲಕರು ಗಣೇಶೋತ್ಸವವನ್ನು ಆರಂಭಿಸಿದರು.
ಈಗಲೂ ಅದೇ ಉತ್ಸಾಹದಿಂದ ಒಂದು ರೀತಿ ಮಹಾರಾಷ್ಟ್ರದ " ನಾಡ ಹಬ್ಬ" ವಾಗಿ ಆಚರಿಸಲ್ಪಡುತ್ತದೆ. ಸಾವಿರಾರು ಮಂಡಳಿಗಳು ನವನವೀನ ರೀತಿಯಿಂದ ಅಲಂಕರಿಸಿದ ಮಂಟಪದಲ್ಲಿ ಗಣೇಶನನ್ನು ಪ್ರತಿಷ್ಟಾಪಿಸಿ ಪೂಜಿಸುತ್ತಾರೆ.ಹತ್ತು ದಿನಗಳಲ್ಲಿ ಲಕ್ಷಗಟ್ಟಲೇ ಜನ ದೂರ ದೂರದಿಂದ ಗಣಪತಿ ನೋಡಲೆಂದೇ ಬರುತ್ತಾರೆ. ಸಂಜೆ ೮ರಿಂದ ಬೆಳಗಿನ ಜಾವದ ವರೆಗೂ ಜನರು ಪುಣೆಯಿಡಿ ಗಣಪತಿ ನೋಡಲೆಂದು ತಿರುಗುತ್ತಾರೆ. ಅದರಲ್ಲೂ ಇಲ್ಲಿಯ ಅತ್ಯಂತ ಪ್ರಸಿದ್ಧ ಹಾಗೂ ಶ್ರೀಮಂತ" ದಗಡು ಶೇಟ್ ಗಣಪತಿ" ನೋಡಲೆಂದು ಬೆಳಗಿನ ಜಾವ ೪ ರಿಂದ ಜನ ಕ್ಯೂ ನಿಂತಿರುತ್ತಾರೆ. (ಈ ಗಣಪತಿಯ ಫೋಟೊ ಬ್ಲಾಗಿನಲ್ಲಿ ಸೇರಿಸಿದ್ದೇನೆ. ) ಅಲ್ಲದೆ, ಪಂಚಮಿಯದಿನ ಮುಂಜಾನೆ ಈ ಗಣಪತಿಯ ಎದುರು ಸಾರ್ವಜನಿಕರಿಂದ ಅದರಲ್ಲೂ ಮಹಿಳೆಯರು ಹಾಗೂ ಮಕ್ಕಳು ಅಥರ್ವ ಶೀರ್ಷ ಪಠಣ ಮಾಡುತ್ತಾರೆ. ಈ ಸಲ ಭಯೋತ್ಪಾದಕರ ಭಯದಿಂದಾಗಿ ಕಾರ್ಯಕ್ರಮ ರದ್ದಾಗುವ ಸಾಧ್ಯತೆ ಇತ್ತು . ಆದರೆ ಜನರ ಭಕ್ತಿ ಹಾಗೂ ವಿಶ್ವಾಸದ ಒತ್ತಾಯದಿಂದ ಮುಂದುವರೆದ ಕಾರ್ಯಕ್ರಮದಲ್ಲಿ ಸುಮಾರು ೧೪,೫೦೦ ಜನ ಮಹಿಳೆಯರು ಹಾಗೂ ಮಕ್ಕಳು ಭಾಗವಹಿಸುದ್ದು ದಾಖಲೆಯೇ ಆಗಿದೆ !ಹತ್ತು ದಿನಗಳ ನಂತರದ ವಿಸರ್ಜನೆಯ ಸಂಭ್ರಮವೇ ಬೇರೆ. ಪುಣೆಯಲ್ಲಿನ ಎಲ್ಲ ಮಂಡಳಗಳೂ ಪೈಪೋಟಿಯಿಂದ ಸಿಂಗರಿಸಿದ ಟ್ರಕ್ ಹಾಗೂ ಇತರೇ ವಾಹನಗಳಲ್ಲಿ ಮೂರ್ತಿಯನ್ನಿಟ್ಟು ನದಿಗೆ ವಿಸರ್ಜನೆಗೆಂದು ಮೆರವಣಿಗೆ ಹೊರಟರೆ ಹೆಚ್ಚಿನ ರಸ್ತೆಗಳಲ್ಲಿ ವಾಹನ ಸಂಚಾರ ರದ್ದು ಮಾಡಲಾಗುತ್ತದೆ. ವಿಸರ್ಜನೆಯ ಮೆರವಣಿಗೆಗೂ ಸಹ ನಿಯಮಗಳಿವೆ , ನಿರ್ದಿಷ್ಟ ಮಾರ್ಗ ಸೂಚಿಯಂತೆಯೇ ಸಾಗ ಬೇಕಾಗುತ್ತವೆ. ಪ್ರತಿ ಮಂಡಳಿಯೂ ತಮ್ಮ ಹೆಸರನ್ನು ನೋಂದಾಯಿಸಿ ತಮಗೆ ಕೊಟ್ಟ ನಂಬರ್ ಪ್ರಕಾರ ಸರತಿಯಲ್ಲಿಯೆ ಸಾಗಬೇಕಾಗುತ್ತದೆ. ಅತ್ಯಂತ ಹಳೆಯ ಐದು ಮಂಡಳಿಗಳು ಎಲ್ಲಕ್ಕಿಂತ ಮೊದಲು .ಆ ನಂತರ ಉಳಿದವರಿಗೆ ಅವಕಾಶ . ಹೀಗೆ ಶುರುವಾಗಿ ನಿಧಾನವಾಗಿ ವೈಭವದಿಂದ ಸಾಗುವ ಮೆರವಣಿಗೆ ನದಿಯ ವರೆಗೆ ಹೋಗಿ ಎಲ್ಲ ಮಂಡಳಿಗಳ ವಿಸರ್ಜನೆ ಮುಗಿಯುವಾಗ ಕೆಲವೊಮ್ಮೆ ೩೮ ಗಂಟೆಗಳೇ ಕಳೆದ ದಾಖಲೆಯಿದೆ ! ಇದರಲ್ಲಿ ಸಾರ್ವಜನಿಕರು , ವಯಸ್ಸು -ಲಿಂಗಭೇದವಿಲ್ಲದೇ ಅತೀ ಉತ್ಸಾಹದಿಂದ ಪಾಲ್ಗೊಳ್ಳುತ್ತಾರೆ. ೩೮ ಗಂಟೆಗಳ ಕಾಲವೂ ಹಸಿವು, ನಿದ್ರೆಗಳನ್ನೂ ಮರೆತು ಕಿವಿಬಿಡಲಾರದಷ್ಟು ಜೋರಾಗಿ ಹೊಡೆದುಕೊಳ್ಳುವ ಮೈಕಾಸುರನಿಗೆ ಪೈಪೋಟಿ ಕೊಡುವಂತೆ ಕುಣಿಯುತ್ತಾರೆ. ಬಹುಶಃ ಆ ಗಣಪತಿ ಈ ಗಲಾಟೆಗೆ ಎಂದೋ ಓಡಿಬಿಟ್ಟಿರುತಾನೆ ಎಂದು ನನ್ನ ಬಲವಾದ ನಂಬಿಕೆ ! ಇಡೀ ಪುಣೆ ಪಟ್ಟಣಕ್ಕಿಂದು ರಜೆ. ಶಾಲೆ, ಕಾಲೇಜು , ಅಂಗಡಿ , ಅಫೀಸು ಎಲ್ಲವೂ ರಜೆ ಘೋಷಿಸುತ್ತವೆ .
ಮೊದಲೇ ಕಲುಷಿತವಾದ ನದಿಯ ನೀರು ಇನ್ನೂ ಕೆಡದಂತೆ ನಗರ ಸಭೆಯವರು ಕಳೆದೆರಡು ವರ್ಷಗಳಿಂದ ನದೀ ತೀರದಲ್ಲಿ ದೊಡ್ಡ ದೊಡ್ಡ ಸಿಮೆಂಟ್ ಟ್ಯಾಂಕ್ ಗಳನ್ನು ಕಟ್ಟಿ ಕೊಡುತ್ತಿದ್ದಾರೆ . ನದಿಯ ಬದಲು ಈ ಟ್ಯಾಂಕ್ ಗಳಲ್ಲೇ ಗಣಪನನ್ನು ಮುಳುಗಿಸಲು ವಿನಂತಿಸಿ ಯಶಸ್ವಿಯೂ ಆಗಿದ್ದಾರೆ. ಒಟ್ಟಿನಲ್ಲಿ ಜನರ ಸಂಭ್ರಮ ಮಾತ್ರ ಮೆಚ್ಚುವಂತದ್ದು.

ನಮ್ಮಲ್ಲಿ ಚೌತಿ ಹಬ್ಬವನ್ನು ಇಷ್ಟು ದೊಡ್ಡದಾಗಿ ಆಚರಿಸುವುದಿಲ್ಲ ಅಲ್ಲವೆ? ನಾವು ಚಿಕ್ಕವರಿದ್ದಾಗ ನಮಗೂ ಚೌತಿ ಹಬ್ಬದ ಸಂಭ್ರಮವಿರುತ್ತಿತ್ತು. ಮನೆಯಲ್ಲಿ ಗಣಪತಿ ಕೂರಿಸದಿದ್ದರೂ ಹಬ್ಬಕ್ಕೆಂದು ಹೊಸ ಬಟ್ಟೆ ಸಿಕ್ಕುತ್ತಿತ್ತು ಎನ್ನುವುದೇ ಹೆಚ್ಚಿನ ಖುಷಿ!
ರೆಡಿಮೇಡ್ ಬಟ್ಟೆಗಳು ಇನ್ನೂ ಈಗಿನಷ್ಟು ಜನಪ್ರಿಯವಾಗಿರಲಿಲ್ಲ. ತಿಂಗಳುಗಟ್ಟಲೇ ಮೊದಲು ಸಾಗರಕ್ಕೆ ಹೋಗಿ, ಬಟ್ಟೆ ಖರೀದಿಸಿ ಟೈಲರ್ ನ ಬಳಿ ಕೊಟ್ಟು ಬಂದರೆ ದೊಡ್ಡ ಕೆಲಸವಾದಂತೆ. ಅಳತೆ ಕೊಟ್ಟರಾಯಿತು ಹೇಗೆ , ಯಾವ ಡಿಸೈನ್ ನಲ್ಲಿ ಹೊಲಿಯಬೇಕೆಂಬುದು ಟೈಲರ್ ನೇ ನಿರ್ಧರಿಸುತ್ತಿದ್ದ. ವಾರಕ್ಕೊಮ್ಮೆ ಅವನಲ್ಲಿ ಹೋಗಿ , ಯಾವಾಗ ಕೊಡುತ್ತಾನೋ ಎಂದು ಕಾಯುತ್ತಾ, ಅಂತೂ ಅವನೊಮ್ಮೆ ಕೊಟ್ಟಾಗ ತಂದು , ಅದು ಹೇಗೇ ಹೊಲಿದಿದ್ದರೂ ಹಾಕಿ ಕೊಳ್ಳುತ್ತಿದ್ದೆವು. ( ಅದು ಅನಿವಾರ್ಯವೇ ಆಗಿತ್ತು ! ) ಇನ್ನು ಮನೆಯಲ್ಲಿ ವಾರ ಮುಂಚೆಯೇ ಹಬ್ಬದ ತಯಾರಿ. ಚಕ್ಕುಲಿ, ಕರ್ಜೀಕಾಯಿ, ಉಂಡೆ ಇತ್ಯಾದಿ ಕಜ್ಜಾಯಗಳು .. ಮ್ ಮ್ ಮಜಾನೆ ಮಜಾ. ಮನೆಯಲ್ಲಿ ಗಣಪತಿ ಇಡದಿದ್ದರೂ ದೇವರ ಮುಂದೆ ಫಲಾವಳಿ ( ವಿವಿಧ ಹಣ್ಣುಗಳು, ವಿಶಿಷ್ಟವಾದ ಕಾಡು ಹಣ್ಣುಗಳು,, ತರಕಾರಿಗಳು ,ಹೂವುಗಳನ್ನು ಸೇರಿಸಿ ಮಾಡಿದ ತೋರಣ) ಕಟ್ಟುತ್ತಿದ್ದೆವು. ಹಬ್ಬದ ದಿನ ಸಂಜೆಯಾಗುತ್ತಿದ್ದಂತೆ , ಎಲ್ಲರ ಮನೆಗೆ ಗಣಪತಿ ನೋಡಲು ಹೋಗುವ ಸಂಭ್ರಮ.ಎಲ್ಲ ಕಡೆ ಪ್ರಸಾದವಾಗಿ ಕೊಟ್ಟ ಪಂಚಕಜ್ಜಾಯ ತಿಂದೂ ತಿಂದೂ ಕೆಲವೊಮ್ಮೆ ಹೊಟ್ಟೆ ನೋವು ಶುರುವಾಗುತ್ತಿತ್ತು.
ಆಗ ಹೆಚ್ಚಿನ ಮನೆಗಳಲ್ಲಿ ಪೇಪರ್ ಕಟಿಂಗ್ ನ ಅಲಂಕಾರವೇ ಹೆಚ್ಚು. ಬಣ್ಣ ಬಣ್ಣದ , ಹೊಳೆಯುವ ಕಾಗದಗಳು ಹಾಗೂ ಲೈಟ್ ಗಳಿಂದ ಸಿಂಗರಿಸಿದ ಮಂಟಪಗಳನ್ನು ನೋಡಿ ಖುಷಿ ಪಡುತ್ತಿದ್ದೆವು. ದಾರಿಯಲ್ಲಿ , ತಪ್ಪಿಯೂ ಆಕಾಶದತ್ತ ನೋಡುತ್ತಿರಲಿಲ್ಲ. ಮತ್ತೆಲ್ಲಾದರೂ ಚಂದ್ರನನ್ನು ನೋಡಿ ಅಪವಾದ ಕಟ್ಟಿಕೊಳ್ಳುವುದು ಯಾಕೆ ಎಂಬ ಭಯ .

ಈಗಿನದಕ್ಕೆ ಹೋಲಿಸಿದರೆ ನಮ್ಮದು ಒಂಥರಾ ಮುಗ್ಧ ಸಂಭ್ರಮ ! ಈಗಿನಂತೆ , ಹಬ್ಬದ ಪ್ರಯುಕ್ತ ನೂರೆಂಟು ಸ್ಪರ್ಧೆಗಳು , ಅಂಗಡಿಗಳಲ್ಲಿ, ರಿಯಾಯಿತಿ ಮಾರಾಟಗಳು , ಹೊಸ ಚಿತ್ರಗೀತೆಗಳನ್ನು ತಲೆ ಸಿಡಿದು ಹೋಗುವಷ್ಟು ದೊಡ್ಡದಾಗಿ ಬಿತ್ತರಿಸುವ ಮೈಕಾಸುರನ ಹಾವಳಿ ಇತ್ಯಾದಿ ಇರಲಿಲ್ಲ ! ಆಗ ಎಲ್ಲಾದರೂ ಮೈಕ್ ಹಾಕಿದ್ದಿದ್ದರೆ ಕೇಳುತ್ತಿದ್ದುದು . " ಗಜಮುಖನೇ ಗಣಪತಿಯೆ , ಭಾದ್ರಪದ ಶುಕ್ಲದಾ ಚೌತಿಯಂದು , ಶರಣು ಶರಣಯ್ಯಾ.. " ಮುಂತಾದ ಪಿ ಬಿ ಶ್ರೀನಿವಾಸ್ , ಎಸ್ ಜಾನಕಿಯ ಮಧುರ ಸ್ವರದಲ್ಲಿದ್ದ ೫-೬ ಹಾಡುಗಳಿದ್ದ ಒಂದೇ ಕ್ಯಾಸೆಟ್ . ( ಬಹುಶಃ ಅದು ಕನ್ನಡ ದ ಮೊದಲ ಭಕ್ತಿ ಗೀತೆ ಧ್ವನಿ ಸುರುಳಿಯಿರಬೇಕು ! ) ಹಾಗಿದ್ದರೂ ಅದರ ಮಜಾ ಇನ್ನೂ ಮನದಲ್ಲಿ ಹಸಿರಾಗೇ ಇದೆ.
ನಾನು ಪುಣೆಗೆ ಬಂದ ವರ್ಷ ನಮ್ಮ ಸೊಸೈಟಿಯ ಗಣಪನ ಮುಂದೆ ಹಾಕಿದ " ಹಮ್ ಭೀ ಪಾಗಲ್ ತುಮ್ ಭೀ ಪಾಗಲ್ " ಎಂಬ ಹಾಡು ನನಗೆ ಪ್ರತಿ ಚೌತಿಯಲ್ಲೂ ನೆನಪಾಗುತ್ತದೆ ಆಗ ಮನಸಾರೆ ನಕ್ಕು ಬಿಡುತ್ತೇನೆ. ಪ್ರತೀ ವರ್ಷ ಹಾಡುಗಳು ಬದಲಾದರೂ ಸಾಧಾರಣವಾಗಿ ಇಂಥಾ ಹಾಡುಗಳನ್ನು ಕೇಳ ಬೇಕಾದ ಗಣಪನ ಪರಿಸ್ಥಿತಿ ಮಾತ್ರ ಏನೇನೂ ಬದಲಾಗಿಲ್ಲ !

11 comments:

ಶಾಂತಲಾ ಭಂಡಿ said...

ಚಿತ್ರಾ...
ಚಂದದವಿವರ ಚೌತಿ ಹಬ್ಬದ ಬಗ್ಗೆ, ಇಷ್ಟ ಆತು.
ಗಣಪತಿಯ ಮುಂದೆ ಹಾಕುವ ಹಾಡುಗಳ ಬಗ್ಗೆ ಓದಿ ನಗು ಬರ್ತಾ ಇತ್ತು. :-)

ತೇಜಸ್ವಿನಿ ಹೆಗಡೆ- said...

ಚಿತ್ರಾ..

ಹಳೆಯ ಅದೆಷ್ಟೋ ನೆನಪುಗಳನ್ನು ಮರುಕಳಿಸಿತು ಲೇಖನ.

ಮೊನ್ನೆ ಎಂತದೋ ಕೆಲ್ಸದಮೇಲೆ ಜಯನಗರದ ಕಡೆ ಹೋಗಿದ್ದೆ. ಅಲ್ಲಿ ಒಂದ್ ಕಡೆ "ಜಿಂಕೆ ಮರೀನಾ.. ಜಿಂಕೆ ಮರೀನಾ" ಹೇಳು ಹಾಡು ಅಬ್ಬರವಾಗಿ ಹಾಕಿಯಿದ್ದ. ತಡ್ಕಂಬಲೇ ಆಗ್ತಾ ಇತ್ತಿಲ್ಲೆ! ಎಂತಾರೂ ಫಂಕ್ಷನ್ ಇದ್ದನೋ ಹೇಳಿ ವಿಚಾರಿಸಿದ್ರೆ ಗಣಪತಿ ಕೂರ್ಸಿದ್ದೀವಿ ಅಂದೋ..ಈಗ್ಲೂ ಗಣಪತಿ ಪೂಜೆನಾ ಅಂತ ಕೇಳಿದ್ರೆ.. ಹೌದ್ರೀ ಇದು ಪಿತೃ ಪಕ್ಷದ ಗಣಪತಿ ಅಂದೋ.. ಅದ್ನ ಕೇಳಿ ನಗವೋ ಇಲ್ಲಾ ಅಳವೋ ತೆಳದ್ದಿಲ್ಲೆ ನೋಡು.

sunaath said...

ಚಿತ್ರಾ,
ಪುಣೆಯ ಗಣಪತಿ ಹಬ್ಬದ ಬಗೆಗೆ ಆಕರ್ಷಕ ವಿವರಣೆ ಕೊಟ್ಟಿರುವಿರಿ.
ಪುಣೆಯ ಇತರ ಆಕರ್ಷಣೆಗಳ ಬಗೆಗೂ ಬರೆಯಿರಿ.
-ಸುನಾಥ ಕಾಕಾ

chitra said...

ಶಾಂತಲಾ,

ಧನ್ಯವಾದಗಳು. ಗಣಪತಿ ಮುಂದೆ ಹಾಕ ಇಂಥಾ ಹಾಡುಗಳದ್ದೇ ಒಂದು ಲಿಸ್ಟ್ ಮಾಡ್ಲಕ್ಕೇನ ! :-))


ತೇಜಸ್ವಿನಿ,

ಈಗಿತ್ಲಾಗಿ ಯಾವುದೇ ವಿಶೇಷ ಸಂದರ್ಭಕ್ಕೂ ( ಕೆಲವೊಮ್ಮೆ ದಿನನಿತ್ಯದ ವಿಷಯಗಳಿಗೂ) ಹಳೆಯ ನೆನಪುಗಳು ಗಂಟುಹಾಕಿಕೊಂಡು ಕಾಡುವುದು ನನಗೊಬ್ಬಳಿಗೇನಾ ಅಥವಾ ಎಲ್ಲರಿಗೂ ಹೀಂಗೆ ಆಗ್ತ ಹೇಳೆ ಗೊತ್ತಾಗ್ತಿಲ್ಲೆ !
ಇನ್ನು ಈ " ಪಿತೃ ಪಕ್ಷದ ಗಣಪತಿ" ಕೇಳಿ ನಂಗೂ ನಿಂದೇ ಪರಿಸ್ಥಿತಿ ! ಇದು ಬೆಂಗಳೂರು ಸ್ಪೆಷಲ್ಲಾ ಹೆಂಗೆ? ನಿನ್ನೆ ರಾತ್ರಿ ವಾರ್ತೇಲಿ ಬೆಂಗಳೂರಿನ ಯಾವುದೋ ಏರಿಯಾ ದಲ್ಲಿ
" ಗಲಭೆಗೆ ತಿರುಗಿದ ಗಣಪತಿ ವಿಸರ್ಜನೆ " ಹೇಳಿ ಕೇಳ್ದಿ. ಬಹುಶಃ ಇದೇ ಪಿತೃ ಪಕ್ಷದ ಗಣಪತಿದೇ ಆಗಿರವು !

ಸುನಾಥ ಕಾಕಾ,

ಬಹುದಿನಗಳ ಮೇಲೆ ಬ್ಲಾಗಿನಲ್ಲಿ ನಿಮ್ಮ ಅನಿಸಿಕೆ ಓದಿ ತುಂಬಾ ಖುಷಿಯಾಯ್ತು. ಪುಣೆಯ ಇತರೇ ವಿಶೇಷಗಳ ಬಗ್ಗೆ ಬರೆಯಲು ಖಂಡಿತಾ ಪ್ರಯತ್ನಿಸುತ್ತೇನೆ.
ಹೀಗೇ ಬರುತ್ತಿರಿ. ಧನ್ಯವಾದಗಳು.

ಜೋಮನ್ said...

ಚಿತ್ರಾ,


ಚೌತಿ ಮುಗಿದು, ಮಹಾನವಮಿ ಹತ್ತಿರ ಬಂತು ಕಣ್ರೀ, ದೀಪಾವಳಿ ಮುಗಿಯುವುದರೊಳಗೆ ಮುಂದಿನ ಪೋಸ್ಟು ಕುಟ್ಟಿ...

ಚೆಂದದ ಬರಹ.

srinivas said...

ಪ್ರತಿ ವರುಷವೂ ನಮ್ಮ ಕಾಲೋನಿಯಲ್ಲಿಯೂ ಗಣಪತಿ ಬರುತ್ತಾನೆ - ಆದರೂ ದಗಡೂ ಶೇಟ್ ಗಣಪತಿಯದ್ದೇ ಒಂದು ರೀತಿಯ ವೈಶಿಷ್ಟ್ಯ - ಬಹಳ ಚೆನ್ನಾಗಿ ನಿರೂಪಿಸಿದ್ದೀರಿ

ಈ ವರುಷದ ಗಣಪತಿ ಕೆಲವು ಚಿತ್ರಗಳು ಇಲ್ಲಿವೆ

ಗುರುದೇವ ದಯಾ ಕರೊ ದೀನ ಜನೆ

ತೇಜಸ್ವಿನಿ ಹೆಗಡೆ- said...

ಚಿತ್ರಾ,

"ಬೆಂಗಳೂರಿನ ಯಾವುದೋ ಏರಿಯಾ ದಲ್ಲಿ
" ಗಲಭೆಗೆ ತಿರುಗಿದ ಗಣಪತಿ ವಿಸರ್ಜನೆ " ಹೇಳಿ ಕೇಳ್ದಿ. ಬಹುಶಃ ಇದೇ ಪಿತೃ ಪಕ್ಷದ ಗಣಪತಿದೇ ಆಗಿರವು !"


ಈ ಮೇಲಿನ ನಿನ್ನ ಮಾತುಗಳನ್ನ ಏಣಿಸಿ ಎಣಿಸಿ ನಗ್ಯಾಡ್ತಾ ಇದ್ರೆ.. ಮನೆಯವ್ರು ಇದ್ಕೇನಾರು ಹುಚ್ಚು ಹಿಡೀತಾ ಹೇಳಿ ವಿಚಿತ್ರವಾಗಿ ನೋಡ್ತಾ ಇದ್ರು :) :)

chitra said...

ಜೋಮನ್ ರೇ,
ತುಂಬಾ ದಿನಗಳ ಮೇಲೆ ಭೇಟಿ ! ಖುಷಿಯಾಯ್ತು.

ಈ ಹಬ್ಬಗಳ ಗಡಿಬಿಡೀಲಿ ಬರೆಯೋಕೆ ಟೈಮೇ ಸಿಕ್ತಿಲ್ಲ ಕಣ್ರೀ .
ಆದ್ರೂ ನೀವು ಹೇಳಿದ ಹಾಗೆ ದೀಪಾವಳಿ ಬರೋದ್ರೊಳಗೆ ಇನ್ನೊಂದು ಪೋಸ್ಟ್ ಕುಟ್ಟಿಬಿಡಬೇಕು ಅಂದ್ಕೊಂಡಿದೀನಿ .
ಬರ್ತಾ ಇರ್ರೀ .


ಶ್ರೀನಿವಾಸರೇ,

ಧನ್ಯವಾದಗಳು. ನೀವು ಕೊಟ್ಟ ಲಿಂಕ್ ನೋಡಿದೆ. ಅಥರ್ವ ಶೀರ್ಷ ವನ್ನು ಕನ್ನಡದಲ್ಲಿ ನೋಡಿ ತುಂಬಾ ಸಂತೋಷವಾಯ್ತು. ನಿಮ್ಮ ಕಾಲೊನಿಯ ಗಣಪನೂ ತುಂಬಾ ಸುಂದರವಾಗಿದ್ದಾನೆ.
ಬರ್ತಾ ಇರಿ.

ಹೋಯ್ ತೇಜಸ್ವಿನಿ,

ಅಲ್ದ ಮತ್ತೆ? ನೀನು ಹಾಂಗೆ ಸುಮ್ ಸುಮ್ನೆ ನೆಗ್ಯಾಡ್ತಾ ಇದ್ರೆ , ಅದೂ ಈ ಪಿತೃ ಪಕ್ಷದಲ್ಲಿ.... ಪಾಪ ನಿಮ್ಮನೆಯವರಿಗೆ ಟೆನ್ಷನ್ ಆಗದೇ ಇರ್ತಾ? :-))

Harish - ಹರೀಶ said...

ಚಿತ್ರಕ್ಕಾ, ನಾ ಕೇಳಿದ್ರಲ್ಲಿ ನಾಕು ವರ್ಷ ಹಿಂದೆ ಹಾಕ್ತಿದ್ದ "ಹೊಡಿ ಮಗ ಹೊಡಿ ಮಗ..." ಹಾಡು ಗಣಪತಿ ಇಡ ಜಾಗದಲ್ಲಿ ಸ್ವಲ್ಪ ವಿಚಿತ್ರ ಅಂತ ಅನ್ಸ್ತು... ಯಾರು ಯಾರನ್ನ ಹೊಡ್ಯಕ್ಕೆ ಇವು ಪ್ರಾರ್ಥನೆ ಮಾಡ್ಕ್ಯತ್ತಾ ಇದ್ದಿದ್ದ ಅಂತನೇ ತಿಳೀತಿತ್ತಿಲ್ಲೆ :-)

chitra said...

ಹರೀಶ ,

ಗಣಪತಿಗೆ ಇಂಥಾ ಹಾಡು ಕೇಳ ಪರಿಸ್ಥಿತಿ ತಂದಿದ್ದಕ್ಕಾಗಿ ನಾವೇ ನಮ್ಮ ಕೆನ್ನೆಗೆರಡು ಹೊಡ್ಕಳವು ಅಷ್ಟೆ !!

shivu K said...

ಚಿತ್ರ ಮೇಡಮ್,

ಗಣಪತಿ ಹಬ್ಬದ ಬಗೆಗೆ ಸುಂದರ ವಿವರಣೆ ಕೊಟ್ಟಿದ್ದೀರಿ...
ಸುನಾಥ್ ಸಾರ್ ಹೇಳಿದ ಹಾಗೆ ಪುಣೆ ವಿಶೇಷ ಹಬ್ಬಗಳ ಬಗ್ಗೆ ಬರೆಯಿರಿ....