September 28, 2008

ನವರಾತ್ರಿ

ಊರಿನಿಂದ ಅತ್ತೆ -ಮಾವ ನಮ್ಮನೆಗೆ ಬಂದು ಹತ್ತಿರ ಹತ್ತಿರ ತಿಂಗಳೇ ಆಗಿತ್ತು. ಮೊನ್ನೆ ಅವರು ಊರಿಗೆ ವಾಪಸಾದಾಗಿಂದ ಮನೆಯೆಲ್ಲ ಒಂಥರಾ ಭಣ ಭಣ. ಇಷ್ಟು ದಿನ ಸಂಜೆ ಮನೆಗೆ ಹೋದಮೇಲೆ ಸುದ್ದಿ ಹೇಳಲು , ಅಡುಗೆ ಮಾಡುವಾಗ ಸಲಹೆ ಕೇಳಲು ಅತ್ತೆ ಇರುತ್ತಿದ್ದರು. ಸಿರಿಗೆ ಹೋಮ್ ವರ್ಕ್ ಮುಗಿದಮೇಲೆ ಇಸ್ಫೀಟ್ ಆಡಲು ಅಜ್ಜ ಇರುತ್ತಿದ್ದರು . ಇನ್ನು ಮಹೇಶ್ ರಿಗೋ ಕ್ರಿಕೆಟ್ ನೋಡಲು ಕಂಪನಿ ಅವರಪ್ಪನದು. ನಿನ್ನೆ ಸಂಜೆ ನಮಗೆ ಬೇಜಾರೋ ಬೇಜಾರಾಗಿ ನಾವೇ ಮೂರು ಜನ ಇಸ್ಫೀಟ್ ಆಡಿದ್ದಾಯ್ತು.

ಅವರೇನೋ ನವರಾತ್ರಿಯ ತಯಾರಿಗಾಗಿ ಊರಿಗೆ ಹೋದರು . ನಾವು ಇಲ್ಲಿ ಊರಿನ ನವರಾತ್ರಿಯನ್ನು ನೆನಪಿಸಿಕೊಳ್ಳುತ್ತಾ ಕುಳಿತಿದ್ದೇವೆ. ನಮ್ಮ ಕಡೆ ನವರಾತ್ರಿಯನ್ನು ಈ ಕಡೆಯಷ್ಟು ದೊಡ್ಡದಾಗಿ ಆಚರಿಸುವುದಿಲ್ಲ . ಮೈಸೂರು- ಬೆಂಗಳೂರು ಕಡೆ ಗೊಂಬೆ ಕೂರಿಸಿ ಸಂಭ್ರಮಿಸಿದರೆ , ಒಳನಾಡುಗಳಲ್ಲಿ ಹೆಚ್ಚೇನೂ ಗಲಾಟೆಯಿಲ್ಲದ ಹಬ್ಬವಿದು. ಆದರೆ ಮೈಸೂರು ದಸರಾದ ವೈಭವವೇ ಬೇರೆ.ನಮ್ಮ ಮಲೆನಾಡ ಹಳ್ಳಿಗಳಲ್ಲಿ ಕೆಲವರು ಒಂಭತ್ತೂ ದಿನಗಳು ದೇವಿಯನ್ನು ಪ್ರತಿಷ್ಟಾಪಿಸಿ ಪೂಜಿಸಿದರೆ , ಕೆಲವರು ಮೂರು ದಿನಗಳು ಮಾತ್ರ ಇಡುತ್ತಾರೆ. ವಿಜಯ ದಶಮಿಯಂದು ಲಕ್ಷ್ಮಿ-ಸರಸ್ವತಿ ಇಬ್ಬರನ್ನೂ ಪೂಜಿಸುವುದು ನಮ್ಮಲ್ಲಿ ಇದೆ.ಹೀಗಾಗಿ ದಶಮಿಯಂದು ಪುಸ್ತಕಗಳನ್ನು ,ಚಿನ್ನದ ಆಭರಣಗಳನ್ನು ಪೂಜಿಸಿ ಆನಂತರ ಆ ಒಡವೆಗಳನ್ನು ಧರಿಸಿ , ಪೂಜೆಗಿಟ್ಟ ಪುಸ್ತಕಗಳನ್ನು ಓದುವ ಪದ್ಧತಿ ನಮ್ಮಲ್ಲಿತ್ತು . ಆ ದಿನ ಓದಿದ್ದು ಸೀದಾ ತಲೆಯೊಳಗೆ ಇಳಿದೇ ಬಿಡುತ್ತದೆ ಎಂಬ ನಂಬಿಕೆಯಿಂದ ತುಂಬಾ ಕಷ್ಟವೆನಿಸಿದ ವಿಷಯಗಳ ಪುಸ್ತಕಗಳನ್ನು ತಪ್ಪದೇ ಶಾರದೆಯ ಎದುರಿಟ್ಟು ಅದೊಂದು ದಿನ ಸ್ವಲ್ಪಹೊತ್ತು ಅತೀ ಶ್ರದ್ಧೆಯಿಂದ ಓದುತ್ತಿದ್ದೆವು. ಶಾಲೆಯಲ್ಲೂ ಸರಸ್ವತಿ ಪೂಜೆಯ ಸಂಭ್ರಮವಿರುತ್ತಿತ್ತು . ಹಿಂದಿನ ಸಂಜೆ ತೋಟಕ್ಕೆ ಹೋಗಿ ಗುಲಾಬಿ, ಬಿಳಿ, ನೀಲಿ, ಹಳದಿ , ಜಾಂಬಳಿ ಬಣ್ಣದ ಗೆಂಟಿಗೆ ( ಗೊರಟೆ) ಮೊಗ್ಗು ಕೊಯ್ದು, ಒತ್ತಾಗಿ ಮಾಲೆ / ದಂಡೆಗಳನ್ನು ಕಟ್ಟಿ ರಾತ್ರಿಯಿಡೀ ಮಾಡಿನ ಮೇಲಿಡುತ್ತಿದ್ದೆವು . ಮರುದಿನದ ಅಲಂಕಾರಕ್ಕೆಂದು ! ಜಡೆಗಿಂತ ಉದ್ದದ ಮಾಲೆಯನ್ನು ಮುಡಿದುಕೊಳ್ಳುವ ಸಡಗರ ನಮಗಿರುತ್ತಿತ್ತು. ಈಗ ಹೂ ಮುಡಿಯುವವರಿರಲಿ , ಹೂ ಮುಡಿಯುವಷ್ಟು ಜಡೆಯಿರುವವರೂ ಅಪರೂಪವಾಗಿಬಿಟ್ಟಿದ್ದಾರೆ !

ಪುಣೆಯಲ್ಲಿಯೂ ಈಗ ನವರಾತ್ರಿಯ ಸಂಭ್ರಮ ಕಾಲಿಡುತ್ತಿದೆ. ನಿಜವಾಗಿ ಹೇಳಬೇಕೆಂದರೆ ಇಲ್ಲಿ ಈ ಮೊದಲು ಈ ಹಬ್ಬ ಅಷ್ಟೇನೂ ದೊಡ್ಡದಾಗಿರಲಿಲ್ಲ . ಆದರೆ ಇತ್ತೀಚೆ , ಸಾರ್ವಜನಿಕ ಕಲ್ಕತ್ತಾದ ದುರ್ಗಾ ಪೂಜೆಯ, ಗುಜರಾತಿನ ’ದಾಂಡಿಯ” (ವಿಶಿಷ್ಟ ರೀತಿಯ ಕೋಲಾಟ ) ಹಾಗೂ ಗರ್ಬಾ ( ನವರಾತ್ರಿಯ ವಿಶೇಷ ಸಾಂಪ್ರದಾಯಿಕ ಗುಜರಾತೀ ನೃತ್ಯ) ದ ರುಚಿ ಎಲ್ಲ ಕಡೆಗೆ ಹಬ್ಬಿ ಬಿಟ್ಟಿದೆ. ಯುವಕ-ಯುವತಿಯರ ಸಡಗರವಂತೂ ಹೇಳಲಾರದಷ್ಟು. ಯುವಕ ಮಂಡಲಗಳಿಗೆ ಸುಗ್ಗಿ ! ಈಗಿನ್ನೂ ಗೋಕುಲಾಷ್ಟಮಿ , ಗಣಪತಿ ಹಬ್ಬಕ್ಕೆಂದು ಎತ್ತಿದ ಚಂದಾ ಮುಗಿಯುತ್ತಿದೆ, ಪುನಃ ನವರಾತ್ರಿಗೆಂದು ಚಂದಾ ವಸೂಲಿಗೆ ಹೊರಡಬಹುದೆಂಬ ಸಂತಸ. ಜನ ಸಾಮಾನ್ಯರಿಗೆ ಅವರವರ ತಿಂಗಳ ಬಜೆಟ್ ನಲ್ಲಿ ಖೋತಾದ ಸಂಕಟ ! ( ನಾನಂತೂ ಈ ಸಲ ನಿರ್ಧರಿಸಿದ್ದೇನೆ. ಮುಂದಿನ ವರ್ಷ ಶ್ರಾವಣ ಶುರುವಾಗುತ್ತಿದ್ದಂತೆ ನಾನೂ ವಂತಿಗೆ ಎತ್ತಲು ತಿರುಗುತ್ತೇನೆ. ವಿವಿಧ ಹಬ್ಬಗಳಿಗೆಂದು ಚಂದಾ ಕೇಳಲು ಬರುವವರಿಗೆ ಕೊಡಲೆಂದು ನಾನು ಮೊದಲು ಹಣ ಸಂಗ್ರಹಿಸಿಟ್ಟುಕೊಳ್ಳಬೇಕಲ್ಲವೆ? ಹೀಗಾಗಿ , ಚಂದಾಕ್ಕೆಂದು ವಂತಿಗೆ ! ಹೇಗಿದೆ ಐಡಿಯಾ? )
ಹೀಗೆ ಹಣ ಸಂಗ್ರಹಿಸಿದರೂ ಎಷ್ಟೋ ಮಂಡಳಗಳು ಈ ಮೊದಲು ಗಣಪತಿ ಕೂರಿಸಿದ ಮಂಟಪವನ್ನೇ ಮತ್ತೊಮ್ಮೆ ಬಳಸಿಕೊಂಡು ಅಥವಾ ಅದರಲ್ಲಿ ಅಲ್ಪ ಸ್ವಲ್ಪ ಬದಲಾವಣೆ ಮಾಡಿಕೊಂಡು ಅಲ್ಲಿಯೇ ದೇವಿಯನ್ನೂ ಕೂರಿಸುತ್ತಾರೆ ! ಬಡಾವಣೆಗಳಲ್ಲಿ ಸ್ವಲ್ಪ ಜಾಗವಿದ್ದೆಡೆ , ಕೆಲವೊಮ್ಮೆ ದೊಡ್ಡ ದೊಡ್ಡ ಹೌಸಿಂಗ್ ಸೊಸೈಟಿಗಳ ಅಂಗಳದಲ್ಲಿ " ದಾಂಡಿಯಾ " ಜೋರಾಗಿ ನಡೆಯುತ್ತದೆ. ಎಷ್ಟೋ ಸಲ ಸ್ಥಳೀಯ ರಾಜಕೀಯ ಮುಖಂಡರು ಇದನ್ನು ಆಯೋಜಿಸುತ್ತಾರೆ. ಸಂಜೆಯಾಗುತ್ತಿದ್ದಂತೆ ಶುರುವಾಗುವ ದಾಂಡಿಯಾಕ್ಕೆ ಕಳೆ ಕಟ್ಟುವುದು ಹರಯದ ಯುವಜನತೆ ಕಾಲಿಟ್ಟಾಗ. ಸಾಧಾರಣವಾಗಿ ಗುಜರಾತಿನ ಸಾಂಪ್ರದಾಯಿಕ ಶೈಲಿಯಲ್ಲಿ ಉಡುಗೆಗಳನ್ನು ತೊಟ್ಟು ಕಣಕ್ಕಿಳಿಯುವ ಹುಡುಗ-ಹುಡುಗಿಯರು ಸಂಗೀತಕ್ಕನುಗುಣವಾಗಿ ಹೆಜ್ಜೆ ಹಾಕುವ ಪರಿಗೆ ಬೆರಗಾಗಲೇ ಬೇಕು .ಮೈದಾನವೆಲ್ಲ ಹೋಳಿಹಬ್ಬದ ಬಣ್ಣದೋಕುಳಿಯಂತೆ ಕಾಣತೊಡಗುತ್ತದೆ . ಎಷ್ಟೋ ಸಲ ಮೈದಾನದಲ್ಲಿ ಹೆಜ್ಜೆಯೂರಲೂ ಜಾಗವಿಲ್ಲದಿದ್ದರೂ ಸಿಕ್ಕಷ್ಟೇ ಸಾಕು ಎಂದು ಅಷ್ಟರಲ್ಲೇ ಕಾಲೂರಿ ನಮ್ಮಲ್ಲಿ ಹೀಗೆ ಕುಣಿಯುವ ಜನರಿಗೇನೂ ಕಮ್ಮಿಯಿಲ್ಲ. ಹಾರುತ್ತಾ, ಕುಪ್ಪಳಿಸುತ್ತಾ ಕುಣಿಯುವ ಉತ್ಸಾಹಿಗಳು ನೋಡುಗರಲ್ಲೂ ಹುರುಪು ತುಂಬುತ್ತಾರೆ. ಕುಣಿಯುವವರಿಗೆ ಜಾತಿ, ವಯಸ್ಸು ಅಥವಾ ಲಿಂಗಭೇದವಿಲ್ಲ ! ಹೀಗೆ ಕುಣಿಯುವ ಅಭ್ಯಾಸವಿಲ್ಲದ್ದರಿಂದ ಬಂದ ಹೊಸತರಲ್ಲಿ ನೆರೆಹೊರೆಯವರು ಕರೆದಾಗ ಮುಜುಗರವೆನಿಸುತ್ತಿತ್ತು. ಆದರೆ ಇಲ್ಲೇ ಹುಟ್ಟಿ ಬೆಳೆದ ಮಗಳಿಗೆ ಕಂಪನಿ ಕೊಡಲೆಂದು ಕೆಲ ವರ್ಷಗಳಿಂದ ನಾನೂ ಹೆಜ್ಜೆ ಹಾಕ ತೊಡಗಿದ್ದೇನೆ. ಶುರು ಶುರುವಿಗೆ ಕೋಲಿನ ಬದಲು ಕೈಗೆ ಹೊಡೆದು ಕೊಂಡರೂ ಇತ್ತೀಚೆ ಸ್ವಲ್ಪ ಪರವಾಗಿಲ್ಲ !
ಕೆಲವು ದೊಡ್ಡ ದೊಡ್ಡ ಮಂಡಲಿಗಳು ’ ದಾಂಡಿಯಾ’ ಸ್ಪರ್ಧೆಯನ್ನೂ ನಡೆಸುತ್ತವೆ. ಅತ್ಯುತ್ತಮ ನೃತ್ಯಗಾತಿ , ನೃತ್ಯಗಾರ , ಉತ್ತಮವಾಗಿ ನರ್ತಿಸುವ ಜೋಡಿ ಇತ್ಯಾದಿ ವಿವಿಧ ಬಹುಮಾನಗಳನ್ನು ಹಂಚಿ ಧನ್ಯರಾಗುತ್ತಾರೆ. ಸ್ಥಳೀಯ ಟಿ ವಿ ಚಾನಲ್ ಗಳು ವಿಡಿಯೋ ಶೂಟ್ ಮಾಡಿ ಪ್ರಸಾರ ಮಾಡುತ್ತವೆ. ಬಹಳಷ್ಟು ಸಲ ದಾಂಡಿಯಾದ ಜೊತೆ , ಹೃದಯಗಳೂ ನರ್ತಿಸುತ್ತವೆ, ಹೊಸ ಪ್ರೀತಿ ಅರಳುತ್ತದೆ, ಗಾಢವಾಗುತ್ತದೆ. ಇಂಥದ್ದೇನಾದರೂ ಅಪ್ಪಿತಪ್ಪಿ ಕೇಬಲ್ ನಲ್ಲಿ ಪ್ರಸಾರವಾಗಿ ಮನೆಯವರ ಕಣ್ಣಿಗೆ ಬಿದ್ದು ಅವರು ನರ್ತಿಸುವುದೂ ಇದೆ . ಒಟ್ಟಿನಲ್ಲಿ ಹೇಳಬೇಕೆಂದರೆ , ಒಂಭತ್ತು ದಿನಗಳು ಒಂಥರಾ ಮಾಯಾಲೋಕವನ್ನು ಸೃಷ್ಟಿಸುತ್ತವೆ.

ಇನ್ನು ದಾಂಡಿಯಾ ನಡೆಯುವ ಸ್ಥಳದ ಅಕ್ಕಪಕ್ಕದವರಿಗೋ ಪ್ರಾಣಸಂಕಟ ! ಮಧ್ಯರಾತ್ರಿಯವರೆಗೂ ನಡೆಯುವ ಗಲಾಟೆಯಿಂದಾಗಿ ಒಂಭತ್ತು ದಿನಗಳೂ ಸರಿಯಾಗಿ ನಿದ್ರೆಯಿಲ್ಲ , ಮಕ್ಕಳಿಗೋ ಪರೀಕ್ಷೆಯಿದ್ದರೂ ಮೈಕಾಸುರನಿಂದಾಗಿ ಓದಲಾಗದು,ಜೊತೆಗೆ ಕುಣಿಯಲು ಹೋಗಬೇಕೆಂಬ ಸೆಳೆತ. ನನಗಂತೂ ಎಷ್ಟೋ ಸಲ ಆ ದೇವಿ, ಮಹಿಷಾಸುರನ ಬದಲು ಮೈಕಾಸುರನನ್ನು ಯಾಕೆ ಕೊಲ್ಲಲಿಲ್ಲ ಎಂದು ಸಿಟ್ಟು ಬರುತ್ತದೆ! ಹೀಗಿದ್ದರೂ ಕೆಲ ಸಮಯವಾದರೂ ದಿನ ನಿತ್ಯದ ಕೆಲಸದ ಒತ್ತಡ , ಬಾಕಿ ಟೆನ್ಷನ್ ಗಳನ್ನು ಮರೆಸಿ ಜನರಲ್ಲಿ ಜೀವನೋತ್ಸಾಹ ತುಂಬಿ ಕುಣಿಸುವ ನವರಾತ್ರಿಯ ಈ ಪರಿ ನಿಜಕ್ಕೂ ಖುಷಿ ತರುತ್ತದೆ.

5 comments:

sunaath said...

Realistic narration!
ಈ ಹಬ್ಬಗಳು ಖುಶಿಯ ಜೊತೆಗೆ ಸಂಕಟವನ್ನೂ ತರುತ್ತವೆ, ಅಲ್ಲವೆ?
ಚಿತ್ರಾ, ನೀವು ಹೇಳುವಂತೆ ಚಂದಾಕ್ಕಾಗಿ ಚಂದಾ ಎತ್ತುವದೇ ಈಗಿರುವ ಮಾರ್ಗ!

Lakshmi Shashidhar Chaitanya said...

chandaa ettuva idea chennaagide :-)

Harisha - ಹರೀಶ said...

ಈಗ ಆಸ್ಟ್ರೇಲಿಯಾದಾಲ್ಲಿರ ನನ್ ಫ್ರೆಂಡ್ ಒಬ್ಳು ಆರ್ಕುಟ್ಟಿನಲ್ಲಿ "ಧಾಂಡಿಯಾ ನೈಟ್" ಅಂತ ಆಲ್ಬಮ್ ಮಾಡಿ ಹಾಕಿದಿದ್ದ. ಅದೆಂತು ಅಂತ ಗೊತ್ತಾಗಿರಲ್ಲೆ. ಈ ಲೇಖನ ನೋಡಿದ್ಮೇಲೆ ಆಸ್ಟ್ರೇಲಿಯಾದಲ್ಲೂ ನವರಾತ್ರಿ ಆಚರಿಸ್ತ್ವಾ ಅಂತ ಆಶ್ಚರ್ಯ ಆಗ್ತಾ ಇದ್ದು. ಚಂದದ ಬರಹ

ಚಿತ್ರಾ said...

ಸುನಾಥ ಕಾಕಾ,

ನೀವಂದಿದ್ದು ನಿಜ.
ಮುಂದಿನ ವರ್ಷ ನಾನೆಷ್ಟು ಚಂದಾ ಎತ್ತ ಬಹುದು ಎಂದು ಯೋಚಿಸುತ್ತಿದ್ದೇನೆ :)

ಲಕ್ಷ್ಮಿ,
ಮೆಚ್ಚುಗೆಗೆ ಧನ್ಯವಾದಗಳು !
ಬರುತ್ತಿರಿ

ಹರೀಶ,
ನೋಡ್ತಾ ಇರು . ಇನ್ನೊಂದು ಸ್ವಲ್ಪ ವರ್ಷದಲ್ಲಿ ನಮ್ಮ ಹಬ್ಬಗಳು ಈ ಕ್ರಿಸ್ ಮಸ್ , ನ್ಯೂ ಇಯರ್ ಕಿಂತ ಹೆಚ್ಚು ಫೇಮಸ್ ಆಗ್ತು .

shivu.k said...

ಚಿತ್ರಾ ಮೇಡಮ್,

ಹಬ್ಬಗಳ ಬಗೆಗೆ ತುಂಬಾ ಚೆನ್ನಾದ ವಿವರಣೆ .....

ನನಗೆ ನವರಾತ್ರಿಯ ಹಬ್ಬಗಳ ಫೋಟೋ ತೆಗೆಯಬೇಕೆಂಬ ಆಸೆ ಸಾಧ್ಯವಾಗುತ್ತಿಲ್ಲ....