November 25, 2008

ಅಬ್ಬೆಯ ಇಂಗ್ಲಿಷ್ !

ನನ್ನ ಅಜ್ಜಿ ನಮಗಷ್ಟೇ ಅಲ್ಲದೇ ಇಡೀ ಊರಲ್ಲಿ ಎಲ್ಲರಿಗೂ ’ ಅಬ್ಬೆ " ಎಂದೇ ಪರಿಚಿತ. ಮಕ್ಕಳೆಲ್ಲ ಚೆನ್ನಾಗಿ ಕಲಿತು , ಬೇರೆ ಬೇರೆ ಊರುಗಳಲ್ಲಿ ಒಳ್ಳೊಳ್ಳೇ ಕೆಲಸದಲ್ಲಿದ್ದ ಬಗ್ಗೆ ಅವಳಿಗೆ ತುಂಬಾ ಹೆಮ್ಮೆ . ಹಾಗೇ ಇಂಗ್ಲಿಷ್ ವಾರ್ತೆ ಕೇಳುವ , ಇಂಗ್ಲಿಷ್ ಪೇಪರ್ ಓದಬಲ್ಲ ಮಕ್ಕಳಿರುವಾಗ ತಾನೂ ಅಷ್ಟಿಷ್ಟಾದರೂ ಇಂಗ್ಲಿಷ್ ಬಳಸದಿದ್ದರೆ ಹೇಗೆ ಎಂಬುದು ಅಬ್ಬೆಯ ಅನಿಸಿಕೆ. ಹೀಗಾಗಿ , ಅವಕಾಶ ಸಿಕ್ಕಿದಾಗೆಲ್ಲ ಇಂಗ್ಲಿಷ್ ಬಳಸುತ್ತಿದ್ದಳು. ಅವಳದೇ ರೀತಿಯಲ್ಲಿ ! ಅವಳ ಇಂಗ್ಲಿಷ್ ಸೃಷ್ಟಿಸಿದ ಕೆಲವು ಮರೆಯಲಾರದ ಪ್ರಸಂಗಗಳು ಇಲ್ಲಿವೆ.


ಪ್ರಸಂಗ ೧:
ಒಮ್ಮೆ ನೆಂಟರೊಬ್ಬರ ಮನೆ ಮದುವೆಗೆ ಹೋಗಿ ಬಂದ ಅಬ್ಬೆಯನ್ನು ಚಿಕ್ಕಮ್ಮ ಕೇಳಿದ್ಲು " ಆಯಿ , ಮದ್ವೆ ಕೂಸು ಹ್ಯಾಂಗಿದ್ಲೆ? "
ಅಬ್ಬೆಯ ಉತ್ತರ " ಮದ್ವೆ ಕೂಸಿನ ’ಪರ್ನಾಸಾಟಿ’ ರಾಶಿ ಚೊಲೋ ಇದ್ದು ನೋಡು । ಮಧುಕರಂಗೆ ಹೇಳಿ ಮಾಡಿಸಿದ ಹಾಂಗಿದ್ದು ಕೂಸು "

ಈ ’ ಪರ್ನಾಸಾಟಿ ’ ಏನೆಂದು ತಿಳಿಯದೇ ಜಗುಲಿಯಲ್ಲಿದ್ದ ನಾವೆಲ್ಲ ಮುಖ ಮುಖ ನೋಡಿ ಕೊಂಡೆವು . ಅಮ್ಮ ಕೇಳಿಯೇ ಬಿಟ್ಟಳು . " ಆಯೀ , ಅದೆಂತದೆ ಪರ್ನಾಸಾಟಿ ಅಂದ್ರೆ?
" ತಂಗೀ, ಅದೇ ನಿಂಗ ಎಲ್ಲ ಹದಾ ಮೈಕಟ್ಟಿದ್ದು ,ಬೆಳ್ಳಗೆ ಚೆಂದಕಿದ್ರೆ ಹೇಳ್ತ್ರಲೆ, ಚೊಲೊ ಪರ್ನಾಸಾಟಿ ಹೇಳಿ ..."
" ಅಯ್ಯ , ಆಯೀ, ಅದು ಪರ್ನಾಸಾಟಿ ಅಲ್ದೆ ಮಾರಾಯ್ತಿ , ಪರ್ಸನಾಲಿಟಿ ’ ಚಿಕ್ಕಮ್ಮ ಹೇಳಿದಾಗ , ಜಗುಲಿಯಲ್ಲಿ ಒಮ್ಮೆಲೆ ನಗೆಯ ಅಲೆ ಎದ್ದಿತು .
’ ನಿಂಗ ಎಂತೆಂತ ಹೇಳ್ತ್ರನ ಯಂಗೆಂತ ಗೊತ್ತಾಗ್ತೆ ’ ಎಂದು ಗೊಣಗುತ್ತಾ ಅಬ್ಬೆ ಒಳಗೆ ಹೋದಳು.

ಪ್ರಸಂಗ ೨;
ರಜೆಯಲ್ಲಿ ಅಜ್ಜನ ಮನೆಗೆ ಹೋದಾಗೊಮ್ಮೆ, ಸುದ್ದಿ ಹೇಳುತ್ತಿದ್ದಾಗ ಅಬ್ಬೆ " ಮಗಾ, ಈ ಸಲವಾ ಮಾಣಿ ಎರಡು ಮೂರು ಗನಾ ಸೀರೆ ತಗಬಂದು ಕೊಟ್ಟಿದ್ದಾ. ಹೋಪಲ್ಲಿ ಸೀರೆ. ಅದರ ಸಂತಿಗೇಯಾ ರಯಕೆ ಹೊಲಿಸಲೆ ಹೇಳಿ ಅದೆಂತದೋ ’ ಪೆಟಿಕೋಟ್ ’ ವಾರು ( ಬಟ್ಟೆ) ತಂದು ಕೊಟ್ಟಿದ್ದಾ. ರಾಶಿ ದುಬಾರಿ ಆಗಿಕ್ಕು .ಚೊಲೋ ಇದ್ದು ’ ಎಂದಳು.
ನಾನೊಮ್ಮೆ ಕಕ್ಕಾಬಿಕ್ಕಿ. ಇದ್ಯಾವ ಪೆಟಿಕೋಟ್ ಬಟ್ಟೆನಪ್ಪಾ, ? ಅದೂ ಮಾವ ಅಬ್ಬೆಯ ರವಿಕೆಗೆಂದು ಪೆಟಿಕೋಟ್ ಬಟ್ಟೆ ಯಾಕೆ ತರ್ತಾನೆ ಎಂದು ನನ್ನ ತಲೆ ಬಿಸಿ.
ಅಷ್ಟರಲ್ಲಿ ಅಬ್ಬೆ ಒಳಗೆ ಹೋಗಿ ಹೊಸ ಸೀರೆಗಳನ್ನೂ , ಅದರ ಜೊತೆಗೇ ’ ಇದೇಯಾ ನೋಡು ಆನು ಹೇಳಿದ್ದು ಹೊಸಾ ಪೆಟಿಕೋಟ್ ವಾರು , ಎಷ್ಟು ಚೊಲೋ ಇದ್ದು " ಎಂದು ಅವಳ ಕೈಯಲ್ಲಿದ್ದ ಹೊಸ " ಟೆರಿಕಾಟ್ ’ ಬ್ಲೌಸ್ ಪೀಸ್ ತೋರಿಸಿದಾಗ ನನಗೆ ನಗುವೇ ನಗು .
-------------------------------------------------------------------------------
ಪ್ರಸಂಗ ೩ :
" ತಂಗೀ , ಮ್ಯಾಲಿನ ಕೇರಿ ಶಾರದೆ ಮನೆಲಿ ಈ ಸಲ ಅಕ್ಟೋಬರ್ ನ ಹತ್ರೆ ಒಂದು ಜರ್ಸಿ ದನ ತಗಂಜ್ವಡ . ರಾಶಿ ಚೊಲೋ ಇದ್ದಡ. ಹೊತ್ತಿಗೆ ೫ ಲೀಟರ್ ಹಾಲು ಕೊಡ್ತಡ ನೋಡು. ನಮ್ಮಲ್ಲೂ ತಗಳ್ಳಾಗಿತ್ತೇನ ! ಒಂದು ದಿವ್ಸ ಹೋಗಿ ನೋಡ್ಕ್ಯ ಬರವು ಹ್ಯಾಂಗಿದ್ದು ಹೇಳಿ"
" ಅಬ್ಬೆ, ನೀನು ಕಳೆದ ತಿಂಗಳು ಅವರ ಮನಿಗೆ ಹೋದಾಗ ನೋಡ್ಕ್ಯಂಡು ಬಂಜಿಲ್ಯ? " ನನ್ನ ಪ್ರಶ್ನೆ
" ಇಲ್ಲ್ಯೆ ಶಣಾ , ಮೊನ್ನೆ ಮೊನ್ನೆ ತಗಂಜ್ವಡ "
" ಅರೆ ಅಬ್ಬೆ , ಅಕ್ಟೋಬರದಲ್ಲಿ ತಗಂಡಿದ್ದು ಹೇಳ್ತೆ , ಅಕ್ಟೋಬರ್ ಇನ್ನೂ ಬಂಜಿಲ್ಲೆ . ಈಗಿನ್ನೂ ಮೇ ತಿಂಗಳಲೆ? "
ಅಷ್ಟರಲ್ಲಿ ಅಲ್ಲಿಗೆ ಬಂದ ಮಾವ " ಅಕ್ಟೊಬರ್ ಅಲ್ದೆ ಮಾರಾಯ್ತಿ , ಆ ಹುಲೇಕಲ್ ಸಾಬ " ಅಕ್ಬರ್" ನ ಹತ್ರೆ ಆ ದನ ತಗಂಡಿದ್ದು ! ಆಯಿ ಬಾಯಲ್ಲಿ ಅಕ್ಬರ ಅಕ್ಟೋಬರ ಆಗಿಗಿದ " ಎಂದು ನಗುತ್ತಾ ಹೇಳಿದ ।

"ಎಂತ ಆತ ತಮಾ , ಅಕ್ಟೊಬರ -ಅಕ್ಬರ ಎಲ್ಲ ಒಂದೇಯಾ ಯಂಗಕ್ಕೆ" ಎಂದು ಅಬ್ಬೆ ಅಲ್ಲಿಂದ ಎದ್ದರೆ ನಾನು ನಕ್ಕಿದ್ದೇ ನಕ್ಕಿದ್ದು ।

-----------------------------------------------------------------------------

ಇನ್ನೂ ಮಜಾ ಅಂದರೆ, ಅಬ್ಬೆಯ ಗೆಳತಿ ಆಚೆ ಮನೆ ಪಾರ್ವತಕ್ಕ ಅಬ್ಬೆಯ ಇಂಗ್ಲಿಷನ್ನೇ ಕಲಿತು , ಮನೆಯಲ್ಲಿ ಬಳಸುತ್ತಿದ್ದುದಷ್ಟೇ ಅಲ್ಲ , ಮಕ್ಕಳ್ಯಾರಾದರೂ " ಆಯೀ, ಈ ನಮನಿ ತಪ್ಪು ತಪ್ಪು ಇಂಗ್ಲಿಷ್ ಎಲ್ಲಿಂದ ಕಲ್ತ್ಗಬಂದ್ಯೆ ? "ಎಂದರೆ ಮುಗೀತು , " ಹೌದಾ, ನಿಂಗಕ್ಕೆಲ್ಲ ಆನು ತಪ್ಪು ತಪ್ಪು ಮಾತಾಡ್ತಿ ಹೇಳೇ ಕಾಣ್ತು ಯಾವಾಗ್ಲೂವ। ಆನು ನಾಗವೇಣತ್ಗೆ ಹತ್ರೆ ಕಲ್ತಿದ್ದಿ। ಅದರ ಮಕ್ಕ ಎಲ್ಲ ಅಷ್ಟೆಲ್ಲ ಕಲ್ತಿದ್ದ , ನಾಗವೇಣತ್ಗೆ ತಪ್ಪು ಮಾತಾಡ್ತ ಹಂಗಾರೆ? " ಎಂದು ಪ್ರಶ್ನೆ ಎಸೆದು ಒಳಗೆ ಹೋಗುತ್ತಿದ್ದುದು .

ಇವರಿಬ್ಬರ ಇಂಗ್ಲಿಷ್ ಕೇಳಿ ಮನೆಯವರಿಗೆ ಮನರಂಜನೆ ಸಿಕ್ಕುತ್ತಿದ್ದುದಂತೂ ಸುಳ್ಳಲ್ಲ !

9 comments:

ಶಾಂತಲಾ ಭಂಡಿ said...

ಚಿತ್ರಾ...
ಚೆನಾಗಿದ್ದು. ನಕ್ಕೂ ನಕ್ಕೂ ಸಾಕಾತು. :-)
ನಿರೂಪಣೆಯೂ ಚಂದ.
ಥ್ಯಾಂಕ್ಸ್ , ಇಷ್ಟೆಲ್ಲ ನಗ್ಸಿದ್ದಕ್ಕೆ :-)

ಸಿಮೆಂಟು ಮರಳಿನ ಮಧ್ಯೆ said...

ರಾಶಿ ಚೊಲೊ ಇದ್ದು, ನೆಗಿ ತಡಕಂಬ್ಲೆ ಆಜಿಲ್ಲೆ...!!

ಸುಶ್ರುತ ದೊಡ್ಡೇರಿ said...

ಹಹಹಾ! ಒಳ್ಳೇ ಮಜಾ ಇದ್ದು. :D

Lakshmi S said...

ಸಿಕ್ಕಾಪಟ್ಟೆ ನಗು ಬಂತು ! :D

ಚಿತ್ರಾ said...

ಶಾಂತಲಾ,
ಸುಮಾರು ದಿನಗಳ ಮೇಲೆ ನಿನ್ನ ಕಾಮೆಂಟ್ ನೋಡಿ ಖುಷಿಯಾತು. ಬರ್ತಾ ಇರು.

ಪ್ರಕಾಶ್,ಸುಶ್ರುತ, ಲಕ್ಷ್ಮಿ,

ತುಂಬಾ ಥ್ಯಾಂಕ್ಸ್. ಹೀಗೆ ಬರ್ತಾ ಇರಿ.

ಸುಧೇಶ್ ಶೆಟ್ಟಿ said...

ಹ್ಹಿ ಹ್ಹಿ ಹ್ಹಿ....
ತು೦ಬಾ ಚೆನ್ನಾಗಿತ್ತು.

Harish - ಹರೀಶ said...

ಹೋಯ್ ಚಿತ್ರಕ್ಕಾ, ಕಾಮಿಡಿ ಬ್ಲಾಗ್ ಶುರು ಮಾಡ್ತ್ಯ ಎಂತು? ಬಿದ್ದು ಬಿದ್ದು ನಗುವ್ಹಂಗಾಜು :-)

ಅಕ್ಬರ್-ಅಕ್ಟೋಬರ್ ಅಂತೂ ಸೂಪರ್

ಚಿತ್ರಾ said...

ಸುಧೇಶ್,
ಪ್ರತಿಕ್ರಿಯೆಗೆ ಧನ್ಯವಾದಗಳು.

ಹರೀಶ,
ಹಂ... ನಿನ್ನ ಐಡಿಯಾ ಏನೋ ಚೆನಾಗಿದ್ದು. ನೋಡನ , ಎಷ್ಟು ಕಾಮೆದಿ ಬರಿಲಕ್ಕು ಹೇಳಿ !

shivu K said...

ಚಿತ್ರಾ ಮೇಡಮ್,

ಭಾರಿ ಮಜಾ ಕೊಡುತ್ರೀ....ನಿಮ್ಮ ಅಬ್ಬೇ ಇಂಗ್ಲೀಷು...

ಪರ್ನಾಸಾಟಿ.....ಟೇರಿಕಾಟ್ ಬ್ಲೋಸ್ ಪೀಸ್....ಅಕ್ಟೋಬರ್ -ಅಕ್ಬರ ಆಗಿದ್ದು....

very good keep it.