February 7, 2009

ಮುದ್ದು ಮಾತುಗಳು -೩

ಬಹಳ ವರ್ಷಗಳ ಹಿಂದಿನ ಮಾತು !

ನಾನಾಗ ತುಂಬು ಗರ್ಭಿಣಿ. ಚಿಕ್ಕಮ್ಮನ ಮನೆಯಲ್ಲಿ ಕೆಲದಿನಗಳ ಕಾಲ ಉಳಿದುಕೊಂಡಿದ್ದೆ. ಚಿಕ್ಕಮ್ಮನ ಕಿರಿಮಗಳು ಆಶಾಳಿಗೆ ಆಗಿನ್ನೂ ೩ ವರ್ಷ ತುಂಬಿತ್ತಷ್ಟೇ . ಅವಳಮ್ಮ ಹುಟ್ಟಿದ ಹಬ್ಬಕ್ಕೆ ಅವಳಿಗೆ ಉಡುಗೊರೆ ಯಾಗಿ ಕೊಟ್ಟ ಚಿನ್ನದ ಬಳೆಗಳನ್ನು ಹಾಕಿಕೊಂಡು ಮನೆಯಿಡೀ ಹೆಮ್ಮೆಯಿಂದ ತಿರುಗುತ್ತಿದ್ದಳು.

’ ಚಿತ್ರಕ್ಕಾ , ನೋಡು ನಂಗೆ ಅಮ್ಮ ಚೆಂದ ಬಳೆ ಕೊಡಿಸಿದಾಳೆ ! " ಎಂದು ಕಣ್ಣಲ್ಲಿ ಹೊಳಪು ತುಂಬಿಕೊಂಡು ಮುದ್ದು ಮುದ್ದಾಗಿ ಹೇಳಿದವಳನ್ನು ಕಂಡು ನಂಗೆ ಕೀಟಲೆ ಮಾಡಬೇಕೆನಿಸಿತು .

" ಅರೇ ಪುಟ್ಟಿ ಎಷ್ಟು ಚೆನಾಗಿದ್ಯೇ ಬಳೆ ! ನಂಗೆ ಪಾಪು ಹುಟ್ಟತ್ತಲ್ಲಾ , ಅದಕ್ಕೆ ಒಂದು ಬಳೆ ಕೊಡ್ತೀಯಾ ? ’ ಎಂದು ಕೇಳಿದೆ.ಒಂದು ನಿಮಿಷ ಸುಮ್ಮನೇ ನನ್ನ ಮುಖ ನೋಡಿದವಳು , " ಆಯ್ತು ಚಿತ್ರಕ್ಕಾ , ಒಂದು ಬಳೆ ಕೊಡ್ತೀನಿ ನಿನ್ನ ಪಾಪೂಗೆ " ಎಂದು ನುಡಿದು ಬಳೆ ಸವರಿಕೊಳ್ಳುತ್ತಾ ಹೊರಗೆ ಆಡಲು ಹೋದಳು !

ನಾನು ’ ಚಿಕ್ಕಮ್ಮಾ , ನೋಡು ನಿನ್ನ ಮಗಳು ಎಷ್ಟು ಒಳ್ಳೆ ಹುಡುಗಿ . ಹೊಸಾ ಬಳೆ ಕೊಡ್ತೀಯಾ ಅಂದಿದ್ದಕ್ಕೆ ’ ಹೂಂ’ ಅಂದ್ಲು ಕಣೇ ಪಾಪ ’ ಅಂತೆಲ್ಲಾ ಹೊಗಳುತ್ತಿದ್ದೆ.

ಸ್ವಲ್ಪ ಹೊತ್ತಲ್ಲೇ , ಒಳಗೆ ಬಂದು ಸಪ್ಪೆ ಮುಖ ಹಾಕಿಕೊಂಡು ನನ್ನ ಪಕ್ಕ ಬಂದು ಕುಳಿತ ಆಶಾಳನ್ನು ನೋಡಿ ’ ಏನಾಯ್ತೇ ಚಿನ್ನೂ ? ಯಾಕೇ ಹೀಗಿದೀಯಾ? " ಅಂತ ವಿಚಾರಿಸಿದರೆ ,
" ಚಿತ್ರಕ್ಕಾ , ಮತ್ತೆ, ನಿಂಗೆ ಎರಡು ಪಾಪು ಹುಟ್ಟಿಬಿಟ್ಟರೆ ? ನಂದು ಎರಡೂ ಬಳೆ ಕೊಟ್ಟು ಬಿಡಬೇಕಾ ?" ಎಂದು ಕೇಳಿದವಳ ಕಣ್ಣಲ್ಲಿ ಸಣ್ಣಗೆ ನೀರಾಡುತ್ತಿತ್ತು !

’ ಅಯ್ಯೋ, ನನ್ನ ಮುದ್ದೂ’ ಎಂದು ಅವಳನ್ನು ಅಪ್ಪಿಕೊಂಡು ಮುತ್ತಿಡುವಾಗ ನನ್ನ ಕಣ್ಣಲ್ಲೂ ನೀರು .

18 comments:

shivu.k said...

ಚಿತ್ರಾ ಮೇಡಮ್,

ನಿಜಕ್ಕೂ ಪುಟ್ಟ ಸಂತೋಷಗಳೆಂದರೆ ಇವೇ ಅಲ್ಲವೇ! ಆನಂದ ಭಾಷ್ಪ ತರಿಸುವ ಇಂಥವು ಆಗಾಗ ನಮ್ಮ ಜೀವನದ್ದಲ್ಲಿ ಬೇಕು.... ಬರಹ ಚಿಕ್ಕದಾಗಿದ್ದರೂ ಮನದೊಳಗೆ ಖುಷಿಯ ಮಿಂಚು !

Ittigecement said...

ಚಿತ್ರಾ...

ತುಂಬಾ ಹ್ರದಯ ಸ್ಪರ್ಷಿ ಘಟನೆ...

ನನಗಂತೂ ಮುಗ್ಧತನವೆಂದರೆ ಎಲ್ಲಿಲ್ಲದ ಖುಷಿ...

ನಿಮ್ಮಲ್ಲೂ ಮಗುವಿನ ಭಾವನೆ ಇದ್ದಿದ್ದರಿಂದ ಹಾಗಾಯಿತು...

ನಮಗೂ ಸಂತೋಷ ಉಣಿಸಿದ್ದಕ್ಕೆ

ಧನ್ಯವಾದಗಳು..

ತೇಜಸ್ವಿನಿ ಹೆಗಡೆ said...

ಚಿತ್ರಕ್ಕ,

ಕಡಿಗೆ ಸಿರಿಗೆ ಎರಡು ಬಳೆ ಸಿಕ್ಕೊದ್ದೋ ಇಲ್ಯೋ ಹೇಳು ಮತ್ತೆ..:) ಮುದ್ದು ಆಶಾಗೆ ಎಷ್ಟೂ ವರ್ಷ ಈಗ?

ಸುಧೇಶ್ ಶೆಟ್ಟಿ said...

ಮಕ್ಕಳ ಮುಗ್ಧತನ ಎಷ್ಟು ಚೆನ್ನಾಗಿರುತ್ತದೆ. ತು೦ಬಾ ಹೃದಯ ಸ್ಪರ್ಶಿಯಾಗಿತ್ತು ಚಿತ್ರಕ್ಕ. ಇದನ್ನು ಹ೦ಚಿಕೊ೦ಡಿದ್ದಕ್ಕೆ ಧನ್ಯವಾದಗಳು.

ಚಿತ್ರಾ said...

ನಿಜ ಶಿವು,
ಇಂಥ ಎಷ್ಟೋ ಪುಟ್ಟ ಪುಟ್ಟ ಘಟನೆಗಳು ಜೀವನದಲ್ಲಿ ಅದೆಷ್ಟು ಖುಷಿ ತುಂಬುತ್ತವೆ !
ಧನ್ಯವಾದಗಳು .

ಪ್ರಕಾಶ್ ,
ನಮ್ಮೆಲ್ಲರಲ್ಲೂ ಒಂದು ಪುಟ್ಟ ಮಗು ಆಡಗಿರುತ್ತದೆ ಅಲ್ಲವೆ ? ಅದನ್ನು ಆಗೀಗಲಾದರೂ ಆಡಲು ಬಿಟ್ಟರೆ ,ಸಂತೋಷವಾಗಿರಲು ಸಾಧ್ಯ ಎನ್ನುವುದು ನನ್ನ ಅಭಿಪ್ರಾಯ . ಏನಂತೀರಾ?

ತೇಜೂ ,
ಸಿರಿಗೆ ಎರಡು ಬಳೆ ಸಿಕ್ಕಿದ್ದು . ಅವಳ ಅಜ್ಜ-ಅಜ್ಜಿ ಮಾಡಿಸಿ ಕೊಟ್ಟಿದ್ದ. ಆಶಾ ಪುಟ್ಟಿ ಪ್ರಾಮಾಣಿಕವಾಗಿ ಒಂದು ಬಳೆ ಕೊಡಲೆ ಬಂದರೂ ಕೂಡ , ಸಿರಿ ತಗಂಡಿದ್ದಿಲ್ಲೆ ! ತನ್ನ ಪ್ರೀತಿಯ ಆಶಕ್ಕಂಗೆ ಒಂದೇ ಬಳೆ ಆಗ್ತು ಅಂತ ! :)
ಆಶಾಗೆ ಈಗ ೧೭ ವರ್ಷ .ಆದರೂ ಸ್ವಭಾವದಲ್ಲಿ ಮಾತ್ರ ಇನ್ನೂ ಅದೇ ಮುಗ್ಧತನ ಇದ್ದು .

ಸುಧೇಶ್,

ಮುಗ್ಧತನ ಇರುವುದರಿಂದಲೇ ಮಕ್ಕಳು ಮುದ್ದಾಗಿರುತ್ತಾರಂತೆ .
ಮೆಚ್ಚುಗೆಗೆ ಧನ್ಯವಾದಗಳು !

sunaath said...

ಉಲ್ಲಾಸ ತುಂಬುವ ಲೇಖನ.

ಪೂರ್ಣಿಮಾ ಭಟ್ಟ, ಸಣ್ಣಕೇರಿ said...

ಚಿತ್ರಾ,
ಮಕ್ಕಳ ಮುಗ್ಢತೆ ನೋಡಿ ನಿಜಕ್ಕೂ ಮುದ್ದು ಉಕ್ಕಿ ಬರ್ತು ಅಲ್ದ? ಚೆನ್ನಗಿ ಕಟ್ಟಿ ಕೊಟ್ಟಿದ್ರಿ ಘಟನೆಯನ್ನು..

ಶಿವಪ್ರಕಾಶ್ said...

Nice article madam.

Harisha - ಹರೀಶ said...

:-)

Anonymous said...

Please read and participate

http://thepinkchaddicampaign.blogspot.com/

PARAANJAPE K.N. said...

ಚಿತ್ರಾ ಮೇಡಂ
ನಿಮ್ಮ ಬರಹದಲ್ಲಿರುವ ಆಪ್ತತೆ ಮತ್ತು ಮುಗ್ಧತೆ ಇಷ್ಟವಾಗುತ್ತದೆ.
ಮಕ್ಕಳ ಮನಸ್ಸು ಎಷ್ಟು ಅಮಾಯಕ ಮತ್ತು ಮುಗ್ಧ ಅಲ್ಲವೇ??
ನನ್ನ ಬ್ಲಾಗಿಗೆ ಭೇಟಿ ಕೊಟ್ಟು ಪ್ರತಿಕ್ರಿಯೆ ನೀಡಿದ್ದಕ್ಕೆ ಅಭಿನ೦ದನೆ
ಗಳು. ಹೊಸ ಲೇಖನವಿದೆ. ನೋಡಿದಿರಾ ? ಇಲ್ಲವಾದಲ್ಲಿ ನೋಡಿ. ನನ್ನ ಬ್ಲಾಗನ್ನು ನಿಮ್ಮ ಬ್ಲಾಗ್ ರೋಲಿಗೆ ಸೇರಿಸಿ ಕೊ೦ಡರೆ ಧನ್ಯ.

Shankar Prasad ಶಂಕರ ಪ್ರಸಾದ said...

೨ ಪಪೂಗಳಿಗೂ ಕೊಡುವ ಮನಸ್ಸು,
ತನ್ನ ನೆಚ್ಚಿನ ಬಲೆ ತನಗೆ ಉಳಿದೀತೇ ಎಂಬ ಧಾವಂತ.
ಮುಗ್ಧ ಮನಸ್ಸು, ಇದೆ..
ಬಹಳ ಟಚಿಂಗ್ ಆಗಿ ಇದೆ ಈ ಲೇಖನ.
ಕಟ್ಟೆ ಶಂಕ್ರ

ಶಾಂತಲಾ ಭಂಡಿ (ಸನ್ನಿಧಿ) said...

ಚಿತ್ರಾ...
ಚೆಂದದ ಬರಹ.
ಇಷ್ಟು ಮಾತ್ರ ಹೇಳಬಲ್ಲೆ...ನನಗಂತೂ ಮಕ್ಕಳು ತುಂಬ ಇಷ್ಟ, ಹಾಗೆಯೇ ಈ ಬರಹ ಕೂಡ.

ಮನಸ್ವಿ said...

ಹ್ಮ್... :-)

ಚಿತ್ರಾ said...

ಸುನಾಥ್ ಕಾಕಾ,
ಮಕ್ಕಳಿದ್ದಲ್ಲಿ ಉಲ್ಲಾಸ ತುಂಬಿಕೊಂಡೇ ಇರುತ್ತದೆ ಅಲ್ಲವೆ? ಮೆಚ್ಚುಗೆಗೆ ಧನ್ಯವಾದಗಳು .

ಪೂರ್ಣಿಮಾ, ಶಿವಪ್ರಕಾಶ್,
ನನ್ನ ಬ್ಲಾಗಿಗೆ ಸ್ವಾಗತ. ಮೆಚ್ಚಿದ್ದಕ್ಕೆ ಧನ್ಯವಾದಗಳು. ಬರುತ್ತಿರಿ.

ಹರೀಶ ...
ಎಲ್ಲಿದ್ದೆ ಮಾರಾಯ ನೀನು ? ಸುಮಾರು ದಿನದಿಂದ ಪತ್ತೆನೇ ಇಲ್ಲೆ? ಖುಶಿಯಾತು ನೋಡಿ. ಬರುತ್ತಾ ಇರು .

ಪರಾಂಜಪೆಯವರೇ ,
ಮೆಚ್ಚುಗೆಗೆ ಧನ್ಯವಾದಗಳು. ಮಕ್ಕಳೇ ಹಾಗಲ್ಲವೆ? ಅವರ ಮುಗ್ಧತೆಯೇ ಎಲ್ಲರನ್ನು ಸೆಳೆಯುವುದು .
ನಿಮ್ಮ ಬ್ಲಾಗ್ ಸಹ ಚೆನ್ನಾಗಿದೆ. ಚೆಂದವಾಗಿ ಬರೆಯುತ್ತೀರಿ.
ಹೊಸ ಲೇಖನ ಇನ್ನೂ ಓದಿಲ್ಲ. ಬರುತ್ತೇನೆ ಖಂಡಿತ .ನಿಮ್ಮ ಬ್ಲಾಗನ್ನು ಪಟ್ಟಿಗೆ ಸೇರಿಸುತ್ತಿದ್ದೇನೆ.

ಕಟ್ಟೆ ಶಂಕರರೇ,
ಧನ್ಯವಾದಗಳು. ತನ್ನ ಮೆಚ್ಚಿನ ವಸ್ತುವನ್ನು ತನಗೇ ಉಳಿಸಿ ಕೊಳ್ಳಬೇಕೆಂದಿದ್ದರೂ ಪ್ರೀತಿ ಪಾತ್ರರಿಗೆ ಕೊಡಲು ಒಪ್ಪುವ ಮನಸ್ಸು ಬಹಳ ಕಮ್ಮಿ ಅಲ್ಲವೆ?
ಬರುತ್ತಿರಿ

ಮನಸ್ವಿ,
ಧನ್ಯವಾದಗಳು

ಚಿತ್ರಾ said...

ಶಾಂತಲಾ ,
ಎಷ್ಟು ದಿನಗಳ ನಂತರ ನಿನ್ನ ಭೇಟಿ !!
ರಾಶಿ ಖುಶಿ ಆತು ನಿನ್ನ ಕಾಮೆಂಟ್ ನೋಡಿ !
ಮೆಚ್ಚಿದ್ದಕ್ಕೆ ಧನ್ಯವಾದಗಳು. ಬರ್ತಾ ಇರು ಮಾರಾಯ್ತಿ.

Umesh Balikai said...

ಓದುತ್ತಿದ್ದ ಹಾಗೇ ಕಣ್ಣಲ್ಲಿ ನೀರು ಬಂದಿದ್ದು ಗೊತ್ತಾಗಲೇ ಇಲ್ಲ.. ಮನಸ್ಸು ತುಂಬಿ ಬಂತು ಆ ಪುಟ್ಟ ಹುಡುಗಿ ಮುಗ್ದತೆಬಗ್ಗೆ ಕೇಳಿ.

ಚಿತ್ರಾ said...

ಉಮಿ,
ಮೆಚ್ಚಿದ್ದಕ್ಕೆ ತುಂಬಾ ಥ್ಯಾಂಕ್ಸ್ ! ಹಾಗೆ ಅಲ್ಲವಾ? ಪುಟ್ಟಪುಟ್ಟ ಮಕ್ಕಳು ಕೆಲವೊಮ್ಮೆ ತಮ್ಮ ನಿಶ್ಕಲ್ಮಷ ಮನಸು ಮುಗ್ಧ ಮಾತುಗಳಿಂದ ದೊಡ್ಡವರನ್ನು ಅಳಿಸಿಬಿಡುತ್ತಾರೆ.