June 11, 2009

ಮರಳಿ ಗೂಡಿಗೆ ....

ತಿಂಗಳುಗಳೇ ಕಳೆದವು ನನ್ನ ಬ್ಲಾಗ್ ನತ್ತ ಕಣ್ಣು ಹಾಯಿಸಿ! ಬೇಸಿಗೆಯಲ್ಲವೆ? ಹೊಳೆ ಸ್ವಲ್ಪ ಸೊರಗಿ ಹೋಗಿದೆ.
ಅಮೇರಿಕೆಯಲ್ಲಿ ವಿಸ್ಮಯಾಳನ್ನು ಅಗಲಿ ಬರುವಾಗ ನನ್ನ ಕರುಳಕುಡಿಯನ್ನೇ ಬಿಟ್ಟು ಬಂದಷ್ಟು ಸಂಕಟ ! ವಿಮಾನ ನಿಲ್ದಾಣದಲ್ಲಿ ಕಣ್ಣೀರು ಉಕ್ಕಿ ಹರಿಯಬಾರದೆಂದು , ಮನಸ್ಸು ಗಟ್ಟಿ ಮಾಡಿ, ಅವಳನ್ನೊಮ್ಮೆ ಎತ್ತಿಮುತ್ತಿಡಬೇಕೆಂಬ ಬಯಕೆಯನ್ನು ಹೇಗೋ ತಡೆದುಕೊಂಡು ತಿರುಗಿ ನೋಡದೇ ಬಂದುಬಿಟ್ಟಿದ್ದೆ !ಪ್ರಯಾಣದುದ್ದಕ್ಕೂ ಕಣ್ಣು ಮುಚ್ಚಿದೊಡನೆ ಆ ಮುದ್ದುಕೂಸಿನದೇ ಮುಖ ಕಾಡಿದ್ದು ಸುಳ್ಳಲ್ಲ ! ಹೀಗೇ ಬಾಡಿದ ಮನದಿಂದ ಮುಂಬಯಿ ತಲುಪಿದ ಮರುದಿನವೇ, ಇನ್ನೊಬ್ಬ ತಮ್ಮನ ಪತ್ನಿ ಆಶಾ ’ ಅತ್ತಿಗೆ , ಬೇಜಾರು ಮಾಡಿಕೊಳ್ಳಬೇಡ ತೊಗೋ ’ ಎಂದು ಕೈಯಲ್ಲಿ ಮತ್ತೊಂದು ಕೂಸನ್ನಿಟ್ಟಳು ! ಸಿರಿಯನ್ನು ಬಿಟ್ಟರೆ, ಹುಟ್ಟಿದಕೂಡಲೇ ನಾನು ಎತ್ತಿಕೊಂಡ ಮೊದಲ ಮಗು’ ಲಿಪಿ’ . ಪ್ರಥಮ್ ನಿಗಂತೂ ಪುಟ್ಟತಂಗಿಯನ್ನು ಎತ್ತಿಕೊಳ್ಳುವ, ಅವಳ ಪ್ರತಿ ಚರ್ಯೆಯನ್ನೂ ಗಮನಿಸಿ ಪ್ರಶ್ನೆ ಕೇಳುವ ಕುತೂಹಲ. ’ ಅಮ್ಮ , ನಾನು ಈಗ ದೊಡ್ಡೋನಲ್ಲ? ಎರಡು ಎರಡು ಸಲ ಅಣ್ಣ ! ವಿಸ್ಮಯಾಗೆ ಒಂದು ಸಲ ಮತ್ತೆ ಲಿಪಿ ಗೆ ಒಂದು ಸಲ ’ ಎಂದು ಹೆಮ್ಮೆ ಪಡುತ್ತಾನೆ.
ಈ ಸಂತೋಷದ ನಂತರ ಕೆಲ ಕಾಲ ಊರಿಗೆ ಹೋಗಿ, ಹಾಯಾಗಿ ಕಾಲ ಕಳೆದು ಅಂತೂ ಈಗ ಪುಣೆಗೆ ವಾಪಸ್ಸಾಗಿದ್ದೇನೆ. ಇಷ್ಟು ಸುದೀರ್ಘ ರಜೆಯ ನಂತರ ಸ್ವಲ್ಪ ಆಲಸ್ಯವೂ ಮೂಡಿದೆ. ಕೆಲದಿನಗಳಲ್ಲಿ ,ಪುನಃ ಆಫೀಸ್-ಮನೆ ದಿನಚರಿ ಶುರುವಾಗಿಬಿಡುತ್ತದೆ. ಮತ್ತದೇ ಏಕತಾನತೆ ಕಾಡದಂತೆ ಬರವಣಿಗೆಯೊಂದೇ ಸ್ವಲ್ಪ ಸಹಾಯ ಮಾಡ ಬಲ್ಲದೇನೋ.
ಏನಿದ್ದರೂ, ಬಹಳ ದಿನಗಳ ಕಾಲ ಬ್ಲಾಗ್ ಪ್ರಪಂಚದಿಂದ ದೂರವಿದ್ದುದರಿಂದ ,ತುಂಬಾ ಕೆಲಸಗಳು ಬಾಕಿಯಿವೆ. ಬ್ಲಾಗ್ ಬಳಗದವರನ್ನು ಭೇಟಿಯಾಗಬೇಕು, ಬಹಳಷ್ಟು ಲೇಖನಗಳನ್ನು ಓದಬೇಕು. ಪ್ರತಿಕ್ರಿಯಿಸಬೇಕು, ನನ್ನ ಬ್ಲಾಗನ್ನು ಓದಿದವರಿಗೆ ಧನ್ಯವಾದ ಹೇಳಬೇಕು, ಮತ್ತೆ ಹೊಸ ಹೊಸ ಲೇಖನಗಳನ್ನು ಬರೆಯಬೇಕು..... ಹೀಗೆ ಮಾಡಬೇಕಿರೋ ಕೆಲಸಗಳು ಬೇಕಷ್ಟಿವೆ. ಸಿಕ್ಕುತ್ತೇನೆ ಮತ್ತೆ. ನಿಮ್ಮೆಲ್ಲರ ಪ್ರೀತಿ- ಪ್ರೋತ್ಸಾಹಗಳು ನನ್ನ ಜೊತೆಯಿರಲಿ ..

11 comments:

Ittigecement said...

ಚಿತ್ರಾರವರೆ...

ಸ್ವಾಗತ..
ಮತ್ತೆ ಬ್ಲಾಗ್ ಲೋಕಕ್ಕೆ...

ನಿಮ್ಮ ಅಮೇರಿಕಾ ಅನುಭವ ಹೇಗಿತ್ತು...?

PARAANJAPE K.N. said...

ನೀವು ಬಹಳ ದಿನಗಳಿ೦ದ ಬ್ಲಾಗಿಸದೇ ನಾಪತ್ತೆಯಾಗಿದ್ದನ್ನು ಗಮನಿಸಿದ್ದೆ. ಆಗಾಗ ನಿಮ್ಮ ಬ್ಲಾಗಿಗೆ "ಹಾಗೇ ಸುಮ್ಮನೆ" ಭೇಟಿ ಕೊಡುತ್ತಿದ್ದೆ. ಈಗ ನೀವು ಮರಳಿಬ೦ದಿದ್ದು ಖುಷಿಯ ವಿಚಾರ. ತೊಡಗಿಕೊಳ್ಳಿ ನಿಮ್ಮ ವೃತ್ತಿಯಲ್ಲಿ, ಜೊತೆಜೊತೆಗೆ ಬ್ಲಾಗಿ೦ಗಿನಲ್ಲಿ. ಶುಭವಾಗಲಿ.

sunaath said...

ಚಿತ್ರಾ,
ನಿಮ್ಮ ಲೇಖನಗಳಿಗಾಗಿ ಕಾಯುತ್ತಿದ್ದೇವೆ.

ಶಿವಪ್ರಕಾಶ್ said...

ಚಿತ್ರಾ ಅವರೇ,
WELCOME BACK...

ಚಂದ್ರಕಾಂತ ಎಸ್ said...

ಚಿತ್ರಾ

ಅಂತೂ ಅಮೆರಿಕಾ ನಿಮ್ಮನ್ನು ಬಿಟ್ಟಿತಲ್ಲಾ! ಅಂತೂ ಪುಟ್ಟ ಪುಟ್ಟ ಮಕ್ಕಳ ಲೋಕದಲ್ಲಿ ನೀವಿದ್ದೀರಿ. ನೋಡ ನೋಡುತ್ತಾ ಲಿಪಿ, ವಿಸ್ಮಯಾ, ಸಿರಿ, ಪ್ರಥಮ್ ಎಲ್ಲರೂ ದೊಡ್ಡವರಾಗಿರುತ್ತಾರೆ, ಅವರ ಬಾಲ್ಯದ ನೆನಪುಗಳು ಮಾತ್ರ ಹಸಿರಾಗಿರುತ್ತದೆ. ಮಗನಿಗೆ ಮೂವತ್ತೈದರ ಮೇಲಾದರೂ ಅವನು ತನ್ನ ಎರಡು ವರ್ಷದ ಮಗನ ಬಾಲ್ಯ ವರ್ಣಿಸುತ್ತಿದ್ದರೂ ನನ್ನ ಮನಸ್ಸಿನಲ್ಲಿ ಮಾತ್ರ ಮೊದಲ ಬಾರಿ ತಾಯಿಯಾದ ಹಾಗೂ ಅವನ ಬಾಲ್ಯದ ನೆನಪುಗಳೆಲ್ಲಾ ಎಷ್ಟು ಹಸಿರಾಗಿವೆಯೆಂದರೆ ಕೇಳುವವರಿದ್ದರೆ ಈಗಲೂ ಗಂಟೆಗಟ್ಟಲೆ ಕೊರೆಯ ಬಲ್ಲೆ!

ಸಾಗರದಾಚೆಯ ಇಂಚರ said...

ಚಿತ್ರಾ,
ಜೀವನವೇ ಹಾಗೆ, ಮುಗಿಯದ ಪ್ರಯಾಣ,
ಕಾಲ ಯಾರಿಗೂ ಕಾಯದು ಆಲ್ವಾ,

Anonymous said...

ಇಷ್ಟು ದಿನ ದೂರ ಇರಬೇಡಿ....ಆಗಾಗ್ಗೆ ಏನಾದರೂ ಬರೆಯುತ್ತಿರಿ....
ಗಿರಿ

shivu.k said...

ಚಿತ್ರ ಮೇಡಮ್,

ಬನ್ನಿ ಬನ್ನಿ....ಮತ್ತೆ ತವರಿಗೆ ಸ್ವಾಗತ...

ಎರಡೆರಡು ಸಲ ಅಣ್ಣ...ಆಹಾ...ನಿಮ್ಮ ಸಾಲುಗಳೇ ನೀವು ಅಮೇರಿಕಾದಲ್ಲಿ ಕಳೆದುಹೋಗಿಲ್ಲದಿರುವುದನ್ನು ಸೂಚಿಸುತ್ತವೆ...ಅಮೇರಿಕಾದ ಆನುಭವಗಳನ್ನು ಬರೆಯಿರಿ...ಎಂದಿನಂತೆ ಅವರನ್ನು ಹೊಗಳುವುದಕ್ಕಿಂತ ಅವರ ಹುಚ್ಛಾಟಗಳ ಬಗ್ಗೆ ಬರೆದರೆ ಇಷ್ಟವಾಗುತ್ತೇನೋ...

Arun said...

"ಮರಳಿ ಗೂಡಿಗೆ" ವ್ಹಾ!! ಅಂತು ನಾ ಹೆಳಿದ್ಡು ಒಮ್ಮೆ ಆದರು ಕೆಳಿದೆ ಅನ್ನು !!

ಸುಧೇಶ್ ಶೆಟ್ಟಿ said...

ನಿಮ್ಮ ಬ್ಲಾಗು ಬರಹವಿಲ್ಲದೇ ಸೊರಗಿದೆ... ಆದಷ್ಟು ಬೇಗ ಆರೈಕೆ ಮಾಡಿ ಚಿತ್ರಾ ಅವರೇ....

ಚಿತ್ರಾ said...

ಪ್ರಕಾಶಣ್ಣ,
ಧನ್ಯವಾದಗಳು. ಪ್ರವಾಸ ತುಂಬಾ ಚೆನ್ನಾಗಿತ್ತು.ವಿಸ್ಮಯಾಳ ಜೊತೆಯಲ್ಲಿ ದಿನ ಕಳೆದದ್ದೇ ತಿಳಿಯಲಿಲ್ಲ !

ಪರಾಂಜಪೆಯವರೇ, ಸುನಾಥ್ ಕಾಕಾ , ಶಿವಪ್ರಕಾಶ್, ಸಾಗರದಾಚೆಯವರೇ, ಗಿರೀಶ್,
ಧನ್ಯವಾದಗಳು !ಸದ್ಯದಲ್ಲೇ ಬರೆಯಲು ಶುರುಮಾಡುತ್ತೇನೆ.

ಚಂದ್ರಕ್ಕಾ,
ಅದು ಹಾಗೇ ಅಲ್ಲವೆ? ನಾವು ಎತ್ತಿ ಆಡಿಸಿದ ಮಕ್ಕಳು ನೋಡ ನೋಡುತ್ತಿರುವಂತೆಯೇ ದೊಡ್ಡವರಾಗುತ್ತಾರೆ. ಆದರೂ ನಮ್ಮ ಮನದಲ್ಲಿನ್ನೂ ಅವರ ಬಾಲ್ಯವೇ ತುಂಬಿರುತ್ತದೆ. ನಮ್ಮ ಅಪ್ಪ- ಅಮ್ಮನಿಗು ಹೀಗೆಯೇ ಅನಿಸುತ್ತಿರಬಹುದಲ್ಲವೆ?


ಶಿವೂ,
ಧನ್ಯವಾದಗಳು ನಿಮ್ಮ ಸ್ವಾಗತಕ್ಕೆ. ಆದರೆ ತಾಯ್ನೆಲಕ್ಕೆ ಅಂಟಿಕೊಂಡವರು ನಾವು, ಅಷ್ಟು ಬೇಗ ಕಳೆದುಹೋಗಲ್ಲ ಬಿಡಿ.
ಅಮೆರಿಕೆಗೆ ಇದು ನನ್ನ ಎರಡನೇ ಭೇಟಿ.ಈ ಭೇಟಿಗಳಲ್ಲಿ ಅಮೆರಿಕನ್ನರ ಹುಚ್ಚಾಟಗಳ ಬಗ್ಗೆ .. ನಾನು ಅಷ್ಟಾಗಿ ಆ ಕಡೆ ಗಮನ ಕೊಟ್ಟಿಲ್ಲವೇನೊ ! ಹುಚ್ಚಾಟಗಳು ಎಲ್ಲ ಕಡೇನೂ ಇರುತ್ತವೆ ಅಲ್ವ? ಏನೇ ಇದ್ದರೂ, ಅವರ ಶಿಸ್ತುಪಾಲನೆ,ಎಲ್ಲೇ ಹೋದರೂ ಸಿಗುತ್ತಿದ್ದ ನಗುಮುಖದ ಸೇವೆ, ಸ್ವಚ್ಛತೆಗಳಂಥಾ ಒಳ್ಳೆಯ ವಿಷಯಗಳು ನನ್ನ ಗಮನ ಸೆಳೆದದ್ದು ನಿಜ.

ಸುಧೇಶ್,
ಆದಷ್ಟು ಬೇಗನೆ ಹೊಳೆಯ ಆರೈಕೆ ಮಾಡುತ್ತೇನೆ. ನಿಮ್ಮ ಕಾಳಜಿಗೆ ಧನ್ಯವಾದಗಳು.