July 25, 2009

ಮರೆಯಲಾಗದ ದಿನ -ಭಾಗ 1

೨೦೦೫ ನೇ ಜುಲೈ ೨೬ ರಂದು ಮುಂಬಯಿ - ಪುಣೆ ನಗರಗಳ ಇತಿಹಾಸದಲ್ಲಿ ಒಂದು ಕರಾಳ ದಿನವಾಗಿ ದಾಖಲಾಗಿದೆ . ೩-೪ ದಿನಗಳ ಕಾಲ ಸತತವಾಗಿ ಸುರಿದ ಮಳೆಯಿಂದಾಗಿ ಈ ಎರಡೂ ನಗರಗಳು ನೀರಲ್ಲಿ ಮುಳುಗಿದ್ದು ಇದೇ ದಿನ! ನದಿಗಳು ತುಂಬಿ ಸೇತುವೆಗಳ ಮೇಲೆ ಆಳೆತ್ತರಕ್ಕೆ ಹರಿದ ನೀರಿನಿಂದಾಗಿ ಪುಣೆ ಹಾಗೂ ನಾವಿರುವ ಪಿಂಪ್ರಿ -ಚಿಂಚವಾಡಗಳ ನಡುವೆ ಸಂಪರ್ಕ ಸಂಪೂರ್ಣವಾಗಿ ಕಡಿದು ಹೋಗಿತ್ತು. ಅಷ್ಟೇ ಏನು ಪುಣೆ ಪಟ್ಟಣದ ಹಲವಾರು ಏರಿಯಾಗಳು ದ್ವೀಪದಂತಾಗಿದ್ದವು.

ಈಗ ನನ್ನ ಕಥೆ ಹೇಳುತ್ತೇನೆ.

ನಮ್ಮ ಮನೆಯಿದ್ದದ್ದು ಚಿಂಚವಾಡದಲ್ಲಿ . ಪವನಾ ನದಿಗೆ ಕೇವಲ ೧೦೦ ಮೀ. ಗಳಷ್ಟು ಸಮೀಪದಲ್ಲಿ ! ಆರು ಮನೆಗಳಿರುವ ಅಪಾರ್ಟ್ ಮೆಂಟ್ ನ ಕೆಳ ಅಂತಸ್ತಿನಲ್ಲಿ ! ೨೬ ರ ಬೆಳಿಗ್ಗೆ ನಮ್ಮ ದಿನಚರಿ ಎಂದಿನಂತೆಯೇ ಸಾಗಿತ್ತು. ಬೆಳಿಗ್ಗೆ ಎದ್ದು , ಹೊರಗೆ ತುಂಬಿ ಹರಿಯುತ್ತಿರುವ ನದಿಯನ್ನು ನೋಡಿ, ಚಿಂಚವಾಡ ದ ಪ್ರಸಿದ್ಧ " ಮೋರಯಾ ಮಂದಿರ" ಮುಳುಗಿರಬೇಕು .ಖಂಡಿತಾ ಮೇಲಿನ ಮೆಟ್ಟಿಲುಗಳ ವರೆಗೂ ನೀರು ತುಂಬಿರುತ್ತದೆ ಎಂದುಕೊಳ್ಳುತ್ತ ದಿನದಂತೆ ಒಂಭತ್ತು ಗಂಟೆಗೆಲ್ಲ ಆಫೀಸಿಗೆ ಹೋದೆ.
೯.೩೦ ರ ಹೊತ್ತಿಗೆ ನಮ್ಮ ಮನೆಯಲ್ಲೇ ಇರುವ ಕೆಲಸದ ಹುಡುಗಿ ಜಯಾಳಿಂದ ಫೋನ್. " ಚಿತ್ರಕ್ಕಾ, ನದಿ ನೀರು ಜಾಸ್ತಿಯಾಗ್ತಿದೆ " ಅವಳ ದನಿಯಲ್ಲಿ ಗಾಬರಿಯಿತ್ತು. ಯಾವ ವಿಷಯದಲ್ಲೂ ಬೇಗ ಹೆದರಿಕೊಳ್ಳುವ ಅವಳ ಸ್ವಭಾವ ಗೊತ್ತಿದ್ದ ನಾನು " ಏನೂ ಆಗಲ್ಲ. ಹೆದರಬೇಡ. ನಿಂಗೆ ಒಬ್ಳಿಗೇ ಭಯ ಆದ್ರೆ ಪಕ್ಕದ ಮನೆಗೆ ಹೋಗಿ ಇರು." ಎಂದು ಸಮಾಧಾನ ಹೇಳಿ ಫೋನಿಟ್ಟೆ. ಆದರೂ ಮನಸ್ಸಿನಲ್ಲಿ ಯಾಕೋ ಕಳವಳವಾಗತೊಡಗಿತ್ತು. ಹತ್ತೇ ನಿಮಿಷದಲ್ಲಿ ಮತ್ತೆ ಅವಳ ಫೋನ್ ಬಂತು " ಅಕ್ಕಾ, ನೀರು ರಸ್ತೆ ಮೇಲೆ ಬಂದಿದೆ ಬೇಗ ಮನೆಗೆ ಬರ್ತೀರಾ ? " ಧ್ವನಿಯಲ್ಲಿದ್ದ ಆತಂಕವನ್ನು ಗುರುತಿಸಿದ ನಾನು ತಕ್ಷಣ ಮಹೇಶ್ ಗೆ ಫೋನ್ ಮಾಡಿದೆ. ಮುಂದಿನ ಹತ್ತು ನಿಮಿಷಗಳೊಳಗೆ ನಾವು ಮನೆಯ ಹತ್ತಿರದ ರಸ್ತೆಯಲ್ಲಿದ್ದೆವು .

ಮುಖ್ಯ ರಸ್ತೆಯಿಂದ ನಮ್ಮ ಬೀದಿಗೆ ತಿರುಗ ಬೇಕೆಂದಾಗ ಪರಿಸ್ಥಿತಿಯ ಗಂಭೀರತೆ ಅರ್ಥವಾಗಿ ಕಾರನ್ನು ಮುಖ್ಯ ರಸ್ತೆಯಬದಿಯಲ್ಲೇ ನಿಲ್ಲಿಸಿ ಬೀದಿಯೊಳಹೊಕ್ಕೆವು. ರಸ್ತೆಯ ಕೊನೆಯಲ್ಲಿರುವ ನಮ್ಮ ಗೇಟ್ ಹತ್ತಿರ ಹೋಗುವಾಗ ರಸ್ತೆಯಲ್ಲಿ ಮೊಳಕಾಲಿಗಿಂತ ನಾಲ್ಕೇ ಇಂಚು ಕೆಳಗಿತ್ತು ನೀರು ! ಬಾಗಿಲು ತೆರೆದ ಜಯಾ ಪೂರ್ತಿ ಗಾಬರಿಯಾಗಿದ್ದಳು. ನಾವು ಮನೆಯೊಳಗೆ ಹೊಕ್ಕುತ್ತಿದ್ದಂತೇ ನಮ್ಮ ಬಿಲ್ಡಿಂಗಿನ ಮೇಲು ಮನೆಯವರು , ಪಕ್ಕದಮನೆಯವರು ಧಾವಿಸಿ ಬಂದರು. ಕೈಗೆ ಸಿಕ್ಕ ವಸ್ತುಗಳನ್ನು ಸುರಕ್ಷಿತ ಜಾಗಕ್ಕೆ ಸಾಗಿಸತೊಡಗಿದರು. ಇಬ್ಬರು ಟಿವಿ, ಮ್ಯೂಸಿಕ್ ಸಿಸ್ಟಮ್ , ಕಂಪ್ಯೂಟರ್ ಇತ್ಯಾದಿಗಳನ್ನು ಮೇಲೆ ನಾಗಂದಿಗೆ ಹತ್ತಿಸಿದರೆ, ಇನ್ನಿಬ್ಬರು ಎದುರಿಗೆ ಕಂಡ ಹಾಸಿಗೆ ವಸ್ತ್ರಗಳನ್ನು ಮೇಲಿನ ಮನೆಗಳಿಗೆ ಸಾಗಿಸಿದರು. ನಾನು ಮಾಡಿದ ಮೊದಲ ಕೆಲಸವೆಂದರೆ ಸಿರಿಯ ಶಾಲಾಪುಸ್ತಕಗಳನ್ನು ಒಂದು ಚೀಲಕ್ಕೆ ತುಂಬಿಸಿ ಮೇಲೆ ಕಳಿಸಿದ್ದು. ನಂತರ ಬೆಲೆ ಬಾಳುವ ವಸ್ತುಗಳು ಮತ್ತು ನಮ್ಮಬಟ್ಟೆಗಳನ್ನು ಗಂಟುಕಟ್ಟಿ ಮೇಲೆ ಸಾಗಿಸಿದ್ದು.ಕಪಾಟಿನ ಕೆಳ ಅಂತಸ್ತುಗಳಲ್ಲಿನ ವಸ್ತುಗಳನ್ನು ಮೇಲಂತಸ್ತಿಗೆ ಶಿಫ್ಟ್ ಮಾಡುವಷ್ಟರಲ್ಲಿ , ಬಾತ್ ರೂಮ್ ಮತ್ತು ಟಾಯ್ ಲೆಟ್ ಗಳಿಂದ ನೀರು ಮನೆಯೊಳಗೆ ಬರ ತೊಡಗಿತು. ತಕ್ಷಣವೇ ಎಲ್ಲ ರೂಮುಗಳ ಕಿಡಕಿ, ಬಾಗಿಲುಗಳನ್ನು ಹಾಕಿ ಹೊರಬಾಗಿಲಿಗೆ ಬೀಗ ಹಾಕಿ ಮೇಲಿನ ಮನೆಗೆ ಹೋದೆವು.ಇವೆಲ್ಲವಕ್ಕೂ ನಮಗೆ ಸಿಕ್ಕಿದ್ದು ಕೇವಲ ೧೫-೨೦ ನಿಮಿಷಗಳು ಮಾತ್ರ ! ನೀರಿನ ಮಟ್ಟ ಕ್ಷಣ ಕ್ಷಣಕ್ಕೂ ಏರುತ್ತಲೇ ಇತ್ತು. ಮೇಲಿನ ಮನೆಗೆ ಹೋಗಿ ಕೆಲ ಸಮಯ ಸ್ತಬ್ಧವಾಗಿ ಕುಳಿತೆ. ಮೆದುಳು ಕೆಲಸವನ್ನೇ ನಿಲ್ಲಿಸಿತ್ತು.ಅಷ್ಟು ಹೊತ್ತು ಬೇರಾವ ಯೋಚನೆಗೂ ಆಸ್ಪದವಿಲ್ಲದಂತಿದ್ದು ಈಗ ಒಮ್ಮೆಲೇ ಯಾವುದೋ ಶೂನ್ಯ ಭಾವ ಆವರಿಸಿಬಿಟ್ಟಿತ್ತು.

ಮನೆಯ ಬಾಗಿಲು ಮುಚ್ಚುವ ಮೊದಲು


ಮೇಲಿನ ಮನೆಯ ಕಲ್ಪನಾ ಮತ್ತು ಸುಜಾತಾ ಬಿಸಿಬಿಸಿ ಟೀ ಮಾಡಿ ಎಲ್ಲರಿಗೂ ತಂದುಕೊಟ್ಟರು. ದೇಹಕ್ಕೆ ಹಿತವೆನಿಸಿದರೂ ಮನಸ್ಸಿನ ಆತಂಕ ಕಮ್ಮಿಯಾಗಲು ಸಾಧ್ಯವಿರಲಿಲ್ಲ. ಕೆಲವೇ ನಿಮಿಷಗಳು. ನಂತರ ನನ್ನ ತಲೆಯಲ್ಲಿ ತಕ್ಷಣಕ್ಕೆ ಮಾಡಬೇಕಾದ ವ್ಯವಸ್ಥೆಗಳ ಬಗ್ಗೆ ಯೋಚನೆ ಶುರುವಾಯ್ತು. ಹೊರಗೆ ಮಳೆ ಇನ್ನೂ ಸುರಿಯುತ್ತಲೇ ಇತ್ತು.ನದಿಯಲ್ಲಿ ಪ್ರವಾಹ ಏರುತ್ತಲಿತ್ತು. ಗಂಡಸರೆಲ್ಲ ಕೆಳಗಡೆ ಹೋಗಿ ಸ್ವಿಚ್ ಬೋರ್ಡ್ ನಲ್ಲಿ ಫ್ಯೂಸ್ ತೆಗೆದಿಟ್ಟು ಬೇರೆ ಇನ್ಯಾವುದೇ ರೀತಿಯ ಮುಂಜಾಗರೂಕತಾ ಕ್ರಮವನ್ನು ತೆಗೆದುಕೊಳ್ಳ ಬಹುದಾದ ಬಗ್ಗೆ ಚರ್ಚಿಸುತ್ತಿದ್ದರು. ಕಾಂಪೌಂಡ್ನಲ್ಲಿ ಅದಾಗಲೇ ನುಗ್ಗಿದ ನೀರು ಮನೆಯ ಮೆಟ್ಟಿಲುಗಳನ್ನು ಹತ್ತ ತೊಡಗಿತ್ತು.ಕಿಡಕಿಯಿಂದಾಚೆ ಕೆಳಗಡೆ ನೋಡಿದಾಗ ಪವನಾ ರುದ್ರ ರೂಪ ತಾಳಿ ರಭಸದಿಂದ ಹರಿಯುತ್ತಿದ್ದಳು. ನದಿಯ ಭೋರ್ಗರೆತ ಕಿವಿಗೆ ಅಪ್ಪಳಿಸುತ್ತಿತ್ತು. ಮೇಲೆ ಮರಳಿದ ಗಂಡಸರು ಯಾರೋ "ಅತಿಯಾದ ಮಳೆಯಿಂದಾಗಿ ಪವನಾ ಜಲಾಶಯ ತುಂಬಿ, ಫ್ಲಡ್ ಗೇಟ್ ಅನ್ನು ತುರ್ತಾಗಿ ತೆರೆಯಬೇಕಾದ ಅನಿವಾರ್ಯತೆಯಿಂದಾಗಿ ಮುನ್ಸೂಚನೆ ಇಲ್ಲದೆ ನೀರು ಬಿಡಲಾಗಿದೆ . ಆದ್ದರಿಂದಲೇ ಪ್ರವಾಹ ಬಂದಿದೆ" ಎಂದರು.ಸದ್ಯಕ್ಕಂತೂ ಕಡಿಮೆಯಾಗಲಿಕ್ಕಿಲ್ಲ ಎಂದು ತಿಳಿದಾಗ ಎಲ್ಲರ ಮುಖದಲ್ಲೂ ಚಿಂತೆ ಕಾಡ ತೊಡಗಿತು. ಅಷ್ಟರಲ್ಲಿ ಅಮ್ಮನ ಫೋನ್ ! "ಅಲ್ಲೆಲ್ಲ ತುಂಬಾ ಮಳೆ ಸುರೀತಿದೆಯಂತಲ್ಲೇ ಟಿವಿ ಲಿ ತೋರಿಸ್ತಿದಾರೆ ನಿಜಾನೇನೇ " ಅಮ್ಮನ ದನಿಯಲ್ಲಿನ ಕಾಳಜಿಗೆ ವಿಷಯ ಹೇಳುವುದೋ ಬಿಡುವುದೋ ಎಂಬ ಗೊಂದಲಕ್ಕೊಳಗಾದೆ. ಊರಿಗೆ ಮುಂಚೆ ಎಲ್ಲವನ್ನೂ ಪ್ರಸಾರ ಮಾಡುವ ಟಿವಿ ಗೆ ಮನಸ್ಸಿನಲ್ಲೆ ಶಾಪ ಹಾಕುತ್ತ ವಿಷಯವನ್ನು ಸೂಕ್ಷ್ಮವಾಗಿ ಹೇಳಿದೆ. " ನಿಮಗೇನೂ ತೊಂದರೆ ಇಲ್ಲ ತಾನೆ ?" ಎಂದು ಕೇಳುವಾಗ ಅಮ್ಮನ ದನಿ ನಡುಗುತಿತ್ತು. ಅಷ್ಟರಲ್ಲಾಗಲೇ ನನ್ನ ಮನಸ್ಸು ಗಟ್ಟಿಯಾಗಿ ಬಿಟ್ಟಿತ್ತು. ಪರಿಸ್ಥಿತಿಯನ್ನು ನಿಭಾಯಿಸುವ ಧೈರ್ಯ ಬಂದುಬಿಟ್ಟಿತ್ತು. ಅಮ್ಮನಿಗೆ ಸಮಾಧಾನ ಹೇಳಿ , ಅತ್ತೆ-ಮಾವನಿಗು ಫೋನ್ ಮಾಡಿ ವಿಷಯ ವಿವರಿಸಿದೆ. ಯಾರೂ ಗಾಬರಿಯಾಗಬೇಕಿಲ್ಲ ,ನಾವು ಸುರಕ್ಷಿತವಾಗಿದ್ದೇವೆ . ಸ್ವಲ್ಪ ಸುಧಾರಿಸಿದ ಮೇಲೆ ನಾವೇ ಫೋನ್ ಮಾಡುತ್ತೇವೆ ಎಂದು ಸಮಾಧಾನಿಸಿದೆ.

ಅದೇಕೊ ಆ ಹೊತ್ತಿಗಾಗಲೇ , ಪ್ರಕೃತಿಯ ಈ ರೌದ್ರ ರೂಪ ನನ್ನಲ್ಲಿ ವಿಚಿತ್ರ ಆಕರ್ಷಣೆ ಮೂಡಿಸತೊಡಗಿತ್ತು. ಟೆರೇಸಿಗೆ ಹೋಗಿ ಕೆಲವು ಫೋಟೋಗಳನ್ನು ತೆಗೆದ ನನ್ನನ್ನು ಕಂಡು ಕಲ್ಪನಾ ," ನಿಂಗೇನು ತಲೆ ಕೆಟ್ಟಿದೆಯೇನೆ? ಅಲ್ಲಿ ಮನೆ ಮುಳುಗ್ತ ಇದ್ರೆ ನೀನು ಫೋಟೋ ತೆಗಿತಾ ಇದೀಯಲ್ಲ " ಎಂದು ಬಯ್ದಳು. " ನನ್ನ ಕೈಯಲ್ಲಿ ಈಗ ಮತ್ತೇನು ಮಾಡೋಕೆ ಸಾಧ್ಯ ಹೇಳು ? ಜೀವನದಲ್ಲಿ ಬರೀ ಸುಂದರ ಅನುಭವಗಳನ್ನಷ್ಟೇ ಏಕೆ ಕಾಯ್ದಿಟ್ಟುಕೊಳ್ಳಬೇಕು. ಇಂಥವೂ ಕೂಡ ಬೇಕಲ್ಲವೇನೆ? ಮರೆಯಲಾಗದ ಗಳಿಗೆಯನ್ನು ಹೀಗೆ ಫೋಟೊ ರೂಪದಲ್ಲಿ ಕಾದಿಟ್ಟುಕೊಳ್ಳುತ್ತೇನೆ" ಎಂದಾಗ ಅವಳ ನೋಟದಲ್ಲಿನ ವಿಚಿತ್ರ ಭಾವನೆಗಳನ್ನು ಅರ್ಥ ಮಾಡಿಕೊಂಡಿದ್ದೆ.

ಪವನಾ ನದಿ ಟೆರೆಸ್ ನಿಂದ ಕಂಡಂತೆ

ಟೆರೇಸ್ ನಿಂದ ನೋಡುವಾಗ ನದಿಯ ಹರವು ಇನ್ನೂ ವಿಶಾಲವಾಗಿ ಕಾಣುತ್ತಿತ್ತು. ಆಚೆ ದಡದಲ್ಲಿದ್ದ ಹೊಲ ಗದ್ದೆಗಳು ಕಾಣದಂತಾಗಿದ್ದವು. ನಮ್ಮ ಕಾಂಪೌಂಡಿನೊಳಗಿದ್ದ ದ್ವಿಚಕ್ರ ವಾಹನಗಳಾಗಲೇ ೭೫ ಭಾಗದಷ್ಟು ಮುಳುಗಿದ್ದವು. ಹೊಸದಾಗಿ ಮಣ್ಣು ಹಾಕಿಸಿ ಗೊಬ್ಬರ ಕೊಟ್ಟಿದ್ದ ನನ್ನ ಗಾರ್ಡನ್ ಕಾಣದಂತಾಗಿತ್ತು !ನನ್ನ ಮೆಚ್ಚಿನ ಹೂವಿನ ಗಿಡಗಳು ನೀರಿನಡಿಯಲ್ಲಿ ಮಲಗಿದ್ದವು! ರಭಸವಾಗಿ ಹರಿಯುತ್ತಿದ್ದ ನದಿಯಲ್ಲಿ ಅದೆಷ್ಟೋ ಚಿಕ್ಕ ಪುಟ್ಟ ಮರ ಗಿಡಗಳು ಕೊಚ್ಚಿಕೊಂಡು ಹೋಗುತ್ತಿದ್ದವು, ಯಾರದ್ದೋ ಮನೆಯ ಪ್ಲಾಸ್ಟಿಕ್ ಖುರ್ಚಿ ತೇಲಿಹೋಗುತ್ತಿತ್ತು. ಅದನ್ನೆಲ್ಲ ನೋಡುತ್ತಾ ನಿಂತವಳಿಗೆ ಮಾರುದ್ದದ ಹಾವೊಂದು ನೀರಿನಲ್ಲಿ ಈಜುತ್ತಾ ಎದುರು ಸಿಕ್ಕ ಕೊಂಬೆಯೊಂದನ್ನು ಅಪ್ಪಿಕೊಳ್ಳಲು ಪ್ರಯತ್ನಿಸುತ್ತಿದ್ದ ದೃಶ್ಯ ಕಣ್ಣಿಗೆ ಬಿದ್ದು ಮೈ ಜುಮ್ಮೆಂದಿತು !

ಈಜುತ್ತಿರುವ ದ್ವಿಚಕ್ರ ವಾಹನಗಳು

ಮಧ್ಯಾಹ್ನ ೧೨ ಗಂಟೆಯಾಗುತ್ತಿತ್ತು. ಶಾಲೆಗೆಹೋಗಿದ್ದ ಮಗಳ ಬಗ್ಗೆ ಚಿಂತೆ ಶುರುವಾಯಿತು. ೨ ಗಂಟೆಗೆ ಅವಳ ಶಾಲೆ ಬಿಡುತ್ತದೆ. ಅವಳು ಮನೆಗೆ ಬರುವುದು ಹೇಗೆ ಎಂಬ ಯೋಚನೆ ! ತಕ್ಷಣ ಅವಳ ಶಾಲೆಯ ಹತ್ತಿರವೇ ಇರುವ ಗೆಳತಿ ಸಂಧ್ಯಾಗೆ ಫೋನ್ ಮಾಡಿ ವಿಷಯ ತಿಳಿಸಿದೆ. ಶಾಲೆ ಬಿಟ್ಟ ಮೇಲೆ ಸಿರಿಯನ್ನು ತನ್ನ ಮನೆಗೇ ಕರೆದೊಯ್ಯುತ್ತೇನೆಂದೂ ನಾವೇನೂ ಆ ಬಗ್ಗೆ ಚಿಂತೆ ಮಾಡಬೇಕಿಲ್ಲ ಎಂಬ ಅವಳ ಭರವಸೆಯ ಮಾತು ಸ್ವಲ್ಪ ಮಟ್ಟಿಗೆ ಸಮಾಧಾನ ತಂದಿತು. ಆಮೇಲೆ ಸಿರಿಯ ಶಾಲೆಗೂ ಫೋನ್ ಮಾಡಿ ಪರಿಸ್ಥಿತಿಯನ್ನು ವಿವರಿಸಿ ಸಂಧ್ಯಳ ಜೊತೆ ಸಿರಿಯನ್ನು ಕಳುಹಿಸಬೇಕಾಗಿ ವಿನಂತಿಸಿದ್ದಾಯ್ತು. ಇಷ್ಟೆಲ್ಲಾ ಮಾಡುವಷ್ಟು ಹೊತ್ತಿಗೆ ಸುಜಾತಾಳ ಅತ್ತೆ ಅಡಿಗೆ ತಯಾರಿಸಿ ಊಟಕ್ಕೆ ಕರೆದರು. ಬೆಳಗಿನಿಂದ ಒಂದೇ ಸಮ ಟೆನ್ ಶನ್ ಮಾಡಿಕೊಂಡು ಓಡಾಡಿ ಎಲ್ಲರಿಗೂ ಹಸಿವಾಗಿದ್ದರೂ ಊಟ ಮಾಡುವ ಮನಸ್ಸು ಯಾರಿಗೂ ಇರಲಿಲ್ಲ . ಎಲ್ಲರಲ್ಲೂ ಭೀತಿ,ಆತಂಕ ಮುಂದೆ ಏನು ಕಾದಿದೆಯೋ ಎಂಬ ಚಿಂತೆ !


15 comments:

ಸುಧೇಶ್ ಶೆಟ್ಟಿ said...

ಅಬ್ಬಾ! ಮೈ ಜುಮ್ ಅ೦ತು ಚಿತ್ರಾ ಅವರೇ ಈ ಅನುಭವಗಳನ್ನು ಓದಿದಾಗ....

ನೀವು ಅದನ್ನು ಹೇಗೆ ನಿಭಾಯಿಸಿದಿರಿ ಅ೦ತ ತಿಳಿಯಲು ಕುತೂಹಲಿಯಾಗಿದ್ದೇನೆ...

ಮೂರ್ತಿ ಹೊಸಬಾಳೆ. said...

ಚಿತ್ರಕ್ಕಾ,
ನಾವು ಯಾವಾಗಲೂ ಹೊಗಳುವ ಪ್ರಕೃತಿಯ ಇನ್ನೊಂದು ಮುಖವನ್ನ ಚಿತ್ರಸಮೇತ ತೊರಿಸಿದ ನಿಮಗೆ ಧನ್ಯವಾದಗಳು.
(ಅಂದಾಗಿದ್ದಿದ್ದರೆ ಧನ್ಯವಾದಗಳನ್ನ ಹೇಳುತ್ತಿರಲಿಲ್ಲ ಸಮಾಧಾನ ಹೇಳಬೇಕಿತ್ತು ಇಂದು ಹಾಗಲ್ಲ.)
ಪ್ರಕೃತಿಯ ರುದ್ರನರ್ತನದ ಅಂತ್ಯದ ಬಗ್ಗೆ ಮತ್ತೆ ಸಾಮಾನ್ಯ ಸ್ತಿತಿಗೆ ಮರಳಿದ ಬಗ್ಗೆ ಬೇಗ ಬರೆಯಿರಿ.

Guru's world said...

ಅಬ್ಬಾ !!! ಹೇಗೆ ನಿಭಾಯಿಸಿದಿರಿ ಅ ಪರಿಸ್ಥಿಯನ್ನ.... ಮೈ ಜುಂ ಅಂದಿತು ನಿಮ್ಮ ಲೇಖನ ಹಾಗು...ಫೋಟೋ ಗಳನ್ನೂ ನೋಡುತ್ತೀರ ಬೇಕಾದರೆ.....ಅಂತ ಪರಿಸ್ತಿಯಲ್ಲೂ....ಧೈರ್ಯ ಮಾಡಿ ಫೋಟೋಗಳನ್ನು ತೆಗೆದಿದ್ದಿರಲ್ಲ.... ನಿಜಗ್ಕು ಗ್ರೇಟ್.....
ತುಂಬ ಚೆನ್ನಾಗಿ ವಿವರಿಸಿದ್ದಿರ.....

sunaath said...

ಚಿತ್ರಾ,
ತೀವ್ರ ಆತಂಕವನ್ನು ಹಾಗೂ ಭಯವನ್ನು ಉಂಟು ಮಾಡಿದ ಅನುಭವದಿಂದ ಪಾರಾಗಿ ಬಂದಿದ್ದೀರಿ. ಸಂಕಟಸಮಯದಲ್ಲಿ ನೀವು ಹಾಗೂ ನೆರೆಹೊರೆಯುವರು ಒಂದಾಗಿ ಅದನ್ನು ಎದುರಿಸಿದ
ಪರಿಯನ್ನು ಓದಿ ಸಮಾಧಾನವಾಯಿತು.
ನೀರಿನಲ್ಲಿ ಅರ್ಧ ಮುಳುಗಿದ ನಿಸರ್ಗ ಹಾಗೂ ವಾಹನಗಳ ಚಿತ್ರಗಳನ್ನು ಕಂಡಾಗ ಬೇಸರವಾದರೂ ಸಹ, ದಾಖಲೆಗಾಗಿ ಇದು
ಮಾಡಲೆಬೇಕಾದ ಕೆಲಸವೆನ್ನುವ ಕಾರಣಕ್ಕಾಗಿ ನಿಮಗೆ ಅಭಿನಂದನೆಗಳು.

ವಿ.ರಾ.ಹೆ. said...

abbabba!!

ತೇಜಸ್ವಿನಿ ಹೆಗಡೆ- said...

ಚಿತ್ರಕ್ಕ,
ರೋಮಾಂಚನಗೊಳಿಸುವ ನಿರೂಪಣೆಯನ್ನು ಹೊಂದಿದೆ ನಿಮ್ಮ ಅನುಭವ ಕಥನ. ಮುಂದಿನ ಭಾಗಕ್ಕಾಗಿ ಕಾತುರಳಾಗಿರುವೆ. ಇನ್ನಷ್ಟು ಚಿತ್ರಗಳನ್ನು ಹಾಕಿ.

ಸಿಮೆಂಟು ಮರಳಿನ ಮಧ್ಯೆ said...

ಚಿತ್ರಾ....

ನಿಮ್ಮ ಅನುಭವ ಭಯಂಕರವಾಗಿದೆ...
"ಸುಂದರ ಅನುಭವಗಳ ಜೊತೆಯಲ್ಲಿ ಇಂಥಹ ಕಹಿಗಳೂ ಇದ್ದರೇನೆ ಸೊಗಸು"
ನಿಮ್ಮ ಈ ವಿಚಾರ ನನಗೂ ಇಷ್ಟ...

ಮನುಷ್ಯ ಎಷ್ಟೇ ಹಾರಾಡಿದರೂ ಪ್ರಕ್ರತಿಯ ಎದುರು ಕುಬ್ಜ...

ಒಂದು ಕೆಟ್ಟ ಅನುಭವವನ್ನು ಸುಂದರವಾಗಿ ಬರೆದಿರುವಿರಿ...

ಮುಂದೇನಾಯಿತು..?

ಇದು ನನ್ನಾಕೆಯ ಪ್ರಶ್ನೆ...

shivu said...

ಚಿತ್ರಾ ಮೇಡಮ್,

ನೀವು ಎಂಥ ಪರಿಸ್ಥಿತಿಯನ್ನು ಎದುರಿಸಿದ್ದೀರಿ...ಅದನ್ನು ನಿಭಾಯಿಸಿದ ಬಗೆಯಂತೂ ನನಗೆ ಅಚ್ಚರಿಯೆನಿಸಿತು.

ಅಂಥ ಗಂಭೀರ ಪರಿಸ್ಥಿತಿಯಲ್ಲೂ ಕೆಲವು ಫೋಟೋಗಳನ್ನು ತೆಗೆದಿದ್ದೀರಲ್ಲ...ನಿಮ್ಮ ದೈರ್ಯಕ್ಕೆ ಮೆಚ್ಚಬೇಕು.ನಿಮ್ಮ ನೆರೆಹೊರೆಯವರ ಸಹಕಾರವನ್ನು ಮೆಚ್ಚಲೇ ಬೇಕು....

ಮುಂದಿನದನ್ನು ತಿಳಿದುಕೊಳ್ಳಲು ಕಾಯುತ್ತಿದ್ದೇನೆ...

Anonymous said...

"೨೦೦೫ ನೇ ಜುಲೈ ೨೬" ನನ್ನ ಮುಂಬಯಿ ಬದುಕಿನ ೨೬ನೆಯ ದಿನ... ಆ ದಿನ ಮರೆತೆನೆಂದರ ಮರೆಯಲಿ ಹ್ಯಾಂಗ, ಆಫಿಸಿನಿಂದ ಮನೆಗೆ ಹೋರಟು, ಆಫೀಸಿನಿಂದ ಕೇವಲ ೨೦೦ ಮೀಟರ ದೂರ ಸಾಗಲು (ಬಸ್ಸಿನಲ್ಲಿ) ೨ ಗಂಟೆಗಳಾದಾಗ, ಮುಂದೆ ನೆಡೆಯುತ್ತಾ ಹೋದಂತೆ, ರಸ್ತೆಯಲ್ಲಿ ನಿಂತ ನೀರು ಎದೆಮಟ್ಟದಲ್ಲಿದ್ದುದು ಕಂಡು, ಆಫಿಸಿಗೆ ಮರಳಿ, ಆಫೀಸಿನಲ್ಲಿ ಟೆಬಲಗಳನ್ನು ಕೂಡಿಸಿ ಮಲಗಿದ್ದು, ಕರೆಂಟಿಲ್ಲದೆ, ಫ್ಯಾನಯಿಲ್ಲದೆ ಬರಿ ಕತ್ತಲೆಯಲ್ಲೆ... ಕಳೆದ ರಾತ್ರಿ ಈ ಮುಂಬಯಿ ಸಹವಾಸವೇ ಸಾಕು ಅನಿಸಿತ್ತು, ಆದರೆ ಬಿಟ್ಟಿತೆ ಮುಂಬಯಿ ಮಾಯೆ, ಚಲ್ ಭಾಜೂ ಹಟ್ ಎನ್ನುವ ಮನೋಭಾವವನ್ನು ನನ್ನಲ್ಲಿ ತುಂಬಿ, ಬೆಂಗಳೂರಿಗೆ ಟ್ರಾನ್ಸಫರನ ಅವಕಾಶ ಸಿಕ್ಕರು ತನ್ನಲ್ಲೆ ಉಳಿಯುವಂತೆ ಮಾಡಿದೆ.

ಈ ಸಲ ಮಳೆಗಾಲ ನನ್ನ ನಾಲ್ಕನೆಯ ಮುಂಬಯಿ ಮಳೆಗಾಲ... ತನ್ನೆಲ್ಲ ಕೋರತೆಗಳ ನಡುವೆಯೂ ಮುಂಬಯಿ ಮೇರಿ ಜಾನ್...

-ಶೆಟ್ಟರು

ಚಿತ್ರಾ said...

ಸುಧೇಶ್, ಮೂರ್ತಿ , ವಿಕಾಸ್, ತೇಜಸ್ವಿನಿ,
ನಿಮ್ಮೆಲ್ಲರ ಮೆಚ್ಚುಗೆಗೆ ಧನ್ಯವಾದಗಳು.

ಚಿತ್ರಾ said...

ಗುರು,
ಧನ್ಯವಾದಗಳು. ಆಗ ಹೇಗೆ ಎದುರಿಸಿದೆನೋ ಗೊತ್ತಿಲ್ಲ ! ಎದುರಿಸಿದ್ದಂತೂ ನಿಜ !
ಬದುಕಿನುದ್ದಕ್ಕೂ ಮರೆಯದ ನೆನೆಪಾಗಿ ಉಳಿಯುವ ಈ ಸಂದರ್ಭವನ್ನು ಕಣ್ಣೆದುರು ಉಳಿಸಿಕೊಳ್ಳಬೇಕಿತ್ತು. ಹಾಗಾಗಿ ಫೋಟೋ ತೆಗೆದೆ.

ಚಿತ್ರಾ said...

ಕಾಕಾ,
ನಿಮ್ಮ ಕಾಳಜಿಗೆ ಆಭಾರಿಯಾಗಿದ್ದೇನೆ.

ಚಿತ್ರಾ said...

ಪ್ರಕಾಶಣ್ಣ,
ನಿಜ. ಅನುಭವ ಭಯಂಕರವೇ ಆಗಿತ್ತು. ಆದರೂ, ಕೆಲವೊಮ್ಮೆ ಇಂಥ ಅನುಭವಗಳಿಂದ ಬಹಳಷ್ಟು ಕಲಿಯುತ್ತೇವೆ ಅಲ್ಲವೇ?

ಚಿತ್ರಾ said...

ಶಿವೂ,
ಬಹುಶಃ ಇಂಥಾ ಸಂದರ್ಭ ಗಳಲ್ಲಿ ನಿಭಾಯಿಸುವ ಧೈರ್ಯ ತನ್ನಿಂತಾನೆ ಬಂದುಬಿಡುವುದೋ ಏನೋ !
ಧನ್ಯವಾದಗಳು.

ಚಿತ್ರಾ said...

ಶೆಟ್ಟರೆ,
ನಿಮ್ಮ ಅನುಭವ ಕೂಡ ಭಯಾನಕವೇ ಆಗಿದೆ. ಆದ್ರೆ, ನೀವಂದಂತೆ ಮುಂಬಯಿಯ ಮಾಯೆ ತನ್ನಲ್ಲಿ ಬಂದ ಎಲ್ಲರನ್ನೂ ಮೋಹಗೊಳಿಸಿ ಕಟ್ಟಿಹಾಕಿಬಿಡುತ್ತದೆ ಎನ್ನುವುದು ಸತ್ಯ. ಇಲ್ಲಿಯವರೆಗೆ , ಯಾವ ಬಾಂಬ್ ದಾಳಿಯಿರಲಿ, ಸ್ಫೋಟವಿರಲಿ , ಪ್ರಕೃತಿಯ ವಿಕೋಪವೇ ಇರಲಿ , ಮುಂಬಯಿಯ ಜನಜೀವನ ಕೆಲವೇ ಗಂಟೆಗಳಲ್ಲಿ ಮೊದಲಿನ ಸ್ಥಿತಿಗೆ ಮರಳುವುದು ಆಶ್ಚರ್ಯಕರವೇ !