July 8, 2009

ಹಾಡೊಂದು ನಾ ಹಾಡುವೆನು ....

ಟಿವಿ ಯ ಉದಯ ವಾಹಿನಿಯಲ್ಲಿ ಕನ್ನಡ ಹಾಡು ಪ್ರಸಾರವಾಗುತ್ತಿತ್ತು.
’ ಸ್ನೇಹದ ಕಡಲಲ್ಲೀ ನೆನಪಿನ ದೋಣಿಯಲೀ ಪಯಣಿಗ ನಾನಮ್ಮಾ..... ’
ಕೇಳಿದಕೂಡಲೇ ನಾನು ಕಿಸಕ್ಕೆಂದು ನಕ್ಕುಬಿಟ್ಟೆ.
ಅಲ್ಲೇ ಪೇಪರ್ ಓದುತ್ತಾ ಕುಳಿತ ಗಂಡ ತಲೆಯೆತ್ತಿ ನೋಡಿದರೆ, ಅಮ್ಮನಿಗೇನಾಯ್ತಪ್ಪ ಇದ್ದಕ್ಕಿದ್ದಂತೆ ಎಂಬ ಭಾವ ಮಗಳ ಮುಖದಲ್ಲಿ !

ಏನಿಲ್ಲ ಕಣೆ, ಚಿಕ್ಕವರಿದ್ದಾಗ ಈ ಹಾಡನ್ನ ನಾವು ಬೇರೇನೇ ರೀತಿ ಹಾಡ್ತಿದ್ವಿ ಅಂದ ಕೂಡಲೇ ಶುರುವಾಯ್ತು
’ ಅಮ್ಮ ಏನಂತ ಹಾಡ್ತಿದ್ರಿ ? ಹೇಳೇ.. "

ಸರಿ ನಾನಾದರೂ ಹೇಗೆ ಸುಮ್ಮನಿರಲಿ? ಹಾಡಿದೆ ...
" ಕೆಳದಿಯ ಕೆರೆಯಲ್ಲೀ, ಕುಪ್ಪನ ದೋಣಿಯಲೀ... ಪಯಣಿಗ ನಾನಮ್ಮಾ "

ಸಿರಿಯ ನಗು ಜೋರಾಯ್ತು. "ಅಮ್ಮಾ, ಈ ಕುಪ್ಪ ಯಾರಮ್ಮಾ? "

"ಅವನೊಬ್ಬ ಇದ್ದ ಪುಟ್ಟಿ. ಅವಂದು ಒಂದು ಗುಂಡಗಿರೋ ತೆಪ್ಪ ಇತ್ತು, ಅದನ್ನ ಮೀನು ಹಿಡಿಯೊಕೆ ತೊಗೊಂಡು ಹೋಗ್ತಿದ್ದ. ಯಾವಾಗಲಾದ್ರೂ ನಾವೂ ಅವನಿಗೆ ಗಂಟು ಬಿದ್ದು ಅದರಲ್ಲಿ ಒಂದು ರೌಂಡ್ ಹೋಗ್ತಾ ಇದ್ವಿ. "

"ಛೀ , ಆ ಮೀನು ವಾಸನೆಯಲ್ಲಾ? "

"ಅಲ್ಲ ಪುಟ್ಟೀ, ಮೀನು ಹಿಡಿಯೋ ದಿನ ಅಲ್ಲ. ಹಾಗೇ, ಒಂದೊಂದು ಸಲ ಮನಸು ಬಂದಾಗ ಅವನು ಮಕ್ಕಳನ್ನು ಕರ್ಕೊಂಡು ಹೋಗ್ತಿದ್ದ. ಆ ದಿನ ನಮ್ಮನ್ನೆಲ್ಲ ಹಿಡಿಯೋರೇ ಇರ್ತಾ ಇರಲಿಲ್ಲ ಅದ್ರಲ್ಲೂ ಕೆಲವು ಸಲ ಮನೆಲಿ ಹೇಳ್ತಾನೂ ಇರ್ಲಿಲ್ಲ ನಾವು !
"
" ಒಳ್ಳೇ ಮಜಾ ಮಾಡ್ತಿದ್ರಿ ನೀವುಗಳು. ಈಗ , ನಂಗಾದ್ರೆ , ಎಲ್ಲೆ ಹೋಗೋದಾದ್ರೂ ಮನೇಲಿ ಹೇಳಿಯೇ ಹೋಗ್ಬೇಕು ಅಂತ ರೂಲ್ಸ್ ಮಾಡ್ತೀಯಾ !! "

"ಹಾಗಲ್ಲ ಕಣೇ, ಆಗಿಗೂ , ಇವತ್ತಿಗೂ ವ್ಯತ್ಯಾಸ ಇದೆ. ಹೋಗಲಿ ಬಿಡು, ನಾವು ಇನ್ನೂ ತುಂಬಾ ಹಾಡುಗಳನ್ನ ಹೀಗೇ ಉಲ್ಟಾ ಪುಲ್ಟಾ ಹಾಡ್ತಿದ್ವಿ ಗೊತ್ತಾ? "
ನಾನು ಮಾತು ತಿರುಗಿಸಿದೆ.

"ಹೇಳು ಅಮ್ಮಾ ... ಕೇಳೋಕೆ ಮಜಾ ಇರತ್ತೆ. "

ಹಂ... ಎಂದೋ ಮರೆತಿದ್ದ ಒಂದೊಂದೇ ಹಾಡುಗಳು ನೆನಪಾಗತೊಡಗಿದವು !

ಭಕ್ತ ಪ್ರಹ್ಲಾದ ಸಿನೆಮಾದ " ಲಾಲಿ ಲಾಲಿ ಸುಕುಮಾರ " ದ ನಮ್ಮ ಆವೃತ್ತಿ
" ಲಾಲಿ ಲಾಲಿ ಸುಕುಮಾರ, ಲಾಲಿ ಮುದ್ದು ಬಂಗಾರ
ಅಜ್ಜನ ಬೋಳಿನ ಕನ್ನಡಿಗೆ ಕಲ್ಲನು ಹೊಡೆದಾ ವೀರಾಧಿವೀರ .."
ಎಂದು ಹಾಡಿ ದೊಡ್ಡವರ ಕೈಲಿ ಬೈಸಿಕೊಂಡಿದ್ದು ಹೇಳುವಾಗ, ಸಿರಿಗೆ ನಗುವೋ ನಗು.

" ಅಮ್ಮಾ, ನಂಗೂ ಹೀಗಿದ್ದೇ ಒಂದು ಹಾಡು ಗೊತ್ತು.
" ಐ ಆಮ್ ಅ ಡಿಸ್ಕೋ ಡಾನ್ಸರ್
ಅಜ್ಜನ ಸೈಕಲ್ ಪಂಕ್ಚರ್ ,
ಅಜ್ಜಿಗೆ ಬಂತು ಕ್ಯಾನ್ಸರ್ ... "
ಹಾಡುವಷ್ಟರಲ್ಲಿ ಅವಳಿಗೆ ನಗು ತಡೆಯಲಾಗುತ್ತಿಲ್ಲ.

"ಅಮ್ಮಾ ಈಗ ನೀನು ಹೇಳು .."

"ನಾವು ಹಾಡ್ತಿದ್ದ ಹಾಡುಗಳ ಒರಿಜಿನಲ್ ಎಲ್ಲ ನೀನು ಕೇಳಿಯೂ ಇಲ್ಲ ಕಣೇ, "

"ಪರವಾಗಿಲ್ಲ , ಅದನ್ನು ನೀನೇ ಹೇಳು . ಒಟ್ಟಿನಲ್ಲಿ ನಂಗೆ ಕೇಳಬೇಕು ಅಷ್ಟೆ ! "

ಇಷ್ಟಾದಮೇಲೆ ಯಾವುದೇ ನೆಪ ಒಡ್ಡುವ ಧೈರ್ಯ ನನಗಿರಲಿಲ್ಲ.
ನಾನು ಹುಟ್ಟುವ ಮೊದಲಿನ ಚಿತ್ರಗಳ ಹಾಡುಗಳನ್ನೂ ಸಹ ನಾವು ಅವುಗಳ ಪಾಡಿಗೆ ಬಿಟ್ಟಿರಲಿಲ್ಲ.

’ ಶಿವಪ್ಪಾ ಖಾರ ತಿಂದ
ಮೂರು ಲೋಟ ನೀರು ಕುಡಿದ..
ಹೊಟ್ಟೆನೋವು ತಾಳಲಾರೆ ಕಾಪಾಡೆಯಾ ...

ಪಂಚೆ ಉಟ್ಗಂಡ್ ಮಾದಾ, ಚಾದಂಗ್ಡಿಗ್ ಹೋದಾ
ಪೂರಿಬಾಜಿ ತಿಂದಾ ಹೊಟ್ಟೆ ತೊಳಸಿ ಬಿದ್ದಾ..
ಎಂಬ ಇಮೋಷನಲ್ ಹಾಡುಗಳಿರಲಿ,

" ಗಜಮುಖನೇ ಗಡಿಗೆ ಮುಕ್ಳಿಯವ್ನೇ
ನಿನಗೆ ನಾಕಾಣೆ..
ಕಾಯಿ ಒಡೆದ ಖರ್ಚಿಗೇ
ನನಗೆ ಎಂಟಾಣೆ "
ಎಂಬ ಡಿವೋಷನಲ್ ಹಾಡುಗಳಿರಲಿ

"ಒಂದೇ ಮಾಸ್ತರಂ ... ಹೊಡಿತ್ರಾಂ , ಬಡೀತ್ರಾಂ
ಕಿವಿ ಚಂಡೆ ತಿರುಪುತ್ರಾಂ .. "
ಎಂಬ ದೇಶಭಕ್ತಿ ಗೀತೆಯೇ ಇರಲಿ, ನಮಗೆಲ್ಲಾ ಒಂದೇ.
ನಮ್ಮ ಪಾಲಿಗೆ ಈ ಥರ ವರ್ಗೀಕರಿಸುವುದು ಹಾಡುಗಳಿಗೆ ಅನ್ಯಾಯ ಮಾಡಿದಂತೆ .

ಆಮೇಲೆ , ನಾವು ಹೈಸ್ಕೂಲ್ನಲ್ಲಿ ಇರುವಾಗ ಒಬ್ಬ ಸರ್ ಇದ್ದರು. ಅವರು ಭೂಗೋಳ ಪಾಠ ಮಾಡುವಾಗ ನಮ್ಮ ಕಣ್ಣುಗಳು ತೆರೆದಿರಲು ಮುಷ್ಕರ ಹೂಡುತ್ತಿದ್ದವು . ಆಗ ನಮ್ಮ ಕ್ಲಾಸಿನ ಹಿಂದಿನ ಬೆಂಚ್ ಯುವರಾಜರು ಯಾರೋ ಹಾಡುತ್ತಿದ್ದರು
’ಪಾಠ ಸಾಗಲಿ ಮುಂದೆ ಹೋಗಲಿ ಕೊನೆಯ ಪುಟವನು ಸೇರಲಿ..
ಟೆಸ್ಟು ಗಿಸ್ಟಿನ ತಂಟೆಗೋಗದೆ ಪೂರ್ತಿ ಮಾರ್ಕನು ನೀಡಲಿ ’

ಶಾಲೆಯ ಕಾರ್ಯಕ್ರಮಗಳಲ್ಲಿ ಕೆಲವರು ಹಾಡುವಾಗ ಹಿಂದೆ ಕುಳಿತ ಇನ್ಯಾರೋ ಗುನುಗುತ್ತಿದ್ದರು
" ನೀ ಹಾಡಲು ನಾಯಿ ಹೆದರಬೇಕು ..
ಬೌವ್ ಎನ್ನುತ ಕಾಲು ಕಡಿಯಬೇಕು ... "

ಕೇಳಲು ಮಧುರವಾಗಿದ್ದ ಹಾಡುಗಳೇ ಹೆಚ್ಚಾಗಿ ಬದಲಾಗುತ್ತಿದುದಕ್ಕೆ ಅವುಗಳ ಜನಪ್ರಿಯತೆಯೇ ಕಾರಣವಾಗಿತ್ತೇನೋ!

ಸನಾದಿ ಅಪ್ಪಣ್ಣ ದ ’ ರಾಗ ಹೊಸರಾಗ ಶುಭಯೋಗ ತಂದಿದೆ ’ ಎಂಬುದು " ರೋಗ , ಹಳೆ ರೋಗ ಮತ್ತೀಗ ಬಂದಿದೆ... ’ ಎಂದು ರೂಪ ಬದಲಿಸಿಕೊಂಡರೆ

" ಕೆರೆದರೂ ಸಾಲದೇ , ಕಜ್ಜಿಯೆ ನಿನಗೇಕೆ ನನ್ನಲ್ಲಿ ಈ ಮೋಹಾ.." ಎನ್ನುವುದಂತೂ ಬಹಳ ಜನಪ್ರಿಯವಾಗಿತ್ತು.

ಅಮೇಲೆ , ಕಾಲೇಜ್ ಗೆ ಹೋಗುವ ಸಮಯದಲ್ಲಿ ಅಲ್ಪ ಸ್ವಲ್ಪ ಇಂಗ್ಲಿಷ್ ಬಳಸಲು ಶುರು ಮಾಡಿದೆವು.
ಅರುಣ ರಾಗ ಚಿತ್ರದ " ನಾನೊಂದು ತೀರ ನೀನೊಂದು ತೀರ
ಮನಸು ಮನಸು ದೂರಾ ಪ್ರೀತಿ ಹೃದಯ ಭಾರ’ ಹಾಡನ್ನು ಆಂಗ್ಲೀಕರಿಸಿ

" ಐ ಒನ್ ಬ್ಯಾಂಕು , ಯು ಒನ್ ಬ್ಯಾಂಕು
ಮೈಂಡು ಮೈಂಡು ಲಾಂಗರ್
ಲವ್ವು ಹಾರ್ಟು ವೇಯಿಟು... " ಎಂದು ಹಾಡುತ್ತಿದ್ದೆವು !

ಕೇವಲ ಕನ್ನಡವೇ ಏಕೆ , ಹಿಂದಿ ಚಿತ್ರಗೀತೆಗಳೂ ನಮ್ಮ ಬಾಯಲ್ಲಿ ಬದಲಾಗಿ ನಲಿಯುತ್ತಿದ್ದವು.
’ರೂಪ್ ತೇರಾ ಮೊಸರನ್ನ , ಪ್ಯಾರ್ ಮೇರಾ ಚಿತ್ರಾನ್ನ .. " ಎಂಬುದು ನಮ್ಮೆಲ್ಲರ ಫೇವರಿಟ್ ಆಗಿತ್ತು.

ಹೀಗೆ ನಾನು ಹಾಡುಗಳ ಲಿಸ್ಟ್ ಕೊಡುತ್ತಿದ್ದರೆ .. ಸಿರಿಯ ನಗು ನಾನ್ ಸ್ಟಾಪ್ .

ಇವೆಲ್ಲ ಹಾಡುಗಳನ್ನೂ ನಾವೇ ಬದಲಾಯಿಸಿದ್ದೇನೂ ಅಲ್ಲ. ಆ ಸಮಯದಲ್ಲಿ , ಯಾರಿಂದಲೋ ಪರಿವರ್ತನೆಗೊಂಡು ಬಾಯಿಂದ ಬಾಯಿಗೆ ಹರಿದುಬಂದ ಹಾಡುಗಳೆ ಹೆಚ್ಚಿನವು! ಹೀಗಾಗಿ, ನಿಮ್ಮಲ್ಲೆಷ್ಟೋ ಜನರಿಗೆ ಇವು ಗೊತ್ತಿರಬಹುದು. ( ಇನ್ನೂ ಹೆಚ್ಚು ಗೊತ್ತಿರಬಹುದು ! )

ಹಾ, ಸಿರಿ ಎದುರಿಗಿಲ್ಲದಾಗ ಇನ್ನೂ ಬಹಳಷ್ಟು ಹಾಡುಗಳನ್ನು ನನ್ನ ಪತಿದೇವರು ಹೇಳಿದರು. ಅವನ್ನೆಲ್ಲ ಇಲ್ಲಿ ಬರೆಯಲಾಗದು ಬಿಡಿ !!!

24 comments:

Ittigecement said...

ಚಿತ್ರಾ.....

ಸಿಕ್ಕಾಪಟ್ಟೆ ನಗ್ಸಿಬಿಟ್ಟಿದ್ದೀರಾ...!

"ಪಂಚಮವೇದಾ...
ಚಡ್ಡಿ ಬಿಚ್ಚಿಕೊಂಡು ಹೋದಾ...
ಕೆರೆ ಏರಿ ಮೇಲೆ ಕೂತಾ....
................
............."

ಹ್ಹಾ....ಹ್ಹಾ....!
ನನಗೂ ಹಳೆಯ ನೆನಪು ಮಾಡಿಸಿ...
ಅದರ ಬಗ್ಗೆ ಬರೆಯಲು ಸ್ಪೂರ್ತಿ ಸಿಕ್ಕಿಬಿಟ್ಟಿದೆ...

ಬೆಳಿಗ್ಗೆ ನನ್ನಾಕೆ ನನ್ನ ಹೊಸ ಲೇಖನ ಓದಿ...
"ಈ.. ನಾಗು, ರಾಜಿ ಲವ್ವು ಎಲ್ಲ ಬಿಟ್ಟಾಕಿ..
ನಿಮ್ಮ ಬಾಲ್ಯದ ಬಗೆಗೆ ಬರಿರಿ..
ಮಜಾ ಇರ್ತದೆ " ಅಂದಿದ್ದರು...

ತುಂಬಾ ಸೂಪರ್ರಾಗಿ ಇದೆ...

ಇಲ್ಲಿ ಕೆಲವೊಂದನ್ನು ಹಂಚಿಕೊಳ್ಳೋಣವೆಂದರೆ...
..............
ಇರಲಿ ಬ್ಲಾಗಿನಲ್ಲೇ ಬರಿತಿ...

ತುಂಬಾ.... ತುಂಬಾ ಧನ್ಯವಾದಗಳು..
ನಗಿಸಿದ್ದಕ್ಕೆ...
ಸ್ಪೂರ್ತಿಕೊಟ್ಟಿದ್ದಕ್ಕೆ....

Keshav.Kulkarni said...

ಮಜಾ ಬಂತು. ನಾವೂ ಚಿಕ್ಕವರಿರುವಾಗ ಈ ತರಹ ತುಂಬಾ ಹಾಡು ಬಾಯಿಂದ ಬಾಯಿಗೆ ಬರುತ್ತಿತ್ತು, ಬಹಳಷ್ಟನ್ನು ಬರೆಯಲಾಗುವುದಿಲ್ಲ, ಬಿಡಿ ;)

sunaath said...

ಚಿತ್ರಾ,
ತಿರುಚಿದ ಹಾಡುಗಳನ್ನು ಕೇಳಿ ನನಗೂ ತುಂಬಾ ನಗು ಬಂತು.
ಅನೇಕ ಧನ್ಯವಾದಗಳು.

Ranjana Shreedhar said...

ಚಿತ್ರ,
ನಿಮ್ ಬ್ಲಾಗ್ ಬಗ್ಗೆ ನನ್ನ ಫ್ರೆಂಡ್ ಒಬ್ರು ಹೇಳಿದ್ರು... ಲಿಂಕ್ ಕಳುಹಿಸಿದರು. ಚೆನ್ನಾಗಿದೆ ಓದಿ ಅಂತ..
ನಿಜವಾಗಲೂ ತುಂಬಾ ಚೆನ್ನಾಗಿದೆ.
ನಿಮ್ಮ ಬರಹ ತುಂಬಾ ಇಷ್ಟ ಆಯ್ತು..
ಬರಹ ಓದಿ ತುಂಬಾ ನಗು ಬಂತು..
ನನ್ನ ಬಾಲ್ಯದ ನೆನಪುಗಳು ಮರುಕಳಿಸಿದವು..
ಚಿಕ್ಕೊರಿದ್ದಾಗ ನಾವು ಹೀಗೆ ಹಾಡುಗಳನ್ನ ತಿರುಚಿ ಹಾಡುತ್ತಿದ್ದೆವು...

ಧನ್ಯವಾದಗಳು ಹೀಗೊಂದು ನೆನಪನ್ನ ತಂದಿರೋದಕ್ಕೆ..
ಹೀಗೆ ಬರಿತ ಇರಿ...

ಚಿತ್ರಾ said...

ಪ್ರಕಾಶಣ್ಣ,
ಬರಹವನ್ನು ಮೆಚ್ಚಿದ್ದಕ್ಕೆ ತುಂಬಾ ಥ್ಯಾಂಕ್ಸ್ ! ಕೆಲವು ವಿಷಯಗಳು , ನಮ್ಮೆಲ್ಲರ ಬಾಲ್ಯದ ' ಕಾಮನ್' ನೆನಪುಗಳೇನೋ ಅಲ್ಲವೇ? ನಿಮ್ಮ ಬಾಲ್ಯದ ನೆನಪುಗಳನ್ನು , ನಿಮ್ಮ ಚೇತೋಹಾರಿ ಶೈಲಿಯಲ್ಲಿ, ಓದಲು ಕಾತುರಳಾಗಿದ್ದೇನೆ ! ಬೇಗ ಬರೀರಿ .

ಚಿತ್ರಾ said...

ಕೇಶವ್ ,
ಮೆಚ್ಚಿದ್ದಕ್ಕೆ ಬಹಳ ಧನ್ಯವಾದಗಳು. ಬಹುಶಃ ಆ ಕಾಲವೇ ಹಾಗಿತ್ತೇನೋ , ಹಾಡುಗಳನ್ನು ತಿರುಚಿ ಹಾಡಿ ಖುಶಿಪಡುವುದೇ ಮೆಚ್ಚಿನ ಕೆಲಸವಾಗಿತ್ತು !
ಬರುತ್ತಿರಿ .

ಚಿತ್ರಾ said...

ಕಾಕಾ,
ನಕ್ಕಿದ್ದಕ್ಕೆ , ಖುಷಿ ಪಟ್ಟಿದ್ದಕ್ಕೆ ಆಭಾರಿಯಾಗಿದ್ದೇನೆ . ನಿಮ್ಮ ಮೆಚ್ಚುಗೆ ನನಗೆ ಸ್ಫೂರ್ತಿ ಕೊಡುತ್ತದೆ.

ಚಿತ್ರಾ said...

ರಂಜನಾ,
ನನ್ನ ಬರಹ ನಿಮ್ಮ ಬಾಲ್ಯದ ನೆನಪನ್ನು ತಾಜಾಗೊಳಿಸಿದರೆ, ನಿಮ್ಮನ್ನು ನಗಿಸಿ ಖಷಿ ಕೊಟ್ಟರೆ ನನಗೆ ಅದೇ ಸಂತೋಷ !
ನಿಮಗೂ , ನನಗೆ ಇನ್ನೊಬ್ಬ ಓದುಗರನ್ನು ಕೊಟ್ಟ ನಿಮ್ಮ ಸ್ನೇಹಿತರಿಗೂ ನನ್ನ ಧನ್ಯವಾದಗಳು !
ಬರುತ್ತಿರಿ .

Santhosh Rao said...

Chennagide.. :)

PARAANJAPE K.N. said...

ಓದಿ ನಕ್ಕು ಬಿಟ್ಟೆ, ತು೦ಬಾ ಚೆನ್ನಾಗಿದೆ.

ತೇಜಸ್ವಿನಿ ಹೆಗಡೆ said...

ಚಿತ್ರಕ್ಕ,

ರಾಶಿ ನಗುಬಂತು. ನಂಗನೂ ಹೀಂಗೇ ಹಾಡ್ತಿದ್ಯ. ಅದ್ರಲ್ಲೊಂದು ಹಾಡು ಹೀಗಿಂದ್ದು ನೋಡು...

"ದೂರದ ಊರಿಂದ ಹಮ್ಮಿರ ಬಂದ,
ಡಿಸ್ಕೌಂಟು ಸೀರೇ ತಂದ..
ಒಂದ್ಸಲ ಉಟ್ಕಂಡ್ರೆ ಹರ್ದೋಗ್ತು ಹೇಳಿ
ಉಟ್ಕಂಬ್ದೇ ಬೇಡ ಅಂದ..:) "

ಹಾಂ.. ಹಾಗೇ."ನೀ ಮೀಟಿದ ನೆನಪೆಲ್ಲವೂ.." ಹಾಡನ್ನು ಹೀಗೆ ಹೇಳುತ್ತಿದ್ದೆವು..
"ನೀ ಬೀಸಿದ ಕಾಯಿ ತಂಬ್ಳಿಗೆ
ಎರಡುಪ್ಪು ಕಡಿಮೆಯಾಯ್ತಲ್ಲೇ..." :)

ಸುಧೇಶ್ ಶೆಟ್ಟಿ said...

ಚಿತ್ರಾ ಅವರೇ...

ಆಫೀಸಿನಲ್ಲೇ ಬಿಡುವಿದ್ದಾಗ ನಿಮ್ಮ ಲೇಖನವನ್ನು ಓದಿಕೊ೦ಡಿದ್ದೆ... ಆಗ ನಗು ತಡೆಯಲಾಗಿರಲಿಲ್ಲ.... ನನ್ನ ಕಲೀಗ್ಸ್ ಕೂಡ ಏನು ಅ೦ತ ನೋಡಿ, ಪದ್ಯಗಳನ್ನು ಓದಿ ನಕ್ಕು ಬಿಟ್ಟರು....

ತು೦ಬಾ ಚೆನ್ನಾಗಿತ್ತು....

Umesh Balikai said...

ಹ್ಹೆ ಹ್ಹೆ.. ಸಖತ್ತಾಗಿತ್ತು ನಿಮ್ಮ ಲೇಖನ.. ನಾವೂ ಚಿಕ್ಕವರಿದ್ದಾಗ ಸುಮಾರು ಹಾಡುಗಳನ್ನು ನಮಗೆ ಬೇಕಾದಂತೆ ತಿರುಚಿ ಹಾಡಿ ನಗುತ್ತಿದ್ದೆವು. ಉದಾಹರಣೆಗೆ:

ತ್ತುತ್ತುತ್ತೂ ತ್ತುತ್ತುತ್ತಾರಾ,
ಬಂಗಾರಪ್ಪನ್ ಚೂಡಿ ದಾರಾ..

ವಾಷಿಂಗ್ ಪೌಡರ್ ನಿರ್ಮಾ,
ನಿಮ್ಮಪ್ಪ ಮಾಡಿದ ಕರ್ಮಾ..

:)

ಬಾಲು said...

chennagide. naavu kooda haadugalannu remix maduttiddevu, athava remix haadugalannu poshisutta iddeve. inthahadde haadu aagabeku antha enu iralilla. ella haadugalu onde, haadina remix bagge no rasism.

nanu odutta iddaga
raghupathi raghava rasabaale,
Pathitha paavana pachabaale
Ishwar alla irulli dose..
e haadu sikkapatte famous ittu.

aadre mestra munde helo hangiralilla.

ಮಲ್ಲಿಕಾರ್ಜುನ.ಡಿ.ಜಿ. said...

ಸಕತ್ತಾಗಿವೆ ನಿಮ್ಮ ಹಾಡುಗಳ ರಸಗವಳ.
ಬಂಧನ ಚಿತ್ರದ್ದೂ ಹೀಗೇ ಏನೇನೋ ಮಾಡುತ್ತಿದ್ದುದು ಮುಸುಕು ಮುಸುಕಾಗಿ ನೆನಪಾಗ್ತಿದೆ. ತಮಾಷೆಯಾಗಿದೆ.

shivu.k said...

ಚಿತ್ರಾ ಮೇಡಮ್,

ನಿಮ್ಮ ಬ್ಲಾಗಿಗೆ ತಡವಾಗಿ ಬಂದಿದ್ದಕ್ಕೆ ಕ್ಷಮೆಯಿರಲಿ[ನನ್ನ ಮನೆಯಲ್ಲಿ ಇಂಟರ್‌ನೆಟ್ ಇರಲಿಲ್ಲವಾದ್ದರಿಂದ ಬರಲಾಗಲಿಲ್ಲ]
ಮತ್ತೆ ನಿಮ್ಮ ಬಾಲ್ಯದ ಹಳೇ ಹಾಡುಗಾರಿಕೆ ಕೇಳಿ ಸಕ್ಕತ್ ನಗುಬಂತು. ನನಗೂ ಬಾಲ್ಯದಲ್ಲಿ ಹೀಗೆ ಹಾಡುತ್ತಿದ್ದುದು ನೆನಪಾಯಿತು.

’ಪಾಠ ಸಾಗಲಿ ಮುಂದೆ ಹೋಗಲಿ ಕೊನೆಯ ಪುಟವನು ಸೇರಲಿ..
ಟೆಸ್ಟು ಗಿಸ್ಟಿನ ತಂಟೆಗೋಗದೆ ಪೂರ್ತಿ ಮಾರ್ಕನು ನೀಡಲಿ ’

" ನೀ ಹಾಡಲು ನಾಯಿ ಹೆದರಬೇಕು ..
ಬೌವ್ ಎನ್ನುತ ಕಾಲು ಕಡಿಯಬೇಕು ... "


ರೋಗ , ಹಳೆ ರೋಗ ಮತ್ತೀಗ ಬಂದಿದೆ... ’

" ಕೆರೆದರೂ ಸಾಲದೇ , ಕಜ್ಜಿಯೆ ನಿನಗೇಕೆ ನನ್ನಲ್ಲಿ ಈ ಮೋಹಾ.."


ಮೇಲಿನವುಗಳನ್ನೆಲ್ಲಾ ಓದುತ್ತಿದ್ದಾಗ ನಗು ತಡೆಯಲಾಗಲಿಲ್ಲ...

ಇನ್ನಷ್ಟು ಬಾಲ್ಯದ ಆನುಭವಗಳನ್ನು ಹಂಚಿಕೊಳ್ಳಿ..

ಧನ್ಯವಾದಗಳು.

Unknown said...

ಹ್ಮ್ಂ, ಹಳೆದೆಲ್ಲ ನೆನಪಾಗ್ತಾ ಇದ್ದು..
ಇನ್ನೊಂದು ಲಿಸ್ಟಿಗೆ........ನೂರೊಂದು ಬಸ್ಸು ಹಳಿಯಾಳದಿಂದ, ಹಾಳಾಗಿ ಬಂತ್ಯ್ ಗ್ಯಾರೇಜಿನಿಂದ..
ಚೊಲೋ ಇದ್ದು.

ಚಿತ್ರಾ said...

ಸಂತೋಷ್, ಪರಾಂಜಪೆ ,
ನಕ್ಕಿದ್ದಕ್ಕೆ ಧನ್ಯವಾದಗಳು .

ಚಿತ್ರಾ said...

ತೇಜಸ್ವಿನಿ ,
ನೀನು ಬರೆದ ಹಾಡು ನೋಡಿ ನಂಗೂ ನಗುನೇ ನಗು !! ಚೊಲೋ ಇದ್ದು !

ಚಿತ್ರಾ said...

ಸುಧೇಶ್,
ನೀವು ನಕ್ಕಿದ್ದಲ್ಲದೆ , ನಿಮ್ಮ ಸ್ನೇಹಿತರನ್ನೂ ನಗಿಸಿದ್ದಕ್ಕೆ ಥ್ಯಾಂಕ್ಸ್ ! ಹೀಗೆ ನಗಿಸುವ ಪ್ರಯತ್ನ ಮಾಡುತ್ತಿರುತ್ತೇನೆ.

ಚಿತ್ರಾ said...

ಉಮೇಶ್,
ಹಾ, " ವಾಶಿಂಗ್ ಪೌಡರ್ ನಿರ್ಮಾ.." ನಮ್ಮ ಪಟ್ಟಿಯಲ್ಲೂ ಇತ್ತು. ನೆನಪಿಸಿದ್ದಕ್ಕೆ ನಿಮಗೆ ಧನ್ಯವಾದಗಳು.

ಮಲ್ಲಿಕಾರ್ಜುನ್,
ಧನ್ಯವಾದಗಳು. ಮಸುಕಾಗಿದ್ದನ್ನು ನೆನಪಿಸಿಕೊಂಡು ನಮ್ಮೊಡನೆ ಹಂಚಿಕೊಳ್ಳಿ. .. ನಾವು ಸ್ವಲ್ಪ ನಗುತ್ತೇವೆ

ಚಿತ್ರಾ said...

ಬಾಲು,
ನಿಜಕ್ಕೂ ಆಗ ನಾವುಗಳು ಹಾಡುಗಳ ಬಗ್ಗೆ ಭೇದ ಭಾವ ತೋರದೆ , ಸಮಾನವಾಗಿ ತಿರುಚುತ್ತಿದ್ದೆವು.
ಈಗ ಒರಿಜಿನಲ್ ಗಳೇ ತಿರುಚಿದಂತಿರುವುದರಿಂದ ಅದನ್ನು ಮತ್ತೆ ತಿರುಚುವುದರಲ್ಲಿ ಅರ್ಥವಿಲ್ಲ ಅಲ್ಲವೇ?
" ರಘುಪತಿ ರಾಘವ.. .. " ನಮ್ಮಲ್ಲೂ ಜನಪ್ರಿಯವಾಗಿತ್ತು .

ಚಿತ್ರಾ said...

ಶಿವೂ,
ತಡವಾದರೂ ಪರವಾಗಿಲ್ಲ. ಬಂದಿರಲ್ಲ , ಧನ್ಯವಾದಗಳು ! ನಿಮಗೆ ನೆನಪಾದ ಹಾಡುಗಳನ್ನು ನಮ್ಮೊಡನೆ ಹಂಚಿಕೊಳ್ಳಿ !

ಚಿತ್ರಾ said...

ಮಧು,
ಹಾ ಹಾ ಹಾ.. ನೂರೊಂದು ಬಸ್ಸು ಹಳಿಯಾಳದಿಂದಾ ...
ಮಸ್ತ್ ಇದ್ದು ಮಾರಾಯಾ ... ಇನ್ನು ನೆಗಿಯಾಡ್ತಾನೆ ಇದ್ದಿ ..