July 17, 2009

ಅನಿಸುತಿದೆ ಯಾಕೋ ...
ನೆನೆಯಬೇಕೆನಿಸುತಿದೆ
ಮಳೆಯಲ್ಲಿ
ನಿನ್ನ ಜೊತೆಯಲ್ಲಿ,
ಹಸಿರು ಹುಲ್ಲಲ್ಲಿ ,
ಮೆಲ್ಲಗೆ ಹೆಜ್ಜೆ ಹಾಕುತ್ತಾ
ನೆನೆಯಬೇಕೆನಿಸುತಿದೆ
ಗೆಳೆಯಾ ಮಳೆಯಲ್ಲಿ

ಕೈಯಲ್ಲಿ ಕೈಯಿಟ್ಟು
ನಿನ್ನೆದೆಗೆ ತಲೆಯಿಟ್ಟು
ಯಾವುದೋ ಗುಂಗಿನಲಿ
ತೇಲುತ್ತಾ ನೀರಿನಲಿ
ನಡೆಯಬೇಕೆನಿಸುತಿದೆ
ಗೆಳೆಯಾ ಮಳೆಯಲ್ಲಿ

ಕಾಲ ಕೆಳಗಿನ ನೀರ
ಛಲ್ಲೆಂದು ಚಿಮ್ಮುತ್ತಾ
ತಂಪಾದ ಮಳೆಹನಿಗೆ
ಮುಖವೊಡ್ಡಿ ಸುಖಿಸುತ್ತಾ
ನಿನ್ನ ತೋಳುಗಳಲ್ಲಿ
ನನ್ನನ್ನೇ ಮರೆಯುತ್ತಾ
ಮುಳುಗಬೇಕೆನಿಸುತಿದೆ
ಗೆಳೆಯಾ ಪ್ರೀತಿಯಲಿ

ಶ್ರಾವಣದ ಸಂಜೆಯಲಿ
ಸುರಿಯುತಿಹ ಸೋನೆಯಲಿ
ನನ್ನ ಒಲವಿನ ಧಾರೆ
ಹೊಳೆಯಾಗಿ ಹರಿವಾಗ
ನೀನಿರಬೇಕಿತ್ತು
ಗೆಳೆಯಾ ನನ್ನ ಸನಿಹದಲಿ

21 comments:

sunaath said...

ಚಿತ್ರಾ,
ಮಳೆಯಂತೂ ಧಾರಾಕಾರವಾಗಿ ಹುಯ್ಯುತ್ತಿದೆ. ಇಂತಹ ಸನ್ನಿವೇಶದಲ್ಲಿ ಇಂತಹ ಭಾವನೆ ಬರುವದು ಸಹಜವೇ. ಹಾಗೆಂದೇ
ಭಾವಪೂರ್ಣವಾದ ಕವನ ಹೊರಹೊಮ್ಮಿದೆ.
ಸೊಬಗಿನ ಕವನಕ್ಕಾಗಿ ಅಭಿನಂದನೆಗಳು.

shivu said...

ಚಿತ್ರಾ ಮೇಡಮ್,

ಮಳೆಯ ಅನುಭವ ನಿಮಗೂ ಚೆನ್ನಾಗೆ ಆಗಿರುವಂತಿದೆ. ಆಷ್ಟಲ್ಲದೇ ಇಂಥ ಕವನ ಹುಟ್ಟುತ್ತದ ಹೇಳಿ...

ಕವನ ಓದುತ್ತಿದ್ದರೇ..ಕಲ್ಪನೆಯ ಲೋಕದಲ್ಲಿ ಮೈಮರೆಯುವಂತಾಗುತ್ತದೆ...ಅಂತ್ಯ ವಾಸ್ತವಕ್ಕೆ ತಂದು ನಿಲ್ಲಿಸುತ್ತದೆ....

ಧನ್ಯವಾದಗಳು.

ಸಿಮೆಂಟು ಮರಳಿನ ಮಧ್ಯೆ said...

ವಾಹ್....

ಪ್ರೇಮ...
ಮುಂಗಾರು ಮಳೆಯಂತೆ...
ಎಷ್ಟು ಬಂದರೂ...
ಬೇಸರವಾಗದಂತೆ...
ಬೀಜ ಮೊಳಕೆಯೊಡೆದು...
ಚಿಗುರುವಂತೆ....
..............
ಹೊಸ ಆಸೆ...
ಹೊಸ ಭರವಸೆ...
ಭವಿಷ್ಯದ ಕನಸಿನಂತೆ.....

ನಿಮ್ಮ ಕವನವೂ ಸೊಗಸಾಗಿದೆ.....

ಅಭಿನಂದನೆಗಳು...

PARAANJAPE K.N. said...

ಬಹಳ ಚೆನ್ನಾಗಿದೆ ಕವನ, ಈ ಸುರಿಯುವ ಜಡಿಮಳೆಯ ಹಿನ್ನೆಲೆಯಲ್ಲಿ ನಿಮ್ಮ ಕವನ ಮೆಲುಕು ಹಾಕುವಂತಿದೆ.

ಜಲನಯನ said...

ಗೆಳೆಯನೊಂದಿಗೆ ನೆನೆದು...ಮನವೆರಡು ಬೆಸೆದು, ಮಳೆಹನಿಗೆ ಮುಖವೊಡ್ಡಿ....
ಏನೇನು ಕಲ್ಪನೆಯ ರೆಕ್ಕೆ ಬಿಚ್ಚಿದಿರಿ...ಚಿತ್ರಾ...ಬಹು ಬಣ್ಣದ ಮಳೆಬಿಲ್ಲಿನ ಚಿತ್ತಾರಕೆ ಚಿತ್ರ ಬಳಿದ ಬಣ್ಣ
ಚನ್ನಾಗಿದೆ...ಆದ್ರೆ..ಈ ತರಹ ಎಲ್ಲಿ ನಡೆಯಬೇಕೆಂದು ನಿಮ್ಮ ಇಚ್ಚೆ,,? ನಮ್ಮ ಬೆಂದಕಾಳೂರಲಿ ಅಂದ್ರೆ...ಹುಶಾರು..!! ತೆರೆದ ಮ್ಯಾನ್-ಹೋಲ್ ಗಳು ಇದ್ದಾವು...!!

Guru's world said...

ಚಿತ್ರ
ವಾಹ್...ತುಂಬ ಚೆನ್ನಾಗಿ ಇದೆ.....ಕೊನೆಯ ಸಾಲುಗಳು ಅಂತು ತುಂಬ ಇಸ್ಟವಾದವು..
"ನನ್ನ ಒಲವಿನ ಧಾರೆ
ಹೊಳೆಯಾಗಿ ಹರಿವಾಗ
ನೀನಿರಬೇಕಿತ್ತು
ಗೆಳೆಯಾ ನನ್ನ ಸನಿಹದಲಿ"
ನೈಸ್ ಕವನ.....ಮುಂದುವರಿಸಿ.....

ಗುರು

ಸುಧೇಶ್ ಶೆಟ್ಟಿ said...

ಮಳೆಗಾಲದಲ್ಲಿ ನೀವು ಬರೆದ ಸು೦ದರ ಕವನ ಬೆಚ್ಚಗಾಗಿಸುವ೦ತಿದೆ...

ಪ್ರತಿಯೊ೦ದು ಸಾಲುಗಳೂ ಸು೦ದರವಾಗಿವೆ...

ಶೀರ್ಷಿಕೆ ಕೂಡ...

ಚಿತ್ರಾ said...

ಸುನಾಥ್ ಕಾಕಾ,
ಕವನ ನಿಮಗಿಷ್ಟವಾಗಿದ್ದು ನನಗೆ ಸಂತಸ ತಂದಿದೆ. ನಿಮ್ಮ ಪ್ರೋತ್ಸಾಹ ಹೀಗೆ ಇರಲಿ.

ಶಿವೂ,
ಈ ಸಲ ಮಳೆಯ ಅನುಭವ ಹೆಚ್ಚೇನು ಆಗಿಲ್ಲ ! ಆದರು ಮಳೆಗಾಲದ ಕಲ್ಪನೆಯೇ ಕವನಕ್ಕೆ ಸ್ಫೂರ್ತಿ ಕೊಡುತ್ತದೆ.
ಮೆಚ್ಚಿದ್ದಕ್ಕೆ ಧನ್ಯವಾದಗಳು.

ಚಿತ್ರಾ said...

ಪ್ರಕಾಶಣ್ಣ,
ನನ್ನ ಕವನಕ್ಕೆ ಬರೆದ ನಿಮ್ಮ ಪ್ರತಿಕ್ರಿಯೆಯೇ ಒಂದು ಸುಂದರವಾದ ಕವಿತೆಯಾಗಿ ಹೊಮ್ಮಿದೆ .
ಇಂಥ ಚೆಂದದ ಪ್ರತಿಕ್ರಿಯೆಗೆ ತುಂಬಾ ಥ್ಯಾಂಕ್ಸ್ !

ಚಿತ್ರಾ said...

ಪರಾಂಜಪೆಯವರೇ,
ಜಡಿಮಳೆಯಲ್ಲಿ ಕವನವನ್ನು ಮೆಲುಕು ಹಾಕುತ್ತಿರುವ ನೀವೇ ಅದೃಷ್ಟವಂತರು !
ಇಲ್ಲಂತೂ ಮಳೆ -ಬಿಸಿಲುಗಳ ಕಣ್ಣಾಮುಚ್ಚಾಲೆ ನಡೆದಿದೆ !

ಚಿತ್ರಾ said...

ಜಲನಯನರೆ,
ಮೆಚ್ಚುಗೆಗೆ ಧನ್ಯವಾದಗಳು.
ನಿಮ್ಮ ಬೆಂದಕಾಳೂರಿನಲ್ಲೇನು ನಮ್ಮ ಪುಣ್ಯನಗರಿಯಲ್ಲೂ ಹೀಗೆ ನಡೆಯುವ ಕನಸು ಕಾಣಲಾರೆ ಬಿಡಿ !
ಊರಿಂದ ಹೊರಗೆ, ಹಸಿರು ಹಾಸಿನ ಮೇಲೆ ಹಗುರಾಗಿ ಕಾಲಿಟ್ಟು ಖುಷಿ ಪಡುವ ಬಯಕೆ ನನ್ನದು .
( ಅಂದ ಹಾಗೆ , ತಮ್ಮ ಹೆಸರೇನೆಂದು ಹೇಳಿದರೆ ಪ್ರತಿಕ್ರಿಯೆಗೆ ಅನುಕೂಲ ! )

ಚಿತ್ರಾ said...

ಗುರು,
ಬ್ಲಾಗಿಗೆ ಸ್ವಾಗತ !
ನಿಮ್ಮ ಮೆಚ್ಚುಗೆಗೆ ಆಭಾರಿಯಾಗಿದ್ದೇನೆ. ಹೀಗೆ ಬರುತ್ತಿರಿ

ಸುಧೇಶ್,
ಧನ್ಯವಾದಗಳು.
ಮಳೆಗಾಲದಲ್ಲಿ ಇಂಥಾ ಕನಸುಗಳನ್ನು ಕಾಣುವುದೆಷ್ಟು ಹಿತ ಅಲ್ಲವೇ?

ಜಲನಯನ said...

ಚಿತ್ರಾ, ನನ್ನ ಬ್ಲಾಗ್ ಗೆ follower ಆಗಿದ್ದೀರಿ..ಧನ್ಯವಾದ..ಹಾಗೇ..ಕನ್ಣಾಡಿಸಿ ಪ್ರತಿಕ್ರಿಯಿಸಿ...ಬೈದುಬಿಡಿ ಇಷ್ಟ ಆಗದಿದ್ದರೆ..ಸುಮ್ಮನಂತೂ ಇರಬೇಡಿ...ನಾನು..ಕಾಮೆಂಟ್ಸ್ ನೋಡಿ ಹೊಟ್ಟೆಕಿಚ್ಚುಪಡುವವರ ಪೈಕಿ ನಾನು...(ಶಿವು ಬಗ್ಗೆ ತುಂಬಾನೆ ಇದೆ,,,ಇದು,,, ಆದ್ರೆ... ಶಿವು, ಮಲ್ಲಿಕಾರ್ಜುನ್ ...ಸೂಪರ್...ಚಿತ್ರ ಮತ್ತು ಕಾಮೆಂಟರಿ)...
ಅಂದಹಾಗೆ ನಾನು...ಆಜಾದ್ (ಸ್ವತಂತ್ರ), ನನ್ನ ವ್ಯಾಸಂಗ ಮತ್ತು ಸಂಗ ಮೀನಿಂದು ಅದಕ್ಕೇ...ಜಲನಯನ.

ತೇಜಸ್ವಿನಿ ಹೆಗಡೆ- said...

ಚಿತ್ರಕ್ಕ,

ಸುಂದರ ಕವನ, ನನಗೂ ಎಷ್ಟೋ ಸಲ ಅನಿಸಿದ್ದಿದೆ... "ನೀನಿರಬೇಕಿತ್ತು ಗೆಳೆಯ ನನ್ನ ಸನಿಹದಲಿ" ಅಂತ.. :)

ಕನಸು said...

ಎಂಥ ಮೋಹಕ ಕವಿತೆ.!!??
ತುಂಭಾ ಧನ್ಯವಾದಗಳೂ ರೀ

ಚಿತ್ರಾ said...

ಆಜಾದ್ ಜಲನಯನರೇ,
ನೀವು ಸಹ ಬಹಳ ಚೆನ್ನಾಗಿ ಬರೀತೀರ. ನಿಮ್ಮ ಬರಹಗಳನ್ನು ತಪ್ಪದೆ ಓದಲು ಶುರುಮಾಡಿದ್ದೇನೆ. ಆದಷ್ಟೂ ಪ್ರತಿಕ್ರಿಯೆ ತಿಳಿಸಲು ಪ್ರಯತ್ನಿಸುತ್ತೇನೆ.

ಚಿತ್ರಾ said...

ತೇಜೂ ,
ಮೆಚ್ಚುಗೆಗೆ ಥ್ಯಾಂಕ್ಸು !

ಕನಸು,
ನಿಮ್ಮ ಹೆಸರು ಕೂಡ ಮೋಹಕವಾಗಿದೆ ಕಣ್ರೀ. ಮೆಚ್ಚುಗೆಗೆ ಧನ್ಯವಾದಗಳು !

Anonymous said...

ಚಿತ್ರಾ

ಉತ್ತಮವಾದ ಕವಿತೆ, ತುಂಬಾ ಹಿಡಿಸಿತು.ಕೊನೆಯ ಸಾಲು,
ನೀನಿರಬೇಕಿತ್ತು ಗೆಳಯಾ... ಮನೆಯಲ್ಲಿನ ನೀರು ಹೊಳೆಯಾಗಿ ಹರಿಯುವಾಗ

ಆದರೂ ಒಂದು ಸಂದೇಹ ... ಆಲ್ಲಾ ಕೊಡೆ ಹಿಡಿದು ನೆನೆಯೋಕೆ ಆಗುತ್ತಾ?
ಹಾಗೆ ಸುಮ್ಮನೆ .. ..

ವಿಜಯ

Ranjita said...

ತುಂಬಾ ಚಂದದ ಕವನ ಚೆನ್ನಾಗಿದೆ .. ಎಸ್ಟೋ ಸಲ ನನಗೂ ಹೀಗೆ ಅನ್ನಿಸಿದ್ದಿದೆ :) keep it up :)

ಗೌತಮ್ ಹೆಗಡೆ said...

antu kaaduvantha sundara sarala saalugalu sikkavu nimminda.:)

ಚಿತ್ರಾ said...

ರಂಜಿತಾ, ಗೌತಮ್,
ಮೆಚ್ಚಿದ್ದಕ್ಕೆ ಧನ್ಯವಾದಗಳು ! ಬರುತ್ತಿರಿ .