August 22, 2009

ಹಂದಿ ಜ್ವರದ ಹಾವಳಿ !

ಕಳೆದ ಕೆಲ ವಾರಗಳಿಂದ , ಬರೀ swine flu , H1N1 , ಹಂದಿ ಜ್ವರ ಎಂದು ಕೇಳಿ , ಓದಿ , ಬೇಜಾರಾಗಿ ಬಿಟ್ಟಿದೆ ! ಪುಣೆ ಈ ರೋಗದ ಕೇಂದ್ರ ಬಿಂದುವಾಗಿರುವುದರಿಂದ ದಿನ ಬೆಳಗಾದರೆ ಬೇರೆ ವಿಷಯವೇ ಇಲ್ಲ !
ಬೆಳಿಗ್ಗೆ ಪೇಪರ್ ತೆಗೆದರೆ, ಸಂಜೆ ಟಿವಿ ಹಾಕಿದರೆ, ಆಫೀಸ್ ನಲ್ಲಿ ಟೀ ಟೈಮ್ , ಲಂಚ್ ಟೈಮ್ ನಲ್ಲಿ , ಎಲ್ಲಿ ನೋಡಿದರಲ್ಲಿ ಅದೇ ಸುದ್ದಿ ! ಸ್ನೇಹಿತರು , ಬಂಧುಗಳು ಫೋನ್ ಮಾಡಿದರೆ ಮೊದಲು ಕೇಳುವುದು ಈ ವಿಷಯ. ಮನೆಗೆ ಯಾರಾದರೂ ಬಂದರೆ ಚರ್ಚಿಸುವುದು ಇದೇ ವಿಷಯ ಹೋಗಲಿ, ಇ-ಮೇಲ್ ಓಪನ್ ಮಾಡಿದರೆ,ಹಂದಿ ಜ್ವರದ ಬಗ್ಗೆ ಹತ್ತಾದರೂ ಈ-ಮೇಲ್ ಗಳು ! ಒಂಥರಾ ನಿದ್ದೆಗಣ್ಣಲ್ಲು ಕನವರಿಸುವಂತಾಗುತ್ತಿತ್ತು !

ಇತ್ತೀಚಿನ ದಿನಗಳಲ್ಲಿ ಜನರನ್ನು ಅತ್ಯಂತ ಗಾಬರಿಗೊಳಿಸಿದ ಇದರ ಬಗ್ಗೆ ಸರಿಯಾದ ಮಾಹಿತಿಯಿಲ್ಲದೆ ಜನರು ಆತಂಕಗೊಂಡಿದ್ದು ಸಹಜ. ಸರಿಯಾದ ಮಾಹಿತಿಯನ್ನು , ಮುಂಜಾಗರೂಕತಾ ಕ್ರಮಗಳನ್ನು ತಿಳಿಸುವ ಬದಲು ಮಾಧ್ಯಮಗಳು ಇದನ್ನು ಅನಗತ್ಯವಾಗಿ ಹಿಗ್ಗಿಸಿ ಜನರನ್ನು ಭಯಭೀತಗೊಳಿಸಿದ್ದು ಮಾತ್ರ ವಿಷಾದಕರ .

ಈಗ ಇಲ್ಲಿ ನಡೆದ ನಾಟಕವನ್ನು ನಿಮ್ಮೆದುರಿಗಿಡುತ್ತೇನೆ !
ಪುಣೆಯಲ್ಲಿ ಈ ರೋಗ ಕಾಣಿಸಿಕೊಂಡ ತಕ್ಷಣ ರೋಗಿಗಳಿಗಾಗಿ ಸರಕಾರೀ ಸ್ವಾಮ್ಯದ " ನಾಯ್ಡು ಆಸ್ಪತ್ರೆ" ಯನ್ನು ವಿಶೇಷ ವಾಗಿ " Isolation ward " ಆಗಿ ಹೆಸರಿಸಲಾಯಿತು. ನಂತರ ಇದನ್ನು ಟೆಸ್ಟಿಂಗ್ ಸೆಂಟರ್ ಎಂದು ಸಹ ಘೋಷಿಸಲಾಯಿತು. ಹಾಗೆ ಮಾಡಿದ್ದೆ ಸರಿ, ಬೆಳಗಾಗುವಷ್ಟರಲ್ಲಿ ಅದರ ಮುಂದೆ ಸಾವಿರಾರು ಜನ ಕ್ಯೂ ನಿಂತರು. ಅವರಲ್ಲಿ ಆರೋಗ್ಯವಂತರೆ ಹೆಚ್ಚಾಗಿದ್ದರು. ಆಸ್ಪತ್ರೆಯ ವೈದ್ಯರು ಹಾಗೂ ಸಿಬ್ಬಂದಿ ಹಗಲು ರಾತ್ರಿ ಶ್ರಮಿಸತೊಡಗಿದರು. ಸ್ಯಾಂಪಲ್ ಕಲೆಕ್ಷನ್ ನಿಧಾನವಾಗುತ್ತಿದೆ ಎಂದು ಕ್ಯೂದಲ್ಲಿ ಗಲಾಟೆ ಮಾಡುತ್ತಿರುವವರು , ಅಲ್ಲಿನ ವೈದ್ಯರು, ಸಿಬ್ಬಂದಿಗಳ ಸಂಖ್ಯೆ, ತಗಲುವ ವೇಳೆ ಇತ್ಯಾದಿಗಳನ್ನು , ಕಡೇ ಪಕ್ಷ ಅವರು ಸಹ ಮನುಷ್ಯ ಮಾತ್ರರೇ ಎಂಬುದನ್ನು ಗಮನಕ್ಕೆ ತೆಗೆದುಕೊಳ್ಳಲಿಲ್ಲ ! ಸಾಧಾರಣವಾಗಿ ಒಬ್ಬ ವೈದ್ಯರು ದಿನದಲ್ಲಿ ಹೆಚ್ಚೆಂದರೆ ೪೦ ಜನರನ್ನು ಪರೀಕ್ಷಿಸಬಹುದು . ಇರುವ ೫-೬ ಜನ ವೈದ್ಯರು ಹೊರಗೆ ಕ್ಯೂ ನಿಂತ ಸಾವಿರಾರು ಜನರನ್ನು ಹೇಗೆ ನಿಭಾಯಿಸಬಲ್ಲರು ?

ಇನ್ನು ಪ್ರತಿ ಬಾರಿ H1 N1 ಟೆಸ್ಟ್ ಗೆ ಸರಕಾರಕ್ಕೆ ತಗುಲುವ ವೆಚ್ಚ ಸುಮಾರು ೧೦ ಸಾವಿರ ರೂ.ಗಳು. ಇದನ್ನು ಸರಕಾರವೇ ಭರಿಸುತ್ತಿದೆ. ಹೀಗಿರುವಾಗ ಬಂದ ಪ್ರತಿಯೊಬ್ಬರಿಗೂ ಈ ಟೆಸ್ಟ್ ಮಾಡುವುದು ದುಬಾರಿಯ ಕೆಲಸ. ಹೀಗಾಗಿ , ನಿಜವಾಗಿಯೂ ಹಂದಿ ಜ್ವರದ ಲಕ್ಷಣ ಇರುವವರಿಗೆ ಮಾತ್ರ ಈ ಟೆಸ್ಟ್ ಮಾಡುವ ಸರಕಾರದ ನಿರ್ಧಾರ ತಪ್ಪಲ್ಲ ಎಂದು ನನ್ನ ಭಾವನೆ . ಇದರಿಂದಾಗಿ ಖರ್ಚಿನ ಹೊರೆ ಕಮ್ಮಿಯಾಗುವುದಲ್ಲದೆ ಅಗತ್ಯ ಇರುವವರಿಗೆ ಈ ಸೌಲಭ್ಯ ತಪ್ಪದೆ ಸಿಗುವಂತಾಗುತ್ತದೆ ಎನ್ನುವುದು ನನ್ನ ಅಭಿಪ್ರಾಯ.

ಇಷ್ಟರಲ್ಲೇ ಮಾಸ್ಕ್ ಗಳು ಭರದಿಂದ ಮಾರಾಟವಾಗತೊಡಗಿದ್ದವು . ಸಾಧಾರಣವಾಗಿ ೫-೬ ರೂ. ಗಳಿಗೆ ಸಿಗುವ ಬಳಸಿ ಬಿಸಾಡುವ ಮಾಸ್ಕ್ ಗಳು ೧೦-೧೨ ರೂ. ಗಳಿಗೆ ಮಾರಾಟವಾಗ ತೊಡಗಿದವು. ಇನ್ನು ಉತ್ತಮ ದರ್ಜೆಯ ಪುನಃ ಬಳಸಬಹುದಾದ ಮಾಸ್ಕ್ ಗಳಂತೂ ೧೦೦ ,೧೫೦ ರೂ. ವರೆಗೆ ಹೋದವು ! ಈ ಫ್ಲೂ ಗಾಗಿ ಬಳಸಬಹುದಾದ N95 ಎಂಬ ಸ್ಪೆಷಲ್ ಮಾಸ್ಕ್ ಅಂತೂ ಎಲ್ಲಿಯೂ ಸಿಕ್ಕದಂತಾಯಿತು. ಸಿಕ್ಕರೂ ೪೦೦-೫೦೦ ರೂ. ಬೆಲೆಯಲ್ಲಿ ! ಆದರೆ ಎಲ್ಲ ಮಾಸ್ಕ್ ಗಳಿಗೂ time limit ಇದೆ. ಸ್ಪೆಷಲ್ ಮಾಸ್ಕ್ ಗಳನ್ನೂ ಸಹ ೪-೫ ಗಂಟೆಗಳು ಮಾತ್ರ ಬಳಸಬಹುದು ಎಂದು ವೈದ್ಯರು ಹೇಳುತ್ತಾರೆ . ಹಾಗಿದ್ದರೂ ಎಲ್ಲಿ ನೋಡಿದರೂ ಜನರು ಮುಖಕ್ಕೆ ಮಾಸ್ಕ್ ಧರಿಸಿ ಓಡಾಡುವ ದೃಶ್ಯ ನೋಡುವಾಗ ವಿಚಿತ್ರವೆನಿಸುತ್ತಿತ್ತು ! ಒಂಥರಾ , ಬೇರೆ ಯಾವುದೊ ಗ್ರಹಕ್ಕೆ ಹೋದಂತೆ ! ಬಿಲ್ದಿಂಗಿನಲ್ಲಿ ಕೆಳಗೆ ಮಕ್ಕಳು ತಮ್ಮ ಮುಖಕ್ಕಿಂತ ದೊಡ್ಡ ಮಾಸ್ಕ್ ಧರಿಸಿ ಆಟ ಆಡುವುದನ್ನು ನೋಡಿದಾಗ ನಗುವೂ ಬರುತ್ತಿತ್ತು !

ನಂತರದ ದಿನಗಳಲ್ಲಿ ಎಲ್ಲೆಂದರಲ್ಲಿ ಬಳಸಿ ಬಿಸಾಕಿದ ಮಾಸ್ಕಗಳು ಕಾಣ ತೊಡಗಿದಾಗ ಕಸ ಹೆಕ್ಕುವವರು ಇದೇ ಮಾಸ್ಕ್ ಗಳನ್ನೂ ಆರಿಸಿಕೊಂಡು ಹೋಗಿ ಇನ್ಯಾರಿಗೋ ಮಾರಾಟ ಮಾಡಬಹುದಲ್ಲವೇ ಎಂದು ನನಗಂತೂ ಆತಂಕ ಶುರುವಾಗುತ್ತಿತ್ತು.


ಈ ಜ್ವರಕ್ಕೆ ಔಷಧಿಯಾಗಿ ಬಳಸುವ " Tamiflu " ಎಂಬ ಮಾತ್ರೆಗಾಗಿ ಜನ ಔಷಧಿ ಅಂಗಡಿಗಳಿಗೆ ಲಗ್ಗೆಯಿಟ್ಟರು. ಆದರೆ ಈ ಮಾತ್ರೆ ನಿಜವಾಗಿಯು ರೋಗ ಲಕ್ಷಣವಿರುವವರಲ್ಲಿ ಮಾತ್ರ ಪರಿಣಾಮಕಾರಿ , ಅನಗತ್ಯ ಸೇವನೆಯಿಂದ ದೇಹ ಆ ಔಷಧಿಗೆ ಪ್ರತಿರೋಧ ಶಕ್ತಿ ಬೆಳೆಸಿಕೊಂಡು ಮುಂದೆ ವೈರಸ್ ನ ಆಕ್ರಮಣವಾದಾಗ ಈ ಮಾತ್ರೆ ಕೆಲಸ ಮಾಡದು ಎಂಬ ವಿಷಯವನ್ನು ಅರ್ಥ ಮಾಡಿಕೊಳ್ಳಲಿಲ್ಲ ! ಇಷ್ಟಕ್ಕೂ ಈ " Tamiflu " ದೇಹದಲ್ಲಿ ವೈರಸ್ ನ ಪುನರುತ್ಪತ್ತಿಯನ್ನು ತಡೆಯುತ್ತದೆಯೇ ಹೊರತು ವೈರಸ್ ಅನ್ನು ಸಾಯಿಸುವುದಿಲ್ಲ ಎನ್ನುವುದು ವೈದ್ಯರು ತಿಳಿಸಿದ ವಿಚಾರ .

ಪ್ರತಿದಿನ ಪೇಪರ್ ನಲ್ಲಿ , ಇನ್ನೆಷ್ಟು ಜನರಲ್ಲಿ ಈ ವೈರಸ್ ಪತ್ತೆಯಾಯಿತು , ಈಗ ಎಷ್ಟು ಜನ ತೀವ್ರ ಅಸ್ವಸ್ಥರಾಗಿದ್ದಾರೆ ಎನ್ನುವುದನ್ನು ಬಿಟ್ಟರೆ ರೋಗದ ಬಗ್ಗೆ ಬೇರೆ ಯಾವುದೇ ಉಪಯುಕ್ತ ಮಾಹಿತಿ ಇಲ್ಲ !
ಆಗಸ್ಟ್ ೨ ರಂದು ಒಬ್ಬ ೧೪ ವರ್ಷದ ಬಾಲಕಿ ಈ ಜ್ವರದಿಂದ ಮರಣಹೊಂದಿದ್ದೆ ತಡ ಜನರಲ್ಲಿ ಒಂದು ರೀತಿಯ ಅಸ್ವಸ್ಥತೆ ಮನೆಮಾಡಿತು . ಕ್ರಮೇಣ ಯಾರು ಯಾವುದೇ ಅನಾರೋಗ್ಯದಿಂದ ಸತ್ತರೂ ಮೊದಲು ಅವರನ್ನು ಹಂದಿ ಜ್ವರದ ಪಟ್ಟಿಗೆ ಸೇರಿಸಲಾಯಿತು . ( ಅವರ ಸಾವಿಗೆ ಈ ವೈರಸ್ ಕಾರಣವಲ್ಲ ಎಂಬುದು ೨ ದಿನಗಳ ನಂತರ ಪೇಪರ್ ನಲ್ಲಿ , ಯಾರೂ ಗಮನಿಸದಷ್ಟು ಚಿಕ್ಕ ದಾಗಿ ಮೂಡಿ ಬಂತು !)
ಅಂತೂ ಕೆಲದಿನಗಳ ನಂತರ ಕೆಲವು ಜನರು ಈ ವಿಷಯವಾಗಿ ಅಸಮಾಧಾನ ವ್ಯಕ್ತ ಪಡಿಸಲು ಪ್ರಾರಂಭಿಸಿದಾಗ , ಪೇಪರ್ ನಲ್ಲಿ , ಈ ಜ್ವರದ ಬಗ್ಗೆ, ಮುಂಜಾಗ್ರತಾ ಕ್ರಮಗಳ ಬಗ್ಗೆ ಲೇಖನಗಳು ಪ್ರಕಟವಾಗತೊಡಗಿದವು.
ಏನು ಮಾಡಬೇಕು - ಏನು ಮಾಡಬಾರದು ಎಂಬ ವಿವರಗಳು ಬಂದವು. ಸೀನುವಾಗ, ಕೆಮ್ಮುವಾಗ ಮುಖಕ್ಕೆ ಬಟ್ಟೆಯನ್ನು ಅಡ್ಡ ಹಿಡಿದುಕೊಳ್ಳಿ, ಕಂಡ ಕಂಡಲ್ಲಿ ಉಗುಳಬೇಡಿ, ಆಗಾಗ ಕೈ ಗಳನ್ನೂ ಸ್ವಚ್ಚವಾಗಿ ತೊಳೆದುಕೊಳ್ಳಿ , ಬಳಸಿದ ಮಾಸ್ಕ್ ಗಳನ್ನೂ ಅಲ್ಲಿ ಇಲ್ಲಿ ಬಿಸಾಡದಿರಿ ಎಂದೆಲ್ಲ ಸೂಚನೆಗಳನ್ನು ಕೊಡಲಾಯಿತು ! ಅಲ್ಲಾ, ಇಂತಹ basic ನಿಯಮಗಳನ್ನು ಪಾಲಿಸಲು ಸಹ ಇಂಥಾ ಯಾವುದಾದರೂ ರೋಗವೇ ಬರಬೇಕೆ? ಕಡೇಪಕ್ಷ ಸಾಧಾರಣ ಸ್ವಚ್ಚತೆಯನ್ನೂ ನಮ್ಮ ದೈನಂದಿನ ಜೀವನದಲ್ಲಿ ಅಳವಡಿಸಿಕೊಳ್ಳಲು ಸಾಧ್ಯವಿಲ್ಲವೇ ಎಂಬ ಪ್ರಶ್ನೆ ನನ್ನನ್ನು ಕಾಡುತ್ತಿದೆ.

ನಂತರ ಯಾರೋ ಎಲ್ಲಿಯೋ ಓದಿ, ಕೇಳಿ ಯಾರಿಗೋ ಈ ರೋಗ ತಡೆಯುವಲ್ಲಿ ವಿಟಮಿನ್ ಸಿ, ನೀಲಗಿರಿ ಎಣ್ಣೆ ಇತ್ಯಾದಿಗಳು ಬಹಳ ಪರಿಣಾಮಕಾರಿ ಎಂದು SMS ಕಳಿಸಿದ್ದೆ ತಡ ಈ SMS ಗಳು ಎಲ್ಲೆಡೆ ಹಾರಾಡಿದವು. ಒಂದೇ ದಿನದಲ್ಲಿ ಪುಣೆ ,ಪಿಂಪ್ರಿ -ಚಿಂಚವಾದ ಗಳ ಯಾವುದೇ ಮೆಡಿಕಲ್ ಸ್ಟೋರ್ ಗಳಲ್ಲಿ ಇವು ಅಲಭ್ಯವಾದವು ! ನಿಂಬೆ ಹಣ್ಣಂತೂ ೫-೬ ರೂ. ಗಳಿಗೆ ಒಂದು ಎಂಬಂತಾಯಿತು ! ಆಮೇಲೆ , ಇನ್ಯಾರೋ ಪ್ರತಿನಿತ್ಯ ತುಳಸಿ ತಿಂದರೆ ಹಂದಿ ಜ್ವರ ಬರುವುದಿಲ್ಲ ಎಂದಿದ್ದೆ ತಡ , ಬೆಳಗಾಗುವಷ್ಟರಲ್ಲಿ ಮನೆಯ ಮುಂದಿನ ತುಳಸೀ ಗಿಡಗಳು ಬೋಳಾದವು ! ಒಟ್ಟಿನಲ್ಲಿ , ಜನರು ಯಾರು ಏನೇ ಹೇಳಿದರೂ ಅದನ್ನೊಮ್ಮೆ ಮಾಡಿನೋಡುವಂತಾದರು ! ಮೊದಲು ೨-೩ ದಿನ ಜ್ವರ ಬಂದರೂ , ಮನೆಯಲ್ಲಿಯೇ ಔಷಧಿ ಮಾಡಿಕೊಂಡು ಕುಡಿಯುತ್ತಿದ್ದ ಜನರು ಈಗ , ೨ ಸಲ ಸೀನಿದೊಡನೆ ಡಾಕ್ಟರ್ ಎದುರು ನಿಲ್ಲತೊಡಗಿದರು.

ಗುಂಪುಗಳಲ್ಲಿ ಈ ರೋಗ ಹರಡುವ ಸಾಧ್ಯತೆ ಹೆಚ್ಚಾಗಿರುವುದರಿಂದ ಶಾಲಾ ಕಾಲೇಜುಗಳಿಗೆ ರಜೆ ಘೋಷಿಸಲಾಯಿತು. ಶಾಪಿಂಗ್ ಸೆಂಟರ್ ಗಳು, ಸಿನಿಮಾ ಟಾಕೀಸುಗಳು ಹಾಗೂ ಮಾರ್ಕೆಟ್ ಗಳನ್ನೂ ಕೆಲ ದಿನಗಳು ಮುಚ್ಚುವಂತೆ ಆದೇಶಿಸಲಾಯಿತು . ಹೆಚ್ಚು ಹೆಚ್ಚು ಜನರಲ್ಲಿ ಈ ರೋಗ ಪತ್ತೆಯಾಗ ತೊಡಗಿದಂತೆ ,
ಹರಡುವ ತೀವ್ರತೆಯನ್ನು ಕಡಿಮೆ ಮಾಡಲು ಇದನ್ನು " ಮಹಾ ಸಾಂಕ್ರಾಮಿಕ ರೋಗ" ವೆಂದು ಪರಿಗಣಿಸಿ " ಮೆಕ್ಸಿಕೋ ಮಾದರಿ " ಯಲ್ಲಿ ಇಡೀ ಪಟ್ಟಣಕ್ಕೆ ಕೆಲ ದಿನಗಳ ಕಾಲ ವ್ಯಾಪಾರ ವಹಿವಾಟುಗಳನ್ನು ನಿಲ್ಲಿಸಿ ಸಂಪೂರ್ಣ ರಜೆ ಘೋಷಿಸಲು ಅನುಮತಿಸುವಂತೆ ಪುಣೆಯ ಮೇಯರ್ ಕೇಂದ್ರ ಆರೋಗ್ಯ ಮಂತ್ರಿಗಳನ್ನು ವಿನಂತಿಸಿದರು . ಆದರೆ ಮಾನ್ಯ ಗುಲಾಂ ನಬಿ ಅಜ್ಹಾದ್ ರ ಉತ್ತರ ಮಾತ್ರ ಅನುಪಮ ! " ಇದು ಹಿಂದೂ ಹಾಗೂ ಮುಸ್ಲಿಂ ಬಾಂಧವರಿಗೆ ಹಬ್ಬದ ಸಮಯವಾಗಿರುವುದರಿಂದ , ಹೀಗೆ ಸಂಪೂರ್ಣ ರಜೆ ಘೋಷಿಸುವ ಮೊದಲು ಧಾರ್ಮಿಕ ಮುಖಂಡರಲ್ಲಿ ಚರ್ಚಿಸುವುದು ಅವಶ್ಯ" ಎಂಬ " ಅತ್ಯುತ್ತಮ " ಸಲಹೆಯನ್ನು ಮಾನ್ಯ ಮಂತ್ರಿಗಳು ದಯಪಾಲಿಸಿದರು ! ಈ ರೋಗ ಹೆಚ್ಚಾದರೂ ಅಡ್ಡಿ ಇಲ್ಲ ,ಜನರು ಸತ್ತರೂ ಯೋಚನೆಯಿಲ್ಲ ಅದನ್ನು ಆಮೇಲೆ ನೋಡಿಕೊಂಡರಾಯಿತು . ಆದರೆ ನಮಗೇ ಹಬ್ಬ ಹರಿದಿನಗಳನ್ನು ದೊಡ್ಡದಾಗಿ ಆಚರಿಸದೆ ಇರಲಾಗದು ಎನ್ನುವುದು ಅಭಿಪ್ರಾಯವೇ? ಅಥವಾ, ಹಬ್ಬಗಳ ಸಮಯದಲ್ಲಿ ಈ ರೀತಿ ರಜೆ ಘೋಷಿಸುವುದರಿಂದ , ಧಾರ್ಮಿಕ ಮುಖಂಡರ ಅಸಮಾಧಾನಕ್ಕೆ ಗುರಿಯಾಗಬಹುದು ಎಂಬ ಭಯವೇ? ಜನಸಾಮಾನ್ಯರು ರೋಗ ಭೀತಿಯಿಂದ ಆತಂಕಿತರಾಗಿರುವಾಗ ಪರಿಸ್ಥಿತಿಯ ನಿಯಂತ್ರಣಕ್ಕೆತುರ್ತು ಕ್ರಮ ಕೈಗೊಳ್ಳಲೂ ಸರಕಾರ ಹಿಂದೆ ಮುಂದೆ ನೋಡುತ್ತದೆ ಎಂದರೆ ಪ್ರತಿಯೊಂದರಲ್ಲೂ ಕೇವಲ ರಾಜಕೀಯ ಲಾಭವನ್ನೇ ನೋಡುವ ಇಂಥವರನ್ನು ಆರಿಸಿ ಕಳಿಸಿದ್ದಕ್ಕೆ ನಮ್ಮನು ನಾವೇ ದೂಷಿಸಬೇಕಷ್ಟೇ !

ಅಂತೂ ಶಾಲಾ ಕಾಲೇಜುಗಳಿಗೆ ಹಾಗೂ ಶಾಪಿಂಗ್ ಸೆಂಟರ್ , ಮಾರ್ಕೆಟ್ ಗಳಿಗೆ ರಜೆ ಘೋಷಿಸಿದ್ದರಿಂದ , ಜನರು ತಮಗೆ ತಾವೇ ಕೆಲವು ನಿರ್ಬಂಧಗಳನ್ನು ವಿಧಿಸಿ ಕೊಂಡಿದ್ದರಿಂದ , ಕ್ರಮೇಣ ನಗರದ ಇನ್ನೂ ಕೆಲವು ಸರಕಾರೀ ಆಸ್ಪತ್ರೆಗಳಲ್ಲಿ ರೋಗ ಪತ್ತೆ ಹಾಗೂ ICU , Isolation ward ಗಳನ್ನೂ ಆರಂಭಿಸಿದ್ದರಿಂದ ಪರಿಸ್ಥಿತಿ ಸ್ವಲ್ಪ ಹತೋಟಿಗೆಬರುತ್ತಿದೆ . ಪತ್ರಿಕೆಗಳಲ್ಲೂ ಬೇರೆ ವಿಷಯಗಳು ಕಾಣತೊಡಗಿವೆ.

ಇನ್ನು ಈ ಹಂದಿ ಜ್ವರದ ಲಾಭ ಪಡೆದವರಂತೂ ಬೇಕಷ್ಟು ! ಗಲ್ಲಿ ಗಲ್ಲಿಗಳಲ್ಲಿ ಮಾಸ್ಕ್ ಮಾರುವವರು , ಔಷಧಿ ಅಂಗಡಿಗಳವರು ದುಡ್ಡು ಮಾಡಿಕೊಂಡರು . ಆಡಳಿತ ಪಕ್ಷ- ವಿರೋಧ ಪಕ್ಷಗಳು ಒಬ್ಬರನ್ನೊಬ್ಬರು ದೂಷಿಸಿಕೊಂಡರು. ಆದಷ್ಟೂ ಗುಂಪಾಗಿ ಸೇರುವುದನ್ನು ನಿಲ್ಲಿಸಿ ಎಂಬ ನಗರ ಪಾಲಿಕೆಯ ವಿನಂತಿಯನ್ನು ಲಕ್ಷಿಸದೆ, ವಿರೋಧ ಪಕ್ಷಗಳು ಜನ ಜಾಗೃತಿ ಸಭೆ ನಡೆಸಿ, ಇನ್ನಷ್ಟು ಜನರಿಗೆ ವೈರಸ್ ಹಬ್ಬಲು ನೆರವಾದರು.
ಅರೆ ಬರೆ ಮಾಹಿತಿಯುಳ್ಳ ಕೆಲವರು ಈ ಹಂದಿ ಜ್ವರ ಎಂದರೆ , ಹಂದಿ ತಿನ್ನುವುದರಿಂದ ಬರುತ್ತದೆ ಎಂದೂ, ಅದನ್ನು ತಡೆಯಲು ಹಂದಿಗಳನ್ನೇ ಸಾಯಿಸಬೇಕೆಂದೂ ತಮ್ಮ ಅಭಿಪ್ರಾಯ ದಯಪಾಲಿಸಿದರು !

ಇನ್ನು ಈ ವೈರಸ್ ನಿಂದಾಗಿ ಮಕ್ಕಳಿಗೆ ಆಕಸ್ಮಿಕ ರಜೆ ಸಿಕ್ಕಿತು ಅದೂ ಯಾವ ಹೋಂ ವರ್ಕ್ ನ ತಲೆ ಬಿಸಿಯಿಲ್ಲದೆ ದಿನವಿಡೀ ಮಜವಾಗಿ ಕಳೆಯುವ ಅಪರೂಪದ ಅವಕಾಶ ! ಆದರೆ ಹೊರಗಡೆ ಆಟ ಆಡಲು ಹೋಗುವಂತಿಲ್ಲ ಎನ್ನುವುದು ಅವರ ಬೇಜಾರು . ಹಾ, ಇಲ್ಲಿ ಇಂಡಸ್ಟ್ರಿ ಗಳಿಗೆ ಸಾಧಾರಣವಾಗಿ ಗುರುವಾರ ರಜೆ . ಹೀಗಾಗಿ ಮಕ್ಕಳೊಂದಿಗೆ ಹೆಚ್ಚು ಕಾಲ ಕಳೆಯಲು ಸಾಧ್ಯವಾಗದ ನಮ್ಮಂಥವರು ಆಗಸ್ಟ್ ೧೪ ರಂದು ರಜೆ ತೆಗೆದು ಕೊಂಡು ಮೂರು ದಿನಗಳ ರಜೆಯನ್ನು ಮಕ್ಕಳೊಂದಿಗೆ ಖುಷಿಯಾಗಿ ಕಳೆದೆವು. ನಾವು ನಮ್ಮ ಇನ್ನೆರಡು ಸ್ನೇಹಿತರ ಕುಟುಂಬಗಳು ಮಕ್ಕಳೊಂದಿಗೆ ಎರಡು ದಿನ ಪುಣೆಯಿಂದ ಆಚೆ ಹತ್ತಿರದ ಹಿಲ್ ಸ್ಟೇಶನ್ ಆದ ಲೋನಾವಾಲಾ ದ ಹೊರವಲಯದಲ್ಲಿ ಪಿಕ್ನಿಕ್ ಮಾಡಿದೆವು ! ಹಾ ಹೆಚ್ಚು ಜನಸಂಚಾರವಿಲ್ಲದ ಬೆಟ್ಟ ಗುಡ್ಡಗಳಲ್ಲಿ ಅಲೆಯುತ್ತಾ ಮಕ್ಕಳು ಮಳೆಗಾಲದ ಮಜಾ ಸವಿದಿದ್ದು ನಮಗೇ ಖುಷಿ ಕೊಟ್ಟಿತು . ಇದು ನಮಗೆ ವೈರಸ್ ಕೊಟ್ಟ ಬೋನಸ್ !!! ಈ ಎರಡು ದಿನಗಳು ಪೇಪರ್, ಟಿವಿ ಇತ್ಯಾದಿ ಯಾವುದೇ ಮಾಧ್ಯಮಗಳಿಂದ ದೂರವುಳಿದಿದ್ದರಿಂದ ನಾವು ಯಾವುದೇ ತಲೆ ಬಿಸಿಯಿಲ್ಲದೆ ಕಾಲಕಳೆಯುವಂತಾಯಿತು.

ಮುಗಿಸುವ ಮೊದಲು ;
* ವೈಯುಕ್ತಿಕ ಹಾಗೂ ಸಾರ್ವಜನಿಕ ಸ್ವಚ್ಚತೆ ಅತೀ ಮುಖ್ಯ .ಅದರ ಬಗ್ಗೆ ಗಮನವಿರಲಿ, ಕೇವಲ ಈಗ ಮಾತ್ರವಲ್ಲ , ಯಾವಾಗಲೂ .
* ವೈದ್ಯರ ಸಲಹೆಯಿಲ್ಲದೆ ಕಂಡ ಕಂಡ ಔಷಧಿಗಳನ್ನು ತೆಗೆದುಕೊಳ್ಳ ಬೇಡಿ .
* ಈ ಸಮಯದಲ್ಲಿ ಗುಂಪು ಗುಂಪಾಗಿ ಸೇರುವುದನ್ನು ಆದಷ್ಟೂ ದೂರವಿಡಿ.
* " Tamiflu " ಹಾಗೂ ಮಾಸ್ಕ್ ಗಳ ಬಗ್ಗೆ , ಈ ಜ್ವರದ ಬಗ್ಗೆ ಸರಿಯಾದ ಮಾಹಿತಿಯನ್ನು ನಿಮ್ಮ ವೈದ್ಯರಲ್ಲಿ ಸರಿಯಾಗಿ ಕೇಳಿ ತಿಳಿದುಕೊಳ್ಳಿ.
* ಮಾಸ್ಕ್ ಗಳು ಶೇ. ೧೦೦ರಷ್ಟು ರಕ್ಷಣೆ ಒದಗಿಸುವುದಿಲ್ಲ. ವಿಶೇಷ ಮಾಸ್ಕ್ ಗಳನ್ನೂ ಸಹ ಕೇವಲ ೪-೫ ತಾಸು ಮಾತ್ರ ಬಳಸಬಹುದು. ಹೀಗಾಗಿ, ಮಾಸ್ಕ್ ಗಳ ಬದಲಾಗಿ ಸ್ವಚ್ಚವಾದ ಕರವಸ್ತ್ರಗಳನ್ನೂ ಸಹ ಬಳಸಬಹುದು. ಆದರೆ ಬಳಕೆಯ ನಂತರ ತೊಳೆಯಲು ಮರೆಯದಿರಿ.
* ಬಳಸಿದ ಮಾಸ್ಕ್ ಗಳನ್ನೂ ಅಲ್ಲಲ್ಲಿ ಬಿಸಾಕುವುದನ್ನು ನಿಲ್ಲಿಸಿ.
* ಅತ್ಯಂತ ಮುಖ್ಯವೆಂದರೆ, ದಯವಿಟ್ಟು ಅನಾವಶ್ಯಕವಾಗಿ ಗಾಬರಿಯಾಗಬೇಡಿ. ಎಚ್ಚರಿಕೆ ಅಗತ್ಯ ಆದರೆ ಆತಂಕವಲ್ಲ !

ನಮ್ಮಲ್ಲಿ, ಈಗಾಗಲೇ , ಹಂದಿ ಜ್ವರಕ್ಕಿಂತ ಹೆಚ್ಚು ಭಯಂಕರ ಕಾರಣಗಳಿಂದ, ರೋಗಗಳಿಂದ ಹೆಚ್ಚು ಜನ ಸಾಯುತ್ತಿದ್ದಾರೆ .
ನಿಮಗೆ ಗೊತ್ತೇ?
೧. ಭಾರತದಲ್ಲಿ ರಸ್ತೆ ಅಪಘಾತದಲ್ಲಿ ಪ್ರತಿ ಘಂಟೆಗೆ ೧೩ ಜನ ಸಾಯುತ್ತಿದ್ದಾರೆ , ವಾರ್ಷಿಕ ಸರಾಸರಿ ೧,೧೪,೦೦೦ ಕ್ಕೂ ಹೆಚ್ಚು. ಇದರಲ್ಲಿ ನಾವು ಜಗತ್ತಿನಲ್ಲೇ ಮೊದಲ ಸ್ಥಾನ ಪಡೆದಿದ್ದೇವೆ ! ಇದರಲ್ಲಿ , ಕೇವಲ ಗಾಯಗೊಂಡವರ ಸಂಖ್ಯೆ ಸೇರಿಲ್ಲ !
೨. ಪ್ರಪಂಚದಲ್ಲಿರುವ ಕ್ಷಯ ರೋಗಿಗಳಲ್ಲಿ ( TB) ೩೦% ರಷ್ಟು ರೋಗಿಗಳು ಭಾರತದಲ್ಲಿದ್ದಾರೆ. ಇದರಲ್ಲೂ ನಾವು ಮೊದಲ ಸ್ಥಾನ ಬಿಟ್ಟುಕೊಟ್ಟಿಲ್ಲ .
೩. ನಮ್ಮಲ್ಲಿ ಹೆಚ್ ಐ ವಿ ಪಾಸಿಟಿವ್ ಇರುವ ೨೦ ಲಕ್ಷಕ್ಕೂ ಜನರಿದ್ದಾರೆ , ಈ ಸಂಖ್ಯೆ ಕೇವಲ ಅಫೀಷಿಯಲ್ ! ಇನ್ನು ಲೆಕ್ಕಕ್ಕೆ ಸಿಗದಿರುವವರು ಇನ್ನೆಷ್ಟು ಜನರೋ! ಈ ಸಂಖ್ಯೆ , ದಿನದಿನಕ್ಕೂ ಹೆಚ್ಚುತ್ತಿರುವುದು ಅತ್ಯಂತ ಕಳವಳಕಾರಿ ಬೆಳವಣಿಗೆ !

ಇವು ಕೇವಲ ಕೆಲವೇ ಉದಾಹರಣೆಗಳು ಮಾತ್ರ . ಇವುಗಳತ್ತಲೂ ಗಮನ ಹರಿಸುವುದು ಅಗತ್ಯವಲ್ಲವೇ?


ಹಂದಿ ಜ್ವರದ ಗಡಿಬಿಡಿಯಲ್ಲಿ ಗಣಪನನ್ನು ಪೂಜಿಸುವುದನ್ನು ಮರೆಯಬೇಡಿ. ಆದರೆ , ಮನೆಯಲ್ಲಿ , ಕುಟುಂಬದವರೊಡನೆ ಮಾತ್ರ ಇರಲಿ. ಹೊರಗೆ ಗುಂಪಿನಲ್ಲಿ ಬೇಡ !
ಎಲ್ಲರಿಗೂ ಗೌರಿ -ಗಣೇಶ ರು ಶುಭವನ್ನುಂಟು ಮಾಡಲಿ !

17 comments:

ಮೂರ್ತಿ ಹೊಸಬಾಳೆ. said...

ಉತ್ತಮ ಮಾಹಿತಗಾಗಿ ಧನ್ಯವಾದಗಳು.

sunaath said...

ಹಂದಿಜ್ವರದ ಹಿಂದು-ಮುಂದು ಹಾಗೂ ಹಾವಳಿಯ ಬಗೆಗೆ ಉತ್ತಮ ಲೇಖನವಿದು. ಈ ರೋಗಕ್ಕೆ ಏನು ಮಾಡಬೇಕು ಹಾಗೂ ಏನು ಮಾಡಬಾರದು ಎನ್ನುವ ಒಳ್ಳೆಯ ವಿವರಣೆ ಇಲ್ಲಿದೆ. ಅಭಿನಂದನೆಗಳು.

ಧಾರವಾಡದಲ್ಲಿಯೂ ಸಹ ನೀಲಗಿರಿ ಎಣ್ಣೆಗೆ ಈಗ ಕಾಳಸಂತೆಯ ರಾಜಯೋಗ ಬಂದಿದೆ. ಮಾಸ್ಕುಗಳೂ ಕೂಡ ಸ್ವಲ್ಪ ಮಟ್ಟಿಗೆ ಕಾಣತೊಡಗಿವೆ. ಆದರೆ ಜನರು ಮಾತ್ರ ಸಿಕ್ಕಸಿಕ್ಕಲ್ಲಿ ಉಗುಳುವದನ್ನು ಬಿಟ್ಟಿಲ್ಲ!

ಸುಧೇಶ್ ಶೆಟ್ಟಿ said...

ಚಿತ್ರಾ ಅವರೇ...

ಹ೦ದಿಜ್ವರದ ಹಾವಳಿಯ ಬಗ್ಗೆ ಚೆನ್ನಾಗಿ ಬರೆದಿದ್ದೀರಾ.... ಸ್ವಲ್ಪ ಕೆಮ್ಮಿದರೂ ಸ೦ಶಯದಿ೦ದ ನೋಡುವ ಪರಿಸ್ಥಿತಿ ಬ೦ದಿದೆ... ಊರಿಗೆ ಹೋಗುವಾಗ ಬಸ್ಸಿನಲ್ಲಿ ಒ೦ದೆರಡು ಬಾರಿ ಕೆಮ್ಮಿದ್ದಕ್ಕೆ ಇದ್ದವರೆಲ್ಲರೂ ನನ್ನನ್ನೇ ನೋಡುತ್ತಿದ್ದರು. ಊರಿಗೆ ಹೋದರೆ ಮನೆಯಲ್ಲೆಲ್ಲಾ ಹ೦ದಿಜ್ವರದ ಟೆಸ್ಟ್ ಮಾಡಿಕೋ ಅ೦ತ ಹಟ ಮಾಡಿದರು. ಅವರೆಲ್ಲರ ಬಾಯಿ ಮುಚ್ಚಿಸಿ ಆಫೀಸಿಗೆ ಬ೦ದು ಕೆಮ್ಮಿದರೆ ಎಲ್ಲರದೂ ಟೆಸ್ಟ್ ಮಾಡಿಕೋ ಅನ್ನುವ ಬಿಟ್ಟಿ ಸಲಹೆ.... ತು೦ಬಾ ಇರಿಟೇಟಿ೦ಗ್ ಆಗಿ ಬಿಟ್ಟಿತು....

ನೀವು ಲೇಖನ ಬರೆದಿರುವ ಶೈಲಿ ತು೦ಬಾ ಇಷ್ಟ ಆಯಿತು ಎ೦ದಿನ೦ತೆ...

[ಅ೦ದ ಹಾಗೆ ಕೆಮ್ಮು ತಹಬದಿಗೆ ಬ೦ದಿದೆ:)]

Ittigecement said...

ಚಿತ್ರಾ

ಹತ್ತು ದಿನಗಳಿಂದ ಕಾಡುತ್ತಿದ್ದ ಜ್ವರ ಈಗಿಲ್ಲ...
ನೀವು ಹೇಳಿದ ಹಾಗೆ ಜನ ಸಾಮಾನ್ಯರಿಗೆ ಇದರ ತಿಳುವಳಿಕೆ ಕೊಡುವದು ಬಹಳ ಮುಖ್ಯ....

ಈ ರೋಗ ಯಾವ ಹಂತ ತಲುಪುತ್ತದೆ..
ಗೊತ್ತಿಲ್ಲ ಭಯಾನಕ ರೋಗವಂತೂ ಹೌದು....

ನೀವು ತಿಳಿಸಿದ ಉಪಯುಕ್ತ ಮಾಹಿತಿ...
ನಿಮ್ಮ ಲೇಖನದ ಲಿಂಕ್ ನನ್ನ ಸ್ನೇಹಿತರಿಗೆ ಕಳುಹಿಸುತ್ತಿದ್ದೇನೆ.....

ಮೂರ್ತಿ ಹೊಸಬಾಳೆ. said...

ಇಂತಹಾ ಕಾಯಿಲೆಗಳ ಬಗ್ಗೆ ಕಟ್ಟುಕಥೆಗಳು,ಮೂಡನಂಬಿಕೆ ಗಳೇ ಹೆಚ್ಚಾಗಿರುವ ಸಂದರ್ಭ ದಲ್ಲಿ ಒಳ್ಳೆಯ ಮಾಹಿತಿ ಗಳನ್ನ ಕೊಟ್ಟಿದ್ದೀರಿ ಧನ್ಯವಾದಗಳು.

shivu.k said...

ಚಿತ್ರಾ ಮೇಡಮ್,

ನಿಜಕ್ಕೂ ಈ ಹಂದಿಜ್ವರ ಹುಲಿ ಬಂತು ಹುಲಿ ಎನ್ನುವ ಕತೆಯಾಗಿದೆ. ಯಾವುದೇ ಕಾರಣಕ್ಕೆ ಸತ್ತರೂ ಪೇಪರಿನವರು ಹಂದಿಜ್ವರ ಎಂದು ಪ್ರಕಟಿಸಿ ತಮ್ಮ ಪ್ರಸಾರ ಸಂಖ್ಯೆಯನ್ನು ಹೆಚ್ಚಿಸಿಕೊಳ್ಳುತ್ತಿದ್ದಾರೆ.

ನಿಮ್ಮ ಊರಿನ ಕತೆನ ನಮ್ಮೂರಿನದು ಕೂಡ....ಆದ್ರೆ ಅದರಿಂದ ನಾವು ಬೇಕಾದ ಹಾಗೆ ಎಚ್ಚರದಿಂದಿದ್ದೇವೆ. ಮತ್ತೆ ಒಂದಷ್ಟು ಉತ್ತಮ ಎಚ್ಚರಿಕೆಗಳನ್ನು ಕೊಟ್ಟಿದ್ದೀರಿ..
ಧನ್ಯವಾದಗಳು.

ಮತ್ತೆ ನಿಮಗೆ ಗೌರಿ ಮತ್ತು ಗಣೇಶ ಹಬ್ಬದ ಶುಭಾಶಯಗಳು.

ತೇಜಸ್ವಿನಿ ಹೆಗಡೆ said...

ಚಿತ್ರಕ್ಕ,

ನಮ್ಮ ಮನೆಯಲ್ಲೂ ಈ ನೀಲಗಿರಿಕನ್ಯೆಯ ಪ್ರವೇಶವಾಗಿದೆ :) ಏನು ಮಾಡುವುದು ಹೇಳು? ಹಂದಿ ಜ್ವರದ ಹೆಸರು ಕೇಳಿದರೇ ಸಾಮಾನ್ಯ ಜ್ವರ ಬರುವಂತಹ ಸ್ಥಿರಿ ಎಲ್ಲೆಡೆ ನಿರ್ಮಾಣವಾಗುತ್ತಿದೆ..(ಕಲವರು ನಿರ್ಮಾಣವನ್ನೂ ಮಾಡುತ್ತಿದ್ದಾರೆ:)).

ಇಂತಹ ಪರಿಸ್ಥಿತಿಯಲ್ಲೂ ನೀವು ಲೊನಾವಾಲಕ್ಕೆ ಹೋಗಿ ಎಂಜೋಯ್ ಮಾಡಿ ಬಂದಿರಲ್ಲ!! ನಿಜಕ್ಕೂ ನಿಮ್ಮ ಧೈರ್ಯ ಹಾಗೂ ಮನೋಬಲಕ್ಕೆ ಅಭಿನಂದನೆಗಳು !! :)

VENU VINOD said...

@ ಶಿವು,
ಯಾವುದೇ ಕಾರಣಕ್ಕೆ ಸತ್ತರೂ ಪೇಪರಿನವರು ಹಂದಿಜ್ವರ ಎಂದು ಪ್ರಕಟಿಸಿ ತಮ್ಮ ಪ್ರಸಾರ ಸಂಖ್ಯೆಯನ್ನು ಹೆಚ್ಚಿಸಿಕೊಳ್ಳುತ್ತಿದ್ದಾರೆ ಹೀಗೆಂದು ಹೇಳಿದ್ದೀರಿ..ಆದರೆ ಹಂದಿಜ್ವರ ಕಾರಣಕ್ಕೆ ಪೇಪರು ಓದುವವರ ಸಂಖ್ಯೆಯಲ್ಲೇನೂ ಭಾರೀ ಏರಿಕೆಯಾದೀತು ಎಂದು ನನಗೆ ತೋರುವುದಿಲ್ಲ. ಉಳಿದಂತೆ ಈಗೀಗ ಕ್ಷುಲ್ಲಕ ವಿಚಾರಗಳು ಬಹುವಾಗಿ ಪ್ರಚಾರ ಪಡೆಯುತ್ತಿರುವುದನ್ನು ನಾನು ಒಪ್ಪುತ್ತೇನೆ. ಆದರೆ ಹಂದಿಜ್ವರದ ಬಗ್ಗೆ ನಾಗರಿಕರಲ್ಲಿ ಅರಿವು ಮೂಡಿಸುವಲ್ಲಿ ಮಾಧ್ಯಮಗಳ ಪಾತ್ರ ಕೂಡಾ ಇದೆ ಎನ್ನುವುದನ್ನು ಯಾರೂ ಅಲ್ಲಗಳೆದಿಲ್ಲ....ಇದರ ಜತೆಯೇ ಗೊಂದಲಗಳನ್ನು ಸೃಷ್ಟಿಸಿದ್ದರಲ್ಲೂ ಮಾಧ್ಯಮಗಳ ಪಾತ್ರವಿದೆ.

ಸಿಂಧು sindhu said...

ಚಿತ್ರಕ್ಕಾ,

ನಾನು ನಿನ್ನ ಬಗ್ಗೆ ಕೇಳಿ ಬೆಳೆದೆ. ನಿನ್ನನ್ನ ನೋಡಲೇ ಆಗಲಿಲ್ಲ. ಈಗ ಇಲ್ಲಿ ಬ್ಲಾಗಿನಂಗಳದಲ್ಲಿ ಕಂಡು ಖುಶಿಯಾಗಿದೆ. ಮೋಹನ ಮೇಷ್ಟರೆಂದರೆ ಅವರ ಹವ್ಯಾಸ ಮಾತುಕತೆಗಳೆಂದರೆ ನನಗೆ ತುಂಬಾ ಮೆಚ್ಚು. ನಾನು ಸಣ್ಣವಳಿದ್ದಾಗ ನನಗೆ ಸಮಯ ದೊರೆತಾಗ ನಿಮ್ಮ ಬಂದಗದ್ದೆಯ ಮನೆಯ ರೂಮಿನಲ್ಲಿ ಮೇಷ್ಟರ ಸಂಗ್ರಹಗಳನ್ನ ಬೆರಗುಗಣ್ಣುಗಳಿಂದ ನೋಡುತ್ತಾ ಕೂತಿರುತ್ತಿದ್ದೆ.ಅವರು ನನಗೆ ಕೊಟ್ಟು ಓದಿಸಿದ ಪುಸ್ತಕಗಳಿಗೆ ಲೆಕ್ಕವಿಲ್ಲ. ಸಾಗರದಿಂದ ನಾನು ನನ್ನ ಬಿಡುವಿನ ಭಾನುವಾರಗಳಲ್ಲಿ ಅಲ್ಲಿ ಬರುತ್ತಿದ್ದೆ. ಇಂದಿರಕ್ಕ ಊಟ ನನ್ನನ್ನು ಯಾವಾಗಲೂ ತಣಿಸುತ್ತಿತ್ತು. ಆನಂದ ನನ್ನ ಇಷ್ಟದ ಹಿರಿಯ ಗೆಳೆಯ. ಅದ್ಯಾವಗಲೋ ಒಂದು ಸಲ ತೇಜಸ್ವಿ ಅಣ್ಣನೂ ಇದ್ದಿದ್ದ ನಾನೊಂದು ಭಾನುವಾರ ನಿಮ್ಮನೆಗೆ ಬಂದಾಗ.
ಅದೇಕೋ ಏನೋ ಎಂದೂ ನನಗೆ ನಿನ್ನನ್ನ ಭೆಟ್ಟಿಯಾಗಲು ಆಗಲೇ ಇಲ್ಲ. ಮೇಷ್ಟರ, ಇಂದಿರಕ್ಕನ ಮತ್ತು ನನ್ನ ನಡುವಿನ ಮಾತುಕತೆಯಲ್ಲಿ ಯಾವಾಗಲೂ ನೀನಿರುತ್ತಿದ್ದೀ.. :)
ಈಗಿಲ್ಲಿ ನೋಡಿ, ಓದಿ ಖುಶೀ.
ಹೀಗೇ ಸಿಗುತ್ತಿರೋಣ. ಪುಟ್ಟ ಸಿರಿಗೌರಿಗೆ ಮುದ್ದು.

ಪ್ರೀತಿಯಿಂದ
ಸಿಂಧು

ಚಿತ್ರಾ said...

ಲೇಖನವನ್ನು ಮೆಚ್ಚಿದ ಎಲ್ಲರಿಗೂ ನನ್ನ ಧನ್ಯವಾದಗಳು.
ಸರಿಯಾದ ಮಾಹಿತಿಯನ್ನು ಪಡೆದುಕೊಳ್ಳುವುದರಿಂದ , ಸ್ವಚ್ಚತೆಯನ್ನು ಕಾಪಾಡಿ ಕೊಳ್ಳುವುದರಿಂದ , ತಕ್ಕ ಮಟ್ಟಿನ ಕಾಳಜಿ , ಮುನ್ನೆಚ್ಚರಿಕೆ ತೆಗೆದುಕೊಳ್ಳುವುದರಿಂದ ಇಂಥಾ ಯಾವುದೇ ರೋಗದಿಂದ ಆದಷ್ಟೂ ದೂರವಿರಬಹುದಲ್ಲದೇ ಇವು ಹರಡುವುದನ್ನೂ ಸಹ ಸ್ವಲ್ಪ ಮಟ್ಟಿಗೆ ತಡೆಗಟ್ಟಬಹುದು ಎನ್ನುವುದು ನನ್ನ ಅಭಿಪ್ರಾಯ

ಚಿತ್ರಾ said...

ಸಿಂಧು,
ನನ್ನ ಬ್ಲಾಗಿಗೆ ಸ್ವಾಗತ !
ನಿನಗೆ ನನ್ನ ಅಪ್ಪ ಅಮ್ಮನ ಪರಿಚಯವಿರುವುದ್ಯು ಈಗಾಗಲೇ , ನೀನು ನನ್ನ ತಮ್ಮಂದಿರನ್ನೂ ಭೇಟಿಯಾಗಿರುವುದು ತಿಳಿದು ಸಂತೋಷವಾಯಿತು. ಇನ್ನುಳಿದಿದ್ದು ನಾನೊಬ್ಬಳೆ !
ಸಿಕ್ಕುತ್ತೇವೆ ಬಿಡು ಯಾವಾಗಲಾದರೂ. ಪ್ರಪಂಚ ತುಂಬಾ ಚಿಕ್ಕದು ! ಹೀಗೆ ಬರುತ್ತಿರು .

ಶಾಂತಲಾ ಭಂಡಿ (ಸನ್ನಿಧಿ) said...

ಚಿತ್ರಕ್ಕಾ...
ಇಂಥ ಒಂದು ಮಾಹಿತಿ ಬೇಕಿತ್ತು. ಸರಿಯಾದ ಸಮಯದಲ್ಲೇ ನೀವದನ್ನು ಬರೆದಿರಿ. ಆದರೆ ನಾನು ಓದಿದ್ದು ತಡವಾಗಿಯಾದರೂ ಒಂದೊಳ್ಳೆಯ ಮಾಹಿತಿಭರಿತ ಬರಹ ಓದಿದ ಸಂತೃಪ್ತಿ.

ಮಲ್ಲಿಕಾರ್ಜುನ.ಡಿ.ಜಿ. said...

ಚಿತ್ರಾ ಮೇಡಂ,
ನನ್ನದೂ ಮೆಡಿಕಲ್ಸ್ ಸ್ಟೋರಿದೆ. ಹೋಲ್‌ಸೇಲ್‌ನವರಿಗೆ ಮಾಸ್ಕ್ ಬೇಕು ಎಂದು ಫೋನ್ ಮಾಡಿದಾಗ ೧೨ ರೂಪಾಯಿ ಆಗುತ್ತೆ ಸರ್, ಕ್ಯಾಶ್ ಕೊಡಬೇಕು ಅಂದ.ನಾನೆಷ್ಟಕ್ಕೆ ಮಾರಬೇಕಯ್ಯ ಅಂದರೆ, ೨೦ಕ್ಕೊ ೩೦ಕ್ಕೊ ಮಾರಿ ಸರ್ ಅಂದ. ರೇಗಿಹೋಗಿ ನಾನು ಬರುವ ಗಿರಾಕಿಗಳಿಗೆಲ್ಲ ಕರ್ಚೀಫ್ ಬೆಸ್ಟ್ ಮಾಸ್ಕ್‌ನಿಂದ ತೊಂದರೆ ಎಂದು ಹೇಳತೊಡಗಿದೆ.
ಫುಣೆಯಲ್ಲಿನ ನಿಮ್ಮ ಅನುಭವ ಭಾರತೀಯರೆಲ್ಲರಿಗೂ ಸಲ್ಲುತ್ತೆ. ನಿಮ್ಮ ಸಲಹೆ ಎಲ್ಲರೂ ಪಾಲಿಸಲೇಬೇಕು.
ಲೋನಾವಾಲ ಪ್ರವಾಸದ ಬಗ್ಗೆ ಚಿತ್ರಗಳೊಂದಿಗೆ ಬರೆಯಿರಿ.

ಜಲನಯನ said...

ಚಿತ್ರಾ ನಿಮ್ಮ ಪೋಸ್ಟು ಈ ಹೆಚ್ಚುತ್ತಿರುವ ಪಿಡುಗಿನ ಮಾಹಿತಿಯಲ್ಲಿ ನವೀನತೆಯನ್ನು ಅಳವಡಿಸಿದೆ. ನನ್ನ ಬ್ಲಾಗ್ ನಲ್ಲಿ ಇದರ ಸೈದ್ಧಾಂತಿಕೆ ಪ್ಲಸ್ ಮೈನಸ್ ಗಳನ್ನು ತಿಳಿಸಿರುವೆ, ನೀವು ವಾಸ್ತವದಲ್ಲಿ ಏನಾಗುತ್ತಿದೆ, ಏನಾಗಬೇಕು ಎಂದೆಲ್ಲಾ ತಿಳಿಸಿದಿರಿ. ಜನ ಜಾಗೃತಿ ಅವಶ್ಯ ಎನ್ನುವುದನ್ನೂ ನೀವೂ ಒಪ್ಪುತ್ತೀರಿ ಎಂದಾಯಿತು

ಚಿತ್ರಾ said...

ಶಾಂತಲಾ ,
ಲೇಖನ ಇಷ್ಟವಾಗಿದ್ದು ಖುಷಿಯಾತು. ಈ ರೋಗದ ಬಗ್ಗೆ ನನಗೆ ತಿಳಿದಷ್ಟು ಮಾಹಿತಿಗಳನ್ನು ಹಂಚಿಕೊಂಡಿದ್ದೇನೆ ಅಷ್ಟೇ. ಇದು ನಮ್ಮ ಕರ್ತವ್ಯ ಎನಿಸುತ್ತದೆ !

ಚಿತ್ರಾ said...

ಮಲ್ಲಿಕಾರ್ಜುನ್ ,
ನಿಮ್ಮ ಅನುಭವ ತಿಳಿದು ವಿಷಾದವಾಯ್ತು. ಹಾಗೇ ನಿಮ್ಮ ಪ್ರಾಮಾಣಿಕ ಕಳಕಳಿಗೆ ಅಭಿನಂದನೆಗಳು !
ಲೋನಾವಾಲಾ ಪ್ರವಾಸದ ಬಗ್ಗೆ - ಬರೆಯುವಷ್ಟು ವಿಶೇಷವೇನೂ ಇಲ್ಲ. ಆದರೂ ಪ್ರಯತ್ನಿಸುತ್ತೇನೆ !
ಬರಹ ಮೆಚ್ಚಿದ್ದಕ್ಕೆ ಧನ್ಯವಾದಗಳು !

ಚಿತ್ರಾ said...

ಜಲನಯನ,
ಧನ್ಯವಾದಗಳು ! ನಿಮ್ಮ ಬರಹವನ್ನು ಇನ್ನೂ ಓದಲಾಗಿಲ್ಲ . ಖಂಡಿತಾ ಓದುತ್ತೇನೆ.
ನಮ್ಮನ್ನು (ಸಮಾಜವನ್ನು ) ಕಾಡುವ ಯಾವುದೇ ಸಮಸ್ಯೆಯ ಬಗ್ಗೆ ಜನ ಜಾಗೃತಿ ಅತೀ ಅವಶ್ಯ ಎನ್ನುವುದು ನನ್ನ ಅಭಿಪ್ರಾಯ . ಅದು ಹಂದಿ ಜ್ವರದಂಥಾ ಸಾಂಕ್ರಾಮಿಕ ರೋಗವಿರಲಿ ಅಥವಾ ಭ್ರಷ್ಟಾಚಾರದಂತಹಾ ಸಾಮಾಜಿಕ ರೋಗವಿರಲಿ ನಾವು ಜಾಗೃತಗೊಂಡ ಹೊರತು ಅವುಗಳನ್ನು ಹತೋಟಿಗೆ ತರಲಾಗದು ಅಲ್ಲವೇ?