September 30, 2009

ಒಂದು ಗಂಡು ಮಗು ಹುಟ್ಟಿಸ್ಲಿಕ್ಕೆ ಆಗದಿದ್ರೆ ....

ನನ್ನ ಮದುವೆಯಾದ ಹೊಸದು. ಇನ್ನೂ ೨-೩ ದಿನಗಳಷ್ಟೇ ಆಗಿದ್ದು . ಒಂದು ದಿನ ಮನೆಯವರೆಲ್ಲ ಸಂಜೆ ಹೊತ್ತಿಗೆ ಜಗುಲಿಯಲ್ಲಿ ಕುಳಿತು ಹರಟುತ್ತಿದ್ದರು . ಆಗ ಅಲ್ಲಿಗೆ ಬಹಳ ವರ್ಷಗಳಿಂದ ಮನೆಯ ಕೆಲಸದವನಾಗಿದ್ದ ' ಕಣೆಯ ' ಬಂದ . ಕಪ್ಪಗೆ ಸಣಕಲಾಗಿ , ಕುಳ್ಳಗೆ ಇರುವ ಆತನ ವಯಸ್ಸು ೫೦ ರ ಆಸು ಪಾಸು. ಸದಾ ಕಾಲ ' ಪರಮಾತ್ಮನ' ಸಾನಿಧ್ಯದಲ್ಲೇ ಇರುವವನು . ಮನೆ ಮಂದಿಗೆಲ್ಲ ಅವನನ್ನು ತಮಾಷೆ ಮಾಡುವುದು ಬಹು ಪ್ರಿಯವಾದ ಕೆಲಸ !

' ಒಡೆಯಾ, ನಮಸ್ಕಾರ ! "

" ಎಂತದಾ ಕಣೆಯಾ, ಇಷ್ಟು ವರ್ಷದಿಂದ ನಮ್ಮನೆ ಕೆಲಸ ಮಾಡ್ಕಂಡಿದ್ದೆ , ಯಾವ ಕಾರ್ಯನೂ ತಪ್ಪಿಸಲಿಲ್ಲ , ಮೊನ್ನೆ ನೆಂಟರ ಊಟ ಇತ್ತು , ಆ ದಿವ್ಸ ಬರ್ಲೆ ಇಲ್ಲಲ? " ಕವಳ ( ಎಲೆ- ಅಡಿಕೆ ) ಕುಟ್ಟುತ್ತ ನನ್ನ ಅತ್ತೆ ಕೇಳಿದರು.

' ಇಲ್ಲ ಒಡತೀರೆ, ಆ ದಿವ್ಸ ನಂ ಬೀಗರ ಮನೀಗೆ ಹೋಗಿದ್ದೆ ... ಬರ್ಲಿಕಾಗ್ಲಿಲ್ಲ. ಅದ್ಕೆ ಇವತ್ತು ಸಣ್ಣೊಡತಿ ನೋಡುಕೆ ಅಂತ ಬಂದೀದೆ '

ಮಹೇಶ್ , ನನ್ನನ್ನು ಪಕ್ಕಕ್ಕೆ ಕರೆದು ಅವನಿಗೆ ಪರಿಚಯಿಸಿದರು. ಆಮೇಲೆ ಅವನನ್ನು ಕೇಳಿದರು ..
" ಹ್ಯಾಂಗಿದಾರೆ ಸಣ್ಣೊಡತಿ ? ಅಡ್ಡಿಲ್ವಾ ನಾವು ಆರಿಸಿದ್ದು ? "

ಒಮ್ಮೆ ಅಡಿಯಿಂದ ಮುಡಿವರೆಗೆ ನೋಡಿದವ " ಅಡ್ಡಿಲ್ಲ ಬಿಡಿ , ನೋಡುಕೆಲ್ಲ ಚಂದ ಇದ್ರು ... ಆದ್ರೆ ಘಟ್ಟದ ಮ್ಯಾಲಿನವರಂತಲಾ ಒಡೆಯಾ? " ಎಂದವನು ನಂತರ ಅರೆಕ್ಷಣ ಬಿಟ್ಟು

" ಈಗೆಲ್ಲ ನಡೀತದೆ ಬಿಡಿ ! ಮುಂಚಿನ ಹಾಂಗಲ್ಲ! " ಎನ್ನಬೇಕೆ ? ಯಾವುದೋ ದೊಡ್ಡ ತಪ್ಪು ಮಾಡಿದವರನ್ನು ಕ್ಷಮಿಸುವ ರೀತಿಯಲ್ಲಿ !

ನನಗೋ ಒಮ್ಮೆ ಕಸಿವಿಸಿಯಾಯಿತು . ಮೊದಲೇ ಹೊಸಾ ಜಾಗ , ಹೊಸ ಜನ , ಅದರಲ್ಲಿ ಇವನೋ ಹೀಗೆ ಹೇಳುತ್ತಿದ್ದಾನೆ !

ಅಲ್ಲೇ ಜಗುಲಿಯ ತುದಿಗೆ ಕುಳಿತು, ಅತ್ತೆ ಬಾಳೆಲೆಯಲ್ಲಿ ತಂದಿಟ್ಟ ಸಿಹಿತಿಂಡಿ- ಕಜ್ಜಾಯಗಳನ್ನು ಮುಗಿಸಿ ಕೈತೊಳೆದು ಬಂದವನು ಎಲೆ ಪಟ್ಟಿಯ ಮೇಲೆ ೧೦ ರೂಪಾಯಿ ಇಟ್ಟು ನಮಗೆ ಉಡುಗೊರೆ ಮಾಡಿದ.

" ಸಣ್ಣೊಡೆಯಾ , ಬಡವಂದು ಸಣ್ಣ ಉಡುಗೊರೆ, ತಗಳಿ .. " ಹಲ್ಲು ಕಿರಿಯುತ್ತಾ ನಿಂತ .

ಆಮೇಲೆ ನನ್ನ ಮಾವನವರ ಕಡೆ ನೋಡಿ, " ಒಡೆಯಾ , ಹಂಗಾರೆ ಈ ಸಲ ದೀಪಾವಳಿಗೆ ಒಂದು ಮೊಮ್ಮಗ ಬತ್ತ ಮನಿಗೆ ! ! ನಮಗೆ ಒಂದು ದೊಡ್ಡ ಬಕ್ಷೀಸು ಸಿಗ್ತದೆ ! " ಎಂದು ದೊಡ್ಡದಾಗಿ ನಕ್ಕ .

ಮಹೇಶ್ ಅವರು " ಏ ಮಾರಾಯ, ಎಂತೆಂತದಾರೂ ಹೇಳ್ತ್ಯಲೋ ! " ಎನ್ನುತ್ತಿದ್ದರೆ , ಆತ ಅಂಗಳ ದಾಟಿಯಾಗಿತ್ತು !

ಜಗುಲಿಯಲ್ಲಿದ್ದ ಎಲ್ಲರೂ ನಮ್ಮಿಬ್ಬರ ಮುಖ ನೋಡಿ ನಗುತ್ತಿದ್ದರೆ , ನಾನು ಕೆಂಪಾಗಿ ಬಿಟ್ಟಿದ್ದೆ ! ಕಾರಣ ಇಷ್ಟೇ , ನಮ್ಮ ಮದುವೆಯಾಗಿದ್ದು ಜೂನ್ ನಲ್ಲಿ ! ಈ ಕಣೆಯನೋ " ದೀಪಾವಳಿಗೆ ಮೊಮ್ಮಗ ಬರಲಿ" ಎಂದು ಹಾರೈಸಿದ್ದ!

--------------------------------------------------------------------------------

ಅಂತೂ ಕಣೆಯ ಹೇಳಿದಂತೆ , ಆ ದೀಪಾವಳಿಯಲ್ಲದಿದ್ದರೂ , ಮುಂದಿನ ದೀಪಾವಳಿ ಹಬ್ಬದಲ್ಲೇ ಸಿರಿ ಹುಟ್ಟಿದಳು. ಒಂದೂವರೆ ತಿಂಗಳಿಗೆ ಅತ್ತೆಯಮನೆಗೆ ಹೋದೆ ನಾನು . ಒಂದು ದಿನ ಅತ್ತೆ ಸಿರಿಯನ್ನು ಆಡಿಸುತ್ತ ಕುಳಿತಿದ್ದರು. ಆ ಹೊತ್ತಿಗೆ ಬಂದ ಕಣೆಯ .

" ನೋಡೋ , ನಮ್ಮನೆ ಮೊಮ್ಮಗಳು , ಯಾರ ಹಂಗೆ ಕಾಣ್ತಾಳೆ? " ಎಂದು ಅತ್ತೆ ಮಗುವನ್ನು ಮುದ್ದಿಸುತ್ತ ಹೇಳಿದರು.

"ಹಂ , ಮಾಣಿಯಾಗಿದ್ರೆ ಹೇಳ್ತಿದ್ದೆ ಒಡತಿ, ಹೆಣ್ಣು ಕೂಸಿನೆಲ್ಲ ಎಂತ ನೋಡುದು ? " ಎಂದು ಉದಾಸೀನವಾಗಿ ಹೇಳಿ ಎತ್ತಲೋ ನೋಡುತ್ತಾ ಕುಳಿತವನ ಬಗ್ಗೆ ನನಗೋ ಎಲ್ಲಿಲ್ಲದ ಸಿಟ್ಟು ಬಂದಿತ್ತು.

ಕಣೆಯನಿಗೆ ಗಂಡು ಮಕ್ಕಳೆಂದರೆ ಅತಿಯಾದ ಹುಚ್ಚೆಂದೂ , ಗಂಡು ಸಂತಾನವಿಲ್ಲದಿದ್ದರೆ ಜನ್ಮವೇ ದಂಡ ಎನ್ನುವುದು ಅವನ ಅಭಿಪ್ರಾಯ ಎಂದು ಆಮೇಲೆ ನನಗೆ ತಿಳಿಯಿತು !

ಕೆಲ ವರ್ಷಗಳ ನಂತರ ನನ್ನ ಮೈದುನನಿಗೆ ಗಂಡು ಮಗು ಹುಟ್ಟಿದಾಗ ಕಣೆಯ ಬಹು ಖುಷಿಯಿಂದ ನೋಡಲು ಬಂದವನು ,

" ಸತ್ಯಣ್ಣ ಚೊಲೋ ಕೆಲಸ ಮಾಡಿದ್ರು ನೋಡಿ ! ಅಂತೂ ಮಗನ್ನ ಹುಟ್ಟಿಸ್ಕನ್ಡ್ರು ! ಗಂಡಸು ಅಂದ್ರೆ ಹಿಂಗಿರಬೇಕು ! ಒಂದು ಗಂಡು ಮಗನ್ನ ಹುಟ್ಟಿಸ್ಲಿಕ್ಕೆ ಆಗದೆ ಇದ್ರೆ ,ಅದೆಂತ ಜಲ್ಮ ! " ಎಂದು ಉದ್ಗರಿಸಿದನಂತೆ !

----------------------------------------------------------------------------

ಈಗ ೨ ವರ್ಷಗಳ ಹಿಂದೆ , ದೀಪಾವಳಿಯಲ್ಲಿ ಅಂಗಳದಲ್ಲಿ ಕುಣಿಯುತ್ತಿದ್ದ ಸಿರಿಯನ್ನು ನೋಡಿದವನು

" ಇದ್ಯಾವ ಕೂಸು ಒಡತಿ? " ಎಂದು ಕೇಳಿದ .

" ನಮ್ಮನೆ ಮೊಮ್ಮಗಳು ಮಾರಾಯ , ಮಹೇಶನ ಮಗಳು " ಎಂದರು ಅತ್ತೆ.

" ಹೌದಾ, ಸಣ್ಣೊಡೆಯಂಗೆ ಎಷ್ಟು ಹುಡುಗ್ರು ಒಡತಿ ? "

" ಈ ಕೂಸು.. ಒಂದೇಯ "

" ಒಂದು ಮಾಣಿ ಬೇಕಾಗಿತ್ತಲ್ರ .. ನಾ ಹೇಳ್ತೆ ತಡೀರಿ "

ಆ ಸಂಜೆ ಪರಮಾತ್ಮನ ಸೇವೆ ಮಾಡಿಯೇ ಬಂದವನು ಜಗುಲಿಯಲ್ಲಿ ಮಾವನವರಿಗೆ ದೀಪಾವಳಿ ಕಾಣಿಕೆ ಎಂದು ತಾನು ತಂದಿದ್ದ ಕುಂಬಳಕಾಯಿ ಇಟ್ಟು ಅಡ್ಡಬಿದ್ದ. ಆಮೇಲೆ ಮಹೇಶ್ ರನ್ನು ಕರೆದು ,

" ಸಣ್ಣೊಡೆಯಾ , ನಾ ಹೀಂಗ್ ಹೇಳ್ತೆ ಹೇಳಲ್ಲಾ , ಆದ್ರೆ , ಒಂದು ಗಂಡು ಮಾಣಿ ಇಲ್ದೆ ಹೋದ್ರೆ ಎಂತಾ ಜಲ್ಮ ? ಮಾಣಿ ಬೇಕೇ ಬೇಕು . ನಾ ಈಗಿಂದೀಗ್ ಶಂಭು ದೇವಸ್ಥಾನಕ್ಕೆ ಹೋಗಿ , ಶಂಬೋಡೆಯನ ಹತ್ರೆ ಕೇಳ್ಕತ್ತೆ , " ಎಂದು ನಿಲ್ಲಿಸಿದ.

ನನ್ನ ಮೈದುನ " ಎಂತ ಹೇಳಿ ಕೇಳ್ಕತ್ಯಾ ಕಣೆಯಾ? " ಎಂದು ಅವನನ್ನು ಕೆಣಕಿದ .

" ಒಡೆಯಾ, ಅರ್ಜೆಂಟಾಗಿ , ನಂ ಸಣ್ಣೊಡೆಯಂಗೆ ಒಂದು ಮಾಣಿ ಹುಟ್ಟ್ಸೋದೆಯಾ ಹೇಳಿ ದ್ಯಾವ್ರಿಗೆ ಅಡ್ಡ ಬಿದ್ದು ಕಾಣಿಕೆ ಹಾಕೀಕ್ ಬತ್ತೆ " ಎಂದು ತೂರಾಡುತ್ತಾ ಅಂಗಳಕ್ಕಿಳಿದ !

ಜಗುಲಿಯಲ್ಲಿ ಮತ್ತೊಮ್ಮೆ ನಗುವಿನ ಕಟ್ಟೆಯೊಡೆಯಿತು !

" ಅತ್ಗೇ, ಏನೂ ಖರೆ ಇಲ್ಲೆ ನೋಡು , ಇಂವ ಅಡ್ಡಬಿದ್ದು ಕಾಣಿಕೆ ಹಾಕಿ ನಿಂಗೆ ' ಅರ್ಜೆಂಟ್ ' ಆಗಿ ಒಂದು ಮಗ ಹುಟ್ಟ್ ತಾ ನೋಡು " ಎಂದು ಮೈದುನ ರೇಗಿಸತೊಡಗಿದರೆ ,

" ಅಂವ ಕೇಳದು ' ಸಣ್ಣೊಡೆಯಂಗೆ ಒಂದು ಮಾಣಿ ಹುಟ್ಸು ' ಹೇಳಿ. ನನಗಲ್ಲ ಬಿಡು " ನಾನು ಕೂಲಾಗಿ ನಗುತ್ತಾ ಹೇಳಿದೆ .

ಆತ ಕಾಣಿಕೆ ಹಾಕಿದ್ದು ಮಾತ್ರ ಯಾವ ದೇವರಿಗೋ ಗೊತ್ತಿಲ್ಲ ! ಇನ್ನೂವರೆಗೂ ದೇವರು ಕಣೆಯನ ಕೋರಿಕೆಯನ್ನು ಮನ್ನಿಸಿಲ್ಲ

( ಮನ್ನಿಸುವುದೂ ಇಲ್ಲ ಬಿಡಿ ! ) !

ವಿಪರ್ಯಾಸವೆಂದರೆ , " ಗಂಡು ಸಂತಾನ " ಇರಲೇ ಬೇಕೆಂದು ಇಲ್ಲದಿದ್ದರೆ ಜನ್ಮವೇ ದಂಡವೆಂದು ನಂಬಿರುವ ಕಣೆಯನನ್ನು ಅವನ ಇಬ್ಬರು ಗಂಡು ಮಕ್ಕಳೂ ಮನೆಯಲ್ಲಿ ಇಟ್ಟುಕೊಂಡಿಲ್ಲ !


38 comments:

Unknown said...

ಅಂವ ಎಂಥದೋ ಅನಕ್ಷರಸ್ಥ, ಈಗ್ಲೂ ಎಷ್ಟೋ ಒದದವೂವಾ ಗಂಡು ಸಂತಾನ ಇಲ್ದೇ ಹೋದ್ರೆ ಈ ರೀತಿ ಭಾವನೆ ಇಟ್ಕಂಡವು ಇದ್ವಲಿ, ಎಂಥಾ ಮಾಡದು?
ಬರಹ ಚೊಲೋ ಇದ್ದು. ಚೊಲೋ ನೆಗ್ಯಾಡದಿ :-)

shivu.k said...

ಚಿತ್ರಾ ಮೇಡಮ್,

ನಿಮ್ಮ ಮದುವೆ ನಂತರ ಕಣೇಯ ಮಾತು ಕೇಳಿ ನಗು ಬಂತು. ಹಳ್ಳಿ ಜನಗಳ ಮುಗ್ಧತೆ ಚೆಂದವೆನಿಸಿದರೂ ಕೆಲವರಿಗೆ ಎಂಥ ಪೇಚು ಸಿಲುಕಿಸುತ್ತೆ ಅಲ್ವಾ...

ಪ್ರಸಂಗ ಚೆನ್ನಾಗಿತ್ತು..

Umesh Balikai said...

ಚಿತ್ರಾ ಮೇಡಮ್,

ಇಂದಿನ ದಿನಗಳಲ್ಲೂ ಹಳ್ಳಿಗಳಲ್ಲಿ ಗಂಡು ಸಂತಾನ ಇಲ್ಲದವರನ್ನು ತುಂಬಾ ಕನಿಕರದಿಂದ ನೋಡುವ ಪರಿಸ್ಥಿತಿ ಇದೆ. ಹೆಣ್ಣು ಮಗು ಎಷ್ಟೇ ಒಳ್ಳೆಯವಾಳಾದರೂ ಬೇರೆ ಮನೆ ಬೆಳಗಲು ಹೋಗುತ್ತಾಳೆ; ಗಂಡು ಸಂತಾನ ಇದ್ದರೆ ಮುಪ್ಪಿನ ಕಾಲದಲ್ಲಿ ಆಸರೆಯಾದಾನು ಅನ್ನೋ ಆಸೆಯೇ ಅದಕ್ಕೆ ಕಾರಣವಿರಬೇಕು. ಗಂಡು ಮಕ್ಕಳು ಇಲ್ಲದವರು ಸಹೋದರನ ಮಗನನ್ನೋ ಮತ್ತೆ ಇನ್ಯಾರನ್ನೋ ದತ್ತು ತೆಗೆದುಕೊಂಡು ಸಾಕುವ ಪರಿಪಾಠವೂ ಇದೆ. ಆ ಮಗ ಮುಪ್ಪಿನ ಕಾಲದಲ್ಲಿ ಆಸರೆಯಾಗುತ್ತಾನೋ ಇಲ್ಲವೋ ಅದು ಬೇರೆ ಮಾತು. ಆದರೆ ಮೂಲ ಉದ್ದೇಶವಂತೂ ಅದೇ ಆಗಿರುತ್ತೆ. ಹೀಗಾಗಿ ಕಣೆಯ ಹೇಳಿದ ಮಾತುಗಳು ನಮಗೆಲ್ಲ ಉತ್ಪ್ರೇಕ್ಷೆ, ಮೂಢತನದ ಪರಮಾವಧಿ ಅನಿಸಿದರೂ ಅವು ಹಳ್ಳಿಯ ಪರಿಸರದಲ್ಲಿ ಸರ್ವೇ ಸಾಮಾನ್ಯ. ಬೇರೆಯವರಿಗೆ ಗಂಡು ಮಗು ಆಗಲಿ ಎಂದು ಹರಕೆ ಹೋರುತ್ತಿದ್ದ ಕಣೆಯನನ್ನು ಅವನ ಗಂಡು ಮಕ್ಕಳೇ ನೋಡದಿರುವುದು ಅವನ ಬಾಳಿನ ದುರಂತ ವಿಪರ್ಯಾಸವೇ ಸರಿ.

ಇಂಥ ಗಂಭೀರ ವಿಷಯವನ್ನು ತುಂಬಾ ಸ್ವಾರಸ್ಯಕರ ರೀತಿಯಲ್ಲಿ ಬರೆದಿದ್ದೀರಿ. ಅಭಿನಂದನೆಗಳು.

- ಉಮೇಶ್

ಸವಿಗನಸು said...

ಚಿತ್ರಾ,
ಮನಸೆಂಬ ಹುಚ್ಚು ಹೊಳೆ....ಯಂತೆಯೇ ಇದೆ ಲೇಖನ...
ಕಣೆಯನಂತವರು ಇನ್ನು ಇದ್ದಾರಲ್ಲ..ವಿಪರ್ಯಾಸ...

Dileep Hegde said...

ಗಂಡು ಮಕ್ಕಳಿಂದ ಸಿಗುವ ಸುಖದ ಅನುಭವ ತನ್ನ ಮಕ್ಕಳಿಂದಲೇ ಆಗಿದ್ದರೂ ಇತರರಿಗೆ ಗಂಡು ಮಕ್ಕಳನ್ನು ಹೆರುವ ಅಗತ್ಯದ ಬಗ್ಗೆ ಪ್ರವಚನ ನೀಡುವ ಕಣೆಯ "ತೀರ್ಥಂಕರ" ನಂತೆ ಕಂಡ.. :)
ಕಣೆಯನಾದರೋ ಓದು ಬರಹ ಬಾರದವ... ಅವನ ಗಂಡು ಮಕ್ಕಳ ಮೇಲಿನ ಮೋಹವನ್ನ ಹೆಚ್ಚಿಗೆ ಖಂಡಿಸಲು ಆಗುವದಿಲ್ಲ... ಆದರೆ, ಕೆಲವೊಮ್ಮೆ ಕಲಿತು ಸಮಾಜದಲ್ಲಿ ಉನ್ನತ ಸ್ಥಾನದಲ್ಲಿರುವವರೂ ಗಂಡು ಮಕ್ಕಳ ಮೋಹವನ್ನು ಅನ್ತಿಸಿಕೊಂದಿರುತ್ತಾರಲ್ಲಾ... ಅವರಿಗೆ ಏನು ಹೇಳೋಣ..?

ಕಣೆಯ ನೊಡನೆ ನಡೆದ ಸಂಭಾಷಣೆ ನಗೆ ತರಿಸಿದರೂ ಹಳ್ಳಿಗಳಲ್ಲಿ ಇನ್ನೂ ನೆಲೆಸಿರುವ ಗಂಡು ಸಂತಾನದ ವ್ಯಾಮೋಹದ ಸಮಸ್ಯೆಯ ಬಗ್ಗೆ ಬೇಸರವಾಯಿತು....

ಕಣೆಯ ಘಟ್ಟದ ಮೇಲಿನವರನ್ನ ತಿರಸ್ಕಾರದ ದೃಷ್ಟಿಯಿಂದ ನೋಡಿದ್ದು ಯಾಕೆ ಅಂತ ಗೊತ್ತಾಗಲಿಲ್ಲ...

ಉತ್ತಮ ಬರಹ..

ಅಭಿನಂದನೆಗಳು...

ತೇಜಸ್ವಿನಿ ಹೆಗಡೆ said...

ಚಿತ್ರಕ್ಕ,

ಒಳ್ಳೇ ಕಣೆಯ... ಪಾಪ ತಾ ಬಾವಿಗೆ ಬಿದ್ದಾಂಗೆ ಇನ್ನೋಬ್ಬರೂ ಬೀಳ್ಲಿ ಹೇಳೇ ಗಂಡು ಸಂತಾನ ಬೇಕು ಹೇಳ್ತಾ ಇದ್ದಿಕ್ಕು... ನಂಗೂ ಒಬ್ರು ಹೇಳಿಯಿದ್ದ... ಗಂಡು ಮಕ್ಕ ಆಗ್ದೇ ಹೋದವರಿಗೆ ಸ್ವರ್ಗ ಇಲ್ಯಡ.. ಬರೀ ಹೆಣ್ಮಕ್ಕ ಇದ್ದ ಹೆಂಗಸ್ರು ಬಂಜೆ ಹೇಳಡ.. :) :D... ಎಂಥಾ ಲೋಕವಯ್ಯಾ ಇದು?!!

ಶಾಂತಲಾ ಭಂಡಿ (ಸನ್ನಿಧಿ) said...

ಚಿತ್ರಕ್ಕಾ...
ಜನ ಮಜಾ ಇರ್ತ ಅಲ್ದಾ? ಅಷ್ಟೇನೂ ಪ್ರಪಂಚ ಜ್ಞಾನ ಇರದ ಕಣೆಯನಂಥವರ ಮಾತಿಗೆ ನಕ್ಕು ಬಿಡ್ಲಕ್ಕು. ಆದ್ರೆ ಇವತ್ತಿಗೂ ಗಂಡು ಮಗು ಬೇಕು ಅಂತ ಮೂರು ನಾಲ್ಕು ಮಕ್ಕಳತನಕ ಯೋಚನೆಮಾಡುವಂಥ ಜನರನ್ನ ನೋಡಿದಾಗ ನಿಜವಾಗ್ಲೂ ಏನೂ ಹೇಳಲೂ ತೋಚ್ತಿಲ್ಲೆ.
ಚೆಂದದ ನಿರೂಪಣೆ. ಅಲ್ಲಲ್ಲಿ ನಿಂತು ನಕ್ಕು ಮುನ್ನಡೆದರೂ ಯೋಚನೆಗೀಡುಮಾಡುವಂಥ ವಿಷಯ.

ಜಲನಯನ said...

ಚಿತ್ರಾ..ಚಂದದ ನಮ್ಮಂಥವರನ್ನ ರೇಗಿಸೋ ಲೇಖನ ಪೋಸ್ಟ್ ಮಾಡಿದ್ರಿ...ಪರ್ವಾಯಿಲ್ಲ ಬಿಡ್ರಿ...ನಮ್ಮ ಮುಂದೆ ಕಣೆಯ ಇಲ್ಲ...ಮುಜುಗರ ಇಲ್ಲ...ಹಹಹ.
ಅಂದಹಾಗೆ..ನನಗೆ ನನ್ನ ದೂರದ ದೊಡ್ದಪ್ಪನ ನೆನಪು ಬರುತ್ತೆ...ಅವರಿಗೆ ಹಿಂದಿಂದೇ ನಾಲ್ಕು ಗಂಡು ಮಕ್ಕಳು ಆದವು..ಅವರಿಗಿಂತ ವಯಸ್ಸಿನಲ್ಲಿ ಸ್ವಲ್ಪವೇ ಕಿರಿಯ ನನ್ನ ಮಾವನಿಗೆ ಹಾಗೇ ಮೂರು ಹೆಣ್ನುಮಕ್ಕಳು...ನನ್ನ ಮಾವನ್ನ ಅವಕಾಶ ಸಿಕ್ಕಾಗಲೆಲ್ಲಾ ಅವರು ಮೂದಲಿಸೋದು ತಪ್ತಿರಲಿಲ್ಲ...ಸರಿ ಎಲ್ಲಾ ಬೆಳೆದರು ಮದುವೆಗಳಾದವು...ಈಗ್ಗೆ ಮೂರು ವರ್ಷಕ್ಕೆ ಹಿಂದೆ ನನ್ನ ಆ ದೂರದ ದೊಡ್ದಪ್ಪ ತೀರಿಹೋದ ವಿಷಯ ನಮಗೆ ಕುವೈತಿಗೆ ಸುದ್ದಿ ಬಂತು..ನಮ್ಮ ಸಾಂತ್ವನ ಇತ್ಯಾದಿ ನಮ್ಮ ದೊಡ್ದಮ್ಮನಿಗೆ ನೀಡೋಣ ಅಂತ ಫೋನ್ ಮಾಡಿದ್ರೆ ನನ್ನ ಮಾವನೇ ಎತ್ತಿದ್ದು ಫೋನು..ಇಲ್ಲ ಕಣೋ..ನಿನ್ಗೆ ತಿಳಿಸ್ಲಿಲ್ಲ ನಿನ್ನ ದೊಡ್ದಮ್ಮ ತೀರಿಹೋಗಿ ನಾಲ್ಕು ತಿಂಗಳಾಯಿತು ಅಂದರು..ಆಮೇಲೆ ಗೊತ್ತಾದದ್ದು ನಾಲ್ಕು ಗಂಡು ಮಕ್ಕಳಿದ್ದೂ ತಂದೆ ತಾಯಿ ಆರೋಗ್ಯದ ಕಡೆ ಕಾಳಜೀನೇ ವಹಿಸ್ಲಿಲ್ವಂತೆ...ದೊಡ್ಡಮ್ಮ ಅನಾರೋಗ್ಯದಿಂದ ತೀರಿದರಂತೆ, ಹೆಂಡತಿ ಪಾಡೂ ನೋಡಿ ತನ್ನ ಮಕ್ಕಳ ಅನಾದರದಿಂದ ಕುಗ್ಗಿ ಹೋಗಿದ್ದ ಕೇಳಲು ದಿಕ್ಕಿಲ್ಲದ ದೊಡ್ಡಪ್ಪನ್ನ ನನ್ನ ಮಾವನ ಹಿರಿ ಮಗಳು ಕರೆದುಕೊಂಡು ಹೋಗಿ ಮದ್ರಾಸಿನಲ್ಲಿ ತನ್ನ ಮನೆಯಲ್ಲಿ ತನ್ನ ಅಪ್ಪ-ಅಮ್ಮನಿಗೆ ಜೊತೆಯಾಗಿ ಹಾಯಾಗಿರಲಿ ಅಂತ ಇರಿಸಿಕೊಂಡಿದ್ದರಂತೆ...ಚಿಂತೆಯಿಂದ ಇದ್ದ ದೊಡ್ದಪ್ಪ..ಕೊನೆಗಾಲದಲ್ಲಿ ಹಠಮಾಡಿ ತನ್ನ ದೊಡ್ದ ಮಗನ ಮನೆಗೆ ಹೋದರಂತೆ..ಹೋದ ಒಂದೇ ವಾರದಲ್ಲಿ ಅವರೂ ತೀರಿಹೋದದ್ದು.. ಊರಲ್ಲಿ..ಇದನ್ನೆಲ್ಲ ಅಕ್ಂಡವರು ಹೇಳ್ತಾರೆ..ಗಂಡುಮಕ್ಕಳು ಹೆಸರಿಗೆ-ಆಸ್ತಿಗೆ...ಎಲ್ಲ ಸಿಕ್ಕ ಮೇಲೆ..ತಂದೆ-ತಾಯೀನ ಕಸದ ತರ ನೋಡ್ಕೋಂಡ್ರು ಅಂತ....
ಯಾರೇ..ಆಗಲಿ ತಂದೆ-ತಾಯಿಯ ಕಾಲಜಿ ಚಿಂತೆ ಮಾಡದವರು ಇಅದ್ದರೂ ಇಲ್ಲದಂತೆ ತಂದೆ-ತಾಯಿ ಪಾಲಿಗೆ.....ಅಲ್ವಾ....ಒಳ್ಲೆಯದ ವೈಚಾರಿಕ ಲೇಖನ

Ittigecement said...

ಚಿತ್ರಾ...

ನನಗೆ ನನ್ನ ಊರಿನ ಗೆಳೆಯ "ಕುಷ್ಟ" ನೆನಪಾದ...
ನಮಗೆ ಕೊಳ್ಳಿ(ಬೆಂಕಿ) ಇಡ್ಲಿಕ್ಕಾದ್ರೂ ಗಂಡು ಮಕ್ಳು ಬೇಕಲ್ರ...
ಅಂತ ಹೇಳಿದ್ದ...

ಕಣೆಯನ ಚಿತ್ರ ಸೊಗಸಾಗಿ ಬಿಡಿಸಿದ್ದೀರಿ...
ನನಗಂತೂ ಕುಷ್ಟನ ಹಾಗೆಯೇ ಕಂಡ..

ಮೂಢ ನಂಬಿಕೆ ಇದ್ರೂ ಆ ನಂಬಿಕೆಯ ಹಿಂದಿನ ಮುಗ್ಧತೆ ಇಷ್ಟವಾಗಿಬಿಡುತ್ತದೆ...
ಅಲ್ಲವಾ...?

ನಿಮ್ಮ ಲೇಖನ ಓದಿ ....
ಕುಷ್ಟ ಡಾಕ್ಟರ್ ಆದದ್ದು,
ಅವನ ಪ್ರೇಮ ಕಥೆ ಎಲ್ಲ ಮನಸ್ಸಲ್ಲಿ ಹಾದು ಹೋದವು..
ಈಗಲೇ ಬರೆದು ಬಿಡುವ ಸ್ಪೂರ್ತಿ ಕೊಟ್ಟಿದೆ...

ನಿಮ್ಮ ಬ್ಲಾಗಿಗೆ ಬಂದರೆ ನಗಲಿಕ್ಕೆ ಕೊರತೆ ಇಲ್ಲ...

ಅಭಿನಂದನೆಗಳು...

ವಿ.ರಾ.ಹೆ. said...

ಚಿತ್ರಕ್ಕ ,
ಚೆನ್ನಾಗಿ ನಗಿಸುತ್ತಾ ಒಂದು ಒಳ್ಳೆಯ ಸಂದೇಶವನ್ನೂ ಕೊಟ್ಟಿದೆ ಬರಹ.
thanks

ಸುಮ said...

ತುಂಬ ಗಹನವಾದ ವಿಚಾರ ,ಚೆಂದದ ಬರಹ ಚಿತ್ರ. ನಾನು ಕೂಡ ಇದೇ ಪರಿಸ್ಥಿತಿ ಪರಿಸ್ಥಿತಿಯಲ್ಲಿದ್ದೇನೆ. ಪ್ರತೀಬಾರಿ ಊರಿಗೆ ಹೋದಾಗಲು ಹೀಗೆ ಸಲಹೆ ಕೂಡಲು ನಿಮ್ಮ ಕಣೆಯನಂತವರು ತಯಾರಾಗಿರುತ್ತಾರೆ. ವಿದ್ಯಾವಂತರು ಕೂಡ ಹೀಗೆ ಯೋಚಿಸುತ್ತಾರೆಂಬುದೆ ದುಖಃದ ಸಂಗತಿ.

sunaath said...

ಚಿತ್ರಾ,
ಅನಕ್ಷರಸ್ಥ ಜನ ಇನ್ನೂ ಇಂತಹ ವಿಚಾರಗಳನ್ನು ಇಟ್ಟುಕೊಂಡಿರುವದು ಆಶ್ಚರ್ಯದ ಮಾತಲ್ಲ.

ಸಾಗರದಾಚೆಯ ಇಂಚರ said...

ಚಿತ್ರ,
ಕಣೆಯನ ಹಂಗೆ ಎಷ್ಟು ಜನ ಇದ್ದ ನಮ್ಮಬದಿಗೆ ಅದೇ ನಮನಿ ಮಾತಾಡವು, ಎಷ್ಟು ಕಲಿತರು ಗಂಡು ಬೇಕು ಹೇಳ ಬುದ್ದಿ ಬಿಡ್ತ್ವಿಲ್ಲೇ,
ಆದರೆ ಕಣೆಯನ ನಾನು ಒಂದು ಸಲ ಭೆಟ್ಟಿ ಆಗಿ ಕಾಣಿಕೆ ಹಾಕಿಕ್ಕೆ ಬಾ ಹೇಳ್ತಿ ಸಿಕ್ಕಾಗ :)

ರಾಶಿ ಚೊಲೋ ಬರದ್ದೆ, ಇಂಥದೇ ಕಥೆ ಭಾರಿ ಖುಷಿ ಕೊಡ್ತು ಓದಲೇ,

ಪೂರ್ಣಿಮಾ ಭಟ್ಟ, ಸಣ್ಣಕೇರಿ said...

ಚಿತ್ರಕ್ಕ, ಒಳ್ಳೇ ಬರಹ. ಹಾಸ್ಯದೊಂದಿಗಿನ ವ್ಯಂಗ್ಯ ನಿಜಕ್ಕೂ ಇಷ್ಟ ಆತು. ಇಪ್ಪತ್ತರ ಆಸುಪಾಸಿನಲ್ಲಿ ಮದುವೆ, ಅದಾದ ಮರು ವರ್ಷವೇ ಮಗು - ಅದರಲ್ಲೂ ‘ಗಂಡು ಮಗು’(!), ಅದಾದ ಎರಡ್ಮೂರು ವರ್ಷಕ್ಕೆ ಎರಡನೆಯದು - ಇದೇ ಪರಿಧಿಯಲ್ಲಿ ಆಲೋಚನೆ ಮಾಡುವವರನ್ನು ನೋಡಿದ್ರೆ ಅಚ್ಚರಿ ಆಗ್ತು. ನೀನು ಈ ಪರಿಧಿಯಲ್ಲಿ ಇಲ್ಲ ಅಂತಾದ್ರೆ ‘ರೆಬೆಲ್’ ಹಣೆಪಟ್ಟಿಗೆ ತಯಾರಿದ್ದರಾಯಿತು :-)

venu said...

ಅಕ್ಕ ಲೇಖನ ಚೆನ್ನಾಗಿದ್ದು :),ಆದ್ರೆ ಅವನೇನೋ ಅನಕ್ಷರಸ್ಥ ಬಿಡು ,ಆದ್ರೆ ನಮ್ಮ ಹೆಣ್ಣು ಮಕ್ಕಳೆಲ್ಲ ವಿದ್ಯಾವಂತರಾಗಿ ಸಿಕ್ಕ ಸಿಕ್ಕವರ ಜೊತೆ ಓಡಿ ಹೋಗ್ತಾ idvalla ?ಅವರ ಅಪ್ಪ ಅಮ್ಮ ಹಗಲು ರಾತ್ರಿ ನಿದ್ರೇ ಮಾಡ್ತಾ ಇಲ್ಲೇ ಪಾಪ .. ಇದನ್ನ ಏನು ಹೇಳವು ...ಆಗ ಹೆಣ್ಣು ಬೇಕು ಅನಿಸ್ತಾ

ಚಿತ್ರಾ said...

ಮಧು,
ನೀ ಹೇಳಿದ್ದು ಖರೇಯಾ. ಇಂಥಾ ಭಾವನೆ ಕಲಿತವರಲ್ಲೂ ಇದ್ದು. ಅನಕ್ಷರಸ್ಥರಿಗೆ ಬುದ್ಧಿನಾದ್ರು ಹೇಳಲಕ್ಕು ಉಳಿದವಕೆ ಹ್ಯಾಂಗೆ?
ನೆಗ್ಯಾಡಿದ್ದಕ್ಕೆ ಥ್ಯಾಂಕ್ಸ್!

ಚಿತ್ರಾ said...

ಶಿವೂ,
ಮೆಚ್ಚಿದ್ದಕ್ಕೆ ಧನ್ಯವಾದಗಳು . ಇಂಥಾ ಪೇಚಿನ , ಮುಜುಗರದ ಪ್ರಸಂಗಗಳು ಬಹಳಷ್ಟಿವೆ !

ಚಿತ್ರಾ said...

ಉಮೇಶ್,
ಲೇಖನ ಮೆಚ್ಚಿದ್ದಕ್ಕೆ ಧನ್ಯವಾದಗಳು.
ನಿಜವಾಗಿ ನೋಡಿದರೆ, ಹಳ್ಳಿಯವರಿಗಿಂತ , ಪಟ್ಟಣವಾಸಿಗಳು , ಅನಕ್ಷರಸ್ಥರಿಗಿಂತ , ವಿದ್ಯಾವಂತರಲ್ಲಿ ಇಂಥ ನಂಬಿಕೆಗಳು ಜಾಸ್ತಿ ಎನ್ನುವುದು ನನ್ನ ಅನುಭವ .
ಮಗಳು ಬೇರೆಯವರ ಮನೆಗೆ ಸೇರುತ್ತಾಳೆ , ಮಗನಿಲ್ಲದೆ ವಂಶ ಬೆಳೆಯದು ಎಂಬಂಥ ಕಾರಣಗಳು ಇಂದಿಗೆ ಅಪ್ರಸ್ತುತ ಅಲ್ಲವೇ?
ಕೊನೆಗಾಲದಲ್ಲಿ ಆಸರೆಯಾಗಿರಲು ಮಗನಿರಬೇಕು ಎಂದು ಗಂಡು ಮಗುವಿಗಾಗಿ ಹಂಬಲಿಸುವವರ ಮಕ್ಕಳು ಎಷ್ಟೋ ಸಲ ಅಪ್ಪ ಅಮ್ಮನ ಕೊನೆಯ ಯಾತ್ರೆಗೂ ಬಾರದಿರುವ ಸಂದರ್ಭಗಳಿವೆ. ಹೀಗಿದ್ದೂ ಗಂಡೇ ಬೇಕು ಎನ್ನುವವರನ್ನು ಕಂಡಾಗ ವಿಷಾದವಾಗುತ್ತದೆ

ಚಿತ್ರಾ said...

ದಿಲೀಪ್,
ಕಣೆಯನ ಮಾತುಗಳು ಒಂದು ರೀತಿಯಲ್ಲಿ ಸಮಾಜದ ದೃಷ್ಟಿಕೋನದ ಪ್ರತಿಧ್ವನಿ ಎನಿಸುತ್ತದೆ. ಗಂಡು ಸಂತಾನದ ವ್ಯಾಮೋಹಕ್ಕೆ ವಿದ್ಯೆಯ ಅಥವಾ ಹಳ್ಳಿ- ಪಟ್ಟಣಗಳೆಂಬ ಭೇದವಿಲ್ಲ ಬಿಡಿ .
ಇನ್ನು .. ನಿಮ್ಮ ಸಂದೇಹ .
ಅದು ತಿರಸ್ಕಾರಕ್ಕಿಂತ ಸಂಶಯ ಎಂದು ನನ್ನ ಭಾವನೆ. ಘಟ್ಟದ ಮೇಲಿನವರು ಸ್ವಲ್ಪ ಶ್ರೀಮಂತರು , ಸುಖವಾಗಿ ಬೆಳೆದವರು, ಕಷ್ಟಕ್ಕೆ ಆಷ್ಟಾಗಿ ಒಗ್ಗುವುದಿಲ್ಲ ಮತ್ತು ಸ್ವಲ್ಪ ಅಧುನಿಕ ಮನೋಭಾವದವರು ಎಂಬ ಭಾವನೆ ಘಟ್ಟದ ಕೆಳಗಿನವರಲ್ಲಿದೆ ಎಂದು ಕೇಳಿದ್ದೇನೆ. ಹೀಗಾಗಿ , ಘಟ್ಟದ ಮೇಲಿನ ಹೆಣ್ಣನ್ನು ಮದುವೆ ಮಾಡಿಸಿಕೊಳ್ಳಲು ಹಿಂದೆ ಮುಂದೆ ನೋಡುತ್ತಿದ್ದ ಕಾಲವಿತ್ತಂತೆ . ಬಹುಶಃ ಕಣೆಯನ ತಲೆಯಲ್ಲೂ ಅದೇ ವಿಚಾರ ಬಂದಿರಬಹುದು ಎಂದು ನನ್ನ ಅನಿಸಿಕೆ.

ಚಿತ್ರಾ said...

ಸವಿಗನಸಿನವರೆ ,
ಮೆಚ್ಚಿದ್ದಕ್ಕೆ ಧನ್ಯವಾದಗಳು.

ಚಿತ್ರಾ said...

ತೇಜೂ ,
ಅಂದರೆ , ಈಗ ' ಬಂಜೆ' ಹಣೆಪಟ್ಟಿ ರೆಡಿ ಇದ್ದು ಹೇಳಾತು ! ಸ್ವರ್ಗ ಬೇರೆ ಇಲ್ಲೆ !!! ಹಾ ಹಾ ಹಾ ..
೪-೬ ಗಂಡುಮಕ್ಕ ಇದ್ರೂ ಮನೇಲಿ ಒಂಟಿಯಾಗಿಯೋ , ವೃದ್ಧಾಶ್ರಮದಲ್ಲೋ ' ಸ್ವರ್ಗ' ಕಾಣ್ತಾ ಇರೋರನ್ನ ನೋಡಿ ಎಂತ ಹೇಳದು ಹಂಗಾದ್ರೆ ?

ಚಿತ್ರಾ said...

ಶಾಂತಲಾ,
ನಿಜ. ಕಣೆಯನಂಥವರಿಗೆ ಬುದ್ಧಿ ಹೇಳ ಪ್ರಯತ್ನ ಅದರೂ ಮಾಡ್ಲಕ್ಕು ಆದ್ರೆ , ಬುದ್ಧಿ ಹೆಚ್ಚಾದ ವಿದ್ಯಾವಂತರಿಗೆ ಎಂತ ಹೇಳದು ? ಗಂಡು ಬೇಕು ಅಂತ ೩-೪ ಪ್ರಯತ್ನ ಮಾಡೋ ಜನಕ್ಕಿಂತ ಗಂಡು ಮಗು ಅಲ್ಲ ಅಂತ ಗೊತ್ತಾದ ಕೂಡ್ಲೇ, ಅಬಾರ್ಶನ್ ಮಾಡ್ಸೋ ಜನಕ್ಕೆ ಎಂತ ಮಾಡದು! ಅದು ಇನ್ನೂ ಬೇಜಾರಾಗ್ತು ಅಲ್ದಾ?

ಚಿತ್ರಾ said...

ಆಜಾದ್ ,

ಬರಹ ಮೆಚ್ಚಿದ್ದಕ್ಕೆ ಧನ್ಯವಾದಗಳು .
ನಿಮ್ಮ ದೊಡ್ಡಪ್ಪನ ಕಥೆ ಕೇಳಿ ಬೇಜಾರಾಯಿತು . ಇದು ಇನ್ನೂ ಬಹಳಷ್ಟು ಜನರ ಕಥೆಯೇ ಆಗಿದೆ ಅಲ್ಲವೇ?
ಈಗಿನ ಪರಿಸ್ಥಿತಿಯಲ್ಲಿ ಗಂಡಾಗಲಿ , ಹೆಣ್ಣಾಗಲಿ ಒಂದೇ. ಮಗಳು ಹೇಗೂ ಮದುವೆ ಮಾಡಿಕೊಂಡು ತವರನ್ನು ಬಿಟ್ಟು ಬೇರೆ ಮನೆಗೆ ಹೋಗುವವಳು ಎನ್ನುವುದು ಮೊದಲಾಗಿತ್ತು. ಈಗ ಮಗನದ್ದೂ ಅದೇ ಕಥೆ ! ಅವನು ಕೆಲಸ ಸಿಕ್ಕ ಮೇಲೆ ದೇಶವನ್ನೇ ಬಿಟ್ಟು ಹೋಗುತ್ತಾನೆ ! ಇದು ತಪ್ಪು ಎಂದಲ್ಲ ಅವರವರ ಭವಿಷ್ಯಕ್ಕೆ ಸಂಬಂಧಿಸಿದ್ದು ! ಕೆಲವೊಮ್ಮೆ ಅವಕಾಶ, ಕೆಲವೊಮ್ಮೆ ಅನಿವಾರ್ಯ ! ಒಟ್ಟಿನಲ್ಲಿ ಇದು ಈಗ ಸರ್ವೇ ಸಾಮಾನ್ಯ ! ಹೀಗಾಗಿ ಅವರಿಬ್ಬರಲ್ಲೂ ಅಂಥ ವ್ಯತ್ಯಾಸವೇನೂ ಇಲ್ಲ ಎನ್ನುವುದು ನನ್ನ ಅಭಿಪ್ರಾಯ ! ಮುಖ್ಯವಾಗಿ , ಮಗನಿದ್ದರೆ ಮಾತ್ರ ಮುಪ್ಪಿನ ಆಸರೆ ಎಂಬ ಮನೋಭಾವ ಬದಲಾಗ ಬೇಕಷ್ಟೇ ! ಮುಪ್ಪಿನಲ್ಲಿ ಗಂಡ ಹೆಂಡತಿಯೇ ಒಬ್ಬರಿಗೊಬ್ಬರು ಆಸರೆಯೇ ಹೊರತು ಬೇರೆ ಯಾರೂ ಅಲ್ಲ !

ಚಿತ್ರಾ said...

ಪ್ರಕಾಶಣ್ಣ ,

' ಕುಷ್ಟ" ನನ್ನು ಓದಿಯೇ ನನಗೆ ' ಕಣೆಯ ' ನೆನಪಾಗಿದ್ದು. ಅವರಿಬ್ಬರ ವಿಚಾರಗಳು ಎಷ್ಟು ಹೊಂದುತ್ತಿವೆಯಲ್ಲಾ ಎನಿಸಿತು . ಅವನು ' ಕೊಳ್ಳಿ ಇಡ್ಲಿಕ್ಕಾದ್ರೂ ಗಂಡು ಮಗ ಬೇಕು ಎಂದಿದ್ದ , ಇವನು
ಗಂಡು ಮಗ ಇಲ್ದೆ ಇದ್ರೆ ಜನ್ಮವೇ ದಂಡ ಎನ್ನುತ್ತಾನೆ ಅಷ್ಟೇ .
ನಾನು ಈಗ ' ಕುಷ್ಟನ ಪ್ರೇಂ ಕಹಾನಿ ' ಗಾಗಿ ಕಾಯ್ತಾ ಇದ್ದಿ !!
ಮೆಚ್ಚಿದ್ದಕ್ಕೆ ಥ್ಯಾಂಕ್ಸು !

ಚಿತ್ರಾ said...

ವಿಕಾಸ್
ಥ್ಯಾಂಕ್ಸು.

ಚಿತ್ರಾ said...

ಸುಮಾ,
ಇದು ಬಹಳಷ್ಟು ಜನರ ಕಥೆ . ನೂರಾರು ಸಲಹೆ ಕೊಡಲು ಜನರಿರುತ್ತಾರೆ . ಅದನ್ನು ತೆಗೆದುಕೊಳ್ಳುವುದೂ ಬಿಡುವುದೂ ನಮಗೆ ಬಿಟ್ಟಿದ್ದು ಅಲ್ಲವೇ?
ಹೆಣ್ಣೋ -ಗಂಡೋ ,ಮಗುವಂತೂ ನಮ್ಮದೇ. ಆ ಮಗುವಿಗೆ ನಮ್ಮ ಪ್ರೀತಿಯನ್ನು ನಿರ್ವಂಚನೆಯಿಂದ ಧಾರೆಯೆರೆಯುವುದು ನಮ್ಮ ಕರ್ತವ್ಯ !

ಚಿತ್ರಾ said...

ಕಾಕಾ,
ಧನ್ಯವಾದಗಳು.
ಆದರೆ , ಕಾಕಾ, ವಿದ್ಯಾವಂತರೂ ಸಹ ಈ ರೀತಿ ಯೋಚಿಸುತ್ತಾರೆ ಎನ್ನುವುದು ಮಾತ್ರ ವಿಷಾದದ ಸಂಗತಿ ಅಲ್ಲವೇ?

ಚಿತ್ರಾ said...
This comment has been removed by the author.
ಚಿತ್ರಾ said...

ಪೂರ್ಣಿಮಾ ,
ಮಜಾ ಅಂದ್ರೆ , ನನ್ನ ಕೆಲವು ಸೀನಿಯರ್ ಹುಡುಗಿಯರಂತೂ ೧೦ನೇ ಕ್ಲಾಸ್ ಪರೀಕ್ಷೆ ರಿಸಲ್ಟ್ ಬರೋ ಹೊತ್ತಿಗೆ ಮದುವೆ ಮಾಡ್ಕ್ಯಂಡು ಆಗಿತ್ತು ! ಅಂದರೆ , ೧೬ಕ್ಕೆ ಮದುವೆ. ೧೭ರೊಳಗೆ ಒಂದು ಮಗನ್ನ ಹಡೆದು ಬಿಟ್ಟರೆ ಜೀವನದ ಒಂದು ಮಹತ್ವದ ಜವಾಬ್ದಾರಿ ಮುಗಿಸಿದಾಂಗೆ ಅವಕೆಲ್ಲ ! ಮುಂದಿನ ೨-೩ ಹೆಣ್ಣಾದರೂ ಅಡ್ಡಿಲ್ಲೆ . ಹೆಂಗೂ ಒಂದು ಮಗ ಇದ್ನಲ ಹೇಳಿ ! ನಂಗ ಕಾಲೇಜ್ ಮುಗಿಸ ಹೊತ್ತಿಗೆ ಅವೆಲ್ಲ ಹಳೆ ಅಜ್ಜಿಯರ ತರ ವೈರಾಗ್ಯದ ಮಾತಾಡ ಹಂಗೆ ಆಗಿದ್ದ. ನಂಗೆ ಇಪ್ಪತ್ಮೂರು ಶುರುವಾದರೂ ಮದುವೆ ಆಜಿಲ್ಲೆ ಹೇಳಿ ಅವ್ಕೆಲ್ಲ ಯೋಚನೆ ! ಆಮೇಲೆ ಒಂದು ಮಗಳಿಗೆ ಸಾಕು ಎಂದೆ , ಮಗನ ಯೋಚನೆಯೇ ಮಾಡಿದ್ನಿಲ್ಲೇ ಹೇಳೂ ರಾಶಿ ಜನರ ಬೇಜಾರು. ಮನೆ ಜನಕ್ಕೆ ಇಲ್ಲದ ಬೇಜಾರು ಬೇರೆಯವರಿಗೆ . ಕಳೆದ ೧೩ ವರ್ಷಗಳಿಂದ ನಂಗೆ ಗಂಡುಮಗ ಇಲ್ಲದ ಬಗ್ಗೆ ಕೊರೆದೂ ಕೊರೆದೂ , ಅಂತೂ ಇನ್ನು ಪ್ರಯೋಜನ ಇಲ್ಲೆ ಹೇಳಿ ಮನಸಲ್ಲೇ ಅಷ್ಟು ಬೈದು ಸುಮ್ಮನಾದ ಈಗ ! ಅವರನ್ನೆಲ್ಲ ಬದಲಾಯಿಸದು ಕಷ್ಟನೆಯಾ !

ಚಿತ್ರಾ said...

ವೇಣು ,
ಮೆಚ್ಚಿದ್ದಕ್ಕೆ ಧನ್ಯವಾದಗಳು. ಮತ್ತೊಂದು ಸಲ ಹೇಳವು ಅಂದ್ರೆ , ವಿದ್ಯಾವಂತರಲ್ಲೂ ಇದೆ ಭಾವನೆ ಇದ್ದಲ? ಅದು ಬೇಜಾರು ಅಲ್ದಾ?
ಇನ್ನು, ಓಡಿ ಹೋಗಲೆ ವಿದ್ಯಾವಂತರಾಗಿರವು ಹೇಳಿಲ್ಲೆ ಬಿಡು ! ಆದರೆ , ಮಗ ತಮ್ಮವರಲ್ಲದ ಹುಡುಗಿನ ಮದ್ವೆ ಮಾಡಿ ಕೊಂಡು ಬಂದ್ರೆ ತಿರಸ್ಕರಿಸದೆ ಒಪ್ಪಿಕೊಳ್ಳ ಜನ , ಮಗಳು ಮಾತ್ರ ಹಾಂಗೆ ಮಾಡಲಿಲ್ಲೇ ಹೇಳದು ಯಾಕೆ ? ಇಬ್ಬರಿಗೂ ಒಂದೇ ನ್ಯಾಯ ಬೇಕು ಅಲ್ದಾ? ಈ ಬಗ್ಗೆ ಒಂದು ದೊಡ್ಡ ಲೇಖನಾನೆ ಬರಿಲಕ್ಕು !

ಇಲ್ಲಿ , ನನ್ನ ಲೇಖನದ ಪ್ರಶ್ನೆ ಹೆಣ್ಣುಮಕ್ಕಳು ಓಡಿಹೋಗದು ಸರಿಯೋ -ತಪ್ಪೋ ಎಂದಲ್ಲ ಆದರೆ ಮಕ್ಕಳು ಗಂಡಾಗಲಿ , ಹೆಣ್ಣಾಗಲಿ ಎರಡೂ ಒಂದೇ ಎಂಬ ಭಾವನೆ ಯಾಕಿಲ್ಲ ಎನ್ನುವುದು.
ಹೆಣ್ಣು ಮಕ್ಕಳು ಓಡಿ ಹೋಗದಕ್ಕಿಂತ ಗಂಡುಮಕ್ಕಳು ಅಪ್ಪ ಅಮ್ಮ ನಿಂದ ದೂರಹೋದ ಘಟನೆಗಳೇ ಹೆಚ್ಚು ಅಲ್ದಾ?
ತನ್ನಿಷ್ಟದಂತೆ ಮದುವೆ ಮಾಡಿಕೊಂಡ ಮಗಳೂ ಅಪ್ಪ ಅಮ್ಮನ ಬಗ್ಗೆ ಕಾಳಜಿ ವಹಿಸುತ್ತಾಳೆ. ಅಗತ್ಯ ಬಿದ್ದರೆ ತನ್ನ ಮನೆಯಲ್ಲೇ ಇಟ್ಟುಕೊಂಡು ಸೇವೆ ಮಾಡುತ್ತಾಳೆ. ಆದರೆ , ಅದೆಷ್ಟೋ ಕುಟುಂಬಗಳಲ್ಲಿ , ಮನೆ ಬಿಟ್ಟು ದೂರದಲ್ಲಿ ಎಲ್ಲಿಯೋ ನೆಲೆಸಿದ ಮಗ ಕಡೆಗಾಲದಲ್ಲೂ ನೋಡಲು ಬರಲಾರ . ಹೀಗಿದ್ದರೂ ಮಗನೇ ಬೇಕೆಂಬ ಹಠವೇಕೆ? ಇದು ನನ್ನ ಪ್ರಶ್ನೆ.
ಯಾರು ಯಾವುದೇ ಉದಾಹರಣೆ ಕೊಟ್ಟರೂ ,ಒಬ್ಬ ಹೆಣ್ಣು ಮಗುವಿನ ತಾಯಿ ಎಂಬ ಅತೀವ ಹೆಮ್ಮೆ ನಂಗಿದ್ದು !

ಚಿತ್ರಾ said...

ಗುರು ,
ನೀ ಹೇಳಿದ್ದು ಖರೆ. ಕಲಿತವರಲ್ಲೂ ಅದೇ ವ್ಯಾಮೋಹ ! ಇದು ಯಾವ ಕಾಲಕ್ಕೆ ಬದಲಾಗ್ತು ಹೇಳಿ ಗೊತ್ತಿಲ್ಲೆ !
ನೀನು ಕಣೆಯನ ಹತ್ರೆ ಎಷ್ಟು ಕಾಣಿಕೆ ಹಾಕ್ಸಿದ್ರೂ ಅಷ್ಟೆಯಾ ಬಿಡು . ಸುಮ್ಮನೆ ನಿನ್ನ ದುಡ್ಡು ಹಾಳು ! ಹಾ ಹಾ ಹಾ .
ಮೆಚ್ಚಿದ್ದಕ್ಕೆ ಥ್ಯಾಂಕ್ಸ್ !

ವನಿತಾ / Vanitha said...

ಚಿತ್ರ..ಚೆನ್ನಾಗಿ ಬರ್ದಿದ್ದೀರಿ..ಕಣೆಯ ಬಿಡಿ ಮುಗ್ಧ !!
ನಾವು 3 ಹೆಣ್ಣುಮಕ್ಕಳು.ಜೊತೆಗೆ ನಮಿಗೆ ಮೂವರಿಗೂ ಕೂಡ ಈಗ ಒಂದೊಂದು ಹೆಣ್ಣುಮಕ್ಕಳು.ಹಾಗಾಗಿ ನನ್ನ ಅಮ್ಮ-ಅಪ್ಪ ಕೇಳಿದ ಮಾತುಗಳನ್ನೇ ಈಗ ನಾವು ಮೂವರು ಕೇಳ್ತಾ ಇದ್ದೇವೆ.!!ಜೊತೆಗೆ ಗೊತ್ತಾ..ಎಷ್ಟೊಂದು ಮನೆಯ ವಿದ್ಯಾವಂತ ಗಂಡು ಮಕ್ಕಳು ತಮ್ಮ ತಂದೆ-ತಾಯಿಯರ ಮಾತಿಗೆ ಕಟ್ಟುಬಿದ್ದು, ಹೆಣ್ಣು ಮಕ್ಕಳೇ ಇರುವ ಮನೆಯಿಂದ ಮಾಡುವೆ ಮಾಡಿಕೊಳ್ಳಲು ಕೂಡ ಒಪ್ಪಿಕೊಂಡಿಲ್ಲದ ಪ್ರಸಂಗವನ್ನು ಕಣ್ಣಾರೆ ನೋಡಿದ್ದೇನೆ..!! again very well written..

Me, Myself & I said...

ಮೇಡಂ,

ಇದು ನಿಮ್ಮ ಬ್ಲಾಗಿಗೆ ನನ್ನ ಮೊದಲ ಭೇಟಿ.
ನಿಮ್ಮ ಬರಹದ ತಾತ್ಪರ್ಯ ಇಲ್ಲಿ ಕೆಲವರಿಗೆ ಹೆಣ್ಣು ಸಂತಾನದ ಬಗ್ಗೆ ಅನ್ಸಿದೆ. ಇದರ ತಲೆ ಬರಹವೂ ಹಾಗೆಯೇ ಇದೆ. ಆದ್ರೆ, ನನಗೆ, ಮದುವೇ ನಂತರ ಮನೆಗೆ ಬರೋ ಹೊಸ ಕುಟುಂಬ ಸದಸ್ಯೆಯ ಮನೋ ವಿಚಾರಗಳು ಹೇಗುರತ್ತವೆ ಅಂತ ಅರ್ಥ ಮಾಡ್ಕಲ್ಲಿಕ್ಕೆ ಸಹಾಯ ಆತು.

ನಿಮ್ಮ ಭಾಷೆಯ ಶೈಲಿ ನಮ್ಮ ಭಾಷೆಯ ಶೈಲಿ ಬೇರೆ ಇದೆ ಆದರು ತುಂಬಾ ಸರಾಗವಾಗಿ ಓದಿ ಕೊಂಡು ಹೋದೆ. ಚೆನ್ನಾಗಿ ಬರ್ದಿದ್ದೀರ.

ಈ ರೀತಿ ಹಳ್ಳಿ ವಾತಾವರಣದ ಇನ್ನೊ ಕೆಲವು ಸನ್ನಿವೇಶಗಳನ್ನ ಬರಿಲಿಕ್ಕೆ ನನಗೆ ನಿಮ್ಮ ಈ ಬರಹ ಇನ್ನು ಪ್ರೋತ್ಸಾಹಿಸಿದೆ. ಧನ್ಯವಾದಗಳು.

ಗೌತಮ್ ಹೆಗಡೆ said...

:)

Unknown said...

ಈಥರಹದ್ದು ಇನ್ನು ಆಗುತ್ತಿರುವುದು ವಿಷಾದದ ಸಂಗತಿ..

http://sharatsrs.blogspot.com/

ಸುಧೇಶ್ ಶೆಟ್ಟಿ said...

ಚಿತ್ರಾ ಅವರೇ...

ನನ್ನಕ್ಕ ತನಗೆ ಎರಡೂ ಸಲನೂ ಹೆಣ್ಣು ಮಗುವಾಗಿದ್ದಕ್ಕೆ ತುಸು ಬೇಸರಿಸಿಕೊ೦ಡಿದ್ದು ನೆನಪಾಯ್ತು ಚಿತ್ರಾ ಅವರೇ.... ಕೊನೆಗೆ ಅವರಿಬ್ಬರಿಗೂ ಒಳ್ಳೆಯ ವಿದ್ಯಾಭ್ಯಾಸ ಮಾಡಿಸೋಣ...ಆಗ ನೀನೆ ನೋಡುತ್ತಿರು ಅವರು ಎ೦ತಾ ಎತ್ತರಕ್ಕೆ ಬೆಳೆಯುತ್ತಾರೆ ಅ೦ತ ಸಮಧಾನಿಸಿದ ಮೇಲೇನೆ ಅವಳ ಬೇಸರ ಕಡಿಮೆ ಆಗಿದ್ದು....

ನಿಮ್ಮ ಲೇಖನಗಳು ತು೦ಬಾ ಸಮಾಜಮುಖಿಯಾಗಿರುತ್ತದೆ.... ಅದು ನನಗೆ ತು೦ಬಾ ಇಷ್ಟ... :)

Chaithrika said...

Wow! good one. I remembered a situation...
Nammoorinalli kelasadavanobba magalannu shaalege kalisade avaligintha 3 varsha sannavanaada maganannu maathra kalisutthidda!

Chaithrika said...

Good one. Odi khushi aayithu. Kaneya sikkidare nanna parents na "jalma" waste andaaneno!