December 13, 2009

ಭಾಷೆಯ ' ಮಿಸಳ್ '

ಪರ ರಾಜ್ಯದಲ್ಲಿರುವ ಕನ್ನಡಿಗರ ಮಕ್ಕಳು ಕನ್ನಡ ಮಾತನಾಡುವ ಚೆಂದ ಕೇಳಿದವರೇ ಧನ್ಯ ! ಈ ಮಕ್ಕಳಿಗೆ ಮನೆಯಲ್ಲಿ ಮಾತೃಭಾಷೆಯಲ್ಲೇ ಮಾತನಾಡಿದರೂ, ದೊಡ್ಡವರಾದಂತೆ , ಹೊರಗಡೆ ಆಟ ಆಡುವಾಗ , ಶಾಲೆಯಲ್ಲಿ ಸ್ನೇಹಿತರೊಡನೆ ಪ್ರಾದೇಶಿಕ ಭಾಷೆಅಲ್ಲೋ , ಹಿಂದಿ ಅಥವಾ ಇಂಗ್ಲಿಷ್ ನಲ್ಲೋ ಮಾತನಾಡುವುದು ಅಭ್ಯಾಸವಾಗಿಬಿಟ್ಟಿರುತ್ತದೆ. ಕ್ರಮೇಣ , ಮನೆಯಲ್ಲಿ ಮಾತನಾಡುವಾಗಲೂ ನಡುನಡುವೆ ಇತರ ಭಾಷಾ ಶಬ್ದಗಳು ಸಹಜವಾಗಿ ನುಸುಳಿ ತಮಾಷೆಗೆ ಕಾರಣವಾಗಿಬಿಡುತ್ತವೆ ! ಇದರ ಅನುಭವ ನನಗೆ ಬಹಳವೇ ಚೆನ್ನಾಗಿ ಇದೆ ! ಕಳೆದ ೧೫ ವರ್ಷಗಳಿಂದ ಮಹಾರಾಷ್ಟ್ರದಲ್ಲಿ ನೆಲೆಸಿರುವುದರಿಂದ , ಇಲ್ಲಿಯೇ ಹುಟ್ಟಿ ಬೆಳೆದಿರುವ ನನ್ನ ಮಗಳ ಕನ್ನಡ ಕೆಲವೊಮ್ಮೆ ನಗೆ ತರುತ್ತದೆ . ಮನೆಯಲ್ಲಿ ಕನ್ನಡವೇ ಆದರೂ ಕೆಲವೊಮ್ಮೆ ಅವಳ ಮಾತಿನ ನಡುವೆ ಮರಾಠಿ ಶಬ್ದಗಳು ಸಹಜವಾಗಿ ಸೇರಿಕೊಳ್ಳುತ್ತವೆ .ಅಂಥಾ ಕೆಲ ತಮಾಷೆಯ ಸಂದರ್ಭಗಳು ಇಲ್ಲಿವೆ .

ಒಮ್ಮೆ , ಸಿರಿ ೭-೮ ವರ್ಷದವಳಿದ್ದಾಗ , ಹೊರಗಡೆ ಆಟ ಆಡುತ್ತಿದ್ದವಳು ' ಅಮ್ಮಾ ' ಎಂದು ಕೂಗುತ್ತಾ ಓಡಿ ಬಂದಳು . ನಾನು ' ಏನಾಯ್ತೆ ? ಎಂದು ಕೇಳಿದಾಗ ' ಅಮ್ಮ, ನನ್ನ ಸೈಕಲ್ ಗೇಟ್ ನಲ್ಲಿ ಅಡಕೊಂಡು ಬಿಟ್ಟಿದೆ ಅಮ್ಮಾ ಈ ಕಡೆ ತಂದು ಕೊಡು " ಎಂದು ಕುಣಿಯತೊಡಗಿದಳು . ನನಗೋ ಇವಳು ಏನು ಹೇಳುತ್ತಿದ್ದಾಳೆ ಎಂದೇ ತಿಳಿಯಲಿಲ್ಲ . ಇವಳ ಸೈಕಲ್ ಗೇಟ್ ನಲ್ಲಿ ' ಅಡಕೊಳ್ಳೋದು " ಅಂದ್ರೆ ಏನು , ಅದೇನು ಕಣ್ಣ ಮುಚ್ಚಾಲೆ ಆಡುತ್ತಾ ಅಂತೆಲ್ಲ ಯೋಚಿಸುತ್ತಾ ತಲೆಬಿಸಿ ಮಾಡಿಕೊಂಡೆ . ಸಮಾಧಾನವಾಗಿ ಸೈಕಲ್ ಗೆ ಏನಾಯ್ತು? ಎಲ್ಲಿಂದ ತಂದ್ಕೊಡ್ಬೇಕು ಸೈಕಲ್ ನ ಎಂದೆಲ್ಲ ಕೇಳತೊಡಗಿದೆ. ಅವಳೋ ' ನನ್ನ ಫ್ರೆಂಡ್ಸ್ ಎಲ್ಲ ಮುಂದೆ ಹೋಗಿ ಬಿಟ್ರು , ನನ್ನ ಸೈಕಲ್ ಬೇಗ ಬೇಕು' ಎಂದು ನಿಂತಲ್ಲೇ ತಕಧಿಮಿ ಶುರು ಮಾಡಿದಳು . ಸರಿ ನೋಡಿಯೇ ಬಿಡೋಣ ಎಂದುಕೊಂಡು ಎಲ್ಲಿದೆ ಸೈಕಲ್ ಅಂತ ಕೇಳಿದೆ ಗೇಟ್ ಹತ್ರ ಅಮ್ಮ , ಬಾ ತೋರಿಸ್ತೀನಿ ಎಂದು ಕೈ ಹಿಡಿದು ಎಳೆದು ಕೊಂಡೆ ಹೋದಳು. ನೋಡು ಅಲ್ಲೇ ಅಡಕೊಂಡಿದೆ ತೆಕ್ಕೊಡು ಎಂದು ತೋರಿಸಿದಳು . ನಿಜ ,ಅಲ್ಲೇ ' ಅಡಕೊಂಡಿತ್ತು " ಅವಳ ಸೈಕಲ್ !! ಅದು ಹೇಗೋ ಸೈಕಲ್ ನ ಗಾಲಿ ಗೇಟ್ ನ ಎರಡು ಸರಳುಗಳ ನಡುವೆ ಸಿಕ್ಕಿಹಾಕಿ ಕೊಂಡಿತ್ತು . ಅದನ್ನು ನೋಡಿದ ನನಗೆ ನಗು ತಡೆಯಲೇ ಆಗಲಿಲ್ಲ. ಮರಾಠಿಯಲ್ಲಿ " ಅಡಕಣೆ ' ಎಂದರೆ ' ಸಿಕ್ಕಿ ಹಾಕಿಕೊಳ್ಳುವುದು ಎಂದು ಅರ್ಥ . ನಾನು ಸೈಕಲ್ ಅಡಗಿಕೊಳ್ಳುವುದು ಹೇಗೆ ಎಂದು ಕನ್ನಡದಲ್ಲಿ ಯೋಚಿಸುತ್ತಿದ್ದೆ !
----------------------------------------------------------------------------------
ತೀರಾ ಇತ್ತೀಚೆಗೊಮ್ಮೆ , ಅಡಿಗೆ ಮನೆಯಲ್ಲಿ ಏನೋ ಮಾಡುತ್ತಿದ್ದೆ . ಗೆಳತಿಯೊಬ್ಬಳ ಫೋನ್ ಬಂತು. ಸಿರಿ ಫೋನ್ ತೆಗೆದುಕೊಂಡಳು . ಅಮ್ಮ ಏನು ಮಾಡುತ್ತಿದ್ದಾಳೆ ಎಂದು ಗೆಳತಿ ಕೇಳಿದ ಪ್ರಶ್ನೆಗೆ ಇವಳು ಉತ್ತರಿಸಿದ್ದನ್ನು ಕೇಳಿ ಗೆಳತಿ ಬಿದ್ದೂ ಬಿದ್ದೂ ನಗುತ್ತಿದ್ದಳು .ನಾನು ಫೋನ್ ತೆಗೆದುಕೊಂಡ ತಕ್ಷಣ ಆಕೆ " ಯಾಕೆ ಚೀರಾಡ್ತಿದಿಯಾ? ಸುಮ್ನೆ ಬಿಪಿ ಶುರುವಾಗತ್ತೆ ನೋಡು!" ಎನ್ನಬೇಕೆ ? ನಾನು ಕಕ್ಕಾಬಿಕ್ಕಿಯಾಗಿ ನಾನೆಲ್ಲೇ ಚೀರ್ತಾ ಇರೋದು , ಯಾರು ಹೇಳಿದ್ದು ನಿಂಗೆ ? ಎಂದೆ . 'ಅಯ್ಯೋ ನಿನ್ನ ಮಗಳೇ ಹೇಳಿದ್ಳಲ್ಲೇ ' ಎಂದು ನಗ ತೊಡಗಿದಳು. ಆಗಿದ್ದು ಇಷ್ಟೇ, ಸಿರಿ, ಅಮ್ಮ ಅಡಿಗೆ ಮನೇಲಿ ನೀರುಳ್ಳಿ ' ಚೀರ್ತಿದಾಳೆ ' ಎಂದಳಂತೆ. ಅವಳ ಮಕ್ಕಳೂ ಇಲ್ಲಿಯೇ ಹುಟ್ಟಿ ಬೆಳೆದದ್ದರಿಂದ ನನ್ನ ಮಗಳ ಅರೆ ಮರಾಠಿ ಅವಳಿಗೆ ಅರ್ಥವಾಗಿತ್ತು . ನಾನು ಈ ಕನ್ನಡಕ್ಕೆ ಹಣೆ ಚಚ್ಚಿಕೊಂಡೆ . ಮರಾಠಿಯಲ್ಲಿ ' ಚಿರಣೆ ' ಎಂದರೆ ,( ತರಕಾರಿ ) ಹೆಚ್ಚುವುದು
------------------------------------------------------------------------------
ಪುಣೆಯಲ್ಲಿ ೩೫ ವರ್ಷಗಳನ್ನು ಕಳೆದ ನನ್ನ ಮನೆಯವರ ಚಿಕ್ಕಮ್ಮ ತಮ್ಮ ಅನುಭವವನ್ನು ಒಮ್ಮೆ ಹಂಚಿಕೊಂಡರು .
ಅವರ ಮಗಳು ಚಿಕ್ಕವಳಿದ್ದಾಗ ಶಾಲೆಗೇ ಹೊರಡುವ ಮುನ್ನ ಬಾತ್ ರೂಮಿಗೆ ಹೋದಳಂತೆ .ಅಲ್ಲಿಂದ ' ಆಯೀ , ನನ್ನ ಜಡೆ ಸುಟ್ಹೋಯ್ತು ಎಂದು ಕೂಗಿಕೊಂಡಳಂತೆ. ಗಾಬರಿಯಾಗಿ ಓಡಿ ಬಂದ ಇವರಿಗೆ ಬಾತ್ ರೂಮಿನಲ್ಲಿ ಜಡೆ ಸುಟ್ಟು ಹೋಗುವುದು ಹೇಗೆ ಎನ್ನುವುದೂ ಹೊಳೆಯಲಿಲ್ಲವಂತೆ . ಅಷ್ಟರಲ್ಲಿ ಮಗಳು ಬಿಚ್ಚಿ ಹೋದ ಜಡೆ ಯನ್ನು ಕೈಯಲ್ಲಿ ಹಿಡಿದುಕೊಂಡು ಹೊರಬಂದಳಂತೆ . ಆಗಲೇ ಇವರಿಗೆ ಹೊಳೆದದ್ದು . ಅದು ಮರಾಠಿಯ 'ಸುಟ್ಟಿದ್ದು ' ಎಂದು .
ಮರಾಠಿಯಲ್ಲಿ ' ಸುಟ್ಲ ' ಎಂದರೆ ಬಿಚ್ಚಿಕೊಳ್ಳುವುದು, ಬಿಡಿಸಿಹೋಗುವುದು ಎಂದರ್ಥ !
--------------------------------------------------------------------------
ನಾನು ಇಲ್ಲಿಗೆ ಬಂದ ಹೊಸತಷ್ಟೇ . ನನ್ನ ಸಹೋದ್ಯೋಗಿಯೊಬ್ಬಳು ತನ್ನ ಹೊಸಾ ಒಡವೆಯೊಂದರ ಬಗ್ಗೆ ಅದೆಷ್ಟು ದುಬಾರಿಯದು ಎಂದು ಹೇಳಿಕೊಳ್ಳುತ್ತಿದ್ದಳು. ನಾನು ಕೂಲಾಗಿ 'ಬಂಗಾರದ್ದಲ್ವ ? ಎಂದೆ ಅರೆ ಬರೆ ಮರಾಠಿಯಲ್ಲಿ ! ಒಮ್ಮೆ ನನ್ನತ್ತ ತೀಕ್ಷ್ಣವಾಗಿ ನೋಡಿದವಳು ಸರಕ್ಕನೆ ಅಲ್ಲಿಂದ ಎದ್ದು ಹೋದಳು . ಇವಳು ಯಾಕೆ ಹೀಗೆ ಎದ್ದು ಹೋದಳು ಎಂದು ನಾನು ಕೇಳಿದಾಗ ಇನ್ನೊಬ್ಬ ಸಹೋದ್ಯೋಗಿ ( ಕನ್ನಡದವರು) ಮರಾಠಿಯಲ್ಲಿ ' ಭಂಗಾರ' ಎಂದರೆ ಕಸ, ಕೆಲ್ಸಕ್ಕೆ ಬಾರದ್ದು , ಕಚರಾ ಎಂದರ್ಥ ಎಂದು ತಿಳಿಸಿದರು ! ನಂಗೆ ನಗುವುದೋ - ಅಳುವುದೋ ತಿಳಿಯದೆ, ಮೊದಲು ಆಕೆಯಲ್ಲಿ ಹೋಗಿ ವಿಷಯ ವಿವರಿಸಿದಾಗ ಆಕೆಯೂ ನಕ್ಕು ಬಿಟ್ಟಳು. ಆಮೇಲಿಂದ ' ಬಂಗಾರ' ಎಂಬ ಶಬ್ದವನ್ನು ಬಹಳವೇ ಯೋಚಿಸಿ ಬಳಕೆ ಮಾಡುತ್ತೇನೆ .

ಇವು ಕೆಲವೇ ಉದಾಹರಣೆಗಳು. ಇಂಥ ಮತ್ತೆಷ್ಟೋ ಸಂದರ್ಭಗಳು ನಮ್ಮ ಮನೆಗಳಲ್ಲಿ ನಡೆಯುತ್ತಿರುತ್ತವೆ ! ಇಷ್ಟು ವರ್ಷಗಳು ಇಲ್ಲಿ ಜೀವನ ಮಾಡಿದ ಮೇಲೆ , ಮರಾಠಿಯ ಅದೆಷ್ಟೋ ಶಬ್ದಗಳನ್ನು ನಾವು ತಿಳಿದೋ ತಿಳಿಯದೆಯೋ ಕನ್ನಡೀಕರಿಸಿದ್ದೇವೆ. ಹೀಗೆ ಕನ್ನಡೀಕರಿಸಿದ ಶಬ್ದಗಳನ್ನು ಊರಲ್ಲಿ ನಾವು ಬಳಸಿದಾಗ ಅವರುಗಳು ಕಕ್ಕಾಬಿಕ್ಕಿಯಾಗುವುದಿದೆ, ಬಿದ್ದೂ ಬಿದ್ದೂ ನಗುವುದೂ ಇದೆ . ಆಗ ನಾವೂ ಸಹ ನಕ್ಕು ಬಿಡುತ್ತೇವೆ. ಹಾ , ಮರಾಠಿಯಲ್ಲಿ ' ಮಿಸಳ್ ' ಎಂದರೆ ವಿವಿಧ ಪದಾರ್ಥಗಳನ್ನು ಕಲೆಸಿ ಮಾಡಿದ ಒಂದು ತಿನಿಸು ! !

32 comments:

ಪೂರ್ಣಿಮಾ ಭಟ್ಟ, ಸಣ್ಣಕೇರಿ said...

ಹ ಹ ಹ್ಹಾ.. ಚಿತ್ರಕ್ಕಾ, ನೀರುಳ್ಳಿ ಚೀರದ್ ಮಸ್ತ್ ಇತ್ತು! :-)

ಸೀತಾರಾಮ. ಕೆ. / SITARAM.K said...

ಭಾಷಾ ಅಭಾಸಗಳು ಚೆನ್ನಾಗಿವೆ. "ಬ೦ಗಾರ" ಶಬ್ದ ಮರಾಠಿಜನದೊಡನೆ ಉಪಯೋಗಿಸುವಾಗಿ ಹುಶಾರಿ ಇರಬೇಕು ಎನ್ನೋ ವಿಶಯ ಗೊತ್ತಾಯ್ತು.
ಕನ್ನಡ ಒ೦ದೇ ಭಾಷೆ ಒ೦ದು ಪ್ರದೇಶದಿ೦ದ ಇನ್ನೊ೦ದು ಪ್ರದೇಶದಲ್ಲಿ ಅಭಾಸ ಅಗೋ ಉದಾಹರಣೆಗಳು ತು೦ಬಾ. "ದಾರಿಯಲ್ಲಿ ನಿಮ್ಮ ಹೆ೦ಡತಿ ಸಿಕ್ಕಿದ್ದಳು" ಅನ್ನೊಕ್ಕೆ ಗುಲ್ಬಾರ್ಗಾದ ಜನ ಹೇಳೋ "ನಿಮ್ಮ ಹೆ೦ಡ್ರು ದಾರೆಲ್ಲಿ ಗ೦ಟು ಬಿದ್ದಿದ್ರ್‍ಇ", ಮೈಸೂರಿನವರ "ತಿ೦ಡಿ ತಿರ್ಸಿಕೋಳ್ಳಿ" ಬಿಜಾಪುರನವರಿಗೆ ನವೆ ತುರಿಸಿ ಅನ್ನೋ ಅರ್ಥ ಕೊಡುತ್ತೆ.

ಸುಮ said...

:) , ಚೆನ್ನಾಗಿದೆ ಚಿತ್ರ ಅವರೆ ಭಾಷೆಯ ಮಿಸಳ್ . ನನಗೆ ನನ್ನ ಪಿಯುಸಿ ದಿನಗಳ ನೆನಪಾಯಿತು . ನಮ್ಮ ಬಾಟನಿ ಲೆಚ್ಚರರ್ , ಹೂವಿನ ಭಾಗಗಳ ಬಗ್ಗೆ ಪಾಠ ಮಾಡುತ್ತಾ " ಈ ಸ್ಟಿಗ್ಮಾ ಮೇಲೆ ಇನ್ಸೆಕ್ಟ್ ಸಿಟ್ ಮಾಡುತ್ತದೆ " ಎಂದರು. ಅದ್ಯಾಕೆ ಆ ಇನ್ಸೆಕ್ಟ್ ಸಿಟ್ಟು ಮಾಡುತ್ತದೆಂದು ನಮಗೆ ಹೊಳೆಯಲಿಲ್ಲ . ಬಹಳ ಹೊತ್ತಿನ ನಂತರ ಅರ್ಥವಾಯಿತು ,ಅವರು ಹೇಳಿದ್ದು " ಸ್ಟಿಗ್ಮಾ ಎಂಬ ಭಾಗದ ಮೇಲೆ ಕೀಟಗಳು ಕುಳಿತುಕೊಳ್ಳುತ್ತವೆ" ಎಂದು.

ಆನಂದ said...

ಚೆನ್ನಾಗಿದೆ... :)

ವಿ.ರಾ.ಹೆ. said...

ಹ್ಹ ಹ್ಹ...ಚೆನ್ನಾಗಿದೆ.

ನನ್ನ ಅತ್ತೆ ಮುಂಬೈನಲ್ಲಿದ್ದಾರೆ. ಅವರ ಮಕ್ಕಳೂ ಹೀಗೆ. ಇಲ್ಲಿಗೆ ಬಂದಾಗ ಮರಾಠಿ ಬೆರೆಸಿ ಮಾತನಾಡುತ್ತಿದ್ದರು. ಅವರು ಹೇಳಿದ್ದು ನಮಗೆ ಅರ್ಥಾಗದೆ ಕಣ್ ಕಣ್ ಬಿಡುತ್ತಿದ್ದಾಗ ಅತ್ತೆ ಅದನ್ನು ವಿವರಿಸುತ್ತಿದ್ದರು.

Sushrutha Dodderi said...

ಹೆಹೆ.. ಮಜಾ ಇದ್ದು. :)

ಇಂಥವು ಮಯೂರದ ಅಂಗೈಯಲ್ಲಿ ಅರಮನೆ, ಬುತ್ತಿ ಚಿಗುರು ಅಂಕಣಗಳಲ್ಲಿ ತುಂಬಾ ಬರ್ತಿರ್ತು.. ಕಳ್ಸು ನೀನೂ..

ಸಾಗರದಾಚೆಯ ಇಂಚರ said...

ಚಿತ್ರಾ,
ನಮಗೆ ಸ್ವೀಡನ್ನಿನಲ್ಲಿ ಮರಾಟಿ ಮಾತನಾಡುವವರೇ ತುಂಬಾ ಸ್ನೇಹಿತರಿದ್ದಾರೆ
ಯಾವಾಗ ಅವರ ಮನೆಗೆ ಹೋದರು ''ಮಿಸಳ್'' ಮಾಡುತ್ತಾರೆ
ಮಕ್ಕಳಿಗೆ ''ಪಡಶೀಲ' ಎನ್ನುತ್ತಿರುತ್ತಾರೆ
ನಿಮ್ಮ ಮಗಳ ಮಾತುಗಳು ತುಂಬಾ ನಗು ತಂತು

PARAANJAPE K.N. said...

ನಿಮ್ಮ ಮಿಸಳ್ ಭಾಜಿ ತು೦ಬಾ ಚೆನ್ನಾಗಿತ್ತು

sunaath said...

ಎರಡು ಭಾಷೆಗಳ fusion ಆದಾಗ, result is confusion!

Ittigecement said...

ಚಿತ್ರಾ...

ಮಸ್ತ್ ಆಗಿದೆ ನಿಮ್ಮ ಮಿಸಳ್ ಭಾಜಿ..

ತಮಿಳ ನೊಬ್ಬ ಸರ್ದಾರ್ಜಿ ಹತ್ತಿರ
"ತಮಿಳ್ ತೆರಿ ಮಾ? "
(ತಮಿಳು ಗೊತ್ತಿದೆಯಾ )

ಅಂತ ಕೇಳಿದ್ನಂತೆ..

ಸರ್ದಾರ್ಜಿ ಗೆ ಕೋಪ ಬಂತು..
" ಪಂಜಾಬಿ ತೆರಾ ಬಾಪ್"
ಅಂದನಂತೆ...!!

ಭಾಷೆಗಳ ಅವಂತರ
ನಿಮ್ಮ ಅನುಭವ ಸೊಗಸಾಗಿದೆ...

ಇನ್ನೊಂದು ನೆನಪಾಗುತ್ತಿದೆ

ಒಬ್ಬ ಶಾಸ್ತ್ರಿಗಳು ಪುಣೆಗೆ ಹೋಗಿದ್ದರಂತೆ
ಅಲ್ಲಿ ಯಾರಬಳಿಯೋ ಅಡ್ರೆಸ್ ಕೇಳಿದರಂತೆ

ಆತ "ಕಾಯ್ರೇ..?" ಅಂತ ಕೇಳಿದ್ನಂತೆ..
ಶಾಸ್ತ್ರಿಗಳು ತಮ್ಮ ಬಳಿ ಇದ್ದ ತೆಂಗಿನಕಾಯಿ ಕೊಟ್ಟರಂತೆ..!

ನಮ್ಮನ್ನೆಲ್ಲ ನಗಿಸಿದ್ದಕ್ಕೆ ಧನ್ಯವಾದಗಳು...

shivu.k said...

ಚಿತ್ರಾ ಮೇಡಮ್,

ನಿಮ್ಮೂರಲ್ಲಿ ನಿಮ್ಮ ಮಗಳು ಸಿರಿಯ ಭಾಷೆಯ ಅಭಾಸ ಚೆನ್ನಾಗಿದೆ....ಓದಿ ನಗು ಬಂತು. ಈ ಮಿಸಳ್ ಅನ್ನುವ ಪದವನ್ನು ಇತ್ತೀಚೆಗೆ ಕನ್ನಡದಲ್ಲಿ ತುಂಬಾ ಉಪಯೋಗಿಸುತ್ತಾರೆ...

ಸುಧೇಶ್ ಶೆಟ್ಟಿ said...

ಭಾಷೆಯ ಮಿಸಳ್ ಬಾಜಿ ತು೦ಬಾ ರುಚಿ ಆಗಿತ್ತು ಚಿತ್ರಾ ಅವರೇ....:)

ನನಗೆ ನಿಮ್ಮ ಮರಾಠಿ-ಕನ್ನಡ ಭಾಷೆಯ ಬಗೆಗಿನ ಈ ಬರಹಗಳು ತು೦ಬಾ ಇಷ್ಟ....

ESSKAY said...

"ಮಿಸಳ್ ಖೂಪಚ್ ಛಾನ್ ಬನಲೀ ಆಹೆ."
ಮಿಸಳ್ ತುಂಬಾ ಚೆನ್ನಾಗಿದೆ. ಹೀಗೆಯೆ ನಮ್ಮೆಲ್ಲರನ್ನೂ ನಗಿಸುತ್ತಿರಿ. ಧನ್ಯವಾದಗಳು
- ಸುನೀಲ್

ಮನಮುಕ್ತಾ said...

ಚೆನ್ನಾಗಿದೆ...ಮಕನ್ನಡ...

ನನ್ನ ಮದುವೆಯಾದ ಹೊಸತರಲ್ಲಿ ನನ್ನ ಭಾವನವರು ಪೂಜೆಗೆ ಅಡಿಕೆ ತ೦ದು ಕೊಡು ಬೆಣ್ಚಿಕ೦ಡಿಯಲ್ಲಿದೆ ಅ೦ದರು.. ಪೂಜೆಗೆ ಕುಳಿತದ್ದರಿ೦ದ ಪ್ರಶ್ನೆ ಮಾಡುವುದು ಹೇಗೆ ಎ೦ದು ಎಲ್ಲ ಕಡೆ ಹುಡುಕಿ ಸುಸ್ತಾದೆ..ಅಷ್ಟರಲ್ಲಿ ನನ್ನ ಅಕ್ಕ ಬ೦ದವರು ಅಡಿಕೆ ಕಿಡಕಿಯ ಮೇಲೆ ಇದೆ ಅ೦ದರು..ನನ್ನವರ ಕಡೆಯ ಹಾಗೂ ನನ್ನ ಆಡುಮಾತಿನಲ್ಲಿನ ವ್ಯತ್ಯಾಸ ಪಚೀತಿ ಉ೦ಟುಮಾಡಿತ್ತು.
ವ೦ದನೆಗಳು.

ಜಲನಯನ said...

ಚಿತ್ರಾರೀ, ಹೀಗೇ..ಭಾಷೆಯೊಂದರ ಪದಕ್ಕೆ ಭಾಷೆಯಿತರದು ಬೇರೆ ಅರ್ಥ ಕೊಡೋದು ಮುಜುಗರಗಳಿಗೆ ಕಾರಣ ಹೌದು..ನಾನು ಪೂರ್ವೋತ್ತರದಲ್ಲಿದ್ದಾಗ ನಮ್ಮ ಜಂಟಿ-ನಿರ್ದೇಶಕರು (Joint Director) ತೆಲುಗಿನವರು, ಅಲ್ಲಿಯ AG (accountant General) ಸಹಾ ತೆಲುಗಿನವರು..ನಮ್ಮ ಆಫೀಸಿನವರೆಲ್ಲಾ ಯು.ಪಿ. ಬಿಹಾರದವರು, ಒಮ್ಮೆ AG ನಮ್ಮ ಆಫೀಸಿಗೆ ಭೇಟಿ ನೀಡಿದಾಗ ನಮ್ಮ JD ಅವರನ್ನು ಬರಮಾಡಿಕೊಳ್ಳುತ್ತ "ರಂಡಿ ಸರ್..ರಂಡಿ ,..ಇದೇ ಮನ ಆಫೀಸು" ಅಂತ ಪರಿಚಯಿಸುವಾಗ..ನನ್ನ ಮಿತ್ರರೆಲ್ಲ ಮುಸಿ-ಮುಸಿ ನಗ್ತಿದ್ದರು...ಸರಿ ಎಲ್ಲ ಆಯ್ತು ಅತಿಥಿಗಳು ಹೋದರು..ನಮ್ಮ JD ಕೇಳಿದ್ರು why Dr. Ramesh Singh why were you so amused...? ಎಂದಿದ್ದಕ್ಕೆ ಅವರಷ್ಟೇ ಸೀನಿಯರ್ ಆಗಿದ್ದ ರಮೇಶ್ ಸಿಂಗ್...ಡಾ. ಸಾಬ್..ಹಿಂದಿಮೇ ರಂಡಿ ಮತಲಬ್..ಜಾನ್ತೆ ಹೋ ನಾ..?? ಎಂದಾಗಲೇ.ನಮ್ಮ JD ಸಾಹೇಬರಿಗೆ..ಅರೆ..ಎಂಥ ಎದವಟ್ಟು ಎನಿಸಿದ್ದು...ನಮ್ಮ ಪುಣ್ಯಕ್ಕೆ AG ಯವರ ಹಿಂದಿ knowledge questionable ಆಗಿತ್ತು...ಹಹಹ

ಚಿತ್ರಾ said...

ಪೂರ್ಣಿಮಾ ,
ಥ್ಯಾಂಕ್ಸು ! ನೀ ' ಚೀರ್ತಿಲ್ಲೆ' ಅಲ್ದಾ?

ಚಿತ್ರಾ said...

ಸೀತಾರಾಮ್ ,

ಅಭಿಪ್ರಾಯಕ್ಕೆ ಧನ್ಯವಾದಗಳು. ಹಾಗೇ ಅದು. ಪ್ರದೇಶದಿಂದ ಪ್ರದೇಶಕ್ಕೆ ಒಂದೇ ಭಾಷೆಯಾದರೂ ನೀವು ಹೇಳಿದಂತೆ ವ್ಯತ್ಯಾಸವಾಗಿ ಆಭಾಸವಾಗುವುದಿದೆ ! ಇನ್ನು ಹೀಗೆ ಹಲವು ಭಾಷೆಗಳ ಮಿಶ್ರಣವಾದರಂತೂ ಕೇಳಬೇಕೆ?ಅಂದಹಾಗೆ ನಿಮಗೆ ಯಾರಾದರೂ ' ಗಂಟು ಬಿದ್ದಿದ್ದರೆ?

ಚಿತ್ರಾ said...

ಸುಮಾ,
ಹಾ ಹಾ ಹಾ .... ನಿಮ್ಮ ಲೆಕ್ಚರ್ ಅವರ " ಇನ್ ಸೆಕ್ಟ್ ಸಿಟ್ ' ಮಾಡೋ ಅನುಭವ ಇನ್ನೂ ಮಜವಾಗಿದೆ ! ಅರ್ಥ ಆದಮೇಲೆ .. ನೀವುಗಳು ' ಸ್ಮೈಲಿದ್ರಿ' ತಾನೇ ?

ಚಿತ್ರಾ said...

ಆನಂದ್ ,
ಧನ್ಯವಾದಗಳು

ಚಿತ್ರಾ said...

ವಿಕಾಸ್,

ನಮಗೂ ಮೊದಲೆಲ್ಲ ಊರಿಗೆ ಹೋದಾಗ ಮಗಳ ಭಾಷೆಯನ್ನು ಅವರುಗಳಿಗೆ ಅರ್ಥ ಮಾಡಿಸುವ ಪ್ರಸಂಗ ಬರುತ್ತಿತ್ತು. ಆದರೆ, ಈಗ ಅಷ್ಟು ತೊಂದರೆಯಿಲ್ಲ !

ಚಿತ್ರಾ said...

ಸುಶ್ರುತ ,

ಥ್ಯಾಂಕ್ಸು. ಬರೆದು ಪತ್ರಿಕೆಗಳಿಗೆಲ್ಲ ಕಳಿಸ ತಾಳ್ಮೆ ಇಲ್ಲೆ ಈಗ ! ಬ್ಲಾಗ್ ನಂದೇ ಆಗಿದ್ದಕ್ಕೆ , ಯಾವಾಗ ಬೇಕಾದಾಗ ಮನಸಿಗೆ ಬಂದಿದ್ದು , ನೆನಪಾಗಿದ್ದು ಗೀಚದು ಅಷ್ಟೆ ! ವಾಪಸ್ ಅಂತು ಬರದಿಲ್ಲೆ ಅಂತ ವಿಶ್ವಾಸ ಇದ್ದಲ !

ಚಿತ್ರಾ said...

ಗುರು,

ಸ್ವೀಡನ್ ನಲ್ಲಿ ನಿಮ್ಮ ಮರಾಠಿಯ ಸ್ನೇಹಿತರು , ನಿಮಗೆ ಕಲಿಸಲಿಲ್ಲವೇ? ಇವರು ಬಹುಮಟ್ಟಿಗೆ ಭಾಷಾಭಿಮಾನಿಗಳು ! ಮಕ್ಕಳಿಗೆ ಮಾತೃಭಾಷೆಯನ್ನು ತಪ್ಪದೆ ಕಲಿಸುತ್ತಾರೆ. ಸಾಧ್ಯವಿದ್ದಷ್ಟೂ ಮರಾಠಿ ಮಾಧ್ಯಮದಲ್ಲೇ ಕಲಿಸಬಯಸುತ್ತಾರೆ ! ಅಂತು ಸ್ವೀಡನ್ ನಲ್ಲಿ ಮರಾಠಿಯ ' ಮಿಸಳ್' ತಿಂದಿದ್ದೀರಿ !

ಮೂರ್ತಿ ಹೊಸಬಾಳೆ. said...

ಚಿತ್ರಕ್ಕ,
ನಿಮ್ಮ ಪೋಸ್ಟ್ ಓದುವಾಗ ನನಗೆ ಗುಲ್ಬರ್ಗಾದಲ್ಲಿದ್ದಾಗ ನನ್ನ ಡ್ರೈವರ್ ತಡಾಗಿ ಬಂದದ್ದಕ್ಕೆ ಕೊಡುತ್ತಿದ್ದ (ಕನ್ನಡ+ಹಿಂದಿ+ಮರಾಠಿ) ಕಾರಣ ನೆನಪಾಯಿತು.
"ರಾಸ್ತಾಬಿ ಬಕ್ಕಳ್ ಕರಾಬ್ ಅದಾರಿ ಬ್ರೇಕ್ ಬೀ ಕಮ್ಜೋರ್ ಅದಾರಿ ಹಳ್ಳಗ್ ಹೋಬೆಕಾತದ್ರಿ"

ಚಿತ್ರಾ said...

ಪರಾಂಜಪೆ ,
ಧನ್ಯವಾದಗಳು

ಚಿತ್ರಾ said...

ಕಾಕಾ ,
ಈ fusion ಅನ್ನೋದು ಯಾವಾಗಲೂ ' confusion ' ಆಗುತ್ತದೆಯಾ ಅಂತ !

ಚಿತ್ರಾ said...

ಪ್ರಕಾಶಣ್ಣಾ,
ನೀವು ಹಂಚಿಕೊಂಡ 'ಮಿಸಳ ' ಸಹ ಬಹು ಚೆನ್ನಾಗಿದೆ ! ' ತಮಿಳ್ ತೆರಿ ಮಾ ..... ಪಂಜಾಬಿ ತೇರ ಬಾಪ್ ! ' ಹಾ ಹಾ ಹಾ ..

ಚಿತ್ರಾ said...

ಶಿವೂ
ಧನ್ಯವಾದಗಳು. ಈ 'ಮಿಸಳ್ ' ಈಗ ಎಲ್ಲ ಕಡೆ ಜನಪ್ರಿಯವಾಗುತ್ತಿದೆ ನೋಡಿ . ಪರ ಭಾಷಾ ಊರುಗಳಲ್ಲಿ ನೆಲೆಸಿರುವ ಕುಟುಂಬದ ಮಕ್ಕಳಿಂದಾಗಿ ಎಲ್ಲೆಡೆಯೂ ಒಂಥರಾ ' ಭಾಷೆಯ ' ಮಿಸಳ್ ' ಆಗುತ್ತಿದೆ ಅಲ್ಲವೇ?

ಚಿತ್ರಾ said...

ಸುಧೇಶ್,
ಮಿಸಳ್ ಇಷ್ಟ ಪಟ್ಟಿದ್ದಕ್ಕೆ ಥ್ಯಾಂಕ್ಸ್ ! ಆದ್ರೆ , ಇದು ನಿಮ್ಮ ' ಸುಚೇತಾ-ಅರ್ಜುನ್ ' ಸಂಭಾಷಣೆಯಷ್ಟು ರುಚಿಕರವಾಗಿಲ್ಲ ಬಿಡಿ !

ಚಿತ್ರಾ said...

ಸುನೀಲ್
' तुम्ही मिसळ खूप खाला असेल ! तरी तुम्हाला हे मिसळ आवडला ! मला खूपच आनंद झाला "
ನೀವು ಮಿಸಳ್ ಬಹಳಷ್ಟು ತಿಂದಿರಬಹುದು , ಆದರೂ ನಿಮಗೆ ಈ " ಮಿಸಳ್' ಇಷ್ಟವಾಗಿದ್ದು ನನಗೆ ತುಂಬಾ ಖುಷಿಯಾಯಿತು .

ಚಿತ್ರಾ said...

ಮನಮುಕ್ತ ರೆ,

ಸ್ವಾಗತ ! ನೀವು ಹೇಳಿದಂತೆ , ಪ್ರದೇಶದಿಂದ ಪ್ರದೇಶಕ್ಕೂ ಭಾಷೆಯಲ್ಲಿ ಆಗುವ ಚಿಕ್ಕ ಪುಟ್ಟ ಬದಲಾವಣೆಗಳೂ ಸಹ ಪೇಚಿನ ಪ್ರಸಂಗಗಳನ್ನು ತಂದೊಡ್ಡುತ್ತವೆ ಅಲ್ಲವೇ?

ಚಿತ್ರಾ said...

ಹಾ ಹಾ ಹಾ ಆಜಾದ್ ಸರ್!

ಚೆನಾಗಿದೆ ನೀವು ಹೇಳಿದ ಪ್ರಸಂಗ ! ನಮ್ಮಜ್ಜಿಯೂ ದಕ್ಷಿಣ ಭಾರತ ತೀರ್ಥ ಯಾತ್ರೆಗೆ ಹೋದಾಗ ಈ ವಿಷಯವಾಗಿ ಬಹಳ ಕೋಪಗೊಂಡಿದ್ದರು .' ದೇವಸ್ಥಾನಕ್ಕೆ ಹೋದಾಗಲೂ ಎಂಥಾ ಭಾಷೆ ಮಾತಾಡ್ತಾರೆ ' ಎಂದು ಬೇಸರಿಸಿಕೊಂಡಿದ್ದರು. ಆಮೇಲೆ ಯಾರೋ ಅವರಿಗೆ ತಿಳಿಸಿ ಹೇಳಿದಾಗ ಸ್ವಲ್ಪ ಮಟ್ಟಿಗೆ ಸಿಟ್ಟು ಇಳಿದಿತ್ತು . ಅಭಿಪ್ರಾಯಕ್ಕೆ ಧನ್ಯವಾದಗಳು.

ಚಿತ್ರಾ said...

ಮೂರ್ತಿ,

ಉತ್ತರ ಕರ್ನಾಟಕದ ಕಥೆಯಂತೂ ಇನ್ನೂ ಮಜವಾಗಿರುತ್ತದೆ ಅಲ್ಲವೇ? ನಮ್ಮ ಆಫೀಸಿನಲ್ಲಿ ಬಹಳಷ್ಟು ಮಂದಿ ಉತ್ತರ ಕರ್ನಾಟಕದವರಿದ್ದಾರೆ. ಆ ಕನ್ನಡವನ್ನು ಕೇಳುವುದು ಒಂದು ಸೊಗಸು !
ಧನ್ಯವಾದಗಳು