February 5, 2010

ಟಿವಿ ಎಂಬ ಮಾಯೆ !

" ಅಯ್ಯೋ ಪಾರ್ವತಿ ಗಂಡ ಅವಳನ್ನ ಬಿಟ್ಟು ಬೇರೆಯವಳ ಜೊತೆ ಸುತ್ತುತಾ ಇದಾನಲ್ರೀ ಜಯಮ್ಮ ! "

" ಥೂ ನೋಡ್ರೀ ಗೀತಾ , ಅವನಿಗೇನು ಬಂತು ಕೇಡು ಅಂತೀನಿ. ಇಂಥಾ ಬಂಗಾರದಂಥಾ ಹೆಂಡತೀ ನ ಬಿಟ್ಟು ಆ ಮಾಟಗಾತಿ ಹಿಂದೆ ಹೋಗಿದಾನಲ್ಲ ! ಪಾಪ ಕಣ್ರೀ ಪಾರ್ವತಿ . ಅವಳ ದುಃಖ ನೋಡೋಕಾಗಲ್ಲ ನನ್ನ ಹತ್ರ ! ಮುಂದೆ ಅವಳ ಗತಿ ಏನಾಗತ್ತೋ "

" ಆ ಸಾಧನಾ ನೋಡಿದ್ರಾ , ಅಕ್ಕ ಅಕ್ಕ ಅಂತ ಅಷ್ಟು ಒದ್ದಾಡ್ತಾಳೆ ಪಾಪ ! ಅವಳ ಅಕ್ಕ ನೋಡಿದ್ರೆ ಅವಳಿಗೆ ಮನೆ ಬಿಟ್ಟು ಹೋಗು ಅನ್ತಾಳಲ್ರೀ ? "

" ಹೌದುರೀ , ಇನ್ನು ಆ ಅಕ್ಷರಾ ದಂತೂ ಇನ್ನೂ ವಿಚಿತ್ರ ! ಮತ್ತೆ ಮತ್ತೆ ತಪ್ಪು ಮಾಡಿ ಅತ್ತೆ ಹತ್ರ , ಮನೆಜನರ ಹತ್ರ ಯಾಕೆ ಬೈಸಿಕೊ ಬೇಕು ಹೇಳಿ ? "

ಯಾವ ಪಾರ್ವತಿ ಗಂಡ ಅಂತ , ಯಾರ ಮನೆ ಸಾಧನಾ , ಈ ಅಕ್ಷರಾ ಯಾರು ಅಂತೆಲ್ಲ ಕಿವಿ ಉದ್ದ ಮಾಡಿಕೊಂಡು ಕುತೂಹಲದಿಂದ ಕೇಳ ಹೋಗುವ ಅಗತ್ಯವಿಲ್ಲ ! ಇದು ಯಾವುದೋ ಧಾರಾವಾಹಿಯ ಪಾತ್ರಗಳ ಬಗ್ಗೆ ಮೂಡಿದ ಅನುಕಂಪ ಅಷ್ಟೇ ! ಇಂಥ ಚರ್ಚೆಗಳಂತೂ ನಾಲ್ಕು ಹೆಂಗಸರು ಕೂಡಿದಲ್ಲಿ ಸರ್ವೇ ಸಾಮಾನ್ಯವಾಗಿಬಿಟ್ಟಿದೆ .

ಟಿವಿ ಅನ್ನೋದು ಈಗ ಒಂಥರಾ ಮನೆಯಲ್ಲಿ ಅನಿವಾರ್ಯ ವಸ್ತುವಾಗಿಬಿಟ್ಟಿದೆ. ಮನೆಯಲ್ಲಿ ನೋಡುವ ಜನರಿರಲಿ ಬಿಡಲಿ , ಅಡುಗೆ ಮನೆಯಲ್ಲಿ ಅಕ್ಕಿ ಇರಲಿ ಬಿಡಲಿ , ಮನೆಗೆ ಕರೆಂಟ್ ಕನೆಕ್ಷನ್ ಇರಲಿ ಬಿಡಲಿ,
ಟೀ ವಿ ಅಂತು ಬೇಕೇ ಬೇಕು ! ಹೊಟ್ಟೆಗೆ ಹಿಟ್ಟಿಲ್ಲದಿದ್ದರೂ ಜುಟ್ಟಿಗೆ ಮಲ್ಲಿಗೆ ಹೂವು ಅನ್ನೋ ತರ , ಕುಳಿತುಕೊಳ್ಳಲು ಕುರ್ಚಿ ಇಡಲು ಜಾಗವಿಲ್ಲದಿದ್ದರೂ ಪರವಾಗಿಲ್ಲ , ದೊಡ್ಡದೊಂದು ಬಣ್ಣದ ಟಿವಿ ಇರಲೇ ಬೇಕು ಅನ್ನೋ ಪರಿಸ್ಥಿತಿ .

ನಿಮ್ಮನೇಲಿ ಯಾವ ಟಿವಿ ಇದೆ ಅನ್ನೋದು ನಿಮ್ಮ ಅಂತಸ್ತನ್ನು ತೋರಿಸುತ್ತೆ. ಇತ್ತೀಚೆಗಂತೂ , ಹಾಲ್ ನ ಗೋಡೆಯ ಮೇಲೆ ಫ್ಲಾಟ್ LCD ಟಿವಿ ಇದ್ದರೆ ಮನೆಗೆ ಶೋಭೆ ಎಂಬ ಭಾವನೆ ಇದೆ .

ಊಟ ತಿಂಡಿ ಬದಿಗಿಟ್ಟು ಟೀ ವಿ ಧಾರಾವಾಹಿಗಳಲ್ಲಿ ಮುಳುಗುವವರಿಗೆ ಬರಗಾಲವೇ ಇಲ್ಲ ! ಸಂಜೆ ಹೊತ್ತಿಗೆ ಮನೆಗೆ ಯಾರಾದರೂ ಬಂದರೆ " ಈಗ್ಯಾಕೆ ಬಂದರಪ್ಪ ಇವರು .. ಒಳ್ಳೆ ಧಾರಾವಾಹಿ ತಪ್ಪಿಸಿಬಿಡ್ತಾರೆ ಇನ್ನು " ಎಂದು ಮನದಲ್ಲೇ ಶಾಪ ಹಾಕುವವರು ಕಮ್ಮಿಯೇನಿಲ್ಲ ! ಕುಟುಂಬದವರೇ ಯಾರೋ ಮೃತ ಪಟ್ಟರೂ ಅಷ್ಟಾಗಿ ಹಚ್ಚಿಕೊಳ್ಳದ ಇವರು ಧಾರಾವಾಹಿಯ ಪಾತ್ರಗಳ ಕಷ್ಟಕ್ಕೆ ಮರುಗಿ ಕಣ್ಣೀರು ಸುರಿಸುತ್ತಾರೆ .

ಮಕ್ಕಳಿಗೆ ಕಾರ್ಟೂನ್ ಚಾನಲ್ , ಮ್ಯೂಸಿಕ್ ಚಾನಲ್ ಗಳಾದರೆ, ಗಂಡಸರಿಗಂತೂ ೨೪ ಗಂಟೆ ' Breaking News " " Business News " ಅಥವಾ ಕ್ರಿಕೆಟ್ ನ ಮನರಂಜನೆ ಈ ಟಿವಿಯಿಂದಾಗಿ.

ಮುಂಚೆ ದೂರದರ್ಶನದ ನಿಗದಿತ ಕಾಲಾವಧಿಯ ಕಾರ್ಯಕ್ರಮಗಳಿಂದಲೇ ಪುಳಕಗೊಳ್ಳುತ್ತಿದ್ದ ಜನರು ಈಗ Satelite ಯುಗದಲ್ಲಿ ನೂರೆಂಟು ಚಾನಲ್ ಗಳು ದಿನವಿಡೀ ಪ್ರಸಾರ ಮಾಡುವ ಕಾರ್ಯಕ್ರಮಗಳಿಂದಾಗಿ ಹುಚ್ಚಾಗಿ ಹೋಗಿದ್ದಾರೆ.

ನಾನು ಮೊದಲ ಬಾರಿಗೆ ಟಿವಿನೋಡಿದ್ದು ನಾನು ೮ನೇ ತರಗತಿಯಲ್ಲಿದ್ದಾಗ . ಪ್ರಧಾನಿ ಇಂದಿರಾಗಾಂಧಿಯವರ ಅಂತಿಮ ಕ್ರಿಯೆಯ ನೇರ ಪ್ರಸಾರ ಟಿವಿಯಲ್ಲಿ ತೋರಿಸುತ್ತಾರೆ ಎಂದು ಕೇಳಿ ನನ್ನ ಅಪ್ಪಾಜಿ ನನ್ನನ್ನು ಶಿವಮೊಗ್ಗದ ನನ್ನ ಸೋದರಮಾವನ ಮನೆಗೆ ಕರೆದುಕೊಂಡು ಹೋಗಿದ್ದರು . ಅವರ ಮನೆಯಲ್ಲಿ ಹೊಸದಾಗಿ ಬಂದಿದ್ದ ಕಪ್ಪು ಬಿಳುಪು ಟಿವಿಯ Antenna ಸರಿಯಿಲ್ಲದೆ , ಜೋರಾಗಿ ಮಳೆ ಬೀಳುತ್ತಿರುವಂತೆ ಕಾಣುತ್ತಿದ್ದ ಪರದೆಯನ್ನೇ ಕಣ್ಣು ಕೀಲಿಸಿಕೊಂಡು ನೋಡಿದೆವು . . ನಂತರ ಅವರ ಸ್ನೇಹಿತರ ಮನೆಯಲ್ಲಿ ಬಣ್ಣದ ಟಿವಿ ಇದೆ ಎಂದು, ಅದರಲ್ಲಿ ನೋಡಲು ಚೆನಾಗಿರುತ್ತದೆ ಎಂದು ಅಲ್ಲಿಗೆ ಹೋದೆವು. ಅವರ ಮನೆಯ ಹಾಲ್ ಆಗಲೇ ಮುಕ್ಕಾಲು ಭಾಗ ತುಂಬಿ ಹೋಗಿತ್ತು. ಮನೆಯೊಡತಿಗೆ , ಆ ಸಂದರ್ಭದಲ್ಲೂ ಬಂದವರಿಗೆಲ್ಲ ಚಹಾ ಮಾಡಿ ಕೊಡುವ ಸಂಭ್ರಮ ! ಶಿವಮೊಗ್ಗದಿಂದ ಮರಳಿದ ಮೇಲೆ ನನಗೆ ಒಂಥರಾ ಹೆಮ್ಮೆ ! ಸಂದರ್ಭ ಏನೇ ಇರಲಿ ಶಾಲೆಯಲ್ಲಿ ಬಣ್ಣದ ಟಿವಿ ನೋಡಿ ಬಂದ ಮೊದಲಿಗಳಲ್ಲವೇ ನಾನು?

ಕೆಲ ವರ್ಷಗಳಲ್ಲಿ ಪುಟ್ಟದೊಂದು ಕಪ್ಪು ಬಿಳುಪು ಟಿವಿ ನನ್ನ ಅಜ್ಜನ ಮನೆಯಲ್ಲೂ ಬಂತು ! ಸುತ್ತ ಮುತ್ತಲಿನ ಹಳ್ಳಿಗಳಲ್ಲಿ ಮೊದಲ ಟಿವಿ ಅದು ! ಸಂಜೆಯ ಹೊತ್ತಿಗೆ ಜಗುಲಿ ಎನ್ನುವುದು ಒಂಥರಾ ಸಿನೆಮಾ ಟಾಕೀಸಿನಂತೆ ತುಂಬಿ ತುಳುಕುತ್ತಿತ್ತು. ಕೆಲ ದಿನಗಳು ಮುಂದುವರೆದ ಸಂಭ್ರಮ ಕ್ರಮೇಣ ಕಮ್ಮಿ ಆಯ್ತು ಅನ್ನಿ. ಆದರೆ ನನ್ನ ಅಜ್ಜಿ ಮಾತ್ರ ಭಕ್ತಿಯಿಂದ ಕುಳಿತು ' ವಾರ್ತೆಗಳನ್ನು ' ನೋಡುತ್ತಿದ್ದರು. ಕನ್ನಡ ಬಿಟ್ಟರೆ ಬೇರೆ ಭಾಷೆಯ ಗಂಧ ಗಾಳಿಯೂ ಇಲ್ಲದ ಅಜ್ಜಿ ಅಷ್ಟು ಆಸಕ್ತಿಯಿಂದ ಕುಳಿತು ನೋಡುವ ಪರಿಗೆ ನಾವು ಕುತೂಹಲಪಡುತ್ತಿದ್ದೆವು. ಅದನ್ನು ಕೇಳಿದಾಗ ಅಬ್ಬೆ ಹೇಳಿದ್ದು
" ನಂಗೆ ಒಂದುಸಲ ಆದರೂ ರಾಜೀವ್ ಗಾಂಧೀ ಮುಖ ನೋಡದ್ದೆ ಇದ್ರೆ ಸಮಾಧಾನ ಇಲ್ಲೆ ನೋಡು. ವಾರ್ತೆಲಿ ಹೆಂಗೂ ಒಂದ್ಸಲ ಮುಖ ಕಂಡೇ ಕಾಣ್ತು ಹಾಂಗಾಗಿ ತಪ್ಪದ್ದೆ ನೋಡದು "

" ಅದೆಂತಕೆ ರಾಜೀವ್ ಗಾಂಧೀ ಮೇಲೆ ಅಷ್ಟು ಪ್ರೀತಿ ಅಬ್ಬೆ? "

" ಅಲ್ಲಾ , ಅದೆಂತದೋ ವಿಮಾನ ಹಾರಿಸಿಕ್ಯಂಡು ಇದ್ದಿದ್ದ , ತಾಯಿ ಸತ್ತಾಗ ಬೇಜಾರು ಮಾಡ್ಕ್ಯಂಡು ಬದೀಗೆ ಕೂತ್ಗಳದ್ದೆ ಈ ಎಳೇ ವಯಸ್ಸಲ್ಲೇ ಹ್ಯಾಂಗೆ ಮುಂದೆ ಬಂದು ಧೈರ್ಯದಿಂದ ದೇಶ ನಡೆಸಿಕ್ಯಂದು ಹೋಗ್ತಿದ್ದ ನೋಡು . ಅದಕ್ಕೆ ಒಂಥರಾ ಅಭಿಮಾನ "
ಅಬ್ಬೆಯ ಮಾತಿಗೆ ಅವಳ ಲೋಕಜ್ಞಾನಕ್ಕೆ ನಾವು ಒಮ್ಮೆ ಬೆರಗಾದೆವು ! ಹಾಗೇ ರಾಜೀವ್ ಗಾಂಧಿಯ ಧೈರ್ಯವನ್ನೂ ಮೆಚ್ಚಿದೆವು !!! ( ಈಗ , ಅಬ್ಬೆಯ ಸಹಾನುಭೂತಿ , ಅವಳ ಮಾತಿನಲ್ಲೇ ಹೇಳುವುದಾದರೆ , ' ಪರದೇಶದಿಂದ ಬಂದು , ಅತ್ತೆ ಹಾಗೂ ಗಂಡನನ್ನು ಕಳೆದುಕೊಂಡರೂ , ಎದೆಗುಂದದೆ, ತವರಿಗೆ ವಾಪಸಾಗದೆ , ಮಕ್ಕಳಿಬ್ಬರನ್ನೂ ಬೆಳೆಸಿ ಈಗ ದೇಶವನ್ನು ನಡೆಸುತ್ತಿರುವ ದೇಶದ ಸೊಸೆ ' ಸೋನಿಯಾ ಗಾಂಧಿಯ ಕಡೆಗಿದೆ ! )

ಅಬ್ಬೆಗೂ ಟಿವಿಗೂ ಒಂಥರಾ ಬಾಂಧವ್ಯ ! ಭಾಷೆ ಬಾರದಿದ್ದರೂ ಭಕ್ತಿಯಿಂದ ಕುಳಿತು ಕಾರ್ಯಕ್ರಮಗಳನ್ನು ನೋಡುತ್ತಾಳೆ. ಆಗ ಹಿಂದಿ ವಾರ್ತೆ ಓದಲು ಬರುವ "ಸರಳಾ ಮಹೇಶ್ವರಿ" ಅಬ್ಬೆಯ ಅಚ್ಚುಮೆಚ್ಚಿನ ವ್ಯಕ್ತಿಯಾಗಿದ್ದಳು.

" ಎಷ್ಟು ಪಟ್ಟಾಗಿ ಎಣ್ಣೆ ಹಚ್ಚಿ ಮಂಡೆ ( ಕೂದಲು) ಬಾಚಿ ಗಂಟು ಹಾಕ್ಯಂಡು , ಹಣೆ ಮೇಲೆ ದೊಡ್ಡ ಕುಂಕುಮ ಇಟ್ಗಂಡು , ಲಕ್ಷಣವಾಗಿ ಸೀರೆ ಉಟ್ಗಂಡು ಬರದು ನೋಡಿದ್ರೆ , ಯಾರೋ ನಮ್ಮ ಬದಿ ಹೆಂಗಸೇ ಆಗಿಕ್ಕು ಅಲ್ದಾ ತಂಗಿ ? " ಎಂದು ನನ್ನನ್ನು ಕೇಳಿದ ಅಬ್ಬೆಗೆ ಪಕ್ಕದ ಮನೆಯ ಶಿವಣ್ಣಯ್ಯ ,
" ಹೌದು ಚಿಕ್ಕೀ, ಕಡ್ಲೆ ಬೈಲಿನ ಸುಬ್ರಾಯ ಬಾವನ ಹೆಂಡ್ತಿ ಸಂಬಂಧ ಇವಳಿಗೆ " ಎನ್ನಬೇಕೇ? ಅಬ್ಬೆ ಅದನ್ನು ನಂಬಿಯೂ ಆಗಿತ್ತು . ಅಷ್ಟರಲ್ಲಿ ನಾವೆಲ್ಲ ಕಿಸಕ್ಕೆಂದು ನಕ್ಕಿದ್ದು ಕಂಡು ಅವಳಿಗೆ ತನ್ನನ್ನು ರೇಗಿಸಿದ್ದು ತಿಳಿಯಿತು.

" ಥೋ , ಎಂತದ್ರ ನಿಂಗ ಎಲ್ಲ ಹೀಂಗೆ ಸುಳ್ಳು ಹೇಳ್ತಿ." ಎಂದು ತಾನು ನಕ್ಕವಳು ನಂತರ ಗಂಭೀರವಾಗಿ " ಅಲ್ಲಾ ನಾವೆಲ್ಲಾ ಟಿವಿ ಮುಂದೆ ಕೂತ್ಗಂಡು ಹೀಂಗೆ ಮಾತಾಡದು ಕೇಳಿ ಅವಳು ಮನೆಗೆ ಹೋಗಿ ನಮ್ಮ ಬಗ್ಗೆ ಹೇಳಿಕ್ಯಂಡು ಎಷ್ಟು ನೆಗ್ಯಾಡ್ತೆನ ! " ಎಂದು ಹೇಳಿದಾಗ ಜಗುಲಿಯಲ್ಲಿ ಮತ್ತೊಮ್ಮೆ ನಗುವಿನ ಅಲೆ !

ನನ್ನತ್ತೆಗೂ ಹಾಗೇ, ಸಂಜೆಯಾಗುತ್ತಿದ್ದಂತೆ ಟಿವಿ ಹಚ್ಚುವುದು ಎಷ್ಟು ಅಭ್ಯಾಸವಾಗಿ ಹೋಗಿತ್ತು ಎಂದರೆ ಒಮ್ಮೆ ಸಂಜೆ ಕೊಟ್ಟಿಗೆಯಿಂದ ಹಾಲು ಕರೆದುಕೊಂಡು ಬಂದವರು .. ಜಗುಲಿಯಲ್ಲಿ ಟಿವಿ ಹಚ್ಚಿರದ್ದನ್ನು ಕಂಡು ಮಾವನವರಿಗೆ ಜೋರು ಮಾಡಿದ್ದರು . " ಸಂಜೆಯಾತು , ಒಂದು ಟಿವಿ ನೂ ಹಚ್ಚಿದ್ರಿಲ್ಲೇ ನೀವು ! ಲೈಟ್ ಹಾಕಕಾದ್ರೆ ಅಲ್ಲೇ ಟಿವಿ ಸ್ವಿಚ್ಚೂ ಹಾಕಿದ್ರೆ ಆಗ್ತಿತ್ತಿಲ್ಯಾ? " ಎಂದು. ಅವರ ಮಟ್ಟಿಗೆ , ಟಿವಿ ಹಾಕುವುದು ಸಂಜೆ ಮನೆಯ ದೀಪ ಬೆಳಗುವಷ್ಟೇ ಸಹಜವಾಗಿತ್ತು !

ಈ ಟಿವಿ ಎಂಬ ಮಾಯಾಂಗನೆ ನಮ್ಮನ್ನೆಲ್ಲ ಆವರಿಸಿಕೊಂಡು ಬಿಟ್ಟಿದ್ದಾಳೆ . ನೂರೆಂಟು ಚಾನಲ್ ಗಳು , ತಮ್ಮ ಜನಪ್ರಿಯತೆಗಾಗಿ ಏನೆಲ್ಲಾ ಸರ್ಕಸ್ ಮಾಡುತ್ತಾ ಪ್ರತಿಯೊಂದನ್ನೂ "Breaking News " ಆಗಿಯೇ ಪ್ರಕಟಿಸುತ್ತಾ ಜನರ ಶಾಂತಿ ಕದಡುವಲ್ಲಿ ಯಶಸ್ವಿಯಾಗಿವೆ . ಇವರ ಪಾಲಿಗೆ ಯಾರದೋ ಮನೆಯಲ್ಲಿ ಗಂಡ -ಹೆಂಡತಿಯ ನಡುವಿನ ಚಿಕ್ಕ ಸಂಘರ್ಷವೂ Breaking News ಆಗಿಬಿಡುತ್ತದೆ ! ಸಮಾಜದ ಬಗೆಗಿನ ತಮ್ಮ ಜವಾಬ್ದಾರಿಯನ್ನು ಇವು ಮರೆತೇ ಬಿಟ್ಟಿವೆ.

ಒಂದು ಕಾಲದಲ್ಲಿ ಸದಭಿರುಚಿಯ , ನವಿರು ಹಾಸ್ಯದ ಚಿಕ್ಕ ಚಿಕ್ಕ ಮಾಲಿಕೆಗಳು ದೂರದರ್ಶನದಲ್ಲಿ ಜನರನ್ನು ರಂಜಿಸುತ್ತಿದ್ದವು .ಆದರೆ ಇಂದು ?

ಪ್ರತಿ ಚಾನಲ್ ನಲ್ಲೂ ರಿಯಾಲಿಟಿ ಷೋ ಗಳಲ್ಲಿ ನಡೆಯುವ ನಾಟಕ , ಗಂಭೀರ ವಿಷಯವೇ ಇಲ್ಲದ ಬಿಸಿ ಚರ್ಚೆಗಳು , ಕೇಳುಗರ ಕಿವಿ ಕಿವುಡಾಗುವಂತೆ , ಬೆದರಿಸುತ್ತಾ ಕಿರುಚಾಡುವ ರಿಪೋರ್ಟರ್ ಗಳು ... ಇಂದು ಅತ್ಯಂತ ಪ್ರಭಾವೀ ಮಾಧ್ಯಮವಾದ ಟಿವಿ ಯ ದುರವಸ್ಥೆಯನ್ನು ತೋರಿಸುತ್ತವೆ !

ಇನ್ನು ಧಾರಾವಾಹಿಗಳಂತೂ ಕೇಳುವುದೇ ಬೇಡ ! ವರ್ಷಗಟ್ಟಲೆ ಮುಂದುವರಿಯುವ ಇವುಗಳಲ್ಲಿ , ಯಾರು ಎಷ್ಟು ಸಲ ಮದುವೆಯಾಗುತ್ತಾರೋ , ಯಾರ ಹೆಂಡತಿ ಯಾರು , ಆಕೆ ಮುಂದೆ ಇನ್ಯಾರನ್ನು ಮದುವೆಯಾದಳು ಎಂಬುದು ನಿರ್ದೇಶಕನಿಗೂ ಕಗ್ಗಂಟಾಗಿ ಉಳಿಯುತ್ತದೆ! ಶುರುವಿನಲ್ಲಿ , ಮಧ್ಯಮ ವರ್ಗದ ಕುಟುಂಬದಿಂದ ಬಂದ ನಾಯಕಿ ಅತ್ಯಂತ ಪ್ರಾಮಾಣಿಕಳೂ, ಅತಿ ಧೈರ್ಯಸ್ಥೆಯೂ , ಸತ್ಯಕ್ಕಾಗಿ ಏನು ಮಾಡಲೂ ಸಿದ್ಧವಿರುವವಳೂ , ಮಾನವ ಸಂಬಂಧಗಳನ್ನು ತುಂಬಾ ಗೌರವಿಸುವವಳೂ ಆಗಿರುತ್ತಾಳೆ . ಒಮ್ಮೆ ಆಗರ್ಭ ಶ್ರೀಮಂತ ನಾಯಕನನ್ನು ಮದುವೆಯಾಗಿದ್ದೇ ಅವಳ ಗೋಳಾಟ ಆರಂಭವಾಗುತ್ತದೆ ! ಆಕೆಯ ಗಂಡನಮನೆಯಲ್ಲಿರುವ ಹೆಂಗಸರೆಲ್ಲರಿಗೂ ಒಬ್ಬರಿಗೊಬ್ಬರ ವಿರುದ್ಧ ಪ್ಲಾನ್ ಮಾಡಿಯೇ ಮುಗಿಯದು . ಇದರ ನಡುವೆ ನಮ್ಮ ನಾಯಕಿ , ಕುಟುಂಬದ ಪ್ರತಿಷ್ಠೆ ಉಳಿಸಲು ತ್ಯಾಗ ಮಾಡುತ್ತಾ ಕಣ್ಣೇರು ಹರಿಸುತ್ತಾ ಇರುತ್ತಾಳೆ ! ಆಕೆಯನ್ನು ನೋಡುತ್ತಾ ನಮ್ಮ ಪ್ರೇಕ್ಷಕ ಮಹಿಳೆಯರೂ ದುಃಖಿಸುತ್ತಾರೆ ! ಆಕೆ ತಮ್ಮದೇ ಕುಟುಂಬದ ಮಗಳೇನೋ ಎಂಬಂತೆ ! ಇವೆಲ್ಲವೂ ಎಂದಿಗೆ ಕೊನೆಯೂ ಗೊತ್ತಿಲ್ಲ !

ಆದರೆ, ಈ ಋಣಾತ್ಮಕ ಅಂಶಗಳ ಹೊರತಾಗಿಯೂ ಇಂದು ಟಿವಿ ಒಂದು ದೊಡ್ಡ ಉದ್ಯಮವಾಗಿ ಬೆಳೆದಿರುವುದೂ ಅಷ್ಟೇ ನಿಜ ! ಇದರಲ್ಲೀಗ ಹಣದ ಹೊಳೆ ಹರಿಯುತ್ತಿದೆ ! ಸಾವಿರಾರು ಜನರಿಗೆ ಉದ್ಯೋಗ ದೊರೆತಿದೆ, ಅದೆಷ್ಟೋ ಜನರು ಕಲಾವಿದರಾಗಿ, ನಿರ್ದೇಶಕರಾಗಿ ಯಶಸ್ಸಿನ ರುಚಿ ಸವಿದಿದ್ದಾರೆ . ಕೆಲದಿನಗಳ ಹಿಂದೆ , ಅನಾಮಿಕರಾಗಿದ್ದವರು ಒಮ್ಮೆ ಯಾವುದೋ ಕಾರ್ಯಕ್ರಮದಲ್ಲಿ ಮುಖ ತೋರಿಸಿದ್ದೇ , ಜನಪ್ರಿಯರಾಗಿದ್ದಾರೆ . ಯುವಪೀಳಿಗೆ ಇಂದು ಟಿವಿ ಯತ್ತ ಹೆಚ್ಚು ಆಕರ್ಷಿತರಾಗುತ್ತಿರುವುದೂ ಇದೇ ಕಾರಣಕ್ಕಾಗಿ ! ಕೆಲ ಜನಪ್ರಿಯ ಹಿಂದಿ ಧಾರಾವಾಹಿಗಳ ಮುಖ್ಯ ಕಲಾವಿದರು ದಿನವೊಂದಕ್ಕೆ ೧ ಲಕ್ಷ ರೂ. ಸಂಭಾವನೆ ಪಡೆದಿದ್ದೂ ಇದೆ. ವರ್ಷಗಟ್ಟಲೆ ಮುಂದುವರಿಯುವ ಇಂತಹ ಧಾರಾವಾಹಿಗಳಲ್ಲಿ ಅವರು ಎಷ್ಟು ಹಣ ಗಳಿಸಿರಬಹುದೋ ಯೋಚಿಸಿ !

ಕೆಲ ವರ್ಷಗಳ ಹಿಂದೆ ಕಿರುತೆರೆಯ ಸಾಮ್ರಾಜ್ಞಿ ಎಂದೇ ಪ್ರಖ್ಯಾತಳಾದ " ಏಕತಾ ಕಪೂರ್" ಒಡೆತನದ ಬಾಲಾಜಿ ಪ್ರೊಡಕ್ಷನ್ಸ್ , ವಿವಿಧ ಭಾಷೆಗಳಲ್ಲಿ ಪ್ರತಿದಿನ ೩೫ ಧಾರಾವಾಹಿಗಳನ್ನು ಪ್ರಸಾರ ಮಾಡುತ್ತಿತ್ತು ಎಂದರೆ ಕಿರುತೆರೆಯ ಹಿರಿಮೆ ಸ್ವಲ್ಪ ಮಟ್ಟಿಗೆ ಅರ್ಥವಾಗಬಹುದು !

ಕೇವಲ ಜನಪ್ರಿಯತೆಯನ್ನೇ ಗುರಿಯಾಗಿಸಿಕೊಳ್ಳದೆ ತಮ್ಮ ಜವಾಬ್ದಾರಿಯ ಗಂಭೀರತೆಯನ್ನು ಅರ್ಥ ಮಾಡಿಕೊಂಡು ಆ ಪ್ರಕಾರ ಜನರಲ್ಲಿ ಸಾಮಾಜಿಕ ಅರಿವನ್ನೂ ನೀಡುವ ಕೆಲಸವನ್ನು ಕಿರುತೆರೆ ಮಾಡಬೇಕಿದೆ !
ಬ್ರೆಕಿಂಗ್ ನ್ಯೂಸ್ ನ ಹೆಸರಿನಲ್ಲಿ ಘಟನೆಯ , ಹಿಂದೂ ಮುಂದು , ಸತ್ಯಾಸತ್ಯತೆಯನ್ನೂ ಅರಿತುಕೊಳ್ಳದೆ ಏನೆಲ್ಲಾ ಪ್ರಸಾರ ಮಾಡುವ ರಿಪೋರ್ಟರ್ ಗಳನ್ನು ನೋಡುವಾಗ , ಕೆಲ ವರ್ಷಗಳ ಹಿಂದೆ ಟಿವಿಯಲ್ಲೇ ನೋಡಿದ ಒಂದು ದೃಶ್ಯ ನೆನಪಾಗುತ್ತದೆ .

ಶೇಖರ್ ಸುಮನ್ ತಮ್ಮ ಷೋ ಒಂದರಲ್ಲಿ ಇಂದಿನ ರಿಪೋರ್ಟರ್ ಗಳನ್ನು ಕುರಿತು ಹೀಗೆ ಹಾಸ್ಯ ಮಾಡಿದ್ದರು
" ಇಂದಿನ ಅತ್ಯಂತ ಮಹತ್ವದ ಘಟನೆ ಎಂದರೆ ಎ ಬಿ ಸಿ ರಸ್ತೆಯ ಈ ಗಲ್ಲಿಯಲ್ಲಿ ಸತ್ತು ಬಿದ್ದಿರುವ ಈ ನಾಯಿಯನ್ನು ನೋಡಿ , ಇದು ಸಾಧಾರಣ ಸಾವಲ್ಲ , ಕೊಲೆ ! ನಿಷ್ಕರುಣಿ ಚಾಲಕನ ದುರ್ಲಕ್ಷ್ಯದಿಂದಾಗಿ ಈ ನಾಯಿ ಇಂದು ಸತ್ತು ಬಿದ್ದಿದೆ. ಇದರ ನಿರ್ಜೀವ ಬಾಲವನ್ನ ಒಮ್ಮೆ ನೋಡಿ , ಹೇಗೆ ಮುರುಟಿಕೊಂಡಿದೆ , ಅತ್ತಿತ್ತ ರಕ್ತ ಚೆಲ್ಲಾಡಿದೆ ... ಅದರ ಹೊರ ಚಾಚಿರುವ ನಾಲಿಗೆ ನೋಡಿ ... ಈ ದುರ್ಘಟನೆಯನ್ನು ನಿಮ್ಮೆದುರು ಬೇರೆಲ್ಲರಿಗಿಂತ ಮೊದಲೇ ತೆರೆದಿಡಲು ನಮ್ಮ ವರದಿಗಾರರು ಆ ಸ್ಥಳದಲ್ಲಿ ದುರ್ಘಟನೆಯ ನಡೆಯುವುದಕ್ಕೂ ಬಹುಮುಂಚಿತವಾಗಿ ಕಾದಿದ್ದರು ! "

ಬ್ರೆಕಿಂಗ್ ನ್ಯೂಸ್ ಗಳನ್ನು ನೋಡುವಾಗ ಇಂದಿಗೂ ಈ ಪ್ರಸಂಗ ನೆನಪಾಗಿ ನಗುಬಂದುಬಿಡುತ್ತದೆ !

29 comments:

ವಿ.ರಾ.ಹೆ. said...

ನಿಜ. ಟೀವಿ ನೋಡದಿದ್ರೆ ಎಷ್ಟೆಲ್ಲಾ ನೆಮ್ಮದಿ ಗೊತ್ತಾ ಲೈಫಲ್ಲಿ. ಹ್ಮ್. :)

ಸುಧೇಶ್ ಶೆಟ್ಟಿ said...

ಚೆನ್ನಾಗಿ ಎ೦ಜಾಯ್ ಮಾಡಿದೆ ಓದೋವಾಗ..... ಅಬ್ಬೆಯ ಮುಗ್ಧತೆ, ಕಾ೦ಗ್ರೆಸ್ ಪ್ರೀತಿ ತು೦ಬಾ ಚೆನ್ನಾಗಿತ್ತು.. :)ಹಿ೦ದೆ ನಾವು ಸಣ್ಣವರಾಗಿದ್ದಾಗ ಟಿ.ವಿ. ಒ೦ದು ಅಧ್ಬುತ ವಸ್ತುವಾಗಿತ್ತು... ನಿಮ್ಮ ಬರಹ ಬಾಲ್ಯದ ಆ ನೆನಪುಗಳನ್ನು ಮತ್ತೊಮ್ಮೆ ತರಿಸಿತು... ನಿಮ್ಮ ರೇಡಿಯೋ ಬಗೆಗಿನ ಬರಹದ೦ತೆ ಇದು ಕೂಡ ತು೦ಬಾ ಇಷ್ಟ ಆಯಿತು....

ನಾನು ಟಿ.ವಿ. ನೋಡುವುದಿಲ್ಲ... ಆದ್ರೂ ಕೆಲವೊ೦ದು ಕಾರ್ಯಕ್ರಮಗಳು ಎಷ್ಟೊ೦ದು ಚೆನ್ನಗಿರುತ್ತಲ್ಲ ಅ೦ತ ಅನಿಸುತ್ತದೆ... ಈಗಿನ ಮಕ್ಕಳಿಗೆ ತಮ್ಮ ಪ್ರತಿಭೆ ತೋರಿಸಲು ಒ೦ದು ಮುಖ್ಯ ವಾಹಿನಿ ಕೂಡ ಆಗಿದೆ ಟಿ.ವಿ.

sunaath said...

ಚಿತ್ರಾ,
ತುಂಬಾ ಉಲ್ಲಾಸಕರ ಲೇಖನ.

ಸೀತಾರಾಮ. ಕೆ. / SITARAM.K said...

ಟೀವೀ ನಮ್ಮ ವಿಧ್ಯಾರ್ಥಿ ಜೀವನದಲ್ಲಿ ಅಪರೂಪದ ವಸ್ತುವಾಗಿತ್ತು. ಧಾರವಾಡದ ನಮ್ಮ ಪ್ರಹ್ಲಾದ ವಿಧ್ಯಾರ್ಥಿ ನಿಲಯದ ಎದುರು ಮನೆಯಲ್ಲಿ ರವಿವಾರಕ್ಕೊಮ್ಮೆ ರಾಮಾಯಣ ಮತ್ತು ಮಹಾಭಾರತ ನೋಡಲು ನಾವೆಲ್ಲಾ ಹೋಗುತ್ತಿದ್ದದ್ದು ನೆನಪಾಯಿತು. ಕ್ರಿಕೆಟ್ ನೋಡಲು ಬಹಳ ಕಷ್ಟವಿತ್ತು ರಾಮಾಯಣ ನೋಡಲು ಬಿಟ್ಟ೦ತೆ ಕ್ರಿಕೆಟ್ಗೆ ಬಿಡ್ತಿರಲಿಲ್ಲ. ಕಾಲಾಯ ತಸ್ಮೇ ನ್ನಮಃ.
ಒಳ್ಳೇ ಲೇಖನ. ಜೊತೆಗೆ ನವಿರು ಹಾಸ್ಯ. ಚೆ೦ದವಾಗಿ ಅರಳಿದೆ.

ಸುಮ said...

ಟಿವಿ ಧಾರಾವಾಹಿಗಳ ಬಗ್ಗೆ ನೀವು ಹೇಳುವುದು ಸರಿಯಾಗಿದೆ. ಎಲ್ಲಾ ಧಾರವಾಹಿಗಳ ಕಥೆಯೂ ಒಂದೇ. ಎರಡು ದಿನ ನೋಡಿದರೆ ತಲೆಕೆಟ್ಟಂತಾಗುತ್ತದೆ.
ಅದೇ .. ಟಿವಿ ಮೊದಲು ಬಂದಾಗ ಹೀಗಿರಲಿಲ್ಲ . ಡಿಡಿ ಮಾತ್ರ ಇತ್ತು. ಹೊಸದರಲ್ಲಿ ಅಗಸ ಎತ್ತಿ ಒಗೆದ ಎಂಬಂತೆ ಕಾಣೆಯಾದವರ ಬಗ್ಗೆ ಪ್ರಕಟಣೆಯಿಂದ ಹಿಡಿದು , ವಾರಕ್ಕೊಮ್ಮೆ ಬರುತ್ತಿದ್ದ ಯಾವುದೋ ಭಾಷೆಯ ಸಿನಮಾಗಳ ವರೆಗೆ ಎಲ್ಲವನ್ನೂ ನೋಡುತ್ತಿದ್ದೆವು .
ನಿಮ್ಮ ಅಬ್ಬೆಯಂತೆಯೆ ನನ್ನ ದೊಡ್ಡಜ್ಜಿಯ ಕಮೆಂಟುಗಳು ಮಜಾ ಇರುತ್ತಿತ್ತು.
ರ‍ಾಮಾಯಣ , ಮಹಾಭಾರತ ಪ್ರಸಾರವಾಗುತ್ತಿದ್ದಾಗ ಏನು ಸಂತೋಷದಿಂದ ನೋಡುತ್ತಿದ್ದೆವು!! ... ಅಬ್ಬ ... ಎಲ್ಲಾ ಕೆಲಸವನ್ನೂ ಹತ್ತರೊಳಗೆ ಮುಗಿಸಿ ಟಿವಿ ಮುಂದೆ ಕುಳಿತರೆ , ಊಟಕ್ಕೇ ಏಳುತ್ತಿದ್ದುದು.
ನಿಮ್ಮ ಲೇಖನ ಓದಿ ಒಮ್ಮೆ ಎಲ್ಲ ನೆನಪಾಯಿತು.

V.R.BHAT said...

ಟಿವಿ ಮಾಧ್ಯಮದಲ್ಲಿ ಪ್ರಸಾರವಾಗುವ ಅನೇಕ ಅಪ್ರಸ್ತುತ ಪ್ರಸ್ತುತಿ ಅಥವಾ ಬೇಡದಿರುವ ಸೀರಿಯಲ್ ಗಳಿಂದ ಅನೇಕರು ಹಾಳಾಗುತ್ತಾರೆ!

Guruprasad said...

ತುಂಬ ಚೆನ್ನಾಗಿ ಬರೆದಿದ್ದಿರ ಚಿತ್ರ,,
ನೀವು ಹೇಳಿರುವುದು ಸತ್ಯ,,, ನೂರೆಂಟು ಚಾನೆಲ್ಲು ಗಳಿಂದ ಎಲ್ಲರು ಹುಚ್ಚರ ತರ ಆಗ್ತಾ ಇದ್ದರೆ... ಕೆಲವೊಂದು ಸೀರಿಯಲ್ ಗಳಂತು,, ಅಬ್ಬ,,, ಎಷ್ಟು ಅಸಹ್ಯ ವಾಗಿ ಇರುತ್ತೆ.... ಹಾಗೆ breaking ನ್ಯೂಸ್ ಅಂತು ಇನ್ನು ವೊರ್ಸ್ಟ್....ಸಣ್ಣ ಪುಟ್ಟ ಸುದ್ದಿಯನ್ನೆಲ್ಲ ತೋರಿಸಿ,, breaking ನ್ಯೂಸ್ ಅಂತ ಹೇಳ್ತಾ "breaking ನ್ಯೂಸ್" ಗೆ ಅರ್ಥನೇ ಇಲ್ಲ ಅನ್ನೋ ಹಾಗೆ ಮಾಡಿದ್ದರೆ.... ಇದನ್ನು ಅದಸ್ಟು avoid ಮಾಡೋದೇ ಒಳ್ಳೇದು....
ಬರಹ ಚೆನ್ನಾಗಿ ಇದೆ....

ತೇಜಸ್ವಿನಿ ಹೆಗಡೆ said...

ಚಿತ್ರಕ್ಕ,

ಮಸ್ತಿದ್ದು ಟಿ.ವಿ.ಪುರಾಣ. ಅದ್ರಲ್ಲೂ ಶೇಖರ್ ಸುಮನ್.... ಮಾತುಗಳಂತೂ ನಕ್ಕೂ ನಕ್ಕೂ ಸುಸ್ತಾತು...:)

ಹಿಂದೆ "ಕಹಾನಿ ಘರ್ ಘರ್ ಕಿ" ಅನ್ನೋ ಏಕತಾ ಕಪೂರ್ ಸೀರಿಯಲ್ ಬರ್ತಿತು. ಭರ್ತಿ ೫ ವರ್ಷ ನಡೆಯಿತು ಅದು! ಅಲ್ಲಿಯ ಪಾತ್ರ ಚಿತ್ರಣಗಳೋ ದೇವರಿಗೇ ಪ್ರೀತಿ. ಡೈವೋಸ್ರ್ ಅಫೇರ್ ಮರುಮದುವೆ ಎಲ್ಲಾ ತುಂಬಾ ಸರಳವಾಗಿದ್ದವು ಅಲ್ಲಿ! ಒಮ್ಮೊಮ್ಮೆ ತುಂಬಾ ಬೇಸರವಾದಾಗ ಅವಳ ಸೀರಿಯಲ್ ಹಾಕಿ ಮನಃಪೂರ್ತಿ ನಕ್ಕಿದ್ದಿತ್ತು. ರಾಖಿ ಕಾ ಸ್ವಯಂವರ್ ಅಂತೂ ಫುಲ್ ಎಂಟರ್‌ಟೈನ್‌ಮೆಂಟ್ :) ಈಗ ರಾಹುಲ್ ನ ಮದುವೆ ಹತ್ತಿರ ಬರುತ್ತಿದೆ. ಬೇಜಾರಾದಾಗ ನೋಡು. ನಕ್ಕೂ ನಕ್ಕೂ ಮನಸ್ಸೆಲ್ಲಾ ಹಗುರಾಗುವುದು ಖಂಡಿತ! :)

shivu.k said...

ಚಿತ್ರ ಮೇಡಮ್,

ಲೇಖನವನ್ನು ಓದುತ್ತಾ ಸಕ್ಕತ್ ಖುಷಿಯಾಗುತ್ತಿತ್ತು. ನನ್ನ ಶ್ರೀಮತಿಗೂ ಕೆಲವು ಧಾರವಾಹಿಗಳಂದ್ರೆ ಪ್ರಾಣ. ನನ್ನ ಬಳಿ ಅವುಗಳ ಬಗ್ಗೆ ಚರ್ಚಿಸಲು ಬರುತ್ತಿದ್ದಳು. ನಾನು ಅದಕ್ಕೆ ಸಹಕರಿಸದಿದ್ದಾಗ ಸುಮ್ಮನಾಗಿದ್ದಾಳೆ. ನನಗೆ ಟಿ.ವಿ ಅಂದ್ರೆ ಅಷ್ಟಕಷ್ಟೆ. ಲೇಖನ ಬಾಲ್ಯದಲ್ಲಿ ಟಿ.ವಿಯನ್ನು ನೆನಪಿಸಿತು.

ಸಾಗರದಾಚೆಯ ಇಂಚರ said...

ಚಿತ್ರಾ,
ಮಸ್ತ ಬರದ್ದೆ,
ನನಗೆ ಅಬ್ಬೆದು ರಾಜೆವ ಗಾಂಧಿ ಭಕ್ತಿ ರಾಶಿ ಖುಷಿ ಅತು
ಇತ್ತೀಚಿಗೆ ಊರಿಗೆ ಹೋದ್ರೆ ಮೊದಲಿನ ಸಂಭಂಧಗಳು ಕಾಣ್ತಾ ಇಲ್ಲೇ
ಎಲ್ಲರೂ ಧಾರಾವಾಹಿ ಮಲ್ಲು ಅಜ
ಬೇಜಾರಾಗ್ತು, ಮಾತಾಡಲೇ ಯಾರಿಗೂ ಟೈಮ್ ಇಲ್ಲೇ
ಒಳ್ಳೆ ಬರದ್ದೆ

ಶಾಂತಲಾ ಭಂಡಿ (ಸನ್ನಿಧಿ) said...

ಚಿತ್ರಕ್ಕಾ...
ಒಬ್ಬರ ಗೋಳನ್ನು ಇನ್ನೊಬ್ಬರು ರಂಜಿಸುವ ಮಾನವನ ಅತೀ ಸಹಜ ಗುಣವೂ ಒಂದು ಗುಂಪಿನ ಯಶಸ್ಸಾಗಿ ಪರಿಣಮಿಸುತ್ತಿದೆ. ಧಾರಾವಾಹಿಗಳಂತೆಯೇ ಬದುಕು ಅನ್ನುವುದೂ ಕಷ್ಟ. ಬದುಕಿನ ಹಾಗೆಯೇ ಧಾರಾವಾಹಿ ಅನ್ನುವುದೂ ಕಷ್ಟ. ಪ್ರಷ್ನೆ ಹಳೆಯದೇ ಮತ್ತೆ ಮತ್ತೆ ಉದ್ಭವಿಸುತ್ತದೆ, ಕೋಳಿ ಮೊದಲೋ ಮೊಟ್ಟೆ ಮೊದಲೋ ಎಂಬುದು.
ಇನ್ನೊಬ್ಬರ ಬದುಕನ್ನು ಬಾಯೊಳಗಿಟ್ಟು ಮೆಲುಕುಹಾಕುವುದಕ್ಕಿಂತ ನಿಜವಲ್ಲದ ಈ ಧಾರಾವಾಹಿಗಳ ನಾಯಕಿರನ್ನು ಬಾಯಲ್ಲಿಟ್ಟುಕೊಂಡು ಅಗಿಯುತ್ತಾ ಸಂತೃಪ್ತವಾಗುತ್ತದಲ್ಲ ಒಂದಿಷ್ಟು ಮನಸ್ಸುಗಳು. ಮಾತಿಗಾಗಿ ಹಾತೊರೆಯುವ ಒಂದಿಷ್ಟು ನಾಲಿಗೆಗಳನ್ನು ಎಂಗೇಜ್ ಆಗಿಡುತ್ತವಲ್ಲ ಈ ಧಾರಾವಾಹಿಗಳು ಮತ್ತು ಮಾಧ್ಯಮಗಳು ಎಂಬ ಕೆಲ ಕಾರಣಕ್ಕಾದರೂ ಮಾಧ್ಯಮವನ್ನು ಒಪ್ಪಿಕೊಳ್ಳಬೇಕಷ್ಟೇ.

ಕ್ಲಿಷ್ಟ ವಿಚಾರವನ್ನು ಸರಳವಾಗಿ ಹೇಳಿದ ಪರಿ ಚೆಂದ. ಇಷ್ಟವಾಯ್ತು.

ಮನಮುಕ್ತಾ said...

ಚೊಲೋ ಇದ್ದು ..ಬರದಿದ್ದು...ಸೀರಿಯಲ್ಗ್ಳ ವಿಚಾರ ಅ೦ತು
ಅದ್ನ ತಯಾರ್ ಮಾಡ್ದವ್ಕೇ ಪ್ರೀತಿ..
ಬರಹಗಳು ಬರ್ತಾ ಇರ್ಲಿ..

ಸವಿಗನಸು said...

ನಿಮ್ಮ ಲೇಖನ ಓದಿ ನಾನು ಮೊದಲು ಟಿವಿ ನೋಡಿದ್ದು ನೆನಪಾಯಿತು....
ಧಾರಾವಾಹಿಗಳ ಬಗ್ಗೆ ಸರಿಯಾಗಿ ಹೇಳಿದ್ದೀರ....

ಚಿತ್ರಾ said...

ವಿಕಾಸ್,
ನೀ ಹೇಳೋದೂ ನಿಜ. ಟಿವಿ ನೋಡದೆ ಇದ್ರೆ ನಿಜಕ್ಕೂ ನೆಮ್ಮದಿನೆ . ಅದಕ್ಕೆ , ನಾನೂ ಇತ್ತೀಚೆ ಟಿವಿ ನೋಡೋದನ್ನ ಬಹಳವೇ ಕಮ್ಮಿ ಮಾಡಿದ್ದೇನೆ.

ಚಿತ್ರಾ said...

ಸುಧೇಶ್,
. ಟಿವಿಯಲ್ಲಿ ಒಳ್ಳೊಳ್ಳೆ ಕಾರ್ಯಕ್ರಮಗಳು ಬರೋದು ನಿಜ ಆದರೆ ಇತ್ತೀಚೆ ಅವುಗಳ ಸಂಖ್ಯೆ ಕಮ್ಮಿ ಆಗ್ತಾ ಇದೆ. ಹಾಗೇ , ಇರುವ ಒಳ್ಳೆಯ ಚಾನಲ್ ಗಳನ್ನು ನೋಡುವವರೂ ಸಹ ಕಮ್ಮಿಯಾಗಿದ್ದಾರೆ !
ಪ್ರತಿಭಾ ಶೋಧದ ಹೆಸರಿನಲ್ಲಿ ಪ್ರತಿಭೆಗೆ ಅಪಚಾರವೂ ಆಗುತ್ತಿದೆ. ಚಿಕ್ಕ ಚಿಕ್ಕ ಮಕ್ಕಳನ್ನು ಒಂಥರಾ ಮಾನಸಿಕವಾಗಿ ಶೋಷಿಸಲಾಗುತ್ತದೆ ಎನ್ನುವುದು ನನ್ನ ಅಭಿಪ್ರಾಯ ! ಹೀಗಾಗಿ ನಾನು ರಿಯಾಲಿಟೀ ಶೋಗಳನ್ನು ನೋಡುವುದನ್ನೇ ಬಿಟ್ಟು ಬಿಟ್ಟಿದ್ದೇನೆ .
ಮೆಚ್ಚುಗೆಗೆ ಧನ್ಯವಾದಗಳು !

ಚಿತ್ರಾ said...

ಗುರು,
ಹೌದು, ಊರಿಗೆ ಹೇಳಲ್ಲ , ಸಂಜೆ ಹೊತ್ತಿಗೆ ಸುಮಾರು ಯಾರ ಮನೆಗೆ ಹೋದರೂ ಇದೇ ಹಾಡು . ನಾವು ಹೆಚ್ಚು ಟಿವಿ ನೋಡದ್ದೆ ಇರದು ನಮ್ಮ ತಪ್ಪು ಕಾಣ್ತು ! ಇಲ್ಲದ್ದೆ ಹೋದ್ರೆ , ನಾವೂ ಅವರ ಜೊತೆಗೆ ಧಾರಾವಾಹಿ ನೋಡ್ತಾ , ಅದರ ಬಗ್ಗೆ ಚರ್ಚೆ ಮಾಡ್ತಾ ಕೂತ್ಗಳಲೇ ಆಗ್ತಿತ್ತು. ಮೊದಲಿನ ಆತ್ಮೀಯತೆ , ಸಂಬಂಧಗಳು ಕಮ್ಮಿ ಆಗ್ತಾ ಇದ್ದು. ಬೇಜಾರು

ಚಿತ್ರಾ said...

ಶಿವೂ,
ಮೆಚ್ಚುಗೆಗೆ ಧನ್ಯವಾದಗಳು. ಇತ್ತೀಚೆ ಹೆಚ್ಚಿನ ಮನೆಗಳಲ್ಲಿ , ಹೆಂಡತಿಯ ಜೊತೆ ಮಾತನಾಡುವ ಕಾರಣಕ್ಕಾಗಿಯಾದರೂ ಗಂಡಂದಿರು ಧಾರಾವಾಹಿಗಳನ್ನು ನೋಡಲಾರಂಭಿಸಿದ್ದಾರೆ ಎಂದು ಎಲ್ಲೋ ಓದಿದ್ದೆ . ತಮಾಷೆಯಾಗಿ ಬರೆಅದರೂ ಸಹ ಇದು ನಿಜವೇನೋ ಎನಿಸುತ್ತದೆ . ಯಾಕೆಂದ್ರೆ , ಗಂಡ ಮನೆಗೆ ಬರೋ ಹೊತ್ತಿಗೆ , ಹೆಂಡತಿ ಧಾರಾವಾಹಿ ನೋಡುತ್ತಿರುತ್ತಾಳೆ. ಮುಗಿದ ಮೇಲೂ ಸಹ ಕೆಲ ಹೊತ್ತು ಅದೇ ಮೂಡ ನಲ್ಲಿರೋದ್ರಿಂದ ,ಗಂಡ ಏನು ಮಾತನಾಡೋದು ಅಲ್ವ ? ಅದಕ್ಕೆ, ತಾವೂ ಸಹ ಅದೇ ಧಾರವಾಹಿಗಳನ್ನ ನೋಡಿದರೆ , ಆ ವಿಷಯವಾಗಿಯಾದರೂ ಸ್ವಲ್ಪ ಮಾತನಾಡುವ ಅವಕಾಶ ಸಿಕ್ಕುತ್ತದೆ ಎಂತಾ ಇರಬಹುದು ! ಹಾ ಹಾ ಹಾ .

ಚಿತ್ರಾ said...

ತೇಜೂ,
ಒಂದು ಕಾಲದಲ್ಲಿ , ನಾನೂ ಆ ಧಾರಾವಾಹಿ ನೋಡ್ತಿದ್ದಿ. ಕೆಲ ಸಮಯದ ನಂತರ ಬಿಟ್ಟುಬಿಟ್ಟಿ. ಅದಕ್ಕಿಂತ ಹೆಚ್ಚಾಗಿ " ಕ್ಯೋಂಕಿ ಸಾಸ್ ಭೀ ಕಭೀ ಬಹು ಥೀ " ೮ ವರ್ಷಕ್ಕೂ ಹೆಚ್ಚು ಕಾಲ ನಡೆದ ಹಾಗೂ ಕನಿಷ್ಠ ೪ ಸಲವಾದರೂ ಪೀಳಿಗೆ ಜಿಗಿತ ಮಾಡಿದ ಧಾರಾವಾಹಿ ಅತ್ಯಂತ ಜನಪ್ರಿಯವಾಗಿತ್ತು. ಅದರಲ್ಲಿನ " ಬಾ " ( ಅಜ್ಜಿ) ಪಾತ್ರ ನಮ್ಮ ಲಾಜಿಕ್ ಪ್ರಕಾರ ೧೫೦ ವರ್ಷವಾದರೂ ಬದುಕಿರ ಬೇಕು ! ಇನ್ನು ಮದುವೆ ವಯಸ್ಸಿನ ಮೊಮ್ಮಕ್ಕಳಿದ್ದರೂ ಇನ್ನೂ ಹೆಣ್ಣುಗಳು ಹಿಂದೆ ಬೀಳುತ್ತಿರುವ ' ಮಿಹಿರ್ ' ನನ್ನು ನೋಡಿ ಎಷ್ಟು ಗಂಡಸರು ಹೊಟ್ಟೆ ಉರಿಸಿಕೊಂಡರೋ ! ! ಅದೆಲ್ಲ ನೋಡಿ ತಲೆ ಕೆಟ್ಟಂತೆ ಆಗಿ ನಾನು ಒಂದು ಶುಭ ದಿನ ಈ ಧಾರಾವಾಹಿಗಳನ್ನು ನೋಡುವುದಿಲ್ಲ ಎಂದು ನಿರ್ಧಾರ ಮಾಡಿದ್ದಿ.

ಚಿತ್ರಾ said...

ಗುರು, ( guru's world )
ಹೌದು, ಬ್ರೇಕಿಂಗ್ ನ್ಯೂಸ್ ನೋಡ್ತಾ ಇದ್ರೆ , ವರದಿಗಾರನ ತಲೆಯನ್ನೇ ' ಬ್ರೇಕ್ ' ಮಾಡಿ ಬಿಡೋಣ ಅನ್ಸತ್ತೆ ಕೆಲವು ಸಲ ! ಆದರೆ ಅದರಿಂದಾಗಿ ಮತ್ತೊಂದು ' ಬ್ರೇಕಿಂಗ್ ನ್ಯೂಸ್ " ಹುಟ್ಟಿಕೊಳ್ಳತ್ತೆ ಅಂತ ಸುಮ್ಮನೆ ಇರಬೇಕು ! ಲೇಖನ ಇಷ್ಟ ಪಟ್ಟಿದ್ದಕ್ಕೆ , ತುಂಬಾ ಥ್ಯಾಂಕ್ಸ್ !

ಚಿತ್ರಾ said...

ಕಾಕಾ,
ಆಶೀರ್ವಾದ ಹೀಗೆಯೇ ಇರಲಿ

ಚಿತ್ರಾ said...

ವಿ ಆರ್ ಭಟ್ ರೇ,
ಬ್ಲಾಗಿಗೆ ಸ್ವಾಗತ . ಟಿವಿಯಲ್ಲಿ ಈಗೀಗ ಪ್ರಸಾರವಾಗುತ್ತಿರುವ ಕೆಲ ಕಾರ್ಯಕ್ರಮಗಳನ್ನು ನೋಡುವಾಗ ನಿಮ್ಮ ಅನಿಸಿಕೆ ಕೆಲ ಮಟ್ಟಿಗೆ ಸರಿ ಎನಿಸುತ್ತದೆ .
ಹೀಗೇ ಬಂದು ಪ್ರೋತ್ಸಾಹಿಸುತ್ತಿರಿ

ಚಿತ್ರಾ said...

ಸೀತಾರಾಮ್,
ರಾಮಾಯಣ , ಮಹಾಭಾರತಗಳಂತೂ ಜನರನ್ನು ಓಂದು ತರಾ ಮೋಡಿ ಮಾಡಿದ್ದವು . ತಮಾಷೆ ಎಂದರೆ ನಿಯಮಿತವಾಗಿ ಮಹಾಭಾರತ ನೋಡದಿದ್ದವರೂ ಸಹ ' ದ್ರೌಪದಿ ವಸ್ತ್ರಾಪಹರಣ' ಪ್ರಸಾರವಾಗುವ ದಿನ ಅತಿ ಕುತೂಹಲದಿಂದ ಟಿವಿ ಮುಂದೆ ಕುಳಿತಿದ್ದರು ! ರಸ್ತೆಗಳಲ್ಲಿ ಸ್ವಘೋಷಿತ " ಕರ್ಫ್ಯೂ ' ಇತ್ತು . ನೆನಪಾದರೆ ಈಗಲೂ ನಗು ಬರುತ್ತದೆ .

ಚಿತ್ರಾ said...

ಸುಮಾ,
ನಾವೂ ಸಹ ಹಾಗೇ ಮಾಡುತ್ತಿದ್ದೆವು . ಯಾವ ಭಾಷೆಯಾದರೂ ನಮಗೆ ಅಂಥ ವ್ಯತ್ಯಾಸವಾಗುತ್ತಿರಲಿಲ್ಲ . ಆಗಲೇ ಎಲ್ಲಾ ಭಾಷೆಗಳನ್ನೂ ನಮಗೆ ಬೇಕಾದಷ್ಟು ಅರ್ಥೈಸಿ ಕೊಂಡುಬಿಡುತ್ತಿದ್ದೆವು . ಒಂದು ಒಳ್ಳೆಯದೆಂದರೆ , ಟಿವಿಯಿಂದಾಗಿ ಈಗೀಗ ದೇಶದ ಹೆಚ್ಚಿನ ಭಾಗಗಳಲ್ಲಿ , ಜನರಿಗೆ ಹಿಂದಿ ಅರ್ಥವಾಗುವಂತಾಗಿದೆ.
ಇದು ಬಹಳ ಒಳ್ಳೆಯ ಸುದ್ದಿ.

ಚಿತ್ರಾ said...

ಶಾಂತಲಾ,
ಬಹುದಿನಗಳ ನಂತರ ಬಂದೆ . ಖುಷಿಯಾತು
ನೀ ಹೇಳಿದ ಹಾಗೇ ಧಾರಾವಾಹಿಯಂತೆ ಬದುಕೋ ಅಥವಾ ಬದುಕಿನಂತೆ ಧಾರಾವಾಹಿಯೋ .. ಹೇಳುವುದು ನಿಜಕ್ಕೂ ಕಷ್ಟ. ಆದರೆ ಇಂದು ಧಾರಾವಾಹಿಗೂ , ನಿಜ ಜೀವನಕ್ಕೂ ಇರುವ ವ್ಯತ್ಯಾಸವನ್ನು ನೆನಪಿಟ್ಟುಕೊಳ್ಳುವುದು ಅಗತ್ಯವಾಗಿದೆ . ಜನರನ್ನು ತಮ್ಮತ್ತ ಸೆಳೆಯುವ ಭರದಲ್ಲಿ ' ಮಾಧ್ಯಮ' ಗಳು ತಮ್ಮ ಸಾಮಾಜಿಕ ಜವಾಬ್ದಾರಿಯನ್ನು ಮರೆಯಬಾರದು ಅಷ್ಟೇ ! ಅತ್ಯಂತ ಪ್ರಭಾವಶಾಲಿ ಮಾಧ್ಯಮವಾದ ಟಿವಿ ತನ್ನ ಗೌರವವನ್ನು ಕಾಪಾಡಿಕೊಳ್ಳಬೇಕು ಎನಿಸುತ್ತದೆ .

ಚಿತ್ರಾ said...

ಮನಮುಕ್ತಾ ,
ಲೇಖನ ಮೆಚ್ಚಿದ್ದಕ್ಕೆ ಧನ್ಯವಾದಗಳು. ಹೀಗೇ ಬರುತ್ತಿರಿ .

ಚಿತ್ರಾ said...

ಸವಿಗನಸು ,
ಧನ್ಯವಾದಗಳು.

ಜಲನಯನ said...

ಚಿತ್ರಾ, Nice article.
ನಿಮ್ಮ ಲೇಖನ ಓದಿ ನನಗೆ ನನ್ನ ಬಾಲ್ಯ ನೆನಪಾಗುತ್ತೆ..ಟಿ.ವಿ. ಮೊದಲಿಗೆ ಹಳ್ಲಿಗೆ ಬಂದ್ದದ್ದು ಹಾಗೇ ನನ್ನಜ್ಜ ತಂದಿದ್ದ ರೇಡಿಯೋ ನೋಡೊಕೆ ಹಳ್ಳಿಯ ಚಾವಡಿಯ ಹತ್ರ ಚಪ್ಪರ ಹಾಕ್ಸಿ..ಒಮ್ದು ವೇದಿಕೆಮಾಡಿ ಅದರ ಮೇಲೆ ರೇಡಿಯೋವನ್ನು ಇಟ್ಟು ಎಲ್ಲ ಕೇಳಿದ್ರಂತೆ..ಅದನ್ನ ಹೇಳ್ತಾ ನನ್ನ ಸೋದರ ಮಾವ ಟಿ.ವಿ.ಪ್ರದರ್ಶನ ಏರ್ಪಡಿಸಿದ್ದು...
ಈಗ ಬರುತ್ತಿರುವ ಧಾರಾವಾಹಿಗಳಲ್ಲಿ ಯಾವುದೇ ಸಂದೇಶವನ್ನೂ ನಾನು ಕಾಣುತ್ತಿಲ್ಲ ಬದಲಿಗೆ ಎಲ್ಲದರಲ್ಲೂ ಹಗೆ, ಕುಹಕ, ಮೋಸ ಮತ್ತು ಕುತಂತ್ರಗಳನ್ನು ಹೇಗೆ ಮಾಡಬಹುದು ಎನ್ನುವುದು ತೋರಿಸಿದಂತಿವೆ..ನನಗೆ ಪಾಡುರಂಗ ವಿಠಲ ಅಥವಾ ಪಾರ್ವತಿ ಪರ್ಮೇಶ್ವರ ರಮ್ಜನೆ ನೀಡುವಷ್ಟು...ಬೇರ್ಯಾವುದೇ ಧಾರಾವಾಹಿ ನೀಡಿಲ್ಲ...

Ittigecement said...

ಚಿತ್ರಾ...

ಪ್ರಗತಿ, ತಂತ್ರಾಜ್ಞಾನದ ಸಂಗಡ..
ಕಾಲದ ಸಂಗಡ ನಾವಿರ ಬೇಕು...

ನಾನು ಹೈಸ್ಕೂಲ್ ಓದುತ್ತಿರುವಾಗ
"ಪ್ರಕಾಶ ಪತ್ರಿಕೆಗಳನ್ನು..
ಮಾಸ ಪತ್ರಿಕೆಗಳನ್ನು ಓದುತ್ತಾನೆ...
ಅದರಲ್ಲಿ ಬರುವ ಧಾರವಾಹಿ ಓದುತ್ತಾನೆ..
ಅದರಲ್ಲಿ ವಯಸ್ಸಿಗೆ ಮೀರಿದ ವಿಷಯಗಳಿರುತ್ತವೆ..
ಎನ್ನುವಂಥಹ ಕಲ್ಪನೆ...
ವಾದಗಳಿದ್ದವು...
ಅಂಥಹದವುಗಳನ್ನು ಓದುವದು ತಪ್ಪು..
ಹಾಳಾಗಿ ಹೋಗುತ್ತಾನೆ ಈತ " ಅಂತ ನನಗೆ ಬಹಳ ಉಪದೇಶ ಸಿಕ್ಕಿದ್ದವು..

ಈಗ ನನ್ನ ಮಗನಿಗೆ ಓದುವ ಗೀಳು ಇಲ್ಲವಲ್ಲ ಅಂತ ನನಗೆ.. ಬೇಸರವಿದೆ..!
ಕಾಲದ ಸಂಗಡ ನಾವಿರ ಬೇಕು..

ನೀವು ಹೇಳಿದ ಹಾಗೆ..
ಕೇವಲ ಸಿನೇಮಾ ಪ್ರೇರಿತ ಕಾರ್ಯಕ್ರಮಗಳು...
ಹಲವು ಸಂಬಂಧಗಳ ಧಾರವಾಹಿಗಳು..
ಇದರ ಬಗೆಗೆ ಚರ್ಚೆಗಳು...
ನಮ್ಮ.. ನಮ್ಮ ಪೀಳಿಗೆಯವರ ದಾರಿ ತಪ್ಪಿಸುತ್ತಿವೆಯಾ...?

ಇದಕ್ಕೆ ಕಾಲವೇ.. ಉತ್ತರ ಕೊಡ ಬಲ್ಲದು...

ನಮ್ಮಂಥಹ ಮನಸ್ಸಿಗೆ ಒಪ್ಪಿಗೆ ಇಲ್ಲದಿದ್ದರೂ...
ಸುಮ್ಮನಿರ ಬೇಕಾಗುತ್ತದೆ..

ಚಂದದ ಲೇಖನ... ಅಭಿನಂದನೆಗಳು...!

ಮನಸಿನಮನೆಯವನು said...

'ಚಿತ್ರಾ ' ಅವ್ರೆ..,

ಎಲ್ಲೂ ಬೇಸರವೆನಿಸದಂತೆ ಪೂರ್ಣ ಓದಲು ಕಾತುರವಾಗುವಂತೆ ತುಂಬಾ ಸೊಗಸಾಗಿದೆ...

ನನ್ನ 'ಮನಸಿನಮನೆ'ಗೆ ಬನ್ನಿ:http//manasinamane.blogspot.com