February 13, 2010

ಸ್ನೇಹಾನಾ? ಪ್ರೀತೀನಾ?


ನನ್ನನ್ನ ಯಾಕೆ ಇಷ್ಟು ಪ್ರೀತಿಸ್ತೀಯ ಅಂತ ಕೇಳಬೇಡ ! ಆ ಪ್ರಶ್ನೆಗೆ ಉತ್ತರಾನ ನಾನೂ ಹುಡುಕ್ತಾ ಇದೀನಿ.ಕೆಲವು ಪ್ರಶ್ನೆಗಳಿಗೆ ಉತ್ತರ ಸಿಗೋದು ಕಷ್ಟ ಅನಿಸತ್ತೆ

ಈ ಪ್ರೀತಿ ನಿನ್ನನ್ನ ಮೊದಲನೇ ಸಲ ನೋಡಿದ ತಕ್ಷಣ ಹುಟ್ಟಿದ್ದಂತೂ ಅಲ್ಲ ! ಸಿನಿಮಾ ನಾಯಕಿಗೆ ಆಗೋ ತರ ನೋಡಿದ ಕೂಡಲೇ , ಎದೆ ಬಡಿತ ಹೆಚ್ಚಾಗೊದೋ, ಕಣ್ಣಲ್ಲಿ ಕನಸು ತುಂಬಿಕೊಳ್ಳುವುದೋ , ಜನುಮ ಜನುಮಕ್ಕೂ ನೀನು ನನ್ನವನು ಎಂದು ಅನಿಸುವುದೋ .. ಹಾಗೆಲ್ಲ ಏನೂ ಆಗಲಿಲ್ಲ. ನವಿರಾದ ಭಾವನೆಗಳೂ ಹುಟ್ಟಿರಲಿಲ್ಲ . ಆದರೆ , ಒಂಥರಾ ಆತ್ಮೀಯ ಭಾವ ಮೂಡಿದ್ದು ನಿಜ . ನೀನು ಹೆಚ್ಚು ಮಾತಿಲ್ಲದ, ಗಂಭೀರ ಸ್ವಭಾವದ ಹುಡುಗ ಅನಿಸಿತ್ತು.

ನಿನಗಿಂತ ಕೆಲದಿನಗಳ ಮೊದಲು ಟೀಮ್ ಗೆ ಸೇರಿದವಳು ನಾನು. ಜೊತೆಯಲ್ಲಿ ಕೆಲಸ ಮಾಡುತ್ತಾ ಕ್ರಮೇಣ ಪರಿಚಯ ಸ್ನೇಹವಾಗಿದ್ದು. ನಿನ್ನೊಡನೆ ಮನ ಬಿಚ್ಚಿ ಮಾತನಾಡುವಷ್ಟು ಆತ್ಮೀಯತೆ ಬೆಳೆದಿದ್ದು , ನಮ್ಮಿಬ್ಬರ ಹಿನ್ನೆಲೆ ಒಂದೇ ರೀತಿ ಇದ್ದಿದ್ದರಿಂದ ಇರಬೇಕು. ಹಳ್ಳಿಯ , ಮಧ್ಯಮ ವರ್ಗದ ಕುಟುಂಬದಲ್ಲಿ ಹುಟ್ಟಿ , ಭವಿಷ್ಯದ ಬಗ್ಗೆ ಕನಸು ಕಟ್ಟಿಕೊಂಡು , ನನಸಾಗಿಸುವ ಹಠದಿಂದ ಓದಿ ಈ ಮಹಾನಗರಿಯಲ್ಲಿ ಕೆಲಸಕ್ಕಾಗಿ ಬಂದವರು ನಾವಿಬ್ಬರೂ. ಇನ್ನೂ ಪಟ್ಟಣದ ವೇಗದ ಬದುಕಿಗೆ ಹೊಂದಿಕೊಳ್ಳುವುದರಲ್ಲೇ ಇದ್ದೆವು . ಮನದ ಮೂಲೆಯಲ್ಲೆಲ್ಲೋ, ಹಳ್ಳಿಯಿಂದ ಬಂದ ಬಗ್ಗೆ, ಅಷ್ಟೇನೂ ಶ್ರೀಮಂತವಲ್ಲದ ಕುಟುಂಬದ ಬಗ್ಗೆ , ಸಲೀಸಾಗಿ ಇಂಗ್ಲಿಷ್ ಮಾತನಾಡಲು ಬಾರದೆ ತಡವರಿಸುವ ಬಗ್ಗೆ ಕೀಳರಿಮೆ ಇತ್ತೇ? ಬಹುಶಃ ಇದೇ ನಮ್ಮಿಬ್ಬರನ್ನು ಹತ್ತಿರ ತಂದಿರ ಬೇಕು. ಬಾಲ್ಯದ ನೆನಪುಗಳನ್ನು, ಮನೆಯ ಪರಿಸ್ಥಿತಿಯನ್ನು , ಅಡಿಕೆಗೆ ರೇಟ್ ಇಳಿದು ಪರದಾಡುತ್ತಿರುವ ಅಪ್ಪನ ಬಗ್ಗೆ , ಈ ಸಲ ಅಕ್ಕನ ಮದುವೆ ಮಾಡಿಯೇ ಬಿಡಬೇಕು ಎಂದು ಕನಸು ಕಾಣುತ್ತಿರುವ ಅಮ್ಮನ ಬಗ್ಗೆ ಮಾತುಗಳನ್ನು ಹಂಚಿಕೊಳ್ಳುತ್ತಾ , ಮನಸನ್ನೂ ಯಾವಾಗ ಹಂಚಿ ಕೊಂಡೆವೋ ನಮಗೇ ತಿಳಿಯಲಿಲ್ಲ .

ನೀ ಬಾರದ ದಿನ ನನ್ನ ಮನದಲ್ಲಿ ಗೆಲುವಿರುತ್ತಿರಲಿಲ್ಲ . ಚಿಕ್ಕ ಪುಟ್ಟದ್ದಕ್ಕೂ ರೇಗುತ್ತಿದ್ದೆ ಅಥವಾ ಅಪ್ ಸೆಟ್ ಆಗಿಬಿಡುತ್ತಿದ್ದೆ. ನಿಂಗೆ ಲೇಟ್ ಆದ ದಿನ , ಎಷ್ಟೊತ್ತಿಗೆ ಬರ್ತೀಯ ಅಂತ ಚದ ಪಡಿಸುತ್ತಿದ್ದೆ. ಇದೆಲ್ಲ ಪ್ರೀತಿಯ ಲಕ್ಷಣಗಳಿರಬಹುದು ಅಂತ ಆಗ ಹೊಳೆಯಲೇ ಇಲ್ಲ ನೋಡು ! ಗುಂಪಿಗಿಡೀ ತಿಳಿದಿದ್ದ ವಿಷಯ ನಮಗೇ ತಿಳಿದಿರಲಿಲ್ಲ ! ಆ ವಿನಯಾ , ನಿನ್ನ ಬಗ್ಗೆ ಏನೇನೋ ಹೇಳುತ್ತಾ ನನ್ನನ್ನು ರೇಗಿಸಿದರೆ ," ನಿಮಗೆಲ್ಲ ಒಬ್ಬ ಹುಡುಗ -ಹುಡುಗಿ ಮಾತನಾಡಿ ಬಿಟ್ಟರೆ ಅದು ಪ್ರೀತೀನೆ ಅಂತ ಹೆಸರು ಹಚ್ಚಿ ಬಿಡ್ತೀರಾ ಕಣೆ " ಅಂತ ಅವಳಿಗೆ ಬಯ್ದಿದ್ದೆ. ಬಾಯಿ ವಾರೆಯಾಗಿಸಿ ನಗುತ್ತ ಹೋದ ಅವಳ ನಗುವಿನ ಅರ್ಥ ಗೊತ್ತಾಗಿರಲೇ ಇಲ್ಲ .

ಸಾಧಾರಣವಾಗಿ ಎಲ್ಲರಂತೆ ಕಾಡು ಹರಟೆ ಹೊಡೆಯದೆ , ನಿನ್ನ ಪಾಡಿಗೆ ಇರುತ್ತಿದ್ದ ನೀನು ಆಫೀಸ್ ಮುಗಿದ ನಂತರ ಎಷ್ಟೋ ಸಲ ' ಕಾಫೀ ಡೇ ಯಲ್ಲಿ ನನ್ನೊಡನೆ ಗಂಟೆಗಟ್ಟಲೆ ಮಾತಾಡುತ್ತ ಕುಳಿತುಕೊಳ್ಳುತ್ತಿದ್ದೆ ಎಂದರೆ ಯಾರೂ ನಂಬಲಿಕ್ಕಿಲ್ಲ . ಹಾಸ್ಟೆಲ್ ನಲ್ಲಿದ್ದ ನಾನು , ಗೆಳೆಯನ ಜೊತೆ ರೂಮು ಮಾಡಿಕೊಂಡಿದ್ದ ನೀನು ಅದೆಷ್ಟೋ ವೀಕೆಂಡ್ ಗಳಲ್ಲಿ ಜೊತೆಯಾಗಿ ಹೋಟೆಲ್ ಗೋ ಸಿನಿಮಾಕ್ಕೋ ಹೋಗಿದ್ದೆವು ಆದರೆ ಅದು ಕೇವಲ ಸ್ನೇಹಿತರಾಗಿ ಮಾತ್ರವೇ ಅನ್ನೋದನ್ನು ಯಾರೂ ನಂಬ್ತಾ ಇರಲಿಲ್ಲ .ಮನಸಿಗೆ ತುಂಬಾ ಬೇಜಾರಾದಾಗ ನಿನ್ನ ಹೆಗಲ ಮೇಲೆ ತಲೆಯಿಟ್ಟು ಅಳಲು , ಸಿಟ್ಟು ಬಂದರೆ , ನಿನ್ನ ಕಿವಿ ಹಿಂಡಲು ನನಗೆ ಎಂದೂ ಸಂಕೊಚವೆನಿಸಲೇ ಇಲ್ಲ . ನನ್ನ ಮಟ್ಟಿಗೆ ನೀನೊಬ್ಬ ಅತೀ ಹತ್ತಿರದ ಸ್ನೇಹಿತನಾಗಿದ್ದೆ. ನನ್ನ ಖುಷಿ, ಬೇಸರ , ಸಿಟ್ಟು , ದುಃಖ ಎಲ್ಲವನ್ನೂ ಮುಕ್ತವಾಗಿ ಹಂಚಿಕೊಳ್ಳಲು ಸಾಧ್ಯವಾಗಿದ್ದು ನಿನ್ನ ಬಳಿ ಮಾತ್ರವೇ .ನೀನೂ ಸಹ ಹಾಗೇ ಇದ್ದಿದ್ದು ಅಲ್ಲವೇ ? ನಿನ್ನ ಬಾಲ್ಯ ಸ್ನೇಹಿತನೊಬ್ಬ ಆಕ್ಸಿಡೆಂಟ್ ನಲ್ಲಿ ಸತ್ತಾಗ ನನ್ನ ಮಡಿಲಲ್ಲಿ ಮುಖವಿಟ್ಟು ಬಿಕ್ಕಿ ಬಿಕ್ಕಿ ಅಳುತ್ತಿದ್ದ ನಿನ್ನನ್ನು ನೋಡಿದ ಕ್ಷಣ ನನ್ನೆದೆ ಕರಗಿ ಹೋಗಿತ್ತು. ಪುಟ್ಟ ಮಗುವನ್ನು ಸಮಾಧಾನಿಸುವ ತಾಯಿಯಾಗಿದ್ದೆ ನಾನು ಆಗ . ಆ ಎಲ್ಲ ಸ್ಪರ್ಶಗಳಲ್ಲಿ , ಅತ್ಯಂತ ಸಹಜ ಆತ್ಮೀಯತೆ ಇತ್ತೇ ಹೊರತು , ದೈಹಿಕ ಬಯಕೆ , ಆಕರ್ಷಣೆ ಇರಲಿಲ್ಲ ಅಂದರೆ ಆಶ್ಚರ್ಯ ಅಲ್ಲವಾ? .
ಯಾವ ಮುಜುಗರ ,ಭಯ ಇಲ್ಲದೆ ಮಳೆಗಾಲದ ಸಂಜೆಯಲ್ಲಿ ನಿನ್ನೊಡನೆ ಹೆಜ್ಜೆ ಹಾಕುತ್ತಿದ್ದೆ. ಅಂಥ ಯಾವುದೋ ಸಂಜೆಗಳಲ್ಲಿ ಪ್ರೀತಿ ಹುಟ್ಟಿತ್ತಾ? ಗೊತ್ತಿಲ್ಲ !

ನನಗೆ ನನ್ನ ಮನಸ್ಸಿನಲ್ಲಿ ಮೂಡುತ್ತಿದ್ದ ಭಾವನೆಯ ಅರಿವು ಸ್ವಲ್ಪ ಸ್ವಲ್ಪವಾಗಿ ಆಗಿದ್ದು ಆವತ್ತೊಂದು ದಿನ ನಾವೆಲ್ಲಾ ಕ್ಯಾಂಟೀನ್ ನಲ್ಲಿ ಹರಟೆ ಹೊಡೀತಾ ಕೂತಿದ್ದೆವಲ್ಲ ? ಗೋಪಿ ಟೀಮ್ ಜೊತೆ ? ಆಗ. ಗೋಪಿ ಟೀಮ್ ಗೆ ಹೊಸದಾಗಿ ಸೇರಿದ್ದ ಪ್ರಿಯಾ . ನೆನಪಿದೆ ತಾನೇ ನಿಂಗೆ? ಪದೇ ಪದೇ ನೀನು ಅವಳ ಕಡೆ ನೋಡ್ತಾ ಇರೋದನ್ನ ನೋಡಿ ನನಗೇನೋ ಕಸಿವಿಸಿಯಾಗ್ತಾ ಇತ್ತು. ನಿನ್ನ ಮೇಲೆ ಸಿಟ್ಟು ಬರ್ತಾ ಇತ್ತು. ಮರುದಿನ ಸಂಜೆ ಕಾಫೀ ಕುಡೀವಾಗ ನಿನ್ನ ಕೇಳಿದ್ದೆ ಸ್ವಲ್ಪ ವ್ಯಂಗ್ಯವಾಗಿ " ಏನು ? ನಿನ್ನೆ ಕಣ್ಣೆಲ್ಲ ಪ್ರಿಯಾ ಕಡೆನೆ ಇತ್ತು ? " " ಅವಳ ಕಣ್ಣು ತುಂಬಾ ಚೆನಾಗಿದೆ ಕಣೆ " ನೀನು ಹೇಳಿದರೆ ನಂಗೆ ಹೊಟ್ಟೆ ಲಿ ತಳಮಳ ಆಗಿತ್ತು. " ಹಂ .. ನಿಂಗೆ ನನ್ನ ಬಿಟ್ಟು ಎಲ್ಲರೂ ಚೆಂದಾನೆ ಕಾಣ್ತಾರೆ . " ಎಂದು ಥಟ್ಟೆಂದು ಹೇಳಿಬಿಟ್ಟೆ . ಆಮೇಲೆ ಅದ್ಯಾಕೆ ನಾನು ಹಾಗೆ ಹೇಳಿದ್ದು ಅಂತ ಮುಜುಗರ ಆಗಿತ್ತು ನಂಗೆ . ನನ್ನ ಮುಖ ನೋಡಿ ನಿನ್ನ ತುಟಿಯ ಮೇಲೆ ಮೂಡಿದ ತುಂಟ ನಗು ವಿಗೆ .. ನಿನ್ನ ಕಿವಿ ನ ಕಿತ್ತೇ ಹಾಕಿ ಬಿಡಬೇಕು ಅನಿಸಿತ್ತು .

ಅಂದು ಹಾಸ್ಟೆಲ್ ಗೆ ಹೋದ ಮೇಲೆ ನನ್ನ ತಲೇಲಿ ಹುಳು ಕೊರೆಯೋಕೆ ಶುರುವಾಗಿದ್ದು . ನಮ್ಮಿಬ್ಬರ ನಡುವೆ ಏನಿದೆ ಅನ್ನೋ ಪ್ರಶ್ನೆ .. ಅದು ಕೇವಲ ಸ್ನೇಹವಲ್ಲ ಅನ್ನೋ ಸಂಶಯ ! ಇದೇ ಪ್ರೀತಿ ನಾ ಅನ್ನೋ ಅನುಮಾನ ... ನಾನು ಹೀಗೆಲ್ಲ ಯೋಚನೆ ಮಾಡೋದು ಗೊತ್ತಾದರೆ ನೀನು ಏನಂದ್ಕೊಬಹುದು ಅನ್ನೋ ಕಳವಳ , ನಿನ್ನ ಮನಸಲ್ಲೂ ನನ್ನ ಬಗ್ಗೆ ಹೀಗೇ ಭಾವನೆಗಳಿರಬಹುದೇ ಅನ್ನೋ ಕುತೂಹಲ .. ಒಂದು ಸಲ ನಿನ್ನ ಹತ್ರಾನೆ ಕೇಳಿ ಕನ್ ಫರ್ಮ್ ಮಾಡ್ಕೊಂಡ್ರೆ ಹೇಗೆ ಅನ್ನೋ ಯೋಚನೆ .. ಒಂದೆರಡಾ? ರಾತ್ರಿಯಿಡೀ ನಿದ್ರೆ ಇಲ್ಲ ! ಬೆಳಗಾಗುವಾಗ ತಡೆಯಲಾರದಷ್ಟು ತಲೆ ನೋವು . ವಿನಯಾಗೆ ಹೇಳಿದೆ ನಾನು ಬರಲ್ಲ ಹುಷಾರಿಲ್ಲ ಅಂತ.ಬೇಕೂಂತಲೇ ನಿಂಗೆ ಹೇಳಲಿಲ್ಲ ! ನಾ ಬಾರದ ದಿನ ನೀನೂ ನನ್ನ ದಾರಿ ಕಾಯ್ತೀಯಾ ಅಂತ ನೋಡಬೇಕು ಅನ್ನೋ ಕೆಟ್ಟ ಕುತೂಹಲ ಬಂದುಬಿಟ್ಟಿತ್ತು ನಂಗೆ .


ಮಧ್ಯಾಹ್ನ ಯಾರೋ ನಿನ್ನ ಕೇಳ್ಕೊಂಡು ಬಂದಿದ್ದಾರೆ ಅಂತ ಪಕ್ಕದ ರೂಮಿನ ಕೀರ್ತಿ ಬಂದು ಹೇಳಿದಾಗ ,ಅದು ನೀನಿರಬಹುದು ಅಂತ ಸಣ್ಣ ಅನುಮಾನವೂ ಬಂದಿರಲಿಲ್ಲ ! ಯಾರಿರಬಹುದು ಅಂತಾ ನೋಡಿದರೆ visitor's Room ನಲ್ಲಿ ನೀನು ! ನಮ್ಮ ಪರಿಚಯವಾದ ಒಂದೂವರೆ ವರ್ಷದಲ್ಲಿ ಮೊದಲ ಬಾರಿಗೆ ನೀನು ಈಗ ನನ್ನ ಹಾಸ್ಟೆಲ್ ಗೆ ಬಂದಿದ್ದೆ ! ' ಅರೆ , ನೀನಾ ಇಲ್ಲಿ ? " ಎಂದು ಉದ್ಗರಿಸಿದ ನನ್ನನ್ನು ' ಏನಾಯ್ತು ನಿಂಗೆ ಇದ್ದಕ್ಕಿದ್ದ ಹಾಗೆ? ಹುಷಾರಿಲ್ಲ ಅಂದ್ರೆ ನಂಗೆ ಒಂದು ಮಾತು ಹೇಳೋಕೆ ಆಗ್ಲಿಲ್ವಾ ನಿಂಗೆ ? ' ಅಂತ ಸೀರಿಯಸ್ ಆಗಿ ಕೇಳಿದ್ದು ನೀನು . ಏನು ಹೇಳಬೇಕೂಂತ ನಂಗೆ ಗೊತ್ತೇ ಆಗಿರಲಿಲ್ಲ. ಮತ್ತೆ ನೀನೆ ಮಾತಾಡಿದ್ದು. " ಈಗ ಪರವಾಗಿಲ್ಲ ಅಂದ್ರೆ ನಂ ಜೊತೆ ಬಾ ಕಾಫೀ ಕುಡೀತ ಮಾತಾಡೋಣ "

ಕಾಫೀ ಡೇ ಯಲ್ಲಿ ಮತ್ತೆ ನಿನ್ನ ಪ್ರಶ್ನೆ " ಈಗ ಹೇಳು ಏನಾಯ್ತು ಅಂತ "
" ಆಲ್ಲ ಕಣೋ ಅದ್ಯಾಕೆ ಅಷ್ಟು ಸೀರಿಯಸ್ ಆಗ್ತಿದೀಯ? ಯಾಕೋ ರಾತ್ರಿ ನಿದ್ರೆ ಸರಿಯಾಗಿಲ್ಲ , ಬೆಳಿಗ್ಗೆ ತುಂಬಾ ತಲೆ ನೋವಿತ್ತು ಅದಕ್ಕೆ ಬಂದಿಲ್ಲ ಅಷ್ಟೇ "
" ನನಗ್ಯಾಕೆ ಹೇಳಲಿಲ್ಲ ? "
" ನಿಂಗೆ ಹೇಳಿದ್ದರೆ ನೀನೇನು ಮಾಡ್ತಿದ್ದೆ ? ಬಂದು ತಲೆ ಒತ್ತುತಾ ಇದ್ಯಾ? "
" ಮತ್ತೆ, ಈಗ್ಯಾಕೆ ಬಂದಿರೋದು ಅಂದ್ಕೊಂಡೆ? " ನನ್ನ ತುಂಟ ಪ್ರಶ್ನೆಗೆ ನಿನ್ನ ತುಂಟ ಉತ್ತರ !
" ಹ್ಮ್ಮ್.. ಹೋಗು ,ಪ್ರಿಯಾಗೆ ತಲೆ ನೋಯ್ತಿದ್ಯಾ ಕೇಳು ಹೋಗು .. " ಮತ್ತೇಕೆ ಬಂದಳೋ ಪ್ರಿಯಾ ನನ್ನ ಮಾತಲ್ಲಿ !
ನಕ್ಕು ಬಿಟ್ಟೆ ನೀನು .. " ಓಹೋ , ನಿನಗಿನ್ನೂ ಪ್ರಿಯಾ ಬಗ್ಗೆನೇ ಯೋಚನೆ ನಾ? ಯಾಕೆ ಸುಮ್ನೆ ಹೊಟ್ಟೆ ಉರಿಸ್ಕೊತೀಯಾ? ಹಾ ಹಾ ಹಾ .. ನಾನಾಗಲೇ ಅವಳನ್ನ ಪಕ್ಕಕ್ಕೆ ಇಟ್ಟಾಯ್ತು . ಏನೇ ಹೇಳು ಹೀಗೆ ಮುಖ ಊದಿಸಿ ಕೊಂಡರೆ ನೀನು ಒಂಥರಾ ಚೆನ್ನಾಗಿ ಕಾಣ್ತೀಯ .ನೋಡು , ಆಮೇಲೆ ನಾನು ನಿನ್ನ ಹೊಗಳಲ್ಲ ಅಂತ ಹೇಳಬೇಡ "
ಆಗಲೇ ಕೋಪದಿಂದ ಕೆಂಪಾಗಿದ್ದ ನಾನು ಇನ್ನಷ್ಟು ಕೆಂಪಾಗಿ ನಿನ್ನ ತಲೆಯ ಮೇಲೆ ಮೊಟಕಿದ್ದೆ !
"ಅಲ್ಲಾ ಕಣೆ , ನಾನು ಸುಮ್ನೆ ಯಾವ್ದೋ ಹುಡುಗೀನ ಹಾಗೇ ನೋಡಿ ಬಿಟ್ರೆ ಹೀಗಾಡ್ತೀಯ ಇನ್ನೇನಾದ್ರೂ ಒಂದು ಹುಡುಗೀನ ಲವ್ ಮಾಡ್ತೀನಿ ಅಂದ್ರೆ ಏನಾಗತ್ತೆ ಅಂತ ಯೋಚನೆ ಮಾಡ್ತಿದೀನಿ ! "
ನನ್ನೆದೆಯ ಮೇಲೆ ಒಮ್ಮೆಲೇ ಮಣ ಭಾರದ ಮಂಜುಗಡ್ಡೆ ಇಟ್ಟಂತೆ ಅನಿಸಿತು ! ! ಆ ಕ್ಷಣಕ್ಕೆ ನಿನ್ನನ್ನು ಯಾರೊಂದಿಗೂ ಯಾವ ಕಾರಣಕ್ಕೂ ಹಂಚಿಕೊಳ್ಳಲಾರೆ ಎನಿಸಿಬಿಟ್ಟಿತು . ನಿಜಕ್ಕೂ ನಿನ್ನನ್ನು ನಾನು ಪ್ರೀತಿಸುತ್ತ ಇದ್ದೀನಿ ಅಂತ ರಿಯಲೈಸ್ ಆಗ್ತಾ ಇತ್ತು , ಜೊತೆಗೆ ಇದೇನಾಗ್ತಾ ಇದೆ ಅಂತ ಗಾಬರೀನೂ !
" ಅಂದ್ರೆ .. ನೀನು ಯಾರನ್ನಾದರೂ .... " ನಿನ್ನ ಕೈ ಹಿಡಿದು ತಡವರಿಸಿದೆ ..
ನೀನು ಮೊದಲ ಬಾರಿಗೆ ನನ್ನನ್ನು ಆ ಥರ ನೋಡಿದ್ದು. ನಿನ್ನ ಮುಖದ ಮೇಲಿನ ತುಂಟ ನಗು ಮಾಯವಾಗಿ ಸೀರಿಯಸ್ ನೆಸ್ ಬಂತು.
" ಗೊತ್ತಿಲ್ಲ ಕಣೆ. ಅರ್ಥ ಆಗ್ತಾ ಇಲ್ಲ ನಂಗೆ. ಏನೋ ಒಂಥರಾ ಕನ್ ಫ್ಯೂಶನ್ " . ಅವತ್ತು ಮೊದಲ ಬಾರಿಗೆ ನಾವು ಎಂದಿನ ನಗು ಹರಟೆಗಳಿಲ್ಲದೆ ಸಂಜೆಯನ್ನು ಕಳೆದಿದ್ದು. ಇಬ್ಬರ ಮನದಲ್ಲೂ ಪ್ರಶ್ನೆಗಳು ಕಾಡುತ್ತಿದ್ದವು ಅನ್ನಿಸ್ತು .

ಅದೇ ಕನ್ ಫ್ಯೂಶನ್ ನಲ್ಲಿ ಅಂದು ರಾತ್ರಿಯೂ ನಿದ್ರೆ ಬರಲಿಲ್ಲ ನಂಗೆ. ಮತ್ತೆ ಏನೇನೋ ಯೋಚನೆಗಳು.
ನಿನ್ನ ಮನದಲ್ಲಿದ್ದುದು ನಾನಾ ಅಥವಾ ಬೇರೆ ಯಾರಾದರೂ ? ಆ ಬೇರೆ 'ಯಾರಾದರೂ ' ಯಾರಿರಬಹುದು ? ಆಫೀಸ್ ನಲ್ಲಂತೂ ನೀನು ಯಾರ ಜೊತೆಗೂ ಹೆಚ್ಚು ಮಾತಾಡೋದಿಲ್ಲ . ಮತ್ತೆ ಆಫೀಸಿಂದ ಆಚೆ? ಹಾಗಿದ್ದರೆ ನೀನು ನನಗೆ ಹೇಳುತ್ತಿದ್ದೆ ಅಥವಾ .. ಸಂಜೆಗಳನ್ನು ನನ್ನ ಜೊತೆ ಯಾಕೆ ಕಳೆಯುತ್ತಿದ್ದೆ ಅಂತ ಒಂದು ಲಾಜಿಕ್ . ಮತ್ತೊಮ್ಮೆ , ನಿನ್ನ ಊರಿನಲ್ಲೇ ಯಾರಾದರೂ ಮುಂಚಿಂದ ಪ್ರೀತಿಸಿದವರಿದ್ದರೆ ... ಅಥವಾ ನಿನ್ನ ರೂಂ ಮೇಟ್ ನ ತಂಗಿ , ಕಸಿನ್ ಯಾರಾದರೂ .. ಸಿನಿಮಾ ಶೈಲಿಯಲ್ಲಿ ಯೋಚಿಸಿ ಹೈರಾಣಾದೆ. ಆದರೆ , ಮನಸ್ಸು ಹೇಳುತ್ತಿದುದು ಒಂದೇ , ಒಂದುವೇಳೆ ಹಾಗೇನೆ ಇದ್ದರೂ ನೀನು ಈ ಒಂದೂವರೆ ವರ್ಷಗಳಲ್ಲಿ ನನ್ನಿಂದ ಮುಚ್ಚಿಡಲು ಸಾಧ್ಯವೇ ಇಲ್ಲ ಎಂದು . ಒಂದು ವೇಳೆ , ನಿಂಗೆ ನನ್ನ ಬಗ್ಗೆನೂ ಯಾವುದೇ ವಿಶೇಷ ಭಾವನೆಗಳಿಲ್ಲದಿದ್ದರೆ ? ಕೇವಲ ಸಭ್ಯ ಸ್ನೇಹವಷ್ಟೇ ಆಗಿದ್ದರೆ ? ಅದೇಕೋ ನಿನ್ನನ್ನು ಕೇಳಿಯೇ ಬಿಡುವುದು ಎಂದು ನಿರ್ಧರಿಸಿದೆ . ಆದರೆ ಹೇಗೆ ?ಮರುದಿನ ನಿನ್ನ ಜೊತೆ ಯಾವಾಗಿನ ತರ ಇರೋಕೆ ಆಗಲೇ ಇಲ್ಲ . ಸದ್ಯ ಕೆಲಸ ಜಾಸ್ತಿ ಇದ್ದಿದ್ದರಿಂದ ಮುಜುಗರದಿಂದ ಪಾರಾದೆ ಅನಿಸ್ತು. ಇದೇ ಇಬ್ಬಗೆಯಲ್ಲಿ ದಿನಗಳು ಕಳೆದು ಹೋದವು ! ಈ ನಡುವೆ ನೀನು ಕೆಲದಿನಗಳಿಗಾಗಿ ಊರಿಗೆ ಹೋಗಿದ್ದೆ .

ಅಂದು ಆಫೀಸಿಗೆ ಬಂದವಳಿಗೆ , ಯಾಕೋ ವಾತಾವರಣ ಬೇರೆಯಾಗಿಯೇ ಕಾಣಿಸುತ್ತಿತ್ತು. ಹುಡುಗ ಹುಡುಗಿಯರ ಮುಖದಲ್ಲಿ ಒಂಥರಾ ಕಳೆ , ಹೊಸ ಹೊಸ ಬಟ್ಟೆ , ಹೊಸಾ ಹೇರ ಸ್ಟೈಲ್ , ಸೀದಾ ಸಾದಾ ಆಗಿ ಬರುವ ರೋಹಿಣಿಯ ತುಟಿಯಲ್ಲೂ ಹೌದೋ ಅಲ್ಲವೋ ಎಂಬಂತಿದ್ದ ಲಿಪ್ ಸ್ಟಿಕ್ ! ಸೀಟ್ ನಲ್ಲಿ ಕುಳಿತವಳು ಎನಿವತ್ತು ವಿಶೇಷ ಅಂತ ಯೋಚನೆ ಮಾಡ್ತಾ ಇದ್ದೆ. ಅಷ್ಟರಲ್ಲಿ ಅಟೆಂಡರ ರಾಜಣ್ಣ ಬಂದು ಮೇಡಂ ನಿಮ್ಮ ಲೆಟರ್ ಅಂತ ಕೊಟ್ಟ . ನನ್ನ ಹೆಸರು ಮಾತ್ರವಿದ್ದ ಆ ಕವರ್ ಒಳಗೆ ಬಿಳಿಯ ಹಾಳೆಯ ನಡುವೆ ಒಂದೇ ಸಾಲು ಇದ್ದಿದ್ದು ! " confusion cleared . Will you be my valentine forever ? " ಏನೂ ಅರ್ಥವಾಗದೆ ನಾನು ಯಾರು ಕೊಟ್ಟಿದ್ದು ಎಂದು ರಾಜಣ್ಣನಲ್ಲಿ ಕೇಳೋಣ ಅಂತ ಹಿಂತಿರುಗಿದರೆ ... ..ಅಷ್ಟು ದೂರದಲ್ಲಿ ನಿಂತು ನೀನು ನಗುತ್ತಿದ್ದೆ !

ಈಗ ಹೇಳು ನಿನ್ನನ್ನ ಪ್ರೀತಿಸದೇ ಇರೋಕೆ ಸಾಧ್ಯಾನಾ?

27 comments:

ಪೂರ್ಣಿಮಾ ಭಟ್ಟ, ಸಣ್ಣಕೇರಿ said...

Sweet! :-)

V.R.BHAT said...

ಚೆನ್ನಾಗಿದೇರೀ.......ತುಂಬಾ...!

shivu.k said...

ಚಿತ್ರ ಮೇಡಮ್,

ಆಹಾ! ಚಿತ್ರ ಮೇಡಮ್, ಪ್ರೇಮಿಗಳ ದಿನಕ್ಕೆ ಸೊಗಸಾದ ಬರಹ. ಓದುತ್ತಾ ಯಾವುದೋ ಲೋಕಕ್ಕೆ ಹೋದಂತಾಯ್ತು. ಪ್ರೇಮಿಗಳ ಎಲ್ಲಾ ಆಟಪಾಠ, ತಳಮಳ, ಭಾವುಕತೆ ಎಲ್ಲವನ್ನು ಹಿತಮಿತವಾಗಿ ಹದವಾಗಿ ಸೇರಿಸಿದರೆ ಹೀಗೊಂದು ಪುಟ್ಟ ಪ್ರೇಮ ಸಂವೇದನೆ ಸೃಷ್ಟಿಯಾಗುತ್ತದೆ ಎನ್ನುವುದಕ್ಕೆ ನಿಮ್ಮ ಲೇಖನ ಸಾಕ್ಷಿ.

ಧನ್ಯವಾದಗಳು.

ಸಾಗರದಾಚೆಯ ಇಂಚರ said...

ಚಿತ್ರಾ
ರಾಶಿ ಚೊಲೋ ಬರದ್ದೆ
ಪ್ರೇಮಿಗಳ ದಿನಕ್ಕೆ ಒಂದು ಮಸ್ತ್ ಬರಹ
ಪ್ರತಿದಿನವೂ ಪ್ರೇಮಿಗಳ ದಿನವೇ ಅಲ್ದಾ ಪ್ರೇಮಿಗಳಿಗೆ
ನಿನ್ನ ಬರಹದ ಶೈಲಿ ಚೊಲೋ ಇದ್ದು
ಶಬ್ದಗಳನ್ನು ಎಲ್ಲಿ ಹುಡುಕಿಕೊಂಡು ಬತ್ತೆ ಮಾರಾಯ್ತಿ :)

Ittigecement said...

ಚಿತ್ರಾ...

ಸುಂದರವಾದ ಕಥೆ..

ಹೇಳಲಾರದೆ..
ಎದೆಯೊಳಗೇ..
ಹುದುಗಿರುವ ..
ಅರಿತರೂ...
ಅರುಹಲಾಗದ
ಭಾವನೆಗಳ..
ನಿವೇದನೆಗೆ.....

ಈ ಪ್ರೇಮಿಗಳ ದಿನಾಚರಣೆ..!!

ಪ್ರೇಮಿಗಳ ದಿನದಂದು ಸುಂದರ ಕಥೆ..

ಅಭಿನಂದನೆಗಳು...

ಸುಧೇಶ್ ಶೆಟ್ಟಿ said...

ಚಿತ್ರಾ ಅವರೇ.....

ಕವನದ ನಿರೀಕ್ಷೆಯಲ್ಲಿ ಇದ್ದೆ.... ಲೇಖನ ಸರ್ಪ್ರೈಸಿ೦ಗ್ ಆಗಿ ಬ೦ದಿದೆ... ಪ್ರೀತಿ ಹುಟ್ಟುವ ಮು೦ಚಿನ ದಿನಗಳಲ್ಲಿ ಇರುವ ಆ ಪೋಸೆಸಿವ್‍ನೆಸ್, ತುಮುಲ, ಗೊ೦ದಲಗಳನ್ನು ಚೆನ್ನಾಗಿ ಬಿಡಿಸಿಟ್ಟಿದ್ದೀರಿ... ಎಲ್ಲಾ ಪ್ರೀತಿಗಳೂ ಈ ಎಲ್ಲಾ ಮಜಲುಗಳನ್ನು ದಾಟಿಯೇ ಬರುತ್ತದೆ ಅ೦ತ ಅನಿಸುತ್ತದೆ.... ಅಲ್ಲಲ್ಲಿ ನೀವು ಕೇಳುವ ಪ್ರಶ್ನೆಗಳು ಹಿಡಿಸಿದವು.... :)

ಸೀತಾರಾಮ. ಕೆ. / SITARAM.K said...

ತು೦ಬಾ ನವಿರಾಗಿ ಹೆಣೆದ ಪ್ರೆಮ ಕಥೆ. ಪ್ರ್‍ಏಮದ ಹುಟ್ಟಿನ ಸೆಲೆಯನ್ನ ನವಿರಾಗಿ, ಎಳೆ-ಎಳೆಯಾಗಿ ಬಿಡಿಸಿಟ್ಟಿದ್ದಿರಾ....
ಚೆ೦ದದ ಕಥೆ. ಮನ ಮಿಡಿಯಿತು.

Guruprasad said...

ತುಂಬ ಆತ್ಮೀಯ ವಾಗಿ ಇದೆ ಬರಹ... ತುಂಬ ಚೆನ್ನಾಗಿ ಇದೆ.....ಗುಡ್ ಒನ್.

ಮನಮುಕ್ತಾ said...

Nice..! :-)

ತೇಜಸ್ವಿನಿ ಹೆಗಡೆ said...

ವಾಸ್ತವಿಕತೆಗೆ ಬಹು ಹತ್ತಿರವಾಗಿದೆ ಕಥೆ. ಸರಳವಾಗಿದ್ದು, ಹೃದ್ಯವಾಗಿದೆ.

sunaath said...

ಚಿತ್ರಾ,
ಸೊಗಸಾದ ಬರಹ.

ಚಿತ್ರಾ said...

ಪೂರ್ಣಿಮಾ, ವಿ ಆರ್ ಭಟ್ ,
ಮೆಚ್ಚಿದ್ದಕ್ಕೆ ಥ್ಯಾಂಕ್ಸ್ !

ಚಿತ್ರಾ said...

ಶಿವೂ,
ಎಂದಿಗಿಂತ ಸ್ವಲ್ಪ ಬೇರೆಯಾಗಿ ಬರೆಯೋಣ ಅಂದುಕೊಂಡೆ , ಇಷ್ಟವಾಗಿದ್ದು ಖುಷಿಯಾಯಿತು !

ಚಿತ್ರಾ said...

ಗುರು,
ನೀ ಹೇಳಿದ್ದು ಹೌದು . ಪ್ರೇಮಿಗಳ ಪಾಲಿಗೆ ಪ್ರತಿದಿನವೂ ' ಪ್ರೇಮಿಗಳ ದಿನವೇ ! ' .
ಬರಹ ಇಷ್ಟ ಆಗಿದ್ದು ಖುಷಿಯಾತು. ನಿನ್ನ ಬರವಣಿಗೆಯೂ ಚೆಂದ ಇರ್ತು. ಒದಕಾದ್ರೆ ನಾನೂ ಹಾಂಗೆ ಯೋಚನೆ ಮಾಡ್ತಿ . ಎಲ್ಲಿಂದ ಹುಡುಕ್ತೆ ನೀನು ಶಬ್ದಗಳನ್ನ ಹೇಳಿ !

ಚಿತ್ರಾ said...

ಪ್ರಕಾಶಣ್ಣ ,
ಸ್ವಲ್ಪ ಬೇರೆ ತರ ಬರೆಯಲೆ try ಮಾಡನ ಅನಿಸ್ತು . ತಿರುಳಿಲ್ಲದೆ, ಹುರುಳಿಲ್ಲದೆ , ಯಾವುದೇ ಸಂದೇಶ ಇಲ್ಲದೆ , ಒಂಥರಾ ಸುಮ್ಮನೆ ಯುವ ಹೃದಯಗಳ ಭಾಷೆಯನ್ನ ಬರೆಯಲು ಸಾಧ್ಯನಾ ಹೇಳಿ ಮಾಡಿದ ಪ್ರಯತ್ನ ಇದು ! ಪೋಸ್ಟ್ ಮಾಡಿದ ಮೇಲೂ ಅನುಮಾನ. ಬರೆದಿದ್ದರ ಬಗ್ಗೆ ! ಯಾರಾದರೂ ಓದಬಹುದೇ ಅನ್ನೋ ಯೋಚನೆ ಇರಲಿಲ್ಲ . ಯಾಕೆಂದ್ರೆ ಬ್ಲಾಗ್ ಓಪನ್ ಮಾಡಿದ್ದಕ್ಕಾದ್ರೂ ಯಾರಾದರೋ ಓದ್ತಾರೆ ಅಂತ ಭರವಸೆ ! ಹಾ ಹಾ ಹಾ ..
ಮೆಚ್ಚಿದ್ದಕ್ಕೆ , ಚಂದದ ಅಭಿಪ್ರಾಯಕ್ಕೆ , ಥ್ಯಾಂಕ್ಸ್ !

ಚಿತ್ರಾ said...

ಸುಧೇಶ್ ,
ನೀವು ಮಾತ್ರ ಸರ್ ಪ್ರೈಸ್ ಕೊಡೋದು ಅಂದ್ಕೊಂಡ್ರಾ? ಹಿ ಹಿ ಹಿ..
ಕವನಾನೆ ಹಾಕೋಣ ಅಂತಿದ್ದೆ , ಅದರ ಕೊನೆಯ ಸಾಲುಗಳನ್ನು ಹೆಣೆಯೋಕೂ ಮುಂಚೆ ಈ ಕಥೆ ಹುಟ್ಟಿಬಿಡ್ತು ! ಹೀಗಾಗಿ , ಇದನ್ನೇ ಹಾಕಿಬಿಟ್ಟೆ. ಮೆಚ್ಚಿದ್ದಕ್ಕೆ ಧನ್ಯವಾದಗಳು

ಚಿತ್ರಾ said...

ಸೀತಾರಾಮ್,
ಕಥೆಯನ್ನು ಮೆಚ್ಚಿದ್ದಕ್ಕೆ ಧನ್ಯವಾದಗಳು. ಬರುತ್ತಿರಿ.

ಚಿತ್ರಾ said...

ಗುರು, ಮನಮುಕ್ತಾ,
ಮೆಚ್ಚುಗೆಗೆ ತುಂಬಾ ಥ್ಯಾಂಕ್ಸ್ !

ಚಿತ್ರಾ said...

ತೇಜೂ,
ನಿಜ ಜೀವನದಲ್ಲೂ ಇಂಥಾ ಘಟನೆಗಳು ನಡೆದಿರಬಹುದು ಅಲ್ಲವೇ? ಇಂದು, ಯುವಕ ಯುವತಿಯರು ಒಂದೇ ಕಡೆ ಒಟ್ಟಾಗಿ ಕೆಲಸ ಮಾಡುವ ಮುಕ್ತ ವಾತಾವರಣದಲ್ಲಿ ಇಂತಹ ಪ್ರೀತಿ ಹುಟ್ಟಿಕೊಳ್ಳುವ ಎಲ್ಲ ಸಾಧ್ಯತೆಗಳೂ ಇರುತ್ತವೆ. ಹಾಗೆ ಮೂಡಿದ ಪ್ರೀತಿ ಕೊನೆಯವರೆಗೂ ಇರಲಿ ಎನ್ನುವುದು ನನ್ನ ಆಶಯ.

ಚಿತ್ರಾ said...

ಕಾಕಾ,
ಧನ್ಯವಾದಗಳು.

Anonymous said...

Chithra,... Nanu idana odtha iddaga, ondu film nodida haagitthu.
Antha padagalna elri hudki barudri?!!

vijay said...

ಚಿತ್ರಾ

ಸುಂದರ ಶಬ್ಧಗಳ ಜೋಡಣೆ .
ಸಲೀಸಾಗಿ ಓದಿಕೊಂಡು ಹೊಗುವದಲ್ಲದೆ, ಸ್ನೇಹಾನಾ .. ಪ್ರೀತೀನಾ ಅನ್ನೋದೆ ಗೊತ್ತಾಗಲಿಲ್ಲ
ಸ್ನೇಹಪ್ರೀತಿ ಇರಬಹುದು
ಉತ್ತಮ ಬರಹ
ವಂದನೆಗಳು
ವಿಜಯ್

Anonymous said...

ತುಂಬ ಚೆನ್ನಾಗದೆ... ಓದ್ತಾ ಇದ್ರೆ ಒಂದು ಫಿಲಂ ನೋಡ್ದಂಗೈತು,
ನೀವ್ ಬಳಸಿರೋ ಪದಗಳು ಚನ್ನಗವೇ, ನೀವ್ ಪ್ರೇಮಕಥೆಗಳನ್ನ ಹೆಚ್ಚು ಬರೀರಿ ಅನ್ನೋದು ನನ್ನ ಅನಿಸಿಕೆ !!

Harisha - ಹರೀಶ said...

ಚಿತ್ರಕ್ಕಾ.. ನಿನ್ನ ಹೊಸ ಪ್ರಯೋಗ ಸೂಪರ್!!

ಅಡಿಕೆ ತೋಟ, ಮಹಾನಗರಿ ಅಂತೆಲ್ಲ ಓದಿದಾಗ ನಿಂದೇ ಕಥೆನಾ ಅಂತ ಡೌಟೂ ಬಂತು :D

ಚಿತ್ರಾ said...

ವಿಜಯ್ ,
ನಿಮ್ಮಭಿಪ್ರಾಯಕ್ಕೆ ಧನ್ಯವಾದಗಳು . ಹೀಗೇ ಪ್ರೋತ್ಸಾಹಿಸುತ್ತಿರಿ

ಚಿತ್ರಾ said...

ಮಂಜು ,
ನಿಮ್ಮ ಮೆಚ್ಚುಗೆಗೆ, ಸಲಹೆ ಗೆ ಬಹಳ ಧನ್ಯವಾದಗಳು . ಇವೆಲ್ಲ ಒಂಥರಾ ಲಹರಿ ಅಷ್ಟೇ . ಹೀಗೇ ಬರೆಯಬೇಕೆಂಬ ಗುರಿಯಾಗಲಿ , ಬರೆಯಬಾರದೆಂಬ ಕಟ್ಟುಪಾಡಾಗಲೀ ಇಲ್ಲ . ಮನಸಿಗೆ ತೋಚಿದ್ದು ಅಷ್ಟೆ .
ಬರುತ್ತಿರಿ

ಚಿತ್ರಾ said...

ಹರೀಶ,
ಥ್ಯಾಂಕ್ಸು ! ನಾನು ಅಡಿಕೆ ಬೆಳೆಗಾರರ ವಂಶದವಳಲ್ಲ ಮಾರಾಯ ! ಮಹಾನಗರಿಯಲ್ಲಿ ನೌಕರಿ ಮಾಡಲು ಹೋಗಿದ್ದು ನಿಜ ಆದರೆ , ನನ್ನ ಕಥೆಯಲ್ಲ ! ಹಿ ಹಿ ಹಿ ..