March 8, 2010

ಮಹಿಳಾದಿನ !!!!!!

ಮಹಿಳಾ ದಿನ !!! ಹ್ಮ್ಮ್
ಬೆಳಿಗ್ಗೆ ಅಲಾರಾಂ ಹೊಡೆದ ಕೂಡಲೇ ಗಡಬಡಿಸಿ ಎದ್ದು , ನಿತ್ಯವಿಧಿಗಳನ್ನು ಮುಗಿಸಿ , ಬೆಳಗಿನ ತಯಾರಿ ಶುರು. ಕಾಫೀ, ತಿಂಡಿ , ಮಕ್ಕಳನ್ನು ಎಬ್ಬಿಸಿ ಶಾಲೆಗೆ ಕಳಿಸುವ ತಯಾರಿ, ಮತ್ತೆ ಗಂಡ -ಮಕ್ಕಳ ಊಟದ ಡಬ್ಬಿಯ ತಯಾರಿ , ನಡುವೆ ಕೆಲಸದವಳು ಬಂದಳೋ ಇಲ್ಲವೋ , ಅವಳಿಗೊಂದು ಕಪ್ ಕಾಫೀ , ಇನ್ನು ಉದ್ಯೋಗಸ್ಥೆಯಾಗಿದ್ದರಂತೂ ಮುಗೀತು , ಈ ಎಲ್ಲವುಗಳ ನಡುವೆ ಮೈಗೆರಡು ಚೊಂಬು ನೀರು ಸುರಿದುಕೊಂಡು ತಯಾರಾಗಬೇಕು .ಕೇವಲ ಐದೇ ನಿಮಿಷ ತಡವಾದರೂ ಬಸ್ ತಪ್ಪಿ ಹೋಗಿ ಆಫೀಸಿಗೆ ಲೇಟಾಗುವ ಪರಿಸ್ಥಿತಿ. ಇವೆಲ್ಲದರ ನಡುವೆ ' ಮಹಿಳಾದಿನ ' ದ ಸಂಭ್ರಮಕ್ಕೆ ಸಮಯವೆಲ್ಲಿ ?
ಯಾವ ದಿನವಾದರೂ ಈ ಕೆಲಸಗಳು ನಮ್ಮ ತಲೆಗೇ ! ಮಹಿಳಾದಿನವೆಂದು ಈ ವೇಳಾಪಟ್ಟಿಯಲ್ಲೇನೂ ಬದಲಾವಣೆಯಾಗುವುದಿಲ್ಲ !
ಬೆಳಿಗ್ಗೆ ಅಲಾರಾಂ ಆದಕೂಡಲೇ ಏಳ ಹೊರಟವಳನ್ನು , ಗಂಡ ತಡೆದು ' ಇವತ್ತು ಮಹಿಳಾ ದಿನ ಕಣೆ, ಮಲಗು ಸ್ವಲ್ಪ ಹೊತ್ತು " ಎನ್ನುವುದಿಲ್ಲ.
ನಾವು ಏಳುವ ಮೊದಲೇ ಎದ್ದು ಕಾಫೀ ತಯಾರಿಸಿ , ಬಿಸಿ ಬಿಸಿ ಹಬೆಯಾಡುವ ಕಪ್ ಅನ್ನು ರೆಡಿಯಾಗಿಟ್ಟು " ಗುಡ್ ಮಾರ್ನಿಂಗ್ ' ಎನ್ನುವುದಿಲ್ಲ !
"ಇವತ್ತು ಮನೆ ಜವಾಬ್ದಾರಿ ನಂದು ಕಣೆ, ನೀನು ಎಂಜಾಯ್ ಮಾಡು " ಎನ್ನುವುದಿಲ್ಲ.
ಒಟ್ಟು ಕುಟುಂಬ ಆಗಿದ್ದರೆ, ಅತ್ತೆಯೋ , ನಾದಿನಿಯೋ , " ನಡಿ, ಇವತ್ತು ಮಹಿಳಾ ದಿನ " , ನಾವು ಆಚೆ ಎಲ್ಲಾದ್ರೂ ಹೋಗಿ ಸಿನೆಮಾ ನೋಡಿ, ಶಾಪಿಂಗ್ ಮಾಡಿ ಅಲ್ಲೇ ಎಲ್ಲಾದ್ರೂ ಹೋಟೆಲ್ ನಲ್ಲಿ ತಿಂದುಕೊಂಡು ಬರೋಣ " ಎಂದು ಹೇಳುವುದಿಲ್ಲ !
ಲೇಟ್ ಆಗಿದ್ದಕ್ಕೆ , ಆಫೀಸ್ ನಲ್ಲಿ ಬಾಸ್ " ಪರವಾಗಿಲ್ಲ ಬಿಡಿ ಇವತ್ತು women's Day " ಎನ್ನುವುದಿಲ್ಲ !
ಸಂಜೆ ಮನೆಗೆ ಬರುವಷ್ಟರಲ್ಲಿ ಗಂಡ ಬಾಗಿಲು ತೆಗೆದು " ಹಾಯ್ , ಸುಸ್ತಾಗಿದ್ಯಾ ಬಂಗಾರಿ ? ಬರೋವಾಗ ನಿನಗಿಷ್ಟ ಅಂತ ಈರುಳ್ಳಿ ಪಕೋಡಾ ಕಟ್ಟಿಸಿಕೊಂಡು ಬಂದಿದೀನಿ , ಬಿಸಿ ಬಿಸಿ ಕಾಫೀನೂ ರೆಡಿ ಇದೆ .ಬೇಗ ಫ್ರೆಶ್ ಆಗಿ ಬಾ, " ಎನ್ನುವಂತಿದ್ದರೆ..... !
ನಾವೇ ಏನಾದರೂ ಬೆಳಿಗ್ಗೆ " ಇವತ್ತು ಮಹಿಳಾ ದಿನ ಕಣ್ರೀ" ಎಂದು ನೆನಪಿಸಿದರೆ , ಓದುತ್ತಿರುವ ಪೇಪರನ್ನೂ ಮುಖದಿಂದ ಸರಿಸದೆ ಅಲ್ಲೇ, ಅದರ ಹಿಂದಿನಿಂದಲೇ " ಓಹ್ ,ಹೌದಾ? happy Women's day ! " ಎಂದು ಗೊಣಗಬಹುದು . ಅದಕ್ಕಿಂತ ಹೆಚ್ಚೇನನ್ನೂ ನಿರೀಕ್ಷೆ ಮಾಡುವಂತಿಲ್ಲ !

ಇನ್ನೂ ಹಳ್ಳಿಗಳಲ್ಲಂತೂ " ಮಹಿಳಾ ದಿನ" ಎಂಬುದೊಂದಿದೆ ಎಂದೇ ಗೊತ್ತಿಲ್ಲ ! ಗೊತ್ತಾಗಿ ಅವರಿಗೇನು ಆಗಬೇಕಾಗಿಯೂ ಇಲ್ಲ ! ಸೂರ್ಯ ಹುಟ್ಟುವ ಮೊದಲೇ ಎದ್ದು ಕೆಲಸ ಆರಂಭಿಸಿ ದಿನವಿಡೀ ಮನೆಯ ಒಳಗೂ ಹೊರಗೂ ದುಡಿಯುತ್ತಲೇ ಇರುವ ಅವರ ಬದುಕಿನಲ್ಲಿ ಈ ಒಂದು ದಿನ ವಿಶೇಷವಾಗುವುದೇ ಇಲ್ಲ !
ಕಾರ್ಮಿಕ ಮಹಿಳೆಯರಿಗೆ ಅಂದಿನ ದಿನವೂ ಕುಡಿದು ಬಂದ ಗಂಡನಿಂದ ಹೊಡೆತ ತಪ್ಪುವುದಿಲ್ಲ ! ಅವರ ಗಂಡ " ಇವತ್ತು ಮಹಿಳಾ ದಿನ ಅಂತೆ , ಅದಕ್ಕೆ ಎರಡು ಏಟು ಕಮ್ಮಿ ಕಣೆ "ಎನ್ನುವುದಿಲ್ಲ !
ರಾಣಿ ಲಕ್ಷ್ಮಿಬಾಯಿ, ಮದರ್ ತೆರೇಸಾ, ಕಲ್ಪನಾ ಚಾವ್ಲಾ , ಮೇರಿ ಕ್ಯೂರಿ , ಭಗಿನಿ ನಿವೇದಿತಾ , ಕಿರಣ್ ಬೇಡಿ , ಇಂದ್ರಾ ನೂಯಿ ಇತ್ಯಾದಿ ಪ್ರಖ್ಯಾತ ಮಹಿಳೆಯರನ್ನು ನೆನೆಸಿಕೊಂಡು ಇವರೆಲ್ಲ ಮಹಿಳಾ ಕುಲದ ಆದರ್ಶ ನಾರಿಯರು ಎಂದು ಹೆಮ್ಮೆ ಪಡುವುದನ್ನು ಬಿಟ್ಟರೆ ನಾವು ಸ್ವತಃ ಅವರ ಹೆಜ್ಜೆಯನ್ನು ಅನುಸರಿಸಲು ಪ್ರಯತ್ನಿಸುವುದಿಲ್ಲ .
ಕೇವಲ ಈ ಒಂದು ದಿನ ನಮ್ಮ ನಮ್ಮ ಪರಿಚಯದ ಹೆಂಗಸರೊಡನೆ ಶುಭಾಶಯ ವಿನಿಮಯ ಮಾಡಿಕೊಳ್ಳುವುದನ್ನು ಬಿಟ್ಟರೆ ಮತ್ಯಾವ ವಿಶೇಷವೂ ಇಲ್ಲ.
ಪ್ರತಿನಿತ್ಯ ಎಲ್ಲೆಡೆ ನಡೆಯುತ್ತಿರುವ ಮಹಿಳೆಯರ ಮೇಲಿನ ದೌರ್ಜನ್ಯ, ಅತ್ಯಾಚಾರ, ವರದಕ್ಷಿಣೆಯ ಕಿರುಕುಳ, ಭ್ರೂಣ ಹತ್ಯೆ , ಹುಟ್ಟಿದ ಹೆಣ್ಣು ಹಸುಳೆಯ ಕತ್ತು ಹಿಸುಕುವುದೋ ತೊಟ್ಟಿಗೆ ಎಸೆಯುವುದೋ .. ಇವ್ಯಾವುದೂ ಈ ಒಂದು ದಿನವೂ ತಪ್ಪುವುದಿಲ್ಲ !
ಹೀಗಿರುವಾಗ , ಈ ದಿನಕ್ಕೆ ಇಷ್ಟೊಂದು ಮಹತ್ವ ಕೊಡುವ ಅಗತ್ಯವೂ ನಂಗೆ ಕಾಣಿಸುತ್ತಿಲ್ಲ !
(ಹಾಗೆಂದು ಯಾರಾದರೂ ಶುಭಾಶಯ ತಿಳಿಸಿದರೆ .. ಬೇಡವೆನ್ನುವುದಿಲ್ಲ ! :)) )

34 comments:

kusu Muliyala (ಕುಮಾರ ಸುಬ್ರಹ್ಮಣ್ಯ.ಮುಳಿಯಾಲ) said...

ಸಕಾಲಿಕ ಲೇಖನ.ಅಚರಣೆಗಿ೦ತಲೂ ಜವಾಬ್ಧಾರಿ ಅರಿತರೆ ಅದುವೇ ಚೆನ್ನ ಅಲ್ಲವೇ?

ಸುಮ said...

ನೀವೆನ್ನುವುದು ನಿಜ. ಆದರೂ ನಮ್ಮ ಅಜ್ಜಿ , ಅಮ್ಮಂದಿರ ಕಾಲಕ್ಕಿಂತ ಈಗ ಸ್ವಲ್ಪ ಮಟ್ಟಿನ ಸುಧಾರಣೆಯಿದೆಯೆಂಬುದು ನನ್ನ ಅಭಿಪ್ರಾಯ. ಬಹುಶಃ ಇನ್ನೂ ನಾಲ್ಕು ಜನರೇಶನ್ ಕಳೆದ ಮೇಲೆ ಪರಿಸ್ಥಿತಿ ಬದಲಾಗಿ ಇಬ್ಬರೂ ಸಮಾನರೆಂಬ ಮನೋಭಾವ ಬೆಳೆಯಬಹುದೇನೋ.

ವಿ.ರಾ.ಹೆ. said...

ಇಷ್ಟೆಲ್ಲಾ ಗೋಳಾಡಿಕೊಂಡದ್ದನ್ನು ನೋಡಿಯೂ ಒಂದು ಶುಭಾಶಯ ಹೇಳದೇ ಇರಲು ನಮಗಾಗುವುದಿಲ್ಲ. happy womens' day. :-)

ಸುಧೇಶ್ ಶೆಟ್ಟಿ said...

ನನ್ನ ಕಡೆಯಿ೦ದಲೂ ಒ೦ದು ಶುಭಾಶಯ....:)

sunaath said...

ಓಹ್! ಚಿತ್ರಾ,
ಬೇಜಾರು ಮಾಡಿಕೊಳ್ಳಬೇಡಿ. ಎಲ್ಲಾ ದಿನಾಚರಣೆಗಳೂ ಹೀಗೇನೆ. ನನ್ನ ಮಕ್ಕಳೂ ಸಹ ನನಗೆ ‘Happy Father's day, ಅಪ್ಪಾ!’ ಅಂತ ಹೇಳಿ, ಹೊರಟು ಹೋಗಿ ಬಿಡುತ್ತಾರೆ.
Happy woman's day!

ಪೂರ್ಣಿಮಾ ಭಟ್ಟ, ಸಣ್ಣಕೇರಿ said...

ಚಿತ್ರಕ್ಕ, ಮಹಿಳಾದಿನದ ಶುಭ ಹಾರೈಕೆಗಳು! :-)

ತೇಜಸ್ವಿನಿ ಹೆಗಡೆ said...

ಅಕ್ಕಾ,

ಏನೇ ಆದರೂ ನಮ್ಮದೂ ಒಂದು ದಿನವಿದೆ ಎನ್ನುವುದನ್ನು ನೀವೂ ಮರೆತಿಲ್ಲ ಅನ್ನುವುದೂ ಸತ್ಯ :)

ಶುಭಾಶಯಗಳು ನಿಮಗೆ :)

ಮನದಾಳದಿಂದ............ said...

ಒಳ್ಳೆ ಸಲಹೆ ಕೊಟ್ಟಿದ್ದೀರಾ! ನಾನು ಮಾಡುವೆ ಆದಮೇಲೆ ಹೆಂಡತಿಯನ್ನು ಹೇಗೆ ಪ್ರೀತಿಸಬೇಕು ಅಂತ ಸ್ವಲ್ಪ ತಿಳ್ಕೊಂಡ ಹಾಗಾಯ್ತು. ದನ್ಯವಾದಗಳು.
ಅಂದಹಾಗೆ ನಿಮಗೂ ಕೂಡ ಮಹಿಳಾ ದಿನದ ಶುಭಾಶಯಗಳು.

ಮನಮುಕ್ತಾ said...

ಚಿತ್ರಾ ಅವರೆ,
ಮಹಿಳಾ ದಿನದ ಶುಭಾಶಯಗಳು.

Manasaare said...

ಇವಗ್ ಸ್ವಲ್ಪ ಪರಿಸ್ಥಿತಿ ಬದಲಾಗಿದೆ ಅಂದ್ಕೋತೀನಿ . ಯಾಕೆಂದರೆ ನಮ್ಮ generation ಸುಮಾರು ಜನ ಗಂಡಸರು ಹೆಂಗಸರ ಮನೆಗೆಲಸದಲ್ಲಿ ಅವಾಗ್ ಅವಾಗ್ ಹೆಲ್ಪ್ ಮಾಡ್ತಾರೆ . ಇವಗಿರೋದು nuclear ಫ್ಯಾಮಿಲಿ , ಅದರಲ್ಲೂ ಗಂಡ ಹೆಂಡತಿ ದುಡಿಯೋದು ಇದ್ದದರಿಂದ obviously ಇಬ್ರು ಸಮನಾಗಿ ಮನೆ responsibilities ತೊಗೊಳದನ್ನ ನೋಡೋದು common ಆಗಿದೆ .

shivu.k said...

ಚಿತ್ರ ಮೇಡಮ್,

ಮೊದಲಿಗೆ ನಿಮಗೆ ಶುಭಾಶಯಗಳು. ನೀವು ಹೇಳಿದ್ದೆಲ್ಲಾ ವಾಸ್ತವವೆನ್ನುವುದು ನನ್ನ ಅಭಿಪ್ರಾಯ. ಆದರೂ ಇವತ್ತು ಐದು ಗಂಟೆಗೆ ಎದ್ದು ನನ್ನ ಶ್ರೀಮತಿಯನ್ನು ಎಚ್ಚರಿಸಿ ವಿಶ್ ಮಾಡಿದೆ. ಅವಳು ಥ್ಯಾಂಕ್ಸ್ ಅಂದು ಒಮ್ಮೆ ಮುಗುಳ್ನಗೆ ಸೂಸಿ ಹಾಗೆ ಮರುಕ್ಷಣ ನಿದ್ರೆ ಹೋದಳು.
ನನಗೂ ತುಂಬಾ ಕೆಲಸವಿದ್ದಿದ್ದರಿಂದ ದಿನವೆಲ್ಲಾ ಬ್ಯುಸಿಯಾಗಿದ್ದೇನೆ. ಏನು ಮಾಡಲಿ ನನಗೂ ನೀವು ಹೇಳಿದಂತೆ ಮಾಡಬೇಕೆನ್ನುವ ಆಸೆ. ಆದ್ರೆ ಸಮಯವೆಲ್ಲಿ?[ನೆಪವೆಂದುಕೊಳ್ಳಬೇಡಿ. ಇದು ಸತ್ಯ] ಆದರೂ ನನ್ನ ಗೆಳತಿಯರಿಗೆಲ್ಲಾ ಹೃದಯಪೂರ್ವಕವಾಗಿ ಹಾರೈಸಿದ್ದೇನೆ.
ಧನ್ಯವಾದಗಳು.

Ittigecement said...

ಚಿತ್ರಾ...

ಈ ದಿನಕ್ಕೊಂದು ಮಹತ್ವ ಕೊಟ್ಟು..
ಅದನ್ನು ನಾವು ಮನಗಂಡಿದ್ದರೆ..
ಸಂಭ್ರಮದಿಂದ ಆಚರಿಸುತ್ತಿದ್ದೇವು...

ದಿನ ನಿತ್ಯದ ಬದುಕು ದೊಡ್ಡದಾಗಿರುವಾಗ...
ಗಂಡ ಬಂದು " ಇವತ್ತಿನ ಅಡಿಗೆಯ ಜವಾಬ್ದಾರಿ" ಎಂದು ಬಿಟ್ಟರೆ ಅದು ಆಚರಣೆಯೆ..?

ಎಲ್ಲದಿನವೂ ಗೌರವ ಕೊಟ್ಟು , ಪ್ರೀತಿ ವಿಶ್ವಾಸದಿಂದ ಇದ್ದರೆ..
ಈ ಆಚರಣೆಯ ಮಾಡಿದಂತೆ. ಅಲ್ಲವೆ?

ಇಲ್ಲದಿದ್ದರೆ..
ಇದೊಂಥರ " ಅಕ್ಟೋಬರ್ ಎರಡು" ನವೆಂಬರ್ ಹದಿನಾಲ್ಕು" ಜನೆವರಿ ಇಪ್ಪತ್ತನಾಲ್ಕರಕ್ಕಿಂತ... ಕಡಿಮೆ ಎನಿಸಿ ಬಿಡಬಹುದು...
ಯಾಕೆಂದರೆ "ರಜೆ" ಇರುವದಿಲ್ಲವಲ್ಲ...!!

ಚಿತ್ರಾ...
ನಿಮಗೂ..
ಇಲ್ಲಿ ಭೇಟಿಕೊಡುವ ಎಲ್ಲ ಸಹೋದರಿಯರಿಗೂ... ಮಹಿಳಾ ದಿನಾಚರಣೆಯ ಶುಭಾಶಯಗಳು..."

ಸಾಗರದಾಚೆಯ ಇಂಚರ said...

ಚಿತ್ರಾ,
ನಿಂಗೆ ಶುಭಾಷಯ ಹೇಳಲು ಹೆದರಿಕೆ ಅಗ್ತಾ ಇದ್ದು :)
ಎಷ್ಟುದ್ದಾ ಲೈನ್ ಬರೆದ್ಯೇ,
ಒಂದು ಮಹಿಳಾ ದಿನದ ಸಲುವಾಗಿ ಇದೆಲ್ಲ ಪುರಾಣ ಹೇಳಿ ಹೆದರಿಕೆ ಹುಟ್ಟಿಸಿದೆ
ಆದರೆ ನೀನು ಹೇಳಿದ್ದಕ್ಕೆಲ್ಲ ಒಪ್ಪಿಗೆ ಇದ್ದು
ಪುರುಷ ಪ್ರಧಾನ ಸಮಾಜದಲ್ಲಿ ಮಹಿಳೆಯರ ಮೇಲೆ ನಿರಂತರ ಪಕ್ಸಪಾತ ನಡಿತಿದ್ದು
ಮಹಿಲ್ಲ ದಿನಾಚರಣೆಯ ಶುಭಾಷಯ ಕೊನೆಗೆ ಹೇಳ್ತಾ ಇದ್ದಿ

Raghu said...

happy women's day..
Raaghu

ಮನಸಿನಮನೆಯವನು said...

'ಚಿತ್ರಾ' ಅವ್ರೆ..,

ಸುನಾಥ್ ಅವ್ರು ಹೇಳಿದಂತೆ ಎಲ್ಲ ದಿನಾಚರಣೆಗಳು ಹೀಗೇನೆ..!

ನನ್ನ 'ಮನಸಿನಮನೆ'ಗೊಮ್ಮೆ ಬನ್ನಿ: http://manasinamane.blogspot.com

ಚಿತ್ರಾ said...

ಮುಳಿಯಾಲ ರೆ,
ನೀವನ್ನುವುದು ನಿಜ . ಜವಾಬ್ದಾರಿ ಅರಿಯುವುದು ಮುಖ್ಯ .

ಚಿತ್ರಾ said...

ಸುಮಾ,
ಅಜ್ಜಿ -ಅಮ್ಮಂದಿರ ಕಾಲಕ್ಕಿಂತ ಬಹಳವೇ ಬದಲಾವಣೆಯಾಗಿದೆ . ಆದರೆ, ಇದು ನಗರ ಪ್ರದೇಶಗಳಿಗೆ ಸೀಮಿತ . ಕಾಯೋಣ ಇನ್ನೂ ಸ್ವಲ್ಪ ದಿನ !

ಚಿತ್ರಾ said...

ಹಾ ಹಾ ಹಾ ವಿಕಾಸ್,
ಗೋಳಾಡಿದ್ದಲ್ಲ ಮಾರಾಯ ! ಇದ್ದ ವಿಷಯ ಹಂಚಿಕೊಳ್ಳ ಪ್ರಯತ್ನ ಅಷ್ಟೇ ! ಆದರೂ ,ಶುಭಾಶಯ ಹೇಳಿದ್ದಕ್ಕೆ ಥ್ಯಾಂಕ್ಸು !!!

ಚಿತ್ರಾ said...

ಸುಧೇಶ್,
ಧನ್ಯವಾದಗಳು

ಚಿತ್ರಾ said...

ಕಾಕಾ,
ಬೇಜಾರು ಅಂತಲ್ಲ ಕಾಕಾ, ಅರ್ಥವಿಲ್ಲ ಅಂತ ಅಷ್ಟೆ ! ಈ ನೂರಾಎಂಟು " ಡೇ " ಗಳಿಂದಾಗಿ ಸಂಬಂಧಗಳೂ ಅರ್ಥ ಕಳೆದುಕೊಳ್ಳುತ್ತಿವೆ ಅನಿಸುತ್ತದೆ .

ಚಿತ್ರಾ said...

ಪೂರ್ಣಿಮಾ,
ಥ್ಯಾಂಕ್ಸು. ನಿನಗೂ ಶುಭಾಶಯ ವರ್ಷದ ಪ್ರತಿದಿನಕ್ಕೂ !

ಚಿತ್ರಾ said...

ತೇಜೂ,
ಅಯ್ಯೋ ಮಾರಾಯ್ತಿ , ಮರೆಯನ ಅಂದ್ರೂ ಆಗ್ತಿಲ್ಲೆ . ಹಿಂದಿನ ದಿನದಿಂದಲೇ ಪೇಪರ್ , ಟಿವಿ ಎಲ್ಲ ಕಡೆ ಕಣ್ಣಿಗೆ ಹೊಡೀತಿರ್ತಲೇ ! ಹಾ ಹಾ ಹಾ .. ಎಂತಾ ಮಾಡದು !

ಚಿತ್ರಾ said...

ಪ್ರವೀಣ್,
ನಿಮ್ಮ ಸುವಿಚಾರವನ್ನು ಮೆಚ್ಚುತ್ತೇನೆ. ಹೀಗೆಲ್ಲಾ ಮಾಡಿದರೇನೆ ಪ್ರೀತಿ ಎಂದಲ್ಲ , ಇದಕ್ಕಿಂತಲೂ ಅವರ ಭಾವನೆಗಳನ್ನು ಗೌರವಿಸಿದರೆ ಆಗುವ ಸಂತಸ ಹೆಚ್ಚಿನದು . ಏನೇ ಇದ್ದರೂ ಮದುವೆಗೂ ಮುನ್ನವೇ ಪತ್ನಿಯ ಬಗ್ಗೆ ಇಷ್ಟು ಕಾಳಜಿ ವಹಿಸುತ್ತಿರುವ ನಿಮ್ಮ ಬಗ್ಗೆ ಖುಷಿಯೆನಿಸುತ್ತದೆ. ಆಕೆ ಅದೃಷ್ಟವಂತರು ಎಂದುಕೊಳ್ಳೋಣವೇ .

ಚಿತ್ರಾ said...

ಮನಮುಕ್ತಾ
ಧನ್ಯವಾದಗಳು

ಚಿತ್ರಾ said...

ಮನಸಾರೆ,
ನೀವೆನ್ನುವುದು ನಿಜ. ಪರಿಸ್ಥಿತಿ ಸಾಕಷ್ಟು ಬದಲಾಗಿದೆ . ಗಂಡ -ಹೆಂಡತಿ ಇಬ್ಬರೂ ಹೊರಗೆ ದುಡಿಯುವ ಈ ಕಾಲದಲ್ಲಿ ಮನೆಕೆಲಸಗಳಲ್ಲೂ ಪತಿಯ ಸಹಾಯ ಅವಶ್ಯವೆನಿಸುತ್ತದೆ . ನಮ್ಮ ಮನೆಯಲ್ಲಿಯೂ ಕೂಡ ನನ್ನ ಪತಿ ಮನೆಕೆಲಸಗಳಲ್ಲಿ ಬಹಳವೇ ನೆರವಾಗುತ್ತಾರೆ . ಇದರಿಂದ ನನಗೂ ಸುಲಭವಾಗುವುದಷ್ಟೇ ಅಲ್ಲಾ, ಜೊತೆಯಲ್ಲಿ ಹೆಚ್ಚು ಸಮಯ ಕಳೆಯುವ ಅವಕಾಶ ಸಿಕ್ಕಂತಾಗುತ್ತದೆ. ಆದರೆ , ಸಣ್ಣ ಊರುಗಳಲ್ಲಿ , ಹಳ್ಳಿಗಳಲ್ಲಿ ಪರಿಸ್ಥಿತಿ ಬದಲಾಗಲು ಇನ್ನೂ ಸಮಯ ಬೇಕೇನೋ !

ಚಿತ್ರಾ said...

ಶಿವೂ,
ಧನ್ಯವಾದಗಳು . ಹಾಗೆ ಮಾಡಬೇಕು ಅಂತ ಅಂದ್ಕೊತೀರಲ್ಲ ಅಷ್ಟಿದ್ದರೂ ಸಾಕು ! ಖುಷಿಯೆನಿಸುತ್ತದೆ. ನಿಮ್ಮ ಹೃದಯಪೂರ್ವಕ ಹಾರೈಕೆಗಳಿಗೆ ನನ್ನ ಹೃತ್ಪೂರ್ವಕ ಧನ್ಯವಾದಗಳು

ಚಿತ್ರಾ said...

ಪ್ರಕಾಶಣ್ಣ ,
ಒಂದು ದಿನ " ಇವತ್ತಿನ ಅಡಿಗೆ ನನ್ನ ಜವಾಬ್ದಾರಿ " ಎನ್ನುವುದು ಆಚರಣೆಯಲ್ಲ ಒಪ್ಪಿಕೊಳ್ಳುತ್ತೇನೆ. ಆದರೆ , ಒಂದೇ ಒಂದು ದಿನ ಹಾಗೆ ಹೇಳಿದರೂ ಸಹ ಹೆಂಡತಿಗೆ ಎಷ್ಟು ಖುಷಿಯಾಗಬಹುದು ಯೋಚಿಸಿ ? ತಕ್ಷಣ ಆಕೆ ಕೈಗೆ ಸೌಟಂತೂ ಕೊಡುವುದಿಲ್ಲ ಬದಲಿಗೆ ಪ್ರೀತಿ ಉಕ್ಕಿ ನಿಮಗಿಷ್ಟವಾಗಿದ್ದನ್ನೇ ಮಾಡಿ ಬಡಿಸಬಹುದು ! ಹಿ ಹಿ ಹಿ.. . ನೀವಂದಂತೆ ಪ್ರತಿದಿನವೂ ಗೌರವ, ಪ್ರೀತಿ ವಿಶ್ವಾಸಗಳು ದೊರಕುವಂತಿದ್ದರೆ .. ಈ ದಿನವನ್ನು ಸ್ಪೆಷಲ್ ಆಗಿ ಆಚರಿಸುವುದೇ ಬೇಕಾಗಿರಲಿಲ್ಲವೇನೋ ! ಪ್ರತಿದಿನವೂ ' ಮಹಿಳಾ ದಿನ' ವೆ ಆಗುತ್ತಿತ್ತು ! ನಿಮ್ಮಂತೆ ಯೋಚಿಸುವವರು ಹೆಚ್ಚಾಗಲಿ ಎಂದು ಹಾರೈಸುವೆ .
ನಿಮ್ಮ ಶುಭಾಶಯಕ್ಕೆ ನನ್ನ ಧನ್ಯವಾದಗಳು.

ಚಿತ್ರಾ said...

ಗುರು ,
ಹೆದರಡ ಮಾರಾಯ ! ಹೆದರಿಸಲೇ ಹೇಳಿ ಬರೆದಿದ್ದಲ್ಲ ! ಸಂಜೆ ಕೂತು ಮಹಿಳಾ ದಿನ ದ ಬಗ್ಗೆ ಯೋಚನೆ ಮಾಡ್ತಾ ಇದ್ದಾಗ ತಲೇಲಿ ಹೊಳೆದ ವಿಚಾರಗಳು ಇವೆಲ್ಲ ! ಪರಿಸ್ಥಿತಿಯಲ್ಲಿ ಈಗಿತ್ಲಾಗಿ ಸಾಕಷ್ಟು ಸುಧಾರಣೆಯಾದರೂ ಆಗಬೇಕಾಗಿದ್ದು ಇನ್ನೂ ಇದ್ದು ಅನಿಸ್ತು. ಹಾಂಗಾಗಿ ಈ ದಿನಕ್ಕೊಂದು ಮಹತ್ವ ಕೊಡ ಅಗತ್ಯ ಇಲ್ಲೆ ಅನಿಸ್ತು. ಒಟ್ಟಿನಲ್ಲಿ ಅನಿಸಿದ್ದನ್ನೆಲ್ಲ ಬರೆಯವು ಹೇಳಿ ಆನಿಸ್ತು ! .. ಥ್ಯಾಂಕ್ಸು ಶುಭಾಶಯಕ್ಕೆ !

ಚಿತ್ರಾ said...

ರಾಘು ,
ಥ್ಯಾಂಕ್ಸ್ ,

ಚಿತ್ರಾ said...

ಗುರುದೆಸೆಯ ಗುರು ,
ಇರಬಹುದು . ಸುನಾಥ ಕಾಕಾ ರ ಅಭಿಪ್ರಾಯಕ್ಕೆ ನನ್ನದೂ ವೋಟ್ ಇದೆ .
ನಿಮ್ಮ ಬ್ಲಾಗಿಗೆ ಬಂದಿದ್ದೇನೆ , ಆದರೆ , ಎಲ್ಲ ಸಲ ಕಾಮೆಂಟ್ ಹಾಕುವುದು ಸಾಧ್ಯವಾಗುತ್ತಿಲ್ಲ. ತಪ್ಪು ತಿಳಿಯಬೇಡಿ

ವನಿತಾ / Vanitha said...

ಚಿತ್ರ ಅವರೇ,
ಕರೆಕ್ಟ್ ಆಗಿ ಹೇಳಿದ್ರಿ..ಸ್ವಲ್ಪ ಲೇಟ್ ಆದರೂ ಶುಭಾಶಯಗಳು:)

ಸೀತಾರಾಮ. ಕೆ. / SITARAM.K said...

- ಮಹಿಳಾದಿನದ೦ದು ಗ೦ಡುಗಳು ಏನು ಮಾಡಬೇಕೆ೦ದು ತಮ್ಮ ಲೇಖನದಲ್ಲಿ ಸಾಕಷ್ಟು ವಿಷಯ ದೊರೆತಿದೆ. ಮು೦ದಿನ ಮಹಿಳಾದಿನದ೦ದು ತಪ್ಪದೇ ನಾನು ಅದನ್ನು ಪಾಲಿಸುತ್ತೆನೆ.
-ಎಲ್ಲ ಮಹಿಳೆಯರು ತೆರೆಸ ಅದು ಇದು ಅ೦ಥಾ ತಾವೂ ಹೇಳಿದ ಆದರ್ಶ ಸಮಾಜಮುಖಿಗಳಾಗಬೇಕೆ೦ದಿಲ್ಲ. ಪ್ರತಿಯೊಬ್ಬ ಗೃಹಿಣಿ ತನ್ನ ಮನೆಗೆ ತನ್ನ ಸ್ವಾರ್ಥ ತೊರೆದು ದುಡಿಯುತ್ತಾಳೇ ಅವಳ ತ್ಯಾಗಕ್ಕೆ ಸರಿಸಾಟಿಯು೦ಟೇ?. ಎಲ್ಲ ನಾರಿಯರು ತಮ್ಮ ಬದುಕನ್ನು ಇನ್ನೊಬ್ಬರ ಜೀವನ ಹಸನು ಮಾಡುವದರಲ್ಲಿ ಮೀಸಲಿಡುತ್ತಾಳೇ.
-ಮಹಿಳಾ ದೌರ್ಜನ್ಯ, ಹೆಣ್ಣು ಭ್ರೂಣ ಹತ್ಯೆ, ಇತ್ಯಾದಿ ಗಳಿಗಾಗಿ ಸೂಕ್ತ ಹಾಗೂ ತೀಕ್ಷ್ಣ ಕಾಯದೆಗಳ ಅವಶ್ಯವಿದೆ. ಈ ನಿಟ್ಟಿನಲ್ಲಿ ಹೋರಾಟಗಳ ಅವಶ್ಯವಿದೆ.
-ತಮ್ಮ ದೈನ೦ದಿನ ಜೀವನದಲ್ಲಿ ಈ ದಿನ ಏನು ಬದಲಾವಣೆ ಇರದೇ ಮಹಿಳಾ ದಿನಚರಣೆ ತಮಗೆ ಅವಶ್ಯವೇ ಇಲ್ಲ ಅನಿಸಿರಬಹುದು. ಆದರೇ ಹೆಣ್ಣುಗಳಿ೦ದ ತಮ್ಮ ಜೀವನಕ್ಕೆ ಅರ್ಥ ತು೦ಬಿಕೊ೦ಡಿಸಿರುವ ಗ೦ಡುಗಳು ಮನಪೂರ್ವಕವಾಗಿ ಒ೦ದು ಶುಭಾಶಯ ಹೇಳಿ ತಮ್ಮ ಇರುವಿಕೆ ಅವರಿಗೆಷ್ಟು ಮಹತ್ವ ಅನ್ನೋ ಬಗ್ಗೆ ತೋರಿಸಲು ಅವಕಾಶ ಅಲ್ಲವೇ!!
ತಾವೂ -"ಹೀಗಿರುವಾಗ , ಈ ದಿನಕ್ಕೆ ಇಷ್ಟೊಂದು ಮಹತ್ವ ಕೊಡುವ ಅಗತ್ಯವೂ ನಂಗೆ ಕಾಣಿಸುತ್ತಿಲ್ಲ" ಅ೦ದರೂ, ಜೊತೆಗೆ ಶುಭಾಶಯ ಹೇಳೋದು ಬೇಡವೆ೦ದರೂ, ನಾವು ಹೇಳುತ್ತೆವೆ " ಮಹಿಳಾದಿನದ ಹಾರ್ದಿಕ ಶುಭಾಶಯಗಳು ಚಿತ್ರಾ ಮೇಡ೦"

V.R.BHAT said...

ಆರ್ಷೇಯ ಪದ್ಧತಿಯಂತೆ ನಿಮ್ಮೆಲ್ಲರ ಮನೆಗಳ ಮನಗಳ ಹತ್ತಿರ ಬಂದು ಯುಗಾದಿಯ, ಹೊಸವರ್ಷದ ಶುಭಾಶಯಗಳನ್ನು ಕೋರುತ್ತಿದ್ದೇನೆ, ಹೊಸವರ್ಷ ತಮಗೆಲ್ಲ ಸುಖ-ಸಮೃದ್ಧಿದಾಯಕವಾಗಿರಲಿ.

ದೀಪಸ್ಮಿತಾ said...

ಆಚರಣೆ ಕೇವಲ ಸಾಂಕೇತಿಕವಾಗಿ ಒಂದು ದಿನದ ಸಂಭ್ರಮವಾಗಬಾರದು. ಎಲ್ಲಾ ವರ್ಗದ ಮಹಿಳೆಯರು ಅಭಿವೃದ್ಧಿ ಹೊಂದಲು ಏನು ಮಾಡಬೇಕು ಎಂದು ಈ ದಿನ ಚಿಂತಿಸುವಂತೆ ಮಾಡಬೇಕು