April 25, 2010

ಹೇಗೆ ಹೇಳಲಿ ನಿನಗೆ ?

ಎದುರಿಗೆ ಕುಳಿತವಳನ್ನು ಕಣ್ಣಲ್ಲಿ ತುಂಬಿಕೊಳ್ಳುವಂತೆ ನೋಡುತ್ತಿದ್ದೇನೆ.
ತೀರಾ ಸುಂದರಿಯಲ್ಲದಿದ್ದರೂ ಆಕರ್ಷಕವಾದ ಹುಡುಗಿ . ದೊಡ್ಡ ಕಪ್ಪು ಕಣ್ಣುಗಳೇ ಸಾಕು ಮೋಡಿ ಮಾಡಲು . ಹಣೆಯ ಮೇಲೆ ಹಾರುತ್ತಿರುವ ಮುಂಗುರಳನ್ನು ನೀಳವಾದ ಬೆರಳಿಂದ ಹಿಂದೆ ಸರಿಸುವುದೇ ಒಂದು ಚಂದ . ಮೈಗೆ ಅಂಟಿಕೊಂಡ ಜೀನ್ಸ್ , ಬಿಳುಪೂ ಅಲ್ಲದ ಕಪ್ಪಿಗೂ ಸೇರದ ತಿಳಿಯಾದ ಬಣ್ಣಕ್ಕೆ ಒಪ್ಪುತ್ತಿರುವ ಕಂದು ಬಣ್ಣದ ಸ್ಲೀವ್ ಲೆಸ್ ಟಾಪ್ ಸ್ವಲ್ಪ ಉದ್ದವಿರಬಹುದಿತ್ತು ಎಂದು ನನಗನಿಸುತ್ತದೆ. ಆದರೆ , ನಾನು ಅವಳ ಡ್ರೆಸ್ ಬಗ್ಗೆ ಕಾಮೆಂಟ್ ಮಾಡುವುದು ಅವಳಿಗೆ ಇಷ್ಟವಾಗುವುದಿಲ್ಲ .

" ಏನಿವತ್ತು ಮತ್ತೆ ಲೇಟ್ ? "

" ಫ್ರೆಂಡ್ಸ್ ಜೊತೆ ಮಾತಾಡ್ತಾ , ಲೇಟಾಯ್ತು."

" ನಾನು ಕಾಯ್ತಾ ಇರ್ತೀನಿ ಅಂತ ಗೊತ್ತಲ್ವ ನಿಂಗೆ ? '

" ಓಹೋ, ಆಗತ್ತೆ ಒಂದೊಂದು ಸಲ . ಏನೀಗ? '

ಅಷ್ಟರಲ್ಲಿ ಅವಳ ಮೊಬೈಲ್ ರಿಂಗಣಿಸಿತು. ಮತ್ತೆ ಹತ್ತು ನಿಮಿಷ ಮೊಬೈಲ್ ನಲ್ಲಿ ಮಾತು, ನಗು .

' ಯಾರದ್ದು ಫೋನ್?

' ಆಕಾಶ್'

' ಅದೇನು ಅಷ್ಟೊತ್ತು ಅವನ ಜೊತೆ ಮಾತು , ನಗು ? ಏನು ಬೇಕಿತ್ತು ಅವನಿಗೆ? '

ಅವಳ ಮುಖದಲ್ಲಿ ಅಸಹನೆ ಕಾಣಿಸಿತು.

' ಆಕಾಶ್ , ನಂಗೆ ತುಂಬಾ ಒಳ್ಳೆ ಫ್ರೆಂಡ್. ಚಿಕ್ಕೋರಿದ್ದಾಗಿಂದ ಒಂದೇ ಕ್ಲಾಸ್ ನಲ್ಲಿ ಓದಿದೀವಿ. ಅದು ನಿನಗೂ ಗೊತ್ತಲ್ವ? ಅಷ್ಟೇ ಏನು ಅವನ ಮನೆಯವರನ್ನೆಲ್ಲ ಗೊತ್ತು ನಿಂಗೆ . ಮತ್ತೆ ಯಾಕೆ ಹಾಗೆ ಕೇಳ್ತೀಯ? '

' ಆದರೂ , ನೀನು ಅವನ ಜೊತೆ ಅಷ್ಟೆಲ್ಲ ಹರಟೆ ಹೊಡೆಯೋದು , ಕ್ಲೋಸ್ ಆಗಿ ಮೂವ್ ಮಾಡೋದು , ನಂಗೆ ಇಷ್ಟ ಆಗಲ್ಲ '

' ಯಾಕೆ? ,ಏನಾಗತ್ತೆ? ನಿಂಗೆ ನನ್ನ ಮೇಲೆ ವಿಶ್ವಾಸ ಇಲ್ವಾ? '

' ವಿಶ್ವಾಸ ಇಲ್ಲ ಅಂತಲ್ಲ , ಆದರೆ , ನೀನು ಯಾವುದೇ ಹುಡುಗನ ಜೊತೆ ಸಲುಗೆಯಿಂದ ಇದ್ದರೂ ನಂಗೆ ಸೇರೋದಿಲ್ಲ.'

' ಓಹ್ , Come On ! ಯಾಕೆ ಹೀಗಾಡ್ತಿದೀಯ ಇತ್ತೀಚೆ? ನಾನೂ ಗಮನಿಸ್ತಾ ಇದ್ದೀನಿ, ನಾನೂ ಯಾವ ಹುಡುಗರ ಜೊತೆ ಕ್ಯಾಶ್ಯುಅಲ್ ಆಗಿ ಮಾತಾಡಿದ್ರೂ ನಿಂಗೆ ಅನುಮಾನ. ಫ್ರೆಂಡ್ಸ್ ಜೊತೆ ಎಲ್ಲಿ ಹೋಗ್ತೀನಿ ಅಂದ್ರೂ ಅನುಮಾನ , ಬರೋದು ಐದೇ ನಿಮಿಷ ಲೇಟಾದ್ರೂ ಸಂಶಯ . ಸಿನಿಮಾ , ಶಾಪಿಂಗ್ , ಪಿಕ್ ನಿಕ್ ಯಾವುದಕ್ಕೂ ಬೇರೆಯವರ ಜೊತೆ ಹೋಗಬಾರದು , ನಿಂಜೊತೇನೆ  ಬರಬೇಕು ಅಂತೀಯ . ನಂಗೆ ಇವೆಲ್ಲ ristrictions ಇಷ್ಟ ಆಗಲ್ಲ. ನಂಗೆ ನನ್ನದೇ ಲೈಫ್ ನ ಎಂಜಾಯ್ ಮಾಡಬೇಕು . ನನ್ನ ಫ್ರೆಂಡ್ಸ್ ಜೊತೆಗೂ ಸುತ್ತಬೇಕು , ಅಂತ ಅನ್ಸತ್ತೆ. ಎಲ್ಲ ಕಡೆ ಬಾಡಿ ಗಾರ್ಡ್ ತರ ನೀನು ಬರೋದು , ಪ್ರತಿಯೊಂದನ್ನೂ ಪ್ರಶ್ನಿಸೋದು ನಂಗೆ ಬೇಕಾಗಿಲ್ಲ , ನನ್ನ ಮೇಲೆ ಚೂರಾದ್ರೂ ನಂಬಿಕೆ ಇಡು.ನಿನ್ನ ನಂಬಿಕೆನಾ ಹಾಳು ಮಾಡಲ್ಲ ಅನ್ನೋ ಭರವಸೆ ಕೊಡ್ತೀನಿ "

ಕೋಪದಿಂದ ಮುಖ ಕೆಂಪಾಗುತ್ತಿತ್ತು ಅವಳದ್ದು . ಅವಳಿಗೆ ಬೇಜಾರು ಮಾಡುವ ಮನಸಿಲ್ಲ ನಂಗೆ . ಸ್ವಲ್ಪ ಮೆತ್ತಗೆ ಹೇಳಬೇಕು ಇನ್ನು ..
' ಹಾಗಲ್ಲ ಚಿನ್ನಾ, ನೋಡು ನೀನು young , ನೋಡೋಕೆ ಬೇರೆ ಮುದ್ದಾಗಿದೀಯ, ಯಾರು ಹೇಗೆ ಅಂತ ಈಗಿನ ಕಾಲದಲ್ಲಿ ಹೇಳೋದು ಕಷ್ಟ . ಅದಕ್ಕೆ ನಂಗೆ .... "

' ಪ್ಲೀಸ್ , ನಾನೂ ಚಿಕ್ಕೋಳಲ್ಲ , ಅಷ್ಟರ ಮಟ್ಟಿಗೆ ನಂಗೂ ಗೊತ್ತಾಗತ್ತೆ. ಕೇರ್ ಫುಲ್ ಆಗಿರೋಕೆ ನಂಗೂ ಗೊತ್ತು , ನೀನು ಯಾಕೆ   ಸುಮ್ನೆ ಟೆನ್ ಶನ್ ಮಾಡ್ಕೊತೀಯ ? ನನ್ ಪಾಡಿಗೆ ಬಿಡು ನನ್ನ "

ನನ್ನ ಸಹನೆಯೂ ಮುಗಿಯಿತು ..

' ಯಾಕೆ ಟೆನ್ ಶನ್ ಮಾಡ್ಕೊತೀಯ ಅಂದ್ರೆ ? ನಾನು ನಿನ್ನ ' ಅಮ್ಮ ' ಕಣೆ . ನನ್ಗಲ್ದೆ ಇನ್ಯಾರಿಗೆ ಟೆನ್ ಶನ್ ಆಗಬೇಕು ? ಅದು ಹ್ಯಾಗೆ ನಿನ್ನ ನಿನ್ ಪಾಡಿಗೆ ಬಿಡೋಕೆ ಸಾಧ್ಯ ? ನಂಗೆ ಜವಾಬ್ದಾರಿ ಇಲ್ವಾ? ದಿನಾ ಬೆಳಗಾದ್ರೆ , ಪೇಪರ್ ನಲ್ಲಿ, ಟಿವಿ ಲಿ ಒಂದೊಂದು ಕಥೆ ಕೇಳ್ತಾ ಇರ್ತೀವಿ. ಯಾವುದೋ ಕೆಟ್ಟ ಗಳಿಗೇಲಿ ಏನೋ ಆಯ್ತು ಅಂದ್ರೆ .... ? ನಿಂಗೆ ಸ್ವಲ್ಪ ನೋವಾದರೂ ನಮಗೆ ನೆಮ್ಮದಿ ಇರತ್ತೆ ಅಂದ್ಕೊಂಡಿದೀಯ?

ಈ ವಯಸ್ಸಿನಲ್ಲಿ , ಹುಡುಗ್ರು , ಲವ್ವು ಅಂತ ಕಾಮನ್ ಆಗಿದೆ. ಸಿನಿಮಾ, ಟಿವಿ ಎಲ್ಲದರಲ್ಲೂ ಅದನ್ನ ನೋಡಿ ನೋಡಿ ಜೀವನ ಹಾಗೇ ಇರತ್ತೆ ಅಂದ್ಕೊಳೋದು ಸಾಮಾನ್ಯ ಆಗಿಬಿಟ್ಟಿದೆ. ಹಾಗೆ ಹಗಲು ಕನಸು ಕಟ್ಟಿ ಕೊಂಡು ಎದುರಿಗಿರೋ ಭವಿಷ್ಯಾನೆ ಮರೆಯೋ ವಯಸ್ಸು ಇದು. ಕನಸು ಕಾಣೋ ಹುಮ್ಮಸ್ಸಿರುತ್ತೆ ವಿನಾ ಅದು ಒಡೆದು ಹೋದರೆ ಸಂಭಾಳಿಸಿಕೊಳ್ಳುವ ಮೆಚ್ಯೂರಿಟಿ ಬಂದಿರಲ್ಲ. ಆ ನೋವನ್ನ ತಡೆದುಕೊಂಡು , ಓದಿನ ಬಗ್ಗೆ ,ಮುಂದಿನ ಜೀವನದ ಬಗ್ಗೆ , ಲಕ್ಷ್ಯ ಕೊಡೊ ಅಷ್ಟು ಮನಸ್ಸು ಗಟ್ಟಿ ಆಗಿರಲ್ಲ .ಹಾಗೆಲ್ಲ ನೀನು ದುಃಖ ಪಡೋ ಹಾಗೆ ಆಗಬಾರದು ಅಂತ ನಂಗೆ ಅನಿಸೋದು ತಪ್ಪಾ ಪುಟ್ಟಿ ? ತಪ್ಪು -ಸರಿ ಗಳ ನಡುವಿನ ವ್ಯತ್ಯಾಸ ಅರ್ಥವಾಗದ , ಆದರೂ , ಅದನ್ನುನೋಡ ಬಯಸದ ವಯಸ್ಸು ಇದು . ನಿನ್ನ ಫೀಲಿಂಗ್ಸ್ , ಇರಿಟೆಶನ್ ಅರ್ಥ ಆಗತ್ತೆ ನಂಗೂ .ನಾನೂ ಈ ವಯಸ್ಸನ್ನು ದಾಟಿ ಬಂದಿದೀನಿ ಕಣೆ , ತಿಳಿದೋ ,ತಿಳೀದೇನೋ ಕಟ್ಟಿ ಕೊಂಡ ಕನಸು ಪುಡಿಯಾದಾಗಿನ ನೋವೂ ಗೊತ್ತು ನಂಗೆ. ಜೀವನವನ್ನೇ ಬದಲಾಯಿಸಬಲ್ಲ , ಮನಸನ್ನು ಸದಾ ಚುಚ್ಚುವ , ಅಂಥಾ ಯಾವುದೇ  ಕೆಟ್ಟ ಅನುಭವ ನಿನಗಾಗುವುದು  ಬೇಡ ಅಂತ ಹೇಳ್ತಾ ಇದ್ದೀನಿ ಚಿನ್ನೂ .. ಅಮ್ಮನ ಭಾವನೆಗಳನ್ನ ಸ್ವಲ್ಪ ಆದರೂ ಅರ್ಥ ಮಾಡ್ಕೋ . "

ಕಣ್ಣು ಮಂಜಾಗುತ್ತಿತ್ತು , ದನಿ ಭಾರವಾಗುತ್ತಿತ್ತು.....

30 comments:

ಚುಕ್ಕಿಚಿತ್ತಾರ said...

ಹೌದು... ಅಮ್ಮನ ಮನಸ್ಸು ಅರ್ಥವಾಗುವುದು ಅಮ್ಮನಾದಾಗಲೆ...!!!

sunaath said...

Generation gap! ಮಗಳಿಗೆ ಹಾರಾಡುವ ವಯಸ್ಸು. ಅಮ್ಮನಿಗೆ ಗಾಬರಿಯಾಗೋದು ಸಹಜ. ತುಂಬ ಚೆನ್ನಾಗಿ ವರ್ಣಿಸಿದ್ದೀರಿ.

PARAANJAPE K.N. said...

ಅಮ್ಮನ ಸಹಜ ತುಮುಲ, ವಯಸಿಗೆ ಬ೦ದ ಮಗಳ ಮನಸ್ಥಿತಿ, ಚೆನ್ನಾಗಿ ಚಿತ್ರಿತವಾಗಿದೆ.

ಚಿತ್ರಾ said...

ಚುಕ್ಕಿ ಚಿತ್ತಾರ ,
ಮೆಚ್ಚುಗೆಗೆ ಧನ್ಯವಾದಗಳು .ನೀವಂದಿದ್ದು ನಿಜ. ನಾವು ಆ ಜಾಗದಲ್ಲಿ ನಿಂತು ಜವಾಬ್ದಾರಿ ಹೊತ್ತಾಗಲೇ ಅದರ ಭಾರ ಅರ್ಥವಾಗುತ್ತದೆ !

ಚಿತ್ರಾ said...

ಕಾಕಾ,
ನೀವು ಹೇಳಿದಂತೆ " generation gap " ! ಮುಂಚಿಗೆ ಹೋಲಿಸಿದರೆ , ಈಗ ಈ ಗ್ಯಾಪ್ ಬಹಳಷ್ಟು ಕಮ್ಮಿಯಾಗಿದೆ , ಮಕ್ಕಳು, ತಂದೆ ತಾಯಿಯ ಜೊತೆ ಸಾಧ್ಯವಾದಷ್ಟು ಮುಕ್ತವಾಗಿ ಚರ್ಚಿಸಬಲ್ಲ ವಾತಾವರಣ ಉಂಟಾಗುತ್ತಿದೆ , ಅದು ಹೇಗೆ ಇದ್ದರೂ ಅಮ್ಮನ ಮನಸಿನ ಕಳವಳ ಬಹುಶಃ ಪೂರ್ತಿ ಕಮ್ಮಿಯಾಗದು ! !

ಚಿತ್ರಾ said...

ಪರಾಂಜಪೆ,
ನಾವು ಹದಿವಯಸ್ಸಿನ ಹಾರಾಟವನ್ನು ದಾಟಿ ಬಂದಿದ್ದರೂ ಕೂಡ , ಈಗ ನಮ್ಮ ಮಕ್ಕಳು ಆ ವಯಸ್ಸಿನಲ್ಲಿದ್ದಾಗ ,ನಾವು ಮಾಡಿದ್ದನ್ನು ಮರೆತು , ಮಕ್ಕಳ ಬಗ್ಗೆ ಆತಂಕ ಪಡುವುದು ಸಹಜ ಅಲ್ಲವೇ ?

Ittigecement said...

ಚಿತ್ರಾ...

ವ್ಯಕ್ತಿ, ವ್ಯಕ್ತಿಗಳ..
ಅಭಿಪ್ರಾಯ ಭೇದ..
ರಕ್ತ ಸಂಬಂಧ, ತಾಯಿ ಮಕ್ಕಳಲ್ಲೂ ಮುಂದುವರೆಯುತ್ತದೆ...

ವಿವೇಕ..
ತಾಳ್ಮೆಯ..
ಮಾತುಕತೆಯಿಂದ ಪರಿಹರಿಸಿಕೊಂಡರೆ..
ಮನಸ್ಸಿಗೆ...
ನೋವು ಕಡಿಮೆಯಾಗುವದಂತೂ ನಿಜ...

ಅಮ್ಮನ ಒಡಲಾಳದ..
ತೊಳಲಾಟ...
ಭಾನಾತ್ಮಕವಾಗಿ ವ್ಯಕ್ತವಾಗಿದೆ...

ನನ್ನ ಕಣ್ಣಲ್ಲೂ ನೀರಾಡಿತು...

Manasaare said...

ಚಿತ್ರ ಅವರೇ ,
ಅಮ್ಮ ಮಗಳ ಮನಸ್ಸಿನ ಚಿತ್ರಣ ಚೆನ್ನಾಗಿ ಮೂಡಿ ಬಂದಿದೆ . ನಿಜ ಅಮ್ಮನ ಮನಸ್ಸು ಅರ್ಥ ನಾವು ಅಮ್ಮ ಅದಮೆಲೆಯೇ ಗೊತ್ತಾಗುತ್ತೆ . ಹಾಗೆಯೇ ಅತ್ತೆಯ ಮನಸ್ಸು ನಾವು ಒಂದು ಗಂಡು ಮಗುವಿನ ತಾಯಿ ಆದಮೇಲೆ ಗೊತ್ತಾಗುತ್ತೆ .
ಆದ್ರೆ ಒಂದು ಮಾತು ಕಥೆ ಸ್ಟಾರ್ಟ್ ಮಾಡೋವಾಗ ಅದು ಪ್ರೇಮಿಗಳ ನಡುವಿನ ಸಂಭಾಷಣೆ ಅನ್ನಿಸುತ್ತೆ . ಅದು ನೀವು ಬೇಕು ಅಂತ ನೆ ಹಾಗೆ ಸ್ಟಾರ್ಟ್ ಮಾಡಿದ್ದಾ? ಅಥವಾ ನಾನು ತಪ್ಪಾಗಿ ಕಲ್ಪಿಸಿ ಕೊಂಡಿದ್ದಾ ?
ಏನೇ ಆಗಲಿ ಅಮ್ಮನ ದುಗುಡ , ತುಮುಲ , ಭಾವನೆಗಳನ್ನ ಚೆನ್ನಾಗಿ ಹೊರ ತಂದಿದಿರಾ . ನನ್ನ ಅಮ್ಮ ಹಾಗೂ ನನ್ನ ನಡುವೆ ಊಟಗೊಸ್ಕರ್ ತುಂಬಾ ಗಲಾಟೆ ಆಗ್ತಿತ್ತು . ಅವಳು ನಾನು ಚೆನ್ನಾಗಿ ತಿನ್ನಬೇಕು ಹಾಗೆ ತಿಂತಾನೆ ಇರ್ಬೇಕು ಅಂದುಕೊಳ್ಳುವದು ಆಗ ನಂಗೆ irritation ಆಗ್ತಿತ್ತು . ಆದ್ರೆ ಅದೇ ಥರ ನಾನು ನನ್ನ ಮಗನ ಹಿಂದೆ ಊಟದ ಪ್ಲೇಟ ಹಿಡ್ಕೊಂಡು ಓಡಾಡುವಾಗ್ ಅರ್ಥ ಆಗುತ್ತೆ .

ಮನಸಾರೆ

ಚೇತನ್ said...

ಚೆನ್ನಾಗಿದೆ

ಸೀತಾರಾಮ. ಕೆ. / SITARAM.K said...

ಕಥೆ ಪ್ರಾರ೦ಭಿಸಿದಾಗ ಪ್ರೇಮಿಗಳ ಸ೦ಭಾಷಣೆ ಅನ್ಕೊ೦ಡಿದ್ದು ಅಮ್ಮ ಎ೦ದ ಮೇಲೆ ಬೇರೆ ತಿರುವಿನಲ್ಲಿ ಸಾಗಿತು. ಒಳ್ಳೇ ತ೦ತ್ರದ ಕಥೆ ಹೆಣೆದಿದ್ದಿರಾ.... ಅಮ್ಮನ ತೊಳಲಾಟ ಮಗಳ ಮಿಟುಕಲಾಟ ಚೆನ್ನಾಗಿದೆ. ತಲೆಮಾರುಗಳ ಅ೦ತರದ ತಾಕಲಾಟ ಚೆನ್ನಾಗಿ ವ್ಯಕ್ತವಾಗಿದೆ.

ತೇಜಸ್ವಿನಿ ಹೆಗಡೆ said...

ಚಿತ್ರಕ್ಕ,

ಹ್ಮ್ಂ..... ಮೊದ್ಲೆಲ್ಲಾ ಅಮ್ಮ ನಾನು ಚಿಕ್ಕವಳಿರುವಾಗ ಹುಶಾರಿರೋಲ್ಲ ಅಂತ ಬಾಯಿಕಟ್ಟುತ್ತಿದ್ದಳು...ಅದನ್ನು ತಿನ್ನಬೇಡ ಇದನ್ನು ತಿನ್ನಬೇಡ ಎಂದೆಲ್ಲಾ ಹೇಳ್ತಿರೋಳು...ಆವಾಗೆಲ್ಲ ನಂಗೆ ತುಂಬಾ ಕೋಪಬರುತ್ತಿತ್ತು. ಈಗ ಅದಿತಿಗೆ ನಾನೂ ಹಾಗೇ ಹೇಳೋ ಸ್ಥಿತಿ ಬಂದಿದೆ. ಆವಾಗ ನನ್ನಮ್ಮನ ಕಷ್ಟ, ನನ್ನ ಭಾವನೆಗಳು ಎರಡೂ ಅರ್ಥವಾಗುತ್ತಿವೆ. ಮುಂದೆ ನಿನ್ನಂತೇ ನಾನೂ ಪುಟ್ಟಿಯ ಪ್ರತಿ ಇದೇ ರೀತಿ ಕಳವಳಗೊಳ್ಳಬಹುದು. ಮುಂಚಿತವಾಗಿಯೇ ನನ್ನ ತಯಾರುಮಾಡಿಕೊಳ್ಳಬೇಕಾಗಿದೆ..:) ಉತ್ತಮ ಬರಹ.

ಸುಧೇಶ್ ಶೆಟ್ಟಿ said...

:) Chennagidhe...

nange sambhaashaNe ishta aaythu. aadru innashtu savivaravaagi bareyabahudhiththu anisithu.

ಚಿತ್ರಾ said...

ಪ್ರಕಾಶಣ್ಣ,
ಮೆಚ್ಚಿದ್ದಕ್ಕೆ ಥ್ಯಾಂಕ್ಸು ! ಪ್ರತಿಯೊಬ್ಬರ ಸ್ವಭಾವವೂ ಬೇರೆಯೇ, ಹಾಗಾಗಿ ಅಭಿಪ್ರಾಯ ಭೇದ ಬಲು ಸಾಧಾರಣ ! ಅದಕ್ಕೆ ಸಂಬಂಧಗಳ ಕಟ್ಟುಪಾಡಿಲ್ಲ ! ನೀನು ಹೇಳಿದ ಹಾಗೆ ಸಮಾಧಾನವಾಗಿ , ಮನ ಬಿಚ್ಚಿ ಮಾತನಾಡುವುದರಿಂದ ಇದನ್ನು ಸ್ವಲ್ಪವಾದರೂ ಕಮ್ಮಿ ಮಾಡಬಹುದೇನೋ ! ಆದರೆ, ಈಗಿನ ಮಕ್ಕಳಿಗೆ ಕುಳಿತು ಮಾತನಾಡುವ ತಾಳ್ಮೆಯೂ ಬೇಕಲ್ಲ?

ಚಿತ್ರಾ said...

ಮನಸಾರೆ ,
ಮೆಚ್ಚಿದ್ದಕ್ಕೆ ಧನ್ಯವಾದಗಳು. ನಿಮ್ಮ ಅಭಿಪ್ರಾಯಕ್ಕೆ ನನ್ನ ಸಹಮತವಿದೆ .
ಇನ್ನು, ಕಥೆಯ ಬಗ್ಗೆ ನೀವು ತಪ್ಪಾಗಿ ಕಲ್ಪಿಸಿಕೊಂಡಿಲ್ಲ, ಸಂಭಾಷಣೆಯನ್ನು ಬೇಕಂತಲೇ ಹಾಗೆ ಆರಂಭಿಸಿದ್ದು. ಸ್ವಲ್ಪ ಬೇರೆ ತರ ಇರಲಿ ಅಂತ.

ಚಿತ್ರಾ said...

ಚೇತನ್,
ಥ್ಯಾಂಕ್ಸ್ !

ಚಿತ್ರಾ said...

ಸೀತಾರಾಮ್,
ಸೀರಿಯಸ್ ಆಗಿ ಬರೆಯ ಬೇಕು ಅಂತ ಅಂದುಕೊಂಡಿದ್ದೆ , ಆಮೇಲೆ ಯಾಕೋ ಈ ಥರ ಬರೆದರೆ ಹೇಗೆ ಅನ್ನಿಸ್ತು . ಇಷ್ಟವಾಗಿದ್ದಕ್ಕೆ ಸಂತೋಷವಾಯಿತು .

ಚಿತ್ರಾ said...

ತೇಜೂ,
ಇದು ಎಲ್ಲ ಅಮ್ಮಂದಿರ ಅನುಭವ ! ಹಿ ಹಿ ಹಿ .. ನಮ್ಮ ಕಾಲಕ್ಕಿಂತ , ಈಗಿನ ಮಕ್ಕಳ ಬಗ್ಗೆ ನಾವು ಹೆಚ್ಚು ಕಾಳಜಿ ತೆಗೆದುಕೊಳ್ಳಬೇಕಾಗಿದೆ. ಹಾಗೆ ನೋಡಿದರೆ, ಇಂದಿನ ಮಕ್ಕಳು , ವಯಸ್ಸಿಗೆ ಮೀರಿ ಪ್ರಬುದ್ಧರಾಗುತ್ತಿದ್ದಾರೆ. ಅದು ಒಂದು ರೀತಿಯಲ್ಲಿ ತಂದೆ ತಾಯಿಗಳಿಗೆ ಚಿಂತೆಯ ವಿಷಯವೂ ಹೌದು. ಮೊಬೈಲ್, ಇಂಟರ್ ನೆಟ್ ಗಳು ಅವಶ್ಯಕವಾಗಿರುವುದರ ಜೊತೆ ಆತಂಕಕಾರಿಗಳೂ ಆಗಿವೆ. ಮನೆಯಲ್ಲಿ ಎಷ್ಟೇ ಸುಸಂಸ್ಕೃತವಾಗಿ ಬೆಳೆದರೂ ಹೊರಗೆ ಯಾರ ಪ್ರಭಾವ ಹೇಗಾಗುತ್ತದೋ ಎಂಬ ಯೋಚನೆ ಕಾಡದೆ ಇರುವುದಿಲ್ಲ . ನಿನ್ನ ಪುಟ್ಟಿಯ ಬಗ್ಗೆ ಕಾಳಜಿವಹಿಸಲು ಇನ್ನೂ ಸಮಯವಿದೆ ಬಿಡು.

ಚಿತ್ರಾ said...

ಸುಧೇಶ್,
ಹ್ಮ್ಮ್, ನಿಜ ಅಂದ್ರೆ, ಬರೆಯೋಕೆ ತುಂಬಾ ಇತ್ತು . ಇದು ಒಂಥರಾ ಮುಗಿಯದ ವಿಷಯ ! ಆದರೆ , ಸಾಕು ಅನಿಸ್ತು.
ನಿಮಗೆ ಇಷ್ಟವಾಯ್ತಲ್ಲ , ಧನ್ಯವಾದಗಳು !

ಮನಸಿನಮನೆಯವನು said...

ಚಿತ್ರಾ,
ಏನೋ ಎನಿಸುವಷ್ಟರಲ್ಲೇ ಸಖತ್ ತಿರುವು ತೆಗೆದುಕೊಂಡಿತು..

ಜಲನಯನ said...

ಚಿತ್ರಾ ಅಮ್ಮನಿಗೆ ಮಗಳು/ಮಗನು ಯಾರೇ ಅದ್ರೂ ಎಷ್ಟು ಪ್ರಿಯರು ಅನ್ನೋದು ತಿಳಿಯೋಕೆ ಅವ್ರು ಅಮ್ಮ ಆಗಿರಬೇಕು ಇಲ್ಲ ಆ ಸಂಬಂಧಗಳ ಅತಿ ನಿಕಟ ಪರಿಚಯ ಅಥವಾ ದರ್ಶನ ಮಾಡಿರಬೇಕು...ವಯಸ್ಸು ಹತ್ತು ಆದ್ರೂ ನನ್ನ ಮಗಳನ್ನ ನನ್ನವಳು ಇನ್ನೂ ಚಂದಮಾಮನನ್ನು ತೋರಿಸುತ್ತಾ ತುತ್ತು ತಿನ್ನೋ ಮಗು ಅಂದ್ಕೊಂಡಿದ್ದಾಳೆ....ನಿಜ..ಇದು ಒಮ್ದು ಮಧುರ ಸಂಬಂಧ...ಅತಿಕಾಳಜಿ ಮಕ್ಕಳಿಗೆ ಇರಿಸುಮುರಿಸು ಆಗೋ ಸಾಧ್ಯತೆ ಹೆಚ್ಚು...ಚನ್ನಾಗಿದೆ ನಿಮ್ಮ ಈ ಸಂಭಾಷಿತ ಮನೋತಾಕಲಾಟದ ವರ್ಣನೆ...

ಶಾಂತಲಾ ಭಂಡಿ (ಸನ್ನಿಧಿ) said...

ಚಿತ್ರಕ್ಕಾ,
ಮಕ್ಕಳನ್ನು ಒಮ್ಮೆ ತಾಯಿಯಾಗಿ, ಮತ್ತೆ ಗುರುವಾಗಿ, ಇನ್ನೊಮ್ಮೆ ಸ್ನೇಹಿತೆಯಾಗಿ, ಮತ್ತೊಮ್ಮೆ ಮಕ್ಕಳೊಡನೆ ಮಗುವೇ ಆಗಿ ವ್ಯವಹರಿಸುವ ಅವಕಾಶವನ್ನು ನಿಭಾಯಿಸುವಲ್ಲಿ ನಮ್ಮೊಳಗಿನ ತಳಮಳಗಳು!

ಇಷ್ಟವಾಯ್ತು ಅಂದದ ಮಗಳೊಡನೆ ಚೆಂದದ ತಾಯಿಯ ತಳಮಳದೊಡನೆಯ ಒಡನಾಟ.

ಚಿತ್ರಾ said...

ಜ್ಞಾನಾರ್ಪಣ ಮಸ್ತು ,
ಸ್ವಲ್ಪ ಭಿನ್ನವಾಗಿರಲಿ ಎಂದು ತಿರುವು ಕೊಟ್ಟಿದ್ದು ! ಇಷ್ಟವಾಯ್ತಲ್ಲ ? ಧನ್ಯವಾದಗಳು

ಚಿತ್ರಾ said...

ಆಜಾದ್,
ಈಗೀಗ ಮನೆಗೆ ಒಂದೇ ಮಗು ಬಹು ಸಾಮಾನ್ಯ . ಹೀಗಿರುವಾಗ ತಂದೆ ತಾಯಿಗಳು ಮಕ್ಕಳನ್ನು ಅತೀ ಮುದ್ದಿನಿಂದ , ಅತೀ ಕಾಳಜಿಯಿಂದ ಬೆಳೆಸುವುದೂ ಸಹ ಸಹಜವಾಗಿದೆ.
ಇದರಿಂದ ಮಕ್ಕಳು ದೊಡ್ಡವರಾದಂತೆ , ಅವರಿಗೆ ಅಪ್ಪ ಅಮ್ಮನ ಕಾಳಜಿ ಒಂಥರಾ ಸಂಕೋಲೆ ಎನಿಸುವ ಸಾಧ್ಯತೆ ಹೆಚ್ಚು. ನೀವು ಅಂದಂತೆ , ಮಕ್ಕಳಿಗೆ ಇರಿಸುಮುರಿಸಾಗಿ ಹಠ , ಸಿಡುಕು ಹೆಚ್ಚಾಗುತ್ತಿದೆ.
ಇದೆಲ್ಲ ಗೊತ್ತಿದ್ದರೂ ಕೂಡ ಕೆಲವೊಮ್ಮೆ ಅಪ್ಪ ಅಮ್ಮಂದಿರು ಅಸಹಾಯಕರು . ಕೆಲ ಸಂದರ್ಭಗಳಲ್ಲಾದರೂ ಮುದ್ದಿನ ಮಕ್ಕಳ ವರ್ತನೆಯ ಬಗ್ಗೆ, ಭವಿಷ್ಯದ ಬಗ್ಗೆ ಚಿಂತಿಸದೆ ಇರಲು ಸಾಧ್ಯವೇ ಇಲ್ಲ . ಮೆಚ್ಚಿದ್ದಕ್ಕೆ ಧನ್ಯವಾದಗಳು.

ಚಿತ್ರಾ said...

ಶಾಂತಲಾ,
ನೀ ಹೇಳಿದಂತೆ , ಮಕ್ಕಳೊಡನೆ ವಿವಿಧ ಹಂತಗಳಲ್ಲಿ ಬೇರೆ ಬೇರೆ ಪಾತ್ರಗಳನ್ನೂ ನಾವು ನಿಭಾಯಿಸಬೇಕು. ಈ ಎಲ್ಲವುಗಳಲ್ಲಿ ನಮ್ಮ ನಿಜವಾದ ಅಂದರೆ ' ಅಮ್ಮನ' ಪಾತ್ರದಷ್ಟು ಕಷ್ಟದ್ದು ಯಾವುದೋ ಇಲ್ಲ ಎನಿಸುತ್ತದೆ ! ಆ ತಳಮಳವನ್ನು ಹಂಚಿಕೊಳ್ಳುವುದೂ ಕಷ್ಟ . ಬೇರೆಯವರಿಗೆ ಸುಲಭವಾಗಿ ಅರ್ಥವಾಗದ್ದು ಅದು !
ಬರಹವನ್ನು ಮೆಚ್ಚಿದ್ದಕ್ಕೆ ಥ್ಯಾಂಕ್ಸು !

ಮಂಸೋರೆ said...

ಚೆನ್ನಾಗಿದೆ ಟ್ವಿಸ್ಟು... ಪ್ರೇಮಿಗಳ ಮಧ್ಯದ ಸಂಭಾಷಣೆಯಂತೆ ಶುರು ಮಾಡಿ ಅಮ್ಮ ಮಗಳಿಗೆ ಕನ್ವರ್ಟ್ ಮಾಡಿದ್ದು.... ನನಗೊಂದು ಡೌಟು... ಅಮ್ಮಂದಿರು ಯಾವಾಗಿಂದ ಮಗಳ ಸೌಂದರ್ಯದ ವರ್ಣನೆ ಮಾಡಲು ಶುರು ಮಾಡಿದ್ರು?

ಚಿತ್ರಾ said...

ಮಂಸೋರೆ ,
ಬ್ಲಾಗಿಗೆ ಸ್ವಾಗತ ! ಮೊತ್ತ ಮೊದಲು ಕೇಳೋದು ಅಂದ್ರೆ ನಿಮ್ಮ ಹೆಸರು ಗೊತ್ತಾಗಲಿಲ್ಲ . 'ಮಂಸೋರೆ ,' ಇದು ಹೆಸರ ಅಥವಾ abbreviation ಅಂತಾನು ಗೊತ್ತಾಗಲಿಲ್ಲ . ದಯವಿಟ್ಟು ಅರ್ಥಮಾಡಿಸಿ.
ಬರಹವನ್ನು ಮೆಚ್ಚಿದ್ದಕ್ಕೆ ಧನ್ಯವಾದಗಳು. ಇನ್ನು ನಿಮ್ಮ ಪ್ರಶ್ನೆ ... ಅಮ್ಮಂದಿರು ಯಾವಾಗ ಮಗಳ ಸೌಂದರ್ಯ ವರ್ಣನೆ ಶುರು ಮಾಡಿದ್ದು ಅಂತ .. ಅದು ತುಂಬಾ ಸಾಮಾನ್ಯ ಕಣ್ರೀ . ಅಪ್ಪ ಅಮ್ಮಂದಿರಿಗೆ ಮಕ್ಕಳ ಬುದ್ಧಿ ಚುರುಕುತನ ಮತ್ತು ಚಂದದ ಬಗ್ಗೆ ಹೆಮ್ಮೆ ಇದ್ದೇ ಇರತ್ತೆ. ಮತ್ತೆ , ಇಲ್ಲಿ ಅಮ್ಮ ಮಗಳ ಸೌಂದರ್ಯಾನ ಹೆಮ್ಮೆಯಿಂದ ನೋಡಿ ಖುಷಿ ಪಡ್ತಾ ಇದಾಳೆ. ಯಾರ ಹತ್ತಿರ ಹೇಳಿಕೊಂಡು ಅಲ್ಲಾ . So it is OK ಅಲ್ವ ? :)
ಅಂದಹಾಗೆ , ನಿಮ್ಮ ಬರಹಗಳು ಚೆನ್ನಾಗಿವೆ !

ಮಂಸೋರೆ said...

ಪ್ರತಿಕ್ರಿಯೆಗೆ ಧನ್ಯವಾದಗಳು...
ಮಂ= ಮಂಜುನಾಥ್
ಸೋ= ಸೋಮಕೇಶವ ರೆ=ರೆಡ್ಡಿ ನಮ್ಮ ತಂದೆಯ ಹೆಸರು...
ಒಟ್ಟಾರೆ ಮಂಸೋರೆ. :-) ನನ್ನ ಬರಹಗಳನ್ನು ಮೆಚ್ಚಿದ್ದಕೆ ದನ್ಯವಾದಗಳು.. ಆದ್ರೆ ನಿಮ್ಮ ಬರಹದಲ್ಲಿನ ವರ್ಣನೆ ಅಮ್ಮನ ರೀತಿಯಲ್ಲಿದೆ ಅಂತ ಅನಿಸಲಿಲ್ಲ ಅದಕ್ಕಾಗಿ ಹಾಗೆ ಕೇಳಿದೆ.. ಬಹುಶಃ ಈಗಿನ ಅಮ್ಮಂದಿರು ಹೀಗೂ ಯೋಚಿಸಬಹುದೇನೋ...

ವನಿತಾ / Vanitha said...

ಹೊಸ ಪ್ರಯೋಗ ಚೆನ್ನಾಗಿದೆ..
ಎಲ್ಲಾ ಅಮ್ಮಂದಿರ ಮನಸ್ಸಿನ ತುಮುಲವನ್ನು ಸರಿಯಾಗಿ ಬರೆದಿದ್ದೀರಿ..

shivu.k said...

ಚಿತ್ರ ಮೇಡಮ್,

ಮತ್ತೆ ತಡವಾಗಿ ಬರುತ್ತಿದ್ದೇನೆ...ಒಮ್ಮೇ ಓದಿದ್ದೆ. ಆದ್ರೆ ಕಾಮೆಂಟಿಸಲು ಆಗಿರಲಿಲ್ಲ....ಮೊದಲು ಇದನ್ನು ಓದಿದಾಗ ಅವಳ ಬಾಯ್ ಪ್ರೆಂಡ್ ಮಾತಾಡಿದಂತೆ ಅನ್ನಿಸಿದರೂ ನಿದಾನವಾಗಿ ಅವಳಮ್ಮ ಮಗಳ ಬಗ್ಗೆ ಇಟ್ಟಿರುವ ಕಾಳಜಿ ಗೊತ್ತಾಗುತ್ತದೆ..ಎರಡು ವಿರುದ್ಧ ದಿಕ್ಕಿನ ಮನಸ್ಸುಗಳನ್ನು ವಿಭಿನ್ನವಾಗಿ ಕೊಡುತ್ತಾ ಇಂದಿನ ಪ್ರಸ್ತುತ ಸ್ಥಿತಿಯನ್ನು ಚೆನ್ನಾಗಿ ವಿವರಿಸಿದ್ದೀರಿ...

ವಾಣಿಶ್ರೀ ಭಟ್ said...

tumba chennagide.. biduvinallomme beti kodi

www.vanishrihs.blogspot.com