June 7, 2010

ನಂ ಕನ್ನಡ ಭಾಸೆ - 3


ಕನ್ನಡ ಮಾತೃ ಭಾಷೆಯಲ್ಲದ ಎಷ್ಟೋ ಜನ  ತಮ್ಮ ಸುತ್ತ ಮುತ್ತಲಿನವರಿಂದ ಕನ್ನಡ ಕಲಿತು ಮಾತನಾಡುವ ಉತ್ಸಾಹ ತೋರಿಸುತ್ತಾರೆ. ಎಷ್ಟೋ ಜನ  ಅಪ್ಪಟ ಕನ್ನಡಿಗರಂತೆ ಮಾತನಾಡಲು ಕಲಿಯುತ್ತಾರೆ. ಇನ್ನು ಕೆಲವರ ಕನ್ನಡ ಕೇಳಿದರೆ  ಇವರು ಕಲಿಯುವುದೇ ಬೇಡಿತ್ತು ಅನಿಸಿಬಿಡುತ್ತದೆ.  ನಡುವೆ ಕೆಲವರಿದ್ದಾರೆ , ಅವರ ಕನ್ನಡ ನಗೆಯುಕ್ಕಿಸಿದರೂ, ಅವರ ಪ್ರಾಮಾಣಿಕತೆಯನ್ನು ಮೆಚ್ಚಲೇಬೇಕಾಗುತ್ತದೆ .

ನಾ ಕಂಡ ,ಕೇಳಿದ ಕೆಲ ಪ್ರಸಂಗಗಳು ಇಲ್ಲಿವೆ.
 ನಾನು ೪-೫ ನೇ ಕ್ಲಾಸಿನಲ್ಲಿದ್ದಾಗ  ನಮ್ಮ ಪಕ್ಕದ ಹಳ್ಳಿಗೆ  ಅಮೆರಿಕಾದಿಂದ ಇಬ್ಬರು ಮಹಿಳೆಯರು ಬಂದಿದ್ದರು.  ಭಾರತದ ಹಳ್ಳಿಗಳ ಜನಜೀವನದ ಅಧ್ಯಯನಕ್ಕಾಗಿ ! ಸುಮಾರು ೬-೮ ತಿಂಗಳುಗಳ ಕಾಲ ಹಳ್ಳಿಯಲ್ಲೇ ಒಬ್ಬರ ಮನೆಯಲ್ಲಿದ್ದು  ಸುತ್ತಮುತ್ತಲಿನ ಜನರ ಜೀವನವನ್ನು ಅಭ್ಯಾಸ ಮಾಡುತ್ತಿದ್ದರು. ಅವರು ಇಲ್ಲಿದ್ದಾಗ ಕನ್ನಡ  ಮಾತನಾಡಲು ಮಾತ್ರವಲ್ಲ ಬರೆಯುವುದನ್ನೂ ಕಲಿತರು ! ಅದೂ ಗ್ರಾಮ್ಯ ಕನ್ನಡ ! 

ಈಗ ಸುಮಾರು ೨೮ ವರ್ಷಗಳ ಹಿಂದೆ  ಇಬ್ಬರೇ ಮಹಿಳೆಯರು ಅಮೆರಿಕಾದಿಂದ ಭಾರತದ ಹಳ್ಳಿ ಮೂಲೆಗೆ ಬರುವುದೆಂದರೆ , ಬಂದು ಇಲ್ಲೇ ಉಳಿದು , ಕನ್ನಡ ಮಾತನಾಡಲು ಕಲಿಯುವುದೆಂದರೆ ... ನಮ್ಮ ಕಡೆ ಎಲ್ಲರಿಗೂ ಅತ್ಯಂತ ಆಶ್ಚರ್ಯದ ಸಂಗತಿಯೇ ಅಲ್ಲವೇ ?

 ಹತ್ತಿರ ಹತ್ತಿರ ಆರಡಿ ಎತ್ತರವಿದ್ದ ಆ ಹೆಣ್ಣುಮಕ್ಕಳು ಯಾರ ಮನೆಗೆ ಹೋಗುವುದಿದ್ದರೂ  ತಾವು ಉಳಿದುಕೊಂಡಿದ್ದ  ಮನೆಯ ಯಜಮಾನತಿಯ  ಕೈಮಗ್ಗದ ಸೀರೆಗಳನ್ನು  ಉಟ್ಟು ( ಅವರ ಎತ್ತರದಿಂದಾಗಿ ಸೀರೆ ಪಾದಕ್ಕಿಂತ  ಕೆಲ ಇಂಚುಗಳು ಮೇಲಕ್ಕೆ ಇರುತ್ತಿತ್ತು ! ) , ಯಾರದ್ದೋ ರವಿಕೆಗಳನ್ನು  ಅಡ್ಜಸ್ಟ್  ಮಾಡಿ ಹಾಕಿಕೊಂಡು , ಹಣೆಗೆ ಹುಡಿ ಕುಂಕುಮ ಹಚ್ಚಿಕೊಂಡು , ಕೈಗೆ ಬಳೆ, ಇದ್ದಷ್ಟೇ ಕೂದಲಿಗೆ ಹೂ  ಇತ್ಯಾದಿ ಅಲಂಕಾರ ಮಾಡಿಕೊಂಡು  ಹೋಗುತ್ತಿದುದು ನಮಗೆ ಅದ್ಭುತ ಎನಿಸುತ್ತಿತ್ತು . ಕ್ಷಮಿಸಿ , ವಿಷಯ ಎಲ್ಲೆಲ್ಲಿಗೋ ಹೋಗುತ್ತಿದೆಯೇ?

ಹಾಂ , ಅವರು ತಮ್ಮ ಅಮೇರಿಕನ್  ಧಾಟಿಯಲ್ಲಿ ಕನ್ನಡ ಮಾತನಾಡುತ್ತಿದ್ದರೆ , ನಾವು ಮಕ್ಕಳು ಅದನ್ನು ಕೇಳಿ  ಕಿಸಕ್ಕೆಂದು ನಗಲು ಕಾಯುತ್ತಿದ್ದೆವು ! 
ಅವರಲ್ಲೊಬ್ಬಾಕೆ  , ಫೋಟೋ ತೋರಿಸುತ್ತ  ತನ್ನ ಕುಟುಂಬದ ಸದಸ್ಯರನ್ನು  ಪರಿಚಯಿಸಿದ್ದು  ಹೀಗಿತ್ತು ;

' ಇಧು  ನನ್ ಫ್ಯಾಮಿಲೀ  ಫೋಟೋ !  ಇಧು  ಎರಧು   ಗಂಢ , ಒಂದು ಗಂಢ ಇಲ್ಲಾ ,  Seperated  !
  ಇಧು ಒಂದು ಗಂಢ ಮಗ ,  ಇಧು ಒಂಧು  ಗಂಢ ಮಗಿ , ಮಧ್ವೆ ಆತು 
 ಇಧು ಎರಧು ಗಂಢ ಮಗಿ  , ಇನ್ನೂ  ಚಿಕ್ಕಾ .. ಸ್ಕೂಲ್ ಓದ್ತು.. 
 '
ಹೀಗೇ ಆಕೆಯ ವಿವರ ಸಾಗುತ್ತಿದ್ದರೆ , ನಾವು ಕಿಸಿ ಕಿಸಿ ನಗುತ್ತಿದ್ದೆವು . ದೊಡ್ಡವರು ಆಕೆಯ   " ಒಂದು ಗಂಢ ,ಎರಧು   ಗಂಢ ' ವಿವರಣೆಯಿಂದ  ಕಕ್ಕಾಬಿಕ್ಕಿಯಾಗಿದ್ದರು ! ಅದಾಗಲೇ  ೫೦ರ ಆಸು ಪಾಸಿನಲ್ಲಿದ್ದ ಆಕೆ ಒಂದೆರಡು  ವರುಷಗಳ   ಹಿಂದೆ ತಾನೇ  ಎರಡನೇ  ಮದುವೆ ಮಾಡಿಕೊಂಡಿದ್ದು ಹೇಳುವಾಗ  ಹಳಬರಿಗೆ ಹಾರ್ಟ್ ಅಟ್ಯಾಕ್ ಆಗುವುದಷ್ಟೇ ಬಾಕಿ !


ಆಕೆಗೆ ಹೇಳಬೇಕಾಗಿದ್ದು  ಇದು ;
" ಇದು ನನ್ ಫ್ಯಾಮಿಲೀ ಫೋಟೋ ! ಇದು ಎರಡನೇ ಗಂಡ , ಒಂದನೇ ಗಂಡ ಇಲ್ಲ , ನಾವು ಬೇರೆಯಾಗಿದ್ದೇವೆ .
  ಈತ  , ಒಂದನೇ ಗಂಡನ ಮಗ , ಈಕೆ ಒಂದನೇ ಗಂಡನ ಮಗಳು ! ( ಮಗ - ಮಗಿ !! ) ಮದುವೆ ಆಗಿದೆ .
 ಈಕೆ ಎರಡನೇ ಗಂಡನ ಮಗಳು , ಇನ್ನೂ ಚಿಕ್ಕವಳು , ಇನ್ನೂ ಸ್ಕೂಲ್ ಗೆ ಹೋಗುತ್ತಿದ್ದಾಳೆ ....  "

ನಮಗೆ ಆಗ ತಡೆಯಲಾಗದಷ್ಟು ನಗು. ಆದರೆ ತನ್ನ ದೇಶಕ್ಕೆ ಮರಳಿದ ಅದೆಷ್ಟೋ ವರ್ಷಗಳ ಬಳಿಕವೂ ಆಕೆ  ಗ್ರಾಮ್ಯ ಕನ್ನಡದಲ್ಲೇ ಪತ್ರಗಳನ್ನು ಬರೆಯುತ್ತಿದ್ದುದನ್ನು ತಿಳಿದಾಗ  ಆ ಮಹಿಳೆಯ ಬಗ್ಗೆ ತುಂಬಾ ಅಭಿಮಾನ ಮೂಡುತ್ತದೆ.
--------------------------------------------------------------------------------------------------------------------------

ಸುಮಾರು ವರ್ಷಗಳ ಹಿಂದೆ ಭದ್ರಾವತಿಯಲ್ಲಿ ನನ್ನ ಚಿಕ್ಕಮ್ಮನ ಪಕ್ಕದ ಮನೆಯಲ್ಲಿ ಒಂದು ಮಲಯಾಳೀ ಕುಟುಂಬವಿತ್ತು . ಅವರಿಗೆ ಇಬ್ಬರು ಮಕ್ಕಳು. ಮಗಳು ನನ್ನ ಚಿಕ್ಕಮ್ಮನ  ಮಗಳದೇ ವಯಸ್ಸಿನವಳು. ಆ ಮಹಿಳೆಯೂ ಬಹಳ ಉತ್ಸಾಹದಿಂದ ಕನ್ನಡ ಕಲಿಯುವ ಪ್ರಯತ್ನ ನಡೆಸಿದ್ದರು.  ಅಕ್ಕ ಪಕ್ಕದವರು ಮಾತನಾಡುವಾಗ ಗಮನಿಸಿ ಕೇಳಿ  ಹೊಸ ಹೊಸ ಶಬ್ದಗಳನ್ನು ಕಲಿಯುತ್ತಿದ್ದರು. ಅವರದೇ ಮಲಯಾಳೀಕೃತ ಕನ್ನಡದಲ್ಲಿ ಆಕೆ ಮಾತನಾಡುವಾಗ ಎಷ್ಟೋ ಸಲ ಅರ್ಥವೇ ಆಗುತ್ತಿರಲಿಲ್ಲ. ಮತ್ತಷ್ಟು ಸಲ ನಗು ಉಕ್ಕುತ್ತಿತ್ತು. ಆದರೆ ಇದರಿಂದ ಆಕೆಯ ಉತ್ಸಾಹ ಮಾತ್ರ ಕಮ್ಮಿಯಾಗಲಿಲ್ಲ . ನಗುತ್ತಲೇ ತಮ್ಮ ತಪ್ಪುಗಳನ್ನು ತಿದ್ದಿಕೊಳ್ಳುತ್ತಿದ್ದರು !

ಒಂದು ಸಂಜೆ,  ಹೊರಗೆ ಆಡ ಹೋದ ಮಗಳು ಇನ್ನೂ ಬರಲಿಲ್ಲವೆಂದು ಕೋಪಿಸಿಕೊಂಡಿದ್ದ ಅವರು ಚಿಕ್ಕಮ್ಮನಲ್ಲಿ  ತಮ್ಮ ಅಸಮಧಾನ ವ್ಯಕ್ತ ಪಡಿಸಿದರು !
  
" ಇದಾ , ಶ್ಯಾಮಲಾ ,  ಎಂದೆ ಮೋಳು ಇನ್ನಾ ಮನೆಗೆ ಬರವೇ ಇಲ್ಲ ! ಮೋಳು ಊರ ಬಸರಿಯಾದ್ದು!  .. "  

ಚಿಕ್ಕಮ್ಮನಿಗೆ ಗಾಬರಿಯಾಯ್ತು , " ಇದ್ಯಾಕೆ ಏನೇನೋ ಅಂತಿದೀರಾ? ಅವಳಿನ್ನೂ ತುಂಬಾ  ಚಿಕ್ಕವಳು, ಹಾಗೆಲ್ಲ ಅಂತಾರೆನ್ರೀ  ?   " 

ತಾನು ಹೇಳಿದ್ದೇನೋ ತಪ್ಪಿದೆ ಎಂದು ಅರ್ಥ ಮಾಡಿಕೊಂಡ   ಆಕೆ' ಅದೇ  ಶ್ಯಾಮಲಾ, ಮೊನ್ನೆ  ನೀನು ನಿಂದೆ ಮೋಳಿಗೆ  ಪರನ್ಜಿಲ್ಲೆಯೋ?  "

ಚಿಕ್ಕಮ್ಮನಿಗೆ  ಈಗ ಅರ್ಥವಾಗಿ  ಹಣೆ ಚಚ್ಚಿ ಕೊಂಡರು .. " ಅಯ್ಯೋ ಅದು ಊರ ಬಸರಿ  ಅಲ್ಲರೀ ,  ಊರಬಸವಿ  ತರ ತಿರುಗಬೇಡ ಅಂತ ಬಯ್ದಿದ್ದು  '

ಆಮೇಲೆ , ಬಸುರಿ ಯ ಅರ್ಥವನ್ನು ಆಕೆಗೆ ತಿಳಿಸಿದಾಗ ಆಕೆಯೂ ನಗುತ್ತಾ ಹಣೆ ಚಚ್ಚಿಕೊಂಡರು !ಕನ್ನಡ ಮಾತೃ ಭಾಷೆಯಾಗಿದ್ದರೂ , ಇಂಗ್ಲಿಷ್ ನಲ್ಲೆ ಮಾತನಾಡ ಬಯಸುವ ಬಹಳಷ್ಟು ಜನರ ನಡುವೆ , ಹೀಗೆ ಕನ್ನಡ ಭಾಷೆಯನ್ನು ಕಲಿತು ಮಾತನಾಡುವ ಉತ್ಸಾಹ ತೋರುವವರನ್ನು ಕಂಡಾಗ ಅಭಿಮಾನವೆನಿಸುವುದಿಲ್ಲವೇ? 

22 comments:

ವಿ.ರಾ.ಹೆ. said...

:) :) Yes..

PARAANJAPE K.N. said...

thumba chennaagide

ಸೀತಾರಾಮ. ಕೆ. / SITARAM.K said...

(-: he he :-)

ಸುಧೇಶ್ ಶೆಟ್ಟಿ said...

ಚೆನ್ನಾಗಿದೆ ಅಮೇರಿಕ ಕನ್ನಡ ಮತ್ತು ಮಲಯಾಳಿ ಕನ್ನಡ!

ನಮ್ಮ ಮನೆಯ ಹತ್ತಿರ ಕೂಡ ಒಬ್ಬರು ಮಲಯಾಳಿ ಹೆ೦ಗಸು ಇದ್ದರು.... ಅವರು ತುಳು ಮತ್ತು ಕನ್ನಡ ಕಲಿತಿದ್ದು ಅಲ್ಲದೆ ಕನ್ನಡದಲ್ಲಿ ಕವನ ಕೂಡ ಬರೀತಾ ಇದ್ದರು!

ಭಾರತ ನಮ್ಮ ದೇಶ....
ಇಲ್ಲಿ ಹುಟ್ಟಿದರೆ ನಮ್ಮ ಜಮ್ಮ ಪಾವನ!

ಹೀಗಿರುತ್ತಿತ್ತು ಅವರ ಕವನ! ಆದರೂ ಅವರ ಕನ್ನಡ ಅಭಿಮಾನ ಖುಷಿ ತರಿಸುವ೦ತದ್ದು :)

ಇಷ್ಟ ಆಯಿತು ಈ ಬರಹ :)

Chinmay said...

ಮೊದಲ ವಿವರಣೆ ತುಂಬಾ ಖುಷಿ ಆಯಿತು. ಗ್ರಾಮ್ಯ ಭಾಷೆ ನಮ್ಮ ಬೆಂಗಳೂರಿಗರಿಗೆ ತಿಳಿಯುವದಿಲ್ಲ. ಶೇಕಡಾ ೫೦ರಸ್ಟು ಕನ್ನಡ ನಾಡಿನ ನಗರಗಳಲ್ಲಿರುವವರಿಗೆ ಕನ್ನಡ ಓದಲು, ಬರೆಯಲು ಬರುವುದಿಲ್ಲ! ಇಂತ ಆಸಕ್ತಿ ವಿಶೇಷ!

Subrahmanya said...

ಹೌದು. :D. ನನ್ನ ಬಳಿ ಮಲಯಾಳಿಯೊಬ್ಬರು ಹೀಗೆ ಮಾತನಾಡಿದ ನೆನಪು ಬಂತು " ನಾನು ಹೋದಾಗ ಒಂದು ಗಂಡ, ಬಂದಾಗ ಎರಡು ಗಂಡ " !.

ಮನದಾಳದಿಂದ............ said...

ಕನ್ನಡದವರೇ ಕನ್ನಡವನ್ನು ಮರೆತಿರುವಾಗ ಪರಕೀಯರ ಕನ್ನಡಾಭಿಮಾನ ನೋಡಿ ತುಂಬಾ ಸಂತೋಷವಾಯಿತು.

ಸುಮ said...

ನಿಜ ನಮ್ಮ ಬೆಂಗಳೂರಿನಲ್ಲಂತೂ ಇಂಗ್ಲೀಷಿನಲ್ಲಿ ಮಾತನಾಡಿದರೆ ಮಾತ್ರ ನಾಗರೀಕರು ಎಂಬಂತೆ ನೋಡುತ್ತಾರೆ . ಹೀಗಿರುವಾಗ ಮಾತೃಭಾಷೆ ಬೇರೆಯಾಗಿದ್ದೂ ತಾವಿರುವ ಜಾಗದ ಭಾಷೆ ಕಲಿತು ಮತನಾಡುವವರು ನಿಜಕ್ಕೂ ಸಹೃದಯಿಗಳು ಎನ್ನಿಸುತ್ತಾರೆ.

Guru's world said...

ಇಷ್ಟ ಆಯಿತು,, ನಿಮ್ಮ ಬರಹ.... ಹೌದು,,, ಕನ್ನಡವೇ ಗೊತ್ತಿರುವವರು,,,ಇದ್ದರು ಅವರಿಗೆ ಮಾತನಾಡಲು ಏನೋ ಒಂದು ತರ....
ಕೆಲವರಿರುತ್ತಾರೆ...ಕನ್ನಡದಲ್ಲಿ ಮಾತನಾಡಿಸಿದರು... ಮಾತಾಡೋಕೆ ಅಳುತ್ತಾರೆ...

sunaath said...

ಖುಶಿ ಹಾಗು ವಿನೋದ ಒಟ್ಟಿಗೆ ಆದವು.

ಸಿಮೆಂಟು ಮರಳಿನ ಮಧ್ಯೆ said...

ಚಿತ್ರಾ...

ಹೌದು..
ಅನ್ಯ ಭಾಷಿಕರು ಕನ್ನಡ ಮಾತನಾಡಿದರೆ ಖುಷಿಯಾಗುತ್ತದೆ..

ನಿಮ್ಮ ಎರಡೂ ಅನುಭವಗಳನ್ನು ಓದಿ ಹೊಟ್ಟೆತುಂಬಾ ನಕ್ಕೆವು..

ನಮ್ಮನೆ ಬಳಿ ಇರುವ ಮಲೆಯಾಳಿ ಹುಡುಗಿ ಹತ್ತಿರ
"ಯಾಕೆ ತಡ ಆಯ್ತು?" ಅಂತ ಕೇಳೀದಾಗ..

"ಎಂತಾ ಮಾಡುವದು..?

ನಿನ್ನೆ ರಾತ್ರಿ ಮನೆಗೆ ಬಂದಾಗ ಒಂದು ಗಂಡ.. !
ಬೆಳಿಗ್ಗೆ ಏಳುವಾಗ ಎಂಟು ಗಂಡ... !!"


ನಾವೆಲ್ಲ ಸುಸ್ತು !!

ನಮ್ಮನ್ನೆಲ್ಲ ನಗಿಸಿದ್ದಕ್ಕೆ ಧನ್ಯವಾದಗಳು..

ಸಾಗರದಾಚೆಯ ಇಂಚರ said...

ಚಿತ್ರಾ
ಸಿಂಪ್ಲಿ ಸೂಪರ್
ನಕ್ಕು ನಕ್ಕು ಸುಸ್ತು
ಒಳ್ಳೆ ಬರದ್ದೆ

ತೇಜಸ್ವಿನಿ ಹೆಗಡೆ said...

:D :D :D

shivu.k said...

ಚಿತ್ರ,

ಮತ್ತೆ ತಡವಾಗಿ ನಿಮ್ಮ ಬ್ಲಾಗಿಗೆ. ಆದ್ರೂ ನಿಮ್ಮ ಅಮೆರಿಕನ್ನಡ ಮಹಿಳೆಯರು, ಮಲೆಯಾಳಿ ಹೆಣ್ಣುಮಗಳ ಮಾತು ಕೇಳಿ ನಗುಬಂತು. ಕನ್ನಡ ಗೊತ್ತಿದ್ದು ಮಾತಾನಾಡದಿರುವವರಿಗಿಂತ ಇವರು ತಪ್ಪು ಮಾತಾಡಿದರೂ ಇವರೇ ಮೇಲು ಅನ್ನಿಸುತ್ತೆ...

ಚಿತ್ರಾ said...

ಬರಹ ಮೆಚ್ಚಿದ ಎಲ್ಲರಿಗೂ ಹೃತ್ಪೂರ್ವಕ ಧನ್ಯವಾದಗಳು .
ನಿಮ್ಮ ಪ್ರೋತ್ಸಾಹ ಹೀಗೇ ಇರಲಿ.

ಕೃಷ್ಣಪ್ರಕಾಶ ಬೊಳುಂಬು, ಕಾಸರಗೋಡು said...

ಸುಧೇಶ್ ಶೆಟ್ಟರಿಗೆ,
ಬೆಂಗಳೂರಿಗರ ಮಟ್ಟಿಗೆ ನಾನೂ ಮಲೆಯಾಳಿಯೇ. ಆಗಾಗ ಮಲೆಯಾಳದಿನ್ದ [ಇದು ತಪ್ಪು ಪ್ರಯೋಗವಲ್ಲ, ಕನ್ನಡದಲ್ಲಿ ಹೀಗೂ ಬರೆಯಬಹುದು. ಇಂದ ಎನ್ನುವುದಕ್ಕಿನ್ತ ಇನ್ದ ಹೆಚ್ಚು ಸರಿ.] ಕನ್ನಡಕ್ಕೆ ಆಗಾಗ ಹಾಡುಗಳನ್ನು ಅನುವಾದ ಮಾಡುತ್ತಿರುತ್ತೇನೆ. ಆದರೆ ಈ ಹಾಡು ಕನ್ನಡದಿನ್ದ ಮಲೆಯಾಳಕ್ಕೆ ಮಾಡಿರುವನ್ಥದ್ದು.ಅನುವಾದ ಹೇಗಿದೆಯೆನ್ದು ತಿಳಿಸಿರಿ. ಹಾಡು - ಮಿಂಚಾಗಿ ನೀನು ಬರಲು:

ಮಿನ್ನಿ ಅಣಯುನ್ನು ದೀಪಂ|ತುಡಿಚ್ಚು ಕುದಿಕ್ಕುನ್ನು ನೆಂಜಂ|
ಉಡಲಿಲೊರು ಜೀವನುಮೇಕೀ|ಮಧುರಮಾಂ ಒರನನುರಾಗಂ|
ಮಿನ್ನಿ ಅಣಯುನ್ನು ದೀಪಂ|ತುಡಿಚ್ಚು ಕುದಿಕ್ಕುನ್ನು ನೆಂಜಂ|

ನಿನ್ ಪ್ರೇಮಮೆನ್ನಿಲೆ ತೇನರುವಿಯಾಯ್| ಜನ್ಮಾನ್ತರಂಗಳಿಲ್ ಒೞುಕೀಡುಮೇ|
ಕಣ್ ಮುನ್ನಿಲ್ ವನ್ನದುಂ| ಪಿನ್ನೆ ಮಱಞ್ಞದುಂ|ಸೌರಭ್ಯಮೆನ್ನಿಲುಂ ಅಣಿಯಿಚ್ಚದುಂ|
ಕನವು ಪೋಲೆ ಮಿನ್ನಿ ಮಱಯುಂ| ನಿನ್ಡೆ ರೂಪಂ|

ಮಲೆಯಾಳದಿನ್ದ ಕನ್ನಡಕ್ಕೆ ತರ್ಜಮೆ ಮಾಡಿರುವ ಹಾಡುಗಳೂ ಇವೆ. ಮೇಲಿನದ್ದರ ಕುಱಿತ ಅಭಿಪ್ರಾಯ ತಿಳಿದ ಮೇಲೆ ಹೇೞುತ್ತೇನೆ.

ಚಿತ್ರಾ said...

ಕೃಷ್ಣ ಪ್ರಕಾಶರೆ ,
ನನ್ನ ಬ್ಲಾಗಿಗೆ ಸ್ವಾಗತ !
ಈ ಬರಹದ ಬಗ್ಗೆ ನಿಮ್ಮ ಅಭಿಪ್ರಾಯ ಏನೆಂದು ತಿಳಿಯಲಿಲ್ಲ !ಕ್ಷಮಿಸಿ.
ನನಗೆ ಮಲಯಾಳೀ ಭಾಷೆ ಗೊತ್ತಿರದ ಕಾರಣ ಗೀತೆಯ ಭಾಷಾಂತರದ ಬಗ್ಗೆ ನಾನು ಏನನ್ನೂ ಹೇಳಲು ಅಸಮರ್ಥಳು.
ಸುಧೇಶ್ ಅವರಿಗೆ ಸಹ ಮಲಯಾಳ ಭಾಷೆ ಗೊತ್ತಿರುವ ಬಗ್ಗೆ ನನಗೆ ಅನುಮಾನವಿದೆ.

ಹೀಗೆ ಬರುತ್ತಿರಿ ಹಾಗೂ ತಮ್ಮ ಅನಿಸಿಕೆಗಳನ್ನು ತಿಳಿಸುತ್ತಿರಿ.
ಧನ್ಯವಾದಗಳು

ಸುಧೇಶ್ ಶೆಟ್ಟಿ said...

ಕೃಷ್ಣ ಪ್ರಕಾಶರೇ....

ಚಿತ್ರಾ ಅವರು ಹೇಳಿದ೦ತೆ ನನಗೂ ಕೂಡ ಮಲಯಾಳ೦ ತಿಳಿಯದು.. ನಿಮ್ಮ ಕನ್ನಡ ಅಭಿಮಾನ ಕ೦ಡು ಸ೦ತೋಷವಾಯಿತು :)

ಕೃಷ್ಣಪ್ರಕಾಶ ಬೊಳುಂಬು, ಕಾಸರಗೋಡು said...

"ಬೆಂಗಳೂರಿಗರ ಮಟ್ಟಿಗೆ ನಾನೂ ಮಲೆಯಾಳಿಯೇ...."
ಮಲೆಯಾಳಿಗನೊಬ್ಬ ಕನ್ನಡ ಬರಹದಲ್ಲಿ ಕಮೆಣ್ಟ್ ಬರೆದಿರುವುದರ ಕುಱಿತಾಗಿ ತಮ್ಮ ಅಭಿಪ್ರಾಯ ತಿಳಿಸುವಿರೆಂಬ ನಿರೀಕ್ಷೆಯಲ್ಲಿ ಮೊದಲ ವಾಕ್ಯವನ್ನು ಬರೆದಿದ್ದೆನು.....ತಮ್ಮ ಅಭಿಪ್ರಾಯ ಹೇೞಿ.
ಭಾಷಾಂತರ...ಎನ್ದಿರಿ. ನಾನು ಬೞಸಿರುವ ಅನುವಾದ ಮತ್ತು ತರ್ಜಮೆ ಎನ್ನುವ ಪದಗಳಲ್ಲಿ ಏನೋ ಕೊಱತೆಯಿರುವನ್ತೆ ನನಗನ್ನಿಸಿತು. ನಿಜವೇ?...ಭಾಷಾಂತರವೊನ್ದೇ ಸರಿಯೇ?

<<>>
ಹಾಗೆನ್ದರೆ ಕೆಟ್ಟ ಅರ್ಥವಿದೆ ಮೇಡಂರವರೇ.
ಮಲ = ಶರೀರದ ಕಶ್ಮಲ.
ಮಲೆನಾಡು ಎನ್ನುವಲ್ಲಿ ಬರುವ 'ಮಲೆ'ಯೇ ಮಲೆಯಾಳದಲ್ಲೂ ಬೞಕೆಯಾಗುವಂಥದ್ದು. [ ಆದರೆ ನಿಮ್ಮಲ್ಲಿ 'ಮಲೆನಾಡು' ಎನ್ನದೆ 'ಮಲ್ನಾಡ್' ಎನ್ನುವುದು ಬಹಳ ಸ್ಟೈಲಿಷ್ ಎನ್ದು ಪರಿಗಣಿಸಲ್ಪಡುವುದನ್ತೆ. ಕನ್ನಡವ ಉಚ್ಚರಿಸಬೇಕಾದ ಸರಿಯಾದ ಉಚ್ಚರಿಸಬೇಕೆಂಬುದು ನನ್ನ ಅಭಿಪ್ರಾಯವೆನ್ದು ನೀವು ತಿಳಿದುಕೊಣ್ಡರೂ ಅಡ್ಡಿಯಿಲ್ಲ. ] ಹೀಗೆ ಹೇೞಿಕೊಟ್ಟರೆ ನೀವು 'ಮಲ್ಯಾಳ' ಎನ್ನುವಿರಿ. ಹಿನ್ದಿಗರು 'ಮಲ್ಯಾಲ' ಎನ್ದರೆ ಅದೇ ಸರಿಯೆನ್ನುವಿರಿ. ಆದರೆ ಕನ್ನಡಕ್ಕೆ ಸಹಜವಾದ ರೀತಿಯಲ್ಲಿ ಉಚ್ಚರಿಸುವುದಾದರೆ ಅದು 'ಮಲೆಯಾಳ'ವಾಗುವುದು.
ಆ ಭಾಷೆಯ[ನ್ನು] ಮಾತನಾಡುವಾತ 'ಮಲೆಯಾಳಿಗ'. ತಮಿೞ[ನ್ನು] ಮಾತನಾಡುವಾತ ' ತಮಿೞಿಗ'. ತೆಲುಗ[ನ್ನು] ಮಾತನಾಡುವಾತ 'ತೆಲುಗಿಗ'.

ಏನೂ ಇಲ್ಲದಿದ್ದರೂ ಎರಡು ವರುಷಗಳ ಹಿನ್ದೆ ಬೆಂಗಳೂರಿನಲ್ಲಿ ಹಿನ್ದಿಗರು ಯಾರೋ 'ಕನ್ನಡ್' ಎನ್ದರೆನ್ದು ಅವರ ಮೇಲೆ ಆಕ್ರಮಣ ಮಾಡಿದ ಘಟನೆ ನಡೆದಿತ್ತು. ಆದರೆ ಕನ್ನಡಿಗರು ತಾವು ಉಚ್ಚರಿಸುವ ರೀತಿಯ ಕುಱಿತು ಗಮನವನ್ನೇ ನೀಡರು.

<<>>
ತುಂಬ ಹೞೆಯದಾಗಿದೆ ಕಾಣ್ರಿ. ಪ್ರಾಣೇಶ, ರಿಚರ್ಡ್ ಲೂಯಿಸ, ಡುಣ್ಡಿರಾಜ, ಕೃಷ್ಣೇಗೌಡ....ಮುನ್ತಾದವರೆಲ್ಲ ಹಲವು ವರುಷಗಳಿನ್ದ ಹೇೞಿಕೊಣ್ಡು ಬರುತ್ತಿರುವ ಮಾತಿದು. ತಮಗೂ ಅದೇ ಅನುಭವವಾಯಿತು...ಭೇಷ್!

<<>>
<<>>
ಅವರಲ್ಲಿ ಕಣ್ಡನ್ತಹುದೇ 'ಕನ್ನಡ ಅಭಿಮಾನ'ವನ್ನು ನನ್ನಲ್ಲೂ ಕಣ್ಡಿರಿ. ಆದರೆ ನಿಜವಾಗಿ ಅದು 'ಕನ್ನಡಾಭಿಮಾನ'. ಅಲ್ಲಿ ಸಂಧಿಯಿದೆ. ಗೊತ್ತಿರುವವರನ್ನು ಕೇಳಿ ತಿಳಿಯಿರಿ. ಒಬ್ಬ ಮಲೆಯಾಳಿ ಹೇೞಿದುದಕ್ಕಾಗಿ ಒಪ್ಪಬೇಡಿರಿ.

ಭಾಷಾಂತರದ ಬಗ್ಗೆ ನಾನು ಅಭಿಪ್ರಾಯ ಕೇಳುತ್ತಲಿಲ್ಲ. ಹಾಡಿನ ಮುನ್ನ ಕೆಲವು ಸಾಲುಗಳು[ನನಗೆ ಕಾಣಿಸುವನ್ತೆ ಆಱು ಸಾಲುಗಳಿರುವುವು. ನಿಮಗೆ ಎಷ್ಟು ಸಾಲು ಕಾಣಿಸಿದರೂ ಒನ್ದಷ್ಟು ಸಾಲುಗಳು ಕಾಣಿಸುವುದನ್ತೂ ಖಚಿತ. ] ಕನ್ನಡದಲ್ಲಿ ಇರುವುದು ನಿಜವಾದರೆ ಆ ಪ್ರಯೋಗಗಳ ಗುಣಮಟ್ಟ, ಶುದ್ಧತೆ, ಮುನ್ತಾದ ವಿಚಾರಗಳ ಕುಱಿತ ವಿಮರ್ಶೆಗಳ ನಿರೀಕ್ಷೆಯಲ್ಲಿದ್ದೇನೆ.

<<>>ನನ್ನ ಕನ್ನಡ ನೋಡಿದಾಗ ಹಾಗನ್ನಿಸಿತೇ? 'ಬೇಡಿತ್ತು' ತಪ್ಪು ಪ್ರಯೋಗ.

ಕೃಷ್ಣಪ್ರಕಾಶ ಬೊಳುಂಬು, ಕಾಸರಗೋಡು said...

ಮಲೆಯಾಳಿಗನೊಬ್ಬ ಕನ್ನಡ ಬರಹದಲ್ಲಿ ಕಮೆಣ್ಟ್ ಬರೆದಿರುವುದರ ಕುಱಿತಾಗಿ ತಮ್ಮ ಅಭಿಪ್ರಾಯ ತಿಳಿಸುವಿರೆಂಬ ನಿರೀಕ್ಷೆಯಲ್ಲಿ ಮೊದಲ ವಾಕ್ಯವನ್ನು ಬರೆದಿದ್ದೆನು.....ತಮ್ಮ ಅಭಿಪ್ರಾಯ ಹೇೞಿ.
ಭಾಷಾಂತರ...ಎನ್ದಿರಿ. ನಾನು ಬೞಸಿರುವ ಅನುವಾದ ಮತ್ತು ತರ್ಜಮೆ ಎನ್ನುವ ಪದಗಳಲ್ಲಿ ಏನೋ ಕೊಱತೆಯಿರುವನ್ತೆ ನನಗನ್ನಿಸಿತು. ನಿಜವೇ?...ಭಾಷಾಂತರವೊನ್ದೇ ಸರಿಯೇ?

<<>>
ಹಾಗೆನ್ದರೆ ಕೆಟ್ಟ ಅರ್ಥವಿದೆ ಮೇಡಂರವರೇ.
ಮಲ = ಶರೀರದ ಕಶ್ಮಲ.
ಮಲೆನಾಡು ಎನ್ನುವಲ್ಲಿ ಬರುವ 'ಮಲೆ'ಯೇ ಮಲೆಯಾಳದಲ್ಲೂ ಬೞಕೆಯಾಗುವಂಥದ್ದು. [ ಆದರೆ ನಿಮ್ಮಲ್ಲಿ 'ಮಲೆನಾಡು' ಎನ್ನದೆ 'ಮಲ್ನಾಡ್' ಎನ್ನುವುದು ಬಹಳ ಸ್ಟೈಲಿಷ್ ಎನ್ದು ಪರಿಗಣಿಸಲ್ಪಡುವುದನ್ತೆ. ಕನ್ನಡವ ಉಚ್ಚರಿಸಬೇಕಾದ ಸರಿಯಾದ ಉಚ್ಚರಿಸಬೇಕೆಂಬುದು ನನ್ನ ಅಭಿಪ್ರಾಯವೆನ್ದು ನೀವು ತಿಳಿದುಕೊಣ್ಡರೂ ಅಡ್ಡಿಯಿಲ್ಲ. ] ಹೀಗೆ ಹೇೞಿಕೊಟ್ಟರೆ ನೀವು 'ಮಲ್ಯಾಳ' ಎನ್ನುವಿರಿ. ಹಿನ್ದಿಗರು 'ಮಲ್ಯಾಲ' ಎನ್ದರೆ ಅದೇ ಸರಿಯೆನ್ನುವಿರಿ. ಆದರೆ ಕನ್ನಡಕ್ಕೆ ಸಹಜವಾದ ರೀತಿಯಲ್ಲಿ ಉಚ್ಚರಿಸುವುದಾದರೆ ಅದು 'ಮಲೆಯಾಳ'ವಾಗುವುದು.
ಆ ಭಾಷೆಯ[ನ್ನು] ಮಾತನಾಡುವಾತ 'ಮಲೆಯಾಳಿಗ'. ತಮಿೞ[ನ್ನು] ಮಾತನಾಡುವಾತ ' ತಮಿೞಿಗ'. ತೆಲುಗ[ನ್ನು] ಮಾತನಾಡುವಾತ 'ತೆಲುಗಿಗ'.

ಕೃಷ್ಣಪ್ರಕಾಶ ಬೊಳುಂಬು, ಕಾಸರಗೋಡು said...

ಏನೂ ಇಲ್ಲದಿದ್ದರೂ ಎರಡು ವರುಷಗಳ ಹಿನ್ದೆ ಬೆಂಗಳೂರಿನಲ್ಲಿ ಹಿನ್ದಿಗರು ಯಾರೋ 'ಕನ್ನಡ್' ಎನ್ದರೆನ್ದು ಅವರ ಮೇಲೆ ಆಕ್ರಮಣ ಮಾಡಿದ ಘಟನೆ ನಡೆದಿತ್ತು. ಆದರೆ ಕನ್ನಡಿಗರು ತಾವು ಉಚ್ಚರಿಸುವ ರೀತಿಯ ಕುಱಿತು ಗಮನವನ್ನೇ ನೀಡರು.

<<>>
ತುಂಬ ಹೞೆಯದಾಗಿದೆ ಕಾಣ್ರಿ. ಪ್ರಾಣೇಶ, ರಿಚರ್ಡ್ ಲೂಯಿಸ, ಡುಣ್ಡಿರಾಜ, ಕೃಷ್ಣೇಗೌಡ....ಮುನ್ತಾದವರೆಲ್ಲ ಹಲವು ವರುಷಗಳಿನ್ದ ಹೇೞಿಕೊಣ್ಡು ಬರುತ್ತಿರುವ ಮಾತಿದು. ತಮಗೂ ಅದೇ ಅನುಭವವಾಯಿತು...ಭೇಷ್!

<<>>
<<>>
ಅವರಲ್ಲಿ ಕಣ್ಡನ್ತಹುದೇ 'ಕನ್ನಡ ಅಭಿಮಾನ'ವನ್ನು ನನ್ನಲ್ಲೂ ಕಣ್ಡಿರಿ. ಆದರೆ ನಿಜವಾಗಿ ಅದು 'ಕನ್ನಡಾಭಿಮಾನ'. ಅಲ್ಲಿ ಸಂಧಿಯಿದೆ. ಗೊತ್ತಿರುವವರನ್ನು ಕೇಳಿ ತಿಳಿಯಿರಿ. ಒಬ್ಬ ಮಲೆಯಾಳಿ ಹೇೞಿದುದಕ್ಕಾಗಿ ಒಪ್ಪಬೇಡಿರಿ.

ಭಾಷಾಂತರದ ಬಗ್ಗೆ ನಾನು ಅಭಿಪ್ರಾಯ ಕೇಳುತ್ತಲಿಲ್ಲ. ಹಾಡಿನ ಮುನ್ನ ಕೆಲವು ಸಾಲುಗಳು[ನನಗೆ ಕಾಣಿಸುವನ್ತೆ ಆಱು ಸಾಲುಗಳಿರುವುವು. ನಿಮಗೆ ಎಷ್ಟು ಸಾಲು ಕಾಣಿಸಿದರೂ ಒನ್ದಷ್ಟು ಸಾಲುಗಳು ಕಾಣಿಸುವುದನ್ತೂ ಖಚಿತ. ] ಕನ್ನಡದಲ್ಲಿ ಇರುವುದು ನಿಜವಾದರೆ ಆ ಪ್ರಯೋಗಗಳ ಗುಣಮಟ್ಟ, ಶುದ್ಧತೆ, ಮುನ್ತಾದ ವಿಚಾರಗಳ ಕುಱಿತ ವಿಮರ್ಶೆಗಳ ನಿರೀಕ್ಷೆಯಲ್ಲಿದ್ದೇನೆ.

<<>>ನನ್ನ ಕನ್ನಡ ನೋಡಿದಾಗ ಹಾಗನ್ನಿಸಿತೇ? 'ಬೇಡಿತ್ತು' ತಪ್ಪು ಪ್ರಯೋಗ.

ಚಿತ್ರಾ said...

ಕೃಷ್ಣ ಪ್ರಕಾಶರೇ,
ತಮ್ಮ ಮಾತೃಭಾಷೆ ಕನ್ನಡವೋ ಮಲೆಯಾಳಿಯೋ ಎನ್ನುವುದಕ್ಕಿಂತ , ಕನ್ನಡ ಸಾಹಿತ್ಯದಲ್ಲಿ ತಮಗಿರುವ ಆಸಕ್ತಿ ಹಾಗೂ ಜ್ಞಾನವನ್ನು ನಾನು ಗೌರವಿಸುತ್ತೇನೆ .
ಅನುವಾದ,ಭಾಷಾಂತರ ಹಾಗೂ ತರ್ಜುಮೆ( ಇದು ಉರ್ದು ಮೂಲದಿಂದ ಬಂದಿದ್ದು ಎಂದು ಕೇಳಿದ್ದೇನೆ) ಇವುಗಳ ನಡುವೆ ಹೆಚ್ಚಿನ ವ್ಯತ್ಯಾಸವಿಲ್ಲ ಎಂದು ನನ್ನ ತಿಳುವಳಿಕೆ. ಹಾಗೆ ಇರಬಹುದಾದ ಸ್ವಲ್ಪ ಮಟ್ಟಿನ ವ್ಯತ್ಯಾಸವನ್ನು ವಿವರವಾಗಿ ತಿಳಿಸುವಷ್ಟು ಆಳವಾದ ಜ್ಞಾನವೂ ನನ್ನದಲ್ಲ . ಹೀಗಾಗಿ ಕ್ಷಮಿಸಿ.

ತಾವು ನಾನು 'ಮಲಯಾಳೀ 'ಎಂದು ಬರೆದಿದ್ದನ್ನು ತಿದ್ದಿದ್ದೀರಿ ಧನ್ಯವಾದಗಳು. ನಮ್ಮಲ್ಲಿ "ಮಲಯಾಳೀ" ಎಂಬ ಉಚ್ಚಾರವನ್ನು ವ್ಯಾಪಕವಾಗಿ ಕೇಳಿರುವುದು ಇದಕ್ಕೆ ಕಾರಣವಾಗಿದೆಯಷ್ಟೇ .
ಇನ್ನು , 'ಮಲ್ನಾಡ್' ಎಂದು ಹೇಳಿಕೊಳ್ಳುವುದು " ಸ್ಟೈಲಿಶ್ ' ಎಂದು ಪರಿಗಣಿಸಲ್ಪಡುತ್ತದೆ ಎಂದೇನಿಲ್ಲ , ಆದರೆ , ಆಡುಭಾಷೆಯಲ್ಲಿ ಬಹಳಷ್ಟು ಶಬ್ದಗಳು ತಮ್ಮ ಮೂಲರೂಪದಿಂದ ಸ್ವಲ್ಪ ಮಟ್ಟಿಗೆ ಬದಲಾಗುತ್ತವೆ . ಇದು ನನ್ನ ಅಭಿಪ್ರಾಯ . ಹಂ, ಕೆಲವರು ನೀವಂದಂತೆ ಸ್ಟೈಲಾಗಿ ಹಾಗೆ ಹೇಳಬಹುದು ಆದರೆ ಎಲ್ಲರೂ ಹಾಗಲ್ಲ.
ಇನ್ನು ತಮ್ಮ ಭಾಷೆಯ ಕುರಿತು ಕನ್ನಡಿಗರಿಗಿರುವ ನಿರಾಸಕ್ತಿ , ನಿರಭಿಮಾನ ಕುರಿತು ನನಗೂ ಬೇಸರವಿದೆ.

ಮಲೆಯಾಳೀ ಭಾಷೆ ಅಪರಿಚಿತವಾಗಿರುವುದರಿಂದ ಹಾಡಿನ ಅನುವಾದ/ ತರ್ಜುಮೆ ಕುರಿತು ಏನನ್ನೂ ಹೇಳಲಾರೆ. ಪದಗಳ ಗುಣಮಟ್ಟ, ಶುದ್ಧತೆ ಇತ್ಯಾದಿ ವಿಷಯಗಳ ಬಗ್ಗೆ ವಿಮರ್ಶೆ ಮಾಡುವಷ್ಟು ಪಂಡಿತಳೂ ನಾನಲ್ಲ. ನಾನೇನಿದ್ದರೂ ನನಗನಿಸಿದ್ದನ್ನು, ನನ್ನ ಅನುಭವಗಳನ್ನು ,ಸರಳವಾದ ಭಾಷೆಯಲ್ಲಿ ಹಂಚಿಕೊಳ್ಳುವ ಪ್ರಯತ್ನ ಮಾಡುತ್ತೇನಷ್ಟೇ .
ಕನ್ನಡ ಭಾಷೆಯ ಬಗ್ಗೆ ತಮ್ಮ ಕಾಳಜಿ , ಹಾಗೂ ಕಳಕಳಿಗೆ ಧನ್ಯವಾದಗಳು .

ಬರುತ್ತಿರಿ.