August 9, 2010

ಹಿಂದಿನ ರಾಮಾಯಣವೂ , ಇಂದಿನ ಮಕ್ಕಳೂ ...

ಸ್ಕೂಲ್ ಬಸ್ನಿಂದ ಮಕ್ಕಳು ಕೆಳಗಿಳಿದರು . ೩ನೇ ಕ್ಲಾಸ್ ಓದುತ್ತಿರುವ ಅಪೂರ್ವಾ , ಓಡಿ ಬಂದವಳೇ 

 ' ಅಜ್ಜಿ ಅಜ್ಜಿ , ನಂ ಟೀಚರ್ ಇವತ್ತು  ಒಂದು ನ್ಯೂಸ್  ಹೇಳಿದ್ರು , ಚೈನಾದಲ್ಲಿ ಒಬ್ಬ  ಇದಾನಂತೆ .
 ಅವನು   ಆರು ತಿಂಗಳು ಬರೀ ನಿದ್ರೇನೆ ಮಾಡ್ತಾನೆ  ಮತ್ತಾರು ತಿಂಗಳು ಮಲಗೋದೇ ಇಲ್ಲ ! ಹಾಗೆ ಸಾಧ್ಯನ ಅಜ್ಜಿ? '

ಮೊಮ್ಮಗಳು ಹೇಳಿದ್ದನ್ನು ಕೇಳಿ ಅಜ್ಜಿ  " ಹ್ಞೂ ಮರೀ, ನಮ್ಮ ರಾಮಾಯಣದಲ್ಲಿ  ಒಬ್ಬ ಹಾಗೇ ಇದ್ದ ರಾಕ್ಷಸ ! ಅವನ ಹೆಸರು ಕುಂಭಕರ್ಣ ಅಂತ.  ! "
' ಹೌದಾ ಅಜ್ಜಿ ? ನಿಂಗೊತ್ತಾ ಆ ಕಥೆ? ನಂಗೆ ಇವತ್ತು ಆ ಕಥೆ ಹೇಳ್ತೀಯಾ ? ....  '

'ಹೇಳ್ತೀನಿ. ಮೊದಲು ನೀವೆಲ್ಲಾ ಕಾಲು ತೊಳ್ಕೊಂಡು  ಸ್ವಲ್ಪ ಏನಾದರೂ ತಿಂದ್ಕೊಂಡು ಬನ್ನಿ . ಮತ್ತೆ ಕಥೆ ಶುರುಮಾಡ್ತೀನಿ . '
-------------------------------------------------------------- 
' ದಶರಥ ಅಂತ ರಾಜ ಇದ್ದ . ಅವನಿಗೆ  ೩ ಜನ ಹೆಂಡತೀರು ಇದ್ರು.  '
' ೩ ಜನಾ  ನ ?  ಅಜ್ಜೀ, ಆಗ  ' bigamy '   allowed  ಇತ್ತಾ?  '  ಆಫೀಸ್ ನಿಂದ ಬಂದು ಕಾಫೀ ಹಿಡಿದು ಪೇಪರ್ ಓದುತ್ತಾ ಕುಳಿತಿದ್ದ  ಸ್ಮಿತಾ ಪೇಪರ್ ಸರಿಸಿ ನೋಡಿದಳು . ಕೇಳಿದವನು  ಭಾವನವರ  ಮಗ ೧೪ ರ ವರುಣ್ !  
" ಬಿಗೆಮ್ಮೆ ಅಂದ್ರೆ  ಏನೋ  ?  ಯಾವ ಎಮ್ಮೆ ನೋ ? ' 
' ಅಜ್ಜೀ, ಅಂದ್ರೆ... , ಈಗ ಕಾನೂನು ಇದ್ಯಲ್ಲ , ಒಂದು ಹೆಂಡತಿ ಇರೋವಾಗ  ಮತ್ತೆ ಮದ್ವೆ ಮಾಡ್ಕೋಬಾರದು ಅಂತ  ಹಾಗೆ ಅವಾಗ ಇರ್ಲಿಲ್ವ? '
' ಅಯ್ಯೋ , ಅವನೇ ರಾಜ ! ರಾಜನ್ಗೆಂತ  ರೂಲ್ಸು ? ಹಾಗೆಲ್ಲ ಏನು ಇರ್ಲಿಲ್ಲ.  ನಿಮ್ಮ ದೊಡ್ದಜ್ಜಂಗೆ ಇಬ್ಬರು ಹೆಂಡತೀರು ಗೊತ್ತಾ? '

' ಅಜ್ಜೀ, ಅಜ್ಜನ ಕಥೆ ಇರ್ಲಿ. ಇದನ್ನ  ಮುಂದೆ  ಹೇಳು. '


' ಹಾಂ, ದಶರಥಂಗೆ ಮೂರು ಜನಾ ಹೆಂಡತೀರು ಇದ್ರೂ ಮಕ್ಕಳಾಗಿರಲಿಲ್ಲ . ಪಾಪ ಅವಂಗೆ ಅದೇ ಯೋಚನೆ ಆಗಿತ್ತು '

' ಯಾಕಜ್ಜೀ, ಡಾಕ್ಟರ್ ಹತ್ರ ಹೋಗ್ಲಿಲ್ವ ಕೇಳೋಕೆ ?' ಸ್ಮಿತಾ ಮತ್ತೆ ಪೇಪರ್ ಸರಿಸಿ ನೋಡಿದಳು ! ಈಗ ಕೇಳಿದವನು ಮಗರಾಯ ಆದಿತ್ಯ !

' ಥೂ ಸುಮ್ಮನಿರೋ , ಹಾಗೆಲ್ಲಾ ಹೇಳಬಾರದು . ಅವಂಗೆ ಆಮೇಲೆ ಯಾಗ ಅಂದ್ರೆ ದೊಡ್ಡ ಪೂಜೆ ಮಾಡೋಕೆ ಹೇಳಿದ್ರು . ಆಮೇಲೆ ಪೂಜೆ ಮಾಡಿ ಅದರ ಪ್ರಸಾದ ಅಂತ ಪಾಯಸ ತಿಂದ ಮೇಲೆ ಅಂತೂ ಮೂರೂ ಜನಾ ಹೆಂಡತೀರಿಗೂ ಮಕ್ಕಳಾದರು. '

' ಮಮೀ, ಅದ್ಯಾವ ಪಾಯಸ ಅಂತ ಕೇಳ್ಕೋ ಅಜ್ಜಿ ಹತ್ರ. ಮನೇಲಿ ಅದನ್ನ ತಪ್ಪಿಯೂ ಮಾಡಿ ಬಿಡಬೇಡ ಮತ್ತೆ ! ' ಮಗನ ವಾರ್ನಿಂಗ್ !

ಸ್ಮಿತಾ ನಕ್ಕು ಬಿಟ್ಟಳು.

' ಸರಿ , ಕೌಸಲ್ಯೆಗೆ ರಾಮ , ಕೈಕೇಯಿಗೆ ಭರತ ಮತ್ತೆ ಸುಮಿತ್ರೆಗೆ ಲಕ್ಷ್ಮಣ -ಶತ್ರುಘ್ನ ಅಂತ ಅವಳಿ ಮಕ್ಕಳು ಹುಟ್ಟಿದರು. '

' ಏನನ್ಯಾಯ ಅಜ್ಜಿ , ಒಂದೇ ಸಲ ಮೂರೋ ಜನಾ ಪಾಯಸ ತಿಂದರೂ ಅವಳಿಗೆ ಮಾತ್ರ ಟ್ವಿನ್ಸ್ ! ಇದು ಸರಿ ಅಲ್ಲಾ ! '

" ಕತ್ತೆಗಳಾ , ಸುಮ್ಮನೆ ಕೇಳ್ರೋ ಅಜ್ಜಿಗೆ ಕಾಟ ಕೊಡ ಬೇಡಿ ಇಲ್ಲಾ ಅಂದ್ರೆ , ..... ಬೀಳತ್ತೆ ಎಲ್ಲಾರಿಗೂ " . ಅಮ್ಮನ ಬೆದರಿಕೆ ಕೆಲಸ ಮಾಡಿತು.  ಕಥೆ ಮುಂದುವರೀತು .

" ಸ್ವಲ್ಪ ವರ್ಷ ಕಳೀತು. ಮಕ್ಕಳು ಚೂರು ದೊಡ್ಡವರಾದಾಗ , ರಾಮ ಮತ್ತು ಲಕ್ಷ್ಮಣ ಇಬ್ಬರನ್ನೂ ವಿಶ್ವಾಮಿತ್ರ ರ ಜೊತೆಗೆ ಗುರುಕುಲಕ್ಕೆ ಕಳ್ಸಿದ್ರು ವಿದ್ಯೆ ಕಲ್ತು ಬರಲಿ ಅಂತ . "

' ಗುರುಕುಲ ಅಂದ್ರೆ? '

' ಅಂದ್ರೆ , ಆಗೆಲ್ಲಾ ಸ್ಕೂಲು ಅಂತ ಈಗಿನ ತರ ಇರಲಿಲ್ಲ ! ಮೇಷ್ಟ್ರ ಮನೇಲೆ ಇದ್ದು ಅವರವರ ಕೆಲಸ , ಮೇಷ್ಟ್ರ ಮನೆ ಕೆಲಸ ಎಲ್ಲಾ ಮಾಡ್ಕೊಂಡು ವಿದ್ಯೆ ಕಲೀಬೇಕಿತ್ತು ! ".

" ಓಹೋ, ಒಂಥರಾ ಬೋರ್ಡಿಂಗ್ ಸ್ಕೂಲ್ ಕಣೆ . ಆಗಿನ ಕಾಲದಲ್ಲೇ ಇತ್ತು ಅಂತಾಯ್ತು . " ಅಣ್ಣನ ಸಮಜ್ಹಾಯಿಷಿ ತಂಗಿಗೆ !

' ಆದ್ರೆ ಅಜ್ಜಿ, ಅಷ್ಟು ಅಪರೂಪಕ್ಕೆ ಹುಟ್ಟಿದ ಮಕ್ಕಳನ್ನ ಬೋರ್ಡಿಂಗ್ ಸ್ಕೂಲ್ ನಲ್ಲಿ ಯಾಕೆ ಬಿಡಬೇಕು ? ಮತ್ತೆ , ಬರೀ ರಾಮ -ಲಕ್ಷ್ಮಣ ಮಾತ್ರ ನ? ಭರತ -ಶತ್ರುಘ್ನ ಇಬ್ರು ? ಗವರ್ನ ಮೆಂಟ್ ಸ್ಕೂಲಾ? ಪ್ರೈವೇಟ್ ಸ್ಕೂಲಾ?

'ಅಯ್ಯೋ , ಒಂದು ಕಥೆ ಹೇಳ್ತೀನಿ ಬನ್ರೋ ಅಂದ್ರೆ , ಎಷ್ಟು ಪ್ರಶ್ನೆಗಳು ನಿಮ್ಮದು ? ಅಜ್ಜಿ ಸಿಡುಕಿದರು'

' ಸಾರಿ ಅಜ್ಜಿ , ಇನ್ನು ಅಣ್ಣನ ಹತ್ರ ಅಥವಾ ಅಮ್ಮನ ಹತ್ರ ಕೇಳ್ತೀನಿ ಓ ಕೆ ನಾ?'

' ಹಮ್. ಹೀಗೇ ಸುಮಾರು ವರ್ಷ ಕಳೀತು . ಹುಡುಗರು ದೊಡ್ದೊರಾದ್ರು. ಕಲಿಯೋದೆಲ್ಲ ಮುಗೀತು. ಇನ್ನು ಅವರನ್ನ ವಾಪಸ್ ಮನೆಗೆ ಬಿಡ ಬೇಕು ಅಂತ ಇದ್ದ ವಿಶ್ವಾಮಿತ್ರರಿಗೆ , ಜನಕ ರಾಜ ಅವನ ಮಗಳು ಸೀತೆಗೆ ಸ್ವಯಂವರ ಮಾಡ್ತಾನೆ ಅಂತ ಸುದ್ದಿ ಬಂತು.'

' ವಾಹ್ ! ಸ್ವಯಂವರ ! ಅಜ್ಜಿ ಟಿವಿಲಿ ' ರಾಖಿ ಸ್ವಯಂವರ " ಬಂದಿತ್ತಲ್ಲ .. ಹಾಗೇ ನ? '

' ಅಯ್ಯೋ ಹಾಳು ಮಕ್ಕಳಾ, ಸೀತಾ ದೇವಿಗೂ , ಈ ರಾಖಿಗು ಎಲ್ಲಿಂದೆಲ್ಲಿ ಸಂಬಂಧ ಮಾಡ್ತಿದೀರ? ಆ ತರ ಅಲ್ಲಾ ಅದು !
 ಜನಕ ರಾಜನ  ಹತ್ರ ಒಂದು ದೊಡ್ಡ ಬಿಲ್ಲು ಇತ್ತು ತುಂಬಾ ಭಾರದ್ದು. ಅದನ್ನ ಯಾರು ಎತ್ತುತಾರೋ ಅವರಿಗೆ ಸೀತೆ ಜೊತೆ ಮದ್ವೆ ಅಂತ ಷರತ್ತು ಇತ್ತು. '

' ಅದು ಯಾವ ತರ ಬಿಲ್ಲು ಅಜ್ಜೀ? ಅಷ್ಟು ಹೆವಿ ಇದ್ದಿದ್ದು ? ಯಾವ ೫ ಸ್ಟಾರ್ ಹೋಟೆಲ್ದು ?' ಮಕ್ಕಳ ಕಿಸಿ ಕಿಸಿ ನಗು !
 ಸ್ಮಿತಾ ಉಕ್ಕಿ ಬಂದ ನಗುವನ್ನು ತಡೆಯುತ್ತಾ, ' ಸುಮ್ನೆ ಕಥೆ ಕೇಳಲ್ಲ ಅಂದ್ರೆ , ಅಜ್ಜಿ ಗೆ ನಿಲ್ಲಿಸಿ ಬಿಡಿ ಅಂತ ಹೇಳ್ತೀನಿ " ಅಂತ ಹೆದರಿಸಿದಳು.

" ಆ ತರ ಬಿಲ್ಲಲ್ಲ ಪುಟ್ಟೀ, ಬಿಲ್ಲು ಬಾಣ ಇರತ್ತಲ್ಲ ಆ ಬಿಲ್ಲು !
ತುಂಬಾ ಜನಾ ರಾಜರು ಬಂದಿದ್ರು . ಆದ್ರೆ ಯಾರಿಗೂ ಅದನ್ನ ಎತ್ತೋಕೆ ಆಗ್ಲಿಲ್ಲ . ರಾವಣ ಕೂಡ ಬಂದಿದ್ದ. ಅವನು ಸ್ವಲ್ಪ ಪ್ರಯತ್ನ ಮಾಡಿದ . ಆದರೆ ಸಾಧ್ಯ ಆಗಲೇ ಇಲ್ಲ ! ಕೊನೆಗೆ ರಾಮ ಆ ಬಿಲ್ಲನ್ನ ಸುಲಭವಾಗಿ ಎತ್ತಿ ಬಗ್ಗಿಸೋ ಹೊತ್ತಿಗೆ ಅದು ಮುರ್ದೇ ಹೋಯ್ತು !'

' ಅದು ಹೇಗಜ್ಜೀ? ರಾಮ ದಿನಾ ಜಿಮ್ ಗೆ ಹೋಗ್ತಾ ಇದ್ದನಾ? ಅಷ್ಟು ಸ್ಟ್ರಾಂಗ್ ಆಗಿರೋಕೆ ?'  ವರುಣ್ ನ ಕುತೂಹಲ

 ' ಪಾಪ , ಅದನ್ಯಾಕೆ ಮುರೀ ಬೇಕಿತ್ತು ಅಜ್ಜಿ ? ಜನಕಂಗೆ ಬೇಜಾರಾಗಲ್ವಾ?'  ಪುಟ್ಟಿಯ ಪ್ರಶ್ನೆ .

' ಹಾಗಲ್ಲ ಅದು. ಶರತ್ತೆ ಹಾಗಿತು ಅಲ್ವ? ಅದಕ್ಕೆ , ಜನಕ ಖುಷಿಯಾಗಿ ಸೀತೆಗೂ ರಾಮಂಗೂ ಮದ್ವೆ ಮಾಡಿದ . ಅವಳ ತಂಗೀರನ್ನ , ರಾಮನ ತಮ್ಮಂದಿರು ಮದ್ವೆ ಮಾಡಿಕೊಂಡರು !'

' ವಾಹ್ ! ಎಲ್ಲರಿಗೂ ಒಂದೇ ಸಲ ಮದ್ವೆ ಅಂತೀಯ? '

 ' ಹಾಂ . ಎಲ್ಲರೂ ಆಮೇಲೆ ಅಯೋಧ್ಯೆಗೆ ಬಂದ್ರು.'

 'ಅಜ್ಜಿ ರಿಸೆಪ್ಶನ್ ಜೋರಾಗಿ ಇತ್ತಾ? ನಾಲ್ಕು ಜನರದ್ದು ಒಂದೇ ಸಲ ಅಂದ್ರೆ .... '

' ಹಂ.. ಜನಾ ಎಲ್ಲಾ ತಾವೇ ಇಡೀ ಅಯೋಧ್ಯೆಗೂ ಸಿಂಗಾರ ಮಾಡಿದರಂತೆ. ತೋರಣ ಕಟ್ಟಿ , ರಸ್ತೇಲಿ ರಂಗೋಲಿ ಹಾಕಿ .... ಅಲಂಕಾರ ಮಾಡಿದರಂತೆ .. '

' ವಾಹ್ ! ಸಖತ್ ಚೆನ್ನಾಗಿ ಕಾಣ್ತಿರ ಬೇಕಲ್ವಾ?  ಅಜ್ಜಿ ? ಟಿವಿಲಿ ಡೈರೆಕ್ಟ್ ತೋರಿಸ್ತಾ ಇದ್ರಾ?'

' ಹಿ ಹಿಹಿ, ಗೊತ್ತಿಲ್ವೇನೆ ಪೆದ್ದಿ ? ಆಗ ಟೀ ವಿ ಇನ್ನು ಬಂದಿರಲೇ ಇಲ್ಲ ! 'ಆದಿತ್ಯ ತಂಗಿಯ ತಲೆಗೊಂದು ಮೊಟಕಿದ !  

' ಹ್ಞೂ. ಎಲ್ಲರಿಗೂ ತುಂಬಾ ಖುಷಿಯಾಗಿತ್ತು. ಆಮೇಲೆ .. ಹೀಗೆ ಖುಷಿಲಿ ಸುಮಾರು ದಿನ ಕಳೀತು.

ಆಗ ದಶರಥನ ತಲೇಲಿ ಒಂದು ಯೋಚನೆ ಬಂತು . ತಾನಿನ್ನು ಮುದುಕ ಆದೆ. ಇನ್ನು ರಾಮನ್ನೇ ರಾಜನ್ನಾಗಿ ಮಾಡಿಬಿಡೋದು ಅಂತ. ಹೇಗೂ ಅವನು ದೊಡ್ಡವನು , ಜಾಣ ಬೇರೆ, ಎಲ್ಲರಿಗೂ ಅವನ್ನ ಕಂಡ್ರೆ ಪ್ರೀತಿ ಹಾಗಾಗಿ ಅವನೇ ಸರಿ ಅಂತ ಯೋಚನೆ ಮಾಡದ. ಸರಿ, ರಾಮನ ಪಟ್ಟಾಭಿಷೇಕ ದ ತಯಾರಿ ಶುರುವಾಯ್ತು. '

' ಪಟ್ಟಾಭಿಷೇಕ ಅಂದ್ರೆ ಏನಜ್ಜಿ?'

' ಅಂದ್ರೆ , crowning Ceremony ಕಣೆ.'  ವರುಣ್ ತಂಗಿಯ ನೆರವಿಗೆ ಬಂದ.

' ಓ ಕೆ. ಮುಂದೆ ಹೇಳಜ್ಜಿ. '

 'ಹಂ. ಸ್ವಲ್ಪ ಇರಿ ಮಕ್ಕಳೇ . ಬಾಯಿ ಒಣಗಿ ಹೋಗಿದೆ ಚೂರು ಏನಾದ್ರೂ ಕುಡ್ಕೊಂಡು ಬರ್ತೀನಿ .'

 'ಏನಜ್ಜಿ ನೀನು , ಒಳ್ಳೆ ಹೊತ್ತಿನಲ್ಲೇ ಬ್ರೇಕ್ ತೊಗೊತೀಯಲ್ಲ? ' ಅಪೂರ್ವಾ ಮುಖ ಉಬ್ಬಿಸಿದಳು .

' ಟಿವಿ ಲಿ ಬ್ರೇಕ್ ಬಂದಾಗ ಹೀಗೆ ಮಾಡ್ತೀಯೇನೆ? ನಂಗೆ ವಯಸ್ಸಾಯ್ತು , ಒಂದೇ ಸಮ ಅಂದ್ರೆ ಸುಸ್ತಾಗಲ್ವ?'

' ಹಾಗಿದ್ರೆ , ನಮಗೂ ಬ್ರೇಕ್ , ಅಮ್ಮಾ , ಚಿಪ್ಸ್ ಕೊಡು ! '  ಮಗಳ ರಾಗಕ್ಕೆ , ಸ್ಮಿತಾ ಅಡುಗೆಮನೆಯಿಂದ ಚಿಪ್ಸ್ ಪ್ಯಾಕೆಟ್ ತಂದು ಕೊಟ್ಟಾಯ್ತು.

೧೦ ನಿಮಿಷದ ನಂತರ ಮುಂದುವರೀತು .

" ಹಾಂ , ಎಲ್ಲಿ ನಿಲ್ಸಿದ್ದೆ ಕಥೇನ?"

 'ಅದೇ ಅಜ್ಜಿ , ರಾಮನ್ನ ರಾಜ ಮಾಡೋದು ಅಂತಾಗಿತ್ತಲ್ಲ ? '

' ಸರಿ. ಎಲ್ಲರೂ ಈ ವಿಷಯ ಕೇಳಿ ಖುಷಿ ಪಡ್ತಾ ಇದ್ರು. ಅರಮನೆಲೂ ಖುಷಿ. ಆದರೆ , ಕೈಕೇಯಿ ಗೆ ಒಬ್ಬಳು ಕೆಲಸದವಳು ಇದ್ದಳು. ಮಂಥರೆ ಅಂತ. ಅವಳಿಗೆ ರಾಮನ್ನ ಕಂಡ್ರೆ ಚೂರು ಇಷ್ಟ ಇರಲಿಲ್ಲ. ಅವಳು ಕೈಕೇಯಿಗೆ ಚುಚ್ಚಿ ಕೊಟ್ಟಳು. ಎಲ್ಲಾದಕ್ಕೂ ರಾಮಂಗೆ ಯಾಕೆ ಹೆಚ್ಚು? ನೀನು ದಶರಥಂಗೆ ಹೇಳು ನಿನ್ನ ಮಗ ಭರತನ್ನ ರಾಜನಾಗಿ ಮಾಡು ಅಂತ . ನೀನು ಹಠ ಹಿಡದ್ರೆ , ದಶರಥ ಇಲ್ಲ ಅನ್ನೋದಿಲ್ಲ . ರಾಮ ರಾಜ ಆಗ್ಬಿಟ್ರೆ, ಎಲ್ಲರೂ ಕೌಸಲ್ಯೆಗೆ ಜಾಸ್ತಿ ಗೌರವ ಕೊಡ್ತಾರೆ. ಹಾಗೆ ಹೀಗೆ ಅಂತೆಲ್ಲ ಚುಚ್ಚಿದ್ಲು. '

' ವಾಹ್ ! ಅಜ್ಜಿ , ಮಂಥರೆ ಏಕತಾ ಕಪೂರ್ ಸೀರಿಯಲ್ ನೋಡ್ತಾ ಇದ್ಲಾ ? ಹಾಗೆ ಇದೆ ಒಂಥರಾ. ಅತ್ತೆ , ಹಿರಿ ಸೊಸೆಗೆ ಮನೆ ಕೀ ಎಲ್ಲಾ ಕೊಡ್ಬೇಕು ಅಂತ ಅಂದ್ಕೊಂಡಾಗ ಯಾರಾದ್ರೂ ಬಂದು ತಪ್ಪಿಸ್ತಾರಲ್ಲ ಹಾಗೇ ಇದೆ !. '

' ಹಾಂ ಹಾಗೇ ಅಂದ್ಕೋ. ಕಥೆ ಕೇಳು ಮುಂದೆ . ಇದೆಲ್ಲ ಕೇಳಿದಮೇಲೆ ಕೈಕೇಯಿಗೂ ಹೌದಲ್ವ ಅನಿಸ್ತು. ಅವಳು ತಕ್ಷಣ ಹೊಸ ಸೀರೆ , ಒಡವೆ ಎಲ್ಲಾ ತೆಗೆದು ಹಾಕಿ ಹಳೆ ಸೀರೆ ಉಟ್ಕೊಂಡು ಕೂದಲೆಲ್ಲ ಹರಡಿಕೊಂಡು ಕೋಪಗೃಹಕ್ಕೆ ಹೋಗಿ ಅಳ್ತಾ ಕೂತಳು '


 ' ಅಜ್ಜಿ ಅಜ್ಜಿ , ಕೋಪಾಗ್ರಹ ಅಂದ್ರೆ ? ' ಪುಟ್ಟ ಅಪೂರ್ವಾಳ ಪ್ರಶ್ನೆ .


" ಹಾ ಹಾ ಕೊಪಾಗ್ರಹ ಅಲ್ಲಾ ಮರೀ , ಕೋಪಗೃಹ ! ಆಗೆಲ್ಲಾ, ರಾಣೀರಿಗೆ ಸಿಟ್ಟು ಬಂದರೆ ಒಂದು ಚಿಕ್ಕ ಕೋಣೆಲಿ ಹೋಗಿ ಅಳ್ತಾ ಕೂತುಗೊಳ್ತಿದ್ರು ! ಆ ರೂಮಿಗೆ ' ಕೋಪಗೃಹ ' ಅಂತ ಹೆಸರು. "

"ಇದು ಚೆನಾಗಿದೆ ಅಜ್ಜಿ. ' ಮಮ್ಮೀ, ನಮ್ಮನೇಲೂ ಒಂದು 'ಕೋಪಾಗ್ರಹ' ಮಾಡ್ಸು . ನಂಗೆ , ನಿಂಗೆ ಬೇಕಲ್ವ? "

' ಹಾ ಹಾ ಹಾ !  ನೀನೊಂದು ರಾಜಕುಮಾರಿ ! ಕೇಳು , ಕೈಕೇಯಿಗೆ ಸಿಟ್ಟು ಬಂದಿದೆ ಅಂತ ಗೊತ್ತಾದ ಕೂಡ್ಲೇ ದಶರಥ ಓಡೋಡಿ ಬಂದ . ಅವಂಗೆ ಅವಳು ಅಂದ್ರೆ ತುಂಬಾ ಇಷ್ಟ . ಯಾಕಪ್ಪ ಇವಳಿಗೆ ಈಗ ಸಿಟ್ಟು ಅಂತ ಯೋಚನೆ ಆಯಿತು ಅವಂಗೆ.
ಕೈಕೇಯಿ ಹತ್ರ ಕೇಳಿದಾಗ ಅವಳು ಸಿಟ್ಟು ಮಾಡ್ಕೊಂಡೆ " ಮತ್ತೆ, ನೀವು ರಾಮಂಗೆ ಪಟ್ಟಾಭಿಷೇಕ ಮಾಡ್ತಿದೀರ ಅಂತ ನಂಗೆ ಹೇಳಲೇ ಇಲ್ಲ " ಅಂದ್ಲು .

'ಅಯ್ಯೋ ಅದಕ್ಕಾ? ನಂಗೆ ತುಂಬಾ ಕೆಲಸದ ಗಡಿಬಿಡಿ ಲಿ ಹೇಳೋಕೆ ಆಗಲಿಲ್ಲ ಅಷ್ಟಕ್ಕೆಲ್ಲ ಯಾಕೆ ಸಿಟ್ಟು ? ನಿನಗೂ ರಾಮ ಅಂದ್ರೆ ಪ್ರೀತಿ ಅಲ್ವಾ? ಅಂದ ದಶರಥ !

" ಅದೆಲ್ಲ ಸಾಧ್ಯ ಇಲ್ಲ , ನನ್ನ ಮಗ ಭರತನೇ ರಾಜ ಆಗ್ಬೇಕು , ಮತ್ತೆ , ರಾಮ ೧೪ ವರ್ಷ ಕಾಡಿಗೆ ಹೋಗ್ಬೇಕು " ಅಂತ ಕೈಕೇಯಿ ಹಠ ಹಿಡಿದಳು . ದಶರಥ ಎಷ್ಟು ಹೇಳಿದರೂ ಅವಳು ಕೇಳಲಿಲ್ಲ ! ಕೊನೆಗೆ ಬೇಜಾರಾಗಿ ಅವನು ತನ್ನ ರೂಮಿಗೆ ಬಂದ.

' ಅಜ್ಜಿ ಅಜ್ಜಿ, ಅವಳು ಅದ್ಯಾಕೆ ಹಾಗೆ ಕೇಳಿದಳು? ಮತ್ತೆ ರಾಮ ಪಾಪ ೧೪ ವರ್ಷ ಕಾಡಿಗೆ ಹೋಗ್ಬೇಕು ಅಂತ ಯಾಕೆ ಕೇಳಿದ್ದು ಅವಳು ? '

ಕೈಕೇಯಿಯ ವರಗಳ ಬಗ್ಗೆ ಹೇಳಲು ಬಾಯಿ ತೆರೆದ ಅಜ್ಜಿ, ಮಕ್ಕಳ ಪ್ರಶ್ನೆಗಳನ್ನು ಯೋಚಿಸಿಯೇ " ಅಯ್ಯೋ ಅವಳು ಹಾಗೇ ಕಣಮ್ಮಾ, ಎಲ್ಲದೂ ತನಗೆ ಬೇಕು , ತಾನು ಹೇಳಿದ ತರನೆ ಆಗ್ಬೇಕು ಅಂತ ಹಠ ಹಿಡಿತ ಇದ್ಲು !

" ಓ , ಅಣ್ಣನ ತರಾನೆ ! " ಅಪೂರ್ವಾ ಅಣ್ಣನತ್ತ ನೋಡಿ ಅಣಕಿಸಿದಳು !

ಅಲ್ಲಾ ಅಜ್ಜಿ, ಅಷ್ಟೆಲ್ಲ ಅವಳು ಹಠ ಹಿಡಿದರೆ , ಸುಮ್ನೆ ಡೈವೋರ್ಸ್ ಕೊಟ್ಟು ಬಿಡೋದಪ್ಪ ! ಹೇಗೂ ಇನ್ನು ಎರಡು ಹೆಂಡತೀರು ಇದ್ರಲ್ಲ ! ' ಚಿಪ್ಸ್ ಬಾಯಲ್ಲಿ ತುಂಬಿಕೊಂಡು ಹೇಳಿದ ವರುಣ್ !

ಅವನ ಮಾತು ಕೇಳಿ ಸ್ಮಿತಾ ಹುಬ್ಬು ಮೇಲೇರಿತು ! ಹದಿಮೂರರ ಪೋರ ' ಡೈವೋರ್ಸ್ ' ಅಂತೆಲ್ಲ ಮಾತಾಡ್ತಾನಲ್ಲ ! ಅವನಮ್ಮಂಗೆ ಹೇಳಬೇಕಾಯ್ತು ! ಅಂತ ಮನಸಲ್ಲೇ ನೋಟ್ ಮಾಡ್ಕೊಂಡ್ಲು !

( ...... ಮುಂದಿನ ಭಾಗ ವಿರಾಮದ ನಂತರ ! )   

29 comments:

sunaath said...

ವಾಲ್ಮೀಕಿ ರಾಮಾಯಣಕ್ಕಿಂತ ಈ ಹುಡುಗರ ಕಾಮೆಂಟಿನ ಆಧುನಿಕ ರಾಮಾಯಣವೇ ಚೆನ್ನಾಗಿದೆ. ಬೇಗನೇ ಮುಂದಿನ ಭಾಗ ಬರಲಿ!

Unknown said...

ಸಕ್ಕತ್ತಾಗಿದೆ. ಮುಂದುವರೆಸಿ

ಮನದಾಳದಿಂದ............ said...

ಸೂಪರ್ ಕಣ್ರೀ,
ವಾಲ್ಮೀಕಿ ನಿಮ್ಮ ಈ ಅಧುನಿಕ ರಾಮಾಯಣ ಓದಿದರೆ ಖಂಡಿತಾ ಕತೆ ಕದಿಯುತ್ತಾನೆ........
ಹುಷಾರಾಗಿರಿ,

PARAANJAPE K.N. said...

ಸಿಕ್ಕಾಪಟ್ಟೆ ಮಜವಾಗಿದೆ ನಿಮ್ಮ ರಾಮಾಯಣ

Dileep Hegde said...

ಹಹಹ.. ಅದ್ಭುತವಾಗಿದೆ ರಾಮಾಯ್ಣಾ.. ವಿರಾಮಕ್ಕೆ ಬೇಗ ಅಲ್ವಿದಾ ಹೇಳಿ ಮುಂದ್ವರ್ಸಿ ಕಥೇನಾ..

ಶೆಟ್ಟರು (Shettaru) said...

ಕಾನ್ವೆಂಟ್ ರಾಮಾಯಣ ಮುಂದುವರೆಯಲಿ

-ಶೆಟ್ಟರು

ಸವಿಗನಸು said...

munduvareyali....chennagidhe....

Nisha said...

:-) chennagide, mundina baaga bega barali

ಸೀತಾರಾಮ. ಕೆ. / SITARAM.K said...

ಹಾಸ್ಯಭರಿತ ಮಕ್ಕಳ ಪ್ರಶ್ನೆಗಲೊಂದಿಗಿನ ಆಧುನಿಕ ರಾಮಾಯಣ ಚೆನ್ನಾಗಿದೆ... ಬೇಗ ಮುಂದಿನ ಕಂತು ಬರಲಿ.

ಚಿತ್ರಾ said...

ಕಾಕಾ ,
ಬರಹಕ್ಕೆ ಮೊದಲ ಅಭಿಪ್ರಾಯ ನಿಮ್ಮದು ! ಧನ್ಯವಾದಗಳು . ಹೀಗೆ ಬರೆದರೆ ಹೇಗೆ ಎಂಬ ವಿಚಾರ ತಲೆಗೆ ಬಂದಿದ್ದು ' ಚುಕ್ಕಿ ಚಿತ್ತಾರ' ದ ವಿಜಯಶ್ರೀಯವರ ಭಸ್ಮಾಸುರನನ್ನು ಓದಿದಾಗ !
ನಿಮ್ಮ ಮೆಚ್ಚುಗೆಗೆ ಮತ್ತೊಮ್ಮೆ ಧನ್ಯವಾದಗಳು

ಚಿತ್ರಾ said...

ಥ್ಯಾಂಕ್ಸ್ ಮಧು .

ಚಿತ್ರಾ said...

ಮನದಾಳದಿಂದ,
ಕಥೆಗೆ ಮುಂಚೆನೇ ಕಾಪಿ ರೈಟ್ ಅರ್ಜಿ ಹಾಕಿದೀನಿ . ವಾಲ್ಮೀಕಿ ಗು ಸಿಕ್ಕಲ್ಲ ಅದು ! ಹಿ ಹಿ ಹಿ .
ಥ್ಯಾಂಕ್ಸ್ ನಿಮ್ಮ ಮೆಚ್ಚುಗೆಗೆ !

ಚಿತ್ರಾ said...

ಥ್ಯಾಂಕ್ಯೂ ಪರಾಂಜಪೆ.

ಚಿತ್ರಾ said...

ದಿಲೀಪ್,
ರಾಮಾಯಣಾ ನೆ ಹೀಗಾದ್ರೆ ... ಮಹಾಭಾರತ ಏನಾಗಬಹುದು ಯೋಚನೆ ಮಾಡಿ ! ಆದಷ್ಟು ಬೇಗ ಮುಂದಿನ ಭಾಗ ಬರುತ್ತೆ.

ಚಿತ್ರಾ said...

ಶೆಟ್ಟರೆ ,
ಕಾನ್ವೆಂಟ್ ಕಾಲದಲ್ಲಿ ನಮ್ಮ ಎಲ್ಲಾ ಮಹಾಕಾವ್ಯಗಳ ಕಥೆನೂ ಹೀಗೇನಾ ಅಂತ !

ಚಿತ್ರಾ said...

ಸವಿಗನಸು ,
ಧನ್ಯವಾದಗಳು ... ಕಾಯುತ್ತಾ ಇರಿ !

ಚಿತ್ರಾ said...

ನಿಶಾ,
ಥ್ಯಾಂಕ್ಸು. ಮುಂದಿನ ಭಾಗ ... ಶೀಘ್ರದಲ್ಲಿ ...!

ಚಿತ್ರಾ said...

ಸೀತಾರಾಮ್,
ನಿಮ್ಮ ಮೆಚ್ಚುಗೆಗೆ ಧನ್ಯವಾದಗಳು

ಸಾಗರದಾಚೆಯ ಇಂಚರ said...

ಚಿತ್ರಾ

ಸೂಪರ್ ರಾಮಾಯಣ
ನಕ್ಕು ನಕ್ಕು ಸುಸ್ತು

ಅನಂತ್ ರಾಜ್ said...

ಚಿತ್ರಾ ಅವರೆ, ಮಕ್ಕಳ ರಾಮಾಯಣ ಸಕತ್ತಾಗಿದೆ. ಬರಹದ ಶೈಲಿ ಚೆನ್ನಾಗಿ ಓದಿಸಿಕೊ೦ಡು ಹೋಗುತ್ತದೆ. ಮು೦ದಿನ ಭಾಗ ಬೇಗ ಬರಲಿ.

ಅನ೦ತ್

Harisha - ಹರೀಶ said...

ಚಿತ್ರಕ್ಕಾ, ನೀನೂ ಅಜ್ಜಿ ಥರ ಬ್ರೇಕ್ ತಗಂಡ್ರೆ ಹ್ಯಾಂಗೆ?‌ ಬೇಗ ಮುಂದುವರೆಸು..

ಜಲನಯನ said...

ಅಲ್ಲಾರೀ ಚಿತ್ರಕ್ಕ...ಬರೆಯೋಕೆ ಟೈಮ್ ಇಲ್ಲ ಅಂತೆಲ್ಲ ಹೇಳ್ತಿದ್ದೋರು...ಬರೆದದ್ದೂ ಏನು...? ರಮಾಯಣ...ಅದೂ ಅಜ್ಜೊ ಕಥೆ ಪ್ಲೈನ್ ಆಗಿದ್ರೆ ಓಕೆ...ಮಕ್ಕಳ ಪ್ರಶ್ನೆಗಳ ಮಸಾಲೆ ಹಾಕಿ ಚನ್ನಾಗೇ ಮಾಡಿದ್ದೀರಾ ರಾಮಾಯಣದ ಪಾರಾಯಣ,,,ಆದ್ರೆ ಮಕ್ಕಳ ಮಧ್ಯೆ ಬಾಯಿ ಹಾಕೋದು ಅಜ್ಜಿ ಹುಸಿ ಕೋಪ...ಅದ್ರಲ್ಲಿ ಅಮ್ಮನ ಮಾಡರೇಶನ್..ಎಲ್ಲಾ ಲೇಖನಕ್ಕೆ ಒಂಥರಾ...ಕಳೆ ಕಟ್ಟಿವೆ.....ಕಾಯ್ತೀನಪಾ ನಾನೂ...ಮುಂದಿನ ಎಪಿಸೋಡಿಗೆ...

V.R.BHAT said...

ಬಾಲ್ಯ-ರಾಮಾಯಣ ಚೆನ್ನಾಗಿದೆ !

Ittigecement said...

ಚಿತ್ರಾ...

ಈಗಿನ ಮಕ್ಕಳಿಗೆ ಎಲ್ಲಿಂದ ಕಥೆ ತರವುದು?

ನಮ್ಮ ಮಕ್ಕಳು ಬುದ್ಧಿವಂತರು.. ತರ್ಕ ಬುದ್ಧಿಯವರು ...
ತುಂಬಾ ಖುಷಿಯಾಗುತ್ತದೆ..
ನಾವು ಹಾಗಿರಲಿಲ್ಲವಲ್ಲ ಎಂದು..

ಆದರೆ..
ಮುಗ್ಧತನವನ್ನು ಕಳೆದುಕೊಂಡು ಜೀವನದಲ್ಲಿ ಅನೇಕ ಸಂಭ್ರಮ,ಸಂತೋಷಗಳನ್ನು ಕಳೆದುಕೊಂಡು ಬಿಡುತ್ತಾರಲ್ಲ ಎಂದು ಬೇಸರವೂ ಉಂಟಾಗುತ್ತದೆ..

ಈ ತರ್ಕ ಬುದ್ಧಿ...
ವಿಶ್ವಾಸ, ನಂಬಿಕೆ ಶಬ್ಧಗಳನ್ನು ತಿಂದು ಹಾಕಿ..
ಅಪನಂಬಿಕೆ, ಸಂಶಯಾಗಳ ಗಿಡಗಳ ಬೇರನ್ನು ಆಳವಾಗಿ ಇಳಿಸಿಬಿಡುತ್ತದೆ...

ನಮ್ಮನೆಯಲ್ಲಿ ಎಲ್ಲರೂ ನಿಮ್ಮ ಲೇಖನ ಓದಿ ತುಂಬಾ ನಕ್ಕು ನಕ್ಕು ಸುಸ್ತಾದೆವು..

ಹಾಸ್ಯದ ಜೊತೆಗೆ..
ಒಂದು ವಿಷಾದವನ್ನು ನಾನು ಕಂಡೆ..

ಮಸ್ತಾಗಿದೆ ಹಾಸ್ಯರಸಾಯನ...!!

ಮುಂದಿನ ಕಂತಿಗೆ ಕಾಯುವೆವು...
ಬರಲಿ ಆದಷ್ಟು ಬೇಗ...

ಮನಸಿನಮನೆಯವನು said...

ಮಸ್ತಾಗಿದೆ ರೀ..
ಓದ್ತಾ ಇದ್ರೆ ಓದ್ತಾನೆ ಇರೋಣ ಅನ್ನಿಸ್ತಿದೆ..
ಮುಂದುವರೆಸಿ ಬೇಗ//.

ಚಿತ್ರಾ said...

ವಿ ಆರ್ ಭಟ್ ರೆ,
ಧನ್ಯವಾದಗಳು

ಚಿತ್ರಾ said...

ಪ್ರಕಾಶಣ್ಣ ,
ನಿಜ ಇಂದಿನ ಮಕ್ಕಳು ಪ್ರತಿ ವಿಷಯವನ್ನೂ ತರ್ಕ ಮಾಡಿಯೇ ನೋಡುತ್ತಾರೆ. ನಮ್ಮ ಕಾಲದಲ್ಲಿ ಇದ್ದ ಹಾಗೆ ಎಲ್ಲವನ್ನು ಸುಮ್ಮನೆ ನಂಬುವುದಿಲ್ಲ. ಅವರಿಗೆ ಎಲ್ಲದಕ್ಕೂ ಒಂದು ಸರಿಯಾದ ಕಾರಣ ಬೇಕು . ಇದ್ಯಾಕೆ ಹೀಗೆ , ಅದ್ಯಾಕೆ ಹಾಗೆ ಎಂದು ಯೋಚಿಸುತ್ತಾರೆ, ಚರ್ಚಿಸುತ್ತಾರೆ. ಸರಿ ಕಂಡರೆ ಮಾತ್ರ ಒಪ್ಪುತ್ತಾರೆ. ಅವರು ಒಪ್ಪುವಂತೆ ಮಾಡುವಷ್ಟರಲ್ಲಿ ಅಪ್ಪ -ಅಮ್ಮ ನ ಬುದ್ಧಿಯೆಲ್ಲಾ ಖರ್ಚಾಗಿ ಹೋಗಿರುತ್ತದೆ . ಕೆಲವೊಮ್ಮೆ ಅವರ ತರ್ಕಬದ್ಧ ವಿಚಾರ ಸರಣಿಯನ್ನು ನೋಡಿ ಖುಷಿಯಾದರೂ , ನೀವಂದಂತೆ , ಅವರು ತಮ್ಮ ಬಾಲ್ಯ ಸಹಜ ಮುಗ್ಧತೆಯನ್ನು ಕಳೆದುಕೊಳ್ಳುತ್ತಿರುವ ಬಗ್ಗೆ ಆತಂಕವೆನಿಸುತ್ತದೆ.

ನಿಮ್ಮ ಅನಿಸಿಕೆಗೆ ಧನ್ಯವಾದಗಳು .

ಚಿತ್ರಾ said...

ಕತ್ತಲೆ ಮನೆಯವರೇ,
ಥ್ಯಾಂಕ್ಸು

ಸುಧೇಶ್ ಶೆಟ್ಟಿ said...

ha ha ha...

nakku nakku odhidhe... sari eega mundina bhaagakke hogteeni.. :)