August 18, 2010

ಅರಣ್ಯ ಕಾಂಡ


' ಇದೆಲ್ಲ  ಕಥೆ  ರಾಮಂಗು ಗೊತಾಯ್ತು.  ಅವನಿಗೂ ಕೂಡ ಕೈಕೇಯಿ ಅಂದ್ರೆ ತುಂಬಾ ಪ್ರೀತಿ ಇತ್ತು.  ಅದಕ್ಕೆ ಅವಳ ಹತ್ರ ಹೋಗಿ  " ಚಿಕ್ಕಮ್ಮ , ಯಾಕೆ ಇಷ್ಟಕ್ಕೆಲ್ಲ ಬೇಜಾರಗ್ತೀಯ? ಒಂದು ಮಾತು ನೀನು ಮುಂಚೆನೇ ನಂಗೆ ಹೇಳಿದ್ರೆ ಆಗ್ತಾ ಇರಲಿಲ್ವ?  ಭರತ್  ಕೂಡ ಒಳ್ಳೆಯವನು. ಅವನು ರಾಜ ಆದ್ರೆ ನನಗೇನೂ ಬೇಜಾರಿಲ್ಲ . ಅಪ್ಪನ್ನ ನಾನು ಒಪ್ಪಿಸ್ತೀನಿ, ನೀನು ಸಮಾಧಾನ ಮಾಡ್ಕೋ "  ಅಂತ ಹೇಳಿದ. ಹಾಗೇ ಅಪ್ಪನ ಹತ್ರನೂ ಬಂದು ಹೇಗೆ ಹೇಗೋ ಮಾಡಿ ಅಪ್ಪನ್ನ  ಒಪ್ಪಿಸಿದ. ಭರತನ್ನೇ ರಾಜ ಮಾಡೋದು , ತಾನು ಕಾಡಿಗೆ ಹೋಗೋದು ಅಂತ .'

' ಪಾಪ ಅಲ್ವ ಅಜ್ಜೀ, ಎಷ್ಟು ಒಳ್ಳೆವ್ನು ರಾಮ ! ಅವನೇ ರಾಜ ಆಗಬೇಕಿತ್ತು ಅಜ್ಜಿ. !'  ನಿರಾಶೆಯ ದನಿಯಲ್ಲಿ ಅಪೂರ್ವ ಹೇಳಿದಳು. 

' ಹೌದು ಪುಟ್ಟ, ಏನು ಮಾಡೋದು ? ಅವನು  ಕಾಡಿಗೆ ಹೋಗೋಕೆ ರೆಡಿ ಆಗಿಬಿಟ್ಟ . ಲಕ್ಷ್ಮಣ ಇದ್ನಲ್ಲ, ಅವಂಗೆ ಅಣ್ಣ ಅಂದ್ರೆ ಮಹಾ ಪ್ರೀತಿ. ಯಾವಾಗಲೂ ಅಣ್ಣನ ಜೊತೆ  ಇರ್ತ ಇದ್ದ. ಅದಕ್ಕೆ ಅವನೂ  ರಾಮನ ಜೊತೆ ಕಾಡಿಗೆ ಹೊರಟ. ಅವರಿಬ್ಬರ ಜೊತೆ  ಸೀತೆ ನೂ ಹೊರಟಳು. ನಾನು  ೧೪ ವರ್ಷ  ನಿನ್ನ ಬಿಟ್ಟು ಇರೋದಿಲ್ಲ ಅಂತ ಅವಳು ರಾಮಂಗೆ  ಹೇಳಿ ಬಿಟ್ಲು. ನಾನೂ ನಿನ್ ಜೊತೆ ಬರೋದೆ ಸೈ ಅಂತ . '

'ಅವಳು ಆರಾಮಾಗಿ ಇರ್ಬಹುದಿತ್ತಲ್ಲ  ಅರಮನೆಲಿ ಅಜ್ಜಿ ? '

' ಅಯ್ಯೋ ಅವಳಿಗೆ ಭಯ ಆಗ್ಬಿಡ್ತು ಚಿನ್ನು ...  ' ಆಗಿನ್ನೂ ಒಳಗೆ ಬಂದು  ಕಥೆ ಕೇಳುತ್ತಿದ್ದ  ಉಷಾ  ಹೇಳಿದಳು. 

' ಯಾಕೆ ಅತ್ತೆ? ಸೀತೆಗೆ ಅರಮನೇಲಿ ಯಾಕೆ ಭಯ? '
' ಮರೀ, ೧೪ ವರ್ಷ  ಗಂಡ ಕಾಡಲ್ಲಿ ಇರ್ತಾನೆ , ತಾನು ಒಬ್ಬಳೇ ಒಂದಲ್ಲ ,  ೩ ಜನ ಅತ್ತೆಯರ ಜೊತೆ  ಇರಬೇಕು ಅಂತ ಯೋಚನೆ ಮಾಡಿನೇ ಭಯ ಆಗೋಯ್ತು ಕಣೆ ಅವಳಿಗೆ ... ' ನಕ್ಕಳು ಉಷಾ . 

' ನಿಜ ಅತ್ತೆ, ಆ ಸೀರಿಯಲ್ ನಲ್ಲಿ ನೋಡು ಅತ್ತೆ  ಅವಳ ಸೊಸೆಗೆ ಎಷ್ಟೆಲ್ಲಾ ಕಾಟ ಕೊಡ್ತಾಳೆ .'  ಅಪೂರ್ವಾ ಶುರು ಮಾಡಿದ್ಲು. 

' ಏಯ್,  ಈಗ ನೀನೇನು ರಾಮಾಯಣ ಕೇಳ್ತೀಯ? ಸೀರಿಯಲ್ ನೋಡ್ತೀಯ ?  ಅಜ್ಜಿ , ಅವಳನ್ನ ಬಿಟ್ಹಾಕು. ನೀನು ಹೇಳಜ್ಜಿ . ' ಆದಿತ್ಯ ಸಿಡುಕಿದ 
 
' ಹಾಂ , ರಾಮ -ಲಕ್ಷ್ಮಣ  ಮತ್ತೆ ಸೀತೆ ಮೂರೂ ಜನ ಕಾಡಿಗೆ ಹೊರಟರು. ದಶರಥ ಎಷ್ಟು ಹೇಳಿದ್ರೂ ಕೇಳಲಿಲ್ಲ.  ಅಯೋಧ್ಯೆಯ ಜನ ಎಲ್ಲಾ ಇದನ್ನು ಕೇಳಿ ಬೇಜಾರು ಮಾಡ್ಕೊಂಡು ರಾಮ ಹೋದಲ್ಲಿ ನಾವೂ ಹೋಗ್ತೀವಿ  ಅಂತ  ಅಳೋಕೆ  ಶುರು ಮಾಡಿದರು. ಅವರನ್ನೆಲ್ಲ ಹೇಗೋ ಸಮಾಧಾನ ಮಾಡಿ  ರಾಮ , ಸೀತೆ, ಲಕ್ಷ್ಮಣ  ಮೂರೂ ಜನ  ಒಡವೆ ಎಲ್ಲಾ ತೆಗೆದಿಟ್ಟು , ನಾರು ಮಡಿ ಉಟ್ಟು , ದಶರಥಂಗೆ ನಮಸ್ಕಾರ ಮಾಡೋಕೆ  ಹೋದರು .
 
' ಅಜ್ಜಿ  ಅಜ್ಜಿ  ನಾರು ಮಡಿ ಅಂದ್ರೆ ಏನು ? '
 
ಅದಾ? ಅದು ತುಂಬಾ ಸಿಂಪಲ್ ಬಟ್ಟೆ. ಗಿಡದ ನಾರು ತೆಗೆದು ಮಾಡ್ತಾ ಇದ್ರು . ಕಾಡಿಗೆ ಅದನ್ನು ಉಟ್ಟು ಹೋಗ್ತಾ ಇದ್ರು'
 
' ಅಲ್ಲಾ ಅಜ್ಜೀ,  ಅವರೆಲ್ಲ ರಾಜನ ಮಕ್ಕಳಲ್ವ? ಒಳ್ಳೊಳ್ಳೆ ಬಟ್ಟೆ ಹಾಕೊಂಡು ಒಡವೆ ಎಲ್ಲಾ ಹಾಕೊಂಡೆ ಹೋಗಬಹುದಲ್ಲ ?  ಸೀತೆ ಎಷ್ಟು ಚೆನ್ನಾಗಿ ಕಾಣಿಸ್ತ ಇದ್ಲು  ! ' ಅಪೂರ್ವಳ ಕಣ್ಣು ಮಿಂಚಿತು !  
 
' ಕೋತಿ, ಒಳ್ಳೊಳ್ಳೆ ಬಟ್ಟೆ ಹಾಕೊಂಡು  ಕಾಡಿಗೆ ಹೊಗೊಕಾಗತ್ತ?  ಈಗ ನೀನು ರೇಷ್ಮೆ ಲಂಗ ಹಾಕೊಂಡು  ಆಟ ಆಡೋಕೆ ಹೋಗ್ತೀಯಾ? ಅಮ್ಮ ಬಯ್ಯಲ್ವಾ?  " ಆದಿತ್ಯ ತಂಗಿಗೆ  ಕೇಳ್ದ. 
' ಹಾಂ  ಹೌದು . ... ಆಮೇಲೆ  ಕಾಡಲ್ಲಿ  ಡ್ರೈ ಕ್ಲೀನ್ ಮಾಡ್ಸೋಕೆ ಆಗಲ್ಲ ಅಲ್ವ ? ಮತ್ತೆ ಗೋಲ್ಡ್ ಎಲ್ಲಾ ಕಳೆದುಹೋದರೆ ಅಂತ ಭಯನು ಇರತ್ತೆ. ಕರೆಕ್ಟ್ ಅಜ್ಜಿ. ಅವ್ರು ನಾರುಮಡಿ ಉಟ್ಟಿದ್ದು.ಮುಂದೆ ಹೇಳು. ' 


' ಹಾಂ, ಅವರೆಲ್ಲ , ಕಾಡಿಗೆ ಹೋಗೋಕೆ ರೆಡಿಯಾಗಿ ದಶರಥನ ಹತ್ರ  ಹೋದರು . ಅವನಿಗೆ ಹೇಳಿಬಿಟ್ಟು , ನಮಸ್ಕಾರ ಮಾಡಿ ಹೋಗಬೇಕು ಅಂತ.   ಅವರು ಹೋಗಿ ಅವನ ಕಾಲಿಗೆ ನಮಸ್ಕಾರ ಮಾಡಿ, ಅಪ್ಪ ಹೋಗಿ ಬರ್ತೀವಿ ಅಂದ ಕೂಡಲೇ , ದಶರಥಂಗೆ ತುಂಬಾ ದುಃಖ  ಆಗಿ ಎಚ್ಚರ  ತಪ್ಪಿ ಬಿಡ್ತು .  ಅವನನ್ನು ಸುಧಾರಿಸಿ, ಆಮೇಲೆ ಸಮಾಧಾನ ಮಾಡಿ ಅಮ್ಮಂದಿರಿಗೆಲ್ಲ ನಮಸ್ಕಾರ ಮಾಡಿ  ರಾಮ , ಸೀತೆ  ಮತ್ತು ಲಕ್ಷ್ಮಣ  ಕಾಡಿಗೆ ಹೊರಟರು. " 

' ಅಜ್ಜಿ ಅಜ್ಜಿ, ಲಕ್ಷ್ಮಣನ  ಹೆಂಡತಿ ಯಾಕೆ ಹೋಗಲಿಲ್ಲ? ' 

' ಮರೀ , ಅವಳಿಗೆ , ನೀನು ಅರಮನೇಲೆ ಇದ್ದು ಅಮ್ಮಂದಿರನ್ನೆಲ್ಲ ಸರಿಯಾಗಿ ನೋಡ್ಕೋ ಅಂತ ಲಕ್ಷ್ಮಣ ಹೇಳಿದ್ದ  .ಅದಕ್ಕೆ ಬೇಜಾರಾದ್ರೂ ಅವಳು ಅವನ ಮಾತು ಕೇಳ್ಕೊಂಡು ಅಲ್ಲೇ ಉಳಿದಳು. ' 

' ಆದರೆ ಅಜ್ಜಿ , ಅವಳನ್ನು ಕರ್ಕೊಂಡು ಹೋಗಿದ್ರೆ , ಸೀತೆಗೆ ಕಂಪನಿ ಇರ್ತ ಇತ್ತು ಅಲ್ವ? ಈಗ ಪಾಪ ಸೀತೆ  ಒಬ್ಬಳೇ  ಆಗ್ತಾಳೆ ನೋಡು. ' ಅಪೂರ್ವಾಳ ಅನುಕಂಪ . 

' ಏನು ಮಾಡೋದು , ಗಂಡ ಹೇಳಿದ ಮೇಲೆ  ಕೇಳಲೇ ಬೇಕಲ್ವಾ? ? '

' ಹಾಗೇನೂ ಇಲ್ಲ  ಅಜ್ಜಿ, ಮಮ್ಮೀ  ಕೇಳ್ತಾಳ ಈಗ ಡ್ಯಾಡಿ  ಹೇಳಿದ್ದು  ? ಇಲ್ಲ ಅಲ್ವಾ? ಹಾಗೇ ......'  ಅಪೂರ್ವಾಳ  ಭಾಷಣ ಮುಂದುವರೀತಾ ಇತ್ತು. 

' ಏಯ್ ಮಂಗ , ನಿಂಗೆ ಸುಮ್ಮನೆ ಕಥೆ ಕೇಳೋದಾದ್ರೆ  ಕೇಳು  ಹೀಂಗೆಲ್ಲ  ತಲೆ ಹರಟೆ ಮಾಡಿದಾದ್ರೆ , ಕಥೆ ಸ್ಟಾಪ್  '. ಸ್ಮಿತಾ  ಸಿಡುಕಿದಳು . . 

' ಆ ಕಾಲಾನೇ ಬೇರೆ ಕಣೇ...'  ನಗುತ್ತಾ ಅಜ್ಜಿ ಕಥೆ ಮುಂದುವರೆಸಿದರು.
'ಸರಿ, ಅವರು ಮೂರು ಜನ ಕಾಡಿಗೆ ಹೊರಟಿದ್ದೆ , ಅಯೋಧ್ಯೆಯವರೆಲ್ಲರೂ ಅಳ್ತಾ  ಹಿಂದೇನೆ ಹೊರಟರು. ಅವರಿಗೆಲ್ಲಾ ಹೇಗೋ ಸಮಾಧಾನ ಮಾಡಿ ಇವರು ಮುಂದೆ ಹೋದರು . 
ಅಷ್ಟರಲ್ಲಿ ಏನಾಯ್ತಪ್ಪಾ ಅಂದ್ರೆ ,  ದಶರಥ  ಮಕ್ಕಳು ಕಾಡಿಗೆ ಹೋದರಲ್ಲಾ ಅನ್ನೋ ಸಂಕಟದಲ್ಲಿ ಕೊರಗಿ ಕೊರಗಿ ಸತ್ತೇ ಹೋಗ್ಬಿಟ್ಟ . "
' ಪಾಪಾ , ಹಾಗಾಗ್ಬಾರದಿತ್ತಲ ಅಜ್ಜಿ ?  ಅವನಿಗೆ  ಹಾರ್ಟ್ ಅಟ್ಯಾಕ್ ಆಗಿರಬೇಕು  " 

' ಏನು ಮಾಡೋದು , ಆ ಸುದ್ದಿ ಕೇಳಿ ಅಜ್ಜಿ ಮನೆಯಿಂದ  ಭರತ - ಶತ್ರುಘ್ನ ಇಬ್ಬರೂ ಓಡಿ ಬಂದ್ರು. ಭರತಂಗೆ  ಇಲ್ಲಿ ನಡೆದಿದ್ದೆಲ್ಲ ಕೇಳಿದ ಮೇಲೆ  ತುಂಬಾ ಬೇಜಾರಾಯ್ತು. ಅಮ್ಮನ ಮೇಲೆ ಸಿಟ್ಟು ಬಂತು. ನಂಗೆ ರಾಜ ಆಗೋದು ಇಷ್ಟ ಇಲ್ಲ , ಅಣ್ಣನೆ ಆಗಬೇಕಿತ್ತು , ನಿನ್ನಿಂದಾಗಿ ಹೀಗೆಲ್ಲ ಆಯ್ತು ಅಂತೆಲ್ಲ  ಕೈಕೇಯಿ ಗೆ ಬಯ್ದು ಬಿಟ್ಟ . ನಾನು ಈಗಲೇ ಹೋಗಿ ಅಣ್ಣನ್ನ ಕರ್ಕೊಂಡು ಬರ್ತೀನಿ . ಅಂತ ಗಲಾಟೆ ಮಾಡಿ  ಅವನೂ ಕಾಡಿಗೆ ಹೊರಟು ಬಿಟ್ಟ  '

' ಅಜ್ಜಿ, ದಶರಥ ಸತ್ತಾಗಲೂ ರಾಮ ಬರಲಿಲ್ವಾ? ' 

' ಇಲ್ಲ ಮರೀ, ಅವನು ಆಗಲೇ ತುಂಬಾ ದೂರ ಹೋಗ್ಬಿಟಿದ್ದ. ಮತ್ತೆ ಅಲ್ಲಿಯವರೆಗೂ ಒಬ್ಬ ಹೋಗಿ ಸುದ್ದಿ ಮುಟ್ಟಿಸೋ ಹೊತ್ತಿಗೆ  ಲೇಟ್ ಆಗ್ಬಿಟಿತ್ತು. ಭರತ ಅಣ್ಣನ್ನ ಹುಡುಕ್ಕೊಂಡು ಕಾಡಿಗೆ ಹೋದನಲ್ಲ  ತುಂಬಾ ಹುಡುಕಿದ ಮೇಲೆ ಅಂತು ರಾಮ ಸಿಕ್ಕಿದ.  ಭರತ, ರಾಮನ ಕಾಲು ಹಿಡಿದು ತುಂಬಾ ಅತ್ತ. 'ನಂಗೆ ರಾಜ ಆಗೋದು ಬೇಕಾಗಿಲ್ಲ. ನೀನೆ ರಾಜ ಆಗು, ವಾಪಸ್ ನಡಿ ಊರಿಗೆ ಹೋಗೋಣ , ಅಮ್ಮನ್ನ ನಾನು ತಿದ್ದುತೀನಿ , ನೀನು ಮಾತ್ರ ನಂಜೊತೆ ಬರಲೇ ಬೇಕು  , ನೀನು ಇಲ್ಲ ಅಂದ್ರೆ ನಂಗೆ ಇರೋಕೆ ಆಗೋದೇ ಇಲ್ಲ '  ಅಂತೆಲ್ಲಾ ಹೇಳ್ದ. ' 
 
' ತುಂಬಾ ಒಳ್ಳೆವ್ನು ಭರತ ಅಲ್ವಾ ಅಜ್ಜಿ ? ಅವಂಗೆ ರಾಮನ ಮೇಲೆ ಎಷ್ಟು ಪ್ರೀತಿ ಇತ್ತು ಅಲ್ವ?   ರಾಮ ಒಪ್ಗೊಂಡ್ನ ಅಜ್ಜಿ ?' 

'' ಹೇಯ್, ಒಳ್ಳೆವ್ನು  ಅಂತ ಎಲ್ಲಾ ಅಲ್ಲಾ ಕಣೆ , ಅವನಿಗೆ ರಾಜ ಆಗ್ಬಿಟ್ರೆ , ಎಲ್ಲರನ್ನು ಸುಧಾರಿಸೋದು ಹೇಗೆ ಅಂತ ಯೋಚನೆ ಆಗಿತ್ತು . ಜನ ಎಲ್ಲರು ರಾಮನ್ನ ಕಾಡಿಗೆ ಕಳಿಸಿ ರಾಜ ಆದ ಅಂತಾರೆ , ಸುಮ್ನೆ ಯಾಕೆ ತಲೆನೋವು. ರಾಮ ನೆ ರಾಜ ಆಗ್ಬಿಟ್ರೆ , ನಾನು ಆರಾಮಾಗಿ ಇರಬಹುದು  ಅಂತ ಅವ್ನ ಪ್ಲಾನ್ ಕಣೆ  ' ಗಂಡು ಹುಡುಗರಿಬ್ಬರೂ ಒಬ್ಬರಿಗೊಬ್ಬರು ಕೈ ತಟ್ಟಿಕೊಂಡು ಜೋರಾಗಿ ನಕ್ಕರು ! 
 
' ಥೂ  ಹಾಳು  ಮಕ್ಕಳಾ  , ಏನೇನೋ  ಅಂತೀರಲ್ರೋ  ! 

' ಅಜ್ಜಿ ಅವರನ್ನೇನೂ ಕೇಳ ಬೇಡಾ ಅಜ್ಜಿ, ನೀನು ನಂಗೆ ಮಾತ್ರ ಹೇಳು , ರಾಮ ಬರ್ತೀನಿ ಅಂದನಾ?  ' 
 
' ಇಲ್ಲ, ನಾನು ಬಂದರೆ ಚಿಕ್ಕಮ್ಮನಿಗೆ ಬೇಜಾರಾಗತ್ತೆ, ನಾನು ಅವರಿಗೆ ಮಾತು ಕೊಟ್ಟಿದೀನಿ . ಅದಕ್ಕೆ  ಬರಕಾಗಲ್ಲ. ನೀನು  ಹಠ ಮಾಡಬೇಡ ವಾಪಸ್ ಹೋಗು ಅಂದ.
' ಎಷ್ಟೋ ಕಷ್ಟ ಪಟ್ರೂ ರಾಮ ಒಪ್ಪಲೇ ಇಲ್ಲ. ಆಗ ಭರತ , ಆಯ್ತಣ್ಣಾ , ನೀನು ಅಂದ ಹಾಗೆಯೇ ಆಗಲಿ . ಆದರೆ , ನಾನು  ರಾಜ ಆಗೋದಿಲ್ಲ , ನಿನ್ನ ಹೆಸರಲ್ಲಿ ನಾನು  ರಾಜ್ಯವನ್ನು ಆಳುತ್ತೀನಿ. ಅದಕ್ಕೆ ನೀನು ಕೊನೆ ಪಕ್ಷ ನಿನ್ನ ಪಾದುಕೆಗಳನ್ನಾದರೂ ಕೊಟ್ರೆ  ಅದನ್ನೇ ಸಿಂಹಾಸನದ ಮೇಲಿತ್ತು ರಾಜ್ಯ  ಆಳುತ್ತೇನೆ  ಅಂದ. ಅದಕ್ಕೆ ರಾಮ ಒಪ್ಪಿ ಪಾದುಕೆಗಳನ್ನ ಕೊಟ್ಟ .'
 
' ಅಜ್ಜಿ ಅಜ್ಜಿ , ಪಾದುಕೆ ಅಂದ್ರೆ  ?' 
 
' ಪಾದುಕೆ ಅಂದ್ರೆ , ಚಪ್ಪಲಿ .. ಪುಟ್ಟಿ.  "
 
" ಥೂ ಅಜ್ಜಿ ಭರತ ಒಳ್ಳೆವನಲ್ಲ ! ಕೆಟ್ಟೋನು  . ಅವ್ನು ನಂಗೆ ಇಷ್ಟ ಆಗ್ಲಿಲ್ಲ ಅಜ್ಜಿ ...:  ' ಅಪೂರ್ವಾ ಮುಖ ದಪ್ಪ ಮಾಡಿದಳು . 
 
' ಯಾಕೋ ಮರೀ? ಈಗ ತಾನೇ ಒಳ್ಳೆವನು ಅವನು ಅಂದೆ? ' 
 
' ಅಲ್ಲಜ್ಜಿ, ಅವನು ರಾಮನ ರಾಜ್ಯ ಅಂತು ತೊಗೊಂಡ , ಚಪ್ಪಲಿ ನೂ ತೊಗೊಂಡು ಬಿಟ್ನಲ್ಲ  ಅಜ್ಜಿ ?'  ಆದಿತ್ಯನ ಪ್ರಶ್ನೆ .
 
' ಅಲ್ಲಾ ಅವ್ನು ರಾಮನ ಚಪ್ಪಲಿ ತೊಗೊಂಡು ಹೋದ್ರೆ , ರಾಮ ಕಾಡಲ್ಲಿ ಹೇಗೆ ನದೀ ಬೇಕು ? ಮುಳ್ಳು ಕಲ್ಲು ಎಲ್ಲಾ ಚುಚ್ಚಲ್ವ? 
ಅವನು ಹಾಗೆ ಮಾಡಬಾರದು . ಅದಕ್ಕೆ ನಂಗೆ ಇಷ್ಟ ಆಗ್ಲಿಲ್ಲ ಅವ್ನು ...'  ಮಗಳ ರಾಗ ಉದ್ದವಾಗುವ ಲಕ್ಷಣ ಕಂಡ  ಸ್ಮಿತಾ,
 
' ಅಯ್ಯೋ ಅತ್ತೆ,  ಮರ್ತೆ ಬಿಟ್ರಲ್ಲ ,  ಭರತ ಕೇಳಿದ್ದು ಹಳೆ ಚಪ್ಪಲಿ  ಅಲ್ವಾ?  ಅವನು  ಅಣ್ಣಂಗೆ ಅಂತ ಹೊಸ ಚಪ್ಪಲಿ ತಂದಿರಲಿಲ್ವ?  ' 
 
' ಅಯ್ಯೋ ಹೌದು ಹೌದು ,  ಹಾಳು ಮರೆವು ನಂಗೆ , ಭರತ ತೊಗೊಂಡು ಹೋಗಿದ್ದು ಹಳೆ ಚಪ್ಪಲಿ ಮರೀ,  ರಾಮನ ಕಾಲಲ್ಲಿ ಹೊಸ ಚಪ್ಪಲಿ ಇತ್ತು  " 
 
' ಹಾಗಿದ್ರೆ  ಸರಿ ... " ಅನುಮಾನದಿಂದ ಅಮ್ಮನ ಕಡೆ ನೋಡುತ್ತಲೇ ಹೇಳಿದಳು ಅಪೂರ್ವಾ. 
 
' ಹಾಂ, ಭರತ ಊರಿಗೆ ವಾಪಸ್ ಹೋಗಿ  ರಾಮನ ಚಪ್ಪಲಿನ  ಸಿಂಹಾಸನದ ಮೇಲಿಟ್ಟು ಅಣ್ಣನ ಹೆಸರಲ್ಲಿ ರಾಜ್ಯ ಅಳ್ತಾ ಇದ್ದ.  
ಇಲ್ಲಿ ರಾಮ, ಸೀತೆ , ಲಕ್ಷ್ಮಣ  ಮೂರೂ ಜನ ಕಾಡಲ್ಲಿ ಮತ್ತೂ ಮುಂದೆ ಹೋದರು. ತುಂಬಾ ರಾಕ್ಷಸರನ್ನು ಕೊಂದು ಕಾಡಲ್ಲಿ ಇರ್ತಿದ್ದ ಋಷಿ-ಮುನಿಗಳಿಗೆಲ್ಲ ಸಹಾಯ ಮಾಡಿದ್ರು .  ಹಾಗೆ ಒಂದು ಕಡೆ  ಇರೋವಾಗ , ಆ ಕಾಡಲ್ಲಿ ಶೂರ್ಪನಖಿ ಬಂದಳು ! " 
 
' ಯಾರಜ್ಜಿ ಅವಳು  ' ಶೂಪ್ರನಕ್ಕಿ ' ?
 
' ಹಃಅಹ ಅ..  ಶೂಪ್ರನಕ್ಕಿ  ' ಅಲ್ಲಾ ಚಿನ್ನು , ಶೂರ್ಪನಖಿ ! ಅವಳು ರಾವಣ ನ ತಂಗಿ . ' 
 
' ರಾವಣ್ !!!! ಓಹ್ , ಅಭಿಷೇಕ್ ಬಚ್ಚನ್  ತಂಗಿ ನ? ಅವಳು  ಪ್ರಿಯಾಮಣಿ  ಅಜ್ಜಿ . ಶೂರ್ಪನಖಿ ಅಲ್ಲಾ.  ನಾನು ನೋಡಿದೀನಿ  ಆ ಫಿಲಂ ' 
 
' ಥೂ, ಬರೇ ಟಿವಿ ಸಿನೆಮಾ ಬಿಟ್ರೆ ಗೊತ್ತೇ ಇಲ್ಲ ನಿಮಗೆ . ಇವಳು  ನಿಜವಾದ ರಾವಣ ನ ನಿಜವಾದ ತಂಗಿ ಕಣೆ . '
 
' ಓಹೋ .. ಹಾಗೆ ಹೇಳು ಮತ್ತೆ !  ಏನು ಮಾಡಿದ್ಲು ಅವಳು ? ' 
 
' ಅವಳು ದೂರದಿಂದ ರಾಮನ್ನ ನೋಡಿ ಮರುಳಾದ್ಲು . ತುಂಬಾ ಚಂದ ಇದಾನಲ್ಲ  ಇವನ್ನ ಮದ್ವೆ ಮಾಡ್ಕೋ ಬೇಕು  ಅಂತ ಅಂದ್ಕೊಂಡು  ತುಂಬಾ ಸುಂದರವಾಗಿರೋ ಹುಡುಗಿ ವೇಷ  ಹಾಕ್ಕೊಂಡು  ಇವರು ಇರೋ ಅಲ್ಲಿ ಬಂದಳು. ' 
 
' ಅಜ್ಜಿ ಹಾಗೆಲ್ಲ  ಹೇಗೆ ಮಾಡ್ಕೋ ಬಹುದು? ಫ್ಯಾನ್ಸಿ ಡ್ರೆಸ್  ?  "
 
' ಹ್ಞೂ , ಆಗೆಲ್ಲ ಅವರಿಗೆ ಹಾಗೆ ಮಾಯ - ಮಂತ್ರ ಬರ್ತಿತ್ತು ಕಣೆ ' 
 
' ಎಷ್ಟು ಚಂದ ಅಲ್ವಾ ಅಜ್ಜಿ ? ನಂಗೂ ಹಾಂಗೆ  ಬಂದಿದ್ರೆ ..  ನಾನು ಐಶ್ವರ್ಯಾ  ತರ  ವೇಷ ಹಾಕ್ಕೋತಾ ಇದ್ದೆ !!!  ' ಅಪೂರ್ವಾ  ಕನಸು ಕಾಣ ತೊಡಗಿದಳು. 
 
' ಹಾ ಹಾ ಹಾ .....  ಎಲ್ಲಾರೂ ಹಾಗೆ ಮಾಡ್ತಾ ಇದ್ರು  . ಆಗ , ಒರಿಜಿನಲ್  ಮತ್ತೆ ಡುಪ್ಲಿಕೇಟ್  ಗೊತ್ತಾಗ್ತಾನೆ ಇರಲಿಲ್ಲ ಅಲ್ವಾ? '
 
' ಹಾಂ , ಆಮೇಲೆ? ಅವಳೇನು ಮಾಡಿದ್ಲು ಅಜ್ಜಿ ? ' 
 
' ಶೂರ್ಪನಖಿ ರಾಮನತ್ರ ಬಂದು , ' ನೀನ್ಯಾರು ? ಇಲ್ಯಾಕೆ ಇದ್ದೀಯ ? ಏನು ಮಾಡ್ತಾ ಇದೀಯಾ? ಅಂತೆಲ್ಲ ಕೇಳಿದಳು . ಆಮೇಲೆ ,  ನಂಗೆ ನೀನು ತುಂಬಾ ಇಷ್ಟ ಆಗಿದೀಯ ,  ನಿನ್ನ ಮದ್ವೆ ಮಾಡ್ಕೊಬೇಕು ಅನಿಸ್ತಾ ಇದೆ. ಅಂತೆಲ್ಲಾ ಅಂದ್ಲು .  ರಾಮಂಗೆ  ಸಲ್ಪ ತಮಾಷೆ ಮಾಡೋಣ ಅನ್ನಿಸ್ತು . ಅವನು ' ಹಾಗೆಲ್ಲಾ ಆಗಲ್ಲ , ತನಗೆ ಮದ್ವೆ ಆಗಿದೆ , ನೀನು ಒಂದು ಕೆಲಸ ಮಾಡು, ಅಲ್ಲಿ ನನ್ನ ತಮ್ಮ ಇದಾನೆ ಅವನ್ನ ಕೇಳು ' ಅಂದ .
ಶೂರ್ಪನಖಿ ಲಕ್ಷ್ಮಣನ ಹತ್ರ ಹೋದಳು .ಲಕ್ಷ್ಮಣ  ' ನಂಗೂ ಮದ್ವೆ ಆಗಿದೆ , ಆದರೆ ಹೆಂಡತಿ ಮಾತ್ರ ಊರಲ್ಲಿದಾಳೆ.  ಯಾವುದಕ್ಕೂ ನೀನು ಅಣ್ಣ ನ್ನೇ  ಕೇಳೋದು ಒಳ್ಳೇದು ಅಂದ.  ಅವಳು ಮತ್ತೆ ರಾಮನ ಹತ್ರ ಬಂದಳು . ರಾಮ ' ನೋಡು  ನನ್ನ ಹೆಂಡತಿ ಇಲ್ಲೇ ಇದಾಳೆ .  ನಾನು ಅವಳನ್ನು ಬಿಟ್ಟು ನಿನ್ನ ಮದ್ವೆ ಆಗೋಕೆ ಸಾಧ್ಯ ಇಲ್ಲ ಸುಮ್ನೇ ಹೋಗಿ ಬಿಡು'  ಅಂದ .
 
' ಆಮೇಲೆ ? ' 
 
' ಆಗ ಶೂರ್ಪನಖಿಗೆ ಸಿಟ್ಟು ಬಂತು . ಈ ಸೀತೆ  ಇಲ್ಲಿದಾಳೆ ಅಂತ ಇಷ್ಟೆಲ್ಲಾ ಆಗ್ತಿರೋದು , ಅವಳನ್ನೇ ಸಾಯಿಸಿ ಬಿಡ್ತೀನಿ , ಆಗ ನೀವು ನನ್ನ ಮದ್ವೆ ಮಾಡ್ಕೊತೀರಾ  ಅಂತ  ಹೇಳಿ . ತನ್ನ ನಿಜವಾದ ರೂಪದಲ್ಲಿ ಅಂದ್ರೆ , ರಾಕ್ಷಸ ರೂಪದಲ್ಲಿ ಸೀತೆ ಕಡೆ ಓಡಿದಳು.'
 
' ಅಯ್ಯೋ , ಅಜ್ಜಿ ,  ಅವ್ಳು ಸೀತೆಗೆ ಏನಾದರೂ ಮಾಡಿ ಬಿಟ್ಲಾ? 
 
' ಇಲ್ಲ ಕಣೋ ಚಿನ್ನು ... ಶೂರ್ಪನಖಿ ಸೀತೆ ಕಡೆ ಹೋಗೋದು ನೋಡಿ  ಲಕ್ಷ್ಮಣ ಸಿಟ್ಟು ಬಂದು ಅವಳ ಮೂಗು ಕಿವಿ ಕತ್ತರಿಸಿ ಬಿಟ್ಟ ! ಅವಳು ಅಳ್ತಾ ನನ್ನ ಅಣ್ಣಂಗೆ ಹೇಳ್ತೀನಿ ಅಂತ ಓಡಿ ಹೋದಳು " 
 
" ಕತ್ತರಿಸಿ ಬಿಟ್ನಾ?  ಪಾಪ .. ಹಾಗೆ ಮಾಡ್ಬಾರ್ದಿತ್ತಲ್ಲಾ ಅಜ್ಜಿ ? ಚೆನ್ನಾಗಿ ಬಯ್ದು ಕಳಿಸಿದರೂ ಪರವಾಗಿರಲಿಲ್ಲ.'  ಅಪೂರ್ವಾಳ ಅನುಕಂಪ . 
 
' ಅಲ್ಲಾ ಅಜ್ಜಿ , ಇಷ್ಟ್ಯಾಕೆ  ಮಾಡ್ಬೇಕು ? ಲಕ್ಷ್ಮಣ  ಶೂರ್ಪನಖಿ ನ ಗರ್ಲ್ ಫ್ರೆಂಡ್  ಮಾಡ್ಕೋ ಬಹುದಿತ್ತಲ್ಲ ,  ಆಮೇಲೆ  ಬೇಕಾದ್ರೆ , ನಂಗೆ ನೀನು ಸರಿಹೋಗಲ್ಲ ಅಂತ ಬಿಟ್ಟು ಬಿಟ್ಟಿದ್ರೆ ಆಗಿತ್ತು !  '  ವರುಣ್ ಹೇಳಿದ್ದು ಕೇಳಿ  ಸ್ಮಿತಾ , ಉಷಾ ಮುಖ ಮುಖ ನೋಡಿ ಕೊಂಡರು . ಅಜ್ಜಿಯ ಮುಖ ಕೆಂಪಾಯ್ತು . 
 
' ಕತ್ತೆ , ನಿನ್ನ ವಯಸ್ಸೇನು  ನೀನು ಹೇಳ್ತಿರೋದೆನು  ? ಗರ್ಲ್ ಫ್ರೆಂಡ್  ಅಂತೆ , ನಿಮ್ಮಮ್ಮ ಬರಲಿ , ಹೇಳ್ತೀನಿ. ತೋರಿಸ್ತಾರೆ ಆಗ ನಿನ್ನ ಗರ್ಲ್ ಫ್ರೆಂಡ್ ನ ' ಉಷಾ ಬಯ್ದಳು 
 
' ಅತ್ತೆ, ಕೂಲ್ !  ಇದೆಲ್ಲಾ ಕಾಮನ್ ಆಗಿದೆ ಗೊತ್ತ ನಿಂಗೆ?  ನನ್  ಸ್ಕೂಲ್ ಫ್ರೆಂಡ್ಸ್  ಎಷ್ಟು ಜನರಿಗೆ ಗರ್ಲ್ ಫ್ರೆಂಡ್ಸ್ ಇದಾರೆ. ಫಿಲಂ ಹೋಟೆಲ್ ಅಂತ ತಿರುಗ್ತಾರೆ ಗೊತ್ತಾ?  ' ತಣ್ಣಗೆ ವರುಣ್ ಹೇಳಿದ. 
 
' ನಿನಗೂ ಇದಾಳೇನೋ ಫ್ರೆಂಡ್ ? ' ಸ್ಮಿತಾಳ ಮುಖದಲ್ಲಿ ಗಾಬರಿ  ! 
 
'  ಥೂ ಇಲ್ಲಪ್ಪ ,ಆ ರಗಳೆ ಎಲ್ಲಾ ಬೇಡ ನಂಗೆ . ನಾನು  ಸುಮ್ನೆ ಹೇಳಿದ್ದಕ್ಕೆ ನೀವೆಲ್ಲ ಹೀಗಾಡ್ತೀರಾ .. ಇನ್ನು ಒಂದು ಹುಡುಗಿ ನ ಫ್ರೆಂಡ್ ಮಾಡ್ಕೊಂಡು ಬಿಟ್ರೆ  ಅಷ್ಟೇ ಕಥೆ !  ಅಲ್ಲಿ ಅವಳು , ಇಲ್ಲಿ ನೀವುಗಳ ಕಾಟ ಯಾಕಪ್ಪ ಬೇಕು !  ಹಿ ಹಿ ಹಿ .. "  
 
' ಥೂ,  ನೀನಾಡೋ ಚಂದಕ್ಕೆ  ಯಾವ ಹುಡುಗೀನೂ ನಿನ್ನ ಫ್ರೆಂಡ್ ಮಾಡ್ಕೊಳಲ್ಲಾ.  ಅಷ್ಟು  ಕರುಣೆ ಇದ್ದೋನು ಆ ಶೂರ್ಪನಖಿ ನೇ ಫ್ರೆಂಡ್ ಮಾಡ್ಕೋ ಬೇಕಾದ್ರೆ . ಅಜ್ಜೀ.. ನೀನು ನಂಗೆ ಕಥೆ ಹೇಳಜ್ಜಿ. ' ಅಪೂರ್ವಾ  ಅಜ್ಜಿಯ ಸೆರಗೆಳೆದಳು .
 
' ನನಗ್ಯಾಕೋ ಒಂಥರಾ ಆಗೋಗಿದೆ ಪುಟ್ಟೀ. ಸ್ವಲ್ಪ ಹೊತ್ತು ಬಿಟ್ಟು ಹೇಳ್ತೀನಿ . ಅಲ್ಲಿವರೆಗೆ ನೀನು ಹೋಂ ವರ್ಕ್ ಮಾಡ್ಕೋ. ... '
 
'ಎಲ್ಲಾ ನಿನ್ನಿಂದಾನೆ ... ' ಸಿಡುಕುತ್ತಾ ಅಪೂರ್ವಾ ಹೋಂ ವರ್ಕ್ ಮಾಡಲು ಹೋದಳು ! 
 
( ಮತ್ತೆ  ವಿರಾಮ ... ) 

14 comments:

ಸಾಗರದಾಚೆಯ ಇಂಚರ said...

ಮಸ್ತ ಬರದ್ಯೇ,

ಒಳ್ಳೆ ಅರಣ್ಯ ಕಾಂಡ

ಖುಷಿ ಅತು

sunaath said...

ಆಧುನಿಕ ಭಾಷೆಯ ರಾಮಾಯಣ ತುಂಬ ವಿನೋದಮಯವಾಗಿ ಸಾಗುತ್ತಾ ಇದೆ. ವಾಲ್ಮೀಕಿ ರಾಮಾಯಣಕ್ಕಿಂತ ಇದೇ ಚೆನ್ನಾಗಿದೆ!

ಜಲನಯನ said...

ಅಲ್ಲಾರೀ ಬರೆಯೋಕೆ ಟೈಮ್ ಇಲ್ಲ ಅಂತಾ....ಹೋಗ್ಲಿ ಬಿಡಿ ನನಗೆ ಉತ್ತರ ಕೊಡೋಕೆ ಮನಸಿಲ್ಲ ಅಂತ ಆಯ್ತು...
ಹೌದು ನಿಮಗೆ ಇಷ್ಟೆಲ್ಲಾ ಕೂಲಂಕುಷವಾಗಿ ಗಮನಿಸೋಕೆ ಟೈಮ್ ಸಿಗುತ್ತಾ...ಛೇ ಛೇ..ಮತ್ತೆ ಅಲ್ಲಿಗೇ ಬಂತು ನನ್ನ ಕೊಶ್ನೆ...!!! ಹೋಗ್ಲಿ ಬಿಡಿ...
ನಿಮ್ಮ ನಿರೂಪಣೆ ಸೂಪರ್ ಕಣ್ರೀ...ಅದ್ರಲ್ಲೂ ಇಂಥ ಎಡವಟ್ ರಮಾಯಣಕ್ಕೆ...ಹಹಹ...

Ittigecement said...

ಚಿತ್ರಾ...

ಆಧುನಿಕ ಮನಸ್ಸು ನಮ್ಮ ಪುರಾಣವನ್ನು ನೋಡುವದು ಹೀಗೆ ಅಲ್ಲವೆ?

ಬಹಳ ಸೊಗಸಾದ ನಿರೂಪಣೆ..!

ಎಲ್ಲಿಯೂ ನಿಲ್ಲದೆ ಸರಯೂ ನದಿಯಹಾಗೆ ಓದುತ್ತಿದೆ...

ಮಸ್ತ್.. ಮಸ್ತ್ ಆಗಿದೆ..

ನನ್ನ ಮಗನಿಗೂ ಓದಿ ಹೇಳಿದೆ..

ನಾನು ರಾಮಾಯಣದ ಕಥೆ ಹೇಳುವಾಗ ಕೆಲವು ಇಂಥದ್ದೇ ಪ್ರಶ್ನೆ ಕೇಳಿದ್ದ...!!

ಎಲ್ಲಿಯೂ ಕಟ್ ಮಾಡದೆ ನಿಧಾನವಾಗಿ ಕಥೇ ಹೇಳಿ
ತುಂಬಾ ಚೆನ್ನಾಗಿ ಬರುತ್ತಿದೆ...

Raghu said...

ಆಧುನಿಕ ರಾಮಾಯಣ..ಒಳ್ಳೆಯ ಬರಹ... :)
ನಿಮ್ಮವ,
ರಾಘು.

ಸೀತಾರಾಮ. ಕೆ. / SITARAM.K said...

ಚೆಂದವಾಗಿ ಬರೆದಿದ್ದಾರಾ ಚಿತ್ರಾ ರಾಮಾಯಣ

ಸುಧೇಶ್ ಶೆಟ್ಟಿ said...

Manirathnam aathurakke biddu "Ravan" movie maadi kai suttukondru... swalpa dina kaadiddare nimma script anne upayogisabahudittu. Film super hit aagirodu :)

Thumba chennagi baritha ideera... nanganthoo bhaaLa ishta aaythu :)

ಚಿತ್ರಾ said...

ಗುರು ,
ಥ್ಯಾಂಕ್ಸು ಮಾರಾಯ

ಚಿತ್ರಾ said...

ಕಾಕಾ,
ನಿಮಗೆ ಇಷ್ಟವಾಯ್ತಲ್ಲ , ನನಗೆ ಅದೇ ಖುಷಿ

ಚಿತ್ರಾ said...

ಆಜಾದ್ ,
ನಿಜಕ್ಕೂ ಟೈಮ್ ಇರ್ಲಿಲ್ಲ ಕಣ್ರೀ .ನೀವು ಬೇರೆ ' ಅಪ್ ಡೇಟ್ ' ಮಾಡಿಲ್ಲಾ ಅಂತ ರೇಗಿಸ್ತಾ ಇದ್ರಿ . ಅದಕ್ಕೆ ರಾತ್ರಿ ನಿದ್ದೆ ಬಿಟ್ಟು ಬರೆದಿದ್ದೇನೆ. .
ಇನ್ನು ನಿಮ್ಮ ಕೊಶ್ನೆಗೆ ಉತ್ತರ ... ಕ್ಷಮ್ಸಿ ಅದು ಹೇಗೋ ಕಳೆದ ಸಲ ಬಿಟ್ಟು ಹೋಗಿದೆ. ಮತ್ತೆ, ಎಡವಟ್ ರಾಮಾಯಣ ಅಂತೆಲ್ಲ ಹೇಳ್ಬೇದ್ರೀ, ಈಗಿನ ಮಕ್ಕಳು ಇನ್ಥಾದೆ ಪ್ರಶ್ನೆ ಕೇಳ್ತಾರೆ !

ಚಿತ್ರಾ said...

ಪ್ರಕಾಶಣ್ಣ,
ಹೌದು ಮಾರಾಯ , ನನ್ನ ಮಗಳೂ ಹಿಂಗೆ ಎಂತೆಂತದೋ ಕೇಳಿ , ನನ್ನ ಕಥೆ ಹೇಳ ಚಟಾ ನೆ ಬಿಟ್ಟು ಹೋಗ ನಮನಿ ಆಗಿತ್ತು. ನಮ್ಮಷ್ಟು ಮುಗ್ಧರಲ್ಲ ಇವೆಲ್ಲವ.
ನಿಧಾನಕ್ಕೆ ಹೇಳ್ತಿ ಕಥೇನಾ. ಓದಿ ಅಭಿಪ್ರಾಯ ಹೇಳ್ತಾ ಇರು.

ಚಿತ್ರಾ said...

ಥ್ಯಾಂಕ್ಸ್ ರಾಘು !

ಚಿತ್ರಾ said...

ಸೀತಾರಾಮಣ್ಣ,
ಮೆಚ್ಚುಗೆಗೆ ಧನ್ಯವಾದಗಳು

ಚಿತ್ರಾ said...

ಸುಧೇಶ್,

ನೀವಾದ್ರು ಒಂದು ಮಾತು ' ಮಣಿ ರತ್ನಂ ' ಅವರಿಗೆ ಹೇಳಬಹುದಿತ್ತು . ದುಡ್ಡು ಉಳೀತಿತ್ತು ಅವರದ್ದು . ಮುಂದಿನ ಸಲ ಮಹಾಭಾರತ ಬರೀತೀನಿ. ಮುಂಚೆನೆ ಹೇಳಿಡಿ.
ನಿಮ್ಮ ಮೆಚ್ಚುಗೆಗೆ ಥ್ಯಾಂಕ್ಸು .