August 24, 2010

ರಕ್ಷಾ ಬಂಧನ

भैया मेरे राखी के बंधन को निभाना .....
बहेना ने भाई के कलाई पे प्यार बांधा है ... रेशम कि डोरी से संसार बंधा है ..

ಎಂಬ ಹಾಡುಗಳು ರೇಡಿಯೋ / ಟೀ ವಿ ಅಥವಾ ಧ್ವನಿವರ್ಧಕಗಳಲ್ಲಿ ಕೇಳ ತೊಡಗಿತು ಎಂದರೆ ' ರಕ್ಷಾ ಬಂಧನ್ ' ಹತ್ತಿರ ಬಂತು ಎಂದರ್ಥ !

ಬೋರ್ಡಿಂಗ್ ಸ್ಕೂಲ್ ನಲ್ಲಿರುವ ತಮ್ಮನಿಗೆ ರಕ್ಷಾ ಬಂಧನ ದ ದಿನ ' Surprise ' ಭೇಟಿ ಕೊಟ್ಟು ಖುಷಿ ಪಡಿಸುವ ಅಕ್ಕ , ಹೊಸ ಬಟ್ಟೆ ತೊಟ್ಟು ಅಲಂಕರಿಸಿಕೊಂಡು , ಆರತಿ ಎತ್ತಿ, ತಿಲಕವಿಟ್ಟು ರಾಖೀ ಕಟ್ಟಿದ ಪುಟ್ಟ ತಂಗಿಗೆ " ಗಿಫ್ಟ್ ' ಮರೆತು ಹೋಯಿತು ಎಂದು ನಾಟಕವಾಡಿ ಅವಳ ಮುಖ ಚಿಕ್ಕದಾದಾಗ ಚಾಕೊಲೆಟ್ ನ ದೊಡ್ಡ ಪ್ಯಾಕೆಟ್ ಕೈಯಲ್ಲಿತ್ತು ರೇಗಿಸುವ ಅಣ್ಣನ Cadburry ಯ ಜಾಹೀರಾತುಗಳು ಟಿವಿ ಯಲ್ಲಿ ಶುರುವಾಗುತ್ತವೆ ಎಂದರೆ ರಾಖೀ ಹುಣ್ಣಿಮೆ ಹತ್ತಿರದಲ್ಲಿದೆ ಎನ್ನಲು ಏನೂ ಅಡ್ಡಿಯಿಲ್ಲ !


ಮಾರ್ಕೆಟ್ ನ ಲ್ಲಿ ಎಲ್ಲಿ ನೋಡಿದರೂ ಬಣ್ಣ ಬಣ್ಣದ ರಾಖಿ ತೂಗಾಡುತ್ತಿರುತ್ತವೆ. ೧ ರೂಪಾಯಿಯ ಸಾದಾ ರಾಖಿಯಿಂದ ಹಿಡಿದು ನೂರಾರು ರೂಪಾಯಿ ಬೆಲೆಯ ರಾಖಿ ಗಳೂ ಲಭ್ಯವಿದೆ. ಚಿನ್ನದ - ಬೆಳ್ಳಿಯವೂ ಬಂದಿವೆಯಂತೆ .ಕೆಲವು ಹುಡುಗರು ಮುಂಗೈಯಿಂದ ಮೊಳಕೈ ವರೆಗೂ ತರಹಾವರಿ ರಾಖಿ ಕಟ್ಟಿಸಿಕೊಂಡು ಹೆಮ್ಮೆಯಿಂದ ಓಡಾಡಿದರೆ , ಇನ್ನೂ ಕೆಲವರಿಗೆ ಮನೆಯಿಂದ ಆಚೆ ಕಾಲಿಡಲು ಭಯ ! ಎಲ್ಲಿಯಾದರೂ ತಾವು ಕದ್ದು ಮುಚ್ಚಿ ಲೈನ್ ಹೊಡೆಯುತ್ತಿರೋ ಹುಡುಗಿ ಬಂದು " भैया मेरे राखी के बंधन को निभाना .. " ಎಂದು ಬಿಟ್ಟರೆ ಅಂತ .

ಸೋದರ -ಸೋದರಿಯರ ನಡುವಿನ ವಾತ್ಸಲ್ಯಕ್ಕೆ ಒಂದು ಚಂದದ ರೂಪ ಕೊಟ್ಟ ಹಬ್ಬವಿದು. ಕೇವಲ ಒಡ ಹುಟ್ಟಿದವರಷ್ಟೇ ಅಲ್ಲದೆ ಅಂಥಾ ಭಾವನೆ ಇರುವ ಯಾರಿಗೂ ರಾಖಿ ಕಟ್ಟಿ ತಮ್ಮ ಬಳಗಕ್ಕೆ ಆತ್ಮೀಯವಾಗಿ ಸ್ವಾಗತಿಸುವ ದಿನವಿದು. ಇತ್ತೀಚಿನ ದಿನಗಳಲ್ಲಂತೂ ಜಾತಿ -ಮತ ಭೇದವಿಲ್ಲದೆ ಆಚರಿಸಲಾಗುತ್ತಿದೆ.

ಹಾಗೆ ನೋಡಿದರೆ , ' ರಾಖೀ ' ಕಟ್ಟುವುದು ಯಾವಾಗ ಆರಂಭವಾಯಿತು, ಮೊತ್ತ ಮೊದಲು ಇದನ್ನು ಆಚರಿಸಿದ ಸೋದರ ಸೋದರಿಯರು ಯಾರು ಎಂಬುದು ಯಾರಿಗೂ ಸರಿಯಾಗಿ ಗೊತ್ತಿಲ್ಲ ! ಒಂದು ಕಥೆಯ ಪ್ರಕಾರ ಕೃಷ್ಣನ ಕೈಗೆ ಗಾಯವಾಗಿ ರಕ್ತ ಸುರಿಯುತ್ತಿದುದನ್ನು ಕಂಡು ಅಲ್ಲೇ ಇದ್ದ ದ್ರೌಪದಿ ತಕ್ಷಣ ತಾನು ಉಟ್ಟ ಸೀರೆಯನ್ನೇ ಹರಿದು ಪಟ್ಟಿ ಕಟ್ಟಿದಳಂತೆ . ಆಗ ಕೃಷ್ಣ ಆಕೆಗೆ ,ನಿನಗೆ ಯಾವುದೇ ಅಪಾಯ ಬಾರದಂತೆ ಕಾಪಾಡುತ್ತೇನೆ ಎಂದು ವರವಿತ್ತನಂತೆ. ಅದೇ ಮೊದಲ ರಕ್ಷಾ ಬಂಧನ ಅಂತ ಒಂದು ಪ್ರತೀತಿ.

ನನಗನಿಸಿದಂತೆ ಹುಡುಗಿಯರು ಶಾಲೆ ಕಾಲೇಜುಗಳಲ್ಲಿ , ತಮ್ಮ ಹಿಂದೆ ಬೀಳುವ ಹುಡುಗರನ್ನು ದೂರವಿರಿಸಲು ಕಂಡುಕೊಂಡ ಉಪಾಯವಿದು. ಕೆಲವು ಚಾಲಾಕಿ ಹುಡುಗಿಯರಂತೂ ತಲೆಯೊಳಗೆ ಕಮ್ಮಿ ಹಾಗೂ ಮೈಯಲ್ಲಿ ಜಾಸ್ತಿ ಇರುವಂಥ ಹುಡುಗರನ್ನು ಹುಡುಕಿ ಅವರಿಗೆ ರಾಖಿ ಕಟ್ಟಿ ಆ ಮೂಲಕ ಇಮೊಶನಲೀ ಕಟ್ಟಿ ಹಾಕಿಬಿಡುತ್ತಿದ್ದರು . ಆ ಮೇಲೆ ಆ ಹುಡುಗಿಯನ್ನು ಸಾಧಾರಣದಂಥಾ ಯಾವ ಹುಡುಗನೂ ಕೆಣಕಲು ಹೋಗುವ ಧೈರ್ಯ ಮಾಡುತ್ತಿರಲಿಲ್ಲ ! ಅವಳ ಹಿಂದೆ ಬಾಡೀ ಗಾರ್ಡ್ ಆಗಿ ಅವಳ ' ರಾಖೀ ಬ್ರದರ್ ' ಇರುತ್ತಿದ್ದನಲ್ಲ ?

ಆದರೆ ಸ್ವಲ್ಪ ಜಾಣ ಹುಡುಗರು ಬಲುಬೇಗ ಅದಕ್ಕೊಂದು ಮರು ಉಪಾಯ ಹುಡುಕಿ ಕೊಂಡರು . ಆ ದಿನ ತಲೆ ತಪ್ಪಿಸಿಕೊಂಡು ತಿರುಗಾಡುವುದು. ಆದಷ್ಟು ಮನೆಯೊಳಗೇ ಇದ್ದು ಯಾವ ಹುಡುಗಿ ಬಂದರೂ ಇಲ್ಲ ಎಂದು ಹೇಳಿಸುವುದು ಇತ್ಯಾದಿ ! ಹಿಂದೆ ನಾನು ಕೆಲಸ ಮಾಡುತ್ತಿದ್ದ ಕಂಪನಿಯಲ್ಲಿ ಹುಡುಗರು ರಾಖೀ ಹುಣ್ಣಿಮೆಯಂದು ರಜೆ ಹಾಕಿಬಿಡುತ್ತಿದ್ದರು. ಮರುದಿನ ಒಬ್ಬನನ್ನು ಕೇಳಿದಾಗ " ಅಲ್ಲಮ್ಮ, ಚೆಂದದ ಹುಡುಗೀರೆಲ್ಲ ಬಂದು ರಾಖೀ ಕಟ್ಟಿದರೆ, ನಾವು ಆಮೇಲೆ ಯಾರನ್ನ ನೋಡಿ ಕಣ್ಣು ತಂಪು ಮಾಡ್ಕೋ ಬೇಕು ಹೇಳು ? " ಎಂದು ಪ್ರಾಮಾಣಿಕವಾಗಿ ಮರು ಪ್ರಶ್ನೆ ಹಾಕಿದ್ದ !

ಚಿಕ್ಕವರಿದ್ದಾಗ ನಾನೂ ಸಹ ರಾಖೀ ಹುಣ್ಣಿಮೆ ಬಂತೆಂದರೆ ಸಂಭ್ರಮಿಸುತ್ತಿದ್ದೆ! ಗಿಫ್ಟ್ ಸಿಗುತ್ತಲ್ಲಾ ಅಂತ ! ( ಈಗೇನೂ ಬದಲಾಗಿಲ್ಲ ! ) ನಮ್ಮ ಹಳ್ಳಿಯಲ್ಲಿ ' ರಾಖಿ ' ಎಂದರೇನೆಂದು ಹೆಚ್ಚಿನವರಿಗೆ ಗೊತ್ತಿರದ ಕಾಲ ಅದು ! ನಮ್ಮ ಮನೆಯಲ್ಲಿ ಹೇಗೆ ಶುರುವಾಯಿತು ಎನ್ನುವುದು ನನಗೂ ನೆನಪಿಲ್ಲ. ಬೆಳಿಗ್ಗೆ ಹೊಸ ಲಂಗ ತೊಟ್ಟು , ಸಂಭ್ರಮದಿಂದ ತಮ್ಮಂದಿರನ್ನು ದೇವರ ಮುಂದೆ ಕೂರಿಸಿ ಆರತಿ ಎತ್ತಿ ಸಿಹಿ ತಿನ್ನಿಸಿ ರಾಖಿ ಕಟ್ಟಿ ಉಡುಗೊರೆಗಾಗಿ ಹಲ್ಲು ಕಿರಿಯುತ್ತಾ ಕೈ ಮುಂದೆ ಮಾಡುವುದು ಖುಷಿಯ ವಿಷಯವಾಗಿತ್ತು ! ಸ್ವಲ್ಪ ದೊಡ್ಡವರಾದಂತೆ , ತಮ್ಮಂದಿರು ನನ್ನದೇ ಬಾಕ್ಸ್ ನಿಂದ ಕಾಡಿಗೆ ಪೆನ್ಸಿಲ್ ತೆಗೆದು ನನಗೆ ಉಡುಗೊರೆ ಕೊಟ್ಟಿದ್ದೂ ಇತ್ತು ! ಈಗ ಹಾಗೆ ಮಾಡುವ ಧೈರ್ಯವಿಲ್ಲ ಬಿಡಿ ! ಹೆಂಡತಿಯರೆದುರು ಮರ್ಯಾದೆ ಪ್ರಶ್ನೆ ಅಲ್ಲವೇ?

ಸೋದರ ವಾತ್ಸಲ್ಯದ ಪ್ರತೀಕವಾಗಿ ಪ್ರಾರಂಭವಾದ ರಕ್ಷಾ ಬಂಧನದ ಆಚರಣೆ ಕ್ರಮೇಣವಾಗಿ ಒಂಥರಾ ಫ್ಯಾಶನ್ ಆಗುತ್ತಿದೆ. ಹುಡುಗಿಯರು ೫ ರೂಪಾಯಿಯ ರಾಖೀ ಕಟ್ಟಿ ೫೦ ರೂಪಾಯಿ ಉಡುಗೊರೆಯಾಗಿ ಕೀಳುತ್ತಾರೆ ಎಂದು ಕೆಲ ಹುಡುಗರ ಗೋಳು ! ಒಳಗೊಳಗೇ ಬೇರೆಯದೇ ಭಾವನೆಗಳನ್ನು ಇಟ್ಟುಕೊಂಡ ರಾಖೀ ಬ್ರದರ್ , ರಾಖೀ ಸಿಸ್ಟರ್ ಗಳು ಹೆಚ್ಚಾಗುತ್ತಿದ್ದಾರೆ . ಈ ಸಲ ಯಾವುದೋ ಉತ್ಸಾಹದಲ್ಲಿ ರಾಖೀ ಕಟ್ಟಿದರೆ ಮುಂದಿನ ಸಲವೂ ಕಟ್ಟಿಯೇ ಬಿಡುತ್ತಾರೆ ಎನ್ನುವ ಭರವಸೆಯಿಲ್ಲ . ಹೀಗಾಗಿ ಹುಡುಗರೂ ಜಾಸ್ತಿ ನಿರಾಸೆಗೋಳ್ಳುತ್ತಿಲ್ಲ ! ಈ ಸಲವಲ್ಲದಿದ್ದರೂ ಮುಂದಿನ ಸಲ ಚಾನ್ಸ್ ಇದೆ ಬಿಡು ಎಂದುಕೊಳ್ಳುತ್ತಿದ್ದಾರೆ

ಇನ್ನು ಕೆಲ ಸಂಘಟನೆಗಳು ವ್ಯಾಲಂಟೈನ್ ಡೇಯಂದು ಜೋಡಿಗಳನ್ನು ಹಿಡಿದು ರಾಖಿ ಕಟ್ಟಿಸುವ ಕೆಲಸವನ್ನು ಮಾಡುತ್ತಿದ್ದಾರೆ. ಆದರೆ , ಕೇವಲ ರಾಖಿ ಕಟ್ಟಿದ ಮಾತ್ರಕ್ಕೆ ಮನದಲ್ಲಿನ ಭಾವನೆಗಳು ಬದಲಾಗುವುದಿಲ್ಲ ಎನ್ನುವುದು ಬಹುಶಃ ಅವರಿಗೆ ತಿಳಿದಿಲ್ಲ ! ಇದನ್ನೆಲ್ಲಾ ನೋಡಿದರೆ , ರಾಖೀ ಎನ್ನುವುದು ಒಂಥರಾ ತನ್ನ ಅರ್ಥವನ್ನೇ ಕಳೆದುಕೊಳ್ಳುತ್ತಿದೆ ಎನಿಸುತ್ತಿದೆ. ರಕ್ಷಾ ಬಂಧನ ಜನಪ್ರಿಯವಾಗುತ್ತಿರುವ ರೀತಿ ನೋಡಿದರೆ, ಮುಂದೊಂದು ದಿನ ಇದನ್ನೂ ಸಾರ್ವಜನಿಕ ಹಬ್ಬವಾಗಿಸಿ ಅದಕ್ಕೋಸ್ಕರ ದೇಣಿಗೆ ಕೇಳಲೂ ಬರಬಹುದು ಎನ್ನುವುದು ನನ್ನ ಅನುಮಾನ !

ಅದೇನೇ ಇರಲಿ , ಸೋದರ ಸಂಬಂಧವನ್ನು ಗೌರವಿಸುವ , ಅದನ್ನು ಈ ದಿನದಂದು ಹಂಚಿಕೊಂಡು ಸಂಭ್ರಮಿಸುವ , ಅಪರೂಪಕ್ಕಾದರೂ ಈ ನೆವದಲ್ಲಿ ಭೇಟಿಯಾಗಿ ಸಂತೋಷ ಪಡುವ ಎಲ್ಲಾ ಅಕ್ಕ- ತಂಗಿ, ಅಣ್ಣ- ತಮ್ಮಂದಿರಿಗೂ ನನ್ನ ಹಾರ್ದಿಕ ಶುಭಾಶಯಗಳು. ಅವರ ಈ ಮಧುರ ಬಾಂಧವ್ಯ ಎಂದೆಂದಿಗೂ ಹೀಗೇ ಇರಲಿ , ದಿನ ದಿನಕ್ಕೂ ಪ್ರೀತಿ ಗಾಢವಾಗಲಿ ಎಂಬುದು ನನ್ನ ಹೃತ್ಪೂರ್ವಕ ಹಾರೈಕೆ.

( ಕುವೈತ್ ಕನ್ನಡ ಕೂಟದ ಭಾದ್ರಪದ ಸಂಚಿಕೆಗೆ ಬರೆದದ್ದು)

13 comments:

shivu.k said...

ಚಿತ್ರರವರೆ,

ನಾನು ಇದನ್ನು ಕುವೈಟ್ ಸಂಚಿಕೆಯಲ್ಲಿ ಓದಿದ್ದೆ. ಚೆನ್ನಾಗಿತ್ತು. ನಿಮಗೂ ರಕ್ಷಾ ಬಂಧನದ ಶುಭಾಶಯಗಳು.

ಸುಧೇಶ್ ಶೆಟ್ಟಿ said...

ರಕ್ಷಾ ಬ೦ಧನದ ಶುಭ ಹಾರೈಕೆಗಳು... ನಾನು ಸಣ್ಣವನಿರುವಾಗ ನನ್ನ ತ೦ಗಿ ಮತ್ತು ಅಕ್ಕ ರಾಖಿ ಕಟ್ಟುತ್ತಿದ್ದುದು ನೆನಪಿದೆ. ಈಗ ದೂರ ಬ೦ದ ಮೇಲೆ ಅವೆಲ್ಲಾ ಇಲ್ಲ.

ಆಫೀಸಿನಲ್ಲಿ ನನ್ನ ಕಲೀಗ್ ಆಗಲೇ ಹೇಳಿ ಬಿಟ್ಟಾಗಿದೆ ಕ್ಯಾಡ್‍ಬರಿ ಚಾಕಲೇಟು ಬೇಕು ಎ೦ದು ರಾಖಿ ಕಟ್ಟಿದ್ದಕ್ಕೆ :)

ಚೆನ್ನಾಗಿ ಬರೆದಿದ್ದೀರಿ...

ಸಾಗರದಾಚೆಯ ಇಂಚರ said...

ಚಿತ್ರಾ

ರಕ್ಷಾ ಬಂಧನದ ಶುಭ ಹಾರೈಕೆಗಳು

ಕಾಲೇಜುಗಳಲ್ಲಿ ರಾಖಿ ಹಬ್ಬ ಅಂದ್ರೆ ಹುಡುಗರು ಕಾಲೇಜಿಗೆ ಬತ್ವಿಲ್ಲೇ ನೋಡು :)

ಮತ್ತೆ ಹಬ್ಬದ ವಿಶೇಷ ಎಂತ ಮಾಡಿದ್ದೆ?

Guru's world said...

ಚೆನ್ನಾಗಿ ಇದೆ,, ರಾಖಿ ಲೇಖನ.... ಗುಡ್

ಪ್ರಗತಿ ಹೆಗಡೆ said...

ರಕ್ಷಾಬಂಧನದ ಸಂದರ್ಭದಲ್ಲಿ ಒಳ್ಳೆ ಲೇಖನ... ಶುಭಾಷಯಗಳು...

sunaath said...

ಚಿತ್ರಾ,
ರಾಖಿ ಹಬ್ಬದ ಶುಭಾಶಯಗಳು!

ಸೀತಾರಾಮ. ಕೆ. / SITARAM.K said...

ಚೆಂದದ ಲಲಿತ ಪ್ರಭಂಧ. ಬಹಳ ಇಷ್ಟವಾಯಿತು. ಹಬ್ಬದ ಶುಭಾಶಯಗಳು.

ಸೀತಾರಾಮ. ಕೆ. / SITARAM.K said...

ಚೆಂದದ ಲಲಿತ ಪ್ರಭ೦ಧ. ಹಬ್ಬದ ಶುಭಾಶಯಗಳು

ಸಿಮೆಂಟು ಮರಳಿನ ಮಧ್ಯೆ said...

ಚಿತ್ರಾ..
ರಕ್ಷಾ ಬಂಧನದ ಶುಭ ಹಾರೈಕೆಗಳು...

ಸೊಗಸಾದ ಲೇಖನ..
ಅಭಿನಂದನೆಗಳು..

- ಕತ್ತಲೆ ಮನೆ... said...

ಹೌದು ಬಿಡಿ..
ಇತ್ತೀಚಿಗೆ 'ರಕ್ಷಾಬಂಧನ' ಅರ್ಥವನ್ನೇ ಕಳೆದುಕೊಂಡಿದೆ..
'ರಾಖಿ' ಕಟ್ಟಿದ ಮಾತ್ರಕ್ಕೆ ಭಾವನೆಗಳು ಬದಲಾಗೊಲ್ಲ ಸತ್ಯ..
'ರಾಖಿ' ಕಟ್ಟದ ಮಾತ್ರಕ್ಕೆ ಅವರು ಸೋದರತ್ವ ಭಾವನೆಯಲ್ಲಿ ಇರೋಕ್ಕಾಗೋಲ್ಲ.. ಅನ್ನೋದು ಸುಳ್ಳು.

ದಿನಕರ ಮೊಗೇರ.. said...

lekhana chenaagide...

raksha bhandana eegalu ide... adakke mahatva illavaagide ashte....

ವಿ.ಆರ್.ಭಟ್ said...

Nice! belated Rakshabandhan greetings !

Naveen Kumar said...

ಸಮಸ್ತ ಕನ್ನಡ ಕುಲಕೋಟಿಗೆ ವರ ಮಹಾಲಕ್ಷಮಿ ಹಬ್ಬ ಮತ್ತು ರಕ್ಷಾಬಂಧನದ ಹಾರ್ಧೀಕ ಶುಭಾಶಯಗಳು