February 13, 2011

ಪ್ರೀತಿಯ ಕರೆ ಕೇಳಿ ......

ಆತ  ಗಡಿಯಾರ ನೋಡಿಕೊಂಡ. ಇನ್ನು ಹೆಚ್ಚೆಂದರೆ  ಅರ್ಧ ಗಂಟೆ ಊರು ತಲುಪಲು . ಅವಳನ್ನು ನೋಡಲು . ಅವನ ಕೈ ತೊಡೆಯ ಮೇಲಿದ್ದ ಚೀಲವನ್ನು ನೇವರಿಸಿತು . ಅವಳಿಗಾಗಿ ಆರಿಸಿ ತಂದ ಉಡುಗೊರೆ . ಅವಳಿಗೆ ಇಷ್ಟವಾಗಬಹುದೆ ?   ಅವಳ ನೆನಪಾಗುತ್ತಿದ್ದಂತೆ  ಮೈ ಪುಳಕಗೊಂಡಿತು . ನೋಡಿ ಎರಡು ವರ್ಷದ ಮೇಲಾಯ್ತು.  ಹೇಗಿರಬಹುದು ಅವಳು ?  ಎರಡು ವರ್ಷಗಳಲ್ಲಿ ಅಲ್ಪ ಸ್ವಲ್ಪವಾದರೂ ಬದಲಾವಣೆ ಆಗಿರುತ್ತದೆ ಅಲ್ಲವೇ ?
ಮೊದಲಿನಂತೆ  ಅದೇ ಪ್ರೀತಿಯಿಂದ ಮಾತನಾಡಿಸುತ್ತಾಳಾ ? ಇನ್ನೂ ತನ್ನ ಮೇಲೆ ಕೋಪ- ಬೇಸರ ಇರಬಹುದಾ?  ನಿಟ್ಟುಸಿರಿಟ್ಟ . ಸಿಟ್ಟು ಮಾಡಿಕೊಂಡು ಹೋದವನು ತಾನು , ಅವಳಿಗೆ ಬೇಸರವಾಗಿದೆಯೇ ಹೊರತು ಸಿಟ್ಟಿಲ್ಲ  ಎನಿಸಿತು . 
-----------------------------------------------------------------------------------------------
ಎಷ್ಟು  ಪರಿ ಪರಿಯಾಗಿ ಬೇಡಿ ಕೊಂಡಿದ್ದಳು . " ಬೇಡ ಕಣೋ ,  ಅಷ್ಟು ದೂರ .... ನಿಂಗೆ ಇಲ್ಲೇ ಬೆಂಗಳೂರಲ್ಲೇ ಕೆಲಸ ಸಿಗಲ್ವೇನೋ ?  ಇಲ್ಲಾದರೆ , ನೀನು ಹತ್ರಾ ನೇ ಇದ್ದೀಯ ಅನ್ನೋ ಸಮಾಧಾನ ಕಣೋ ನಂಗೆ . ತೀರಾ ನಿನ್ನ ನೋಡ್ಬೇಕು ಅನಿಸಿದಾಗ ಹೇಗೋ  ಮಾಡಿಕೊಂಡು  ಬರ ಬಹುದು . ಇಲ್ಲಾ , ನಿನ್ನನ್ನೇ ಕರೀ ಬಹುದು , ನೋಡ್ಬೇಕೂ ಅನಿಸ್ತಾ ಇದೆ ಒಂದ್ಸಲ ಬಂದು ಹೋಗು ಅಂತ ..  ಅಷ್ಟು ದೂರ ಮುಂಬಯಿಗೆ ಹೋದ್ರೆ  .. ಅದು ಸಾಧ್ಯನೇನೋ ? ..... " 

ಕೇಳಿದ್ದನ ಅವನು ? ಬದಲಿಗೆ ಸಿಡುಕಿದ್ದ  " ನಿಂಗೆ ನಾನು ಏನಾದ್ರೂ ಉದ್ಧಾರ ಆಗ್ಬೇಕು ಅಂತ ಆಸೆ ಇಲ್ವಾ?  ಈಗ  ನಂಗೆ  ಎಂಥಾ ಒಳ್ಳೆ ಆಫರ್ ಬಂದಿದೆ ಗೊತ್ತ?  ಬೆಂಗಳೂರಲ್ಲಿ  ಸಿಗಲ್ಲ ಅಂತ ಅಲ್ಲ, ಆದ್ರೆ ಈಗ ಸಿಕ್ಕಿರೋ ಚಾನ್ಸ್ ನಾನು ಬಿಡೋದಿಲ್ಲ.  ಕೆಲವು ವರ್ಷಗಳು ಅಲ್ಲಿ , ಆಮೇಲೆ ಬೇಕಾದ್ರೆ ಬೆಂಗಳೂರಲ್ಲೇ  ಪ್ರಯತ್ನ ಮಾಡಬಹುದು  . ಈಗಾ ಸಿಕ್ಕಿರೋ ಕಡೆ ನಂಗೆ ಫಾರಿನ್ ಗೆ ಹೋಗೋ  ಅವಕಾಶನೂ ಇದೆ ಗೊತ್ತಾ?  " 

 ಇನ್ನಷ್ಟು ಗಾಬರಿಯಾಗಿತ್ತು  ಅವಳಿಗೆ " ಫಾರಿನ್ ಗಾ ?  ಹಾಗೆ ಫಾರಿನ್ ಗೆ ಹೋದೋರು ವಾಪಸ್ ಬರೋದೆ  ಇಲ್ಲ ಕಣೋ . ಎಲ್ಲಾರನ್ನು ಮರ್ತು ಬಿಡ್ತಾರೆ . ನೀನು ಹಾಗೆ ಹೋಗಿ ಬಿಟ್ರೆ .. ನಾನು ಏನೋ ಮಾಡ್ಲಿ ?  ನಿನ್ನ ಮೇಲೆ ನಂದೆಲ್ಲ ಭರವಸೆಗಳು ........ " ಬಿಕ್ಕ ತೊಡಗಿದ್ದಳು 

" ಥೂ .. ಅದ್ಯಾಕೆ ಅಳ್ತೀಯಾ? ಹೋಗೋ ಅವಕಾಶ ಇದೆ ಅಂದೆ ಅಷ್ಟೇ ,  ಹೋಗ್ತೀನಿ ಅಂತ ಹೇಳಿಲ್ಲ. ನೀನೋಬ್ಳು ..  ನನ್ನ ಬಗ್ಗೆ ಯೋಚನೆ ನೇ ಇಲ್ಲ . ಇಂಥಾ ಚಾನ್ಸ್ ಬಿಡಬೇಡ  ಹೋಗಬಾ ಅನ್ನೋದು ಬಿಟ್ಟು ಹಳ್ಳಿ ಗುಗ್ಗು ತರ ಆಡ್ತೀಯಲ್ಲ?  . ನೋಡು , ನಾನು ಯಾವ ಕಾರಣಕ್ಕೂ ಈ ಕೆಲಸ ಬಿಡೋದಿಲ್ಲ . ನನ್ನ ಜೀವನ , ನನ್ ಭವಿಷ್ಯ ನಂಗೆ ಮುಖ್ಯ ..  " ಎಂದು ಬಿರುಸಾಗಿ ಹೇಳಿ ಅಲ್ಲ್ಲಿಂದ ಹೊರಟು ಹೋಗಿದ್ದ. 

ಮತ್ತೆ ಅವಳು  ಮಾತನಾಡಿರಲಿಲ್ಲ.  ಆ ವಿಷಯದ ಬಗ್ಗೆ ಅಂತ  ಅಲ್ಲ... ಒಟ್ಟಿನಲ್ಲಿ ಮಾತೇ ಆಡಿರಲಿಲ್ಲ . ಅವನು ಬಸ್ ಹತ್ತುವಾಗಲೂ . ಹರಿಯುತ್ತಿದ್ದ ಕಣ್ಣೀರನ್ನು ಒರೆಸಿಕೊಳ್ಳುವ ನಾಟಕವೂ ಬೇಕಾಗಿರಲಿಲ್ಲ ಅವಳಿಗೆ. ಕೆಡುಕೆನಿಸಿದರೂ ಅವನು ಅವಳನ್ನು ತಾನಾಗಿ ಮಾತನಾಡಿಸಲಿಲ್ಲ .  ಅವಳ ಮೇಲೆ ಇನ್ನೂ ಅಸಮಾಧಾನವಿತ್ತು .

 ಮುಂಬಯಿ ಸೇರಿ  ಎಷ್ಟೋ ದಿನಗಳವರೆಗೂ ಕೋಪವಿತ್ತು . ತಲುಪಿದ್ದೇನೆ ಎಂಬ ಎರಡು ಸಾಲುಗಳ ಹೊರತಾಗಿ ಮತ್ತೆ  ಅವನು ಅವಳಿಗೆ ಪತ್ರ ಬರೆಯಲಿಲ್ಲ .  ತನ್ನ ಆಫೀಸು , ಪ್ರಾಜೆಕ್ಟ್ , ಎಂದೆಲ್ಲ ತನ್ನದೇ ಲೋಕದಲ್ಲಿ ಮುಳುಗಿಬಿಟ್ಟ. ಊರಿನ ನೆನಪೂ ಆಗದಷ್ಟು  ಕೆಲಸದಲ್ಲಿ ತೊಡಗಿಕೊಂಡ . ಅವಳಿಂದ ಆಗಾಗ ಪತ್ರ ಬರುತ್ತಿತ್ತು , ಆದರೆ , ಅದಕ್ಕೆ ಉತ್ತರಿಸುವ  ಮನಸು ಮಾಡಲಿಲ್ಲ . ಸಾರಾಂಶ ಗೊತ್ತೇ ಇದ್ದಿದ್ದರಿಂದ ಎಷ್ಟೋ ಪತ್ರಗಳನ್ನು ಓದುವ ಗೋಜಿಗೂ ಹೋಗಲಿಲ್ಲ .  ವರ್ಷ ಕಳೆದರೂ ಊರಿನ ನೆನಪಾಗಲಿಲ್ಲ . ತನ್ನ ಕನಸುಗಳನ್ನು ಸ್ವೀಕರಿಸದ  ಅವಳ ಬಗ್ಗೆ ಕೋಪ ಕಮ್ಮಿಯಾದರೂ  ಅಸಮಾಧಾನ  ಇದ್ದೇ ಇತ್ತು. 

ಕೊನೆಗೊಂದು ದಿನ ಊರಿಂದ ಬಂದ ನಾಣು ಮಾಮಾ ನ ಪತ್ರ  ಅವನನ್ನು ವಿಚಲಿತಗೊಳಿಸಿತ್ತು.
ಒಮ್ಮೆಗೇ , ಅವಳು ಕಾಡತೊಡಗಿದಳು . ಅವಳ ಜೊತೆಗಿನ  ಸುಂದರ ಕ್ಷಣಗಳು , ಅವಳ ಪ್ರೀತಿ  ಎಲ್ಲವೂ  ತೀವ್ರವಾಗಿ ನೆನಪಾಗತೊಡಗಿದವು . ರಾತ್ರಿ ಮಲಗಿದಾಗಲೂ ಅವಳದ್ದೇ ಯೋಚನೆ. ತಾನು ತಪ್ಪು ಮಾಡಿದೆನೆ ಎಂಬ ಭಾವ. ಅವಳದ್ದೇನು ತಪ್ಪಿತ್ತು ?ವಿದೇಶಕ್ಕೆ ಹೋಗಿ ಅಲ್ಲೇ ಸೆಟಲ್ ಆದವರ  ಅದೆಷ್ಟೋ ಘಟನೆಗಳನ್ನು ಕೇಳಿ ಗಾಬರಿಯಾಗಿರಬಹುದಲ್ಲ ಅವಳು ? ತಾನು ಜೀವದಂತೆ ಪ್ರೀತಿಸುವ  ವ್ಯಕ್ತಿ  ತನ್ನಿಂದ ದೂರವಾಗುವ ಕಲ್ಪನೆಯೇ  ನೋವು ಕೊಟ್ಟಿರಬಹುದಲ್ಲ ಅವಳಿಗೆ?  ಹೊರಜಗತ್ತನ್ನು ಅಷ್ಟಾಗಿ ನೋಡದ ಅವಳು ಗಾಬರಿಯಾಗಿದ್ದು ಸಹಜವೇ . ತಾನೇ ದುಡುಕಿ ಮಾತನಾಡಿದೆನೆ ? 
ಹೌದೆನಿಸಿತು ಅವನಿಗೆ . ತಾನು ಅಷ್ಟು ಒರಟಾಗಿ ಮಾತಾಡ ಬಾರದಿತ್ತು . ಓಲೈಸಿ  ಹೇಳಿದ್ದರೆ ಅವಳೂ ಅರ್ಥ ಮಾಡಿಕೊಳ್ಳುತ್ತಿದ್ದಳು . ತನ್ನ ಮೇಲೆ ಅವಳಿಟ್ಟ  ಭರವಸೆಯನ್ನು ಕಾದುಕೊಳ್ಳಲಿಲ್ಲ  ಎಂದು ಅನಿಸಿ  ಚುಚ್ಚತೊಡಗಿತು   . 

ಒಡೆಯದೆ ಹಾಗೇ ಡ್ರಾವರ್ ನಲ್ಲಿ ಎಸೆದಿದ್ದ ಅವಳ ಪತ್ರಗಳನ್ನೆಲ್ಲ  ತೆಗೆದು ಓದ ತೊಡಗಿದ. ಪ್ರತಿ ಪತ್ರದಲ್ಲೂ ಅವಳ ಪ್ರೀತಿ  ತುಂಬಿ ಹರಿದಿತ್ತು. ಪ್ರತಿ ಸಾಲಿನಲ್ಲೂ  ಅವನ  ಬಗ್ಗೆ ಕಾಳಜಿ ಎದ್ದು ತೋರುತ್ತಿತ್ತು . ಹತ್ತಾರು ಸಲ ಕ್ಷಮೆ ಕೇಳಿದ್ದಳು . ಒಂದೇ ಒಂದು ಸಲ ಬಂದು ಹೋಗು ಎಂದು ಎಲ್ಲಾ ಪತ್ರದಲ್ಲೂ ಬರೆದಿದ್ದಳು .

ಅವುಗಳನ್ನೆಲ್ಲ ಓದುತ್ತಿದ್ದಂತೆ , ಅವನ ಕಣ್ಣು ತುಂಬಿತು . ವಿನಾಕಾರಣ ಅವಳನ್ನು  ನೋಯಿಸಿದ್ದಕ್ಕೆ ಅಪರಾಧಿ ಪ್ರಜ್ಞೆ   ಕಾಡತೊಡಗಿತು . ತಕ್ಷಣ ಅವಳನ್ನು ನೋಡ ಬೇಕೆನಿಸಿತು . ದಯವಿಟ್ಟು ಒಮ್ಮೆ ಕ್ಷಮಿಸು ಎಂದು ಕೇಳಬೇಕೆನಿಸಿತು .  ಬೆಳಿಗ್ಗೆ  ಆಫೀಸಿಗೆ ಹೋಗಿ ರಜೆ  ಬರೆದವನೇ  ಮೊದಲು  ಮರುದಿನದ ವಿಮಾನಕ್ಕೆ ಟಿಕೆಟ್ ಬುಕ್ ಮಾಡಿದ. ಸಂಜೆ ಸಹೋದ್ಯೋಗಿ  ಸ್ನೇಹಾಳನ್ನು  ಕರೆದುಕೊಂಡು ಶಾಪಿಂಗ್ ಗೆ  ಹೋದ. ಅವಳಿಗಾಗಿ ಏನಾದರೂ ತೆಗೆದುಕೊಳ್ಳಬೇಕಿತ್ತು .

ಚಂದದ ರೇಷ್ಮೆ  ಸೀರೆ  ಅವಳಿಗಿಷ್ಟದ  ನೇರಳೆ ಬಣ್ಣದ್ದು ಹುಡುಕಿದ. ಚಿನ್ನದ ಬಳೆಗಳನ್ನು ಕೊಂಡ .  
" ಏನೋ ಇದು, ಇದ್ದಕ್ಕಿದ ಹಾಗೆ , ಯಾರಿಗೂ ಹೇಳದೆ ಏನೋ ಕರಾಮತ್ತು ಮಾಡಿದೀಯ? ಯಾರಪ್ಪ ಅವಳು "  ಎಂದೆಲ್ಲ  ಸ್ನೇಹಾ ರೇಗಿಸುತ್ತಿದ್ದರೂ    ನಕ್ಕು ಸುಮ್ಮನಾಗಿ ಬಿಟ್ಟ . ಶಾಪಿಂಗ್ ಮುಗಿಸಿ ಮನೆಗೆ ಹೊರಟವನಿಗೆ ಇದ್ದಕ್ಕಿದ್ದ ಹಾಗೆ  ಏನೋ ನೆನಪಾಯಿತು .  ಹೋಗಿ  ಹತ್ತಿರದ  ಎಲೆಕ್ಟ್ರಾನಿಕ್ಸ್  ಅಂಗಡಿಯಲ್ಲಿ ಒಳ್ಳೆಯ ಮೊಬೈಲ್ ಆರಿಸಿದ.  ಊರಲ್ಲಿ ಅವಳಿಗೆ  ಸಿಮ್ ಹಾಕಿಸಿ ಕೊಟ್ಟರೆ ಬೇಕೆನಿಸಿದಾಗೆಲ್ಲ ಮಾತನಾಡಬಹುದು  ಎಂದು ಕೊಂಡ.  ಕೆಲ ಸಮಯದಲ್ಲಿ ಅವಳಿಷ್ಟದಂತೆ  ಬೆಂಗಳೂರಲ್ಲೇ  ಕೆಲಸ ಹುಡುಕಲು ನಿರ್ಧರಿಸಿದ. 

ಮಲಗಿದರೂ  ಎಷ್ಟೊತ್ತಿಗೆ ಬೆಳಗಾಗುವುದೋ ಎಂಬ ಕಾತುರ.  ವಿಮಾನದಲ್ಲಿ ಕೂತ ಮೇಲೂ ಎಷ್ಟು ನಿಧಾನ ಹೋಗ್ತಿದೆಯಪ್ಪ ಎನಿಸಿ ಮತ್ತೆ  ತನ್ನ ಆಲೋಚನೆಯ ಬಗ್ಗೆಯೇ ನಗು ಬಂದು ಬಿಟ್ಟಿತು .

ಬೆಂಗಳೂರಲ್ಲಿ ಇಳಿದು ಮತ್ತೆ ಊರಿನ ಬಸ್ ಹತ್ತಿದವನಿಗೆ  ಯಾವಾಗ ಒಮ್ಮೆ ಅವಳ ಮುಖ ಕಾಣುತ್ತೇನೆ ಅನಿಸುತ್ತಿತ್ತು . 
ಅಂತೂ  ಒಮ್ಮೆ ಬಸ್ ನಿಂತಾಗ ಮೊದಲು ಇಳಿದದ್ದೇ ಅವನು. ಆಗಲೇ ಸಂಜೆಯಾಗುತ್ತಿತ್ತು . ದಾರಿಯಲ್ಲಿ  ಯಾರೂ ಸಿಗದಿರಲಿ  , ಸಿಕ್ಕರೂ ಈ ಸಂಜೆ ಮಬ್ಬಲ್ಲಿ ತನ್ನ ಗುರುತು ಹಿಡಿಯದಿರಲಿ ದೇವರೇ ಎಂದು ಪ್ರಾರ್ಥಿಸುತ್ತಾ ನಡೆದ .ಮುಖ್ಯವೆಂದರೆ , ಯಾರೊಡನೆಯೂ ಮಾತನಾಡುವುದು ಅವನಿಗೆ ಬೇಕಿರಲಿಲ್ಲ. ಮೊತ್ತ ಮೊದಲು ತಾನು ಮಾತನಾಡುವುದು ಅವಳೊಡನೆ ಮಾತ್ರ  ಎಂದು ನಿಶ್ಚಯಿಸಿ ಬಿಟ್ಟಿದ್ದ. ಅವನ ಪ್ರಾರ್ಥನೆ ಕೇಳಿತೋ ಎಂಬಂತೆ ಅಷ್ಟೊತ್ತಿಗೆ ಕರೆಂಟ್ ಹೋಗಿ  ಕತ್ತಲೆ  ಆವರಿಸಿಕೊಂಡಿತು.  ರಸ್ತೆ ಚಿರಪರಿಚಿತವಾಗಿದ್ದರಿಂದ  ಕತ್ತಲಲ್ಲೇ ನಡೆದು ಆ ಮನೆಯ ವರೆಗೂ ಬಂದು ಬಿಟ್ಟ . 

ತಳ್ಳಿದಾಗ ಗೇಟ್ ಕಿರ್ರೆಂದು ಶಬ್ದ ಮಾಡುತ್ತಾ ತೆರೆದು ಕೊಂಡಿತು . ಅಂಗಳದಲ್ಲಿ  ಕಾಲಿಟ್ಟಾಗ ಅವನೆದೆಯಲ್ಲಿ ಏನೋ  ಉದ್ವಿಗ್ನತೆ . ಮೆಟ್ಟಿಲು ಹತ್ತಿ ಬಾಗಿಲು ತಟ್ಟಿದವನ ನ ಎದೆ ಬಡಿತ  ಅವನಿಗೇ ಕೇಳುತ್ತಿತ್ತು.   ಅವಳೇ ಬಾಗಿಲು ತೆರೆಯುವಳೇ?  ೨ ವರ್ಷಗಳ ನಂತರ  ತನ್ನನ್ನು ನೋಡಿ  ಏನನಿಸಬಹುದು ಅವಳಿಗೆ?  ಛೆ, ಲೈಟ್  ಇದ್ದಿದ್ದರೆ , ಮುಖಭಾವವನ್ನಾದರೂ ನೋಡಬಹುದಿತ್ತು ಎನಿಸಿದ  ಮರುಕ್ಷಣವೇ ,  ಬೆಳಕಲ್ಲಿ ತನ್ನ ಮುಖವೂ ಕಥೆ ಹೇಳುತ್ತದಲ್ಲ ಎನಿಸಿ   ಕತ್ತಲೇ ಒಳ್ಳೆಯದು ಅಂದುಕೊಂಡ . ಒಳಗಿಂದ  ಹೆಜ್ಜೆ ಸಪ್ಪಳ ಕೇಳಿತು. ಹಾಗೆ ಚಿಲಕ ಸರಿಸಿದ ಶಬ್ದವೂ.

ದೀಪ ಹಿಡಿದು ಬಾಗಿಲು ತೆಗೆದ ಅವಳು ಅವನ ಮುಖ ನೋಡುತ್ತಲೇ  ಶಿಲೆಯಾಗಿ ನಿಂತು ಬಿಟ್ಟಳು . ಕಣ್ಣಲ್ಲಿ ಧಾರೆ ಹರಿಯುತ್ತಿತ್ತು . 

ಅವನಿಂದ ತಡೆಯಲಾಗಲಿಲ್ಲ  "  ನಾನು ನಿಂಗೆ ತುಂಬಾ ನೋವು ಮಾಡಿದೆ . ದಯವಿಟ್ಟು  ನನ್ನ ಕ್ಷಮಿಸಿಬಿಡು  ಅಮ್ಮಾ ... " ಎಂದು ಬಿಕ್ಕ ತೊಡಗಿದವನು ಅವಳ ಕಾಲ ಬಳಿ ಕುಸಿದ. ದೀಪ ಪಕ್ಕಕ್ಕಿಟ್ಟು ಮೆಲ್ಲಗೆ ಮೇಲೆತ್ತಿದವಳು  ಅವನನ್ನು ಬಿಗಿದಪ್ಪಿ ಬೆನ್ನು ಸವರಿದಾಗ , ದೀಪಕ್ಕಿಂತಲೂ   ಹೆಚ್ಚು ಬೆಳಕು ಅವಳ ಮುಖದಲ್ಲಿ  ಹೊಳೆದದ್ದು  ಅವನಿಗೇ ನೋಡದೆಯೇ ಕಾಣುತ್ತಿತ್ತು. 

33 comments:

ಶಾಂತಲಾ ಭಂಡಿ (ಸನ್ನಿಧಿ) said...

ಚಿತ್ರಕ್ಕಾ...
ಪ್ರೀತಿಯ ದಿನಕ್ಕೆ ಪ್ರೀತಿಯನ್ನೆಲ್ಲ ತುಂಬಿಕೊಂಡ ಬರಹ.
ಸರಸರ ಓದಿಸಿಕೊಂಡಿತು ಭಾವನೆಗಳ ಪೂರ.
‘ದೀಪ ಪಕ್ಕಕ್ಕಿಟ್ಟು ಮೆಲ್ಲಗೆ ಮೇಲೆತ್ತಿದವಳು ಅವನನ್ನು ಬಿಗಿದಪ್ಪಿ ಬೆನ್ನು ಸವರಿದಾಗ , ದೀಪಕ್ಕಿಂತಲೂ ಹೆಚ್ಚು ಬೆಳಕು ಅವಳ ಮುಖದಲ್ಲಿ ಹೊಳೆದದ್ದು ಅವನಿಗೇ ನೋಡದೆಯೇ ಕಾಣುತ್ತಿತ್ತು.’
ಇಷ್ಟವಾಯ್ತು.
ಪ್ರೀತಿಯಿಂದ,
-ಶಾಂತಲಾ

ತೇಜಸ್ವಿನಿ ಹೆಗಡೆ said...

ಪ್ರೀತಿತುಂಬಿದ ಬರಹ ತುಂಬಾ ಸುಂದರವಾಗಿದ್ದು ಅಕ್ಕ.. ಯಾವ್ದಾದ್ರೂ ಪೇಪರಿಗೆ ಕೊಡ್ಲಾಗಿತ್ತು. ತುಂಬಾ ಇಷ್ಟಾತು.

sritri said...

ಪ್ರೀತಿಯ ಕರೆ ಕೇಳಿತು....ಕೊನೆಗೂ! ಅಷ್ಟು ಸಾಕು.

ಮನಸಿನ ಮಾತುಗಳು said...

Oh...when I read it I felt it must be his feelings towards his lover...;-)

nice twist at the end..enjoyed the story..:-)

ವನಿತಾ / Vanitha said...

nice ending :) liked it :)

ಸೋಮಶೇಖರ ಹುಲ್ಮನಿ said...

‘ದೀಪ ಪಕ್ಕಕ್ಕಿಟ್ಟು ಮೆಲ್ಲಗೆ ಮೇಲೆತ್ತಿದವಳು ಅವನನ್ನು ಬಿಗಿದಪ್ಪಿ ಬೆನ್ನು ಸವರಿದಾಗ , ದೀಪಕ್ಕಿಂತಲೂ ಹೆಚ್ಚು ಬೆಳಕು ಅವಳ ಮುಖದಲ್ಲಿ ಹೊಳೆದದ್ದು ಅವನಿಗೇ ನೋಡದೆಯೇ ಕಾಣುತ್ತಿತ್ತು.’........ super kanri

sunaath said...

ಚಿತ್ರಾ,
ನಾಯಕನ ಮೂಲಕವೆ ಕತೆಯನ್ನು ತೆರೆದು ತೋರಿಸಿದ್ದೀರಿ. ಹೀಗಾಗಿ ಕತೆಯ ಕೊನೆಯಲ್ಲಿ ಬರುವ ‘ಅವಳ ಮುಖದ ಮೇಲಿನ ಬೆಳಕು’ ನಾಯಕನ ಮನಸ್ಸಿಗೆ ಕಾಣುವದು ತುಂಬ effective ಆಗುತ್ತದೆ. ಮೊದಲ ಸ್ವಲ್ಪ ಭಾಗ ‘ಅವಳು’ ನಾಯಕನ ಪ್ರೇಮಿ ಎಂದು ಅನ್ನಿಸಿದ್ದರೂ, ಓದುತ್ತ ಹೋದಂತೆ, ‘ಅವಳು’ ಅವನ ತಾಯಿಯೂ ಆಗಿರಬಹುದು ಎನ್ನುವ ಅನುಮಾನ ಕೊನೆಗೆ ಧಿಡೀರನೆ ಸಫಲವಾಗುತ್ತದೆ. ಕೊನೆಯ ವಾಕ್ಯವಂತೂ ಕತೆಗೆ ಅದ್ಭುತವಾದ ಭರತವಾಕ್ಯವಾಗಿದೆ. ಅಭಿನಂದನೆಗಳು.

ದಿನಕರ ಮೊಗೇರ said...

sakat suspence ittu... tumbaa chennaagi barediddiraa...

Manu Varsha said...

tumbaa channaagide

ಅನಿಲ್ ಬೇಡಗೆ said...

ವಾವ್, ತುಂಬಾ ಇಷ್ಟ ಆಯ್ತು.. :)

ಚುಕ್ಕಿಚಿತ್ತಾರ said...

ಚಿತ್ರಾ..
ಕಥೆ ತು೦ಬಾ ಇಷ್ಟವಾಯ್ತು..
ವ್ಯಾಲೆ೦ಟಿನ್ ಡೇ ಸ್ಪೆಶಲ್ ಕಥೆ ಅ೦ತ ಮೊದಲಿಗೆ ಅನ್ನಿಸಿದರೂ ಓದುತ್ತಾ ಹೋದ೦ತೆ ಗೊತ್ತಾಯ್ತು.. ಇದು ಹೀಗೆ ಅ೦ತ.. ನಿಜ ಜೀವನದಲ್ಲಿ ಎಷ್ಟೋ ಕಥೆಯಲ್ಲಿ ಈ ಎ೦ಡ್ ಸಿಕ್ಕಿದ್ದು ಸುಳ್ಳು.. ಹತ್ತಿರ ಇದ್ದವರೇ ಮಾನಸಿಕವಾಗಿ ದೂರ ಹೋಗ್ತಾ ಇರುವುದರ ಅನೇಕ ಕಥೆಗಳು ಸಾಕಷ್ಟಿವೆ..!
ಸುಖಾ೦ತ್ಯದ ಕಥೆ ಚನ್ನಾಗಾಗಿದೆ..

ಸುಧೇಶ್ ಶೆಟ್ಟಿ said...

ಕಥೆ ತು೦ಬಾ ಇಷ್ಟ ಆಯಿತು. ಒ೦ದು ಸಲ ಓದುಗ ತನ್ನನ್ನೇ ಪ್ರಶ್ನಿಸಿಕೊಳ್ಳುವ೦ತೆ ಮಾಡುವಲ್ಲಿ ಕಥೆ ಸಫಲವಾಗುತ್ತದೆ. ಶೈಲಿ ಕೂಡ ಇಷ್ಟ ಆಯಿತು.

ಸಸ್ಪೆನ್ಸ್ ಇರಲಿಲ್ಲ. ಯಾಕೆ೦ದರೆ ಕೊನೆಯ ಸಾಲನ್ನು ಮೊದಲೇ ಓದಿಬಿಟ್ಟು ಆಮೇಲೆ ಕಥೆ ಓದಲು ಪ್ರಾರ೦ಭಿಸಿದೆ. :P

ಜಲನಯನ said...

ಬೇಸ್ತು..ಬೇಸ್ತು...ಈಗ ನಿಜಕ್ಕೂ ಸುಸ್ತು..ಸುಸ್ತು...
ಅಲ್ಲಾ ಎರಡು ವರ್ಷ ಕಾಗದ ಪತ್ರವಿಲ್ಲದೇ ಹೋದವನನ್ನು ಈಗಿನ ಫಾಸ್ಟ್ (ನೌಕರಿ ಯುಗ)ಸಮಾಜದಲ್ಲಿ ಹುಡುಗಿ ಇವನಿಗಾಗಿ ಎಲ್ಲಿರುತ್ತಾಳೆ...ಎನ್ನೋ ಅನುಮಾನ ಬಂದರೂ..ಇದ್ದರೂ ಇರಬಹುದು ಶಬರಿಯ-ಸಬರಿನವಳು, ಎನಿಸಿತ್ತು...ಮತ್ತೆ ಮನೆಗೆ..ಕತ್ತಲಲ್ಲಿ ನಡೆಸಿದಾಗ ನನಗೆ ಅನುಮಾನ ಆಯ್ತು..ಯಾಕಂದ್ರೆ ನನಗೆ ಆ ಅನುಭವವಿದೆ...ಸೋ...ಸೋ...ನನ್ನ ಕುತೂಹಲ ಕತ್ತಲಲ್ಲಿ ನಡೆದು ಮನೆಗೆ ಬರುವವರೆಗೆ...ಆದ್ದರಿಂದ ಬೇಸ್ತು..ಬೇಸ್ತು.. .. ಬಹಳ ಬಹಳ ಇಷ್ಟ ಆಯ್ತು ಚಿತ್ರಾ ನಿನ್ನ ಕಥೆ ಹೇಳೋ (ಸಾರಿ ಬರೆಯೋ) ಶೈಲಿ...

Ittigecement said...

ಚಿತ್ರಾ...

ಮನಸ್ಸಿಗೆ ಸ್ಪೂರ್ತಿ ಕೊಡುವಂಥಹ ಬರಹ...!
ಇದನ್ನು ನಾನು ನನ್ನ ಸಂಗ್ರಹದಲ್ಲಿ ಇಟ್ಟುಕೊಂಡಿದ್ದೇನೆ...

ಅಮ್ಮ... ಯಾವಾಗಲೂ... ಪ್ರೀತಿನೇಯಾ..
ಮಗುವನ್ನು..
ಪ್ರೀತಿಸುವದನ್ನು ಬಿಟ್ಟು ಅವಳಿಂದ ಮತ್ತೇನೂ ಸಾಧ್ಯವೇ ಇಲ್ಲ..

ಚಂದದ ಕಥೆಗಾಗಿ ಅಭಿನಂದನೆಗಳು..
ತುಂಬು ಪ್ರೀತಿಯಿಂದ..

ಪ್ರಕಾಶಣ್ಣ..

uma bhat said...

hi
chitra,

nice peice written. tumba chennagi moodide bhaavanegalu :)) ishta aitu nimma baraha :))

regards
Uma

ಮಹಾಬಲಗಿರಿ ಭಟ್ಟ said...

tumbaa chennaagi barediddiraa...

ಚಿತ್ರಾ said...

ಶಾಂತಲಾ,

ಬಹುದಿನಗಳ ನಂತರ ನಿನ್ನ ಹೆಜ್ಜೆ , ಅದೂ ಈ ಬರಹದ ಮೊದಲನೆಯ ಅಭಿಪ್ರಾಯವಾಗಿ .. ರಾಶಿ ರಾಶಿ ಖುಷಿಯಾತು.

ಮೆಚ್ಚಿದ್ದಕ್ಕೆ . ಥ್ಯಾಂಕ್ಸ್ ! ಬರುತ್ತಾ ಇರು .

ಚಿತ್ರಾ said...

ತೇಜು ,

ನಿಂಗಕ್ಕೆಲ್ಲ ಇಷ್ಟ ಆತಲ್ಲ ,ಅಷ್ಟು ಸಾಕು. ಪೇಪರ್ ಗೆ ಕೊಡೋವಷ್ಟು ಚಂದವಾಗಿ ಬರೆಯ ಬಗ್ಗೆ ನಂಗೆ ಅನುಮಾನ ಇದ್ದು . ಹಿ ಹಿ ಹಿ . ಪ್ರೀತಿ ಇರಲಿ ಹೀಗೆ.

ಚಿತ್ರಾ said...

sritri ,

ನಿಮ್ಮ ಹೆಸರು ತಿಳಿಯಲಿಲ್ಲ ! ಬ್ಲಾಗಿಗೆ ಸ್ವಾಗತ . ಮೆಚ್ಚಿಕೊಂಡಿದ್ದಕ್ಕೆ ಧನ್ಯವಾದಗಳು .ಹೀಗೆ ಪ್ರೋತ್ಸಾಹಿಸುತ್ತಿರಿ .

ಚಿತ್ರಾ said...

ದಿವ್ಯಾ, ವನಿತಾ, ಸೋಮಶೇಖರ್ ,

ಧನ್ಯವಾದಗಳು

ಚಿತ್ರಾ said...

ಕಾಕಾ,

ಕಥೆಯನ್ನು ಮೆಚ್ಚಿದ್ದಕ್ಕೆ , ವಿಶ್ಲೇಷಿಸಿದ್ದಕ್ಕೆ ಧನ್ಯವಾದಗಳು . ನಿಜ ಹೇಳಬೇಕೆಂದರೆ , ಬರೆಯಲು ಹೊರಟಾಗ ಮೊದಲು ಹೊಳೆದದ್ದೇ , ತಿರುವು ! ಮತ್ತೆ ಅದನ್ನು ಒಳಗೂಡಿಸಿಕೊಂಡು ಕಥೆ ಹೆಣೆಯುವ ಪ್ರಯತ್ನ ಮಾಡಿದೆ. ಕುತೂಹಲ ಕಾಯ್ದುಕೊಳ್ಳಲು ಸಫಲವಾಗಿದೆ ಎಂದಾದರೆ ನನ್ನ ಪ್ರಯತ್ನ ಸಾರ್ಥಕ !

ನಿಮ್ಮ ಪ್ರೋತ್ಸಾಹ ಹೀಗೆ ಇರಲಿ ಕಾಕಾ.

ಚಿತ್ರಾ said...

ದಿನಕರ,
ಸಸ್ಪೆಸ್ ಕೊನೆಯವರೆಗೂ ಉಳಿದು ಕೊಂಡಿತ್ತು ಎಂದಾದರೆ , ಸಮಾಧಾನ. ಬರುತ್ತಿರಿ ಹೀಗೆ .

ಚಿತ್ರಾ said...

ಹಿಮ, ಅ-ನಿಲ್ ,

ಥ್ಯಾಂಕ್ಸ್ !

ಚಿತ್ರಾ said...

ವಿಜಿ ,

ಥ್ಯಾಂಕ್ಸ್ .ನೀ ಹೇಳಿದ ಹಾಗೆ, ನಿಜ ಜೀವನದಲ್ಲಿ ಇಂಥಾ ಅಂತ್ಯ ಸಿಗದು ಕಷ್ಟ ನೇ . ಹೀಂಗಾಗಿ , ಕಡೆ ಪಕ್ಷ ಕಥೆಯಲ್ಲಾದರೂ ಸಿಗಲಿ ಅಂತ .

ಚಿತ್ರಾ said...

ಸುಧೇಶ್,
ಏನ್ರಿ ಇದು ? ಮೊದಲು ಮುಕ್ತಾಯ ಓದಿ ಆಮೇಲೆ ಕಥೆ ಓದೋದ? ಸಸ್ಪೆನ್ಸ್ ಅನ್ನು ಎಂಜಾಯ್ ಮಾಡಿಲ್ಲ ಅಂತಾಯ್ತು ಬಿಡಿ ನೀವು .

ಮೆಚ್ಚಿದ್ದಕ್ಕೆ ಧನ್ಯವಾದಗಳು .

ಚಿತ್ರಾ said...

ಆಜಾದ್ ,

ನೀವು ಅಂದಂತೆ ,ಈಗ ಎರಡು ವರ್ಷ ಬಿಡಿ ಎರಡು ವಾರ ಕೂಡ ಕಾಯುವ ತಾಳ್ಮೆ ಇರುವುದಿಲ್ಲ ಯಾರಿಗೂ . ಎಲ್ಲಾ ಫಾಸ್ಟ್ ಯುಗ ನೋಡಿ . ಅನುಮಾನಿಸುತ್ತಲೇ ಓದಿ ಮೆಚ್ಚಿದಿರಲ್ಲ ಖುಷಿಯಾಯ್ತು . ಕಥೆ ನಿಮಗೆ ಇಷ್ಟ ವಾಯ್ತು ಅನ್ನೋ ಬಗ್ಗೆ ಅನುಮಾನ ಪಡಬೇಕಾಗಿಲ್ಲ ತಾನೇ ? ಹಿ ಹಿ ಹಿ .. ಬರುತ್ತಿರಿ.

ಚಿತ್ರಾ said...

ಪ್ರಕಾಶಣ್ಣ ,

ಅಭಿಪ್ರಾಯಕ್ಕಾಗಿ ಥ್ಯಾಂಕ್ಸ್ . ಯಾಕೆ ಓದಿಲ್ಲ ಅಂತ ಜಗಳ ಮಾಡಿದ್ದೂ ಸಾರ್ಥಕ ! ಹಿ ಹಿ ಹಿ . ಪ್ರೀತಿಯ ಪ್ರೋತ್ಸಾಹ ಹೀಗೆ ಇರಲಿ

ಚಿತ್ರಾ said...

ಉಮಾ, ಮಹಾಬಲ ಗಿರಿ ,

ಥ್ಯಾಂಕ್ಸ್. ಬ್ಲಾಗಿಗೆ ಸ್ವಾಗತ. ಬರುತ್ತಿರಿ ಹೀಗೆ.

HegdeG said...

ಚಂದದ ಕಥೆ....ಇಸ್ಟಾತು

ಜೇಪೀ ಭಟ್ ! said...

ಚಿತ್ರಕ್ಕಾ : ಸೂಪರ್ ಇದ್ದು ... ನಾನು ಅವ ಅವನ ಹುಡುಗಿ ನೋಡಲೇ ಹೋಗ್ತಾ ಮಾಡ್ಕ್ಯಂಡು ಇದ್ದಿದಿದ್ದಿ... ಆದ್ರೆ ಅಮ್ಮ ಅಂದಾಗ ಮತ್ತೂ ಖುಷಿ ಆತು... ಕಥೆ ನಾ ಹ್ಯಾಪಿ ಎಂಡಿಂಗ್ ಮಾಡಿದ್ದಕ್ಕೆ ನಿಂಗೆ ತುಂಬಾ ಥ್ಯಾಂಕ್ಸ್....
ಓದಿದ್ದು ಖುಷಿ ಆತು...!! :):)

ಮನಸಿನಮನೆಯವನು said...

ಪ್ರೀತಿಯ ಕರೆ ಕೇಳಿ
ಆತ್ಮನ ಮೊರೆ ಕೇಳಿ
ನೀ ಬಂದು ನಿಂತಿಲ್ಲಿ ದೀಪ ಹಚ್ಚ..

ಸೊಗಸಾಗಿದೆ..

aniruddha said...

ನಮಸ್ಕಾರ ಚಿತ್ರಾ, ಹೀಗೇ ಯಾವುದೋ ಬ್ಲಾಗ್ನಿಂದ ಹುಡುಕುತ್ತಾ ಬಂದವನಿಗೆ ನಿಮ್ಮ ಈ ಲೇಖನ ಸಿಕ್ಕಿತು.. ನಿಜವಾಗ್ಲು ತುಂಬಾ ಚೆನ್ನಾಗಿದೆ..ನಿಮ್ಮ ಬ್ಲಾಗನ್ನು ಇನ್ನು ಮೇಲೆ ನಿರಂತರವಾಗಿ follow ಮಾಡುತ್ತೇನೆ. ಹೀಗೆ ಲೇಖನಗಳನ್ನು ಬರೆಯುತ್ತೀರಿ ಎನ್ನುವ ವಿಶ್ವಾಸದಲ್ಲಿ..

ಅನಿರುದ್ಧ.

aniruddha said...

ನಮಸ್ಕಾರ ಚಿತ್ರಾ,

ಹೀಗೆ ಯಾವುದೋ ಬ್ಲಾಗ್ನಿಂದ ಬಂದವನಿಗೆ ನಿಮ್ಮ ಈ ಲೇಖನ ಸಿಕ್ಕಿತು. ನಿಜವಾಗಿಯೂ ಅದ್ಭುತವಾಗಿದೆ. ಓದಿ ತುಂಬ ಖುಷಿ ಆಯಿತು. ಇನ್ನು ಮೇಲೆ ನಿಮ್ಮ ಬ್ಲಾಗನ್ನು ನಿರಂತರವಾಗಿ ಓದುತ್ತೇನೆ.ಇನ್ನೂ ಒಳ್ಳೆ ಒಳ್ಳೆಯ ಲೇಖನಗಳ ನಿರೀಕ್ಷೆಯಲ್ಲಿ...

ಅನಿರುದ್ಧ