May 30, 2011

ಮನಸೆಳೆದ ಮಲೇಶಿಯಾ - ಭಾಗ -೧ ಸುಂದರ 'ಲಂಕಾವಿ'

ಮಗಳ ಪರೀಕ್ಷೆ ಗೂ ಮುಂಚೆ ಅವಳಿಗೆ ಪ್ರಾಮಿಸ್ ಮಾಡಿದ್ದೆ, ಈ ಸಲ  ಎಲ್ಲಾದರೂ ಹೊರಗೆ  ಟೂರ್ ಕರೆದುಕೊಂಡು ಹೋಗ್ತೀನಿ ಅಂತ. ೧೦ನೇ ಕ್ಲಾಸ್ ನ  ಟೆನ್ ಶನ್  ಮುಗಿದಿದ್ದಕ್ಕೆ  ರಿಲಾಕ್ಸ್ ಮಾಡಬೇಕಿತ್ತು. 

ಸರಿ ಎಲ್ಲಿಗೆ ಹೋಗೋದು ಅಂತ ಹುಡುಕಾಟ ಶುರುವಾಯ್ತು . ಜೊತೆಗೆ ಯಾರು ಬರುತ್ತಾರಾ ಎಂಬ  ಹತ್ತಿರದ ಸ್ನೇಹಿತರಲ್ಲಿ ವಿಚಾರಿಸುತ್ತಾ  ಪರೀಕ್ಷೆಯೂ ಮುಗೀತು. ಒಬ್ಬೊಬ್ಬರಿಗೂ  ತೊಂದರೆ ಆಗಿ ಕೊನೆಗೆ ನಾವು ಮಾತ್ರವೇ ಹೋಗುವುದು ಎಂದು ನಿರ್ಧಾರವಾಯ್ತು. ಆ ಗಳಿಗೆಯಲ್ಲಿ ನಾನೂ  ಬಾಲಿ , ಮಲೇಶಿಯಾ ಮತ್ತು ಮಾಲ್ಡೀವ್ಸ್ ಗಳ ಮಧ್ಯೆ ಯಾವುದು ಎಂಬ ಗೊಂದಲದಲ್ಲಿದ್ದೆ. ಜಪಾನ್ ನ ತ್ಸುನಾಮಿ , ಭೂಕಂಪ ಗಳ ನಂತರ , ಇಂಡೋನೆಶಿಯಾ ಸಣ್ಣ ಪ್ರಮಾಣದ ಭೂಕಂಪಗಳಾಗಿದ್ದರಿಂದ , ಸಿರಿ ಮೇಡಂ ಅವರು ಬಾಲಿಯನ್ನು  ಲಿಸ್ಟ್ ನಿಂದ ಹೊಡೆದು ಹಾಕಿದರು . ಮಾಲ್ಡೀವ್ಸ್ ನಲ್ಲಿ  ಬರೀ ಬೀಚ್ ಜಾಸ್ತಿ ಇರುವುದರಿಂದ ಎಷ್ಟೇ ಚಂದವಿದ್ದರೂ  ಒಂದು ವಾರ ಕಳೆಯುವಷ್ಟು ಏನಿಲ್ಲ ಎಂದಾಯಿತು . ಹೀಗಾಗಿ ಮಲೇಶಿಯಕ್ಕೆ ಹೋಗುವುದು ಎಂದು ನಿರ್ಧಾರವಾಯಿತು.  

ಮೇ ೧೦ರ ರಾತ್ರಿ ೧೨ಕ್ಕೆ ನಮ್ಮ ಮಲೇಷಿಯನ್ ಏರ ಲೈನ್ಸ್   ವಿಮಾನ  ಮುಂಬಯಿ ಬಿಟ್ಟಿತು.  ೪ ಗಂಟೆಗ ಳ ಪ್ರಯಾಣದ ನಂತರ ಕೌಲಾಲಂಪುರ್  ತಲುಪಿದಾಗ  ಅಲ್ಲಿನ  ಸಮಯ ಬೆಳಗಿನ ೭ ಗಂಟೆ . ಮಲೇಶಿಯಾ ನಮಗಿಂತ ೨.೩೦ ಗಂಟೆಗಳಷ್ಟು ಮುಂದಿದೆ. 
ಕೌಲಾಲಂಪುರದಿಂದ ನಮ್ಮ ಮೊದಲ  ತಾಣ " ಲಂಕಾವಿ"  ಗೆ  ನಮ್ಮ  ವಿಮಾನ   ೯.೩೦ ಕ್ಕೆ  . ಮೊದಲೇ ಬುಕ್ ಆದ ಕಾರಣ , ಲಗೇಜ್  ತಂತಾನೇ ಮುಂದಿನ ವಿಮಾನಕ್ಕೆ ಕಳುಹಿಸಲಾಗುತ್ತಿತ್ತು. ಹಾಗಾಗಿ , ನಾವು ನಮ್ಮ ಕೈಚೀಲಗಳನ್ನು ಮಾತ್ರ ತೆಗೆದು ಕೊಂಡು , ತಪಾಸಣೆ , ಇಮಿಗ್ರೇಶನ್  ಇತ್ಯಾದಿಗಳನ್ನು ಮುಗಿಸಿ  ಮುಂದಿನ ವಿಮಾನ ಏರಿದೆವು.  ಅಲ್ಲಿಂದ  ಲಂಕಾವಿಗೆ  ಒಂದು ಗಂಟೆಯ ಪ್ರಯಾಣ . 

ಲಂಕಾವಿ  :   
'ಲಂಕಾವಿ'  ಎಂದರೆ .. ಅಲ್ಲಿನ ಸ್ಥಳೀಯ ಭಾಷೆಯಲ್ಲಿ "  ಕಂದು ಕೆಂಪಿನ  ಹದ್ದು "  ಎಂದರ್ಥವಂತೆ ! ಅದಕ್ಕಾಗೇ , ಅಂಥಾ ಒಂದು ಹದ್ದಿನ ದೊಡ್ಡ ಪ್ರತಿಮೆಯನ್ನೂ  ಸ್ಥಾಪಿಸಿದ್ದಾರೆ . ಇದನ್ನು  "Icon of Langkawi "  ಎನ್ನುತ್ತಾರೆ . 
 ಲಂಕಾವಿ , ಮಲೇಷಿಯಾದಿಂದ ೩೦ ಕಿ.ಮೀ ಗಳ ಅಂತರದಲ್ಲಿದೆ.  " ಕೆಡಾಹ " ರಾಜ್ಯಕ್ಕೆ  ಸೇರಿದೆ .   ಇದು ಒಂದು ದ್ವೀಪ ಸಮೂಹ .ಇಲ್ಲಿ ಸುಮಾರು ೯೯ ಸಣ್ಣ ಸಣ್ಣ  ದ್ವೀಪಗಳಿವೆ   . ಹೆಚ್ಚಿನ ದ್ವೀಪಗಳಲ್ಲಿ ದಟ್ಟ  ಕಾಡಿದ್ದು   ಜನವಸತಿಯಿಲ್ಲ. 

ವಿಮಾನದಿಂದ ಬೆಳ ಬೆಳಿಗ್ಗೆ   ಸಮುದ್ರದ ಮೇಲೆ  ಆಡುವ ಸೂರ್ಯನ ಕಿರಣಗಳನ್ನು ನೋಡುವಾಗಲೇ ಒಂದು ಹಿತವಾದ ಅನುಭವ ! ಕೆಳಗೆ ದ್ವೀಪಗಳಲ್ಲಿ  ನದಿಗಳು ಸಮುದ್ರಕ್ಕೆ ಸೇರುವಲ್ಲಿ  ನದೀಪಾತ್ರದ ಮೇಲೆ  ಕಿರಣಗಳು   ಹೊಳೆದು ಕನ್ನಡಿಯಂತೆ ಥಳಥಳಿಸುವುದನ್ನು  ವಿಮಾನದ ಕಿಡಕಿಯಿಂದ  ಬೆರಗುಗಣ್ನಿಂದ  ನೋಡುತ್ತಾ ಕುಳಿತೆವು. 

ಬಳುಕುವ ಕನ್ನಡಿ ? 

 ವಿಮಾನ ಕೆಳಗಿಳಿಯಿತು . ಹೊರಗೆ ಬಂದು ನೋಡಿದರೆ , ದಟ್ಟ ಹಸಿರು ಹೊದ್ದ ಬೆಟ್ಟಗಳು , ಭತ್ತದ ಗದ್ದೆ  , ಹಸಿರು ಬಯಲು, ತೆಂಗಿನ ತೋಟಗಳ ನಡುವೆ ಒಂದು  ಪುಟ್ಟ ವಿಮಾನ ನಿಲ್ದಾಣ  ! ಸುವ್ಯವಸ್ಥಿತ , ಸ್ವಚ್ಛ ,ಹೆಚ್ಚಿನ ಯಾವುದೇ  ಗೊಂದಲ , ಗಲಾಟೆಯಿಲ್ಲ !  ವಿಮಾನದಿಂದ ಕೆಳಗಿಳಿದು ಹತ್ತೇ ನಿಮಿಷಗಳಲ್ಲಿ ನಾವು ನಿಲ್ದಾಣ ದಿಂದ  ಹೊರಗೆ ಬಂದಿದ್ದೆವು. ನಮಗಾಗಿ ಕಾಯುತ್ತಿದ್ದ ಕಾರಿನಲ್ಲಿ ಹೋಟೆಲ್ ನತ್ತ ಪ್ರಯಾಣ ಬೆಳೆಸಿದೆವು. 


ರನ್  ವೇ ಯ ಪಕ್ಕದಲ್ಲಿರುವ ಮನೆ , ತೋಟ 


ವಿಮಾನ ನಿಲ್ದಾಣದಿಂದ ನಮ್ಮ ಹೋಟೆಲ್ ಇದ್ದ  " ಕುಆಹ್ " ಪ್ರದೇಶಕ್ಕೆ  ಹೋಗುವಾಗ ದಾರಿಯುದ್ದಲ್ಕ್ಕೂ ಚಿಕ್ಕ ಚಿಕ್ಕ ಹಳ್ಳಿಗಳು. ಥೇಟ್ ನಮ್ಮ ಹಳ್ಳಿಗಳ ತರದ್ದೇ  ಹೆಂಚಿನ ಮನೆಗಳು . ಗದ್ದೆಗಳು, ತೋಟಗಳು .ಆದರೆ , ಎಲ್ಲೂ , ಕಸ ,ಕೊಳಚೆ, ಗಟಾರಗಳು ಕಾಣಲಿಲ್ಲ . ಎಲ್ಲಿಯೂ , ದನ , ಕುದುರೆ , ನಾಯಿಗಳು  ರಸ್ತೆಯಲ್ಲಿ ಕಾಣಲಿಲ್ಲ . ಹೊಟ್ಟೆಯಲ್ಲಿನ  ನೀರು ಕುಲುಕದಷ್ಟು  ಚಂದದ  ರಸ್ತೆಗಳು.ಎಲ್ಲಿ ನೋಡಿದರೂ ಹಸಿರು ಬೆಟ್ಟಗಳು  . ಮಂಜು ಕವಿದ ದಟ್ಟಕಾಡುಗಳು . ನಾನಾಗಲೇ  ಆ ಸುಂದರ ಪ್ರಕೃತಿಯಲ್ಲಿಕಳೆದು ಹೋಗಿದ್ದೆ ! 

ನಮ್ಮ ಕಾರು , " ಬೇ ವ್ಯೂ " ಹೋಟೆಲ್ ನ ಎದುರು ನಿಂತಿತು . ರಿಸೆಪ್ಶನ್  ನಲ್ಲಿ  ಕೀ ತೆಗೆದುಕೊಂಡು   ನಮಗಾಗಿ ಕಾದಿರಿಸಿದ ರೂಮಿಗೆ ಬಂದೆವು .೧೪ ನೆ ಅಂತಸ್ತಿನಲ್ಲಿನ ನಮ್ಮ ರೂಮಿನ ಕಿಡಕಿ ಪರದೆ ಸರಿಸಿದಾಗ ಎದುರಿಗೆ  ಸುಂದರ ನೋಟ  !  ವಿಶಾಲ ಸಮುದ್ರ , ಅಲ್ಲಲ್ಲಿ ಕಾಣುವ ದೋಣಿಗಳು , ಸ್ಪೀಡ್ ಬೋಟ್ ಗಳು  ,  ಸಮುದ್ರದ ನಡು ನಡುವೆ  ದೂರದಲ್ಲಿ ಕಾಣುವ ದ್ವೀಪಗಳು !!!
ಅಷ್ಟೆ ಅಲ್ಲ, ೮ ನೆ ಅಂತಸ್ತಿನಲ್ಲಿರುವ  ಹೋಟೆಲ್ ನ  ಈಜುಕೊಳ ಕೂಡ !! ಸುಸ್ತಾಗಿದ್ದರಿಂದ  ಸ್ವಲ್ಪ ಕೈ ಕಾಲು ಮುಖ ತೊಳೆದು ಹಾಸಿಗೆ ಯ ಮೇಲೆ ಉರುಳಿದವರಿಗೆ ಎಚ್ಚರವಾಗಿದ್ದು ಸುಮಾರು  ೨ ಗಂಟೆಗಳ ನಂತರ !!

ನಮ್ಮ ರೂಮಿನ ಕಿಟಕಿಯಿಂದ.....

ಹೊಟ್ಟೆ ಚುರುಗುಟ್ಟುತ್ತಿತ್ತು. ಊಟಕ್ಕೆ ಹೋಟೆಲ್ ಹುಡುಕ ಬೇಕಿತ್ತು . ಕೆಳಗೆ  ರಿಸೆಪ್ಶನ್ ನಲ್ಲಿ ವಿಚಾರಿಸಿದಾಗ  ಅಲ್ಲಿನ ಸುಂದರಿ ,  ಹತ್ತಿರದಲ್ಲೇ  ಒಂದು ಚಿಕ್ಕ  ಇಂಡಿಯನ್ ಹೋಟೆಲ್ ಇರುವುದೆಂದೂ , ಆದರೆ  ವೆಜಿಟೇರಿಯನ್  ಸಿಗುವುದೋ ಇಲ್ಲವೋ ಗೊತ್ತಿಲ್ಲ ಎಂದಳು ! ಸರಿ ನೋಡೋಣ ಎಂದು  ಆ ಹೋಟೆಲ್ ಅನ್ನು ಹುಡುಕುತ್ತ ಹೋದೆವು . ಕೇವಲ ೫ ನಿಮಿಷಗಳಲ್ಲಿ ನಾವು ಆ ಪುಟ್ಟ ಹೋಟೆಲ್ ನ ಎದುರಿಗಿದ್ದೆವು .  ಅಲ್ಲಿ ವಿಚಾರಿಸಿದಾಗ . ವೆಜಿಟೇರಿಯನ್  ಊಟ ತಿಂಡಿಗಳು ಇವೆ ಎಂದು  ತಿಳಿದು ಸಮಾಧಾನದ ಉಸಿರು ಬಿಟ್ಟೆವು.  ಆರ್ಡರ್ ಮಾಡುವ ಮೊದಲು ಅವರಲ್ಲಿ  " ಕ್ರೆಡಿಟ್  ಕಾರ್ಡ್" ಸ್ವೀಕರಿಸುವರೆ ಎಂದು ಕೇಳಿದ್ದಾಯಿತು .  ನಾವು ಇನ್ನೂ ಮಲೇಷಿಯನ್  ಹಣವಾದ  ರಿಂಗಿಟ್  ಅನ್ನು ಕೊಂಡಿರಲಿಲ್ಲ. ಅಮೇರಿಕನ್ ಡಾಲರ್ ಇದ್ದಿತ್ತಾದರೂ  ಆ ಹೋಟೆಲ್ ನಲ್ಲಿ ನಡೆಯುವುದೇ ಎಂದು ಗೊತ್ತಿರಲಿಲ್ಲ . ಹೋಟೆಲ್ ನಾತ ,   " ಕ್ರೆಡಿಟ್  ಕಾರ್ಡ್"  ಸ್ವೀಕರಿಸುವುದಿಲ್ಲ ಎಂದೂ , ಆದರೆ , ಅವನಲ್ಲಿಯೇ   ಡಾಲರ್ ಗಳನ್ನು ಮಲೇಷಿಯನ್  ರಿಂಗಿಟ್  ಗೆ ಬದಲಾಯಿಸಿಕೊಳ್ಳಬಹುದು ಎಂದು ಹೇಳಿ ನಮ್ಮ ಟೆನ್ ಶನ್ ಅನ್ನು ಕಮ್ಮಿ ಮಾಡಿದ. ನಾವು ನೆಮ್ಮದಿಯಿಂದ  ರೋಟಿ , ದಾಲ್ ಹಾಗೂ  ದೋಸೆ ತಿಂದೆವು . ಅಲ್ಲಿಯ  " ರೋಟಿ ಚನೈ"  ಎಂಬ  ರೋಟಿ ಬಹಳವೇ ರುಚಿಯಾಗಿತ್ತು !  ೩ ಜನ ಹೊಟ್ಟೆ ತುಂಬಾ ಊಟ ಮಾಡಿದ ಮೇಲೆ  ಬಿಲ್ ಬಂತು  . ಕೇವಲ ೧೨ ರಿಂಗಿಟ್ ಗಳು !!!  ನಾವಂತೂ ಫುಲ್ ಖುಷ್ !  ಆ ನಂತರ  ಅಲ್ಲೇ ಆಚೀಚೆ  ನೋಡಲು ಹೊರಟೆವು . 

ಇಲ್ಲಿ  ಅಷ್ಟಷ್ಟು ದೂರಕ್ಕೂ  " ವಿದೇಶೀ ಹಣ ವಿನಿಮಯ  ಕೇಂದ್ರ " ಗಳು ಕಾಣ ಸಿಗುತ್ತವೆ.  ನಮ್ಮಲ್ಲಿ  " ಪಾನ್ ಅಂಗಡಿ" ಗಳಂತೆ ! ಒಂದು ರಿಂಗಿಟ್  ಗೆ ಸುಮಾರು ೧೫ - ೧೬ ರೂಪಾಯಿಗಳು !  ಒಂದು ಡಾಲರ್ ಗೆ  ೩  ರಿಂಗಿಟ್ ಗಳು . 

ಹೆಚ್ಚು ರಶ್ ಇಲ್ಲದ  ಶಾಂತವಾದ  ಜಾಗ. ಅಗಲ ರಸ್ತೆಗಳು . ಅಗಲವಾದ ಫೂಟ್ ಪಾತ್ ಗಳು. ಫೂಟ್ ಪಾತ್ ನಲ್ಲಿ ಆಲ್ಲಲ್ಲಿ  ಲೈಟ್ ಕಂಬಗಳ ಕೆಳಗೆ ಸಿಮೆಂಟಿನ  ಟೇಬಲ್   ತರ ಚಿಕ್ಕದಾಗಿ  ಕಟ್ಟಿ ಇಟ್ಟಿದ್ದಾರೆ.  ಅಂಗಡಿಗಳಲ್ಲಿ ಕೆಲಸ ಮಾಡುವವರು , ಬೇರೆಯವರು ,ಆ ಟೇಬಲ್ ಗಳನ್ನು ಊಟಕ್ಕೆ ಬಳಸುತ್ತಾರೆ . ಪಕ್ಕಕ್ಕೆ   ಕಸದ ಡಬ್ಬಿಗಳನ್ನೂ ಇಡಲಾಗಿದೆ. ಅವೂ ಸಹ  ಕಸದ ಡಬ್ಬಿ  ಎಂದು ಅನಿಸದಷ್ಟು ಸ್ವಚ್ಚವಾಗಿವೆ !  ಸಾಧಾರಣವಾಗಿ ಹೆಂಗಸರು  ಅಂಗಡಿಗಳ ಒಳಗೆ ಕುಳಿತು ಊಟ ಮಾಡಿದರೆ,  ಗಂಡಸರು ಮಾತ್ರ ಹೊರಗಿನ ಟೇಬಲ್ ಬಳಸುತ್ತಾರೆ. 

ಬಣ್ಣ ಬಣ್ಣದ ಬಟ್ಟೆಗಳು  ಚಿಕ್ಕ ಚಿಕ್ಕ ಅಂಗಡಿಗಳಲ್ಲಿ  ಪ್ರದರ್ಶಿತವಾಗಿದ್ದವು. ಥೇಟ್ ನಮ್ಮಲ್ಲಿಯನ್ತೆಯೇ .  ಎಲ್ಲಾ ಕಡೆಯೂ ಒಂಥರಾ ಸೇಲ್  ಇರುವಂತೆ ನಮಗನಿಸುತ್ತಿತ್ತು. 
ಸಾಧಾರಣವಾಗಿ ಎಲ್ಲರಿಗೂ ಇಂಗ್ಲಿಷ್  ತಕ್ಕಮಟ್ಟಿಗೆ ಬರುವುದರಿಂದ .. ವ್ಯವಹಾರದಲ್ಲಿ ತೊಂದರೆಯಾಗದು . ಅಂದು ನಮಗೆ ಬೇರೆ ಏನೂ ಪ್ರೋಗ್ರಾಮ್ ಇಲ್ಲದ್ದರಿಂದ  ಸ್ವಲ್ಪ ಹೊತ್ತು ಹೀಗೇ ಎಲ್ಲಾ ನೋಡಿಕೊಂಡು ರೂಮಿಗೆ ಹೋಗುವುದು ಮತ್ತೆ ಸಂಜೆ  ನಂತರ  ಏನಾದರೂ ಖರೀದಿ ಮಾಡುವುದು ಎಂದು  ನಿರ್ಧರಿಸಿ  ಹೋಟೆಲ್ ಗೆ ಮರಳಿದೆವು . 
   
  



  

15 comments:

ಸುಧೇಶ್ ಶೆಟ್ಟಿ said...

Vow :)

vivaraNe odhuttaa iddare Malaysia ge hogibidoNa anisuttide...

Uta thindiya bele kadime anisuttade... bega bega update maadi :)

ಜಲನಯನ said...

ಫೋಟೋಗಳನ್ನು ನೋಡಿದ್ದೆ...ಅದಕ್ಕೆ ವೀಕ್ಷಕ ವಿವರಣೆ ಸಿಕ್ಕಿದ್ದು ಖುಷಿ ಅಯ್ತು ಚಿತ್ರಾ...ಮತ್ತೊಮ್ಮೆ ಫೋಟೋಸ್ ಮಗುಚ್ಬೇಕು....ನಮ್ಮಲ್ಲಿ ಜವಾಬ್ದಾರಿ ಯಾವಾಗ ಬರುತ್ತೋ ಗೊತ್ತಾಗ್ತಿಲ್ಲ...ಎಲ್ಲವನ್ನೂ ಶುಭ್ರವಾಗಿ ಇಡೋದು ಜನಮನದಲ್ಲಿ ಇರುತ್ತೆ..ನಮ್ಮಲ್ಲಿ ಕಸ ಇರೋದೇ ರೋಡ್ ಮೇಲೆ ಚಲ್ಲೋಕೆ ಅನ್ನೋ ಹುಂಬತನ...
ಲಂಕಾವಿಯ ಮುಂದಿನ ವೀಕ್ಷಕ ವಿವರಣೆಗೆ..ಮತ್ತು ಮುಂದಿನ ಭಾಗಕ್ಕೆ ಕಾಯ್ಲಾ...??

ಚುಕ್ಕಿಚಿತ್ತಾರ said...

wow..
nice chitra..
mattashtu vivarakke kaaytaa irtene..

sunaath said...

ಚಿತ್ರಾ,
ನೀವು ನೀಡಿದ ವಿವರಣೆ ಹಾಗು ಫೋಟೋಗಳಿಂದ ಮಲಯೇಶಿಯಾ ಒಂದು ಸರಳ,ಸಜ್ಜನ ಹಾಗು ಸುಂದರ ನಾಡು ಎನ್ನುವ ಕಲ್ಪನೆ ಬರುತ್ತದೆ. ಮುಂದಿನ ಭಾಗಗಳಿಗಾಗಿ ಕಾಯುತ್ತೇನೆ.

ಮನಸು said...

wow.. super

photo nodi kushi aytu... tumba chennagide vivaraNe

ಕನಸು ಕಂಗಳ ಹುಡುಗ said...

ಲಂಕಾ(ವಿ)ಹಾರದಿಂದ ಖುಷಿಯಾಯ್ತು....

ಹೀಗೇ ಮತ್ತೂ ಬರಲಿ...

ವಿ.ರಾ.ಹೆ. said...

nice...

next part plz. ;)

waiting....

Ittigecement said...

ಚಿತ್ರಾ...

ಪ್ರವಾಸ ಕಥನ ಹೀಗಿರಬೇಕು..
ನಮಗೂ ಒಮ್ಮೆಹೋಗಿ ಬರಬೇಕೆನಿಸಿತು...

ಸೊಗಸಾದ ವಿವರಣೆ..
ನಾವು ಕೌಲಾಲಂಪೂರ್ ಹೋದಾಗ ಊಟಕ್ಕೆ ಸ್ವಲ್ಪ ಸಮಸ್ಯೆಯಾಗಿತ್ತು...
ಅಲ್ಲಿನ ಹೊಟೆಲ್ಲುಗಳಲ್ಲಿ ಕೆಟ್ಟವಾಸನೆ..

ಬಾಕಿ ಎಲ್ಲ ಬೆಂಗಳೂರು ಇದ್ದಹಾಗೆ ಇತ್ತು..
ಟ್ರಾಫಿಕ್ ಕೂಡ.. !!

ಮುಂದಿನ ಭಾಗ ಕಾಯುತ್ತಿದ್ದೇವೆ... ಜೈ ಹೋ !

ಚಿತ್ರಾ said...

ಸುಧೇಶ್ ,
ಧನ್ಯವಾದಗಳು.
ಊಟ ತಿಂಡಿ ಬೆಲೆ ಯ ಬಗ್ಗೆ ಈಗಲೇ ಏನೂ ಹೇಳುವುದಿಲ್ಲ . ಕಾದು ನೋಡಿ !!

ಚಿತ್ರಾ said...

ಆಜಾದ್,
ನಿಮ್ಮ ಪ್ರಶ್ನೆಯೇ ನನ್ನನ್ನೂ ಯಾವಾಗಲೂ ಕಾಡುತ್ತದೆ . ನಮ್ಮಲ್ಲೇಕೆ ಹೀಗೆ ಎಂಬ ವಿಷಾದ ಆವರಿಸುತ್ತದೆ. ಯಾವಾಗ ನಾವು ಸುಧಾರಿಸೋದು ? ನಾಗರೀಕ ಪ್ರಜ್ಞೆ ಬರೋದು ?

ಚಿತ್ರಾ said...

ಕಾಕಾ,
ಎಲ್ಲಾ ತರದವರೂ ಇದ್ದಾರೆ . ಆದರೆ, ಲಂಕಾವಿಯಲ್ಲಿ ನಿಜಕ್ಕೂ ಸರಳ , ಸ್ನೇಹಜೀವಿಗಳು ಎನಿಸಿತು.

ಚಿತ್ರಾ said...

ವಿಜಯಶ್ರೀ, ಮನಸು, ಕನಸುಕಂಗಳ ಹುಡುಗ , ವಿಕಾಸ್,

ಧನ್ಯವಾದಗಳು. ಆದಷ್ಟು ಬೇಗ ಮುಂದಿನ ಭಾಗ ಹಾಕುವೆ.

ಚಿತ್ರಾ said...

ಪ್ರಕಾಶಣ್ಣ ,
ಮೆಚ್ಚುಗೆಗೆ ಧನ್ಯವಾದಗಳು.
ನಿಜ ಆ ವಾಸನೆ ಇನ್ನೂ ಹಾಗೇ ಇದೆ ಬಿಡು. ಹಾ ಹಃ ಹಾ ,ಟ್ರಾಫಿಕ್ ಸಹ ಹಾಗೇನೆ, ಕೌಲಾಲಂ ಪುರದಲ್ಲಿ .
ಮುಂದಿನ ಭಾಗ ಹಾಕುವೆ ಸದ್ಯದಲ್ಲೇ.

ಸೀತಾರಾಮ. ಕೆ. / SITARAM.K said...

nice narration

ಸಾಗರದಾಚೆಯ ಇಂಚರ said...

Welcome to Malayasia, truly asia

nangu illina cleanliness ista atu :)