June 12, 2011

ಮನಸೆಳೆದ ಮಲೇಶಿಯಾ - ಭಾಗ ೨ ( ದ್ವೀಪದಿಂದ ದ್ವೀಪಕ್ಕೆ.....)


ಸ್ವಲ್ಪ ಹೊತ್ತು  ರೂಮಿನಲ್ಲಿ ವಿಶ್ರಮಿಸಿದವರಿಗೆ  ಕೆಳಗೆ ಕಾಣುತ್ತಿದ್ದ  ಈಜುಕೊಳ ಬಹುವಾಗಿ ಸೆಳೆಯತೊಡಗಿತು ! ಸರಿ , ತಯಾರಾಗಿ  ಖಾಲಿಯಿದ್ದ ಈಜುಕೊಳಕ್ಕೆ ಇಳಿದೆವು . ಸ್ವಚ್ಚವಾದ , ಉಗುರು ಬೆಚ್ಚಗಿದ್ದ ನೀರಿನಲ್ಲಿ ಈಜುವ  ಮಜಾನೆ ಬೇರೆ ಎನಿಸಿತು . ನಮ್ಮೂರಲ್ಲಿಯ  ಸ್ವಿಮ್ಮಿಂಗ್ ಪೂಲ್ ಗಳ  ಅವಸ್ಥೆ ನೋಡಿಯೇ  ಇಳಿಯುವುದು ಬೇಡ ಎನಿಸುತ್ತಿತ್ತು. ಇಲ್ಲೀಗ ಹಾಯಾಗಿ ಈಜ ತೊಡಗಿದೆವು. ಅಷ್ಟರಲ್ಲಿ ಅಲ್ಲಿಗೆ ಬಂದ ಕೆಲವು  ಯುವಕ ಯುವತಿಯರು  ಕೊಳಕ್ಕೆ ಧುಮುಕಿದರು .  ಮತ್ತವರ ನಗು , ಹರಟೆ ,ಒಬ್ಬರನ್ನೊಬ್ಬರು ಹಿಂದಿಕ್ಕುವ  ಉತ್ಸಾಹಗಳಿಂದ ಅಲ್ಲಿಯವರೆಗೆ ಶಾಂತವಾಗಿದ್ದ  ವಾತಾವರಣ ಮಾಯವಾಗಿ .. ಗಲಗಲ ವೆನಿಸತೊಡಗಿತು !  ಕೆಲ ಸಮಯ ಈಜಿದ ಮೇಲೆ  ಸುಸ್ತಾಗಿ ರೂಮಿಗೆ ಮರಳಿದೆವು .
ರೂಮಿನಲ್ಲಿದ್ದ  ವಿದ್ಯುತ್ ಕೆಟಲ್ ನಲ್ಲಿ ನೀರು ಕಾಯಿಸಿ ,   ಕಾಫೀ  ಮಾಡಿ ಕುಡಿದು  ಹೊರಗೆ ಹೊರಟೆವು.( ಹೋಟೆಲ್ ರೂಂ ಗಳಲ್ಲಿ , ಹೀಗೆ , ವಿದ್ಯುತ್ ಕೆಟಲ್ ಗಳನ್ನು , ಮಿನರಲ್ ನೀರಿನ ಬಾಟಲಿಗಳನ್ನೂ, ಕಾಫೀ  ಹಾಗೂ ಟೀ ಗಳ ಬ್ಯಾಗ್ , ಸಕ್ಕರೆ ಪೊಟ್ಟಣ ಹಾಗೂ  ಹಾಲಿನ ಪುಡಿ ಪೊಟ್ಟಣಗಳನ್ನು   complimentary ಯಾಗಿ ಇಟ್ಟಿರುತ್ತಾರೆ) .  ಬೆಳಿಗ್ಗೆ ನೋಡಿದ ರಸ್ತೆಗಳನ್ನು ಬಿಟ್ಟು ಪಕ್ಕದ ರಸ್ತೆಗಳಿಗೆ ನುಗ್ಗಿದೆವು. ಆ   ಇಡೀ  ಪ್ರದೇಶ ತುಂಬಾ ಚೆನ್ನಾಗಿ ಪ್ಲಾನ್ ಮಾಡಿ ಅಭಿವೃದ್ಧಿ ಗೊಳಿಸಲಾಗಿದೆ ಎನಿಸಿತು. ಸಣ್ಣ ಸಣ್ಣ ಬ್ಲಾಕ್ ಗಳನ್ನು ಮಾಡಿದ್ದಾರೆ. ಬ್ಲಾಕ್ ಗಳ ನಾಲ್ಕೂ ದಿಕ್ಕಿಗೆ ರಸ್ತೆಗಳಿವೆ.  ನಡು ನಡುವೆ  ಒಂದು ರಸ್ತೆಯಿಂದ ಇನ್ನೊಂದಕ್ಕೆ  ಶಾರ್ಟ್ ಕಟ್ ಗಲ್ಲಿಗಳಿವೆಯಾದರೂ  ಕಮ್ಮಿ. ಮತ್ತು ಆ ಗಲ್ಲಿಗಳೂ ಕೂಡ  ೭-೮ ಅಡಿ ಅಗಲವಿದ್ದು ಸ್ವಚ್ಚವಾಗಿವೆ . ನಾವಿದ್ದ ಪ್ರದೇಶದಲ್ಲಿ ಬಹು ಮಹಡಿ ಕಟ್ಟಡಗಳು  ಕಮ್ಮಿ ಇದ್ದವು. ಹೆಚ್ಚಾಗಿ ಹೋಟೆಲ್ ಅಥವಾ ಶಾಪಿಂಗ್ ಮಾಲ್ ಗಳನ್ನು ಬಿಟ್ಟರೆ  ಲಂಕಾವಿಯಲ್ಲಿ  ಬಹು ಮಹಡಿ ಕಟ್ಟಡಗಳು ಅತೀ ಕಡಿಮೆ ಎನ್ನ ಬಹುದು.  ಇದೇ ಕಾರಣಕ್ಕಾಗಿ ಇರಬಹುದು .. ಸಣ್ಣ ಪಟ್ಟಣದ ಸೊಗಡು ಉಳಿದು ಕೊಂಡಿದೆ .

ಅಂದು ನಾವು ಚಿಕ್ಕ ಪುಟ್ಟ ಕೆಲ ವಸ್ತುಗಳನ್ನು ಕೊಂಡು ಕೊಂಡೆವು .  ಅಲ್ಲಿ ಶುದ್ದ ಹತ್ತಿಯ ಮೃದುವಾದ  ಬಟ್ಟೆಗಳು , ಬಾಟಿಕ್ ಮಾಡಿದ  ಬಟ್ಟೆಗಳು ಬಲು ಜನಪ್ರಿಯ .  ಹಾಗೆಯೇ ಚಾಕೊಲೆಟ್ ಕೂಡ !   ಬೆಲೆ ಕೂಡ ತೀರಾ ಹೆಚ್ಚಿಲ್ಲ !   ನಂತರ ನಮಗೆ ತಿಳಿದುಬಂದಂತೆ ,  ಲಂಕಾವಿಯಲ್ಲಿ  ಸದ್ಯಕ್ಕೆ ಎಲ್ಲವೂ  ' ಶುಲ್ಕ ಮುಕ್ತ"  (  Duty Free) ವಂತೆ . ಚಾಕೊಲೆಟ್ ನಿಂದ  ಕಾರ್ ವರೆಗೂ ! ಹೀಗಾಗಿ ಅಲ್ಲಿ ಎಲ್ಲವೂ ಕಡಿಮೆ  ಬೆಲೆ ಎನಿಸುತ್ತದೆ. ಇದೇ ಕಾರಣದಿಂದ  ಸಾಧಾರಣವಾಗಿ ಪ್ರತಿಯೊಬ್ಬರೂ ಸ್ವಂತ ವಾಹನ ಹೊಂದಿರುವುದರಿಂದ ,  ಅಲ್ಲಿ ಸಾರ್ವಜನಿಕ  ವಾಹನಗಳಿಲ್ಲ ! ಬಸ್ , ಟ್ರೈನ್  ಯಾವುದೂ ಇಲ್ಲ. ಟ್ಯಾಕ್ಸಿ ಗಳಿವೆ. ಅಷ್ಟೆ .ದ್ವಿಚಕ್ರ ವಾಹನಗಳು ಬಹಳವಾಗಿ ಕಾಣುತ್ತವೆಯಾದರೂ  ನಮ್ಮಲ್ಲಿನಂತೆ  ಮೋಟಾರ್ ಬೈಕ್ ಗಳಿಲ್ಲ !  ಎಂ -೮೦ ಯಂತೆಯೇ ಕಾಣುವ  ವಾಹನಗಳು ಹೆಚ್ಚು  . ಸ್ವಲ್ಪ ಮುಂಚೆ ನಮ್ಮಲ್ಲಿ  ಕೈನೆಟಿಕ್    k-4 ಮತ್ತು  ಹೀರೋ ಹೊಂಡಾ   ಸ್ಟ್ರೀಕ್ ಬಂದಿತ್ತಲ್ಲ  ಅಂಥಾ ಮಾಡೆಲ್ ಗಳೇ ಎಲ್ಲೆಲ್ಲೂ . ( ಸಿರಿಯ  ಪ್ರಕಾರ .. ಇಲ್ಲಿನ ಕೂಲೆಸ್ಟ್ ಬೈಕ್ ಅಂದ್ರೆ   M 80  ಯ ಹೊಸ  Version  ! )  ಹೆಚ್ಚಾಗಿ ಯಾಮಾಹ, ಹೊಂಡಾ , ಸುಜುಕಿ ಕಂಪನಿಗಳದ್ದು.  ದ್ವಿಚಕ್ರ ವಾಹನಗಳ ಮೇಲೆ ಇಬ್ಬರು ಮಾತ್ರ ಕುಳಿತುಕೊಳ್ಳ ಬಹುದು !  ಹೆಲ್ಮೆಟ್  ಕಡ್ಡಾಯ . ಇಬ್ಬರಿಗೂ !  ಯಾರೂ ಕೂಡ  ಅತಿ ವೇಗದಲ್ಲಿ ಓಡಿಸುವುದಿಲ್ಲ.  ರಸ್ತೆಗಳಲ್ಲಿ  ಲೇನ್ ಪದ್ಧತಿಯಿದ್ದು , ಅದನ್ನು ಎಲ್ಲರೂ ಪಾಲಿಸುತ್ತಾರೆ.  ೨೪ ಗಂಟೆಗಳೂ ಟ್ರಾಫಿಕ್ ದೀಪಗಳು ನಡೆಯುತ್ತಿದ್ದು , ರಸ್ತೆ ಖಾಲಿಯಿದ್ದಾಗ  ಕೂಡ  ಡ್ರೈವರ್ ಗಳು  ಹಸಿರು ದೀಪ ಹತ್ತುವ ವರೆಗೂ ಕಾಯುತ್ತಾರೆ. 

ಇವನ್ನೆಲ್ಲ ನೋಡುವಾಗ  ನಮ್ಮಲ್ಲಿಯ  ಟ್ರಾಫಿಕ್  ಶಿಸ್ತಿನ ಬಗ್ಗೆ  ಯೋಚಿಸಿ ಬೇಸರವಾಯಿತು . ನಾವು  ಕೆಂಪು ದೀಪ ಹಸಿರಾಗುವ ವರೆಗೆ ಕಾಯುತ್ತಾ ನಿಂತರೂ, ಹಿಂದಿನ ಯಾರಿಗೋ  ಮುಂದೆ ಹೋಗಲು ಬಹಳ ಅರ್ಜೆಂಟ್ ಆಗಿರುತ್ತದೆ . ಆತ  ಬ್ಯಾಟರಿ ಮುಗಿಯುವಷ್ಟು   ಹಾರ್ನ್  ಮಾಡುತ್ತಾನೆ . ಇವೆಲ್ಲ ನೆನಪಾಗಿ ಛೆ , ನಾವು ಯಾವಾಗ ಸುಧಾರಿಸುತ್ತೇವಪ್ಪಾ ಎನಿಸಿತು ! ಅಷ್ಟರಲ್ಲಾಗಲೇ ೮ ಗಂಟೆಯ ಹತ್ತಿರ ವಾದ್ದರಿಂದ ಊಟ ಮುಗಿಸುವುದು ಎಂದು ಕೊಂಡೆವು. ಸರಿ ಈಗ ಬೇರೆ ಏನು ಸಿಗುತ್ತದೆ ಎಂದು ನೋಡೋಣ  ಎಂದು ಹುಡುಕ ತೊಡಗಿದೆವು. ಚಿಕ್ಕ ಚಿಕ್ಕ  " ರೆಸ್ತೋರಾನ್ " ಗಳೇನೋ ಬೇಕಷ್ಟಿದ್ದವು ಆದರೆ ಎಲ್ಲಿಯೂ ಸಸ್ಯಾಹಾರ  ಇರಲಿಲ್ಲ ! ಒಂಥರಾ ಮಾಂಸಾಹಾರಿಗಳ ಸ್ವರ್ಗ ಎನ್ನ ಬಹುದು . ತಾಜಾ ಮೀನುಗಳು , ಏಡಿ, ಆಕ್ಟೋಪಸ್ ( !!)  , ಸ್ಕ್ವಿಡ್  ( ಒಂದು ಬಗೆಯ ಸಮುದ್ರ ಜೀವಿ) , ಮತ್ತೆ  ಕೋಳಿ,  ಹಂದಿ .. ಹೀಗೆ ಏನು ಬೇಕೋ ಅದು !!!  ರಸ್ತೆ ಪಕ್ಕದ ಹೋಟೆಲ್ ಗಳಲ್ಲಿ , ಜನ  ಕುಳಿತು ಆರಾಮಾಗಿ ಚಪ್ಪರಿಸುತ್ತಾ ತಿನ್ನುತ್ತಿದ್ದರು ! 

ಅಲೆ ಅಲೆದು ಸುಸ್ತಾಗಿ , ಅಲ್ಲೇ ಕಂಡ  'ಡೋಮಿನೋ  ಪಿಜ್ಜಾ ' ದ ಒಳ ಹೊಕ್ಕೆವು. ಅದು  ಬಹಳವೇನೂ ದೊಡ್ಡದಲ್ಲದಿದ್ದರೂ ,  ಚಂದವಾಗಿ ಅಲಂಕರಿಸಲ್ಪತ್ತು  ನೀಟಾಗಿತ್ತು . ಮನೆಯನ್ನೇ  ಸ್ವಲ್ಪ ಬದಲಾಯಿಸಿ, ಮುಂಭಾಗದಲ್ಲಿ  ಉತ್ಸಾಹದಿಂದ ಎದುರುಗೊಂಡ ಮಾಲೀಕ ನಮ್ಮನ್ನು ಒಂದು ಟೇಬಲ್ ನ ಮುಂದೆ ಕೂರಿಸಿದ. ನಾವು  ಕೇವಲ ವೆಜಿಟೇರಿಯನ್ ಎಂದಿದ್ದಕ್ಕೆ, ತಾನು ಅಂಥಾ ಪಿಜ್ಜ್ಯಾ  ಮಾಡಿ ಕೊಡುತ್ತೇನೆಂದ. ಸರಿ ನಾವೂ ಕುಳಿತೆವು. ಒಳಗೆ ಆತನ ತಾಯಿಯೋ ಯಾರೋ ಇರಬೇಕು .. ಪಿಜ್ಝಾ  ತಯಾರಿಸುತ್ತಿರುವುದು ನಮಗೆ ಕಾಣಿಸುತ್ತಿತ್ತು.  ಸ್ವಲ್ಪ ಹೊತ್ತಿನಲ್ಲಿ ಬಿಸಿ ಬಿಸಿ ಪಿಜ್ಝಾ ಬಂತು . ರುಚಿಯಾಗಿತ್ತು ಕೂಡ. ತಿಂದು ಕಾಫೀ ಕುಡಿದು  ಹೊರಟೆವು. 

ಮಧ್ಯಾಹ್ನದ ಊಟದ ಬಿಲ್ ಗೂ , ಈಗಿನ ಬಿಲ್ ಗೂ ಸಾಕಷ್ಟು ವ್ಯತ್ಯಾಸವಿತ್ತು ! ಮತ್ತೆ ಅಲ್ಲಿಂದ ಹೊರಟು ರಸ್ತೆಯಲ್ಲಿ ಅಲೆಯುತ್ತಾ  ಹೋಟೆಲ್ ನತ್ತ ಹೊರಟೆವು.  ಮರುದಿನ ಬೆಳಿಗ್ಗೆ  ನಮ್ಮ  ಏಜೆಂಟ್ ಬೇಗನೆ ಬರುವವನಿದ್ದ ಕಾರಣ  ಹೆಚ್ಚು ರಾತ್ರಿ ಮಾಡಿಕೊಳ್ಳದೆ  ರೂಮಿಗೆ ಬಂದೆವು. 

ಬೆಳಿಗ್ಗೆ ೬.೩೦ ಗೆಲ್ಲ ಎದ್ದು ಸ್ನಾನ ಮಾಡಿ ತಯಾರಾಗಿ, ಕೆಳಗೆ ತಿಂಡಿ ತಿನ್ನಲು ಬಂದೆವು .ನಮ್ಮ ಏಜೆಂಟ್ ಕೊಟ್ಟಿದ್ದ ಕೂಪನ್  ಅನ್ನು ಬ್ರೇಕ್ ಫಾಸ್ಟ್  ವಿಭಾಗದ  ಸುಂದರಿಗೆ ಕೊಟ್ಟು  ಒಳಹೊಕ್ಕೆವು.

ಹೆಚ್ಚಿನ ಹೋಟೆಲ್ ಗಳಲ್ಲಿ ಬೆಳಗಿನ ಉಪಹಾರ ವ್ಯವಸ್ಥೆ  ಉಚಿತವಾಗಿರುತ್ತದೆ.  ಬಫೆ  ಇದ್ದು ನಾನಾ ತರದ ತಿನಿಸುಗಳು ಇರುತ್ತವೆ. ಹೆಚ್ಚಾಗಿ , ವಿವಿಧ ಪ್ರಕಾರದ  ಬ್ರೆಡ್ ಗಳು , ಕತ್ತರಿಸಿಟ್ಟ ತಾಜಾ ಹಣ್ಣುಗಳು,  ಕಾರ್ನ್ ಫ್ಲೇಕ್ಸ್,  ಚಾಕೊಸ್ , ಗಂಜಿ , ನೂಡಲ್ಸ್ , ಆಮ್ಲೆಟ್ , ಬೇಯಿಸಿದ ಮೊಟ್ಟೆ ಇತ್ಯಾದಿ. ಚೀನಾ, ಥೈಲಾಂಡ್ , ಮಲೇಶಿಯಾ, ಸಿಂಗಾಪುರ್ , ಜಪಾನ್ ಇತ್ಯಾದಿ ದೇಶಗಳಲ್ಲಿ , ಅಕ್ಕಿಯ ಗಂಜಿ ಸಾಮಾನ್ಯವಾಗಿದ್ದು ಅದರ ಜೊತೆ ಸಾಧಾರಣವಾಗಿ  ಬೇರೆ ಬೇರೆ  ರೀತಿಯ  ಮೀನಿನ ಪುಡಿ, ಸೀಗಡಿ ಪುಡಿ ಇತ್ಯಾದಿಗಳನ್ನು ಹಾಕಿಕೊಂಡು ತಿನ್ನುತ್ತಾರೆ. ಗಂಜಿಯಲ್ಲಿ ಬೇರೆ ಏನೂ ಬೆರೆಸದ ಕಾರಣ ನಾವುಗಳು ಬೇಕಾದರೆ  ಬರೀ ಗಂಜಿ ಯನ್ನೂ  ತಿನ್ನ ಬಹುದು. ಇನ್ನು , ವಿವಿಧ ಬಗೆಯ ಮಾಂಸಾಹಾರದ ತಿಂಡಿಗಳೂ ಕೂಡ ಇದ್ದವು. ನಾವು ಬ್ರೆಡ್, ಕಾರ್ನ್ ಫ್ಲೇಕ್ಸ್, ಹಣ್ಣುಗಳು  ಇತ್ಯಾದಿಗಳಿಂದ ನಮ್ಮ  ಉಪಹಾರ ಮುಗಿಸಿದೆವು . ಕಾಫೀ, ಟೀ, ಹಾಲು  ಅಥವಾ ಜ್ಯೂಸ್ ಯಾವುದನ್ನೂ ಬೇಕಾದರೂ ಆಯ್ಕೆ ಮಾಡ ಬಹುದು. ಅಲ್ಲದೆ  ಅನಿರ್ಬಂಧಿತ ವಾಗಿದ್ದರಿಂದ , ಎಷ್ಟು ಬೇಕಾದರೂ ತಿನ್ನ ಬಹುದು , ಎಷ್ಟು ಬೇಕಾದರೂ ಕುಡಿಯಬಹುದು. ನಾವು ಸ್ವಲ್ಪ ಹೆಚ್ಚೆನಿಸುವಷ್ಟೇ ತಿಂದೆವು.  ಅಕಸ್ಮಾತ್ ಮಧ್ಯಾಹ್ನದ ಊಟಕ್ಕೆ ತಡವಾದರೂ  ಅಥವಾ ಸರಿಯಾಗಿ ಸಿಕ್ಕದೆ ಹೋದರೂ  ಜಾಸ್ತಿ ಹಸಿವೆನಿಸಬಾರದು ಎಂಬ ದೂ(ದು) ರಾಲೋಚನೆ !!!

ಹೇಳಿದ ಸಮಯಕ್ಕೆ ಸರಿಯಾಗಿ  ಕಾರು ಬಂತು. ಅಂದು  ನಮ್ಮ  ಕಾರ್ಯಕ್ರಮ ಬೆಳಗಿಂದ ಸಂಜೆ ೫.೩೦ ರವರೆಗೂ ಅದಾಗಲೇ  ಯೋಜಿಸಲಾಗಿತ್ತು.  ಮೊದಲು ಲಂಕಾವಿಯ  ಜನಪ್ರಿಯ  ಪ್ರವಾಸೀ ಆಕರ್ಷಣೆ  " Island Hopping "  ಹತ್ತಿರದ ಕೆಲವು ದ್ವೀಪಗಳಲಿಗೆ ಹೋಗಿ  ಅಲ್ಲಿನ ವಿಶೇಷತೆಯನ್ನು  ನೋಡುವುದು .ಅದಕ್ಕಾಗಿ  ಸ್ಪೀಡ್  ಬೋಟ್ ನಲ್ಲಿ ಪ್ರವಾಸಿಗಳನ್ನು ಕರೆದೊಯ್ಯುತ್ತಾರೆ . ಹೋಟೆಲ್ ನಿಂದ ಸುಮಾರು ೨೦ ನಿಮಿಷದ ದಾರಿ  ಈ ದೋಣಿ  ಕೇಂದ್ರಕ್ಕೆ . ಹೆಚ್ಚು ಅಲೆಗಳಿಲ್ಲದ ಸಮುದ್ರದಲ್ಲಿ  ಸ್ಪೀಡ್ ಬೋಟ್ ನಲ್ಲಿ ಹೋಗುವ  ಮಜಾವೇ ಬೇರೆ ! 

ಇಲ್ಲಿ ಸಮುದ್ರದ ಬಣ್ಣ ಹಸಿರು . ಆದರೆ ಸ್ವಚ್ಛ !  ಅಲೆಗಳಿಲ್ಲದ್ದರಿಂದ ಶಾಂತವಾಗಿ, ದೊಡ್ಡ  ಸರೋವರದಂತೆ ಕಂಡರೂ , ಬೋಟ್ ನಲ್ಲಿ ಹೋಗುವಾಗ ಮಾತ್ರ  ನಮ್ಮ ಹಳ್ಳಿ ರಸ್ತೆಗಳಲ್ಲಿ ೧೦೦ ಕಿ. ಮೀ. ವೇಗದಲ್ಲಿ ಹೋದರೆ ಹೇಗಾಗ ಬಹುದೋ ಅಂಥಾ ಅನುಭವ !!  ಚಿಕ್ಕ  ತೆರೆಗಳ ಮೇಲೂ , ದೋಣಿ ಅತೀ ವೇಗದಿಂದ ಹಾರುತ್ತಾ ಏರುತ್ತಾ  ಹೋಗುವಾಗ  ಒಂಥರಾ  bumpy ride  !!  ದೋಣಿಯಲ್ಲಿ ಕುಳಿತುಕೊಂಡ ಪ್ರತಿಯೊಬ್ಬರಿಗೂ  " life Jacket " ಕೊಡುತ್ತಾರೆ. ಎಲ್ಲರೂ ಅದನ್ನುಸರಿಯಾಗಿ  ಧರಿಸಿ  ಕುಳಿತ ಮೇಲೆಯೇ ದೋಣಿ ಹೊರಡುವುದು ! 
ದೋಣಿ ಕೇಂದ್ರ 


ನಮ್ಮ ಮೊದಲ  ತಾಣ  'Pulau Dayang Bunting '  ಅಥವಾ  ದಯಾಂಗ್ ಬಂಟಿಂಗ್ ದ್ವೀಪ . (Pulau  ಅಂದರೆ ದ್ವೀಪ ).   ಅಲ್ಲಿರುವ   Lake of Pregnant Maiden ಎಂಬ  ಸರೋವರ  ಹಾಗೂ  ಜಿಯೋ ಪಾರ್ಕ್ ! 


ಸ್ಪೀಡ್ ಬೋಟ್ ನ ಮೋಡಿ ಅಲ್ಲಿಗೆ ಹೋಗುವಾಗ , ಸಮುದ್ರದಿಂದ ಮೇಲೆದ್ದು ನಿಂತ ಅದೆಷ್ಟೋ ಪುಟ್ಟ ದ್ವೀಪಗಳು  ದಟ್ಟ ಕಾಡಿನಿಂದ , ಸುಣ್ಣ ಕಲ್ಲಿನ ಶಿಖರಗಳಿಂದ ಮನಸೆಳೆಯುತ್ತವೆ . ಅವುಗಳನ್ನು ನೋಡುತ್ತಾ, ಓಹ್ ! ಆಹಾ ! ಏನು ಚಂದ ... ಇತ್ಯಾದಿ ಉದ್ಗಾರದೊಂದಿಗೆ  ಪ್ರಕೃತಿ ಸೌಂದರ್ಯ ನೋಡುತ್ತಾ ಮೈ ಮರೆತವರಿಗೆ  ದೋಣಿಯ ವೇಗ ಕಮ್ಮಿಯಾಗಿ  ನಿಲ್ಲುತ್ತಿದ್ದಾಗಲೇ  ಎಚ್ಚರ .

 ನಮ್ಮ ಜೊತೆ ದೋಣಿಯಲ್ಲಿ  ತಮ್ಮದೇ ಲೋಕದಲ್ಲಿ ವಿಹರಿಸುತ್ತಿದ್ದ ೩ ಹೊಸಾ ಜೋಡಿಗಳು  ಹಾಗೂ ಇನ್ನೊಂದು ಕುಟುಂಬವೂ ಬಂದಿತ್ತು. ಎಲ್ಲರೂ ಭಾರತೀಯರೇ !  
ಎಲ್ಲರೂ ಇಳಿದು  ದ್ವೀಪದ ಮೇಲೆ  ಕಾಲಿಟ್ಟೆವು.  ಹಿಂತಿರುಗಿದರೆ ವಿಶಾಲ ಸಮುದ್ರ , ಮುಂದೆ  ಹಸಿರು ತುಂಬಿದ ದ್ವೀಪ .. ಅತ್ತಿತ್ತ ಎತ್ತಲೂ ಹಸಿರು ಕಾಡಿನದೇ ಸಾಮ್ರಾಜ್ಯ !  ನೆಲಕ್ಕೆ ಕಾಲಿಟ್ಟ ನಮ್ಮನ್ನು  ಹಲವಾರು ಕಪಿ ಕುಟುಂಬಗಳು ಸ್ವಾಗತಿಸಿದವು.  ಮುಂದಿರುವ  ಮೆಟ್ಟಿಲುಗಳನ್ನೇರಿ ,  ಮತ್ತೆ ಕೆಲ ಮೆಟ್ಟಿಲುಗಳನ್ನು ಇಳಿದರೆ  ಸಿಗುವುದು  ದೊಡ್ಡ ಸರೋವರ . 

ದೂರದಿಂದ ನೋಡುವಾಗ  ಈ ಬೆಟ್ಟಗಳ ಸಾಲು . ಮಲಗಿರುವ ಬಸುರಿ ಹೆಂಗಸಿನಂತೆ ಕಾಣುತ್ತದೆ . 

ಮಲಗಿರುವ ಬಸುರಿಯಂತೆ ಕಾಣುವ ಬೆಟ್ಟ !ಇಲ್ಲಿಯೂ ಕೂಡ  ಮೆಟ್ಟಿಲು ಶುರುವಾಗುವಲ್ಲಿಯೇ  ಸ್ವಚ್ಛತಾ ಗೃಹಗಳಿವೆ . ಅವುಗಳನ್ನು ನಿಸ್ಸಂಕೋಚವಾಗಿ ಉಪಯೋಗಿಸಬೇಕೆಂದೂ , ಹೊರಗೆಲ್ಲೂ ಹೊಲಸು ಮಾಡ ಬೇಡಿರೆಂದೂ  ಅಲ್ಲಿ ಬೋರ್ಡ್ ಕೂಡ ಹಾಕಲಾಗಿದೆ . ದಾರಿಯಲ್ಲಿಯೂ ಅಲ್ಲಲ್ಲಿ ದೊಡ್ಡ ಕಸದ ಬುಟ್ಟಿಗಳಿದ್ದು  ಪ್ರವಾಸಿಗಳೂ ಕೂಡ ಆಚೀಚೆ ಎಲ್ಲೂ ಕಸ ಚೆಲ್ಲುವುದಿಲ್ಲ ! 

 ಮುಂದೆ ಮೆಟ್ಟಿಲುಗಳನ್ನು ಇಳಿಯುತ್ತಿದ್ದಂತೆ ಕಂಡ  ಸುಂದರ ಸರೋವರದ ಬಳಿ ಆಗಲೇ ಬಹಳಷ್ಟು  ಪ್ರವಾಸಿಗಳಿದ್ದರು . ನೋಡುಗರಿಗೆ ಅನುಕೂಲವಾಗುವಂತೆ ಅಲ್ಲಲ್ಲಿ ಮರದ ಅಟ್ಟಣಿಗೆ ಕಟ್ಟಿದ್ದು , ನಾವುಗಳು ಅದರ ಮೇಲೆ ಓಡಾಡಲು, ಕುಳಿತುಕೊಳ್ಳಲು ಅನುಕೂಲವಾಗುತ್ತದೆ. ದೊಡ್ಡ ಸರೋವರ , ಹಸಿರು ಸ್ವಚ್ಛ ನೀರು .. ಸುತ್ತಲೂ ಎತ್ತರಕ್ಕೆ ಕಾಡು ತುಂಬಿದ ಬೆಟ್ಟಗಳು. ಒಂಥರಾ ಬಾಣಲೆ ಯಲ್ಲಿ ನೀರು  ತುಂಬಿ ಇಟ್ಟಂತೆ .  ಇದು ಪ್ರವಾಸೀ ತಾಣವಾದರೂ  ತಿಂಡಿ ತೀರ್ಥಗಳ ಅಂಗಡಿಗಳಿಲ್ಲ . ಹೆಚ್ಚೆಂದರೆ  ಕುಡಿಯುವ ನೀರಿನ ಚಿಕ್ಕ ಬಾಟಲಿಗಳು ಸಿಗಬಹುದು . ಒಂದು ಚಿಕ್ಕ ಮಾಹಿತಿ ಕೇಂದ್ರವಿದೆ , ಅಲ್ಲಿ ಈ ಜಾಗಕ್ಕೆ ಸಂಬಂಧಿಸಿದ ಮಾಹಿತಿಗಳು , ಕೊಂಡೊಯ್ಯಲು ಚಿಕ್ಕ ಪುಟ್ಟ  ನೆನಪಿನಕಾಣಿಕೆಗಳು  ಇತ್ಯಾದಿ ದೊರೆಯುತ್ತವೆ !  ಇಲ್ಲಿ ಸ್ವಚ್ಚತೆಯನ್ನು ಕಾದಿರಿಸಿಕೊಳ್ಳಲಾಗಿದೆ . ಇಲ್ಲಿ  ಬೋಟಿಂಗ್ , ಸ್ವಿಮ್ಮಿಂಗ್  ಕೂಡ ಇವೆ.


ಸರೋವರ 


ಹಾಂ, ಈ ಸರೋವರದ ಹೆಸರು  " Lake of Pregnant Maiden "   ಇದಕ್ಕೊಂದು  ಪುಟ್ಟ  ಕಥೆಯಿದೆ  . "ಮಾಮ್ಬಂಗ್ ಸರಿ "  ಎಂಬ ಒಬ್ಬ ಚಂದದ ರಾಜಕುಮಾರಿಯನ್ನು   " ಮಾತ್ ತೇಜಾ "  ಎಂಬ ಒಬ್ಬ ಯುವಕ ಪ್ರೀತಿಸಿದನಂತೆ .ಅವಳ  ಪ್ರೀತಿಯನ್ನು ಪಡೆಯಲು ತನ್ನ ಗುರುವಿನ ಸಲಹೆಯಂತೆ ಮತ್ಸ್ಯಕನ್ಯೆ ಯ ಕಣ್ಣೀರನ್ನು  ಅವಳ ಮುಖಕ್ಕೆ ಒರೆಸಿದನಂತೆ . ನಂತರ  ಅವರಿಬ್ಬರೂ ಮದುವೆಯಾದರು . ಅವರಿಬ್ಬರ ಪ್ರೇಮದ  ಪ್ರತೀಕವಾಗಿ ಹುಟ್ಟಿದ ಮಗು  ಒಂದು ವಾರದಲ್ಲೇ  ತೀರಿಕೊಂಡಿತಂತೆ . ಆ ಮಗುವನ್ನು ಇದೇ ಸರೋವರದಲ್ಲಿ  ಹೂಳಲಾಯ್ತಂತೆ . ಮಗುವನ್ನು ಕಳೆದುಕೊಂಡ ತಾಯಿ   ತನ್ನ ಉತ್ಕಟ ಮಮತೆಯಿಂದಾಗಿ   ಈ ಸರೋವರದ ನೀರಿಗೆ ಅದ್ಭುತ ಶಕ್ತಿ ಕೊಟ್ಟಳಂತೆ  . ಮಕ್ಕಳಾಗದ ಹೆಣ್ಣು  ಅಲ್ಲಿಯ ನೀರನ್ನು ಕುಡಿದರೆ / ಸ್ನಾನ ಮಾಡಿದರೆ   ಮಕ್ಕಳಾಗುತ್ತದಂತೆ . ಹೀಗೆ ಒಂದು ಕಥೆ . 

ಸರೋವರದ ಬಳಿ ಮಾಹಿತಿ ಕೇಂದ್ರ 
Add caption
ಇನ್ನೊಂದು ಕಥೆಯ ಪ್ರಕಾರ , ಒಬ್ಬ ಶಕ್ತಿ ಶಾಲಿ ರಾಜ ಈ ಸರೋವರದ ಬಳಿ ವಿಹಾರಕ್ಕೆ ಬಂದಿದ್ದ. ಅವನ ಪತ್ನಿಯೊಬ್ಬಳು  ಅಲ್ಲಿನ ನೀರನ್ನು ಕುಡಿದ ತಕ್ಷಣ  ಬಿರುಗಾಳಿ  ಬೀಸಿತಂತೆ , ಮಿಂಚು , ಸಿಡಿಲು  ಹೊಳೆದವಂತೆ. ಆ ಪತ್ನಿ ಗರ್ಭಿಣಿ ಆಗಿಬಿಟ್ಟಳಂತೆ ! ಹೀಗೆ ಅಸ್ವಾಭಾವಿಕವಾಗಿ ಗರ್ಭ ಧರಿಸಿದಳೆಂದು ಕೋಪಗೊಂಡ ರಾಜ , ಅವಳಿಗೆ ಶಿಕ್ಷೆಯಾಗಿ  ಅದೇ ಸರೋವರದ ಬಳಿ  ಬಿಟ್ಟು ಹೋದನಂತೆ . ಆಕೆ ಅಲ್ಲೇ ಒಂದು ಗಂಡು ಮಗುವನ್ನು ಹೆತ್ತಳಂತೆ . ಆ ಮಗು ಸ್ವಲ್ಪ ದೊಡ್ಡ ಆದಾಗ ಸರೋವರದಲ್ಲಿ ಬಿದ್ದು ಸತ್ತು ಹೋಯ್ತಂತೆ.ದುಃಖಗೊಂಡ  ತಾಯಿ .. ತನ್ನನ್ನು ತೆಗೆದುಕೊಂಡು ಮಗನನ್ನುಬದುಕಿಸು  ಎಂದು  ಸರೋವರವನ್ನು ಪ್ರಾರ್ಥಿಸಿದಳಂತೆ . ಆಗ  ಆಕೆ ಕಲ್ಲಾಗಿ , ಆಕೆಯ ಮಗ ಬಿಳಿ ಮೊಸಳೆಯಾಗಿ ಬಂದನಂತೆ . ಈಗಲೂ ಆ ಮೊಸಳೆ ಸರೋವರದಲ್ಲಿ ಇದೆ ಎಂದೂ .. ಕೇವಲ ಪರಿಶುದ್ಧ ಮನಸಿನವರಿಗೆ ಮಾತ್ರ ಕಾಣುತ್ತದೆ ಎಂದೂ ಹೇಳುತ್ತಾರೆ ! ( ನಮಗಂತೂ ಕಾಣಲಿಲ್ಲ !! ಹಿ ಹಿ ಹಿ ) 
ನೇತಾಡುವ ಕಲ್ಲು 

 

 ಆ ಸರೋವರದ ಸುಂದರ ಪರಿಸರದಲ್ಲಿ  ಅರ್ಧ ಗಂಟೆ ಕಳೆದಿದ್ದೆ ಗೊತ್ತಾಗಲಿಲ್ಲ . ಮತ್ತೆ ಅಲ್ಲಿಂದ ಹೊರಟು ನಮಗಾಗಿ ಕಾಯುತ್ತಿದ್ದ ದೋಣಿಯ ಬಳಿ ಬಂದೆವು . ಅಲ್ಲಿಂದ ಹೊರಡುವಾಗ  ಮಳೆ ಶುರುವಾಯಿತು . ಇಲ್ಲಿ ಯಾವಾಗ ಬೇಕಾದರೂ ಮಳೆ ಬರಬಹುದು . ಜೋರಾಗಿ ಸುರಿಯುವ ಮಳೆ ಕೆಲವೇ ನಿಮಿಷಗಳಲ್ಲಿ ನಿಂತು ಹೋಗುತ್ತದೆ . 
ಬೀಸುವ ಗಾಳಿಗೆ ಮುಖ ತೋಯಿಸುವ ಹನಿಯೂ,  ದೋಣಿಯ ವೇಗಕ್ಕೆ ಸಿಡಿಯುವ  ಸಮುದ್ರದ ನೀರೂ  ನಮ್ಮನ್ನು ಸಾಕಷ್ಟು ಒದ್ದೆ ಮಾಡಿದವು 


ದ್ವೀಪದಿಂದ ದೋಣಿಗೆ ....ನಮ್ಮ ಮುಂದಿನ ತಾಣದಲ್ಲಿ ಲಂಕಾವಿಗೆ ಹೆಸರು ಕೊಟ್ಟ ಹದ್ದುಗಳನ್ನು ಭೇಟಿ ಮಾಡುವುದಿತ್ತು .  ಮ್ಯಾಂಗ್ರೂವ್ ಕಾಡಿನಿಂದ ಆವೃತವಾದ  ಒಂದು ಚಿಕ್ಕ ದ್ವೀಪ ಈ ಹದ್ದುಗಳ  ನೆಲೆಯಾಗಿದೆ.  ದೋಣಿಯಲ್ಲಿ ಅಲ್ಲಿ ಹೋಗಿ  ನಮ್ಮ ಕೈಯಾರೆ  ಈ ಹದ್ದುಗಳಿಗೆ ಮಾಂಸ ನೀಡ ಬಹುದು !  ಮ್ಯಾನ್ಗ್ರೂವ್  ಕಾಡಿನಲ್ಲಿ ಸ್ವಲ್ಪ ಹೊತ್ತು ಅಳೆದು ಬರಬಹುದು . ಮಾಂಸ ಎಂದರೆ ದೂರ ಓಡುವ ನಾವು ಹದ್ದುಗಳಿಗೆ  ತಿನ್ನಿಸುವ ಪ್ರಶ್ನೆಯೇ ಇರಲಿಲ್ಲ !  ಅಲ್ಲದೆ , ಮಳೆ ಬರುತ್ತಿದ್ದುದರಿಂದ  ಕಾಡೊಳಗೆ ಹೋಗುವ ಯೋಜನೆ ಕೂಡ  ಕ್ಯಾನ್ಸಲ್ ಆಯ್ತು. ದೋಣಿಯಲ್ಲೇ ಕುಳಿತು  ಸಲ್ಪ ಹೊತ್ತು ಹದ್ದುಗಳ ಹಾರಾಟ ನೋಡಿ ,  ಮುಂದಿನ ದ್ವೀಪಕ್ಕೆ ಹೊರಟೆವು . ...

ಮ್ಯಾಂಗ್ರೂವ್  ಮರಗಳ ಮೇಲೆ ಹದ್ದುಗಳು 

11 comments:

ಸಿಮೆಂಟು ಮರಳಿನ ಮಧ್ಯೆ said...

ಚಿತ್ರಾ...

ಸೊಗಸಾದ ಪ್ರವಾಸ ಕಥನ...
ಸಂಗಡ ಉಪಯುಕ್ತ ಮಾಹಿತಿಗಳು... ಫೋಟೊಗಳೂ ಚೆನ್ನಾಗಿವೆ..

ನಮಗೂ ಒಮ್ಮೆ ಹೋಗಿಬರಬೇಕೆನ್ನುವ ಆಸೆ ಹುಟ್ಟಿಸಿಬಿಟ್ಟಿದ್ದೀರಿ...

ಕೌಲಲಂಪೂರ್ ಹೋಗಿದ್ದೀರಾ?

ಮುಂದಿನ ಭಾಗಕ್ಕಾಗಿ ಕಾಯುತ್ತಿದ್ದೇವೆ..

ಚುಕ್ಕಿಚಿತ್ತಾರ said...

ಚ೦ದದ ಫೋಟೋಗಳ ಸಹಿತ ಉತ್ತಮ ವಿವರಣೆ.

sunaath said...

ಸುಂದರವಾದ ಪ್ರವಾಸೀ ತಾಣದ ಬಗೆಗೆ ಸುಂದರವಾದ ವಿವರಗಳನ್ನು ಕೊಟ್ಟಿದ್ದೀರಿ. ಮುಂದಿನ ಭಾಗಕ್ಕಾಗಿ ಕಾಯುತ್ತೇನೆ.

ವಿ.ರಾ.ಹೆ. said...

ಚೆನ್ನಾಗಿದೆ.. ಫೋಟೋಗಳೂ ಮಸ್ತ್ ಮಸ್ತ್...

ಸೀತಾರಾಮ. ಕೆ. / SITARAM.K said...

chendada maahiti

ಸುಮ said...

ಸುಂದರ ಪ್ರವಾಸಿಕಥನ ಚಿತ್ರಕ್ಕ ...ಮುಂದಿನ ಭಾಗ ಬೇಗ ಬರಲಿ.

ಮನಸು said...

ತುಂಬಾ ಚೆನ್ನಾಗಿದೆ ಪ್ರವಾಸದ ಬಗ್ಗೆಗಿನ ಲೇಖನ ...ಚಿತ್ರಗಳು ತುಂಬಾ ಇಷ್ಟವಾದವು... ಮುಂದೆ ಎಲ್ಲಿಲ್ಲಿಗೆ ಹೋಗಿದ್ದಿರಿ ತಿಳಿಸಿ... ಕಾಯುತ್ತೇವೆ

ತೇಜಸ್ವಿನಿ ಹೆಗಡೆ said...

Chitrakka,

Mastiddu pravasakathana... mundina bhagakke kaayta irti.. :)

ಸುಧೇಶ್ ಶೆಟ್ಟಿ said...

naanathu aagalE plan madta iddene Malaysia ge tour maaduva bagge :) thumba chennagidaare..

allina jaanapadha kathegaLu chennagittu :)

swalpa bega bega baredare thumba..... :P:P

Raghu said...

nice photos..Nice narration too..

Raaghu

ಸಾಗರದಾಚೆಯ ಇಂಚರ said...

Chitrakka

tumba upayukta maahiti

naanu ella plan maadti