July 3, 2011

ಮನಸೆಳೆದ ಮಲೇಶಿಯಾ ಭಾಗ -೩

ಸುಂದರ , ಸ್ವಚ್ಛ , ಶುಭ್ರ ಮರಳಿನ  ಬೀಚ್ 

ಮುಂದಿನ ದ್ವೀಪದಲ್ಲಿ ಇದ್ದ ಆಕರ್ಷಣೆ  ಎಂದರೆ ಪುಟ್ಟ  ಆದರೆ ಬಲು ಸುಂದರವಾದ ' ಬೀಚ್ '  ! ನುಣುಪಾದ ಬಿಳಿ ಮರಳು , ಅದನ್ನು ಮುತ್ತಿಕ್ಕುವ  ಶಾಂತವಾದ ಸಮುದ್ರ !  ದೂರದಿಂದ ನೋಡುವಾಗಂತೂ  ಹಸಿರು ಕಡಲು ಹಾಗು ಬಿಳಿಯ ಮರಳಿನ  ಕಾಂಬಿನೇಶನ್  ತುಂಬಾ ಚೆನ್ನಾಗಿ ಕಾಣುತ್ತಿತ್ತು .  ಅಲ್ಲದೆ , ಹಚ್ಚ ಹಸಿರು ಮರಗಿಡಗಳ ಹಿನ್ನೆಲೆ ಕೂಡ  ಬೀಚ್ ನ ಸೌಂದರ್ಯವನ್ನು  ಹೆಚ್ಚಿಸುತ್ತಿತ್ತು. ನಾವು ತಲುಪುವಾಗ ಆಗಲೇ  ಹೊತ್ತು ಮೇಲೇರಿತ್ತು ! ಬಹಳಷ್ಟು ಪ್ರವಾಸಿಗಳು ಆಗಲೇ ಬೀಚ್  ನ ಸೌಂದರ್ಯವನ್ನು ಆಸ್ವಾದಿಸುತ್ತಾ  ಮೈಮರೆತಿದ್ದರು .

ಈ ಬೀಚ್ ನಲ್ಲಿ ಕೂಡ ಒಂದು ಚಿಕ್ಕ ಅಂಗಡಿ ಬಿಟ್ಟರೆ  ಮತ್ತೇನೂ ಇಲ್ಲ.  ಕೆಲವು  ಪುಟ್ಟ ಕ್ಯಾಬಿನ್ ಗಳು ಇವೆಯಾದರೂ  ಅವು  ಯಾಕೋ ಮುಚ್ಚಿದ್ದವು. ಪ್ರತಿನಿತ್ಯ ಸಾವಿರಾರು ಪ್ರವಾಸಿಗಳು  ಇಲ್ಲಿಗೆ ಬರುತ್ತಿದ್ದರೂ ಕೂಡ  ಪ್ಲಾಸ್ಟಿಕ್ , ಪೇಪರ್ , ಬಾಟಲಿ , ಸಿಗರೆಟ್ ಪ್ಯಾಕ್ ಇತ್ಯಾದಿ ಯಾವುದೂ  ಬಿದ್ದಿರುವುದು ಕಾಣಲಿಲ್ಲ .ಈ ಬಗೆಯ ಸ್ವಚ್ಚತೆ , ಪ್ರವಾಸದುದ್ದಕ್ಕೂ ನಮ್ಮನ್ನು  ಸ್ವಾಗತಿಸುತ್ತಿತ್ತು ! 
ಪುಟ್ಟ  ಕ್ಯಾಬಿನ್ ಗಳು 


ಈ ದ್ವೀಪದಲ್ಲಿ  ' ವಾಟರ್ ಸ್ಪೋರ್ಟ್ಸ್ '  ಸೌಲಭ್ಯ ಇದೆ. ಬಹಳಷ್ಟು  ಅಲ್ಲದಿದ್ದರೂ  ' ಬನಾನಾ ಬೋಟ್  ' ,  "ಪೆಡಲಿಂಗ್ " ಹಾಗೂ  ' ಪ್ಯಾರಾ ಸೇಲಿಂಗ್'  ಇತ್ಯಾದಿ ಇವೆ.   para sailing    ಅಂದರೆ ... ಸ್ಪೀಡ್  ಬೋಟ್ ಗೆ  ಒಂದು ಪ್ಯಾರಾಶೂಟ್ ಅನ್ನು  ಉದ್ದವಾದ ಹಗ್ಗದಿಂದ ಬಿಗಿದಿರುತ್ತಾರೆ  .ಹಗ್ಗದ ಉದ್ದ ೧೫೦  ಅಡಿಗಳಿಂದ  ಹಿಡಿದು  ೬೦೦  ಅಡಿಗಳವರೆಗೂ  ಇರುತ್ತದೆ. ಇತ್ತೀಚೆ ಕೆಲವು ಕಡೆ ೮೦೦ ರಿಂದ ೧೨೦೦ ಅಡಿಗಳಷ್ಟು ಉದ್ದದ ಹಗ್ಗವನ್ನೂ ಬಳಸುವರಂತೆ !    ಈ ಉದ್ದವನ್ನು   , ಆ ಸಮುದ್ರ ಭಾಗ ಹೇಗಿದೆ , ಬೀಚ್  ನ ಉದ್ದ ಅಗಲ, ಸುತ್ತಮುತ್ತಲಿನ  ಪರಿಸರ ( ಮರ-ಗಿಡಗಳು, ಕಲ್ಲು ಬಂಡೆಗಳು ) ಇವನ್ನೆಲ್ಲ ಗಮನದಲ್ಲಿಟ್ಟುಕೊಂಡು    ನಿರ್ಧರಿಸಲಾಗುತ್ತದೆ.  ಪ್ಯಾರಾಶೂಟ್ ಗೆ ನಮ್ಮನ್ನು ಭದ್ರವಾಗಿ ಬೆಲ್ಟ್ ಗಳಿಂದ  ಕಟ್ಟಿದ ನಂತರ  ಬೋಟ್  ಓಡುತ್ತದೆ . ಹಾಗೆಯೇ ನಾವೂ ಕೂಡ  ಓಡಬೇಕು . ಸ್ಪೀಡ್ ಹೆಚ್ಚಿದಂತೆ ಪ್ಯಾರಾಶೂಟ್ ಗಾಳಿಯಲ್ಲಿ ಏರತೊಡಗುತ್ತದೆ . ಜೊತೆಗೆ ನಾವೂ ಕೂಡ !!!  ನೂರಾರು ಅಡಿ ಎತ್ತರದಿಂದ ನೇತಾಡುತ್ತಾ ಕೆಳಗೆ ಸಮುದ್ರದ  ಹಾಗೂ ಸುತ್ತ ಮುತ್ತಲಿನ ದೃಶ್ಯವನ್ನು ಆಸ್ವಾದಿಸುವುದು  ಅವಿಸ್ಮರಣೀಯ ಅನುಭವ ! . ನಾವು ಮೊದಲು ಕೆಲವರ್ಷಗಳ ಹಿಂದೆ  ಥೈಲ್ಯಾಂಡ್ ಗೆ ಹೋದಾಗ  ' ಪಟ್ಟಾಯ' ದಲ್ಲಿ ಪ್ಯಾರಾ ಸೈಲಿಂಗ್ ಮಾಡಿದ್ದೆವು.  ಹಾಗಾಗಿ .. ಇಲ್ಲಿಯೂ ಮಾಡೋಣವೆಂದು ಕೌಂಟರ್ ಗೆ ಹೋದಾಗ ನಿರಾಶೆ ಕಾದಿತ್ತು . ಅಂದು , ಮಳೆ ಇರುವುದರಿಂದ ಹಾಗೂ ಗಾಳಿ ವಿರುದ್ಧ ದಿಕ್ಕಿನಲ್ಲಿ ಬೀಸುತ್ತಿರುವುದರಿಂದ   ಎಲ್ಲಾ ವಾಟರ್ ಸ್ಪೋರ್ಟ್ಸ್ ಗಳನ್ನು ರದ್ದು ಪಡಿಸಲಾಗಿದೆ  ಎಂಬ ಉತ್ತರ ಸಿಕ್ಕಿತು.  ಅವಕಾಶ ತಪ್ಪಿದ್ದಕ್ಕೆ ಬೇಸರವಾದರೂ  ಸಮುದ್ರದಲ್ಲಿ ಕೆಲ ಸಮಯ ಆಟವಾಡಿ  ಖುಷಿಪಟ್ಟೆವು. ಸುಮಾರು ಒಂದು ಗಂಟೆಯನ್ನು  ಆ ದ್ವೀಪದಲ್ಲಿ ಕಳೆದ ಮೇಲೆ  ನಮ್ಮ ಬೋಟ್ ಗೆ ಮರಳಿದೆವು.  ಮತ್ತೆ ಮಳೆ ಸುರಿಯತೊಡಗಿತು . ಬೋಟ್ ನ ಡ್ರೈವರ್  ಮರಳಿ ಗೂಡಿಗೆ ಹೋಗುವ ಸಂಭ್ರಮದಲ್ಲಿ  ವೇಗವನ್ನು ಹೆಚ್ಚಿಸಿ ನಮ್ಮ ದೇಹದ ಕೀಲುಗಳೆಲ್ಲ ಸುಸ್ಥಿತಿಯಲ್ಲಿವೆಯೇ ಎಂದು  ಪರೀಕ್ಷಿಸಿಕೊಳ್ಳುವಂತೆ ಮಾಡಿಬಿಟ್ಟ ! 

ದೋಣಿ ಕೇಂದ್ರಕ್ಕೆ  ಬಂದಿಳಿಯುತ್ತಿದ್ದಂತೆಯೇ  , ಕೆಲವು ಫೋಟೋಗ್ರಾಫರ್ ಗಳು  ನಮ್ಮನ್ನು ಕರೆಯತೊಡಗಿದರು.  ನಾವು ಬೋಟ್ ಹತ್ತಲೆಂದು  ಹೋಗುತ್ತಿದ್ದಾಗ ಅದ್ಯಾವ ಮಾಯದಲ್ಲೋ  ನಮ್ಮ ಫೋಟೋಗಳನ್ನು ತೆಗೆದು  ಅದನ್ನು ಚಂದದ ಪ್ಲಾಸ್ಟಿಕ್ / ಮೆಲಮೈನ್  ಪ್ಲೇಟ್  ಮೇಲೆ ಮುದ್ರಿಸಿ  ಇಟ್ಟು ಬಿಟ್ಟಿರುತ್ತಾರೆ . ವಾಪಸ್ ಬರುತ್ತಿದ್ದಂತೆಯೇ ನಮ್ಮನ್ನು ಕರೆದು ತೋರಿಸುತ್ತಾರೆ. ನಮಗೆ ಇಷ್ಟವಾದರೆ , ಅವುಗಳನ್ನು ನೆನಪಿಗಾಗಿ  ಕೊಳ್ಳಬಹುದು.  ನಾವೂ ಕೂಡ  ನಮ್ಮ ಫೋಟೋಗಳನ್ನು ಕೊಂಡು ಕೊಂಡೆವು . ಅಷ್ಟೊತ್ತಿಗೆ  ನಮ್ಮ ಕಾರ್ ಕೂಡ  ಬಂತು.  ಮರ್ಸಿಡಿಸ್  ನ ೮ ಜನ ಕುಳಿತುಕೊಳ್ಳ ಬಹುದಾದ  ವಾಹನ ಅದು. ನಮ್ಮೊಂದಿಗೆ ಇನ್ನೆರಡು ನವ ಜೋಡಿಗಳು  ಕೂಡಿಕೊಂಡರು. 

ನಮ್ಮ ಮುಂದಿನ ಕಾರ್ಯಕ್ರಮ ಎಂದರೆ , ' ಅಂಡರ್ ವಾಟರ್  ವರ್ಲ್ಡ್ ' ,  ಲಂಕಾವಿಯ  ಬಾಟಿಕ್ ಸೆಂಟರ್ ' ಮತ್ತು  ' ಐಕಾನ್  ಪಾರ್ಕ್ '
ಡ್ರೈವರ್ ಕಂ ಗೈಡ್  ದಾರಿಯುದ್ದಕ್ಕೂ ಸಿಗುವ ಚಿಕ್ಕ ಪುಟ್ಟ ಊರುಗಳ  ಪರಿಚಯ ಮಾಡಿಕೊಡುತ್ತಾ ಸಾಗುತ್ತಿದ್ದ. ಅಷ್ಟರಲ್ಲಿ ನಮ್ಮೊಂದಿಗಿದ್ದ ಒಂದು ಜೋಡಿ, ತಮ್ಮ ಹೋಟೆಲ್ ಗೆ ಮರಳುವ  ಬಯಕೆ ವ್ಯಕ್ತ ಪಡಿಸಿದರು.  ಅವರ  ಹೋಟೆಲ್ ದಾರಿಯಲ್ಲೇ ಇದ್ದುದರಿಂದ  ಅವರನ್ನು ಅಲ್ಲಿ ಇಳಿಸಿ ನಾವು ಮುಂದೆ ಸಾಗಿದೆವು.  ಆಗಲೇ  ಗಂಟೆ  ೧.೧೫  . ಹೊಟ್ಟೆ ಚುರುಗುಡುತ್ತಿತ್ತು .  ಡ್ರೈವರ್  ಅಂತೂ ಒಂದು ಭಾರತೀಯ ಹೋಟೆಲ್ ನ ಎದುರು  ನಿಲ್ಲಿಸಿದ. ಅರ್ಧ ಗಂಟೆಯಲ್ಲಿ  ವಾಪಾಸಾಗಿರೆಂದೂ , ಇಲ್ಲವಾದಲ್ಲಿ  ಸಿಟಿ ಟೂರ್ ಗೆ  ಸಮಯ ಸಿಗದು ಎಂದೂ  ಹೇಳಿದ. 
ಅದು ಒಂದು ಪಂಜಾಬಿ ಹೋಟೆಲ್ . ಸುತ್ತ ಮುತ್ತಲಿನ  ವಾತಾವರಣ ತುಂಬಾ ಪ್ರಶಾಂತವಾಗಿತ್ತು . ಮರಗಿಡಗಳು,  ಹುಲ್ಲುಹಾಸು  ತಂಪೆರೆಯುತ್ತಿದ್ದವು.   ಬಾತುಕೋಳಿಗಳು ಎಲ್ಲೆಡೆ ಓಡಾಡುತ್ತಿದ್ದವು .  ನಾವು  ರೋಟಿ,  ಪನೀರ್ ಸಬ್ಜಿ  ಮತ್ತು  'ವೆಜಿಟಬಲ್ ಬಿರಿಯಾನಿ '   ಹೇಳಿದೆವು.   ಸಲ್ಪ ತಡವಾದರೂ , ಊಟ ಮಾತ್ರ ತುಂಬಾ ರುಚಿಯಾಗಿತ್ತು .  ಅಪ್ಪಟ ಭಾರತೀಯ  ರುಚಿಯ ಊಟ  ತೃಪ್ತಿ  ತಂದಿತು. 
ಅಲ್ಲಿಂದ ಮುಂದೆ  ' Under water World ' .

                                          

ಇದು ವಿವಿಧ ಬಗೆಯ  ಜಲವಾಸಿ ಜೀವಿಗಳನ್ನು  ಅಕ್ವೇರಿಯಂ ನಲ್ಲಿ  ಸಂಗ್ರಹಿಸಿ ಇಡಲಾಗಿದೆ . ಹೆಚ್ಚಾಗಿ ಇರುವುದು  ಸಿಹಿನೀರಿನಲ್ಲಿರುವ ಮೀನುಗಳು . ಸಿಹಿನೀರಲ್ಲಿ ವಾಸಿಸುವ ಅತಿ ಉದ್ದದ ಮೀನು ಎಂದು ಹೆಸರು ಪಡೆದ ಮೀನೊಂದು  ಸುಮಾರು ೩ ಅಡಿ ಗೂ ಹೆಚ್ಚು ಉದ್ದವಿತ್ತು . ಚಿತ್ರವಿಚಿತ್ರವಾದ, ಬಣ್ಣ ಬಣ್ಣದ, ಪುಟ್ಟ ಪುಟ್ಟ ಮೀನುಗಳಿಂದ ಹಿಡಿದು ದೊಡ್ಡದಾದ ಶಾರ್ಕ್ ಜಾತಿಗೆ ಸೇರಿದ ಮೀನುಗಳವರೆಗೆ ಎಲ್ಲಾ ತರದವೂ ಇಲ್ಲಿವೆ.  ಹೆಚ್ಚಾಗಿ  ಮಲೇಶಿಯಾ ಹಾಗೂ ಸುತ್ತಲಿನ ಪ್ರದೇಶಗಳಲ್ಲಿ ಕಾಣಸಿಗುವ ಜಾತಿಗಳು . ಮೀನುಗಳಷ್ಟೇ ಅಲ್ಲದೆ , ಹವಳ ಪ್ರಾಣಿ,  ಸ್ಕ್ವಿಡ್ , ಏಡಿ, ಜೆಲ್ಲಿ ಮೀನು,  ಸಮುದ್ರ ಸೌತೆ, ಸಮುದ್ರ ಕುದುರೆ ,  ಸೀ  ಅರ್ಚಿನ್  ಹೀಗೆ ಅನೇಕಾನೇಕ ಬಗೆಯ ಸಮುದ್ರ ಜೀವಿಗಳನ್ನು ನೋಡಿದೆವು . ಅಪಾಯ ಎನಿಸಿದೊಡನೆ , ಮೈ ಉಬ್ಬಿಸುವ ' ಫಫರ್  ಫಿಶ್ ' , ತನ್ನ ವಿಚಿತ್ರ ಬಣ್ಣ ದಿಂದಾಗಿ ಎದುರಿಗೆ ಇದ್ದರೂ ಕಾಣದ  ನಕ್ಷತ್ರ ಮೀನು ,   ಇತ್ಯಾದಿಗಳನ್ನು ನೋಡಿ ಖುಷಿ ಪಟ್ಟೆವು.  ಇಲ್ಲಿ ಪೆಂಗ್ವಿನ್ ಗಳನ್ನೂ ಇಡಲಾಗಿದೆ. ಅವುಗಳಿಗೆ  ಅತ್ಯಂತ ತಂಪಾದ ವಾತಾವರಣ  ನಿರ್ಮಿಸಿಕೊಡಲಾಗಿದೆ.  ತಲೆಯ ಮೇಲೆ ಜುಟ್ಟಿರುವ ಈ ಪೆಂಗ್ವಿನ್ಗಳನ್ನು  ನೋಡಿದಾಗ  ನಾನೂ ,ಸಿರಿಯೂ ' ಮಡಗಾಸ್ಕರ್ ' ಸಿನೆಮಾವನ್ನು ನೆನಪಿಸಿಕೊಂಡು ನಕ್ಕೆವು .
ಸಿಹಿನೀರಿನ ಅತಿ ದೊಡ್ಡ ಮೀನು 

                                

ಜುಟ್ಟಿನ ಪೆಂಗ್ವಿನ್ 

ಜಲಚರಗಳಷ್ಟೇ ಅಲ್ಲದೆ , ಇಲ್ಲಿ ಮಲೇಷಿಯಾದ ಕಾಡುಗಳಲ್ಲಿ ಕಾಣ ಸಿಗುವ ಕೆಲ ಅಪರೂಪದ ಪ್ರಾಣಿ , ಪಕ್ಷಿಗಳನ್ನೂ ಇಡಲಾಗಿದೆ.  ಅವನ್ನೆಲ್ಲ ನೋಡಿಕೊಂಡು , ಹೊರಗೆ ನಮ್ಮ ಕಾರಿನ  ಬಳಿ   ಬಂದೆವು  .


                                 


 ನಮ್ಮ ಜೊತೆಯಿದ್ದ ಹೊಸ ಜೋಡಿ ,ಎಷ್ಟು ಹೊತ್ತಾದರೂ  ಹೊರಗೆ ಬರಲಿಲ್ಲ . ಸುಮಾರು ೨೦-೨೫ ನಿಮಿಷ ಕಾದ ನಂತರ  ಡ್ರೈವರ್   ತಾನೇ ಅವರನ್ನು ಹುಡುಕಿಕೊಂಡು ಬರಲು ಹೊರಟ . ಟಿಕೆಟ್ ಬೇಕಾಗಿದ್ದರಿಂದ ಅವನಿಗೇ  ಒಳಗೆ ಹೋಗುವುದು ಸಾಧ್ಯವಿರಲಿಲ್ಲ. ಆದರೆ  ಸೆಂಟರ್ ನ ಹೊರಗೆ, ಪಾರ್ಕಿಂಗ್ ನಲ್ಲಿ  ಅವರೆಲ್ಲಾದರೂ ಕಾರ್ ನ  ಗುರುತು ಹಿಡಿಯಲಾಗದೆ   ತಿರುಗುತ್ತಿರುವರೆನೋ  ಎಂದು  ಹುಡುಕತೊಡಗಿದ . ಸುಮಾರು ಅರ್ಧ ಗಂಟೆಗೆ ಅಂತೂ ಇಂತೂ ಅವರಿಬ್ಬರೂ  ಹೊರಗೆ ಬಂದರು . ಒಳಗಿರುವ ಅಂಗಡಿಗಳಲ್ಲಿ  ಏನೇನೋ ನೋಡತೊಡಗಿದವರಿಗೆ , ಸಮಯ ಸರಿದಿದ್ದೇ  ತಿಳಿಯಲಿಲ್ಲವಂತೆ . ಅಂತೂ ಅಲ್ಲಿಂದ ಹೊರಟಾಯಿತು. 

ಹವಳ ಪ್ರಾಣಿ


ನಕ್ಷತ್ರ ಮೀನು ಎಲ್ಲಿದೆ ಹೇಳಿ ?
ಟೋಪಿಯೆಂದು ತಲೆಗೆ ಇಟ್ಟೀರಿ  ಜೋಕೆ ! 
 ಹೂವಲ್ಲ , ಸಮುದ್ರ ಜೀವಿ !! ಮುಂದಿನ ನಿಲುಗಡೆ  " ಬಾಟಿಕ್ ಸೆಂಟರ್ ' 

7 comments:

ಜಲನಯನ said...

ಚಿತ್ರಾ ಮಲೆಶಿಯಾ ಪ್ರವಾಸದ ಹಿಂದಿನ ತಾಣದಲ್ಲಿ ಇಷ್ಟುದಿನ ನಮ್ಮನ್ನ ಬಿಟ್ಟು ಎಲ್ಲಿ ಹೋಗಿದ್ದೆ. ಅಂತೂ ಜಲ ಜೀವಿಗಳ ಬಗ್ಗೆ ವಿವವರ ಹಾಕಿದೆ.... ಕೆಲವು ವನ್ಯಜೀವಿಗಳು ಮಲೇಶಿಯಾದಲ್ಲೇ ಸಿಗೋದು ಅಂತಾರೆ...

ಮುಂದಿನ ಪ್ರವಾಸ ತಾಣದ ವಿವರಕ್ಕೆ ಕಾಯ್ತೇನೆ,,

ಸವಿಗನಸು said...

ಮಲೇಶಿಯಾ ಮನಸೆಳೆಯುತ್ತಲಿದೆ.......
ಚೆನ್ನಾಗಿದೆ...ಫೋಟೊ ಹಾಗೂ ವಿವರಣೆ....

ಮನಸು said...

ವಾವ್ ... ಜಲ ಜೀವಗಳ ಚಿತ್ರ ನೋಡಿ ಸಕ್ಕತ್ ಖುಷಿ ಆಯ್ತು... ಒಳ್ಳೆ ಪ್ರವಾಸ ಹೋಗಿಬಂದಿದ್ದೀರಿ.... ವಿವರ ಮತ್ತು ಎಲ್ಲಾ ಫೋಟೋಗಳು ಚೆನ್ನಾಗಿವೆ.

sunaath said...

Oh,how wonderful!

ಸಿಮೆಂಟು ಮರಳಿನ ಮಧ್ಯೆ said...

ಚಿತ್ರಾ..

ಸಚಿತ್ರ ಲೇಖನ ...
ಫೋಟೊ.. ವಿವರಗಳು ಚೆನ್ನಾಗಿವೆ..

ನಾವು ಮಲೇಷಿಯಾ ಹೋಗಿದ್ದರೂ ಈ ದ್ವೀಪಗಳನ್ನು ನೋಡಿಲ್ಲ..
ನಿಮ್ಮ ಲೇಖನ ಓದಿದ ಮೇಲೆ ಮತ್ತೊಮ್ಮೆ ಹೋಗೋಣ ಅನ್ನಿಸುತ್ತಿದೆ..

Sandeep.K.B said...

Nice photos

ಸಾಗರದಾಚೆಯ ಇಂಚರ said...

Chitrakka,

mast photos and superb explanation

cholo tirugiddi ninga