July 23, 2011

ಮನಸೆಳೆದ ಮಲೇಶಿಯಾ - ಭಾಗ ೪


ಆತ್ಮಾ ಆಲಂ  ಬಾಟಿಕ್  ಸೆಂಟರ್  :

ಲಂಕಾವಿಗೆ ಬಂದವರು ಸಾಧಾರಣವಾಗಿ ಈ ಬಾಟಿಕ್ ಸೆಂಟರ್ ಗೆ ಭೇಟಿ ಕೊಡದೆ ಇರುವುದಿಲ್ಲ .  ಬಾಟಿಕ್   ಒಂದು ಸಾಂಪ್ರದಾಯಿಕ ಕಲೆ.  ಮೂಲತಃ ಜಾವಾ  ದ್ವೀಪದ್ದು ಎನ್ನಲಾಗುವ ಇದು  ದಕ್ಷಿಣ ಹಾಗೂ ಆಗ್ನೇಯ ಏಶಿಯಾದ  ಬಹಳಷ್ಟು ದೇಶಗಳಲ್ಲಿ ಕಂಡುಬರುತ್ತದೆ  ಹಾಗೆಯೇ ಆಫ್ರಿಕಾದ ಕೆಲ ದೇಶಗಳಲ್ಲೂ ಸಹ  .  ಇಂಡೋನೇಶಿಯಾ , ಭಾರತ, ಮಲೇಶಿಯಾ, ಚೀನಾ , ಶ್ರೀಲಂಕಾ ,ಈಜಿಪ್ಟ್ ,  ನೈಜೀರಿಯಾ  ಗಳು ಕೆಲ ಹೆಸರುಗಳು . ಸಾಧಾರಣವಾಗಿ  ಮೃದು ಹತ್ತಿಯ  ಹಾಗೂ ರೇಶಿಮೆಯ  ಬಟ್ಟೆಯನ್ನು  ಬಾಟಿಕ್ ನಲ್ಲಿ ಬಳಸಲಾಗುತ್ತದೆ. ಬಿಳಿ ಅಥವಾ, ತಿಳಿವರ್ಣದ ಬಟ್ಟೆಯನ್ನು ಆರಿಸಿಕೊಂಡು  ಅದರಮೇಲೆ  ಬೇಕಾದ  ಡಿಸೈನ್  ಅನ್ನು ಪೆನ್ಸಿಲ್ ನಿಂದ ತೆಳುವಾಗಿ  ಬರೆದು ಕೊಳ್ಳಬೇಕು . ಆ ನಂತರ  ಎಲ್ಲಿ  ಮೂಲ ಬಣ್ಣ  ಹಾಗೇ  ಇರಬೇಕೋ ಆ ಭಾಗಕ್ಕೆ  ಕರಗಿದ  ಬಿಸಿ ಮೇಣವನ್ನು ( ಹೆಚ್ಚಾಗಿ  ಜೇನು ಮೇಣ  ಅಥವಾ  ದ್ರವ ರೂಪದ  ಪ್ಯಾರಫಿನ್ ) ಅದಕ್ಕಾಗೆ ಇರುವ  ವಿಶೇಷ ಉಪಕರಣದಿಂದ ಅಥವಾ ಕುಂಚದಿಂದ   ಸವರಲಾಗುತ್ತದೆ. ಆ ನಂತರ ಉಳಿದ ಭಾಗಕ್ಕೆ  ಇಷ್ಟವಾದ ಬಣ್ಣ  ವನ್ನು ಹಚ್ಚ ಬಹುದು  ಅಥವಾ  ಬಣ್ಣದಲ್ಲಿ ಮುಳುಗಿಸ ಬಹುದು.  ಈ ಕರಗಿದ ಮೇಣವನ್ನು ಬಟ್ಟೆ  ಹೀರಿಕೊಳ್ಳುವುದರಿಂದ  ಆ ಭಾಗ ಮೂಲವರ್ಣವನ್ನು ಉಳಿಸಿಕೊಳ್ಳುತ್ತದೆ. ಮತ್ತೂ ಬೇರೆ ಬೇರೆ ಬಣ್ಣ ಗಳನ್ನು  ಬಳಸುವುದಿದ್ದರೆ ,  ಬಟ್ಟೆ ಪೂರ್ಣವಾಗಿ ಒಣಗಿದ ಮೇಲೆ ಮತ್ತೊಮ್ಮೆ   ಇದನ್ನು ಮರುಕಳಿಸಬಹುದು .  ತಾಳ್ಮೆ  ಹಾಗೂ ನಾಜೂಕುತನ ಎರಡೂ ಬೇಕು  ಈ ಬಾಟಿಕ್ ಗೆ .
ಬಾಟಿಕ್ ಮಾಡುವುದರಲ್ಲಿ ನಿರತಳಾದ ಮಹಿಳೆ  ( ಅಂತರ್ಜಾಲದಿಂದ) ಇಲ್ಲಿಯ ಬಾಟಿಕ್ ಸೆಂಟರ್ ನಲ್ಲಿ  ೧-೨ ದಿನಗಳ ವರ್ಕ್ ಶಾಪ್  ಕೂಡ ಇರುತ್ತದೆ.  ಹಣ ಕಟ್ಟಿ   ಬಾಟಿಕ್  ಮಾಡುವ ವಿಧಾನವನ್ನು ಕಲಿಯಬಹುದು. 
ಈ ಸೆಂಟರ್ ಗೆ ನಾವು ಹೋದಾಗ  ಕೆಲವು ಹುಡುಗಿಯರು  ಬಾಟಿಕ್ ನ ವೀವಿಧ ಹಂತಗಳಲ್ಲಿ  ತೊಡಗಿಕೊಂಡಿದ್ದರು.  ಕೆಲ ಸಮಯ ಅದನ್ನು ನೋಡಿ ನಂತರ ಅಲ್ಲೇ ಇದ್ದ  ಮಾರಾಟ ಕೇಂದ್ರಕ್ಕೆ ಹೋದೆವು . ಬಾಟಿಕ್ ಕಲೆ  ಬಳಸಿದ ಬಹಳಷ್ಟು  ವಸ್ತುಗಳು ಅಲ್ಲಿದ್ದವು . ಪರ್ಸ್ ಗಳು, ಬೆಡ್ ಶೀಟ್, ದಿಂಬಿನ ಕವರ್, ಕುಶನ್ ಕವರ್, ಡೈನಿಂಗ್ ಟೇಬಲ್ ಮೇಲೆ ಹಾಸುವ ಬಟ್ಟೆ, ಅಲ್ಲದೆ  ಡ್ರೆಸ್  ಹೊಲಿಸ ಬಹುದಾದಂಥ ಬಟ್ಟೆಗಳಂತೂ ಬಹಳ ಇದ್ದವು. ಅಪ್ಪಟ ರೇಶಿಮೆಯ ಮೇಲೆ  ಬಾಟಿಕ್ ಮಾಡಿದ  ' " ಸಾರೊಂಗ್  "  ಮನಮೋಹಕವಾಗಿದ್ದವು .

ಬಾಟಿಕ್  ಮಾಡಿದ ಬಟ್ಟೆ  ( ಚಿತ್ರ ಕೃಪೆ :ಅಂತರ್ಜಾಲದಿಂದ) 


ಬಾಟಿಕ್  ಮಾಡಿದ ಬಟ್ಟೆ  ( ಚಿತ್ರ ಕೃಪೆ :ಅಂತರ್ಜಾಲದಿಂದ) 

' ಸಾರೊಂಗ್ '   ಇದು ಒಂಥರಾ ನಮ್ಮಲ್ಲಿಯ ಲುಂಗಿಯಂತೆಯೇ  ಇರುತ್ತದೆ.   ಇದನ್ನು ಇಲ್ಲಿ ಉದ್ದವಾದ ಮೇಲಂಗಿ ತೊಟ್ಟು ಕೆಳಗೆ  ಲುಂಗಿಯಂತೆ  ಧರಿಸುತ್ತಾರೆ. ಹೆಂಗಸರೂ ಗಂಡಸರಿಗೂ ಇಬ್ಬರೂ ಇದನ್ನು ಧರಿಸುತ್ತಾರೆ . ಇದು  ಸಾಂಪ್ರದಾಯಿಕ ಉಡುಪಂತೆ ! ಮುಸ್ಲಿಂ ದೇಶವಾದ ಇಲ್ಲಿ , ಶುಕ್ರವಾರದ ಪ್ರಾರ್ಥನೆಗೆ  ಸಾರೊಂಗ್ ಉಟ್ಟೆ  ಹೋಗುವರಂತೆ. ಕಣ್ಣಿಗೆ ಹೊಡೆಯುವಂಥಾ ಬಣ್ಣದ  ಸಾರೊಂಗ್  ಇವರಿಗೆ ಆಕರ್ಷಣೆ .  


ಸಾರೊಂಗ್ ಧರಿಸಿದ ಗಂಡಸರು 

ಹಾಗೆಯೇ , ನುಣುಪಾದ , ಅತಿ ಹಗುರವಾದ ,ಸೌಮ್ಯ ಬಣ್ಣದ  ಅಪ್ಪಟ ರೇಶಿಮೆಯ ಸಾರೊಂಗ್ ಗಳೂ ಇದ್ದವು . ನಾನೂ ಅಂಥಾ ಒಂದು ಸಾರೊಂಗ್  ಖರೀದಿಸಿದೆ . ಹಾಗೆಯೇ  ಕೆಲವು ಹತ್ತಿಯ ಬಾಟಿಕ್ ಬಟ್ಟೆ ಗಳನ್ನೂ  ಕೊಂಡು ಕೊಂಡೆ. 
ಅಲ್ಲಿದ್ದ  ಹುಡುಗಿಯೊಬ್ಬಳು  ಸಾರೊಂಗ್ ಅನ್ನು ಧರಿಸಬಹುದಾದ ಹಲವು  ಬಗೆಗಳನ್ನು  ಸಿರಿಗೆ ಹೇಳಿಕೊಟ್ಟಳು .  ಕೇವಲ ಲುಂಗಿಯಂತೆ ಮಾತ್ರವಲ್ಲದೆ  , ಬೇಸಿಗೆ ಉಡುಪಂತೆ , ಬೀಚ್ ನಲ್ಲಿ ಧರಿಸುವಂತೆ , ಹೀಗೆ  ಸುಮಾರು ೮ ರೀತಿಗಳಲ್ಲಿ ಇದನ್ನು ಉಡಬಹುದು. ಖರೀದಿಸುವ  ಸಾರೊಂಗ್ ಜೊತೆ ಅದನ್ನು  ಉಡುವ ರೀತಿಯನ್ನೂ ಕೂಡ  ಸಚಿತ್ರವಾಗಿ ವಿವರಿಸಿದ  ಕಾಗದವನ್ನು ನಮಗೆ ಕೊಟ್ಟರು .  ಹಸನ್ಮುಖರಾಗಿ ನಮ್ಮೆಲ್ಲ ಪ್ರಶ್ನೆಗಳನ್ನು ತಾಳ್ಮೆಯಿಂದ ವಿವರಿಸುವ ಅವರ ರೀತಿ ನಮಗೆ ಬಹಳ ಇಷ್ಟವಾಯ್ತು. ಅಲ್ಲಿಂದ ನಾವು ಖರೀದಿಸಿದ ಬಟ್ಟೆಗಳ ಬ್ಯಾಗ್ ಹಿಡಿದು ಹೊರಟೆವು  .

ಬಾಟಿಕ್ ಮಾಡುವ ಸರಳ ವಿಧಾನಗಳು  ಅಂತರ್ಜಾಲದಲ್ಲಿ  ಲಭ್ಯವಿದೆ. ಅಂತಹ ಒಂದು ಲಿಂಕ್ ಅನ್ನು ಇಲ್ಲಿ ಕೊಟ್ಟಿದ್ದೇನೆ.  

ಅಲ್ಲಿಂದ ಮುಂದೆ ನಮ್ಮ ಪಯಣ  "ಈಗಲ್ ಸ್ಕ್ವೇರ್ "  ಗೆ.

ಹೆಚ್ಚು ವಾಹನದಟ್ಟಣೆ  ಇಲ್ಲದ ಸಮತಟ್ಟಾದ  ,ಅಕ್ಕ ಪಕ್ಕ ಹಸಿರು ತುಂಬಿದ ಹಾದಿಯಲ್ಲಿ ಸಾಗುತ್ತಾ, ಮೈಮರೆತಿದ್ದೆವು. ಲಂಕಾವಿ ಪಟ್ಟಣ ದಲ್ಲಿ  ನಮ್ಮ ಹೋಟೆಲ್ ನಿಂದ ೨-೩ ಕಿ.ಮೀ ದೂರದಲ್ಲಿರುವ  ' ಲಂಕಾವಿ ಡೆವಲಪ್ ಮೆಂಟ್  ಅಥಾರಿಟಿ '  ಯ ಬಹುದೊಡ್ಡ   ಕ್ಯಾಂಪಸ್ ನಲ್ಲಿ  ೧೯ ಎಕರೆಯ   ಗಾರ್ಡನ್  ಇದೆ. ಇಲ್ಲಿ ಸಮುದ್ರಕ್ಕೆದುರಾಗಿ  ನಿರ್ಮಿಸಿದ  ನಕ್ಷತ್ರಾಕಾರದ  ಎತ್ತರದ ಕಟ್ಟೆಯ ಮೇಲೆ  ಲಂಕಾವಿಯ  ಹೆಮ್ಮೆಯ  ಗುರುತಾದ  ಕಂದು ಗೆಂಪು   ಹದ್ದಿನ ೧೨ ಮೀಟರ್  ಎತ್ತರದ ಪ್ರತಿಮೆಯನ್ನು ಸ್ಥಾಪಿಸಲಾಗಿದೆ .

ಚಿತ್ರ ಕೃಪೆ : ಅಂತರ್ಜಾಲ

ಅದರ ಸುತ್ತ ಸುಂದರವಾದ  ಗಾರ್ಡನ್ , ಕಾರಂಜಿಗಳು , ಬಣ್ಣ ಬಣ್ಣದ ಗಿಡ ಮರಗಳು . ಈ ಪ್ರತಿಮೆಯ ಹಿಂಭಾಗದಲ್ಲಿರುವ ಮೆಟ್ಟಿಲುಗಳಿಗೆ ತುಂಬಾ ಚಂದದ  ಟೈಲ್ಸ್ ಹಾಕಲಾಗಿದೆ . ಸುಂದರವಾದ ಕಾರ್ಪೆಟ್ ಹಾಸಿದಂತೆಯೇ ಕಾಣುತ್ತದೆ . ನಾವು ಕಾರಿನಿಂದ ಇಳಿಯುವಷ್ಟರಲ್ಲಿ  ಜೋರಾಗಿ ಮಳೆ  ಶುರುವಾಯಿತು . ನಮ್ಮ ಬಳಿ ಕೊಡೆ ಇರಲಿಲ್ಲ  ಆದರೂ ಓಡಿ ಹೋಗಿ  ಅಲ್ಲಿರುವ   ವ್ಯಾಪಾರಿ ಮಳಿಗೆಯಲ್ಲಿ  ನಿಂತೆವು.  ೫ ನಿಮಿಷದಲ್ಲಿ ಮಳೆ ನಿಂತಿತು.


ಕಾರ್ಪೆಟ್ ಹಾಸಿದಂತೆ ಕಾಣುವ ಟೈಲ್ಸ್ ಗಳು 


ನಾವೂ ಕೂಡ  ಹದ್ದಿನ ಬಳಿ ಹೋದೆವು. ಅತ್ಯಂತ ನೈಜವಾಗಿ ನಿರ್ಮಿಸಲಾದ ಈ ಪ್ರತಿಮೆ  ತುಂಬಾ ಸುಂದರವೂ ಹೌದು ! ಸಮುದ್ರಾಭಿಮುಖವಾಗಿರುವ  ಈ ಹದ್ದು  ಲಂಕಾವಿಯನ್ನು ಕಾಯಲು  ನಿಂತಂತೆ ಕಾಣಿಸುತ್ತದೆ .  ಇದನ್ನು " Icon of Langkawi"  ಎಂದೂ ಕೂಡ ಕರೆಯುತ್ತಾರೆ . ಸಮುದ್ರ ಮಾರ್ಗವಾಗಿ ಲಂಕಾವಿಗೆ ಬರುವವರನ್ನು ಮೊದಲು ಸ್ವಾಗತಿಸುವುದು ಈ ಪ್ರತಿಮೆ. ತನ್ನ ಭವ್ಯ ಆಕಾರದಿಂದ  ಬಹುದೂರದಿಂದಲೂ ಕಾಣಿಸುತ್ತದೆ .ಇಲ್ಲಿಂದ  ನಮ್ಮ ಹೋಟೆಲ್ ಕೂಡ  ಸ್ಪಷ್ಟವಾಗಿ ಕಾಣಿಸುತ್ತಿತ್ತು . ಹಸಿರು ಬೆಟ್ಟ ಹಾಗೂ ಮಂಜು ಮುಸುಕಿದ ಹಿನ್ನೆಲೆಯಲ್ಲಿ ಬಲು ಆಕರ್ಷಕವಾಗಿ ಕಾಣುತ್ತಿತ್ತು. ಮತ್ತೆ ಮಳೆ ಬರುವ ಲಕ್ಷಣ  ಕಂಡಿದ್ದರಿಂದ  ಅಲ್ಲಿಂದ ಹೊರಟೆವು.  ಹೊರಡುವ ಮುನ್ನ ಮತ್ತೊಮ್ಮೆ  , ಭವ್ಯವಾದ ಹದ್ದನ್ನೂ  ಸುತ್ತಲೂ ನಿರ್ಮಿಸಿದ್ದ ಮನಸೆಳೆಯುವ ಹೂದೊಟವನ್ನೂ ಕಣ್ಣಲ್ಲಿ ತುಂಬಿಕೊಂಡೆವು.

ಮಧ್ಯದಲ್ಲಿ ಕಾಣುವ ಬಿಳಿಯ ಕಟ್ಟಡ ನಮ್ಮ ಹೋಟೆಲ್ 

ಅಲ್ಲಿಂದ ನಮ್ಮ ಡ್ರೈವರ್  ನಮ್ಮನ್ನು ಹತ್ತಿರದ  ಶಾಪಿಂಗ್  ಏರಿಯಾಕ್ಕೆ ಕರೆದುಕೊಂಡು ಹೋದ.  ನಮ್ಮ ಜೊತೆಯಿದ್ದ ಜೋಡಿ  ಅಲ್ಲಿ  ಖರೀದಿಗಾಗಿ ಇಳಿದರು. ನಾವು ಆಗಲೇ ಸುಸ್ತಾಗಿದ್ದರಿಂದ  ಮರಳಿ ಹೋಟೆಲ್ ಗೆ ಬಿಡಲು ಹೇಳಿದೆವು. ಅಲ್ಲದೆ , ಬೆಳಿಗ್ಗೆ  ಬೇಗ ಹೊರಡ ಬೇಕಿತ್ತು,  ಮುಂದಿನ  ಕೌಲಾಲಂ ಪುರ ಪ್ರಯಾಣಕ್ಕಾಗಿ ....
6 comments:

sunaath said...

ಒಳ್ಳೆಯ ಮಾಹಿತಿ, ಒಳ್ಳೆಯ ಚಿತ್ರಗಳು.

ಜಲನಯನ said...

ಚಿತ್ರಾ ಬಾಟಿಕ್ ಮಾಡಿದ ಬಟ್ಟೆ ಅಂದ್ರೆ ನಮ್ಮ ರಾಜಸ್ಥಾನದ ಟೈ ಅಂಡ್ ಡೈ ಮಾದರಿಯ ಸ್ಥಳೀಯ ಆವಿಷ್ಕಾರ ಇರ್ಬೇಕು...
ಸಾರೋಂಗ್ ಯಾರು ಉಟ್ಕೊಳ್ಳೋದು..? ಮಹೇಶ್ ಟ್ರೈ ಮಾಡಿದ್ರಾ?? .....ಲಂಗ್ಕಾವಿಯ ಪ್ರವಾಸ ಜೋರೋ ಜೋರು ಅನ್ಸುತ್ತೆ....

ಸಾಗರದಾಚೆಯ ಇಂಚರ said...

Hey sorry, naanu blog kade bandidne ille,
super information,
naanu plan maadti hogale :)

shivu.k said...

ಚಿತ್ರ,

ಮಲೇಶಿಯ ಅನುಭವದಲ್ಲಿ ಬಾಟಿಕ್ ಬಗ್ಗೆ ಚೆನ್ನಾಗಿ ಬರೆಯುತ್ತಿದ್ದೀರಿ. ಮಾಹಿತಿಯುಕ್ತ ಲೇಖನ. ಕಳೆದ ಒಂದು ತಿಂಗಳಿಂದ ಕೆಲಸದ ಒತ್ತಡದಿಂದ ಯಾರ ಬ್ಲಾಗನ್ನು ಓದದೇ ಬೇಸರವಾಗಿದೆ...ನಿಮ್ಮ ಹಳೆಯ ಮಲೇಶೀಯ ಲೇಖನಗಳನ್ನು ಓದುತ್ತೇನೆ.

ಗಿರೀಶ್.ಎಸ್ said...

nimma malasyia anubhavagalannu thumba chennagi barediddira...malasyia bagge nimma haleya lekhanagalannu odide..thumba olleya mahithi mattu photogalu....

prabhamani nagaraja said...

ನಿಮ್ಮ ಪ್ರವಾಸ ಲೇಖನ ಬಹಳ ಚೆನ್ನಾಗಿದೆ. ಅಭಿನ೦ದನೆಗಳು .