August 27, 2011

ಮನಸೆಳೆದ ಮಲೇಶಿಯಾ -೫ , ಲಂಕಾವಿಯಲ್ಲಿ ಕೊನೆಯ ದಿನ



  ಹೋಟೆಲ್ ಗೆ ಹೋಗಿ ಬಿಸಿ ಬಿಸಿಯಾಗಿ ಟೀ ಮಾಡಿಕೊಂಡು ಕುಡಿದೆವು. ಅರ್ಧ ಗಂಟೆ ವಿಶ್ರಾಂತಿ ತೆಗೆದು ಕೊಂಡು  ಮತ್ತೆ  ಅಲ್ಲಿಯೇ ಸುತ್ತಾಡಲು ಹೊರಟೆವು.  ಇದು ಲಂಕಾವಿಯಲ್ಲಿ ನಮ್ಮ ಕೊನೆಯ ದಿನವಾಗಿದ್ದರಿಂದ  ಅಕ್ಕ ಪಕ್ಕದ ಗಲ್ಲಿ ಶಾಪಿಂಗ್  ನೋಡೋಣ ಎಂದುಕೊಂಡು ಹೊರಬಿದ್ದೆವು . 

ಹಿಂದಿನ ದಿನ ನಾವು ನೋಡಿದ್ದ ರಸ್ತೆಯ ರೂಪವೇ ಇಂದು ಬದಲಾಗಿಬಿಟ್ಟಿತ್ತು . ಅಗಲವಾಗಿದ್ದ ರಸ್ತೆಯಲ್ಲಿ  ವಾಹನ ಸಂಚಾರವನ್ನು ನಿಷೇಧಿಸಲಾಗಿತ್ತು.  ರಸ್ತೆಯುದ್ದಕ್ಕೂ ಎರಡೂ ಕಡೆ ಚಿಕ್ಕ ಚಿಕ್ಕ ಅಂಗಡಿಗಳ ಸಾಲು ! ಝಾಗಮಗಿಸುವ   ವಿದ್ಯುದ್ದೀಪಗಳು , ದೊಡ್ಡದಾಗಿ ಒದರಿಕೊಳ್ಳುತ್ತಿದ್ದ  ಲೌಡ್ ಸ್ಪೀಕರ್ , ಸಡಗರದಿಂದ ಓಡಾಡುವ ಜನಜಂಗುಳಿ ಕಂಡು .. ನಮಗೆ ನಾವು ನಿನ್ನೆ ಬಂದಿದ್ದು ಇದೇ ರಸ್ತೆ ನಾ  ಎಂದು ಆಶ್ಚರ್ಯವಾಯ್ತು  . ಊರಲ್ಲಿಯ ಜಾತ್ರೆ ಪೇಟೆಯ ನೆನಪಾಯಿತು .   ಅಲ್ಲಿದ್ದ ಒಬ್ಬ ಅಂಗಡಿಯವನಲ್ಲಿ  ಇದೇನು ಎಂದು ವಿಚಾರಿಸಿದೆವು. ಆತ ಅಂದು " ಮಿಡ್ ನೈಟ್ ಮಾರ್ಕೆಟ್ ಡೇ  " ಎಂದೂ ವಾರಕ್ಕೊಮ್ಮೆ ಇದೇ ರೀತಿ ಒಂದೊಂದು ಬೀದಿಯಲ್ಲಿ ಹೀಗೇ ಮಧ್ಯರಾತ್ರಿಯವರೆಗೂ  ಮಾರ್ಕೆಟ್  ಇರುತ್ತದೆ ಎಂದೂ ಹೇಳಿದ. ಬಣ್ಣ ಬಣ್ಣದ ತರಾವರಿ ವಸ್ತುಗಳಿಂದ ಕಂಗೊಳಿಸುತ್ತಿದ್ದ  ಪುಟ್ಟ ಪುಟ್ಟ ಅಂಗಡಿಗಳು  ಜನರಿಂದ ತುಂಬಿದ್ದವು . ಹೇರ್ ಕ್ಲಿಪ್, ಚಪ್ಪಲಿಗಳಿಂದ ಹಿಡಿದು , ಬಟ್ಟೆಗಳು, ತಿಂಡಿ ತಿನಿಸು,   ಎಲ್ಲವೂ ಇಲ್ಲಿದ್ದವು.  ಕಮ್ಮಿ ಬೆಲೆಯಲ್ಲಿ.  ಚೌಕಾಶಿ ವ್ಯಾಪಾರಕ್ಕೆ ಅನುಕೂಲವಾಗಿತ್ತು.  ನಾವು  ಅದು ಇದು ಎಂದು ಏನೇನೋ  ಖರೀದಿಸಿದೆವು . 

ಹಾಗೆ ಮುಂದೆ ಹೋಗಿ ದೊಡ್ಡ ಅಂಗಡಿ ಹೊಕ್ಕೆವು . ಇಲ್ಲಿ ಚಾಕೊಲೆಟ್  ಚೆನ್ನಾಗಿರೋದು ಕಮ್ಮಿ ಬೆಲೆಯಲ್ಲಿ ಸಿಗುತ್ತದೆ ಎಂದು ಕೇಳಿದ್ದರಿಂದ ಅದನ್ನು ಖರೀದಿಸಲು ಹೋದೆವು. ಅಂಗಡಿಯಲ್ಲಿ ಚಾಕೊಲೆಟ್ ಸೆಕ್ಷನ್  ನೋಡಿ ನಮಗೆ ತಲೆ ತಿರುಗಿದಂತಾಯ್ತು. ಇದುವರೆಗೆ ಕಂಡಿರದ, ಕೇಳಿರದ  ಅದೆಷ್ಟೋ ಬಗೆಯ ಚಾಕೊಲೆಟ್ ಗಳು ..ಬಾಯಲ್ಲಿ ನೀರು ತರುತ್ತಿದ್ದವು. ದರ ಕೂಡ  ಕಮ್ಮಿಯೇ. ಒಂದಿಷ್ಟು  ಪ್ಯಾಕೆಟ್ ತೆಗೆದುಕೊಂಡು ಬುಟ್ಟಿಗೆ ಹಾಕಿದೆವು . ಪಕ್ಕದಲ್ಲಿ   ವಿದೇಶಿ ಮದ್ಯ  ವಿಭಾಗವೂ ಇತ್ತು. ಅಲ್ಲಿ ವಿಶೇಷವಾಗಿ ವೈನ್ ಅನ್ನು ತಯಾರಾದ ಇಸವಿಯ ಪ್ರಕಾರ  ಶೆಲ್ಪ್ಹ್ ಗಳಲ್ಲಿ ನೀಟಾಗಿ ಜೋಡಿಸಿಡಲಾಗಿತ್ತು . ವೈನ್ ಹಳೆಯದಾದಷ್ಟೂ  ಅದರ ಬೆಲೆ , ಪ್ರತಿಷ್ಠೆ ಹೆಚ್ಚು ! 

ಮೂಲತಃ ಮುಸ್ಲಿಂ ದೇಶವಾದ  ಮಲೇಶಿಯಾದಲ್ಲಿ  ದೇಶೀಯರು ಕುಡಿಯದಿದ್ದರೂ , ಪ್ರವಾಸೋದ್ಯಮ  ಇಲ್ಲಿಯ  ಆರ್ಥಿಕತೆಗೆ  ದೊಡ್ಡ ಕೊಡುಗೆ ನೀಡುವುದರಿಂದ ,  ಮದ್ಯ  ಮಾರಾಟಕ್ಕೆ ನಿರ್ಬಂಧವಿಲ್ಲ .  ಅಲ್ಲದೆ ಲಂಕಾವಿಯಲ್ಲಿ  ಎಲ್ಲವೂ ತೆರಿಗೆ ಮುಕ್ತ !  ಚಾಕೊಲೆಟ್ ನಿಂದ  ಕಾರಿನ ವರೆಗೂ  !!!!  ಹೀಗಾಗಿ, ಇಲ್ಲಿಂದ  ಮದ್ಯದ ಬಾಟಲಿಗಳನ್ನು ಒಯ್ಯುವ ಪ್ರವಾಸಿಗಳು ತುಂಬಾ ಇದ್ದಾರೆ.  ಹಾಗೆಂದು  ಇದಕ್ಕೂ ನಿರ್ಬಂಧವಿದೆ . ಮದ್ಯದ ಬಾಟಲಿಗಳನ್ನು  ನಿಮ್ಮೊಡನೆ ಊರಿಗೆ ಒಯ್ಯಲು  ನೀವು ಲಂಕಾವಿಯಲ್ಲಿ ಕನಿಷ್ಠ  ೨೪ ತಾಸುಗಳ ವಾಸ್ತವ್ಯ ಮಾಡಿರಬೇಕು . ನೀವು ಉಳಿದು ಕೊಂಡ  ಪ್ರತಿ  ದಿನಕ್ಕೆ ಒಂದು ಬಾಟಲಿಯಂತೆ  ಒಯ್ಯಬಹುದು ಎಂದೇನೋ ಹೇಳಿದ ನಮ್ಮ ಡ್ರೈವರ್ .
ನಾವು  ನಮ್ಮ ಖರೀದಿ ಮುಗಿಸಿ ,  ಹೋಟೆಲ್ ಗೆ ಮರಳಿದೆವು. ದಾರಿಯಲ್ಲಿ ಒಂದು ಹಣ್ಣಿನ ಅಂಗಡಿ ಕಂಡಿತು. ಹಲಸು , ಬಾಳೆಹಣ್ಣು , ಉದ್ದನೆಯ ಸಪೂರವಾಗಿರುವ ಮಾವಿನ ಹಣ್ಣು  ಹೀಗೆ ಹಲವಾರು ಹಣ್ಣುಗಳಿದ್ದವು  . ಬಲು ತೀಕ್ಷ್ಣ  ವಾಸನೆಯ  'ಡೂರಿಯನ್ ' ಕೂಡ ಇತ್ತು.  ಹಲಸಿನಂತೆಯೇ ಕಾಣುವ ಈ ಹಣ್ಣೆಂದರೆ  ಜನ ತಿನ್ನಲು ಬಾಯ್ಬಿಡುತ್ತಾರಂತೆ. ಆದರೆ ಅದರ ವಾಸನೆ ಮಾತ್ರ ಅತೀ ತೀಕ್ಷ್ಣ . ಸಿಂಗಾಪುರ್, ಥೈಲ್ಯಾಂಡ್  ಮುಂತ್ತಾದ ಕಡೆ  ಹೋಟೆಲ್ ಗಳಲ್ಲಿ ಈ ಹಣ್ಣನ್ನು ತರದಂತೆ ನಿರ್ಬಂಧಿಸಿದ್ದಾರೆ. ನಾವು ಥೈಲ್ಯಾಂಡ್ ಪ್ರವಾಸದಲ್ಲಿ ಕುತೂಹಲದಿಂದ ಇದನ್ನು ತಿಂದಿದ್ದೆವಾದರೂ ಹಿಟ್ಟು ಹಿಟ್ಟಾದ, ತಿಂದು ಬಹಳ ಹೊತ್ತಿನ ವರೆಗೂ ಬಾಯಲ್ಲಿ ಉಳಿಯುವ ಅದರ ರುಚಿ .. ನನಗಂತೂ ಇಷ್ಟವಾಗಿರಲಿಲ್ಲ  .
ಡೂರಿಯನ್  ಹಣ್ಣು 




ಇಲ್ಲಿನ ಅಂಗಡಿಯಲ್ಲಿ  ನಮ್ಮೂರಿನಂತದ್ದೆ , ಪುಟ್ಟ ಬಾಳೆಹಣ್ಣು  ನೋಡಿ ಆಸೆಯಾಯಿತು.  ಅಂಗಡಿ ಹೊಕ್ಕು ಬಾಳೆ ಹಣ್ಣನ್ನೂ , ಅಲ್ಲೇ ಕಂಡ ಮ್ಯಾಂಗೋ ಸ್ಟೀನ್  ಹಣ್ಣನ್ನೂ ಕೊಂಡೆವು.  ಈ ಮ್ಯಾಂಗೋ ಸ್ಟೀನ್ ಕೂಡ  ತಿನ್ನಲು ರುಚಿಯಾಗಿರುತ್ತದೆ. ನೋಡಲು  ಮುರುಗಲು  ( ಪುನರ್ಪುಳಿ / ಕೋಕಂ) ಹಣ್ಣಿನಂತೆಯೇ  ಕಾಣುವ ಇದರ ತಿರುಳನ್ನು ತಿನ್ನಬೇಕು. ನಂಗೆ ತುಂಬಾ ಇಷ್ಟವಾಯ್ತು ಈ ಹಣ್ಣು .

ಮ್ಯಾಂಗೋ ಸ್ಟೀನ್ 



ಸರಿ, ರೂಮಿಗೆ ಬಂದು ಪ್ಯಾಕಿಂಗ್ ಮುಗಿಸಿ ಮಲಗಿದೆವು. ಬೆಳಿಗ್ಗೆ ೮ ಕ್ಕೆಲ್ಲ  ಕಾರು ಬರುವುದಿತ್ತು. ನಮ್ಮನ್ನು ಏರ್ ಪೋರ್ಟ್  ಗೆ ಕರೆದೊಯ್ಯಲು . ಬೆಳಿಗ್ಗೆ  ಬೇಗ ಎದ್ದು ತಯಾರಾಗಿ  ತಿಂಡಿ ತಿಂದೆವು. ಸಮಯಕ್ಕೆ ಸರಿಯಾಗಿ ಬಂದ ಕಾರಿನಲ್ಲಿ ವಿಮಾನ ನಿಲ್ದಾಣಕ್ಕೆ ಹೊರಟೆವು.  ಕೊನೆಯಬಾರಿಗೆ  ಲಂಕಾವಿ ಯ ರಮಣೀಯ  ಸೌಂದರ್ಯವನ್ನು ಕಣ್ಣಿನಲ್ಲಿ ತುಂಬಿಕೊಳ್ಳುತ್ತಾ  ನಿಲ್ದಾಣ ತಲುಪಿದೆವು. ಯಾವುದೇ ಸೆಕ್ಯೂರಿಟಿ ಚೆಕಿಂಗ್  ಗಲಾಟೆಯಿಲ್ಲದೆ  ಸಣ್ಣ  ಕ್ಯೂದಲ್ಲಿ ನಿಂತು  ಒಳಗೆ ಲಾಂಜ್ ನಲ್ಲಿ ಹೋಗಿ ಕುಳಿತೆವು. ಬಹುಮಟ್ಟಿಗೆ ಖಾಲಿಯೇ ಇದ್ದ  ಲಾಂಜ್ ನಿಂದ ಎದುರಿಗೆ  ವಿಮಾನಗಳ ಬರು-ಹೋಗುವಿಕೆ ಸ್ಪಷ್ಟವಾಗಿ ಕಾಣುತ್ತಿತ್ತು. ಅಲ್ಲೇ  ರನ್  ವೆ ಯ ಪಕ್ಕವೇ ಚಂದದ ಮನೆಯೊಂದು ತೋಟ , ಗದ್ದೆಗಳ ನಡುವೆ  ತಂಪಾಗಿ ಕುಳಿತಿತ್ತು .

ವಿಮಾನ ನಿಲ್ದಾಣದ  ಪಕ್ಕಕ್ಕೆ ಮನೆಯ ಮಾಡಿ ... ಶಬ್ದಕ್ಕೆ ಅಂಜಿದೊಡೆ ..... 







Add caption



ಈ ಮನೆಯವರು  ಪ್ರೈವೇಟ್  ವಿಮಾನ   ಇಟ್ಟಿದ್ದಾರೆಯೇ ?



ಲಾಂಜ್  ನಲ್ಲಿ  ನಾನು , ಮಹೇಶ್ 




ಇಬ್ಬರು ಚಿಕ್ಕ ಮಕ್ಕಳೊಂದಿಗೆ  ಪ್ರಯಾಣಿಸುತ್ತಿದ್ದ  ಜೋಡಿಯೊಂದು  ನಮಗೆ  ಸಮಯ ಕಳೆಯಲು  ನೆರವಾಯಿತು.  ನಾವೇನೂ ಅವರ ಜೊತೆ ಮಾತನಾಡಲಿಲ್ಲವಾದರೂ  ಆ ಪುಟ್ಟ ಮಕ್ಕಳ ಆಟ  ನೋಡಲು ಖುಷಿಯಾಗುತ್ತಿತ್ತು. ದೊಡ್ಡ  ಚಾಕೊಲೆಟ್   ಬಾರ್ ತಿನ್ನುತ್ತ  ಮುಖ - ಮೈ ಎಲ್ಲಾ ಚಾಕೊಲೆಟ್ ಮಾಡಿಕೊಂಡು ಅಲ್ಲೇ ಅಂಗಿಗೆ  ಕೈ ಒರೆಸಿಕೊಳ್ಳುತ್ತಿದ್ದ  ಮಕ್ಕಳನ್ನು ಕಂಡಾಗ  ಎಲ್ಲಿ ಹೋದರೂ ಮಕ್ಕಳು ಒಂದೇ ತರ ಎನಿಸಿ ನಗು ಬಂತು.

ಚಾಕೊಲೆಟ್  ಹುಡುಗ ! 


ಅಷ್ಟರಲ್ಲಿ ನಮ್ಮ ವಿಮಾನ ಬಂದಿದ್ದರಿಂದ  ಆ ಕಡೆ ಲಕ್ಷ್ಯ ಹರಿಸಿದೆವು. ವಿಮಾನವೇರಿ  ನಮ್ಮ ಸೀಟಿನಲ್ಲಿ ಕುಳಿತು  ಮುಂದಿನ  ಒಂದೂವರೆ ಗಂಟೆಯೊಳಗೆ  ನಾವು ನೋಡುವ  ಕೌಲಾಲಂ ಪುರ ದ ಬಗ್ಗೆ  ಕಾತುರದಿಂದ ಕಾಯ ತೊಡಗಿದೆವು. 

6 comments:

kalsakri said...

ಡೂರಿಯನ್ ಹಣ್ಣಿನ ಬಗ್ಗೆ ಬಿ.ಜಿ.ಎಲ್ ಸ್ವಾಮಿಯವರು 'ದೌರ್ಗಂಧಿಕಾಪರಹಣ' ಪುಸ್ತಕದಲ್ಲಿ ಬರೆದಿದ್ದರು ನಿನ್ನೆ ತಾನೇ ಓದಿದ್ದೆ . ಈಗ ನಿಮ್ಮಿಂದಾಗಿ ನೋಡಿದ ಹಾಗಾಯಿತು!

sunaath said...

ಓದಿ ಖುಶಿಯಾಯಿತು.

ಜಲನಯನ said...

ಬೆಂಗಳೂರು ಪ್ರವಾಸದ್ದು ಬರ್ಲಿ...ಅನುಭವ ಬೇಗ...
ಚನ್ನಾಗಿತ್ತು ಮಲೇಶಿಯಾ ಪ್ರವಾಸ ಕಥನ..

ಸಾಗರದಾಚೆಯ ಇಂಚರ said...

illi inthaha hannugalannu tinnuvude sogasu

bahala tasty hannugalu

langkavi ge mundina tingalu hoguttiddene

sundara baraha

ಸುಧೇಶ್ ಶೆಟ್ಟಿ said...

thumba dinagaLavarege blog kade baralaagalilla... ivattu yellavannoo ottige odhibitte... odhidhashtu malaysia ge hogabeku annuva aase hechchaguttide :)

ಈಶ್ವರ said...

ಒಳ್ಳೆ ಪ್ರವಾಸ ಕಥನ.. ಫೊಟೋಸ್ ಕೂಡ ಚೆನ್ನಾಗಿದೆ ಮೇಡಂ..