July 15, 2012

ಚೀನಾದಲ್ಲಿ ನಾನು - ಭಾಗ 2


   ಅಂತೂ  ಬೋರ್ಡಿಂಗ್ ಪಾಸ್ ಕೈಗೆ ಸಿಕ್ಕ ಮೇಲೆ .. ಲಾಂಜಿನಲ್ಲಿ  ತಮ್ಮನಿಗೆ ಫೋನ್ ಮಾಡಿದೆ .  ನಮ್ಮ ಪಾಸ್ ಪೋರ್ಟ್  - ವೀಸಾ ಅವಾಂತರಗಳನ್ನು ನೋಡಿ  ತಮಾಷೆ ಮಾಡಿಕೊಂಡು , ಮನೆಯಿಂದ ಹೊರಡುವ ಮುಂಚೆ  ಅವ ಹೇಳಿದ್ದ .. ನೀನು  ವಿಮಾನ  ಹತ್ತೋ ವರೆಗೂ  ನಾ ಬೇಕಿದ್ರೆ ಪಾರ್ಕಿಂಗ್ ನಲ್ಲಿ ಕಾಯ್ತಾ ಇರ್ತಿನೆ ... ಬೋರ್ಡಿಂಗ್ ಪಾಸ್ ಕೊಡಲ್ಲ ಅಂತ ವಾಪಸ್   ಕಳ್ಸಿದ್ರೆ  ಮನೆಗೆ ಬರೋಕೆ ಟ್ಯಾಕ್ಸಿ ಹುಡುಕಬೇಕು ಮತ್ತೆ ನೀನು  !!  ಅಂತ ನಕ್ಕಿದ್ದ .  ಬೋರ್ಡಿಂಗ್ ಪಾಸ್ ಸಿಕ್ತಪ್ಪ  ಅಂತ ಫೋನ್ ಮಾಡಿದ್ರೆ , ಯಾವ್ದಕ್ಕೂ  ವಿಮಾನ ಹೊರಟ ಮೇಲೆ  ಫೋನ್ ಮಾಡಿಬಿಡು ನಿಂದು ಗ್ಯಾರಂಟಿ ಇಲ್ಲ  ಅಂತ ನಗೋದಾ ? ಸುಮಾರು ಒಂದು ಗಂಟೆಗಳ ಕಾಲ  ಲಾಂಜಿನಲ್ಲಿ
ಅಲೆದು ರುಚಿಯಿಲ್ಲದ  ಎಸ್ ಪ್ರೆಸ್ಸೋ  ಕಾಫೀಗೆ  ೧೦೦ ರೂಪಾಯಿ ತೆತ್ತು  ಜೊತೆಗೆ  ತೆಗೆದುಕೊಂಡು ಹೋಗಿದ್ದ  ಕಾದಂಬರಿ ಓದುತ್ತಾ ಕೂತೆ.  ಮಹೇಶ್ ಗೋ ನಿದ್ದೆ ಬರ್ತಾ ಇತ್ತು. ಪಕ್ಕದ ಕುರ್ಚಿಯಲ್ಲಿ ಕೂತು ತೂಕಡಿಸೋದಾ ಬೇಡವಾ ಅಂತ ಯೋಚನೆ ಮಾಡ್ತಾ ಇದ್ರು .  ನಮ್ಮ ಸಹೋದ್ಯೋಗಿ  ಅತುಲ್  ಕೆಲ ದಿನ ಮೊದಲೇ  ಚೀನಾದ  "ಚೆಂಗ್ಡು"  ಎಂಬಲ್ಲಿಗೆ ಹೋಗಿದ್ದು   ನಮಗೆ ಚೆಂಗ್ಡು ವಿಮಾನ ನಿಲ್ದಾಣದಲ್ಲೇ ಭೇಟಿಯಾಗುವವನಿದ್ದ . ಇನ್ನು ನಮ್ಮ ಬಾಸ್ ( ಅವರು ಮಹೇಶ್ ರ ಚಿಕ್ಕಪ್ಪ ಕೂಡ ! ) ಬೆಂಗಳೂರಿಂದ  ಹೊರಟು ಸೀದಾ  ಬೀಜಿಂಗ್ ನಲ್ಲೆ ನಮ್ಮನ್ನು  ಭೇಟಿಯಾಗುವವರಿದ್ದರು . ಹೀಗಾಗಿ ಸದ್ಯ ಮುಂಬಯಿಯಿಂದ ನಾವಿಬ್ಬರೇ .  ೧.೩೦ ಕ್ಕೆ ವಿಮಾನ ಹತ್ತಲು  ಕರೆ ಬಂತು . 
ಒಂಥರಾ ಉತ್ಸಾಹದಿಂದ  ವಿಮಾನ ಹತ್ತಿ ನಮ್ಮ ಸೀಟ್ ನಲ್ಲಿ ಕುಳಿತಾಯ್ತು . ಈಗ  ಮೊಬೈಲ್  ಆಫ್ ಮಾಡುವ ಮೊದಲು  ಮತ್ತೊಮ್ಮೆ ತಮ್ಮನಿಗೆ ಫೋನ್ ಮಾಡಿದೆ . ಕೂತಾಯ್ತಪ್ಪಾ.. ಇನ್ನು ಹೋಗೋದು ಗ್ಯಾರಂಟಿ ಎಂದು . 

ನಮ್ಮ "ಏರ್ ಚೀನಾ "  ವಿಮಾನ  ಬೆಳಗಿನ ಜಾವ ೨ ಗಂಟೆಗೆ ಅಂತು ಮೇಲೇರಿತು .   ೩.೩೦ ಯ ಹೊತ್ತಿಗೆ  ಗಗನ ಸಖಿ ಜ್ಯೂಸ್ ಕೊಡಲು ಬಂದಾಗ ,ಮಹೇಶ್ ಹಾಯಾಗಿ ಮಲಗಿದರೆ  ನಾನೂ ಅರೆ ಬರೆ  ನಿದ್ರಾ ಸ್ಥಿತಿಯಲ್ಲಿದ್ದೆ .  ಕಿತ್ತಳೆ ರಸ ಕುಡಿದು  ಕಾಲು ಗಂಟೆಯಲ್ಲಿ ಊಟ ಹಾಜರಾಯಿತು . ನಾವು ಸಸ್ಯಾಹಾರಿ  ಊಟ ಬೇಕೆಂದು  ಟಿಕೆಟ್ ಬುಕ್ ಮಾಡುವಾಗಲೇ  ವಿನಂತಿಸಿದ್ದರಿಂದ , ನಮ್ಮ 'ಸ್ಪೆಷಲ್  ಮೀಲ್ ' ಹಾಜರಾಯಿತು . ಪುಲಾವ್,  ರಾಜಮಾ  ಪಲ್ಯ, ದಾಲ್ ,  ಸಲಾಡ್ , ಒಂದು ಪುಟ್ಟ  ' ಬನ್ ' , ಅದಕ್ಕೆ ಸವರಿಕೊಳ್ಳಲು ಬೆಣ್ಣೆ  , ಮತ್ತೆ ಒಂದು ಸ್ವೀಟ್  ಇವಿಷ್ಟನ್ನೋಳಗೊಂಡ  ಊಟದ ಟ್ರೇ ನಮ್ಮ ಮುಂದೆ ಬಂತು .  ಊಟದ ಕೊನೆಯಲ್ಲಿ  ಎಲ್ಲರಿಗೂ ಟೀ , ಕಾಫೀ , ಕೋಕ್ , ಪೆಪ್ಸಿ, ವೈನ್   ಅಥವಾ ಬೇರೆ ಯಾವುದೇ  ಆಲ್ಕೋ ಹಾಲ್  ಪಾನೀಯಗಳ  ಆಯ್ಕೆ ಇತ್ತು . ಊಟ ಮಾಡಿ ಕಾಫೀ ಕುಡಿದು  ಬೆಳಗಿನ ಜಾವ ೪ ಗಂಟೆಗೆ ಮಲಗುವ ಪ್ರಯತ್ನ ಮಾಡ್ತಾ ಇದ್ದೆ .

ಮುಂಬಯಿಯಿಂದ  ಬೀಜಿಂಗ್ ಗೆ  ನೇರ ವಿಮಾನ ಇಲ್ದೆ  ಇರೋದ್ರಿಂದ ನಾವು ಚೀನಾದ ಮತ್ತೊಂದು ನಿಲ್ದಾಣ " ಚೆಂಗ್ಡು " ದಲ್ಲಿ   ವಿಮಾನ ಬದಲಾಯಿಸಬೇಕಿತ್ತು  .ಮುಂಬಯಿಯಿಂದ ಚೆಂಗ್ಡು ಗೆ  ಐದೂವರೆ ಗಂಟೆಗಳ  ಪ್ರಯಾಣ . ಆದರೆ , ಚೀನಾ  ನಮಗಿಂತ ಎರಡೂವರೆ ತಾಸು  ಮುಂದೆ ಇರುವುದರಿಂದ  ನಾವು ಅಲ್ಲಿನ  ಸಮಯದ ಪ್ರಕಾರ  ಬೆಳಗಿನ  ೮.೫೦ ಕ್ಕೆ ತಲುಪಲಿದ್ದೆವು . 
ಇನ್ನೇನು ಸ್ವಲ್ಪ ನಿದ್ದೆ ಹತ್ತಬಹುದು ಎನ್ನುವಷ್ಟರಲ್ಲಿ  ನಾವು ಕೆಲವೇ ನಿಮಿಷಗಳಲ್ಲಿ  ಚೆಂಗ್ಡು ವಿನಲ್ಲಿ  ಇಳಿಯಲಿದ್ದೇವೆ  ಎಂದು  ಪ್ರಸಾರವಾಯಿತು .   ಮೇಲಿಂದ ನೋಡುವಾಗಲೇ 'ಚೆಂಗ್ಡು  ' ಸುಂದರವಾಗಿ ಕಾಣುತ್ತಿತ್ತು .  ಸುವ್ಯವಸ್ಥಿತವಾಗಿ  ಪ್ಲಾನ್ ಮಾಡಿದ  ರಸ್ತೆಗಳು ,  ಪ್ರಕೃತಿ ಸೌಂದರ್ಯವನ್ನು ಕಾದುಕೊಂಡು   ಅಧುನಿಕತೆಯನ್ನೂ ಮೇಳೈಸಿಕೊಂಡಂತೆ  ನನಗೆ ಅನಿಸಿತು . 

ವಿಮಾನ ನಿಲ್ದಾಣ ಅತ್ಯಂತ ಆಧುನಿಕವಾಗಿ  ಆಕರ್ಷಕವಾಗಿ ಕಟ್ಟಲ್ಪಟ್ಟಿದೆ . ಅದು ಚೀನಾದ ಸಣ್ಣ ವಿಮಾನ ನಿಲ್ದಾಣಗಳಲ್ಲಿ ಒಂದಂತೆ ! ಆದರೆ  ಬೆಂಗಳೂರಿನ  ಹಳೆಯ  ವಿಮಾನ ನಿಲ್ದಾಣಕ್ಕಿಂತ  ಅದೆಷ್ಟೋ ಪಟ್ಟು ದೊಡ್ಡದಾಗಿತ್ತು ! ಹೆಚ್ಚು ಪ್ರಯಾಣಿಕರಿಲ್ಲದೆ , ಖಾಲಿ ಖಾಲಿಯಾಗಿದ್ದ ನಿಲ್ದಾಣದಲ್ಲಿ  ಹೆಚ್ಚಿನ ಗಡಿಬಿಡಿ  ಇಲ್ಲದೆ ಸುಲಭವಾಗಿ  ಎಲ್ಲಾ ಔಪಚಾರಿಕತೆ ಮುಗಿಸಿ  ಮುಂದಿನ ವಿಮಾನಕ್ಕೆ ಕಾದು ಕುಳಿತೆವು .  
ಇಲ್ಲಿಂದ ಬೀಜಿಂಗ್  ಗೆ ಹೋಗುವ ವಿಮಾನಕ್ಕೆ  ಸುಮಾರು ಒಂದೂವರೆ ಗಂಟೆಗಳ  ಬಿಡುವಿತ್ತು . ನಮ್ಮ ಸಹೋದ್ಯೋಗಿ ಅತುಲ್ ನಮಗೆ ಇಲ್ಲಿ ಭೇಟಿಯಾಗೊನಿದ್ದ . ನಂತರ ನಾವು ಮೂವರು  ಬೀಜಿಂಗ್ ಗೆ ಒಟ್ಟಿಗೆ ಪ್ರಯಾಣ ಮಾಡುವರಿದ್ದೆವು. ಹತ್ತು ನಿಮಿಷಗಳಲ್ಲಿ  ಅತುಲ್ ಬಂದ . ಸರಿ  ಅದೂ ಇದೂ ಮಾತಾಡುತ್ತ ಕುಳಿತಿದ್ದಾಗ  ನಮ್ಮ ವಿಮಾನ  ಹತ್ತಲು ಕರೆಯೂ ಬಂತು . 

ಎಲ್ಲಾ ವಿಮಾನನಿಲ್ದಾಣ ಗಳಲೂ  ಇರುವಂತೆ  ಆದ್ಯತೆಗೆ ಅನುಗುಣವಾಗಿ  ಸೀಟ್ ನಂಬರ್ ಅನ್ನು ಸರದಿಯಲ್ಲಿ ಕರೆಯಲಾಯಿತು .  ಆದ್ಯತೆ ಎಂದರೆ  ಚಿಕ್ಕ ಮಕ್ಕಳೊಂದಿಗೆ ಪ್ರಯಾಣಿಸುವವರು , ವೃದ್ಧರು , ಅಂಗವಿಕಲರು  ಇವರಿಗೆ ಮೊದಲ ಆದ್ಯತೆಯಲ್ಲಿ ವಿಮಾನದೊಳಗೆ ಕಳುಹಿಸಲಾಗುತ್ತದೆ . ಆನಂತರ  ಬಿಸಿನೆಸ್ ಕ್ಲಾಸ್ , ಫರ್ಸ್ಟ್  ಕ್ಲಾಸ್  ಪ್ರಯಾಣಿಕರು ಆ ನಂತರ ನಮ್ಮಂತಹ ' ಎಕಾನಮಿ ಕ್ಲಾಸ್" ನವರು ಸೀಟ್  ಕ್ರಮಾಂಕಕ್ಕೆ ಅನುಗುಣವಾಗಿ ವಿಮಾನ ಹತ್ತಬೇಕು . ಬಾಯಾರುತ್ತಿತ್ತು. ಕಾಫೀ ಅದರೂ ಕುಡಿಯೋಣ ಅಂದ್ರೆ ವಿಮಾನ ಬಂದಾಗಿತ್ತು . ಸರಿ ಹೇಗೂ ವಿಮಾನದಲ್ಲೇ ಕೊಡ್ತಾರಲ್ಲ ಎಂದುಕೊಂಡು  ವಿಮಾನ ಹತ್ತಿದೆವು. 

ಚೆಂಗ್ಡು ದಿಂದ ಬೀಜಿಂಗ್ ಗೆ  ಎರಡೂವರೆ ಗಂಟೆಗಳ ಪ್ರಯಾಣ . ಸುಮಾರು ಒಂದು ಗಂಟೆ ಕಳೆದರೂ ಗಗನ ಸಖಿಯ ಪತ್ತೆ ಇಲ್ಲ !  ಓಹೋ , ಇಷ್ಟು ಚಿಕ್ಕ ಪ್ರಯಾಣ  ಎಂದು  ಏನೂ ಕೊಡ ಲಿಕ್ಕಿಲ್ಲವೇನೋ ಎಂದು ನಿರಾಶಳಾಗಿ   ನೀರು ಕೇಳಿ  ಕುಡಿದೆ. ಮತ್ತೆ ಹತ್ತು ನಿಮಿಷಗಳ ಲ್ಲಿ  ಊಟದ ಟ್ರೇ  ಬಂತು .ಅಂಟು  ಅಂಟಾದ ಅನ್ನ, ಜೊತೆಗೆ ಬೇಯಿಸಿದ ಬಸಳೆ ಸೊಪ್ಪು , ಬ್ರೋಕೊಲಿ , ಕ್ಯಾಬೇಜ್  ! ( ಸಸ್ಯಾಹಾರಿ ಊಟ !) ಬನ್  , ಬೆಣ್ಣೆ   , ಬೇಯಿಸಿದ ಶೇಂಗಾ ಬೀಜ  ಮತ್ತು ಕೇಕ್ ನಂಥ  ಒಂದು ತಿನಿಸು . ತಿಂದು  ಬಿಸಿ ಬಿಸಿ ಕಾಫೀ ಕುಡಿದು ಮುಗಿಸಿದ್ದಾಯ್ತು . ಎದುರಿಗೆ   ಯಾವುದೋ ಚೈನೀಸ್  ಸಿನೆಮಾ ನಡೆಯುತ್ತಿತ್ತು . ನಮ್ಮ ಮಹಾಭಾರತದ ಥರಾನೆ   ಏನೋ  ಪೌರಾಣಿಕವೋ, ಐತಿಹಾಸಿಕವೋ  ಆಗಿರಬೇಕು .  ಎರಡು ಗಂಟೆಯ ಸಿನೆಮಾದಲ್ಲಿ ಒಂದು ವರೆ ಗಂಟೆಗೂ ಹೆಚ್ಚು ಹೊತ್ತು  ಯುದ್ಧವೇ ಇತ್ತು ! 
ಕುದುರೆಗಳ ಮೇಲೆ  ಸಾವಿರಾರು ಜನ  ಕತ್ತಿ, ಕೊಡಲಿ ಬೀಸುತ್ತಾ  ಹೊಡೆದಾಡುತ್ತಿದ್ದರು .  ಹೊಡೆದಾಟದ ಸಿನೆಮಾ ಎಂದರೆ ಖುಷಿ ಪಡುವ ಮಹೇಶ್ ಗಂತೂ  ಒಂಥರಾ ಹಬ್ಬ ! 
ಅಷ್ಟರಲ್ಲಿ  ನಾವು ಬೀಜಿಂಗ್ ಸಮೀಪಿಸಿದ್ದೆವು . ಮೇಲಿಂದ  ಚೀನಾದ ಮಹಾಗೋಡೆಯನ್ನು ನೋಡಬೇಕೆಂದರೆ  ಮೋಡ ಮುಸುಕಿತ್ತು ! 


ಟರ್ಮಿನಲ್ 3  ಪಕ್ಷಿ ನೋಟ 

ಬೀಜಿಂಗ್ ವಿಮಾನ ನಿಲ್ದಾಣ ಪ್ರಪಂಚದ  ಬಹು  "ಬ್ಯುಸಿ " ವಿಮಾನ ನಿಲ್ದಾನಗಳಲ್ಲೊಂದು .( ಪ್ರತಿದಿನ ಸರಾಸರಿ ೧೪೭೫ ವಿಮಾನಗಳು ಬಂದು ಹೋಗಿ ಮಾಡುತ್ತವೆ) . ಇಲ್ಲಿಯ  ಅತ್ಯಂತ ಸುಸಜ್ಜಿತ , ಆಧುನಿಕ  ಹಾಗು ಸುವ್ಯವಸ್ಥಿತವಾದ  ಈ ಟರ್ಮಿನಲ್  ೩ ರಲ್ಲಿ ಯೇ ನಾವು ಇಳಿದಿದ್ದು . ವಿಮಾನ  ಭೂ ಸ್ಪರ್ಶ ಮಾಡಿ  ಅದರ  ನಿಯೋಜಿತ ಜಾಗದಲ್ಲಿ ನಿಲ್ಲಲು ಸುಮಾರು ಒಂದೂವರೆ ಗಂಟೆಗಳೇ ಬೇಕಾದವು  . ಅಷ್ಟು ಉದ್ದದ ರನ್ ವೇ  ! ಪ್ರತಿಯೊಂದರಲ್ಲೂ   ಹಿರಿಮೆಯನ್ನು ಮೆರೆಯ ಬಯಸುವ ಚೀನಾ , ಒಲಿಂಪಿಕ್ಸ್  ಸಮಯದಲ್ಲಿ   ನಿರ್ಮಿಸಿದ ವಿಮಾನ ನಿಲ್ದಾಣ ದ " ಟರ್ಮಿನಲ್ ೩  "    ಕಟ್ಟಡ    ,  16,000,000  ಚದುರಡಿಗಳಷ್ಟು  ಬಳಕೆಯ  ಜಾಗ ಹೊಂದಿದ್ದು  ಪ್ರಪಂಚದ  ಎರಡನೇ ಅತೀ ದೊಡ್ಡ  ಟರ್ಮಿನಲ್  ಎಂಬ ಹೆಗ್ಗಳಿಕೆ ಪಡೆದಿದೆ . ( ಮೊದಲನೆಯದು  ದುಬಾಯಿಯಲ್ಲಿದೆ ) . 
243  ಲಿಫ್ಟ್ , ಎಲಿವೇಟರ್  ಹಾಗೂ  ವಾಕ್ ವೇಗಳು  ( ಸ್ವಯಂ ಚಾಲಿತ  ನಡೆ ದಾರಿ ಎನ್ನೋಣವೇ? )  ಈ ಟರ್ಮಿನಲ್ ನಲ್ಲಿವೆ . ಇಲ್ಲಿಂದಲೇ   ಬೀಜಿಂಗ್ ಸಿಟಿ ಸೆಂಟರ್  ಗೆ   ರೈಲು , ಪ್ರತ್ಯೇಕ  ಎಕ್ಸ್  ಪ್ರೆಸ್  ರಸ್ತೆ ಇದೆ . ಭವ್ಯವಾದ  ನಿಲ್ದಾಣವನ್ನು ಕಣ್ಣಲ್ಲಿ ತುಂಬಿಕೊಳ್ಳುತ್ತಾ  ಹೆಚ್ಚಿನ ಯಾವುದೇ ತೊಂದರೆಯಿಲ್ಲದೆ ಎಲ್ಲಾ ಸೆಕ್ಯೂರಿಟಿ  ಚೆಕ್ ಗಳನ್ನು  ಮುಗಿಸಿ  ಹೊರ ಬಂದೆವು . 

ಟರ್ಮಿನಲ್  3 ರ  ಒಂದು ದೃಶ್ಯ 

ನಮ್ಮ ಹೋಟೆಲ್ ಗೆ ಹೋಗಲು  ಟ್ಯಾಕ್ಸಿ   ಬೇಕಿತ್ತು.    Pre paid   ಟ್ಯಾಕ್ಸಿ ಯವರನ್ನು ವಿಚಾರಿಸಿದೆವು . ಅಲ್ಲಿಂದ ನಮ್ಮ  ಮೊದಲ  ಮುಖ್ಯ ಅಡಚಣೆ ಆರಂಭವಾಯ್ತು  !  ಅಲ್ಲಿ ಯಾರಿಗೂ ಇಂಗ್ಲಿಶ್ ಬಾರದು . ನಿಲ್ದಾಣದ ಅಧಿಕಾರಿಗಳಿಗೂ ಸಹ ! ನಮ್ಮ ಬಳಿಯಿದ್ದ ಹೋಟೆಲ್  ನವರ  ಇ -ಮೇಲ್ ನಲ್ಲಿ ವಿಳಾಸ  ಚೀನೀ ಭಾಷೆಯಲ್ಲಿಯೂ ಇದ್ದ ಕಾರಣ  ಟ್ಯಾಕ್ಸಿ ಚಾಲಕರಿಗೆ  ನಮಗೆ ಎಲ್ಲಿಗೆ ಹೋಗ ಬೇಕೆಂಬುದು ತಿಳಿಯುತ್ತಿತ್ತಾದರೂ .. ಮುಂದೆ ಅವರೇನು ಹೇಳುತ್ತಿದ್ದಾರೆಂಬುದು .. ನಮಗೆ  ಸ್ವಲ್ಪವೂ ಅರ್ಥವಾಗುತ್ತಿರಲಿಲ್ಲ  ! ಸುಮಾರು ೨೦ ನಿಮಿಷಗಳ ಕಾಲ ಕೈ ಬಾಯಿ  ಸನ್ನೆ ಬಳಸಿ  ವಿವರಿಸುವ ಪ್ರಯತ್ನ ಮಾಡಿದೆವು . ಕೊನೆಗೆ  ಥಟ್ಟನೆ  ತಲೆಯಲ್ಲಿ ಟ್ಯೂಬ್ ಲೈಟ್ ಹತ್ತಿ , ಅತುಲ್ , ಆತನ  ಮೊಬೈಲ್ ನಿಂದ  ನಮ್ಮ  ಹೋಟೆಲ್ ಗೆ ಕರೆ ಮಾಡಿದ . ಪುಣ್ಯಕ್ಕೆ ಅವರಿಗೆ ಇಂಗ್ಲಿಶ್ ಬರುತ್ತಿದ್ದು  ಅವರಿಗೆ ನಮ್ಮ  ಕಷ್ಟವನ್ನು ವಿವರಿಸಿದ.  ಹೋಟೆಲ್ ನವನು  ಟ್ಯಾಕ್ಸಿ ಡ್ರೈವರ್ ಜೊತೆ ಮಾತನಾಡಿ  ಅಂತು  ಎಲ್ಲಾ  ಸರಿ ಹೋಯಿತು.  ನಾವು ಮೂವರು ಹಾಗು ನಮ್ಮ ಲಗೇಜ್ ಅನ್ನು ಹೊತ್ತ ಟ್ಯಾಕ್ಸಿ ಹೋಟೆಲ್ ನತ್ತ ಹೊರಟಿತು  . 


( ಅಂಕಿ ಅಂಶಗಳು  , ಚಿತ್ರ ಕೃಪೆ  : ಅಂತರ್ಜಾಲ ) 


6 comments:

ಭಡ್ತಿ said...

ಭಾಗ ೩ ರ ಕಾಯುತ್ತ
ಶ್ಯಾಮ

sunaath said...

Very interesting details.

Badarinath Palavalli said...

ಅತ್ಯುತ್ತಮ ಪ್ರವಾಸ ಕಥನ ೧ ನೇ ಭಾಗ ಓದಿ ಎರಡನೇ ಭಾಗಕ್ಕೆ ಬಂದೆ. ಸಚಿತ್ರ ಬರಹ.

ನನ್ನ ಅಜ್ಞಾತ ಬ್ಲಾಗಿಗೂ ಸ್ವಾಗತ.

ವಿ.ರಾ.ಹೆ. said...

ಅವರಿಗೆ ಇಂಗ್ಲೀಷ್ ಬರುತ್ತಿರಲಿಲ್ಲ ಎನ್ನುವುದಕ್ಕಿಂತ ನಿಮಗೆ ಚೈನೀಸ್ ಬರುತ್ತಿರಲಿಲ್ಲ ಎನ್ನಿ ! .:)

ಚಿತ್ರಾ said...

ಶ್ಯಾಮ,ಸುನಾಥ್ ಕಾಕಾ , ಬದರಿನಾಥ್ ,
ಧನ್ಯವಾದಗಳು

ಚಿತ್ರಾ said...

ವಿಕಾಸ್,

ನೀ ಹೇಳಿದ್ದೂ ಪೂರ್ತಿ ಸುಳ್ಳಲ್ಲ ಬಿಡು ! ಹ ಹ ಹ ..