July 4, 2012

ಚೀನಾದಲ್ಲಿ ನಾನು !ಚೀ
ನಾ  .. ಅಂದ್ರೆ ನಂಗೆ ಒಂಥರಾ ನಿಗೂಢ ,ಕೌತುಕಮಯ  ದೇಶ ! ಅಲ್ಲಿಯ ಬಗ್ಗೆ ಬಹಳಷ್ಟು ಕೇಳಿ  , ಶಾಲಾ ದಿನಗಳಲ್ಲೂ  ಚೀನೀಯರ ಬಗ್ಗೆ ಓದಿ ,ಚೀನಾ ಅಂದರೆ ಏನೇನೋ ಕುತೂಹಲ . 
ಹ್ಯು ಎನ್ ತ್ಸಾಂಗ್ ( ಚೀನಿಯರ  ಉಚ್ಚಾರಣೆ  -  Xuanzang  ) ನ ಭಾರತ ಪ್ರವಾಸದ ಬಗ್ಗೆ ಕನ್ನಡ ಶಾಲಾ ದಿನಗಳಲ್ಲಿ ಓದುವಾಗ ಆತನ ಹೆಸರು ಹೇಳಲು ಬರದೆ ಒದ್ದಾಡಿದ್ದು ಇತ್ತು . 
ದೊಡ್ದಾದಂತೆ , ಚೀನಾ ದ ಆಕ್ರಮಣಕಾರೀ ಧೋರಣೆಯ ಬಗ್ಗೆ ಆವೇಶದಿಂದ ಮಾತಾಡುವಾಗ  , ಮಾರ್ಕೆಟ್ ನಲ್ಲಿ ಅತೀ ಕಡಿಮೆ ಬೆಲೆ ಗೆ  ಸಿಗುವ  ' ಮೇಡ್ ಇನ್ ಚೈನಾ ' ವಸ್ತುಗಳ  ಗುಣಮಟ್ಟದ  ಬಗ್ಗೆ , ಜನ ಸಂಖ್ಯೆಯ  ಬಗ್ಗೆ ತಮಾಷೆ  ಮಾಡಿ ನಗುವಾಗ , ಜೊತೆಯಲ್ಲೇ  ಚೀನಾದ ವೈಜ್ಞಾನಿಕ ಸಾಧನೆಗಳ ಬಗ್ಗೆ ಓದುವಾಗ .. ಆ ದೇಶದ ಬಗ್ಗೆ  ಇನ್ನಷ್ಟು ಕುತೂಹಲ ಬೆಳೆಯುತ್ತಲೇ ಹೋಗುತ್ತಿತ್ತು . 
ಅಲ್ಲಿ ಎಲ್ಲರೂ ಒಂದೇ ತರ ಕಾಣ್ತಾರಂತೆ , ಹೆಸರುಗಳು  ಚಿಂಗ್ , ಚಾಂಗ್, ವಾಂಗ್ ಅಂತಾನೆ ಇರತ್ತಂತೆ , ತುಂಬಾ ಕುಳ್ಳರಂತೆ  , ಹೀಗೆ  ಅಂತೆ -ಕಂತೆಗಳು ಬೆಳೆಯುತ್ತಲೇ ಹೋಗುತ್ತಿದ್ದವು . ನೇಪಾಳಿಗಳು , ಟಿಬೆಟಿಯನ್ನರು  ಎಲ್ಲರೂ ನಮ್ಮ ಪಾಲಿಗೆ ಚೀನೀಯರೇ ಆಗಿ ಬಿಟ್ಟಿದ್ದರು . 
ಈಗ ,  ನನ್ನ ಉದ್ಯೋಗದ ಭಾಗವಾಗಿ ವಿವಿಧ ದೇಶಗಳೊಂದಿಗೆ  ವ್ಯವಹರಿಸುವಾಗ  ಚೀನಾ ಕೂಡ  ಇದ್ದಿದ್ದು  ನಂಗೊಂಥರಾ  ಖುಷಿಯಾಗುತ್ತಿತ್ತು . ಕ್ರಮೇಣ  ಅಲ್ಲಿಯ ಕೆಲವು ಕಂಪನಿಗಳ ಅನೇಕ ವ್ಯಕ್ತಿಗಳ ಜೊತೆ ಸ್ನೇಹ ಬೆಳೆದು  ನಮ್ಮ ನಡುವೆ  ಎರಡು ದೇಶಗಳ ಬಗ್ಗೆ ವಿಚಾರವಿನಿಮಯ ನಡೆಯುತ್ತಿತ್ತು. 

ಹೀಗಿರುವಾಗ ನನಗೆ  ಸ್ವತಃ ಚೀನಾಕ್ಕೆ ಹೋಗುವ ಅವಕಾಶ ಕೂಡಿ ಬಂತು . ಬೀಜಿಂಗ್ ನಲ್ಲಿ ನಡೆಯಲಿರುವ ಅಂತರಾಷ್ಟ್ರೀಯ " ವೆಲ್ಡಿಂಗ್  ಮತ್ತು ಕಟಿಂಗ್  ಎಕ್ಸಿಬಿಶನ್  '   ESSEN 2012 ಅನ್ನು ನೋಡಲು ನನ್ನ ಸಹೋದ್ಯೋಗಿ ಹಾಗು ನಮ್ಮ ಬಾಸ್ ಜೊತೆಗೆ   ನಾನೂ , ಮಹೇಶ್  ಇಬ್ಬರು ಹೋಗುವುದು  ಅಂತ ಕಂಪನಿಯವರು ತಿಳಿಸಿದಾಗ ನನ್ನ ಕನಸಿಗೆ ಮತ್ತೆ ರೆಕ್ಕೆ ಮೂಡಿತು  !

ನನ್ನ ಪ್ರವಾಸ ಆರಂಭವಾಗುವುದಕ್ಕು ಮುಂಚೆ ಒಂದು ಚಿಕ್ಕ ಕಥೆಯಿದೆ . 
ನನ್ನ ಪಾಸ್ ಪೋರ್ಟ್ ಅವಧಿ  ಆಗಸ್ಟ್ ತಿಂಗಳಲ್ಲಿ  ಮುಗೀತಾ  ಇದ್ದಿದರಿಂದ   ಮಾರ್ಚ್ ನಲ್ಲಿ ನವೀಕರಣಕ್ಕೆ ಅರ್ಜಿ ಹಾಕಿದ್ದೆ. ಅಂತೂ ಏಪ್ರಿಲ್  ೨ನೆ ತಾರೀಖಿಗೆ ಪೊಲೀಸ್ ವೆರಿಫಿಕೇಶನ್  ಗೆ ಬಂದು ಅಂದೇ ಪೊಲೀಸ್ ಸ್ಟೇಶನ್ ಗೆ ಹೋಗಿ  ಸಂಬಂಧಿಸಿದ  ದಾಖಲೆ ಪತ್ರ ತೋರಿಸಿದ್ದಾಯ್ತು.  ಅಲ್ಲಿ ಬಾಯಿ ಬಿಟ್ಟೆ ಕೇಳಿದ  ದಕ್ಷಿಣೆ  ಕೊಟ್ಟಿದ್ದಾಯ್ತು.  ಮರುದಿನವೇ ನಮ್ಮ ಫೈಲ್  ಅನ್ನು  ಕಳಿಸುವುದಾಗಿ , ಆತ ಭರವಸೆ ನೀಡಿದ್ದು ಆಯ್ತು. 
ಅಷ್ಟರಲ್ಲೇ  ಚೀನಾ ಕ್ಕೆ ಹೋಗಲು ತಯಾರಾಗಬೇಕೆಂದು ಸೂಚನೆ ಬಂದಾಗ ನಮ್ಮ ಗಡಿಬಿಡಿ ಆರಂಭವಾಯ್ತು. ಬ್ಯಾಗೇನೋ ತುಂಬಿಸಿ ಇಡಬಹುದು. ಆದರೆ ಪಾಸ್ ಪೋರ್ಟೆ ಇಲ್ಲದೇ  ವೀಸಾ, ಟಿಕೆಟ್ , ಹೋಟೆಲ್ ಬುಕಿಂಗ್  ಇತ್ಯಾದಿ ಮಾಡುವುದಾದರೂ ಹೇಗೆ? ಹೇಗೂ ಪೋಲಿಸ್ ವೆರಿಫಿಕೆಶನ್ ಆಗಿದ್ದರಿಂದ  ಹೆಚ್ಚೆಂದರೆ ೧೦ ದಿನಗಳೊಳಗೆ  ಪಾಸ್ ಪೋರ್ಟ್ ಕೈಗೆ ಸಿಗಬಹುದು . ತೊಂದರೆ ಆಗಲಿಕ್ಕಿಲ್ಲ ಅಂತ  ಸಮಾಧಾನ ಮಾಡ್ಕೊಂಡೆವು . ದಿನಾ  ಪಾಸ್ ಪೋರ್ಟ್ ನ ವೆಬ್ ಸೈಟ್ ಚೆಕ್ ಮಾಡೋದು   , ಅದರಲ್ಲಿ  ಇನ್ನು ಪೋಲಿಸ್ ರಿಪೋರ್ಟ್ ಸಿಕ್ಕಿಲ್ಲ ಅನ್ನೋ ಸ್ಟೇಟಸ್ ನೋಡಿ ನಿರಾಶೆಯಾಗೋದು  ನಡೀತಾ ಇತ್ತು. ಎಪ್ರಿಲ್ ತಿಂಗಳು ಮುಗೀತಾ ಬಂದರೂ ಪಾಸ್ ಪೋರ್ಟ್ ನ ಪತ್ತೆಯೇ ಇಲ್ಲದಾಗ ನಮಗೆ ಕಳವಳ ಶುರುವಾಯ್ತು . ನಂತರ ನಮಗೆ ಗೊತ್ತಿದ್ದ ಕೆಲವು ಏಜೆಂಟ್  ರಲ್ಲಿ ವಿಚಾರಿಸಿದಾಗ  ತಿಳಿದ ಸುದ್ದಿ ಗಾಬರಿ ತಂದಿತು. ಇಲ್ಲಿಯ ಪಾಸ್ ಪೋರ್ಟ್ ಆಫೀಸನ್ನು  ಸ್ಥಳಾಂತರಿಸುತ್ತಿದ್ದಾರೆ ಮತ್ತು ಪಾಸ್ ಪೋರ್ಟ್ ಸಂಬಂಧಿತ ಕಾರ್ಯಗಳನ್ನು ಖಾಸಗಿ ಸಂಸ್ಥೆಗೆ ವಹಿಸಿಕೊಡಲಾಗುತ್ತದೆ ಆದ್ದರಿಂದ  ಪಾಸ್ ಪೋರ್ಟ್  ವಿಲೇವಾರಿ ಸದ್ಯಕ್ಕೆ ಸ್ಥಗಿತಗೊಂಡಿದೆ  ಎಂದು ತಿಳಿದಾಗ ನಾವು ಭೂಮಿಗಿಳಿದೆವು.  

ಆ ಹೊತ್ತಿಗೆ ನನ್ನ ಸಹೋದ್ಯೋಗಿ ನೆರವಾದ. ಆತನ ತಮ್ಮನಿಗೆ ಒಮ್ಮೆ ಬಹಳ ತುರ್ತಾಗಿ ಪಾಸ್ ಪೋರ್ಟ್ ಬೇಕಾಗಿತ್ತು ಆದರೆ ಯಾವುದೋ ಕಾರಣಗಳಿಂದ   ತಡವಾಗುತ್ತಿದ್ದಾಗ ಏಜೆಂಟ್ ಒಬ್ಬರ ಮೂಲಕ ಪರಿಚಯವಾದ  ಒಬ್ಬ ವ್ಯಕ್ತಿ  ಕೇವಲ ೩ ದಿನಗಳಲ್ಲಿ ಪಾಸ್ ಪೋರ್ಟ್ ಕೈಗೆ ಬರುವಂತೆ ಮಾಡಿಕೊಟ್ಟ  ಎಂದು ಹೇಳಿ ಆ ವ್ಯಕ್ತಿಯ ಫೋನ್ ನಂಬರ್ ಕೊಟ್ಟ . ತಡಮಾಡದೆ ಆತನನ್ನು ಸಂಪರ್ಕಿಸಿದೆವು . ಆತ ಹೇಳಿದಂತೆ  , ನಮ್ಮ ಅರ್ಜಿ ದಾಖಲಾದ  ಪಾವತಿ ,  ತುರ್ತಾಗಿ ಪಾಸ್ ಪೋರ್ಟ್ ಕೊಡಲು ಕಂಪನಿಯಿಂದ ಶಿಫಾರಸು ಪತ್ರ   ಹಾಗು  ೨ ಫೋಟೋ ತೆಗೆದುಕೊಂಡು ಹೋಗಿ  ಮಹೇಶ್ ಆತನನ್ನು ಭೇಟಿಯಾದರು . ಅದನ್ನೆಲ್ಲ ತೆಗೆದುಕೊಂಡು ಒಮ್ಮೆ ಚೆಕ್ ಮಾಡಿದಾತ ಮರುದಿನ ಪಾಸ್ ಪೋರ್ಟ್ ಆಫೀಸಿಗೆ ಇಬ್ಬರೂ  ಬರುವಂತೆ ಹೇಳಿದ. ಸರಿ ಮರುದಿನ ಮತ್ತೆ ಅಲ್ಲಿಗೆ ಹೋಗಿ , ಕ್ಯೂದಲ್ಲಿ ನಿಂತಾಯಿತು . ನಮಗೆ ಕ್ಯೂದಲ್ಲಿಯೇ ನಿಲ್ಲುವಂತೆ ಹೇಳಿದವನು ತಾನು ಪಾಸ್ ಪೋರ್ಟ್ ಆಫೀಸರ್  ಬಳಿಗೆ  ಹೋಗಿ ಮಾತಾಡಿ  ಕೆಲ ನಿಮಿಷಗಳಲ್ಲಿ ನಮ್ಮ ಫೈಲ್ ಆಫೀಸರ್ ನ ಟೇಬಲ್ ಬಳಿಗೆ ಬರುವಂತೆ ಮಾಡಿದ. ಸುಮಾರು ಅರ್ಧ ಗಂಟೆಯ ಬಳಿಕ ನಮಗೆ ಬುಲಾವ್ ಬಂತು . ಅಲ್ಲಿ , ನಮ್ಮ ಅರ್ಜಿಯನ್ನು ಪರಿಶೀಲಿಸಿದ ಆಫೀಸರ್  ನಾವು ಹೋಗುವ ಕಾರಣವನ್ನು ಅವಶ್ಯಕತೆಯನ್ನೂ  ಪ್ರಶ್ನಿಸಿ , ನಮ್ಮ ಸಹಿ ತೆಗೆದುಕೊಂಡು ಆಚೆ ಕಳಿಸಿದರು. ಹೊರಗೆ ಮತ್ತೆ ಭೇಟಿಯಾದ  ಈ ವ್ಯಕ್ತಿ ,  ಚಿಂತೆ ಬೇಡ ೨ ದಿನಗಳಲ್ಲಿ ನಿಮಗೆ ಪಾಸ್ ಪೋರ್ಟ್  ಕೈಗೆ ಬರುತ್ತದೆ , ನೀವೀಗ ಮನೆಗೆ ಹೋಗಿ ಎಂದು  ಭರವಸೆ ನೀಡಿದ .  ಹಾಂ , ಇದಕ್ಕೆ ಸೂಕ್ತ ದಕ್ಷಿಣೆಯನ್ನು  ಕೊಟ್ಟಿದ್ದು ಬೇರೆ ವಿಷಯ . 

ಅದಾಗಲೇ  ಮಂಗಳವಾರ ,೨೩ ನೇ ತಾರೀಖು . ನಮಗೆ ೨ನೆ ತಾರೀಖು ಬೆಳಗಿನ ಜಾವ ಹೊರಡಲೇ ಬೇಕಿತ್ತು .  ಅಷ್ಟರಲ್ಲಿ ವೀಸಾ ಬೇರೆ ಆಗಬೇಕು ! ಎಷ್ಟೇ ಕಾತುರವಿದ್ದರೂ ಕಾಯದೆ ವಿಧಿಯಿಲ್ಲ !  ಗುರುವಾರ ಮಧ್ಯಾಹ್ನ ಆ ವ್ಯಕ್ತಿಯ ಫೋನ್ ಬಂತು , ಪಾಸ್ ಪೋರ್ಟ್ ಕಳಿಸಲಾಗಿದೆ , ಶುಕ್ರವಾರ ಕೈಗೆ ಸಿಗಬಹುದು ಎಂದು . ಶುಕ್ರವಾರ ಕೈಗೆ ಸಿಕ್ಕರೂ  ಪುನಃ ಶನಿವಾರ -ರವಿವಾರ ನಡುವೆ ಬರುವುದರಿಂದ  ವೀಸಾ ದ ಬಗ್ಗೆ ನಮಗೆ ಸಂಶಯವೇ ಇತ್ತು . ಶುಕ್ರವಾರ ಬೆಳಿಗ್ಗೆ ೯ ಕ್ಕೆಲ್ಲ ಮಹೇಶ್ ಪೋಸ್ಟ್ ಆಫೀಸಿಗೆ ಹೋದರು  ಬಂದ ತಕ್ಷಣ ದಯವಿಟ್ಟು  ಅರ್ಜೆಂಟ್  ಡೆಲಿವರಿ ಕೊಡಿ  ಎಂದು ವಿನಂತಿಸಲು . ಆದರೆ , ಅದಾಗಲೇ  ಪಾಸ್ ಪೋರ್ಟ್ ಅಲ್ಲಿಗೆ ಬಂದಿದ್ದು ಅವರ ಕೈಗೆ ಸಿಕ್ಕಿ ಬಿಟ್ಟಿತು !  ನಮ್ಮ  ಖುಷಿಯೇ  ಖುಷಿ ! ಅದನ್ನು ತೆಗೆದುಕೊಂಡು ತಕ್ಷಣ  ನಮ್ಮ  ಟ್ರಾವೆಲ್ ಏಜೆಂಟ್ ಹತ್ತಿರ ಓಡಿದೆವು. ವಿಮಾನದ ಟಿಕೆಟ್ ಬುಕ್ ಮಾಡಿ , ಅದಾಗಲೇ ತಯಾರಿಟ್ಟಿದ್ದ ವೀಸಾ ಅರ್ಜಿಯನ್ನು , ಬೇಕಾದ ಇತರ ದಾಖಲೆಗಳನ್ನು ಕೊಟ್ಟಾಯಿತು . 
ಸಾಧ್ಯವಾದಷ್ಟೂ ಬೇಗ ಮಾಡಿಕೊಡಲು ಪ್ರಯತ್ನಿಸುತ್ತೆನೆಂದು ಏಜೆಂಟ್ ಹೇಳಿದ ಮೇಲೆ  ಸ್ವಲ್ಪ ಸಮಾಧಾನವಾಗಿ  ಮನೆಗೆ ಬಂದೆವು . 

ಸೋಮವಾರ ಬೆಳಿಗ್ಗೆ ಏಜೆಂಟ್ ಫೋನ್ ಮಾಡಿದ. ಚೀನಾ ರಾಯಭಾರ ಕಚೇರಿಯವರು ವೀಸಾ ಅರ್ಜಿಗೆ  ಅವಶ್ಯಕ ದಾಖಲೆಗಳಲ್ಲಿ  ಕೆಲ ಬದಲಾವಣೆ ಮಾಡಿದ್ದು ತತ್ ಕ್ಷಣದಿಂದ  ಲಾಗೂ ಆಗುತ್ತದೆಂದೂ.. ಆ ಪ್ರಕಾರ ನಮಗೆ  ಚೀನಾದ ಯಾವುದೇ ಕಂಪನಿಯಿಂದ  ಆಮಂತ್ರಣ ಪತ್ರ  , ಅದೂ ಒರಿಜಿನಲ್  ಬೇಕೆಂದೂ ತಿಳಿಸಿದ . ಆಮಂತ್ರಣ ಪತ್ರ ಪಡೆಯಲು  ತೊಂದರೆಯಿರಲಿಲ್ಲ. ಅನೇಕ ಪರಿಚಿತ ಕಂಪನಿಗಳು ಕೊಡಲು ತಯಾರಿದ್ದವು . ಆದರೆ  ಮೂಲಪ್ರತಿಯೇ ಬೇಕು , ಸ್ಕ್ಯಾನ್ ಅಥವಾ ಇ-ಮೇಲ್ ಪ್ರತಿ  ನಡೆಯದು  ಎನ್ನುವುದು ಮತ್ತೆ ನಿರಾಶೆ ತಂದಿತು. ಮೂಲ ಪ್ರತಿ  ತಲುಪಲು ಕನಿಷ್ಠ ೪-೫ ದಿನವಾದರೂ ಬೇಕು . ಅಷ್ಟು ಸಮಯ ನಮ್ಮಲ್ಲಿರಲಿಲ್ಲ . ಮತ್ತೆ  ಇದನ್ನು ವಿವರಿಸಿ ಮತ್ತೊಂದು ಅರ್ಜಿ ಕೊಟ್ಟಿದ್ದಾಯಿತು . ಸಮಯ ವೇಗವಾಗಿ ಕಳೆಯುತ್ತಿತ್ತು . ನಿರಾಶೆ ಆವರಿಸುತ್ತಿತ್ತು .

ಬುಧವಾರ ಸಂಜೆ ಫೋನ್ ಮಾಡಿದ ಏಜೆಂಟ್  ಗುರುವಾರ ಭಾರತ ಬಂದ್ ಇರುವುದರಿಂದ ಬಹುತೇಕ ರಾಯಭಾರ ಕಚೇರಿಯು  ಮುಚ್ಚಿರಬಹುದು.  ಶುಕ್ರವಾರ ಕೆಲಸವಾದರೂ ಕೂಡ  ವೀಸಾ ಕೈಗೆ ಬರುವುದು ಸೋಮವಾರ ಸಂಜೆ  ಎಂದಾಗ ನನ್ನ ಚೀನಾ ಯಾತ್ರೆ ಕನಸೇ ಆಯಿತು ಎಂದುಕೊಂಡೆ. ಆದರೂ  ಆತನಿಗೆ ಇನ್ನೂಮ್ಮೆ ಖಚಿತಗೊಳಿಸು  ಎಂದು  ಹೇಳಿದೆ. ಗುರುವಾರ  ಸಂಜೆ ಮತ್ತೆ ಫೋನ್ . ಆದರೆ ಈ ಸಲ   " ಕೆಲಸ ಆಗಿದೆ"  ಎಂದು. ನಮಗಾದ ಸಂತೋಷಕ್ಕೆ  ಮಿತಿಯೇ ಇಲ್ಲ !  ಆದರೂ ವೀಸಾ  ಕೈಗೆ ಸಿಗುವುದು  ಶುಕ್ರವಾರ ಸಂಜೆ . ನಮ್ಮ ವಿಮಾನ ಇದ್ದಿದ್ದು  ಶನಿವಾರ ಬೆಳಗಿನ ಜಾವ ೧.೩೦ ಗೆ !  ನಮಗೆ ಮತ್ತೆ ಕಳವಳ !  ತನ್ನ ಮನುಷ್ಯ , ಮುಂಬಯಿಯಲ್ಲಿ ನಮಗೆ  ವೀಸಾ, ಪಾಸ್ ಪೋರ್ಟ್  ತಂದು ಕೊಡುತ್ತಾನೆ ಎಂದು ಏಜೆಂಟ್ ಭರವಸೆ ನೀಡಿದ ಮೇಲೆ , ನಾನೂ  ಬ್ಯಾಗ್ ತುಂಬಲು ಶುರು ಮಾಡಿದೆ . ಬಟ್ಟೆ ಬರೆ ತುಂಬಿದ್ದೆ ನಾದರೂ ಕೆಲ ಅಗತ್ಯ ವಸ್ತುಗಳನ್ನು ತರುವುದು ಉಳಿದಿತ್ತು . ಮುಖ್ಯವಾಗಿ ತಿಂಡಿ-ತಿನಿಸುಗಳು !  ನಾವಿಬ್ಬರೂ ಸಸ್ಯಾಹಾರಿಗಳು . ಚೀನಾದಲ್ಲಿ ಸಸ್ಯಾಹಾರಿಗಳಿಗಾಗುವ ಅನುಭವವನ್ನು ಕೇಳಿದ್ದರಿಂದ ಸಾಧ್ಯವಿದ್ದಷ್ಟು  ' ರೆಡಿ ಟು ಈಟ್ ' ಪ್ಯಾಕ್ ಗಳನ್ನು ಖರೀದಿಸಿದೆವು . 

ಸಿರಿ ಗೆ  ಹೇಳಿ ಹೋಗಬೇಕಾದ ಬಹಳಷ್ಟು ಸಲಹೆಗಳಿದ್ದವು ! ಮೊದಲ ಬಾರಿಗೆ ಅವಳನ್ನು ಬಿಟ್ಟು ನಾವಿಬ್ಬರೇ  ಹೊರಟಿದ್ದೆವು . ಅಮ್ಮ ಬರುವವರಿದ್ದರು ಆದರೂ " ಬಂದ್ "  ನ ಕಾರಣದಿಂದ ಅಮ್ಮನಿಗೆ ಬರಲು ಒಂದು ದಿನ ತಡವಾಗುತ್ತಿತ್ತು. ಸಿರಿಯೇನೋ .. ಒಬ್ಬಳೇ  ಇರಲು ತೊಂದರೆಯಿಲ್ಲ ಎಂದಿದ್ದರೂ ನಮಗೆ ಅಳುಕು . 

ಕೊನೆಗೂ ಶುಕ್ರವಾರ ಮಧ್ಯಾಹ್ನ  ಊಟ ಮಾಡಿ ಮುಂಬಯಿಗೆ ಹೊರಟೆವು . ತಮ್ಮನಿಗೆ ಮುಂಚೆಯೇ ಹೇಳಿದ್ದರಿಂದ , ಅವನ ಅಸಿಸ್ಟಂಟ್  ಒಬ್ಬನನ್ನು ಕಳಿಸಿ ವೀಸಾ  ತರಿಸುವ ವ್ಯವಸ್ಥೆ ಆಗಿತ್ತು. 
ತಮ್ಮನ ಮನೆ ತಲುಪಿ .. ಸ್ವಲ್ಪ ಸುಧಾರಿಸಿಕೊಂಡು ರಾತ್ರಿ ಊಟ ಮಾಡಿ  ಏರ ಪೋರ್ಟ್ ಗೆ ಹೊರಟೆವು . ಅಲ್ಲಿ ಎಲ್ಲಾ ಆವಶ್ಯಕ  ವಿಧಿಗಳನ್ನು ಪೂರಸಿ ವಿಮಾನ ಹತ್ತಲು ಕಾಯುತ್ತ ಕುಳಿತೆವು. ಅಂತೂ  ನನ್ನ ಕನಸು ಚೀನಾಕ್ಕೆ  ಹತ್ತಿರವಾಗುತ್ತಿತ್ತು ! 18 comments:

ISHWARA BHAT said...

ಕೋಸಂಬರಿ ಮಾತ್ರ ಬಂದ ಹಾಗಾಯಿತು. ಭೂರಿ ಭೋಜನಕ್ಕೆ ಎಷ್ಟು ದಿನ ಕಾಯಬೇಕು.

ಚೆನ್ನಾಗಿದೆ ಶುರು,.ಮುಂದುವರೆಯಲಿ ಚಿತ್ರಕ್ಕ.

ವಿ.ರಾ.ಹೆ. said...

ಹ್ಹ ಹ್ಹ... ಪಾಸ್ ಪೋರ್ಟ್ , ವೀಸಾ ತಗಂಡಿದ್ದೇ ಒಂದು ಟ್ರಿಪ್ಪಿಗಿಂತ ಪ್ರಯಾಸ ಕೊಟ್ಟಿದೆ.

next part please... :)

sunaath said...

ಪಾಸ್‍ಪೋರ್ಟ ಹಾಗು ವೀಸಾದ ಸಂಬಂಧಿ, ಭಾರತದಲ್ಲಿ ಆಗುವ ತೊಂದರೆ ಹಾಗು ಲಂಚಾವತರದ ಬಗೆಗೆ ಓದಿ ಅಚ್ಚರಿಯಾಯಿತು! ಕೊನೆಗೂ ಹೋದಿರಲ್ಲ! ನಿಮ್ಮ ಚೀನಾದ ಅನುಭವ ಓದಲು ಉತ್ಸುಕನಾಗಿದ್ದೇನೆ.

Swarna said...

ಸುಂದರ ಬರಹ.
ಮುಂದಿನ ಭಾಗಕ್ಕಾಗಿ ಕಾಯುತ್ತಾ
ಸ್ವರ್ಣಾ

Mamata said...

I am very happy to read your experience in China..:-) Keep updating about your trip..:-) loved your article..:-)

ಸುಧೇಶ್ ಶೆಟ್ಟಿ said...

ಹೋ... ಚೀನಾ ಸರಣಿ ಶುರು ಆಯಿತು :) ಚೀನಿಯರ ಬಗೆಗಿನ ಕುತೂಹಲ ತುಂಬಾ ಇದೆ... ನಿಮ್ಮ ಅನುಭವ ಹಂಚಿಕೊಳ್ಳಿ. ಕಾಯುತ್ತೇನೆ ಮುಂದಿನ ಭಾಗಕ್ಕೆ.

ಜಲನಯನ said...

ಚಿತ್ರಾ, ಜಿ-ಚಾಟಲ್ಲಿ ನಿನ್ನ ಪಾಸ್ಪೋರ್ಟ್ ವೀಸಾ ಅವಾಂತರ ಹೇಳಿದ್ದು ನೆನಪಿದೆ ಆದರೆ ಇಷ್ಟೊಂದು ಒದ್ದಾಟ ಆಯ್ತು ಅನ್ನೋದು ನಿನ್ನ ಎಂದಿನಂತಹ ಸ್ವಾರಸ್ಯಕರ ಪದ-ವಾಕ್ಯ ಬಂಧದ ಲೇಖನದಿಂದ ಗೊತ್ತಾಯ್ತು....
ಅಂತೂ ಬ್ಲಾಗಲ್ಲಿ ನಿನ್ನ ಲೇಖನ ನೋಡೋಕೆ ಎಲ್ಲಾದ್ರೂ ನಿನ್ನ ಕಳುಹಿಸ್ಬೇಕು ಅನ್ನೋದೂ ಗೊತ್ತಾಯ್ತು ಬಿಡು...
ಅಸಲಿ ಕಥೆ ಯಾವಾಗಾ????

venu beleyur said...

super article akka nimmma bravangi yaru perene

ಚುಕ್ಕಿಚಿತ್ತಾರ said...

:)) BEGA BEGA MUNDINA PRAT BARLI..:)

ವನಿತಾ / Vanitha said...

waiting for the next part :)

ಭಡ್ತಿ said...

ಮುಂದ ??

ಚಿತ್ರಾ said...

ಕಿರಣ ,
ಒಂದಾದ ಮೇಲೊಂದು ಬಡಿಸುವುದು ಅಲ್ಲವೇ? ಸ್ವಲ್ಪ ಕಾಯಬೇಕು .. ಹಸಿವಾದಷ್ಟು ಊಟವನ್ನೂ ಚೆನ್ನಾಗಿ ಆಸ್ವಾದಿಸಬಹುದು !

ಚಿತ್ರಾ said...

ವಿಕಾಸ್,
ಹೌದು ಮಾರಾಯಾ . ಅದೇ ಒಂದು ದೊಡ್ಡ ಕಾದಂಬರಿ ಆಗುವಷ್ಟಿತ್ತು !

ಚಿತ್ರಾ said...

ಕಾಕಾ ,

೧೫ ದಿನಗಳಲ್ಲಿ , ೩೦ ದಿನಗಳಲ್ಲಿ ಪಾಸ್ ಪೋರ್ಟ್ ಎಂದೆಲ್ಲ ಹೇಳುತ್ತಾರಷ್ಟೇ. ಆದರೆ ನಿಜವಾಗಿಯೂ ಎಷ್ಟು ದಿನ ಎಂದು ನಮ್ಮ ಕೈಗೆ ಸಿಕ್ಕ ಮೇಲೇ ತಿಳಿಯುತ್ತದೆ. ಪ್ರತಿಯೊಬ್ಬರಿಗೂ ಹೀಗಾಗುತ್ತದೆ ಅಂತಲ್ಲ . ಆದರೆ ಇದು ನನ್ನ ಅನುಭವ ! ನನ್ನ ಮಗಳ ಪಾಸ್ ಪೋರ್ಟ್ ( ಮಾರ್ಚ್ ನಲ್ಲಿ ನಮ್ಮೊಟ್ಟಿಗೆ ಅಪ್ಲೈ ಮಾಡಿದ್ದು .) ಇನ್ನೂ ಸಿಕ್ಕಿಲ್ಲ ! ಅದರ ಸದ್ಯದ ಸ್ಟೇಟಸ್ ಕೂಡ ಗೊತ್ತಿಲ್ಲ. ಬಹುಶ ಮತ್ತೊಮ್ಮೆ ಹುಂಡಿಗೆ ಹಾಕಿದಮೇಲೆ ಸಿಗುತ್ತದೋ ಏನೋ !

ಚಿತ್ರಾ said...

ಸ್ವರ್ಣಾ, ಮಮತಾ ,
ಧನ್ಯವಾದಗಳು . ಬೇಗ ಬೇಗ ಅಲ್ಲದಿದ್ದರೂ .. ಮೊದಲ ಭಾಗ ಮರೆಯುವ ಮುನ್ನ ಮುಂದಿನ ಭಾಗ ಹಾಕುವ ಪ್ರಯತ್ನ ಮಾಡುತ್ತೇನೆ .

ಚಿತ್ರಾ said...

ಸುಧೇಶ್,

ಹಾಕಿದ್ದೀನಿ ಎರಡನೇ ಭಾಗ .. ಓದಿ :)

ಚಿತ್ರಾ said...

ಆಜಾದ್ ಭಾಯಿ,

ಹಾಂ.. ನಿಮಗೆ ಈ ಪ್ರವಾಸದ ನೇಪಥ್ಯದಲ್ಲಿ ಏನೇನು ಆಯ್ತು ಅಂತ ಗೊತ್ತು ! ನನಗಿಂತ ಹೆಚ್ಚು ನನ್ನ ಪಾಸ್ ಪೋರ್ಟ್ ಗೆ ನೀವೇ ಕಾಯುತ್ತಿದ್ದಿರಿ ! ಹ ಹ ಹ ..

ಹ್ಮಂ. ಮೊದಲು ಚೀನಾ ಪ್ರವಾಸ ಮುಗಿಸುತ್ತೇನೆ. ಆಮೇಲೆ ಎಲ್ಲಿಗೆ ಕಳುಹಿಸುತ್ತೀರ ನೋಡಿ .

ಚಿತ್ರಾ said...

ವಿಜಿ, ವನಿತಾ, ಶ್ಯಾಮ್ ,

ಮುಂದಿನ ಭಾಗನು ಹಾಕಿ ಆಯ್ತು ....