July 24, 2012

ಚೀನಾದಲ್ಲಿ ನಾನು - ಬೀಜಿಂಗ್ ನಲ್ಲಿ ಮೊದಲ ದಿನ


ವಿಶಾಲವಾದ 4 ಲೇನ್ ಗಳ ( ಒಂದು ದಿಕ್ಕಿನಲ್ಲಿ )  ಹೆದ್ದಾರಿಯುದ್ದಕ್ಕೂ ಅಕ್ಕಪಕ್ಕ  ಗಿಡ ಮರಗಳು ! ವೇಗ ಮಿತಿಗನುಗುಣವಾಗಿ ಲೇನ್ ಗಳು ! ರೇಡಿಯೋದಲ್ಲಿ ಯಾವುದೋ ಚೈನೀಸ್ ನಾಟಕ ( ಕೇಳಿ ಬರುತ್ತಿದ್ದ ಸಂಭಾಷಣಾ  ಶೈಲಿ , ಹಿನ್ನೆಲೇ   ಸಂಗೀತದಿಂದ  ಅದು ನಾಟಕವೇ ಇರಬೇಕೆಂದು ನನ್ನ ಅನಿಸಿಕೆ )  ಕೇಳುತ್ತಾ  ನಮ್ಮ ಚಾಲಕ ಸರಾ ಸರಿ ೧೦೦ ಕಿ ಮೀ ವೇಗದಲ್ಲಿ ಟ್ಯಾಕ್ಸಿ ಓಡಿಸುತ್ತಿದ್ದ ! 
ಸ್ವಲ್ಪ  ಹೊತ್ತಿನಲ್ಲಿ ಜೋರಾಗಿ ಮಳೆಯೂ ಸುರಿಯತೊಡಗಿತು . ಹೊರಗಿನ ದೃಶ್ಯಗಳು  ಇನ್ನು ಸುಂದರ ವೆನಿಸ ತೊಡಗಿದವು . ಬೀಜಿಂಗ್ ಪಟ್ಟಣವನ್ನು ಹೊಗುತ್ತಿದ್ದಂತೆ  ಅಕ್ಕಪಕ್ಕಕ್ಕೆ  ಚಂದದ ಗುಲಾಬಿ ಗಿಡಗಳು ಸ್ವಾಗತಿಸಿದವು ! ಅಗಲವಾದ  ರಸ್ತೆಗಳು , ವೇಗವಾಗಿ ಓಡುವ ವಾಹನಗಳು ,ಗಗನ ಚುಂಬಿ  ಕಟ್ಟಡಗಳು , ಸುಂದರವಾದ ಹೂದೋಟಗಳು  ಕಣ್ಣು ತಣಿಸುತ್ತಿದ್ದವು . 
ರಸ್ತೆಯ ಇಕ್ಕೆಲದಲ್ಲೂ  ಬಣ್ಣದ ಹೂ ತುಂಬಿದ ಗಿಡಗಳು , ರಸ್ತೆ  ಡಿವೈಡರ್ ಇದ್ದಲ್ಲಿ  ಸುಮಾರು ೫ ಅಡಿ ಎತ್ತರದ  ಕಬ್ಬಿಣದ ಬೇಲಿ . ಅಷ್ಟೆತ್ತರಕ್ಕು ನಿಂತ ಗುಲಾಬಿ ಗಿಡಗಳಲ್ಲಿ ಗೊಂಚಲು ಗೊಂಚಲು ಹೂ ಬಿಟ್ಟಿದ್ದವು . ನಾನಂತೂ  ಆ ಹೂಗಳನ್ನು ನೋಡಿ ಪೂರ್ತಿ ಎಕ್ಸೈಟ್  ಆಗಿದ್ದೆ. ರಸ್ತೆಯಿಂದ ಕಣ್ಣು ಕೀಳಲೇ ಇಲ್ಲ . ಮಳೆ ನಿಂತು ಬಿಸಿಲು ಇಣುಕುತ್ತಿತ್ತು. ರಸ್ತೆಗಳಲ್ಲಿ ವಾಹನ ದಟ್ಟಣೆ ಹೆಚ್ಚುತ್ತಿತ್ತು.  ಸುಮಾರು ೪೦ ನಿಮಿಷಗಳ ಪ್ರಯಾಣದ ಬಳಿಕ ಟ್ಯಾಕ್ಸಿ  ಒಂದು  ಕಡೆ ನಿಲ್ತು . ಡ್ರೈವರ್  ಬಲಬದಿಗೆ ಕೈ ತೋರಿಸಿ  ಏನೋ ಹೇಳಿದ . ನಮ್ಮ ಹೋಟೆಲ್ ಇಲ್ಲೆ ಎಲ್ಲೋ ಇದೆ  ಎಂದು ಅರ್ಥ  ಮಾಡಿಕೊಂಡು ಕೆಳಗಿಳಿದೆವು. ಲಗೇಜನ್ನು ಕೆಳಗಿಳಿಸಿ  ಅವನಿಗೇ  ದುಡ್ಡು ಕೊಟ್ಟೆವು . ಆತ "ರಸೀತಿ" ಕೊಟ್ಟು  ಹೊರಟು ಹೋದ !   ಹೌದು , " ರಸೀತಿ " ಕೊಟ್ಟ . ಆಶ್ಚರ್ಯನಾ? ಇಲ್ಲಿ ಎಲ್ಲಾ ಟ್ಯಾಕ್ಸಿ ಡ್ರೈವರ್ ಗಳೂ  ತಾವು ಪಡೆದ ಹಣಕ್ಕೆ  ರಸೀತಿ ಕೊಡುತ್ತಾರೆ.ಸ್ಟಿಯರಿಂಗ್ ನ ಪಕ್ಕದಲ್ಲಿ ಒಂದು ಪುಟ್ಟ ಯಂತ್ರವನ್ನು ಅಳವಡಿಸಲಾಗಿದ್ದು , ಮೀಟರ್  ಶುರು ಮಾಡಿದ ಕೂಡಲೇ ಅದು ಆರಂಭಗೊಳ್ಳುತ್ತದೆ. ಟ್ಯಾಕ್ಸಿ  ನಿಗದಿತ ಸ್ಥಳ ತಲುಪಿ ಮೀಟರ್ ನಿಂತಾಗ ,   ಮೂಲ ದರ, ಪ್ರಯಾಣದ ಒಟ್ಟು  ಅಂತರ , ಅದಕ್ಕನುಗುಣವಾಗಿ ಎಷ್ಟು ಹಣ ಕೊಡಬೇಕು , ಇತ್ಯಾದಿ  ಎಲ್ಲಾ ವಿವರಗಳು ಪ್ರಿಂಟ್ ಆಗುತ್ತವೆ. ಅಷ್ಟೇ ಅಲ್ಲ , ದಿನಾಂಕ, ಟ್ಯಾಕ್ಸಿ ನಂಬರ್ ಸಹ ಪ್ರಿಂಟ್ ಆಗುತ್ತದೆ.  ಕೆಲವು ವಿಶೇಷ  ಸಂದರ್ಭಗಳಲ್ಲಿ  ಹೆಚ್ಚಿನ ದರ ಅನ್ವಯ ವಾಗುವಾಗ , ಅಂದರೆ , ರಾತ್ರಿ  ನಿಗದಿತ ವೇಳೆಯ ನಂತರ ಪ್ರಯಾಣಿಸಿದರೆ  ,  ನೀವು ಫೋನ್ ಮಾಡಿ  ಟ್ಯಾಕ್ಸಿ ತರಿಸಿಕೊಂಡರೆ  ( ಇದಕ್ಕೆ  ೩ ಯುವಾನ್ ಹೆಚ್ಚು ಕೊಡಬೇಕು ) ಅನ್ವಯವಾಗುವ ಹೆಚ್ಚುವರಿ  ಬಾಡಿಗೆಗೆ  ಚಾಲಕರು  ಆ   ಬೆಲೆಯ ಮುದ್ರಿತ ಕೂಪನ್ ಕೊಡುತ್ತಾರೆ . ( ಹೆಚ್ಚಾಗಿ ೧ ,೨ ,೩ ಮತ್ತು ೫  ಯುವಾನ್ ಗಳ  ಕೂಪನ್ ಇರುತ್ತವೆ)  ಒಟ್ಟಿನಲ್ಲಿ ಪಡೆದ ಎಲ್ಲಾ ಹಣಕ್ಕೂ  ರಸೀತಿ !!!  ನಮ್ಮಲ್ಲಿ  ಮೀಟರ್ ಕಡ್ಡಾಯ  ಎಂಬ ರೂಲ್ಸ್  ತಂದಾಗ  ಅದನ್ನು ವಿರೋಧಿಸಿ ಸ್ಟ್ರೈಕ್ ಮಾಡುವ , ಮೀಟರ್ ಇದ್ದರೂ ಹಾಕಲು  ಒಪ್ಪದೇ  ತಮಗಿಷ್ಟ ಬಂದಷ್ಟು ಕೇಳುವ  ರಿಕ್ಷಾ ಚಾಲಕರನ್ನು  ಒಮ್ಮೆ ನೆನಪು ಮಾಡಿಕೊಂಡೆವು !  

ರಸ್ತೆಯ ಪಕ್ಕ ನಿಂತು ಅತ್ತಿತ್ತ ನೋಡಿದರೆ  ಸುತ್ತ ಮುತ್ತ   ಒಂದೂ ಹೋಟೆಲ್ ಕಾಣಿಸಲಿಲ್ಲ ! ಪಕ್ಕದಲ್ಲಿರುವ  ಬ್ಯಾಂಕ್ ಆಫ್ ಚೈನಾ  ದ ಕಟ್ಟಡವನ್ನು ಬಿಟ್ಟರೆ ದೊಡ್ಡ ಎನ್ನ ಬಹುದಾದ ಒಂದೂ ಕಟ್ಟಡವಿರಲಿಲ್ಲ . ನಮಗೇಕೋ ಟ್ಯಾಕ್ಸಿಯವನ ಮೇಲೆ  ಅನುಮಾನ ಬಂತು . ತಪ್ಪು ವಿಳಾಸಕ್ಕೆ  ತಂದು ಬಿಟ್ಟು ಹೊರಟೆ ಹೋದನಾ  ಅಂತ ಕಳವಳವಾಯ್ತು ! ಅಲ್ಲೇ ನಿಂತಿದ್ದ  ಒಬ್ಬನಿಗೆ  ಹೋಟೆಲ್ ನ ವಿಳಾಸ ತೋರಿಸಿದೆವು . ಆತ ಪಕ್ಕದಲ್ಲಿರುವ ಗಲ್ಲಿಯತ್ತ ಕೈ ತೋರಿಸಿದ . ನಮಗಂತೂ ಈಗ ಮತ್ತಷ್ಟು ಕಳವಳವಾಗತೊಡಗಿತು . ಹೋಟೆಲ್ ನ ವಿಳಾಸವೇ ತಪ್ಪೇ  ಎಂದುಕೊಳ್ಳುತ್ತಾ.. ಏನಾದರಾಗಲಿ ನೋಡೋಣ ಎಂದುಕೊಂಡು  ನಮ್ಮ ಸೂಟ್ ಕೇಸುಗಳನ್ನು ಎಳೆದುಕೊಂಡು  ಗಲ್ಲಿಯನ್ನು ಹೊಕ್ಕೆವು . ಸೂಟ್ ಕೇಸುಗಳಿಗೆ ಗಾಲಿ ಅಳವಡಿಸುವ ಐಡಿಯಾ  ಯಾರ ತಲೆಯಲ್ಲಿ ಬಂದಿರಬಹುದೋ ಅವನಿಗೇ ಧನ್ಯವಾದ ಹೇಳುತ್ತಾ  ಮುಂದೆ ಸಾಗಿದೆವು.   

ಅದೊಂದು   ಅಗಲ ಕಿರಿದಾದ  ಗಲ್ಲಿ . ಹೆಚ್ಚೆಂದರೆ ೧೦-೧೨  ಅಡಿ ಅಗಲದ ರಸ್ತೆಯ ಎರಡೂ ಬದಿಯಲ್ಲಿ ಒಂದಕ್ಕೊಂದು ಅಂಟಿಕೊಂಡಂತೆ  ಮನೆಗಳು.   ಮನೆಯ ಎದುರಿನ  ಕಟ್ಟೆ ಯಮೇಲೆ  ಕೆಲ ಹೆಂಗಸರು ಕುಳಿತು ಹರಟೆ ಹೊಡೆಯುತ್ತಿದ್ದರೆ ,ಕೆಲವರು ಹೊರ ಗೋಡೆಗೆ ಕಟ್ಟಿದ ಹಗ್ಗಕ್ಕೆ ಬಟ್ಟೆ ಒಣಗಿಸುತ್ತಿದ್ದರು  ರಸ್ತೆಯಲ್ಲಿ ಪುಟ್ಟ ಮಕ್ಕಳು ಆಡುತ್ತಿದ್ದವು . ಅಲ್ಲಲ್ಲಿ ಚಿಕ್ಕ ಗೂಡಂಗಡಿಗಳು , ತರಕಾರಿ - ಹಣ್ಣಿನ ಅಂಗಡಿಗಳು ಇದ್ದವು.  ಕೆಲ ಕಂಪೊಂಡ್ ಗಳ ಬಾಗಿಲು ತೆರೆದಿದ್ದು , ನಾನೂ ನಡುವೆಯೇ ಕುತೂಹಲದಿಂದ ಇಣುಕುತ್ತಿದ್ದೆ .  ಆದರೆ  ಒಳಭಾಗದ  ವಿನ್ಯಾಸ ಬೇರೆಯೇ ಇತ್ತು . ಕಾಂಪೌಂಡ್  ಒಳ ಹೊಕ್ಕ ತಕ್ಷಣ  ಎದುರಿಗೆ   ಕೆಲ ಅಡಿಗಳ  ಜಾಗ ಖಾಲಿ ಇದ್ದು ಮತ್ತೊಂದು ಗೋಡೆ ಕಾಣುತ್ತಿತ್ತು . ಗೋಡೆಯ  ಎರಡು  ದಿಕ್ಕಿನಲ್ಲಿ  ಮನೆಯ  ಅಂಗಳಕ್ಕೆ ಬಾಗಿಲಿನ ರೀತಿ ವಿನ್ಯಾಸವಿತ್ತು .  ಕೆಲ ಮನೆಗಳಲ್ಲಿ  ಎದುರಿನ ಖಾಲಿ ಜಾಗದಲ್ಲಿ ( ಕಾಂಪೌಂಡ್ ಗೂ ಗೋಡೆಗೂ  ನಡುವೆ)  ಹೂ ಗಿಡಗಳನ್ನು ಬೆಳೆದಿದ್ದರೆ , ಕೆಲವರು ತರಕಾರಿ / ಬಳ್ಳಿಗಳನ್ನು ಬೆಳೆಸಿದ್ದರು .    

ಹೊರ ಬಾಗಿಲ ಸಾಂಪ್ರದಾಯಿಕ  ವಿನ್ಯಾಸ   ( ಚಿತ್ರ ಕೃಪೆ : ಅಂತರ್ಜಾಲ) 
ಗಲ್ಲಿ ಮುಗಿಯುವ ಲಕ್ಷಣವೇ ಕಾಣಲಿಲ್ಲ. ನಮ್ಮ ಹೋಟೆಲ್ ಅಲ್ಲೆಲ್ಲಿಯಾದರು ಇರಬಹುದಾದ  ಲಕ್ಷಣ ಕಾಣಲಿಲ್ಲ . ಮತ್ತೊಮ್ಮೆ ಅಲ್ಲಿ  ಅಂಗಡಿಯೊಂದರಲ್ಲಿ ವಿಳಾಸ ತೋರಿಸಿದೆವು   ಆತನೂ  ಹೀಗೆ ಮುಂದೆ ಹೋಗಿ ಎಂಬಂತೆ   ಕೈ ತೋರಿಸಿದ . ನಮಗಂತೂ ಹಸಿವು ಬೇರೆ ಆಗಿತ್ತು . ಟ್ಯಾಕ್ಸಿಯವನ ಮೇಲೆ ಸಿಟ್ಟು ಬರ್ತಾ ಇತ್ತು . ಲಗೇಜ್ ಎಳೆದುಕೊಂಡು ಹೊರಟಿದ್ದ ನಮ್ಮನ್ನು ಜನ ಕುತೂಹಲದಿಂದ ನೋಡುತ್ತಿದ್ದರು .ಮತ್ಯಾರನ್ನಾದರು ಕೇಳುವುದಾ ಎಂದುಕೊಳ್ಳುತ್ತಿದ್ದಾಗ  ಇನ್ನೊಂದು ವಿಷಯ ಹೊಳೀತು  ಅಡ್ರೆಸ್ ನಲ್ಲಿ ಒಂದು ಕ್ರಮಾಂಕವಿತ್ತು . ಗಲ್ಲಿಯ  ಪ್ರತಿ ಮನೆಯ ಗೋಡೆಯ ಮೇಲೂ ಅಕ್ಕ  ಕ್ರಮಾಂಕ ವಿತ್ತು .  ನಾವೀಗ .. ಇದರ ಆಧಾರದ ಮೇಲೆ ಮುಂದುವರಿಯ ಬೇಕೆಂದು ಕೊಂಡೆವು.  ಹಾಗೆ ಇನ್ನೂ ಸುಮಾರು ೫೦ ಮೀಟರ್  ನಡೆದಾಗ  ಎಡ ಭಾಗಕ್ಕೆ  ದೊಡ್ಡ ಗೇಟ್ ಕಂಡಿತು . ಅಂತೂ ನಮ್ಮ ಹೋಟೆಲ್ ಸಿಕ್ಕಿತು !  ಸಮಾಧಾನದ ಉಸಿರು ಬಿಟ್ಟೆವು . 

ನಮ್ಮ ಹೋಟೆಲ್ 

ಅದು  ತೀರ ದೊಡ್ಡ  ಅಥವಾ ಆಧುನಿಕ ಕಟ್ಟಡವಾಗಿರಲಿಲ್ಲ . ಅಪ್ಪಟ ಚೈನೀಸ್ ಶೈಲಿಯ ವಾಸ್ತು , ಕಲ್ಲಿನ ಕಟ್ಟಡ .ಮಬ್ಬು ಹಸಿರು , ಕೆಂಪು ಹಾಗು ಚಿನ್ನದ  ಬಣ್ಣ ದ ಇಳಿಜಾರಾದ ಚಾವಣಿ . ಗೇಟ್ ನ ಒಳಗೆ  ದೊಡ್ಡ ಅಂಗಳ , ಹುಲ್ಲು ಹಾಸು . ಅಲ್ಲಲ್ಲಿ  ಕುಳಿತು ಕೊಳ್ಳಲು ಬೆಂಚುಗಳು ,  ಹಾಗೆಯೇ ಟೇಬಲ್ ಖುರ್ಚಿಗಳೂ ಇದ್ದವು . ಒಳ ಹೊಕ್ಕು , ರಿಸೆಪ್ಶನ್ ನಲ್ಲಿ ನಮ್ಮ  ಪರಿಚಯ ಮಾಡಿಕೊಂಡು , ನಮಗೆ ಹೋಟೆಲ್ ನವರು ಕಳಿಸಿದ್ದ  booking confirmation   ಇ ಮೇಲ್ ನ  ಪ್ರತಿಯನ್ನು ತೋರಿಸಿದೆವು. ನಂತರ ಔಪಚಾರಿಕತೆಗಳನ್ನು   ಮುಗಿಸಿ ನಮ್ಮ ರೂಮಿಗೆ ಹೋದೆವು . 


ತಕ್ಕ ಮಟ್ಟಿಗೆ ಇದ್ದ ರೂಮಿನಲ್ಲಿ ನಮ್ಮ ಲಗೇಜ್ ತಂದಿಟ್ಟ  ರೂಂ ಬಾಯ್ ,  ಎಲ್ಲಾ ಸ್ವಿಚ್ ಗಳನ್ನೂ ಒತ್ತಿದ . ಲೈಟ್ ಎಲ್ಲಾ  ಹೊತ್ತಿಕೊಂಡವು  . ಆದರೆ ಎ. ಸಿ ಮಾತ್ರ ಆನ್ ಆಗಲಿಲ್ಲ. ಆತ ಏನೇನೋ  ಮಾಡಿ ನೋಡಿದ . ನಂತರ  ' ಒನ್ ಮಿನಿಟ್  ಒನ್ ಮಿನಿಟ್ " ಎನ್ನುತ್ತಾ ಹೊರಗೆ ಹೋದ.  ೫ ನಿಮಿಷಕ್ಕೆ ಇನ್ನೊಬ್ಬ  ಒಂದು ಟೂಲ್ ಕಿಟ್ ಹಿಡಿದು ಬಂದ . ಎ ಸಿ ಯ  ಸ್ವಿಚ್ ಅನ್ನು ತೆಗೆದು ಕೈಯಾಡಿಸಿ , ಮತ್ತೆ ಹಾಕಿದ .  ಏನು ಆಗಲಿಲ್ಲ ಪ್ರೋಗ್ರಾಮಬಲ್  ಸ್ವಿಚ್ ನ ಎಲ್ಲಾ ಬಟನ್ ಒತ್ತಿ ನೋಡಿದ .. ಊಹುಂ ... ಏನು ಇಲ್ಲ .  ಸುಮಾರು ಸರ್ಕಸ್ ಮಾಡಿಯೂ ಏನು ಆಗಲಿಲ್ಲ . 
ರೂಮಿನಲ್ಲಿ ಸಾದಾ ಫ್ಯಾನ್ ಕೂಡ ಇರಲಿಲ್ಲ . ಮಳೆ ಬಂದು ನಿಂತಿದ್ದರೂ ರೂಮಿನಲ್ಲಿ   ಸೆಖೆಯೇ ಇತ್ತು . ಸರಿ ರಿಸೆಪ್ಶನ್ ಗೆ ಮತ್ತೆ ಫೋನಾಯಿಸಿದ್ದಾಯ್ತು . ನಮ್ಮ ಅದೃಷ್ಟಕ್ಕೆ  ಫೋನ್ ತೆಗೆದುಕೊಂಡ ಹುಡುಗಿಗೆ  ಇಂಗ್ಲಿಶ್ ಸರಿಯಾಗಿ ತಿಳಿಯುತ್ತಿರಲಿಲ್ಲ . ಏನೇ  ಹೇಳಿದರೂ  " ಮ್ಯಾನೇಜರ್ ಔಟ್, ಸಾರೀ  "  ಎನ್ನುತ್ತಿದ್ದಳು . ಸರಿ ಈ  ಎಲೆಕ್ಟ್ರಿಷಿಯನ್  ನಮ್ಮಿಂದ ಫೋನ್ ತೆಗೆದುಕೊಂಡು  ಚೈನೀಸ್ ಭಾಷೆಯಲ್ಲಿ ಆಕೆಗೆ  ವಿವರಿಸಿ ಹೇಳಿದ.  ನಂತರ  ನಮ್ಮತ್ತ ತಿರುಗಿ , " ಒನ್ ಮಿನಿಟ್  ಒನ್ ಮಿನಿಟ್ "  ಎಂದು  ಹುಳಿ ನಗು ನಗುತ್ತಾ  ಹೊರಟೆ ಹೋದ . ನಾವಿಬ್ಬರೂ ಮುಖ ಮುಖ ನೋಡುತ್ತಾ ನಿಂತೆವು . ಸ್ವಲ್ಪ ಹೊತ್ತಿಗೆ  ಮ್ಯಾನೇಜರ್  ನಮ್ಮ ರೂಮಿಗೆ ಬಂದ  ಅಷ್ಟೊತ್ತಿಗೆ  ನನ್ನ  ಟೆಂಪರೇಚರ್ ಕೂಡ ಏರುತ್ತಿತ್ತು . ಅವನೂ ಒಮ್ಮೆ ಎಲ್ಲಾ ಸ್ವಿಚ್ ಒತ್ತಿ ಅಲುಗಾಡಿಸಿ ನೋಡಿದವನು , ಕೆಂಪು ಮುಖ ಮಾಡಿಕೊಂಡು ,  " ಸಾರಿ , ಗಿವ್ ಅದರ್ ರೂಂ " ಎನ್ನುತ್ತಾ  ಮತ್ತೊಂದು  ರೂಮಿಗೆ  ಕರೆದುಕೊಂಡು ಹೋದ.  ಅಲ್ಲಿ ಎಲ್ಲಾ ಸರಿ ಇದೆಯೇ ಎಂದು ಒಮ್ಮೆ  ಚೆಕ್ ಮಾಡಿ  ನೋಡಿದ . ಎ ಸಿ ಅಂತು ಆನ್ ಆಯಿತು .  " ok ok good "  ಎನ್ನುತ್ತಾ  ಹೊರಟು ಹೋದ. 

ನಮಗೆ ಜೋರು ಹಸಿವಾಗುತ್ತಿತ್ತು . ಅತುಲ್ ನಿಗೆ ಫೋನ್ ಮಾಡಿ  ಊಟಕ್ಕೆ ಹೋಗೋಣ ಎಂದೆವು . ಅಷ್ಟರಲ್ಲಿ  ' ಕಾಕಾ'  ( ಚಿಕ್ಕಪ್ಪ)  ಕೂಡ ಬಂದು ತಲುಪಿದ್ದರು . ಅವರು , ತಾನು ವಿಮಾನದಲ್ಲಿ ಬಹಳಷ್ಟು  ತಿಂದಿರುವುದರಿಂದ ಹಸಿವಿಲ್ಲ .. ನೀವು ಹೋಗಿ ಎಂದು ನಮ್ಮನ್ನು ಕಳಿಸಿದರು . ಸರಿ , ನಮ್ಮ ಹೋಟೆಲ್ ನ  ರೆಸ್ಟೋರಂಟ್  ಅಷ್ಟೊತ್ತಿಗೆ ಮುಚ್ಚಿತ್ತು . ಹೀಗಾಗಿ  ಹೊರಗೆ ಎಲ್ಲಾದ್ರೂ ಹುಡುಕೋಣ ಅಂತ  ಹೋಟೆಲ್ ನಿಂದ ಆಚೆ ಕಾಲಿಟ್ಟೆವು . 
ಅಲ್ಲಿಗೆ ನಮ್ಮ  ಪ್ರವಾಸದ ಮತ್ತೊಂದು ಮುಖ್ಯ ಅಡಚಣೆ  ನಮ್ಮೆದುರು ನಿಂತಿತ್ತು ! 

6 comments:

sunaath said...

ಕೆಲವೊಂದು ವಿಷಯಗಳಲ್ಲಿ ಚೀನಾ ಭಾರತಕ್ಕಿಂತ ತುಂಬಾ ಮುಂದಿದೆ ಎಂದು ಅನ್ನಿಸುತ್ತದೆ. ಬಹುಶಃ ಅಲ್ಲಿಯ ಆಡಳಿತದ ಶಿಸ್ತು ನಮ್ಮಲ್ಲಿ ಇರಲಿಕ್ಕಿಲ್ಲ. ಮುಂದಿನ ಭಾಗವನ್ನು ಓದಲು ಕುತೂಹಲಿಯಾಗಿದ್ದೇನೆ.

Badarinath Palavalli said...

ಚೀನಾ ಪ್ರವಾಸದ ಬಗೆಗಿನ ಈ ಲೇಖನ ಸಚಿತ್ರವಾಗಿದೆ.

ಟ್ಯಾಕ್ಸಿಯವರು ರಸೀದಿ ಕೊಡುವುದೇ, ನಮ್ಮಲ್ಲಿ ಯಾವಾಗ ಹೀಗೆ ಅಂತ?

ನನ್ನ ಬ್ಲಾಗಿಗೂ ಬನ್ನಿ ಮೇಡಂ.
www.badari-poems.blogspot.com

ಚಿತ್ರಾ said...

ಕಾಕಾ ,

ಕೆಲವೊಂದಲ್ಲ ಬಹಳಷ್ಟು ವಿಷಯಗಳಲ್ಲಿ ನಮಗಿಂತ ಅದೆಷ್ಟೋ ಮುಂದುವರಿದಿದ್ದಾರೆ ! ನೀವು ಹೇಳಿದಂತೆ ಆಡಳಿತದ ಶಿಸ್ತು ನಮ್ಮಲ್ಲಿಲ್ಲ .ಆ ಬಗ್ಗೆ ಓದುವಾಗ ಅತೀ ಶಿಸ್ತು ಎಂದು ಅನಿಸಿದರೂ , ಕೆಲವು ಸುಧಾರಣೆಗಳಿಗೆ ಶಿಸ್ತು ಅಗತ್ಯವೇ ಅಲ್ಲವೇ?

ಚಿತ್ರಾ said...

ಬದರಿನಾಥ್,
ನಿಮ್ಮ ಮೆಚ್ಚಿಗೆಗೆ ಧನ್ಯವಾದಗಳು .
ನಿಮ್ಮ ಬ್ಲಾಗನ್ನು ಭೇಟಿ ಮಾಡಿದೆ . ವೈವಿಧ್ಯಮಯವಾಗಿದೆ ! ಖುಷಿಯಾಯ್ತು !

ಸುಧೇಶ್ ಶೆಟ್ಟಿ said...

achchari huttisuttide cheena :) mundina bhaagakke kutoohala eegale shuru aagide :)

ಶ್ಯಾಂ ಭಟ್, ಭಡ್ತಿ said...

ಚಿತ್ರಕ್ಕ
ಚೀನಾದ ಮೊದಲ ದಿನ ಚೀನಾ ಬಹುಪಾಲು ಭಾರತದ ಹಾಗೇ ಕಂಡಿದ್ದಂತೂ ನಿಜ... ಭಾರತದ ಕೆಲ ಮಹಾನಗರಗಳ ಹೆದ್ದಾರಿಗಳಲ್ಲಿ ಗುಲಾಬಿ ಇರಲಿಕ್ಕಿಲ್ಲ ಆದರೆ..
ಹೆದ್ದಾರಿಗಳಲ್ಲಿ ನಡುವೆ ಎತ್ತರೆತ್ತರದ ಕಬ್ಬಿಣದ ಬೇಲಿ ಇದೆ.. ಅದರ ನಡುವೆ ಗಿಡ ಪೊದೆಗಳಂತೂ ಇವೆ.
ಟ್ಯಾಕ್ಸಿಯಲ್ಲಿ ರಸೀತಿ ಇಲ್ಲೂ ಕಡ್ಡಾಯವಾಗಿದೆ ಈಗ ... ಆದರೆ ಭಾರತದ ಟ್ಯಾಕ್ಸಿ ಡ್ರೈವರುಗಳು ಹೊಟೇಲಿನ ವರೆಗೂ ಬರುತ್ತಾರೆ ನಿಮ್ಮ ಲಗೇಜ್ ಇಳಿಸಿಕೊಟ್ಟೇ ಹೋಗುತ್ತಾರೆ. (ಅದರ ಹಿಂದೆ ಹೊಟೇಲಿನವರು ಕೊಡುವ ಟಿಪ್ಸ್ ಕಾರಣ ಇರಬಹುದು ಆ ಪ್ರಶ್ನೆ ಬೇರೆ)
ಹಾಂ ಚೀನಾದ ಹೋಟೇಲೂ ಭಾರತದ ಹೋಟೇಲಿಗಿಂತ ಕಮ್ಮಿ ಇಲ್ಲ ಎಂಬುದ ಕೇಳಿ ಮನಸಿಗೆ ಸಲ್ಪ ಆಹಾ ಅನಿಸಿದ್ದಂತೂ ಸುಳ್ಳಲ್ಲ !! :)