August 5, 2012

ಚೀನಾದಲ್ಲಿ ನಾನು - ಊಟಕ್ಕಾಗಿ ಸರ್ಕಸ್ !!


       ಹೋಟೆಲ್ನಿಂದ  ಹೊರಗಂತೂ ಹೊರಟೆವು  ಆದರೆ ಯಾವ ಕಡೆ ಹೋಗುವುದು ಎಂದು ತಿಳಿಯಲಿಲ್ಲ .  ನಾವು ಬಂದ ದಿಕ್ಕಿನಲ್ಲಂತೂ  ತಿನ್ನಲು ಏನೂ  ಸಿಗುವ  ಚಾನ್ಸ್ ಇರಲಿಲ್ಲ . ಹೀಗಾಗಿ ವಿರುದ್ದ ದಿಕ್ಕಿಗೆ ಹೊರಟೆವು. ೫-೬ ಬಿಲ್ಡಿಂಗ್ ದಾಟುವಷ್ಟರಲ್ಲಿ  ಮುಖ್ಯ ರಸ್ತೆಯೊಂದು ಸಿಕ್ಕಿತು . ಆ ದಿಕ್ಕಿನಿಂದ ಹೋಟೆಲ್ ಗೆ  ಟ್ಯಾಕ್ಸಿಗಳು ಬರ ಬರಬಹುದಿತ್ತು . ನಾವು ಬೆಳಿಗ್ಗೆ ಬಂದ ಗಲ್ಲಿ ಒನ್ ವೇ ಆಗಿದ್ದರಿಂದ ಟ್ಯಾಕ್ಸಿಯವನು ಬರಲಿಲ್ಲ ಎಂದು   ನಮಗೆ ಆಗ ಗೊತಾಯ್ತು .  
ಮುಖ್ಯರಸ್ತೆಯಲ್ಲಿ ಆಚೀಚೆ ನೋಡಿದೆವು . ಸುತ್ತ ಮುತ್ತಲೆಲ್ಲೂ   ಹೋಟೆಲ್ ನಂತಹ ಏನು ಕಾಣಲಿಲ್ಲ . ಕೆಲವು ಚಿಕ್ಕ ಪುಟ್ಟ ಚಾ ಅಂಗಡಿಗಳನ್ಥವು  ಇದ್ದವು  ಆದರೆ ಅಲ್ಲೆಲ್ಲಾ  ಬರೀ ಮಾಂಸಾಹಾರವೇ ಕಾಣುತ್ತಿತ್ತು. ಹೆಚ್ಚು ನಡೆಯುವ ತ್ರಾಣ ನಮಗಿರಲಿಲ್ಲ . ಸುತ್ತ ಮುತ್ತ ಎಲ್ಲಾ ಬೋರ್ಡ್ ಗಳೂ   ಚೈನೀಸ್ ಭಾಷೆಯಲ್ಲಿದ್ದು , ಇಂಗ್ಲಿಷ್ ನ ಒಂದಕ್ಷರವೂ  ಇರದ್ದರಿಂದ , ನಮಗೆ ಅದು  ಯಾವ ಅಂಗಡಿ, ಹೋಟೆಲ್  ಅಥವಾ ಸುಪರ್ ಸ್ಟೋರ್  ಎಂದು ತಿಳಿಯುತ್ತಲೇ ಇರಲಿಲ್ಲ . ಸಾಕಿನ್ನು .  ಸುಸ್ತಾಗಿದೆ . ರೂಮಿಗೆ ಹೋಗಿ  ಊರಿಂದ ತಂದಿದ್ರಲ್ಲೇ ಏನಾದ್ರೂ ತಿನ್ನೋದು ಅಂತ ಯೋಚನೆ ಮಾಡಿ ವಾಪಸ್ ಹೊರಟೆವು . ನಮ್ಮ ಪುಣ್ಯಕ್ಕೆ ದಾರೀಲಿ ಒಂದು  ಹಣ್ಣಿನಂಗಡಿ  ಕಂಡಿತು . ತಾಜಾ ಹಣ್ಣುಗಳನ್ನು ನೋಡಿ ಖುಷಿಯಾಯ್ತು . ಸ್ವಲ್ಪ ಬಾಳೆ ಹಣ್ಣು , ಸೇಬು ಖರೀದಿಸಿ ರೂಮಿಗೆ  ಬಂದೆವು . 

ಹಣ್ಣು ತಿಂದು , ಟೀ ಮಾಡಿ ಕುಡಿದು  ಸ್ವಲ್ಪ ಹೊತ್ತು ಮಲಗಿದೆವು .ರಾತ್ರಿ ನಿದ್ದೆ ಇಲ್ಲದ್ದರಿಂದ  ಹಾಗು ಪ್ರಯಾಣದ ಸುಸ್ತಿನಿಂದ  ಚೆನ್ನಾಗಿ ನಿದ್ರೆ ಬಂತು . ಎಚ್ಚರಾದಾಗ ಆಗಲೇ ಸಂಜೆಯಾಗಿತ್ತು. ಎದ್ದು ಸ್ವಲ್ಪ ಫ್ರೆಶ್ ಆಗುವಷ್ಟರಲ್ಲಿ , ಕಾಕಾ ಮತ್ತು ಅತುಲ್ ಇಬ್ಬರು ನಮ್ಮ ರೂಮಿಗೆ ಬಂದರು . ಮಧ್ಯಾಹ್ನ ದ ಊಟದ ಅವಸ್ಥೆ  ನೆನಪಿದ್ದಿದ್ದರಿಂದ , ಬೇಗನೆ ಆಚೆ ಹೋಗೋದು,  ಹೋಟೆಲ್ ಏನಾದ್ರು ಸಿಕ್ಕತ್ತಾ ಅಂತ ನೋಡೋದು ಅಂತ ಯೋಚನೆ ಮಾಡಿದೆವು. ಮಧ್ಯಾಹ್ನ ನಾವು ಹೊರಗೆ ಹೋದಾಗ ಕಾಕಾ  ನಮ್ಮ ಹೋಟೆಲ್ ನ ರೆಸ್ಟೋರೆಂಟ್ ಗೆ ಹೋಗಿ  ಎಲ್ಲಾ ನೋಡಿ ಬಂದಿದ್ದರು.  ಇಲ್ಲಂತೂ ಯಾವುದೇ ಸಸ್ಯಾಹಾರಿ ಊಟ ಸಿಗುತ್ತಿರಲಿಲ್ಲ . ಇನ್ನು ಹೊರಗೆ ಊಟಕ್ಕಾಗಿ ಹುಡುಕುವ ಅನಿವಾರ್ಯ ಪರಿಸ್ಥಿತಿ ನಮಗೆ . ಮಧ್ಯಾಹ್ನ ಹೋದ ರಸ್ತೆಗೇ  ಹೋದೆವು  ಬಲ ಭಾಗಕ್ಕೆ ಸ್ವಲ್ಪ ದೂರದಲ್ಲಿ ಟ್ರಾಫಿಕ್ ಸಿಗ್ನಲ್,    ಆ ಕಡೆ ಹೆಚ್ಚೇನೂ ಇರಲಿಲ್ಲ . ಹೀಗಾಗಿ ಎಡ ಬದಿಗೆ ಹೊರಟೆವು . ರಸ್ತೆ ಪಕ್ಕಕ್ಕೆ ಚಿಕ್ಕ ಚಿಕ್ಕ ಹೋಟೆಲ್ ಗಳು  ತೆರೆದಿದ್ದವು.  ಪ್ರತಿ  ಟೇಬಲ್ಗೆ  ೪ ಕುರ್ಚೆ ಹಾಕಿ ಜನ ತುಂಬಿದ್ದರು . ಒಂದೊಂದು ಟೇಬಲ್ ಮೇಲೂ  ತಿಂಡಿ ತಿನಿಸು ತುಂಬಿದ್ದವು , ದೊಡ್ಡ ದೊಡ್ಡ  ಪ್ಲೇಟ್ ಗಳಲ್ಲಿ, ಕರಿದ  ಕೋಳಿ ,  ಹುರಿದ  ಮೀನು , ಬೇಯಿಸಿದ ಮಾಂಸ ಇತ್ಯಾದಿ   ತಿನಿಸುಗಳು .ಜೊತೆಗೆ  ಪ್ರತಿ ಟೇಬಲ್ ನ ಮೇಲೂ ಕನಿಷ್ಠ ಡಜನ್   ಆದರೂ ಬೀರ್ ಬಾಟಲ್ ಗಳು .ಎಲ್ಲರ ಕೈಯಲ್ಲೂ ಸಿಗರೆಟ್ ಬೇರೆ ! ಎಲ್ಲಾ ವಾಸನೆಗಳೂ ಸೇರಿ  ಆ ಬೀದಿಯುದ್ದಕ್ಕೂ ವಿಚಿತ್ರವಾದ  ವಾಸನೆ ತುಂಬಿತ್ತು.  ನಾವು ಸ್ವಲ್ಪ ಡೀಸೆಂಟ್ ಆಗಿರುವ ಹೋಟೆಲ್ ಹುಡುಕುತ್ತಾ  ಕಿ. ಮೀ ಗಟ್ಟಲೆ ನಡೆದೆವು . ಆದರೆ ನಮ್ಮ ದುರಾದೃಷ್ಟಕ್ಕೆ ಅಂಥಾ ಒಂದೂ ಹೋಟೆಲ್ ಸಿಗಲಿಲ್ಲ  ! ಸರಿ, ಬಂದ ದಾರಿಗೆ ಸುಂಕವಿಲ್ಲ ಎಂದು  ವಾಪಸ್ ಹೊರಟೆವು. ಆದರೆ ಹೊಟ್ಟೆ ಕೇಳಬೇಕಲ್ಲ ? ನಾನು ಹೇಳಿದೆ  , ಹೇಗೂ ಬರುವಾಗ ತೊಗೊಂಡು ಬಂದಿರೋ " ರೆಡಿ  ಟು  ಈಟ್  " ಪ್ಯಾಕೆಟ್ ನಿಂದ  ಏನಾದರೂ ಮಾಡ್ಕೊಳೋಣ , ಹಣ್ಣು ತಿಂದು ಮಲಗೋಣ ಅಂತ . ಬೇರೆ ಉಪಾಯವಿಲ್ಲದ್ದರಿಂದ  ಎಲ್ಲರೂ ಒಪ್ಪಿಕೊಂಡರು. ದಾರಿಯಲ್ಲಿ  ಮೊಸರನ್ನಾದರೂ  ತೊಗೊಂಡು ಹೋಗೋಣ  ಹಾಗೆ ಸಲ್ಪ ನೀರಿನ ಬಾಟಲಿ ಕೂಡ ಇರಲಿ  ಎಂದು ಯೋಚಿಸಿ , ದಾರಿಯಲ್ಲಿ ಕಂಡ  ಅಂಗಡಿಯೊಂದನ್ನು ಹೊಕ್ಕೆವು . ತರಾವರಿ ಸಾಮಾನುಗಳು ಅಲ್ಲಿದ್ದವು . ಆದರೆ ಮತ್ತೆ ಅದೇ ಪ್ರಶ್ನೆ .  ಭಾಷೆ ಬಾರದು ! ಪ್ಯಾಕೆಟ್ ನ ಮೇಲೂ ಇಂಗ್ಲಿಶ್ ಇಲ್ಲ , ಅಂಗಡಿಯವರಿಗೂ ಇಂಗ್ಲಿಶ್ ಬರುವುದಿಲ್ಲ !! ಸದ್ಯಕ್ಕೆ,  ನಾವೇ  ಒಳ ಹೊಕ್ಕು ಶೆಲ್ಫ್ ನಲ್ಲಿರುವ ಸಾಮಾನು ಗಳಿಂದ ಆಯ್ಕೆ ಮಾಡಿಕೊಳ್ಳ ಬಹುದಾಗಿದ್ದ ರಿಂದ  ಅನುಕೂಲವಾಯ್ತು.  ಬ್ರೆಡ್ , ಕೇಕ್  ಎಲ್ಲಾ ಇದ್ದರೂ ಸಹ  ಅದರಲ್ಲಿ  ಏನೇನಿದೆ , ಮಾಂಸಾಹಾರವೇ? ಎಂಬೆಲ್ಲಾ ಸಂಶಯಗಳು .ಬರೆದಿದ್ದೇನೂ ತಿಳಿಯದ ಕಾರಣ , ನಮ್ಮ  ಅಂದಾಜಿಗೆ  ಕೆಲವು ಬನ್ ಗಳನ್ನು ತೊಗೊಂದಾಯ್ತು . ನಂಗೆ ಪ್ಲೇಟ್ ಹಾಗು ಚಮಚ ಬೇಕಿತ್ತು . ರೆಡಿ ಟು ಈಟ್ ಬಿಸಿಬೇಳೆ ಭಾತ್ ಮಾಡಿದರೆ  ತಿನ್ನಲು ಪ್ಲೇಟ್  / ಚಮಚ ಬೇಕಲ್ಲ?   ಅದು ಈ ಅಂಗಡಿಯಲ್ಲಿ ಸಿಗಬಹುದಾ ಅಂತ ನೋಡಿದರೆ  ಅಲ್ಲೆಲ್ಲೂ ಕಾಣಲಿಲ್ಲ . ಅಲ್ಲಿಯ ಸೇಲ್ಸ್  ಹುಡುಗಿಯಲ್ಲಿ   ಕೇಳಿದರೆ .  ಆಕೆ   ಮುದ್ದಾಗಿ ನಗುತ್ತಾ  " ನೋ ಇಂಗ್ಲಿಶ್ "  ಎಂದು ಕೈಯಾಡಿಸಿದಳು  . ಸರಿ , ನಾವು ಸ್ಪೂನ್ / ಪ್ಲೇಟ್ ಎಂದೆಲ್ಲ ಕೈಸನ್ನೆ ಬಾಯಿಸನ್ನೆ  ಮಾಡಿ  ತಿಳಿಸಿದರೂ ಆಕೆಗೆ ತಿಳಿಯಲಿಲ್ಲ ! ಆಕೆಯ ಪಕ್ಕದಲ್ಲಿದ್ದ  ಯುವಕ  ತನಗೆ ಅರ್ಥವಾಯ್ತೆಂಬಂತೆ ನಗುತ್ತಾ  ಚೈನೀ  ಭಾಷೆಯಲ್ಲಿ ಏನೋ ಹೇಳುತ್ತಾ  ತನ್ನ ಹಿಂದೆ ಬನ್ನಿ ಎಂದು ಸನ್ನೆ ಮಾಡಿದ . "ಅಬ್ಬಾ ಸದ್ಯ !" ಎಂದುಕೊಂಡು ಆತನ ಹಿಂದೆ ಮೆಟ್ಟಿಲು   ಹತ್ತಿ ಮೇಲೆ ಹೋದೆವು . ಅಲ್ಲಿ ಪುಟ್ಟ  ಡೈನಿಂಗ್  ರೂಮಿನಂತೆ ಏನೋ ಇತ್ತು . ೩-೪ ಜನ ಏನೋ ತಿನ್ನುತ್ತಿದ್ದರು  . ಅಲ್ಲಿ ನಮ್ಮನ್ನು ಬಿಟ್ಟು ಆತ  ಎಸ್ ಎಸ್  ಎಂದು ನಗುತ್ತ ಕೆಳಗೆ ಹೋದ . ನಾವು ಊಟದ ಬಗ್ಗೆ ಕೇಳಿರಬೇಕು ಎಂದು ಅವನು  ಅರ್ಥ ಮಾಡಿಕೊಂಡಿದ್ದ ಪಾಪ. ನಾವು  ಅವನ ಹಿಂದೆಯೇ ಕೆಳಗಿಳಿದೆವು.  ಇಳಿಯುವಾಗ ಪಕ್ಕಕ್ಕಿದ್ದ ಕೆಲವು  ಶೆಲ್ಫ್ ಗಳ ಕಡೇ ಮಹೇಶ್ ರ ಗಮನ ಹೋಯಿತು. ಅಲ್ಲಿ  ಮನೆಯಲ್ಲಿನ ಪಾರ್ಟಿ ಗಳಿಗೆ ಬೇಕಾಗುವಂಥ  ವಸ್ತುಗಳನ್ನೂ ಜೋಡಿಸಿಡಲಾಗಿತ್ತು.  ಅಲ್ಲಿ ಖಂಡಿತಾ ಏನಾದರು ಸಿಗಬಹುದು  ಎಂದುಕೊಂಡು ಆ ಕಡೇ  ಹೊಕ್ಕೆವು . ಅಲ್ಲಿ ಉಪಯೋಗಿಸಿ ಬಿಸಾಡಬಹುದಾದಂಥ  ಲೋಟಗಳು ಚಿಕ್ಕ ಬೌಲ್ ಗಳು  ಬಹಳಷ್ಟಿದ್ದವು . ಆದರೆ ಚಮಚ ಕಾಣಲಿಲ್ಲ. ಪ್ಲೇಟ್ಸ್ ಕೂಡ  ಇರಲಿಲ್ಲ. ಬಗೆ ಬಗೆಯ  ಚಾಪ್ ಸ್ಟಿಕ್ ಗಳಿದ್ದವು. ( ಚೀನೀಯರು  ಬಹುತೇಕ ಎಲ್ಲವನ್ನೂ ಈ ಕಡ್ಡಿಗಳಿಂದಲೇ ತಿನ್ನ್ನುತ್ತಾರೆ !  )
ನಿರಾಶರಾಗಿ ಹೊರಡಬೇಕೆನ್ನುವಷ್ಟರಲ್ಲಿ ಮೂಲೆಯಲ್ಲಿ ಸ್ವಲ್ಪ ಆಳವಾಗಿರುವ ತಕ್ಕ ಮಟ್ಟಿಗೆ ದೊಡ್ಡದಾದ ಪ್ಲೇಟ್ ಹಾಗೂ ಪಕ್ಕದಲ್ಲೇ  ಪ್ಲಾಸ್ಟಿಕ್ ಚಮಚದ ಸೆಟ್ ಕಣ್ಣಿಗೆ ಬಿತ್ತು. ನಮಗಾದ ಸಂತೋಷ ಅಷ್ಟಿಷ್ಟಲ್ಲ !!  ಅದನ್ನು ತೆಗೆದುಕೊಂಡು ಕೆಳಗೆ ಬಂದೆವು . ಒಂದೆರಡು ಸೆಟ್ ಬನ್ನು ಗಳನ್ನೂ , ನೀರಿನ ಬಾಟಲಿ, ಮೊಸರಿನ ಡಬ್ಬಿಗಳನ್ನೂ ಕೊಂಡು ರೂಮಿನ ದಾರೀ ಹಿಡಿದೆವು ! 

ನಮ್ಮ ಹೋಟೆಲ್ ನ ಎದುರಿನ ರಸ್ತೆಯಲ್ಲಿ ಟೇಬಲ್ , ಕುರ್ಚಿಗಳು ತುಂಬಿದ್ದವು ! ಗಂಡಸರು, ಹೆಂಗಸರು ಎಲ್ಲ ಜೋರು ಜೋರಾಗಿ ಮಾತಾಡುತ್ತಾ ನಗುತ್ತಾ  ಊಟ - ಆಟಗಳಲ್ಲಿ  ಮಗ್ನರಾಗಿದ್ದರು !
ಗಂಡಸರೋ ಬರ್ಮುಡಾ ಚಡ್ಡಿ ಧರಿಸಿ ,ಶರ್ಟು / ಬನಿಯನ್ ಏನೂ ಹಾಕದೆ ಆರಾಮಾಗಿ ಹೊಟ್ಟೆ ಬಿಟ್ಟುಕೊಂಡು   ಕುಳಿತಿದ್ದರು. ಅವರುಗಳು ಮಾತಾಡುವುದಂತೂ ನನಗೆ ಜಗಳವಾಡುತ್ತಿದ್ದಾರೆಂಬ ಭಾವನೆ ತರುತ್ತಿತ್ತು. ಹಾಂ, ಇವರೆಲ್ಲ ಸ್ವಲ್ಪ ಹಾಗೇ. ಜೋರು ಜೋರಾಗಿ ಹಾವ ಭಾವದೊಂದಿಗೆ ಮಾತಾಡುತ್ತಾರೆ. ನಾವು ಗಾಬರಿ ಬೀಳುವಂತೆ ತಿನ್ನುತ್ತಾರೆ ! 

ರೂಮಿಗೆ ಬಂದು  ಎಂ ಟಿ ಆರ್ ಜಿಂದಾಬಾದ್ ಎನ್ನುತ್ತಾ , ರೂಮಿನಲ್ಲಿದ್ದ  ಟೀ  ಕೆಟಲ್ ನಲ್ಲಿ ನೀರು ತುಂಬಿಸಿ  ಆ ಕುದಿ  ನೀರಲ್ಲಿ  ಬಿಸಿಬೇಳೆ ಭಾತ್ ನ ಪ್ಯಾಕೆಟ್ ಅನ್ನು  ತುರುಕಿಸಿ ಇಟ್ಟೆ . ೫ ನಿಮಿಷದ ನಂತರ .. ನಮ್ಮ  ಬಿಸಿಬೇಳೆ ಭಾತ್  ತಯಾರಾಯ್ತು !  ಅದನ್ನೂ ,  " ಭಾಕರವಡಿ " ಎಂಬ ಪುಣೆ ಯಿಂದ ಕೊಂಡೊಯ್ದ ತಿನಿಸನ್ನು  ಪ್ಲೇಟ್ ನಲ್ಲಿ ಹಾಕಿ ತಿಂದೆವು . ಮತ್ತೆ ಹಣ್ಣುಗಳನ್ನು  ತಿಂದು , ಗ್ರೀನ್ ಟೀ  ಮಾಡಿ ಕುಡಿದಾಯ್ತು . ( ಹಾಲು ಸಕ್ಕರೆ ಎರಡೂ  ಅಲ್ಲಿ ಇಲ್ಲದ್ದರಿಂದ  ಬೇರೆ ಗತಿಯೂ ಇರಲಿಲ್ಲ  ನಮಗೆ !) . ಹೋಟೆಲ್ ಗಳಲ್ಲಿ ಸಾಧಾರಣವಾಗಿ ಟೀ ಬ್ಯಾಗ್ , ಸಕ್ಕರೆ , ಹಾಲಿನ ಪುಡಿ  ಮತ್ತು  ಕೆಲವೆಡೆ  ಕಾಫಿ ಪುಡಿ ( ಇನ್ ಸ್ಟಂಟ್ ) ಇರುತ್ತವೆ . ಚೀನೀಯರು ಹಸಿರು ಚಹಾವನ್ನು  ನೀರಿನಂತೆ ಕುಡಿಯುವುದರಿಂದ  ಇರಬೇಕು , ಈ ಹೋಟೆಲ್ ನಲ್ಲಿ ಬರೀ ಟೀ ಬ್ಯಾಗ್ ಗಳು ಮಾತ್ರವೇ ಇದ್ದವು ! 
ಅಂತೂ  ಮೊದಲ ದಿಂದ ಊಟದ ಕಥೆ ಮುಗಿದಂತಾಯ್ತು . ಊಟ ಮಾಡಿದ ತೃಪ್ತಿ  ಸಿಗದಿದ್ದರೂ .. ಹೊಟ್ಟೆ  ಅಂತೂ ಸುಮಾರಾಗಿ ತುಂಬಿತ್ತು. 
ಮರುದಿನ ಭಾನುವಾರ . ನಾವು ಮುಖ್ಯವಾಗಿ ನೋಡಲು ಬಂದಂಥಾ  ಎಕ್ಸಿಬಿಶನ್  ಶುರುವಾಗುವುದು ಸೋಮವಾರದಿಂದ.  ಹೀಗಾಗಿ ಮರುದಿನ  ನಮಗೆ ಪೂರ್ತಿ ಬಿಡುವಿತ್ತು . ಚೀನಾ ಗೋಡೆ ಹಾಗು ಬೀಜಿಂಗ್ ನ ಕೆಲವು  ಆಸಕ್ತಿದಾಯಕ  ಜಾಗಕ್ಕೆ  ಒಂದು ದಿನದ  ಟೂರ್ ಹೋಗುವುದಾದರೆ ಆ ಬಗ್ಗೆ ವ್ಯವಸ್ಥೆ ಮಾಡುತ್ತೇವೆ ಎಂದು ಹೋಟೆಲ್ ನವರು   ತಿಳಿಸಿದ್ದರು . ನಾನೂ  ಆ ಬಗ್ಗೆ ವಿವರಗಳನ್ನು ಪಡೆದು ತಲಾ  ೨೬೦ ಯುವಾನ್ ( ಸುಮಾರು ೨೩೦೦ ರೂಪಾಯಿ)  ಕೊಟ್ಟು  ೩ ಜನಕ್ಕೆ ಟಿಕೆಟ್ ಕಾದಿರಿಸಿದ್ದಾಯ್ತು . ಬೆಳಿಗ್ಗೆ  ೮ ಕ್ಕೆಲ್ಲ ತಯಾರಾಗಿರಬೇಕೆಂದೂ ಕರೆದೊಯ್ಯಲು ವ್ಯಾನ್ ಬರುತ್ತದೆ ಎಂದು  ಹೇಳಿದ್ದರಿಂದ ನಾವು ಬೇಗ ಮಲಗುವ ತಯಾರಿ ನಡೆಸಿದೆವು. 
ಪ್ರಯಾಣ ಹಾಗೂ  ಊಟದ ವಿಷಯದಲ್ಲಿ ನಮ್ಮ ಸರ್ಕಸ್ ನಿಂದ ಸುಸ್ತಾಗಿದ್ದರೂ  ಮರುದಿನ ಚೀನಾ ಗೋಡೆಯನ್ನು ನೋಡುವ ನನ್ನ  ಮಹತ್ತರವಾದ ಕನಸು ಈಡೇರುವುದೆಂಬ ಸಂತಸದಲ್ಲಿ ನಂಗೆ ನಿದ್ದೆ ಬರುತ್ತಲೇ ಇರಲಿಲ್ಲ !  

 

6 comments:

ಈಶ್ವರ said...

ಚಿತ್ರಕ್ಕನ ಸಾಹಸಗಳು ಹೇಳಿ ಒಂದು ಕಾದಂಬರಿ ಬರೆಯುವಷ್ಟು ಸರಕಿದೆ. ಓದಿಸಿಕೊಂಡು ಹೋಗುತ್ತದೆ.

ಮೊದಲಿನದ್ದನ್ನೂ ಓದಿ ಎಲ್ಲದಕ್ಕೂ ಸೇರಿಸಿ ಒಂದೇ ಕಮೆಂಟ್.

ಮುಂದಿನ ಭಾಗ?

sunaath said...

ನಿಮ್ಮ ಲೇಖನದ ಮೂಲಕ ಚೀನಾದ ದರ್ಶನ ಆಗುತ್ತಿದೆ. ಚೀನಾದ ಒಳತಿರುಳನ್ನು ಅರಿಯಲು ಆತುರನಾಗಿದ್ದೇನೆ.

Badarinath Palavalli said...

ಒಳ್ಳೆಯ ಬರಹ.EI

Harisha - ಹರೀಶ said...

ಚೀನಾದಲ್ಲಿ ಸಸ್ಯಾಹಾರಿಗಳಿಗೆ ಕಷ್ಟ ಕಷ್ಟ.. ಮಹಾ ಕಷ್ಟ :(

Anonymous said...

ಚಿತ್ರಕ್ಕನವರೆ, ಚೀನಾಕ್ಕೆ ಹೋದರೆ, ಸಸ್ಯಾಹಾರಿಗಳು ಊಟಕ್ಕೂ ಇಸ್ಟೊಂದು ಪರದಾದಬೇಕೆ. ಅದರಲ್ಲೂ ಭಾಷೆಯ ಗೊಂದಲ ಬೇರೆ, ಅಲ್ಲಿ ಮಾರ್ಗಧರ್ಶಕರು ಇರುವುದಿಲ್ಲವೇ, ಕೊನೆ ಪಕ್ಷ ಹೋಟೆಲಿನವರಾದರೂ, ಇಂತಹ ವಿಷಯಗಳಿಗೆ ಸಹಾಯ ಮಾಡಬೇಕಲ್ಲವೆ. ಒಟ್ಟಿನಲ್ಲಿ ನಿಮ್ಮ ನಿರೂಪಣೆ ಚೆನ್ನಾಗಿದೆ. ಮುಂದಿನ ಭಾಗಕ್ಕೆ ಕಾಯುತ್ತಿದ್ದೇವೆ. ವಂದನೆಗಳು.

ಚುಕ್ಕಿಚಿತ್ತಾರ said...

ಚನ್ನಾಗಿದೆ.. ಊಟಕ್ಕಾಗಿ ಸ೦ಕಟ...:))