August 18, 2012

ಚೀನಾದಲ್ಲಿ ನಾನು - ಬೀಜಿಂಗ್ ಪ್ರವಾಸ


ಬೆಳಿಗ್ಗೆ ಬೇಗ ಎದ್ದು  ತಯಾರಾಗಿ ಹೋಟೆಲ್ ನ ರೆಸ್ಟೋರೆಂಟ್ ಗೆ ಬಂದೆವು .  ಬೆಳಿಗ್ಗೆ ಹೇಗೂ " ಬಫೆ " ಇರುತ್ತಿದ್ದುದರಿಂದ ತೊಂದರೆ ಇರಲಿಲ್ಲ . ಸಸ್ಯಾಹಾರ - ಮಾಂಸಾಹಾರ ಎರಡೂ ಇದ್ದವು .
ಎರಡು ಬಗೆಯ ಗಂಜಿ  (ಆಕ್ಕಿಯದು ಹಾಗೂ ಮೆಕ್ಕೆ ಜೋಳದ  ನುಚ್ಚಿನದು) ,ಅದರೊಟ್ಟಿಗೆ ಹಾಕಿ ಕೊಳ್ಳಲು ಹಾಲು , ಸೋಯಾ ಹಾಲು . ಅನ್ನದ ಒಂದು ಬಗೆ  ( ಅದರಲ್ಲಿ ಕೆಲವೊಮ್ಮೆ ಮಾಂಸಾಹಾರ ವಿರುತ್ತಿತ್ತು ) ಬೇಯಿಸಿದ ತರಕಾರಿ , ಪಲ್ಯದಂತೆ  ಮಸಾಲೆ ಹಾಕಿ ಬೇಯಿಸಿದ  ಕಾಳು , ಬ್ರೆಡ್ , ಬನ್ , ಬೆಣ್ಣೆ, ೨-೩ ಬಗೆಯ ಜಾಮ್ ಅದಲ್ಲದೆ ತಾಜಾ ಹಣ್ಣುಗಳು , ಕಾರ್ನ್ ಫ್ಲೇಕ್ ಇತ್ಯಾದಿ ಇದ್ದವು .ಎರಡು ಬಗೆಯ ಜ್ಯೂಸ್ ಕೊಡ ಇದ್ದವು.  
ಒಂದು ಕಡೆ  ಒಬ್ಬಾತ ಬಿಸಿ ಬಿಸಿಯಾಗಿ ಆಮ್ಲೆಟ್ ಮಾಡಿ ಕೊಡುತ್ತಿದ್ದ  ಅದರಲ್ಲಿ ಸಣ್ಣಗೆ ಹೆಚ್ಚಿದ  ನೀರುಳ್ಳಿ, ಹಸಿಮೆಣಸು , ಅಲ್ಲದೆ ಅತಿ ಸಣ್ಣಕ್ಕೆ  ಕೊಚ್ಚಿಟ್ಟ  ಹಂದಿ ಮಾಂಸದ ಚೂರುಗಳನ್ನು ಹಾಕಿ ಬೇಯಿಸಿ ಕೊಡುತ್ತಿದ್ದ !  ನಾವು ತಿನ್ನುವಂಥಾದ್ದನ್ನು ಪ್ಲೇಟ್ ನಲ್ಲಿ ಹಾಕಿಕೊಂಡು , ಜ್ಯೂಸ್ ಲೋಟ ತುಂಬಿಕೊಂಡು  ಒಂದು ಟೇಬಲ್ ಗೆ ಬಂದು ಕುಳಿತೆವು  . ಮಧ್ಯಾಹ್ನದ ಊಟದ ಬಗ್ಗೆ ಅನುಮಾನವಿದ್ದುದರಿಂದ  ಈಗಲೇ ಹೊಟ್ಟೆ ಹಿಡಿದಷ್ಟು  ತಿನ್ನಬೇಕೆಂದು ನಿರ್ಧಾರ ಮಾಡಿದ್ದೆವು . ಸರಿಯಾಗಿ ತಿಂದು .. ಸ್ಟ್ರಾಂಗ್  ಕಾಫಿ ಕುಡಿದು ರೆಡಿಯಾಗಿ ಹೋಟೆಲ್ ನ ರಿಸೆಪ್ಶನ್  ನಲ್ಲಿ ಕುಳಿತೆವು. ೮ ಗಂಟೆ ೫ ನಿಮಿಷಕ್ಕೆ  ನಮ್ಮನ್ನು ಕೇಳಿಕೊಂಡು ಒಬ್ಬಾತ ಬಂದ . ನೋಡಲು  ಚೀನೀಯರಂತೆಯೇ  ಇದ್ದರೂ ಎತ್ತರ- ದಪ್ಪದಲ್ಲಿ ಯೂರೋಪ್ ನವರಂತಿದ್ದ " ಲಿಯೋ " ನಮ್ಮ ಇಂದಿನ ಗೈಡ್ ! 
ನಮ್ಮನ್ನು ಕರೆದೊಯ್ಯಲೆಂದು ಬಂದ ಎ ಸಿ  ವ್ಯಾನ್ ನಲ್ಲಿ  ಇದ್ದ  ಇನ್ನೊಬ್ಬ ಪ್ರವಾಸಿ  ಬ್ರೆಜಿಲ್ ನ  " ಅಕ್ತೋರೋ ".  ೫೦ ರ ಹರಯದ ಆತ ಪಪೆಟ್ ಶೋ  ಮಾಡುವನಂತೆ . ಚೀನಾದಲ್ಲಿ ನಡೆಯುತ್ತಿದ್ದ ಅಂತಾರಾಷ್ಟ್ರೀಯ  ಸೆಮಿನಾರ್ ಒಂದರಲ್ಲಿ ಭಾಗವಹಿಸಲು ಬಂದವನೆಂದು ಹೇಳಿದ . 

ವ್ಯಾನ್ ಹೊರಟ  ಕೂಡಲೇ  ಲಿಯೋ  ನಮಗೆ  ಅಂದಿನ ಕಾರ್ಯಕ್ರಮಗಳ   ಬಗ್ಗೆ ಹೇಳಿದ . ನಮಗೆ ಸಮಾಧಾನ ತಂದ ವಿಷಯ ಎಂದರೆ  ಲಿಯೋ ಚೆನ್ನಾಗಿ ಇಂಗ್ಲಿಷ ಮಾತನಾಡುತ್ತಿದ್ದ ! ಮುಖ್ಯ ಎಂದರೆ ಅವನ ಇಂಗ್ಲಿಷ್ ನಮಗೇ ಹಾಗೂ ನಮ್ಮ ಇಂಗ್ಲಿಷ್  ಅವನಿಗೆ ಅರ್ಥವಾಗುತ್ತಿತ್ತು !!! ಎಲ್ಲೆಲ್ಲಿಗೆ ಹೋಗುತ್ತೇವೆ ? ಅಲ್ಲಿನ ವಿಶೇಷಗಳೇನು ? ಎಷ್ಟು ಹೊತ್ತು ನಾವು ಅಲ್ಲಿ ಕಾಲ ಕಳೆಯಬಹುದು  ಇತ್ಯಾದಿ . 

ಆ ಪ್ರಕಾರ ನಮ್ಮ ಮೊದಲ ಭೇಟಿ  " ಜೇಡ್ ಮ್ಯೂಸಿಯಂ " ಗೆ . 
ಜೇಡ್ ಎನ್ನುವುದು ಒಂದು ಬಗೆಯ ಕಲ್ಲು. ಸಾಧಾರಣವಾಗಿ  ಹಸಿರು ಬಣ್ಣದ ಇದು ಆಭರಣಗಳಲ್ಲಿ  ಬಳಕೆಯಾಗುತ್ತದೆ . ಅಮೂಲ್ಯ ಹರಳಲ್ಲದಿದ್ದರೂ  semi precious ಸಾಲಿನಲ್ಲಿ  ಬರುತ್ತದೆ. ಅನೇಕ ಖನಿಜಗಳಿರುವ ಈ ಕಲ್ಲಿಗೆ ಚೀನೀಯರು ಬಹಳ ಮಹತ್ವ ಕೊಡುತ್ತಾರೆ . ಸಾಮಾನ್ಯವಾಗಿ ಹಸಿರು ಬಣ್ಣದ್ದಾದರೂ ಅದರಲ್ಲಿರುವ ಖನಿಜಗಳ ಪ್ರಮಾಣದ ಮೇಲಿಂದ ಬಣ್ಣದಲ್ಲಿ ಸ್ವಲ್ಪ ವ್ಯತ್ಯಾಸ ಕಂಡು  ಬರುತ್ತದೆ . ಚೀನೀಯರ ಪ್ರಕಾರ  ಈ ಕಲ್ಲು ಬಣ್ಣ ಬದಲಾಯಿಸುತ್ತದೆ. ಹೀಗಾಗಿ ಇದನ್ನು ಅಪೂರ್ವ ಶಕ್ತಿ ಇರುವ ಕಲ್ಲೆಂದೂ ಕೇವಲ ರಾಜವರ್ಗದವರು ಮಾತ್ರ ಧರಿಸಬಹುದೆಂದೂ ಇವರು ನಂಬಿದ್ದರಂತೆ. 
ಈ ಮನೋ ಭಾವ ಇನ್ನೂ ಇದೆ ಎಂದ ನಮ್ಮ ಲಿಯೋ ! ಅವನ ಪ್ರಕಾರ ಧರಿಸುವ ವ್ಯಕ್ತಿಯ ದೇಹದ ತಾಪಮಾನಕ್ಕನುಗುಣವಾಗಿ ಕೆಲವೊಮ್ಮೆ ಅದರ ಬಣ್ಣದಲ್ಲಿ ವ್ಯತ್ಯಾಸ ತೋರಿ ಬರುತ್ತದೆ. ಅದೂ ಕೂಡ  ಸತತವಾಗಿ ಮೈಮೇಲೆ ಧರಿಸಿದಾಗ ಮಾತ್ರ ! ಅದಕ್ಕೆ ಅದರಲ್ಲಿರುವ  ಖನಿಜಾಂಶಗಳೇ  ಕಾರಣ  , ತೆಗೆದು ಒಂದು ಕಡೆ ಇರಿಸಿದಾಗ ಹೀಗೆ ಬಣ್ಣ ಬದಲಾಗದು ಎಂದು ವಿಜ್ಞಾನಿಗಳ  ಅಭಿಪ್ರಾಯ ಎಂದೂ ಆತ ಹೇಳಿದ . 
 ಜೇಡ್ ಮ್ಯೂಸಿಯಂ ನ ಎದುರು ನಮ್ಮ ವ್ಯಾನ್ ನಿಲ್ತು.   ಲಿಯೋ  ಹೋಗಿ ಪಾಸ್ ತೆಗೆದುಕೊಂಡು ಬಂದ. ನಮ್ಮ ಜೊತೆ ಒಬ್ಬ " ಗೈಡಿಣಿ " ಬಂದಳು. ಅರ್ಥವಾಗುವ  ಇಂಗ್ಲಿಶ್ ನಲ್ಲಿ ಮೃದುವಾಗಿ ಮಾತಾಡುತ್ತಾ ನಮ್ಮನ್ನು ಒಳಗೆ ಕರೆದೊಯ್ದಳು ! ಕಲ್ಲಿನ ಮೂಲರೂಪ, ನಂತರ ಅದನ್ನು ಹೇಗೆ ಕಡೆಯುತ್ತಾರೆ , ಹೇಗೆ ಸೂಕ್ಷ್ಮ ಕುಸುರಿ ಕೆಲಸ ಮಾಡುತ್ತಾರೆ  ಎಂದೆಲ್ಲ ನಮಗೆ ವಿವರಿಸುತ್ತಾ  ಕರೆದೊಯ್ದಳು . ನಮ್ಮ ಒಂದು ಭಾಗಕ್ಕೆ ಗಾಜಿನ ಗೋಡೆಯಿದ್ದು , ಅದರಾಚೆ  ತಮ್ಮ ಪಾಡಿಗೆ ಕೆಲಸ ಮಾಡುತ್ತಿರುವ ಕುಶಲಕರ್ಮಿಗಳು  ಕಾಣುತ್ತಿದ್ದರು . ನಾವು ಅವರು ಹೇಗೆ ಕೆತ್ತನೆ ಕೆಲಸ ಮಾಡುತ್ತಾರೆ ಎಂದು ನಿಂತು ನೋಡಬಹುದಿತ್ತು ! ಬೆರಗಿನಿಂದ ಅದನ್ನೆಲ್ಲ ನೋಡುತ್ತಾ ಮುಂದೆ ಹೋದರೆ ಅಲ್ಲಿ ಅವರ ಪ್ರದರ್ಶನ ಹಾಗೂ ಮಾರಾಟ ಮಳಿಗೆ ಇತ್ತು . ಜೇಡ್ ನಲ್ಲಿ  ಕಡೆದ ಮೂರ್ತಿಗಳು, ಅಲಂಕಾರಿಕ ವಸ್ತುಗಳು , ಸೂಕ್ಷ್ಮ ಕೆಲಸದ ಆಭರಣಗಳು  ಇತ್ಯಾದಿಗಳು ಅಲ್ಲಿದ್ದವು ! ಅದು ಸರಕಾರ ಮಾನ್ಯತೆ ಪಡೆದ ಮಳಿಗೆಯೆಂದೂ ಇಲ್ಲಿ ಖರೀದಿಸಿದ ವಸ್ತುಗಳಿಗೆ ರಿಯಾಯಿತಿ ಅಷ್ಟೇ ಅಲ್ಲದೆ , ಗ್ಯಾರಂಟೀ ಕೂಡ  ಇರುತ್ತದೆ  , ಗುಣಮಟ್ಟ ಖಾತ್ರಿಯದು ಎಂದೆಲ್ಲ ನಮ್ಮ "ಗೈಡಿಣಿ" ಹೇಳಿದಳು . ಅಲ್ಲದೆ , ಹೊರಗೆ ಮಾರ್ಕೆಟ್ ನಲ್ಲಿ ಹೇಗೆ  ಮೋಸ ಮಾಡುತ್ತಾರೆ , ನಿಜವಾದ ಜೇಡ್ ಅನ್ನು ಗುರುತಿಸುವುದು ಹೇಗೆ ಎಂದೆಲ್ಲ ಆಕೆ ತೋರಿಸಿಕೊಟ್ಟಳು ! ಅಲ್ಲಿ ಚಂದ ಚಂದದ  ವಸ್ತುಗಳೆನೋ  ಗಮನ ಸೆಳೆಯುತ್ತಿದ್ದವು . ಆದರೆ ಬೆಲೆ ಕೇಳಿದ ಕೂಡಲೇ ನನ್ನ ಮನಸ್ಸು  ಒಂಭತ್ತರಿಂದ ಗುಣಿಸುತ್ತಾ ನನ್ನನ್ನು ಮುಂದೆ ಹೋಗುವಂತೆ ಪ್ರೇರೇಪಿಸುತ್ತಿತ್ತು !! ಆದರೂ ತಡೆಯದೆ , ಮಗಳಿಗಾಗಿ ಒಂದು  ಬ್ರೆಸ್ ಲೆಟ್  ಖರೀದಿಸಿದೆ . ಅವರ ಕುಸುರಿ ಕೆಲಸವನ್ನೂ ಹೊಗಳುತ್ತಾ  ಹೊರಗೆ ಬಂದೆವು . 
ಮುಂದಿನ ತಾಣಕ್ಕೆ ಹೋಗಲು  ವ್ಯಾನ್ ನಲ್ಲಿ ಕುಳಿತೆವು. ಅಕ್ತೊರೋ  ಅಲ್ಲಿ ಮ್ಯೂಸಿಯಂ ನ ಹೊರಗೆ ಮಾರುತ್ತಿದ್ದ ಏನೋ ಒಂದು  ಕುರುಕಲು ತಿಂಡಿ ತೆಗೆದುಕೊಂಡು ಬಂದಿದ್ದ . ಚೆನ್ನಾಗಿದೆ ತಿನ್ನಿ ಎಂದು ನಮಗೂ ಕೊಟ್ಟ.ಇದು ಸಂಪೂರ್ಣವಾಗಿ ಶಾಕಾಹಾರವೆಂದು  ಲಿಯೋ ಹೇಳಿದಮೇಲೆ  ನಾವೂ ಸಹ ರುಚಿ ನೋಡಿದೆವು  . ನೋಡಲು " ಉಂಡ್ಲ ಕಾಳಿ "ನಂತೆಯೇ  ಕಾಣುತ್ತಿದ್ದ  ತಿಂಡಿ ಉಪ್ಪು , ಖಾರ ,ಸಿಹಿ ಬೆರೆತು ತಿನ್ನಲು ಗರಿ ಗರಿಯಾಗಿತ್ತ್ತು .
                                                       ಜೇಡ್ ಮ್ಯೂಸಿಯಂ ನಲ್ಲಿ  ಪ್ರದರ್ಶಿಸಿದ ಕೆಲ  ಕೆತ್ತನೆಗಳು 

ನಮ್ಮ ಮುಂದಿನ ನಿಲುಗಡೆ ಬೀಜಿಂಗ್ ನಗರದಿಂದ ಆಚೆಯಿರುವ  " ಮಿಂಗ್ ಸಮಾಧಿಗಳು "
ಚೀನಾವನ್ನು ಆಳಿದ   ರಾಜವಂಶ ಗಳಲ್ಲಿ ಅತ್ಯಂತ ಪ್ರಮುಖ ಹಾಗೂ ಜನಪ್ರಿಯವಾಗಿದ್ದು    " ಮಿಂಗ್  ರಾಜವಂಶ " . 1368 - 1644ರ ವರೆಗೆ ಆಳಿದ  ಈ ವಂಶದ ೧೩ ರಾಜರುಗಳ ಸಮಾಧಿ ಈ  ಜಾಗದಲ್ಲಿದೆ .  " ತಿಯಾನ್ ಶೂ " ಪರ್ವತದ ತಪ್ಪಲಲ್ಲಿ ( ಇದಕ್ಕೆ ಟೈಗರ್ ಹಿಲ್ ಎಂದೂ ಹೇಳುತ್ತಾರೆ ) ಸುಮಾರು ೧೨೦  ಚ. ಕಿ.ಮೀ ವಿಸ್ತಾರವಾದ ಜಾಗದಲ್ಲಿ ೧೩ ಸಮಾಧಿಗಳಿವೆ. ಸಮಾಧಿಗಳ ನಡುವೆ ಅರ್ಧ ಕಿ.ಮೀ ನಿಂದ ಹಿಡಿದು ೮ ಕಿ ಮೀ ಗಳ ವರೆಗೂ ಅಂತರವಿದೆ. ಈ  ಸಮಾಧಿಗಳನ್ನು ಚೀನೀಯರ  ಫೆಂಗ್ ಶ್ವೆ ಆಧಾರದಲ್ಲಿ  ಯೋಜಿಸಲಾಗಿದೆ .  ಸಂಪೂರ್ಣ  ೧೨೦ ಕಿ. ಮೀ  ವಿಸ್ತಾರದ ಈ ಜಾಗವನ್ನು   ದುಷ್ಟ ಶಕ್ತಿಗಳನ್ನು , ಪ್ರೇತಾತ್ಮಗಳ ಓಡಾಟವನ್ನು ತಡೆಯುವಂತೆ ಮಂತ್ರೋಕ್ತಿಗಳಿಂದ ಭದ್ರಗೊಳಿಸಲಾಗಿದೆ ಎಂದು  ನಮ್ಮ  ಗೈಡ್ ಹೇಳಿದ !  ಸದ್ಯಕ್ಕೆ ಕೇವಲ ಮೂರು ಸಮಾಧಿಗಳನ್ನು ಮಾತ್ರ ಸಾರ್ವಜನಿಕರಿಗಾಗಿ ತೆರೆಯಲಾಗಿದೆ. ಅದರಲ್ಲಿ " ದಿಂಗ್  ಲಿಂಗ್ " ಎಂಬ ಅತ್ಯಂತ ಪುರಾತನ ಸಮಾಧಿಯನ್ನು ಉತ್ಖತನ ಮಾಡಲಾಗಿದ್ದು  ಅದರಲ್ಲಿನ ಅಮೂಲ್ಯ ವಸ್ತುಗಳನ್ನು ಪ್ರದರ್ಶನಕ್ಕಿಡಲಾಗಿದೆ. ಆದರೆ ನಮಗೆ ಅಲ್ಲಿಗೆ ಹೋಗಲು ಆಗಲಿಲ್ಲ 
ನಾವು ಹೋಗಿದ್ದು  "  ಝಾವೋ ( ಶ್ಯಾವೋ ?)   ಲಿಂಗ್ " ಗೆ . ಝಾವೋ  ಇದು ದೊರೆಯ ಹೆಸರು. " ಲಿಂಗ್   " ಎಂದರೆ ಸಮಾಧಿ ಎಂದರ್ಥ  ಎಂದು ನಮ್ಮ ಲಿಯೋ ವಿವರಿಸಿದ. 

ವ್ಯಾನ್ ನಿಂದ ಕೆಳಗಿಳಿಡು ಪಾಸ್ ತೆಗೆದುಕೊಂಡು ಗೇಟ್ ನೊಳಹೊಕ್ಕೆವು .  ಅತ್ಯಂತ ಪ್ರಶಾಂತವಾದ ವಾತಾವರಣ . ಯಾವ ಗೌಜು ಗದ್ದಲವಿಲ್ಲ. ಸುತ್ತಮುತ್ತೆಲ್ಲ ಗಿಡ ಮರಗಳು , ನಾನಾ ಬಗೆಯ ಹಕ್ಕಿಗಳ ಚಿಲಿಪಿಲಿ . ಮೆಲ್ಲಗೆ ಬೀಸುವ ತಂಗಾಳಿ .. ನಮ್ಮನ್ನು ಮುದಗೊಳಿಸಿತು . ವಿಶಾಲವಾದ ಆವರಣದಲ್ಲಿ ಕಸ ಕಡ್ಡಿಗಳಿಲ್ಲ . ನಮಗೂ ದೊಡ್ಡದಾಗಿ ಮಾತನಾಡಲು ಮನಸ್ಸು ಬರುತ್ತಿರಲಿಲ್ಲ .

ಸಮಾಧಿಯತ್ತ  !
                                 
ಸಮಾಧಿಗಳ ಬಗ್ಗೆ , ಚಕ್ರವರ್ತಿಗಳ ಬಗ್ಗೆ ,ಅಂದಿನ ಪದ್ಧತಿಗಳ ಬಗ್ಗೆ  ಲಿಯೋ ಹೇಳುತ್ತಾ ಹೋಗುತ್ತಿದ್ದ . ತಮ್ಮ ಜೀವಿತಾವಧಿಯಲ್ಲೇ  ರಾಜರು ತಮ್ಮ ಸಮಾಧಿಗೆ ಸೂಕ್ತ ಸ್ಥಳ ವನ್ನು ಆರಿಸಿ ಇಡುತ್ತಿದ್ದರಂತೆ . ಸತ್ತ ನಂತರ ಶವವನ್ನು ಅಲ್ಲಿಗೆ ಸಕಲ ಸಂಪ್ರದಾಯಗಳೊಂದಿಗೆ  ಒಯ್ದು ಹೂಳಲಾಗುತ್ತಿತ್ತು . ಅದಕ್ಕೂ ಕೂಡ  ಕಟ್ಟು  ನಿಟ್ಟಾದ ಪದ್ಧತಿಗಳನ್ನು ಪಾಲಿಸಬೇಕಾಗಿತ್ತು. ಶವಗಳನ್ನು  ಕೊಂಡೊಯ್ಯಲು ವಿಶೇಷವಾದ ದಾರಿ ಇತ್ತು .ದಾರಿಯ ಇಕ್ಕೆಲಗಳಲ್ಲೂ  ಕಾಲ್ಪನಿಕವಾದ ಕೆಲವು ಪ್ರಾಣಿಗಳ ಮೂರ್ತಿಗಳಿವೆ. ಅವು ಕಾವಲಿಗಾಗಿಯಂತೆ ! ಈ ದಾರಿಯ ಮೂಲಕವಾಗಿ ಮಂತ್ರೋಕ್ತಿಗಳೊಂದಿಗೆ ನಿಯೋಜಿತ ಸ್ಥಳಕ್ಕೆ ಶವಪೆಟ್ಟಿಗೆಯನ್ನು ಒಯ್ಯಲಾಗುತ್ತಿತ್ತು . 
ದೊರೆಯನ್ನು ಹೂಳಿದ ನಂತರ  ಆತನಿಗಾಗಿ ಆತ್ಮಾರ್ಪಣೆ ಮಾಡಿಕೊಳ್ಳುವ ಸೇವಕರನ್ನೂ ದೊರೆಯ ಸಮಾಧಿಯಿಂದ  ಸ್ವಲ್ಪ ದೂರದಲ್ಲಿ ಸಕಲ ಮರ್ಯಾದೆಗಳೊಂದಿಗೆ ಹೂಳಲಾಗುತ್ತಿತ್ತಂತೆ. ಹಾ, ದೊರೆಯ ಸಮಾಧಿಯ ಬಳಿಯಲ್ಲಿ ಆತನ ರಾಣಿಗಾಗಿಯೂ  ಜಾಗವನ್ನು  ಕಾದಿರಿಸಲಾಗುತ್ತಿತ್ತಂತೆ .  

 ಸಮಾಧಿಯ  ಕಟ್ಟಡವನ್ನು ಸಂಪೂರ್ಣವಾಗಿ ಮರದಿಂದ ಕಟ್ಟ ಲಾಗಿದೆ . ವಿಶೇಷ ಜಾತಿಯ ಈ ಮರಗಳು ೫೦೦ಕ್ಕೂ  ಹೆಚ್ಚು ವರ್ಷಗಳ ನಂತರವೂ ಗಟ್ಟು ಮುಟ್ಟಾಗಿವೆ . ಲಿಯೋ ನ ಪ್ರಕಾರ  ಕನಿಷ್ಠ  ೮೦೦ ರಿಂದ ೯೦೦ ವರ್ಷ ವಯಸ್ಸಾದ ಮರಗಳನ್ನು ಆರಿಸುತ್ತಿದ್ದರಂತೆ ಇಂಥಾ ಕಟ್ಟೋಣಗಳಿಗೆ . ಹಾಗೆಯೇ ಅಲ್ಲಿನ ಪ್ರತಿ ವಿವರಗಳನ್ನೂ ಉತ್ತಮವಾಗಿ ಕಾದುಕೊಳ್ಳಲಾಗಿದೆ . ೨೫ ಅಡಿಗಳಿಗೂ ಎತ್ತರ ದ ಕಂಬಗಳು ಭವ್ಯತೆಯನ್ನು ಮೆರೆಯುತ್ತಿದ್ದವು .

ಸಮಾಧಿ ಕಟ್ಟಡ 
                                          

   ನಾವು ಭೇಟಿ ನೀಡಿದ ಸಮಾಧಿಯ ವಿಶೇಷವೆಂದರೆ ,  ಅಲ್ಲಿ ಒಟ್ಟು ೪ ಸಮಾಧಿಗಳಿದ್ದವು. ರಾಜ ಹಾಗೂ ಆತನ ೩ ರಾಣಿಯರು ! ಸಮಾಧಿಯ ಸುತ್ತ ಕಟ್ಟಿದ ಭವ್ಯ ಕಟ್ಟಡದಲ್ಲಿ ರಾಜನಿಗೆ  ಇಷ್ಟವಾಗುವ ಎಲ್ಲಾ ಆಹಾರ ಪದಾರ್ಥಗಳನ್ನೂ ( ಪ್ರತಿಕೃತಿ )  ಮೇಜಿನ ಮೇಲೆ  ಜೋಡಿಸಲಾಗಿತ್ತು . ಮೇಜಿನ ಮುಂದೆ ೪ ಕುರ್ಚಿಗಳನ್ನು ಅಲಂಕರಿಸಿ ಇಡಲಾಗಿತ್ತು . ಪ್ರತಿ ವರ್ಷ  ರಾಜನ ಮರಣದ ದಿನದಂದು ನಮ್ಮಲ್ಲಿ ಶ್ರಾದ್ಧ ಮಾಡಿದಂತೆಯೇ ಏನೇನೋ ವಿಧಿಗಳಿರುತ್ತವೆ ಎಂದೂ , ಆಗ ಆತನಿಗಿಷ್ಟವಾದ ಆಹಾರ ಪದಾರ್ಥಗಳನ್ನು  ನೈವೇದ್ಯ ಮಾಡಲಾಗುತ್ತದೆ ಎಂದೂ ತಿಳಿಯಿತು . ಹಾಗೆಯೇ , ವಸ್ತ್ರಾಭರಣಗಳನ್ನೂ ಅರ್ಪಿಸಲಾಗುತ್ತದಂತೆ . ದೊಡ್ಡ ಪೂಜೆಯೇ ನಡೆಯುತ್ತದೆ ಎಂದೂ ಲಿಯೋ ಹೇಳಿದ . 

ರಾಜ ಭೋಜನ  
ಸಮಾಧಿ ಕಟ್ಟಡದಿಂದ ಹೊರ ಬಂದು ಪಕ್ಕದಲ್ಲಿದ್ದ  ಪುಟ್ಟ ಕುಟೀರವನ್ನು ಹೊಕ್ಕೆವು. ಅಲ್ಲಿ ದೊರೆಯ ಒಂದು ಸುಂದರ ಪ್ರತಿಮೆ ಯೂ ಆತನಿಗೆ ಸಂಬಂಧಿಸಿದ ಚಿತ್ರಸಹಿತ ವಿವರಣೆಯೂ ಇದ್ದವು. 

ಝಾವೋ  ( ಶ್ಯಾವೋ ) ದೊರೆ 
                               
ಅವುಗಳನ್ನು ನೋಡಿ ಹೊರ ಬಿದ್ದೆವು. ಸಮಾಧಿ ಸ್ಥಳದಿಂದ ಹೊರ ಬೀಳುವಾಗ  ಮುಖ್ಯ ಬಾಗಿಲಲ್ಲಿ ನಿಂತು ಚೀನೀ ಭಾಷೆಯಲ್ಲಿ  " ನಾನು  ಮರಳಿ ಬಂದಿದ್ದೇನೆ " ಎಂದು ಹೇಳಿ ಕೈ ಮೈ , ಬಟ್ಟೆಗಳನ್ನು ಝಾಡಿಸಿಕೊಂಡು   ಹಿಂದೆ ನೋಡದೆ ಬಾಗಿಲಿಂದ ಹೊರ ಬೀಳಬೇಕೆಂದು  ಲಿಯೋ ಹೇಳಿದ.  ಅದು ಅಲ್ಲಿ ಇರಬಹುದಾದ  ಯಾವುದೇ  ಆತ್ಮಗಳು ನಮ್ಮೊಂದಿಗೆ ಬಾರದಂತೆ  ತಡೆಯುವುದಂತೆ. ಆತ ಮಾಡಿ ತೋರಿಸಿದಂತೆ  ಮಾಡಿ ನಾವೂ ಹೊರಬಿದ್ದೆವು ! ಹೋಗೀ ಹೋಗೀ ಚೀನೀ ಭೂತನಾ ಯಾಕೆ ಜೊತೆಗೆ ಕರ್ಕೊಂಡು ಬರೋದು ಅಲ್ವಾ? ಹಿ ಹಿ ಹಿ  ! 
ಸಮಾಧಿಯಿಂದ ಹೊರಗೆ  , ಹೊರ ಪ್ರಪಂಚದತ್ತ ಲಿಯೋ ಮತ್ತು ಅಕ್ತೊರೋ 
                                  
ಅಂತೂ ಅಲ್ಲಿನ ತಂಪಾದ , ಪ್ರಶಾಂತ , ಸುಂದರ  ಪರಿಸರದಿಂದ  ಮನಸಿಲ್ಲದೇ ಹೊರಟೆವು . ಮುಂದಿನ  ನಮ್ಮ ನಿಲುಗಡೆ   " ಮಹಾಗೋಡೆ !! "  ನನ್ನ  ಉತ್ಸಾಹ ಹೆಚ್ಚ ತೊಡಗಿತು. ಆದರೆ ಆ ಹೊತ್ತಿಗೆ ಆಕಾಶದಲ್ಲಿ ಮೋಡಗಳು ಕವಿಯ ತೊಡಗಿ ನಾಲ್ಕು ಹನಿಯೂ  ಬಿದ್ದು ನನ್ನ ಉತ್ಸಾಹಕ್ಕೆ  ನೀರೆರೆಚತೊಡಗಿತು  ! ಅದೇನೇ ಆದರೂ ಆ ಗೋಡೆಯನ್ನು ನೋಡಲು ನಾನು ಕಾತುರಳಾಗಿದ್ದೆ ! 
ಗಾಡಿಯಲ್ಲಿ ಕುಳಿತ ಮೇಲೆ , ಜೋರಾಗಿ ಮಳೆ ಬಂದರೆ ಗೋಡೆಯನ್ನು ಹತ್ತಲು  ಆಗುತ್ತದೋ ಇಲ್ಲವೋ ಎಂದು ಲಿಯೋ ಅನುಮಾನ  ವ್ಯಕ್ತ ಪಡಿಸಿದ  ! ಅದೇನಿದ್ದರೂ ಅಲ್ಲಿಗೆ ಹೋದಮೇಲೆ ನೋಡಿಕೊಳ್ಳೋಣ ಎಂದು ನನಗೆ ನಾನೇ ಸಮಾಧಾನ ಹೇಳಿಕೊಂಡೆ. ಗಾಡಿ ಮುಂದೆ ಹೊರಟಿತು ! 

3 comments:

sunaath said...

ಚೀನಾದ ಜೊತೆಗೆ ನಮ್ಮ ಜಗಳ ಏನೇ ಇದ್ದರೂ ಸಹ, ಅವರ ಕಲಾಕೌಶಲ್ಯವನ್ನು ಮೆಚ್ಚಲೇಬೇಕು ಎಂದು ಅನ್ನಿಸುತ್ತದೆ. ಉತ್ತಮ ವಿವರಣೆಗಾಗಿ ಧನ್ಯವಾದಗಳು.

ಸುಧೇಶ್ ಶೆಟ್ಟಿ said...

kushi kushiyaagi odutta ideeni :)

ISHWARA BHAT said...

ಚೆನ್ನಾಗಿತ್ತು ವಿವರಣೆ.. ಹಹ್ಹ ಗೈಡಿಣಿ ಅನ್ನುವ ಹೊಸಾ ಪದ.. ಚೈನಾ ಮಾಡೆಲ್ಲು :)

ಮುಂದ?