ಬೆಳಿಗ್ಗೆ ಬೇಗ ಎದ್ದು ತಯಾರಾಗಿ ಹೋಟೆಲ್ ನ ರೆಸ್ಟೋರೆಂಟ್ ಗೆ ಬಂದೆವು . ಬೆಳಿಗ್ಗೆ ಹೇಗೂ " ಬಫೆ " ಇರುತ್ತಿದ್ದುದರಿಂದ ತೊಂದರೆ ಇರಲಿಲ್ಲ . ಸಸ್ಯಾಹಾರ - ಮಾಂಸಾಹಾರ ಎರಡೂ ಇದ್ದವು .
ಎರಡು ಬಗೆಯ ಗಂಜಿ (ಆಕ್ಕಿಯದು ಹಾಗೂ ಮೆಕ್ಕೆ ಜೋಳದ ನುಚ್ಚಿನದು) ,ಅದರೊಟ್ಟಿಗೆ ಹಾಕಿ ಕೊಳ್ಳಲು ಹಾಲು , ಸೋಯಾ ಹಾಲು . ಅನ್ನದ ಒಂದು ಬಗೆ ( ಅದರಲ್ಲಿ ಕೆಲವೊಮ್ಮೆ ಮಾಂಸಾಹಾರ ವಿರುತ್ತಿತ್ತು ) ಬೇಯಿಸಿದ ತರಕಾರಿ , ಪಲ್ಯದಂತೆ ಮಸಾಲೆ ಹಾಕಿ ಬೇಯಿಸಿದ ಕಾಳು , ಬ್ರೆಡ್ , ಬನ್ , ಬೆಣ್ಣೆ, ೨-೩ ಬಗೆಯ ಜಾಮ್ ಅದಲ್ಲದೆ ತಾಜಾ ಹಣ್ಣುಗಳು , ಕಾರ್ನ್ ಫ್ಲೇಕ್ ಇತ್ಯಾದಿ ಇದ್ದವು .ಎರಡು ಬಗೆಯ ಜ್ಯೂಸ್ ಕೊಡ ಇದ್ದವು.
ಒಂದು ಕಡೆ ಒಬ್ಬಾತ ಬಿಸಿ ಬಿಸಿಯಾಗಿ ಆಮ್ಲೆಟ್ ಮಾಡಿ ಕೊಡುತ್ತಿದ್ದ ಅದರಲ್ಲಿ ಸಣ್ಣಗೆ ಹೆಚ್ಚಿದ ನೀರುಳ್ಳಿ, ಹಸಿಮೆಣಸು , ಅಲ್ಲದೆ ಅತಿ ಸಣ್ಣಕ್ಕೆ ಕೊಚ್ಚಿಟ್ಟ ಹಂದಿ ಮಾಂಸದ ಚೂರುಗಳನ್ನು ಹಾಕಿ ಬೇಯಿಸಿ ಕೊಡುತ್ತಿದ್ದ ! ನಾವು ತಿನ್ನುವಂಥಾದ್ದನ್ನು ಪ್ಲೇಟ್ ನಲ್ಲಿ ಹಾಕಿಕೊಂಡು , ಜ್ಯೂಸ್ ಲೋಟ ತುಂಬಿಕೊಂಡು ಒಂದು ಟೇಬಲ್ ಗೆ ಬಂದು ಕುಳಿತೆವು . ಮಧ್ಯಾಹ್ನದ ಊಟದ ಬಗ್ಗೆ ಅನುಮಾನವಿದ್ದುದರಿಂದ ಈಗಲೇ ಹೊಟ್ಟೆ ಹಿಡಿದಷ್ಟು ತಿನ್ನಬೇಕೆಂದು ನಿರ್ಧಾರ ಮಾಡಿದ್ದೆವು . ಸರಿಯಾಗಿ ತಿಂದು .. ಸ್ಟ್ರಾಂಗ್ ಕಾಫಿ ಕುಡಿದು ರೆಡಿಯಾಗಿ ಹೋಟೆಲ್ ನ ರಿಸೆಪ್ಶನ್ ನಲ್ಲಿ ಕುಳಿತೆವು. ೮ ಗಂಟೆ ೫ ನಿಮಿಷಕ್ಕೆ ನಮ್ಮನ್ನು ಕೇಳಿಕೊಂಡು ಒಬ್ಬಾತ ಬಂದ . ನೋಡಲು ಚೀನೀಯರಂತೆಯೇ ಇದ್ದರೂ ಎತ್ತರ- ದಪ್ಪದಲ್ಲಿ ಯೂರೋಪ್ ನವರಂತಿದ್ದ " ಲಿಯೋ " ನಮ್ಮ ಇಂದಿನ ಗೈಡ್ !
ನಮ್ಮನ್ನು ಕರೆದೊಯ್ಯಲೆಂದು ಬಂದ ಎ ಸಿ ವ್ಯಾನ್ ನಲ್ಲಿ ಇದ್ದ ಇನ್ನೊಬ್ಬ ಪ್ರವಾಸಿ ಬ್ರೆಜಿಲ್ ನ " ಅಕ್ತೋರೋ ". ೫೦ ರ ಹರಯದ ಆತ ಪಪೆಟ್ ಶೋ ಮಾಡುವನಂತೆ . ಚೀನಾದಲ್ಲಿ ನಡೆಯುತ್ತಿದ್ದ ಅಂತಾರಾಷ್ಟ್ರೀಯ ಸೆಮಿನಾರ್ ಒಂದರಲ್ಲಿ ಭಾಗವಹಿಸಲು ಬಂದವನೆಂದು ಹೇಳಿದ .
ವ್ಯಾನ್ ಹೊರಟ ಕೂಡಲೇ ಲಿಯೋ ನಮಗೆ ಅಂದಿನ ಕಾರ್ಯಕ್ರಮಗಳ ಬಗ್ಗೆ ಹೇಳಿದ . ನಮಗೆ ಸಮಾಧಾನ ತಂದ ವಿಷಯ ಎಂದರೆ ಲಿಯೋ ಚೆನ್ನಾಗಿ ಇಂಗ್ಲಿಷ ಮಾತನಾಡುತ್ತಿದ್ದ ! ಮುಖ್ಯ ಎಂದರೆ ಅವನ ಇಂಗ್ಲಿಷ್ ನಮಗೇ ಹಾಗೂ ನಮ್ಮ ಇಂಗ್ಲಿಷ್ ಅವನಿಗೆ ಅರ್ಥವಾಗುತ್ತಿತ್ತು !!! ಎಲ್ಲೆಲ್ಲಿಗೆ ಹೋಗುತ್ತೇವೆ ? ಅಲ್ಲಿನ ವಿಶೇಷಗಳೇನು ? ಎಷ್ಟು ಹೊತ್ತು ನಾವು ಅಲ್ಲಿ ಕಾಲ ಕಳೆಯಬಹುದು ಇತ್ಯಾದಿ .
ಆ ಪ್ರಕಾರ ನಮ್ಮ ಮೊದಲ ಭೇಟಿ " ಜೇಡ್ ಮ್ಯೂಸಿಯಂ " ಗೆ .
ಜೇಡ್ ಎನ್ನುವುದು ಒಂದು ಬಗೆಯ ಕಲ್ಲು. ಸಾಧಾರಣವಾಗಿ ಹಸಿರು ಬಣ್ಣದ ಇದು ಆಭರಣಗಳಲ್ಲಿ ಬಳಕೆಯಾಗುತ್ತದೆ . ಅಮೂಲ್ಯ ಹರಳಲ್ಲದಿದ್ದರೂ semi precious ಸಾಲಿನಲ್ಲಿ ಬರುತ್ತದೆ. ಅನೇಕ ಖನಿಜಗಳಿರುವ ಈ ಕಲ್ಲಿಗೆ ಚೀನೀಯರು ಬಹಳ ಮಹತ್ವ ಕೊಡುತ್ತಾರೆ . ಸಾಮಾನ್ಯವಾಗಿ ಹಸಿರು ಬಣ್ಣದ್ದಾದರೂ ಅದರಲ್ಲಿರುವ ಖನಿಜಗಳ ಪ್ರಮಾಣದ ಮೇಲಿಂದ ಬಣ್ಣದಲ್ಲಿ ಸ್ವಲ್ಪ ವ್ಯತ್ಯಾಸ ಕಂಡು ಬರುತ್ತದೆ . ಚೀನೀಯರ ಪ್ರಕಾರ ಈ ಕಲ್ಲು ಬಣ್ಣ ಬದಲಾಯಿಸುತ್ತದೆ. ಹೀಗಾಗಿ ಇದನ್ನು ಅಪೂರ್ವ ಶಕ್ತಿ ಇರುವ ಕಲ್ಲೆಂದೂ ಕೇವಲ ರಾಜವರ್ಗದವರು ಮಾತ್ರ ಧರಿಸಬಹುದೆಂದೂ ಇವರು ನಂಬಿದ್ದರಂತೆ.
ಈ ಮನೋ ಭಾವ ಇನ್ನೂ ಇದೆ ಎಂದ ನಮ್ಮ ಲಿಯೋ ! ಅವನ ಪ್ರಕಾರ ಧರಿಸುವ ವ್ಯಕ್ತಿಯ ದೇಹದ ತಾಪಮಾನಕ್ಕನುಗುಣವಾಗಿ ಕೆಲವೊಮ್ಮೆ ಅದರ ಬಣ್ಣದಲ್ಲಿ ವ್ಯತ್ಯಾಸ ತೋರಿ ಬರುತ್ತದೆ. ಅದೂ ಕೂಡ ಸತತವಾಗಿ ಮೈಮೇಲೆ ಧರಿಸಿದಾಗ ಮಾತ್ರ ! ಅದಕ್ಕೆ ಅದರಲ್ಲಿರುವ ಖನಿಜಾಂಶಗಳೇ ಕಾರಣ , ತೆಗೆದು ಒಂದು ಕಡೆ ಇರಿಸಿದಾಗ ಹೀಗೆ ಬಣ್ಣ ಬದಲಾಗದು ಎಂದು ವಿಜ್ಞಾನಿಗಳ ಅಭಿಪ್ರಾಯ ಎಂದೂ ಆತ ಹೇಳಿದ .
ಜೇಡ್ ಮ್ಯೂಸಿಯಂ ನ ಎದುರು ನಮ್ಮ ವ್ಯಾನ್ ನಿಲ್ತು. ಲಿಯೋ ಹೋಗಿ ಪಾಸ್ ತೆಗೆದುಕೊಂಡು ಬಂದ. ನಮ್ಮ ಜೊತೆ ಒಬ್ಬ " ಗೈಡಿಣಿ " ಬಂದಳು. ಅರ್ಥವಾಗುವ ಇಂಗ್ಲಿಶ್ ನಲ್ಲಿ ಮೃದುವಾಗಿ ಮಾತಾಡುತ್ತಾ ನಮ್ಮನ್ನು ಒಳಗೆ ಕರೆದೊಯ್ದಳು ! ಕಲ್ಲಿನ ಮೂಲರೂಪ, ನಂತರ ಅದನ್ನು ಹೇಗೆ ಕಡೆಯುತ್ತಾರೆ , ಹೇಗೆ ಸೂಕ್ಷ್ಮ ಕುಸುರಿ ಕೆಲಸ ಮಾಡುತ್ತಾರೆ ಎಂದೆಲ್ಲ ನಮಗೆ ವಿವರಿಸುತ್ತಾ ಕರೆದೊಯ್ದಳು . ನಮ್ಮ ಒಂದು ಭಾಗಕ್ಕೆ ಗಾಜಿನ ಗೋಡೆಯಿದ್ದು , ಅದರಾಚೆ ತಮ್ಮ ಪಾಡಿಗೆ ಕೆಲಸ ಮಾಡುತ್ತಿರುವ ಕುಶಲಕರ್ಮಿಗಳು ಕಾಣುತ್ತಿದ್ದರು . ನಾವು ಅವರು ಹೇಗೆ ಕೆತ್ತನೆ ಕೆಲಸ ಮಾಡುತ್ತಾರೆ ಎಂದು ನಿಂತು ನೋಡಬಹುದಿತ್ತು ! ಬೆರಗಿನಿಂದ ಅದನ್ನೆಲ್ಲ ನೋಡುತ್ತಾ ಮುಂದೆ ಹೋದರೆ ಅಲ್ಲಿ ಅವರ ಪ್ರದರ್ಶನ ಹಾಗೂ ಮಾರಾಟ ಮಳಿಗೆ ಇತ್ತು . ಜೇಡ್ ನಲ್ಲಿ ಕಡೆದ ಮೂರ್ತಿಗಳು, ಅಲಂಕಾರಿಕ ವಸ್ತುಗಳು , ಸೂಕ್ಷ್ಮ ಕೆಲಸದ ಆಭರಣಗಳು ಇತ್ಯಾದಿಗಳು ಅಲ್ಲಿದ್ದವು ! ಅದು ಸರಕಾರ ಮಾನ್ಯತೆ ಪಡೆದ ಮಳಿಗೆಯೆಂದೂ ಇಲ್ಲಿ ಖರೀದಿಸಿದ ವಸ್ತುಗಳಿಗೆ ರಿಯಾಯಿತಿ ಅಷ್ಟೇ ಅಲ್ಲದೆ , ಗ್ಯಾರಂಟೀ ಕೂಡ ಇರುತ್ತದೆ , ಗುಣಮಟ್ಟ ಖಾತ್ರಿಯದು ಎಂದೆಲ್ಲ ನಮ್ಮ "ಗೈಡಿಣಿ" ಹೇಳಿದಳು . ಅಲ್ಲದೆ , ಹೊರಗೆ ಮಾರ್ಕೆಟ್ ನಲ್ಲಿ ಹೇಗೆ ಮೋಸ ಮಾಡುತ್ತಾರೆ , ನಿಜವಾದ ಜೇಡ್ ಅನ್ನು ಗುರುತಿಸುವುದು ಹೇಗೆ ಎಂದೆಲ್ಲ ಆಕೆ ತೋರಿಸಿಕೊಟ್ಟಳು ! ಅಲ್ಲಿ ಚಂದ ಚಂದದ ವಸ್ತುಗಳೆನೋ ಗಮನ ಸೆಳೆಯುತ್ತಿದ್ದವು . ಆದರೆ ಬೆಲೆ ಕೇಳಿದ ಕೂಡಲೇ ನನ್ನ ಮನಸ್ಸು ಒಂಭತ್ತರಿಂದ ಗುಣಿಸುತ್ತಾ ನನ್ನನ್ನು ಮುಂದೆ ಹೋಗುವಂತೆ ಪ್ರೇರೇಪಿಸುತ್ತಿತ್ತು !! ಆದರೂ ತಡೆಯದೆ , ಮಗಳಿಗಾಗಿ ಒಂದು ಬ್ರೆಸ್ ಲೆಟ್ ಖರೀದಿಸಿದೆ . ಅವರ ಕುಸುರಿ ಕೆಲಸವನ್ನೂ ಹೊಗಳುತ್ತಾ ಹೊರಗೆ ಬಂದೆವು .
ಮುಂದಿನ ತಾಣಕ್ಕೆ ಹೋಗಲು ವ್ಯಾನ್ ನಲ್ಲಿ ಕುಳಿತೆವು. ಅಕ್ತೊರೋ ಅಲ್ಲಿ ಮ್ಯೂಸಿಯಂ ನ ಹೊರಗೆ ಮಾರುತ್ತಿದ್ದ ಏನೋ ಒಂದು ಕುರುಕಲು ತಿಂಡಿ ತೆಗೆದುಕೊಂಡು ಬಂದಿದ್ದ . ಚೆನ್ನಾಗಿದೆ ತಿನ್ನಿ ಎಂದು ನಮಗೂ ಕೊಟ್ಟ.ಇದು ಸಂಪೂರ್ಣವಾಗಿ ಶಾಕಾಹಾರವೆಂದು ಲಿಯೋ ಹೇಳಿದಮೇಲೆ ನಾವೂ ಸಹ ರುಚಿ ನೋಡಿದೆವು . ನೋಡಲು " ಉಂಡ್ಲ ಕಾಳಿ "ನಂತೆಯೇ ಕಾಣುತ್ತಿದ್ದ ತಿಂಡಿ ಉಪ್ಪು , ಖಾರ ,ಸಿಹಿ ಬೆರೆತು ತಿನ್ನಲು ಗರಿ ಗರಿಯಾಗಿತ್ತ್ತು .
ನಮ್ಮ ಮುಂದಿನ ನಿಲುಗಡೆ ಬೀಜಿಂಗ್ ನಗರದಿಂದ ಆಚೆಯಿರುವ " ಮಿಂಗ್ ಸಮಾಧಿಗಳು "
ಚೀನಾವನ್ನು ಆಳಿದ
ರಾಜವಂಶ ಗಳಲ್ಲಿ ಅತ್ಯಂತ ಪ್ರಮುಖ ಹಾಗೂ ಜನಪ್ರಿಯವಾಗಿದ್ದು " ಮಿಂಗ್ ರಾಜವಂಶ " . 1368 - 1644ರ ವರೆಗೆ ಆಳಿದ ಈ ವಂಶದ ೧೩ ರಾಜರುಗಳ ಸಮಾಧಿ ಈ ಜಾಗದಲ್ಲಿದೆ . " ತಿಯಾನ್ ಶೂ " ಪರ್ವತದ ತಪ್ಪಲಲ್ಲಿ ( ಇದಕ್ಕೆ ಟೈಗರ್ ಹಿಲ್ ಎಂದೂ ಹೇಳುತ್ತಾರೆ ) ಸುಮಾರು ೧೨೦ ಚ. ಕಿ.ಮೀ ವಿಸ್ತಾರವಾದ ಜಾಗದಲ್ಲಿ ೧೩ ಸಮಾಧಿಗಳಿವೆ. ಸಮಾಧಿಗಳ ನಡುವೆ ಅರ್ಧ ಕಿ.ಮೀ ನಿಂದ ಹಿಡಿದು ೮ ಕಿ ಮೀ ಗಳ ವರೆಗೂ ಅಂತರವಿದೆ. ಈ ಸಮಾಧಿಗಳನ್ನು ಚೀನೀಯರ ಫೆಂಗ್ ಶ್ವೆ ಆಧಾರದಲ್ಲಿ ಯೋಜಿಸಲಾಗಿದೆ . ಸಂಪೂರ್ಣ ೧೨೦ ಕಿ. ಮೀ ವಿಸ್ತಾರದ ಈ ಜಾಗವನ್ನು ದುಷ್ಟ ಶಕ್ತಿಗಳನ್ನು , ಪ್ರೇತಾತ್ಮಗಳ ಓಡಾಟವನ್ನು ತಡೆಯುವಂತೆ ಮಂತ್ರೋಕ್ತಿಗಳಿಂದ ಭದ್ರಗೊಳಿಸಲಾಗಿದೆ ಎಂದು ನಮ್ಮ ಗೈಡ್ ಹೇಳಿದ ! ಸದ್ಯಕ್ಕೆ ಕೇವಲ ಮೂರು ಸಮಾಧಿಗಳನ್ನು ಮಾತ್ರ ಸಾರ್ವಜನಿಕರಿಗಾಗಿ ತೆರೆಯಲಾಗಿದೆ. ಅದರಲ್ಲಿ " ದಿಂಗ್ ಲಿಂಗ್ " ಎಂಬ ಅತ್ಯಂತ ಪುರಾತನ ಸಮಾಧಿಯನ್ನು ಉತ್ಖತನ ಮಾಡಲಾಗಿದ್ದು ಅದರಲ್ಲಿನ ಅಮೂಲ್ಯ ವಸ್ತುಗಳನ್ನು ಪ್ರದರ್ಶನಕ್ಕಿಡಲಾಗಿದೆ. ಆದರೆ ನಮಗೆ ಅಲ್ಲಿಗೆ ಹೋಗಲು ಆಗಲಿಲ್ಲ
ನಾವು ಹೋಗಿದ್ದು " ಝಾವೋ ( ಶ್ಯಾವೋ ?) ಲಿಂಗ್ " ಗೆ . ಝಾವೋ ಇದು ದೊರೆಯ ಹೆಸರು. " ಲಿಂಗ್ " ಎಂದರೆ ಸಮಾಧಿ ಎಂದರ್ಥ ಎಂದು ನಮ್ಮ ಲಿಯೋ ವಿವರಿಸಿದ.
ವ್ಯಾನ್ ನಿಂದ ಕೆಳಗಿಳಿಡು ಪಾಸ್ ತೆಗೆದುಕೊಂಡು ಗೇಟ್ ನೊಳಹೊಕ್ಕೆವು . ಅತ್ಯಂತ ಪ್ರಶಾಂತವಾದ ವಾತಾವರಣ . ಯಾವ ಗೌಜು ಗದ್ದಲವಿಲ್ಲ. ಸುತ್ತಮುತ್ತೆಲ್ಲ ಗಿಡ ಮರಗಳು , ನಾನಾ ಬಗೆಯ ಹಕ್ಕಿಗಳ ಚಿಲಿಪಿಲಿ . ಮೆಲ್ಲಗೆ ಬೀಸುವ ತಂಗಾಳಿ .. ನಮ್ಮನ್ನು ಮುದಗೊಳಿಸಿತು . ವಿಶಾಲವಾದ ಆವರಣದಲ್ಲಿ ಕಸ ಕಡ್ಡಿಗಳಿಲ್ಲ . ನಮಗೂ ದೊಡ್ಡದಾಗಿ ಮಾತನಾಡಲು ಮನಸ್ಸು ಬರುತ್ತಿರಲಿಲ್ಲ .
ಸಮಾಧಿಯತ್ತ ! |
ಸಮಾಧಿಗಳ ಬಗ್ಗೆ , ಚಕ್ರವರ್ತಿಗಳ ಬಗ್ಗೆ ,ಅಂದಿನ ಪದ್ಧತಿಗಳ ಬಗ್ಗೆ ಲಿಯೋ ಹೇಳುತ್ತಾ ಹೋಗುತ್ತಿದ್ದ . ತಮ್ಮ ಜೀವಿತಾವಧಿಯಲ್ಲೇ ರಾಜರು ತಮ್ಮ ಸಮಾಧಿಗೆ ಸೂಕ್ತ ಸ್ಥಳ ವನ್ನು ಆರಿಸಿ ಇಡುತ್ತಿದ್ದರಂತೆ . ಸತ್ತ ನಂತರ ಶವವನ್ನು ಅಲ್ಲಿಗೆ ಸಕಲ ಸಂಪ್ರದಾಯಗಳೊಂದಿಗೆ ಒಯ್ದು ಹೂಳಲಾಗುತ್ತಿತ್ತು . ಅದಕ್ಕೂ ಕೂಡ ಕಟ್ಟು ನಿಟ್ಟಾದ ಪದ್ಧತಿಗಳನ್ನು ಪಾಲಿಸಬೇಕಾಗಿತ್ತು. ಶವಗಳನ್ನು ಕೊಂಡೊಯ್ಯಲು ವಿಶೇಷವಾದ ದಾರಿ ಇತ್ತು .ದಾರಿಯ ಇಕ್ಕೆಲಗಳಲ್ಲೂ ಕಾಲ್ಪನಿಕವಾದ ಕೆಲವು ಪ್ರಾಣಿಗಳ ಮೂರ್ತಿಗಳಿವೆ. ಅವು ಕಾವಲಿಗಾಗಿಯಂತೆ ! ಈ ದಾರಿಯ ಮೂಲಕವಾಗಿ ಮಂತ್ರೋಕ್ತಿಗಳೊಂದಿಗೆ ನಿಯೋಜಿತ ಸ್ಥಳಕ್ಕೆ ಶವಪೆಟ್ಟಿಗೆಯನ್ನು ಒಯ್ಯಲಾಗುತ್ತಿತ್ತು .
ದೊರೆಯನ್ನು ಹೂಳಿದ ನಂತರ ಆತನಿಗಾಗಿ ಆತ್ಮಾರ್ಪಣೆ ಮಾಡಿಕೊಳ್ಳುವ ಸೇವಕರನ್ನೂ ದೊರೆಯ ಸಮಾಧಿಯಿಂದ ಸ್ವಲ್ಪ ದೂರದಲ್ಲಿ ಸಕಲ ಮರ್ಯಾದೆಗಳೊಂದಿಗೆ ಹೂಳಲಾಗುತ್ತಿತ್ತಂತೆ. ಹಾ, ದೊರೆಯ ಸಮಾಧಿಯ ಬಳಿಯಲ್ಲಿ ಆತನ ರಾಣಿಗಾಗಿಯೂ ಜಾಗವನ್ನು ಕಾದಿರಿಸಲಾಗುತ್ತಿತ್ತಂತೆ .
ಸಮಾಧಿ ಕಟ್ಟಡ |
ನಾವು ಭೇಟಿ ನೀಡಿದ ಸಮಾಧಿಯ ವಿಶೇಷವೆಂದರೆ , ಅಲ್ಲಿ ಒಟ್ಟು ೪ ಸಮಾಧಿಗಳಿದ್ದವು. ರಾಜ ಹಾಗೂ ಆತನ ೩ ರಾಣಿಯರು ! ಸಮಾಧಿಯ ಸುತ್ತ ಕಟ್ಟಿದ ಭವ್ಯ ಕಟ್ಟಡದಲ್ಲಿ ರಾಜನಿಗೆ ಇಷ್ಟವಾಗುವ ಎಲ್ಲಾ ಆಹಾರ ಪದಾರ್ಥಗಳನ್ನೂ ( ಪ್ರತಿಕೃತಿ ) ಮೇಜಿನ ಮೇಲೆ ಜೋಡಿಸಲಾಗಿತ್ತು . ಮೇಜಿನ ಮುಂದೆ ೪ ಕುರ್ಚಿಗಳನ್ನು ಅಲಂಕರಿಸಿ ಇಡಲಾಗಿತ್ತು . ಪ್ರತಿ ವರ್ಷ ರಾಜನ ಮರಣದ ದಿನದಂದು ನಮ್ಮಲ್ಲಿ ಶ್ರಾದ್ಧ ಮಾಡಿದಂತೆಯೇ ಏನೇನೋ ವಿಧಿಗಳಿರುತ್ತವೆ ಎಂದೂ , ಆಗ ಆತನಿಗಿಷ್ಟವಾದ ಆಹಾರ ಪದಾರ್ಥಗಳನ್ನು ನೈವೇದ್ಯ ಮಾಡಲಾಗುತ್ತದೆ ಎಂದೂ ತಿಳಿಯಿತು . ಹಾಗೆಯೇ , ವಸ್ತ್ರಾಭರಣಗಳನ್ನೂ ಅರ್ಪಿಸಲಾಗುತ್ತದಂತೆ . ದೊಡ್ಡ ಪೂಜೆಯೇ ನಡೆಯುತ್ತದೆ ಎಂದೂ ಲಿಯೋ ಹೇಳಿದ .
ರಾಜ ಭೋಜನ |
ಝಾವೋ ( ಶ್ಯಾವೋ ) ದೊರೆ |
ಅವುಗಳನ್ನು ನೋಡಿ ಹೊರ ಬಿದ್ದೆವು. ಸಮಾಧಿ ಸ್ಥಳದಿಂದ ಹೊರ ಬೀಳುವಾಗ ಮುಖ್ಯ ಬಾಗಿಲಲ್ಲಿ ನಿಂತು ಚೀನೀ ಭಾಷೆಯಲ್ಲಿ " ನಾನು ಮರಳಿ ಬಂದಿದ್ದೇನೆ " ಎಂದು ಹೇಳಿ ಕೈ ಮೈ , ಬಟ್ಟೆಗಳನ್ನು ಝಾಡಿಸಿಕೊಂಡು ಹಿಂದೆ ನೋಡದೆ ಬಾಗಿಲಿಂದ ಹೊರ ಬೀಳಬೇಕೆಂದು ಲಿಯೋ ಹೇಳಿದ. ಅದು ಅಲ್ಲಿ ಇರಬಹುದಾದ ಯಾವುದೇ ಆತ್ಮಗಳು ನಮ್ಮೊಂದಿಗೆ ಬಾರದಂತೆ ತಡೆಯುವುದಂತೆ. ಆತ ಮಾಡಿ ತೋರಿಸಿದಂತೆ ಮಾಡಿ ನಾವೂ ಹೊರಬಿದ್ದೆವು ! ಹೋಗೀ ಹೋಗೀ ಚೀನೀ ಭೂತನಾ ಯಾಕೆ ಜೊತೆಗೆ ಕರ್ಕೊಂಡು ಬರೋದು ಅಲ್ವಾ? ಹಿ ಹಿ ಹಿ !
ಅಂತೂ ಅಲ್ಲಿನ ತಂಪಾದ , ಪ್ರಶಾಂತ , ಸುಂದರ ಪರಿಸರದಿಂದ ಮನಸಿಲ್ಲದೇ ಹೊರಟೆವು . ಮುಂದಿನ ನಮ್ಮ ನಿಲುಗಡೆ " ಮಹಾಗೋಡೆ !! " ನನ್ನ ಉತ್ಸಾಹ ಹೆಚ್ಚ ತೊಡಗಿತು. ಆದರೆ ಆ ಹೊತ್ತಿಗೆ ಆಕಾಶದಲ್ಲಿ ಮೋಡಗಳು ಕವಿಯ ತೊಡಗಿ ನಾಲ್ಕು ಹನಿಯೂ ಬಿದ್ದು ನನ್ನ ಉತ್ಸಾಹಕ್ಕೆ ನೀರೆರೆಚತೊಡಗಿತು ! ಅದೇನೇ ಆದರೂ ಆ ಗೋಡೆಯನ್ನು ನೋಡಲು ನಾನು ಕಾತುರಳಾಗಿದ್ದೆ !
ಗಾಡಿಯಲ್ಲಿ ಕುಳಿತ ಮೇಲೆ , ಜೋರಾಗಿ ಮಳೆ ಬಂದರೆ ಗೋಡೆಯನ್ನು ಹತ್ತಲು ಆಗುತ್ತದೋ ಇಲ್ಲವೋ ಎಂದು ಲಿಯೋ ಅನುಮಾನ ವ್ಯಕ್ತ ಪಡಿಸಿದ ! ಅದೇನಿದ್ದರೂ ಅಲ್ಲಿಗೆ ಹೋದಮೇಲೆ ನೋಡಿಕೊಳ್ಳೋಣ ಎಂದು ನನಗೆ ನಾನೇ ಸಮಾಧಾನ ಹೇಳಿಕೊಂಡೆ. ಗಾಡಿ ಮುಂದೆ ಹೊರಟಿತು !
3 comments:
ಚೀನಾದ ಜೊತೆಗೆ ನಮ್ಮ ಜಗಳ ಏನೇ ಇದ್ದರೂ ಸಹ, ಅವರ ಕಲಾಕೌಶಲ್ಯವನ್ನು ಮೆಚ್ಚಲೇಬೇಕು ಎಂದು ಅನ್ನಿಸುತ್ತದೆ. ಉತ್ತಮ ವಿವರಣೆಗಾಗಿ ಧನ್ಯವಾದಗಳು.
kushi kushiyaagi odutta ideeni :)
ಚೆನ್ನಾಗಿತ್ತು ವಿವರಣೆ.. ಹಹ್ಹ ಗೈಡಿಣಿ ಅನ್ನುವ ಹೊಸಾ ಪದ.. ಚೈನಾ ಮಾಡೆಲ್ಲು :)
ಮುಂದ?
Post a Comment