September 3, 2012

ಚೀನಾದಲ್ಲಿ ನಾನು - ಮಹಾಗೋಡೆಯ ಎದುರು !!




    ವಾಹನ  ಮುಂದೆ  ಹೊರಟಂತೆ  ವಾತಾವರಣ ತಂಪಾಗಿ ,  ಮಳೆಹನಿಗಳು  ಹೆಚ್ಚಾಗುತ್ತ  ಆಚೀಚಿನ ಮರ ಗಿಡಗಳನ್ನು ತೋಯಿಸುತ್ತಿತ್ತು.  ನನ್ನ ಮಹಾಗೋಡೆಯ ಕನಸೂ  ನೆನೆಯುತ್ತಾ ನಿರಾಸೆ ದಟ್ಟವಾಗ ತೊಡಗಿತು . 
ಹೊರಗೆ ಹಸಿರು ಹೊತ್ತ ಬೆಟ್ಟ ಮರ ಗಿಡಗಳನ್ನು ನೋಡುತ್ತಾ ಕುಳಿತವಳಿಗೆ  ದಾರಿ ಸಾಗಿದ್ದೆ ತಿಳಿಯಲಿಲ್ಲ . ಸುಮಾರು ೨೦ ನಿಮಿಷಗಳ  ಪ್ರಯಾಣದ ನಂತರ ನಮ್ಮ ವಾಹನ ಒಂದು ಕಡೆ ನಿಂತಿತು .ಸುತ್ತ ಮುತ್ತ ನೂರಾರು ವಾಹನಗಳು , ಜನ ಜಂಗುಳಿ ಕಂಡಿತು . ಕೆಳಗಿಳಿದು ನೋಡಿದರೆ .. ಒಂಥರಾ ನಮ್ಮೂರ ಜಾತ್ರೆಗೆ ಬಂದಂಥ ವಾತಾವರಣವಿತ್ತು. ಕೆಲವರ ಮುಖದಲ್ಲಿ ಒಂಥರಾ ಸಮಾಧಾನವಿದ್ದರೆ , ಬಸವಳಿದ ಮುಖದವರು ಕೆಲವರು .ಮಕ್ಕಳು , ದೊಡ್ಡವರು,  ಯುವಕರು , ಮುದುಕರು  ಎಲ್ಲರೂ ಅಲ್ಲಿದ್ದರು. ಉತ್ಸಾಹದಿಂದ ಜನ ಜಂಗುಳಿಯಾಚೆ ನೋಡಿದೆ . ಅಲ್ಲಿ ನನ್ನ ಬಯಕೆ ಸಾಕಾರವಾಗಿ ಎದುರಿನಲ್ಲಿ ಭವ್ಯವಾಗಿ ನಿಂತಿತ್ತು  ! ಮಳೆ ನಿಂತಿತ್ತು ಆದರೂ ಮೋಡಕವಿದ ವಾತಾವರಣ ಇದ್ದೇ ಇತ್ತು .ನಾನೂ ಉತ್ಸಾಹದಿಂದ  ಶೂಸ್  ಬಿಗಿ ಮಾಡಿಕೊಂಡೆ . ನೀರಿನ ಬಾಟಲಿ ಹಿಡಿದು , ಕ್ಯಾಮೆರಾ  ನೇತು ಹಾಕಿಕೊಂಡು ತಯಾರಾಗಿ ನಿಂತೆ. ಉಳಿದ ಮೂವರೂ ಕೆಳಗಿಳಿದು ಮೈ ಮುರಿದು ಆಚೀಚೆ ನೋಡ ತೊಡಗಿದರು ! 

ಗೋಡೆಯತ್ತ  ದಾರಿ 



ಲಿಯೋ ಈ ಗೋಡೆಯ ಬಗ್ಗೆ  ಸಣ್ಣ ಪರಿಚಯ ಕೊಟ್ಟಿದ್ದ ! ಚೀನಾದ ಮೊದಲ ರಾಜವಂಶ ಎನ್ನಬಹುದಾದ " ಚಿನ್ " (Qin)   ರಾಜವಂಶದವರು ಈ ಗೋಡೆಯನ್ನು    ಕಟ್ಟಲು  ಶುರು ಮಾಡಿದರು . ಚಿಕ್ಕ ಚಿಕ್ಕ ಪ್ರಾಂತ್ಯಗಳನ್ನು ಗೆಲ್ಲುತ್ತಾ ರಾಜ್ಯವನ್ನು ವಿಸ್ತರಿಸುತ್ತಾ  ಅದರ ರಕ್ಷಣೆಗೆ ಎಂಬಂತೆ ಇದನ್ನು ಕಟ್ಟ ತೊಡಗಿದರಂತೆ . ಪೂರ್ವ ಪಶ್ಚಿಮ ವಾಗಿ ಅಲ್ಲಲ್ಲಿ ತಡೆ ಗೋಡೆಗಳಂತೆ ಮಣ್ಣು, ಹಾಗೂ ಮರಗಳನ್ನು ಬಳಸಿ   ನಿರ್ಮಾಣವಾದ ಈ ಗೋಡೆಗಳ ಇತಿಹಾಸ ಕ್ರಿ.ಪೂ. ೭ನೆ ಶತಮಾನದಷ್ಟು ಹಳೆಯದು ! ನಂತರ ಬಂದ  ಮಿಂಗ್ ರಾಜವಂಶ ಚೀನಾದ ತುಂಬಾ ದೊಡ್ಡ ಹಾಗೂ ಜನಪ್ರಿಯವಾಗಿದ್ದು ಅವರ ಕಾಲದಲ್ಲಿ , ಈ ಚಿಕ್ಕ ಚಿಕ್ಕ ತಡೆಗೋಡೆಗಳನ್ನು ಜೋಡಿಸಿ ಇನ್ನೂ ಬಲವಾಗಿಸುವ ಮತ್ತು  ಬಲಿಷ್ಠ ಗೋಡೆಗಳನ್ನು ನಿರ್ಮಿಸುವ ಕೆಲಸ ಆರಂಭವಾಯಿತು . ಮಿಂಗ್ ರಾಜವಂಶದ ಕಾಲದಲ್ಲಿ ಆಧುನಿಕ ಪದ್ಧತಿಗಳನ್ನು ಬಳಸಿ   ಸುಮಾರು ೬,೦೦೦ ಕಿ.ಮೀ ಗೂ ಉದ್ದದ ಗೋಡೆಗಳ ನಿರ್ಮಾಣವಾಯಿತು . ಒಟ್ಟಾರೆಯಾಗಿ  ಈ ಗೋಡೆಯ  ಒಟ್ಟೂ ಉದ್ದ  ಸುಮಾರು  ೮,೮೫೦ ಕಿ ಮೀ .ಆದರೆ  ..ಈಗ ಸುಸ್ಥಿತಿಯಲ್ಲಿರುವುದು  ಸುಮಾರು ೫೫೦೦ ಕಿ ಮೀ ಗಳಷ್ಟು ಉದ್ದದ ಗೋಡೆ ಮಾತ್ರ  ಎಂದು ಲಿಯೋ ವಿವರಿಸಿದ .
      
ಈ ಮಹಾನ್ ಗೋಡೆಗಳ ಬಗ್ಗೆ ಅನೇಕ ಕುತೂಹಲಕಾರಿ ಹಾಗೂ ಆಸಕ್ತಿಯ ವಿಷಯಗಳನ್ನೂ ಆತ ಹೇಳಿದ . ಈ ಮಹಾ ಗೋಡೆಯ ವೈಶಿಷ್ಟ್ಯ ದ ಬಗ್ಗೆ , ಚೀನೀಯರಿಗೆ ಹೆಚ್ಚಿನ ಪರಿಚಯವಿರಲಿಲ್ಲವಂತೆ  ! ಅದರಲ್ಲೂ ಬೀಜಿಂಗ್ ಸಮೀಪವಿರುವವರಿಗೂ ಗೊತ್ತಿರಲಿಲ್ಲವಂತೆ ! ೧೯೭೨  ರ ಸಮಯದಲ್ಲಿ , ಚೀನಾಕ್ಕೆ ಭೇಟಿ ನೀಡಿದ ಮೊದಲ ಅಮೆರಿಕಾ ಅಧ್ಯಕ್ಷ  ನಿಕ್ಸನ್   ತನ್ನ ಚೀನಾ ಭೇಟಿಯಲ್ಲಿ   ಚೀನಾದ  ಮಹಾ ಗೋಡೆಯ ಬಗ್ಗೆ ತಾವು ಬಹಳಷ್ಟು ಕೇಳಿರುವುದರಿಂದ   ಅದನ್ನು ನೋಡಬೇಕು ಎಂಬ ಇಂಗಿತ  ವ್ಯಕ್ತ ಪಡಿಸಿದರಂತೆ ! ಆ ಸಮಯದಲ್ಲಿ  ಬೀಜಿಂಗ್ ನಿಂದ ಹತ್ತಿರವಿದ್ದ ಗೋಡೆಯ ಬಳಿ ಹೋಗಲು ಸರಿಯಾದ ರಸ್ತೆ ಕೂಡ ಇರಲಿಲ್ಲವಂತೆ  ! ಆಗ ಚೀನಾದ  ಲೀಡರ್ " ಮಾವೋ ತ್ಸೆ ತುಂಗ " ( ಮಾವೋ ಝೆ ದೊಂಗ್ )   ಅತಿ ಕಡಿಮೆ ಗಡುವಿನಲ್ಲಿ  ಸಾಧ್ಯವಾದಷ್ಟು   ರಸ್ತೆಯನ್ನು ಸರಿಮಾಡಿಸಿ .. ನಿಕ್ಸನ್ ರ ಆಸೆಯನ್ನು ಪೂರೈಸಿದರಂತೆ . ಆ ನಂತರ ಅವರ ತಲೆಯಲ್ಲಿ ಆ ಬಗ್ಗೆ ವಿಚಾರ ಕೊರೆಯತೊಡಗಿತು .  ಅಷ್ಟು ದೂರದ ಅಮೆರಿಕಾವರೆಗೂ ಚೀನಾ ಗೋಡೆಯ ಬಗ್ಗೆ  ತಿಳಿದಿದೆ ಎಂದರೆ .. ನಾವೇಕೆ ಲಕ್ಷ್ಯ ವಹಿಸಿಲ್ಲ ಎಂದು  ಯೋಚಿಸಿ  ತತ್ ಕ್ಷಣದಿಂದ  ಕಾರ್ಯೋನ್ಮುಖರಾಗಿ  ಅಲ್ಲಿಯವರೆಗೂ ಸ್ಥಳೀಯರಿಗೂ ಅಷ್ಟಕ್ಕಷ್ಟೇ ಪರಿಚಯವಿದ್ದ ಗೋಡೆಯನ್ನು ಪ್ರವಾಸಿ ತಾಣವಾಗಿಸುವ ಎಲ್ಲಾ ಪ್ರಯತ್ನಗಳೂ ಆರಂಭವಾದವು ! ಅಲ್ಲಲ್ಲಿ ಹಾಳಾದ / ಕುಸಿದ ಭಾಗಗಳನ್ನು ಸರಿ ಪಡಿಸಿ .. ಸಾಧ್ಯವಾದಷ್ಟೂ ಅದರ ಮೂಲ ರೂಪದಲ್ಲಿ ಕಾದಿಡಲಾಗಿದೆ . ಉತ್ತಮವಾದ ರಸ್ತೆ ,ಪ್ರವಾಸಿಗಳಿಗೆ ಅಗತ್ಯವಾದ ಎಲ್ಲಾ ವ್ಯವಸ್ಥೆಗಳನ್ನೂ  ಮಾಡಲಾಯಿತು . ವಿಶಾಲವಾದ ವಾಹನ ನಿಲ್ದಾಣ , ತರಾವರಿ ಅಂಗಡಿಗಳು , ಸ್ವಚ್ಚವಾದ ಶೌಚಾಲಯ , ಕುಡಿಯುವ ನೀರು  ಇತ್ಯಾದಿ ಎಲ್ಲಾ ವ್ಯವಸ್ಥೆಗಳೂ ಇವೆ . 

ಹೊಸಾ ಸೈಕಲ್ ನೋಡಿ  ಖುಷಿಯಿಂದ ಓಡುವ  ಚಿಕ್ಕ ಮಕ್ಕಳಂತೆ ಗೋಡೆಯ ಕಡೆ ಓಡಲು ತಯಾರಾಗಿದ್ದ ನನ್ನ ಉತ್ಸಾಹವನ್ನು ಮೊಟಕುಗೊಳಿಸಲೋ  ಎಂಬಂತೆ ಲಿಯೋ ಒಂದು ಸೂಚನೆ ಕೊಟ್ಟ ! ಏನೆಂದರೆ .. ನಮಗೆ ಇಲ್ಲಿ ಕೇವಲ ಒಂದು ಗಂಟೆ ಕಾಲ  ಅವಕಾಶವಿದೆ  ನಂತರ ಮುಂದಿನ ತಾಣಕ್ಕೆ ಹೋಗಲು ತಡವಾಗುತ್ತದೆ ಎಂದು ! 

ಅರ್ಧ ದಾರಿಯಿಂದ 

ಸರಿ ಮೆಟ್ಟಿಲು ಹತ್ತ ತೊಡಗಿದೆವು . ಹಾವಿನಂತೆ ಮೇಲೇರುತ್ತಿರುವ  ಮೆಟ್ಟಿಲು ದಾರಿ  ಹೆಚ್ಚು ಅಗಲವಿರಲಿಲ್ಲ . ಕೆಲವೆಡೆ  ೮  ಅಡಿ ಇದ್ದರೆ ಕೆಲವೆಡೆ ೬ ಅಡಿ . ಕಲ್ಲಿನ ಮೆಟ್ಟಿಲುಗಳೂ ಹಾಗೆಯೇ ,  ಕೆಲವು ಮೆಟ್ಟಿಲು  ಬಹಳ ಎತ್ತರವಿದ್ದರೆ ಕೆಲವೆಡೆ   ತುಂಬಾ ಕಮ್ಮಿ ಎತ್ತರ . ಅದಾಗಲೇ ಪ್ರವಾಸಿಗಳು ತುಂಬಿ ಹೋಗಿದ್ದರು . ಸಾವಿರಾರು ಜನ  ಪ್ರಪಂಚದ ವಿವಿಧ ಭಾಗಗಳಿಂದ  ಇಲ್ಲಿ ಬಂದಿದ್ದರು .  ವಿವಿಧ ರೂಪ, ಭಾಷೆ ,ಬಣ್ಣ  , ವೇಷ....  
ಮೆಟ್ಟಿಲುಗಳ ಮೇಲೆ  ಕೆಲವೆಡೆ  ಜಾಗವಿರದಷ್ಟು  ರಶ್  ಇತ್ತು . ನಾವೂ ಸಹ ಉತ್ಸಾಹದಿಂದ ಹೆಜ್ಜೆ  ಹಾಕಲಾರಂಭಿಸಿದೆವು . ಬಿಸಿಲು ಇಲ್ಲದೆ ಇದ್ದರೂ ಮೋಡ ಕವಿದಿದ್ದರಿಂದ  ಸೆಖೆ ಸುಮಾರಾಗಿಯೇ ಇತ್ತು . ಜೊತೆಗೆ  ಹತ್ತುವ ಆಯಾಸ ಬೇರೆ . 
ಗೋಡೆಯ ದಾರಿ


ಇಕ್ಕಟ್ಟಾದ ಮೆಟ್ಟಿಲುಗಳನ್ನು ಹತ್ತಿ ಬೆಟ್ಟವನ್ನೆರಿದರೆ ಮೇಲೆ ಸ್ವಲ್ಪ ಮಟ್ಟಿಗೆ ಸಮತಟ್ಟಾಗಿದ್ದು  ಗೋಡೆ ಆರಂಭವಾಗುತ್ತದೆ . ಆದರೆ ಬೆಟ್ಟದ ತುದಿಯನ್ನು ತಲುಪಲೇ ಸುಮಾರು ಹೊತ್ತು ಬೇಕಾಗುತ್ತದೆ  .  ಅಷ್ಟಷ್ಟು ದೂರದಲ್ಲಿ  ಕಾವಲು ಗೋಪುರದಂಥಾ ರಚನೆಯಿದ್ದು  ಅಲ್ಲಿ ಸ್ವಲ್ಪ  ಹೊತ್ತು ನೆರಳಲ್ಲಿ ನಿಂತು ದಣಿವಾರಿಸಿಕೊಳ್ಳಬಹುದು  . ಬೆವರು ಒರೆಸಿ ಕೊಳ್ಳುತ್ತಾ ಸುಮಾರು ಮೇಲೆ ಹತ್ತಿದೆವು . ಮಹೇಶ್  ಇನ್ನೂ ಮೇಲೆ ಹತ್ತಲು ತಮ್ಮಿಂದಾಗದು . ಇಲ್ಲೆ ಕುಳಿತಿರುತ್ತೇನೆ .. ನೀನು ಹೋಗಿ ಬಾ ಎಂದರು  . ಸರಿ,    ನಾನು ಮತ್ತು  ಅಕ್ತೊರೋ   ಮುಂದುವರಿದೆವು .

 ಹತ್ತುತ್ತ ಹತ್ತುತ್ತಾ   ಅಕ್ತೊರೋ  ಬ್ರೆಜ್ಹಿಲ್  ನ ಬಗ್ಗೆ , ಅವರ ಊರು , ಮನೆ, ಕುಟುಂಬದ ಬಗ್ಗೆ ಮಾತನಾಡುತ್ತಾ  ದಣಿವು ತಿಳಿಯದ ಹಾಗೆ ನೋಡಿಕೊಂಡ    .ಆತನ ಪ್ರಕಾರ  ಪ್ರಪಂಚದ ಅದ್ಭುತಗಳಲ್ಲಿ ಇದು ಒಂದಾದರೂ  ಭಾರತದ ' ತಾಜ್ ಮಹಲ್  " ನ ಎದುರು ನಿಂತಾಗ  ಆಗುವ ಅನುಭವ  ಇಲ್ಲಿಲ್ಲ ಎಂದ ! ನಾನು ಇನ್ನೂ ತಾಜ್ ಮಹಲ್ ನೋಡಿಲ್ಲ  ಎಂದು ತಿಳಿದಾಗ ಅತಿ ಆಶ್ಚರ್ಯ ಪಟ್ಟಿದ್ದಷ್ಟೇ  ಅಲ್ಲದೆ  , ಆದಷ್ಟು ಬೇಗ ಅದನ್ನು ನೋಡು ವಂತೆ ಒತ್ತಾಯಿಸಿದ ಕೂಡ . ಮಾತಾಡುತ್ತಾ  ಇನ್ನೆರಡು ಹಂತಗಳಷ್ಟು ಮೇಲೇರಿದೆವು . ಬೆಟ್ಟದ ತುದಿ ಮುಟ್ಟಲು  ಮತ್ತೂ ಎರಡು ಹಂತಗಳಿದ್ದವು . ಅಷ್ಟರಲ್ಲಿ  ಮಳೆ ಹನಿಯಲು ಶುರುವಾಯಿತು . ಬೇಗ ಬೇಗ  ಕಾವಲು ಗೋಪುರ ಹೊಕ್ಕು ನಿಂತೆವು . ಕೆಲ ನಿಮಿಷಗಳು ಕಳೆದರೂ  ಮಳೆ ಕಮ್ಮಿಯಾಗಲಿಲ್ಲ. ಅಕ್ತೊರೋ ತನ್ನ ಬಳಿ ಒಂದು ಕೊಡೆಯಿದೆ . ಇನ್ನೂ ಮೇಲೆ ಹತ್ತೊಣವೇ ಎಂದು ನನ್ನಲ್ಲಿ ಕೇಳಿದ . ಆತನ ಕೊಡೆಯಲ್ಲಿ ನಾನೂ ಹೊಕ್ಕು   ಇಬ್ಬರೂ ಒದ್ದೆಯಾಗುವುದಕ್ಕಿಂತ  ನೀನು ಮುಂದೆ ಹೋಗು ಪರವಾಗಿಲ್ಲ . ನಾನೂ ಸ್ವಲ್ಪ ಹೊತ್ತು ಕಾದು  ನೋಡುತ್ತೇನೆ ಮಳೆ ಕಮ್ಮಿ ಆದರೆ  ಮೇಲೆ ಬರುತ್ತೇನೆ  ಎಂದೆ .ಆದರೆ ಸುಮಾರು ೧೦ ನಿಮಿಷಗಳ ನಂತರವೂ ಮಳೆ   ಕಮ್ಮಿ ಆಗಲಿಲ್ಲ  !  ಅಷ್ಟರಲ್ಲಿ ಲಿಯೋ ಕೊಟ್ಟ ಸಮಯವೂ ಸಹ  ಮುಗಿಯುತ್ತಾ ಬಂದಿತ್ತು . ಹೀಗಾಗಿ ಮನಸಿಲ್ಲದ ಮನಸಿಂದ ಕೆಳಗೆ ಹೊರಟೆ.  ಅಷ್ಟು ಹತ್ತಿರ ಹೋಗಿಯೂ  ಪೂರ್ತಿ ಮೇಲೆ ಹತ್ತಲಾಗದ ಬೇಸರವಿತ್ತು .


Add caption
ಕೆಳಗಿಳಿದು  ಬರುವಷ್ಟರಲ್ಲಿ  ಸುಮಾರು ಒದ್ದೆಯಾಗಿದ್ದೆ.  ಅತುಲ್ ಹಾಗೂ ಮಹೇಶ್  ನಮ್ಮ ದಾರಿ ಕಾಯುತ್ತ ನಿಂತಿದ್ದರು . ಅಲ್ಲಿ  ಎದುರಿಗೆ ಇದ್ದ ಒಂದು ಅಂಗಡಿ ನನ್ನ ಗಮನ ಸೆಳೆಯಿತು . ಅಲ್ಲಿ ಅಪ್ಪಟ ಚೀನೀ ಸಾಂಪ್ರದಾಯಿಕ  ಉಡುಪುಗಳು , ರಾಜರ ವೇಷ ಭೂಷಣಗಳು  ಇದ್ದವು. ನಾವು ಬಾಡಿಗೆಗೆ ತೆಗೆದುಕೊಂಡು ಫೋಟೋ ತೆಗೆಸಿ  ವಾಪಸ್ ಕೊಡ ಬಹುದಿತ್ತು . ನಾನೂ ಮಹೇಶ್ ರನ್ನು ಎಳೆದುಕೊಂಡು  ಅಲ್ಲಿಗೆ ಹೋದೆ.  ಮಹೇಶ್ ಚೀನೀ ಯೋಧನ ಉಡುಪನ್ನು ಆರಿಸಿದರೆ  ನಾನೂ ರಾಣಿಯ ಉಡುಪು ಧರಿಸಿದೆ ..   ಅಂಗಡಿಯವರದೇ ಫೋಟೋಗ್ರಾಫರ್ ಕೂಡ  ಇದ್ದು , ಪೋಲೋರೈಡ್  ಕ್ಯಾಮೆರಾದಿಂದ ಫೋಟೋ ತೆಗೆದು ತಕ್ಷಣ  ನಮ್ಮ ಕೈಯಲ್ಲಿಡುತ್ತಾರೆ . ಸರಿ ಚೀನೀ ಉಡುಪಿನಲ್ಲಿ ಫೋಟೋ ತೆಗೆಸಿ  ಖುಷಿ ಪಟ್ಟಿದ್ದಾಯಿತು. ಅಷ್ಟರಲ್ಲಿ ಅವಸರಿಸುತ್ತಾ ಬಂದ ಲಿಯೋ ,ಮುಂದೆ  ಜೋರಾಗಿ ಮಳೆ ಬರುವ ಮುಂಚೆ  ಊಟಕ್ಕೆ ನಿಲ್ಲಿಸ ಬೇಕೆಂದೂ ಇನ್ನೂ ಸಿಲ್ಕ್ ಮ್ಯೂಸಿಯಂ ಗೆ ಹೋಗುವುದು ಬಾಕಿ ಇದೆ ಎಂದೂ ಎಚ್ಚರಿಸಿದ . 


ಮನಸಿಲ್ಲದ ಮನಸಿಂದ  ಮತ್ತೆ ಮತ್ತೆ ತಿರುಗಿ ನೋಡುತ್ತಾ  , ತುದಿ ಮುಟ್ಟಲಾಗದ ನನ್ನ ಅದೃಷ್ಟಕ್ಕೆ ಬೇಸರಿಸುತ್ತಾ  ವಾಹನ ಹತ್ತಿದೆ .

10 comments:

ದಿನಕರ ಮೊಗೇರ said...

nirUpaNE chennaagide....

pUrti hatti bandiddare namage khushiyaaguttittu...

Dileep Hegde said...

ಪ್ರವಾಸ ಕಥನ ಚೆನ್ನಾಗಿ ಮೂಡಿ ಬಂದಿದೆ.. ಆದರೆ ಮಳೆರಾಯ ಹೀಗೆ ತೊಂದರೆ ಕೊಡಬಾರದಿತ್ತು... ಈಗ ಉಳಿದಿರುವುದು ೫೫೦೦೦ ಕಿ. ಮೀ. ಎಂದಾಗಿದೆ.. ೫೫೦೦ ಕಿ. ಮೀ. ಅಂತ ಆಗಬೇಕಲ್ವೆ..

sunaath said...

ಚೀನೀ ರಾಣಿಯ ವೇಷದಲ್ಲಿ ನೀವು ಹಾಗು ಯೋಧನ ವೇಷದಲ್ಲಿ ಮಹೇಶ ತುಂಬ ಚೆನ್ನಾಗಿ ಕಾಣುತ್ತೀರಿ.

ಚಿತ್ರಾ said...

ದಿನಕರ್ ,
ಧನ್ಯವಾದಗಳು ! ಪೂರ್ತಿ ಹತ್ತಿದ್ದರೆ ..ಆ ಅನುಭವವೇ ಅಲೌಕಿಕವೆನಿಸುತ್ತಿತ್ತೇನೋ ! ಏನು ಮಾಡೋಣ ಅದೃಷ್ಟ ಹಾಗಿತ್ತು !

ಚಿತ್ರಾ said...

ದಿಲೀಪ ಥ್ಯಾಂಕ್ಸ್ !

ಸರಿಪಡಿಸಿದ್ದೇನೆ.ತಿದ್ದಿದ್ದಕ್ಕೆ ಮತ್ತೊಂದು ಥ್ಯಾಂಕ್ಸ್ !

ಚಿತ್ರಾ said...

ಕಾಕಾ,

ತುಂಬಾ ಮಜಾ ಎನಿಸುತ್ತಿತ್ತು ಆ ವೇಷ ಹಾಕಿದಾಗ ! ಹ ಹ ಹ .. ಧನ್ಯವಾದಗಳು

ಜಲನಯನ said...

ಚಿತ್ರಾ ತುಂಬಾ ಚನ್ನಾಗಿ ಕಣ್ಣಿಗೆ ಕಟ್ಟಿದಣ್ತೆ ವಿವರಣೆ ನೀಡಿದ್ದೀಯ, ಅವಕಾಶ ಸಿಕ್ಕರೆ ನೋಡಬೇಕು ಎನ್ನುವ ಆಸೆಯನ್ನ ಹುಟ್ಟುಹಾಕಿದೆ ನಿನ್ನ ಲೇಖನ. ನಿನ್ನ ಚೀನೀ ಸುಂದರಿ ವೇಷ, ನಿನ್ನ ಕಾಯೋಕೆ ಪಣತೊಟ್ಟ ಸೈನಿಕನ ವೇಷದಲ್ಲಿ ಮಹೇಶ್...ವಾವ್..ಸೂಪರ್... ನನಗೆ ನಾನೇ ಚೈನಾ ಪ್ರವಾಸ ಮಾಡಿದಂತಾಯ್ತು.

shivu.k said...

ಚಿತ್ರಾ..
ಮತ್ತೆ ಬ್ಲಾಗುಗಳನ್ನು ಓದಲು ಶುರುಮಾಡಿಕೊಂಡಿದ್ದೇನೆ. ಸದ್ಯಕ್ಕೆ ನಿಮ್ಮ ಈ ಲೇಖನವನ್ನು ಮಾತ್ರ ಓದಿದೆ.ಸಮಾಧಾನವಾಗಲಿಲ್ಲ. "ಚೀನದಲ್ಲಿ ನಾನು" ಮೊದಲಿನಿಂದ ಓದಬೇಕೆನಿಸಿದೆ..ಬಿಡುವು ಮಾಡಿಕೊಂಡು ಎಲ್ಲವನ್ನು ಓದುತ್ತೇನೆ.

prashasti said...

ಇವತ್ತು ಈ ಕಡೆ ಬಂದೆ.. ನಿದ್ರಾದೇವಿ ಕಾಡ್ತಾ ಇರೋದಕ್ಕೆ ಪೂರ್ಣ ಓದೋಕೆ ಆಗ್ಲಿಲ್ಲ..
ಚಿತ್ರಗಳು ಚೆನ್ನಾಗಿ ಮೂಡಿ ಬಂದಿವೆ.. ಮತ್ತೆ ಬಂದು ಓದಿ ಪ್ರತಿಕ್ರಿಯಿಸುತ್ತೇನೆ..

prashasti said...

ಚೆನ್ನಾಗಿದೆ ಚಿತ್ರ ಲೇಖನ :-) ಚೀನಾ ಗೋಡೆಯ ಮೇಲೊಮ್ಮೆ ಹತ್ತಿ ಬಂದಂತಾಯಿತು ..
ಇದು ಪ್ರಪಂಚದ ಅದ್ಭುತಗಳಲ್ಲಿ ಒಂದಾದರೂ ತಾಜ್ ಎದುರು ನಿಂತಾಗ ಆಗುವ ಅನುಭವದಂತಲ್ಲ ಎಂಬ ಮಾತು ಭಾರತೀಯನಾದ ನನಗೆ ಹೆಮ್ಮೆಯಾಯಿತು :-)

ತಾಜ್ ನೋಡಿ ಆಗಿದೆ, ಆ ಮಾತಿನ ಸತ್ಯಾಸತ್ಯತೆ ಪರೀಕ್ಷಿಸಲು ಇನ್ನು ಚೀನಾ ಗೋಡೆ ನೋಡಬೇಕಾಗಿದೆ !!! :D :D