July 7, 2013

ಕೇದಾರದ ನೆನಪು


      ಳೆದ ಕೆಲ ವಾರಗಳಿಂದ ಉತ್ತರಾಖಂಡ ದಲ್ಲಿ  ಪ್ರಕೃತಿಯ  ರೌದ್ರಾವತಾರದ ಬಗ್ಗೆ  ವಿವಿಧ ವಾಹಿನಿಗಳಲ್ಲಿ ನೋಡಿ, ಪೇಪರ್ ನಲ್ಲಿ ಓದಿ  ಕಳವಳ , ಕಾಳಜಿ ,ಭಯ, ಅಸಹಾಯಕತೆ   ಹೀಗೆ ಎಲ್ಲ ಭಾವಗಳೂ  ಮೂಡುತ್ತಿದ್ದವು . ಜೊತೆಗೆ  ಎದೆಯ ಮೂಲೆಯಲ್ಲೆಲ್ಲೋ  ಒಂದು ಸಮಾಧಾನದ ಉಸಿರು. ಅದಕ್ಕೆ ಕಾರಣವಿಲ್ಲದಿಲ್ಲ ! 
೧೧   ವರ್ಷಗಳ ಹಿಂದೆ , ಆಗಸ್ಟ್ ತಿಂಗಳಲ್ಲಿ   ನಾನು ಅಲ್ಲಿದ್ದೆ ! ಕೆಲವು ತೀರಾ ಚಿಕ್ಕ ಪುಟ್ಟ ಘಟನೆಗಳನ್ನು ಬಿಟ್ಟರೆ  ಸುರಕ್ಷಿತವಾಗಿ , ಯಾವುದೇ ತೊಂದರೆಯಿಲ್ಲದೆ ಆತಂಕವಿಲ್ಲದೆ  ಪ್ರವಾಸ ಮುಗಿಸಿದ್ದೆ ! ಇಂದು ಪ್ರಕೃತಿಯ ಕೋಪಕ್ಕೆ  ತುತ್ತಾದ ಆ ಎಲ್ಲಾ  ಜಾಗಗಳನ್ನು ನಾನು ಸಂದರ್ಶಿಸಿದ್ದೆ .   ಬದರಿ , ಕೇದಾರ , ಗೌರಿಕುಂಡ ,ಹೇಮಕುಂಡ್ , ಗೋವಿಂದ್ ಘಾಟ್, ಜೋಷಿಮಠ ಈ ಎಲ್ಲಾ ಜಾಗಗಳಲ್ಲೂ ರಾತ್ರಿಗಳನ್ನು ಕಳೆದಿದ್ದೆ  . ಇಂದು ಅದನ್ನೆಲ್ಲಾ ನೆನೆಸಿಕೊಂಡಾಗ ಮೈ ಜ್ಹುಮ್ಮೆನಿಸುತ್ತದೆ . ಇಂಥಾದೊಂದು ವಿಕೋಪ ನಡೆಯಬಹುದೆಂಬ ಕಲ್ಪನೆಯೂ ಇಲ್ಲದ್ದರಿಂದ    ಹಾಯಾಗಿ ನಿದ್ದೆ ಮಾಡಿದ್ದೆ  ಅನಿಸುತ್ತದೆ. . ಅದೇನೋ ಅಂತಾರಲ್ಲ   ಅಜ್ಞಾನದಲ್ಲಿ ಸುಖವಿದೆ  ಅಂತ ಹಾಗೆ  ! 

ಅದನ್ನೆಲ್ಲ ನೆನೆದು  ಒಮ್ಮೆ ಮೈ ನಡುಗಿತು . 

ಕೇದಾರನಾಥ  ನನಗೆ ಅತ್ಯಂತ  ಪ್ರಿಯವೆನಿಸಿದ ತಾಣಗಳಲ್ಲೊಂದು . ಇಂದಿಗೂ ಅದೆಷ್ಟೋ ಸಲ ನನ್ನ ಕನಸಿನಲ್ಲಿ  ಕಂಡು ಮತ್ತೊಮ್ಮೆ ಬಾ ಎನ್ನುತ್ತದೆ . ಅತೀವ ದೈವಭಕ್ತಿ ಇಲ್ಲದಿದ್ದರೂ , ನಾನು ನಾಸ್ತಿಕಳಲ್ಲ ! ಹೀಗಾಗಿ  ಹಿಮಾಲಯದ ಪ್ರವಾಸದಲ್ಲಿ  ಬದರಿ , ಕೇದಾರ, ಹರಿದ್ವಾರ , ಹೃಷೀಕೇಶ ಇತ್ಯಾದಿ ಪುಣ್ಯ ಕ್ಷೇತ್ರಗಳ  ದರ್ಶನ ಮಾಡಿದರೂ ಕೂಡ ನಾನು ಮನಸ್ಪೂರ್ವಕವಾಗಿ ತಲೆಬಾಗಿದ್ದು  ಅಲ್ಲಿಯ ಪವಿತ್ರ ಪ್ರಕೃತಿಗೆ ! ಶುದ್ಧ  ಗಾಳಿ ,  ಇನ್ನೂ  ಮಲಿನಗೊಂಡಿರದ  ತಂಪಾದ ನೀರು ಹಿಮಾಚ್ಛಾದಿತ  ಬೆಟ್ಟಗಳ ಹಿನ್ನೆಲೆಯಲ್ಲಿ ಕಂಗೊಳಿಸುವ  ಕಪ್ಪು ಹಸಿರು ಕಾಡುಗಳು , ಶಬ್ದ ಮಾಲಿನ್ಯವಿಲ್ಲದೆ  ಪ್ರಶಾಂತವಾದ ಪರಿಸರ , ವಿವಿಧ ಬಗೆಯ ಹಕ್ಕಿಗಳ ಕಲರವ .. ಇನ್ನೇನು ಬೇಕು ದಿನ ನಿತ್ಯದ ಜಂಜಾಟಗಳಿಂದ ದಣಿದ ಜೀವವನ್ನು ತಣಿಸಲು ? 

ಇಷ್ಟೆಲ್ಲಾ ಇದ್ದರೂ , ಅಲ್ಲಿ ಇದ್ದ ಪ್ರತಿಕ್ಷಣವನ್ನು ಕೇವಲ ಪ್ರಕೃತಿಯ ಕೃಪೆಯಿಂದಲೇ  ಸುರಕ್ಷಿತವಾಗಿ ಕಳೆದಿದ್ದು . ತಲೆ ಸುಡುವ ಬಿಸಿಲು , ಕೊರೆಯುವ ಚಳಿ , ಎರಡೂ ಒಟ್ಟೊಟ್ಟಿಗೆ  ಅನುಭವಕ್ಕೆ ಬರುತ್ತಿದ್ದವು . ನನ್ನ ಹಿಮಾಲಯ ಪ್ರವಾಸದ ಮುಖ್ಯ ಉದ್ದೇಶ  ಅಲ್ಲಿಯ  " ಪುಷ್ಪ  ಕಣಿವೆ "ಯನ್ನು  ನೋಡುವುದಾಗಿತ್ತು . ಕೇವಲ ಅಲ್ಲಿಗೆ ಹೋಗುವುದು ಸಾಧ್ಯವಿಲ್ಲದ್ದರಿಂದ  ಬದರೀ ಕೇದಾರ ಪ್ರವಾಸದ ಪ್ಯಾಕೇಜ್ ನಲ್ಲಿ ಹೋಗಿದ್ದೆವು  . ನನ್ನ ಹಾಗೂ ನನ್ನ ಸಣ್ಣತ್ತೆಯ   ಕನಸು  ಹಿಮಾಲಯದ " "ಪುಷ್ಪ ಕಣಿವೆ " ಜೊತೆಗೆ ಸೇರಿಕೊಂಡಿದ್ದು ನನ್ನ ಅಪ್ಪಾಜಿ . 

 ಪುಣೆ ಇಂದ  ಈ ಯಾತ್ರೆಗೆ ಹೊರಟ ೧೧  ಜನರ ಗುಂಪಿನಲ್ಲಿ ನಾನೇ  ಕಿರಿಯವಳು . ಉಳಿದವರೆಲ್ಲಾ   ೫೫ ಕ್ಕೂ ಮೇಲ್ಪಟ್ಟವರು ! ಅತ್ಯಂತ ಹಿರಿಯ ಸದಸ್ಯೆ  ಅರುಣಾಚಲ ಪ್ರದೇಶದಲ್ಲಿ ನೆಲೆಸಿರುವ ಪುಣೆ ಮೂಲದ  ವೈದ್ಯೆ  . ಆಕೆಗೆ ಆಗಲೇ  ೮೩  ವರ್ಷ ! ಆದರೆ ಆಕೆಯ ಉತ್ಸಾಹ ೪೦ ರ ವಯಸ್ಸಿನದು ! ಇಂಥಾ ಗುಂಪಿರುವ   ನಮ್ಮ ಬಸ್ ಎಲ್ಲೇ ನಿಂತಾಗಲೂ ಎಲ್ಲರನ್ನೂ ಇಳಿಸಲು ನೆರವಾಗುವ, ಚಿಕ್ಕ ಪುಟ್ಟ ಸಹಾಯ ಬೇಕಾದಲ್ಲಿ ಮುಂದಾಗುವ ಕರ್ತವ್ಯ ನನ್ನದಾಗಿತ್ತು . 
ಹರಿದ್ವಾರದಿಂದ ಜೋಷಿಮಠಕ್ಕೆ    ಸುಮಾರು ೨೫೦ ಕಿ. ಮೀ  ಅಂತರ . ಆದರೆ ಈ ರಸ್ತೆಯ  ಶೇ . ೯೦  ಭಾಗ   ಘಾಟ್ !  ಒಂದೆಡೆ  ಅತ್ಯಂತ ಆಳದಲ್ಲಿ  ರಭಸದಿಂದ  ಹರಿಯುವ ಗಂಗೆಯ ಅಬ್ಬರ ಅಷ್ಟು ದೂರಕ್ಕೂ ಕೇಳುತ್ತಿದ್ದರೆ  , ಮತ್ತೊಂದೆಡೆ   ಕಣ್ಣೆತ್ತಿ ನೋಡಿದಷ್ಟೂ ತುದಿ  ಕಾಣದ  ಪರ್ವತಗಳು ! ನಡುವೆ  ಹಾವಿನಂತೆ ಹರಿಯುವ   ಕಿರಿದಾದ  ರಸ್ತೆ . ವಾಹನ ಚಾಲಕನ ಕೈಯಲ್ಲಿ  ನಮ್ಮೆಲ್ಲರ ಪ್ರಾಣ  ಎಂದರೆ ತಪ್ಪಿಲ್ಲ .ಹೀಗಾಗಿ  ಒಂದು ರೀತಿಯಿಂದ ಅವನೇ ನಮ್ಮ ದೇವರು ! 

ನಮ್ಮ ದಾರಿ  
 ಲಕ್ಷಗಟ್ಟಲೆ ವರ್ಷಗಳ ಹಿಂದೆ  ಭೂಖಂಡಗಳು ಸರಿದಾಡಿ  ಢಿಕ್ಕಿ ಹೊಡೆದಾಗ  ಸಮುದ್ರದಿಂದ ಮೇಲೆದ್ದು ಬಂದ  ಭೂ ಭಾಗ   ಹಿಮಾಲಯ ! ಇಲ್ಲಿಯ ಮಣ್ಣು ಗಟ್ಟಿಯಿಲ್ಲ . ಮರಳಿನಂತೆ ! ಯಾವಾಗ ಬೇಕಾದರೂ ಕುಸಿಯ ಬಹುದು . ಹೀಗೆ ಮರಳಿನ ರಾಶಿಯಂಥಾ  ಬೆಟ್ಟಗಳಲ್ಲಿ  ದೊಡ್ಡ ದೊಡ್ಡ  ಬಂಡೆಗಳು ಹುದುಗಿವೆ . ಅಕಸ್ಮಾತ್ ಕುಸಿದರೆ  ಪರಿಸ್ಥಿತಿ ಹೇಗಿರಬಹುದು ಎಂದು  ಊಹಿಸಿ ! ಇನ್ನು ಹಾಗೆ ಕುಸಿದ ಭಾಗದಲ್ಲಿ ಝರಿಯೊಂದು ಹರಿಯುತ್ತಿತ್ತು  ಅಂತಾದರೆ  ಆ ನೀರು , ಮಣ್ಣು ಮತ್ತು ಬಂಡೆಗಳು  ಮೂರು ಒಟ್ಟಿಗೆ  ಕೆಳಗೆ  ಧಾವಿಸಿದರೆ  ? ಪರಿಣಾಮ  ಅತಿ ಭಯಂಕರ  ! ನಾವು ಹೋದ  ಮುಂಚಿನ ದಿನವಷ್ಟೇ ಅಂಥಾದ್ದೊಂದು  ಘಟನೆ ನಡೆದಿತ್ತು  ಅದೇ  ದಾರಿಯಲ್ಲಿ ! ಬಂಡೆಗಲ್ಲುಗಳ ರಾಶಿ , ಕೆಸರು  ದಾರಿಯಲ್ಲಿನ್ನೂ  ಬಿದ್ದಿದ್ದವು. ಪುಣ್ಯಕ್ಕೆ  ಆ ರಸ್ತೆಗಳ ಉಸ್ತುವಾರಿಯನ್ನು  ಭಾರತೀಯ ಸೇನೆಗೆ ವಹಿಸಿರುವುದರಿಂದ  ಕೆಲವೇ ಗಂಟೆಗಳಲ್ಲಿ ಹೊಸಾ ರಸ್ತೆಯ ನಿರ್ಮಾಣವಾಗಿತ್ತು !  ಆದರೂ ಪ್ರವಾಸದುದ್ದಕ್ಕೂ ಯಾವಾಗ ನಮ್ಮ ಕಾಲ ಕೆಳಗಿನ ರಸ್ತೆ ಕುಸಿಯಬಹುದೋ ಎಂಬ ಆತಂಕ ಹೆಚ್ಚಿನವರ ಮನದಲ್ಲಿ ತುಂಬಿತ್ತು ! 


ಭೂ ಕುಸಿತದ ಒಂದು ನೋಟ  ನಮ್ಮ ರಸ್ತೆಯಲ್ಲಿ ಕಂಡಿದ್ದು  !
ಇಂಥಾ ಆತಂಕಗಳ ನಡುವೆಯೇ  ಸುತ್ತಲಿನ ರುದ್ರ ರಮಣೀಯ ಪ್ರಕೃತಿ ಸೌಂದರ್ಯವನ್ನು ಸವಿಯುವ ಸಂಭ್ರಮ ನನ್ನದಾಗಿತ್ತು . ಹಿಮಾಲಯವನ್ನು ಕಣ್ಣಾರೆ ನೋಡುವ ನನ್ನ ಕನಸು  ನಿಜವಾದಾಗ .. ಆ ಪ್ರತಿ ಕ್ಷಣವನ್ನು ಕಣ್ಣಲ್ಲಿ , ಎದೆಯಲ್ಲಿ ತುಂಬಿಟ್ಟುಕೊಳ್ಳುವ  ಸಡಗರ ಬೇರೆಲ್ಲ ಆತಂಕಗಳನ್ನು ಮರೆಸಿತ್ತು . ಸುಮಾರು ೧೦  ದಿನಗಳ ನನ್ನ ಪ್ರವಾಸದಲ್ಲಿ  ಪ್ರಕೃತಿಯ ಸುಂದರ ರೂಪವೇ ನಂಗೆ ಕಂಡಿದ್ದು ! 

ಮೊನ್ನೆ ಮೊನ್ನೆ ಯ  ದುರಂತದಲ್ಲಿ  ಕೇದಾರದ ಜೊತೆ ಕೇಳಿಬಂದ  ಮತ್ತೊಂದು ಹೆಸರು ಹೇಮಕುಂಡ್ ಸಾಹಿಬ್. 
ಇದು ಸಿಕ್ಖರ ಪವಿತ್ರ ತಾಣಗಳಲ್ಲೊಂದು . ಜೋಶಿಮಠದಿಂದ ವಾಹನದಲ್ಲಿ ಗೋವಿಂದ ಘಾಟ ವರೆಗೆ ಹೋಗಬಹುದಾದರೂ ಅಲ್ಲಿಂದ  ಮುಂದೆ ಹೇಮಕುಂಡ್ ಗೆ  ವಾಹನಗಳು ಹೋಗಲಾರವು. 

ಗೋವಿಂದ ಘಾಟ್ ನ ವಾಹನ ನಿಲ್ದಾಣದಲ್ಲಿ ಕಂಡ ಮೇಘಾವೃತ ಶಿಖರಗಳು !
ಗೋವಿಂದ  ಘಾಟ್ ನಿಂದ ಹೇಮಕುಂಡ್ ಗೆ ೧೪  ಕಿ ಮೀ  ಬೆಟ್ಟ ಹತ್ತಿ ಸಾಗುವಾಗ ಸತತ ನದಿಗೆ ಅಭ್ಯಾಸವಿಲ್ಲದ್ದರಿಂದ ಕಾಲು ನೋಯುತ್ತಿದ್ದರೂ  ಹೆಚ್ಚು ದಣಿವಾಗಲಿಲ್ಲ . ೧೦ -೧೫ ನಿಮಿಷಗಳ ವಿಶ್ರಾಂತಿ ಸಿಕ್ಕರೆ  ದೇಹ ಮತ್ತೆ ಚೈತನ್ಯ ತುಂಬಿಕೊಳ್ಳುತ್ತಿತ್ತು . ಶುದ್ಧ ಹವೆಯ ಕಾರಣವಿರ ಬಹುದು . ಮೇಲೇರಿದಂತೆ  ಆಮ್ಲಜನಕದ ಕೊರತೆಯಿಂದ ಹಲವಾರು ಜನರಿಗೆ ಉಸಿರಾಟದ ತೊಂದರೆ ಆಗುವುದು ಅಲ್ಲಿ ಬಹು ಸಹಜ .ಎಷ್ಟೋ ಸಲ ಇದು ಅತೀ ಗಂಭೀರವಾಗಿ ಪರಿಣಮಿಸುತ್ತದೆ.  ಹೇಮಕುಂಡ್ ನಲ್ಲಿ  ನಾವು ಹೋದ ದಿನ  ಇಂಥಾ ತೊಂದರೆಯಿಂದ  ಪುಣೆಯಿಂದಲೇ  ಟ್ರೆಕ್ಕಿಂಗ್  ಗಾಗಿ  ಹೋದ ಒಬ್ಬ ಕಾಲೇಜು ಹುಡುಗ  ಮೃತ ಪಟ್ಟಿದ್ದ !   

ಹೇಮಕುಂಡ್ ದ ದಾರಿಯಲ್ಲಿ ಜೊತೆಯಾಗುವ ಅಲಕನಂದಾ 

ಹೇಮಕುಂಡ್ ನ  ದೊಡ್ಡ  ಗುರುದ್ವಾರ ( ಸಿಖ್ಖರ  ಪೂಜಾ ಸ್ಥಳ) ವನ್ನು ನೋಡಿ  ಬೆರಗಾಗಿದ್ದೆ ! ಸಮುದ್ರ ಮಟ್ಟದಿಂದ ಸುಮಾರು 4600 ಮೀಟರ್ ಎತ್ತರದ ಈ ಜಾಗದಲ್ಲಿ ವಿಸ್ತಾರವಾದ ಗುರುದ್ವಾರವನ್ನು ಹೇಗೆ ಕಟ್ಟಿರ ಬಹುದು ಎಂಬುದು ನಿಜಕ್ಕೂ ಆಶ್ಚರ್ಯ ತರುತ್ತದೆ ! ಯಾವ ವಾಹನವೂ ಓಡಾಡದ ,  ಅಂಥಾ ರಸ್ತೆಯೇ ಇಲ್ಲದ ಈ ಪರ್ವತದ  ಮೇಲೇ , ಕೇವಲ ಪ್ರಾಣಿಗಳನ್ನು ಬಳಸಿ  ಕಟ್ಟೋಣದ ಸಾಮಗ್ರಿಗಳನ್ನು ಹೊತ್ತು ತಂದು ಪೂಜಾ ಸ್ಥಳವನ್ನೂ ಕಟ್ಟುವುದು  ಸುಲಭದ ಮಾತಲ್ಲ ! 


ಹೇಮಕುಂಡ್ ಸಾಹಿಬ್-  ವಿಶಾಲ ಗುರುದ್ವಾರ  
ಯಾರೇ  ಬಂದರೂ ಎಷ್ಟೊತ್ತಿಗೂ  ಒಂದು ದೊಡ್ಡ ಕಂಚಿನ ಲೋಟದ ತುಂಬಾ  ಬಿಸಿಬಿಸಿಯಾದ  ಚಹಾ  ಸಿಗುತ್ತದೆ , ಬಿಸಿ ಬಿಸಿ ಖಿಚಡಿಯನ್ನು ಪ್ರಸಾದವಾಗಿ ಬಡಿಸಲಾಗುತ್ತದೆ. ದಣಿದು ಮೇಲೆ ಹತ್ತಿಕೊಂಡು ಅಲ್ಲಿಗೆ ಹೋದಾಗ ಕೊರೆಯುವ ಚಳಿಯಲ್ಲಿ ಬಿಸಿಯಾದ ಚಹಾ .. ಅಮೃತವೆನಿಸುತ್ತದೆ ! ಅಲ್ಲೇ  ಹಿಂದಿರುವ ಸರೋವರದಲ್ಲಿ , ನಾವು ಹೋದಾಗ ಇನ್ನೂ  ಅರ್ಧ ಮಂಜುಗಡ್ಡೆಯೇ ಇತ್ತು . ಇದು ಸಿಕ್ಖರ ಪವಿತ್ರ ಯಾತ್ರಾ ಸ್ಥಳವಾಗಿದ್ದು  ಮಕ್ಕಳಿಂದ ಹಿಡಿದು  ಮುದುಕರ ವರೆಗೂ  ಯಾತ್ರಾರ್ಥಿಗಳು ಬರುತ್ತಾರೆ . ಮಂಜಿನಂತೆ  ಕೊರೆಯುವ ಸರೋವರದ ನೀರಿನಲ್ಲಿ  ಮುಳುಗಿ ಏಳುತ್ತಾರೆ . ಚಿಕ್ಕ ಚಿಕ್ಕ ಕೈಗೂಸುಗಳನ್ನೂ  ಆ ನೀರಿನಲ್ಲಿ ಅದ್ದಿ ತೆಗೆಯುವುದನ್ನು ಕಂಡು ನನ್ನ ಉಸಿರೇ ಒಮ್ಮೆ ನಿಂತು ಹೋಗಿತ್ತು ! 


ಹೇಮಕುಂಡ್ ಸರೋವರ 

ರಾತ್ರಿ ನಮ್ಮ ಹೋಟೆಲ್ ನಿಂದ ಹೊರಗೆ ಬಂದು ಸುತ್ತ  ನೋಡಿದರೆ ಒಂಥರಾ ಅವರ್ಣನೀಯ ಅನುಭವ ! ಅದು ಶುಕ್ಲಪಕ್ಷ . ಹುಣ್ಣಿಮೆಗೆ ಹತ್ತಿರವಿದ್ದುದರಿಂದ  ಚಂದ್ರ  ದೊಡ್ಡದಾಗಿ ಹೊಳೆಯುತ್ತಿದ್ದ. ಸುತ್ತಲೂ ಹಿಮಾಚ್ಛಾದಿತ ಬೆಟ್ಟಗಳು ಆ ಬೆಳದಿಂಗಳಲ್ಲಿ  ಅಪೂರ್ವ ವಾಗಿ ಕಂಗೊಳಿಸುತ್ತಿದ್ದವು . ಆಗ ನನಗನಿಸಿದ್ದನ್ನು  ಯಾವ ಶಬ್ದಗಳೂ  ಹೇಳಲಾರವು ! ಅದೆಷ್ಟೋ ಹೊತ್ತು ಹಾಗೇ ನೋಡುತ್ತಾ ನಿಂತಿದ್ದೆ ! 

ಸಂಜೆಬೆಳಕಲ್ಲಿ  ಮಿಂದ ಪ್ರಕೃತಿ 

ಹೇಮಕುಂಡ್ ದಿಂದ ಕೇವಲ ೫ ಕಿ. ಮೀ ದಾರಿ " ಪುಷ್ಪ ಕಣಿವೆಗೆ"  ಆ ಬಗ್ಗೆ  ಇನ್ನೊಮ್ಮೆ ಬರೆಯುತ್ತೇನೆ. 


ಬದರೀನಾಥ , ಹೇಮಕುಂಡ್  ದ ಹಾದಿಯಲ್ಲಿ ಹಿಮ ಮುಚ್ಚಿದ ಬೋಳು ಬೆಟ್ಟಗಳು ಹೆಚ್ಚಿದ್ದರೆ , ಕೇದಾರದ ಹಾದಿ ಬೇರೆಯೇ ರೀತಿ . ದಟ್ಟ ಕಾಡಿನ ನಡುವೆ ಇಕ್ಕಟ್ಟಾದ ರಸ್ತೆಯಲ್ಲಿ  ಬೆಟ್ಟವನ್ನೇರಿ  ನಮ್ಮ ಬಸ್ ಸಾಗುವಾಗ ನಡು ನಡುವೆ ಸಿಗುವ ಪುಟ್ಟ ಪುಟ್ಟ ಊರುಗಳು  ಮನುಷ್ಯ ಪ್ರಕೃತಿಯ ಮೇಲೆ  ನಡೆಸುವ ದೌರ್ಜನ್ಯಕ್ಕೆ ಕನ್ನಡಿ ಹಿಡಿಯುವಂತಿದ್ದವು. ಹಾಗೆ  ನೋಡಿದರೆ ಇಲ್ಲಿಯ ಜನರಿಗೆ ಪ್ರವಾಸೋದ್ಯಮವೆ ಜೀವಾಳ . ಬೇಸಾಯಕ್ಕೆ ಸೂಕ್ತವಾದ ಭೂಮಿ ಕಮ್ಮಿ . ಕೈಗಾರಿಕೆಗಳು ಹೆಚ್ಚಿಲ್ಲ. ಕೈಗಾರಿಕೆಗಳ ಸ್ಥಾಪನೆ ಕೂಡ ಅತ್ಯಂತ ಅಪಾಯಕಾರಿ. ಹೀಗಿರುವಾಗ  ವರ್ಷದ ಆರು ತಿಂಗಳು ಇಲ್ಲಿ ಬರುವ ಪ್ರವಾಸಿಗಳು  ಇವರಿಗೆ  ಜೀವನಾಧಾರ . ನಾನು ನೋಡಿದ ಹೆಚ್ಚಿನ ಊರುಗಳಲ್ಲಿ  ಬಡತನ  ಕಣ್ಣಿಗೆ ಹೊಡೆಯುತ್ತಿತ್ತು. ಗುಡಿಸಲಿನಂಥಾ ಮನೆಗಳೇ ಹೆಚ್ಚಾಗಿದ್ದವು.  ತಡಿಕೆಯ ಗೋಡೆ ಗಳು, ಪ್ಲಾಸ್ಟಿಕ್ ಹೊದೆಸಿದ ಸೂರು .ಮಣ್ಣಿನ ಜಗುಲಿ!  ಆಧುನಿಕತೆ ಇಲ್ಲಿಂದ ಮೈಲುಗಟ್ಟಲೆ ದೂರವೇ ಉಳಿದುಬಿಟ್ಟಿದೆ ! ಆದರೂ ಒಂದು ಬಗೆಯ ಆತ್ಮೀಯತೆ  ನೋಡಸಿಕ್ಕುತ್ತಿತ್ತು .

ಕೇದಾರಕ್ಕೆ ಹೋಗುವಾಗ  ಬೆಟ್ಟದ ಬುಡದಲ್ಲಿರುವ ಗೌರಿಕುಂಡದಲ್ಲಿ ಪ್ರವಾಸಿಗರು ಉಳಿದು ಕೊಳ್ಳುತ್ತಾರೆ. ಒಂಥರಾ ಬೇಸ್ ಕ್ಯಾಂಪ್ ಇದು.  ನಾವೂ ಕೂಡ ಹಾಗೇ ಉಳಿದು ,ಮರುದಿನ ಬೆಳಿಗ್ಗೆ ಕೇದಾರದತ್ತ ಪ್ರಯಾಣ ಬೆಳೆಸಿದೆವು. ೧೪ ಕಿ.ಮೀ ಇಲ್ಲೂ ಕೂಡ. ಆದ್ರೆ ಬೋಳು ಬೆಟ್ಟ ! ಹತ್ತುವ ದಾರಿಯಲ್ಲಿ ಅಲ್ಲಲ್ಲಿ ಚಾದಂಗಡಿಗಳು ಸುಮಾರಷ್ಟಿವೆ . ಪ್ರಯಾಣದ ದಣಿವಾರಿಸಿಕೊಳ್ಳಲು  ಬಿಸಿ ಬಿಸಿ ಚಹಾ ಅತ್ಯಗತ್ಯ ! ಮೇಲೆ ಹತ್ತಿದಂತೆ ತೀವ್ರವಾಗುವ ಚಳಿ ! ನಾನು  ಜೀನ್ಸ್ , ದಪ್ಪದ ಶರ್ಟ್ ಮೇಲೆ   ಸ್ವೆಟರ್  ಹಾಗೂ ಅದರ ಮೇಲೊಂದು ಜೀನ್ಸ್ ಜಾಕೆಟ್ ಹಾಕಿದ್ದರೂ  ಚಳಿಗೆ  ಮೈ ನಡುಗುತ್ತಿತ್ತು . ಕಿವಿಗೆ ಹತ್ತಿ ತುರುಕಿ, ಉಲನ  ಟೋಪಿ ಹಾಕಿ ಮೇಲೊಂದು ಸ್ಕಾರ್ಫ್ ಕಟ್ಟಿ , ಕೈಗೆ ಗ್ಲೋವ್ಸ್ ಹಾಕಿದ್ದರೂ ಹಲ್ಲುಗಳು  ಕಟ ಕಟ ಎನ್ನುತ್ತಿದ್ದವು. ಇದು ಬೆಟ್ಟ ಹತ್ತಿ  ಬಂದಾಗಲೂ ಆಗುವ ಸ್ಥಿತಿ. ನಾವಿಲ್ಲಿ ೧೦  ಮಾರು ಜೋರಾಗಿ ನಡೆದರೂ ಬೆವರುತ್ತೇವೆ . 

ಕೇದಾರದಲ್ಲಿ  ಕಟ್ಟಡಗಳು ಬೇಕಾ ಬಿಟ್ಟಿಯಾಗಿ ತಲೆ ಎತ್ತಿವೆ. ಬರುವ ಸಾವಿರಾರು ಪ್ರವಾಸಿಗಳಿಗೆಂದು ಕಟ್ಟಿದ ಲಾಡ್ಜ್ , ಹೋಟೆಲ್ ಗಳು  ಯಾವುದೇ ಪ್ಲಾನ್ ಇಲ್ಲದೆ ಕಂಡ ಕಂಡಲ್ಲಿ  ಕಟ್ಟಲ್ಪಟ್ಟು  , ಏನಾದರೂ ಆಕಸ್ಮಿಕವಾದಲ್ಲಿ  ಸರಿಯಾಗಿ ಓಡಲೂ ಜಾಗವಿಲ್ಲದಂತೆ  ಆಗಿದೆ . ಸೂಕ್ತ ವ್ಯವಸ್ಥೆಯಿಲ್ಲದೆ . ರಸ್ತೆಗಳು  ಗಟಾರದಂತೆ ಗಲೀಜಾಗಿವೆ . ಕೊಳಕು  ಕಣ್ಣಿಗೆ ರಾಚುತ್ತದೆ . ಸಾವಿರ ವರ್ಷಗಳ  ಹಿನ್ನೆಲೆಯಿರುವ ದೇವಸ್ಥಾನದ ಸುತ್ತ  ಮನುಷ್ಯನ  ವ್ಯಾಪಾರೀ ಮನೋಭಾವದಿಂದಾಗಿ ಇಂದು ಬರೀ ಹೊಲಸು ತುಂಬಿದ್ದನ್ನು ಕಂಡು ಒಮ್ಮೆ ಮನಸ್ಸು ರೋಸಿ ಹೋಯಿತು ! ಇದಕ್ಕೆ  ಇಂದು ನನ್ನ ಕೊಡುಗೆಯೂ  ಇದೆ ಎಂದುಕೊಂಡಾಗ ಮನಸ್ಸು ಮುದುಡಿತು.

ದೇವಾಲಯದ ಎದುರಿಗೆ ಇರುವ  ಲಾಡ್ಜ್ ಗೆ  ಹೋಗಿ , ಮೊದಲ ಮಹಡಿಯಲ್ಲಿರುವ ನಮ್ಮ ರೂಮಿನಲ್ಲಿ ಬ್ಯಾಗ್ ಕೆಳಗಿಟ್ಟು  ಹೊರಗೆ ಬಂದೆವು . ಅಷ್ಟರಲ್ಲಿ ಕೆಳಗಿನಿಂದ  ಹೋಟೆಲ್ ನ ಹುಡುಗ  ಬಿಸಿ ಬಿಸಿ ಚಹಾದ  ಕೆಟಲ್ ಹಿಡಿದು ಮೇಲೇ ಬಂದ. ಹಬೆಯಾಡುವ ಚಹಾವನ್ನು  ಆತ ಉದ್ದ ಕಂಚಿನ ಲೋಟಕ್ಕೆ ಬಗ್ಗಿಸಿ ನಮ್ಮ ಕೈಗೆ ಕೊಟ್ಟ . ಆ ಚಳಿಗೆ  ಕೈಲಿ ಹಿಡಿದ ಬಿಸಿಯಾದ ಲೋಟ  ಹಾಯೆನಿಸಿತು. ಕೈಯಿಂದ ಬಾಯಿಯ ವರೆಗೆ ಹೋಗುವಷ್ಟರಲ್ಲಿ ಹಬೆಯಾಡುವ ಚಹಾ ಕೂಡ ತಣ್ಣಗಾಗಿ ಹೋಯ್ತು ! ಅಂಥಾ ಚಳಿ ಅಲ್ಲಿ. 

 ಮಜಾ ಎಂದರೆ , ರೂಮಿನಲ್ಲಿ ದಪ್ಪ ಹಾಸಿಗೆಏನೋ ಇತ್ತು . ಆದರೆ ಎಲ್ಲೂ ಚಾದರ, ಕಂಬಳಿ ಕಾಣಲಿಲ್ಲ. ಅಯ್ಯೋ ದೇವರೇ ರಾತ್ರಿ ಈ ಚಳಿಯಲ್ಲಿ  ಮಲಗುವುದಾದರೂ ಹೇಗೆ ಎಂದು  ಕೆಳಗೆ ಹೋಗಿ  ಚಾದರ ಇಟ್ಟಿಲ್ಲ  ಕೊಡಿ ಎಂದರೆ , ಆತ  ಹಾಗಾಗಲು ಸಾಧ್ಯವೇ ಇಲ್ಲ ನಾವು ಎಲ್ಲವನ್ನೂ ರೂಮಿನಲ್ಲೇ ಇಟ್ಟಿರುತ್ತೇವೆ  ಎಂದ. ನಾವು  ಇಲ್ಲವೇ ಇಲ್ಲ , ನೀನೂ ಮರೆತಿರಬೇಕು ಬೇಕಾದರೆ ಬಂದು ನೋಡು  ಅಂದೆ ವಾದಿಸಿದೆವು. ನಮ್ಮೊಟ್ಟಿಗೆ ರೂಮಿಗೆ ಬಂದ ಅವನು ಹಾಸಿಗೆ  ತೋರಿಸಿ ಇದೆಯಲ್ಲ ಇಲ್ಲಿ ಎನ್ನಬೇಕೆ? ಅಯ್ಯೋ ಹಾಸಿಗೆ ಇದೆಯಪ್ಪ  ಆದರೆ ಕಂಬಳಿ ಎಲ್ಲಿ  ಎಂದು ನಾವು ! ಅಂತೂ ಅವನಿಗೆ ನಮ್ಮ ಗೊಂದಲ ಅರ್ಥವಾಗಿ ನಗುತ್ತ ಮೇಲಿನ " ಹಾಸಿಗೆ"ಯನ್ನು   ಎತ್ತಿದ ! ಅದರ ಅಡಿಯಲ್ಲಿ ಇನ್ನೊಂದು ಹಾಸಿಗೆ ಇತ್ತು . ನಾವು ಸುಸ್ತು . ಅಲ್ಲಿಯ ಹೊದಿಕೆಯೇ ಒಂದು ಹಾಸಿಗೆಯನ್ತಿದ್ದು  ನಮ್ಮನ್ನು ಮೂರ್ಖರನ್ನಾಗಿಸಿತ್ತು. ಹಾಗೇ ಹಾಸಿಗೆ ಹೊದ್ದು ಮಲಗಿದರೂ , ರಾತ್ರಿ ಎಲ್ಲೋ ಸ್ವಲ್ಪ ಸೂಜಿಯಷ್ಟೇ  ಅದು ಸರಿದರೂ  ಚಳಿ ಮೈ ಕೊರೆಯುತ್ತಿತ್ತು .

ಇಂಥಾ ಕೊರೆಯುವ ಚಳಿಯಲ್ಲೂ ಬರೀ ಮೈಯಲ್ಲಿ ತಿರುಗುವ ಸಾಧುಗಳು  ಕಾಣಸಿಗುತ್ತಾರೆ ! ನಾವು ಬಟ್ಟೆಯ ಮೇಲೇ ಬಟ್ಟೆ  ಹಾಕಿ ನಡುಗುತ್ತಿದ್ದರೆ , ಅವರೋ ಒಂದೂ ಬಟ್ಟೆಯಿಲ್ಲದೆ , ಮೈಗೆ ಬೂದಿ ಬಡಿದುಕೊಂಡು , ಚಳಿಯೆಂದರೇನು ಎಂದೆ ತಿಳಿಯದವರಂತೆ ಆರಾಮಾಗಿ ಓಡಾಡುತ್ತಿದ್ದರು . 

ಕೇದಾರನಾಥನ  ಸನ್ನಿಧಿಯಲ್ಲಿ 

ಕೇದಾರನಾಥದ  ದೇಗುಲ  ಸಾವಿರ ವರ್ಷಕ್ಕೂ ಹಳೆಯದು . ಹೆಚ್ಚು ಸಂಕೀರ್ಣ ವಲ್ಲದ ಸರಳ ವಾಸ್ತು ಶಿಲ್ಪ. ಆದರೆ ಭವ್ಯವಾದ ಕಲ್ಲಿನ ದೇಗುಲವಿದು . ಇಂಥಾ ಸ್ಥಳದಲ್ಲಿ  ಆ ಕಾಲದಲ್ಲಿ ಅದನ್ನು ಹೇಗೆ ಕಟ್ಟಿದರು  ಎಂಬುದು  ವಿಸ್ಮಯಕಾರಿಯೇ !  ವಿಶಾಲವಾದ ಗರ್ಭಗುಡಿಯ ಒಳ ಹೊಕ್ಕರೆ ,ಮಬ್ಬುಗತ್ತಲೆ .  ಕಲ್ಲಿನ ನೆಲದ ಮೇಲೆ   ಕಾಲು ಕೊರೆಯುವುದಷ್ಟೇ ಅಲ್ಲಾ , ಜಾರುತ್ತದೆ ಕೂಡ. ಜೊತೆಗೆ ಮುಗ್ಗು , ಜಿಡ್ಡು ವಾಸನೆ ಮೂಗಿಗೆ ಬಡಿಯುತ್ತದೆ. ಇಲ್ಲಿನ ಶಿವಲಿಂಗಕ್ಕೆ  ಭಕ್ತರು ಬೆಣ್ಣೆ ಸವರುವುದು ಪರಿಪಾಠ ! 
ಹೀಗಾಗಿ ನೆಲವೆಲ್ಲ ಜಿಡ್ಡು . ದೀಪಾವಳಿಯ ಹೊತ್ತಿಗೆ ಹಿಮಪಾತ ಶುರುವಾಗುವಾಗ ದೇವಾಲಯದ ಬಾಗಿಲು ಮುಚ್ಚಿದರೆ  ಮತ್ತೆ ತೆರೆಯುವುದು ಅಕ್ಷಯ ತದಿಗೆಗೆ , ಹಿಮ ಕರಗುವ  ಸಮಯಕ್ಕೆ . ವರ್ಷದ ಆರು ತಿಂಗಳು  ಹಿಮದಲ್ಲಿ ಮುಚ್ಚಿರುವ ದೇವಸ್ಥಾನವನ್ನು ಮುಚ್ಚುವ ದಿನ ಹಾಗೂ ಪುನಃ  ತೆರೆಯುವ ದಿನ  ಬಿಸಿನೀರಿನಲ್ಲಿ ಎಷ್ಟೇ ತೊಳೆದರೂ ವಾಸನೆ ಹೋಗುವುದು ಸಾಧ್ಯವೇ ಇಲ್ಲ ! ನಂಗೆ ಒಮ್ಮೆ ಅಲ್ಲಿಂದ ಹೊರ ಬಂದರೆ ಸಾಕು ಎಂದೆನಿಸಿ ಬಿಟ್ಟಿತ್ತು .ಯಾವುದೋ ಕಾಲದ ಏನೋ ನಂಬಿಕೆಯಿಂದ ಪವಿತ್ರ  ಸ್ಥಳಗಳನ್ನು ಹೀಗೇ ಕೊಳಕುಗೊಳಿಸುವುದು ಎಷ್ಟು ಸರಿ ಎಂಬ ಪ್ರಶ್ನೆ ನನ್ನನ್ನು ಇನ್ನೂ ಕಾಡುತ್ತದೆ. 



ಬಾಲ್ಕನಿಯಿಂದ ಕಂಡ  ಗೋಪುರ 

ಅಂದು ನೂಲು  ಹುಣ್ಣಿಮೆಯಾಗಿತ್ತು  (ರಾಖೀ  ಹುಣ್ಣಿಮೆ )  . ರಾತ್ರಿ ಬಾಲ್ಕನಿಗೆ ಬಂದು  ನೋಡುತ್ತಾ ನಿಂತೆ. ನೀರವ ಮೌನದ ನಡುವೆ  ಕ್ಷೀಣವಾಗಿ ಕೇಳುವ ಮಂದಾಕಿನಿಯ ಜುಳು ಜುಳು ಸದ್ದು . ಸಮುದ್ರ ಮಟ್ಟದಿಂದ ಸುಮಾರು ೭೦೦೦ ಮೀಟರ್ ಗೂ ಹೆಚ್ಚು ಎತ್ತರದ ಜಾಗವಾಗಿದ್ದರಿಂದ  ಹುಣ್ಣಿಮೆಯ ಪೂರ್ಣ ಚಂದ್ರ ಇನ್ನೂ ದೊಡ್ಡದಾಗಿ ಹೊಳೆಯುತ್ತಿದ್ದ !  ಎತ್ತರಕ್ಕೆ ನಿಂತ ಬೋಳು ಬೆಟ್ಟಗಳು , ಅವುಗಳ ಮೇಲೆ ತಿಂಗಳ ಬೆಳಕಿನಲ್ಲಿ ಹೊಳೆಯುವ  ಹಿಮದ ಛಾಯೆ,  ಬೆಳದಿಂಗಳಿನಲ್ಲಿ ಹಿನ್ನೆಲೆಯಲ್ಲಿ  ಕಾಣುವ  ಕೇದಾರನಾಥನ  ಮಂದಿರ ! ಅನಿರ್ವಚನೀಯ ಭಾವ ಮೂಡಿಸುತ್ತಿದ್ದವು . ಒಂದು ಬಗೆಯ ದೈವೀಕ ಅನುಭವ! ನೋಡುತ್ತಾ ನಿಂತ ನನ್ನ ಕಣ್ಣಲ್ಲಿ ಧಾರೆಯಾಗಿ ನೀರು ಸುರಿಯುತ್ತಿತ್ತು . ಎದೆ ತುಂಬಿತ್ತು , ಬೇರಾವ ಗೋಜೂ ಇಲ್ಲದೇ ಇಲ್ಲಿ ಹೀಗೆಯೇ ಇದ್ದುಬಿಡೋಣ ಎನಿಸುತ್ತಿತ್ತು . ಇಂಥಾ ಅನುಭವ ನನಗೆ ಜೀವನದಲ್ಲಿ ಎಂದೂ ಆಗಿರಲಿಲ್ಲ . ಅದೆಷ್ಟು ಹೊತ್ತು ಹಾಗೇ ನಿಂತಿದ್ದೆನೋ ಗೊತ್ತಿಲ್ಲ . 
ಬೆಳಿಗ್ಗೆ  ಒಲ್ಲದ ಮನಸಿಂದ ಅಲ್ಲಿಂದ  ಮರಳಿ  ಗೌರಿಕುಂಡದತ್ತ ಹೊರಟೆವು .

ಅಲ್ಲಿ ನಮ್ಮ ಹೋಟೆಲ್ ತಲುಪಿ ನೋಡಿದರೆ , ನಾವು  ಊರಿನತ್ತ ತಿರುಗಿ ಹೋಗಲು ದಾರಿಯೇ ಇಲ್ಲ ! ನಮ್ಮ ಬಸ್ ಬಂದ ರಸ್ತೆ ಕುಸಿದು ೧೦ ಅಡಿ ಅಗಲದ  ಕಂದಕ ಬಾಯಿ ತೆರೆದಿತ್ತು ! ನಮಗೆ  ಚಿಂತೆ ಶುರುವಾಯಿತು . ಸೇನೆಯವರು ರಸ್ತೆಯನ್ನು ಮಾಡಲು ಬಂದಿದ್ದರೂ ಸಹ . ಅದರ ರಿಪೇರಿಗೆ ಸಾಕಷ್ಟು ಸಮಯ ಹಿಡಿಯುತ್ತಿತ್ತು. 
ಹೀಗಾಗಿ  ಅಷ್ಟುದ್ದದ ೩ -೪ ಮರದ ಹಲಗೆ ಗಳನ್ನೂ ಕಂದಕದ ಮೇಲೆ  ಹಾಕಿ ದಾಟುವ ವ್ಯವಸ್ಥೆ ಮಾಡಿದ್ದರು . ನಾವು ಬಂದ  ಬಸ್  ಅದರ ಮೇಲೆ ದಾಟಲು ಸಾಧ್ಯವಿಲ್ಲದ್ದರಿಂದ ನಮ್ಮ ಟೂರಿಸ್ಟ್ ಕಂಪನಿಯವರು ಅದಾಗಲೇ ಬೇರೆ ವಾಹನ ವ್ಯವಸ್ಥೆ  ಮಾಡಿದ್ದರು . ನಮ್ಮ ಲಗೇಜ್ ಗಳನ್ನೂ  ದಾಟಿಸಿ ಕೊಂಡು ಹಲಗೆಯ ಮೇಲೆ  ಸರ್ಕಸ್ ಮಾಡಿಕೊಂಡು ಆ ಕಡೆ ದಾಟಿ ಬಸ್ ಹತ್ತಿದೆವು. ನನಗೆ  ಊರಲ್ಲಿ ಹೊಳೆ ದಾಟುವ ' ಸಂಕ' ನೆನಪಾದರೆ , ಅಭ್ಯಾಸವಿರದ ಹಲವರು ಪ್ರತಿಹೆಜ್ಜೆ ಇಡುವಾಗಲೂ  ಜೀವವನ್ನು ಕೈಲಿ ಹಿಡಿದು ದೇವರ ಸ್ಮರಣೆ ಮಾಡುತ್ತಿದ್ದರು . 
ಅಂತೂ ಅಲ್ಲಿಂದ ಹೊರಟು ಸುರಕ್ಷಿತವಾಗಿ  ಹರಿದ್ವಾರ ತಲುಪಿದೆವು . 
ಇದು ನನ್ನ ಕೇದಾರನಾಥದ ಅನುಭವ.  ಈ ಪ್ರವಾಸದ  ಪ್ರತಿ ದಿನವೂ ರೋಚಕವಾಗಿತ್ತು . ಸಂದರ್ಶಿಸಿದ ಪ್ರತಿ ಸ್ಥಳವೂ ವಿಶಿಷ್ಠ ಅನುಭವ ನೀಡಿತ್ತು. 
ನನ್ನ ಬದುಕಿನ  ಕೆಲವು ಅಪೂರ್ವ ಕ್ಷಣಗಳನ್ನೂ  ನಾನಿಲ್ಲಿ ಅನುಭವಿಸಿದ್ದೇನೆ . ಇಂದಿಗೂ ಅದೆಷ್ಟೋ ಸಲ  ನನ್ನ ಕನಸಿನಲ್ಲಿ ನಾನು ಕೇದಾರನಾಥದಲ್ಲಿರುತ್ತೇನೆ. ಆ ಬೆಳದಿಂಗಳು  ತೋಯಿಸಿದ ಪರ್ವತಗಳು ,  ಆ ದೇವಸ್ಥಾನ ,ಆ ಪ್ರಶಾಂತ ಪ್ರಕೃತಿಯ ಮಡಿಲು ನನ್ನನ್ನು ಕರೆಯುತ್ತವೆ. 
ಈಗ ಅಲ್ಲಿ  ನಡೆದ ಪ್ರಕೃತಿಯ ರುದ್ರ ನರ್ತನವನ್ನು ನೋಡಿದಾಗ  ಭಯವಾಗುತ್ತದೆ .ಇದು ನಾ ನೋಡಿದ ಕೇದಾರವೇ ಎಂದೆನಿಸುತ್ತದೆ . ಮನುಷ್ಯನ  ಅತ್ಯಾಚಾರವನ್ನು ಇನ್ನೂ ಸಹಿಸಲಾರೆ ಎಂದು  ಪ್ರಕೃತಿ ದೇವತೆ ಮೈಕೊಡವಿ ನಿಂತಳೆ ? ಕೆಲ ಸಮಯ ನನ್ನನ್ನು ಒಂಟಿಯಾಗಿ ಬಿಡಿ ಎಂದು ಆರ್ಭಟಿಸಿದಳೆ  ಎನಿಸುತ್ತದೆ . ಆಕೆ ಕೆರಳಿದರೆ ನಮಗೆ ಉಳಿವುಂಟೆ ?  ಅವಳನ್ನು ಎದುರು ಹಾಕಿಕೊಂಡು ಬದುಕ ಬಲ್ಲೆವೆ? 

5 comments:

ಸುಧೇಶ್ ಶೆಟ್ಟಿ said...

ನಿಮ್ಮ ಅನುಭವ ಓದುತ್ತಾ ಇದ್ದಾರೆ ವಾವ್ ಆನಿಸಿತು. ಹೃದ್ಯವಾಗಿದೆ ಬರಹ... ಮತ್ತೆ ಫಾರ್ಮಿಗೆ ಬಂದಿದ್ದೀರಾ :) ಇದು ನಿಲ್ಲದಿರಲಿ :) ಮತ್ತಷ್ಟು ಬರೆಯಿರಿ :)

ದಿನಕರ ಮೊಗೇರ said...

nimma jote naavu prayaaNA maaDida haagittu nimma baravaNige....

chennaagide bareda reeti...

Ittigecement said...

ಚಿತ್ರಾ...
ಇದನ್ನು ಓದಿದಾಗ..
ಎಲ್ಲವೂ ಅಲ್ಲಿ ಸರಿ ಆದಮೇಲೆ ಒಮ್ಮೆ ಹೋಗಿ ಬರಬೇಕೆಂಬ ಆಸೆ ಪ್ರಬಲವಾಯಿತು...

ಅಲ್ಲಿನ ಪರಿಸರ ಕಣ್ಣಿಗೆ ಕಟ್ಟುವಂತೆ ಚಿತ್ರಣ.. !

ಸುಂದರ ಪ್ರವಾಸ ಕಥನಕ್ಕೆ ಪ್ರೀತಿಯ ಜೈ ಹೋ !

Unknown said...

ನಿಮ್ಮ ಲೇಖನ ಓದಿ ಕೇಧಾರನಾಥ ದರ್ಶನ ಮಾಡಿದ ಹಾಗಾಯಿತು.ತುಂಬಾ ಚೆನ್ನಾಗಿ ಬರೆದಿದ್ದೀರಿ.

Anonymous said...

While reading i was feeling like I am travelling to all this places.
Too Good Explaination, Please Keep Up Writing!!!