April 14, 2014

ಬೆಕ್ಕೇ ಬೆಕ್ಕೇ.....


ಪ್ರಾಣಿ - ಪಕ್ಷಿಗಳಿಂದ  ಯಾವಾಗಲೂ ಸ್ವಲ್ಪ ದೂರ  ! ದ್ವೇಷ ಅಂತೇನಿಲ್ಲ   ಪ್ರೀತಿನೂ ಇಲ್ಲ . 
ನಾಯಿ ಮರಿ ನಾಯಿ ಮರಿ ತಿಂಡಿ ಬೇಕೇ  ಎಂದು ಕಾಳಜಿ ,ತೋರಿಸುವುದೋ   ಕರೆದರೂ ಇಲ್ಲ ಹಾಲು ಬೆಲ್ಲ  ಕಾಯಿಸಿ ಇಟ್ಟಿದ್ದೆ ಎಂದು ಬೆಕ್ಕಿನ  ಬಗ್ಗೆ ಅಕ್ಕರೆ ತೋರುವುದೋ .ನನ್ನಿಂದಾಗದು  .

ಬಾ ಬಾ ಗಿಣಿಯೆ ಎಂದು ಹಾಡಲಾರೆ , ಗಂಗೆ ಬಾರೆ ಗೌರಿ ಬಾರೆ ಎಂದು  ಹೆಣ್ಣು ಮಕ್ಕಳನ್ನು ಮಾತ್ರ ಕರೆಯಬಲ್ಲೆ ...  ನಾನು ಹೀಗೇ . ಸ್ವಲ್ಪ ದೂರವಿದ್ದು ಬಿಡುತ್ತೇನೆ 
ನಾಯಿ ನನ್ನ ಮುಖ ಮೈ ಎಲ್ಲ , ನೆಕ್ಕುವುದಾಗಲಿ ಬೆಕ್ಕು ಮಿಯಾಂವ್ ಎನ್ನುತ್ತಾ  ಮೈ ಹೊಸೆಯುವುದಾಗಲಿ ನನಗಿಷ್ಟವಾಗದು .ನಾಯಿಯನ್ನು ಹಾಗೂ ಸ್ವಲ್ಪ ದೂರದಿಂದ ,ಮಾತಾಡಿಸಿ ಪ್ರೀತಿ ತೋರಬಲ್ಲೆ ಆದರೆ ಬೆಕ್ಕು ಎಂದರೆ ಮಾತ್ರ ಮೈ ಮುಳ್ಳಾಗುತ್ತದೆ .

ದುರ್ದೈವದಿಂದ  ಪ್ರೀತಿಯ ಸ್ನೇಹಿತೆ ,  ನನ್ನ ಹತ್ತಿರದ ಬಳಗದ  ಕೆಲವರು  ಪ್ರಾಣಿ ಪ್ರಿಯರು . ಅವರಲ್ಲಿಗೆ ಹೋದಾಗೆಲ್ಲ  ಸಹಿಸಿಕೊಳ್ಳುವುದು ಅನಿವಾರ್ಯ  ! 
ಹೇಳಿದ್ನಲ್ಲ ನಂಗೆ ಪ್ರಾಣಿಗಳ  ಬಗ್ಗೆ ದ್ವೇಷ  ಇಲ್ಲ . ಆದರೆ  ಅವುಗಳನ್ನು ಅತೀ ಸಮೀಪದಲ್ಲಿ  ಬಿಟ್ಟುಕೊಳ್ಳುವ   ಪ್ರೀತಿಯೂ ಇಲ್ಲ  ! 

ನನ್ನ ತುಂಬಾ ಹತ್ತಿರದ ಸ್ನೇಹಿತೆ ಒಬ್ಬಳಿಗೆ ಬೆಕ್ಕೆಂದರೆ ಮಹಾ ಪ್ರೀತಿ . ಅವಳ ಮನೆ ತುಂಬಾ  ಬೆಕ್ಕುಗಳು !  ಇರುವವರು ೪ ಜನರಾದರೆ ಬೆಕ್ಕುಗಳು ೫ !!! ಅವಳ ಮನೆಗೆ ಹೋಗಿ ಕುಳಿತ ಕೂಡಲೇ  ನನ್ನನ್ನು ಮಾತನಾಡಿಸಲೋ ಎಂಬಂತೆ  ಎಲ್ಲ  ಬೆಕ್ಕುಗಳೂ  ' ಮಿಯಾಂವ್ ' ಎನ್ನುತ್ತಾ  ನನ್ನ  ಕಾಲು  ಕೈ  ಕುತ್ತಿಗೆ  ಎಲ್ಲಾ ಕಡೆ  ಹತ್ತಿ ಹೊಸೆಯುತ್ತವೆ. ಅವುಗಳ ಕೂದಲು  ತಾಕುತ್ತಿದ್ದಂತೆ ನನ್ನ ಅಲರ್ಜಿ  ಸ್ವಿಚ್ ಆನ್ ಆಗಿ " ಅಕ್ಷೀ ಅಕ್ಷೀ "  ಎಂದು ಶುರುವಾಗುತ್ತದೆ. 
ನನ್ನ " ಮಾರ್ಜಾಲ ಮೈತ್ರಿಯ' ಬಗ್ಗೆ ಗೊತ್ತಿರೋ ಅವಳು ಅವುಗಳನ್ನೆಲ್ಲ  ಎತ್ತಿಕೊಂಡು  " ಮೌಶೀಲಾ  ತುಮಚ್ಯಾ ಅಲರ್ಜೀ ಆಹೆ  , ಮಾಹಿತಿ ಆಹೆ ನಾ  ಮನ್ಯಾ .. "  (  ಮೌಶಿ ( ಚಿಕ್ಕಮ್ಮ/ದೊಡ್ಡಮ್ಮ) ಗೆ  ನಿಮ್ಮ ಅಲರ್ಜಿ ಇದೇ ಗೊತ್ತಾಲ್ವಾ ಮುದ್ದೂ ... )  ಎನ್ನುತ್ತ  ನನ್ನನ್ನು  ಆ ಬೆಕ್ಕುಗಳ    'ಮೌಶಿ ' ಯಾಗಿಸಿ  ಅವುಗಳನ್ನೂ ಮುದ್ದಿಸುತ್ತಾ ರೂಮೊಳಗೆ ಒಯ್ದು ಬಾಗಿಲು ಹಾಕಿ ಬರುತ್ತಾಳೆ . ಆ ನಂತರವೇ ನಾನು ನಿರಾಳವಾಗಿ  ಮಾತಾಡ  ಬಲ್ಲೆ .
ಎಷ್ಟೋ ಸಲ  ಅವಳಿಗೆ ಹೇಳಿದ್ದೆ , ನಾನು ಬರೋ ಮುಂಚೆ ಫೋನ್ ಮಾಡ್ತೀನಿ . ನೀನು  ಆ ಬೆಕ್ಕಿನ ಸಂತೆನೆಲ್ಲ ರೂಮೊಳಗೆ ಮುಂಚೆನೇ ಹಾಕಿರು ಅಂತ.  " ಏ  ಹೋಗೆ, ನೀನು ಬರೋವರೆಗಾದ್ರೂ ಅವು ಪಾಪ ಆರಾಮಾಗಿ ಓಡಾಡಿಕೊಂಡಿರಲಿ ಬಿಡು ! ಅಷ್ಟಕ್ಕೂ ನೀನೆ  ಬೆಕ್ಕನ್ನ ಪ್ರೀತಿಸೋದು ಕಲಿಬಾರದಾ ? ' ಎಂದು ಕಿಚಾಯಿಸುತ್ತಾಳೆ . 

ಇದು ನನ್ನ ಸ್ನೇಹಿತೆಯ  ಕಥೆಯಾದರೆ , ಇನ್ನೂ ನನ್ನ ತವರಿನಲ್ಲಿ ಇನ್ನೊಂದು  ಹೆಜ್ಜೆ ಹೆಚ್ಚು !
ಅಲ್ಲಿರುವ ಎರಡು - ಮೂರು ಬೆಕ್ಕುಗಳಿಗೆ  ಸಿಗುವ ಉಪಚಾರ ನೋಡಬೇಕು !!! ಅಹಾಹಾ .. ಒಂದು ಬೆಕ್ಕಿಗೆ ಹಾಲಿನ ಜೊತೆ  ಮಂಡಕ್ಕಿ ಮಾತ್ರ ತಿಂದರೆ   ಮತ್ತೊಂದು , ಹಾಲು  ಬೆಚ್ಚಗಿದ್ದರೆ ಮಾತ್ರ ಕುಡಿಯುವುದು  ! ಒಂದು ಅಮ್ಮನ ಮುದ್ದಿನ ಬೆಕ್ಕಾದರೆ  ಮತ್ತೊಂದು ಅಪ್ಪಾಜಿಯದು ! ಅವುಗಳಿಗೆ ಸಿಗುವ ಮುದ್ದು , ಉಪಚಾರ ಎಲ್ಲ ನೋಡುವಾಗ .. " ನೀವು ನಮಗೇ  ಇಷ್ಟೆಲ್ಲಾ ಮುದ್ದು ಮಾಡಿರಲಿಲ್ಲ" ಎಂದು  ಅಪ್ಪಾಜಿ ಅಮ್ಮನ ಕಾಲೆಳೆಯುತ್ತೇವೆ !   

ಅಪ್ಪಾಜಿಯ ಬೆಕ್ಕಂತೂ ಅವರಿಲ್ಲದಾಗ  ಹತ್ತು ಸಲ ಮನೆಯನ್ನ ಹುಡುಕುತ್ತದೆ ,  ಅದಕ್ಕೆ ಯಾವಾಗಲೂ ಅವರೇ ಊಟ ಹಾಕ  ಬೇಕು  .. ಅವರಿಲ್ಲದಾಗ ಸರಿಯಾಗಿ ಊಟ ಮಾಡುವುದಿಲ್ಲ   ಎಂದೆಲ್ಲ ಅಮ್ಮ ಹೇಳುತ್ತಾಳೆ . ಅಪ್ಪಾಜಿಯ ಖುರ್ಚಿ ತನ್ನದೇ ಸೊತ್ತು  ಎಂಬಂತೆ ಇಡೀ ದಿನ ಅದರ ಮೇಲೇ ಮಲಗಿ ನಿದ್ರಿಸುತ್ತಿರುತ್ತದೆ . ಈ ಬಗ್ಗೆ  ಒಮ್ಮೆ  ಒಂದು ತಮಾಷೆ ನಡೀತು .  ಅಮೆರಿಕಾದಿಂದ  ರಜೆ ಗೆ ಬಂದ  ನನ್ನ ತಮ್ಮನ ಮಗಳು ಮೂರೂವರೆ ವರ್ಷದ ' ವಿಸ್ಮಯಾ'  ಪ್ರಾಣಿ ಪ್ರಿಯೆ. ಇಡೀ ದಿನ ಬೆಕ್ಕುಗಳ ಹಿಂದೆ ತಿರುಗಿ ಅವುಗಳನ್ನೂ ಹಿಡಿದು  ಬಿಗಿಯಾಗಿ ಅವಚಿಕೊಂಡು , ಮುದ್ದಿಸಿ , ಆಮೇಲೆ ಅವಳದೊಂದು ಪ್ಲಾಸ್ಟಿಕ್ ಬುಟ್ಟಿಯಲ್ಲಿ  ತುಂಬಿಸಿಕೊಂಡು   ಜಿಗಿಯದಂತೆ ಒತ್ತಿ ಹಿಡಿಯುತ್ತಾ ತಿರುಗುತ್ತಿದ್ದಳು . 
ಒಂದು ದಿನ  ಮಧ್ಯಾಹ್ನ ಯಾರೋ  ಮನೆಗೆ ಬಂದರು .  ಮಲಗಿದ್ದ ಅಪ್ಪಾಜಿ ಎದ್ದು ಬಂದು ಅವರ ಕುರ್ಚಿಯಲ್ಲಿ  ಕುಳಿತು ಕೊಳ್ಳುತ್ತಾ ಇದ್ದರು .ಅಷ್ಟರಲ್ಲಿ ಓಡಿ  ಬಂದ ವಿಸ್ಮಯಾ  " ಅಜ್ಜಾ ಅಜ್ಜಾ , ಅಲ್ಲಿ ಕೂತ್ಗೋ ಬೇಡಾ .. ಅದು  ' ಬೆಕ್ಕಿನ ಕುರ್ಚಿ '  ಎನ್ನುವುದೇ !   ಹಾಲ್  ನಲ್ಲಿ ಒಮ್ಮೆಲೆ  ನಗು ತುಂಬಿ ಬಿಟ್ಟಿತು !   ಆ ಕುರ್ಚಿಯ ಮೇಲೆ ಯಾವಾಗಲೂ ಬೆಕ್ಕು ಮಲಗಿದ್ದನ್ನೇ ನೋಡಿದ್ದ  ಪುಟ್ಟಿ ಗೆ ಅದು ಬೆಕ್ಕಿನ ಕುರ್ಚಿಯೇ ಆಗಿತ್ತು ! 

ನನ್ನ ಅತ್ತೆಯ ಮನೆಯಲ್ಲಿ ಇನ್ನೊಂದು ಕಥೆ. ಮನೆಯಲ್ಲಿ ಅಲ್ಲದಿದ್ದರೂ ಊರೊಟ್ಟಿನ ಬೆಕ್ಕೊಂದಿತ್ತು . ಯಾರ ಮನೆಯಲ್ಲಿ ಹಪ್ಪಳ ಕರಿದರೂ ಆ ಬೆಕ್ಕು ಹಾಜರ್ !  ಮ್ಯಾಂ ಮ್ಯಾಂ  ಅಂತಾ  ಹಪ್ಪಳ ಕರಿಯುತ್ತಿದ್ದವರ ಕಾಲು ಸುತ್ತೋದು .ಅದಕ್ಕೊಂದು  ಹಪ್ಪಳ ಹಾಕಿದ ಹೊರತು ಅಲ್ಲಿಂದ ಹೋಗುತ್ತಲೇ ಇರ್ಲಿಲ್ಲ.  ಅಪ್ಪಿ ತಪ್ಪಿ ಕರಿದಿಟ್ಟ ಹಪ್ಪಳದ ಪ್ಲೇಟ್ / ಡಬ್ಬಿ  ಕಾಣಿಸ್ತೋ ಹೋಗಿ ಬಾಯಿ ಹಾಕಿಯೇ ಬಿಡುತ್ತಿತ್ತು.  

ಅದೇನೋ , ಯಾವಾಗಲೂ ಬೆಚ್ಚಗೆ ಮುದುಡಿ ನಿದ್ರಿಸುವ ಬೆಕ್ಕುಗಳು ಒಂಥರಾ ಆಲಸ್ಯದ ಮೂಟೆ ಏನೋ ಎನಿಸುತ್ತದೆ ನಂಗೆ. ಮನೆಯವರು ಎಷ್ಟೇ ಪ್ರೀತಿ ತೋರಿಸಿದರೂ ತಮಗೆ ಬೇಡ ಎನಿಸಿದರೆ ಗುರುಗುಡುವ ಬೆಕ್ಕುಗಳು ತೀರಾ ಸ್ವಾರ್ಥಿ ಪ್ರಾಣಿಗಳು ಎಂಬುದು ನನ್ನ ಅಭಿಪ್ರಾಯ. 

ನನ್ನ ಮಾರ್ಜಾಲ ದ್ವೇಷಕ್ಕೂ  ಆ ಬೆಕ್ಕುಗಳು ನಂಗೆ ಒಂದಲ್ಲ ಒಂದು ರೀತಿಯಿಂದ ಗಂಟು ಬೀಳುವುದಕ್ಕೂ ಅದೇನು  ನಂಟೋ ! 
ಕೆಲವು ವರ್ಷಗಳ ಹಿಂದೆ , ನಾವು ರಜೆಗೆಂದು ಊರಿಗೆ ಹೋಗಿದ್ವಿ. ತಿರುಗಿ ಬರಲು ೨ ದಿನ ಇದ್ದಾಗ  ಪುಣೆಯಿಂದ ಫೋನ್! ನಮ್ಮ  ಪಕ್ಕದ ಮನೆಯವರದ್ದು. ನಿಮ್ಮನೇಲಿ ರಾತ್ರಿ ಏನೋ ಶಬ್ದ ಬರ್ತಾ ಇತ್ತು  ಕಟ ಕಟ ಅಂತ , ಅದಕ್ಕೆ ನಿಮ್ಮನ್ನು ಕೇಳದೇನೇ ಬಾಗಿಲು ತೆಗೆದು ನೋಡಿದ್ವಿ. ಗಾಬರಿ ಆಗೋ ತರ ಏನೂ ಕಾಣಲಿಲ್ಲ. ಇಲಿ ಸೇರ್ಕೊಂಡಿದ್ಯೇನೋ  ನೀವ್ಯಾವಾಗ ಬರ್ತೀರಾ ಅಂತ.   ಪಕ್ಕದ ಮನೆಯವರತ್ರ ಯಾವಾಗಲೂ ಒಂದು ಕೀ ಸೆಟ್ ಕೊಟ್ಟಿರ್ತಾ ಇದ್ವಿ. ಹಾಗಾಗಿ  ಪರವಾಗಿಲ್ಲ ನಾವು   ಬರೋದು ೨ ದಿನ ಆಗತ್ತೆ ಅಂತ ನೀವು ಬೇಕಿದ್ರೆ ಇನ್ನೊಂದ್ ಸಲ ನೋಡಿ  ಅಂತ ಹೇಳಿದ್ದಾಯ್ತು .  
ಇಲಿ ಎಲ್ಲಿಂದ  ಬಂತಪ್ಪಾ , ಕಿಟಕಿ ಎಲ್ಲ ಸರ್ಯಾಗಿ ಮುಚ್ಚಿದ್ವಲ್ಲಾ ಅಂತ ಯೋಚನೆ  ಹೋಗಿ ಬಾಗಿಲು ತೆಗೆಯೋವರೆಗೂ.

ಒಳಗೆ ಎಲ್ಲಾ ಸರ್ಯಾಗೆ ಇತ್ತು.  ಸಿರಿಯ ರೂಮಿನ ಬಾಗಿಲು ತೆಗೆದು ಒಳ ಹೋದರೆ ಒಂಥರಾ ವಾಸನೆ.  ಕಿಟಕಿ ತೆಗೆಯೋಣ ಅಂತ ನೋಡಿದ್ರೆ ಕಿಟಕಿ  ಅರ್ಧ ತೆಗೆದೇ ಇತ್ತು ! ಅಯ್ಯೋ ರಾಮ ಇದ್ಯಾಕೆ  ಈ ಕಿಡಕಿ ಪೂರ್ತಿ ಹಾಕಿಲ್ಲ ಅಂದ್ಕೋತಾ ಮಂಚದ ಹತ್ರ ಹೋದ್ರೆ  ಗುರ್ರ್ರ್ ಅನ್ನೋ ಶಬ್ದ.  ಆಮೇಲೆ ನೋಡಿದ್ರೆ ,ಬೆಕ್ಕು !  

ಹೋಗೋವಾಗ ಹೊರಗೆ ಒಣಗಿಸಿದ್ದ ಬಟ್ಟೆನೆಲ್ಲ ತೆಗೆದು ರಾಶಿ ಮಾಡಿ ಮಂಚದ ಮೇಲೇ ಹಾಕಿ ಹೋಗಿದ್ವಿ. ಆ ಬೆಕ್ಕು ನೋಡಿದ್ರೆ , ಸ್ವಲ್ಪ ತೆಗೆದಿದ್ದ ಕಿಡಕಿಯ ಬಾಗಿಲು  ಸರಿಸಿ , ತನಗಾಗುವಷ್ಟು ಜಾಗ ಮಾಡ್ಕೊಂಡು ಒಳಗೆ ಬಂದು ಮಂಚದ ಮೂಲೇಲಿ ಮರಿ ಹಾಕಿತ್ತು !!!! ನನಗಂತೂ ಸಿಟ್ಟು ನೆತ್ತಿಗೇರ್ತು . ಆದರೆ ಅದು ಫ್ರೆಶ್ ಆಗಿ ಮರಿ ಹಾಕಿದ ಬೆಕ್ಕು. ಹತ್ತಿರ ಹೋಗೋದು ಅಪಾಯನೇ.ನಾವು ಬಾಗಿಲಲ್ಲಿ ನಿಂತು ಎಷ್ಟು ಹುಶ್ ಹುಶ್  ಅಂದ್ರೂ ಮಿಸುಕಾಡಲಿಲ್ಲ. ಬದಲಿಗೆ ನಮ್ಮನೆ ಮಂಚದ ಮೇಲೇ ಮಲಗಿ ನಮಗೇ ಗುರ್ರ್ ಅಂತಿತ್ತು. 

 ಮರುದಿನ ತಾಯಿ ಬೆಕ್ಕು ಎಲ್ಲೋ ಹೋದಾಗ ಮರಿಗಳನ್ನು ಬಾಲ್ಕನಿಯಲ್ಲಿ ಒಂದು ಬಾಕ್ಸ್ ನಲ್ಲಿ ಇಟ್ಟಿದ್ದಾಯ್ತು . ಮನೆಗೆ  ಬಂದಿದ್ದೆ ತಾಯಿ  ಹುಡುಕೋಕೆ ಶುರು ಮಾಡ್ತು  ಮರಿಗಳನ್ನು. ಅಂತೂ ಬಾಲ್ಕನಿಯಲ್ಲಿ ಕಂಡು ಅಲ್ಲೇ ಕೂತ್ಕೊಳ್ತು . ಸಂಜೆ ಹೊತ್ತಿಗೆ ನೋಡಿದ್ರೆ  ಮರಿಗಳು ನಾಪತ್ತೆ. ಸದ್ಯ ಹೋಯ್ತು ಪೀಡೆ  ಅಂದ್ಕೊಂದ್ವಿ . ಈ ಮನೆ ಮರಿಗಳಿಗೆ ಸುರಕ್ಷಿತ ಅಲ್ಲಾ  ಅಂದ್ಕೊಂಡು ಸಾಗಿಸಿರಬೇಕು ಅಂತ ಖುಷಿ ಪಟ್ವಿ . ಮಂಚ ಎಲ್ಲ ಕ್ಲೀನ ಮಾಡಿ ಬಟ್ಟೆನೆಲ್ಲ ಮತ್ತೆ ಬಿಸಿನೀರು , ಡೆಟಾಲ್ ಹಾಕಿ ತೊಳೆದು  ಚೊಕ್ಕ ಮಾಡೋ ಹೊತ್ತಿಗೆ ಆ ಬೆಕ್ಕನ್ನು ಸಾಯ್ಸ್ ಬಿಡೋ ಅಷ್ಟು ಸಿಟ್ಟು ಬರ್ತಾ ಇತ್ತು ನಂಗೆ . 

 ರಾತ್ರಿ ಮಲಗಿ ಇನ್ನೇನು ನಿದ್ದೆ ಬರತ್ತೆ ಅಂದಾಗ ಏನೋ ಶಬ್ದ . ಸಣ್ಣ ಮರಿ ' ಮಿಯಾಂವ್ " ಅಂದಂಗೆ.  ಮಹೇಶ್ ಗೆ ಹೇಳಿ   ದಾಗ .. ನಿಂಗೆ  ಆ ಬೆಕ್ಕು ತುಂಬಿದೆ ತಲೇಲಿ  ಮಲಗು ಸಾಕು ಅಂದ್ರು. 
ಸ್ವಲ್ಪ ಹೊತ್ತಿಗೆ ಅವರಿಗೂ ಶಬ್ದ ಕೇಳಿತು. ಸರಿ ಮಧ್ಯ ರಾತ್ರಿಯಲ್ಲಿ ಮರಿ ಹುಡುಕೋ ಕೆಲಸ ಸ್ಟಾರ್ಟ್!  ಬಹಳ ಹುಡುಕಿ  ಶಬ್ದದ ಮೂಲ ಹಿಡಿದು ನೋಡಿದರೆ , ನಮ್ಮ ಮಂಚದ ಕೆಳಗೆ  ಗೋಡೆ ಬದಿಯ ಮೂಲೆಯಲ್ಲಿ ಮರಿಗಳು !!!  ಹೇಗಿದೆ ಅಮ್ಮ ಬೆಕ್ಕಿನ ಉಪಾಯ !!  ಅದ್ಯಾವ ಮಾಯದಲ್ಲಿ ಆ ಮರಿಗಳನ್ನು ಅಲ್ಲಿಗೆ ಸಾಗಿಸಿತೋ !! ಮತ್ತೆ ರಾತ್ರಿ ಆ ಮರಿಗಳನ್ನು ಬಾಲ್ಕನಿಯ ಬಾಕ್ಸಿಗೆ  ಮರಳಿಸಿ  ಮಲಗಿದ್ದಾಯ್ತು . 

ಹೀಗೆಲ್ಲ ಕಾಟ ಕೊಡೊ ಬೆಕ್ಕುಗಳ ಬಗ್ಗೆ ನಂಗೆ ದ್ವೇಷ ಅಲ್ದೇ ಇನ್ನೇನು  ಭಾವನೆ ಬರೋಕ್ ಸಾಧ್ಯ ಆಲ್ವಾ? 
ನಿಮ್ಮಲ್ಲಿ ಎಷ್ಟು ಜನ ಮಾರ್ಜಾಲ ಪ್ರಿಯರಿದ್ದೀರೋ ಗೊತ್ತಿಲ್ಲ. ನೀವೆಲ್ಲ ನನ್ನ ಬೈಕೋಬೇಡಿ  . 

5 comments:

sunaath said...

ಚಿತ್ರಾ,
ನಾನೂ ಸಹ ಈ ಪೆಟ್ ಪ್ರಾಣಿಗಳಿಂದ ದೂರ ಇರುವವನೇ. ನಿಮ್ಮ ಅನುಭವ ಓದಿದ ಬಳಿಕ, ನಿಮ್ಮ ಬಗೆಗೆ ಸಹಾನುಕಂಪ ಮೂಡಿತು!

Badarinath Palavalli said...

ನನಗಂತೂ ಪ್ರಾಣಿ ಪ್ರೀತಿ ಇದೆ ಮೇಡಂ.
ಒಳ್ಳೆಯ ಬರಹ.

ಚಿನ್ಮಯ ಭಟ್ said...

ಉಹು...ನಂಗೂ ಪ್ರಾಣಿಗೂ ದೂರಾ ದೂರಾ...ಲೇಖನ ನೋಡಿ ಪ್ರೀತಿಸಬೇಕು ಅನಿಸ್ತಾ ಇದೆ..ಗೊತ್ತಿಲ್ಲ...

ಸುಧೇಶ್ ಶೆಟ್ಟಿ said...

nanage bekku andre thumba ishta.... nimage bekkugalu hattira bandre hege aagutto nanage naayigalu hattira bandre haage anisutte....

bekku thannannu swachchavaagi ittukolluvudarinda muddaadabekinsuttade... naayigalu swachchavaagiralla... haagaagi maimele biddare rejige anisutte... friend manege hogiddaaga avana naayigalannu muddisalilla antha besara maadikondidda :)

Jerry Rodrigues said...

Hello... Chitra madam ji

Nimma ee blog nanage tumba istha ayithu. Ide barahavannu nanu indu VK patrike yalli odide.