April 5, 2015

ರಾಧೆ


  ಸಂಜೆ ಬೆಳಕು ಕತ್ತಲೆಯತ್ತ ಜಾರುತ್ತಿದೆ . ಮೆಲ್ಲಗೆ ಹರಿಯುತ್ತಿರುವ ಯಮುನೆಯ   ಮೇಲಿಂದ ತೇಲುತ್ತಿರುವ ತಂಗಾಳಿ  ಮೈಯನ್ನು ನವುರಾಗಿ ನೀವುತ್ತಿದೆ . ಹಕ್ಕಿಗಳು ತಮ್ಮ ಗೂಡಿಗೆ ಮರಳುವ ಸಮಯ .  ಯಮುನೆಯ  ಘಟ್ಟದ  ಮೆಟ್ಟಿಲುಗಳಿಂದ ಸ್ವಲ್ಪವೇ ದೂರದ ಬಂಡೆಯ ಮೇಲೆ ಕುಳಿತಿದ್ದಾಳೆ ಅವಳು ! ರಾಧೆ ! ಚಿತ್ತಾರವಿರುವ ಬಿಂದಿಗೆಯನ್ನು  ಮಡಿಲಲ್ಲಿಟ್ಟು ಅದರ ಮೇಲೆ ಗಲ್ಲವೂರಿ ,ಬಳುಕುತ್ತಾ ಸಾಗಿರುವ ನದಿಯನ್ನೇ ನೋಡುತ್ತಾ . 


ಅಲ್ಲಿಂದ ಕೊಂಚವೇ ದೂರದಲ್ಲಿ ರಸ್ತೆಯ ಮೇಲೆ ಧೂಳು ಹಾರಿಸುತ್ತ ಮನೆಗೆ ಮರಳುವ ಹಸು ಕರುಗಳ ಕೊರಳ ಗಂಟೆಯ ಕಿಣಿ ಕಿಣಿ ನಾದ ಅವಳ ಕಿವಿಗೂ ಬೀಳುತ್ತಿದೆ . ಯಾವಾಗಲೂ  ಮುದಗೊಳಿಸುತ್ತಿದ್ದ  ಆ ಸದ್ದು  ಇಂದು ಅವಳ ಮನದೊಳಗೆ ಇಳಿಯುತ್ತಿಲ್ಲ ! ಶೂನ್ಯದಲ್ಲಿ ನೆಟ್ಟಿರುವ ಕಣ್ಣಿನ ಜೊತೆ ಅವಳ ಮನದಲ್ಲೂ  ಶೂನ್ಯ  ಭಾವ ! 

ಇಂದಾದರೂ ಬರಬಹುದೇ ಅವನು ? ಅದೆಷ್ಟೋ ವಾರಗಳೇ ಕಳೆದು ಹೋದವು . ಅವನ ಸುಳಿವಿಲ್ಲದೆ ! ಕೊಳಲ ದನಿಯಿಲ್ಲದೆ !ಮರೆತೇ ಬಿಟ್ಟನೇ  ?

ಹಿಂದಿನಿಂದ ಮೆಲ್ಲಗೆ ಬಂದು ಕೈಯಲ್ಲಿಯ ನವಿಲು ಗರಿಯಿಂದ  ತೆರೆದ ಸೊಂಟದ  ಮೇಲೆ ಮೃದುವಾಗಿ ಕಚಗುಳಿಯಿಡು ತ್ತಿದ್ದ . ಹಗುರವಾಗಿ ಅಪ್ಪಿ , ಹೆರಳನ್ನು ಮೂಸುತ್ತಾ  ಪ್ರೀತಿಯ ಮಾತುಗಳನ್ನು ಕಿವಿಯಲ್ಲಿ ಉಸುರಿ ಮೈ ನವಿರೇಳಿಸುತ್ತಿದ್ದ. ಕೆಲವೊಮ್ಮೆ  ಸದ್ದು ಮಾಡದೆ ಬಂದು  ತನ್ನೆಡೆ ಸೆಳೆದು  ತುಟಿಗೆ ತುಟಿ ಜೋಡಿಸುತ್ತಿದ್ದ . ಜೀವನದ ಪ್ರೀತಿಯನ್ನೆಲ್ಲ ಬೊಗಸೆ ತುಂಬುತ್ತಿದ್ದ !  ನೀನಿಲ್ಲದೆ ನನ್ನ ಉಸಿರೇ  ಇಲ್ಲ ಕಣೆ ಎನ್ನುತ್ತಾ ಮಗುವಿನಂತೆ ಮಡಿಲಲ್ಲಿ ಮಲಗಿ ಬಿಡುತ್ತಿದ್ದ .  

ನೆನಪಿನ ತೆರೆಗಳಲ್ಲಿ ಮುಳುಗೇ ಳುತ್ತಿದ್ದ  ರಾಧೆಯ  ಎದೆಯಲ್ಲಿ ನವಿರಾದ ಕಂಪನ. 

ಅವನನ್ನು ಮೊದಲ ಬಾರಿಗೆ  ನೋಡಿದಾಗ ಅವನು ಆಗಿನ್ನೂ  ಚಿಗುರುಮೀಸೆ ಮೂಡಿದ  ಹದಿಹರೆಯದ  ಹುಡುಗ, ತನಗಿಂತ ಕಿರಿಯ. ಸ್ವಲ್ಪ ಕಪ್ಪಾದರೂ ಅತ್ಯಂತ ಆಕರ್ಷಕವಾಗಿದ್ದ ಅವನ ಮೊಗದಿಂದ ಕಣ್ಣು ಸರಿಸಲು ಬಲು ಕಷ್ಟವಾಗಿತ್ತು . 
ಪಕ್ಕದಲ್ಲಿ ಯಾರೋ ಹೇಳಿದರು. ನೋಡು ಅವನೇ ನಂದಗೋಪನ ಮಗ, ಯಶೋದೆಯ  ಮುದ್ದು ಕಂದ ! ಸಾಮಾನ್ಯನಲ್ಲ ಇವನು ! ಶಿಶುವಾಗಿದ್ದಾಗಿಂದ  ಒಂದಲ್ಲಾ ಒಂದು ರಾಕ್ಷಸರನ್ನು ಸಾಯಿಸುತ್ತಲೇ ಬಂದವನು ! ಇವನ ಕೊಳಲ ದನಿಗೆ ಮರುಳಾಗದವರಿಲ್ಲ !ಮನುಷ್ಯ ಮಾತ್ರರೇನು ? ಪ್ರಾಣಿ ಪಕ್ಷಿಗಳೂ ಮರುಳಾಗಿ ನಿಲ್ಲುತ್ತವೆ. ಅಷ್ಟೇ ಏನು , ಇಡೀ ಪ್ರಕೃತಿಯೇ  ತಲೆದೂಗುತ್ತದೆ . ಗೋಕುಲದ ಹುಡುಗಿಯರ ಕನಸಲ್ಲೆಲ್ಲಾ ಇವನೇ . ಆಕೆ ಇನ್ನೂ ಏನೇನೋ ಹೇಳುತ್ತಲೇ ಇದ್ದಳು ಅವನ ಬಗ್ಗೆ . ಆದರೆ ರಾಧೆ ಯ ಕಿವಿಯ ಮೇಲೆ ಬೀಳುತ್ತಲೇ ಇರಲಿಲ್ಲ. ಅವಳ ಮನಸ್ಸು ಆಗಲೇ ಅವನ ಹಿಂದೆ  ಹೊರಟು ಹೋಗಿತ್ತು .
ಅವನೂ ರಾಧೆಯತ್ತ ಒಮ್ಮೆ ನೋಡಿದವನು ಅದೆಷ್ಟೋ ಹೊತ್ತು ಅವಳ ಕಣ್ಣಲ್ಲಿ ಕಣ್ಣು ನೆಟ್ಟಿದ್ದ . 

ಕೆಲ  ದಿನಗಳ ನಂತರ ಸಂಜೆ  ನೀರು ಹೊತ್ತು ಮನೆಗೆ ಹೊರಟವಳ ಎದುರು  ಅದ್ಯಾವ ಮಾಯದಲ್ಲೋ ಬಂದು ನಿಂತಿದ್ದ .ರಾಧೆಯ ಎದೆ ಅವಳಿಗೆ ಕೇಳುವಷ್ಟು ಜೋರಾಗಿ ಹೊಡೆದುಕೊಳ್ಳುತ್ತಿತ್ತು . ಕೊಡ ಹಿಡಿದ ಕೈಗಳು ಕಂಪಿಸಿದವು .

" ರಾಧೆ  ಅಲ್ಲವೇ ನಿನ್ನ ಹೆಸರು ? "

ಅವಳು ಸುಮ್ಮನೆ ತಲೆ ಅಲುಗಿಸಿದಳಷ್ಟೇ .

"ರಾಧೆ , ನನ್ನ  ಪರಿಚಯ  ಈಗಾಗಲೇ ಆಗಿರಬೇಕು ಅವರಿವರಿಂದ . ಆದರೂ ಹೇಳುತ್ತೇನೆ ಕೇಳು . ಅಪ್ಪ ಈ ಗೋಕುಲದ ಹಿರಿಯ, ನಂದಗೋಪ . ಅಮ್ಮ  ಯಶೋದೆ .ನನ್ನನ್ನು ಹೆಚ್ಚಿನವರು ಕೃಷ್ಣ ಎನ್ನುತ್ತಾರೆ. ಬೇರೆ ಬೇರೆ ಹೆಸರಿಂದಲೂ ಕರೆಯುವವರಿದ್ದಾರೆ. ಈ ಗೋಪಾಲ ಬಾಲಕರೆಲ್ಲಾ ನನ್ನ ಆತ್ಮೀಯರು. ಗೋವುಗಳೆಂದರೆ ನನಗೆ ಅತಿ ಪ್ರಾಣ . 
ಇದು ನನ್ನ ಚಿಕ್ಕ ಪರಿಚಯ . ಗೋಕುಲದ ಬಾಲೆಯರ  ಮನದಲ್ಲಿ ನಾನಿದ್ದೇನೆ ಎಂದು ನನಗೆ ಗೊತ್ತು . ಆದರೆ , ಅಂದು ನಿನ್ನನ್ನು ನೋಡಿದಾಗಿಂದ  ನೀನು ನನ್ನ ಜನ್ಮದ ಗೆಳತಿ ಎಂದೆನಿಸುತ್ತಿದೆ . ನನಗೆ ನಿನ್ನ ಸ್ನೇಹ ಬೇಕಾಗಿದೆ . ದಯಮಾಡಿ ಇಲ್ಲವೆನಬೇಡ "  ಪ್ರೇಮ ತುಂಬಿದ ದನಿಯಲ್ಲಿ ಅವನು ಹೇಳಿದಾಗ  ಅವಳ ಗಂಟಲು ಆರಿತ್ತು . 

" ನೋಡು , ನಾನಿಲ್ಲಿಗೆ  ಹೊಸಬಳು . ನಿನಗಿಂತ ದೊಡ್ಡವಳು . ಅಲ್ಲದೆ  ನನಗಾಗಲೇ ಮದುವೆಯಾಗಿದೆ . ನಿನ್ನ ಗೆಳತಿಯಾಗುವುದು ಅಸಾಧ್ಯ ! ನೀನು ಈ ಹುಚ್ಚಾಟ ಬಿಟ್ಟು ಬಿಡು " 

ಏನೋ ಹೇಳ ಹೊರಟವನು , ಅಷ್ಟರಲ್ಲಿ ಯಾರೋ ಬರುವ ಸಪ್ಪಳ ಕೇಳಿ ಹೊರತು ಹೋದ . ಹೋದ ಜೀವ ಮರಳಿ ಬಂದಂತೆ ಸಮಾಧಾನಗೊಂಡ ರಾಧೆ ಬಿರ ಬಿರನೆ  ಮನೆ ತಲುಪಿದ್ದಳು . ಆದರೂ ಮನದಲ್ಲಿ ಅವನ ಕಿರುನಗೆ ಅಚ್ಚೊತ್ತಿ ತಲ್ಲಣವಾಗುತ್ತಿತ್ತು 

ಮತ್ತೆ ಕೆಲ ದಿನಗಳು ಅವನು ಕಾಣಿಸಿಕೊಳ್ಳಲಿಲ್ಲ. ಒಮ್ಮೆ ನಿರಾಳವೆನಿಸಿದರೂ  ಒಳಗೊಳಗೇ , ಅವನನ್ನು ನೋಡಬೇಕೆಂಬ ಹಂಬಲ ಬಲಿಯುತ್ತಿತ್ತು . 

ಮತ್ತೊಂದು ಸಂಜೆ , ಮನೆಗೆ ಮರಳುವಾಗ   ಮಧುರವಾದ ಮುರಳೀ ನಾದ ಅವಳನ್ನು ಸಮ್ಮೋ ಹಿಸಿತು . ನಡಿಗೆ ನಿಧಾನವಾಯಿತು , ಮನ ಪುಳಕಗೊಳ್ಳುತ್ತಾ  ಕಣ್ಣು ಆಚೀಚೆ  ಅರಸಿತು. ಕುಳಿತಿದ್ದ ಅವನು.  ದಾರಿಯ ಪಕ್ಕದ ಮರ ಬುಡದಲ್ಲಿ . 
ಕಣ್ಣು ಮುಚ್ಚಿ ತಲ್ಲೀನನಾಗಿ  ಕೊಳಲೂದುತ್ತಿದ್ದ . ಅವನನ್ನು ಕಂಡು ಎದೆ ಬಡಿತ ವೇಗವಾದಾಗ ಬೇಗ ದಾಟಿ ಬಿಡೋಣವೆಂದು  ಹೆಜ್ಜೆ ಹಾಕಿದಳು . ಅವನ ಧ್ವನಿ ನಿಲ್ಲಿಸಿತು ಅವಳನ್ನು . 

"ರಾಧೆ, ನನ್ನ ಮನಸೆಲ್ಲಾ ನೀನೆ ತುಂಬಿದ್ದೀಯಾ .ದಯವಿಟ್ಟು ದೂರ  ಓಡಬೇಡ. "

"ಕೃಷ್ಣ , ನಾನು ಅಂದೇ ಹೇಳಿದೆ  ಇಂಥಾ ಹುಚ್ಚುತನವನ್ನು ಬಿಟ್ಟು ಬಿಡು . ಮದುವೆಯಾದವಳು ನಾನು . ನೀನಿನ್ನೂ ಚಿಕ್ಕವನು . ಗೋಕುಲದ ಸುಂದರಿಯರಲ್ಲೊಬ್ಬಳನ್ನು ವರಿಸು. ನಿನ್ನ ಒಂದು ನೋಟಕ್ಕಾಗಿ ಕಾತರಿಸುವವರೆಷ್ಟೋ ಜನರಿದ್ದಾರೆ . ಮತ್ತೆ ನಾನೇಕೆ? "

"ನನಗಾಗಿ ಎಷ್ಟೋ ಜನ ಕಾತರಿಸಿದರೂ , ನಾನು ನಿನಗಾಗಿ ಹಂಬಲಿಸುವಂತೆ ಮಾಡಿದ್ದೀಯ . ನಿನ್ನನ್ನು ಅಂದು ನೋಡಿದಾಗಿಂದ ಬೇರೆ ಯಾರೂ ನನ್ನ ಕಣ್ಣಿಗೆ ಕಾಣುತ್ತಿಲ್ಲ . ನಿನಗೂ ನನ್ನ ಮೇಲೆ ಮಧುರ ಭಾವವಿದೆ  ಎಂದು ನಂಗೆ ಗೊತ್ತು .   ಅದನ್ನು ಒಪ್ಪಿಕೊಳ್ಳಬಾರದೆ ? ಪ್ರೀತಿಗೆ  ವಯಸ್ಸಿನ  ಹಂಗಿಲ್ಲ . ನೀನು ಮದುವೆಯಾಗಿದ್ದರೂ , ನಿನ್ನನ್ನು ಪ್ರೀತಿಸಲು ನನಗದು ಅಡ್ಡಿಯಲ್ಲ . ಇದು ನಮ್ಮ  ಮನಸ್ಸಿಗೆ ಸಂಬಂಧಿಸಿದ್ದು .ಇಲ್ಲವೆನಬೇಡವೇ ...."

 ಅವಳ ಹೃದಯ ಅವನ ಪ್ರೀತಿಯ ಮಾತಿಗೆ , ಚುಂಬಕದಂತೆ ಸೆಳೆಯುವ  ಕಣ್ಣ ನೋಟಕ್ಕೆ   ಸೋತಿರುವುದು ಅವಳಿಗೆ ಅರಿವಾಗಿತ್ತು . 
ಅವಳ  ಬುದ್ಧಿ  ತಿಳಿ ಹೇಳುವ ಪ್ರಯತ್ನ ಮಾಡುತ್ತಿತ್ತು  . 'ಅವನು ಗೋಕುಲದ ಹಿರಿಯ ಮಗನೆ ಇರಬಹುದು , ಅವನಿಗೆ ನಿನ್ನ ಮೇಲೆ ಎಷ್ಟೇ ಪ್ರೀತಿ ಯಿರಬಹುದು  ಆದರೆ , ನೀನು ಮದುವೆಯಾದವಳು  ಎನ್ನುವುದನ್ನು ಮರೆಯಬೇಡ ' ಎಂದು ಎಚ್ಚರಿಸುತ್ತಿತ್ತು . 
ಅವನಿಗೆ ಉತ್ತರಿಸದೆ ,  ಭಾರವಾದ ಮನದೊಂದಿಗೆ ಬಿರ ಬಿರನೆ ಮನೆಯತ್ತ ನಡೆದಳು . ಅಂದು ಸಂಜೆಯೆಲ್ಲ  ಅವಳು ಅವಳಾಗಿರಲಿಲ್ಲ . ಯಾರೊಡನೆ ಮಾತು ಬೇಕಿಲ್ಲ , ಏನು ಕೆಲಸ ಮಾಡುತ್ತಿದ್ದಳೋ  ಎಂಬ ಅರಿವೂ ಇರಲಿಲ್ಲ . 

ಅವನೂ ಹಠ ತೊಟ್ಟವನಂತೆ  ಪದೇ ಪದೇ ಅವಳೆದುರು ಬಂದು ನಿಲ್ಲುತ್ತಿದ್ದ.  ತನ್ನ  ಹೃದಯವನ್ನು ಅವಳೆದುರು ತೆರೆದಿಡುತ್ತಿದ್ದ .
ಕ್ರಮೇಣ ಹೃದಯದ ಮಾತು ಮೇಲಾಯಿತು . ಯಾವಾಗ ಅವನ ಬೇಡಿಕೆಗೆ ಒಪ್ಪಿಕೊಂಡಳೋ , ಅವಳಿಗೆ ತಿಳಿಯಲಿಲ್ಲ . 
ಆ ದಿನ ಅವನ ಸಂತೋಷಕ್ಕೆ ಪಾರವೇ ಇರಲಿಲ್ಲ . ಅಂದು ಸಂಜೆಯಿಡೀ ಅವನು ತನ್ಮಯನಾಗಿ ಕೊಳಲೂದುತ್ತಿದ್ದರೆ  ಅವಳು ಅವನಲ್ಲೇ ಲೀನವಾದಂತೆ  ಒರಗಿ ಕುಳಿತಿದ್ದಳು . ಕ್ರಮೇಣ  ಪ್ರತಿ ಸಂಜೆ  ನದೀ ತೀರದಲ್ಲಿ  ಭೇಟಿಯಾಗುವುದು  ಅಲಿಖಿತ ನಿಯಮವಾಯಿತು.  ಒಬ್ಬರನ್ನೊಬ್ಬರು ಬಿಟ್ಟಿರಲಾಗದಷ್ಟು  ಹೃದಯಗಳು ಬೆಸೆದುಕೊಂಡಿದ್ದವು . ಗೋಕುಲದಲ್ಲಿ ಪಿಸುಮಾತುಗಳು ಕೇಳಿ ಬಂದರೂ ಕೃಷ್ಣನ ಬಗ್ಗೆ ಮಾತನಾಡುವವರಾರೂ ಇರಲಿಲ್ಲ . 

ಕೆಲ ದಿನಗಳ ಹಿಂದೆ  ಗೆಳತಿ ಸುಮತಿ ಹೇಳಿದ ವಿಷಯ ಕೇಳಿ  ನೆಲವೇ ಕುಸಿದು ಹೋದಂತೆ ಆಗಿತ್ತಲ್ಲವೇ ? 
"ರಾಧೇ , ಗೊತ್ತೇನೆ ?  ರಾಜಕುಮಾರಿ ರುಕ್ಮಿಣಿ ಯಂತೆ , ತುಂಬಾ ಸುಂದರಿಯಂತೆ . ಅವಳು ನಮ್ಮ ಕೃಷ್ಣ ನಿಗೆ  ಮನಸೋತಿದ್ದಾಳಂತೆ . ತಾನು ಮದುವೆಯಾದರೆ  ಅವನನ್ನು ಮಾತ್ರ , ಇಲ್ಲವಾದರೆ  ಸಾವೇ ಗತಿ ಎಂದು ಹಠ ಹಿಡಿದಿದ್ದಾಳಂತೆ . "
ಎದೆ ಬಡಿತ ನಿಂತಿತ್ತು !  ಆದರೂ  ಮುಖದಲ್ಲಿ ತೋರಿಸದೆ , ನಿರಾಸಕ್ತಳಂತೆ ಕೇಳಿದ್ದಳು . 
"ಕೃಷ್ಣನಿಗೆ ಗೊತ್ತೇ ಇದು ? "

"ಇಲ್ಲವೇ ಮತ್ತೆ ? ಅವನಿಗೂ ಅವಳ ಮೇಲೆ ಮನಸಂತೆ . ಹೀಗಾಗಿ ಅವಳನ್ನು ಹೇಗಾದರೂ ಕರೆತಂದು ಮದುವೆ ಮಾಡಿಕೊಳ್ಳುತ್ತೇನೆ  ಎಂದು ಹೋಗಿದ್ದಾನಂತೆ ! "

ಮಜ್ಜಿಗೆ ಕಡೆಯುತ್ತಿದ್ದ ಕೈ ಒಮ್ಮೆಲೇ ನಿಂತಿತ್ತು ! ಎದೆಯಲ್ಲಿ ಸಂಕಟ , ಗಂಟಲಲ್ಲಿ ಏನೋ ಸಿಕ್ಕಿ ಕೊಂಡಂತೆ . ಉಕ್ಕಿ  ಬರುತ್ತಿದ್ದ  ಅಳುವನ್ನು ಹೇಗೋ ತಡೆ ಹಿಡಿದವಳು ಸುಮತಿ ಹೋದಮೇಲೆ  ಬಿಕ್ಕಿ ಬಿಕ್ಕಿ ಅತ್ತಿದ್ದಳು . 

ಹಾಗಾದರೆ .... ಅವನು ಹೇಳಿದ್ದೆಲ್ಲ ಬರೀ ಸುಳ್ಳೇ?  ನೀನಿಲ್ಲದೆ ನಾನಿಲ್ಲ ಕಣೆ  ಎಂದಿದ್ದನಲ್ಲ? ಈಗ ರಾಜಕುಮಾರಿ  ಪ್ರೀತಿಸುತ್ತಿದ್ದಾಳೆ  ಎಂದೊಡನೆ ಅಷ್ಟು ಸುಲಭವಾಗಿ ಹೊರಟೆ ಹೋದನಲ್ಲ ? ತನ್ನ ಬಗ್ಗೆ ಒಂದು ಕ್ಷಣವೂ ಯೋಚಿಸಲಿಲ್ಲವೇ ? ಅಷ್ಟು ಬೇಗ ಮರೆತೇ ಬಿಟ್ಟನೇ  ?  ಬಿಕ್ಕುತ್ತಲೇ ಇದ್ದಳು 
ಒಳಗೆಲ್ಲೋ ತನ್ನದೇ ಧ್ವನಿ ಪ್ರತಿನುಡಿಯಿತು  " ನಿನಗೆ ಇದೆಲ್ಲ ಗೊತ್ತಿರಲಿಲ್ಲವೇ?  ಅವನು ನಿನಗಿಂತ ಚಿಕ್ಕವನು . ಮದುವೆಯಾಗ ಬೇಕಷ್ಟೇ ಇನ್ನು .  ನೀನೋ ಆಗಲೇ ಮದುವೆಯಾದವಳು . ಮನಸಿನ ಮಾತು ಕೇಳಿ  ಅವನ ಹಿಂದೆ  ಮರುಳಾಗಿ ಹೋಗುವ ಮೊದಲು ನನ್ನ ಮಾತನ್ನು ಸ್ವಲ್ಪವಾದಲೂ ಕೇಳಿದ್ದರೆ , ಇಂದು   ಇಂಥಾ ನೋವು ಬರುತ್ತಿತ್ತೆ  ?  "   ಉತ್ತರವಿರಲಿಲ್ಲ ಅವಳಲ್ಲಿ . 

ಹಳೆಯ ನೆನಪುಗಳು  ಚುಚ್ಚ ತೊಡಗಿದವು . ಇಂದೂ ಬಾರದಿದ್ದರೆ , ಇನ್ನೆಂದೂ ಅವನ  ಮುಖ ನೋಡಲಾರೆ  ಎಂದು ನಿಶ್ಚಯಿಸಿದಳು . ಆಗಲೇ ಕತ್ತಲಾಗತೊಡ ಗಿತ್ತು. ಒಂದೊಂದಾಗಿ ನಕ್ಷತ್ರಗಳು ಹೊಳೆಯತೊಡಗಿದವು . ಇನ್ನೊಂದು ಗಳಿಗೆ ಕಳೆದರೆ ತನ್ನ ಗಂಡ ಹುಡುಕಿಕೊಂಡು ಬರುತ್ತಾನೆ . ಸಾಕು ಕಾದಿದ್ದು . ಇನ್ನು ಮನೆಗೆ ಹೋಗುವುದೇ ಲೇಸು ಎಂದು ನಿಧಾನವಾಗಿ ಮೇಲೆದ್ದು   ಕೊಡವನ್ನು ಸೊಂಟಕ್ಕೇರಿಸಿ,ಭಾರವಾದ ಹೆಜ್ಜೆಯಿಂದ   ಮನೆಯ ದಾರಿ ಹಿಡಿದಳು . ಹತ್ತು ಹೆಜ್ಜೆ ನಡೆದಿದ್ದಳೇನೋ , ಪಕ್ಕದ  ಪೊದೆಯ ಹಿಂದಿನಿಂದ ಯಾರೋ ಅವಳ  ಸೊಂಟದಿಂದ ಕೊಡವನ್ನು ಕಸಿದರು . ಗಾಬರಿಗೊಂಡ ಅವಳ  ಬಾಯಿಂದ  ಕೂಗು ಹೊರಡುವ ಮೊದಲೇ ಅವಳನ್ನು ಬಳಿಗೆ ಸೆಳೆದು ತುಟಿಗೆ  ತುಟಿಯಿಟ್ಟು  ಚುಂಬಿಸಿದರು .  ಆ ಸ್ಪರ್ಶ, ಅವಳಿಗರಿವಾಗಿತ್ತು . ಕಣ್ಣಿಂದ  ಸುರಿಯುವ ಕಂಬನಿಯನ್ನು ಒರೆಸಿ ಕೊಳ್ಳುವ ಪ್ರಯತ್ನವನ್ನೂ ಮಾಡದೆ  ಅವನನ್ನು ಗಟ್ಟಿಯಾಗಿ ಅಪ್ಪಿದ್ದಳು . 

" ಕೃಷ್ಣಾ , ನೀನು ಹೀಗೆ ಇದ್ದಕ್ಕಿದ್ದ ಹಾಗೆ ಹೋಗಿಬಿಟ್ಟರೆ ನನಗೇನಾಗಬಹುದು ಎಂದೂ ಯೋಚಿಸಲಿಲ್ಲವೇನೋ ? 
ಇನ್ನೀಗ ನಿನಗೊಬ್ಬ ಚಂದದ ಹೆಂಡತಿ ಬರುತ್ತಾಳೆ , ಆಮೇಲೆ ನನ್ನನ್ನು ಮರೆಯುವುದೇ ಅಲ್ಲವೇ? ಅದಕ್ಕೂ ಮೊದಲು , ನಾನೇ  ದೂರವಾಗುವುದು ಲೇಸಲ್ಲವೇ ? "

" ರಾಧೇ,  ನಂಬಿಕೆಯಿಲ್ಲವೇನೆ  ನನ್ನ ಮೇಲೆ?  ಸಂದರ್ಭ ಹಾಗಿತ್ತು ಕಣೆ , ನಿನಗೆ  ಸುಳಿವು ಕೊಡದೆ ಹೋಗಬೇಕಾಯ್ತು . ಕ್ಷಮಿಸುವುದಿಲ್ಲವೇನೆ ?  ನನ್ನ ಜೀವನದಲ್ಲಿ ಯಾರೇ ಬಂದರೂ, ಎಷ್ಟೇ ಜನ ಬಂದರೂ , ನಿನ್ನ ಜಾಗ ಬೇರೆಯೇ ಕಣೆ . ಅದನ್ಯಾರೂ  ಮುಟ್ಟುವುದು ಸಾಧ್ಯವಿಲ್ಲ.  ನೀನು ಬರೀ ಪ್ರೆಮಿಕೆಯಲ್ಲವೇ , ನನ್ನ ಜೀವದ ಗೆಳತಿ . ನಿನ್ನೆದುರು ನಾನು  ಕೇವಲ " ನಾನಾಗಿ " ಇರಬಲ್ಲೆ . ನನ್ನೆಲ್ಲ ಮುಖವಾಡ  ಕಳಚಿ.   ಸಾಮಾನ್ಯನಂತೆ , ನಿನ್ನ ಪ್ರೀತಿಯಲ್ಲಿ ಮುಳುಗಬಲ್ಲೆ . ನಿನ್ನ ಜೊತೆ ಇದ್ದಾಗ ಮಾತ್ರ   ನನ್ನೆಲ್ಲ ಚಿಂತೆಗಳನ್ನು , ಬಗೆ ಹರಿಸ ಬೇಕಾದ ಸಮಸ್ಯೆಗಳನ್ನು  ಮರೆತು  ನೆಮ್ಮದಿಯಿಂದ ಇರಬಲ್ಲೆ . ನನ್ನೆದೆಯ ಉರಿಗೆ ತಂಪೆರೆಯುವ ಜೀವ ಜಲ ಕಣೆ ನೀನು .  ನೀನು ಮಾತ್ರ ನನ್ನಿಂದ ದೂರವಾಗುವ ಮಾತನಾಡಬೇಡವೇ  " ಅವನ ಕಣ್ಣಿಂದಲೂ ಧಾರೆ !

ಇಬ್ಬರ ಪ್ರೇಮಕ್ಕೆ , ವಿರಹಕ್ಕೆ  ,  ಪುನರ್ಮಿಲನಕ್ಕೆ ಸಾಕ್ಷಿಯಾಗುತ್ತಾ  ತನ್ನ ಪಾಡಿಗೆ ಯಮುನೆ  ಜುಳು ಜುಳು ಹರಿಯುತ್ತಿದ್ದಳು !

6 comments:

sunaath said...

ರಾಧಾ-ಕೃಷ್ಣರ ಶುದ್ಧ ಪ್ರೇಮದ ನವಿರಾದ ಕತೆ. ಮನಸ್ಸನ್ನು ಸೆರೆ ಹಿಡಿಯುತ್ತದೆ.

ಚಿತ್ರಾ said...

ಥ್ಯಾಂಕ್ಸ್ ಸುನಾಥ್ ಕಾಕಾ !

ಡಾ.ಆರ್.ಉಷಾರಾಣಿ said...

ರಾಧಾ ಕೃಷ್ಣರ ಪವಿತ್ರ ಪ್ರೇಮವನ್ನು ಮನಮುಟ್ಟುವಂತೆ ಚಿತ್ರಿಸಿದ್ದೀರಾ..ಇಂತಹ ಶುದ್ಧ ಪ್ರೇಮಸಾಧಕರ ಬಗ್ಗೆ ನಮಗೆ ಮಾತನಾಡಲು ಶಕ್ತಿ ಸಾಲದೆನ್ನಿಸುತ್ತದೆ.

Badarinath Palavalli said...

ಮನ ಸೆಳೆದ ಮನ ಮೋಹಕ ಕಥನ.

(ತಾವು ದಯವಿಟ್ಟು ತಮ್ಮ ಫೇಸ್ ಬುಕ್ ಐಡಿ ತಿಳಿಸಿರಿ,
3K ಗುಂಪಿನಲ್ಲಿ ಈ ಬರಹ share ಮಾಡುವೆ.
ನನ್ಮ id: Badarinath Palavalli)

ಸುಧೇಶ್ ಶೆಟ್ಟಿ said...

ಅ೦ತೂ ನಿಮ್ಮ ಒಂದು ಬ್ಲಾಗ್ ಇದೆ ಅನ್ನುವುದು ನಿಮಗೆ ನೆನಪು ಇದೆ ಅಂತ ಆಯ್ತು :)

ಚೆನ್ನಾಗಿದೆ ಬರಹ :)

ಚಿತ್ರಾ said...

ಸುಧೇಶ್ ,
ನಿಮ್ಮ " ಅನುಭೂತಿ" ನೆನಪಿದೆಯೇ ??
:P :P