May 2, 2015

ಸೀತಾಪಹರಣ -ಭಾಗ ೨

(ತುಂಬಾ ಹಿಂದೆ ಬರೆಯಲು ಆರಂಭಿಸಿದ್ದು. ಕೆಲ ವರ್ಷಗಳ ನಂತರ ಈಗ ಮತ್ತೊಂದು ಕಂತು  )

.........." ಅಜ್ಜೀ, ಸೀತೆ ಒಬ್ಬಳೇ ಇದಾಳಲ್ವ ?   ಅವಳೊಂದು..  ಹೇಳಿದ್ದು ಕೇಳೋಕೆ ಬರಲ್ಲ ಅವಳಿಗೆ  . ಛೆ !  ಅಂದ್ರೂ ಹೇಗೂ ಲಕ್ಷ್ಮಣ ರೇಖೆ ಇದೆಯಲ್ಲ ?  ಆದ್ರೆ , ಅಜ್ಜಿ , ರಾವಣ  ಮನೆ ಹಿಂದುಗಡೆಯಿಂದ ಏನಾದ್ರೂ ಬಂದ್ರೆ ?  ಲಕ್ಷ್ಮಣ ಹೊರಗಡೆ ಬಾಗಿಲ ಹತ್ರ ಗೆರೆ ಹಾಕಿದ್ದಲ್ವ ?  ಮುಂದೇನಾಯ್ತು ಅಜ್ಜಿ ? " ಗಾಬರಿ, ಸಮಾಧಾನ ,ಅನುಮಾನ .. ಎಲ್ಲಾ ಭಾವಗಳ ಮಿಶ್ರಣ ಅಪೂರ್ವಾಳ ಮುಖದಲ್ಲಿ ! 

ಅಯ್ಯೋ ಈ ಪಾಯಿಂಟ್  ನಾವುಗಳು ಯಾವತ್ತೂ ಯೋಚಿಸಿಯೇ ಇಲ್ವಲ್ಲ ಅಂತ ಅಜ್ಜಿಗೆ ಒಂದ್ಸಲ ಆಶ್ಚರ್ಯ !
" ಹೇಳ್ತೀನಿ ಇರು ಸ್ವಲ್ಪ ಕಾಲು ಜೋಮು ಹಿಡಿದಿದೆ .. ನಾಲ್ಕು ಹೆಜ್ಜೆ ಓಡಾಡಿಕೊಂಡು ಬರ್ತೀನಿ " . ಅಜ್ಜಿ ಮೆಲ್ಲಗೆ  ಎದ್ದು ಅಂಗಳಕ್ಕೆ ಹೊರಟರು !

" ಅಜ್ಜೀ.... ಬೇಗ ಬಾ ... ನಂಗೆ  ಟೆನ್ ಶನ್ ಆಗ್ತಿದೆ .. "  ಅಪೂರ್ವಾಳ ಸ್ವರ  ಕೇಳ್ತಾ ಇತ್ತು . 
ಅಯ್ಯೋ ... ಯಾಕೆ ಸುಮ್ನೆ ಟೆನ್ ಶನ್ ಮಾಡ್ಕೋತಾ ಇದ್ದೀಯ ? ಏನೂ ಆಗಲ್ಲ  ಬಿಡು ಸೀತೆಗೆ . ಆದಿತ್ಯ ತಂಗಿಗೆ ಹೇಳ್ತಾ ಇದ್ದ.

'ನಿಂಗೆ ಹ್ಯಾಗೋ ಗೊತ್ತು? ನೀನು ಕೇಳಿದೀಯ ಮುಂಚೆ ನೇ ಕಥೆ ನ?

ಇಲ್ಲಪ್ಪಾ.. ತುಂಬಾ ಸಿಂಪಲ್ !  ಸೀತೆನ  ಇನ್ನೇನು ರಾವಣ ಎತ್ಕೊಂಡು ಹೋಗೋಕೆ  ಅಂತ ಮುಟ್ಟೋ ಹೊತ್ತಿಗೆ ರಾಮ ಬರ್ತಾನೆ !

ಅದೇ, ನಿಂಗೆ ಹೇಗೆ ಗೊತ್ತು ಅಂತ  ?

ಅಯ್ಯೋ ಪೆದ್ದು ,  ಇಷ್ಟು ಸಿನಿಮಾ ನೋಡ್ತೀಯ ..  ವೇಸ್ಟ್ ! ಸೀತೆ ಅಂದ್ರೆ ಇಲ್ಲಿ ಹೀರೋಯಿನ್ ಅಲ್ವಾ? ಮತ್ತೆ ಅವಳಿಗೆ ರಾವಣ ಅಂದ್ರೆ   ವಿಲನ್  ಕೆಟ್ಟದು ಮಾಡೋಕೆ ಬಂದ್ರೆ  ಅಷ್ಟೊತ್ತಿಗೆ ರಾಮ ಅಂದ್ರೆ ಹೀರೋ  ಬರಲೇ ಬೇಕಲ್ವಾ? ಆಮೇಲೆ ಸ್ವಲ್ಪ  ಫೈಟಿಂಗ್  .. ವಾಹ್ ! ಈಗ ಮಜಾ ಬರತ್ತೆ .... ಆದಿತ್ಯನ ಲಾಜಿಕ್ ಮುಂದುವರೀತಾ ಇತ್ತು .

' ಹೋಗೋ , ಇಷ್ಟು ಬೇಗ  ಫೈಟಿಂಗ್ ಅಂದ್ರೆ .. ರಾವಣ  ಸತ್ತು ಹೋಗ್ತಾನೆ , ಆಮೇಲೆ , ಕಥೆ ಮುಗಿದು ಹೋಗತ್ತೆ. ಇಂಟರೆಸ್ಟಿಂಗ್  ಅನಿಸಲ್ಲ ಆಗ. ಸೊ, ಏನಾದರೂ  ಟ್ವಿಸ್ಟ್ ಇರತ್ತೆ  ಗ್ಯಾರಂಟಿ . '  ಈಗ ವರುಣ್ ಗೂ   ಆಸಕ್ತಿ ಹುಟ್ಟಿತ್ತು.
ಅಜ್ಜಿ ಒಳಗೆ ಬಂದು  ಬಾಗಿಲು  ಹಾಕ್ತಾ ಇದ್ರು .
ಅಜ್ಜಿ , ರಾವಣ ಸೀತೆ ನ ಎತ್ಕೊಂಡು ಹೋಗೋಕೆ ಆಗಲ್ಲ ಅಲ್ವ ಅಜ್ಜಿ?  ಅಪೂರ್ವ  ಓಡಿ ಹೋಗಿ  ಅಜ್ಜಿಯ ಸೀರೆ  ಎಳೆಯುತ್ತಾ ಕೇಳಿದಳು .

' ಇಲ್ಲ ಪುಟ್ಟಿ , ಇರು ಸ್ವಲ್ಪ ಕೂತ್ಗೊತೀನಿ ಮೊದಲು. '
ಮೂರು ಜನ ಮಕ್ಕಳು ಅಜ್ಜಿ ಯ ಎದುರು ಕುಳಿತರು .
' ಹಾಂ ಏನಾಗಿತ್ತು  ?  ರಾವಣ  ಸನ್ಯಾಸಿ ತರ ವೇಷ ಹಾಕೊಂಡು ಬಂದ.  ಮನೆ ಎದುರು ನಿಂತು  ' ಭವತಿ ಭಿಕ್ಷಾಂದೇಹಿ ' ಅಂತ ಜೋರಾಗಿ  ಹೇಳಿದ. '

' ಅಜ್ಜಿ , ಹಾಗಂದ್ರೆ ಏನಜ್ಜಿ ? '

' ಹಾಗಂದ್ರೆ ,  ನಂಗೆ ಭಿಕ್ಷೆ ಕೊಡಿ  ಅಂತ'

' ಅಜ್ಜಿ , ಅವನು ಭಿಕ್ಷುಕನ ವೇಷ ಹಾಕ್ಕೊಂಡು ಬಂದಿದ್ನಾ , ಸನ್ಯಾಸಿ ವೇಷನಾ ಮುಂಚೆ  ಸರಿಯಾಗಿ ಹೇಳು. ಸನ್ಯಾಸಿ ವೇಷ ಅಂತೀಯ , ಭಿಕ್ಷೆ ಕೇಳ್ತಾನೆ ಅಂತೀಯ ?  '

 ಹೌದು ಮರಿ , ಸನ್ಯಾಸಿ ವೇಷ ನೇ . ಸನ್ಯಾಸಿಗಳಿಗೆ ಮನೆ ಇರಲ್ಲ ಅಲ್ವ ? ಅದಕ್ಕೆ ಅವರು ಹೀಗ್ ಅಲೀತ , ಮನೆ ಮನೆಯಿಂದ ಒಂದು ಮುಷ್ಠಿ  ಭಿಕ್ಷೆ ತೊಗೊಂಡು ಅದರಿಂದ  ಊಟ ಮಾಡ್ತಾ ಇದ್ರು . '

' ಅಯ್ಯೋ ಅಜ್ಜಿ , ಈಗೆಲ್ಲ ಹಾಗಿಲ್ಲ. ಸನ್ಯಾಸಿ ವೇಷ ಹಾಕ್ಕೊಂಡಿರೋರ ಹತ್ರ ದೊಡ್ಡ  ಬಂಗಲೆ  ತರ ಆಶ್ರಮ , ದೊಡ್ಡ ಕಾರು , ಕೋಟಿಗಟ್ಟಲೆ ದುಡ್ಡು ಎಲ್ಲಾ ಇರತ್ತೆ ಗೊತ್ತ ?'  ವರುಣ್ ತನ್ನ  ಜ್ಞಾನವನ್ನು ಪ್ರದರ್ಶಿಸಿದ .
' ಇದು ಹಳೆ ಕಾಲದ ಕಥೆ   ಮರಿ . ಆಗ ಹಾಗೆ ಇತ್ತು . ಕೇಳು , ಸೀತೆ ಸನ್ಯಾಸಿಗೆ  ಭಿಕ್ಷೆ ತರೋಕೆ ಅಂತ ಒಳಗೆ ಹೋದಳು . '

' ಅಜ್ಜಿ ಆಗೆಲ್ಲ  ಏನು ಭಿಕ್ಷೆ ಕೊಡ್ತಾ ಇದ್ರು  ? '

' ಅಕ್ಕಿ, ಕಾಳು , ಧಾನ್ಯ  ಹೀಗೆ ಏನಾದ್ರೂ ಕೊಡ್ತಾ ಇದ್ರು  '

'ಅಜ್ಜಿ ನನಗೊಂದು ಡೌಟು  . ಕಾಡಿನಲ್ಲಿ ಇದ್ರಲ್ವ ರಾಮ ಸೀತೆ ಎಲ್ಲಾ, ಅವರಿಗೆ ಅಕ್ಕಿ - ಕಾಳು ,ಬೇಳೆ ಎಲ್ಲಾ ಎಲ್ಲಿಂದ ಸಿಗ್ತಿತ್ತು ?  ಅಲ್ಲಿ ಅಂಗಡಿ ಇರ್ತಾ ಇತ್ತಾ?  '

 ಆದಿತ್ಯನ ಪ್ರಶ್ನೆ  ಕೇಳಿ  ಅಜ್ಜಿ ದಂಗಾದರು .  ಏನೆಲ್ಲಾ ಬರತ್ತಪ್ಪ ಈ ಮಕ್ಕಳ ತಲೇಲಿ ...
' ಹ್ಞೂ .. ಒಳ್ಳೆ ಪ್ರಶ್ನೆ .  ಅಂಗಡಿ  ಇರಲಿಲ್ಲ. ಆದರೆ , ಕಾಡಲ್ಲಿ  ಬೇರೆ  ಕಾಡು ಜನ ಎಲ್ಲಾ ಇರ್ತಿದ್ರಲ್ಲ , ಅವರು  ಇವರಿಗೆ   ಅಕ್ಕಿ -ಬೇಳೆ ಎಲ್ಲಾ ತಂದು ಕೊಡ್ತಿದ್ರು . '

' ಅಜ್ಜಿ ಅಜ್ಜಿ , ಸೀತೆ ರಾಜ ಕುಮಾರಿ ಅಲ್ವ? ಅವಳಿಗೆ ಅಡುಗೆ ಮಾಡೋಕೆ  ಬರ್ತಿತ್ತಾ?  'ಅಪೂರ್ವಾಳ ಸಂಶಯ.

' ಇಲ್ಲ ,  ರಾಮ -ಲಕ್ಷ್ಮಣ  ಬೋರ್ಡಿಂಗ್ ಸ್ಕೂಲ್ ನಲ್ಲಿ ಓದಿದ್ದಲ್ವ ? ಅವರಿಗೆ ಎಲ್ಲಾ ಗೊತ್ತಿತ್ತು . ಅವರೇ ಮಾಡ್ತಾ ಇದ್ರು  ! ಹಿ ಹಿ  .. " ವರುಣ್ ರೇಗಿಸಿದ.

' ಸುಮ್ಮನೆ ಕಥೆ ಕೇಳ್ತೀರೋ ನಿಲ್ಲಿಸಲೋ ? ' ನಗು ತಡೆಯುತ್ತಾ ಅಜ್ಜಿ  ಕೇಳಿದಾಗ  ಮಕ್ಕಳು ಚುಪ್ ! 
ಸೀತೆ ಒಳಗೆ ಹೋದಾಗ , ರಾವಣ ಅವಳ ಹಿಂದೆ ಹೋಗೋಕೆ ಪ್ರಯತ್ನ ಮಾಡಿದ.  ಆದ್ರೆ  ಲಕ್ಷ್ಮಣ ರೇಖೆ ಹತ್ರ ಹೋದ ಕೂಡಲೇ , ಅವನಿಗೆ   ಬೆಂಕಿ ತಾಗಿದ ಹಾಗೆ ಆಯ್ತು .  ಓಹೋ ..  ಇದನ್ನು ದಾಟೋಕಾಗಲ್ಲ ಅಂತ ಅರ್ಥ ಮಾಡ್ಕೊಂಡ .

ಸೀತೆ  ಸನ್ಯಾಸಿ ರೂಪದಲ್ಲಿ ಬಂದ ರಾವಣನ್ಗೆ ಭಿಕ್ಷೆ ತೊಗೊಂಡು ಬಂದಳು.  ಆದರೆ , ಲಕ್ಷ್ಮಣ ರೇಖೆಯ  ಒಳಗೆ ನಿಂತು  ' ಸ್ವಾಮೀ  ತೊಗೊಳಿ ಭಿಕ್ಷೆ ' ಅಂದಳು.

ಅದಕ್ಕೆ ರಾವಣ  ' ನೋಡಮ್ಮಾ,  ನೀನು ಇಲ್ಲಿ ಬಂದು ಭಿಕ್ಷೆ ಹಾಕಬೇಕು. ನಾನು  ಮನೆ ಬಾಗಿಲ ಹತ್ತಿರ ಬರೋಕಾಗಲ್ಲ . ಅದು ನನ್ನ ನಿಯಮಕ್ಕೆ ವಿರುದ್ಧ ಅಂದ .

' ತುಂಬಾ ಮೋಸಗಾರ ಅಲ್ವಾ ಅಜ್ಜಿ ? "

" ಹ್ಞೂ , ಈಗ ಸೀತೆಗೆ ಏನು ಮಾಡೋಕೂ ಗೊತಾಗ್ಲಿಲ್ಲ. ಸನ್ಯಾಸಿಗೆ  ಭಿಕ್ಷೆ ಹಾಕದೆ ಇದ್ರೆ ಅದು ಮಹಾ ಪಾಪ. ಹಾಗಂತ  ಗೆರೆ ದಾಟ ಬಾರದು ಅಂತ ಲಕ್ಷ್ಮಣ ಹೇಳಿದಾನೆ , ಅವಳಿಗೆ ಸ್ವಲ್ಪ ಗೊಂದಲ ಆಯ್ತು.  ಕೊನೆಗೆ , ಸನ್ಯಾಸಿಗೆ  ಭಿಕ್ಷೆ ಹಾಕೋದೆ ಸರಿ , ಅಷ್ಟಕ್ಕೂ  ಅವನಿಂದ ಅಪಾಯ ಏನಿಲ್ವಲ್ಲ ಅಂತ  ಯೋಚನೆ ಮಾಡಿ  ಗೆರೆ ದಾಟಿ  ಭಿಕ್ಷೆ ಹಾಕೋಕೆ ಬಂದಳು. 

ಅಷ್ಟೇ, ತಕ್ಷಣ ರಾವಣ ಅವಳ ಕೈ ಹಿಡಕೊಂಡ . ಅವನ ನಿಜವಾದ ರೂಪ  ಹಾಕ್ಕೊಂಡ .  ನಡಿ ನಿನ್ನ ನನ್ನ ಜೊತೆ ಲಂಕೆಗೆ ಕರ್ಕೊಂಡು ಹೋಗ್ತೀನಿ  ... ಅಂತ  ಕೈಎಳಕೊಂಡು ಹೊರಟೆ ಬಿಟ್ಟ . 

ಅವನ  ವಿಮಾನ ಇತ್ತು " ಪುಷ್ಪಕ ವಿಮಾನ "  ಅಂತ  ಅದರಲ್ಲಿ ಕೂರಿಸ್ಕೊಂಡು  ಹಾರ್ಕೊಂಡು  ಹೊರಟ . 
" ಪಾಪ , ಸೀತೆ ಕೂಗಿಕೊಳ್ಳಲಿಲ್ವಾ ಅಜ್ಜಿ ?  " ಅಪೂರ್ವಾ  ಮುಖ ಚಿಕ್ಕದಾಗಿಸಿಕೊಂಡು ಕೇಳಿದಳು .

" ಹಾಂ ಕೂಗಿದಳು , ಆದರೆ ವಿಮಾನದಲ್ಲಿ ಕೂತ ತಕ್ಷಣ ಅವಳಿಗೆ ಭಯದಿಂದ ಎಚ್ಚರ ತಪ್ಪಿ ಬಿಡ್ತು !! "

" ಯಾಕಜ್ಜಿ ? ಅವಳು ರಾಜ ಕುಮಾರಿ ತಾನೇ ? ಮುಂಚೆ  ವಿಮಾನ ಹತ್ತಿರಲಿಲ್ವಾ?     " 

 ಅಜ್ಜಿ ನಕ್ಕರು " ಆದಿತ್ಯಾ,  ಆಗ ವಿಮಾನ ಎಲ್ಲಾ ಇರಲಿಲ್ಲ ಕಣೋ , ಪುಷ್ಪಕ ವಿಮಾನ ಅನ್ನೋದು ಹೊಸಾ ವಿಷಯ ಆಗಿತ್ತು !  "

" ಆದ್ರೆ , ಅಜ್ಜಿ ಅಲ್ಲಿ ವಿಮಾನ ಇಳಿಸೋಕೆ ಕಾಡಲ್ಲಿ  ಏರ್ ಪೋರ್ಟ್ ಇತ್ತಾ?  "  ವರುಣ್  ಕೇಳಿದ .

ಅಯ್ಯೋ.. ಒಂದು ವಿಷಯಕ್ಕೆ ಎಷ್ಟು ಪ್ರಶ್ನೆ ಕೇಳ್ತೀರಪ್ಪಾ !  ಇಲ್ಲ ಪುಷ್ಪಕ ವಿಮಾನ ಜಾಸ್ತಿ ದೊಡ್ದದಿರಲಿಲ್ಲ. ಅದಕ್ಕೆ ಇಳಿಸೋಕೆ ಹೆಚ್ಚು ಜಾಗನು ಬೇಕಾಗಿರಲಿಲ್ಲ  . ಗೊತಾಯ್ತ ? ಮುಂದುವರೆಸಲಾ ?-  ಅಜ್ಜಿ ಸಿಡುಕಿದರು .

" ಹಂಗಂದ್ರೆ ,  ಅದು ಒಂಥರಾ  ಹೆಲಿಕಾಪ್ಟರ್ ತರ  ಅನ್ನು. ಸಾರಿ ಅಜ್ಜಿ ನೀನು  ಮುಂದೆ ಹೇಳು ."

' ಆ ಕಡೆ ಲಕ್ಷ್ಮಣನ್ನ  ನೋಡಿ ರಾಮಂಗೆ ಆಶ್ಚರ್ಯ ಆಯ್ತು.  ಸೀತೆ ಒಬ್ಬಳನ್ನೇ ಬಿಟ್ಟು ಯಾಕೆ ಬಂದೆ ನೀನು  ಅಂತ ಸಿಟ್ಟು ಮಾಡ್ಕೊಂಡ .  ಅದಕ್ಕೆ ಲಕ್ಷ್ಮಣ , ಹೀಗೆ ಹೀಗೆ, ಸೀತೆ ನೇ ಕಳಿಸಿದ್ದು , ತಾನು ಅಲ್ಲಿ ಗೆರೆ ಹಾಕಿ ಬಂದಿದೀನಿ. ದಾಟಲೇ ಬಾರದು ಅಂತಾನೂ ಹೇಳಿದೀನಿ . ಅಂತ ಅಣ್ಣಂಗೆ ಸಮಾಧಾನ ಮಾಡಿದ. ಅವರಿಬ್ಬರೂ ಅವರ ಆಶ್ರಮದ ಹತ್ರ ಬರ್ತಾ ಇರೋವಾಗ  ಸೀತೆ ಕೂಗಿದ್ದು ಒಮ್ಮೆ ಕೇಳಿಸ್ತು. ಇಬ್ರೂ ಗಾಬರಿಯಿಂದ ಬೇಗ ಬೇಗ ಮನೆ ಹತ್ರ ಬಂದ್ರು. ಆದರೆ ಅಲ್ಲಿ ಸೀತೆ ಇರಲೇ ಇಲ್ಲ !

ಹಿಂದಿನ ಕಂತುಗಳು :


ಅರಣ್ಯಕಾಂಡ

ಸೀತಾಪಹರಣ - ಪೀಠಿಕೆ
5 comments:

ಜಲನಯನ said...

ಸೀತಾಪಹರಣದ ಹೆಲಿಕಾಪ್ಟರ್ ಸಮಾನ ಥಿಂಕಿಂಗ್.. !!...ಇಂದಿನ ಮಕ್ಕಳ ಪರಿಕಲ್ಪನೆ ?! ಚನ್ನಾಗಿದೆ ಮಕ್ಕಳ ಅರ್ಥೈಸಿಕೊಳ್ಳುವ ಪರಿ...
ಚಿತ್ರಾ ಅಂತೂ ಬರೆದೆಯಾ...
ಮುಂದಿನ ಕಂತಿಗಾಗಿ ಕಾಯ್ತೇನೆ.,..

Badarinath Palavalli said...

ಮಕ್ಕಳಿಗೆ ಕಥೆ ಹೇಳುವ ಪರಿಯ ಶೈಲಿ ಮತ್ತು ಕಥೆಯ ಎಳೆ ಎಳೆ ಬಿಡಿಸಿದ ರೀತಿ ಇಷ್ಟವಾದವು.

ಹಿಂದಿನ ಕಂತನ್ನೂ ಖಂಡಿತ ಓದುವೆ.

ಪ್ರಶಸ್ತಿ ಗೆದ್ದ ಪ್ರಶ್ನೆಗಳು: :-)
ಅಲ್ಲಿ ಅಂಗಡಿ ಇರ್ತಾ ಇತ್ತಾ?
ರಾವಣ ಮನೆ ಹಿಂದುಗಡೆಯಿಂದ ಏನಾದ್ರೂ ಬಂದ್ರೆ ?

sunaath said...

ಆ ಮಕ್ಕಳಷ್ಟೇ ಕಾತುರದಿಂದ ನಾನೂ ಕಾಯ್ತಾ ಇದ್ದೀನಿ, ಮುಂದಿನ ಕಂತಿಗಾಗಿ!

prashasti said...

ಹಿಂದಿನ ರಾಮಾಯಣ ಕಥನಕ್ಕೆ ಮಾಡರ್ನ್ ವಿವರಣಾ ಶೈಲಿಯ ಥಳಕು, ಬೆಳಕು ! :-) ಚೆನ್ನಾಗಿದೆ

ಅಘನಾಶಿನಿ said...

ಕಿಷ್ಕಿಂಧೆ ಲಿ ಎಲ್ಲ ನಿಮ್ ತರದವ್ರೆ ಇದ್ದಿದ್ರು ! !!!