March 11, 2018

ಪ್ರಯಾಣ





ಇಲ್ಲಿಯ ಲೋಕಲ್ ಟ್ರೈನ್  ನಲ್ಲಿ 
ಬಾಗಿಲೆದುರೆ ಇಟ್ಟ ಎರಡು ಬುಟ್ಟಿ
ಒಂದರಲ್ಲಿದೆ ಮೀನು  ಇನ್ನೊಂದರಲ್ಲಿ  ಹೂವು !
ಅದರತ್ತಿತ್ತ ಚೆಲ್ಲಿದ ಶೇಂಗಾ ಸಿಪ್ಪೆ 
ಕಾಲಿಟ್ಟರೆ ಅಡಿಗೆ ಸಿಕ್ಕಿದ ಪ್ಲಾಸ್ಟಿಕ್ ನ ಚರಪರ
ತೊಂದರೆ ಇಲ್ಲ ಬಿಡಿ , ಕಾಲಿಡಲಾದರೂ  ಜಾಗವೆಲ್ಲಿ ?

ತುಸುವೇ ಜಾಗ ಸಿಕ್ಕರೂ  ಅಲ್ಲೇ ಕುಳಿತು
ಕಾರ್ಡು  ಹಚ್ಚುವವರಿಗೂ ಕೊರತೆಯಿಲ್ಲ 
ನಿಂತೇ ಬೇಕಾದರೂ ಆಟಿನ್ ರಾಣಿ,  ಇಸ್ಫೀಟು ಎಕ್ಕಾ 
ಎನ್ನುತ್ತಾ ಸಂಭ್ರಮಿಸುತ್ತಾರೆ .

ಅಲ್ಲಿಯೇ ಎಲ್ಲೋ ಒತ್ತಿಕೊಂಡು 
ಒಳ ತೂರಿದ ಪುಟ್ಟ ಹುಡುಗ 
ಕೂದಲಿಲ್ಲದವರೆದುರಿಗೂ  ಬಾಚಣಿಕೆ ಹಿಡಿಯುತ್ತಾನೆ 
ಸುರಿಯುವ ಮೂಗನ್ನು
ಜೋಲುವ ಅಂಗಿಯ ತೋಳಿಗೆ 
 ಉಜ್ಜಿಕೊಳ್ಳುತ್ತಾನೆ

ಇನ್ನು ಲೇಡೀಸ್ ಬೋಗಿಯನ್ನೇನು ಕೇಳೋಣ 
ಮನೆಯಿಂದ ಹೊರಡುವಾಗ 
ಪೂಸಿಕೊಂಡ ಸೆಂಟು 
ಬೋಗಿ ಹತ್ತುವ ವರೆಗೂ ಜೊತೆಯಲ್ಲೇ ಇತ್ತು 
ಒಳಗೆ  ಹತ್ತೆಂಟು  ವಾಸನೆಗಳ ನಡುವೆ 
ಎಲ್ಲೋ ಸೇರಿ ಹೋಯ್ತು  
ಸೀಟು ಸಿಕ್ಕಿದರೆ  ಕುಳಿತು ಬಿಡಿಸ ಬಹುದು  ಬಟಾಣಿ 
ಮಾತಾಡುತ್ತಲೇ ತರಕಾರಿ ಹೆಚ್ಚಿದರೆ 
ಅಡುಗೆ ಸಲೀಸು 
ಪಕ್ಕದವಳ ಸೀರೆಯ ಬಗ್ಗೆ ವಿಚಾರಿಸುವಾಗಲೇ 
ಬರುತ್ತಾಳೆ ಕೆದರು ಮಂಡೆಯ ಪೋರಿ , 
ಸೀರೆ ಪಿನ್ನು ತೊಗೋ ಅಕ್ಕಾ ಎಂದು 
ಅವಳ ಹರಿದ ಲಂಗಕ್ಕೊಂದೆರಡು ಪಿನ್ನು ಬೇಕು 

ಮನೆಯಿಂದ  ಕೆಲಸಕ್ಕೆ , ಶಾಲೆ- ಕಾಲೇಜಿಗೆ 
ನಿತ್ಯ ಹೋಗಿ ಬರುವಾಗ  ಈ ಪ್ರಯಾಣದಲ್ಲೇ
ಹುಟ್ಟುತ್ತವೆ , ಬೆಳೆಯುತ್ತವೆ ,ಬಾಂಧವ್ಯಗಳು 
ಜಾತಿ, ಮತ , ವಯಸ್ಸಿನ ಭೇದವಿಲ್ಲದೆ 
ಮೇಲು ಕೀಳೆನ್ನದೆ ಎಲ್ಲರನ್ನೂ ಎಲ್ಲವನ್ನೂ 
ಹೊಟ್ಟೆಯಲ್ಲೇ ಹೊತ್ತು  ಮುಂದೋಡುವ 
ಲೋಕಲ್  ಟ್ರೈನಿನೆದುರು  
ಭಗವಂತನೂ ಬೆರಗಾಗಿದ್ದಾನೆ 






2 comments:

sunaath said...

ಭಾವಪೂರ್ಣ ಕವನ. ಈ ಸಾಲುಗಳಂತೂ ನನ್ನ ಮನಸ್ಸನ್ನು ಅಲ್ಲಾಡಿಸಿದವು:
"ಬರುತ್ತಾಳೆ ಕೆದರು ಮಂಡೆಯ ಪೋರಿ ,
ಸೀರೆ ಪಿನ್ನು ತೊಗೋ ಅಕ್ಕಾ ಎಂದು
ಅವಳ ಹರಿದ ಲಂಗಕ್ಕೊಂದೆರಡು ಪಿನ್ನು ಬೇಕು"

ಚಿತ್ರಾ said...

ಧನ್ಯವಾದಗಳು ಕಾಕಾ !