January 17, 2019

ಸಮಾಧಾನ !



ಚ್ಚರಾಗಿ ಕಣ್ಣು ಬಿಟ್ಟವಳು ಮೆಲ್ಲಗೆ ಕಣ್ಣು ಹೊರಳಿಸಿದಾಗ  ಅಷ್ಟು ದೂರಕ್ಕೆ  ಮಲಗಿದ್ದ ಗಂಡ  ಕಾಣಿಸಿದ . 
ಮನೆಯಲ್ಲಿ ಡಬಲ್ ಬೆಡ್ ನ ಮುಕ್ಕಾಲು ಭಾಗವನ್ನು ಆಕ್ರಮಿಸಿ ಮಲಗುತ್ತಿದ್ದವನು ಇಂದು  ಆಸ್ಪತ್ರೆಯ  ಚಿಕ್ಕ ಹಾಸಿಗೆಯಲ್ಲಿ  ಹೇಗೆ ಹೇಗೋ ಮಲಗಿದ್ದು ನೋಡಿ ಒಮ್ಮೆ ಪಾಪ ಎನಿಸಿತು . 
ತಕ್ಷಣ  ಆ ಅನುಕಂಪಕ್ಕೆ ಅವನು  ಪಾತ್ರನೇ ಎಂದು ಅವಳದೇ ಮನಸ್ಸು ಕೇಳಿತು. 
ಇಲ್ಲಿ ಆಸ್ಪತ್ರೆಯಲ್ಲಿ ನೋಡಿಕೊಳ್ಳಲು ನರ್ಸ್ ಇದ್ದರೂ ಕೂಡ ತಾನೇ ಬಂದು ಮಲಗುತ್ತೇನೆ  ಎಂದು ಹಠ ಹಿಡಿದವನು ಅವನೇ. ಅದಕ್ಕೆ ಕಾರಣ ಹೆಂಡತಿಯ ಮೇಲಿನ ಪ್ರೀತಿ ಆಗಿರಲಿಲ್ಲ ಎನ್ನುವುದು ಅವಳಿಗೆ ಮಾತ್ರ ಗೊತ್ತಿದ್ದದ್ದು.
ಎರಡು ತಿಂಗಳ ಹಿಂದೆ ಅವನ ಬೈಕ್ ನಿಂದ  ಬಿದ್ದು ಸೀರಿಯಸ್ ಆಗಿ  ಆಸ್ಪತ್ರೆ ಸೇರಿದವಳು ಅವಳು . ಒಂದು ವಾರದ ಕೋಮಾದಿಂದ   ಹೊರಬಂದ ಮೇಲೂ ಪರಿಸ್ಥಿತಿಯಲ್ಲಿ ಹೆಚ್ಚು ಸುಧಾರಣೆ ಆಗಿರಲಿಲ್ಲ .  ತಲೆಗೆ ಬಿದ್ದ ಪೆಟ್ಟು, ಸೊಂಟದ ಮುರಿದ ಮೂಳೆ ಎಲ್ಲ ಸೇರಿ  ಅವಳನ್ನು ಹಾಸಿಗೆಗೆ ಅಂಟಿಸಿದ್ದವು .
ಹಣದ  ಕೊರತೆಯಿಲ್ಲದ ಕಾರಣ ಒಳ್ಳೆ ಆಸ್ಪತ್ರೆಯಲ್ಲಿ  ಚಿಕಿತ್ಸೆ ನಡೆಯುತ್ತಿತ್ತು . ಕೊರತೆಯಿದ್ದಿದ್ದು ಒಂದೇ , ಗಂಡನನ್ನು ಬಿಟ್ಟರೆ ತನ್ನ ಕುಟುಂಬದವರು ಎಂದು  ಯಾರೂ ಇಲ್ಲದ್ದು. ಅತ್ತೆ, ಅತ್ತಿಗೆ  ಎಲ್ಲ ಅವನ ಕಡೆಯವರೇ ಬಂದು ಹೋಗಿ ಮಾಡುತ್ತಿದ್ದರೂ   ಅವರು ತನ್ನವರು ಎಂಬ ಭಾವನೆ ಅವಳಿಗೆ ಬಂದಿರಲೇ ಇಲ್ಲ . 

ದಿನದ ಕೆಲ ಗಂಟೆಗಳನ್ನು ಬಿಟ್ಟರೆ  ಅವನು ಅವಳ ರೂಮಿಂದ  ಅಲುಗಾಡುತ್ತಿರಲಿಲ್ಲ .ಆಸ್ಪತ್ರೆಯ ನರ್ಸ್ ಗಳು , ನೋಡಲು ಬರುವ ಸ್ನೇಹಿತರು, ಬಂಧುಗಳ  ಪಾಲಿಗೆ , ಅವನೊಬ್ಬ ಮಹಾಪುರುಷ ! ಹೆಂಡತಿಯ ಬಗ್ಗೆ ಎಷ್ಟು ಪ್ರೀತಿ-ಕಾಳಜಿ , ಅವಳನ್ನು ಬಿಟ್ಟು ಅಲುಗಾಡುವುದಿಲ್ಲ ಎಂದು ಆಶ್ಚರ್ಯ .  ಅವಳು ಕೋಮಾದಿಂದ ಹೊರ ಬಂದು ವಾರ್ಡ್ ಗೆ ಶಿಫ್ಟ್ ಆದ ಕೆಲ ದಿನಗಳ ನಂತರ  ನರ್ಸ್ ಕಮಲಾ  ಹೇಳಿದ್ದಳು ಕೂಡ . " ನಿಮ್ ಯಜಮಾನ್ರಿಗೆ ಎಷ್ಟು ಪ್ರೀತಿ ನಿಮ್ಮ ಮೇಲೆ .   ನಿಮ್ಮನ್ನು ಬಿಟ್ಟು ಒಂದು ನಿಮಿಷ ಆಚೀಚೆ  ಹೋಗಲ್ಲಾರೀ . ತುಂಬಾ  ಅದೃಷ್ಟವಂತರು ನೀವು "

"ನಿಮಗೆ ಅವನ ನಿಜವಾದ ಮುಖ ಗೊತ್ತಿಲ್ಲಾ"  ಎಂದು ಚೀರಿ ಹೇಳ ಬೇಕೆನಿಸಿತ್ತು.  ಮುಖಕ್ಕೂ ಬ್ಯಾಂಡೇಜ್  ಇದ್ದುದರಿಂದ  ನರ್ಸ್ ಕಮಲಾ ಗೆ ಅವಳ ಮುಖ ಭಾವ ಗೊತ್ತಾಗಿರಲಿಲ್ಲ .
ಅವನು ಸದಾಕಾಲ ಆಸ್ಪತ್ರೆಯಲ್ಲಿರುತ್ತಿದುದು  ಪ್ರೀತಿಯಿಂದಲ್ಲ ಆದರೆ ಸಂಶಯದಿಂದ ಎಂದು ಕಿರುಚಬೇಕೆಂದೆನಿಸಿತ್ತು .
ಅವನ ಅಕ್ಕ ಅಥವಾ ಅಮ್ಮನನ್ನು ಬಿಟ್ಟರೆ , ಅವನಪ್ಪ ,ತಮ್ಮ ಅಷ್ಟೇ ಏಕೆ ಅವಳದೇ ಅಣ್ಣ ತಮ್ಮಂದಿರೂ ಕೂಡ ಅವನಿದ್ದ ಹೊತ್ತಲ್ಲಿ ಮಾತ್ರ ಬರಬೇಕಿತ್ತು . .
ಮೊದ ಮೊದಲಿಗಂತೂ  ಲೇಡಿ ಡಾಕ್ಟರೇ ಬೇಕು ಎಂದು  ಕೇಳಿ , ಇನ್ನೊಮ್ಮೆ  ಆಕೆಗೆ  ಡ್ರೆಸ್ಸಿಂಗ್ ಮಾಡುವಾಗ ಸ್ಪಾಂಜ್ ಬಾತ್  ಕೊಡುವಾಗ  ತಾನಿದ್ದರೇನು ತಪ್ಪು  ಎಂದು ಕೇಳಿ ಆಸ್ಪತ್ರೆಯವರಿಂದ ಬೈಸಿಕೊಂಡಿದ್ದ. 

ಮದುವೆಯಾದ ಹೊಸದರಲ್ಲಿ  ಗಂಡನಿಗೆ ತಾನೆಂದರೆ ಎಷ್ಟು ಪ್ರೀತಿ , ತನ್ನನ್ನು ಬಿಟ್ಟು ಇರೋದಿಲ್ಲ ಎಂದು ಬೀಗಿದ್ದಳು, ಬೇಗದಲ್ಲೇ ನಿಜದ ಅರಿವಾಗಿತ್ತು . ಒಮ್ಮೆ ಊಟಕ್ಕೆ ಬಂದಿದ್ದ ಅವನ ಬಾಸ್  " You are lucky  to have such nice and  beautiful wife " ಎಂದಿದ್ದರು . ಅದರ ನಂತರ  ಅವನು ಯಾರನ್ನೂ ಮನೆಗೆ ಕರೆದಿರಲಿಲ್ಲ. 

ಅವನದೇ ಚಿಕ್ಕಮ್ಮನ ಮಗ ನಾಲ್ಕು ದಿನ  ಪರೀಕ್ಷೆಗೆಂದು ಬಂದು ಜೊತೆಯಲ್ಲಿ ಉಳಿದವನು, ' ಅತ್ತಿಗೆ ಅತ್ತಿಗೆ .. ಎನ್ನುತ್ತ ಹಿಂದೆ ಮುಂದೆ ಸುಳಿದಾಡಿದರೆ , ಇವನಿಗೆ ಕಸಿವಿಸಿ.  " ಅತ್ತಿಗೆ , ಈ ಹೊಸಾ ಸೀರೆಲಿ ಸೂಪರ್ ಕಾಣಿಸ್ತೀರಾ ಎಂದರೆ , ಅತ್ತಿಗೆ , ಸಾಂಬಾರ್ ಸಖತ್ ಆಗಿದೆ  ಎಂದು ಹೊಗಳಿದರೆ , ಇವನಿಗೆ ಕೋಪ . 
ಅವನೆದುರು ಹುಳಿ ಹುಳಿ ನಕ್ಕರೂ , ಅವಳೆದುರು  ಸಿಡುಕುತ್ತಿದ್ದ .  ಅವನಿಗೇಕೆ ಅಷ್ಟು ಸಲುಗೆ ಕೊಡ್ತೀಯ ಅಂತ.
ಇವನದೇ ತಮ್ಮ , ತನಗೂ ತಮ್ಮನಂತೆಯೇ ಅಲ್ಲವೇ  ಎಂದರೆ  ಹಾಗಿರಬೇಕೆಂದೇನೂ  ಇಲ್ಲ  ಎಂದು ಉತ್ತರಿಸಿ ಶಾಕ್ ಕೊಟ್ಟಿದ್ದ . 

ಕ್ರಮೇಣ ಅವಳ ಓಡಾಟ, ಮಾತುಕತೆಗಳೆಲ್ಲ ಕಮ್ಮಿ ಆಗಿಬಿಟ್ಟವು . ಹೊರಗೆ ಹೋದರೆ ಅವನ ಜೊತೆ ಮಾತ್ರ . ಮಾತಾಡಿದರೆ ಅವನ ಜೊತೆ  ಅಥವಾ ಮನೆಯವರ ಜೊತೆ ಮಾತ್ರ . ಬೇರೆ ಯಾರೊಡನೆ  ಒಂದು ಮುಗುಳ್ನಗೆ ಕೂಡ ಅಪರಾಧ  ಎನಿಸಿತು . 

ಮಕ್ಕಳಾಗಲಿಲ್ಲ ಎಂಬ ಕೊರಗು ಮೊದಲು ಬಾಧಿಸಿದರೂ , ಕ್ರಮೇಣ ಒಳ್ಳೆಯದೇ ಆಯ್ತೇನೋ ಎಂದುಕೊಂಡಳು ಅವಳು . ತನ್ನದೇ ಮಕ್ಕಳನ್ನೂ ತನ್ನದಲ್ಲ ವೇನೋ ಎಂಬ ಸಂಶಯದಿಂದ ನೋಡುವ ಜಾತಿ ಅವನು . ಅದಕ್ಕೀಂತ  ಇರದಿದ್ದರೆ ಒಳ್ಳೆಯದು  ಎಂದೆನಿಸಿತು .

ಅವಳ ಸೋದರ ಮಾವನ ಮಗ ರಾಜೇಶ್ ವಿದೇಶದಲ್ಲಿದ್ದವನು, ಭಾರತಕ್ಕೆ  ಬಂದಾಗ ಒಮ್ಮೆ ಅವಳನ್ನು ನೋಡಲು ಬಂದಿದ್ದ . ಮದುವೆಗೆ ಬರಲಾಗದ ಕಾರಣ ಅವಳಿಗಾಗಿ ಒಳ್ಳೆಯ ಗಿಫ್ಟ್  ತಂದಿದ್ದ . ಜೊತೆಗೆ ಅವನಿಗೂ .  ನಗುತ್ತಾ ತಮಾಷೆಯಾಗಿ ಮಾತನಾಡುತ್ತಿದ್ದ ಅವನ  ಮಾತುಗಳಿಗೆ ಇವನದ್ದು  ಚುಟುಕು ಉತ್ತರಗಳು . ಚಿಕ್ಕಂದಿನಲ್ಲಿ ರಾಜೇಶನೊಡನೆ ಆಡಿ ಬೆಳೆದವಳು , ಬಹಳ ವರ್ಷಗಳ ನಂತರ ಅವನು ಸಿಕ್ಕಿದ ಖುಷಿಯಲ್ಲಿ ಇವಳು ಹರಟಿದಳು .  ಅಲ್ಲಿಂದ ಶುರುವಾಯ್ತು ಗೋಳು . 
ಅವನ ಜೊತೆ ಅಷ್ಟೇಕೆ ಮಾತು ? ಅವನು ನಿನ್ನನ್ನು ನೋಡಲು ಅಲ್ಲಿಂದ ಯಾಕೆ ಬರಬೇಕಿತ್ತು ? ಅಷ್ಟು ಬೆಲೆಬಾಳೋ ಗಿಫ್ಟ್ ತರೋ ಅಗತ್ಯ ಏನಿತ್ತು ... " ಇಂಥವೇ .

 ಕೆಲ ವರ್ಷಗಳಲ್ಲಿ ಭಾರತಕ್ಕೆ ವಾಪಸಾಗಿ ದಿಲ್ಲಿಯಲ್ಲಿ ನೆಲೆಸಿದ್ದ  ರಾಜೇಶ್ ಊರಿಗೆ  ಬಂದಾಗಲೆಲ್ಲ  ಇವಳನ್ನು ಭೇಟಿಯಾಗಿ ಹರಟೆ ಹೊಡೆಯದೆ ಹೋಗುತ್ತಿರಲಿಲ್ಲ . ರಾಜೇಶನಿಗೆ ನೀನು ಬರಬೇಡ , ನನ್ನ ಗಂಡನಿಗೆ ಇಷ್ಟವಿಲ್ಲ  ಎಂದು ಇವಳಾದರೂ ಹೇಳುವುದು ಹೇಗೆ?
ಅವನು ಹೋದಮೇಲೆ ಗಂಡನ  ಪ್ರಶ್ನೆಗಳಿಗೆ ಕೊನೆಯೇ ಇರುತ್ತಿರಲಿಲ್ಲ . ಇವಳ ಯಾವ ಉತ್ತರವೂ ಅವನಿಗೆ ಹಿಡಿಸಲಿಲ್ಲ. 

ಅವನ ತಲೆಯಲ್ಲಿ  ತುಂಬಿರುವ ಸಂಶಯದ ವಿಷ ಮದುವೆಯಾಗಿ ೩೦ ವರ್ಷಗಳ ನಂತರವೂ ಕಮ್ಮಿ ಆಗಿರಲಿಲ್ಲ ! ಹೊಡೆದು ಬಡಿದು ಮಾಡದಿದ್ದರೂ  ಮಾತಿನಲ್ಲೇ ತಿವಿಯುವ , ನಂಜು ಕಾರುವ ಗಂಡನನ್ನು ಸಹಿಸಿಕೊಳ್ಳದೆ ದಾರಿ ಇರಲಿಲ್ಲ.  
ಬಿಟ್ಟು ಹೋಗುವ ಧೈರ್ಯ ಅವಳಿಗೆ ಯಾವತ್ತೂ ಇರಲಿಲ್ಲ . 

 ಹಳೆಯದೆಲ್ಲ ನೆನಪಾಗುತ್ತಿದ್ದಂತೆ  ಅವಳ ಮನಸ್ಸು ರೋಸಿ ಹೋಗುತ್ತಿತ್ತು . ಅವನನ್ನು ಎಂದೋ ತನ್ನ ಬದುಕಿನಿಂದ ಹೊರಗೆ ಹಾಕುವುದು  ತನ್ನಿಂದ ಏಕೆ ಸಾಧ್ಯವಾಗಲಿಲ್ಲ ಎಂದು ಯೋಚಿಸುತ್ತಾಳೆ. 
ಸಾಯುವುದರೊಳಗೆ ಅವನಿಗೆ ಒಮ್ಮೆ ಆದರೂ ಪಾಠ ಕಲಿಸ ಬಲ್ಲೆನೆ ಎಂದು ಕನಸು ಕಾಣುತ್ತಾಳೆ . 

ಇಂಥ ಕೊರಗುಗಳ ನಡುವೆ ಅವಳ ಆಸ್ಪತ್ರೆಯ ದಿನಗಳು ಕಳೆಯುತ್ತಿದವು. ನಿಧಾನವಾಗಿ ಚೇತರಿಸಿಕೊಳ್ಳುತ್ತಿದ್ದವಳಿಗೆ , ಒಮ್ಮೆ ಸಣ್ಣ ಜ್ವರ ಬಂದಿದ್ದೇ ನೆವವಾಗಿ  ಪರಿಸ್ಥಿತಿ ಹದಗೆಟ್ಟಿತು . 
ಅದೇ ಸಮಯದಲ್ಲಿ  ಊರಿಗೆ ಬಂದಿದ್ದ ರಾಜೇಶ್ , ವಿಷಯ ತಿಳಿದು ನೋಡಲು ಬಂದ . 
ಅದೇ ಆತ್ಮೀಯತೆಯಿಂದ ಅವಳ ಕೈ ಹಿಡಿದು " ಇದೇನಾಯ್ತೆ ಹೀಂಗೆ ? ಎಂದು ನೊಂದುಕೊಂಡ .
ಸಿಡಿಮಿಡಿಗೊಂಡರೂ ಬಾಯಿಬಿಟ್ಟು ಏನೂ ಹೇಳಲಾಗದ ಗಂಡನ ಮುಖ ನೋಡುವಾಗ ಅವಳಿಗೇನೋ ಚಿಕ್ಕ ಸಮಾಧಾನ . 

ಮರುದಿನ ಅವಳ ಸ್ಥಿತಿ ಮತ್ತಷ್ಟು ಬಿಗಡಾಯಿಸಿತು . ಮರಳಿ ಬರಲಾಗದಷ್ಟು ಹದಗೆಟ್ಟಿತು. ಅತ್ಯಂತ ಕ್ಷೀಣ ದನಿಯಲ್ಲಿ ಕಷ್ಟದಿಂದ ಗಂಡನನ್ನು ಬಳಿಗೆ ಕರೆದಳು. 
ಅವನ ಮುಖವನ್ನೇ ನೋಡುತ್ತಾ ಏದುಸಿರುಬಿಡುತ್ತಾ ಹೇಳಿದಳು " ಸಾಯೋಕು ಮುಂಚೆ ನಿಮಗೆ ನಿಜ ಹೇಳ್ಬೇಕೆನಿಸ್ತಿದೆ ..  ನಿಮ್ಮ ಸ್ವಭಾವದಿಂದ ನಾನು  ಸೋತೋಗಿದ್ದೆ ...  ಯಾರಾದ್ರೂ  ಸ್ನೇಹಿತರು ಬೇಕು ಅನಿಸ್ತಿತ್ತು . ...
ನೀವು ಅಂದ್ಕೊಂಡ ಹಾಗೆ .......  ನಾನು ಬೇರೆ ಒಬ್ಬರ ಜೊತೆ..."....ಉಸಿರು  ಎಳೆಯುತ್ತಿತ್ತು 

ಗಂಡನ ಮುಖ ಬಣ್ಣಗೆಟ್ಟಿತು!   ಸೋತ ದನಿಯಲ್ಲಿ ಕೇಳಿದ .. " ಯಾರ ಜೊತೆ.. ಹೇಳು .."

ಅವನ ವ್ಯಗ್ರ ಮುಖವನ್ನೇ  ನೋಡುತ್ತಾ  ಬಾಯಿ ತೆರೆಯಲು ಪ್ರಯತ್ನಿಸಿದಳು .ಆದರೆ ಅವಳ ಉಸಿರು ಅಲ್ಲಿಗೆ ನಿಂತಿತು . 

ಅವಳ ಗಂಡ ಅಲ್ಲೇ ಕಲ್ಲಾದ ! ಅವನ ತಲೆಯಲ್ಲೀಗ  ಅಪನಂಬಿಕೆ , ಸಂಶಯದ   ಹುಳಗಳು  ಮತ್ತಷ್ಟು  ವಿಲವಿಲ ಎಂದು  ಕಾಟ ಕೊಡತೊಡಗಿದವು . 

ಅವಳ ಆತ್ಮ  ಮೇಲಿಂದಲೇ ನಕ್ಕಿತು .  "ಬೇರೆ ಒಬ್ಬರ ಜೊತೆ ಮಾತು ಕೂಡ ಆಡಿಲ್ಲಾ   ರೀ "  ಎಂಬ ವಾಕ್ಯ ವನ್ನೂ ಅಪೂರ್ಣವಾಗಿರಿಸಿ , ಜೀವಮಾನವಿಡೀ ಅವನು  ಯಾರಿರಬಹುದು ಎಂಬ ಯೋಚನೆಯಲ್ಲೇ ಒದ್ದಾಡುವಂತೆ ಮಾಡಿ ಸೇಡು ತೀರಿಸಿಕೊಂಡ  ಸಮಾಧಾನ  ಈಗ ಅವಳ ಆತ್ಮಕ್ಕೆ ! 

 

No comments: