January 2, 2020

ಶಕುಂತಲೆ



ಕಪ್ಪು ಕೊಳದಾಳದಲಿ ಕಳೆದಿಹುದು  ಉಂಗುರವು 
ತಿಳಿಯುವಾ ಬಗೆಯುಂಟೇ ಹೇಳೇ ಗೆಳತೀ 

ಮರೆತು ಹೋಗಿಹನವನು ಪ್ರಿಯತಮೆಯ  ಮುಖವನ್ನು 
ಗುರುತಿಸುವ ದಾರಿಯನು ಹೇಳೇ ಗೆಳತೀ 

ಆಶ್ರಮದ ಸೀಮೆಯಲಿ ಆಡಿದಾ ಮಾತುಗಳ 
ನೆನಪಿಸಲಿ ಹೇಗೆ ನಾ ಎಲ್ಲರೆದುರು ?

ಹೂಗಿಡಗಳೆದುರಿನಲಿ ಕೊಟ್ಟಿರುವ ಭಾಷೆಗಳ 
ನಂಬಿ ಕೆಟ್ಟೆನೆ ನಾನು ಪ್ರೀತಿಯೆಂದು?

ಅರಿಯದೆಲೆ ನಡೆದಿರುವ ಚಿಕ್ಕ ತಪ್ಪಿಗೆ ಹೀಗೆ 
ಕೊಡಬಹುದೇ ಮುನಿಯು ಎನಗಿಂಥ ಶಾಪ?

ಕಾಡುಮೇಡಲಿ  ಅಲೆದು ತಪಗೈವ ಋಷಿಗಳಿಗೆ 
ತಿಳಿಯಬಹುದೇ ಎನ್ನ ಎದೆಯ ತಾಪ ?

ತಾಯಿಯಿಲ್ಲದ ಕುವರಿ ತಪ್ಪಿ ನಡೆದಿಹಳೆಂದು 
ಬೆಳೆಸಿದಾತನಿಗೊಂದು  ಹೆಸರು ಬಂತೆ?

ನಂಬಿ ಬಂದವಳಿಂದು ನೊಂದು ನಿಂತಿಹಳೆಂದು 
ಕುಳಿತ ಅರಸನಿಗಿಂದು ಚಿಂತೆಯುಂಟೆ?

ಧಿಕ್ಕಾರವಿರಲಿ ಈ ಬಗೆಯ ಮೋಸದ ಬಲೆಗೆ 
ಬೇಡವೆನಗಿವನ  ಆಸರೆಯ ಭಿಕ್ಷೆ 

ಹೊತ್ತ ಶಿಶುವನು ಸ್ವಾಭಿಮಾನದಲಿ ಸಾಕುವೆನು 
ಕಂದಗಿರುವುದು ಎನ್ನ ಪ್ರೇಮ ರಕ್ಷೆ 

1 comment:

sunaath said...

ಶಕುಂತಲೆಯ ಮನದಾಳದ ಮಾತುಗಳು!