March 20, 2010

ಭಾಷೆಯ ಅವಾಂತರ !


ಹೊಸದಾಗಿ ಯಾವುದೇ ಭಾಷೆಯನ್ನು ಕಲಿತು ಮಾತನಾಡುತ್ತಿರುವಾಗ , ಅನೇಕ ತಪ್ಪುಗಳಾಗುವುದು , ಅದರಿಂದ ಬಲು ಮೋಜಿನ ಅವಾಂತರಗಳು ಸೃಷ್ಟಿಯಾಗುವುದು ಸಹಜ . ಇಂಥದ್ದೇ ಕೆಲ ಸಂದರ್ಭಗಳು ಇಲ್ಲಿವೆ .

ನಮ್ಮ ಸ್ನೇಹಿತರೊಬ್ಬರಿದ್ದಾರೆ , ದೇಶಪಾಂಡೆ ಎಂದು . ಅವರು ಕನ್ನಡದವರು . ಅವರು ಮದುವೆಯಾದ ಹುಡುಗಿ  ಮೂಲತಃ  ಕನ್ನಡದವರಾದರೂ ಮನೆಯಲ್ಲಿ ಮರಾಠಿಯ ಬಳಕೆ ಹೆಚ್ಚು . ಮದುವೆಯ ನಂತರ ಗಂಡನ ಮನೆಯಲ್ಲಿ ಆದಷ್ಟು ಕನ್ನಡ ಮಾತನಾಡುವ  ರೂಢಿ  ಮಾಡಿಕೊಳ್ಳುತ್ತಿದ್ದರು .  ಹೀಗೆ ಮಾತನಾಡುವ  ಭರದಲ್ಲಿ ಸೃಷ್ಟಿಯಾದ  ಕೆಲವು ಸ್ವಾರಸ್ಯಕರ ಸನ್ನಿವೇಶಗಳನ್ನು ದೇಶಪಾಂಡೆಯವರು ನಮ್ಮೊಡನೆ ಹಂಚಿಕೊಳ್ಳುತ್ತಿದ್ದರು . 

ಘಟನೆ ೧.

ಮದುವೆಯ ಮಾತು ಕತೆ ನಡೆಯುತ್ತಿದ್ದ ಸಂದರ್ಭದಲ್ಲಿ ಹುಡುಗಿಯ ಅಕ್ಕ ಸಹ ಬಂದಿದ್ದರಂತೆ. ಆಕೆ ಒಳಗಡೆ ಹೆಂಗಸರ ಜೊತೆ ಮಾತನಾಡುತ್ತ ಕುಳಿತಿದ್ದವರು ಅಲ್ಲಿದ್ದ ಒಬ್ಬ ಹಿರಿಯ ಮಹಿಳೆಯನ್ನು ಕೇಳಿದರಂತೆ " ನಿಮಗೆಷ್ಟ್ರೀ ಗಂಡಸರು ? "

ಆಕೆಯ ಪ್ರಶ್ನೆಗೆ ಕೋಪದಿಂದ ಮುಖ ಕೆಂಪು ಮಾಡಿಕೊಂಡ ಆ ಹಿರಿಯ ಮಹಿಳೆ , ಬಾಯಿ ತೆರೆಯುವ ಮೊದಲು ,
ಹುಡುಗನ ಅತ್ತಿಗೆ " ಮಾವಶೀ, ತಪ್ಪು ತಿಳೀಬ್ಯಾಡ್ರೀ ಅಕಿಗೆ ಕನ್ನಡ ಅಷ್ಟಾಗಿ ಬರಂಗಿಲ್ರೀ, ನಿಮಗ ಗಂಡುಮಕ್ಕಳು ಎಷ್ಟು ಅಂತ ಕೇಳ ಬೇಕಾಗೆತಿ ಆಕಿಗೆ " ಎಂದು ಪರಿಸ್ಥಿತಿ ಸುಧಾರಿಸಿದರಂತೆ .

ತಾವು ಕೇಳಿದ್ದರ ಅರ್ಥ ತಿಳಿದಾಗ ಹುಡುಗಿಯ ಅಕ್ಕ ಸಂಕೋಚ- ಮುಜುಗರದಿಂದ ನೀರಾದರಂತೆ !

--------------------------------------------------------------------------------------------
 ಘಟನೆ ೨ .

ಮದುವೆಯಾದ ಹೊಸತು. ಒಮ್ಮೆ ಆಫೀಸಿನಿಂದ ತಮ್ಮ ಗೆಳೆಯನ ಜೊತೆ ತಡವಾಗಿ ಮನೆಗೆ ಹೋದ ಇವರಿಗೆ, ಇವರ ಹೊಸಾ ಹೆಂಡತಿ , "ಕೈಕಾಲು ತೊಳೆದು ಬರ್ರೀ, ಚಹಾ ತರ್ತೀನಿ" ಎಂದರಂತೆ.

" ನಂದು ಚಹಾ ಆಗೇದ , ಇಂವ ಬಂದಿದ್ದ ಆಫೀಸಿಗೆ, ಅಲ್ಲೇ ಚಹಾ ಕುಡಿದು ಬಂದೀನಿ "

ಆಕೆ , ಪತಿಯ ಸ್ನೇಹಿತನತ್ತ ತಿರುಗಿ " ನೋಡ್ರೀ ಹ್ಯಾಂಗಂತಾರ? ಈಗ ಇನ್ನೊಮ್ಮೆ ಚಹಾ ಕುಡೀಲಿಕ್ಕ ಬರೋದಿಲ್ಲ? ಹಂಗೂ ನಾನು ಇವರಿಗೆ ಭಾಳ ಪ್ರೀತಿ ಅಂತ ಇವತ್ತು " ಮುದ್ದಿನ ವಡಾ " ಮಾಡೆನಿ ! ಇವರು ಹೀಂಗ ಮಾಡೋದ ? "

ಸ್ನೇಹಿತರಿಬ್ಬರೂ ಮುಖ ನೋಡಿಕೊಂಡು ಜೋರಾಗಿ ನಕ್ಕರಂತೆ !

ಆ ಸ್ನೇಹಿತರು " ವೈನಿಯವರು ನಿಂಗ ' ಮುದ್ದಿನ ವಡಾ ' ಕೊಡ್ತಾರ ತಿನ್ನಪಾ , ನಾನು ಅಡ್ಡ ಬರಂಗಿಲ್ಲ . ನಾ ಮತ್ತ ಯಾವಾಗರೇ ಬರ್ತೀನಿ " ಎಂದು ನಗುತ್ತ ಹೇಳಿದರಂತೆ .

ಯಾಕೆ ನಗುತ್ತಾರೆ ಎಂದು ತಿಳಿಯದೆ ಬೆಪ್ಪಾಗಿ ನಿಂತ ಆಕೆಯನ್ನು " ಏ, ಮುದ್ದಿನ ವಡಾ ಅಲ್ಲೇ, ಅದು ಉದ್ದಿನ ವಡಾ , ಏನಕೆ ಏನರೆ ಅಂತಿಯಲ್ಲಾ .. " ಎಂದು ಇವರು ತಿದ್ದಿದರಂತೆ !

ಆಮೇಲೆ , ಉದ್ದಿನ ವಡಾ ಕ್ಕೂ , ' ಮುದ್ದಿನ ವಡಾ' ಕ್ಕೂ ಇರುವ ವ್ಯತ್ಯಾಸವನ್ನು ಹೆಂಡತಿಗೆ ವಿವರಿಸಿದಿರೋ ಇಲ್ಲವೋ ಎಂದು ನಾವು ಕೀಟಲೆ ಮಾಡುತ್ತಿದ್ದೆವು !

----------------------------------------------------------------------------------------------
ಘಟನೆ ೩ -

ಒಮ್ಮೆ ಸಂಜೆ ಮನೆಗೆ ಹೋದಾಗ ಮನೆಯಿಡೀ ಬಟ್ಟೆ -ಬರೆ ಹರಡಿಕೊಂಡಿತ್ತಂತೆ .

ಅದನ್ನೆಲ್ಲ ನೋಡಿ ತಲೆ ಕೆಟ್ಟ ಇವರು ಬಟ್ಟೆ ಮಡಚಿ ಸರಿಯಾಗಿ ಇಟ್ಟು ಹೋಗಲು ಆಗೋದಿಲ್ಲವೇ ? ಮನೆಯನ್ನು ನೀಟಾಗಿ ಇಡಲು ಬರುವುದಿಲ್ಲವೇ ಎಂದೆಲ್ಲ ಹೆಂಡತಿಯ ಮೇಲೆ ರೇಗಾಡಿದರು.

ಆಕೆ ಕೂಡ ಉದ್ಯೋಗಸ್ಥೆ. ಸ್ವಲ್ಪ ಹೊತ್ತು ಮುಂಚೆ ತಾನೇ ಮನೆಗೆ ಬಂದಿದ್ದ ಆಕೆ ಮರು ಮಾತಾಡದೆ ಎಲ್ಲವನ್ನು ಸೇರಿಸಿಟ್ಟವರು ಗಂಡನ ಬಳಿ ಬಂದು ,

" ನೋಡ್ರೀ, ಬೆಳಿಗ್ಗೆ ಲೇಟಾಯ್ತು ಅಂತ ನಾನು ಹಾಂಗೇ ಬಿಟ್ಟು ಹೋಗಿದ್ದು .ನೀವು ಕೂಗಾಡದಿದ್ದರೂ ಈಗ ನಾನು ಎಲ್ಲ ಸರಿ ಮಾಡಕೀನೆ ಇದ್ದೆ . . ನೀವು ಅಷ್ಟೆಲ್ಲಾ ರೇಗಾಡಿ ನಿಮ್ಮ ಬಿ ಪಿ ಹೆಚ್ಚು ಮಾಡಿಕೊಳ್ಳೋದು ಯಾಕೆ ? ಸ್ವಲ್ಪ ಮುದ್ದಾಡಿಸಿ ಹೇಳೋಕೆ ಆಗ್ತಿರಲಿಲ್ಲೇನು ? " ಅಂದರಂತೆ .

ಅದನ್ನು ಕೇಳಿ ಇವರು " ಬಾ ಇಲ್ಲಿ ಮುದ್ದಾಡಿಸಿಯೇ ಹೇಳ್ತೀನಿ " ಎಂದು ಒಮ್ಮೆಲೇ ಬಿದ್ದು ಬಿದ್ದು ನಗಲು ಆರಂಭಿಸಿದ್ದು ಅವರ ಪತ್ನಿಯ ಬಿ ಪಿ ಹೆಚ್ಚಿಸಿತಂತೆ .

ಪಾಪ , ಆಕೆಗೆ ಸಮಾಧಾನವಾಗಿ ಹೇಳಲು ಬರುವುದಿಲ್ಲವೇ / ಪ್ರೀತಿಯಿಂದ ಹೇಳಲು ಬರುವುದಿಲ್ಲವೇ? ಎಂದು ಹೇಳಬೇಕಾಗಿದ್ದು ಅರ್ಧಂಬರ್ಧ ಕನ್ನಡ ಜ್ಞಾನದಿಂದ ಮುದ್ದಾಡಿಸಿ ಹೇಳಲು ಬರುವುದಿಲ್ಲವೇ ಎಂದಾಗಿತ್ತು .

ಅದು ತಿಳಿದಾಗ ಎಷ್ಟು ಕೆಂಪಾದರೋ !

ಇದನ್ನು ಕೇಳಿದಾಗ ನಾವಂತೂ ನಕ್ಕೂ ನಕ್ಕೂ ಕೆಂಪಾಗಿದ್ದೆವು. ದೇಶಪಾಂಡೆಯವರನ್ನು " ಈಗ ಮನೇಲಿ ಯಾವಾಗಲೂ ಮುದ್ದಾಡಿಸಿಯೇ ಹೇಳ್ತೀರೆನ್ರೀ? " ಎಂದು ಕೀಟಲೆ ಮಾಡಿದ್ದೆ ಮಾಡಿದ್ದು .

ಈಗ ಬಹಳಮಟ್ಟಿಗೆ  ಚೆನ್ನಾಗಿಯೇ ಕನ್ನಡ  ಮಾತನಾಡುವ , ನಡುನಡುವೆ ಒಮ್ಮೊಮ್ಮೆ  ತಪ್ಪುತ್ತಿದ್ದರೂ  ಹೇಳಿದಾಗ ಬೇಸರಗೊಳ್ಳದೆ ತಿದ್ದಿಕೊಳ್ಳುವ ,ಎಲ್ಲರೂ ತಮಾಷೆ ಮಾಡಿ ನಗುವಾಗ ಅವರ ಜೊತೆ ತಾವೂ ಮನಸಾರೆ ನಕ್ಕು ಬಿಡುವ ಆಕೆಯ ಬಗ್ಗೆ ಬಹಳ ಗೌರವ ಎನಿಸುತ್ತದೆ .  
   

38 comments:

ಸೀತಾರಾಮ. ಕೆ. said...

ಚೆನ್ನಗಿವೆ. ನಕ್ಕು ನಕ್ಕೂ ಸಾಕಾಯ್ತು. ಇನ್ನು ಹೆಚ್ಚಿನ ನಗೆಪ್ರಸ೦ಗಗಳು ಬರಲಿ. ಹ೦ಚಿಕೊ೦ಡದ್ದಕ್ಕೆ ಧನ್ಯವಾದಗಳು.

ಸವಿಗನಸು said...

ಸಕ್ಕತ್ ಆಗಿವೆ ನಗೆ ನಗೆ ಪ್ರಸಂಗಗಳು.....
ನಗು ತರಿಸಿದ್ದಕ್ಕೆ ಧನ್ಯವಾದಗಳು....

sunaath said...

ಭಾಷಾ ಅವಾಂತರ ಮುದ್ದಾಗಿವೆ!

ಗೌತಮ್ ಹೆಗಡೆ said...

haha sakat ..

ಸುಧೇಶ್ ಶೆಟ್ಟಿ said...

ನೈಸ್ :)

ಚುಕ್ಕಿಚಿತ್ತಾರ said...

:):):).....................

ಸಿಮೆಂಟು ಮರಳಿನ ಮಧ್ಯೆ said...

ಚಿತ್ರಾ....

ಈಗಷ್ಟೆ ಸೆಖೆಯಿಂದ ಹೊರಗಡೆಯಿಂದ ಬಂದು ಬಂದಿದ್ದೆ...
ಸುಸ್ತಾಗಿತ್ತು...
ಬೋರಾಗಿತ್ತು...

ಹೊಟ್ಟೆ ತುಂಬಾ ನಗಿಸಿದ್ದಕ್ಕೆ ತುಂಬಾ... ತುಂಬಾ ಥ್ಯಾಂಕ್ಸ್...!

ನಮ್ಮೆಲ್ಲರ (ಆಶಾ) ಕಡೆಯಿಂದ ಧನ್ಯವಾದಗಳು...

ಇಂಥಹದು ಇನ್ನಷ್ಟು ಬರಲಿ....

Manasaare said...

ಮುದ್ದಿನ ವಡಾ ಹ್ಹಹಹಃ ಚೆನ್ನಾಗಿದೆ ಭಾಷೆಯ ಆವಾಂತರ . ನಾವು ಉತ್ತರ ಕರ್ನಾಟಕದವರು ಕರ್ನಾಟಕದವರೇ ಆದರು ಬೆಂಗಳೂರು ಬಂದ್ ಮೇಲೆ ನಮ್ಮ ಭಾಷೆಗೊಸ್ಕರ್ ತುಂಬಾ ನೆ ಗೋಳು ಅನುಭವಿಸಿದ್ದೇವಿ . ನಮ್ಮ ಮಾವನವರು ಒಮ್ಮೆ ಹೋಟೆಲ್ನಲ್ಲಿ ಚೌ ಚೌ ಬಾತ್ ಹೆಸರಿಗೆ ಮಾರುಹೋಗಿ ಅದೇನೋ ಹೊಸ ತಿಂಡಿ ಅಂತ ಕೊಂಡರೆ ಅದು ನಮ್ಮೊರಿನ ಉಪ್ಪಿಟ, ಶಿರ .
ಪೇಟೆಗೆ ಹೋದ್ರೆ ದೊಡ್ಡ ಗೋಳು ಉಳ್ಳಗಡ್ಡಿ , ಚುನಮರಿ , ಬಡೆ ಸೋಪು , ಪಾವ್ ಕಿಲೋ ಎಲ್ಲ ಇಲ್ಲಿ ಮಂದಿ ( ಸಾರೀ ಜನಕ್ಕೆ ) ಅರ್ಥನೇ ಆಗೋಲ್ಲ . ನನ್ನ ಗೆಳತಿ ಪೂರ್ಣಿಮಾಗೆ ನನ್ನ ಕಾಲು ಎಳಿಯೋಕೆ ನಮ್ಮ ಭಾಷೆ ತುಂಬಾ ಹೆಲ್ಪ್ ಮಾಡುತ್ತೆ . ಮೊನ್ನೆ ನಾನು " ಬಸ್ಸನಿಂದ ಇಳ್ಯಾಕ್ ಹತ್ತೆನ್ " ಅಂದ್ರೆ . ಅವಳು ನಂಗೆ " ಅದೇಗೆ ಬಸ್ಸಿನಿಂದ ಇಳಿಯುತ್ತ ಮತ್ತೆ ಮೇಲೆ ಹತ್ತಿಯಾ " ಅಂತ ಕಾಡಿದ್ದೆ ಕಾಡಿದ್ದು.

ಮನಸಾರೆ

ಪೂರ್ಣಿಮಾ ಭಟ್ಟ, ಸಣ್ಣಕೇರಿ said...

ಚಿತ್ರಕ್ಕ, ಭಾರೀ ಮಜಾ ಬಂತು!
ಹಂಗೇ ಒಂದು ಸಂದರ್ಭ ಕೂಡ ನೆನಪಾಯ್ತು.
ನನ್ನ ಗಂಡನ ಇಬ್ಬರು ಬ್ಯಾಚುಲರ್ ಗೆಳೆಯರು ಮನೆಯೊಂದರಲ್ಲಿ ‘Sharing basis' ಮೇಲೆ ಒಟ್ಟಿಗಿರ್ತಾ ಇದ್ದರು. ಒಬ್ಬ ಬಾಗಲಕೋಟೆಯವ. ಇನ್ನೊಬ್ಬ ಬೆಂಗಳೂರಿನವ. ಬೆಂಗಳೂರಿನವ ಸದಾ ಬಾಗಲಕೋಟೆಯವನ ಭಾಷೆಯನ್ನು ಅನುಕರಿಸಲು ಹೋಗುತ್ತಿದ್ದ. ನಮ್ಮಿಬ್ಬರನ್ನು ಒಮ್ಮೆ ಈ ಹುಡುಗರು ‘ಟೀ’ಗೆ ಆಹ್ವಾನಿಸಿದ್ದರು. ನಾವು ಮನೆಗೆ ಹೋದ ತಕ್ಷಣ ಬಾಗಲಕೋಟೆಯವ ಬಾಗಿಲು ತೆಗೆದ. ನಾವ್ ಒಳ ಬಂದ ಮೇಲೆ ಹಾಲ್‌ನಲ್ಲಿ ಇದ್ದ ಬೆಂಗಳೂರಿನವ ನಮಗೆ ‘ಹಾಯ್’ ಎಂದು, ಬಾಗಲಕೋಟೆಯವನ ಕಡೆ ತಿರುಗಿ - ತಮ್ಮಾ ‘ಕುಂಡಿ’ ಸರ್ಯಾಗ್ ಹಾಕ್ ಬಂದೀಯೋ ಇಲ್ಲೋ.. ಎಂದ! ನಾವೆಲ್ಲ ಬಿದ್ದು ಬಿದ್ದು ನಗ ತೊಡಗಿದೆವು. ಅದು ಬಾಗಿಲ ‘-೦ಡಿ’ ಅಲ್ಲ ‘ಕೊಂಡಿ’ ಎನ್ನಬೇಕು ಅಂತ ವಿವರಿಸಿದಾಗ ನಮ್ಮ ಬೆಂಗ್ಳೂರು ಹುಡುಗ ಬ್ಲಶಿಂಗೋ ಬ್ಲಶಿಂಗು! :-)

ಮನಮುಕ್ತಾ said...

chennaagide.:)

ಶಂಭುಲಿಂಗ said...

ಹಹಹ...ಚೆನ್ನಾಗಿದೆ.

PARAANJAPE K.N. said...

ಚೆನ್ನಾಗಿದೆ, ಚೆನ್ನಾಗಿದೆ.

ತೇಜಸ್ವಿನಿ ಹೆಗಡೆ said...

:) ರಸವತ್ತಾಗಿವೆ ಪ್ರಸಂಗಗಳು. ಏನೇ ಆದರೂ ಆಕೆ ಕನ್ನಡ ಬರದಿದ್ದರೂ ಕಲಿತು ಮಾತಾಡುವ ಆಸಕ್ತಿ ಹಾಗೂ ಉತ್ಸಾಹ ತೋರಿದ್ದಾರೆ. ಅದು ಮೆಚ್ಚುವಂತದ್ದು. ನಮ್ಮಲ್ಲೆ ಚೆನ್ನಾಗಿ ಕನ್ನಡ ಮಾತಾಡಲು ಬರುವವರಿದ್ದರೂ ಮಾತಾಡದವರಿದ್ದಾರೆ. ಕನ್ನಡ ಎಂದರೆ ಮೂಗು ಮುರಿಯುವವರಿದ್ದಾರೆ. ಅಂತವರು ಇಂತವರಿಂದ ಕಲಿಯುವುದು ಬಹಳಷ್ಟಿದೆ.

ಸುಶ್ರುತ ದೊಡ್ಡೇರಿ said...

:D
ಚನಾಗಿದ್ವೇ.. ಇವು ಮತ್ತೆ ಇಲ್ಲಿರೋ ಕೆಲ ಕಮೆಂಟ್ಸ್‌ ಮೋಟುಗೋಡೆಗೆ ಹಾಕ್ಯಳಹಂಗಿದ್ದು. :P ;)

ವಿ.ರಾ.ಹೆ. said...

:-) :D :D

ಸಾಗರದಾಚೆಯ ಇಂಚರ said...

ಚಿತ್ರಾ
ಮುದ್ದಿನ ವಡೆ ಸೂಪರ್ ಇದ್ದು
ನಕ್ಕು ನಕ್ಕು ಸುಸ್ತು

ಗುರು-ದೆಸೆ !! said...

'ಚಿತ್ರಾ' ಅವ್ರೆ..,ತುಂಬಾ ಚೆನ್ನಾಗಿದೆ..

ನನಗಂತೂ ಮತ್ತೆ ಮತ್ತೆ ನೆನಪಾಗಿ ನಗು ತರಿಸುತ್ತಿವೆ..

ನನ್ನ 'ಮನಸಿನಮನೆ'ಗೊಮ್ಮೆ ಬನ್ನಿ: http://manasinamane.blogspot.com

shivu.k said...

ಚಿತ್ರ ಮೇಡಮ್,

ಮತ್ತೆ ತಡವಾಗಿ ನಿಮ್ಮ ಬ್ಲಾಗಿಗೆ ಬರುತ್ತಿದ್ದೇನೆ. ಇತ್ತೀಚೆಗೆ ಎಲ್ಲರ ಬ್ಲಾಗಿಗೂ ತಡವೇ ಅಗುತ್ತಿದೆ. ಓದಿ ತುಂಬಾ ನಗುಬಂತು. ಭಾಷಾ ಅವಾಂತರಗಳಿಂದ ಇಂಥವು ಆಗುತ್ತಿರಬೇಕು ಅದನ್ನು ನೋಡಿ ನಾವು ನಗುತ್ತಿರಬೇಕು. ಬದುಕಿನಲ್ಲಿ ಇಂಥ ತಿಳಿಹಾಸ್ಯವೂ ರುಚಿಗೆ ತಕ್ಕಷ್ಟು ಉಪ್ಪಿನಂತೆ ಆಗಾಗ ಬರುತ್ತಿರಲಿ...

ನಗಿಸಿದ್ದಕ್ಕೆ ಧನ್ಯವಾದಗಳು.

ಚಿತ್ರಾ said...

ಸೀತಾರಾಮ್ , ಸವಿಗನಸು, ಗೌತಮ್, ಸುಧೇಶ್, ಚುಕ್ಕಿ ಚಿತ್ತಾರ ,
ನಕ್ಕಿದ್ದಕ್ಕೆ ಧನ್ಯವಾದಗಳು ನಿಮಗೆಲ್ಲ !

ಚಿತ್ರಾ said...

ಕಾಕಾ,
ಧನ್ಯವಾದಗಳು.

ಚಿತ್ರಾ said...

ಪ್ರಕಾಶಣ್ಣ ,
ಹೊಟ್ಟೆ ತುಂಬಾ ನಕ್ಕಿದ್ದಕ್ಕಾಗಿ ... ಮನಸ್ಪೂರ್ವಕ ಧನ್ಯವಾದಗಳು. ( ಆಶಾ ಗೆ ವಿಶೇಷ ಧನ್ಯವಾದಗಳು ! )

ಚಿತ್ರಾ said...

ಮನಸಾರೆ,
ನಿಮ್ಮ ಅನುಭವ ಕೂಡ ಚೆನ್ನಾಗಿದೆ . ನಾವೂ ನಮ್ಮ ಉತ್ತರ ಕರ್ನಾಟಕದ ಸ್ನೇಹಿತರನ್ನು ಹೀಗೇ ಕಾಲೆಳೆಯುತ್ತೇವೆ. ಹಿ ಹಿ ಹಿ .
ಮೆಚ್ಚಿದ್ದಕ್ಕೆ ಧನ್ಯವಾದಗಳು

ಚಿತ್ರಾ said...

ಪೂರ್ಣಿಮಾ,
ಹಾಹಾಹಾ .. ನೀ ಹೇಳಿದ " ಕುಂಡಿ ' ಕತೆ ಭಾರಿ ಮಜಾ ಇದ್ದು . ಇನ್ನೊಂದು ವಿಷ್ಯ ಗೊತ್ತಿದ್ದ, ಇಲ್ಲಿ ಮಹಾರಾಷ್ಟ್ರದಲ್ಲಿ , ಗಿಡ ನೆಡುವ ' ಕುಂಡ' ( Pot) ಕ್ಕೆ ' ಕುಂಡಿ ' ಹೇಳೇ ಹೇಳದು.
ನನ್ನ ಗೆಳತಿಯೊಬ್ಬಳು ಯಾವುದೊ ಗಿಡ ನೆಡಲು ಕೊಡುವಾಗ , ನಂಗೆ ' ಇದನ್ನು ದೊಡ್ಡ ಕುಂಡಿಯೊಳಗೆ ನೆಡು . ಗಿಡ ರಾಶಿ ದೊಡ್ದದಾಗುತ್ತೆ . ಜಾಸ್ತಿ ಜಾಗ ಬೇಕು " ಎಂದಾಗ ನನ್ನ ಮಗಳು ಕಿಸಿ ಕಿಸಿ ನಕ್ಕಿದ್ದು ನೆನಪಾತು. ಮೆಚ್ಚಿದ್ದಕ್ಕೆ , ಧನ್ಯವಾದಗಳು.

ಚಿತ್ರಾ said...

ಮನಮುಕ್ತಾ, ಶಂಭುಲಿಂಗ,ಪರಾಂಜಪೆ,

ಧನ್ಯವಾದಗಳು.

ಚಿತ್ರಾ said...

ತೇಜೂ,
ನೀ ಹೇಳಿದ್ದು ನಿಜ. ಕನ್ನಡ ಮನೆಮಾತಾದರೂ , ಹೊರಗಡೆ ಕನ್ನಡ ಬಾರದಿರುವವರಂತೆ ಆಡುವವರಿದ್ದಾರೆ. ಕನ್ನಡ ಬಾರದಿದ್ದರೂ , ಉತ್ಸಾಹದಿಂದ ಕಲಿತು ಮಾತನಾಡುವ ಆಸಕ್ತಿ ಇದ್ದವರಿದ್ದಾರೆ .. ಅವರನ್ನು ಮೆಚ್ಚಲೇಬೇಕು

ಚಿತ್ರಾ said...

ಸುಶ್ರುತ,
ಥ್ಯಾಂಕ್ಸು. ಮೋಟುಗೋಡೆಗೆ ಹಾಕು , ಇಣುಕಲೆ ಬತ್ತಿ . ಹಿ ಹಿ ಹಿ

ಚಿತ್ರಾ said...

ವಿಕಾಸ್,
ಥ್ಯಾಂಕ್ಸು

ಚಿತ್ರಾ said...

ಗುರು,
ನಕ್ಕಿದ್ದಕ್ಕೆ ಧನ್ಯವಾದ. ನಿಮ್ಮನೆಲೂ ' ಮುದ್ದಿನ 'ವಡೆ ಮಾಡ್ಸಿ ತಿನ್ತ್ಯಾ ಹೆಂಗೆ ?

ಚಿತ್ರಾ said...

ಗುರು-ದೆಸೆ ,
ನಕ್ಕಿದ್ದಕ್ಕೆ ಥ್ಯಾಂಕ್ಸ್ ಕಣ್ರೀ. ಬರ್ತಾ ಇರಿ .

ಚಿತ್ರಾ said...

ಶಿವೂ,
ನಂದೂ ಅದೇ ಪ್ರಾಬ್ಲಂ. ಕಾರಣಾಂತರಗಳಿಂದ , ಬ್ಲಾಗ್ ಓಪನ್ ಮಾಡಲೂ ತಡವಾಗುತ್ತಿದೆ
ಮೆಚ್ಚುಗೆಗೆ ಧನ್ಯವಾದಗಳು. ಇಂಥಾ ಎಷ್ಟೋ ತಿಳಿಹಾಸ್ಯದ ಪ್ರಸಂಗಗಳು ಒಮ್ಮೆ ನಮ್ಮನ್ನು ' ಫ್ರೆಶ್ ' ಮಾಡುತ್ತವೆ ಅಲ್ಲವೇ ?

Ramesha said...

ಚಿತ್ರಾ - ನಿಮ್ಮ ಬ್ಲೊಗ್ ಗೆ ನನ್ನ ಮೊದಲ ಭೇಟಿ. ನಗೆ ಪ್ರಸಂಗಗಳನ್ನು ಓದಿ ಬಹಳ ಸಂತಸಗೊಂಡೆ. ಆಕೆ ಕನ್ನಡವನ್ನು ಕಲಿತು ಮಾತಡುತ್ತಿರುವುದು ಪ್ರಶಂಸನೀಯ. ಹಾಗೆ ಇದನ್ನು ನಮಗೆ ತಲುಪಿಸಿ ನಗಿಸಿದ್ದಕ್ಕಾಗಿ ನಿಮಗೆ ಧನ್ಯವಾದಗಳು. ಸಮಯ ಸಿಕ್ಕಾಗ ನನ್ನ ಬ್ಲೊಗ್ ಕಡೆನು ಒಮ್ಮೆ ಬನ್ನಿ.

Anonymous said...

ಚಿತ್ರಾ, ನಿಮ್ಮ ಬ್ಲಾಗ್ ಗೆ ಇದು ನನ್ನ ಮೊದಲ ಭೇಟಿ. ಭಾಷೆಯ ಅವಾಂತರ ಓದಿ ತುಂಬಾ ನಕ್ಕು ಬಿಟ್ಟೆ. ಇಂತಹ ಲೇಖನಗಳು ಇನ್ನಷ್ಟು ಬರಲಿ. ದಾರಿ ನೋಡುತಿದ್ದೇನೆ. ಈ ಲೇಖನ ನನ್ನ ಹಳೆಯ ನೆನಪನ್ನು ತಾಜಾ ಮಾಡಿ ಬಿಡ್ತು. ಹೊಸದಾಗಿ ಮಹಾರಾಷ್ಟ್ರಕ್ಕೆ ಬಂದಾಗ ನನಗೂ ಭಾಷೆಯ ಆವಾಂತರದ ಅನುಭವ ಚೆನ್ನಾಗಿಯೇ ಆಗಿತ್ತು.
ನನ್ನ " ಅಂತರ್ಮನ " ದೊಳಗೆ ಒಮ್ಮೆ ಬನ್ನಿ.
hhtp://antharmana.blogspot.com

Anonymous said...

ಚಿತ್ರಾ, ನಿಮ್ಮ ಬ್ಲಾಗ್ ಗೆ ಇದು ನನ್ನ ಮೊದಲ ಭೇಟಿ. ಭಾಷೆಯ ಅವಾಂತರ ಓದಿ ತುಂಬಾ ನಕ್ಕು ಬಿಟ್ಟೆ. ಇಂತಹ ಲೇಖನಗಳು ಇನ್ನಷ್ಟು ಬರಲಿ. ದಾರಿ ನೋಡುತಿದ್ದೇನೆ. ಈ ಲೇಖನ ನನ್ನ ಹಳೆಯ ನೆನಪನ್ನು ತಾಜಾ ಮಾಡಿ ಬಿಡ್ತು. ಹೊಸದಾಗಿ ಮಹಾರಾಷ್ಟ್ರಕ್ಕೆ ಬಂದಾಗ ನನಗೂ ಭಾಷೆಯ ಆವಾಂತರದ ಅನುಭವ ಚೆನ್ನಾಗಿಯೇ ಆಗಿತ್ತು.
ನನ್ನ " ಅಂತರ್ಮನ " ದೊಳಗೆ ಒಮ್ಮೆ ಬನ್ನಿ.
hhtp://antharmana.blogspot.com

nenapina sanchy inda said...

Dear Chitra!!
hailing from Mumbai, I myself was the butt of many such jokes.

:-)
malathi S

ಚಿತ್ರಾ said...

ರಮೇಶ,
ಮೆಚ್ಚಿದ್ದಕ್ಕೆ ಧನ್ಯವಾದಗಳು. ನಿಮ್ಮ ಬ್ಲಾಗಿಗೆ ಭೇಟಿ ನೀಡಿದೆ. ಕವಿತೆಗಳು ತುಂಬಾ ಇಷ್ಟವಾದವು.
ಬರುತ್ತಿರಿ.

ಚಿತ್ರಾ said...

ಅಂತರ್ಮನ ,
ತಮ್ಮ ಹೆಸರು ತಿಳಿಯಲಿಲ್ಲ .
ನಿಮ್ಮ ಬುತ್ತಿಯಲ್ಲೂ ಇಂಥ ಅನುಭವಗಳು ಇವೆ ಎಂದು ತಿಳಿದಾಗ ತಿಳಿಯುವ ಕುತೂಹಲವಾಗುತ್ತಿದೆ. ದಯವಿಟ್ಟು ಬರೆಯಿರಿ.
ನಿಮ್ಮ ಬ್ಲಾಗಿಗೆ ಭೇಟಿ ಕೊಡುತ್ತೇನೆ ಖಂಡಿತ .

ಚಿತ್ರಾ said...

ಮಾಲತಿ ,
ನೀವೂ ಮುಂಬಯಿಯವರೇ? ನಿಮ್ಮ ಅನುಭವಗಳನ್ನೂ ನಮ್ಮೊಡನೆ ಹಂಚಿಕೊಳ್ಳಿ.

usheudya said...

hey nice one........keep it up man....