April 22, 2023

ನಾವಿಲ್ಲ !


ಚಿಗುರು ಮೂಡುವ ಮೊದಲೇ
ಕೊಡಲಿಯಲಿ ಕಡಿಯುವೆವು
ನಮ್ಮ ಬಣ್ಣಗಳಲ್ಲಿ ಹಸುರಿಲ್ಲ !

ಭೂಮಿಯನು ಅಗೆದಗೆದು
ಬರಿದಾಗಿಸಿದೆವು ಜಲವ
ಬಾಯಾರಿದರೆ ಗುಟುಕು ನೀರಿಲ್ಲ !

ಬೋಳಾಗಿಸಿದೆವು ಮರವ
ಬರಡಾಗಿಸಿದೆವು ನೆಲವ
ಹಂಬಲಿಸಿದರು ಚೂರು ನೆರಳಿಲ್ಲ

ಈ ಭೂಮಿ ನಮದಲ್ಲ
ನಮ್ಮ ಮಕ್ಕಳ ಆಸ್ತಿ
ಈ ಸತ್ಯವನು ನಾವು ತಿಳಿದಿಲ್ಲ !

ಕನಸು ಕಾಣುವ ಮೊದಲು
ವಾಸ್ತವವ ನೋಡಿದರೆ
ನಮ್ಮ ನಾಳೆಗಳಲ್ಲಿ ನಾವಿಲ್ಲ !

( ಫೋಟೋ ಕೃಪೆ : ಅಂತರ್ಜಾಲ )

April 21, 2023

ನೂರುವರ್ಷ

 

ಮಬ್ಬು ಬೆಳಕಿನ ಕೋಣೆಯಲ್ಲಿ ಹಾಸಿಗೆಯ ಮೇಲೆ ಮಲಗಿದ್ದ  ಸೀತಜ್ಜಿ ಗೆ  ಕಿರಿಕಿರಿ ಆಗ್ತಾ ಇತ್ತು . ದಿನಾ ಮಧ್ಯಾಹ್ನ ಊಟವಾದ ಮೇಲೆ ಒಂದು ಸಣ್ಣ ನಿದ್ರೆ ಮಾಡುವುದು  ಅವಳ ಅಭ್ಯಾಸ. ಅದೆಷ್ಟೋ ದಶಕಗಳಿಂದ ರೂಢಿಯಾಗಿದ್ದು .  ಆದರೆ ಇವತ್ತೇಕೋ ನಿದ್ದೆ ಬರುವ ಲಕ್ಷಣ ಇರಲಿಲ್ಲ . ಆಚೀಚೆ ಹತ್ತು ಸಲ ಮಗ್ಗುಲು ಬದಲಿಸಿದಳು  , ಸೆಖೆ ಎನಿಸಿ ಕಾಲ ಮೇಲೆ ಎಳೆದುಕೊಂಡಿದ್ದ ಹೊದಿಕೆಯನ್ನು  ತೆಗೆದಳು .  ಮತ್ತೊಂದು ಸ್ವಲ್ಪ ಹೊತ್ತಿಗೆ ಚಳಿ ಎನಿಸಿ  ಮತ್ತೆ  ಹೊದ್ದುಕೊಂಡಳು … ಊಹುಂ .. ನಿದ್ರೆ ಮಾತ್ರ  ದೂರವೇ !


ಎದ್ದು ಹೊರಗೆ ಹೋಗೋಣ ಎಂದರೆ  ಹೋಗಿ ಮಾಡೋದಾದರೂ ಏನು ? ಯಾರಿದ್ದಾರೆ ಮಾತಾಡಲು ?  ಈ ದೊಡ್ಡ ಮನೆಯಲ್ಲಿ ದಿನದ ಹೆಚ್ಚು ಭಾಗ ಒಬ್ಬಳೇ ಇರೋದು ! ಕೆಲಸ ಇದ್ದರೆ  ಬಂದು ಹೋಗುವ ಆಳುಗಳು , ಮನೆವಾರ್ತೆ ಮುಗಿಸಿ ಒಮ್ಮೆ ಬಂದು ಮಾತನಾಡಿಸಿಕೊಂಡು ಹೋಗುವ ಪಕ್ಕದ ಮನೆಯ ಸರೋಜಾ ,  ಬೆಳಿಗ್ಗೆ ಒಮ್ಮೆ ಬಂದು ಮನೆಕೆಲಸ ಮಾಡಿ ಕೊಟ್ಟು ಮತ್ತೆ  ಸಂಜೆ ಹೊತ್ತಿಗೆ ಬಂದು ಕಟ್ಟೆಯ ಮೇಲೆ ಕುಳಿತು ಕವಳ  ತಿನ್ನುತ್ತಾ ಒಂದು ಗಳಿಗೆ  ಹರಟೆ ಹೊಡೆದು ಹೋಗುವ ನಾಗಿ , ಇಷ್ಟು ಜನರನ್ನು ಬಿಟ್ಟರೆ ಬೇರೆ ಸಾಧಾರಣವಾಗಿ ಬೇರೆ ಯಾರೂ ಕಾಣುವುದಿಲ್ಲ.


ರಾತ್ರಿ ಊಟವಾದ ಮೇಲೆ ಸರೋಜಾಳ  ಮಗಳು ಶ್ರುತಿ ಬರುತ್ತಾಳೆ ಮಲಗಲು . ಕಾಲೇಜಿಗೆ ಹೋಗುವ ಹುಡುಗಿ. ಅಜ್ಜಿ ಎಂದರೆ ಇಷ್ಟವೇ. ಕಾಲೇಜಿನ ಸುದ್ದಿ, ಊರಿನಲಿ ಏನೇನು ನಡೀತಿದೆ, ಇಂಥದ್ದೆಲ್ಲ ಅಜ್ಜಿಗೆ ಹೇಳುತ್ತಾ,  ಮಾತನಾಡುತ್ತಾ ಮಲಗುತ್ತಾಳೆ.  ಅವಳಿಗೆ ಪರೀಕ್ಷೆ ಇದ್ದರೆ  ಓದುತ್ತಾ ಕುಳಿತುಕೊಳ್ಳುತ್ತಾಳೆ . ಆಗ ಮಾತ್ರ ಮಾತೂ ಕಡಿಮೆ .

ನೆಂಟರು ಇಷ್ಟರು ಇದ್ದಾರೆ ಎನ್ನುವುದೇ ಮರೆತು ಹೋದಂತಾಗಿದೆ . ಮದುವೆ ಮುಂಜಿ ಇದ್ದರೆ ತೀರ ಹತ್ತಿರದವರು ಪದ್ಧತಿ ಬಿಡಲಾಗದು ಎಂದು ಕರೆಯಲು ಬರುತ್ತಾರೆ.  ಹೇಗೂ ತಾನು ಬರುವುದಿಲ್ಲ ಎಂದು ಗೊತ್ತಿದ್ದರೂ ರೂಢಿ ತಪ್ಪ ಬಾರದೆಂದು ಕರೆದು ಹೋಗುತ್ತಾರೆ.  ಹಾಗೆ ಬಂದವರಿಗೆ  ಒಂದು ಊಟವಿರಲಿ  ಚಾ- ಕಷಾಯ ಮಾಡಿಕೊಡುವುದೂ ತನಗೆ ಕಷ್ಟವೇ. 


ಹಾಗೆ ನೋಡಿದರೆ ಅವಳ  ವಯಸ್ಸಿಗೆ ಹೀಗೆ ತನ್ನ  ಕೆಲಸ ತಾನು ಮಾಡಿಕೊಂಡಿರುವಷ್ಟು  ಗಟ್ಟಿ ಇದ್ದಿದ್ದೇ ದೊಡ್ಡದು. ಹಾಸಿಗೆ ಹಿಡಿದರೆ ನೋಡುವರ್ಯಾರು? ದೇವರೇ, ಇಷ್ಟಾದರೂ ಗಟ್ಟಿ ಇರುವಾಗಲೇ ಕರೆದೊಯ್ಯಪ್ಪಾ   ಎಂದು ಪ್ರಾರ್ಥಿಸುತ್ತಾಳೆ. ಆ ದೇವರು ಯಾಕೋ ಕಿವುಡಾಗಿದ್ದಾನೆ . ಕುರುಡನೂ ಆಗಿದ್ದಾನೆ ಎನ್ನೋದು ಅಜ್ಜಿಯ ವ್ಯಥೆ.


 ವಯಸ್ಸಾದರೂ ಕಮ್ಮಿ ಆಯ್ತೆ?  ಬರುವ ಜ್ಯೇಷ್ಠ ಮಾಸದಲ್ಲಿ ತೊಂಭತ್ತನೆ ವರ್ಷಕ್ಕೆ ಕಾಲಿಡುವುದೇ . ಆದರೆ ಆಚರಿಸಿ ಸಂಭ್ರಮಿಸಲು ಯಾರಿದ್ದಾರೆ ?  ಹಲವು ನಿರಾಸೆಗಳು, ಹುಟ್ಟಿಯೂ ದಕ್ಕದ 3-4 ಮಕ್ಕಳ ನಂತರ ಬದುಕಿದ ಇಬ್ಬರು ಮಕ್ಕಳೂ ಕಣ್ಣೆದುರೇ  ಹೋಗಿಬಿಟ್ಟರು .  ವಂಶೋದ್ಧಾರಕ  ಎಂದು ಮುದ್ದಲ್ಲಿ ಬೆಳೆಸಿದ ಮಗ , ಕೆಲಸಕ್ಕೆಂದು ಬೇರೆ ಊರಿಗೆ ಹೋದ. ಇನ್ನು  ಅವನಿಗೆ ಮದುವೆ ಮಾಡಿ, ಆದಷ್ಟು ಬೇಗ ಮೊಮ್ಮಕ್ಕಳನ್ನು ಆಡಿಸುತ್ತಾ ಹಾಯಾಗಿರಬಹುದು   ಎಂದು ಕೊಳ್ಳುತ್ತಾ ಇರುವಾಗ ಆಕ್ಸಿಡೆಂಟ್ ಲ್ಲಿ ಹೋಗಿಬಿಟ್ಟ ಎಂಬ ಸುದ್ದಿ ಬಂತು . ಆಗ ಗೋಳಾಡಿದ್ದೆಷ್ಟು! 

ಅದೇ ದುಃಖದಲ್ಲಿ  ಹಾಸಿಗೆ ಹಿಡಿದ ಗಂಡ  ಎರಡು ವರ್ಷದಲ್ಲಿ ತೀರಿಕೊಂಡರು . ಮಕ್ಕಳಾಗಲಿಲ್ಲ ಎಂದು ಅಳಿಯ ಎರಡನೇ ಮದುವೆ ಆದ್ಮೇಲೆ ತವರಿಗೆ ಬಂದು ಉಳಿದ ಮಗಳು ಅದೇನೋ ಕಾಯಿಲೆ ಬಂದು  ಯಾವ ಔಷಧಿ ಉಪಚಾರಗಳೂ ತಾಗದೆ ತೀರಿಕೊಂಡು ೧೫ ವರ್ಷಗಳೇ ಆಯಿತು . ಇನ್ಯಾರಿದ್ದಾರೆ ಕಷ್ಟ ಸುಖ ಕೇಳಲು ? ಅಪ್ಪ ಅಮ್ಮ ಹೋದ ಮೇಲೆ ಸಡಿಲವಾಗ ತೊಡಗಿದ ತೌರಿನ ಋಣ ಈಗಂತೂ ಮುಗಿದೇ ಹೋಗಿ ಎಷ್ಟು  ವರ್ಷವಾಯಿತೆಂದೇ ನೆನಪಿಲ್ಲ . ಒಟ್ಟಿನಲ್ಲಿ  ತನ್ನವರು ಎನ್ನಲು ಯಾರೂ ಇಲ್ಲ . 


ಯಾಕೋ , ಕೇರಿ ಮನೆಯಾಗಿ  ಅಕ್ಕ ಪಕ್ಕಕ್ಕೆ ಅಂಟಿ  ಕೊಂಡಂತೆ ಮನೆಗಳಿರುವ ಕಾರಣ  ತೀರಾ ಒಂಟಿ ಎನಿಸದೆ ಜೀವನ ಕಳೀತಾ ಇದೆ. ಒಬ್ಬರಲ್ಲಾ ಒಬ್ಬರು  ವಿಚಾರಿಸಿಕೊಂಡು ಹೋಗುತ್ತಾರೆ. 

ಆಚೆ ಮನೆಯ ರಾಮು , ಚಿಕ್ಕವನಿದ್ದಾಗಿಂದ ಅಜ್ಜಿ ಎನ್ನುತ್ತಾ ಹಚ್ಚಿಕೊಂಡವನು. ಅವನಿಗೆ ತನ್ನ ಜಮೀನಿನ ಜವಾಬ್ದಾರಿ ವಹಿಸಿಯಾಗಿದೆ. ತನ್ನ ಊಟತಿಂಡಿ, ಬಟ್ಟೆ ಮತ್ತು  ಅವಶ್ಯಕತೆಗಳಿಗೆ  ಆಗುವಷ್ಟು ಕೊಟ್ಟು ಉಳಿದಿದ್ದೆಲ್ಲಾ ಅವನಿಗೆ ಇಟ್ಟುಕೊಳ್ಳಲು ಹೇಳಿಯಾಗಿದೆ. ತನಗಾದರೂ ಇನ್ಯಾರಿದ್ದಾರೆ  ಆಸ್ತಿ ಬರೆದುಕೊಡಲು ? ಆದರೂ ಅವನು ಅಡಿಕೆ ಮಾರಿದ ದುಡ್ಡನ್ನು ಬ್ಯಾಂಕಿನಲ್ಲಿ ತನ್ನ ಹೆಸರಿನ ಖಾತೆ ಮಾಡಿ ಅದರಲ್ಲಿ ಹಾಕುತ್ತಾನೆ. ನಿನ್ನ ದುಡ್ಡು ನಿನಗೆ ಇರಲಿ ಎಂಬ  ಗುಣ ಅವನದು .

ರಾಮುವಿನ ಹೆಂಡತಿ ಸರೋಜಾ ಕೂಡ ಒಳ್ಳೆ ಹುಡುಗಿ. ಅಜ್ಜಿ ನಿನಗೆ ನಾನೇ ಊಟ ತಂದು ಕೊಡ್ತೀನಿ  ನೀ ಯಾಕೆ ಸುಮ್ಮನೆ ಕಷ್ಟ ಪಡೋದು ಅಂತ ಎಷ್ಟೋ ಸಲ ಹೇಳಿದ್ದಾಳೆ. ಆದರೆ ತಾನೇ ನಿರಾಕರಿಸಿದ್ದು. ಆ ಅಡುಗೆ ಬೇಯಿಸಿಕೊಂಡಾದರೂ ಸ್ವಲ್ಪ ಹೊತ್ತು  ಹೇಗೋ ಕಳೆಯುತ್ತಲ್ಲಾ ಅಂತ. ತೀರ ಯಾವಾಗಾದರೂ ಹುಷಾರಿಲ್ಲದೆ  ಸುಸ್ತು ಎನಿಸಿದಾಗ ಮಾತ್ರ  ಅವಳು ತನಗೆ ಅಡುಗೆ ಮಾಡಲು ಬಿಡದೇ ಅವಳೇ  ಊಟ ತಂದು  ಪ್ರೀತಿಯಿಂದ ಗದರುತ್ತಾ ಊಟ ಮಾಡಿಸಿ ಹೋಗುತ್ತಾಳೆ 


ಮಗಳು ಸತ್ತ ಕೆಲ ಸಮಯದ ನಂತರ ,ಒಳಕೋಣೆಯಲ್ಲಿ ಮಲಗಿರುವಾಗ ತನಗೇನಾದರೂ ಆದರೆ ಜನರಿಗೆ ತಿಳಿಯುವುದೂ ಕಷ್ಟವಾದೀತು ಎಂಬ ಯೋಚನೆ ಬಂದು  ಒಳ ಜಗುಲಿಯ ಒಂದು ಭಾಗಕ್ಕೆ  ಹಲಗೆಯ ಗೋಡೆ ಮಾಡಿಸಿ, ಬಾಗಿಲಿಲ್ಲದ ಕೋಣೆಯಂತೆ  ಮಾರ್ಪಾಟು ಮಾಡಿ ಕೊಂಡಾಯ್ತು.  ಆಗಲೇ ರಾಮು ಅದಕ್ಕೊಂದು ಅಂಟಿಕೊಂಡಂತೆ ಬಚ್ಚಲು ಸಂಡಾಸು ಮಾಡಿಕೊಳ್ಳೋದು ಒಳ್ಳೇದು ಅಂತ ಒತ್ತಾಯಿಸಿದ್ದು. 

ಮೊದಲು ಸ್ವಲ್ಪ ಮುಜುಗರ ಎನಿಸಿದರೂ ಮುಂದಿನ ವಿಚಾರ ಮಾಡಿದಾಗ ಅದು ಸರಿ ಎನಿಸಿತ್ತು. ಇಲ್ಲದಿದ್ರೆ ಈಗೆಲ್ಲಾ ಎಷ್ಟು ಕಷ್ಟ ಆಗಿರೋದು!  ರಾತ್ರಿ ಕೆಲವೊಮ್ಮೆ ಎರಡು ಮೂರು ಸಲ ಏಳಬೇಕು . ಸದ್ಯ ಪಕ್ಕಕ್ಕೆ ಬಚ್ಚಲುಮನೆ ಇರೋದಕ್ಕೆ ಸಲೀಸು. ಇನ್ನೂ ಎಷ್ಟು ದಿನ ಅಂತ ಹೀಗೆ ಬದುಕಿರಬೇಕೋ !

ಸೀತಜ್ಜಿಯ ತಲೆಯಲ್ಲಿ  ಆಲೋಚನೆಗಳು ಓಡುತ್ತಲೇ ಇದ್ದವು.


ಅಲ್ಲಾ , ನೂರುವರ್ಷ ಬಾಳು ಅಂತ ಯಾರಾದ್ರೂ ಆಶೀರ್ವಾದ ಮಾಡಿದ್ದು ನಿಜವಾಗಿ ಬಿಡುತ್ತಾ ಅಂತ ?  ಹಾಗೆ ಮಾಡಿದ ಆಶೀರ್ವಾದಗಳೆಲ್ಲ ನಿಜವಾಗೋ ಹಾಗಿದ್ರೆ, ದೀರ್ಘ ಸುಮಂಗಲಿ ಭವ ಅಂದಿದ್ದಾಗಲೀ, ಅಷ್ಟ ಪುತ್ರವತೀ ಭವ ಎಂದಿದ್ದಾಗಲಿ ಯಾಕೆ ನಿಜವಾಗಲಿಲ್ಲ ಎಂದು ಯೋಚಿಸುತ್ತಾಳೆ. ಅಷ್ಟೇ ಯಾಕೆ, ನೂರುವರ್ಷ ಸುಖವಾಗಿ ಬಾಳು ಅಂದಿದ್ದರಲ್ಲಿ ಅರ್ಧ ಭಾಗವಷ್ಟೇ ನಿಜವಾಗುತ್ತದ? ಎಂದು ಯೋಚಿಸುತ್ತಾಳೆ 


ಯಾರೆಲ್ಲ ಆಶೀರ್ವಾದ ಮಾಡಿದ್ದರು ಎಂದು ನೆನಪಿಸಿ ಕೊಳ್ಳುವ ಪ್ರಯತ್ನ ಮಾಡುತ್ತಾಳೆ . ಹಾಗೆ ತನಗೆ ಆಶೀರ್ವಾದ ಮಾಡಿದ  ಯಾರ ನಾಲಿಗೆ ಮೇಲೆ ಮಚ್ಚೆ ಇದ್ದಿರಬಹುದು ? ಅವರಿಗಾದರೂ ಕಲ್ಪನೆ ಬೇಡವೇ? ಒಂಟಿಯಾಗಿ ನೂರುವರ್ಷ ಬದುಕೋದು ಎಂಥಾ ಹಿಂಸೆ ಅಂತ? 

ತಮ್ಮ ಕಣ್ಣ ಮುಂದೆ ಗಂಡ ಮಕ್ಕಳು ಎಲ್ಲರೂ  ಮಣ್ಣಾದಾಗ  ಹೊಟ್ಟೆಯಲ್ಲಿ ಎಂಥಾ ಬೆಂಕಿ ಸುಡುತ್ತದೆ ಅಂತ? ಕೈಲಾಗದಿದ್ದರೂ ಹೇಗೋ ತಮ್ಮ ಕೆಲಸ ಮಾಡಿಕೊಂಡು , ಒಂದು ಗಂಜಿಯನ್ನಾದರೂ ಬೇಯಿಸಿಕೊಂಡು ದೊಡ್ಡ ಮನೆಯಲ್ಲಿ ಒಂಟಿ ಭೂತದಂತೆ ತಿರುಗುವುದು ಎಷ್ಟು ಹುಚ್ಚು ಹಿಡಿಯುವಂತೆ ಮಾಡುತ್ತದೆ ಅಂತ? ಸತ್ತ ಮೇಲೆ  ತನಗಾಗಿ ಅಳುವವರು , ಚಿತೆಗೆ ಬೆಂಕಿ ಇಡುವವರು ಇಲ್ಲದೆ ಅನಾಥ ಹೆಣವಾಗಿಬಿಡುವ  ಸಾಧ್ಯತೆಯನ್ನು ಅವರು ಯೋಚಿಸಿಲ್ಲವೇ? ಬಹುಶಃ  ಅವರಿಗೇ ತಮ್ಮ ಆಶೀರ್ವಾದದ ಮೇಲೆ ನಂಬಿಕೆ ಇರಲಿಕ್ಕಿಲ್ಲ  ಎಂದು ಅವಳಿಗೆ ನಗು ಬಂತು.


ಗಂಡ ತೀರಿಕೊಂಡಾಗ ಬಂದಿದ್ದ ಮಂಕಾಳತ್ತೆ ಯಾರಿಗೋ  “ಸೀತೆ ಹೇಳಿ ಹೆಸರಿರೋರಿಗೆ ಕಷ್ಟ ತಪ್ಪಿದ್ದಲ್ಲವಂತೆ  , ಆ ಸೀತಾಮಾತೆಯೆ ಏನೆಲ್ಲ ಕಷ್ಟ ಅನುಭವಿಸಿದಳು” ಎಂದು ಹೇಳಿದ್ದು  ಅಜ್ಜಿಗೆ ನೆನಪಾಯ್ತು. 

ಹಾಗಾದರೆ, ಇದು ತನ್ನ ಅಪ್ಪ ಅಮ್ಮನಿಗೆ ಗೊತ್ತಿರಲಿಲ್ಲವೇ? ಗೊತ್ತಿದ್ದೂ ಯಾಕೆ ತನಗೆ ಸೀತೆ ಎಂದೇ ಹೆಸರಿಟ್ಟರು? ತಮ್ಮ ಮಗಳಿಗೆ ಹಾಗೇನೂ ಆಗದು ಎಂಬ ಹುಚ್ಚು ಭರವಸೆ ಇತ್ತೇ? ಅವರಿದ್ದಿದ್ದರೆ ಕೇಳಿಯೇ ಬಿಡಬಹುದಿತ್ತು ಎಂದುಕೊಂಡವಳಿಗೆ ಅಲ್ಲೇ  ತನ್ನ ತಲೆ ಎಲ್ಲೆಲ್ಲೋ ಓಡುತ್ತಿರುವ ರೀತಿಗೆ ಸಣ್ಣಗೆ ನಗು ಬಂತು.


ಮಗಳು ಸತ್ತು, ತಾನು ತೀರಾ ಒಂಟಿಯಾದ  ಶುರುವಿಗಂತೂ ತಾನಾದರೂ ಇನ್ನೇಕೆ ಬದುಕಬೇಕು ಎನಿಸಿ ಜೀವ ಕಳೆದುಕೊಳ್ಳುವ ಯೋಚನೆ ಅದೆಷ್ಟೋ ಸಲ ಬಂದಿತ್ತು.  ನೇಣು ಹಾಕಿ ಕೊಳ್ಳಬೇಕು ಅಥವಾ  ಅಂಗಳದಾಚೆ ತೋಟದ ಬದಿಯಲ್ಲಿಯ ಹಳ್ಳ ಮಳೆಗಾಲದಲ್ಲಿ ತುಂಬಿ ಹರಿವಾಗ ಅದರಲ್ಲಿ ಬಿದ್ದು ಬಿಡಬೇಕು ಎಂದೆಲ್ಲ  ಅದೆಷ್ಟೋ ಸಲ ಅನಿಸಿದ್ದಿತ್ತು. ಆದರೆ ,  ಆತ್ಮಹತ್ಯೆ ಮಹಾಪಾಪ, ಹಾಗೆ ಮಾಡಿಕೊಂಡವರು ಅಂತರ್ ಪಿಶಾಚಿಯಾಗಿ ಅಲೆಯುತ್ತಾರೆ  ಎಂಬ ಭಯವಿತ್ತಲ್ಲ ? ಅದರಿಂದಾಗಿ ಹಿಂಜರಿದಿದ್ದಾಯ್ತು.  ಹಾಗೆ  ನೋಡಿದರೆ ಈಗಲಾದರೂ ಇನ್ನೇನು ? ಒಂಥರಾ  ಒಂಟಿ ಪಿಶಾಚಿಯಂತೆ ಅಲೆಯುತ್ತಿಲ್ಲವೇ ಎನಿಸಿ ನಿಟ್ಟುಸಿರು  ಹೊರಬರುತ್ತದೆ. 


ಆ ದೇವರಿಗಾದರೂ ಯಾಕೆ ತನ್ನ ಮೇಲೆ ಕರುಣೆಯಿಲ್ಲ ? ಕಳೆದ ವರ್ಷ ತುದಿ ಮನೆ ಪರಮುನ ಮಗಳು ಜ್ವರ ಬಂದಿದ್ದೆ ನೆಪವಾಗಿ  ತೀರಿ ಕೊಂಡೆ ಬಿಟ್ಟಳಲ್ಲ ? ಇನ್ನೂ ಶಾಲೆಗೆ  ಹೋಗುವ ಚಿಕ್ಕ ಹುಡುಗಿ . ಆ ದೇವರಿಗೆ ಇಲ್ಲಿ ಸಾವನ್ನೇ ಕಾಯ್ತಾ ಕೂತಿರೋ ತಾನು ಕಾಣಲಿಲ್ವೆ? 

ಯಾವ ಪಾಪಕ್ಕೆ ಇಂಥಾ ಶಿಕ್ಷೆ  ಕೊಡ್ತಿದಾನೆ?  ತಪ್ಪದ್ದೆ ಶ್ರದ್ಧಾ ಭಕ್ತಿಯಿಂದ ಎಲ್ಲಾ ಹಬ್ಬ ಹುಣ್ಣಿಮೆ , ವ್ರತ ಮಾಡಿದ್ದೇನೆ . ಆದರೂ ಯಾಕೆ ಹೀಗೆ?

ಒಟ್ಟಿನಲ್ಲಿ ತಾನು ಅನುಭವಿಸುತ್ತಿರುವುದನು ನೋಡಲು ತನ್ನವರು ಎಂದು ಯಾರೂ ಇಲ್ಲವಲ್ಲ ಎಂದು ನಿಟ್ಟುಸಿರು ಬಿಟ್ಟಳು.


ಛೆ, ಹಾಳಾದ್ದು , ಇವತ್ತು ಯಾಕೆ ನಿದ್ದೆ ಬರುತ್ತಿಲ್ಲ ಎನಿಸಿ ಒಳಗೇ ಸ್ವಲ್ಪ ಸಿಟ್ಟೂ ಬರ ತೊಡಗಿತು. ಮತ್ತೆ ಮಗ್ಗುಲು ಬದಲಾಯಿಸಿ ಮಲಗಿದಳು.

ಇದ್ದಕ್ಕಿದ್ದ ಹಾಗೇ ಮತ್ತೊಂದು ಹುಳ ತಲೆ ಕೊರೆಯ ತೊಡಗಿತು! 

ತಾನೇನಾದರೂ  ಈಗ ಸತ್ತೇ ಹೋದರೆ ಬೇರೆಯವರಿಗೆ ತಿಳಿಯುವುದಾದರೂ ಹೇಗೆ?

ಸಂಜೆ ನಾಗಿ ಬಂದು,  ತಾನು ಇನ್ನೂ ಎದ್ದಿಲ್ಲದ್ದು ನೋಡಿ , ಸರೋಜಾಳನ್ನು ಕರೆ ತಂದರೆ….ಆಗ ತಿಳಿಯಬಹುದೇನೋ  . ಇವರೆಲ್ಲ ತನ್ನ ಜೀವನದ ಒಂದು ಭಾಗವಾಗಿದ್ದವರು. ತಾನು ಸತ್ತಿದ್ದಕ್ಕೆ ಅಳಬಹುದೇ ಎಂಬ ಕೆಟ್ಟ ಕುತೂಹಲ ಮೂಡಿತು. ಅಲ್ಪ ಸ್ವಲ್ಪ ದುಖವಾಗಬಹುದು,  ಜೊತೆಗೇ ಸಾವಿಗಾಗಿ ಎಷ್ಟೋ ವರ್ಷಗಳಿಂದ ಕಾದು ಕುಳಿತಿರುವ ತಾನು ಸತ್ತರೆ ಅವರಿಗೂ ಒಮ್ಮೆ  ಸಮಾಧಾನವೇ ಆಗಬಹುದು ಎಂದು ಯೋಚಿಸಿದಾಗ  ಬೇಡವೆಂದರೂ ಮನದ ಮೂಲೆಯಲ್ಲೆಲ್ಲೋ ತನಗಾಗಿ ದುಃಖಿಸುವವರು  ಯಾರು ಇಲ್ಲವಲ್ಲ ಎಂದು  ಪಿಚ್ಚೆನಿಸಿತು.

 

ಆಮೇಲೆ ಮುಂದಿನ ಕಾರ್ಯಗಳನ್ನು ಯಾರು ಮಾಡಬಹುದು ಎಂಬ ಕುತೂಹಲ ಮೂಡಿತು. ಒಂದು ಕಾಲದಲ್ಲಿ ಜರ್ಬಿನಿಂದಲೇ ಬಾಳಿ, ಇಷ್ಟು ದೀರ್ಘ ಕಾಲ ಗೌರವದಿಂದಲೇ ಬದುಕಿದ್ದು ,ಸತ್ತ ಮೇಲೆ ಅನಾಥ ಹೆಣವಾಗಿ ಬಿಡುವೆನೆ ಎಂದೆನಿಸಿ ದುಃಖವಾಯಿತು.

ಯಾವುದಕ್ಕೂ ಇಂದು ಸಂಜೆ ರಾಮು ಮತ್ತೆ ಸರೋಜಾ ರನ್ನು ಕೂರಿಸಿಕೊಂಡು ಈ ಬಗ್ಗೆ ಮಾತನಾಡಬೇಕು. ಕೊಳ್ಳಿ ಇಡುವ ಕೆಲಸವೊಂದು ನೀನೇ ಮಾಡು ಎಂದು ರಾಮುವನ್ನು ಕೇಳಿಕೊಳ್ಳಬೇಕು . ಎಷ್ಟೆಂದರೂ ದಾಯಾದಿಯೇ ಆಗುತ್ತಾನೆ. ಇಲ್ಲ ಎನ್ನಲಾರ .

ನಂತರದ ಕ್ರಿಯೆಗಳನ್ನು ಮಾಡುವ ಅಗತ್ಯವಿಲ್ಲ ಎಂದು ಹೇಳಬೇಕು. ಅದೆಷ್ಟೋ ಜನ ಅನಾಥರಾಗಿ ಸಾಯುವುದಿಲ್ಲವೇ? ಅಂಥಾ ಅನಾಥ ಹೆಣಗಳನ್ನು ಯಾರೋ ಸುಡುತ್ತಾರೆ. ಆದರೆ ಮುಂದಿನ ಕಾರ್ಯ ಯಾರೂ ಮಾಡುವುದಿಲ್ಲ. ಹಾಗಿದ್ದರೆ ಅವರ ಆತ್ಮ ಮುಕ್ತಿಯಿಲ್ಲದೆ ಅಲೆಯುತ್ತದೆಯೇ? ಆ ರೀತಿ ಏನಾದರೂ ಆದರೆ, ಇಂಥಾ ಆತ್ಮಗಳದ್ದೆ ದೊಡ್ಡ ಜಾತ್ರೆಯಾದೀತು!


ಅದೇಕೋ ತನ್ನ ಆಲೋಚನೆಗೆ ಅವಳಿಗೇ ನಗು ಬಂತು!


ಮತ್ತೆ ಮಗ್ಗುಲಾಗಿ ಗೋಡೆಯ ಕಡೆ ತಿರುಗಿ ಮಲಗಿದಳು.  

ನಾಳೆ ನಾಡಿದ್ದು ಯಾವಾಗಲಾದರೂ  ಈ ಹಾಸಿಗೆ ಬಟ್ಟೆನಾ ಒಂದ್ಸಲ ತೊಳೀಬೇಕು ಕಮಟಾಗಿ ಬಿಟ್ಟಿವೆ. ಸರೋಜಾ ಗೆ ಹೇಳಿದ್ರೆ ಅವರ ಮನೆ ಮಷಿನ್ ಲ್ಲಿ  ತೊಳೆದು ಕೊಡ್ತಾಳೆ. ಸ್ನಾನ ಮಾಡಿ ತನ್ನ ನೈಟಿಯನ್ನು ತೊಳೆದುಕೊಳ್ಳಲು ತನಗೆ ಒಮ್ಮೊಮ್ಮೆ ಕಷ್ಟ ಎನಿಸಿದ್ದಿದೆ. ಆದರೆ ಅದು ಅನಿವಾರ್ಯ ! ಈ ನೈಟಿಯನ್ನಾದರೂ ಹಾಕಿಸಲು ಸರೋಜಾ ಅದೆಷ್ಟು ವಾದ ಮಾಡಿ ಒಪ್ಪಿಸಿದ್ದು ! 

ಈಗ ಇದೇ ಹಾಯಿ ಎನಿಸುತ್ತದೆ. ನಿಂತು ಸೀರೆ ಉಟ್ಟುಕೊಳ್ಳುವುದು ಬಹುಶಃ ತನಗೆ ಈಗ ಕಷ್ಟವೇ ಆಗ್ತಾ ಇತ್ತೇನೋ . 

ದೇವರೇ, ಸದ್ಯ ತನ್ನವರನ್ನೆಲ್ಲ ಕರೆಸಿಕೊಂಡರೂ ಮನೆಯವರಂತೆಯೆ ನೋಡಿಕೊಳ್ಳುವ ಜನರನ್ನಾದರೂ ಕೊಟ್ಟಿದ್ದೀಯಲ್ಲ ಎಂದು ಮನದಲ್ಲೇ ನಮಸ್ಕಾರ ಮಾಡಿದ್ಲು.  

ಈ ಎಲ್ಲ ಯೋಚನೆಗಳ ನಡುವೆ ಅಂತೂ ಅವಳಿಗೆ ಯಾವಾಗ ನಿದ್ರೆ  ಬಂತೋ ತಿಳಿಯಲಿಲ್ಲ. ಮತ್ತೆ ಎಚ್ಚರವಾಗಿದ್ದು ನಾಗಿಯ ಜೋರಾದ ದನಿಯಿಂದ  . ದಿನದಂತೆ ಬಂದು  ಕಟ್ಟೆಯಮೇಲೆ ಕುಳಿತ ನಾಗಿ, ಸೀತಜ್ಜಿ ಕಾಣದ್ದು  ನೋಡಿ  ಜಗುಲಿಗೆ ಹೋಗಿ  ಕರೆದಳು . ಎರಡು ಮೂರು ಸಲ ಕರೆದರೂ ಉತ್ತರವಿಲ್ಲದ್ದು ನೋಡಿ  ಗಾಬರಿಯಾಗಿ  ಜೋರಾಗಿ ಕೂಗಿದಳು. ಆಗಲೇ ಅಜ್ಜಿಗೆ ಎಚ್ಚರವಾಗಿದ್ದು. 

ಎದ್ದು ಬಂದ ಅಜ್ಜಿ ಯನ್ನು ನೋಡಿ , ನಾಗಿಯೂ ನಿಟ್ಟುಸಿರು ಬಿಟ್ಟಳು. 


“ ಎಂತ ಅಮಾ, ಆ ನಮನಿ ನಿದ್ರೆ? ನಾ ಒಂದ್ ಸಲ ನಿಮಗೆ ಎಂತೋ ಆಯ್ತು ಅಂದ್ಕಂಡೆ “


“ಆಗಿದ್ರೆ ಒಂದು ಸಮಾಧಾನ ಇರ್ತಿತ್ತಲೇ ನಾಗಿ ? ಎಂತ ಮಾಡದು ? ಆ ದೇವರಿಗೆ ನಾ ಕಾಣದೆ ಇಲ್ಲಲ್ಲೇ”  ಎಂದು ಅಲವತ್ತುಕೊಂಡಳು ಸೀತಜ್ಜಿ. 


ದಿನದ ಹಾಗೇ  ಅದೂ ಇದೂ ಸುದ್ದಿ ಹೇಳಿ ನಾಗಿ  ಮನೆಗೆ ಹೊರಟಳು. ಅವಳು ಕಟ್ಟೆಯಿಂದ ಅಂಗಳಕ್ಕೆ ಇಳಿಯುತ್ತಿರುವಾಗ ಅದೇನೋ ನೆನಪಾದಂತಾಗಿ  ಸೀತಜ್ಜಿ ಅವಳನ್ನು ಕರೆದಳು. ತಿರುಗಿ ಬಂದವಳಿಗೆ “ ನಾಗಿ , ಹೋಗ್ತಾ ಆ ಶ್ರೀಧರ ಭಟ್ರ ಮನೆ ವಿನಾಯಕ ಮನೇಲಿದ್ರೆ ಒಂದ್ ಸತಿ ಬರಲಿಕ್ಕೆ  ಹೇಳು . ಅರ್ಜೆಂಟ್ ಎಲ್ಲ ಇಲ್ಲ.  ಆದ್ರೂ  ಇವತ್ತೇ ಬಂದ್ ಹೋಗಬೇಕಂತೆ ಹೇಳು .” ಎಂದಳು 


ನಾಗಿಗೆ ಒಮ್ಮೆ ಆಶ್ಚರ್ಯವಾದರೂ  “ಅಡ್ಡಿಲ್ಲ, ಹೇಳಿ ಹೋಗ್ತೇನೆ “ ಎಂದು ಹೊರಟಳು .


“ಹಾಂಗೆ ನಿನ್ ಮಗ ಶಿವಪ್ಪಂಗು ಒಂದ್ಸಲ ಬಂದು ಹೋಗಲಿಕ್ಕೆ ಹೇಳು.”


 ನಾಗಿಗೆ  ಈಗ ಸ್ವಲ್ಪ ಗಲಿಬಿಲಿಯಾಯಿತು. ಆದರೂ ತೋರಿಸಿಕೊಳ್ಳದೆ  “ಆಯ್ತು ಅಮಾ” ಎನ್ನುತ್ತಾ ಗೇಟ್ ದಾಟಿದಳು..

 

ಒಳ ಹೋಗಿ ದೀಪ ಹಚ್ಚಿ ,ದೇವರಿಗೆ ಕೈ ಮುಗಿದು  ಜಗುಲಿಯ ಮೇಲೆ  ಕುಳಿತು ರಾಮಾಯಣ ಓದ ತೊಡಗಿದರೂ ಸೀತಜ್ಜಿಯ ತಲೆಯಲ್ಲಿ  ಹತ್ತೆಂಟು ಯೋಚನೆಗಳು.

ದಿನದಂತೆ ಶ್ರದ್ಧೆಯಿಂದ ಓದಲಾಗದೇ ಅದನ್ನು ಹಾಗೇ ಮುಚ್ಚಿಟ್ಟು ಸುಮ್ಮನೆ ಕುಳಿತಳು .


ಅಷ್ಟೊತ್ತಿಗೆ ವಿನಾಯಕ ಗಡಿಬಿಡಿಯಿಂದ ಮನೆ ಮೆಟ್ಟಿಲು ಹತ್ತುತ್ತಿರುವುದು ಕಂಡಿತು.  ಜಗುಲಿಯಲ್ಲಿ  ಪುಸ್ತಕ ತೊಡೆಯ ಮೇಲಿಟ್ಟು ಕುಳಿತ ಅಜ್ಜಿಯನ್ನು ನೋಡಿ ಅವನೂ ಸಮಾಧಾನದ ಉಸಿರು ಬಿಟ್ಟ. 


"ಎಂತ ಆ ಯ್ತೆ ಅಜ್ಜಿ ? ಹೇಳಿ ಕಳಿಸಿದ್ದೆ ?ನಾಗಿ ಹೇಳಿದ ಕೂಡ್ಲೇ  ನಾನು ಒಂದ್ಸಲ ಗಾಬರಿ ಆಗೋದೆ ನೋಡು . "


ದೊಡ್ಡದಾಗಿ ನಕ್ಕ ಸೀತಜ್ಜಿ , “ಅಯ್ಯ, ನಾನಿನ್ನೂ ಬದುಕಿದ್ದೆ ಮಾರಾಯ. ಇವತ್ತು ತಲೇಲಿ ಏನೇನೋ ಯೋಚನೆ ಬರ್ತಿತ್ತು. ಅದಕ್ಕೇ ಕೆಲವು ವಿಷಯಾನಾ ಒಂದ್ ಹಂತಕ್ಕೆ ತಂದಿಡದು ಒಳ್ಳೇದು ಅನಸ್ತು. ಅದಕ್ಕೇ ನಿಂಗೆ ಹೇಳಿ ಕಳಿಸ್ದೆ .  ಆ ರಾಮು  ನ ಒಂದ್ಸಲ  ಕರದ್ ಬಿಡು ನೀನೇ. ಸರೋಜಾನ್ನೂ ಬರಾಕ್ ಹೇಳು .


ವಿನಾಯಕಂಗೆ ಗೊಂದಲವಾಯಿತು.. ಅದರೂ ಮೊಬೈಲ್ ತೆಗೆದು ರಾಮುಗೆ ಕಾಲ್ ಮಾಡಿ  ಅಜ್ಜಿ ಹೇಳಿದ್ದನ್ನು ಹೇಳಿದ. 

ಐದು ನಿಮಿಷದಲ್ಲಿ ರಾಮು ಸರೋಜಾ ಇಬ್ಬರು ಗಡಬಡಿಸುತ್ತಾ ಬಂದರು .  


ಎಂತ ಆಯಿತು  ಅಜ್ಜಿಗೆ  ವಿನಾಯಕಣ್ಣ?ಎಂದು  ಕೇಳುತ್ತಾ ಒಳ ಹೊಕ್ಕವರು  ಅಜ್ಜಿ ಆರಾಮಾಗಿ ಕುಳಿತಿದ್ದು ನೋಡಿ ನಿರಾಳವಾದರು.


ನಾನು ಗಟ್ಟಿನೆ ಇದೀನಪ್ಪಾ. ಒಂದು ಮುಖ್ಯವಾದ ವಿಷಯ ಮಾತಾಡ್ಬೇಕು. ಅದಕ್ಕೆ ಕರೆದಿದ್ದು .


ಮೂರು ಜನ ಮುಖ ಮುಖ ನೋಡಿಕೊಂಡರು. 


ಪುಸ್ತಕ ಬದಿಗಿಟ್ಟು ಕಾಲು ನೀಡಿಕೊಂಡ ಸೀತಜ್ಜಿ ಶುರು ಮಾಡಿದಳು. 


ರಾಮು,  ಇವತ್ತು ಮಧ್ಯಾನ ಯಾಕೋ ತಲೇಲಿ ಏನೇನೋ ಯೋಚನೆಗಳು . ನಿದ್ರೆನೂ ಸರಿಯಾಗಿ ಬರ್ಲಿಲ್ಲ . ಆವಾಗಲೇ ನಿಮ್ಮಿಬ್ಬರ ಹತ್ರ ಈ ವಿಷಯನ ಮಾತಾಡ ಬೇಕು ಅಂತ. 

ಒಂದು ಕ್ಷಣ ಸುಮ್ಮನಾದ ಅಜ್ಜಿ  , “ ನಾ ಸತ್ತ ಮೇಲೆ  ಚಿತೆಗೆ ಬೆಂಕಿ ಕೊಡೊ ಕೆಲಸ ನೀ ಮಾಡ್ತೀಯ ರಾಮು ? “ ಬೇಡಿಕೆಯ ದನಿಯಲ್ಲಿ ಕೇಳಿದಳು.


“ಅಜ್ಜೀ , ಇದೇನೇ ಇದ್ದಕ್ಕಿದ್ದ ಹಾಗೆ?”   ಸರೋಜಾ ಗಾಬರಿಯಾದಳು.

“ಅಜ್ಜೀ, ನೀನು ನೂರುವರ್ಷ ಮುಗ್ಸಿಯೇ ಹೋಗೋದು. ಯಾಕೆ ಸುಮ್ನೆ ಏನೇನೋ ಮಾತು ? “  ರಾಮು ತಮಾಷೆ ಮಾಡಿದ. 


ಹಾಗಲ್ಲ ರಾಮು , ನಾನು ನೂರುವರ್ಷ ಬದುಕಿ  ಮಾಡೋಕೆ ಏನಿದೆ  ಹೇಳು ? ಈಗಲೇ ಬೇಕಾಗಿದ್ದಕ್ಕಿಂತ ಜಾಸ್ತಿ ವರ್ಷ  ಆಯ್ತು ಈ ಭೊಮಿ ಮೇಲೆ  ! ಸಾಯೋ ವಯಸ್ಸಂತು ಆಗಿ ಯಾವ್ದೋ ಕಾಲ ಆಗೋಯ್ತು . ನಂಗೆ ನೂರುವರ್ಷ ಬದುಕೋ ಇಚ್ಛೆ  ಇಲ್ವೆ ಇಲ್ಲ. ಯಾಕಾಗಿ , ಯಾರಿಗಾಗಿ ಬದುಕಬೇಕು ಹೇಳು ?  ಯಾವ್ ಕ್ಷಣ ದೇವ್ರು ಕರೀತಾನೆ ಅಂತ ಕಾದು ಕೂತಿರೋಳು.ಅದಕ್ಕೆ ಹೇಳ್ತಾ ಇದ್ದೀನಿ.  ನೋಡು ದಯವಿಟ್ಟು ನನ್ನ ಹೆಣಕ್ಕೆ ಕೊಳ್ಳಿ ಇಡಾ ಕೆಲಸ ನೀನೇ ಮಾಡು. ಬೇರೆ ಏನೂ  ವಿಧಿಗಳನ್ನ ಮಾಡೋದು ಅಗತ್ಯ ಇಲ್ಲ.  ನಾನೇನೂ ಭೂತ ಆಗಿ ಕಾಟ ಕೊಡೋದಿಲ್ಲ ! ಯೋಚನೆ ಮಾಡಬೇಡ .


"ಅಜ್ಜಿ , ಎಂತ ಮಾರಾಯ್ತಿ ನೀನು ? ಹೀಗೆಲ್ಲ  ಕೇಳಿ ಮನಸಿಗೆ ಹಿಂಸೆ ಕೊಡ್ತೀಯಲ್ಲ ?" ರಾಮು ಭಾರವಾದ ದನಿಯಲ್ಲಿ ಹೇಳಿದ . 


“ಅಯ್ಯ , ಹಾಗಲ್ಲ ಮಾರಾಯ , ಹಾಗೆ ನೋಡಿದ್ರೆ , ನೀನು ನನಗೆ ದಾಯಾದಿಯೇ . ಆದ್ರೂ ನಾನು ಸತ್ತ ಮೇಲೆ ಮುಂದಿನದೆಲ್ಲ ಯಾರು ಮಾಡೋದು,ಹೇಗೆ,  ಏನು ಅನ್ನೋ ಪ್ರಶ್ನೆ ಎಲ್ಲ ಬರಬಾರದು ನೋಡು. ಅದಕ್ಕೆ ಮುಂಚೆನೇ ಕೇಳಿದ್ದು.”  ದೊಡ್ಡಕೆ ನಕ್ಕಳು .


ಉಳಿದ ಮೂವರೂ ಏನು ಹೇಳಬೇಕೋ ತಿಳಿಯದೇ ಕುಳಿತಿದ್ದರು . 


ಅದೇ ಹೊತ್ತಿಗೆ ಶಿವಪ್ಪ ಗಡಿಬಿಡಿಯಿಂದ ಬಂದ. ಜಗುಲಿಯ ಮೇಲೆ ಕುಳಿತ ಇವರನ್ನೆಲ್ಲ ನೋಡಿದವ ಗಾಬರಿಯಾದ.


ಸೀತಜ್ಜಿ ನಗುತ್ತಾ,  “ಎಂತ ಹೆದರ್ಬೇಡವೋ. ನಾ ಒಂದು ಮುಖ್ಯ ನಿರ್ಣಯ ಮಾಡ್ತಾ ಇದ್ದೆ ಅಷ್ಟೇ. ನೀನು ಬಾ ಕೂತ್ಕೋ”  ಎಂದು ಕರೆದಳು. 

ಸಂಕೋಚದಿಂದ ಜಗುಲಿಯ ತುದಿಯಲ್ಲಿ  ಕುಳಿತ ಶಿವಪ್ಪ .


“ವಿನಾಯಕ , ಈಗ ನಿನ್ನ ಯಾಕೆ ಕರಸಿದ್ದು ಅಂದ್ರೆ ,  ನೋಡು ನಮ್ಮನೆ ಜಮೀನಲ್ಲಿ ಅರ್ಧದಷ್ಟು ಆಗ ನನ್ ಮಗಳು ಯಮುನಾನ ಆಸ್ಪತ್ರೆ ಔಷಧಿ ಗೆ ಅಂತ ಮಾರಿದ್ದಾಯ್ತು. ಆದ್ರೂ ಪ್ರಯೋಜನ ಏನು ಆಗ್ಲಿಲ್ಲ “. ಸೀತಜ್ಜಿಯ ಮುಖದಲ್ಲಿ ವಿಷಾದ ಕಾಣುತ್ತಿತ್ತು . 


“ಇಷ್ಟು ವರ್ಷದಿಂದ ತೋಟದ್ದೆಲ್ಲ ಈ ರಾಮು ನೋಡ್ಕೋತಾನೆ. ನನ್ನ ಹೊಟ್ಟೆ ಬಟ್ಟೆ ಔಷಧಿ ಅಗತ್ಯದ ವಸ್ತುಗಳು ಎಲ್ಲಾ ಅವನೇ ತಂದು ಕೊಡ್ತಾನೆ.  ಇನ್ನು ಒಂದೆಕರೆ ಗದ್ದೆನ ಈ  ಶಿವಪ್ಪನೇ ಮಾಡ್ಸಿ ,ಕರಾರಿನ ಪ್ರಕಾರ  ಅವನ ಪಾಲಿನದು ಎಷ್ಟೋ ಅಷ್ಟೇ ಇಟ್ಟುಕೊಂಡು ಉಳಿದಿದ್ದೆಲ್ಲ  ಪ್ರಾಮಾಣಿಕವಾಗಿ ಇಲ್ಲಿ ತಂದು ಹಾಕಿ ಹೋಗ್ತಾನೆ . ಇವರಿಬ್ಬರಿಂದಾಗಿ ನಾನು ಇಷ್ಟು ವರ್ಷ ಜಮೀನಿನ ಚಿಂತೆ ಇಲ್ಲದೆ ಆರಾಮಾಗಿದ್ದೀನಿ.  ಈಗ ನಾಳೆ ನಾನು ಸತ್ತೊದ್ರೆ , ಇದೆಲ್ಲ ಅವರವರಿಗೆ  ಅಂತ ಆಗ್ಬೇಕು . ಹಾಗೆ ಈ ಮನೆನೂ . ಇದು ಅಜ್ಜಿಯ ಉಡುಗೊರೆ ಅಂತ ಶ್ರುತಿಗೆ ಕೊಡೋದು ಅಂತ ಮಾಡಿದ್ದೀನಿ.  ಸತ್ತೋದೆ ಅಂತ ಗೊತ್ತಾದ ಮೇಲೆ ನನ್ನನ್ನು ಇಲ್ಲೀ ವರೆಗೆ ಒಂದು ಸಲಾನೂ ನೋಡದೆ ಇರೋ ಯಾರೋ ಒಬ್ರು  ಯಾವುದೊ ಸಂಬಂಧದ ಎಳೆ ಹಿಡಕೊಂಡು ಆಸ್ತಿಗಾಗಿ ಬರಬಹುದು , ಆದ್ರೆ ನಾನು ಇಲ್ಲಿ ಒಬ್ಬಳೇ ಇದ್ರೂನು ಒಂಟಿ ಅಲ್ಲ ಅನ್ನೋ ಭಾವನೆ  ಇರೋದು ಇವರಿಂದ. ಇವರೇ  ನನ್ನ ಕುಟುಂಬ . ಹೀಗಾಗಿ ನನ್ನ ನಂತರ ಇದೆಲ್ಲ  ನ್ಯಾಯವಾಗಿ ಇವರಿಗೆ ಸೇರಲಿ ಅಂತ ನನ್ನಾಸೆ. ನೀನು ವಕೀಲ.  ಅದಕ್ಕೆ ನಿನ್ನೆದುರಿಗೆ ಹೇಳಿಬಿಟ್ರೆ ಸರಿ ಆಗಬಹುದು ಅಂತ ಅನಿಸ್ತು .. … ಸೀತಜ್ಜಿ  ನಿಲ್ಲಿಸಿದಳು . 


ರಾಮು ಸರೋಜಾ ಏನು ಹೇಳಲೂ ತೋಚದೆ ಕುಳಿತಿದ್ದರು. ಸರೋಜಾ ಸುರಿಯುವ ಕಣ್ಣೀರನ್ನು ಒರೆಸುವ ಪ್ರಯತ್ನ ಮಾಡುತ್ತಿದ್ದಳು. 


ಸ್ವಲ್ಪ ಹೊತ್ತಿಗೆ ಮತ್ತೇನೋ ನೆನಪಾದಂತೆ  , ಹಾಂ , ಜಮೀನಿನ ಉತ್ಪನ್ನ ಎಲ್ಲ ಮಾರಿ ಬಂದ ದುಡ್ಡು ಬ್ಯಾಂಕಲ್ಲಿ ರಾಮು ನನ್ನ  ಖಾತೆಯಲ್ಲಿ ಹಾಕ್ತಾ ಬಂದಿದ್ದಾನೆ.. ಎಷ್ಟಿದ್ಯೋ ಸರಿಯಾಗಿ  ಗೊತ್ತಿಲ್ಲ .  ಅದನ್ನ ಊರಿನ ಶಾಲೆಗೇ ದಾನ ಮಾಡ್ತೀನಿ  ಎಂದಳು ಸೀತಜ್ಜಿ 


ದಂಗಾಗಿ ಕುಳಿತಿದ್ದ ವಿನಾಯಕ ಗಂಟಲು ಸರಿ ಮಾಡಿಕೊಂಡ. 


“ಸೀತಜ್ಜಿ , ನಿಜ ಅಂದ್ರೆ ನಂಗೆ ಏನು ಹೇಳೋಕು ತಿಳಿತಾ ಇಲ್ಲ . ನಿನ್ನ ಮನಸ್ಸು ಅರ್ಥ ಆಗತ್ತೆ . ಸಂಕಟ  ತಿಳಿಯತ್ತೆ. ಈ ನಿನ್ನ ಇಚ್ಛೆ ತುಂಬಾ ದೊಡ್ಡ ಮನಸ್ಸಿಂದು .ಆದರೆ ನೀನು ಹೇಳ್ತಿರೋದು ಚಿಕ್ಕ ಪುಟ್ಟ ವಿಷಯ ಅಲ್ಲ.  ಇದೆಲ್ಲ ನಾವೂ ಬರೀ  ಮಾತಲ್ಲಿ ಹೇಳಿದ್ರೆ ಅದರಿಂದ ಏನು ಆಗಲ್ಲ. ನಿಂಗೆ ರಾಮು ನಿನ್ನ ಕುಟುಂಬ ದವನೇ ಅನ್ನೋ ಭಾವನೆ ಇದ್ರೂನು ಕಾನೂನು ಪ್ರಕಾರ ಅವನು ನಿನ್ನ ಉತ್ತರಾಧಿಕಾರಿ ಅಲ್ಲ. 

ಹೀಗಾಗಿ , ನಾವೂ ಏನು ಮಾಡಬೇಕು ಅಂದ್ರೆ , ನೀನು ಈಗ ಹೇಳಿದ್ದೆಲ್ಲ  ಕಡೆ ಪಕ್ಷ  ಒಂದು ಕಾಗದದ ಮೇಲೆ ಬರೆದು  ನಿನ್ನ ಸಹಿ  ಹಾಕ ಬೇಕು ,ಇಲ್ಲವೇ ಹೆಬ್ಬೆಟ್ಟು ಒತ್ತಬೇಕು  . ಅದಕ್ಕೆ ಸಾಕ್ಷಿದಾರರು ಬೇಕು . ಅದನ್ನ ಆಮೇಲೆ ರಿಜಿಸ್ಟರ್ ಮಾಡ್ಬೇಕು . ಆಗ ಮಾತ್ರ ಕಾನೂನು ಪ್ರಕಾರ ಮಾಡೋಕ್ ಬರದು “


ಸೀತಜ್ಜಿ  ಒಂದು ಗಳಿಗೆ ಸುಮ್ಮನೆ ಕುಳಿತಳು . ಆಮೇಲೆ  “ರಾಮು, ಹೋಗು ಕಾಗದ ಪೆನ್ನು ತಗಂಬಾ . ಹಾಗೆ ಶಾಯಿನೂ ತಗಂಬಾ “  ಎಂದು ಕಳಿಸಿದಳು. 


ಅವನು ಬಂದ ಮೇಲೆ  ವಿನಾಯಕನಿಗೆ  ನೀನೇ ಬರೆ  ಎಂದು ಈ ವರೆಗೆ ಹೇಳಿದ್ದನ್ನು ಪುನಃ  ಹೇಳಿ ಬರೆಸಿದಳು . ಎಲ್ಲ ಬರೆದಾದ ಮೇಲೆ  ವಿನಾಯಕ ಅದನ್ನೊಮ್ಮೆ ಓದಿ ಹೇಳಿದ.  ಆ ನಂತರ ಅಜ್ಜಿ  ಅದರ ಮೇಲೆ ಹೆಬ್ಬೆಟ್ಟು ಒತ್ತಿದಳು .


“ವಿನಾಯಕ,  ನೀನೇ ಸಾಕ್ಷಿದಾರ  ಅಂತ  ಸಹಿ ಮಾಡಿಬಿಡು . ಸಾಧ್ಯ ಆದ್ರೆ ನಾಳೆನೇ ರಿಜಿಸ್ಟರ್ ಮಾಡ್ಸು .”


“ಆಗ್ಲಿ ಅಜ್ಜಿ . ಆದಷ್ಟು ಬೇಗ ರಿಜಿಸ್ಟರ್ ಮಾಡ್ಸಿ ಕೊಡ್ತೀನಿ . “

 

“ ವಿನಾಯಕ , ವಕೀಲ್ರೆಲ್ಲ ಜಾಸ್ತಿ ಫೀಸ್  ತಗೋತಾರೆ ಅಂತ ಆಗಿನ್ ಕಾಲದಲ್ಲೇ ನಮ್ಮ ಯಜಮಾನ್ರು ಹೇಳ್ತಾ ಇದ್ರು.ನಿನ್ನ ಫೀಸ್ ಕೊಡೋಕೆ ನನ್ನತ್ರ ಈಗ ದುಡ್ಡಿಲ್ಲ .   ಅದನ್ನ ಆ ಬ್ಯಾಂಕಿಂದ ಬರೋ ದುಡ್ಡಲ್ಲಿ ಮುರಕೊಂಡು ಬಿಡು” ಎಂದು ನಕ್ಕಳು 


 ಅಜ್ಜೀ … ಎಂದ ವಿನಾಯಕನ ದನಿ ಒದ್ದೆ ಆಗಿತ್ತು. 


ಸ್ವಲ್ಪ ಹೊತ್ತು ಅಲ್ಲಿ ಮೌನವೇ ಆವರಿಸಿತ್ತು.ಸರೋಜಾಳ ಸಣ್ಣದಾಗಿ ಬಿಕ್ಕುವ ಸದ್ದು ಬಿಟ್ಟರೆ.ರಾಮುವಿಗೆ ಮನಸ್ಸು ಭಾರವಾಗಿದ್ದು ಕೃತಜ್ಞತೆಗೋ, ನೋವಿಗೋ ತಿಳಿಯಲಾರದಂತಾಗಿತ್ತು.  ಶಿವಪ್ಪ ಇನ್ನೂ ಸುಧಾರಿಸಿಕೊಳ್ತಾ  ಇದ್ದ . 


ಹೂಂ, ಸರಿ. ವಿನಾಯಕ ಇದೊಂದು ಕೆಲಸ ಆದಷ್ಟು ಬೇಗ ಮಾಡ್ಕೊಡು.

ರಾಮು ಸರೋಜಾ, ನಡಿರಿ ಮನೆಗೆ. ನಂಗೂ ಹಸಿವಾಗ್ತಿದೆ.ನಾನೂ ಇನ್ನು  ಊಟಾ ಮಾಡ್ತೀನಿ. ಎಂದು ಅಜ್ಜಿ ಏಳ ತೊಡಗಿದಳು.


ಅತ್ತ ಕೆಳ ಜಗುಲಿಯ ಮೇಲೆ ಕುಳಿತಿದ್ದ ಶಿವಪ್ಪ ಏನೂ ಹೇಳಲೂ ತಿಳಿಯದೆ ಎದ್ದು ಬಂದು ಸೀತಜ್ಜಿಯ ಕಾಲಿಗೆ ಬಿದ್ದ. 

ಅಮ್ಮಾ, ನಾ ಎಂತ ಹೇಳುಕು ಆಗುದಿಲ್ಲ. ನೀವು ದೇವ್ರಂತವ್ರು ಎನ್ನುತ್ತಾ ಕೈಮುಗಿದು ನಿಂತ.


ಜೋರಾಗಿ ನಕ್ಕ ಅಜ್ಜಿ,  ಆ ಮಟ್ಟಕ್ಕೆ ಏರಿಸ್ಬೇಡ ಮಾರಾಯ. ಆ ದೇವ್ರಿಗ್ ನನ್ ಮೇಲೆ ಇನ್ನೂ ಸಿಟ್ಟು ಬಂದ್ರೆ ಕಷ್ಟ.  ಮನಿಗ್ ಹೋಗು ಇನ್ನು.


ಎನ್ನುತ್ತಾ ಎದ್ದು ದೇವರ ಕೋಣೆಯ ಕಡೆ ನಡೆದ ಸೀತಾಜ್ಜಿಯ ಮನದಲ್ಲಿ ಶಾಂತಿ ನೆಲೆಸಿತ್ತು. ಊಟ ಮುಗಿಸಿ  ಮಲಗಿದ ಅಜ್ಜಿಗೆ ಹಾಯಾಗಿ ನಿದ್ರೆ ಆವರಿಸಿತು. 

February 28, 2022

ಸಾಕ್ಷಿ

 ಅಲ್ಲಿ ಆಗಿದ್ದನ್ನು ನೋಡಿದವನ ಎದೆ ಧಸಕ್ ಎಂದಿತು ! ಏನು ಮಾಡುವುದೋ ತೋಚದಂತಾಯಿತು .

ಒಂದು ಸಣ್ಣ ದೌರ್ಬಲ್ಯದಿಂದ ಆದ ಅನಾಹುತಕ್ಕೆ  ಹಳ ಹಳಿಸಿದ .   ಗಡಿಯಾರ ನೋಡಿದ .  ಇನ್ನು ಹೆಚ್ಚೆಂದರೆ ಇಪ್ಪತ್ತು ನಿಮಿಷದೊಳಗೆ ಅವಳು ಬರುತ್ತಾಳೆ . ಅಷ್ಟರಲ್ಲಿ , ಇಲ್ಲಿ ನಡೆದುದರ  ಕುರುಹೇ ಇಲ್ಲದಂತೆ ಮಾಡಬೇಕು ! ಅವಳಿಗೆ ಗೊತ್ತಾದರೆ   ಏನಾಗಬಹುದೆಂದು ಯೋಚಿಸಿಯೇ  ಅವನು ಬೆವರುತ್ತಿದ್ದ .

ಊಹ್ಞೂ  ಯೋಚಿಸುತ್ತಾ ನಿಲ್ಲಲು ಸಮಯವಿಲ್ಲ ! ತಕ್ಷಣ ಎಚ್ಚೆತ್ತುಕೊಂಡು ಕಾರ್ಯ ಪ್ರವೃತ್ತನಾದ !  ಎದುರಿಗೆ ಸಾಕ್ಷಿಯಾಗಿದ್ದೆಲ್ಲವನ್ನೂ ಬದಿಗೆ ಒತ್ತಿದ . ಮೊದಲು ಬರೀ ನೀರು ಹಾಕಿ  ಒರೆಸಿದ , ಹೋಗಲಿಲ್ಲ , ನಂತರ ಸೋಪ್ ಹಾಕಿ ಬ್ರಶ್ ನಿಂದ ತಿಕ್ಕಿದ , ಎಲ್ಲೂ ಕಲೆ  ಕಾಣದಂತೆ , ಈ ಘಟನೆಯೇ  ನಡೆದಿಲ್ಲ ಎನ್ನುವಂತೆ ಮಾಡುವುದು ಅಷ್ಟು ಸುಲಭವಿರಲಿಲ್ಲ ! ಮೂರು -ಮೂರು ಸಲ  ಸೋಪ್ ಹಚ್ಚಿ , ಬ್ರಶ್ ನಿಂದ ತಿಕ್ಕಿ , ಆಮೇಲೆ ಬಟ್ಟೆಯಿಂದ ಉಜ್ಜಿ ಉಜ್ಜಿ ಒರೆಸಿದ ಮೇಲೆ  ಅಂತೂ  ಒಂದು ಹಂತಕ್ಕೆ ಬಂತು . ಇನ್ನು ಐದೇ ನಿಮಿಷ ! ಅಷ್ಟರಲ್ಲಿ ಮತ್ತೊಮ್ಮೆ  ಎಲ್ಲವನ್ನೂ ಪರಿಶೀಲಿಸಿದ . ಅವಳಿಗೆ ಖಂಡಿತ   ತಿಳಿಯಲಾರದು ಎಂಬ ವಿಶ್ವಾಸ ಬಂತು. ತನ್ನ ಕೆಲಸಕ್ಕೆ ತಾನೇ ಬೆನ್ನು ತಟ್ಟಿಕೊಂಡ! 

ಬೆಲ್ ಹೊಡೆದು ಕೊಂಡಿತು . ಢವಗುಟ್ಟುತ್ತಿದ್ದ  ಎದೆಯೊಂದಿಗೆ  ಬಾಗಿಲು ತೆಗೆದ.  ಬಂದವಳನ್ನು ನಗುಮುಖದಿಂದ ಸ್ವಾಗತಿಸಿದ. ದೇವರೇ , ಆಗಿದ್ದು ಅವಳಿಗೆ  ತಿಳಿಯದಿರಲಿ ಎಂದು ಪ್ರಾರ್ಥಿಸುತ್ತ ಅಲ್ಲೇ ಓರೆಗಣ್ಣಲ್ಲಿ ತಾನು ಸ್ವಚ್ಛಗೊಳಿಸಿದತ್ತ ನೋಡಿ ಸಮಾಧಾನಗೊಂಡ. 

ಅವಳು ಎಂದಿನಂತೆ ಬ್ಯಾಗ್ ನ್ನು ರೂಮ್ ನಲ್ಲಿ ಟೇಬಲ್ ಮೇಲಿಟ್ಟು , ಕೈ ಕಾಲು ತೊಳೆದು ಅಡುಗೆ ಮನೆಗೆ ಹೋದಳು .

ಅವನೂ ರಿಲ್ಯಾಕ್ಸ್  ಆಗಿ  ಸೋಫಾ ಮೇಲೆ ಕುಳಿತು  ಚಾನಲ್ ಬದಲಾಯಿಸತೊಡಗಿದ!


ಆಗಲೇ ಅವಳು ಜೋರಾಗಿ ಕರೆದಳು !  ಇವನೂ ಓಡಿದ . 

ಅವಳು  ಇವನತ್ತ ಸೀರಿಯಸ್ ಆಗಿ ನೋಡುತ್ತಾ ಕೇಳಿದಳು . "ನೀನು ಕ್ಲೀನ್ ಮಾಡಿದ್ರೆ ನಂಗೇನು ಗೊತ್ತಾಗಲ್ಲ ಅಂದ್ಕೊಂಡ್ಯಾ?  ಎಷ್ಟ್ ಸತಿ ಹೇಳಿದೀನಿ ನಿಂಗೆ  ನಾನು ಬಂದಮೇಲೆ ಎಲ್ಲ ಮಾಡ್ತೀನಿ , ನೀನು ಹಾಲು ಸ್ಟವ್ ಮೇಲಿಟ್ಟು ಕ್ರಿಕೆಟ್  ನೋಡ್ತಾ ಕೂತ್ಕೋಬೇಡ ಅಂತ !!! ".......

ಅವಳು  ಇನ್ನೂ ಏನೇನೋ ಹೇಳ್ತಾ ಇದ್ದಳು . ಇವನ ಕಿವಿಗೆ ಬೀಳಲಿಲ್ಲ !

ಇಷ್ಟು ಕ್ಲೀನ್ ಮಾಡಿದ್ರೂ ಅದು ಅವಳಿಗೆ ಗೊತ್ತಾಗಿದ್ದು ಹೇಗೆ  ಅಂತ  ಅವನು ಯೋಚಿಸ್ತಾ ಇದ್ದ . 

ಅತ್ತ ಇವನೇ ಬದಿಗೆ ಇಟ್ಟಿದ್ದ , ಹಾಲು ಉಕ್ಕಿ ಕರೆಗಟ್ಟಿದ್ದ ಹಾಲಿನ ಪಾತ್ರೆ ಇವನನ್ನು ಅಣಕಿಸುತ್ತಿತ್ತು ! 

ಒಲೆ, ಅಡುಗೆ ಕಟ್ಟೆ  ಎಲ್ಲವನ್ನೂ ಉಜ್ಜಿ ಚೊಕ್ಕಟಗೊಳಿಸಿದವನು ಹಾಲಿನ ಪಾತ್ರೆಯನ್ನು  ಮರೆತೇ ಬಿಟ್ಟಿದ್ದ!! 


December 20, 2021

ಸಂಶಯ

 ಸಂಬಂಧಿಕರೊಬ್ಬರ ಮನೆಯ ಕಾರ್ಯಕ್ರಮದಿಂದ ಬಂದು ಸೀರೆ ಬದಲಿಸುತ್ತಿದ್ದವಳ ಲಕ್ಷ್ಯಕನ್ನಡಿಯಲ್ಲಿ ಕಾಣುತ್ತಿದ್ದ ಪ್ರತಿಬಿಂಬದತ್ತ ಹೋಯಿತು . ಸೂಕ್ಷ್ಮವಾಗಿ ಗಮನಿಸಿದಳು !

ಕಳೆಯಿರದ  ಆಳಕ್ಕಿಳಿದ ಕಣ್ಣಿನ ಸುತ್ತ ಕಪ್ಪು ವರ್ತುಲ. ಕಣ್ಣಂಚಿನಲ್ಲಿ ಸಣ್ಣದಾಗಿ ಮೂಡಿದ ಹತ್ತಾರು ಗೆರೆಗಳು, 
ಹೊಳಪಿರದ ಕೆನ್ನೆ , ಕೊಂಚ ಜಗ್ಗಿದ ಗಲ್ಲ, ಹಣೆಯ ಮೇಲೆ ಕಂಡೂ ಕಾಣದ ಒಂದೆರಡು ನೆರಿಗೆಗಳು, ಮೊದಲು ದಟ್ಟವಾಗಿದ್ದ , ಈಗ  ಉದುರಿ ತೆಳುವಾದ ,ಹಚ್ಚಿದ ಬಣ್ಣ ಮಾಸುತ್ತಿರುವ ಕೂದಲು 
ಚರ್ಮ ಸಡಿಲಾದ ಕತ್ತು , ಬಿಗಿಯಿರದ ಎದೆ , ಹಲವು ಸುತ್ತು ದಪ್ಪವಾದ ಸೊಂಟ  .... ನೋಡುತ್ತಾ ನೋಡುತ್ತಾ ಹೊಟ್ಟೆಯಲ್ಲಿ ಏನೋ ತಳಮಳವಾಯಿತು.  ಕನ್ನಡಿಯಲ್ಲಿ ಕಾಣುತ್ತಿರುವುದು ,ಪಕ್ಕದ ಟೇಬಲ್ ಮೇಲಿದ್ದ  ದಶಕಗಳ ಹಿಂದಿನ ಫೋಟೋದಲ್ಲಿದ್ದ  ತನ್ನ ನೆರಳು ಎಂದು ಅವಳಿಗೆ ಭಾಸವಾಯಿತು . ಜೊತೆಗೆ , ಸಂಕಟ ಹೆಚ್ಚಿತು. 

ಟೇಬಲ್ ಮೇಲಿನ ಫೋಟೋವನ್ನು ಕೈಗೆತ್ತಿಕೊಂಡು ನೋಡಿದಳು . ಮದುವೆಯ 10ನೇ ವಾರ್ಷಿಕೋತ್ಸವದಲ್ಲಿ ತೆಗೆದ ಫೋಟೋ . ಅದರಲ್ಲಿ ತಾನೆಷ್ಟು ಬೇರೆಯೇ ಕಾಣುತ್ತಿದ್ದೆ ಎಂದುಕೊಂಡಳು . ಮುಖದಲ್ಲಿ ಸಂತೋಷದ ಕಳೆಯಿತ್ತು .  ಆ ಫೋಟೋ ನೋಡಿ ಎಷ್ಟೊಂದು ಜನ  ಎಷ್ಟು ಮುದ್ದಾಗಿ ಕಾಂತೀಯ ಒಂದು ದೃಷ್ಟಿ ತೆಗೆಸಿಕೊ ಎಂದೆಲ್ಲ ಹೇಳಿದ್ದು ನೆನಪಾಯಿತು.  ಹಾಗೆ ಕಣ್ಣು ಗೋಡೆಯ ಮೇಲೆ ಹಾಕಿದ್ದ ಮತ್ತೊಂದು ಫೋಟೋದತ್ತ ಹೋಯಿತು.  ಮಕ್ಕಳಿಬ್ಬರ ಜೊತೆ ತೆಗೆಸಿದ್ದು !  ಅದನ್ನು ನೋಡಿದವರೆಲ್ಲ  " ಇದನ್ನ ನೋಡಿದ್ರೆ, ನೀನು ಅಮ್ಮ ಅಲ್ಲ ,ಅವರಿಬ್ಬರ ಅಕ್ಕನ ತರಾ ಕಾಣ್ತೀಯಾ  "  ಎಂದು ಹೇಳುವಾಗ ಎಷ್ಟು ಹೆಮ್ಮೆ ಆಗಿತ್ತು ! ಅದೆಲ್ಲ ನೆನಪಾದಾಗ ಅವಳ ಮುಖದಲ್ಲಿ ವಿಷಾದ ದಟ್ಟವಾಗುತ್ತಿತ್ತು . 
ಮತ್ತೆ ಮತ್ತೆ ಫೋಟೋಗಳನ್ನೂ ಕನ್ನಡಿಯನ್ನೂ ನೋಡುತ್ತಿದ್ದವಳಿಗೆ  ತಾನು ನಿಜಕ್ಕೂ  ಕೆಟ್ಟದಾಗಿ ಕಾಣುತ್ತಿದ್ದೇನಾ  ಎನಿಸಿ  ಅಳುವೇ ಬಂದಂತಾಯಿತು.. 
ಕೊನೆಗೊಮ್ಮೆ ಎಚ್ಚರವಾಗಿ  ಧಡಬಡಿಸಿಕೊಂಡು ಸೀರೆ ಬದಲಿಸಿ ಹೊರಗೆ  ಹೆಜ್ಜೆ  ಹಾಕಿದಳು .
  
ಆ ದಿನವಿಡೀ ಮನಸಿಗೆ ಕಸಿವಿಸಿ , ಸಂಶಯ . ನೆಮ್ಮದಿಯೇ ಇಲ್ಲ . ಗಂಡನಿಗೂ  ಹೀಗೆ ಅನಿಸಿರಬಹುದೇ? ನಿನ್ನ ನೋಡಿದ ತಕ್ಷಣ ನಾನು ಕ್ಲೀನ್ ಬೋಲ್ಡ್ ಆಗಿದ್ದೆ ಕಣೆ  ಎಂದು ಗಂಡ ಹೇಳ್ತಾ ಇದ್ದಿದ್ದು ನೆನಪಾಯ್ತು. ಈಗ? ತನ್ನ ಮೇಲಿನ ಆಸಕ್ತಿ ಕಮ್ಮಿ ಆಗಿರಬಹುದೇ? ಹಾಗೇನಾದರೂ ಆಗಿ  ಬೇರೆ ಯಾರಾದರೂ ಚಂದ ಕಂಡು.... ... 
ತಕ್ಷಣ , ಇಂಥಾ ಆಲೋಚನೆ ಮಾಡಿದ್ದರ ಬಗ್ಗೆ  ತನಗೆ ತಾನೇ ಬೈದುಕೊಂಡಳು. ಆದರೂ ಸಮಾಧಾನವಿಲ್ಲ.
 
 ಬೆಳಿಗ್ಗೆ  ತಿಂಡಿ ತಿನ್ನುತ್ತಾ  ಹಿಂದಿನ ದಿನದ ಕಾರ್ಯಕ್ರಮದ ಬಗ್ಗೆ ಮಾತನಾಡುತ್ತಿದ್ದಾಗ ಗಂಡ ಇದ್ದಕ್ಕಿದ್ದ ಹಾಗೆ  "  ಎಷ್ಟು ವರ್ಷ ಆದ್ಮೇಲೆ ಸತೀಶ ಸಿಕ್ಕಿದ ನಿನ್ನೆ ! ಅವನ  ಹೆಂಡತಿ ರಶ್ಮಿ ಚೂರೂ ಬದಲಾಗಿಲ್ಲ ನೋಡು! ಹತ್ತು ವರ್ಷದ ಹಿಂದೆ ಹೇಗಿದ್ಲೋ ಹಾಗೆ ಇದಾಳೆ" ಎಂದಾಗ  ಕಸಿವಿಸಿ ಹೆಚ್ಚೇ ಆಯಿತು.

ಅಂದು ರಾತ್ರಿ ಮಲಗುವ ಮುನ್ನ ಸ್ವಲ್ಪ ಹೆಚ್ಚೇ ಹೊತ್ತು  ಕನ್ನಡಿ ನೋಡಿದಳು .
ನಂತರದ  3-4 ದಿನಗಳು ಹೀಗೆ  ಕಳೆದವು. 
 ಗಂಡನ ಪ್ರತಿ ಮಾತು  ನಡವಳಿಕೆಯಲ್ಲೂ ತನ್ನ ಬಗ್ಗೆ ನಿರಾಸಕ್ತಿ ಕಾಣಿಸುತ್ತಿದೆ ಎಂದೆನಿಸ ತೊಡಗಿತು. 
ಕೇಳಿಬಿಡಲೇ? ಅಂದುಕೊಂಡಳು. ಅದರ ಹಿಂದೆಯೇ , ಛೆ, ಯಾವ ರೀತಿ ಯೋಚನೆ ಮಾಡುತ್ತಿದ್ದೇನೆ  ಎಂದು ನಾಚಿಕೆಯೂ ಆಗಿ ಸುಮ್ಮನಿದ್ದಳು . 

ಕೊನೆಗೆ ಅಂತೂ ಧೈರ್ಯ ಮಾಡಿಕೊಂಡು ಒಂದು ರಾತ್ರಿ ಗಂಡನೆದುರು ವಿಷಯ ಪ್ರಸ್ತಾಪಿಸಿದಳು. 
" ರೀ, ಒಂದು ವಿಷಯ ಕೇಳಬೇಕಿತ್ತು "  

" ಅದಕ್ಕೇನು ಪೀಠಿಕೆ? ಕೇಳು " ಮೊಬೈಲಿಂದ ಕಣ್ಣು ಸರಿಸದೆ ಕೇಳಿದ.

" ನಾನು ಇತ್ತೀಚೆ ತುಂಬಾ ಕೆಟ್ಟದಾಗಿ ಕಾಣ್ತಿದೀನ ?" 

ಅವನು ಆಶ್ಚರ್ಯದಿಂದ ಮೊಬೈಲ್  ಬದಿಗಿಟ್ಟು ಅವಳ ಮುಖ ನೋಡಿದ. 
"ಏನು ಹಾಗಂದ್ರೆ? "

"ಅಂದ್ರೇ,..... ತುಂಬಾ ವಯಸ್ಸಾದ ಹಾಗೆ ಕಾಣತಾ ಇದೀನ? "

" ಯಾಕೆ? ಏನಾಯ್ತು  ಇದ್ದಕ್ಕಿದ್ದ ಹಾಗೆ? " ಅವನು ಅನುಮಾನದಿಂದ ಕೇಳಿದ 

 "ಏನೂ ಇಲ್ಲ. ಯಾಕೋ  ಕನ್ನಡಿ ನೋಡೋವಾಗ ಹಾಗೆ ಅನಿಸ್ತು ."

" ಎಷ್ಟು ಸಲ ಹೇಳಿದೀನಿ ಕನ್ನಡಕ ಹಾಕೊಂಡಿರು ಅಂತ . ಕೇಳಲ್ಲ ನೀನು."  ತಮಾಷೆ ಮಾಡುತ್ತಾ ನಕ್ಕು ಬಿಟ್ಟ .

" ರೀ, ನಾನು ಸೀರಿಯಸ್ ಆಗಿ ಕೇಳ್ತಾ ಇದೀನಿ " ಅವಳ  ಅಳುದನಿ .  

" ಹ್ಮ್ಮ್ . ನಂಗೇನು ಹಾಗೆ ಅನಿಸಲ್ವೇ ? ನೀನು ಸದಾ ಸುಂದರಿ ನನ್ನ ಕಣ್ಣಿಗೆ . " ಪ್ರೀತಿಯಿಂದ ಕೆನ್ನೆ ತಟ್ಟಿದ .
  ಆದರೆ ನಿಂಗ್ಯಾಕೆ ಹಾಗೆ ಅನಿಸ್ತಾ ಇದೆ ?

" ಏನೋ , ಹಳೆ ಫೋಟೋ ಕ್ಕೂ ಕನ್ನಡಿಲಿ ಕಾಣೋ ರೂಪಕ್ಕೂ ತುಂಬಾ ವ್ಯತ್ಯಾಸ ಇದೆ ಅನಿಸ್ತು ."....   

ಆಶ್ಚರ್ಯದಿಂದ ಕೆಲ   ಸೆಕೆಂಡ್ ಅವಳ ಮುಖ ದಿಟ್ಟಿಸಿದವನು ನಕ್ಕು ಬಿಟ್ಟ.

" ಹಹಹ..ಒಳ್ಳೆ ಕಥೆ ಕಣೆ ನಿಂದು !  ವಯಸ್ಸಾದ ಹಾಗೆ ಬದಲಾಗಲ್ವೇನೇ?
 ಈಗ ನೋಡು ಈ ಫೋಟೋದಲ್ಲಿ ನಾನು ಹೇಗಿದ್ದೆ ! ತಲೆ ತುಂಬಾ ಕಪ್ಪು ಕೂದಲು ಒಳ್ಳೆ ಹದವಾದ ಮೈಕಟ್ಟು .. ಈಗ ನೋಡು , ತಲೆ ಬೋಳು , ಇರೋ ಕೂದಲೂ ಬಿಳಿಯಾಗಿದೆ , ಹೊಟ್ಟೆ  ಬಂದಿದೆ .. "

ಅವನನ್ನೊಮ್ಮೆ ನೋಡಿದವಳಿಗೆ .. ಹೌದಲ್ಲ, ತಾನು ಫೋಟೋದಲ್ಲಿ  ಇದನ್ನು ಗಮನಿಸಿಯೇ ಇಲ್ಲ  ಅನಿಸಿತು .

"ಅದು ಸರಿ , ಆದರೂ ತಲೇಲಿ ಒಂಥರಾ ಯೋಚನೆಗಳು ... " ದ್ವನಿ ಮೆತ್ತಗಾಯಿತು 

"ಏನು ಯೋಚನೆ ಅಮ್ಮಾವ್ರಿಗೆ  ?"

" ಅದೂ .. ಮತ್ತೆ .. ನೀವು ತಪ್ಪು ತಿಳೀಬಾರದು ."  ಅನುಮಾನಿಸಿದಳು .

"25 ವರ್ಷ ಆಯ್ತು ಮದ್ವೆ ಆಗಿ , ಇನ್ನೂ ಹೀಗೆ ಮಾಡ್ತಿಯಲ್ಲೇ? "

" ಅಲ್ಲಾ.. ನಾನು  ನೋಡೋಕೆ ಚೆನ್ನಾಗಿದ್ದೆ  ಅಂತ ನೀವು ಮೊದಲನೇ ಸಲ ನೋಡಿದಾಗಲೇ ಮೆಚ್ಚಿಕೊಂಡಿದ್ದು ಅಂದಿದ್ರಿ ಅಲ್ವ? " 

" ಹ್ಮ್ಮ್... ಹೌದು ಅದು ನಿಜ. "

 " ಮತ್ತೇ.. ಈಗ  ಮುಂಚಿನ ತರಾ ಇಲ್ಲ ಅಂತ ಅನಿಸಿ  ನೀವೇನಾದ್ರೂ ಬೇರೆ ...  "   ಅಲ್ಲಿಗೆ ನಿಲ್ಲಿಸಿದಳು .

ಎರಡು ಕ್ಷಣ ಅವಳನ್ನು ದಿಟ್ಟಿಸಿದವನು ಅವಳು ಹೇಳಿದ್ದು ಅರ್ಥವಾಗುತ್ತಲೇ  ನಕ್ಕು ಬಿಟ್ಟ 
"ನಾನೇನಾದ್ರೂ  ಬೇರೆ ಏನು?  ಗರ್ಲ್ ಫ್ರೆಂಡ್  ಮಾಡ್ಕೊಂಡಿದೀನಿ ಅಂತಾನ?"   ಜೋರಾಗಿ ನಕ್ಕವನು , ಅವಳ ಅಳುಮೋರೆ ನೋಡಿ ಬಳಿ ಸೆಳೆದುಕೊಂಡ.  ಅವಳನ್ನು ಬಳಸುತ್ತಾ ಹೇಳಿದ 
"  ಒಬ್ಬರನ್ನೇ ಸುಧಾರಿಸೋದು ಕಷ್ಟ ನಂಗೆ ..  ಇನ್ನು ಗರ್ಲ್ ಫ್ರೆಂಡ್  ಮ್ಯಾನೇಜ್ ಮಾಡೋಕಾಗಲ್ಲ ಅಮ್ಮಾವ್ರೇ.  ಅಷ್ಟಕ್ಕೂ ಈ ಮುದುಕನ ಹಿಂದೆ ಯಾರೇ ಬರ್ತಾರೆ? ಇಂಥಾದ್ದೆಲ್ಲಾ ಯೋಚನೆ ಬರತ್ತಲ್ಲ ನಿಂಗೆ?  ಕರ್ಮಾ ! "

ಅವಳು ತನ್ನ ಯೋಚನೆಯ ಬಗ್ಗೆ ತಾನೇ ನಾಚಿಕೊಂಡಳು .
" ಸಾರಿ ರೀ . ಅದೂ, ಯಾಕೋ ಹಾಗನಿಸ್ತು ನಂಗೆ. ಕೇಳಿಬಿಟ್ಟೆ. ನಿಜಕ್ಕೂ ಸಾರಿ " 

" ಅಲ್ಲ ಕಣೆ , ನಾನು ಹೀಗೆ ಕೇಳಬಹುದಾ? ಈ ಮುದುಕ ಗಂಡ ಬೇಜಾರಾಯ್ತು ಹೊಸಾ ಹುಡುಗನ್ನ ಹುಡುಕೋಣ ಅಂತ ನೀನು ಪ್ಲಾನ್  ಹಾಕಿದೀಯಾ  ಅಂತ ?"
 
" ಸುಮ್ನಿರಿ ಸಾಕು"   ಎಂದು ಅವನ ತೋಳಿಗೆ ಗುದ್ದಿ ಗಟ್ಟಿಯಾಗಿ ಅಪ್ಪಿಕೊಂಡಳು 

October 2, 2021

ಅಭಿಮಾನಿ !

 

ಕೈಲಿದ್ದ ಪತ್ರವನ್ನು ಮತ್ತೊಮ್ಮೆ ಓದುತ್ತಿದ್ದೆ !  ಮುಜುಗರವೋ, ಸಂತೋಷವೋ ತಿಳಿಯದ ಪರಿಸ್ಥಿತಿ .

 

" ನಾನು ನಿಮ್ಮ ಅಭಿಮಾನಿ . ತುಂಬಾ  ಜನ ಹೇಳ್ತಿರಬಹುದು. ಹಾಗೆಯೇ ಇವನೂ ಕೂಡ ಅಂದ್ಕೊ ಬೇಡಿ . 

 4 ವರ್ಷಗಳ ಹಿಂದೆ ಮೊದಲ ಬಾರಿಗೆ  ನಿಮ್ಮ ಕಥೆ ಓದಿದಾಗಿಂದ ನಿಮ್ಮ ಕಥಾ ಶೈಲಿ ತುಂಬಾ ಇಷ್ಟವಾಗಿ ಹೋಯ್ತು . ಮನುಷ್ಯ ಸಂಬಂಧಗಳು, ಭಾವನೆಗಳು , ತುಮುಲಗಳನ್ನು  ಚಂದವಾಗಿ  ಶಬ್ದಗಳಲ್ಲಿ ಬಿಚ್ಚಿಡುತ್ತೀರಿ ನೀವು . ಇಲ್ಲಿಯವರೆಗೆ ಪ್ರಕಟವಾಗಿರುವ  ನಿಮ್ಮ ಕಥೆಗಳು  ಎಲ್ಲವನ್ನೂ ಓದಿದ್ದೇನೆ . ನಮ್ಮ ಏರಿಯಾದಲ್ಲಿರುವ ಲೈಬ್ರರಿಯ ಹಳೆಯ ಸದಸ್ಯ ನಾನು.  ಅಲ್ಲಿ ಬರುವ ಎಲ್ಲ ಪತ್ರಿಕೆಗಳನ್ನು ತಪ್ಪದೆ ಓದುತ್ತೇನೆ. ಯಾವುದರಲ್ಲಾದರೂ ನಿಮ್ಮ ಕಥೆ  ಬಂದಿದ್ದರೆ , ಆ ಪತ್ರಿಕೆಯನ್ನು ಕೊಂಡು ಕೊಳ್ಳುವೆ . ಇಲ್ಲಿಯವರೆಗೆ ಓದಿದ ಎಲ್ಲ ಕಥೆಗಳ  ಪುಟಗಳನ್ನೂ ತೆಗೆದು ಫೈಲ್  ಮಾಡಿ ಇಟ್ಟಿದ್ದೇನೆ . ಮತ್ತೆ ಮತ್ತೆ ಓದುತ್ತೇನೆ  . 

ನಿಮ್ಮ ಬಗೆಗಿನ ನನ್ನ  ಅಭಿಮಾನ ಅತಿಯಾಗುತ್ತಾ, ಒಳಗೊಳಗೇ  ನಿಮ್ಮನ್ನು ಪ್ರೀತಿಸುತ್ತಿದ್ದೇನಾ ಎಂಬ ಸಂಶಯ ನನಗೆ ಇತ್ತೀಚೆ ಬರುತ್ತಿದೆ . 

ಇಲ್ಲಿಯವರೆಗೆ ನಿಮ್ಮ ಭಾವಚಿತ್ರ ವನ್ನು ಎಲ್ಲೂ ನೋಡಿಲ್ಲ  ಆದರೆ ನೀವು ಹೇಗಿರಬಹುದು  ಎಂದು ಕಲ್ಪನೆ ನನ್ನ ತಲೆಯಲ್ಲಿದೆ . ನಿಮ್ಮದು  ಸುಮಾರು 25-32 ರ ಒಳಗಿನ ವಯಸ್ಸು ಎಂದು ನನ್ನ ಅನುಮಾನ .  ನಿಮ್ಮ ಕಥಾ ನಾಯಕಿಯರಲ್ಲಿ ನಿಮ್ಮ ರೂಪವನ್ನು ಕಲ್ಪಿಸಿಕೊಳ್ಳುತ್ತೇನೆ  

‘ಮುಗುಳ್ನಗು’ ವಿನ  ಸ್ಮಿತಾಳಂತೆ   ಕೆನ್ನೆ ಮೇಲೆ ಗುಳಿ ,  " ಜೊತೆಯಾಗಿ"  ಕಥೆಯ  ರಾಧಾಳಂತೆ ಉದ್ದ ಜಡೆ , 'ಕರೆವುದು  ದೂರ ತೀರ ' ದ ಸುನೀತಾಳಂತೆ ಬಟ್ಟಲುಗಣ್ಣು  ..  

ಇವನೆಂತಾ ತಿಕ್ಕಲು ಎಂದು ಕೋಪಿಸಿಕೊಳ್ಳಬೇಡಿ .  ಇಷ್ಟು ವರ್ಷಗಳ ನಂತರ ಇಂದು ಧೈರ್ಯ ಮಾಡಿ ನನ್ನ ಮನಸ್ಸನ್ನು  ನಿಮ್ಮೆದುರು ತೆರೆದಿಡುವ ಪ್ರಯತ್ನ  ಮಾಡುತ್ತಿದ್ದೇನೆ. 

ನಿಮ್ಮನ್ನು ಒಂದೇ ಒಂದು ಸಲವಾದರೂ ಭೇಟಿಯಾಗ ಬೇಕೆನಿಸುತ್ತಿದೆ. ದಯವಿಟ್ಟು ಇಲ್ಲವೆನ್ನ ಬೇಡಿ.  ನನ್ನ ಕೋರಿಕೆಯನ್ನು ತಪ್ಪು ತಿಳಿಯದೆ ನನಗೆ ನಿಮ್ಮನ್ನು  ಎದುರಿಗೆ ನೋಡುವ ಅದೃಷ್ಟ ಕಲ್ಪಿಸಿಕೊಡಿ . 

ನಿಮ್ಮ ಅಭಿಮಾನಿ ಆಕಾಶ್ "

ಅವನು ನನ್ನ ವಯಸ್ಸನ್ನೂ ಸುಮಾರು ಸರಿಯಾಗೇ ಅಂದಾಜಿಸಿದ ಬಗ್ಗೆ ಆಶ್ಚರ್ಯವಾಯ್ತು . 

ಬಹುದಿನಗಳ ಕಾಲ ಅಳೆದೂ ಸುರಿದೂ ಕೊನೆಗೊಮ್ಮೆ ಗಟ್ಟಿ ಮನಸ್ಸು ಮಾಡಿ ಈ ಅಭಿಮಾನಿ ಯಾರು ಎಂದು ನೋಡಿಯೇ ಬಿಡೋಣ ಎಂದು  ನಿರ್ಧರಿಸಿದ್ದಾಗಿತ್ತು. ಸೂಚಿಸಿ ಮೇಲ್  ಕಳಿಸಿದ ನಂತರ ಐವತ್ತು ಸಲವಾದರೂ ಥ್ಯಾಂಕ್ಸ್  ಹೇಳಿದ್ದ ಈ ಅಭಿಮಾನಿ !  ನಿರ್ಧರಿಸಿದಂತೆ  ಇಂದು ಸಂಜೆ  6 ಕ್ಕೆ  ಕಾಫೀ ಹೌಸ್ ನಲ್ಲಿ  ಭೇಟಿಯಾಗುವುದಿತ್ತು. 


ರೆಡಿಯಾಗಿ  ಮನೆಯಿಂದ ಹೊರಟೆ . ನನ್ನನ್ನು ನೋಡಿ ಆತ ಹೇಗೆ ಪ್ರತಿಕ್ರಿಯಿಸಬಹುದು ಎಂಬ ಕುತೂಹಲವೂ ಇತ್ತು . 


6 ಗಂಟೆ  10 ನಿಮಿಷಕ್ಕೆ ಗಾಡಿ ಪಾರ್ಕ್ ಮಾಡಿ  ಒಳ ಹೊಕ್ಕೆ . ಮುಂಚೆ ನಿರ್ಧರಿಸಿದಂತೆ ಬಾಗಿಲ ಎಡಭಾಗದಲ್ಲಿ  ಮೂಲೆಯಲ್ಲಿದ್ದ  ಟೇಬಲ್ ಎದುರು ಅವನು ಕುಳಿತಿದ್ದ. ಟಿಪ್ ಟಾಪ್ ಆಗಿ ಡ್ರೆಸ್ ಮಾಡಿಕೊಂಡು . 

ಅವನದೂ  ಸುಮಾರು 30 ರ  ಆಚೀಚಿನ ವಯಸ್ಸು . ನೋಡಲು  ಚೆನ್ನಾಗೇ ಇದ್ದ . ಟೇಬಲ್ ಮೇಲೆ ಗುಲಾಬಿ ಗುಚ್ಛವಿತ್ತು . ಸ್ವಲ್ಪ ನರ್ವಸ್ ಆದಂತೆ  ಕಾಣುತ್ತಿದ್ದ .


ಮೊಬೈಲ್ ನೋಡುತ್ತಾ ಕುಳಿತಿದ್ದವನ ಎದುರು ನಿಂತೆ . ಮುಗುಳ್ನಗುತ್ತ  "ಹಲೋ ಇಲ್ಲಿ ಕೂತ್ಕೋ ಬಹುದಾ"   ಎಂದೆ . 

ಸ್ವಲ್ಪ ಗಲಿಬಿಲಿಗೊಂಡ ಆತ , ಸಾರಿ, ನಾನು ಒಬ್ರನ್ನ ಕಾಯ್ತಾ ಇದೀನಿ ... ನೀವು ಬೇರೆ ಟೇಬಲ್  ನೋಡ್ಕೋತೀರಾ ಪ್ಲೀಸ್? 


ನಕ್ಕು ಬಿಟ್ಟೆ ! ಮಿ . ಆಕಾಶ್,  ನೀವು ಕಾಯ್ತಾ ಇರೋ ವ್ಯಕ್ತಿ ನಾನೇ .  "


ಆತ ಸ್ವಲ್ಪ ಗಲಿಬಿಲಿಗೊಂಡ . "  ನಾನು .ಅದು.. .. ಕೀರ್ತಿ ... "  ತಡವರಿಸಿದ .


" ಹಾಂ ನಾನೇ  ನೀವು ಅಷ್ಟು ಅಭಿಮಾನ  ಇಟ್ಟಿರೋ  'ಕೀರ್ತಿ ' , ಕೀರ್ತಿ ಕುಮಾರ್ !!  ನಾನು ಕೈ ಚಾಚಿದೆ   ಅವನ  ಮುಖದಲ್ಲಿದ್ದ  ಗೊಂದಲ, ಅಪನಂಬಿಕೆ , ನಿರಾಶೆ  ನನಗೆ ಅರ್ಥವಾಗುತ್ತಿತ್ತು ! 


September 28, 2021

ನಿರ್ಧಾರ !

 ಕೇಳಬಾರದ ಪ್ರಶ್ನೆಯೇನೂ ಆಗಿರಲಿಲ್ಲ ಅದು .ಅದರ ಬಗ್ಗೆ ಇಷ್ಟು ಕೋಪಿಸಿಕೊಂಡು ತಿಂಗಳಾದರೂ ಮಾತಾಡದೆ ಇರುವಂಥಾದ್ದಾಗಿರಲಿಲ್ಲ ! ಯಾವುದೇ ಹೆತ್ತವರಿಗಿರುವ ಕಾಳಜಿಯಿಂದಲೇ ಅಪ್ಪಯ್ಯ ಕೇಳಿದ ಪ್ರಶ್ನೆ .

ಇಷ್ಟಕ್ಕೂ ಅಪ್ಪಯ್ಯ ಕೇಳಿದ್ದಾದರೂ ಏನು ? ನಿನಗೆ ಸಂಬಳ ಎಷ್ಟು ಬರುತ್ತೆ ? ನಿನ್ನ ಸಂಸಾರವನ್ನೂ , ನಿನ್ನ ಅಪ್ಪ ಅಮ್ಮಂದಿರನ್ನೂ ನೋಡಿಕೊಳ್ಳಲು ತೊಂದರೆ ಇಲ್ಲ ತಾನೇ ಎಂದಷ್ಟೇ .
ಹಳ್ಳಿಯಲ್ಲೇ ಜೀವನವೆಲ್ಲ ಕಳೆದ ಅಪ್ಪಯ್ಯ ಅಷ್ಟಾಗಿ ನಯ ನಾಜೂಕಿನ ಮಾತಾಡುವವನಲ್ಲ. ಅವನು ಕೇಳಿದ್ದರಲ್ಲಿ ಸಹಜವಾದ ಕಾಳಜಿ ಇತ್ತೇ ಹೊರತು ವ್ಯಂಗ್ಯವಿರಲಿಲ್ಲ .
ಪ್ರಶ್ನೆ ಕೇಳಿದ ತಕ್ಷಣ ತನ್ನ ಮುಖವನ್ನೂ ತೀಕ್ಷ್ಣವಾಗಿ ನೋಡಿದಾಗಲೇ ಗೊತ್ತಾಗಿತ್ತು . ಇದೇಕೋ ಸರಿ ಹೋಗಿಲ್ಲ ಎಂದು. ಪುಣ್ಯಕ್ಕೆ ಅಪ್ಪಯ್ಯನ ಮುಖಕ್ಕೆ ಹೊಡೆದಂತೆ ಏನೋ ಒಂದು ಹೇಳದೆ "ಅದಕ್ಕೆಲ್ಲ ತೊಂದರೆ ಇಲ್ಲ " ಎಂದಷ್ಟೇ ಹೇಳಿದ್ದ.
ಆದರೆ , ತಾನು ಗೇಟ್ ವರೆಗೆ ಕಳಿಸಿಕೊಡಲು ಹೋದಾಗ ಮುಖ ದಪ್ಪವಾಗಿದ್ದು ಕಂಡಿತ್ತು .
ಮರು ದಿನ ಫೋನ್ ಮಾಡಿದರೆ ಸರಿಯಾಗಿ ಮಾತಾಡಿರಲೂ ಇಲ್ಲ . ನಿನ್ನ ಅಪ್ಪನಿಗೆ ಹೇಗೆ ಮಾತಾಡ ಬೇಕು ಅನ್ನೋ ನಯ ನಾಜೂಕಿಲ್ಲ ಎಂದು ಬಿಟ್ಟಿದ್ದ . ತಾನು ಆ ಬಗ್ಗೆ ಏನು ಹೇಳಬೇಕು ಎಂದು ಯೋಚಿಸುತ್ತಿರುವಾಗಲೇ ಫೋನ್ ಕಟ್ ಆಗಿತ್ತು ಆಮೇಲೆ ಅದೆಷ್ಟೋ ದಿನಗಳ ವರೆಗೂ ಅವನಾಗಿ ಫೋನ್ ಮಾಡಲೆ ಇಲ್ಲ ತಾನೇ ಮಾಡಿದರೂ ಚುಟುಕಾದ ಉತ್ತರ ಅಷ್ಟೇ ! ಮನಸಿಗೆ ಏನೋ ಕಸಿವಿಸಿ !
ಅಪ್ಪನ ತಪ್ಪೇನಿತ್ತು ? ಹಾಗೆ ನೋಡಿದರೆ ತನ್ನದು ಸಂಪ್ರದಾಯಸ್ಥ ಮನೆತನ , ಊರಿನ ಗೌರವಾನ್ವಿತ ಕುಟುಂಬ ! ಹಾಗಿದ್ದರೂ ಕೂಡ , ಮಗಳು ತಾನು ಇವನನ್ನು ಮದುವೆ ಆಗುತ್ತೇನೆ ಎಂದು ಪರಿಚಯಿಸಿದ ಹುಡುಗನ ಜಾತಿ, ಕುಲ ಗೋತ್ರ ಯಾವುದನ್ನೂ ಅಪ್ಪ ಕೇಳಲಿಲ್ಲ ! ಅವನಿಗೆ ಮಗಳ ಮುಖದ ನಗುವಿಗಿಂತ ಹೆಚ್ಚಿನದು ಬೇರೆ ಯಾವುದೂ ಆಗಲಿಲ್ಲ ಮದುವೆ ಆದಮೇಲೆ ಮಗಳು ಸುಖವಾಗಿರಬಲ್ಲಳೆ ? ಯಾವುದೇ ಬಗೆಯ ಕೊರತೆ ಆಗಲಿಕ್ಕಿಲ್ಲವಷ್ಟೇ ಎಂಬ ಯೋಚನೆ ಅಷ್ಟೇ ಅವನದು ! ಅದು ತಪ್ಪಲ್ಲವಲ್ಲ ?
ಬಳಿಕ ಅದೆಷ್ಟೋ ದಿನ ಅವನು ಮಾತನಾಡ್ಲೆ ಇಲ್ಲ .
ಮನಸ್ಸು ತಡೆಯದೆ ಇವಳೆ ಫೋನ್ಮಾ ಡ್ದಾಗ ಜಾಬ್ ಚೇಂಜ್ ಮಾಡೊ ಗಡಿಬಿಡಿಲಿ ಇದೀನಿ ಆಮೆಲೆ ತಾನೆ ಮಾಡ್ತೀನಿ ಅಂತ ಇಟ್ಟು ಬಿಟ್ಟ .
ಅದಾಗಿ ಎರಡು ವಾರಗಳಾದ ಮೇಲೆ ಅವನ ಫೋನ್ . ಖುಶಿಯಲ್ಲಿದ್ದ . ದೊಡ್ಡ ಕಂಪನಿ , ದೊಡ್ಡ ಸಂಬಳ! ವಿದೇಶಕ್ಕೆ ಹೋಗೊ ಚಾನ್ಸ್ ಅಂತೆಲ್ಲ ಖುಶಿಯಿಂದ ಹೇಳಿಕೊಂಡ . ಕೊನೆಯಲ್ಲಿ ಅವಳ ಸಂತೋಷದ ಬಲೂನಿಗೆ ಪಿನ್ ಚುಚ್ಚುವಂತೆ ಈಗ ಇದನ್ನೆಲ್ಲ ನಿಮ್ಮಪ್ಪಂಗೆ ಹೇಳಿ ನಂಗೆ ನಿನ್ನ ಸಾಕೊ ಕೆಪ್ಯಾಸಿಟಿ ಇದೆ ನಂಗೆ ಅಂತ ಕನ್ಫ಼ರ್ಮ್ ಮಾಡಬಹುದು ನೋಡು ! ಅಂದಾಗ ಒಮ್ಮೆ ಕೆನ್ನೆಗೆ ಬೀಸಿ ಹೊಡೆದಂತಾಯ್ತು.
ಹಾಗೆ ಹೇಳೋ ಅಗತ್ಯ ಇತ್ತಾ? ಆ ಕ್ಷಣಕ್ಕೆ ಬಂದ ಕೋಪವನ್ನು ಹೇಗೋ ತಡೆದುಕೊಂಡಳು.
ಅಮ್ಮ ಹೇಳುತ್ತಿದ್ದಳು . ಮಾತಿನಿಂದ ನಮಗೆ ತುಂಬಾ ಪ್ರಿಯವಾದ ಸಂಬಂಧ ಕೆಡಿಸಿಕೊಳ್ಳೋಕಿಂತ , ಕಷ್ಟ ಆದ್ರೂ ಕೆಲವೊಮ್ಮೆ ಸುಮ್ಮನಿದ್ದು ಅದನ್ನ ಉಳಿಸಿಕೊಳ್ಳೋದ್ರಲ್ಲಿ ಅರ್ಥ ಇದೆ ಕಣೆ ಅಂತ . ಅದನ್ನು ನೆನಪಿಸಿಕೊಂಡು ಸುಮ್ಮನಾಗಿ ಬಿಟ್ಟಳು .
ಒಂದು ದಿನ ಗೆಳೆಯರೊಂದಿಗೆ ಪಾರ್ಟಿ ಕೂಡ ಆಯ್ತು ಎಲ್ಲವೂ ಒಂದು ನಾರ್ಮಲ್ ಹಂತಕ್ಕೆ ಬರುತ್ತಿರುವ ಬಗ್ಗೆ ಸಮಾಧಾನ ಆಗುತ್ತಿತ್ತು.
ಶುಕ್ರವಾರ ಮಧ್ಯಾಹ್ನ ಫೋನ್ ಬಂತು ಅವನದ್ದು . ಧ್ವನಿಯಲ್ಲಿ ಎಲ್ಲಿಲ್ಲದ ಉತ್ಸಾಹ !
" ಹೇಯ್ , ಸಂಜೆ ಸ್ವಲ್ಪ ಬೇಗ ಬರೋಕಾಗತ್ತಾ ಆಫೀಸಿಂದ? ನಾನೇ ಪಿಕ್ ಮಾಡ್ತೀನಿ. "
" ಏನಪ್ಪಾ ವಿಶೇಷ? ವೀಕೆಂಡ್ ಸ್ಪೆಷಲ್ ಏನಾದ್ರೂ ಪ್ಲಾನ್ ಮಾಡಿದ್ಯಾ? "
"ಅದೆಲ್ಲಾ ಆಮೇಲೆ ಹೇಳ್ತೀನಿ. ಪ್ಲೀಸ್ ಪ್ಲೀಸ್ ಸ್ವಲ್ಪ ಬೇಗ ಹೊರಡು. 4-4.30 ಗೆ ಆಗತ್ತಾ? "
ಅವಳು ಗಡಿಯಾರ ನೋಡಿಕೊಂಡಳು . 12.30 ಆಗಿತ್ತು. ಕೆಲಸ ಸುಮಾರು ಆಗಿತ್ತು. ಬೇಗ ಹೊರಡಲು ತೊಂದರೆ ಇಲ್ಲ ಎನಿಸಿತು .
" ಸರಿ , ಬರ್ತೀನಿ. ನೀನು ಗೆಟ್ ಹತ್ರ ಬಂದ ಕೂಡ್ಲೇ ಫೋನ್ ಮಾಡು . ಕೆಳಗಡೆ ಇಳಿದು ಬರ್ತೀನಿ "
" ಓಕೇ ... ಥ್ಯಾಂಕ್ಯೂ ಡಿಯರ್ ! "
" ಬಟ್, ಏನು ವಿಶೇಷ ಅಂತ ಹೇಳಲೇ ಇಲ್ವಲ್ಲಾ ? "
" ಭೇಟಿ ಆದ ಕೂಡ್ಲೇ ಹೇಳ್ತೀನಿ ... ಬಾಯ್ "
ಫೋನ್ ಕಟ್ ಆಯ್ತು .
ಯಾಕಿರಬಹುದು ಎಂದು ಕೊಳ್ಳುತ್ತಾ ಕೆಲಸ ಮುಂದುವರಿಸಿದಳು .
ಅವನು ಹಾರಾಡೋ ರೀತಿ ನೋಡಿದ್ರೆ ಬೇರೆ ದೇಶಕ್ಕೆ ಹಾರೋ ತರಾ ಇದೆ ಎಂದು ಮನಸಲ್ಲೇ ಅಂದುಕೊಂಡಳು .
4 ಕ್ಕೆ ರೆಸ್ಟ್ ರೂಮ್ ಗೆ ಹೋಗಿ ಸಲ್ಪ ತಲೆ ಬಾಚಿ ಮುಖ ತೊಳೆದು ಫ್ರೆಶ್ ಆಗಿ ಜಾಗಕ್ಕೆ ಬರೋ ಹೊತ್ತಿಗೆ ಅವನ ಫೋನ್ !
ಪಕ್ಕದವಳಿಗೆ ಹೇಳಿ ಬ್ಯಾಗ್ ತೆಗೆದುಕೊಂಡು ಕೆಳಗಿಳಿದು ಬಂದಳು .
"ಹೇಳು ಈಗ್ಲಾದ್ರೂ . ಏನ್ ವಿಷಯ ? ಎಲ್ಲಿಗ್ ಕರ್ಕೊಂಡು ಹೋಗ್ತಿದೀಯಾ ಈಗ?"
"ನಮ್ಮನೆಗೆ !! "
"ವಾಟ್ ?" ಅವಳಿಗೆ ಅಚ್ಚರಿ !
"ಹಾ, ಅಮ್ಮ ನಿನ್ನ ಮೀಟ್ ಮಾಡಬೇಕು ಅಂದ್ಲು. ಅದಕ್ಕೆ ..... "
ಒಮ್ಮೆ ಅವಳ ಕಡೆ ನೋಡಿದವನು , "ನೀನು ಆಫೀಸ್ ಗೆ ಯಾವಾಗ್ಲೂ ಜೀನ್ಸ್ ಹಾಕೊಂಡೆ ಬರ್ತೀಯ ?"
ಅವಳಿಗೆ ವಿಚಿತ್ರ ಎನಿಸಿತು ." ಹೌದು . ಜೀನ್ಸ್ ಅಥವಾ trouser ನಾರ್ಮಲ್ ಆಗಿ ಹಾಕ್ತೀನಿ. ಸಲ್ವಾರ್ ಕಮೀಜ್ ಅಥ್ವಾ ಸೀರೆ ಸ್ವಲ್ಪ ಕಮ್ಮಿ ನೇ . ಅದೇನ್ ಒಳ್ಳೆ ಹೊಸದಾಗಿ ನೋಡ್ತಿರೋ ತರ ಕೇಳ್ತೀಯಲ್ಲ? "
"ಸರಿ ಕೂತ್ಕೋ" ಎಂದವನು ಬೈಕ್ ಸ್ಟಾರ್ಟ್ ಮಾಡಿದ.
ಅವನ ಹಿಂದೆ ಮೆಲ್ಲಗೆ ಮನೆಯೊಳಗೆ ಕಾಲಿಟ್ಟವಳನ್ನು ಅವನಮ್ಮ ನಗುತ್ತಲೇ ಸ್ವಾಗತಿಸಿದರು.
ನಮಸ್ಕಾರ ಎಂದು ಕೈ ಜೋಡಿಸಿದವಳನ್ನು ಕೈ ಹಿಡಿದು ಸೋಫಾದಲ್ಲಿ ಪಕ್ಕಕ್ಕೆ ಕೂರಿಸಿಕೊಂಡರು . ಅವಳ ಅಪ್ಪ,ಅಮ್ಮ, ಮನೆ ಊರು ಎಲ್ಲ ವಿವರ ವಿಚಾರಿಸುವಾಗ ಅವಳಿಗೆ ಯಾಕೋ ಏನೋ ಮುಜುಗರ ಆಗ್ತಾ ಇತ್ತು .
ಕಾಫಿ ತಿಂಡಿ ಎಲ್ಲ ಎಲ್ಲ ಆಗುವಷ್ಟರಲ್ಲಿ ಅವನ ಅಪ್ಪ ಕೂಡ ಬಂದರು . ಮತ್ತೊಮ್ಮೆ ಎಲ್ಲ ವಿವರಗಳು.. ಅವಳ ಮುಜುಗರ ಹೆಚ್ಚಾಗುತ್ತಲೇ ಇತ್ತು .
ಮನೆಗೆ ಹೋದಾಗಿನಿಂದ ಅವನು ಅವಳ ಪಕ್ಕ ಇರಲೇ ಇಲ್ಲ . ಅಮ್ಮನ ಪಕ್ಕ ಸ್ವಲ್ಪ ಹೊತ್ತು ಕೂತವನು "ನೀವಿಬ್ರು ಮಾತಾಡ್ಕೊಳಿ ನಾನು ಈಗ ಬಂದೆ" ಎಂದು ತನ್ನ ರೂಮಿಗೆ ಹೊರಟು ಹೋದವನು ಪತ್ತೆ ಇರಲಿಲ್ಲ !
ಅವನಮ್ಮ ಕೇಳಿದರು " ನಿಂಗೆ ಸಂಬಳ ಎಷ್ಟು ಬರತ್ತೆ ? "
ಸಂಕೋಚದಿಂದಲೇ ಹೇಳಿದಾಗ " ಅದನ್ನೆಲ್ಲ ಏನ್ ಮಾಡ್ತಿಯಾ? ಚಿನ್ನ ಗಿನ್ನ ಮಾಡ್ಸಿಕೊಂಡಿದೀಯ ?
"ನಂಗೆ ಅದ್ರಲ್ಲಿ ಅಷ್ಟು ಇಷ್ಟ ಇಲ್ಲ ಆಂಟಿ ! ಅಮ್ಮಂಗೆ ಒಂದು ನೆಕ್ಲೇಸ್ ಕೊಡ್ಸಿದೆ ಅಷ್ಟೇ . "
"ಅಮ್ಮಂಗೆ ನಿಮ್ಮ ತಂದೆ ಕೊಡಸಲ್ವಾ ? "
ಇವಳಿಗೆ ಕೋಪ ಏರುತ್ತಿತ್ತು
"ಹಾಗೇನಿಲ್ಲ ಆಂಟಿ , ಮಗಳು ಅಮ್ಮಂಗೆ ಕೊಡಿಸಬಾರದು ಅಂತೇನಿಲ್ವಲ್ಲ ? "
ಅವನಪ್ಪ ನಡುವೆ ಬಂದರು " ಇರಲಿ ಬಿಡೆ , ಈಗ ಅವಳಮ್ಮನಿಗೆ ಅವಳು ಕೊಡ್ಸಿದ್ದಾಳೆ . ಮದ್ವೆ ಆದ್ಮೇಲೆ ನಿಂಗೆ ಕೊಡಸ್ತಾಳೆ ಅದ್ಯಾಕ್ ಅಷ್ಟು ಟೆನ್ ಶನ್ ಮಾಡ್ಕೊತೀಯ " ದೊಡ್ಡದಾಗಿ ನಕ್ಕರು .
"ಅದು ಸರಿನೇ ಬಿಡಿ . ಆದ್ರೂ, ನೋಡಮ್ಮ , ಮದ್ವೆ ಆದ್ಮೇಲೆ ನೀನು ತವರು ಮನೇವ್ರಿಗೆ ಚಿಕ್ಕ ಪುಟ್ಟದು , ಸೀರೆ ಬಟ್ಟೆ ಎಲ್ಲ ಓಕೆ ಆದರೆ ಚಿನ್ನ ಬಣ್ಣ ಅಂತ ಕೊಡಸೋದು ಅಂಥಾದ್ದೆಲ್ಲ ನಮಗೆ ಅಷ್ಟು ಸರಿ ಹೋಗಲ್ಲ . ಎಷ್ಟಂದ್ರೂ ಮದ್ವೆ ಆದ್ಮೇಲೆ ನೀನು ನಮ್ಮ ಮನೆಗೆ ಸೇರಿದೋಳು . ಮತ್ತೆ ನಮ್ಮವರಲ್ಲಿ , ವರದಕ್ಷಿಣೆ , ಚಿನ್ನ ಬೆಳ್ಳಿ ಇತ್ಯಾದಿ ಸಲ್ಪ ಜಾಸ್ತಿ ನೇ .
ಮಗ ಮೆಚ್ಚಿದ್ದಾನೆ ಅಂದ್ಮೇಲೆ , ವರದಕ್ಷಿಣೆ ಎಲ್ಲ ನಾವೂ ಕೇಳೋಲ್ಲ . ಆದ್ರೆ, ನೀನು ಸ್ವಲ್ಪ ಒಡವೆ ಎಲ್ಲ ಚೆನ್ನಾಗಿ ಹಾಕೋಬೇಕು ಮದ್ವೆಲಿ .ಹೀಗಾಗಿ ನಿಮ್ಮ ಮನೇಲಿ ಹೇಳಿ ನಿಂಗೊಸ್ಕರ ಮಾಡಿಸ್ಕೋ . ನಮ್ಮ ಕಡೆ ಜನ ಆಡ್ಕೋ ಬಾರದು ನೋಡು "
ಇವಳ ತಲೆ ಗಿರ್ರೆನ್ನುತ್ತಿತ್ತು !
ಅಷ್ಟೊತ್ತಿಗೆ ಬಂದು ಅಮ್ಮನ ಪಕ್ಕದಲ್ಲಿ ಕುಳಿತಿದ್ದವನ ಕಡೆ ನೋಡಿದಳು. ಅವನು ತನಗೆ , ಸಂಬಂಧವೇ ಇರದ ರೀತಿ ಮೊಬೈಲ್ ನಲ್ಲಿ ಮುಳುಗಿದ್ದ.
ಹೇಗೋ ಮತ್ತೆ ಹತ್ತು ನಿಮಿಷಗಳು ಕಳೆದ ಮೇಲೆ , ಇವಳೇ ಎದ್ದಳು . ನಂಗೆ ಲೇಟ್ ಆಗ್ತಿದೆ ರಾತ್ರಿ ಬಸ್ ಗೆ ಊರಿಗೆ ಹೋಗ್ಬೇಕು ಎಂದಳು .
"ಓಹ್ ಹೌದ , ಸರಿ ಸರಿ , ಹೋಗೋ ಅವಳನ್ನು ಡ್ರಾಪ್ ಮಾಡಿ ಬಾ" . ಅಮ್ಮನ ಆಜ್ಞೆಯಾದ ಮೇಲೆ ಮಗ ಮೆಲ್ಲಗೆ ಎದ್ದ .
ದಾರಿಯುದ್ದಕ್ಕೂ ಅವನೇ ಮಾತನಾಡುತ್ತಿದ್ದ . ಅವನ ಫ್ಯಾಮಿಲಿ ಬಗ್ಗೆ , ಅವರ ಶ್ರೀಮಂತ ಸಂಬಂಧಿಕರು , ಲೈಫ್ ಸ್ಟೈಲ್ , ಕುಟುಂಬದ ಕಟ್ಟಳೆಗಳು ಇತ್ಯಾದಿ . ಅವಳು ಅನ್ಯ ಮನಸ್ಕಳಾಗಿ ಕೇಳುತ್ತಿದ್ದಳು . ಮನಸಲ್ಲಿ ಮಹಾ ಯುದ್ಧವೇ ನಡೆಯುತ್ತಿತ್ತು .
ಪಿ ಜಿ ಎದುರು ಇಳಿದವಳು ಹೆಚ್ಚು ಮಾತನಾಡದೆ , ಗುಡ್ ನೈಟ್ ಹೇಳಿ ಒಳಗೆ ಬಂದಳು .
ತಲೆಯಲ್ಲಿ ಏನೋ ಗೊಂದಲ . ಅವನ ಬಗ್ಗೆ ಕೋಪ ಬರುತ್ತಿತ್ತು . ತಾನು ಕಳೆದ ಎರಡೂವರೆ ವರ್ಷದಿಂದ ನೋಡಿದ ವ್ಯಕ್ತಿ ಇವನೇನಾ ಎನಿಸಿತು . ಮನೆ ತಲುಪಿ 5 ನಿಮಿಷಕ್ಕೆಲ್ಲ ಅವನ ಫೋನ್.
"ಅಲ್ಲ, ಅಮ್ಮ ಏನೋ ಕೇಳಿದ್ದಕ್ಕೆ ತಿರುಗಿ ಹೇಳಿದ್ಯಂತೆ ? ಆದರೂ ಅವರೇನೂ ಅಂದ್ಕೊಂಡಿಲ್ಲ .ಪರವಾಗಿಲ್ಲ ಬಿಡೋ ಅಂದ್ರು. ಮತ್ತೆ ಕೇಳಿಲ್ಲಿ , ಗುಡ್ ನ್ಯೂಸ್ ಅಂದ್ರೆ ಅಮ್ಮ ಅಪ್ಪಂಗೆ ನೀನು ಇಷ್ಟ ವಾಗಿದೀಯ . ಮುಂದಿನ ವಾರ ನೇ ನಿಮ್ಮನೆಗೆ ಹೋಗಿ ಮಾತಾಡೋಣ ಅಂದಿದಾರೆ . ಹೇಳಿಬಿಡು" ಅಂದವನು ಉತ್ತರಕ್ಕೂ ಕಾಯದೆ ಫೋನ್ ಇಟ್ಟಾಗ , ಮನಸಿಗೆ ಕಿರಿಕಿರಿ ಹೆಚ್ಚಾಗುತ್ತಲೇ ಇತ್ತು .
ಅದೇ ಗೊಂದಲದಲ್ಲೇ , ಊರಿಗೆ ಫೋನ್ ಮಾಡಿದಳು . ಫೋನ್ ಎತ್ತಿಕೊಂಡ ಅಮ್ಮ , " ಆಫೀಸಿಗೆ ಫೋನ್ ಮಾಡಿದ್ದೆ , ನೀನು ಬೇಗ ಹೋಗಿದ್ಯಂತೆ . ಹುಷಾರಾಗಿದೀಯ ತಾನೇ? ನಿನ್ನ ಮೊಬೈಲ್ ಗೆ ಮಾಡೋಣ ಅಂದ್ರೆ , ನಂಗೆ ನಂಬರ್ ಸಿಕ್ತಾ ಇರಲಿಲ್ಲ . ಅಪ್ಪ ಬೇರೆ ಆಚೆ ಹೋಗಿದ್ರು . ಹೇಗಿದ್ದೀಯ? ಆರಾಮಾಗಿದಿಯ ತಾನೇ ? "
"ಹಾಂ ಅಮ್ಮ , ಹುಷಾರಾಗಿದೀನಿ . ಯೋಚನೆ ಮಾಡ್ಬೇಡ . ಇವತ್ತು ರಾತ್ರಿ ಬಸ್ ಬುಕ್ ಮಾಡಿದೀನಿ . ಬೆಳಿಗ್ಗೆ ಮನೆಲಿರ್ತೀನಿ. ಈಗ ಊಟ ಮಾಡಿ ರೆಡಿ ಆಗ್ಬೇಕು . ಲೇಟ್ ಆಗತ್ತೆ ಆಮೇಲೆ ."
"ಸರಿ ಕಣೆ , ಹುಷಾರಾಗಿ ಬಾ . ಬೆಳಿಗ್ಗೆ ಚಂದು ಬರ್ತಾನೆ ಬಸ್ ಸ್ಟಾಪ್ ಗೆ . ಇಡ್ತೀನಿ "
ರಾತ್ರಿಯಿಡೀ ಬಸ ನಲ್ಲಿ ಅವಳಿಗೆ ನಿದ್ದೆ ಕೊಡದಂತೆ ನೂರೆಂಟು ಯೋಚನೆಗಳು .
ಬೆಳಿಗ್ಗೆ ಬಸ್ ಸ್ಟ್ಯಾಂಡ್ ಗೆ ಬಂದಿದ್ದ ತಮ್ಮನ ಹತ್ತಿರವೂ ಎಂದಿನಂತೆ ಕೀಟಲೆ ಮಾತಾಡದೆ ಮನೆಗೆ ಬಂದವಳು " ಅಮ್ಮ ಬಸ್ಸಲ್ಲಿ ನಿದ್ದೆ ಬಂದಿಲ್ಲ ,ತಲೆ ನೋಯ್ತಿದೆ . ಸಲ್ಪ ಕಾಫಿ ಕೊಡು, ಕುಡದು ಸಲ್ಪ ಮಲ್ಕೋತೀನಿ ಎಂದು ಕಾಫಿ ಕುಡಿದು ಮಲಗಿ ಬಿಟ್ಟಳು . ಹಾಸಿಗೆಯಲ್ಲಿ ಅಡ್ಡಾದರೂ ಅದೆಷ್ಟೋ ಹೊತ್ತು ಒದ್ದಾಡಿದ ಮೇಲೆ ಅಂತೂ ನಿದ್ರೆ ಒಲಿಯಿತು .
ಮಧ್ಯಾಹ್ನ ದ ಹೊತ್ತಿಗೆ ಎದ್ದು ತಿಂಡಿ ತಿಂದು ಸಪ್ಪಗೆ ಕುಳಿತ ಮಗಳನ್ನು ನೋಡಿ ಅಪ್ಪ ಅಮ್ಮ ಮುಖ ಮುಖ ನೋಡಿಕೊಂಡರು .
" ಯಾಕೆ ಪುಟ್ಟ ? ಏನಾಯ್ತು? ಹೀಗ್ಯಾಕಿದೀಯಾ ? ಆಫೀಸಲ್ಲಿ ಏನಾದ್ರು ತೊಂದ್ರೆ ನ ? " ಅಪ್ಪ ಕೇಳಿದಾಗ , ಇಲ್ಲವೆನ್ನುವಂತೆ ತಲೆ ಅಲ್ಲಾಡಿಸಿದಳು .
ಅಮ್ಮ ಮೆಲ್ಲಗೆ ಕೇಳಿದಳು " ನೀವಿಬ್ರೂ ಏನಾದ್ರೂ ಜಗಳ ಮಾಡ್ಕೊಂಡ್ರೆನೇ? "
ಥಟ್ ಎಂದು ಅಮ್ಮನ ಮುಖ ನೋಡಿದವಳಿಗೆ ಅಲ್ಲಿ ಆತಂಕ ಕಂಡಿತು .
"ಪುಟ್ಟಾ, ಏನೋ ಚಿಕ್ಕ ಪುಟ್ಟ ಮಾತು , ಜಗಳ ಸಹಜ ಲೈಫಲ್ಲಿ . ಅದನ್ನೆಲ್ಲ ಸೀರಿಯಸ್ ಆಗಿ ತೊಗೊಂಡು ಸಂಬಂಧ ಹಾಳು ಮಾಡ್ಕೋ ಬಾರ್ದು , ಮನಸಲ್ಲಿ ಕಹಿ ತಂದ್ಕೊ ಬಾರ್ದು "
ಅಮ್ಮನ ಮಾತು ಕೇಳಿ ಮನಸು ತಡೆಯದೆ , ಹಿಂದಿನ ದಿನ ತಾನು ಅವನ ಮನೆಗೆ ಹೋಗಿದ್ದು , ಅಲ್ಲಿ ನಡೆದ ಮಾತುಕತೆಗಳನ್ನೆಲ್ಲ ಹೇಳಿದವಳಿಗೆ ಏಕೋ ಹಗುರವೆನಿಸಿತು .
" ಅಯ್ಯೋ , ಮಗಾ, ಇಷ್ಟೇನಾ? ಅವರು ಅವರ ಪ್ರಕಾರ ಯೋಚನೆ ಮಾಡ್ತಾರೆ ,ಅವರ ಪದ್ಧತಿ , ರೀತಿ-ನೀತಿ ಪ್ರಕಾರ ಮಾತಾಡಿದ್ರು . ನಿನಗೆ ಅವೆಲ್ಲ ಗೊತ್ತಿಲ್ಲದೇ ಇರೋದ್ರಿಂದ ಅದು ಸರಿ ಅನಿಸಿಲ್ಲ ಅಷ್ಟೇ .
ನೀನು ಬೆಳೆದಿರೋ ರೀತಿ ಬೇರೆ ಅಲ್ವ? ಅದಕ್ಕೆ . ಇಷ್ಟಕ್ಕೆಲ್ಲ ಹೀಗೆ ತಲೆ ಮೇಲೆ ಆಕಾಶ ಬಿದ್ದವರ ತರಾ ಆಡ್ತಿಯಲ್ಲ ?" ಅಪ್ಪ ನಗುತ್ತ ತಲೆ ಸವರಿದಾಗ , ಅಪ್ಪನ ಭುಜಕ್ಕೆ ತಲೆಯಿಟ್ಟು ಸುಮ್ಮನೆ ಕುಳಿತು ಬಿಟ್ಟಳು .
"ಅವರು ಯಾವಾಗ ಬರ್ತಾರೆ ಅಂತ ಸರಿಯಾದ ಡೇಟ್ ಹೇಳಿದ್ರೆ , ನಾವೂ ಸ್ವಲ್ಪ ತಯಾರಿ ಮಾಡ್ಕೋ ಬಹುದಲ್ವೇನೆ?ಎಷ್ಟಂದ್ರೂ ದೊಡ್ಡ ಊರಿಂದ ಬರೋರು. ವ್ಯವಸ್ಥೆ ಮಾಡಬೇಕಲ್ವ?" ಅಮ್ಮ ಅಲವತ್ತು ಕೊಂಡಳು
ಇವಳಿಗೆ ಏನೋ ಗೋಜಲು , ಮನಸಿನಲ್ಲಿ ಎಲ್ಲವೂ ಸರಿಯಿರದ ಭಾವ . ಅಷ್ಟರಲ್ಲಿ ಮೊಬೈಲ್ ರಿಂಗಣಿಸಿತು .
ಆ ತುದಿಯಲ್ಲಿ ಅವನು ಖುಷಿಯಿಂದ ಹೇಳುತ್ತಿದ್ದ. " ಕೇಳು , ಮುಂದಿನ ವಾರ ಅಪ್ಪ ಅಮ್ಮ ನಿಮ್ಮನೆಗೆ ಹೋಗೋಣ ಮಾತು ಕತೆ ಮುಗಿಸೋಣ ಅಂತಿದಾರೆ. ನೀನು ಮನೇಲಿ ಹೇಳ್ಬಿಡು . ಅವರು ಎಲ್ಲ ಸರಿಯಾಗಿ ತಯಾರಿ ಮಾಡ್ಕೋಬೇಕು ಅಂತ ಹೇಳ್ಬಿಡು . ಇಲ್ಲಿಂದ ಅಲ್ಲಿ ಬಂದು ಅಪ್ಪ- ಅಮ್ಮಂಗೆ ಏನೂ ತೊಂದರೆ ಆಗ್ಬಾರ್ದಲ್ವ ? . ನೀನು ವಾಪಾಸ್ ಬಂದ್ ತಕ್ಷಣ ಫೋನ್ ಮಾಡು ಮಾತಾಡೋಣ " ಒಂದೇ ಉಸಿರಲ್ಲಿ ಹೇಳುತ್ತಿದ್ದ.
ಇವಳು ಕಣ್ಣು ಮುಚ್ಚಿ ಮೌನವಾಗಿ ಕೇಳಿಸಿಕೊಳ್ಳುತ್ತಿದ್ದಳು. ಕಣ್ಣು ಬಿಟ್ಟಾಗ , ಅವನು " ಹಲೋ , ಕೇಳಿಸ್ತಿದ್ಯಾ ? ಇದ್ದೀಯ ಲೈನ್ ಲ್ಲಿ ? ಎನ್ನುತ್ತಿದ್ದ .
ಅಪ್ಪ ಅಮ್ಮ ಇಬ್ಬರೂ ತನ್ನ ಮುಖವನ್ನೇ ನೋಡುತ್ತಿರುವುದು ಗಮನಕ್ಕೆ ಬಂತು .
ಗಂಟಲು ಸರಿ ಮಾಡಿ ಕೊಂಡವಳು " ಹಾ, ಕೇಳಿಸ್ಕೊಂಡೆ .
"ಮತ್ತೆ ಏನೂ ರಿಪ್ಲೈ ಮಾಡಿಲ್ಲ ? "
" ಅವರು ಇಲ್ಲಿ ಬರೋ ಅಗತ್ಯ ಇಲ್ಲ ಅನಿಸ್ತಿದೆ ಕಣೋ. ಬೇಡ ಅಂತ ಹೇಳ್ಬಿಡು !"
" ಏ, ಯಾಕೆ ? ಏನರ್ಥ ಹಂಗಂದ್ರೆ ? ಏನಾಯ್ತೆ ನಿಂಗೆ? ಅವರನ್ನ ಒಪ್ಪಿಸೋಕೆ ನಾನೆಷ್ಟು ಕಷ್ಟ ಪಟ್ಟಿದೀನಿ ಗೊತ್ತಾ ? ಊರಿಗ್ ಹೋದ ತಕ್ಷಣ ತಲೆ ತಿರಗೋಯ್ತಾ ನಿಂಗೆ? ಏನ್ ಹೇಳಿದ್ರು ನಿಮ್ಮಪ್ಪ ?
ಸಿಟ್ಟು ಒಮ್ಮೆಲೇ ತಲೆಗೇರಿದರೂ ಎದುರಿಗೆ ಅಪ್ಪ ಅಮ್ಮ ಇರುವುದರ ಅರಿವಾಗಿ
" ನೋಡು , ನಾನು ಹೇಳಿದ್ದು ನನ್ನದೇ ಅಭಿಪ್ರಾಯ . ಬೇರೆ ಯಾರೂ ಏನೂ ಹೇಳಿಲ್ಲ . ವಾಪಸ್ ಬಂದಮೇಲೆ ನಾನೇ ಫೋನ್ ಮಾಡ್ತೀನಿ . ಬೈ " ಎಂದು ಫೋನ್ ಕಟ್ ಮಾಡಿದಳು .
ಏನೂ ತಿಳಿಯದೆ , ಗೊಂದಲದಿಂದ ನೋಡುತ್ತಿರುವ ಅಪ್ಪ-ಅಮ್ಮನತ್ತ ನೋಡಿ
"ಸರಿಯಾದ ನಿರ್ಧಾರ ತೊಗೊಂಡಿದೀನಿ ಅಪ್ಪಾ, ಯೋಚನೆ ಮಾಡ್ಬೇಡ" ಎಂದು ಮುಗುಳು ನಕ್ಕಳು!

February 14, 2021

ವ್ಯಾಲಂಟೈನ್ ಡೇ !

 ನರ್ವಸ್ ಆಗುತ್ತಿದ್ದೆ ನಾನು .  ಇನ್ನೇನು ಸ್ವಲ್ಪ ಹೊತ್ತಿಗೆ ಅವಳು ಬಂದು ಬಿಡುತ್ತಾಳೆ . 

ಜೀವನದ ಮೊಟ್ಟಮೊದಲ ವ್ಯಾಲಂಟೈನ್ ಡೇ  ಇದು . 
ಯಾವ ಹೋಟೆಲ್ ಗೆ ಹೋಗಬೇಕು ಎಂದು  ಅವಳೇ  ಡಿಸೈಡ್ ಮಾಡಿದ್ದಳು .  ಸ್ವಲ್ಪ ಮೇಲ್ದರ್ಜೆಯ ಹೋಟೆಲ್ ಅದು . 
" ನಿಮ್ಮ ಅಪ್ಪ ಅಮ್ಮನ  ಲೆವೆಲ್ ಗೆ ಓಕೆ ಕಣೆ ಅದು.  ನನ್ನ ಜೇಬಿಗೆ  ಸ್ವಲ್ಪ ಹೆಚ್ಚಾಯ್ತೆನೋ" ಅಂತ  ಗೊಣಗಿದ್ದಕ್ಕೆ  ಅವಳು  ಹುಸಿಮುನಿಸು ತೋರಿದ್ದಳು . 
"ಒಂದ್ಸಲ ಆ ಹೋಟೆಲ್ ಗೆ ಕರ್ಕೊಂಡು ಹೋಗೋಕೆ ಕಂಜೂಸಿ ಮಾಡ್ತೀಯಾ? ಹೆದರ್ಕೋಬೇಡ ನಂಗೆ ಪರಿಚಯದವರಿದ್ದಾರೆ ಅಲ್ಲಿ. ಒಂದು ಡಿಸ್ಕೌಂಟ್ ಕೂಪನ್ ಅರೇಂಜ್ ಮಾಡ್ತೀನಿ." ಅಂತಾನೂ ಹೇಳಿದ್ಲು. 
"ಸ್ವಲ್ಪ ಚೆನ್ನಾಗಿ ಡ್ರೆಸ್ ಮಾಡ್ಕೊಂಡು ಬಾ .  ಅಲ್ಲಿರೋರು ನಮ್ಮನ್ನೇ ನೋಡಿ  ಹೊಟ್ಟೆ ಉರ್ಕೋ ಬೇಕು .   "  ಅಂತ ನಕ್ಕಿದ್ಲು. 
 
ಅವಳು ಹೇಳಿದ ಟೈಮ್ ಗೆ ಸ್ವಲ್ಪ ಮುಂಚೆನೇ ಬಂದು ಕಾಯ್ತಿದ್ದೆ.  ಅಷ್ಟೊತ್ತಿಗೆ ಅವಳ ಫೋನ್ ಬಂತು. 
ನಾನು ಟೇಬಲ್ ಬುಕ್ ಮಾಡ್ಸಿದೀನಿ. ನಿನ್ನ ಹೆಸರಲ್ಲಿ!  ಅಲ್ಲೇ ಹೋಗಿ ಕೂತಿರು .  ೧೦ ನಿಮಿಷದಲ್ಲಿ ಬಂದೆ . " 
ಸರಿ  ಅವಳು ಬುಕ್ ಮಾಡಿದ ಟೇಬಲ್ ಗೆ ಹೋಗಿ ಕೂತೆ.  ಎ ಸಿ ಯ ತಂಪಲ್ಲೂ  ನಂಗೆ ಬೆವರುತ್ತಿತ್ತು. 
ಮನೇಲಿ ಗೊತ್ತಾದ್ರೆ ? ಆಗೋ ಎಡವಟ್ಟುಗಳನ್ನು ನೆನೆದು   ತಲೆಯಲ್ಲಿ ನೂರಾರು ಯೋಚನೆಗಳು !
ಎರಡು ಗ್ಲಾಸ್ ನೀರು ಖಾಲಿ ಆಗುವಷ್ಟರಲ್ಲಿ  ಅವಳು  ಕಾಣಿಸಿಕೊಂಡಳು . ಕೆಂಪು ಡ್ರೆಸ್ ನಲ್ಲಿ ಚೆಂದದ ಗುಲಾಬಿ ಹೂವಿನಂತೆ  ಮುದ್ದಾಗಿ ಕಾಣುತ್ತಿದ್ದಳು.  ಅವಳ ಕೈಯಲ್ಲಿ ಕೆಂಪು ಗುಲಾಬಿಯ ಗುಚ್ಛ ನೋಡಿದಾಗ , ಎದೆ ಧಸಕ್ಕೆಂದಿತು ! ನಾನು ಗುಲಾಬಿ ಹೂ ತರಲು ಮರೆತು ಬಿಟ್ಟಿದ್ದೆ !  ಮನಸಲ್ಲಿ ಹಳಹಳಿಸಿದೆ !  ನಗುತ್ತಾ ಬಂದವಳು ಹೂಗುಚ್ಛವನ್ನು ನನ್ನ ಕೈಲಿಟ್ಟು  ಹಗುರಾಗಿ ಅಪ್ಪಿಕೊಂಡು " ಹ್ಯಾಪಿ ವ್ಯಾಲಂಟೈನ್ ಡೇ " ಎಂದು  ಕೆನ್ನೆಗೆ ಮುತ್ತಿಟ್ಟಳು .  

ನಾನು ಮೆಲ್ಲಗೆ ಜೇಬಿನಿಂದ ದೊಡ್ಡ ಚಾಕೊಲೇಟ್  ತೆಗೆದು  ಅವಳ ಕೈಲಿಟ್ಟೆ . 
" ಹ್ಯಾಪಿ ವ್ಯಾಲಂಟೈನ್ ಡೇ "  ಥ್ಯಾಂಕ್ಸ್  ನಿನ್ ಜೊತೆ ನನ್ನ ಕರಕೊಂಡು ಬಂದಿದ್ದಕ್ಕೆ ... " 
" ನಿಂಗಿಂತ ಬೆಸ್ಟ್ ವ್ಯಾಲಂಟೈನ್ ಯಾರೂ  ಸಿಕ್ಕಲ್ಲ ಗೊತ್ತಾ ? ನನ್ನ ಮುದ್ದು ಅಜ್ಜಾ " ಎನ್ನುತ್ತಾ  ಕೆನ್ನೆ ಎಳೆದಳು ಮೊಮ್ಮಗಳು. 
" ಸರಿ , ಮನೇಲಿ ಏನಂತ ಹೇಳಿದೆ? 
"ನಿಜಾನೆ ಹೇಳಿದ್ದು. ನಿನ್ನಜೊತೆ ಆಚೆ ಹೋಗ್ತಾ ಇದ್ದೀನಿ ಅಂತ. ಅಜ್ಜಂಗೆ  ಅದೇನು ಕಾಟ ಕೊಡ್ತೀಯಾ ನೀನು ಅಂತ ಬೈದ್ಲು ಅಮ್ಮ  "  ನಕ್ಕಳು ನನ್ನ ವ್ಯಾಲಂಟೈನ್ !
"  ಸರಿ ಹೋಯ್ತು  ! ಇಷ್ಟೊತ್ತಿಗೆ ಅವಳು  ನಮ್ಮನೆಗೆ ಫೋನ್ ಮಾಡಿ,  ತಮ್ಮಂಗೆ  ಹೇಳಿ , ಅಪ್ಪನ ವ್ಯಾಲಂಟೈನ್ ಡೇ ಅಂತ  ಇಬ್ಬರೂ ನಕ್ಕಿರ್ತಾರೆ ಜೋರಾಗಿ !  " ನಾನು ಹುಳಿ  ನಗೆ ನಕ್ಕೆ . 
" ನಗಲಿ  ಬಿಡು ಅಜ್ಜಾ ! ನಾವು ಇಲ್ಲಿ  ಡಿನ್ನರ್ ಎಂಜಾಯ್ ಮಾಡೋಣ ! ಆಮೇಲೆ  ನಂಗೆ ಐಸ್ ಕ್ರೀಮ್  ಬೇಕು  ದೊಡ್ಡದು  !" 
" ಖಂಡಿತಾ ! ನಿಂಗೆ ಬೇಡ ಆಂತೀನಾ ನಾನು ? " 
"  ಓಹ್  ಅಜ್ಜಾ ....  ಐ ಲವ್ ಯೂ !  ಖುರ್ಚಿಯಿಂದ ಎದ್ದು ಬಂದು ಗಟ್ಟಿಯಾಗಿ ಅಪ್ಪಿಕೊಂಡಳು ಮೊಮ್ಮಗಳು.







--

Chitra

February 8, 2021

ಎಲ್ಲ ಮರೆತಿರುವಾಗ.....

 


Shared with Kannad

ಅತ್ತೆ, ಅತ್ತೆ, ಯಾರೋ ಮೆಲ್ಲನೆ ಕರೆದಂತಾಯ್ತು , ನಿದ್ದೆಯಲ್ಲೇ ಹ್ಞೂ ಗುಟ್ಟಿದೆ .
ಅತ್ತೇ , ಅಮ್ಮ ಏಳಿಸೋಕೆ ಹೇಳಿದ್ಲು ,ಎಲ್ಲಾರದ್ದೂ ತಿಂಡಿ ಮುಗೀತಾ ಬಂತು . ಏಳ್ತೀಯಾ ?
ಹಾಂ , ಬಂದೆ . ನೀ ಹೋಗು ಎಂದು ಮಗ್ಗುಲಾದೆ . ಮತ್ತೆರಡು ನಿಮಿಷಕ್ಕೆ ಮೆಲ್ಲಗೆ ಕಣ್ಣು ಬಿಟ್ಟವಳಿಗೆ ಎಲ್ಲ ಅಯೋಮಯ ! ಎಲ್ಲಿದ್ದೇನೆ ಎಂಬ ಕನ್ಫ್ಯೂಷನ್ . ಕಿಡಕಿಯಿಂದ ಬೆಳಕಿನ ರೇಖೆ ಮುಖ ಸವರುತ್ತಿತ್ತು .
ಥಟ್ ಎಂದು ಎದ್ದು ಕುಳಿತವಳಿಗೆ ಊರಲ್ಲಿ ಮನೆಯಲ್ಲಿರುವುದು ನೆನಪಾಯಿತು . ಹಿಂದಿನ ದಿನ ಊರು ತಲುಪುವಾಗಲೇ ಕತ್ತಲಾಗಿತ್ತು. ಎಲ್ಲರನ್ನೂ ಮಾತನಾಡಿಸಿ , ಊಟ ಮುಗಿಸುವಷ್ಟರಲ್ಲಿ ಕಣ್ಣು ಬಿಡಲಾಗದಷ್ಟು ನಿದ್ರೆ . ಅಂತೂ ಮಲಗಿದವಳಿಗೆ ಈಗಲೇ ಎಚ್ಚರಾಗಿದ್ದು . ಅದೂ ಅಣ್ಣನ ಮಗಳು ಕರೆದಾಗ .
ಕೆಳಗಿಳಿದು ಬಚ್ಚಲಿಗೆ ಹೋಗಿ ಮುಖ ತೊಳೆದು ಫ್ರೆಶ್ ಆಗಿ ಅಡುಗೆ ಮನೆಗೆ ಕಾಲಿಟ್ಟಾಗ ಅತ್ತಿಗೆ ತೆಳ್ಳೇವು ಮಾಡುತ್ತಿದ್ದಳು .
"ಗುಡ್ ಮಾರ್ನಿಂಗ್ ! ಚೆನ್ನಾಗಿ ನಿದ್ರೆ ನಿಂಗೆ ಅದಕ್ಕೆ ಬೇಗ ಏಳಿಸಿಲ್ಲ . ಎಲ್ಲಾರದ್ದೂ ತಿಂಡಿ ಮುಗೀ ತಾ ಬಂತು. ಆಮೇಲೆ ನಿಂಗೆ ಹಿಟ್ಟು ಖರ್ಚಾಗೋದ್ರೆ ಅಂತ ಎಳ್ಸೋಕೆ ಹೇಳಿದ್ದು" ಅಂತ ನಕ್ಕಳು
"ಅಯ್ಯೋ ಅತ್ಗೆ , ಹಾಸಿಗೆ ಮೇಲೆ ಬಿದ್ದವಳಿಗೆ ಸಹನಾ ಕರೆಯೋವರೆಗೂ ಏನೇನೂ ಎಚ್ಚರ ಇರ್ಲಿಲ್ಲ ನೋಡು !" ನಗುತ್ತ ಎದುರಿಗಿದ್ದ ಪ್ಲೇಟಿನಿಂದ ತೆಳ್ಳೇವು ಚೂರು ಮಾಡಿ ಬೆಲ್ಲ ಹಚ್ಚ ತೊಡಗಿದೆ .
"ನಾಳೆಯಿಂದ ಇನ್ನು ಮನೆ ತುಂಬಾ ಜನ . ಇವತ್ತೊಂದಿನ ನಿನ್ನತ್ರ ಸುದ್ದಿ ಹೇಳೋಕಾಗೋದು" ಎನ್ನುತ್ತಾ ಅತ್ತಿಗೆ ಬಿಸಿ ಬಿಸಿ ಚಹಾ ಲೋಟ ತಂದಿಟ್ಟಳು .
ಹನ್ನೆರಡು ವರ್ಷಗಳ ನಂತರ ಊರಿಗೆ ಬಂದಿದ್ದು . ಅದೂ ಅಣ್ಣನ ಮಗಳ ಮದುವೆಗೆ ಎಂದು . ಮಾತಾಡಲು ಬೇಕಷ್ಟಿದೆ .
ಮದುವೆ ಆಗಿ ಅಮೆರಿಕಾ ಕ್ಕೆ ಹೋಗಿ ಇಪ್ಪತ್ತು ವರ್ಷಗಳೇ ಆಗೋಯ್ತು. ನಡುವೆ -ಒಂದು ಎರಡು ವರ್ಷಕ್ಕೊಮ್ಮೆ ಬರುತ್ತಿದ್ದರೂ ಬೆಂಗಳೂರುವರೆಗಷ್ಟೇ . ಅಪ್ಪ ಅಮ್ಮ , ಮತ್ತೆ ಅತ್ತೆ ಮಾವ ಕೂಡ ಅಲ್ಲೇ ಇರೋದ್ರಿಂದ ಅಲ್ಲಿಗಷ್ಟೇ ಟ್ರಿಪ್ . ಊರಲ್ಲಿದ್ದಿದ್ದು ದೊಡ್ಡಪ್ಪನ ಕುಟುಂಬ . ತುಂಬಾ ಪ್ರೀತಿ ಮಾಡಿಕೊಳ್ಳುತ್ತಿದ್ದರೂ ಯಾಕೋ ಅಲ್ಲಿಗೆ ಹೋಗಲು ಟೈಮ್ ಸಿಕ್ತಾ ಇರಲಿಲ್ಲ . ಮಕ್ಕಳು ಚಿಕ್ಕವರಿದ್ದಾಗ ಒಮ್ಮೆ ಬಂದಿದ್ದು, ಅದಾಗಿ ಹನ್ನೆರಡು ವರ್ಷಗಳು !!
ಯೋಚಿಸುತ್ತಾ ತಿಂಡಿ ತಿನ್ನುತ್ತಿದ್ದವಳಿಗೆ ಅತ್ತಿಗೆ ಹೇಳಿದ್ಲು.
"ಮಕ್ಳನ್ನೂ ಕರ್ಕೊಂಡ್ ಬರ್ಬೇಕಿತ್ತು. ಎಷ್ಟು ವರ್ಷ ಆಗೋಯ್ತು ನೋಡಿ. "
"ಅವರಿಬ್ಬರಿಗೂ ರಜೆ ಸಿಕ್ಕಲ್ಲ ಅತ್ಗೆ ಈಗ. ಕಾಲೇಜ್ ಅಲ್ವ ? ನಂಗೆ ಯಾಕೋ ತುಂಬಾ ಆಸೆ ಆಯ್ತು ಸಹನಾ ಮದ್ವೇಗ್ ಬರಲೇ ಬೇಕು ಅಂತ . ಅದಕ್ಕೆ , ದೀಪಕ್ ಹೇಳಿದ , ಮಕ್ಕಳ ಜೊತೆ ಇದ್ದೀನಿ ನೀ ಹೋಗು ಅಂತ .ಬಂದ್ಬಿಟ್ಟೆ ! "
"ಒಳ್ಳೆದಾಯ್ತು ಬಿಡು . ನಮಗೂ ಎಷ್ಟು ಖುಷಿಯಾಯ್ತು ! " ಅತ್ತಿಗೆ ಮುಖ ಹೊಳೀತಿತ್ತು .
ಒಬ್ಬೊಬ್ಬರೇ ನೆಂಟರು ಬರತೊಡಗಿ ನಾಲ್ಕುದಿನಕ್ಕೆ ಭರ್ಜರಿಯಾಗಿ ಮದುವೆಯೂ ಮುಗೀತು . ಮತ್ತೆರಡು ದಿನ ಊರಲ್ಲೇ ಕಳೆಯಬೇಕೆನಿಸಿತು ಇಷ್ಟು ವರ್ಷಗಳ ಬಾಕಿ ಇತ್ತಲ್ಲ ? ಬಾಲ್ಯದ ನೆನಪು , ಚಿಕ್ಕವಳಿದ್ದಾಗ ಸುತ್ತಿದ್ದ ಜಾಗಗಳಿಗೆಲ್ಲ ಮತ್ತೆ ಹೋಗಿ ನೋಡಬೇಕೆನಿಸುತ್ತಿತ್ತು . ಚಿಕ್ಕಪ್ಪನ ಮಗಳು ಮಾಧವಿಯ ಜೊತೆ ತೋಟ , ಗದ್ದೆ ,ಹೊಳೆ , ದೇವಸ್ಥಾನ ಎಲ್ಲ ಅಲೀತಾ ಇದ್ದೆ . ತುಂಬಾ ಬದಲಾವಣೆ ಏನೂ ಇರಲಿಲ್ಲ . ಅದೇ ಶಾಂತ ಪರಿಸರ, ಆತ್ಮೀಯತೆಯಿಂದ ಮಾತಾಡಿಸೋ ಜನ .
ಅವತ್ತು ಲಕ್ಷ್ಮತ್ತೆ ಮನೆಗೆ ಹೋಗುವಾಗ ಅವ ಕಂಡ . ಅವನೇ ಹೌದೋ ಅಲ್ಲವೋ ಎಂದು ಯೋಚಿಸುತ್ತಿರುವಾಗಲೇ ಮಾಧವಿ ಮಾತಾಡಿಸಿದಳು. "ವಿನಯಣ್ಣ , ಯಾಕೋ ಮೊನ್ನೆ ಮದ್ವೆಗೆ ಬರ್ಲೆ ಇಲ್ಲ? ಊರ ಮನುಷ್ಯರೇ ಹೀಂಗೆ ಮಾಡಿದ್ರೆ ಎಂತ ಮಾರಾಯ ? "
"ಅಯ್ಯೋ, ಹೌದೇ ಮಾರಾಯ್ತಿ. ಅವತ್ತೇ ಸಲ್ಪ ಕೋರ್ಟಲ್ಲಿ ಕೆಲಸ ಇತ್ತು. ಎಂತ ಮಾಡದು? ಮನೇವ್ರೆಲ್ಲ ಬಂದಿದ್ರಲ್ಲೇ " ಎನ್ನುತ್ತಾ, ಹಿಂದಿದ್ದ ನನ್ನನ್ನು ನೋಡಿ " ಅರೆ, ಇದೇನು ಭಾರಿ ಅಪರೂಪದ ಜನ ಬಂದ್ರಲ್ಲ ? " ಎಂದು ನಕ್ಕ .
" ಗುರ್ತು ಸಿಕ್ತಲ್ಲ ಮಾರಾಯ ನಂದು . ಮರೆತೇ ಹೋಯ್ತೆನ ಅಂದ್ಕಂಡಿದ್ದೆ "
" ಅದು ಹ್ಯಾಂಗೆ ಗುರ್ತ ಸಿಕ್ಕಲ್ಲ ಮಾರಾಯ್ತಿ ? ನೀನೇನು ಜಾಸ್ತಿ ಬದಲಾಗಿಲ್ಲ. ನನ್ನ ನೋಡು " ಎಂದು ದೊಡ್ಡದಾಗಿ ನಕ್ಕು
" ಮತ್ತೆ? ಎಲ್ಲ ಆರಾಮ ? ಎಷ್ಟ್ ವರ್ಷ ಆಗೋಯ್ತು ನಿನ್ನ ನೋಡಿ. ಒಂದ್ ಕೆಲಸ ಮಾಡು. ಸಂಜೆ ಬಾ ಮನೆಗೆ ಚಾ ಕುಡಿಯೋಕೆ . ಆರಾಮಾಗಿ ಸುದ್ದಿ ಹೇಳ್ವ . ಈಗ ಕೆಲಸ ಇದೆ . ಮಾಧವಿ ಇವಳನ್ನ ಕರ್ಕೊಂಡ್ ಬಾ, ನಿನ್ನ ಜವಾಬ್ದಾರಿ ಮತ್ತೆ " ಎಂದವನು "ಸಿಗುವ ಸಂಜೆಗೆ" ಎನ್ನುತ್ತಾ ನಡೆದು ಬಿಟ್ಟ .
ನಾನು ಅವನು ಹೋದತ್ತ ನೋಡುತ್ತಾ ನಿಂತುಬಿಟ್ಟೆ . ಬದಲಾಗಿದ್ದ ಅವನು ಹೊರನೋಟಕ್ಕಂತೂ ! ಅರ್ಧ ಬೋಳಾದ ತಲೆಯಲ್ಲಿ ಉಳಿದಿದ್ದು ಸಲ್ಪ ಬಿಳಿಕೂದಲು . ಮುಖದಲ್ಲಿ ಎದ್ದು ಕಾಣುವ ನೆರಿಗೆಗಳು . ಎಲೆ ಅಡಿಕೆ ತಿಂದು ಕೆಂಪಾದ ಹಲ್ಲುಗಳು . ವಯಸ್ಸಾಗಿದ್ದಕ್ಕಿಂತ ಹೆಚ್ಚೇ ಎನಿಸುವ ಶರೀರ . ಹೇಗಿದ್ದವನು ಹೇಗಾಗಿ ಬಿಟ್ಟ !! ನಾನು ನೋಡಿದ್ದ, ಇಷ್ಟ ಪಟ್ಟಿದ್ದ , ತಲೆತುಂಬ ಕೂದಲಿನ , ಬಿಳಿ ನಗೆಯ , ಸ್ಪುರದ್ರೂಪಿ ವಿನಯ ಇವನಲ್ಲ ಎನಿಸಿತು ಮನಸ್ಸಿಗೆ .
"ಏ ಅಕ್ಕ, ವಿನಯಣ್ಣ ಅವರ ಮನೆಗೆ ಸಂಜೆ ಕರೆದಿದ್ದು . ಈಗ ನಡಿ ಲಕ್ಷ್ಮತ್ತೆ ಮನೆಗೆ . ಕಾಯ್ತಿರ್ತಾಳೆ ಅವಳು " ಎನ್ನುತ್ತಾ ಎಚ್ಚರಿಸಿದಳು .
ಸಂಜೆಯವರೆಗೂ ವಿನಯ ತಲೆಯಲ್ಲಿ ಸುತ್ತುತ್ತಿದ್ದ .
ಚಿಕ್ಕವಳಿದ್ದಾಗ ಬೇಸಿಗೆ ರಜೆಗೆ ಊರಿಗೆ ಹೋದಾಗೆಲ್ಲ ಜೊತೆಗೆ ಆಡುತ್ತಿದ್ದೆವು , ಅಲೆಯುತ್ತಿದ್ದೆವು . ಮಾವಿನ ಹಣ್ಣು , ಗೇರು ಹಣ್ಣು , ಕವಳಿ ಕಾಯಿ, ಕೊಯ್ಯಲು ಅವನೇ ಜೊತೆ. ಬೆಟ್ಟದಲ್ಲಿ ಹೊಳೆ ದಾಸಾಳ ಹಣ್ಣು ಕೊಯ್ಯುವಾಗ ಒಮ್ಮೊಮ್ಮೆ ಇಡೀ ಗೊಂಚಲನ್ನೆ ಕೊಯ್ದು ಕೈಗಿಡುತ್ತ ನೋಡು ಒಳ್ಳೆ ಕೆಂಪು ಹೂ ತರಾ ಇದೆ . ಮುಡ್ಕೋ . ಚಂದ ಕಾಣತ್ತೆ ಎನ್ನುತ್ತಿದ್ದ. ದೊಡ್ಡಾಗುತ್ತಿದ್ದಂತೆ ಹಾಗೆ ಅಲೆಯುವುದು ಕಮ್ಮಿ ಆದರೂ ಸಂಜೆ ಗದ್ದೆ ಬದಿಯಲ್ಲಿ ಕುಳಿತು ಸುದ್ದಿ ಹೇಳುವುದು ಕಮ್ಮಿ ಆಗಿರಲಿಲ್ಲ . ಮೆಲ್ಲಗೆ ಕನಸುಗಳು ಮನದಲ್ಲಿ ಕಾಲಿಡಿತ್ತಿದ್ದುದು ನನಗೆ ಅರಿವಾಗುತ್ತಿತ್ತು . ಇಂಜಿನಿಯರಿಂಗ್ ಮಾಡಲೆಂದು ಬೆಂಗಳೂರಿಗೆ ಬಂದವನು ಹಾಸ್ಟೆಲ್ ವ್ಯವಸ್ಥೆ ಆಗುವ ವರೆಗೂ ನಮ್ಮಲ್ಲೇ ಇದ್ದ . ಆಗ ನನ್ನ ಕನಸುಗಳು ಮತ್ತಷ್ಟು ಗಟ್ಟಿ ಆಗ ತೊಡಗಿದ್ದವು . ಅವನನ್ನೇ ಮದುವೆ ಆಗಬೇಕೆನಿಸುತ್ತಿತ್ತು . ಅವನಿಗೆ ಹೇಳಬೇಕೆಂದರೂ ಆಗದ ನಾಚಿಕೆ. ಅವನು ಎಂಜಿನಿಯರಿಂಗ್ ಮುಗಿಸಿ ಕಂಪನಿಯೊಂದರಲ್ಲಿ ಕೆಲಸಕ್ಕೆ ಸೇರಿದ ಮೇಲೂ ಆಗೀಗ ಮನೆಗೆ ಬರ್ತಿದ್ದ. ಅಪ್ಪ ಅಮ್ಮ ನನಗೆ ಮದುವೆ ಮಾಡುವ ತಯಾರಿಯಲ್ಲಿದ್ದರು. ಮನೆಗೆ ಬಂದವನಿಗೆ .
"ನಮ್ಮ ರೂಪಾಗೆ ಗಂಡು ನೋಡ್ತಾ ಇದೀವಿ. ನಿಂಗ್ಯಾರಾದ್ರೂ ಒಳ್ಳೆ ಹುಡುಗ ಗೊತ್ತಿದ್ರೆ ಹೇಳು ಮಾರಾಯ , ನೀನು ಸಣ್ಣ ಇದ್ದಾಗಿಂದ ನೋಡಿದ ಹುಡುಗಿ " ಅಮ್ಮ ಹೇಳುತ್ತಿದ್ದರೆ , ನನ್ನ ಎದೆ ಬಡಿತ ಏರುತ್ತಿತ್ತು . ಇವನೇ ಅಡ್ಡಿಲ್ಲ ನಂಗೆ ಎಂದು ಹೇಳಿಬಿಡಲೇ ಎಂಬ ತುಡಿತ . ಹೊರಡುವಾಗ ಅವನು ನನ್ನನ್ನು ಕರೆದ . ನಾನು ಬಯಸಿದ್ದನ್ನು ಅವನು ಹೇಳಬಹುದೇನೋ ಎಂದು ಕಲ್ಪಿಸಿ ಪುಳಕಗೊಂಡೆ .

" ರೂಪಾ , ನಿಂಗೆ ಇಂಥದ್ದೇ ಹುಡುಗ ಬೇಕು ಅಂತ ಏನಾದ್ರೂ ಇದ್ರೆ , ನಂಗೆ ಹೇಳು . ನೋಡ್ತೀನಿ, ಎಷ್ಟೆಂದ್ರೂ ಚೈಲ್ಡ್ ಹುಡ್ ಫ್ರೆಂಡ್ ನೀನು . ಸಂಕೋಚ ಮಾಡ್ಕೋಬೇಡ " ಎಂದು ನಕ್ಕು , ತಲೆ ಮೇಲೆ ಮೆಲ್ಲಗೆ ತಟ್ಟಿ ಹೊರಟೆ ಹೋದ !
ನನ್ನ ಕನಸುಗಳು ಚೂರಾದಂತೆನಿಸಿತು . ಪೂರ್ತಿ ಗೊಂದಲ ! ಹಾಗಿದ್ದರೆ , ಅವನಿಗೆ ನನ್ನ ಬಗ್ಗೆ ಏನೂ ಭಾವನೆಗಳೇ ಇರಲಿಲ್ಲವೇ? ಅದು ಬರೀ ಸ್ನೇಹ ಮಾತ್ರನಾ ? ನಾನಷ್ಟೇ ಪ್ರೀತಿ -ಪ್ರೇಮ ಅಂತ ಕನಸು ಕಾಣ್ತಿದ್ದೆನಾ ? ಏಕೋ ನನಗೆ ಅರಗಿಸಿಕೊಳ್ಳುವುದು ಕಷ್ಟ ಆಗ್ತಾ ಇತ್ತು. ಕೆಲವು ದಿನ ಮಂಕಾಗಿದ್ದೆ .
ಮತ್ತೆ ಇವೆಲ್ಲವನ್ನೂ ಕೊಡವಿಕೊಂಡು ಬಿಟ್ಟೆ . ಅವನಿಗೆ ನನ್ನ ಬಗ್ಗೆ ಸ್ನೇಹವಲ್ಲದೆ ಮತ್ತೇನೂ ಭಾವನೆ ಇರದಾಗ , ನಾನು ಏನೋ ಕಲ್ಪಿಸಿಕೊಂಡು ಬೇಜಾರಾಗುವುದರಲ್ಲಿ ಅರ್ಥವಿಲ್ಲ ಎನಿಸಿತು. ದೀಪಕ್ ನ ಮದುವೆ ಆಗಿ ಅಮೆರಿಕಾಕ್ಕೆ ಹಾರಿ ಬಿಟ್ಟೆ . ಕ್ರಮೇಣ ಇವೆಲ್ಲ ಮರೆತೇ ಹೋದಂತಾಯಿತು. ನೆನಪಾದರೂ ನನ್ನ ಹುಚ್ಚುತನವನ್ನು ನೆನೆದು " ಸಿಲ್ಲಿ " ಅನಿಸುವಷ್ಟು .
ಈಗ 20 ವರ್ಷಗಳ ನಂತರ ಮತ್ತೆ ಅವನು ಎದುರು ಬಂದಾಗ ಹಳೆಯದೆಲ್ಲ ನೆನಪಾಗಿ ಬಿಟ್ಟಿತು .
ಸಂಜೆ ವಿನಯನ ಮನೆಗೆ ಹೊರಡಲು ತಯಾರಾಗುತ್ತಿದ್ದೆ. ತಂದಿದ್ದ ಕೆಲವೇ ಡ್ರೆಸ್ ಗಳು ತೊಳೆದು ಒಣಗುತ್ತಿದ್ದವು. ಇದ್ದ ಒಂದೆರಡು ಸೀರೆಗಳು ರೇಶಿಮೆಯವು . ಏನು ಹಾಕಿಕೊಂಡು ಹೋಗುವುದು ಎಂಬ ತಲೆಬಿಸಿಯಲ್ಲಿದ್ದೆ .

ಅತ್ತಿಗೆ ಹೇಳಿದ್ಲು. "ಅಯ್ಯೋ ನೀನು ಪ್ಯಾಂಟ್ ಹಾಕ್ಕೊಂಡೆ ಹೋಗೆ . ಅಡ್ಡಿಲ್ಲ . ಈಗೆಲ್ಲ ಯಾರೂ ಅಷ್ಟೆಲ್ಲ ಮಾತಾಡಲ್ಲ ಬಟ್ಟೆ ಬಗ್ಗೆ. ಅದ್ರಲ್ಲೂ ಊರಲ್ಲಿ ಎಲ್ಲರಿಗೂ ಗೊತ್ತು ನೀನು ಅಮೆರಿಕಾದಲ್ಲಿರೊಳು ಅಂತ " ಎನ್ನುತ್ತಾ ನಕ್ಕು ಬಿಟ್ಟಳು .
ಸರಿ ಎಂದು , ಜೀನ್ಸ್ ಏರಿಸಿ ಒಂದು ಕುರ್ತಾ ಹಾಕಿ ರೆಡಿ ಆದೆ . ಮಾಧವಿಯ ಜೊತೆ ಹೆಜ್ಜೆ ಹಾಕಿದೆ .

ಅವನ ಮನೆ ಇದ್ದಲ್ಲೇ ಇತ್ತು . ಸ್ವಲ್ಪ ಹೊಸರೂಪ ಪಡೆದಿತ್ತು . ಗೇಟ್ ಶಬ್ದವಾದಾಗ , ಹೊರಗೆ ಬಂದವನು , ಎಲೆ ಅಡಿಕೆ ತುಪ್ಪಿ, ಬಾಯ್ತುಂಬಾ ನಗುತ್ತಾ ಬನ್ನಿ ಬನ್ನಿ ಎಂದು ಕರೆದ .
ಒಳಗೆ ಹೋಗಿ ಖುರ್ಚಿಯ ಮೇಲೆ ಕೂತೆವು .
ಸೀರೆ ಸೆರಗಿಗೆ ಕೈ ಒರೆಸುತ್ತಾ ಬಂದ ಹೆಂಡತಿಯನ್ನು, ಓದುತ್ತಾ ಕುಳಿತದ್ದ ಮಗನನ್ನು ಪರಿಚಯಿಸಿದ . ಬೇಡವೆಂದರೂ ಎರಡೆರಡು ಬಾರಿ ಶಿರಾ ಬಡಿಸಿದಳು ಅವನ ಹೆಂಡತಿ. ಚಹಾ ಕುಡಿಯುತ್ತಾ ಶುರುವಾದ ಹರಟೆ ಮುಗಿಯುತ್ತಲೇ ಇರಲಿಲ್ಲ .
ಹಳೆಯದನ್ನೆಲ್ಲ ನೆನಪಿಸಿಕೊಂಡು ನಕ್ಕೆವು. ಅವನ ಹೆಂಡತಿಯೂ ಆಸಕ್ತಿಯಿಂದ ಕೇಳುತ್ತಿದ್ದಳು .

ಅಷ್ಟರಲ್ಲಿ ಮಾಧವಿಯ ಮೊಬೈಲ್ ರಿಂಗಣಿಸಿತು. ಮಾತಾಡಿದವಳು , "ಅಕ್ಕಾ ನಾನು ಅರ್ಜೆಂಟ್ ಮನೆಗೆ ಹೋಗ್ಬೇಕು. ನಿನ್ನ ಭಾವ ಬಂದಿದಾರಂತೆ . ನೀನು ಆರಾಮಾಗಿ ಸುದ್ದಿ ಹೇಳ್ಕೊಂಡು ಆಮೇಲೆ ಬಾ . "
ನಂಗೆ ಒಮ್ಮೆಲೇ ಮುಜುಗರ ಎನಿಸ ತೊಡಗಿತು.
ಅಷ್ಟ್ರಲ್ಲಿ ಅವನೇ ಹೇಳಿದ , "ನೀ ಹೋಗು ಮಾಧವಿ, ಇವಳು ಸಲ್ಪ ಹೊತ್ತು ಇರಲಿ. ತುಂಬಾ ವರ್ಷ ಆಯ್ತು. ಮತ್ತೆ ಸಿಗೋದು ಯಾವಾಗ್ಲೋ ! ನಾನು ಬಿಟ್ಟು ಕೊಡ್ತೇನೆ ಅವಳಿಗೆ".

ಮಾಧವಿ ಹೋದಮೇಲೂ ತಾಸುಗಟ್ಟಲೆ ನಾವು ಹರಟುತ್ತಿದ್ದೆವು. ಮನೆ , ಜಮೀನು, ಮಕ್ಕಳು , ಅಮೆರಿಕಾ , ಅದು ಇದು ಏನೇನಿಲ್ಲ !
" ನೀನು ಅಷ್ಟೇನೂ ಬದಲಾಗಿಲ್ಲ ನೋಡು . ಇನ್ನೂ ಚಿಕ್ಕ ಹುಡುಗಿ ತರಾನೇ ಕಾಣಿಸ್ತೀಯ , ಹಾಗೆ ಮಾತಾಡ್ತೀಯಾ" ಎಂದು ತಮಾಷೆ ಮಾಡಿದ . "ನಾನು ನೋಡು ಹೇಗಾಗಿದೀನಿ ಅಂತ! ಏನೋ ನನ್ನ ಹೆಂಡ್ತಿ ಇನ್ನು ನನ್ನ ಜೊತೆ ಇದಾಳೆ ನನ್ನ ಪುಣ್ಯ" ಎಂದು ನಕ್ಕ.

ನಂಗೆ ಕುತೂಹಲವಾಗಿ ಕೇಳಿದೆ . "ಹೌದೂ ,ನೀನು ಜಾಬ್ ಮಾಡ್ತಾ ಇದ್ಯಲ್ಲ ಮಾರಾಯ ? ಮತ್ತೆ ಯಾಕೆ ಬಿಟ್ಟೆ ? ಊರಿಗೆ ಯಾವಾಗ್ ಬಂದೆ ? "

ಅವನು ಗಂಭೀರನಾದ . ದೊಡ್ಡ ಉಸಿರು ಬಿಟ್ಟು ಹೇಳಿದ. "ಅಯ್ಯೋ ದೊಡ್ಡ ಕತೆ ! ನಾಲ್ಕೇ ವರ್ಷ ನಾನು ಜಾಬ್ ಮಾಡಿದ್ದು. ಯಾಕೋ ಸರಿ ಹೋಗಲಿಲ್ಲ. ಅಷ್ಟೊತ್ತಿಗೆ , ಅಪ್ಪಂಗೆ ಬಿದ್ದು ಕಾಲು ಮುರೀತು . ಆವಾಗ ನೋಡ್ಕೊಳೋಕೆ ಅಂತ ಮನೆಗೆ ಬಂದವನಿಗೆ ವಾಪಸ್ ಹೋಗ್ಬೇಕು ಅನಿಸಲಿಲ್ಲ . ಇಲ್ಲೇ ಉಳ್ಕೊಂಡು ಬಿಟ್ಟೆ. ಇರೋದ್ರಲ್ಲಿ ಅದು ಇದು ಅಂತ ಮಾಡ್ಕೊಂಡ್ ಆರಕ್ಕೆ ಹೆಚ್ಚಿಲ್ಲ ಮೂರಕ್ಕೆ ಕಮ್ಮಿ ಇಲ್ಲ ಅನ್ನೋ ತರಾ ಇದೆ ಜೀವನ. , ಶ್ರೀಮಂತಿಕೆ ಇಲ್ಲದೆ ಹೋದ್ರೂ ಕೊರತೆ ಅಂತೇನು ಇಲ್ಲ . ಜೀವನಕ್ಕೆ ಸಾಕು . ಕಷ್ಟಪಟ್ಟು ಒಂದ್ ಮದ್ವೆ ಮಾಡ್ಕೊಂಡೆ , ಅದೂ ಈಗ ಊರಲ್ಲಿರೋರಿಗೆ ಹೆಣ್ಣು ಕೊಡೋಲ್ಲ ನೋಡು , ಅದ್ಕೆ ಹೇಳಿದ್ದು ಕಷ್ಟ ಪಟ್ಟು ಮದ್ವೆ ಅಂತ ." ದೊಡ್ಡದಾಗಿ ನಕ್ಕ .
ಅವನ ಹೆಂಡತಿ ಹುಸಿಮುನಿಸಿನಿಂದ ಅವನತ್ತ ನೋಡಿದ್ದು ಕಂಡಿತು .
ಅಂತೂ ಹೊರಗೆ ಸುಮಾರು ಕತ್ತಲಾದಾಗ , ನಾನು ಎದ್ದೆ .
"ಲೇಟಾಗೋಯ್ತು ಹೊರಡ್ತೀನಿ . "

"ಇರು , ಒಬ್ಳೆ ಬೇಡ . ನಾನು ಬಿಟ್ ಕೊಡ್ತೀನಿ" ಎಂದು ಎದ್ದ . ಅವನ ಹೆಂಡತಿಯೂ ದನಿಗೂಡಿಸಿದಳು .

ಅರಿಶಿನ ಕುಂಕುಮ ಇಟ್ಟು ಒಂದು ಸೀರೆಯನ್ನು ಕೈಲಿಟ್ಟಳು. "ನಿಂಗೆ ಇಷ್ಟ ಆಗತ್ತೋ ಇಲ್ವೋ , ಅರ್ಜೆಂಟಲ್ಲಿ ಇವರು ತೊಗೊಂಡ್ ಬಂದ್ರು" ಎಂದು ಸಂಕೋಚದಿಂದ ಹೇಳಿದಳು .

ಹೆಗಲಿಗೊಂದು ಟವೆಲ್ ಹಾಕಿ ಹೋರಟ. "ನೀನ್ ನೋಡು ಟಿಪ್ ಟಾಪ್ ಆಗಿ ಪ್ಯಾಂಟ್ ಹಾಕಿ ಬಂದಿದ್ಯ. ನಾನು ಹೀಗೆ ಹಳೆ ಲುಂಗಿ ಬನಿಯನ್ ! "ನಕ್ಕ .
ನಿಧಾನವಾಗಿ ಹೊರಟೆವು .ಗದ್ದೆಯಲ್ಲಿ ನಡೆಯುತ್ತಿರುವಾಗ ತಲೆಯಲ್ಲಿ ನೂರೆಂಟು ಪ್ರಶ್ನೆಗಳು . ಅಕಸ್ಮಾತ್ ನಾನು ಇವನನ್ನು ಮದುವೆ ಆಗಿದ್ದರೆ ,ಈಗ ಇದೇ ಹಳ್ಳಿಯಲ್ಲಿರುತ್ತಿದ್ದೆ. ಒಂದು ಹಳೆ ಸೀರೆಯನ್ನೂ, ನೈಟಿಯನ್ನೋ ಹಾಕಿರುತ್ತಿದ್ದೆ. ಮನೆ- ಮಕ್ಕಳು , ನೆಂಟರು ,ಕೊಟ್ಟಿಗೆಯ ಪ್ರಪಂಚದಲ್ಲಿ. ಬೆಂಗಳೂರಲ್ಲಿ ಹುಟ್ಟಿ ಬೆಳೆದವಳು ಇಲ್ಲಿಗೆ ಹೊಂದಿಕೊಳ್ಳುತ್ತಿದ್ದೆನಾ? ಸಾಧ್ಯವಾಗದಿದ್ದರೆ ಬೇರೆ ಆಪ್ಷನ್ ಇತ್ತಾ? ಅವನಿಗೆ ಹಳ್ಳಿ ಜೀವನ ಇಷ್ಟ . ಆದರೆ ನಂಗೆ ಸರಿ ಹೋಗ್ತಾ ಇತ್ತಾ ? ಯಾಕೋ , ಆಗಿದ್ದೆಲ್ಲ ಒಳಿತೇ ಆಯಿತು ಎಂದೆನಿಸಿಬಿಟ್ಟಿತು . ಆದರೂ ಒಂದು ಕುತೂಹಲ ಕಾಡ್ತಾನೇ ಇತ್ತು . ಅವನಿಗೆ ನಿಜಕ್ಕೂ ನನ್ನ ಬಗ್ಗೆ ಯಾವ ಭಾವನೆಗಳೂ ಇರಲಿಲ್ವಾ? ಇವತ್ತು ಕೇಳಿಯೇ ಬಿಡಬೇಕೆನಿಸಿತು.

ಅಷ್ಟರಲ್ಲಿ ಪಿಚಕ್ ಎಂದು ಎಲೆ ಅಡುಕೆ ತುಪ್ಪಿದವನನ್ನು ಕೇಳಿದೆ "ಎಂತ ಮಾರಾಯ ಬಿಡದೆ ಕವಳ ಹಾಕ್ತೀಯಲ್ಲ? "
ನಕ್ಕು ಬಿಟ್ಟ . "ಏನ್ ಮಾಡೋದೇ ? ಊರಿಗೆ ಬಂದ ಮೇಲೆ ಇಲ್ಲಿನವರ ಜೊತೆ ಸೇರಿ ಅಭ್ಯಾಸ ಆಗೋಗಿದೆ ಬಿಡಬೇಕು ಅಂದ್ರೆ ಕಷ್ಟ . "
"ವಿನಯ, ಒಂದು ವಿಷ್ಯ ಕೇಳಲಾ ? ಹುಚ್ಚು ಎನಿಸ ಬಹುದು ನಿಂಗೆ , ಆದ್ರೆ ನಿಜ ಹೇಳು ನಿಂಗೆ ಯಾವತ್ತೂ ನನ್ನ ಬಗ್ಗೆ ಏನೂ ಫೀಲಿಂಗ್ಸ್ ಇರಲೇ ಇಲ್ವಾ? "

ನಿರೀಕ್ಷಿಸಿರದ ಪ್ರಶ್ನೆಗೆ ಮೌನವಾಗಿಬಿಟ್ಟ . ಒಂದೇ ಕ್ಷಣ ! ಮತ್ತೆ ನಕ್ಕು ಬಿಟ್ಟ .
"ಎಂತ ಹುಡುಗಿ ಮಾರಾಯ್ತಿ. ಹಂಗೆಲ್ಲಾ ಇದಿದ್ರೆ , ನೀನು ಇವತ್ತು ಈ ಹಳ್ಳಿ ಮೂಲೇಲಿ ದನ ಕರೀತಾ ಇರ್ಬೇಕಾಗ್ತಿತ್ತು ನೋಡು ! ಈಗ ಎಷ್ಟ್ ಆರಾಮಾಗಿ , ಅಮೆರಿಕಾದಲ್ಲಿ ಝಂ ಅಂತ ಕಾರಲ್ಲಿ ಓಡಾಡ್ಕೊಂಡು, ವಿಮಾನದಲ್ಲಿ ಹಾರಾಡಿಕೊಂಡು ಇದೀಯಾ . ಹುಚ್ಚು ಯೋಚನೆ ಮಾಡ್ಬೇಡ. " ಅದೇ ಆತ್ಮೀಯತೆಯಿಂದ ತಲೆ ಮೇಲೆ ಮೆಲ್ಲಗೆ ತಟ್ಟಿದ .
ಅಷ್ಟ್ರಲ್ಲಿ ಮನೆ ಬಂತು. ಗೇಟ್ ತೆಗೆಯುವಷ್ಟರಲ್ಲಿ , "ನಾ ಮತ್ತೆ ಒಳಗೆ ಬರೋದಿಲ್ಲ . ನೀ ಸಿಕ್ಕಿದ್ದು , ಇಷ್ಟೊತ್ತು ಕೂತು ಮಾತಾಡಿದ್ದು ತುಂಬಾ ಖುಷಿ ಆಯಿತು ರೂಪಾ . ಇನೊಂದ್ಸಲ ಯಾವಾಗ ಸಿಗೋದೋ ಗೊತ್ತಿಲ್ಲ . ಮತ್ತೆ ಭಾರತಕ್ಕೆ ಬಂದಾಗ ಸಾಧ್ಯ ಆದಾಗೆಲ್ಲ ಬಂದು ಹೋಗು . ಖುಷಿ ಆಗತ್ತೆ "ಅಂದ .

ಹೃದಯ ಭಾರವಾದಂತೆನಿಸಿ ಅವನ ಕೈ ಹಿಡಿದು ಒತ್ತಿದೆ ." ಖಂಡಿತಾ ಬರ್ತೀನಿ ಕಣೋ . ನಂಬರ್ ಇದೆಯಲ್ಲ ಈಗ . ವಾಟ್ಸ್ ಅಪ್ ಮಾಡು ಯಾವಾಗಾದ್ರೂ ." ಎಂದು ಗೇಟ್ ತೆಗೆದೆ .

" ರೂಪಾ " ಕರೆದ ಅವನು . ತಿರುಗಿದೆ .
"ನಿಜ ಅಂದ್ರೆ , ನಿನ್ನ ಮದ್ವೆ ಆದ್ಮೇಲೆ ಯಾಕೋ ಬೆಂಗಳೂರಲ್ಲಿ ಇರ್ಬೇಕು ಅನಿಸ್ಲಿಲ್ಲ ಕಣೇ . ಅದ್ಕೆ ಅಪ್ಪನ ಕಾಲು ಮುರಿದಿದ್ದೇ ನೆವ ಮಾಡಿ ಊರಿಗೇ ಬಂದ್ಬಿಟ್ಟೆ. ಅಷ್ಟೇ ಮತ್ತೇನೂ ಕೇಳ್ಬೇಡ "
ಅವನು ಬಿರಬಿರನೆ ಹೆಜ್ಜೆ ಹಾಕುತ್ತಾ ನಡೆದು ಬಿಟ್ಟ .

ನಾನು ಕಲ್ಲಾಗಿ ನಿಂತುಬಿಟ್ಟೆ . ಯಾಕೋ ಪ್ರಶ್ನೆ ಕೇಳಿ ತಪ್ಪು ಮಾಡಿಬಿಟ್ಟೆ ಎನಿಸಿಬಿಟ್ಟಿತು.