February 4, 2017

ಅತ್ತೆ !


"ಅಮ್ಮಾ, ನಿಂಗೆ ಗೊತ್ತಿಲ್ಲದೇ ಇರೋ ವಿಷಯದಲ್ಲಿ  ಯಾಕೆ ತಲೆ ಹಾಕ್ತೀಯಾ? "  ಶೇಖರ  ಲ್ಯಾಪ್ ಟಾಪ್ಇಂದ  ತಲೆ ಎತ್ತದೇ ಹೇಳಿ ಬಿಟ್ಟ !
"ಯಾವಾಗ್ಲೂ ಹೀಗೆ . ನಂಗೇನೂ ಗೊತ್ತಿಲ್ಲ  ದಡ್ಡಿ ಅಂತಾನೆ ಎಲ್ಲರೂ ಅಂದ್ಕೊಂಡಿರೋದು .ನಂಗೂ ಗೊತ್ತಾಗತ್ತೆ .  ಆದರೆ ಯಾವತ್ತಾದ್ರೂ  ನನಗೂ ವಿಷಯಗಳನ್ನ  , ಏನ್ ನಡೀತಿದೆ , ಏನಿಲ್ಲ  ಅನ್ನೋದನ್ನ ಹೇಳ್ಬೇಕು. ತಿಳಿಸಕೊಡಬೇಕು ಅಂತ ಒಬ್ರಾದ್ರೂ ಇಲ್ಲಿವರೆಗೆ  ಯೋಚಿಸಿದ್ರಾ?  ನಿಮ್ಮ ಮಾತು, ಚರ್ಚೆ, ಹರಟೆಲ್ಲಿ  ನನ್ನ ಸೇರಿಸಿಕೊಂಡಿರಾ? ನಾನು  ಏನಾದ್ರೂ ಕೇಳಿದಾಗ , ನಿಂಗೆ ಗೊತ್ತಾಗಲ್ಲ ಸುಮ್ನೆ ಇರು ಅನ್ನೋದು ಬಿಟ್ಟು , ಇದು ಹೀಗೆ , ಹೀಗೆ  ಅಂತ ಅರ್ಥ ಮಾಡಿಸಿ ಕೊಟ್ಟರಾ  ....  ಗೌರಕ್ಕನ ಗಂಟಲು ಕಟ್ಟಿತು . 

ಜಗುಲಿಯಲ್ಲಿ ಒಮ್ಮೆಲೇ ನಿಶ್ಶಬ್ದ . ಕುಳಿತವರೆಲ್ಲ  ಒಬ್ಬರಿಗೊಬ್ಬರು ಮುಖ ನೋಡಿಕೊಳ್ಳುತ್ತಿದ್ದರು .
 
"ತಪ್ಪು ಯಾರು ಮಾಡಲ್ಲ?  ನಾನು ಮಾಡ್ತೀನಿ , ನೀವುಗಳೂ ಮಾಡ್ತೀರಾ. ಆದರೆ  ಎತ್ತಿ ಆಡೋದು , ತಮಾಷೆ ಮಾಡಿ ನಗೋದು ನನ್ನ ತಪ್ಪನ್ನ .  ನಾನು ಅಪರೂಪಕ್ಕೆ ಏನೋ ತಪ್ಪಿ ಬಿಟ್ರೂ .. ಅದು ವರ್ಷ ಇಡೀ ನಗೋಕೆ , ಹೀಯಾಳಿಸೋಕೆ ಆಗತ್ತೆ. ನೀವು ಪದೇ ಪದೇ ಮಾಡಿದ್ರೂ  " ಅದೇನೋ ಅಪ್ಪಿ ತಪ್ಪಿ ಆಗೋಯ್ತು . ಏನು ಮಾಡೋಕಾಗತ್ತೆ . ಬೇಕು ಅಂತ ಮಾಡಿರೋದ ? " ಅಂತ  ಆಗತ್ತೆ !  ಯಾಕೆ ಹಾಗೆ ?"  ಗೌರಕ್ಕನ ಪ್ರಶ್ನೆಗೆ ಉತ್ತರ ಕೊಡುವವರು ಯಾರು ಎಂಬ ನೋಟ ಅತ್ತಿತ್ತ ಹರಿದಾಡಿತು . 

" ನಾನು ಓದಿಲ್ಲದೆ  ಇರಬಹುದು , ನಿಮ್ಮಷ್ಟೆಲ್ಲ ಪ್ರಪಂಚ ಜ್ಞಾನ ಇಲ್ಲದಿರಬಹುದು . ಆದರೂ  ಎಂಥ ಕಷ್ಟದ ಪರಿಸ್ಥಿತಿಲೂ, ನಿಮಗೆಲ್ಲಾ ಕಷ್ಟದ ಬಿಸಿ  ತಿಳಿಯದಂತೆ   ಜೀವನ ನಡೆಸಿಕೊಂಡು ಹೋದ ಅನುಭವ ನಂಗಿದೆ . ಅದಕ್ಕಾದರೂ ಬೆಲೆ ಕೊಡಬಹುದಿತ್ತು .... 

ಸುಮಾ ಮೆಲ್ಲಗೆ ಅತ್ತೆಯ  ಬಳಿ ಸರಿದು  ಭುಜ ಬಳಸಿದಳು . " ಆ ತರಾ ಎಲ್ಲ ನಿಮ್ಮನ್ನ ಕಡೆಗಾಣಿಸ್ತಾರೆ ಅಂದ್ಕೊ ಬೇಡಿ ಅತ್ತೆ ..  " 

"ಹ್ಮ್ , ಅಂದ್ಕೊಳೋದೇನೂ ಬಂತಮ್ಮಾ? ಅದೇ ಸತ್ಯ . ನನ್ನ ಸಮಾಧಾನ ಮಾಡೋಕೆ ಬರ್ಬೇಡ .  ಇಷ್ಟು ವರ್ಷದಿಂದ  ಮನಸಲ್ಲಿ  ನೋವೆಲ್ಲಾ ಒತ್ತಿಟ್ಟು  ,  ಸಾಕಾಗೋಗಿದೆ ನಂಗೆ. ಇನ್ನು ಸಹಿಸೋದು ಸಾಧ್ಯ ಇಲ್ಲ . ನನ್ನ ಜಾಗದಲ್ಲಿ  ನೀವುಗಳ್ಯಾರೇ ಇದ್ರೂ  ಯಾವಾಗ್ಲೋ  ಗಂಡ ನ್ನ, ಮನೆನಾ ಬಿಟ್ಟು ಹೋಗ್ತಿದ್ರೇನೊ  !  ನಮ್ಮ ಕಾಲದಲ್ಲಿ ಅದೆಲ್ಲ ಸಾಧ್ಯ ಇರ್ಲಿಲ್ಲ ನೋಡು . ಹೀಗಾಗಿ ಅನುಭವಿಸೋದೇ ಗತಿ ಆಯ್ತು !  ಚಿಕ್ಕ ಚಿಕ್ಕ ವಿಷಯಕ್ಕೂ ಗಂಡನ್ನ , ಮನೆ ಹಿರಿಯವರನ್ನಾ ಕೇಳ್ಬೇಕು . ನಾನಾಗಿ ನಾನೇ  ಒಂದು  ಚಿಕ್ಕ ನಿರ್ಧಾರಾನೂ ತೊಗೊಳೋ ಹಾಗಿತ್ತ ? 
ನನ್ನ ಇಷ್ಟಾನಿಷ್ಟನ  ಯಾರಾದ್ರೂ  ಯಾಕೆ,  ಕಟ್ಟಿಕೊಂಡ ಗಂಡ ಆದ್ರೂ ಕೇಳಿದ್ರಾ ? ಮನೇಲಿ ನಾಯಿ ಬೆಕ್ಕು ದನ ಇರತ್ತಲ್ಲ , ಹಾಗೆ ಹೆಂಡತಿ ನು ಅನ್ನೋ ಭಾವ . ಯಾಕಮ್ಮ ಹಾಗೆ? ನಾನು ಮನುಷ್ಯಳಲ್ವಾ? ನಂಗು ಒಂದು ಮನಸ್ಸು- ಆಸೆ ಅಂತ ಇರಲ್ವಾ?  ೬೦ ವರ್ಷ ಆಯ್ತು ಮದ್ವೆ ಆಗಿ .  ಇಷ್ಟ್ ವರ್ಷದಲ್ಲಿ ಅವರೇ ಆಗಿ ಒಂದೇ ಒಂದು ಸಲ ಹೆಂಡತಿಗೆ ಅಂತ ಸೀರೆ ತಗೊಂಡು ಬಂದ್ರಾ ನಿಮ್ ಮಾವ? ಕೇಳು ?   ಬಸುರಿ ಆಗಿದ್ದಾಗ  ಒಂದ್ಸಲ ತುಂಬಾ ಆಸೆ ಆಗ್ತಿದೆ ಒಂದು ಹಸಿರು ಸೀರೆ ತಂದ್ಕೊಡಿ ಅಂತ  ಕೇಳಿದ್ದಕ್ಕೆ ಅದೇನೆಲ್ಲ ಕೇಳ್ಬೇಕಾಯ್ತು ಗೊತ್ತಾ ? "


ಸೊಸೆ ಮೆಲ್ಲಗೆ ಮಾವನ ಮುಖ ನೋಡಿದಳು . ಅಲ್ಲಿ ಕಸಿವಿಸಿ -ಕೋಪಗಳ ಸಮ್ಮಿಶ್ರ ಭಾವ ಕಾಣಿಸಿತು .  
"ಅದೇನ್ ನಾನೊಬ್ಬನೇನಾ   ಹಾಗೆ ಮಾಡ್ತಿದಿದ್ದು ? ಆಗಿನ ಕಾಲದಲ್ಲಿ  ಆ ತರಾ  ಯಾರು ತಂದ್ಕೊಡ್ತ ಇದ್ರೂ ? ಒಟ್ಟು ಕುಟುಂಬದಲ್ಲಿ  ಮನೆ ಹಿರಿಯರೇ ಎಲ್ಲರಿಗೂ  ತರ್ತಿದಿದ್ದು. ಇವಳಿ ಗೆ ಅಂತ ನಾನೇನು ಹೊಸದಾಗಿ ಶುರು ಮಾಡ್ಬೇಕಿತ್ತಾ? "  ಗೋಪಾಲಣ್ಣ  ಸಿಡುಕಿದರು . 

"ನೋಡಿ, ಮನಸಿದಿದ್ರೆ  ಎಲ್ಲವೂ ಆಗ್ತಾ ಇತ್ತು.  ನಿಮ್ಮಣ್ಣ  ತಂದು ಕೊಡ್ತಾ ಇರಲಿಲ್ವಾ ಹೆಂಡತಿ ಮಕ್ಕಳಿಗೆ ? ಇದೊಂದು  ಉದಾಹರಣೆ ಅಷ್ಟೇ . ಅದೆಷ್ಟೋ  ಈ ತರಾ ವಿಷಯಗಳಿವೆ , ಚಿಕ್ಕ ಪುಟ್ಟದೆ ಅನಿಸ ಬಹುದು . ಆದರೆ , ಮನಸಿಗೆ  ಚುಚ್ಚ್ತಾ ಇರೋಕೆ  ಅಷ್ಟು ಸಾಕು . ಇವರು  ವ್ಯಾಪಾರ-ವ್ಯವಹಾರ ಅಂತ  ಊರೂರು ಅಲೀತ ಇದ್ರೂ . ಮನೇಲಿ ನಾನು ಒಂಥರಾ ಕೆಲಸದವಳಾಗಿದ್ದೆ . ಎಲ್ಲರಿಂದ  ಅದು ಇದು ಕೇಳಿಸ್ಕೊಂಡು , ಮಕ್ಕಳ ಬೆಳವಣಿಗೆ, ವಿದ್ಯಾಭ್ಯಾಸ ಇದೆಲ್ಲದರ ತಲೆಬಿಸಿ  ಇವರಿಗೆ ತಾಗದಂತೆ  ಸಂಸಾರ ತೂಗಿಸ್ಕೊಂಡು ಹೋಗೋದ್ರೊಳಗೆ , ಪ್ರಪಂಚದಲ್ಲಿ ಏನಾಗ್ತಿದೆ ಇಲ್ಲ  ಅಂತ ತಿಳ್ಕೊಳೋ ಪುರಸೊತ್ತು ಇತ್ತ ನಂಗೆ? ಮನೆಗೆ ಬಂದಾಗೆಲ್ಲ , ಅವರಿವರ ಬಗ್ಗೆ ದೂರು ಹೇಳದೆ ಇವರ  ಇಷ್ಟಗಳನ್ನ ಮಾತ್ರ ನೋಡ್ಕೊತಿದ್ನಲ್ಲ  ಅದರ ಬಗ್ಗೆ ಯಾಕಮ್ಮಾ ಮಾತಾಡೋಲ್ಲ? 

ಏಳನೇ ಕ್ಲಾಸ್ ಮುಗೀತಿದ್ದಾನ್ಗೆ  ಸಾಕು ಓದಿದ್ದು ಅಂತ ಮದ್ವೆ ಮಾಡಿದ ನಮ್ಮಪ್ಪ . ಮುಂದೆ ಓದಬೇಕು ಅನ್ನೋ ಆಸೆನೆಲ್ಲ  ಅಲ್ಲೇ ಒಲೆಗೆ ಹಾಕಿ ಬಂದೆ .  ಮನೇಲಿ ಇಬ್ಬರು ಹಿರಿಯ ವಾರಗಿತ್ತೀರಿಗೆ  ನಾನು ಅವರಿಗಿಂತ ಜಾಸ್ತಿ ಓದಿದೀನಿ ಅಂತ  ಸಂಕಟ , ಆಮೇಲೆ ಬಂದ ಇಬ್ಬರಿಗೆ ಅವರು ಜಾಸ್ತಿ ಓದ್ಕೊಂಡಿರೋ ಹಮ್ಮು .  ಇವರ ನಡುವೆ ಸಿಕ್ಕೊಂಡಿದ್ದು ನಾನು . ನಂದೇನಿತ್ತು ತಪ್ಪು ?  ಕೆಲಸ ಮುಗ್ಸಿ  ಪೇಪರ್ ಓದೋಣ ಅಂತ  ಕೈಲಿ ಹಿಡಿದ್ರೆ , ಚುಚ್ಚು ಮಾತುಗಳು . ಅಂತೂ ನನ್ನ ಪ್ರಪಂಚ ಜ್ಞಾನ  ಆಚೀಚೆ ಮನೆಗಿಂತ ಮುಂದೆ ಹೋಗಲೇ ಇಲ್ಲ ನೋಡು . 

ಮಕ್ಕಳು ದೊಡ್ಡೋರಾದ್ರು , ನಿಮ್ಮಾವ  ಒಂದು ಕಡೆ ನೆಲೆ ಆದರು .  ನಮ್ಮದೇ ಅಂತ ಬೇರೆ  ಮನೆ ಆಯ್ತು .ಆವಾಗಾದ್ರು ನನ್ನ  ಮನೆಯ ಸದಸ್ಯೆ ಅಂತ  ನೋಡಬಹುದಿತ್ತು. ಉಹುಂ . ಅಷ್ಟೊತ್ತಿಗೆ , " ಅಮ್ಮಂಗೆ ಏನೂ ಗೊತ್ತಾಗಲ್ಲ " ಅಂತ  ಅಭಿಪ್ರಾಯ  ಗಟ್ಟಿ ಆಗೋಗಿತ್ತಲ್ಲ ? ಮಕ್ಕಳಾದ್ರೂ  ಅಮ್ಮ , ಬಾ ಇಲ್ಲಿ , ಇದು ಹೀಗೆ , ಇದು ಹೀಗೆ  ಅಂತ ಹೇಳ್ಕೊಡ ಬಹುದಿತ್ತು . ಮಾಡಲಿಲ್ಲ . ಮೊಬೈಲ್ ಬಂತು . ಅದನ್ನ ಹೇಗೆ  ಬಳಸೋದು ಅಂತ  ಕೇಳಿದ್ದಕ್ಕೆ  ನಿಂಗ್ಯಾಕೆ ಬಿಡಮ್ಮ ಅಂತ ನಕ್ಕು ಬಿಟ್ಟರು .  ಕಂಪ್ಯೂಟರ್  ಬಗ್ಗೆ ಕುತೂಹಲ ದಿಂದ  ಕೇಳಿದ್ದಕ್ಕೆ , " ಅಮ್ಮ  ಇನ್ನು ಕಂಪ್ಯೂಟರ್ ಇಂಜಿನೀಯರ್ ಆಗೋ ತರಾ ಕಾಣಿಸ್ತಿದೆ " ಅಂತ ತಮಾಷೆ ಮಾಡಿದ್ರು . ಟಿ ವಿ ಲಿ ವಾರ್ತೆ ನೋಡೋವಾಗ ರಾಜಕೀಯದ  ಸುದ್ದಿ ನೋಡಿ  ಆ ಬಗ್ಗೆ ಕೇಳಿದ್ದಕ್ಕೆ , ನಿಮ್ಮಾವ  ,'ಅದೇನು  ತಿಳಕೊಂಡು ನಿಂಗೇನು ಚುನಾವಣೆಗೆ ಹೋಗೋಕಿದ್ಯಾ' ಅಂತ ವ್ಯಂಗ್ಯ ಮಾಡಿದ್ರು. 

ಅಲ್ಲಾ , ಗೊತ್ತಾಗ್ದೇ ಇರೋದನ್ನ ತಿಳ್ಕೋ ಬೇಕು , ನಮ್ಮ ಜ್ಞಾನ ನ  ಜಾಸ್ತಿ ಮಾಡ್ಕೋಬೇಕು ಅಂತ ಆಸೆಪಡೋದು ತಪ್ಪೇನಮ್ಮಾ ?  ಅದೇನೂ  ಹೇಳದೆ , ಆಮೇಲೆ  ನಿಂಗೇನು ಬರಲ್ಲ , ಗೊತ್ತಾಗಲ್ಲ ' ಅನ್ನೋದು ಸರೀನಾ?  ಸುರಿಯುತ್ತಿದ್ದ ಕಣ್ಣೀರನ್ನು   ಸೆರಗಲ್ಲಿ  ಒರೆಸುವ ಪ್ರಯತ್ನದಲ್ಲಿದ್ದ  ಅತ್ತೆಯನ್ನು  ಸಮಾಧಾನ ಮಾಡುವುದೋ  ಅಥವಾ ಎದೆಯಲ್ಲಿ ಉರಿಯುತ್ತಿದ್ದುದನ್ನೆಲ್ಲ ಹೇಳಿಕೊಂಡು  ಹಗುರಾಗಲಿ ಎಂದು ಸುಮ್ಮನಿರುವುದೋ ತಿಳಿಯದೆ ಸುಮಾ  ಗಂಡನ  ಮುಖ ನೋಡುತ್ತಾ  ಅಲ್ಲೇ ನಿಂತುಬಿಟ್ಟಳು !

1 comment:

sunaath said...

ಒಂದು ಕಾಲದ ಹೆಣ್ಣುಮಕ್ಕಳ ಸಂಕಟವನ್ನು ತುಂಬ ಸರಿಯಾಗಿ ಬಿಚ್ಚಿಟ್ಟಿದ್ದೀರಿ. ಈಗ ಕಾಲ ಬದಲಾಗಿದೆ ಎಂದುಕೊಂಡರೂ ಸಹ ಪರಿಸ್ಥಿತಿಯಲ್ಲಿ ಬಹಳ ಬದಲಾಗಿದೆ ಎಂದು ಹೇಳುವಂತಿಲ್ಲ. ಬಹಳ ಹಳೆಯದಾದ ಒಂದು Readers' Digestನಲ್ಲೂ ಸಹ ಇಂಗ್ಲಿಶ್ ಲೇಖನವೊಂದರಲ್ಲಿ ಹೇಗೆ ‘ಅಮ್ಮ’ ಅವಗಣನೆಗೆ ಒಳಗಾಗುತ್ತಾಳೆ ಎನ್ನುವ ಲೇಖನವೊಂದನ್ನು ಓದಿದ ನೆನಪು ನನಗಿದೆ.